ನಿಮ್ನ ವರ್ಗದ ಏಳಿಗೆ

ಏಪ್ರಿಲ್ ೧೯೫೩

ಸ್ವಾಮಿ, ಈಗ ಸಭೆಯ ಮುಂದೆ ಚರ್ಚೆಗೆ ಬಂದಿರತಕ್ಕ ಈ ನಿರ್ಣಯವನ್ನು ಸಮರ್ಥಿಸುತ್ತ ನಾನು ನಿಮ್ನ ವರ್ಗಗಳ ಅಭಿವೃದ್ಧಿಯ ಬಗ್ಗೆ ಕೆಲವು ಸಲಹೆಗಳನ್ನು ನೀಡಬೇಕೆಂದಿದ್ದೇನೆ. ನಮ್ಮ ಸಮಾಜದಲ್ಲಿ ಈ ನಿಮ್ನ ಪಂಗಡಗಳವರು, ದಲಿತರು ಮತ್ತು ದೀನರೂ ಕೂಡ ಆಗಿದ್ದಾರೆ. ಇದನ್ನು ಮನಗಂಡು ಭಾರತ ರಾಜ್ಯಾಂಗದಲ್ಲಿ ಇನ್ನು ೧೦ ವರ್ಷಗಳ ತನಕ ಅವರಿಗೆ ವಿಶೇಷ ಸೌಲಭ್ಯಗಳನ್ನು ಮತ್ತು ಅವಕಾಶಗಳನ್ನು ಕಲ್ಪಿಸಿಕೊಟ್ಟು ಅವರ ಅಭಿವೃದ್ಧಿಯನ್ನು ಇತರ ಜನಾಂಗಗಳ ಮಟ್ಟಕ್ಕೆ ತರಬೇಕೆಂದು ಉದ್ದೇಶಿಸಲಾಗಿದೆ. ಈ ನಿಮ್ನ ಪಂಗಡದವರಲ್ಲಿ ಇಲ್ಲಿಯತನಕ ಬಹುಮಂದಿ ಕೃಷಿಯಿಂದ ಜೀವನ ಮಾಡುತ್ತಿದ್ದರೂ ಅವರಿಗೆ ಸ್ವಂತ ವ್ಯವಸಾಯಕ್ಕೆ ಭೂಮಿಯಿಲ್ಲ. ಆದುದರಿಂದ ಅವರಲ್ಲಿ ಇರತಕ್ಕವರೆಲ್ಲರೂ ಪೂರಾ ಭೂಹೀನ ಕೃಷಿ ಕಾರ್ಮಿಕರಾಗಿದ್ದಾರೆ. ಆದುದರಿಂದ ಅವರು ತಮ್ಮದೇ ಆದಂಥ ಒಂದು ಕುಲ ಕಸುಬನ್ನು ಅವಲಂಬಿಸಿಕೊಂಡು ಬರುತ್ತಿದ್ದಾರೆ. ಮತ್ತೆ ಕೆಲವರು ಇತರ ಸಣ್ಣಪುಟ್ಟ ಬೇರೆ ಬೇರೆ ವ್ಯಾಪ್ತಿಯಿರತಕ್ಕ ವೃತ್ತಿಗಳನ್ನು ಅವಲಂಬಿಸಿಕೊಂಡು ಬರುತ್ತಿದ್ದಾರೆ. ಹಿಂದೂ ಸಮಾಜವನ್ನು ನೋಡಿದರೆ ಕುಷ್ಟರೋಗದಿಂದ ಕೈಕಾಲುಗಳು ಕೊಳೆತು ಹೋದ ಒಬ್ಬ ಮನುಷ್ಯನಿದ್ದಂತೆ ಕಾಣುತ್ತದೆ. ಹೀಗೆ ಜನಾಂಗ ಶತ ಶತಮಾನಗಳಿಂದಲೂ ತುಳಿಯಲ್ಪಟ್ಟು ಕೆಳಕ್ಕೆ ಒತ್ತಲ್ಪಟ್ಟು ಕಡೆಗೆ ಜನಾಂಗವನ್ನೇ ಯಾರೂ ಮುಟ್ಟಲೂ ಬಾರದೆಂದೂ ಮಾಡಿರತಕ್ಕಂತ ಜನಾಂಗಗಳ ಸಂಖ್ಯೆ ಸಾವಿರಗಟ್ಟಲೆ ಅಪಾರವಾಗಿದೆ. ನಮ್ಮ ದೇಶದ ಈ ಪ್ರಜಾಪ್ರಭುತ್ವದ ಯಶಸ್ಸು ಇದರ ಮೇಲೇಯೇ ಅವಲಂಬಿಸಿರುತ್ತದೆಂದು ಹೇಳಿದರೂ ಹೇಳಬಹುದು. ಹೀಗೆ ನೂರಾರು ವರ್ಷಗಳಿಂದ ಈ ಒಂದು ಜನಾಂಗ, ಇತರ ಜನಾಂಗಗಳವರ ಆಭಿವೃದ್ಧಿಗೆ ಕೊಟ್ಟಿರತಕ್ಕಂಥ ಸಾಲವನ್ನು ತೀರಿಸುವುದಕ್ಕೆ ನಾವೆಲ್ಲರೂ ತೆರಬೇಕಾದ ಋಣ ಬಹಳವಾಗಿದೆಯೆಂದು ಹೇಳುತ್ತೇನೆ. ತಾವು ಯಾವ ಒಂದು ಪಟ್ಟಣಕ್ಕೇ ಹೋಗಲಿ ಅಥವಾ ಒಂದು ಊರಿಗೆ ಹೋಗಲಿ ಅಲ್ಲಿ ಒಂದು ಹೊಲಗೇರಿ ಇದ್ದೇ ಇರುತ್ತದೆ. ಇದು ನಿಮ್ಮ ಹಿಂದೂ ಸಂಸ್ಕೃತಿಗೆ ಒಂದು ಕಳಂಕ ಪ್ರಾಯವಾಗಿದೆ.

ನಾನು ಹಾಗೆ ಹೇಳಿದ್ದು ತಪ್ಪಿರಬಹುದು. ನಾನು “ನಮ್ಮ ಹಿಂದೂ ಸಂಸ್ಕೃತಿಗೆ” ಎಂದೇ ಹೇಳಬೇಕಾಗಿತ್ತು. ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಈ ಜನಾಂಗವನ್ನು ಇತರ ಸಂಪೂರ್ಣ ಹಿಂದುಗಳು ಎಲ್ಲಿಯ ತನಕ ಮೇಲ್ಮಟ್ಟಕ್ಕೆ ಎತ್ತುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶ ಮುಂದುವರಿಯಲು ಖಂಡಿತ ಸಾಧ್ಯವಿಲ್ಲವೆಂದು ನಾನು ತಿಳಿಸುತ್ತೇನೆ. ಅವರ ಸಂಖ್ಯೆ ಎಷ್ಟು ಹೆಚ್ಚಾಗಿದೆಯೇ ಅವರ ಕ್ಷೇತ್ರವೂ ಕೂಡ ಅಷ್ಟೇ ವಿಶಾಲವಾಗಿದೆ. ಆದರೆ ನಾನು ಹೇಳಿರತಕ್ಕ ಒಂದು ವಿಚಾರವನ್ನು ಎಂದರೆ, ಈ ಜನಾಂಗದಲ್ಲಿರತಕ್ಕವರೆಲ್ಲರೂ “ದೀನರು ದಲಿತರು” ಎಂದು ಹೇಳಿರುವುದರಿಂದ ಕೆಲವರು, ಅಂಥ ದೀನರೂ ದಲಿತರು ಆಗಿರತಕ್ಕವರು ಬೇರೆ ಜನಾಂಗದಲ್ಲಿರುವುದಿಲ್ಲವೇ, ಎಂದು ಕೇಳಿದರೂ ಕೇಳಬಹುದು. ನಮ್ಮ ದೇಶದಲ್ಲಿ ಈ ದಿವಸ ಈ ಅರ್ಥಿಕ ಮತ್ತು ಸಾಮಾಜಿಕ ಎರಡೂ ಬಹಳ ಜಿಗುಟಾದ ಸಮಸ್ಯೆಗಳಾಗಿವೆ. ಈ ದಿವಸ ಇಂಗ್ಲೆಂಡ್ ಅಥವಾ ಇತರ ಪಾಶ್ವಿಮಾತ್ಯ ರಾಷ್ಟ್ರಗಳಲ್ಲಿ ಆಗಲಿ ಅವರು ತಮ್ಮ ಜನಗಳ ಆರ್ಥಿಕ ಸಮಸ್ಯೆಯೊಂದನ್ನು ಮೊದಲು ಬಿಡಿಸಿಬಿಟ್ಟರೆ, ಅನಂತರ ಇನ್ನುಳಿಯತಕ್ಕ ಅವಶ್ಯಕವಾದ ಇತರ ಸಮಸ್ಯೆಗಳೆಲ್ಲವೂ ತಮ್ಮಷ್ಟಕ್ಕೆ ತಾವೇ ಸರಿಹೋಗುತ್ತವೆಂದು ಹೇಳಬಹುದು.

ಅದರ ಪ್ರಕಾರ ನೋಡಿದರೆ ಇತರ ಎಲ್ಲಾ ಸಮಸ್ಯೆಗಳಿಗೂ ಈ ಆರ್ಥಿಕ ಸಮಸ್ಯೆಯೇ ಮೂಲಧಾರವೆಂದು ನನಗೆ ಹೊಳೆಯುತ್ತದೆ. ಅದರೆ ಈ ಸಾಮಾಜಿಕ ಸಮಸ್ಯೆಯೂ ಅಷ್ಟೇ ಮೂಲಭೂತವಾಗಿದೆ. ಆದುದರಿಂದ ಈ ಮೂಲ ತೊಡಕುಗಳನ್ನೆಲ್ಲಾ ಬಿಡಿಸಬೇಕಾಗಿದ್ದರೆ ಭಾರತ ಸಂವಿಧಾನದಲ್ಲಿ ಅವರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಟ್ಟು ಅವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿ ಬರುವುದಕ್ಕೆ ಅವಕಾಶವಿರುವ ಹಾಗೆ ಮಾಡದ ವಿನಾ ಅವರಿಗೆ ಈ ಸಮಸ್ಯೆಗಳನ್ನು ಬಿಡಿಸಲು ಎಂದಿಗೂ ಸಾಧ್ಯವಾಗುವುದಿಲ್ಲ. ಅದಕ್ಕೋಸ್ಕರವಾಗಿ ನಾವು ಹೆಚ್ಚಿಗೆ ತೀವ್ರ ಗಮನವನ್ನು ಕೊಟ್ಟು ದೇಶದ ಮಹಾಜನರೂ ಮತ್ತು ಇಂಥ ವಿಧಾನ ಸಭೆಗಳು ಕಾನೂನು ಪ್ರಕಾರ ಅವರಿಗೆ ಏನೇನೂ ಸೌಲಭ್ಯಗಳನ್ನು ಕೊಡಬೇಕೋ ಅವುಗಳೆಲ್ಲವನ್ನೂ ಕೊಡುವಂತೆ ಮಾಡತಕ್ಕದ್ದು ಎಲ್ಲ ಸರ್ಕಾರಗಳ ಆದ್ಯ ಕರ್ತವ್ಯವೆಂದು ನಾನು ಭಾವಿಸುತ್ತೇನೆ. ಸ್ಪಲ್ಪ ಹೆಚ್ಚು ಕಡಿಮೆ ಈ ಜನಾಂಗದವರಂತೆಯೇ ಇನ್ನೂ ತೊಂದರೆಗಳಿಗೊಳಗಾಗಿರತಕ್ಕ ಮತ್ತೊಂದು ಜನಾಂಗವಿದೆ. ಮಲೆನಾಡು ಪ್ರದೇಶದಲ್ಲಿ ಅವರನ್ನು ‘ದೀವರು’ ಎಂದು ಕರೆಯುತ್ತಿದ್ದಾರೆ. ಈ ಜನಾಂಗದವರೂ ಕೂಡ ಈ ಷೆಡ್ಯೂಲ್ ಪಂಗಡಗಳವರಿಗೆ ಒದಗಿಸುತ್ತಿರುವಂಥ ಎಲ್ಲ ಸೌಲಭ್ಯಗಳನ್ನು ತಮಗೂ ನೀಡಬೇಕೆಂದು ಕೇಳಿಕೊಳ್ಳುತಿದ್ದಾರೆ. ಆದರೆ ಈ ಸೌಲಭ್ಯಗಳನ್ನು ಕೇಳುವ ಅವರೂ ಸಹ ಅವರ ಗುಂಪಿಗೆ ಸೇರಿಕೊಳ್ಳಲಿ ಎಂದು ಹೇಳಬಹುದು. ಆದರೆ ಹಾಗೆ ಹೇಳತಕ್ಕದ್ದು ಅಷ್ಟು ಹಿತಕರವಾಗಿರುತ್ತದೆಂದು ಕಾಣುವುದಿಲ್ಲ. ಆ ಜನಾಂಗದಲ್ಲಿಯೂ ಕೂಡ ಹೆಚ್ಚು ಜನ ಬಡವರಿದ್ದಾರೆ. ಅವರಿಗೆ ಸಾಕಷ್ಟು ಜಮೀನಿರುವುದಿಲ್ಲ. ಉದ್ಯೋಗಗಳು ಬೇಕಾಗಿವೆ. ಆದರೆ ಅವರು ಹೋರಾಟವನ್ನು ಮಾತ್ರ ಇನ್ನೂ ಮಾಡಿರುವುದಿಲ್ಲ. ಅವರು ಈ ಸೌಲಭ್ಯಗಳಿಗಾಗಿ ಹೋರಾಟ ಮಾಡಿದರೆ ಸಾಕು ಅವರಿಗೂ ಈ ಸೌಲಭ್ಯಗಳು ಬಂದೇ ಬರುತ್ತವೆ. ಅವರೂ ಈ ನಿಮ್ನ ಪಂಗಡದಲ್ಲಿರುವವರು ಹಾಗೆ ದಲಿತರೂ, ದೀನರೂ ಆಗಿದ್ದಾರೆ. ಎಲ್ಲರಿಗೂ ಗೌರವ ಸಲ್ಲಿಸಬೇಕಾದ್ದು ನ್ಯಾಯವಾಗಿದೆ. ಆದರೆ ಅದು ಎಲ್ಲರಿಗೂ ಈ ದಿವಸ ಸಲ್ಲುತ್ತಿಲ್ಲ. ಯಾವುದೋ ಓಭೀರಾಯನ ಕಾಲದ ನಡವಳಿಕೆಗಳೇ ಇನ್ನೂ ಮುಂದುವರಿದುಕೊಂಡು ಬರುತ್ತಿವೆ, ಮಲೆನಾಡುನಲ್ಲಿ ಇವರನ್ನೇ ಹರಿಜನರಂತೆ ಕಾಣಲಾಗುತ್ತದೆ. ಆದರೆ ಅವರಿಗೆ ಆ ಕೆಲಸಗಳನ್ನೆಲ್ಲಾ ಮಾಡಿಸಿಕೊಂಡ ನಂತರ ಏನು ಗೌರವಗಳನ್ನು ಸಲ್ಲಿಸಬೇಕಾಗಿತ್ತೋ ಆ ಗೌರವಗಳನ್ನು ಮಾತ್ರ ಸಲ್ಲಿಸುತ್ತಿಲ್ಲ.

ಇಪ್ಪತ್ತು ವರ್ಷಗಳ ಮೇಲೆ ಕೂಡ ಏನಾದರೂ ಜಗಳ ಮಾಡಿಕೊಂಡು ಅವರು ಅವನಿಗೆ ಸಲ್ಲಬೇಕಾದ ಸಂಬಳ ಕೊಡದೆ ಇದ್ದರೂ; ಹಾಗೆಯೇ ಅವನು ಏನಾದರೂ ಪರಾರಿಯಾದರೂ – ಅಂಥವನನ್ನು ಮತ್ತೆ ಹಿಡಿಸಿ ಕೈಕಾಲು ಕಟ್ಟಿಹಾಕಿ ತಂದು ದುಡಿಸುತ್ತಾರೆ. ಇದು ಜೀತದ ಪದ್ಧತಿ! ಅವನಿಗೆ ಮದುವೆ ಮಾಡಿದರೆ ಅವನು, ಅವನ ಹೆಂಡತಿ ಅವನ ಮಕ್ಕಳು ಎಲ್ಲರೂ ಅವರ ಸ್ವತ್ತು. ಚರ ಸ್ವತ್ತು ಇದ್ದ ಹಾಗೆ. ಇಂಥಾದ್ದು ಸಮಾಜದಲ್ಲಿ ಇವೊತ್ತಿಗೂ ಇದೆಯೆಂದು ಹೇಳಿದರೆ ನಾವು ಪ್ರಜಾಪ್ರಭುತ್ವ ಯುಗದಲ್ಲಿದ್ದೇವೆಯೇ ಅಥವಾ ಪ್ರಜಾಪ್ರಭುತ್ವವನ್ನು ಆಚರಿಸುತ್ತಿದ್ದೇವೆಯೇ ಎಂದು ಹೇಳಲಿಕ್ಕೂ ಸಾಧ್ಯವಿಲ್ಲ. ಹೆಚ್ಚಾಗಿ, ಈ ಸಮಸ್ಯೆಯನ್ನು ಪಟ್ಟಣಗಳಲ್ಲಿ ಕಾಣದೆ ಇರಬಹುದು. ಹಳ್ಳಿಗಳಲ್ಲಿ ಹೋಗಿ ನೋಡಬೇಕು. ಹಳ್ಳಿಗಳಲ್ಲಿ ಈಗಲೂ ಕೂಡ ದೇವಸ್ಥಾನಗಳಿಗೆ ಹರಿಜನರು ಹೋಗುವುದಾಗಲಿ, ಹರಿಜನರು ಸವರ್ಣ ಹಿಂದೂಗಳ ಬಾವಿಗಳನ್ನು ಉಪಯೋಗಿಸುವುದಾಗಲಿ; ಅವರನ್ನು ಸಮಭಾವದಿಂದ ಕಾಣುವುದಾಗಲಿ ಎಲ್ಲೂ ಇಲ್ಲ. ಅದೆಲ್ಲ ನಿಮ್ಮ ಕಾನೂನಿನ ಪುಸ್ತಕದ ಕಡತದಲ್ಲಿಯೇ ಹೊರತು ಕಾರ್ಯತಃ ಬಂದಿಲ್ಲ. ಅವು ಕಾರ್ಯತಃ ಬರುವುದಕ್ಕೂ ಅನೇಕರು ಅಡ್ಡಿಪಡಿಸುತ್ತಾರೆ.

ಯಾರಿಗೆ ಈಗ ಅವರಿಂದ ಹೆಚ್ಚು ಉಪಯೋಗ ಆಗುತ್ತಿದೆಯೋ, ಯಾರು ಅವರನ್ನು ಸಂಬಳ ಸಾರಿಗೆ ಕೊಡದೆ ಯಾವ ಹೀನ ಕೆಲಸಕ್ಕಾದರೂ ಹಚ್ಚಿ ದುಡಿಸುತ್ತಿದ್ದಾರೆಯೋ ಅಂಥ Interested ಜನರುಗಳು ಸಮಾಜದಲ್ಲಿ ಪ್ರಗತಿಯಾಗಬೇಕೆಂದು ಪ್ರಯತ್ನಪಟ್ಟರೂ ಅದನ್ನು ಮೊಟಕು ಮಾಡುತ್ತಾರೆ; ಅವರನ್ನು ತಡೆಯುತ್ತಾರೆ. ಆದ್ದರಿಂದ ಇದನ್ನು ಮನಗಂಡು ಹೆಚ್ಚು ಹೆಚ್ಚಾಗಿ ನಾವು ಈ ಬಗ್ಗೆ ಪ್ರಯತ್ನಮಾಡಿ ಅವರನ್ನು ಮೇಲುಮಟ್ಟಕ್ಕೆ ತರುವುದಕ್ಕೆ ಪ್ರಯತ್ನ ಮಾಡಬೇಕು. ಈ ಸಂದರ್ಭದಲ್ಲಿ ಒಂದು ಸಮಿತಿಯನ್ನು ಏರ್ಪಾಡು ಮಾಡಿ ಅವರು ಎಲ್ಲೆಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದನ್ನು ಕಂಡು ಹಿಡಿಯಬೇಕು. ಈ ಪಂಗಡಕ್ಕೆ ಸೇರಿದಂತೆ ಲಂಬಾಣಿಗರೆಂಬ ಜನ ಇದ್ದಾರೆ, ಅವರ ಊರನ್ನು ತಾಂಡಾ ಎಂದು ಹೇಳುತ್ತಾರೆ. ತಾಂಡಾಗಳೆಂದರೆ ಊರಿನ ಹೊರಗೆ ಇದ್ದ ಹಾಗೆ. ಅವರಿಗೆ ಯಾವ ಸೌಲಭ್ಯಗಳನ್ನೂ ಇದುವರೆಗೂ ಕಲ್ಪಿಸಿಕೊಟ್ಟಿಲ್ಲ. ಅವರ ವೃತ್ತಿ ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರುವುದು. ಜಮೀನು ವ್ಯವಸಾಯ ಮಾಡುವುದು ಹಾಗೂ ಹೀಗೂ ನಾನಾ ತರಹ ಕೆಲಸಗಳನ್ನು ಮಾಡಿಕೊಂಡಿದ್ದರೆ. ಇಷ್ಟೊಂದು ಬಹುಸಂಖ್ಯಾತ ಜನಾಂಗ ಮೂಲೆಗುಂಪಾಗಿದ್ದು ಅವರೂ ನಮ್ಮ ಜನಾಂಗದಲ್ಲಿ ಸೇರಿ ನಾವು ಮಾಡತಕ್ಕ ಕೆಲಸಕಾರ್ಯದಲ್ಲಿ ನಮ್ಮ ಯೋಜನೆಗಳಲ್ಲಿ ಭಾಗವಹಿಸದೆ ಹೋದರೆ ದೇಶ ಏಳಿಗೆಯಾಗುವುದಿಲ್ಲ. ಅವರು ಸಮಾಜದಲ್ಲಿ Drag ಆಗಿ ಹಿಂದಕ್ಕೆ ಏಳೆಯತಕ್ಕ ಶಕ್ತಿಯಾಗಿ ಉಳಿಯುತ್ತಾರೆ. ಆದುದರಿಂದ ಸಮಸ್ಯೆಯನ್ನು ಬಿಡಿಸದೆ ಯವ ಪ್ರಗತಿಯೂ ಸಾಗುವುದಕ್ಕೆ ಸಾಧ್ಯವೇ ಇಲ್ಲ. ದೇಶದಲ್ಲಿ ಈ ಸಮಸ್ಯೆಯನ್ನು ಬಿಡಿಸುವುದಕ್ಕೆ ಎಷ್ಟು ಪ್ರಯತ್ನವನ್ನು ಮಾಡಬೇಕೋ ಅಷ್ಟು ಪ್ರಯತ್ನವನ್ನು ಬಹಳ ಮುಖ್ಯವಾಗಿ ಮೊದಲು ಮಾಡಬೇಕೆಂದು ನನ್ನ ಒತ್ತಾಯಪೂರ್ವಕವಾದ ವಿನಂತಿ. ಇಲ್ಲಿ ಹೆಚ್ಚಾಗಿ ಈ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕೆ ಕಾರಣವೇನೆಂದರೆ ಅವರ ಪ್ರತಿನಿಧಿಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೇ ಇದನ್ನು ಈ ಸಭೆಯ ಮುಂದೆ ಅನೇಕ ಸಾರಿ ಇಟ್ಟು ಚರ್ಚೆ ಮಾಡಿದ್ದಾರೆ. ಆದುದರಿಂದ ನಾನು ನೇರವಾಗಿ ಈ ಸಮಸ್ಯೆಯ ಬಗ್ಗೆ ಮಾತನಾಡಲಿಕ್ಕೆ ಅಷ್ಟಾಗಿ ಇಷ್ಟಪಟ್ಟಿರಲಿಲ್ಲ. ಈಗ ಮೈಸೂರು ಸಂಸ್ಥಾನದಲ್ಲಿ ಅವರ ಬಗ್ಗೆ ಒಂದು ಸರ್ವೆ ನಡೆಸಿ, ಅವರು ಯಾವ ಯಾವ ಉದ್ಯೋಗಗಳಲ್ಲಿದ್ದಾರೆ, ಅವರ ಆರ್ಥಿಕ ಮತ್ತು ಸಮಾಜಿಕ ಪರಿಸ್ಥಿತಿ ಏನು ಎಂಬುದನ್ನು ಗೊತ್ತುಮಾಡಿಕೊಳ್ಳಬೇಕು. ಮತ್ತು ಹಾಲಿ ಇವೊತ್ತು ಕಾನೂನು ರೀತ್ಯಾ ಅವರಿಗಿರುವ ಸೌಲಭ್ಯಗಳನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು. ಎಷ್ಟೋ ಜನರಿಗೆ ಅವುಗಳಿರುವುದೇ ಗೊತ್ತಿಲ್ಲ. ಹೆಚ್ಚು ಹೆಚ್ಚಾಗಿ ಪ್ರಚಾರದ ಮುಖಾಂತರ ಅವು ಬರಬೇಕು. ಸರ್ಕಾರಿ ಸ್ಪೆಷಲ್‌ ಆಫೀಸರೆಂಬುವವರು ಇದ್ದಾರೆ. ಆದರೆ, ಅವರು ಯಾರಾದರೂ ಜನರು ಬಂದು ಅವರನ್ನು ಕರೆದುಕೊಂಡು ಹೋದರೆ ಈ ಕೆಲಸ ಮಾಡುತ್ತಾರೆಯೆ ವಿನಾ ತಾವಾಗಿಯೇ ಮುತುವರ್ಜಿಯಿಂದ ಈ ಸೌಲಭ್ಯಗಳನ್ನು ಅವರಿಗೆ ಒದಗಿಸಿಕೊಡುತ್ತಿಲ್ಲ. ಆದ್ದರಿಂದ ಈ ಎಲ್ಲಾ ದೃಷ್ಟಿಯಿಂದ ಇಂಥ ಒಂದು ಕಮೀಷನನ್ನು ಏರ್ಪಾಡು ಮಾಡಿ ಒಂದು ಸರ್ವೆ ಮಾಡುವುದರ ಮುಖಾಂತರ ಸರ್ಕಾರದವರು ಅವರಿಗೆ ಅತ್ಯಗತ್ಯವಾದ ಸೌಲಭ್ಯಗಳನ್ನು ಕೊಡಬೇಕೆಂದು ಕೇಳಿ ನಾನು ಈ ನಿರ್ಣಯವನ್ನು ಸಮರ್ಥಿಸುತ್ತೇನೆ.

ಆಂಧ್ರ ರಾಜ್ಯ ನಿರ್ಮಾಣ

೨೩ ಜುಲೈ ೧೯೫೩

ಸ್ವಾಮಿ, ಮಾನ್ಯ ಮುಖ್ಯ ಮಂತ್ರಿಗಳು ನಿನ್ನೆಯ ದಿನ ಸಭೆಯ ಮುಂದೆ ಮಂಡಿಸಿರುವ ೧೯೫೨ನೇ ಇಸವಿಯ ಆಂಧ್ರ ಸ್ಟೇಟ್‌ ಬಿಲ್ಲಿನ ಸೂಚನೆಯನ್ನು ಅನುಮೋದಿಸುತ್ತ ನಾನು ಕೆಲವು ವಿಷಯಗಳನ್ನು ಪ್ರಸ್ತಾಪಿಸ ಬೇಕೆಂದಿದ್ದೇನೆ. ಆಂಧ್ರ ಪ್ರಾಂತ್ಯ ನಿರ್ಮಾಣ ಮತ್ತು ಈ ಮಸೂದೆಯ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಇಂದು ವ್ಯಕ್ತಪಡಿಸಲು ಸಾಧ್ಯವಾಗಿರುವುದು ಅದಕ್ಕಾಗಿ ಬಲಿದಾನ ಮಾಡಿದ ಪೊಟ್ಟಿ ಶ್ರೀರಾಮಲು ಮತ್ತು ಈ ರೀತಿ ಹೋರಾಟ ಮಾಡಿದ ಅನೇಕ ಮುಖಂಡರು ಹಾಗೂ ಆಂಧ್ರ ಜನತೆಯ ಹೋರಾಟದ ಫಲ ಎಂದರೆ ತಪ್ಪಾಗಲಾರದು. ಆದುದರಿಂದ ಈ ಕೀರ್ತಿಯೆಲ್ಲಾ ಅವರೆಗೇ ಸೇರಬೇಕಾಗಿದೆ.

ಇಂಡಿಯಾ ದೇಶದಲ್ಲಿರತಕ್ಕ ಪ್ರಾಂತ್ಯಗಳನ್ನು ಪುನಃ ಹಂಚಬೇಕೆಂಬ ವಿಷಯ ಈಗಾಗಲೇ ಎಲ್ಲರಿಂದಲೂ ಒಪ್ಪಿಗೆಯನ್ನು ಪಡೆದುಕೊಂಡಿರುವಂಥ ವಿಷಯವಾಗಿದೆ. ಈ ರೀತಿ ಹಂಚಿಕೆ ಮಾಡುವಾಗ ಭಾಷೆಯನ್ನೂ ಒಂದು ಆಧಾರವಾಗಿಟ್ಟುಕೊಂಡು, ಅಲ್ಲಿಯ ಜನಸಂಖ್ಯೆ ಆಡಳಿತ, ಸಂಸ್ಕೃತಿ, ಹಿಂದಿನ ಇತಿಹಾಸ ಇಂಥ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಪ್ರಾಂತ್ಯಗಳನ್ನು ಹಂಚಬೇಕೆಂದು ಒಪ್ಪಿಕೊಂಡಾಗಿದೆ. ಅದೇ ರೀತಿ ಇಂದು ಮದ್ರಾಸ್‌ ಪ್ರಾಂತ್ಯದಲ್ಲಿ ಅಡಕವಾಗಿದ್ದ ಬಹುಸಂಖ್ಯಾತ ತೆಲುಗು ಮಾತನಾಡುವ ಜನರನ್ನೊಳಗೊಂಡಂಥ ಒಂದು ಪ್ರಾಂತ್ಯ ನಿರ್ಮಾಣವಾಗಲಿದೆ. ಇದನ್ನೇ ನಾವೀಗ ಆಂಧ್ರ ಪ್ರಾಂತ್ಯವೆಂದು ಕರೆಯುತ್ತಿದ್ದೇವೆ. ಈ ಸಂಬಂಧವಾಗಿ ಪಾರ್ಲಿಮೆಂಟಿನ ಮುಂದೆ ಮಂಡಿಸಬೇಕೆಂದಿರುವ ಈ ಮಸೂದೆಯ ಬಗ್ಗೆ ಮದ್ರಾಸ್‌ ಮತ್ತು ಮೈಸೂರಿನ ವಿಧಾನಸಭೆಗಳು ಮತ್ತು ಪರಿಷತ್ತುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಕೊಡಬೇಕೆಂದು ಹೇಳಿದ್ದಾರೆ. ಈ ಆಂಧ್ರ ಪ್ರಾಂತ್ಯ ನಿರ್ಮಾಣವಾಗತಕ್ಕ ಬಗ್ಗೆ ನಾನು ನನ್ನ ಸಂತೊಷ ಮತ್ತು ವಿಷಾದಗಳೆರಡನ್ನೂ ಕೂಡ ಏಕಕಾಲದಲ್ಲೇ ಸೂಚಿಸಬೆಕಾಗಿದೆ. ಕಾರಣ ಬಹಳ ದಿನಗಳ ಹಿಂದೆಯೇ ಆಗಬೇಕಾಗಿದ್ದ ಆಂಧ್ರ ಪ್ರಾಂತ್ಯ ನಿರ್ಮಾಣದಲ್ಲಿ ಪೂರಾ ಕಾಲವಿಳಂಬವಾಯಿತು. ಆದರೆ ಈಗ ಅದು ಕಾರ್ಯಗತವಾಗುವ ಸನ್ನಿವೇಶ ಒದಗಿಬಂದಿದೆ. ಅದಕ್ಕೆ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತೇನೆ.

ಇದೇ ಸಂದರ್ಭದಲ್ಲಿ ಕನ್ನಡಿಗರ ಒಂದು ಬೇಡಿಕೆಯಾದ ಮತ್ತು ಎಲ್ಲರಿಂದಲೂ ಮಾನ್ಯವಾಗಿರತಕ್ಕ ಕರ್ನಾಟಕ ಪ್ರಾಂತ್ಯ ರಚನೆಯನ್ನು ಕೇಂದ್ರ ಸರ್ಕಾರದವರು ಬದಿಗೊತ್ತಿ ಕನ್ನಡಿಗರಿಗೆ ದ್ರೋಹವೆಸಗಿದ್ದಾರೆ. ಇದು ನನಗೆ ತುಂಬಾ ವಿಷಾದದ ಸಂಗತಿಯಾಗಿದೆ. ಹಾಗೆಯೇ ಕರ್ನಾಟಕದ ಎರಡು ಕೋಟಿ ಕನ್ನಡಿಗರೂ ಕೂಡ ವಿಷಾದಪಡುತ್ತಾರೆಂದು ನಾನು ತಿಳಿದುಕೊಂಡಿದ್ದೇನೆ. ಇದೇ ಸಂದರ್ಭದಲ್ಲಿ ಕೇಂದ್ರ ಹಾಗೂ ಪಾರ್ಲಿಮೆಂಟಿಗೂ ಮತ್ತು ಈ ವಿಷಯದಲ್ಲಿ ಅಧಿಕಾರ ಹೊಂದಿರತಕ್ಕವರಿಗೂ ನಾನು ವಿನಂತಿ ಮಾಡಿಕೊಳ್ಳುವುದು ಇಷ್ಟೆ, ಈ ಪ್ರಾಂತ್ಯಗಳನ್ನು ಪುನಃ ಹಂಚಿಕೆ ಮಾಡತಕ್ಕಂಥ ವಿಷಯವನ್ನು ವಿಳಂಬ ಮಾಡುವುದರಿಂದ ದೇಶದಲ್ಲಿ ಶಾಂತಿ ಭಂಗವುಂಟಾಗುವುದಲ್ಲದೆ, ಅಕ್ಕಪಕ್ಕದ ಪ್ರಾಂತ್ಯಗಳಲ್ಲಿ ಮತ್ತು ಅಣ್ಣ ತಮ್ಮಂದಿರಂತಿರತಕ್ಕ ತಮಿಳು, ತೆಲುಗು, ಕನ್ನಡ, ಮಲೆಯಾಳ, ಮಹಾರಾಷ್ಟ್ರ, ಹಿಂದಿ ಜನರಲ್ಲಿ ಘರ್ಷಣೆಯುಂಟಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಒಡಕುಂಟಾಗುವ ಪರಿಸ್ಥಿತಿ ಈ ವಿಳಂಬ ನೀತಿಯಿಂದ ಉಂಟಾಗುತ್ತದೆಂದು ನಾನು ಈ ಸಂದರ್ಭದಲ್ಲಿ ಸೂಚಿಸಲಿಚ್ಛಿಸುತ್ತೇನೆ.

ಹೀಗಾಗುವುದರಿಂದ ನೂತನ ರಾಷ್ಟ್ರ ನಿರ್ಮಾಣ ಮಾಡಬೇಕು. ಆರ್ಥಿಕ ಸಮಾಜಿಕ ಮತ್ತು ಇತರ ಅಭಿವೃದ್ಧಿಗಳನ್ನು ನಾವು ಸಾಧಿಸಬೇಕೆಂದು ಯಾವ ಪಂಚವಾರ್ಷಿಕ ಯೋಜನೆ ಮುಂತಾದವುಗಳನ್ನು ಸಂಬಂಧಪಟ್ಟ ಸರ್ಕಾರಗಳು ಕೈಕೊಳ್ಳಬೇಕೆಂದಿದ್ದಾರೋ, ಆ ಯೋಜನೆಗಳು ಕಾರ್ಯಗತವಾಗುವುದರಲ್ಲೇ ಬಹಳ ಅಡ್ಡಿ ಆತಂಕಗಳುಂಟಾಗುತ್ತವೆ. ಆಂಧ್ರ ಪ್ರಾಂತ್ಯ ನಿರ್ಮಾಣ ಅಲ್ಲಿಯ ರಾಜಕೀಯ ಮುಖಂಡರ ಹಾಗು ಎಚ್ಚೆತ್ತ ಜನತೆಯಿಂದ ಮೊದಲಾಯಿತೆಂದು ಇಟ್ಟುಕೊಂಡರೂ ಕೂಡ, ಕನ್ನಡಿಗರೇನೂ ತಮ್ಮ ಬೇಡಿಕೆಯನ್ನು ಕೈಬಿಟ್ಟಿಲ್ಲ. ಅವರು ಜಾಗೃತವಾಗಿಲ್ಲವೆಂದು ತಿಳಿದುಕೊಳ್ಳಬಾರದು. ಅಲ್ಲದೆ, ಅವರ ಬೇಡಿಕೆ ಆಂಧ್ರಕ್ಕಿಂತ ಹೆಚ್ಚು ಮಾನ್ಯತೆ ಮಾಡಲ್ಪಟ್ಟಿದೆ ಮತ್ತು ಹೆಚ್ಚು ಸಲುಭವಾಗಿ ಸಾಧಿಸಲು ಸಾಧ್ಯವಾದ ಸಮಸ್ಯೆಯಾಗಿದೆ. ಹಿಂದೆ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಮಾಡಲ್ಪಟ್ಟ ಅನೇಕ ಸಮಿತಿಗಳೂ ಕೂಡ ಈ ಅಭಿಪ್ರಾಯವನ್ನು ಒಪ್ಪಿಕೊಂಡಿವೆ. ಅಂದ ಮೇಲೆ ಇದರ ವಿಷಯದಲ್ಲಿ ಈ ರೀತಿಯ ವಿಳಂಬ ನೀತಿ ನನಗೆ ಅರ್ಥವಾಗುತ್ತಿಲ್ಲ. ಅದರಲ್ಲೂ ಕೇಂದ್ರದವರು ಆಂಧ್ರ ಪ್ರಾಂತ್ಯ ನಿರ್ಮಾಣಮಾಡಿ ಅದನ್ನು ನಾವು ಪ್ರಾಯೋಗಿಕವಾಗಿಟ್ಟುಕೊಂಡು ಅದರಿಂದೇನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ಪರೀಕ್ಷಿಸಿ ಆನಂತರ ಕರ್ನಾಟಕ ಪ್ರಾಂತ್ಯ ರಚನೆಗೆ ಮನಸ್ಸು ಮಾಡುತ್ತೇವೆಂದು ಹೇಳುವ ವಾದ ಕನ್ನಡಿಗರಿಗೆ ವಂಚನೆ ಮಾಡುವ ವಾದ. ಏಕೆಂದರೆ ಆಂಧ್ರ ಪ್ರಾಂತ್ಯದ ಆಗುಹೋಗಿನ ಮೇಲೆ ಕನ್ನಡ ಪ್ರಾಂತ್ಯ ರಚನೆ ನಿಂತಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆಯೂ ಹೆಚ್ಚು ತೀವ್ರವಾದ ಗಮನ ಮತ್ತು ಆಸಕ್ತಿವಹಿಸಿ ಮುಂದಿನ ಅಕ್ಟೋಬರ್ ಒಂದನೆಯ ತಾರೀಖು ಆಂಧ್ರ ಪ್ರಾಂತ್ಯ ರಚನೆಯಾಗುವ ಹೊತ್ತಿಗೆ ಕನ್ನಡ ಪ್ರಾಂತ್ಯ ರಚನೆಯನ್ನು ಸಾಧ್ಯ ಮಾಡಿಕೊಡಬೇಕೆಂದು ನಾನು ಸೂಚಿಸುತ್ತೇನೆ.

ಇನ್ನೊಂದು ವಿಷಯ, ಈ ಆಂಧ್ರ ರಾಜ್ಯ ಮಸೂದೆಯಲ್ಲಿ ನಾವು ಹೆಚ್ಚಾದ ಒಂದು ತೊಡಕಿನಲ್ಲಿ ಬಿದ್ದಂತೆ ಕಾಣುತ್ತದೆ. ಏನೆಂದರೆ, ಇಂದು ನಾವು ಬಳ್ಳಾರಿಯನ್ನು ಸ್ವಾಗತಿಸಬೇಕೇ ಅಥವಾ ಸ್ವಾಗತಿಸಬಾರದೇ ಎಂಬುದು. ಈ ಪ್ರಶ್ನೆಯ ಬಗ್ಗೆ, ಬಳ್ಳಾರಿಯ ಜಿಲ್ಲೆ ಪೂರ್ತಿಯಾಗಿ ಕರ್ನಾಟಕದಲ್ಲಿ ಸಮಾವೇಶಗೊಳ್ಳಬೇಕೆಂಬ ಬಗ್ಗೆ ಮೊನ್ನೆ ಮೊನ್ನೆ ತನಕವೂ ಭಿನ್ನಾಭಿಪ್ರಾಯಗಳು ಕಂಡುಬಂದಿರಲಿಲ್ಲ. ಇಂದು ಭಿನ್ನಾಭಿಪ್ರಾಯದ ದೆಸೆಯಿಂದಾಗಿ ಬಳ್ಳಾರಿ ಜಿಲ್ಲೆಯ ಮೂರು ತಾಲ್ಲೂಕುಗಳು ಆಂಧ್ರಕ್ಕೆ ಸೇರಬೇಕೆಂದು ತೀರ್ಮಾನ ಮಾಡಿ ಆನಂತರದಲ್ಲಿ ಬಳ್ಳಾರಿ ತಾಲ್ಲೂಕಿನ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮದ್ರಾಸ್‌ ಪ್ರಾಂತ್ಯದಲ್ಲಿ ಉಳಿಯಬಹುದಾದ ಬೇರೆ ಕನ್ನಡ ಪ್ರದೇಶಗಳ ಬಗೆಗೆ ಮಸೂದೆಯಲ್ಲಿ ಒಂದು ನಿರ್ದಿಷ್ಟವಾದ ಸೂಚನೆಯಿಲ್ಲ. ಇದು ಮತ್ತಷ್ಟು ತೊಂದರೆಗೂ ವಿಷಾದಕ್ಕೂ ಅವಕಾಶ ಕೊಡತಕ್ಕಂಥ ವಿಷಯವಾಗಿದೆ. ಉದಾಹರಣೆಗೆ, ಅನಂತಪುರ ಜಿಲ್ಲೆಯಲ್ಲಿರುವ ಮಡಕಶಿರಾ ತಾಲ್ಲೂಕು ಈಗಿರತಕ್ಕ ಮೈಸೂರ ದೇಶದಲ್ಲಿ ತನ್ನ ತಲೆಯನ್ನು ಚಾಚಿಕೊಂಡಿದೆ. ಕನ್ನಡಿಗರೇ ಅಲ್ಲಿ ಹೆಚ್ಚಾಗಿರುವುದು. ಹೀಗಿರುವಲ್ಲಿ ಅದು ಆಂಧ್ರ ಪ್ರಾಂತ್ಯಕ್ಕೆ ಹೋಗಬೇಕೆಂಬ ವಾದದಲ್ಲಿ ಯಾವ ಸತ್ಯಾಂಶವಿದೆ? ಅದೇ ರೀತಿ ಕೊಳ್ಳೆಗಾಲ, ನೀಲಗಿರಿ ಮತ್ತು ಇವುಗಳಿಗಿಂತಲೂ ಹೆಚ್ಚಿಗೆ ಅನ್ಯಾಯವಾಗಿರತಕ್ಕ ಪ್ರದೇಶ ಎಂದರೆ ದಕ್ಷಿಣ ಕನ್ನಡ ಜಿಲ್ಲೆ. ಇವುಗಳು ಮದ್ರಾಸ್‌ ಪ್ರಾಂತ್ಯದಲ್ಲಿಯೇ ಉಳಿಯಬೇಕೆಂಬುದಕ್ಕೆ ಯಾವ ಕಾರಣವೂ ಇಲ್ಲ. ಇನ್ನೂ ಕರ್ನಾಟಕ ಪ್ರಾಂತ್ಯ ರಚನೆಯನ್ನು ಹಿಂದಕ್ಕೆ ಹಾಕಿರುವುದರಿಂದಲೇ ಈ ತೊಡಕನ್ನು ಬಗೆಹರಿಸಲಾರದೆ ಇದ್ದಾರೆ ಎಂದು ನಾನು ತಿಳಿದುಕೊಂಡಿದ್ದೆನೆ. ಆದುದರಿಂದ ಕರ್ನಾಟಕ ಪ್ರಾಂತ್ಯ ರಚನೆಯಾದರೆ ದಕ್ಷಿಣ ಭಾರತದ ಅನೇಕ ಸಮಸ್ಯೆಗಳು ಬಗೆಹರಿಯತ್ತವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆ, ಕೊಳ್ಳೇಗಾಲ, ನೀಲಗಿರಿ ಮುಂತಾದ ಮದರಾಸು ಪ್ರಾಂತ್ಯದಲ್ಲಿ ಉಳಿಯುವ ಮತ್ತು ಇತರ ಕನ್ನಡ ಪ್ರದೇಶಗಳನ್ನು ಸೇರಿಸುವುದಲ್ಲದೆ ಮುಂಬೈ ಪ್ರಾಂತ್ಯದಲ್ಲಿನ ಕಾರವಾರ ಮತ್ತು ಧಾರವಾಡ ಜಿಲ್ಲೆಗಳು ಮುಂತಾದ ಕನ್ನಡ ಪ್ರದೇಶಗಳನ್ನು ಮತ್ತು ಹೈದರಾಬಾದಿನಲ್ಲಿರುವ ಕನ್ನಡ ಪ್ರದೇಶಗಳನ್ನೂ, ಕೊಡಗನ್ನೂ ಸೇರಿಸಿ ಕರ್ನಾಟಕ ಪ್ರಾಂತ್ಯವನ್ನು ಆಗಮಾಡಿಸಬೇಕು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ ಮೈಸೂರಿಗೆ ಸೇರುವುದು ಕರ್ನಾಟಕ ಪ್ರಾಂತ್ಯ ರಚನೆಗೆ ಒಂದು ಮಹಾದ್ವಾರ ತೆರದಂತಾಗಿದೆ. ಇದೊಂದು ಐತಿಹಾಸಿಕ ಘಟನೆ ಎಂದು ನಾನು ತಿಳಿದುಕೊಂಡಿದ್ದೇನೆ.

ಈ ಆಂಧ್ರ ಪ್ರಾಂತ್ಯ ನಿರ್ಮಾಣ ಕಾಲದಲ್ಲಿ ಒಂದು ಭಾವನೆ ನಮ್ಮಲ್ಲಿ ಮೂಡಬೇಕಾದದ್ದು ಅತ್ಯಗತ್ಯವಾಗಿದೆ. ಈಗಾಗಲೇ ಅನೇಕ ವರ್ಷಗಳಿಂದ ಮದ್ರಾಸ್‌ ಪ್ರಾಂತ್ಯದಲ್ಲಿ ಅಣ್ಣತಮ್ಮಂದಿರಂತಿದ್ದ ತೆಲಗು ಮತ್ತು ತಮಿಳು ಬಾಂಧವರಲ್ಲಿ ವೈಮಸ್ಯಕ್ಕೆ ಎಡೆಗೊಡುವಂಥ ಪ್ರಸಂಗಗಳು ಎಷ್ಟೋ ನಡೆದವು. ಅವುಗಳನ್ನೆಲ್ಲ ಮರೆತು ಸೌಹಾರ್ದದಿಂದ ಬಾಳಲು ಕಲಿಯಬೇಕಲ್ಲದೆ ಪರಸ್ಪರ ವೈರತ್ವಗಳಿಗೆ ನಾವು ಈ ಯುಗದಲ್ಲಿ ಕೂಡ ಅವಕಾಶಕೊಡುವುದು ಮೂರ್ಖತನವೆಂದು ನಾನು ಭಾವಿಸುತ್ತೇನೆ. ಹಾಗೆಯೇ ಇ‌ಲ್ಲೂ ಕೂಡ ಇಂದು ಕೆಲವು ಮಹಾಶಯರು ಮೈಸೂರಿನಲ್ಲಿ ಬಹುಭಾಗ ತೆಲಗು ಪ್ರದೇಶಕ್ಕೆ – ಆಂಧ್ರ ಪ್ರಾಂತ್ಯಕ್ಕೆ ಸೇರಬೇಕಾದ ಪ್ರದೇಶಗಳಿವೆಯೆಂದು ಒಂದು ವಾದವನ್ನು ಮುಂದುಮಾಡಿಕೊಂಡು ಬರುತ್ತಿದ್ದಾರೆ. ಆ ರೀತಿ ಒಂದು ವೇಳೆ ಬಹುಸಂಖ್ಯಾತರು ತೆಲುಗು ಮಾತನಾಡುವ ಪ್ರದೇಶಗಳಿದ್ದು ಅವು ಆಂಧ್ರ ಪ್ರಾಂತ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದು ಕಂಡುಬಂದು ಅಂತಹ ಪ್ರದೇಶದ ಜನರು ಆಂಧ್ರಕ್ಕೆ ಸೇರಲು ಇಷ್ಟಪಟ್ಟರೆ, ಸೇರುವುದಾದರೆ, ಹಾಗೆ ಸೇರಿಕೊಳ್ಳಲು ನಾನಂತೂ ಯಾವ ಭಿನ್ನಾಭಿಪ್ರಾಯವನ್ನಾಗಲೀ ಅಡ್ಡಿಯನ್ನಾಗಲೀ ಸೂಚಿಸಲು ಸಿದ್ಧನಾಗಿಲ್ಲ.

ಆದರೆ ಒಂದು Corridor ಕೇಳತಕ್ಕ ಮನೋಭಾವವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕಾರಣ ಇಷ್ಟೆ ಇಂದು ನಮ್ಮ ದೇಶದಲ್ಲಿ ಒಂದೇ ಮಾತನಾಡತಕ್ಕಂಥ ಒಂದೇ ಸಂಸ್ಕೃತಿಯನ್ನು ಹೊಂದಿರುವ ಜನರು ಯಾವ ಒಂದೇ ಒಂದು ಭಾಗದಲ್ಲೂ ಇಲ್ಲ. ಪ್ರಪಂಚದಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿರುವುದು, ಒಂದು ದೇಶದ ಜನರು ಇನ್ನೊಂದು ದೇಶಕ್ಕೆ ಹೋಗಿ ನೆಲೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಲ್ಲದೆ ನಮ್ಮ ದೇಶದಲ್ಲೇ ಒಂದು ಉದಾಹರಣೆ ಕೊಡುವುದಾದರೆ, ನಾವೆಲ್ಲರೂ ಆಂಗ್ಲ ಭಾಷೆಯನ್ನೇ ಉಪಯೋಗಿಸುತ್ತಾ ಬಂದಿದ್ದೇವೆ. ಅದೇ ಆಡಳಿತ ಭಾಷೆಯಾಗಿದೆ. ಹೀಗಿರುವಾಗ ಭಾಷೆಯ ಆಧಾರದ ಮೇಲೆ ಒಂದು ಪ್ರದೇಶವನ್ನು ಹಂಚುವಾಗ ಭಾವೋದ್ರೇಕಗಳಿಗೆ ಅವಕಾಶ ಕೊಡುವುದು ಸರಿಯಲ್ಲ. ಇದರಿಂದ ಜಾತೀಯತೆ ಅಥವಾ ಇನ್ನಾವುದಾದರೂ ಕೆಟ್ಟತನಕ್ಕೊಳಗಾಗಿ ಹೇಗೆ ಬುದ್ಧಿಭ್ರಮಣೆಯಾಗುತ್ತದೋ ಹಾಗೆಯೇ ಭಾಷಾಮೋಹವು ಜನತೆಯ ಬುದ್ಧಿಭ್ರಮಣೆ ಮಾಡಬಲ್ಲುದು. ಆದುದರಿಂದ ನಮ್ಮ ಜನಕ್ಕಾಗಿ ನಮ್ಮ ಸಂಸ್ಕೃತಿಗಾಗಿ, ನಮ್ಮ ಭಾಷೆಗಾಗಿ, ನಮ್ಮ ಪ್ರಾಂತ್ಯಕ್ಕಾಗಿ ಹೋರಾಟ ಮಾಡುವಾಗ, ವಾದ ಮಾಡುವಾಗ ಅಥವಾ ಆ ವಾದವನ್ನು ಪ್ರತಿಪಾದನೆ ಮಾಡುವಾಗ, ಆ ವಾದವನ್ನೇ ಮುಂದುವರಿಸಿಕೊಂಡು ತಮ್ಮ ಉದ್ದೇಶವನ್ನು ಸಾಧಿಸಿಕೊಳ್ಳುವಾಗ ತೆಲುಗು, ತಮಿಳು ಅಥವಾ ಮರಾಠ ಜನರನ್ನು ಕೆರಳಿಸದಿರುವ ರೀತಿ- ನೀತಿಯನ್ನು ಕಲಿಯಬೇಕಾದದ್ದು ಬಹಳ ಅಗತ್ಯ. ಇಲ್ಲವಾದರೆ ಈ ಸಮಸ್ಯೆ ಬಗೆಹರಿಸುವಾಗ ಅನೇಕ ಎಡರು ತೊಡರುಗಳು ಬರುತ್ತವೆ. ಉದಾಹರಣೆಗೆ ಹೇಳುವುದಾದರೆ ಬಳ್ಳಾರಿ ತಾಲ್ಲೂಕು ಇನ್ನೂ ಎಲ್ಲಿಗೆ ಸೇರಬೇಕೆಂದು ನಿರ್ದಿಷ್ಟವಾಗಿ ತೀರ್ಮಾನವಾಗಿಲ್ಲ. ಮಿಶ್ರಾರವರ ವರದಿ ಕೇವಲ ಒಂದು ವರದಿಯೇ ಹೊರತು ಅದು ಕೊನೆಯ ತೀರ್ಮಾನವಲ್ಲ. ಅದು ಅವಾರ್ಡೇ ಅಲ್ಲ, ಅವರು ಅನ್ಯಾಯ ಮಾಡಿದ್ದಾರೆ, ಎಂದು ಹೇಳುವವರೂ ಇದ್ದಾರೆ. ಬಳ್ಳಾರಿ ಆಂಧ್ರಕ್ಕೆ ಸೇರಬೇಕೆಂದು ಹಠ ಹಿಡಿದಿರುವವರೂ ಇದ್ದಾರೆ.

ನಾನು ಮೊನ್ನೆ ಬಳ್ಳಾರಿಗೆ ಹೋಗಿದ್ದಾಗ ಒಂದು ಭಯಾನಕವಾದ ಪರಿಸ್ಥಿಯನ್ನೇ ಅಲ್ಲಿ ಉಂಟು ಮಾಡಿದ್ದರು. ಅನೇಕ ಕಡೆಗಳಲ್ಲಿ ‘ರಕ್ತಪಾತಮಾವುತುಂದಿ’ ಎಂದು ಬರೆದಿದ್ದರು. ಕನ್ನಡಿಗರು ಕನ್ನಡದಲ್ಲಿ ಮಾತನಾಡಲು ಕೂಡ ಹಿಂದೆ ಮುಂದೆ ನೋಡುತ್ತಿದ್ದರು. ಹೀಗೆ ಜನರು ಹಿಂಸಾತ್ಮಕ ಚಟುವಟಿಕೆಗಳಿಗೆ ಎಡೆಗೊಡುವುದಾದರೆ ಮತ್ತು ಕಳೆದುಹೋದ ರಕ್ತಪಾತ ಯುಗವನ್ನು ಈ ದೇಶದಲ್ಲಿ ಮತ್ತೆ ತರಬೇಕೆಂದು ಹವಣಿಸುವುದಾದರೆ ಆಗ ಈ ಪ್ರಶ್ನೆಯನ್ನು ಪುನಃ ವಿಮರ್ಶೆ ಮಾಡಬೇಕಾಗುತ್ತದೆ ಮತ್ತು ಅನೇಕ ವೇಳೆ ಇಂಥ ಶಕ್ತಿಗಳನ್ನು ಇಂಥ ವಾದವನ್ನು ಕಟುವಾಗಿ ಟೀಕಿಸಿ ಖಂಡಿಸಬೇಕಾಗುತ್ತದೆ, ಸರ್ವರ ಹಿತ ಮತ್ತು ಏಳಿಗೆಯ ದೃಷ್ಟಿಯಿಂದ.

ಇದರಲ್ಲಿ ಇನ್ನೊಂದು ವಿಷಯ: ಈ ಪರಸ್ಪರ ಅವಲಂಬನ ವಿಷಯವನ್ನು ನಾವು ನೋಡುವುದಾದರೆ, ಇವೊತ್ತು ಯಾವ ಪ್ರಾಂತ್ಯವು ಕೂಡ ಹಿಂದಿನ ಪಾಳೆಯಗಾರಿಕೆಯ ಯುಗದಲ್ಲಿದ್ದಂತೆ ಅಥವಾ ಸ್ವತಂತ್ರ ರಾಜರ ಯುಗದಲ್ಲಿದ್ದಂತೆ ಸರ್ವತಂತ್ರವಾಗಿ ತನ್ನ ಗಡಿಯನ್ನು ಕಾದುಕೊಂಡಿರತಕ್ಕ ಪರಿಸ್ಥಿತಿ ಉಳಿದುಕೊಂಡು ಬಂದಿಲ್ಲ. ಪರಸ್ಪರ ಅವಲಂಬನ ತೀರ ಹೆಚ್ಚಿ, ನಮ್ಮ ವೈಯಕ್ತಿಕತೆ ಅಥವಾ ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ನಾವು ಇವತ್ತು ಬೃಹತ್ತಿನಲ್ಲಿ, ಸಮಷ್ಟಿಯಲ್ಲಿ ಸಮಾವೇಶಗೊಳಿಸಿ ಅದರಲ್ಲಿಯೇ ದೃಷ್ಟಿಯನ್ನೂ ವೈಯಕ್ತಿಕತೆಯನ್ನೂ ಕಂಡುಕೊಳ್ಳಬೇಕಾಗಿದೆ. ಈ ಪರಿಸ್ಥಿಯಿರುವುದರಿಂದ ನಾವು ನನ್ನ ಪ್ರಾಂತ್ಯ, ನನ್ನ ಭಾಷೆ, ನನ್ನ ಜನ ಎಂಬ ವಾದ ಪ್ರಾರಂಭ ಮಾಡಿದರೂ ಕೂಡ, ಅದೇ ಕಾಲದಲ್ಲಿ ಒಂದು ವಿಶ್ವ, ಒಂದು ರಾಷ್ಟ್ರ, ಒಂದು ಜನಾಂಗ ಎಂಬ ಭಾವನೆಯನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅಂದ ಮೇಲೆ, ಇದು ಈ ಸಂದರ್ಭದಲ್ಲಿ ಒಂದು ಸಣ್ಣ ಪ್ರದೇಶಕ್ಕಾಗಿ ಅಥವಾ ಇನ್ನಾವುದೇ ಒಂದು ಕ್ಷುಲ್ಲಕ ವಿಷಯಕ್ಕಾಗಿ ರಕ್ತವನ್ನು ಬಿಸಿಮಾಡಿಕೊಂಡು ಒಬ್ಬರು ಇನ್ನೊಬ್ಬರ ಮೇಲೆ ಕಿಡಿಕಾರತಕ್ಕ ಸ್ವಭಾವವನ್ನು ಕಡಿಮೆ ಮಾಡಬೇಕು, ಬಿಟ್ಟುಬಿಡಬೇಕು: ಇಲ್ಲದಿದ್ದರೆ ನಮ್ಮ ಮಾರ್ಗದಲ್ಲಿ ಅನೇಕ ಅಡ್ಡಿ – ಆತಂಕಗಳು ಬರುತ್ತವೆಂದು ನಾನು ಮಹಾಶಯರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ಸ್ವಾಮಿ, ಈ ಮಸೂದೆಯ ಮೇಲೆ ನಾವು ನಮ್ಮ ಅಭಿಪ್ರಾಯವನ್ನು ಕೊಡಬಹುದೇ ಹೊರತು, ಪಾರ್ಲಿಮೆಂಟಿನಲ್ಲಿ ಈ ಮಸೂದೆಯನ್ನು ತರುವುದಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಅಂದಮೇಲೆ ಈ ಸಂದರ್ಭದಲ್ಲಿ ಈ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಕೂಲಂಕುಷವಾಗಿ ಪರಿಶೀಲನೆ ಮಾಡಿ, ಯಾರಿಗೂ ಅನ್ಯಾಯವಾಗದೆ ಇರುವ ರೀತಿಯಲ್ಲಿ ಕಾನೂನು ಮಾಡುತ್ತಾರೆಂದು ನಾವು ನಿರೀಕ್ಷಿಸಬಹುದಾಗಿದೆ. ಈ ಮಸೂದೆಯಲ್ಲಿ ನಮೂದಾಗಿರುವ ಮುಖ್ಯ ವಿಷಯವೇನೆಂದರೆ, ಆಂಧ್ರ ಹೊಸದಾಗಿ ತನ್ನ ಒಂದು ಪ್ರಾಂತ್ಯವನ್ನು ನಿರ್ಮಾಣ ಮಾಡಿಕೊಳ್ಳುತ್ತಿದೆ. ನಮಗೆ ಗೊತ್ತಿರುವ ಹಾಗೆ ಈಗ ಅವರಿಗೆ ಆಡಳಿತ ಕೇಂದ್ರ ಅಥವಾ ಅವರ ಸರ್ಕಾರನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದು ಸರಿಯಾದ ವ್ಯವಸ್ಥಿತವಾದ ಸ್ಥಳ ಕೂಡ ಇಲ್ಲ. ಈ ಸಮಯದಲ್ಲಿ ಕೇಂದ್ರ ಸರ್ಕಾರದವರು ಅವರಿಗೆ ಸಾಲದ ರೂಪದಲ್ಲಿ ಅಥವಾ ಬೇರೆ ರೂಪದಲ್ಲಿ ಹಣಕಾಸಿನ ಸಹಾಯ ಮಾಡುವುದಾಗಿ ಇದರಲ್ಲಿ ನಮೂದು ಮಾಡಿದ್ದಾರೆ. ಆಂಧ್ರ ಪ್ರಾಂತ್ಯ ರಚನೆಯಾದ ಮೇಲೆ ಅಡ್ಡಿ ಆತಂಕಗಳನ್ನೊಡ್ಡುವ ಮನೋಭಾವ ಯಾರಲ್ಲಿಯೂ ಬರಬಾರದು. ಬಂದರೆ ಅದು ಖಂಡನೀಯ. ಅವರು ಕರ್ನೂಲಿನಲ್ಲಿ ತಮ್ಮ ಆಡಳಿತ ಕೇಂದ್ರವನ್ನು ಪ್ರಾರಂಭ ಮಾಡುವವರಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮದರಾಸು ಪ್ರಾಂತ್ಯದ, ಮೈಸೂರು ಪ್ರಾಂತ್ಯದ ಮತ್ತು ಇತರ ಪ್ರಾಂತ್ಯಗಳ ನೆರವಿನ ಜೊತೆಗೆ ಕೇಂದ್ರ ಸರ್ಕಾರವೂ ಕೂಡ ಸಹಾಯನೀಡಬೇಕು.

ನೂತನವಾಗಿ ರಚನೆಯಾಗಲಿರುವ ಆಂಧ್ರ ಪ್ರಾಂತ್ಯದ ಬಗ್ಗೆ ಹೆಚ್ಚು ಆಸಕ್ತಿವಹಿಸಿ ಆ ಪ್ರಾಂತ್ಯ ಸುವ್ಯಸ್ಥಿತವಾದ ತಳಹದಿಯ ಮೇಲೆ ಬೆಳೆದು ಬರಲು ಅವಕಾಶ ಮಾಡಬೇಕೆಂದು ನಾವು ನಮ್ಮ ಅಭಿಪ್ರಾಯವನ್ನು ಕೊಡಬೇಕಾಗಿದೆ. ಈ ಕಾರ್ಯಸಾಧನೆಯಲ್ಲಿ ಎಷ್ಟೋ ವಿರಸ ಮತ್ತು ವೈಷಮ್ಯಗಳು ತಲೆದೋರಿರಬಹುದು. ಆದರೆ ಅದನ್ನು ಮನಸ್ಸಿನಲ್ಲಿಡಬಾರದು. ಏಕೆಂದರೆ ಅನೇಕ ಸಲ, ನಾವು ಆಸ್ತಿ – ಪಾಸ್ತಿಗಳನ್ನು ಹಂಚಿಕೊಳ್ಳುವಾಗ ಮತ್ತು ನಮ್ಮ ವ್ಯವಹಾರಗಳನ್ನು ತೀರ್ಮಾನ ಮಾಡಿಕೊಳ್ಳುವಾಗ ತೊಡಕುಗಳು ಬರಬಹದು. ಆದುದರಿಂದ ಆಂಧ್ರ ರಾಜ್ಯಕ್ಕೆ ತೊಂದರೆ ಅಥವಾ ವಂಚನೆ ಮಾಡುವ ಅಭಿಪ್ರಾಯವನ್ನು ನಾವು ಪ್ರದರ್ಶಿಸಬಾರದೆಂದು ನನ್ನ ಅಭಿಪ್ರಾಯ.

ಆಂಧ್ರ ಜನೆತೆಗೆ ತಮ್ಮದೇ ಆದ ಒಂದು ಪ್ರಾಂತ್ಯವನ್ನು ರಚಿಸಿಕೊಂಡು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಒಂದು ಸುಯೋಗ ಬಂದಿದ್ದರೂ ಕೂಡ ಇಂದಿನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿಯಲ್ಲಿ ಒಂದು ಸುವ್ಯವಸ್ಥಿತವಾದ ರಾಜ್ಯ ನೆಲೆಯಾಗಿ ನಿಂತು ಆಡಳಿತ ಸರಿಯಾಗಿ ನಡೆಸಿಕೊಂಡು ಹೋಗುವುದಕ್ಕೆ ಅವರಿಗೆ ಅಡ್ಡಿ ಆತಂಕಗಳಿವೆ. ಆದುದರಿಂದ ಅಕ್ಕಪಕ್ಕದ ಬಾಂಧವರೂ ಕೇಂದ್ರ ಸರ್ಕಾರದವರೂ ಎಲ್ಲ ರೀತಿಯಲ್ಲಿಯೂ ಅವರಿಗೆ ಸಹಕಾರ ನೀಡಿ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾದುದು ಅತ್ಯಗತ್ಯ.

ಈಗಾಗಲೇ ಶ್ರೀಮಾನ್ ಇಮಾಂರವರು ತುಂಗಭದ್ರಾ ಯೋಜನೆಯ ಬಗ್ಗೆ ಅಂಕಿ – ಅಂಶಗಳನ್ನು ಕೊಟ್ಟು ಮಾತನಾಡಿದ್ದಾರೆ. ಇದೂ ಕೂಡ ಇಲ್ಲಿಗೆ ಸಂಬಂಧಪಟ್ಟ ಹಾಗೆ ಒಂದು ಮುಖ್ಯ ವಿಷಯ. ಮದರಾಸು ಒಂದು ಪ್ರಾಂತ್ಯವಾಗಿದ್ದಾಗ ಅವರು ಹೆಚ್ಚು ಹಣವನ್ನು ಹಾಕಿ, ಆ ದೊಡ್ಡ ಯೋಜನೆಯನ್ನು ಕಾರ್ಯಗತ ಮಾಡಿದ್ದಾರೆ. ಅದರಲ್ಲಿ ಮದರಾಸು ನೇರವಾಗಿ ಯಾವ ಉಪಯೋಗವನ್ನು ಪಡೆಯದೇ ಹೋದರೂ ಕೂಡ ಆಂಧ್ರ ಹೋದರೂ ಕೂಡ ಆಂಧ್ರ ಮತ್ತು ಮೈಸೂರು ಪ್ರಾಂತ್ಯಗಳಿಗೆ ಹೆಚ್ಚು ಸಹಾಯವಾಗಲಿದೆ. ಈ ಸಂಬಂಧದಲ್ಲಿ ಒಂದು ಕಾರ್ಪೋರೇಷನ್ ಕೂಡ ರಚನೆ ಮಾಡಬಹುದೆಂದು ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ದಾಮೋದರ್ ವ್ಯಾಲಿ ಯೋಜನೆಗೆ ಹೇಗೆ ಮಾಡಿದ್ದಾರೋ ಹಾಗೆಯೇ ಇದಕ್ಕೂ ಒಂದು ಕಾರ್ಪೋರೇಷನ್ ಏರ್ಪಾಡು ಮಾಡಿ ಈ ವಿವಾದವನ್ನು ಸುಸೂತ್ರವಾಗಿ ಬಗೆಹರಿಸಿಕೊಳ್ಳಲಾಗಿದೆ. ಇನ್ನೂ ಇದರಲ್ಲಿ ಹೈಕೋರ್ಟು, ಕಾಲೇಜುಗಳು, ಆಸ್ಪತ್ರೆಗಳು, ಜೈಲುಗಳು – ಇವುಗಳ ವಿಷಯ ಪ್ರಸ್ತಾಪಿಸಲ್ಪಟ್ಟಿದೆ. ಇದನ್ನು ಕೂಡ ನಾವು ಸಹಾನುಭೂತಿಯಿಂದ ಪರೀಶಿಲನೆ ಮಾಡಿ ನೂತನವಾಗಿ ರಚನೆಯಾಗಲಿರುವ ಆಂಧ್ರ ಪ್ರಾಂತ್ಯಕ್ಕೆ ಸಹಾನುಭೂತಿಯ ದೃಷ್ಟಿಯಿಂದ ನಾವು ವರ್ತಿಸುವುದು ಬಹಳ ಸೂಕ್ತವೆಂದು ಅಭಿಪ್ರಾಯಪಡುತ್ತೇನೆ.

ಈ ಸಂದರ್ಭದಲ್ಲಿ ಇನ್ನೂ ಅನೇಕರು, ಇನ್ನೂ ಮಾತನಾಡದೆ ಇರುವವರಿದ್ದಾರೆ. ಆದುದರಿಂದ ನಾನು ಈ ವಿಷಯವನ್ನು ಲಂಬಿಸಿ ಉದ್ದವಾದ ಭಾಷಣ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಇತಿಹಾಸವನ್ನು ನಾನು ಸೂಕ್ಷ್ಮವಾಗಿಯಾದರೂ ಸಭೆಯ ಗಮನಕ್ಕೆ ತರಲು ಪ್ರಯತ್ನಪಡಬೇಕೆಂದಿದ್ದೆ. ಆದರೆ ಇತ್ತೀಚೆಗೆ ಒಂದು ತೀರ್ಮಾನಕ್ಕೆ ಬಂದೆ. ಆದೇನೆಂದರೆ ಇತಿಹಾಸವನ್ನು ಪುನಃ ನಾವು ಆಧಾರವಾಗಿಟ್ಟುಕೊಂಡು ಅದರ ಮೇಲೆ ನೂತನ ಪ್ರಾಂತ್ಯಗಳ ರಚನೆ ಮಾಡುವುದಕ್ಕೆ ಹೊರಟರೆ, ಅದರಲ್ಲಿ ಅನೇಕ ಎಡರು ತೊಡರುಗಳುಂಟಾಗುತ್ತವೆ. ನಾವು ಈ ಕಾಲವನ್ನು ದಾಟಿ ಬಂದಿದ್ದೇವೆ. ಇತಿಹಾಸವನ್ನು ನಾವೇ ಮಾಡುವವರಾಗಿದ್ದೇವೆ. ಆದುದರಿಂದ ನಾವು ಇಂದಿನ ಪರಿಸ್ಥಿತಿಗನುಗುಣವಾಗಿ ನಮ್ಮಲ್ಲಿ ನೂತನವಾಗಿ ಪ್ರಾಂತ್ಯಗಳನ್ನು ಆಡಳಿತ, ಸಂಸ್ಕೃತಿ, ಭಾಷೆ ಮತ್ತು ದೂರದೃಷ್ಟಿಯಿಂದ ಇಡೀ ದೇಶದ ಆಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಅದರಂತೆ ಪುನಃ ಹಂಚಿಕೆ ಮಾಡಿಕೊಳ್ಳಬೇಕಾದುದು ಆತ್ಯಗತ್ಯ.

ಈ ರೀತಿ ಮಾಡುವುದರಿಂದಲೇ ಅನೇಕ ತೊಂದರೆಗಳನ್ನು ಅಡ್ಡಿ ಆತಂಕಗಳನ್ನೂ ಬಗೆಹರಿಸಿಕೊಳ್ಳಬಹುದು ಎಂಬ ತೀರ್ಮಾನಕ್ಕೆ ಬಂದೆ. ಅದಕ್ಕಾಗಿಯೇ ಈ ಹೊತ್ತು ನಾನು ಮೈಸೂರು ರಾಜ್ಯದ, ಕರ್ನಾಟಕ ಪುರಾಣ ಇತಿಹಾಸಗಳ ಬಗ್ಗೆ ಯಾವುದೊಂದು ಪ್ರಸ್ತಾಪವನ್ನೂ ಮಾಡಿಲ್ಲ. ಅಂದ ಮಾತ್ರಕ್ಕೆ ಮೈಸೂರು ಮತ್ತು ಕರ್ನಾಟಕ ಪ್ರಾಂತ್ಯಕ್ಕೆ ಇತಿಹಾಸದ ಪುರಾಣದ ಕೊರತೆಯೇನೂ ಇಲ್ಲ; ಕನ್ನಡ ಭಾಷೆಯಲ್ಲಿ, ಕನ್ನಡ ಸಂಸ್ಕೃತಿಯಲ್ಲಿ ಯಾವ ಒಂದು ಕೊರತೆಯಾಗಲೀ, ತನ್ನದೇ ಆದ ಒಂದು ಪ್ರಾಂತ್ಯವನ್ನು ರಚನೆ ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗಲೀ ಇಲ್ಲವೆಂದು ತಿಳಿದುಕೊಂಡು ನಾವು ನಮ್ಮ ಪ್ರಾಂತ್ಯವನ್ನು ನಿರ್ಮಾಣ ಮಾಡಿಕೊಳ್ಳುವ ಸಂದರ್ಭ ಬಂದಾಗ ಆ ವಿಷಯವನ್ನೆಲ್ಲಾ ವಿಚಾರ ಮಾಡೋಣ. ನಮ್ಮ ನೂತನ ಪ್ರಾಂತ್ಯವನ್ನು ನಿರ್ಮಾಣಮಾಡುವ ಸಂದರ್ಭದಲ್ಲಿ ಇದನ್ನೆಲ್ಲಾ ಪ್ರಸ್ತಾಪಿಸಲು ಅವಕಾಶವಾಗುವುದೆಂದು ಅದನ್ನು ಈಗ ಬಿಟ್ಟಿದ್ದೇನೆ. ಕೊನೆಯದಾಗಿ ನೂತನವಾಗಿ ರಚನೆಯಾಗಲಿರುವ ಆಂಧ್ರ ಪ್ರಾಂತ್ಯಕ್ಕೆ ನಮ್ಮ ಒಂದು ಹೆಬ್ಬಕೆಯನ್ನು ಬಯಸಿ, ಇದೇ ಕಾಲದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ಪ್ರಾಂತ್ಯ ರಚನೆಗೂ ಇದೇ ಮಸೂದೆಯನ್ನು ಅವಕಾಶ ಮಾಡಲೆಂದು ಹೇಳಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.

ಮಲೆನಾಡು ಪ್ರದೇಶ

೧೬ ಜನವರಿ ೧೯೫೪

ಪಂಚವಾರ್ಷಿಕ ಯೋಜನೆಗೆ ಸಂಬಂಧಪಟ್ಟ ಹಾಗೆ ನಾನು ಇನ್ನೊಂದು ವಿಚಾರವನ್ನು ಹೇಳಬೇಕಾಗಿದೆ. ಮೈಸೂರು ಸಂಸ್ಥಾನದಲ್ಲಿ ಕ್ಷಾಮ ಪ್ರದೇಶಗಳಿರುವ ಹಾಗೆಯೇ ಮಲೆನಾಡು ಪ್ರದೇಶವೂ ಇದೆಯೆಂಬುದು ಸರ್ಕಾರದವರಿಗೆ ತಿಳಿದ ಅಂಶವೇ ಆಗಿದೆ. ಮಲೆನಾಡು ಪ್ರದೇಶ ತನ್ನದೇ ಆದ ಒಂದು ಪ್ರಾಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ಒಂದು ವಿಧದಲ್ಲಿ ಅದು ಸರಿಯೇ. ಅಲ್ಲಿಯ ಜನಜೀವನ ಒಂದು ವೈವಿಧ್ಯತೆಯಿಂದ ಕೂಡಿದೆ. ಮಲೆನಾಡು ಪ್ರದೇಶದಲ್ಲಿ ಕಾಡು ಹೆಚ್ಚು. ಮಳೆ ಜಾಸ್ತಿ; ಅಲ್ಲಿಯ ಜನರು ವಿಶೇಷವಾಗಿ ಮಲೇರಿಯಾ ರೋಗಗ್ರಸ್ತರಾಗಿರುತ್ತಾರೆ. ನೀರು ಇರತಕ್ಕ ಸ್ಥಳದಲ್ಲಿ ಮಲೇರಿಯಾ ಯಾವತ್ತೂ ಇರತಕ್ಕದ್ದು ಸ್ವಾಭಾವಿಕ. ಅಲ್ಲಿ ಸಾರಿಗೆ ಸಂಪರ್ಕಗಳಿಲ್ಲ. ಮೈಸೂರು ಸಂಸ್ಥಾನದಲ್ಲಿ ಈ ಮಲೆನಾಡು ಪ್ರದೇಶ ದಕ್ಷಿಣದ ಕಡೆ ಮಲಬಾರುವರೆಗೂ, ಪಶ್ಚಿಮ ಘಟ್ಟದ ಉದ್ದಕ್ಕೂ ಇದೆ; ಮುಂಬೈ ಪ್ರಾಂತ್ಯದಲ್ಲಿಯೂ ಇದೆ. ಆದರೂ ಸಹ ಮಲೆನಾಡಿನ ಬಗ್ಗೆ ಈ ಪಂಚವಾರ್ಷಿಕ ಯೋಜನೆಯಲ್ಲಿ ಯಾವ ಬಗೆಯ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಇದೊಂದು ವಿಷಾದಕರವಾದ ಸಂಗತಿ. ಬಹುಶಃ ಈ ಪಂಚವಾರ್ಷಿಕ ಯೋಜನೆಯನ್ನು ತಯಾರಿಸಿದ ಮಹನೀಯರು ಈ ಅಂಶವನ್ನು ಗಮನಿಸಿಲ್ಲವೆಂದು ತೋರುತ್ತದೆ. ಮಲೆನಾಡು ಪ್ರಾಂತ್ಯ ಕಾಫಿ, ಏಲಕ್ಕಿ, ವನ್ಯ ಸಂಪತ್ತು ಮತ್ತು ಇತರ ಸಂಪತ್ತುಗಳಿಗೆ ನೆಲೆವೀಡಾಗಿದೆ. ಮಲೆನಾಡಿನ ಹಿತದೃಷ್ಟಿಯಿಂದ, ಈ ಜನತೆಯ ಹಿತದೃಷ್ಟಿಯಿಂದ ಮಲೆನಾಡ ಅಭಿವೃದ್ಧಿ ಅತಿ ಪ್ರಾಮುಖ್ಯವಾದ್ದು. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಾತ್ರ ಹೇಳುತ್ತೇನೆ. ಹಿಂದೆ ಮಲೆನಾಡಿನ ಬಗ್ಗೆ ಶ್ರೀ. ಎ. ವಿ. ರಾಮನಾಥನ್‌ರವರ ಯೋಜನೆ ಒಂದಿತ್ತು; ಅದೇ ರೀತಿ ಕೇಂದ್ರ ಸರ್ಕಾರದ ಮೂರು ಕೋಟಿ ರೂಪಾಯಿಯ ಯೋಜನೆಯೊಂದು ಇತ್ತು ಎಂದು ಕೇಳಿದ್ದೆ. ಈಗ ಅದನ್ನೆಲ್ಲಾ ಕೈಬಿಟ್ಟಿದೆ. ಈಗಲಾದರೂ ಮಲೆನಾಡಿನ ಬಗ್ಗೆ ಮೈಸೂರು ಸರ್ಕಾರದವರು ತ್ವರಿತವಾಗಿ ಯೋಜನೆಯೊಂದನ್ನು ಕೈಗೊಂಡು ಮಲೆನಾಡು ಜನತೆಯ ಜೀವನವನ್ನು ಉತ್ತಮಪಡಿಸಿ, ತನ್ಮೂಲಕ ಸಂಸ್ಥಾನದ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂದು ಕೋರುತ್ತೇನೆ.