ಕರ್ನಾಟಕ ರಾಜ್ಯ ರಚನೆಯ ಅವಶ್ಯಕತೆ

ಮಾರ್ಚ್೧೯೫೫

ಮಾನ್ಯ ಅಧ್ಯಕ್ಷರೇ ಮತ್ತು ಸಭಾ ಸದಸ್ಯರೇ, ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಮತ್ತು ಮೈಸೂರು ಸಂಸ್ಥಾನದ ಶಾಸನಾಂಗಗಳ ಇತಿಹಾಸದಲ್ಲೇ ಒಂದು ಅತ್ಯಂತ ಮಹತ್ವದ ವಿಷಯವನ್ನು ನಾವು ಚರ್ಚಿಸುತ್ತಿದ್ದೇವೆ.

ಈ ಸಭೆ ಶೇಷಾದ್ರಿ ಸಮಿತಿಯವರ ಅಂಕಿ-ಅಂಶಗಳ ವರದಿಯನ್ನು ಚರ್ಚಿಸುತ್ತಿರುವುದನ್ನು ಮೈಸೂರು ಮತ್ತು ನೆರೆಯ ಕನ್ನಡ ಪ್ರದೇಶಗಳ ಜನರು ಅತ್ಯಂತ ಕುತೂಹಲ ಮತ್ತು ಆಕ್ಷಾಂಕ್ಷೆಯಿಂದ ನಿರೀಕ್ಷಿಸುತ್ತಿದ್ದಾರೆ. ಈ ಸಭೆಯ ಅಭಿಪ್ರಾಯ ಮತ್ತು ಅಭಿಮತಗಳು ಎರಡು ಕೋಟಿ ಕನ್ನಡಿಗರ ಭವಿಷ್ಯವನ್ನು ರೂಪಿಸುವುದಕ್ಕೆ ಸಹಾಯಕವಾಗಬೇಕು. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ಹೊಣೆ ಅತ್ಯಂತ ಮಹತ್ವದ್ದಾಗಿದೆ. ಈ ಶೇಷಾದ್ರಿ ಸಮಿತಿಯ ವರದಿ ಕರ್ನಾಟಕ ಪ್ರಾಂತ್ಯ ನಿರ್ಮಾಣಕ್ಕೆ ಅನುಕೂಲವಾಗಿದೆಯೋ ಅಥವಾ ಪ್ರತಿಕೂಲವಾಗಿದೆಯೋ ಎಂಬ ಅಂಶವನ್ನು ಮಾತ್ರ ನಾವು ಇಲ್ಲಿ ಚರ್ಚಿಸುತ್ತಿಲ್ಲ. ಅಂಕಿ-ಅಂಶಗಳಲ್ಲದೆ ಇಂಥ ಒಂದು ಮಹತ್ವದ ವಿಷಯದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಅಷ್ಟು ಸಮಂಜಸವಲ್ಲವೆಂದು ಈ ಒಂದು ಕಾರಣದಿಂದ ಮಾತ್ರ ಇಂಥ ಒಂದು ಸಮಿತಿಯ ಅಗತ್ಯವನ್ನು ಈ ಸಮಿತಿಯನ್ನು ರಚಿಸಿದರೆಂದು ನಾನು ಅಭಿಪ್ರಾಯಪಡುತ್ತೇನೆ.

ಮೊದಲನೆಯದಾಗಿ, ನಮ್ಮ ದೇಶದ ಐತಿಹಾಸಿಕ ಹಿನ್ನಲೆಯನ್ನು ನಾವೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾದುದು ಮತ್ತು ಆ ಸ್ಮರಣೆಯನ್ನು ನಾವು ಮಾತನಾಡುವಾಗ ನಮ್ಮ ದೃಷ್ಟಿಪಥದಲ್ಲಿ ಇಟ್ಟುಕೊಳ್ಳಬೇಕಾದುದು ಅತ್ಯಂತ ಸೂಕ್ತ. ಈ ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದಲ್ಲಿ ಎಲ್ಲೆಕಟ್ಟುಗಳ ಪುನರ್ವಿಂಗಡೆಗಳಾದುವು. ಆದರೆ ಆ ಕಾರ್ಯು ಒಂದು ಘಟ್ಟಕ್ಕೆ ಬಂದ್ದು ಅಲ್ಲಿಗೆ ನಿಂತುಹೋದುದು ನಮ್ಮಲ್ಲರಿಗೂ ಜ್ಞಾಪಕವಿದೆ. ಪುನಃ ನಮ್ಮ ದೇಶದ ಪ್ರಾಂತ್ಯಗಳ ಪುನರ್ನಿರ್ಮಾಣವಾಗಬೇಕೆಂಬ ಅಭಿಪ್ರಾಯದಲ್ಲಿ ಒಮ್ಮತ ಬಂದು ಕೇಂದ್ರ ಸರ್ಕಾರದವರು ಫಜಲಾಲಿಯವರ ಅಧ್ಯಕ್ಷತೆಯಲ್ಲಿ ಒಂದು ಪ್ರಾಂತ್ಯಗಳ ಪುನರ್ವಿಂಗಡಣಾ ಸಮಿತಿಯನ್ನು ರಚಿಸಿ, ಆ ಸಮಿತಿಯವರು ದೇಶದಾದ್ಯಂತ ಪ್ರವಾಸ ಮಾಡಿ, ಅಂಕಿ-ಅಂಶಗಳನ್ನು ಸಂಗ್ರಹಿಸಿ ಇಷ್ಟರಲ್ಲೇ ಈ ವಿಷಯದ ಮೇಲೆ ತಮ್ಮ ವರದಿಯನ್ನು ಕೊಡುವವರಿದ್ದಾರೆ. ಇದನ್ನು ದೇಶವು ಬಹಳ ಕುತೂಹಲದಿಂದ ನೀರಿಕ್ಷಿಸುತ್ತಿದೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಶೇಷಾದ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆಯಾಗಿ ಈಗ ಆ ಸಮಿತಿಯ ವರದಿಯ ಮೇಲೆ ಚರ್ಚಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ನಾವು ಮತ್ತೊಂದು ಮುಖ್ಯ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾದುದು ಭಾಷಾವಾರು ಪ್ರಾಂತ್ಯ ರಚನೆ, ಸುಮಾರು ೧೯೧೭ನೆಯ ಇಸವಿಯ ಲಾಗಾಯ್ತು ನಮ್ಮ ದೇಶದ ರಾಜಕಾರಣಿಗಳ ಹಾಗೂ ಮುಖಂಡರುಗಳ ಗಮನವನ್ನು ಸೆಳೆದಿತ್ತು. ೧೯೨೦ರಲ್ಲಿ ಭಾಷೆಯ ಆಧಾರದ ಮೇಲೆ ಕಾಂಗ್ರೆಸ್ ಸಮಿತಿಗಳ ರಚನೆಯಾಯಿತು. ಆಗಲೇ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂತು. ಅನಂತರ ೧೯೨೧ರಲ್ಲಿ ಕಾಂಗ್ರೆಸ್ಸು ಈ ತತ್ವವನ್ನು ಒಪ್ಪಿಕೊಂಡು ತನ್ನ ನಿರ್ಣಯವನ್ನು ದೇಶದ ಮುಂದಿಟ್ಟಿತ್ತು. ಹಾಗೆಯೇ ಈ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟ ಮತ್ತು ಜನತೆಯ ಸಂಘಟನೆ, ಸ್ವಾತಂತ್ರ್ಯ ಸಂಘಟನೆಯೊಡನೆ ಮುಂದುವರಿದುಕೊಂಡು ಬಂತು. ಆದಾದ ಮೇಲೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕೂಡ ಭಾಷಾವಾರು ಪ್ರಾಂತ್ಯ ರಚನೆಯ ತತ್ವವನ್ನೊಪ್ಪಿಕೊಂಡು ಜನತೆಗೆ ಆಶ್ವಾಸನೆ ಕೊಟ್ಟಿತ್ತು.

ಹೀಗೆ ದೇಶದ ಪುನರ್ನಿಂಗಡಣೆಯು ಭಾಷೆಯ ಆಧಾರದ ಮೇಲೆ ಅಗಬೇಕೆಂಬ ಅಭಿಪ್ರಾಯದ ಬಗ್ಗೆ ದೇಶದಲ್ಲಿ ಸಾಕಷ್ಟು ಪುರಸ್ಕಾರ ದೊರೆಯಿತು. ಈ ತತ್ವದ ಆಧಾರದ ಮೇಲೆ ಆಂಧ್ರ ಪ್ರಾಂತ್ಯ ಅಸ್ತಿತ್ವಕ್ಕೆ ಬಂದಿದೆಯೆಂಬುದನ್ನು ನಾವು ತಿಳಿದುಕೊಂಡಿದ್ದೇವೆ.

ಭಾಷಾವಾರು ತತ್ವವನ್ನೊಪ್ಪಿಕೊಂಡು ಭಾಷೆಯ ಆಧಾರದ ಮೇಲೆ ಆಂಧ್ರ ಪ್ರಾಂತ್ಯವನ್ನು ಈಗಾಗಲೇ ನಾವು ನಿರ್ಮಾಣಮಾಡಿದ್ದೇವೆ. ಆದೇ ಕಾಲದಲ್ಲಿ ಕರ್ನಾಟಕ ಪ್ರಾಂತ್ಯವೂ ಕೂಡ ಅಸ್ತಿತ್ವಕ್ಕೆ ಬರಬೇಕಾಗಿತ್ತು. ಕಾರಣಾಂತರಗಳಿಂದ ಇದು ಮುಂದೆ ಹಾಕಲ್ಪಟ್ಟಿತ್ತು. ದಕ್ಷಿಣ ಭಾರತದಲ್ಲಿ ಪ್ರಮುಖವಾದ ನಾಲ್ಕು ಭಾಷೆಗಳಿವೆ. ಅವು ಮಲೆಯಾಳಂ, ತಮಿಳು, ತೆಲಗು ಮತ್ತು ಕನ್ನಡ. ಇವು ವಸ್ತುತಃ ಒಂದೇ ತಾಯಿಯ ನಾಲ್ಕು ಮಕ್ಕಳಿದ್ದಂತಿರುವ ಭಾಷೆಗಳು. ನಾವು ಭಾಷೆಗಳ ಇತಿಹಾಸವನ್ನು ಹುಡುಕಿ ನೋಡಿದಾಗ, ಇವು ಅತ್ಯಂತ ಪುರಾತನ ಭಾಷೆಗಳೆಂದು ನಮಗೆ ತಿಳಿದು ಬರುತ್ತದೆ. ಈ ಭಾಷೆಗಳು ತಮ್ಮದೇ ಆದ ಒಂದು ಸಂಸ್ಕೃತಿಯನ್ನು ಕೂಡ ಕಾಪಾಡಿಕೊಂಡು ಬಂದಿವೆ. ದಕ್ಷಿಣ ಇಂಡಿಯಾ ದೇಶದ ಇತಿಹಾಸ ಬಹಳ ಪುರಾತನವಾಗಿರುವ ಇತಿಹಾಸವಾಗಿದೆ. ಆರ್ಯರು ಈ ದಕ್ಷಿಣ ದೇಶಕ್ಕೆ ಬಂದ ಕಾಲವನ್ನು ಸುಮಾರು ಅಗಸ್ತ್ಯರು ಬಂದ ಕಾಲಕ್ಕೆ ಇತಿಹಾಸಕಾರರು ಹುಡುಕಿ ತೋರಿಸುತ್ತಾರೆ. ಅನಂತರದಲ್ಲಿ ಈ ದೇಶವನ್ನು ಜೈನರು ಮತ್ತು ಬೌದ್ಧರು ಅಳಿಕೊಂಡು ಬಂದದ್ದನ್ನು ನೋಡುತ್ತೇವೆ. ಕನ್ನಡ ಮತ್ತು ಇತರ ದಕ್ಷಿಣ ಭಾಷೆಗಳಿಗೆ ಜೈನರೂ, ಬೌದ್ಧರೂ ಹೆಚ್ಚು ಶ್ರಮಿಸಿದ್ದಾರೆಂಬುದು ನಮಗೆ ಕಂಡುಬರುತ್ತದೆ. ಹೀಗೆ ಈ ಭಾಷೆಗಳು ತಮ್ಮ ಅಸ್ತಿತ್ವವನ್ನು ಇದುವರೆಗೆ ಕಾಪಾಡಿಕೊಂಡು ಬಂದವು. ಅನಂತರ ಬ್ರಿಟಿಷರು ನಮ್ಮ ದೇಶದಲ್ಲಿ ತಮ್ಮ ಸಂಸ್ಕೃತಿಯನ್ನು ಸ್ಥಾಪನೆ ಮಾಡಿದ ಮೇಲೆ; ನಮ್ಮ ದೇಶದ ಭಾಷೆಗಳಿಗೆ, ಸಂಸ್ಕೃತಿಗೆ ಅಥವಾ ದೇಶೀಯ ಕಲೆ, ಸಾಹಿತ್ಯ ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಲಿಲ್ಲ. ಅಲ್ಲಿಂದ ಸುಮಾರು ೧೫೦-೨೦೦ ವರ್ಷಕಾಲ ಅಂಧಕಾರದಲ್ಲಿ ಮುಳುಗಿ ಹೋಗಿತ್ತು. ಪುರಾಣ ಕಾಲಕ್ಕೂ ಬ್ರಿಟಿಷರ ಆಡಳಿತ ಕಾಲಕ್ಕೂ ಮಧ್ಯೆ ಅನೇಕ ರಾಜ್ಯಗಳು ಪ್ರದೇಶಲ್ಲಿ ಹುಟ್ಟಿ, ಬೆಳೆದು ಅಳಿದಿಹೋದ ಇತಿಹಾಸ ನಮ್ಮ ಕಣ್ಣು ಮುಂದೆ ಇದೆ. ಈಗ ನಾವು ಪುನಃ ಸ್ವಾತಂತ್ರ್ಯವನ್ನು ಪಡೆದು ದಿನ ರಾಜ್ಯಗಳನ್ನು ಭದ್ರವಾದ ಬುನಾದಿಯ ಆಧಾರದ ಮೇಲೆ ಪುನರ್ವಿಂಗಡಣೆ ಮಾಡತಕ್ಕ ಒಂದು ಮಹತ್ತರ ಕಾರ್ಯದ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಈ ಕಾರ್ಯದಲ್ಲಿ ಇನ್ನೂ ನಾವು ಸಾಧಿಸಬೇಕಾದುದು ಮಹತ್ತರವಾಗಿದೆ. ಇದೇ ಸಂದರ್ಭದಲ್ಲಿ ಈ ಕರ್ನಾಟಕ ಪ್ರಾಂತ್ಯವಾಗಬೇಕೆಂಬ ಒಂದು ಹೋರಾಟ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ.

ಈ ಸಂದರ್ಭದಲ್ಲಿ ಫಜಲಾಲಿ ಸಮಿತಿಯವರು ಮೈಸೂರಿಗೆ ಆಗಮಿಸಿದ್ದಾಗ ಮೈಸೂರಿನವರು ಅನೇಕರು ಅವರ ಸಂದರ್ಶನ ಮಾಡಿದ್ದಾರೆ. ಪ್ರಜಾಸೋಷಲಿಸ್ಟ್‌ ಪಾರ್ಟಿಯವರು ಒಂದು ಮನವಿಯನ್ನು ಅವರಿಗೆ ಸಲ್ಲಿಸಿದರು. ಹಾಗೆಯೇ ಕಮ್ಯುನಿಸ್ಟ್‌ ಪಾರ್ಟಿಯವರೂ ಕೂಡ ಒಂದು ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಮೈಸೂರು ಕಾಂಗ್ರೆಸ್ಸಿನವರು ಮಾತ್ರ ಅವರಿಗೆ ತಮ್ಮ ಅಭಿಪ್ರಾಯವನ್ನು ಮನವಿ ರೂಪದಲ್ಲಿ ಸಲ್ಲಿಸಲಿಲ್ಲ. ಈ ಸಂದರ್ಭದಲ್ಲಿ ಪ್ರಜಾ ಸೋಷಲಿಸ್ಟ್ಪಾರ್ಟಿ ಯಾವ ನಿಲುವನ್ನು ಹೊಂದಿದೆ ಎಂಬುದನ್ನು ನಾನು ಇಲ್ಲಿ ಉದಾಹರಿಸಲು ಇಚ್ಛಿಸುತ್ತೇನೆ. ಮಾನ್ಯ ಸದಸ್ಯರು ಶೇಷಾದ್ರಿ ಸಮಿತಿಯ ವರದಿಯನ್ನು ಸಮೀಕ್ಷೆ ಮಾಡುವಾಗ ಮೈಸೂರು ಹಾಗೆಯೇ ಉಳಿಯತಕದ್ದು ಉಚಿತವೆಂಬ ಅಭಿಪ್ರಾಯವನ್ನು ಪುಷ್ಟೀಕರಿಸುವ ಸಲುವಾಗಿ ಕೆಲವು ಅಂಶಗಳನ್ನು ಎತ್ತಿ ಆಡಿದ್ದಾರೆ. ಅವುಗಳ ಬಗ್ಗೆ ನಾನು ಕೆಲವು ವಿಷಯಗಳನ್ನು ಕುರಿತು ಹೇಳುವವನಾಗಿದ್ದೇನೆ.

ಪ್ರಾಂತ್ಯಗಳ ಪುನರ್ವಿಂಗಡಣೆಗೆ ಬರೀ ಆರ್ಥಿಕ ಅಂಶ ಒಂದೇ ಸಾಲದು ಎನ್ನುವುದು ಬಹಳ ಮುಖ್ಯವಾದುದ್ದು. ಹೊರಗಡೆಯಿರುವ ಕನ್ನಡ ಪ್ರಾಂತ್ಯಗಳು ಆರ್ಥಿಕವಾಗಿ ಶ್ರೀಮಾನ್ ಲಕ್ಕಪ್ಪನವರು ಹೇಳಿದ ಹಾಗೆ ಹಿಂದುಳಿದಿರುವ ಅಂಶ ನಿಜ. ಅವರು ‘ಬಹಳ’ ಎಂಬ ಶಬ್ಧವನ್ನು ಉಪಯೋಗಿಸಿದರು. ಆದರೆ ‘ಬಹಳ’ ಎಂಬ ಶಬ್ಧ ತುಂಬ ಆದುದು. ನನ್ನ ದೃಷ್ಟಿಟ್ಟಿಯಲ್ಲಿ ಅವು ‘ಬಹಳ’ ಹಿಂದುಳಿದಿವೆ’ಯೆಂದು ಹೇಳಿದ ಶಬ್ಧ ಅಷ್ಟು ಸೂಕ್ತವಾಗಿ ತೋರಲಿಲ್ಲ. ಅಲ್ಲದೆ, ನಾನು ಮುಖ್ಯವಾಗಿ ಹೇಳುವುದೆನೆಂದರೆ, ಅದು ಸರ್ಪ್ಲಸ್ ಪ್ರದೇಶವೇ, ಡಿಫಿಸಿಟ್ ಪ್ರದೇಶವೇ ಎಂಬ ಪ್ರಶ್ನೆಯೇ ನಮ್ಮನ್ನು ಬಾಧಿಸಕೂಡದು. ಕಾರಣ ಮೈಸೂರು ಸಂಸ್ಥಾನವೇ ಈ ಹೊತ್ತು ೪೦೯ ಲಕ್ಷ ರೂಪಾಯಿಗಳ ಡಿಫಾಸಿಟ್ ಇಟ್ಟುಕೊಂಡಿದೆ. ಅಲ್ಲದೆ ಇಂಡಿಯಾ ದೇಶದಲ್ಲಿ ಈ ಹೊತ್ತು ಇರತಕ್ಕ ಪರಿಸ್ಥಿತಿಯನ್ನು ನೋಡುವುದಾದರೆ ಪಾರ್ಲಿಮೆಂಟಿನ ಬಡ್ಜೆಟ್ಟು ಮತ್ತು ಎಲ್ಲಾ ಪ್ರಾಂತ್ಯಗಳ ಬಡ್ಜೆಟ್ಟುಗಳೂ ಕೊರತೆಯ ಬಡ್ಜೆಟ್ಟುಗಳೇ ಆಗಿವೆ. ಆದ್ದರಿಂದ ಕರ್ನಾಟಕದ ಜನರು ಒಂದು ಆಡಳಿತಕ್ಕೆ ಒಳಪಡಬೇಕೆ? ಬೆರೊಂದು ಪ್ರಾಂತ್ಯವನ್ನು ನಿರ್ಮಾಣ ಮಾಡಬೇಕೆ? ಎನ್ನುವ ಸಂದರ್ಭದಲ್ಲಿ ಹಣದ ಪ್ರಶ್ನೆ ನಮ್ಮ ಮುಂದೆ ನಿಲ್ಲುವುದೇ ಇಲ್ಲ. ಏಕೆಂದರೆ ಹೊತ್ತು ನಾವು ಹಣವನ್ನು ಹಂಚಿಕೊಳ್ಳುವುದಕ್ಕೆ ಮಾತ್ರ ನಿಂತಿಲ್ಲ. ಬಹುಕಾಲ ಬದುಕಿ ಬಾಳುವುದಕ್ಕೆ ಅದೊಂದು ಸಾಧನವೇ ಹೊರತು ಅದೇ ಒಂದು ಗುರಿಯಲ್ಲ.

ಕನ್ನಡ ಜನರು ಮೈಸೂರಿನೊಡನೆ ಸೇರುವುದಾರೆ ಅಥವಾ ಮೈಸೂರು ಸೇರಿದ ಒಂದು ಕನ್ನಡ ಪ್ರಾಂತ್ಯವಾದರೆ ನಮ್ಮ ಆಶೋತ್ತರಗಳು ಮುಗಿದು ಅದೇ ಅಂತಿಮ ಗುರಿಯೆಂದು ನಾವು ಭಾವಿಸುವುದಿಲ್ಲ. ಈ ಪ್ರದೇಶದಲ್ಲಿರತಕ್ಕ ಜನರ ಬಾಳು ಹಸನಾಗಬೇಕಾದರೆ, ಅವರೂ ಮುಂದೆ ಬಾಳಿ ಬದುಕಿ ಅಭಿವೃದ್ದಿಯಾಗಬೇಕಾದರೆ ಒಂದು ಪ್ರಾಂತ್ಯವಾಗುವುದರ ಅವಶ್ಯಕತೆ ಇದೆ. ಹಾಗೆ ಒಟ್ಟಿಗೆ ಇರಬೇಕೆಂಬುದಕ್ಕೆ ಎಲ್ಲ ಕಾರಣಗಳು ಇವೆ; ಚಾರಿತ್ರಿಕ ಹಿನ್ನೆಲೆಯಿದೆ; ಭಾಷೆಯ ತಳಹದಿಯಿದೆ; ಭಾಷಾ ಸಂಸ್ಕೃತಿಯಿದೆ. ಒಟ್ಟಿನಲ್ಲಿ ನಾವೆಲ್ಲರೂ ಒಂದು ಎಂದು ಹೇಳುವುದಕ್ಕೆ ಸಕಾರಣಗಳಿವೆ.

ಆದ್ದರಿಂದ ಇಲ್ಲಿ ಭಾವನಾತ್ಮಕ ಸಂಬಂಧ ಬಹಳ ಮುಖ್ಯವಾದುದ್ದು. ನಾವು ಇಂಡಿಯಾ ದೇಶದ ಜನ ಮತ್ತು ಇಂಡಿಯಾದ ಬಗ್ಗೆ ಬಹಳ ಪ್ರೀತಿಯಿಂದಿದ್ದೇವೆ. ಎಂದರೆ, ರಾಷ್ಟ್ರ ಪ್ರೇಮವೆನ್ನುವುದು ಹಣದ ಮೇಲೆ, ಅಥವಾ ಇತರ ವಿಚಾರಗಳ ಮೇಲೆ ನಿಂತಿರತಕ್ಕ ಒಂದು ಭಾವವಲ್ಲ. ಈ ಹೊತ್ತು ಇಂಡಿಯಾ ದೇಶದ ಬಗ್ಗೆ ಅದರ ಸ್ವಾತಂತ್ರ್ಯಕ್ಕಾಗಿ ಜೀವ ಕೊಡುತ್ತೇವೆಂದರೆ ಆ ಭಾವ ಮುಖ್ಯವಾದುದ್ದು. ಹಾಗೆಯೇ ಭಾಷೆಯನ್ನುವುದೂ ಕೂಡ: ಅದೂ ಭಾವನಾತ್ಮಕವಾಗಿದೆ. ಅದು ಜೀವನದಲ್ಲಿ ಉಪಯುಕ್ತವಾದ ಅಂಶವಾದರೂ ಕೂಡ, ಅದರಲ್ಲಿ ಭಾವ ಮೂಡಿನಿಂತಿದೆ. ಅದ್ದರಿಂದ ಕನ್ನಡಕ್ಕೆ ತನ್ನದೇ ಆದ ಒಂದು ಪ್ರಾಂತ್ಯ ನಿರ್ಮಾಣವಾಗಲೇಬೇಕು – ಅದು ಉಳಿಯಬೇಕಾದರೆ, ಈ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲವೆಂದು ನಾನು ತಿಳಿದಿದ್ದೇನೆ. ಆದ್ದರಿಂದ ಈ ಹೊತ್ತು ಹಣದ ಪ್ರಶ್ನೆ ಒಂದು ಪ್ರಶ್ನೆಯಾಗಿ ನಿಲ್ಲಲೇಬಾರದು. ಆದರೂ, ನಾನು ಮುಂದೆ ಅಂಕಿ ಅಂಶಗಳನ್ನು ಕೂಡ ಕೊಡತಕ್ಕವನಾಗಿದ್ದೇನೆ. ಅಂಕಿ ಅಂಶಗಳನ್ನು ಕೊಟ್ಟು, ಇತರ ಪ್ರದೇಶಗಳು ಮೈಸೂರು ಪ್ರದೇಶಕ್ಕಿಂತ ಹಣಕಾಸಿನ ವಿಷಯದಲ್ಲಿ, ಸಂಪತ್ತಿನ ಹೆಚ್ಚಳದ ವಿಷಯದಲ್ಲಿ, ಮುಂದೆ ಅಭಿವೃದ್ಧಿಯಾಗುವ ವಿಷಯದಲ್ಲಿ ಹಿಂದುಳಿದಿಲ್ಲವೆಂದು ಖಚಿತಪಡಿಸಲು ಪ್ರಯತಿಸುತ್ತೇನೆ. ಆದರೆ ನಾನು ಮೊದಲೇ ಹೇಳಿದಂತೆ ಅದು ಮುಖ್ಯ ಪ್ರಶ್ನೆಯಾಗಿ ನಮ್ಮ ಮುಂದೆ ಬರಬಾರದು.

ಇನ್ನು ದೂರದ ಪ್ರಶ್ನೆಯನ್ನು ಮಾತನಾಡುವುದಾದರೆ, ಅದೂ ಕೂಡ ನಾಗರಿಕ ಯುಗದಲ್ಲಿ ದೊಡ್ಡ ಪ್ರಶ್ನೆಯಾಗಿ ನಿಲ್ಲುವುದಿಲ್ಲ. ಈ ಹೊತ್ತು ಡೆಲ್ಲಿ ನೋಡೋಣ. ಅಲ್ಲಿ ನಮ್ಮ ಕೇಂದ್ರ ಸರ್ಕಾರವಿದೆ. ದೂರದ ಪ್ರಶ್ನೆ ತೆಗೆದುಕೊಂಡರೆ, ಕನ್ಯಾಕುಮಾರಿಯವರು ಡೆಲ್ಲಿಯ ವಿಷಯದಲ್ಲಿ ಯಾವ ಅಭಿಪ್ರಾಯ ತಾಳಬಹುದು? ಅವರು ಸಿಲೋನನ್ನೇ ಹತ್ತಿರವೆಂದು ಸೇರಿಕೊಳ್ಳಬಹುದಲ್ಲವೆ? ಹಾಗಿದ್ದ ಮೇಲೆ, ಡೆಲ್ಲಿಗೆ ಅವರು ಮಾನ್ಯತೆ ಕೊಡುವುದೇಕೆ? ದೂರವೆಂದು ಹೇಳಿ ಡೆಲ್ಲಿಯನ್ನು ನಾಗಪುರಕ್ಕೆ ಬದಲಾಯಿಸಿದಾಗ ನಾವು ಬೆಂಗಳೂರನ್ನು ಬಳ್ಳಾರಿಗೆ ಬದಲಾಯಿಸುವ ಯೋಚನೆ ಮಾಡೋಣ, ಇದೆಲ್ಲಾ ನಾವು ಹೊಂದಿಕೊಂಡು ಹೋಗುವ ಮನೋಭಾವದ ಮೇಲೆ ನಿಂತಿರುವುದು. ಈ ಹೊತ್ತು ಡೆಲ್ಲಿಯ ಬಗ್ಗೆ ಅಸಮಾಧಾನಪಡುವುದೂ ಉಚಿತವಲ್ಲವೆಂದು ಹೇಳುವುದಾರೆ, ಬೆಂಗಳೂರಿಗೂ ಬೀದರ್ ನ ಕೊನೆಯಲ್ಲಿರುವ ಹಳ್ಳಿಗೂ ೫೦೦ ಮೈಲಿಯಿದೆ ಎನ್ನುವುದಕ್ಕೂ ಅದು ಅನ್ವಯಿಸುತ್ತದೆ. ಮಾನ್ಯ ಸದಸ್ಯರು ದೂರದ ವಿಷಯವನ್ನು ಉತ್ಪ್ರೇಕ್ಷಿಸುತ್ತಾ ಹೋಗಿ ಮಂಗಳೂರಿಗೆ ಹೋಗಬೇಕಾದರೆ ೬೦೦ ಮೈಲಿಯಾಗುತ್ತದೆ ಎಂದುಬಿಟ್ಟರು! ಚಿಕ್ಕಮಗಳೂರಿನಿಂದ ನೇರವಾಗಿ ಮಂಗಳೂರಿಗೆ ರೈಲ್ವೆಯಾದರೆ ಎಷ್ಟು ಹತಿರವಾಗುತ್ತದೆಂಬುದನ್ನು ಅವರು ಮರೆತರೆಂದು ಕಾಣುತ್ತದೆ.

ಅದೇನೇ ಆಗಲಿ, ದೂರ ನಮಗೆ ಅಡ್ಡಿಯಲ್ಲ : ಆತಂಕವಲ್ಲ. ಅದನ್ನು ಕ್ರಮೇಣ ಬಗೆಹರಿಸುವುದಕ್ಕೆ ಸಾಧ್ಯವಿದೆ. ಆದ್ದರಿಂದ ಆರ್ಥಿಕ ಪ್ರಶ್ನೆ ಮತ್ತು ದೂರದ ಪ್ರಶ್ನೆ ಇವೆರಡನ್ನೂ ನಾವಿಂದು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ. ಮುಖ್ಯವಾಗಿ ನಾವು ನೋಡಬೇಕಾದದ್ದು, ಇದನ್ನು ಯಾವರೀತಿ ನಾವು ಅಗುಮಾಡಬಹುದು, ಇದರಲ್ಲಿ ಎಷ್ಟರ ಮಟ್ಟಿನ ಸಾಮರಸ್ಯವನ್ನು ಕಂಡುಕೊಳ್ಳಬಹುದು ಎಂಬುದು. ಏಕೆಂದರೆ, ಈ ಸಂದರ್ಭದಲ್ಲಿ ನಾವು ಮೆರೆಯಬಾರದು – ಮೈಸೂರು ರಾಜ್ಯದಲ್ಲಿ ಸುಮಾರು ೬೫ ಭಾಷೆಗಳನ್ನಾಡತಕ್ಕ ಜನರಿದ್ದಾರೆ. ಯಾವ ಭಾವನೆಯೇ ಆಗಲಿ, ಅದು ಅತಿ ಕೊನೆಯ ಮಟ್ಟವನ್ನು ಮುಟ್ಟಿದರೆ ಇತರರಿಗೆ ಅಪಾಯಕಾರಿ. ಹಿಟ್ಲರನ ನ್ಯಾಶನಲಿಸಂ ಕೂಡ ಅಪಾಯಕಾರಿಯಾಯಿತು. ಜಾತಿ ಜಾತಿಗಳು ಇವೊತ್ತು ನಮ್ಮ ದೇಶವನ್ನು ತುಂಡುಮಾಡಿವೆ. ನಮ್ಮ ದೇಶದಲ್ಲಿ ನಿಜವಾದ ಐಕ್ಯತೆ ಎಲ್ಲಿದೆ? ಆ Cord of Unity ಯಾವುದು? ನಮ್ಮ ದೇಶ ಬಹು ವಿಧದಲ್ಲಿ ಚೂರು ಚೂರಾಗಿ ಒಡೆದು ಹೋಗಿದೆಯೆಂಬುದನ್ನು ಮರೆಯಬಾರದು. ಅದ್ದರಿಂದ ಜಾತಿಯ ಭಾವನೆಯೇ ಆಗಲಿ, ರಾಷ್ಟ್ರೀಯ ಭಾವನೆಯೇ ಆಗಲಿ ಅಥವಾ ವರ್ಣಭೇದ ಭಾವನೆಯಿಂದ ಬಿಳಿಯರು ಅನುಸರಿಸುತ್ತಿರುವುದೇ ಆಗಲಿಇಲೆಲ್ಲವೂ ಹೋಗಿ, ಹೊತ್ತು ವಿಶ್ವಭ್ರಾತೃತ್ವ ದೃಷ್ಟಿ ನಮ್ಮೆಲ್ಲರನ್ನೂ ಬೆರೆಯುವಂತೆ ಮಾಡಬೇಕಾಗಿದೆ. ಸಮಷ್ಟಿಯಲ್ಲಿ ವ್ಯಷ್ಟಿಯನ್ನು ಕಂಡುಕೊಳ್ಳಬೇಕಾಗಿದೆ. ಆದರೂ ವಿಶ್ವದ ದೃಷ್ಟಿಯೆಂದು ಹೇಳಿ ಪೂರಾ ಬಿಟ್ಟು ಕೊಡುವುದಕ್ಕೆ ಆಗುವುದಿಲ್ಲ. ವ್ಯಕ್ತಿ ತನ್ನ ಪ್ರಾಂತ್ಯದಲ್ಲಿ ಸರಿಯಾದ ಆಧಾರದ ಮೇಲೆ ಪರಿಪುಷ್ಟವಾಗಿ ಬೆಳೆದರೆ ಪ್ರಭಾವವಾದ ರಾಷ್ಟ್ರವಾಗುತ್ತದೆ. ಆದ್ದರಿಂದ ಪ್ರಾಂತ್ಯಗಳನ್ನು, ಭಾಷೆಯ ತಳಹದಿಯ ಮೇಲೆ ಪುನರ್ವಿಂಗಡಣೆ ಮಾಡಿ, ಹಾಗೆ ಮಾಡುವಾಗ ಅದಕ್ಕೆ ಬೇಕಾದ administrative convience ಆರ್ಥಿಕಾಂಶಗಳನ್ನು ಗಮನದಲ್ಲಿಟುಕೊಂಡೇ ಮಾಡುತ್ತಾರೆ. ಯಾರೂ ಅದನ್ನು ಕೈ ಬಿಟ್ಟು ಮಾಡುವುದಿಲ್ಲ. ಯಾರಾದರೂ ಆ ರೀತಿ ಅಭಿಪ್ರಾಯಪಡುವುದೂ ಇಲ್ಲ.

ಆದರೆ ಈ ಸಂದರ್ಭದಲ್ಲಿ ಒಂದಂಶ ಎದ್ದು ಕಾಣುತ್ತದೆ. ಕೆಲವು Vested Interstಗಳನ್ನು ಇಟ್ಟುಕೊಂಡಿರತಕ್ಕಂಥ ಪಾರ್ಟಿಯವರು ಇದರಿಂದ ಆರ್ಥಿಕಾಭಿವೃದ್ಧಿಗೆ ಅಡಚಣೆಯಾಗುತ್ತದೆ ಎಂದು ಹೇಳತಕ್ಕದ್ದು ಸ್ವಾಭಾವಿಕ. ಹೀಗೆ ಯಾರು ಯಾರು ಒಂದು Vested Interest ಇಟ್ಟುಕೊಂಡು ಮಾತನಾಡುತ್ತಾರೋ ಅಂಥವರು ತಮ್ಮ ಈ ಒಂದು Status Quo ತಪ್ಪಿ ಹೋಗುತ್ತದೆ ಎನ್ನತಕ್ಕ ಭಾವನೆಯಿಂದ ಹೀಗೆ ಕನ್ನಡ ಪ್ರಾಂತ್ಯ ಅಗುವುದು ಬೇಡ ಎಂದು ಹೇಳಬಹುದು.

ಅವರು ತಮ್ಮ ಹಿತಕ್ಕೆ ಧಕ್ಕೆ ಬರುತ್ತದೆ ಎಂಬ ಅಭಿಪ್ರಾಯದ ಮೇಲೆ ಹೀಗೆ ಹೇಳುತ್ತಿದ್ದಾರೆಂಬುದು ಕಂಡುಬರುತ್ತದೆ. ಈಗ ಈ ಕೊಡಗು ಒಂದು ತೀರಾ ಸಣ್ಣ ಸಂಸ್ಥಾನ. ನಮ್ಮ ದೇಶದ ಒಂದು ಜಿಲ್ಲೆಯಷ್ಟು ಕೂಡ ಅದು ದೊಡ್ಡದಾಗಿಲ್ಲ. ಆದಾಗ್ಯಾ ಆ ರಾಜ್ಯವನ್ನು ಈ ಭಾಷಾವಾರು ಪ್ರಾಂತ್ಯದ ತತ್ವಕ್ಕನುಗುಣವಾಗಿ ನೀವು ಇತರ ಕನ್ನಡ ಭಾಗಗಳೊಡನೆ ಬೆರೆತುಕೊಳ್ಳಲು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದರೆ ಆಗುವುದಿಲ್ಲ. ನಮ್ಮ ಸಂಸ್ಥಾನ ಹಾಗೇ ಉಳಿಯಬೇಕು ಎಂದು ಅಲ್ಲಿನ ಸರ್ಕಾರವನ್ನು ನಡೆಸುವ ಅಧಿಕಾರ ವರ್ಗದವರು ತಿಳಿಸಿಬಿಟ್ಟರೆ, ಆಗ ಆ ರಾಜ್ಯದ ಎಲ್ಲಾ ಸಾರ್ವಜನಿಕರ ಅಭಿಪ್ರಾಯಕ್ಕೆ ಅನುಸಾರವಾಗಿ ಅವರಿಂದ ಆ ಅಭಿಪ್ರಾಯ ಬಂದಿದೆ ಎಂದು ತಿಳಿದುಕೊಳ್ಳೋಣವೇ? ಇಲ್ಲ. ಹೀಗಾದರೆ ಅವರು ಈ ಹೊತ್ತು ಅಲ್ಲಿ ಒಂದು ಅಧಿಕಾರವನ್ನೇನು ಇಟ್ಟುಕೊಂಡು ಬರುತ್ತಿದ್ದಾರೋ ಅದು ಅವರಿಗೇ ಉಳಿಯುತ್ತದೆ ಎನ್ನತಕ್ಕಂಥ ಭರವಸೆ ಅವರಲಿಲ್ಲ. ಅದಕಾರಣ ಅದು ಈಗ ಯಾವ ರೀತಿಯಲ್ಲಿದೆಯೋ ಅದೇ ರೀತಿಯಲ್ಲಿರಲಿ, ಅದು ಹಾಗೆ ಉಳಿಯಬೇಕು ಎಂದು ಹೇಳುತ್ತಾರೆ. ಆದರೆ ಇದೊಂದು ಅಂಥ ಸಮಂಜಸವಾದ ಕಾರಣವಾಗಿರುತ್ತದೆಂದು ನಾವು ಹೇಳುವುದಕ್ಕೆ ಆಗುವುದಿಲ್ಲ. ಅದನ್ನು ಇನ್ನೂ ಮುಂದುವರಿಸಬೇಕಾಗಿದ್ದರೆ ಏಕೀಕೃತ ಆಗಲೇಬೇಕು.

ಕೆಲವರು ನಮ್ಮ ಮೈಸೂರು ಈಗ ಹೇಗಿದೆಯೋ ಹಾಗೆಯೋ ಉಳಿಯಬೇಕು ಎಂದು ಪ್ರಸ್ತಾಪ ಮಾಡಿದ್ದಾರೆ. ಆದರೆ ಈಗ ನಮ್ಮ ಮೈಸೂರು ಇರುವ ರೀತಿಯಲ್ಲೇ ಅಂದರೆ ಬಳ್ಳಾರಿ ಬರುವುದಕ್ಕಿಂತ ಮುಂಚಿತವಾಗಿ ಇದ್ದಂಥ ರೀತಿಯಲ್ಲೇ ಇರಲಿ ಅನ್ನುವುದು, ಯಾವಾಗ ಯಾವ ಆಧಾರಗಳ ಮೇಲೆ ಇದು ಅಸ್ತಿತ್ವಕ್ಕೆ ಬಂತು, ಈಗ ಇರುವ ಎಲ್ಲೆಕಟ್ಟುಗಳನ್ನು ನಿರ್ಧರಿಸಿದವರು ಯಾರು ಎಂಬತಕ್ಕಂಥ ಪ್ರಶ್ನೆಗಳನ್ನು ಹಾಕಿದರೆ ಇದಕ್ಕೆ ಉತ್ತರವನ್ನು ನಾವು ಚರಿತ್ರೆ ಮತ್ತು ನಮ್ಮ ಇತಿಹಾಸಗಳನ್ನು ಓದಿದರೆ ಅದು ನಮಗೆ ಗೊತ್ತಾಗುತ್ತದೆ. ಟಿಪ್ಪು ಸುಲ್ತಾನ ಸಂಪೂರ್ಣವಾಗಿ ಸೋತುಹೋದ ನಂತರ ಯಾವ ರೀತಿಯಲ್ಲಿ ಈಗಿರುವ ಮೈಸೂರು ಹೀಗೆ ನಿರ್ಮಾಣವಾಯಿತು ಎಂಬ ಇತಿಹಾಸ ಸಂಬಂಧವಾದ ವಿಚಾರವನ್ನು ಶೇಷಾದ್ರಿ ಸಮಿತಿಯವರು ತಮ್ಮ ವರದಿಯಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ಅದನ್ನು ನಾನು ನನ್ನ ಮಾತುಗಳಲ್ಲಿ ವರ್ಣಿಸುವುದಕ್ಕೆ ಬದಲಾಗಿ ಆ ಸಂಬಂಧಪಟ್ಟ ಭಾಗವನ್ನೇ ಸ್ಪಲ್ಪ ಓದಿ ಹೇಳುವುದು ಚೆನ್ನಾಗಿರುತ್ತದೆಂದು ಭಾವಿಸಿದ್ದೇನೆ. ಇಲ್ಲಿ ಹೇಳಿರುವುದೆಲ್ಲವನ್ನೂ ನಾನು ಪೂರ್ತಿಯಾಗಿ ಓದಿ ಹೇಳುವುದಿಲ್ಲ. ಬಹು ಮುಖ್ಯವಾದಂಥ ಭಾಗಗಳನ್ನು ಮಾತ್ರ ಹೇಳುತ್ತೇನೆ:

“ಇದೇ ಸಮಯದಲ್ಲಿ ವಿಜಯನಗರ ರಾಜ್ಯವು ಸ್ಥಾಪಿಸಲ್ಪಟ್ಟಿತು. ೧೪ ಮತ್ತು ೧೫ನೆಯ ಶತಮಾನಗಳಾದ ನಂತರವೂ ವಿಜಯನಗರದ ರಾಜರುಗಳು ಬಹಮನಿ ಸುಲ್ತಾನರೊಂದಿಗೆ ಆಗಾಗ್ಗೆ ಯುದ್ಧವನ್ನು ಮಾಡುತ್ತಲೇ ಇದ್ದರು. ರಾಯಚೂರಿನಲ್ಲಿರುವ ಎರಡು ನದಿಗಳ ಮಧ್ಯಪ್ರದೇಶವೇ ಅವರ ಯುದ್ಧಭೂಮಿ ಆಗಿದ್ದಿತು. ೧೫ನೆಯ ಶತಮಾನದ ಅಂತ್ಯ ಭಾಗದಲ್ಲಿ, ಬಹಮನಿ ರಾಜ್ಯವು ಒಡೆದು ೫ ಸ್ವತಂತ್ರ ರಾಜ್ಯಗಳಾದವು. ಅವು ಯಾವುದೆಂದರೆ: ೧. ಅಹಮದ್‌ನಗರ ೨. ಗೋಲ್ಕೊಂಡ ೩. ಬಿದರೆ ೪. ಬಿಜಾಪುರ ೫. ಬೀದರ್. ಈ ಅವಧಿಯಲ್ಲಿ ಬಿಜಾಪುರದ ಮುಸಲ್ಮಾನರಿಗೂ ಮತ್ತು ವಿಜಯನಗರದ ರಾಜರುಗಳಿಗೂ ವಿಶೇಷವಾಗಿ ಯುದ್ಧಗಳು ನಡೆಯುತ್ತಿದ್ದವು. ೧೫೧೯ನೆಯ ಇಸವಿಯಲ್ಲಿ ವಿಜಯನಗರದ ಕೃಷ್ಣದೇವರಾಯನೂ ಉತ್ತರ ಭಾಗದವರೆಗೆ ತನ್ನ ಯುದ್ಧವನ್ನು ಮುಂದುವರೆಸಿದ್ದನು ಮತ್ತು ರಾಯಚೂರಿನಲ್ಲಿರುವ ಎರಡು ನದಿಗಳ ಮಧ್ಯೆ ಇದ್ದ ಪ್ರದೇಶವನ್ನೂ ವಶಪಡಿಕೊಂಡನು. ವಿಜಯನಗರದ ರಾಜ್ಯದವರಿಗೂ ಮತ್ತು ಮುಸಲ್ಮಾನರ ರಾಜ್ಯಗಳಿಗೂ ಪದೇ ಪದೇ ನಡೆಯಿತ್ತಿದ್ದ ಹೋರಾಟವು ರಾಯಚೂರಿನ ಹತ್ತಿರ ‘ತಾಳಿಕೋಟೆ ಯುದ್ಧ’ (ರಕ್ಕಸತಂಗಡಿ) ದಿಂದ ೧೫೬೫ನೆಯ ಇಸವಿಯಲ್ಲಿ ಮುಕ್ತಾಯಗೊಂಡಿತು. ಆ ಯುದ್ಧದಲ್ಲಿ ಬಹಮನಿ ಸುಲ್ತಾನರು ವಿಜಯನಗರದ ರಾಜನನ್ನು ಸೋಲಿಸಿದರು. ವಿಜಯನಗರದ ಕೃಷ್ಣದೇವರಾಯನೂ ಉತ್ತರ ಭಾಗದವರೆಗೆ ತನ್ನ ಯುದ್ಧವನ್ನು ಮುಂದುವರೆಸಿದ್ದನು ಮತ್ತು ಇದರ ಪರಿಣಾಮವಾಗಿ ವಿಜಯನಗರದ ಸಾಮ್ರಾಜ್ಯವು ಒಡೆದುಹೋಯಿತು. ೧೭ನೆಯ ಶತಮಾನದಲ್ಲಿ ಔರಂಗಜೇಬನು ದಖನ್ ಭಾಗವನ್ನು ಜಯಿಸಿದ ಮೇಲೆ, ಗುಲ್ಪರ್ಗ, ಬೀದರ್, ಮತ್ತು ರಾಯಚೂರು ಈ ಮೂರು ಜಿಲ್ಲೆಗಳೂ ಮೊಗಲರ ಚಕ್ರಾಧಿಪತ್ಯಕ್ಕೆ ಸೇರಿಕೊಂಡವು ೧೮ನೆಯ ಶತಮಾನದ ಅದಿಭಾಗದಲ್ಲಿ ಮೊಗಲರ ಚಕ್ರಾಧಿಪತ್ಯವು ಕ್ಷೀಣದೆಶೆಗೆ ಬರುತ್ತಿದ್ದಂಥ ಸಮಯದಲ್ಲಿ, ‘ನಿಜಾಮ-ಉಲ್-ಮುಲ್ಕ್’ ಎಂಬ ಬಿರುದನ್ನು ಹೊಂದಿ ದಖನ್ನಿನ ಸುಭೇದಾರನಾಗಿ ನೇಮಕ ಮಾಡಲ್ಪಟ್ಟಿದ್ದಂಥ ಔರಂಜೇಬನ ಪ್ರಖ್ಯಾತಿಯಾದ ಸೇನಾಧಿಪತಿ ಅಸಪ್ ಜಹ ಎಂಬುವನು ತಾನು ಸ್ವತಂತ್ರನೆಂದು ಹೇಳಿಕೊಂಡು ಸ್ವೇಚ್ಛೆಯಾಗಿ ವರ್ತಿಸಿ ಈಗಿನ ಹೈದರಾಬಾದನ್ನು ಸ್ಥಾಪಿಸಿದನು. ಗುಲ್ಪರ್ಗ, ಬಿದರೆ ಮತ್ತು ರಾಯಚೂರು ಈ ಮೂರು ಜಿಲ್ಲೆಗಳೂ ಹೈದರಾಬಾದು ರಾಜ್ಯಕ್ಕೆ ಸೇರಿಹೋದುದು ಈ ಕಾರಣದಿಂದಲೇ.

೧೮೫೩ ಒಪ್ಪಂದದ ಮೇರೆಗೆ ರಾಯಚೂರು ಬ್ರಿಟಿಷರಿಗೆ ವಹಿಸಲ್ಪಟ್ಟಿತು. ಆದರೆ ಅದನ್ನು ಅವರು ೧೮೬೦ನೆಯ ಇಸವಿಯಲ್ಲಿ ನಿಜಾಮನಿಗೆ ವಾಪಸ್ಸು ಕೊಟ್ಟರು. ‘ಪರಿಸ್ಥಿತಿಯು ಈಗಲೂ ಹೀಗೆಯೇ ಇದೆ’ ಎಂದು ತಿಳಿಸಿರುತ್ತಾರೆ. ಇದಾದ ಮೇಲೆ ಈ ಮುಂಬಯಿ ವಿಚಾರ: ‘ದೆಹಲಿಯಲ್ಲಿ ಮೊಗಲ್ ಸಾಮ್ರಜ್ಯವು ಅವನತಿ ಹೊಂದಿದ ಮೇಲೆ, ಈ ಭಾಗದಲ್ಲಿ ಮರಾಠಿಯವರು ಸಾಮಾನ್ಯವಾಗಿ ಪ್ರಭುತ್ವವನ್ನು ಹೊಂದಿದ್ದರೆಂದು ಹೇಳಬಹುದಾಗಿದೆ. ಸುಮಾರು ೧೭೬೪ನೇ ಇಸವಿಯಲ್ಲಿ ಮರಾಠಿಯವರಿಗೆ ಒಳಪಟ್ಟಿದ್ದ ಧಾರವಾಡ ಪ್ರದೇಶಗಳನ್ನು ಹೈದರಾಲಿಯು ಗೆದ್ದನು. ಆದರೆ, ಪೇಷ್ವೆ ಮಾಧವರಾಯ ಅವನನ್ನು ಸೋಲಿಸಿ ಆ ಪ್ರದೇಶವನ್ನು ಪುನಃ ಪಡೆದುಕೊಂಡನು. ಪೇಷ್ವೆಯವರನ್ನು ೧೮೧೭ರಲ್ಲಿ ಬ್ರಿಟಿಷರಿಂದ ಅಖೈರಾಗಿ ಸೋಲಿಸಲ್ಪಟ್ಟ ಮೇಲೆ, ಪೇಷ್ವೆಯವರ ಪ್ರಾಬಲ್ಯವು ಕೊನೆಗೊಂಡಿತು. ೧೮೩೬ನೆಯ ಇಸವಿಯವರೆಗೆ ಬೆಳಗಾಂ ಮತ್ತು ಧಾರವಾಡವು ಒಂದು ಡಿಸ್ಟ್ರಿಕ್ಟಿನ ಭಾಗವಾಗಿದ್ದವು. ಆ ವರ್ಷದಲ್ಲಿ ಈಗ ಬೆಳಗಾಂ ಎಂದು ಕರೆಯಲ್ಪಡುವ ಆ ಡಿಸ್ಟ್ರಿಕ್ಟಿನ ಭಾಗವನ್ನು ಧಾರವಾಡದಿಂದ ಪ್ರತ್ಯೇಕಿಸಲಾಯಿತು. ಮೊದಲು ಸೊಲ್ಲಾಪುರ ಮತ್ತು ಬೆಳಗಾಂ ಭಾಗವಾಗಿದ್ದ ಬಿಜಾಪುರ ಡಿಸ್ಟ್ರಿಕ್ಟು ೧೮೬೪ರಲ್ಲಿ ಒಂದು ಪ್ರತ್ಯೇಕವಾದ ಡಿಸ್ಟ್ರಿಕ್ಟ್‌ ಆಯಿತು. ಅನಂತರ ಈ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿಚಾರ : ಔರಂಗಜೇಬನು ದಂಡೆತ್ತಿ ಬಂದಮೇಲೆ ಉತ್ತರ ಕನ್ನಡವು ಮೊಗಲರ ಕೈಸೇರಿತು. ಬಿದನೂರು ನಾಯಕರುಗಳೂ ಸಹ ಮೊಗಲರ ಅಧೀನರಾದರು. ೧೭೦೦ನೆಯ ಇಸವಿಯ ತರುವಾಯ, ಮರಾಠಿಯವರು ಪುನಃ ಉತ್ತರ ಕನ್ನಡವನ್ನು ಗೆದ್ದರು. ೧೭೬೩ರಲ್ಲಿ ಹೈದರಾಲಿಯು ಬಿದನೂರನ್ನೂ ಗೆದ್ದುದಲ್ಲದೆ, ಮಂಗಳೂರನ್ನು ವಶಪಡಿಸಿಕೊಂಡು ಅದನ್ನು ತನ್ನ ನೌಕಾ ಕಾರ್ಯಾಚರಣೆಯ ಆಧಾರ ಸ್ಥಾನವನ್ನಾಗಿ ಮಾಡಿಕೊಂಡನು. ಬ್ರಿಟಿಷ್‌ರು ೧೯೮೩ರಲ್ಲಿ ಬ್ರಿಟಿಷ್‌ರು ಹೊನ್ನಾವರವನ್ನು ವಶಪಡಿಸಿಕೊಂಡರು ಮತ್ತು ೧೭೯೯ರಲ್ಲಿ ಟಿಪ್ಪುಸುಲ್ತಾನನು ಶ್ರೀರಂಗಪಟ್ಟಣದಲ್ಲಿ ಸೋತುಹೋದ ಮೇಲೆ ಅದೇ ವರ್ಷದಲ್ಲಿ ನಡೆದ ಪ್ರದೇಶಗಳ ಹಂಚಿಕೆಯ ಕೌಲಿನ (ಪಾರ್ಟಿಷನ್ ಟ್ರೀಟಿ) ಪರಿಣಾಮವಾಗಿ, ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಬ್ರಿಟಿಷರ ಪಾಲಿಗೆ ಬಂದಿತು. ಈ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಮತ್ತು ಉತ್ತರ ಕನ್ನಡ ಡಿಸ್ಟ್ರಿಕ್ಟ್ ಮದ್ರಾಸ್ ಆಧಿಪತ್ಯಕ್ಕೆ ಸೇರಿಸಲ್ಪಟ್ಟವು. ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ೧೮೬೪ರವರೆಗೂ ಮದ್ರಾಸ್ ರಾಜ್ಯದ ಅಂಗವಾಗಿ ಮುಂದುವರಿಯಿತು. ಆಗ್ಗೆ ಉತ್ತರ ಕನ್ನಡವೆಂದು ಈಗ ನಮಗೆ ಗೊತ್ತಿರುವ ಭಾಗವನ್ನು ಪ್ರತ್ಯೇಕಿಸಿ ಬೊಂಬಾಯಿ ರಾಜ್ಯಕ್ಕೆ ವರ್ಗಾಯಿಸಲಾಯಿತು.

ಆಮೇಲೆ ಈ ಕೊಡಗಿನ ವಿಚಾರ ‘ಶ್ರೀರಂಗಪಟ್ಟಣವು ಪತನವಾದ ಮೇಲೆ ಉತ್ತರಾಧಿಕಾರದ ವಿಚಾರದಲ್ಲಿ ವಿವಾದಗಳು ಉಂಟಾದವು. ೧೧ನೆಯ ವೀರರಾಜನು ಆಗ ಪಟ್ಟಕ್ಕೆ ಬಂದನು. ಅವನ ಆಕ್ರಮವಾದ ಆಡಳಿತಕ್ಕಾಗಿ ಬ್ರಿಟಿಷರು ನಿರ್ವಾಹವಿಲ್ಲದೆ ಆ ರಾಜ್ಯಾಡಳಿತವನ್ನು ಅವನ ಕೈಯಿಂದ ತಪ್ಪಿಸಿ ೧೮೩೪ನೇಯ ಇಸವಿಯಲ್ಲಿ ಆ ರಾಜ್ಯದ ಆಡಳಿತವನ್ನು ಅವರೇ ವಹಿಸಿಕೊಳ್ಳಬೇಕಾಯಿತು.

– ಹೀಗೆ ಈ ಪ್ರಶ್ನೆಯ ಬಗ್ಗೆ ಇತಿಹಾಸದಲ್ಲಿ ಹೇಳಿರತಕ್ಕದ್ದಾಗಿದೆ. ಆದರೆ ಇನ್ನೂ ಹೆಚ್ಚಾಗಿ ನಡೆದು ಹೋಗಿರತಕ್ಕಂಥ ಹಳೆಯ ಘಟನೆಗಳನ್ನು ನಾವು ಸ್ಮರಿಸುತ್ತಾ ದುಃಖಪಡುವುದಾಗಲಿ ಅಥವಾ ಹೆಮ್ಮೆ ಪಡುವುದಾಗಲಿ ಅಷ್ಟು ಸಮಂಜಸವಾದುದಲ್ಲ. ಆಗಿನ ಕಾಲದಲ್ಲಿ ರಾಜ ಮಹಾರಾಜರುಗಳ ಮತ್ತು ಪಾಳೇಗಾರರ ಆಡಳಿತವಿತ್ತು. ತೋಳ್ಬಲವೇ ನ್ಯಾಯ ಎನ್ನುತ್ತಿದ್ದಂಥ ಕಾಲಾ ಅದು.

ಆದರೆ ನಾವು ಈಗ ಹೋಗುತ್ತಿರುವ ದಾರಿಯೇ ಬೇರೆ. ಈಗ ನಾವು ಪ್ರಜಾಪ್ರಭುತ್ವದ ಕಾಲಕ್ಕೆ ಬಂದು ನಿಂತಿದ್ದೇವೆ. ದಿವಸ ನಾವು ಯಾವ ಒಂದು ಕೆಲಸಮಾಡಬೇಕಾಗಿದ್ದರೂ ಎಲ್ಲರ ಅಭಿಪ್ರಾಯಗಳನ್ನೂ ಪಡೆದುಕೊಂಡು, ಅವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದರಂತೆ ಕೆಲಸಮಾಡತಕ್ಕಂಥ ಕಾಲ ಇದು. ದಿವಸ ಕನ್ನಡ ಪ್ರಾಂತ್ಯ ನಿರ್ಮಾಣಮಾಡಬೇಕೆಂದು ನಾವು ಹೇಳತಕ್ಕ ಕಾಲದಲ್ಲಿ ಇಲ್ಲಿ ಉಳಿಯತಕ್ಕಂಥ ಅಲ್ಪ ಸಂಖ್ಯಾತ ಭಾಷೆಯವರ ಹಿತರಕ್ಷಣೆ ಮಾಡುವುದು ಬಹು ಸಂಖ್ಯಾತರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಅಲ್ಪಸಂಖ್ಯಾತರ ಸೌಕರ್ಯಗಳನ್ನು ಕಾಪಾಡಿ ಅವರ ಸಂಸ್ಕೃತಿ, ಅವರ ಭಾಷೆ ಹೀಗೆ ಅವರ ಸರ್ವಸ್ವವನ್ನೂ ಕಾಪಾಡಿಕೊಂಡು, ಹಾಗೆ ಬಹಳ ಹಿಂದುಳಿದಿರತಕ್ಕವರಿಗೆ ಎಲ್ಲ ವಿಧದಲ್ಲೂ ಸೌಕರ್ಯಗಳನ್ನು ಒದಗಿಸಿ ಕೊಡತಕ್ಕಂಥಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಒಂದು ಹೊಣೆಗಾರಿಕೆ. ಇನ್ನು ಮುಂದೆ ಈ ಕನ್ನಡ ರಾಜ್ಯದಲ್ಲಿ ಉಳಿಯುವಂಥ ಇತರ ಭಾಷೆಗಳ ಜನಾಂಗದ ಮೇಲೆ ಯಾರು ಆಗ್ರಹ ತಾಳಬಾರದು. ನಾವು ಸರ್ವರ ಅಭಿವೃದ್ಧಿಗೂ ಪ್ರಯತ್ನಿಸುವುದು ಪ್ರಜಾಪ್ರಭುತ್ವದ ತತ್ವಗಳ ಪೈಕಿ ಇದೂ ಒಂದು ಮುಖ್ಯ ಕರ್ತವುವಾಗಿರುತ್ತದೆ. ಆದುದರಿಂದ ನಾವು ಈ ದಿವಸ ಮುಂದೆ ಅಸ್ತಿತ್ವಕ್ಕೆ ಬರಲಿರುವ ಕರ್ನಾಟಕ ಪ್ರಾಂತ್ಯದ ಒಂದು ಸೂಕ್ಷ್ಮ ದರ್ಶನ ಮಾಡಿಕೊಳ್ಳುವುದು ಒಳ್ಳೆಯದು.

ಈ ದಿವಸ ಮೈಸೂರು ಸರ್ವವಿಧದಲ್ಲಿಯೂ ಅಭಿವೃದ್ಧಿಯನ್ನು ನಡೆಸಿಕೊಂಡು ಬಂದಿದೆ. ಇದು ರಾಜ ಮಹಾರಾಜುರುಗಳ ಆಡಳಿತಕ್ಕೆ ಸಿಕ್ಕಿದ್ದರಿಂದ ಇಲ್ಲಿ ಹೀಗೆ ಅಭಿವೃದ್ಧಿ ಕಾರ್ಯಗಳು ನಡೆಯುವುದಕ್ಕೆ ಒಂದು ಅವಕಾಶವಾಯಿತು. ಆದರೆ ಹಾಗೆ ಯಾವುದೋ ಒಂದು ದೃಷ್ಟಿಯಲ್ಲಿ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದುಕೊಂಡು ಬಂದಿರುವುದರಿಂದ ಮೈಸೂರು ಪ್ರತ್ಯೇಕವಾಗಿಯೇ ಉಳಿಯಬೇಕು ಎಂಬುದಾಗಿ ಈ ಒಂದು ಕಾರಣದ ಮೇಲೆ ಹೇಳತಕ್ಕದ್ದನ್ನು ಯಾರೂ ಸರಿಯೆಂದು ಭಾವಿಸಬಾರದು. ಆದರೆ ಶ್ರೀಮಾನ ಮಾಧವಾಚಾರ್ಯರು ಮಾತನಾಡುತ್ತ “ನಾವು ಎಷ್ಟೋ ತ್ಯಾಗ ಬಲಿದಾನಗಳನ್ನಾಗಲೇ ಮಾಡಿರುವಾಗ ಈಗ ನಮ್ಮ ಅಕ್ಕಪಕ್ಕದ ಪ್ರದೇಶಗಳವರು ಕೆಲವು ಸೌಲಭ್ಯಗಳನ್ನು ನಮಗೂ ಕೊಡಿ ಎಂದು ಕೇಳಿದರೆ ನಾವು ಅದನ್ನು ಕೊಡುವುದಕ್ಕೆ ಏಕೆ ಅಷ್ಟು ಹಿಂಜರಿಯಬೇಕು? ಹಾಗೆ ಕೊಟ್ಟರೆ ನಮಗೇನೂ ಅದರಿಂದ ನಷ್ಟವಾಗುವುದಿಲ್ಲವೆಂದು ಅವರು ಹೇಳಿದ್ದು ನ್ಯಾಯವಾಗಿದೆ. ಆದರೆ ಕೇಳತಕ್ಕವರು ಕೊಡತಕ್ಕಂಥ ದಾನಿಯನ್ನು ಕೇಳುತ್ತಾರೆಯೇ ವಿನಾ ಲೋಭಿಯನ್ನು ಯಾರೂ ಕೇಳರು. ಆದರೆ ನಾವು ಮೈದಾಸನಂತೆ ಮುಟ್ಟಿದ್ದೆಲ್ಲಾ ಚಿನ್ನದ ಗೊಂಬೆಯಾಗುತ್ತೆಂಬ ಭಾವನೆಗೆ ಹೋಗಬೇಕಾಗಿಲ್ಲ. ಆದರೆ ಪ್ರಾಂತ್ಯಗಳ ಪುನರ್ ರಚನಾಕಾರ್ಯದಲ್ಲಿ ಜನಗಳೆಲ್ಲರೂ ಪ್ರೇಮ, ಆದರ ಮತ್ತು ವಿಶ್ವಾಸಗಳು ಹೆಚ್ಚಾಗುವಂತೆ ಮಾಡಬೇಕಾದುದ್ದು ಮುಖ್ಯವೆಂಬುದನ್ನು ನಾವೆಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಇದೇ ನಮ್ಮ ಇತಿಹಾಸದಲ್ಲಿ ಬಹಳ ಮುಖ್ಯವಾದ ವಿಚಾರ. ಇಂಥ ಒಂದು ಹೊಸ ಇತಿಹಾಸವನ್ನು ರೂಪಿಸುವುದಕ್ಕೆ ಅಥವಾ ಬರೆಯುವುದಕ್ಕೆ ಪ್ರಾರಂಭಿಸುವ ಮುಂದಿನ ಕಾಲದಲ್ಲಿ ಭವಿಷ್ಯಗಳಿಗೆ ಜನತೆಯಲ್ಲಿ ಒಂದು ಪ್ರಚೋದನೆಗೆ ಅವಕಾಶ ಕೊಡಬಾರದೆಂಬ ವಿಚಾರಕ್ಕೆ ನಾವೀಗ ನಮ್ಮ ಗಮನವನ್ನಿತ್ತು ನಾವೆಲ್ಲರೂ ಒಂದು ಸಾಮರಸ್ಯ ಭಾವನೆಯಿಂದ ಒಡಗೂಡಿ ಈ ಕಾರ್ಯಸಾಧನೆ ಮಾಡತಕ್ಕದ್ದೇ ನಮ್ಮೆಲ್ಲರಲ್ಲಿಯೂ ಈಗ ಇರಬೇಕಾದಂಥ ಒಂದು ರಾಜಕೀಯ ಜಾಣ್ಮೆ. ಅಷ್ಟು ಶಿವಾಯಿ, ಇದರಲ್ಲಿ ಮತ್ತೆ ಯಾವ ಲಾಭ ಅಥವಾ ನಷ್ಟದ ಪ್ರಶ್ನೆಯೂ ಉದ್ಭವಿಸುವುದಿಲ್ಲ.

ಈ ಮುಖ್ಯಾಂಶವನ್ನು ನಾವುಗಳಾರೂ ಮರೆಯಬಾರದು. ಇದು ನಮ್ಮ ಮುಂದಿನ ಭವಿಷ್ಯಕ್ಕೆ ಒಂದು ಭದ್ರವಾದ ತಳಹದಿಯನ್ನು ಹಾಕತಕ್ಕಂಥ ಕೆಲಸ. ಈ ಬುನಾದಿಯ ಮೇಲೆ ನಾವೀಗ ಈ ಕರ್ನಾಟಕ ಪ್ರಾಂತ್ಯದ ರಚನೆಗೆ ತಳಹದಿಯನ್ನು ಯಾವ ರೀತಿ ಹಾಕಬೇಕೋ ಅದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ.

ಟಿ. ಎನ್‌. ಮೂಡಲಗಿರಿಗೌಡ (ಕುಣಿಗಲ್ಲು): ಇದು ವ್ಯಹಾರ ಜ್ಞಾನಕ್ಕೆ ಸರಿ ಹೋಗುತ್ತದೆಯೇ?

ಎಸ್‌. ಗೋಪಾಲೌಡ: ಇತಿಹಾಸದ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನು ಇತಿಹಾಸಕ್ಕೆ ಕೊಡೋಣ. ವ್ಯವಹಾರದ ಸ್ಥಾನಕ್ಕೆ ಕೊಡಬೇಕಾದ ಗೌರವವಗಳನ್ನು ವ್ಯವಹಾರ ಸ್ಥಾನಕ್ಕೆ ಕೊಡೋಣ. ಯಾವ್ಯಾವುದಕ್ಕೆ ಎಷ್ಟೆಷ್ಟರ ಮಟ್ಟಿಗೆ ಮನ್ನಣೆ ಕೊಡಬೇಕೆಂಬುದನ್ನು ಸರ್ವ ಮುಖದಿಂದಲೂ ವಿಮರ್ಶೆ ಮಾಡೋಣ, ವಿಚಾರ ಮಾಡೋಣ, ಅನಂತರ ಒಂದು ತೀರ್ಮಾನಕ್ಕೆ ಬರೋಣ ಎನ್ನತಕ್ಕದ್ದೇ ನನ್ನ ಪ್ರಾರ್ಥನೆ.

ಆ ಸಮಿತಿಯ ಒಪ್ಪಿರತಕ್ಕ ಈ ವರದಿಯ ಮೇಲೆ ಈಗಾಗಲೇ ಅನೇಕ ರೀತಿಯ ಅಭಿಪ್ರಾಯಗಳು ಬಂದಿರುತ್ತವೆ. ಸಮಿತಿಯ ವರದಿಯು ಕೆಲವು ವಿಷಯಗಳನ್ನು ಬಹಳವಾಗಿ ಉತ್ಪ್ರೇಕ್ಷೆ ಮಾಡಿದೆ. ಎಂತಲೂ, ಮತ್ತೆ ಕೆಲವರು ಇದು ಅನೇಕ ಉಪಯುಕ್ತ ವಿಷಯಗಳನ್ನು ಕೈಬಿಟ್ಟಿದೆಯೆಂತಲೂ, ಮತ್ತೆ ಕೆಲವರು ಅಪ್ರಕೃತ ವಿಷಯಗಳನ್ನು ಸೇರಿಸಿಬಿಟ್ಟಿದೆ ಎಂಬುದಾಗಿಯೂ ಈಗಾಗಲೇ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ಕೂಡ ಸಮಿತಿಯ ಅಭಿಪ್ರಾಯದ ಬಗ್ಗೆ ಅದು ಒಂದು ಹಾನಿಯನ್ನುಂಟು ಮಾಡುವಂಥ ಆಭಿಪ್ರಾಯವಾಗಿದೆಯೆಂದು ಭಾವಿಸುತ್ತೇನೆ. ಅದು ಏನೆಂದರೆ : “ಮೇಲೆ ಕಂಡ ಸರ್ವೆ ಪರಿಶೀಲನೆಯಿಂದ ಸರಹದ್ದುಗಳನ್ನು ಎಷ್ಟೇ ಚಾಗರೂಕತೆಯಿಂದ ನಿರ್ಧರಿಸಿದರೂ ಭಾಷಾವಾರು ಆಧಾರದ ಮೇಲೆ ಜನರನ್ನು ವರ್ಗಾಯಿಸುವಂತೆ ನಾವು ಉದ್ದೇಶಿಸಿದ ಹೊರತು ಬೇರೆ ಬೇರೆ ಭಾಷೆಗಳನ್ನಾಡತಕ್ಕ ಅಲ್ಪ ಸಂಖ್ಯಾತರನ್ನು ಬಿಟ್ಟು ಬಿಡುವುದಕ್ಕೆ ಸಾಧ್ಯವಿಲ್ಲವೆಂದು ನಮಗೆ ಸ್ಪಷ್ಟವಾಗಿ ಕಂಡುಬರುತ್ತದೆ” ಎಂದು ಬರೆದಿದ್ದಾರೆ.

ಎ. ಭೀಮಪ್ಪನಾಯಕ (ಮೊಳಕಾಲ್ಮೂರು) : ಈ ವಿಚಾರವನ್ನು ತಿಳಿಸಬೇಕೆಂದು ಹೇಳಿ ಆ (ಟರ್ಮ್ಸ ಆಫ್‌ ರೆಫರೆನ್ಸ್‌ನಲ್ಲಿ) ಸಮಿತಿಯ ಪರ್ಯಾಲೋಚನೆಗಾಗಿ ಒಪ್ಪಿಸಿದ್ದ ವಿಷಯದಲ್ಲಿ ಅಡಕವಾಗಿತ್ತೇ?

ಎಸ್‌. ಗೋಪಾಲಗೌಡ : ಹಾಗೂ ಒಂದು ವೇಳೆ ಆ ಟರ್ಮ್ಸ ಆಫ್‌ ರೆಫರೆನ್ಸ್‌ನಲ್ಲಿ ಏನಾದರೂ ಈ ವಿಷಯವನ್ನು ಕೇಳಿತ್ತೇ ಎಂದು ನೋಡಿದರೆ ಈ ವಿಚಾರವನ್ನೇ ಕೇಳಿಲ್ಲ. ಆ ಟರ್ಮ್ಸ ಆಫ್‌ ರೆಫರೆನ್ಸ್‌ನಲ್ಲಿ ಕಾಣಿಸಿರತಕ್ಕಂಥ ಅಂಶಗಳು ಇವು :

. ಮದ್ರಾಸು, ಬೊಂಬಾಯಿ, ಹೈದರಾಬಾದು, ಮತ್ತು ಕೊಡಗು ರಾಜ್ಯಗಳಲ್ಲಿ ಕನ್ನಡವನ್ನು ಮಾತನಾಡುವ ಪ್ರದೇಶದ ವಿಸ್ತೀರ್ಣ ಮತ್ತು ಜನಸಂಖ್ಯೆಗೆ ಸಂಬಂಧಪಟ್ಟ ವಿವರಗಳನ್ನು ಶೇಖರಿಸುವುದು.

. ಆ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ – ವಿದ್ಯಾಭ್ಯಾಸ, ವೈದ್ಯ ಸಹಾಯ ಮತ್ತು ಜನಾರೋಗ್ಯ ರಕ್ಷಣೆ , ಗ್ರಾಮಾಭಿವೃದ್ಧಿ, ಕೈಗಾರಿಕೆಗಳು, ನೀರಾವರಿ ಮತ್ತು ವ್ವಿದ್ಯುಚ್ಛಕ್ತಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಎಷ್ಟರಮಟ್ಟಿಗೆ ನಡೆದಿದೆ ಎಂಬುದನ್ನು ಗೊತ್ತು ಮಾಡುವುದು.

. ದೇಶದ ಸಂಪತ್ತಿಗೆ ಅನುಕೂಲವಾಗುವ ಸ್ವಾಭಾವಿಕ ಸಾಧನಗಳೇನಾದರೂ ಇವೆಯೇ ಎಂಬುದನ್ನು ತಿಳಿದುಕೊಳ್ಳುವುದು.

. ಆ ಪ್ರದೇಶಗಳಿಗೆ ಸಂಬಂಧಿಸಿದಂತೆ ಆದಾಯ ಮತ್ತು ವೆಚ್ಚ, ಲೇಣಿ ಮತ್ತು ದೇಣಿಗಳ ಅಂಕಿ – ಅಂಶಗಳನ್ನು ಶೇಖರಿಸುವುದು.

. ಆ ಪ್ರದೇಶದಲ್ಲಿ ಪಂಚವಾರ್ಷಿಕ ಯೋಜನೆಯ ಮೇರೆಗೆ ಕೆಲಸ ಕಾರ್ಯಗಳು ಎಷ್ಟರ ಮಟ್ಟಿಗೆ ಮುಂದುವರಿದಿವೆ ಎಂಬುದನ್ನು ಗೊತ್ತು ಮಾಡುವುದು.

. ಇದರಿಂದ ಒದಗಬಹುದಾದ ಹಣಕಾಸಿನ ಮತ್ತು ಆಡಳಿತ ಸಂಬಂಧ ಸಮಸ್ಯೆಗಳನ್ನು ಪರಿಶೀಲಿಸುವುದು – ಎಂದು ಕೇಳಲಾಗಿದೆ. ಇಷ್ಟಕ್ಕಾಗಿ ಆ ಸಮಿತಿಯವರು ಇಷ್ಟು ವರದಿಯನ್ನು ತಯಾರಿಸಿದ್ದಾರೆ. ಈ ಅಂಶ ಈ ಟರ್ಮ್ಸ ಆಫ್ ರೆಫರೆನ್ನಿನಲ್ಲಿ ಅಡಕಮಾಡಿದ್ದರೂ ಆ ಹಣಕಾಸಿನ ಮತ್ತು ಆಡಳಿತ ಸಮಸ್ಯೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೊಡತಕ್ಕ ಸಂಬಂಧದಲ್ಲಿ ಸೂಚಿಸಿದ್ದೇವೆಂದು ಹೇಳುವುದಕ್ಕೂ ಕೂಡ ಅವರಿಗೆ ಅವಕಾಶವಿಲ್ಲ. ಇದನ್ನು ನಾವು ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಘಾತುಕವಾದ ಅಭಿಪ್ರಾಯ, ಇದು ತಿಳಿಗೇಡಿತನದ ಅಭಿಪ್ರಾಯವೆಂದು ಹೇಳದೆ ವಿಧಿಯಿಲ್ಲ.

ಒಂದು ಉದಾಹರಣೆ ಕೊಡುವುದಾರೆ, ನಮ್ಮ ಮನೆಯಲ್ಲಿ ಅಕ್ಕ ತಂಗಿಯರು ಅಥವಾ ಯಾರಾದರೊಬ್ಬರು ಬಂಧುಗಳು ಕಾಯಿಲೆಯಿದ್ದರೆ ಡಾಕ್ಟರನ್ನು ಕರೆದುಕೊಂಡು ಬರುವುದಕ್ಕೆ ಒಬ್ಬರನ್ನು ಕಳುಹಿಸುವುದು, ಹೀಗೆಯೇ ಇನ್ನೊಬ್ಬರನ್ನು ಗೋರಿ ತೆಗೆಯುವುದಕ್ಕೋ, ಕಟ್ಟಿಗೆ ತರುವುದಕ್ಕೂ ಕಳುಹಿಸಿದರೆ ಎಷ್ಟು ಸಮಂಜಸ ಆಗಿರುತ್ತದೆಯೋ ಇದು ಅಷ್ಟೇ ಸಮಂಜಸವಾಗಿದೆ. ಇದು ಸಣ್ಣ ವಿಷಯವೇನೂ ಅಲ್ಲ. ಕೆಲವರು, ಇಂಥಾದ್ದು ಹಿಂದೆ ನಡೆಯಿತು, ಚರಿತ್ರೆಯ ಆಧಾರವಿದೆ, ಪ್ರಾಂತ್ಯ ಅಥವಾ ದೇಶ ಪ್ರತ್ಯೇಕವಾದಾಗ ರಕ್ತಪಾತವಾಯಿತು ಎಂದು ಹೇಳಬಹುದು. ಆಂಧ್ರ ಪ್ರಾಂತ್ಯವಾದಾಗ ಮದರಾಸು ಪಟ್ಟಣವು ತಮಗೆ ಸೇರಬೇಕೆಂದು ತೆಲುಗರು ಕೇಳುತ್ತಿದ್ದರು; ಹಿಂದೆ ಮದರಾಸಿನಲ್ಲಿ ಉಳಿದವರು ತಮಗೆ ಅದು ಸೇರಿದುದೆಂದು ಹೇಳುತ್ತಿದ್ದರು. ಕೆಲವರು ಈ ಸಂಬಂಧವಾಗಿ ರಕ್ತದಹೊಳೆಯೋ ಹರಿಯುತ್ತದೆಯೆಂದು ಹೇಳಿದ್ದರು. ಆದರೆ ಏನಾಯಿತು?

ಎ. ವಿ. ನರಸಿಂಹರೆಡ್ಡಿ: ಹಾಗಿದ್ದರೆ, ಶ್ರೀಮಾನ್ ಗೋಪಾಲಗೌಡರ ಅಭಿಪ್ರಾಯದಲ್ಲಿ ಅವರಿಗೆ ಅನುಕೂಲವಾಗುವ ಹಾಗೆ ಅಭಿಪ್ರಾಯವನ್ನು ಕೊಟ್ಟಿದ್ದರೆ ಈ ವರದಿ ಸರಿಯಾಗಿರುತ್ತಿತ್ತು ಎಂತಲೆ? ಇಲ್ಲಿರತಕ್ಕ ಅಂಕಿ-ಅಂಶಗಳನ್ನು ವ್ಯಕ್ತಪಡಿಸಬೇಕೋ ಅಥವಾ ಯಾರಾದರೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುವಂತೆ ಮಾಡಬೇಕೋ?

ಎಸ್. ಗೋಪಾಲಗೌಡ: ಸಮಿತಿಯವರು ಇಂಥ ಒಂದು ಮುಖ್ಯ ವಿಷಯದಲ್ಲಿ ಅಭಿಪ್ರಾಯ ಕೊಡುವಾಗ ಬಹಳ ಜಾಗರೂಕರಾಗಿರಬೇಕು. ಅಪ್ರಕೃತ ಅನಾವಶ್ಯಕ ವಿನಾಕಾರಣ ಅನುಮಾನಗಳಿಗೆ, ಉಹಾಪೋಹಗಳಿಗೆ ಎಡೆಗೊಡುವುದಕ್ಕೆ ಅವರು ಈ ರೀತಿ ಹೇಳಬಾರದಾಗಿತ್ತು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಸಮಿತಿಯವರು ಇಂಥ ಕೆಲವು ಅಭಿಪ್ರಾಯಗಳನ್ನು ಕೊಟ್ಟಿರುವುದನ್ನು ನಾವು ಬಿಟ್ಟರೆ ಮತ್ತೆ ಕೆಲವು ವಿಷಯಗಳಲ್ಲಿ ನಮಗೆ ಅನುಕೂಲವಾದ ಅಂಕಿ-ಅಂಶಗಳನ್ನು ಒದಗಿಸಿದ್ದಾರೆ. ಆದರೆ, ಬಹುಮುಖ್ಯವಾದ ಒಂದಂಶವನ್ನು ಮಾತ್ರ ಅವರು ಸಂಗ್ರಹಿಸಿಲ್ಲ. ಅದೇನೆಂದರೆ, ಹೊರಗಡೆ ಇರತಕ್ಕ ಕನ್ನಡ ಜನರು ವಿಷಯದಲ್ಲಿ ಏನಾದರೂ ಅಭಿಪ್ರಾಯ ಪಟ್ಟಿದ್ದಾರೋ? ಅವರ ಅಭಿಪ್ರಾಯ ಹೇಗಿದೆ? ನಮ್ಮೊಡನೆ ಸೇರುವುದಕ್ಕೆ ಒಪ್ಪುತ್ತಾರೆಯೆ? ಎಂಬುದನ್ನು ಸಂಗ್ರಹಿಸಿಲ್ಲ. ವಿಷಯ ಅಪ್ರಕೃತವೆಂದು ಭಾವಿಸುವುದಿಲ್ಲ. ಏಕೆಂದರೆ ಅನೇಕ ಕಡೆಗಳಲ್ಲಿ ಅನೇಕ ರೀತಿಗಳಲ್ಲಿ ಈ ವಿಷಯವಾಗಿ ಜನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವೆಲ್ಲವೂ ದೇಶದ ಮುಂದಿವೆ. ಆದುದರಿಂದ ಸಮಿತಿಯವರು ಇದನ್ನು ಕೈಬಿಟ್ಟಿರಬಹುದು ಅಥವಾ ಬರೆದುಕೊಳ್ಳುವುದಕ್ಕೆ ಆಗಲಿಲ್ಲವೆಂದು ಕಾಣುತ್ತದೆ. ಈ ಬಗ್ಗೆ ಹೆಚ್ಚು ಆಕ್ಷೇಪಣೇಯೇನೂ ಇಲ್ಲ.

ಆದರೆ ಕೆಲವು ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟ ಚಿತ್ರವನ್ನು ನಮ್ಮ ಮುಂದಿಡುವಾಗ ಕೆಲವು ಅಂಶಗಳನ್ನು ಸಮಿತಿಯವರು ಕೈಬಿಟ್ಟಿದ್ದಾರೆ. ಈ ರೀತಿ ಬಿಟ್ಟರೆ ಏನಾಗುತ್ತದೆಂದರೆ, ಅವರ ಚಿತ್ರದಲ್ಲಿ ಒಂದೆಡೆ ಉತ್ಪ್ರೇಕ್ಷೆ ಬಂದು ಹೆಚ್ಚು ಖೋತಾ ತೋರಿಸುವುದಕ್ಕೆ ಅವಕಾಶವಾಗುತ್ತದೆ. ಇದನ್ನು ಬೊಂಬಾಯಿ ಶಾಸನ ಸಭೆಯ ಶ್ರೀಮಾನ್ ಕಂಠಿಯವರು ಒಂದು ಲೇಖನದಲ್ಲಿ ವಿವರಿಸಿದ್ದಾರೆ. ಈ ವರದಿಯಲ್ಲಿ ಯಾವ ಯಾವ ಅಂಶಗಳನ್ನು ಕೈಬಿಟ್ಟಿದ್ದಾರೆ, ಯಾವ ರೀತಿ ಉಳಿತಾಯ ಪ್ರದೇಶವಾಗುತ್ತದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಅವರ ಲೇಖನ ಅನುಕೂಲವಾಗುತ್ತದೆ.

ಈ ಕನ್ನಡ ಪ್ರದೇಶಗಳ ಆರ್ಥಿಕ ಸ್ಥಿತಿ ಬಹಳ ಹದೆಗೆಟ್ಟಿದೆ ಎನ್ನುವುದು ಸೂಕ್ತವಲ್ಲ. ಅದನ್ನು ಸರಿಪಡಿಸಲು ಎಲ್ಲಾ ಅನುಕೂಲಗಳೂ ಇವೆ ಎಂಬುದನ್ನು ಅವರು ಈಗಾಗಲೇ ದೇಶದ ಮುಂದಿಟ್ಟಿದ್ದಾರೆ.

ಶ್ರೀಮಾನ್ ಲಕ್ಕಪ್ಪನವರು ಮಾತನಾಡುತ್ತಾ ಮೈಸೂರಿನಲ್ಲಿ ಬಹಳ ರಸ್ತೆಗಳಿವೆ ಅಲ್ಲಿ ಬಹಳ ಕಡಿಮೆ ಎಂದು ಹೇಳಿದರು. ಮುಂಬಯಿ ಕನ್ನಡ ಪ್ರಾಂತ್ಯಗಳ ರಸ್ತೆಗಳನ್ನು ಲೆಕ್ಕ ಹಾಕುವಾಗ ಸಹಸ್ರಾರು ಮೈಲಿ ಗ್ರಾಮಾಂತರ ರಸ್ತೆಗಳನ್ನು ಕೈಬಿಟ್ಟಿದ್ದಾರೆಂದು ಒಂದು. ಆಮೇಲೆ ವೈದ್ಯ ಸಹಾಯದ ವಿಷಯದಲ್ಲಿ ಹೇಳುವಾಗ ಸರ್ಕಾರ ನೆರವು ನೀಡುವ ವೈದ್ಯರುಗಳನ್ನು ಮುಂಬಯಿ ಪ್ರಾಂತದ ಚಿತ್ರದಲ್ಲಿ ಕೈಬಿಟ್ಟಿದ್ದಾರೆ. ಆಸ್ಪತ್ರೆಗಳು ಮತ್ತು ಔಷಧಾಲಯಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ. ಸಮಿತಿಯರು ಹೇಳಿರುವುದು ೮೪, ಆದರೆ ವಾಸ್ತವವಾಗಿ ಇರುವುದು ೧೦೮, ವೈದ್ಯ ವ್ಯವಸ್ಥೆಗಳ ಸಂಖ್ಯೆ ವರದಿಯಲ್ಲಿ ಹೇಳಿರುವಂತೆ ೮೪, ಅಲ್ಲಿ ೨೮೪ ಎಂದು ತೋರಿಸಿಕೊಟ್ಟಿದ್ದಾರೆ.