ವಿಧಾನಸೌಧ

೨೩ ಮಾರ್ಚ್ ೧೯೫೭

ಮಾನ್ಯ ಅಧ್ಯಕ್ಷರೆ, ವಿಧಾನಸೌಧಕ್ಕೆ ಸಂಬಂಧಪಟ್ಟ ಒಂದು ವಿಷಯವನ್ನು ಇಲ್ಲಿ ಪ್ರಸ್ತಾಪ ಮಾಡಲಾಗಿದೆ. ಶ್ರೀ ಇಮಾಂರವರು ತಮ್ಮ ಭಾಷಣದಲ್ಲಿ ಈ ವಿಷಯದ ಬಗ್ಗೆ ದುಂದುವೆಚ್ಚ ನಡೆದಿದೆಯೆಂದು ಮಾತನಾಡಿದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಶ್ರೀಮಾನ್ ಹನುಮಂತಯ್ಯನವರು ಬಹಳ ಉದ್ದವಾದ ಒಂದು ಹೇಳಿಕೆಯನ್ನು ಕೊಟ್ಟಿದ್ದಾರೆ. ಅವರ ಹೇಳಿಕೆಗೆ ಪ್ರತಿಯಾಗಿ ಅಷ್ಟೇ ಉದ್ದದ ಹೇಳಿಕೆಯನ್ನು ಕೊಡುವುದಕ್ಕೆ ಅಧ್ಯಕ್ಷರು ಕಾಲಾವಕಾಶಕೊಟ್ಟರೆ – ಬಹುಶಃ ಕೊಡಲಾರರು – ನನ್ನ ಅಭಿಪ್ರಾಯವನ್ನು ಹೇಳಬೇಕೆಂದು ನಾನು ಆಸೆಪಟ್ಟಿದ್ದೇನೆ. ಶ್ರೀಮಾನ್ ಹನುಮಂತಯ್ಯನವರು ಈಗ ಸಭೆಯಲ್ಲಿ ಇಲ್ಲದಿರುವುದು ನನ್ನ ದುರಾದೃಷ್ಟ ಎಂದು ತಿಳಿದುಕೊಂಡಿದ್ದೇನೆ. ಅವರು ‘ನನ್ನ ದೌರ್ಭಾಗ್ಯ’ ಎಂದು ನಮ್ಮ ಡಿಫೆನ್ಸ್ ಆರಂಭ ಮಾಡಿದರು. ಒಂದು ವಿಷಯವನ್ನು ಅವರು ಬಹಳ ಚೆನ್ನಾಗಿ ಹೇಳಿದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿದ್ದವರು. ಹಿಂದೆ ಮೈಸೂರಿನ ಮುಖ್ಯಮಂತ್ರಿಯಾಗಿದ್ದವರು, ಇನ್ನು ಮುಂದೆ ಕೂಡ ಜವಾಬ್ದಾರಿ ಸ್ಥಾನದಲ್ಲಿರುವುದಕ್ಕೆ ಆಸೆ ಹೊಂದಿರತಕ್ಕವರು, ಅವರು ಒಂದು ಮಾತನ್ನು ಹೇಳಿದ್ದಾರೆ. ಅದು ಬಹಳ ಗಮನಾರ್ಹವಾದ ವಿಷಯವೆಂದು ನಾನು ತಿಳಿದುಕೊಂಡುದ್ದೇನೆ. ಏಕೆಂದರೆ ವಿರೋಧ ಪಕ್ಷದವರು ಹೇಳಿದರೆ, ಅವರು ಏನೋ ಒಂದು ಅಪಾದನೆ ಹೊರಿಸುವುದಕ್ಕೆ ಹೇಳುತ್ತಾರೆಂದು ಬೇರೆಯವರೆಲ್ಲ ಭಾವಿಸುತ್ತಾರೆ. ಅದು ಸಂಪ್ರದಾಯ. ಅವರು ಎಸ್ಟಿಮೇಟುಗಳ ವಿಷಯದಲ್ಲಿ ಮತ್ತು ಎಸ್ಟಿಮೇಟುಗಳನ್ನು ಪುನರ್ವಿಮರ್ಶೆ ಮಾಡುವ ವಿಷಯದಲ್ಲಿ ಬಹಳ ದೊಡ್ಡ ಹೇಳಿಕೆಯನ್ನೇ ಕೊಟ್ಟಿದ್ದಾರೆ. “ಇದನ್ನು ಜವಾಬ್ದಾರಿ ಹೊತ್ತಿರುವವರೆಲ್ಲರೂ ಇಂಡಿಯಾ ದೇಶದಾದ್ಯಂತ ಪರೀಕ್ಷೆ ಮಾಡಿ ಪರಿಶೀಲಿಸ ಬೇಕೆಂದು ನಾನು ಆಶೆ ಪಡುತ್ತೇನೆ” ಎಂದು ಹೇಳಿದರು. ವಿಧಾನಸೌಧದ ಅಂದಾಜು ಸುಮಾರು ಐವತ್ತು ಲಕ್ಷಕ್ಕೋ ಏನೋ ಆಗಿ ಅದಕ್ಕಿಂತ ಕಡಿಮೆ ಇರಬೇಕು – ಕೆಲಸ ಆರಂಭವಾದದ್ದು ೧೮೦ ಲಕ್ಷ ರೂಪಾಯಿಗಳವರೆಗೆ ಮುಟ್ಟಿದೆ, ಇದು ವಾಸ್ತವ ಎಂದು ಆರಂಭಿಸಿದರು. ಮುಂದೆ ತಪ್ಪು ಎಲ್ಲಾ ಪಿ. ಡಬ್ಲಿಯು. ಡಿ. ಕೆಲಸಗಳಲ್ಲೂ ನಡೆದಿದೆ ಎಂದು ಸಮರ್ಥನೆ ಮಾಡಿಕೊಂಡರು. ಸಮರ್ಥನೆ ಬಹಳ ಚೆನ್ನಾಗಿದೆ! ಆದಾಯ ತೆರಿಗೆ ಯಾತಕ್ಕಯ್ಯಾ ಕೊಟ್ಟಿಲ್ಲಎಂದು ಕೇಳಿದರೆ ಅವರು ಕೊಟ್ಟಿರುವರೆ? ಇವರನ್ನು ಕೇಳಿದ್ದೀರಾ? ಊರಿನಲ್ಲಿ ತೆರಿಗೆ ಕೊಡದಿರುವವರ ಹೆಸರನ್ನು ಹೇಳಿ?’ ಎಂದು ಕೇಳಿ, ‘ಅವರೆಲ್ಲಾ ಕೊಡದಿರುವಾಗ ನನ್ನನ್ನು ಕೇಳುತ್ತೀರಾಎಂದು ಹೇಳಿದ ಹಾಗಾಯಿತು ಇದು. ಹೀಗೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಆ ಕೆಲಸಕ್ಕೆ ನಾನು ಹೋಗುವುದಿಲ್ಲ. ಆದರೆ ಇಷ್ಟು ಮಾತ್ರ ಹೇಳುತ್ತೇನೆ. ಎಲ್ಲಾ ಪಿ. ಡಬ್ಲಿಯು. ಡಿ. ಕೆಲಸಗಳಲ್ಲೂ ಈ ತಪ್ಪಿದೆಯೆಂದು ಹೇಳುವುದು ಸಮರ್ಥನೆಯೆ? ಶ್ರೀಯುತರುಗಳಾದ ಇಮಾಂ, ಶ್ರೀನಿವಾಸ ಅಯ್ಯಂಗಾರ್, ಹುಚ್ಚೇಗೌಡ, ಪಟ್ಟಾಭಿರಾಮನ್ ಮುಂತಾದವರು ಕಳೆದ ಐದು ವರ್ಷಗಳಿಂದೇನು ಹೇಳಿದ್ದರು? ಎಸ್ಟಿಮೇಟುಗಳನ್ನು ಸಾಧ್ಯವಾದ ಮಟ್ಟಿಗೆ ಕರಾರುವಾಕ್ಕಾಗಿ ಮಾಡಿ, ಶೇಕಡಾ ೫-೧೦ ೨೦ ರವರೆಗೆ ಬೇಕಾದರೆ ಮಾರ್ಜಿನ್ ಇಟ್ಟುಕೊಳ್ಳಿ, ಅವಶ್ಯಕವಾದರೆ ಸ್ಪಲ್ಪ ಹೆಚ್ಚು ಕಡಿಮೆ ಮಾಡಿಕೊಳ್ಳಿ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಹಾಗಾಗಿಲ್ಲ. ಒಂದಕ್ಕೆ ಐದರಷ್ಟು ಜಾಸ್ತಿಯಾಗಿದೆ. ದೊಡ್ಡ ರಿವಿಜನ್; ಇದಕ್ಕೆ ಎಸ್ಟಿಮೇಟ್ ಮಾಡಿದವರು ಅಂಡರ್ ಎಸ್ಟಿಮೇಟ್ ಮಾಡಿದ್ದರೆ ಅದು ಬೇರೆ ವಿಷಯ. ಎಕ್ಸಿಜೆನ್ನೀಸ್ ಬಂದು ಮುಂದೆ ಕಾರಣಾಂತರದಿಂದ ಹತೋಟಿ ಮೀರಿ, ಬೆಲೆ ಏರಿ ಅಂದಾಜಿನ ವೆಚ್ಚ ದುಬಾರಿಯಾದರೆ ಅದೊಂದು ತರಹ. ಹಾಗಿಲ್ಲದೆ ಅಂದಾಜು ತಯಾರಿಸುವಾಗ ಸರಿಯಾಗಿ ಮಾಡದಿದ್ದರೆ ಅಂದೊಂದು ತಪ್ಪು. ಯುದ್ಧದ ದೆಸೆಯಿಂದ ಕಬ್ಬಿಣದ ಬೆಲೆ ಆಕಸ್ಮಾತ್ ಏರಿದಾಗ, ಕಾರಣಾಂತರದಿಂದ ಲೇಬರ್ ಛಾರ್ಜ್‌‌ಸ್‌ ಒಂದಕ್ಕೆ ಮೂರರಷ್ಟು ಏರಿದಾಗ ರಿವೈಸ್ ಮಾದಬೇಕಾಗುತ್ತದೆ. ಹಾಗಿಲ್ಲದೆ ಉದ್ದ, ಅಗಲ ಮುಂತಾದ್ದೆಲ್ಲವನ್ನೂ ಹೆಚ್ಚು ಮಾಡಿ ಎಲ್ಲ ರಿವೈಸ್ ಮಾಡುವುದಾರೆ ಹೇಗೆ ಒಪ್ಪುವುದು? ಶ್ರೀಮಾನ್ ಹನುಮಂತಯ್ಯನವರು ಮೈಸೂರಿನ ಉದಾಹರಣೆ ಮಾತ್ರ ತೆಗೆದುಕೊಂಡಿಲ್ಲ; ಕನ್ನಂಬಾಡಿಯಿಂದ ಆರಂಭ ಮಾಡಿ, ತಮ್ಮ ಸಂಗಡ ಕೇವಲವಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರನ್ನೂ ಈಗ ಈಚೆಗೆ ಎಳೆಯುತ್ತಿದ್ದಾರೆ. ಅಲ್ಲಿಂದ ನುಗು, ಭದ್ರಾ, ತುಂಗಾ ಮೊದಲಾದ ಪ್ರಾಜೆಕ್ಟುಗಳ ವಿಚಾರ ವಿವರಿಸಿ, ಇನ್ನೂ ಮೇಲೆ ಹೋಗಿ, ಹಿರಾಕುಡ್, ಬಾಕ್ರಾನಂಗಲ್ ಇತ್ಯಾದಿ ಪ್ರಾಜೆಕ್ಟುಗಳ ವಿಚಾರ ಹೇಳಿ, ಎಲ್ಲಕ್ಕೂ ಮಾತು ಸಲ್ಲುತ್ತದೆ, ಆದ್ದರಿಂದ ನನ್ನ ತಪ್ಪೇನೂ ಇಲ್ಲ ಎಂದು ಸಮರ್ಥನೆ ಮಾಡಿದರು. ಅಪರಾಧ ಮೈಸೂರಿಗೆ ಮಾತ್ರ ಅನ್ವಯಿಸುವುದಿಲ್ಲ. ಇದು ಬಾರತದ ರೋಗ, ಭಾರತದಲ್ಲೆಲ್ಲ ಅಪರಾಧ ಇದೆ ಹೇಳಿದ ಹಾಗಾಯಿತು.

ಇದು ಸಮರ್ಥನೆಯಲ್ಲ. ಇದು ನಡೆಯುವುದು ವಾಸ್ತವ; ಹಾಗಾಗಬಾರದು . ಯಾವುದೇ ಪ್ರಾಜೆಕ್ಟಿನಲ್ಲೂ ರೀತಿಯಾಗಿ ಹಣ ಪೋಲಾಗಬಾರದು, ಚೆಕ್ ಇರಬೇಕು. ಬಹಳ ಕಳಕಳಿಯಿಂದ ರೀತಿ ಯಾವುದೇ ಪ್ರಾಜೆಕ್ಟಿನಲ್ಲೂ ಸಾರ್ವಜನಿಕ ಹಣ ಪೋಲಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯನ್ನು ಹೊತ್ತಿರುವ ಸರ್ಕಾರದ ಕರ್ತವ್ಯ. ಪ್ರಗತಿಪರವಾಗಿದ್ದ ಸರ್ಕಾರವಾಗಲಿ ಅಥವಾ ಪ್ರತಿಗಾಮಿ ಸರ್ಕಾರವಾಗಲಿ, ಸರ್ಕಾರ ಅಂದ ಮೇಲೆ ಸಾರ್ವಜನಿಕ ಹಣದ ಪ್ರತಿಯೊಂದು ಕಾಸೂ ಕೂಡ ಸರಿಯಾದ ರೀತಿಯಲ್ಲಿ ಖರ್ಚಾಗುವಂತೆ ನೋಡಿಕೊಳ್ಳಬೇಕಾದದ್ದು ಅದರ ಜವಾಬ್ದಾರಿ. ಇದರಲ್ಲಿ ವಿವಾದವಿಲ್ಲ; ಇದು ನಿರ್ವಿವಾದ ಮಾತು.

ಇನ್ನು ಸಮಿತಿ ವರದಿಯ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಮಿತಿ ಶ್ರೀ ಕೆ. ಹನುಮಂತಯ್ಯನವರೇ ರಚನೆ ಮಾಡಿದಂಥಾದ್ದು. ಇದು ಏಕೆ ಮುಖವಾದ ವರದಿಯನ್ನು ಕೊಟ್ಟಿದೆಯೆಂದು ಹೇಳಿದ್ದಾರೆ; ಇರಬಹುದು. ಇದಕ್ಕೆ ಒಂದು ಉದಾಹರಣೆ, ಮಣ್ಣು ಸಾಗಿಸಿದ್ದರಲ್ಲಿ ಸುಮಾರು ಒಂದು ಲಕ್ಷ ರೂಪಾಯಿಗಳ ಫಾಯಿದೆ ಬಂದಿದೆಯೆಂದು; ಇದನ್ನು ಸಮಿತಿಯವರು ಲೆಕ್ಕಕ್ಕೆ ತೆಗೆದುಕೊಳ್ಳಬಹುದಾಗಿತ್ತು. ವರದಿಯಲ್ಲಿ ಬರೆಯಬಹುದಾಗಿತ್ತು. ಅವರು ಪಾರ್ಷಿಯಲ್ಲಾಗಿ ಬರೆಯದಿದ್ದರೆ ಅದು ಅವರ ತಪ್ಪು. ವರದಿ ನಿಜವಾಗಿರಬೇಕು; ಯಾರ ಮೇಲೂ ಆಪಾದನೆ ಹೊರಿಸುವ ವರದಿಯಾಗಿರಬಾರದು. ಆ ಮಾತನ್ನು ಒಪ್ಪುತ್ತೇನೆ. ಸಮಿತಿಯವರು ಕಂಪ್ಯಾರಿಟಿವ್ ಸ್ಟೇಟ್‌ಮೆಂಟ್ ಕೊಡಬೇಕಾಗಿತ್ತು ವರದಿ ಪಕ್ಷಪಾತ ದೃಷ್ಟಿಯಿಂದ ಕೂಡಿದೆ ಎಂದು ಹೆಳಿದ್ದಾರೆ. ವಿಧಾನಸೌಧಕ್ಕೆ ಹೆಚ್ಚು ಖರ್ಚಾಗಿಲ್ಲ, ಚದರದಡಿಗೆ ೨೪ ರೂಪಾಯಿಯಿಂದ, ಸಾಮಾನ್ಯವಾಗಿ ೨೧ರಿಂದ ೨೫ ರೂಪಾಯಿಗಳವರೆಗೆ ಬೀಳುತ್ತದೆ. ಆರ್ನಮೇಂಟ್ಸ್ ಇಲ್ಲದಿದ್ದರೂ ಅಷ್ಟು ಬೀಳುತ್ತದೆ, ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಹೆಚ್ಚಾಗಿ ಪ್ರಸ್ತಾಪ ಮಾಡುವುದಿಲ್ಲ. ಚಂಡಿಘರ್ ನಲ್ಲಿ ಹೊಸದಾಗಿ ಸರ್ಕಾರದವರು ಕಟ್ಟಿರುವ ಕಟ್ಟಡ ನೋಡಿದೆ. ಅದಕ್ಕಿಂತ ನಮ್ಮದು ತೃಪ್ತಿಕರವಾಗಿದೆ ಎಂದು ಕೂಡ ಸಮರ್ಥನೆ ಮಾಡಿದ್ದಾರೆ. ಇನ್ನು ಅವರು ತಮ್ಮ ಅನುಭವವನ್ನು ಹೇಳುತ್ತಾ ಇಂಗ್ಲೆಂಡ್, ಪ್ಯಾರಿಸ್, ಡೆನ್‌ಮಾರ್ಕ್ ಮತ್ತು ಇತರ ಕಡೆಗಳಲ್ಲೂ ಶಾಸನ ಸಭಾ ಕಟ್ಟಡಗಳನ್ನು ನೋಡಿದ್ದೇನೆ. ಇಂಡಿಯಾ ದೇಶದಲ್ಲೂ ಕೂಡ ಉತ್ತರ ಪ್ರದೇಶ ಮುಂತಾದ ಕಡೆಗಳಲ್ಲಿ ಸುಮಾರು ೧೪ ಕಟ್ಟಡಗಳನ್ನು ನೋಡಿದ್ದೇನೆ; ನನ್ನ ಅನುಭವ ಇಲ್ಲಿ ರೂಪಿಸಿದ್ದೇನೆ ಎಂದು ಹೇಳಿದರು. ಜೇನು ಹುಳು ಎಲ್ಲ ಕಡೆಯಿಂದ ಮಧುವನ್ನು ತಂದು ಜೇನುತುಪ್ಪ ಮಾಡುವ ಹಾಗೆ ಮಾಡಿದ್ದೇನೆಂದು ಹೇಳಿದರು; ನಿಜ, ಅವರು ರಸಿಕರು. ಭಾರೀ ಭಾರಿ ಕನಸು ಕಾಣುವವರು; ಇದೆಲ್ಲ ನಿಜ, ನೋಡಿದರೇ ಗೊತ್ತಾಗುತ್ತದೆ.

ಅವರ ಉದ್ದೇಶ ತಪ್ಪು ಆಗಿತ್ತೆಂದು ನಾನು ಹೇಳುವುದಿಲ್ಲ. ಸದುದ್ದೇಶವನ್ನು ಇಟ್ಟುಕೊಂಡೇ ಈ ಕೆಲಸವನ್ನು ಆರಂಭಮಾಡಿದ್ದಾರೆ. ಅವರು ಹಣವನ್ನು ಮಾಡಬೇಕು ಎಂದು ಮೈಸೂರು ಸರ್ಕಾರದ ಬೊಕ್ಕಸದಿಂದ ಈ ಎರಡು ಕೋಟಿ ರೂಪಾಯಿ ಹಣವನ್ನು ದೋಚಿಕೊಂಡು ಹೋಗಿದ್ದಾರೆಂದು ಅವರ ಮೇಲೆ ನಾನು ಅಪಾದನೆ ಮಾಡುವುದಿಲ್ಲ. ಅವರ ಉದ್ದೇಶವು ಒಳ್ಳೆಯದೇ ಆಗಿತ್ತು. ಚೆನ್ನಾಗಿ ಇತ್ತು. ಈ ಮೊದಲೇ ಹೇಳಿದ ಹಾಗೇ ಅವರೂ ಒಬ್ಬರು ಲೇಮನ್ (Layman). ಅವರಿಗೆ ಆರ್ಕಿಟೆಕ್ಚರಿನ ಬಗ್ಗೆ ಸಲಹೆ ಕೊಡಲು ಅಧಿಕಾರವಿಲ್ಲ. ನನಗೆ ಸಂಗೀತದಲ್ಲಿ ಅಭಿರುಚಿ ಇದೆ. ಎಂದು ನಾನು ಸಂಗೀತ ಹೇಳುವುದಕ್ಕೆ ಪ್ರಾರಂಭ ಮಾಡಿದರೆ ಚೆನ್ನಾಗಿ ಇರುವುದಿಲ್ಲ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತದಲ್ಲಿ ಅಭಿರುಚಿಯು ಇರುವುದರಿಂದ ಸಂಗೀತ ಕೇಳುವಾಗ ತಾಳಹಾಕುತ್ತೇನೆ. ಹಾಗೆ ಇದೆ ಎಂದು ನಾನೇ ಹಾಡಲು ಆರಂಭಿಸಿದರೆ ಅಸಂಬದ್ಧವಾಗುತ್ತದೆ. ಶ್ರೀ ಹನುಮಂತಯ್ಯನವರು ಪ್ರಪಂಚ ಪರ್ಯಟನ ಮಾಡಿರಬಹುದು. ಅನುಭವವೂ ಇರಬಹುದು ಅದು ಎಲ್ಲಾ ಸರಿ. ಆದರೆ ತಾವೇ ಶಿಲ್ಪಿ ಆಗಬೇಕೆಂಬ ವಿಚಾರವನ್ನು ಇಟ್ಟುಕೊಂಡಿದ್ದು ಮಾತ್ರ ತಪ್ಪು. ಅವರು ಯಾವ ರೀತಿಯಾಗಿ ಇನ್‌ಸ್ಟ್ರಕ್ಷನ್ ಕೊಡುತ್ತಿದ್ದರು ಎಂಬ ಬಗ್ಗೆ ವರದಿಯ ಚಾಪ್ಟರ್ ೧೬ ಪುಟ ೧೨ ರಲ್ಲಿ ವಿವರವಾಗಿ ಹೇಳಿದೆ. ಬಾಗಿಲು ಅಲ್ಲಿ ಇರಲಿ, ಕಿಟಕಿ ಇಲ್ಲಿ ಆಗಬೇಕು, “ಕುಮಾರ ಕೃಪ” ದಲ್ಲಿ ಕಿಟಕಿಗಳಲ್ಲಿರುವ ಹಾಗೆ ಹಾಕು, ಹೀಗೆ ಹಾಕು ಎಂಬುದು ಉದ್ದಕ್ಕೂ ಹೇಳಿದೆ, ಇದು ಸರಿಯೇ?

ಜೇನು ಮಧು ಶೇಖರಿಸುವ ಹೋಲಿಕೆ ಕೊಡುವುದು ಹಾಗೂ ನಾನೇ ಶಿಲ್ಪಿ ಎಂದು ಹೇಳಿಕೊಂಡು ಹೋಗುವುದು ಸರಿಯಲ್ಲ. ಈ ವಿಧಾನಸೌಧವನ್ನು ಜನ ಬಂದು ನೋಡಿಕೊಂಡು ಹೋಗುತ್ತಾರೆ ಎಂದು ಹೇಳಿದರು. ಜನ ಬಂದು ನೋಡುವಾಗ ಇದರಲ್ಲಿ ತಪ್ಪು ಇದೆಯೇ? ಸರಿಯಾಗಿ ಇದೆಯೇ ಎಂದು ಹೋಲಿಕೆ ಕೊಡುವುದಿಲ್ಲ. ಆದ ಕಾರಣ ಶ್ರೀ ಹನುಮಂತಯ್ಯನವರು ಆರ್ಕಿಟೆಕ್ಚರಿನ ಬಗ್ಗೆ ಏನು ಸಮರ್ಥನೆಯನ್ನು ಮಾಡಿಕೊಂಡರೋ ಅದು ಸರಿಯಲ್ಲ. ಜನ ಬಂದು ನೋಡಿಕೊಂಡು ಹೋಗುತ್ತಿದ್ದಾರೆ, ಪ್ರಶಂಸೆ ಮಾಡಿ ಬರೆದ ೮೦೦ ಕಾಗದಗಳು ಬೇರೆ ಬೇರೆ ಜನರಿಂದ ತಮಗೆ ಬಂದಿದೆ. ನೀವು ಯಾಕೆ ಟೀಕಿಸುತ್ತಿದ್ದೀರಿ ಎಂದು ಕೇಳಿದರು. ಜನರ ಆಕರ್ಷಣೆಯ ಬಗ್ಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಸಾಕ್ರೆಟೀಸ್ಗೆ ವಿಷ ಕೊಟ್ಟಾಗಲೂ ಜನರು ಬಂದು ಬೆಂಬಲ ಕೊಟ್ಟರು. ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಅವರ ಹಿಂದೆ ಜನರು ಇದ್ದರು. ಹಿಟ್ಲರನ ಹಿಂದೆಯೂ ಜನರು ಇದ್ದರು. ಬೇಲು ಶ್ರೀನಿವಾಸ ಅಯ್ಯಂಗಾರ್ಯರ ಕೊಲೆಯಾದಾಗ ಅವರ ಮನೆಗೆ ಹೋಗಿ ಎಷ್ಟು ಜನ ಬಗ್ಗಿ ಬಗ್ಗಿ ನೋಡಿದರು. ಯಾವುದು ಅಸಾಮಾನ್ಯವೋ ದೊಡ್ಡದೋ, ಬೇರೆಯದಕ್ಕಿಂತ ಭಿನ್ನವಾಗಿ ಕಾಣವುದೋ ಅದಕ್ಕೆಲ್ಲಾ ಮಂಕುತಿಮ್ಮನು ತಲೆಬಾಗಿಸಿ ನಮಸ್ಕಾರ ಮಾಡುತ್ತಾನೆ. ತನಗೆ ಮಾಡಲು ಸಾಧ್ಯವಿಲ್ಲದೆ ಇರುವಂಥದು, ಯಾವುದೂ ವಿಭಿನ್ನವಾಗಿದೆಯೋ ಅದಕ್ಕೆ ನಮಸ್ಕಾರ ಮಾಡುತ್ತಾನೆ, ತನ್ನ ಕುತೂಹಲವನ್ನು ತೋರಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ಶಿಲ್ಪಿಗಳು, ಅವರೆಲ್ಲರೂ ಪ್ರಶಂಸಿಸಿದರು ಎಂದು ಹೇಳುವುದು ಸರಿಯಲ್ಲ. ವಿಧಾನಸೌಧದಲ್ಲಿಯ ಆರ್ಕಿಟೆಕ್ಚರ್ ಮೊಗಲರ ಕಾಲದ್ದೆ? ಚೋಳರ ಕಾಲದ್ದೆ? ಪಾಂಡ್ಯರ ಕಾಲದ್ದೆ? ಮೌರ್ಯರ ಕಾಲದ್ದೆ? ಗುಪ್ತರ ಕಾಲದ್ದೆ? ಇದು ಯಾವ ಕಾಲದ ಆರ್ಕಿಟೆಕ್ಛರು? ಎಲ್ಲಕಾಲದ ಆರ್ಕಿಟೆಕ್ಛರಿನ ಮಿಶ್ರಣ ಒಳ್ಳೆಯದಲ್ಲ.

ಎಸ್. ಸಿದ್ಧಪ್ಪ (ಮಾಗಡಿ): ಯಾವ ಶಿಲ್ಪಿ ಎಂದು ತಾವು ಹೇಳುವುದು?

ಎಸ್. ಗೋಪಾಲಗೌಡ; ಇದು ಯಾವ ಕಾಲದ್ದೂ ಅಲ್ಲ, ಎಲ್ಲವೂ ಇದೆ ಯಾವುದೂ: ಇಲ್ಲ, ಹಾಗೆ ಇದೆ.

ವಿ. ಆರ್. ನಾಯಿಡು (ಮಲ್ಲೇಶ್ವರ) : ಮಾನ್ಯ ಸದಸ್ಯರು ಯಾವುದೂ ಇಲ್ಲಾ ಎಂದು ಎನ್ನುತ್ತಾರೆ. ಎಲ್ಲಾ ಬಗೆಯ ಶಿಲ್ಪ ಈ ಕಟ್ಟಡದಲ್ಲಿ ಇದೆ, ನಾನು ನೋಡಿದ್ದೇನೆ.

ಎಸ್. ಗೋಪಾಲಗೌಡ : ಯಾವ ಶಿಲ್ಪ ಎಂದು ಹೇಳುವ ಹಾಗಿಲ್ಲ. ಎಲ್ಲಾ ಶಿಲ್ಪಗಳ ಕಿಚಡಿ ಅಂದರೆ ಕಲಸುಮೇಲೋಗರ. ಇದು ಒಂದು ಮ್ಯೂಜಿಯಂ ಇದ್ದಹಾಗೆ ಎಲ್ಲ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಆದುದರಿಂದ ಶಿಲ್ಪದ ವಿಷಯದ ಬಗ್ಗೆ ಶ್ರೀ ಹನುಮಂತ್ಯಯನವರು ಒಬ್ಬ ಸಾಧಾರಣ ಮನುಷ್ಯರು. ಒಂದು ಭವ್ಯ ಕಲಾಕೃತಿಯ ಸುಂದರ ದೃಶ್ಯ ಅವರ ಕಣ್ಣು ಮುಂದೆ ಇರಬಹುದು. ಆ ರೀತಿ ಅನೇಕರ ಮನಸ್ಸಿನಲ್ಲಿ ಅದು ಇರುತ್ತದೆ. ತಾಜ್‌ಮಹಲ್ ಕಟ್ಟಿಸಿದವನ ಮನಸ್ಸಿನಲ್ಲಿ ಆ ರೀತಿಯಾಗಿತ್ತು. ಅದಕ್ಕೆ ಅವನು ಹಾಗೇ ಕಟ್ಟಿಸಿದನು. ಒಬ್ಬೊಬ್ಬರಿಗೆ ಒಂದು ಕಲ್ಪನೆ ಇರುತ್ತದೆ. ವಿಧಾನಸೌಧ ಶ್ರೀ ಹನುಮಂತ್ಯಯ್ಯನವರ Grand, Mangnanimous ಸ್ವಪ್ರತಿಷ್ಠೆಯ ಪ್ರತೀಕ ಎಂದು ಹೇಳಬಹುದು. ಆದುದರಿಂದ ಅದನ್ನು ಈ ರೀತಿಯಾಗಿ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ವಿಧಾನಸೌಧವು ಬಹಳ ಚೆನ್ನಾಗಿ ಇದೆ, ಹತ್ತಾರು ಸಾವಿರ ಜನರು ಬಂದು ನೋಡಿಕೊಂಡು ಹೋಗುತ್ತಾರೆ. ಅದರಿಂದ ಸರಿಯಾಗಿದೆ ಎಂಬ ಸಮರ್ಥನೆ ಸರಿಯಲ್ಲ. ಜನರು ಕೆಟ್ಟದ್ದನೂ ನೋಡುತ್ತಾರೆ: ಒಳ್ಳೆಯದನ್ನೂ ನೋಡುತ್ತಾರೆ. ಯಾವುದು ಅದ್ಭುತವಾಗಿ ಇದೆಯೋ ಎಲ್ಲಕ್ಕಿಂತ ಹೆಚ್ಚಿಗೆ ವಿಭಿನ್ನವಾಗಿದೆಯೋ ಅದರ ಬಗ್ಗೆ ಕುತೂಹಲ ಪಡುತ್ತಾರೆ. ಹೀಗೆ ಇರುವುದರಿಂದ ತಾವು ಮಾಡಿದ್ದು ಸರಿಯಾಗಿದೆ, ಸಮಂಜಸವಾಗಿದೆ ಎಂದು ಹೇಳುವುದು ತಪ್ಪು.

ವಿಧಾನಸೌಧದ ಮುಂದುಗಡೆಯ ಪ್ರವೇಶದ್ವಾರದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸಎಂದು ಬರೆದದ್ದನ್ನು ನಾನು ಒಪ್ಪುವುದಿಲ್ಲ. ಇದೊಂದು ಅವಮಾನಕರವಾದ ಬರಹ ಎಂದು ಪರಿಗಣಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ಬರೆಸಿ ಹಾಕಿಕೊಳ್ಳುವುದು ಅಪಹಾಸ್ಯಕರ, ಅವರ ವೈಯಕ್ತಿಕ ಅಭಿಪ್ರಾಯ ಹೇಗೆ ಇರಬಹುದು; ಅದರಲ್ಲಿ ಅವರಿಗೆ ನಂಬಿಕೆ ಇರಬಹುದು. ದುಡ್ಡು ಕೊಟ್ಟರೂ ಕೆಲಸ ಆಗುವುದಿಲ್ಲ. ಇನ್ನು ದೇವರ ಕೆಲಸ ಎಂದರೆ ಮುಗಿದೇ ಹೋಯಿತು. ಯಾವಾಗ ಬೇಕಾದರೂ ಮಾಡಬಹುದು ಎಂಬ ಭಾವನೆ ಬರುತ್ತದೆ. ಮಾಡಿದರೂ ಆಯಿತು ಮಾಡದಿದ್ದರೂ ಆಯಿತು. ಸಂಬಳ ಕೊಟ್ಟರೇ ಕೆಲಸ ಮಾಡುವುದು ಕಷ್ಟ, ದೇವರ ಕೆಲಸ ಎಂದು ಹೇಳುವುದು ತಪ್ಪು, ಸಾರ್ವಜನಿಕರ ಕೆಲಸ ಅದು, ಅವರ ದೃಷ್ಟಿಯು ಪಾರಮಾರ್ಥಿಕ ಕಡೆಗೆ ಇದ್ದರೆ ಇಂಥ ವೈಭವ ಯಾಕೆ ಬೇಕು? ಬುದ್ಧನಂತೆ ಕಣ್ಣು ಮುಚ್ಚಿ, ಮರದ ಕೆಳಗೆ ಕುಳಿತು, ದೆವರ ಧ್ಯಾನ ಅಥವಾ ಪಾರಮಾರ್ಥಿಕ ವಿಚಾರ ಬೇಕಾದರೆ ಮಾಡಲಿ.

ಇನ್ನು ಕಳಶ ಹಾಕಿದ್ದು. ವಿಧಾನಸೌಧದ ಮೇಲೆ ಕಳಶ ಹಾಕಿದ ಮೇಲಂತೂ ಕಟ್ಟಡವನ್ನು ನೋಡುವುದಕ್ಕಾಗುವುದಿಲ್ಲ. ಇಂಡಿಯಾ ದೇಶದಲ್ಲಿ ಎಲ್ಲ ದೇವಸ್ಥಾನಗಳ ಮೇಲೆಯೂ ಕಳಶ ಹಾಕಿದ್ದಾರೆ; ಗೋಪುರಗಳನ್ನು ಕಟ್ಟಿಸಿದ್ದಾರೆ. ಕಳಶ ಹಾಕದೆ ಇರುವ ಭವನಗಳು ಇನ್ನೂ ಎಷ್ಟೋ ಇವೆ. ಇನ್ನು ಕಲ್ಲು ಕಟ್ಟಡಗಳ ಮೇಲೆ ಸಿಮೆಂಟು ಹೂವುಗಳನ್ನು ಕೆತ್ತಿಸಿರುವುದರ ಬಗ್ಗೆ ಬೇಕಾದರೆ ನನಗೆ ತಿಳಿದಮಟ್ಟಿಗೆ ವಿಮರ್ಶೆ ಮಾಡಬಲ್ಲೆ. ಆದರೆ ಅವರು ಯಾವ ರೀತಿ ಸಮರ್ಥನೆ ಮಾಡಿಕೊಂಡರೂ ಆ ಸಮರ್ಥನೆ ಸಮಂಜಸವಾದುದಲ್ಲ. ಅವರು ಹೇಳಿದ ರೀತಿಯಲ್ಲಿ ಪರಿಪೂಣವಾದ ಒಂದು ಕಟ್ಟಡ ಆರ್ಕಿಟೆಕ್ಚರ್ ದೃಷ್ಟಿಯಿಂದ ಹೇಗಿರಬೇಕು ಎಂದು ನಾನು ಹೇಳಬಲ್ಲೆ . ನಿನ್ನೆ ಅವರು ಮಾತನಾಡುವಾಗ ಜನ ಚಪ್ಪಾಳೆ ಕೂಡ ತಟ್ಟಿಬಿಟ್ಟಿರು, ಅಷ್ಟು Convincing ಆಗಿತ್ತು. ಏನೋ ಅವರಿಗೆ ದುರದೃಷ್ಟ ಬಂದಿತು. ಅವರು ಅದನ್ನು ಮುಗಿಸುವುದರೊಳಗಾಗಿ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಳ್ಳಬೇಕಾಯಿತು.

ಸ್ವಾಮಿ, ಈ ಒಂದು ಭವನದ ಅವಶ್ಯಕತೆ ಇರಲಿಲ್ಲವೇ ಎನ್ನುವ ಮಾತು ಬಂತು, ಅವಶ್ಯಕತೆಯಿದೆ, ಇನ್ನೂ ಬಹಳ ಮನೆಗಳ ಅವಶ್ಯಕತೆಯಿದೆ. ನಮ್ಮ ದೇಶದಲ್ಲಿ ವಾಸಕ್ಕೂ ಮನೆಗಳು ಬಹಳ ಕಡಿಮೆಯಿದೆ. ನಮಗೆ ಮನೆಗಳ ಕೊರತೆಯಿದೆ. ಬಹಳ ಮನೆಗಳು ಬೇಕು. ಈಗಲೂ ಈ ಭವನ ಕಟ್ಟಿರುವುದರಿಂದ ಸರ್ಕಾರಕ್ಕೆ ಅಭಾವವಿಲ್ಲ, ಎಲ್ಲ ಕಟ್ಟಡಗಳು ಆಗಿವೆ ಎಂದು ಹೇಳುವುದಿಲ್ಲ. ಇಂತಹ ಕಟ್ಟಡಗಳ ಅವಶ್ಯಕತೆ ಇತ್ತು ಇನ್ನೂ ಕಟ್ಟಡಗಳು ಆಗಬೇಕು. ಆದರೆ ಇದಕ್ಕೆ ಈಗ ೧೮೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ನಾಲ್ಕು ಅಂತಸ್ತನ್ನು ಹಾಕಿದ್ದಾರೆ. ಇನ್ನು, ಅವರು ಹೇಳಿರುವ ಪ್ರಕಾರ ರಾಜಮಹಾರಾಜರುಗಳಿಂದ ಪ್ರಭುತ್ವ ಜನತೆಯ ಕೈಗೆ ಬಂದಿದೆ. ಆದ್ದರಿಂದ ಈ ರಾಜಮಹಾರಾಜರುಗಳಿಂದ ಬಂದಿರತಕ್ಕ ಸಾರ್ವಭೌಮಾಧಿಕಾರವನ್ನು ಪ್ರತಿಬಿಂಬಿಸುವಂತಹ ಒಂದು ಲೆಜಿಸ್ಲೇಚರ್ ಕಟ್ಟಡ ಇವೆಲ್ಲ ಇರಬೇಕೆಂದು ಸೂಚಿಸಿದರು. ರಾಜ ಮಹಾರಾಜರುಗಳ ವಿರುದ್ಧ ನಾವು ಹೋರಾಡಿದುದು ನಾವು ರಾಜ ಮಹಾರಾಜರುಗಳು ಆಗುವುದಕ್ಕಲ್ಲ, ಮಹಾರಾಜರು, ಬೊಟ್ಟಂಗಿ, ಪೇಟ, ನವಿಲುಗರಿ ಮುಂತಾದುದನ್ನು ಹಾಕಿಕೊಂಡರೆ ಒಪ್ಪುತ್ತದೆ; ನಾನೂ ಅವರಂತೆ ಉಡುಪುಗಳನ್ನು ಹಾಕಿಕೊಂಡು ಬಂದರೆ ನನ್ನನ್ನು ಮಹಾರಾಜರು ಎನ್ನುತ್ತಾರೇನು? ವಿದೂಷಕ ಎಂದು ಕರೆಯುತ್ತಾರೆ. ಈಗ ನಮ್ಮ ಮಹಾರಾಜರು ದಸರಾದಲ್ಲಿ ಆನೆ ಮೇಲೆ ಅಂಬಾರಿ ಹಾಕಿ ಕುಳಿತು, ಜಂಬೂ ಸವಾರಿ ಹೋಗುತ್ತಾರೆ. ಅದನ್ನು ನೋಡಲು ಜನ ಹುಚ್ಚು ಹೊಳೆಯಂತೆ ಹೋಗಿ ನೋಡುತ್ತಾರೆ. ನಾನೂ ಅವರಂತೆ ಅಧಿಕಾರವಿದೆ ಎಂದು ಬೊಟ್ಟಂಗಿ ಮುಂತಾದುವನ್ನು ಹಾಕಿಕೊಂಡು ಹೋಗುತ್ತೇನೆಂದರೆ ಅದು ಒಪ್ಪುವಂತಹುದೇ? ಮಹಾರಾಜರ ಬದಲು ಮತ್ತೊಮ್ಮೆ ಮಹಾರಾಜರನ್ನು ಪಡೆಯಲು ನಾವು ಪ್ರಜಾಪ್ರಭುತ್ವಕ್ಕಾಗಿ ಹೋರಾಡಲಿಲ್ಲ. ರಾಜರುಗಳಿಗೂ ಮತ್ತು ಜನಗಳಿಗೂ ಸಮಾನವಾದ ಹಕ್ಕುಗಳು ದೊರೆಯುವಂತಹ ಪ್ರಜಾಪ್ರಭುತ್ವವನ್ನು ಗಳಿಸಲು ನಾವು ಹೋರಾಡಿದೆವು. ಶ್ರೀ ಹನುಮಂತಯ್ಯನವರು ಲಂಡನ್‌ ಮತ್ತು ಇನ್ನಿತರ ಕಡೆಗಳಲ್ಲಿರುವ ಕಟ್ಟಡಗಳನ್ನೆಲ್ಲಾ ನೋಡಿಕೊಂಡು ಯಾವುದೋ ಒಂದು ಭಾವನೆಯಿಂದ ಇಲ್ಲಿ ಇಷ್ಟು ಖರ್ಚುಮಾಡಿ ಕಟ್ಟಿರುವುದು ಪ್ರಾಮುಖ್ಯವಲ್ಲ, ಮತ್ತು ಹಾಗೆಯೇ ಈ ವರದಿಯ ಕೆಲವು ಆರೋಪಗಳಿಗೆ ಅಸಮಂಜಸವಾದ ಉತ್ತರಗಳನ್ನು ಕೊಟ್ಟಿದ್ದಾರೆ. ಅದಕ್ಕೆಲ್ಲಾ ನಾನು ಇಲ್ಲಿ ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ.

ಅವರು ತಮ್ಮನ್ನು ಜೇನಿಗೆ ಹೋಲಿಸಿಕೊಂಡು ಅದರಂತೆ ಮಧುರವಾಗಿರಬೇಕೆಂದು ಹೇಳಿಕೊಂಡಿದ್ದಾರೆ. ಆದರೆ ಜೇನಿನಲ್ಲಿರುವ ಕೊಂಡಿಯನ್ನು ಎಂದರೆ ಕಚ್ಚುವ ಕೊಂಡಿಯನ್ನು ಅವರು ಕಾಣಲಿಲ್ಲವೆಂದು ತೋರುತ್ತದೆ. ಜೇನಿಗೆ ಕಚ್ಚುವಂತಹ ಕೊಂಡಿಯಿದೆಯಲ್ಲ, ಅದು ಇವರಿಗೆ ಬಹಳವಾಗಿದೆ. ಜೇನು ಮಧುವನ್ನೇನೋ ತಯಾರಿಸುತ್ತದೆ. ಆದರೆ ಕಚ್ಚುತ್ತಾ ಹೋದರೆ ಗತಿಯೇನು? ಹಾಗೆಯೇ ನಾನು ಮತ್ತು ಶ್ರೀ ಮುಲ್ಕಾ ಗೋವಿಂದರೆಡ್ಡಿಯವರು ಕಚ್ಚಿಸಿಕೊಂಡಿದ್ದೇವೆ. ಭೇಟಿಯ ಕಾರ್ಯಕ್ರಮವನ್ನು ಗೊತ್ತುಮಾಡಿ ಇವರಿದ್ದಕುಮಾರ ಕೃಪಾಕ್ಕೆ ಹೋದಾಗ ಏನು ಬಂದಿರಿ ಎಂದು ಮಾತನಾಡಿಸಿ ಕಳುಹಿಸಿದ್ದಾರೆ. ಶ್ರೀ ನಿಜಲಿಂಗಪ್ಪನವರು ನಾಯಕರಾದ ಮೇಲೆ ತಮ್ಮನ್ನು ಮಾತನಾಡಿಸಲಿಲ್ಲ ಎಂದು ಹೇಳಿದರು. ತಾವು ಹೇಗೆ ನಡೆದುಕೊಂಡರೆಂಬುದನ್ನು ಯೋಚಿಸಲಿಲ್ಲ. ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ. ಅವರ ವಿಷಯವಾಗಿ ನಾನು ಇಷ್ಟು ಹೇಳಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಅವರು ಹೇಗೆ ವರ್ತಿಸಬೇಕು ಎನ್ನುವುದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು.

ಅವರ ಬಗ್ಗೆ ನನಗೆ ಅಭಿಮಾನವಿದೆ, ಸಹಾನುಭೂತಿಯಿದೆ. ಅದೆಲ್ಲ ನಿಜ. ಆದರೆ ಇಂದು ಈ ರೀತಿ ಅವರು ಮಾಡಿರುವುದೇ ಸರಿ ಎಂದು ಹೇಳಿಕೊಳ್ಳುವುದಕ್ಕೆ ಹೋಗಬಾರದು. ಆದ್ದರಿಂದ ಈ ರೀತಿ ಹೇಳಿಕೆಗಳನ್ನು ಕೊಟ್ಟು ಹಣ ಪೋಲಾಗಿಲ್ಲ ಎಂದು ಹೇಳುವುದು ಅಸಾಧ್ಯವಾದ ಮಾತು. ಅವರೇ ಹೇಳಿದ ಹಾಗೆ ಇದಕ್ಕೆ ಸಂಬಂಧಪಟ್ಟ ಇಂಜಿನೀಯರುಗಳಿಂದ ಇನ್ನೂ ವರದಿಯು ಅವರ ಕೈಗೆ ಬಂದಿಲ್ಲ. ಅವರು ಹೇಳಿರುವ ಪ್ರಕಾರ ದೇಶದಲ್ಲಿರುವ ಭದ್ರಾ ಮುಂತಾದ ಇಂತಹ ಪ್ರಾಜೆಕ್ಟ್‌ಗಳು ಏನೇನು ನಡೆಯುತ್ತಿವೆಯೋ ಅವಕ್ಕೆಲ್ಲ ಎನ್‌ಕ್ವೈರಿ ಕಮಿಟಿಗಳನ್ನು ಸ್ಥಾಪನೆ ಮಾಡಬೇಕು. ಅಲ್ಲಿ ಯಾವ ರೀತಿ ಎಸ್ಟಿಮೇಟ್ಸ್‌ ಪ್ರಕಾರ ಖರ್ಚಾಗುತ್ತದೆ, ಇಲ್ಲಾ – ಅಲ್ಲಿಯೂ ಹಣ ಪೋಲಾಗುತ್ತಿದೆಯೇ, ಎಂಬುದನ್ನು ಪರಿಶೀಲಿಸಿ, ಹಾಗಿದ್ದರೆ ಅದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಯಾವ ಕೆಲಸವೇ ಆಗಲಿ ಅದರ ಮೇಲೆ ಸಂಪೂರ್ಣ ಹತೋಟಿಯಿರಬೇಕು. ಇಷ್ಟೆಲ್ಲ ಹತೋಟಿ ಇದ್ದರೆ ರಿತಿ ಆಗುತ್ತದೆಯೇ? ನಮಗೆ ಬೇಕಾಗಿರುವುದು ಇಷ್ಟೇ: ಹಣಕಾಸು ಸರಿಯಾದ ರೀತಿಯಲ್ಲಿ ಖರ್ಚಾಗುತ್ತದೆಯೇ ಅಥವಾ ಯಾವ ರೀತಿಯಾದರೂ ಪೋಲಾಗುತ್ತಿದೆಯೇ ಇವೆಲ್ಲ ಬಹಳ ಮುಖ್ಯವಾದ ಅಂಶಗಳು.

ಇನ್ನು ಅವರು ಮಾತನಾಡುತ್ತ ಸಾಲ, ಬಡ್ಡಿ ವಿಷಯ ಎಲ್ಲ ಮಾತನಾಡಿದರು. ವಿಧಾನ ಸೌಧದ ಬಗ್ಗೆ ದೊಡ್ಡವರು ಕೂಡ ಕಾಗದ ಬರೆದಿದ್ದಾರೆ ಎಂದು ಹೇಳಿದರೆ. ಇಂಥ ಡಿಫೆನ್ಸನ್ನು ಅವರು ಕೊಡಬಾರದು ಎಂದು ನನಗನ್ನಿಸುತ್ತದೆ. ಕಂಟ್ರಾಕ್ಟ್‌ಗಳ ವಿಷಯಕ್ಕೆ ಹೋದರೆ ಅದು ದೊಡ್ಡ ಕಥೆ. ದೊಡ್ಡವರ ಹತ್ತಿರಕ್ಕೆ ಇವರು ಹೋಗಿ ಆ ರೀತಿ ಬರೆಸಿಕೊಂಡು ಬಂದರು ಎಂದು ನಾನು ಹೇಳಬಹುದೇ? ಅಥವಾ ಅವರೇ ತಾನೇ ತಾನಾಗಿ ಬರೆದುಕೊಟ್ಟರೆ?

ನಮಗೆ ಬೇಕಾದುದು ಮುಖ್ಯವಾಗಿ ಹಣಕಾಸಿನ ಮೇಲೆ ಹಿಡಿತ ಮತ್ತು ಲೆಕ್ಕಪತ್ರಗಳು. ಅದನ್ನು ಅವರೇ ಹೇಳುತ್ತಾರೆ, Accounts up to date ಆಗಿ ಇರುವ ಬಗ್ಗೆ ಶ್ರೀ ಮುನಿಯಪ್ಪನವರು ಅಚಾತುರ್ಯತೆ ತೋರಿಸಿದುದರಿಂದ ಈ ದಿವಸ ಇಷ್ಟು ಕೆಲಸ ಮಾಡಿಯೂ ನಮಗೆ ಬಹಳ ಕಷ್ಟವಾಗಿದೆ. ಡಿಫೆಂಡ್‌ ಮಾಡಿಕೊಳ್ಳುವುದು ಎಂದು ಹಗಲಿರುಳೂ ಕೆಲಸ ಮಾಡುತ್ತಿದ್ದರು, ಭಾನುವಾರವೂ ಕೆಲಸ ಮಾಡುತ್ತಿದ್ದರು: ನಾನೂ ಕೂಡ ಇಲ್ಲಿ ಇರುತ್ತಿದ್ದೆ ಎಂದೂ ಹೇಳಿದ್ದಾರೆ, ಅವರು ಶ್ರಮಪಟ್ಟಿಲ್ಲವೆಂದು ಹೇಳುವುದಿಲ್ಲ. ಶ್ರಮ ಪಟ್ಟಿದ್ದಾರೆ. ಐದು ವರ್ಷದಲ್ಲಿ ಆಗುವ ಕೆಲಸವನ್ನು ಎರಡು ವರ್ಷದಲ್ಲಿ ಮಾಡಿರಬಹುದು. ಬಹಳ ಮುತುವರ್ಜಿವಹಿಸಿ, ತಮ್ಮ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಎಷ್ಟು ಮುತುವರ್ಜಿವಹಿಸಬೇಕೋ ಅಷ್ಟೆಲ್ಲ ವಹಿಸಿರಬಹುದು. ದೇಶದ ಹಿತದೃಷ್ಟಿಯಿಂದಲೂ ಮಾಡಿದ್ದಾರೆಂದು ಒಪ್ಪಿಕೊಳ್ಳೊಣ. ಅವರ ಬಗ್ಗೆ ಯಾರದೂ ಅಭ್ಯಂತರವಿಲ್ಲ. ಅದನ್ನು ಯಾರು ಪ್ರಶ್ನೆ ಮಾಡುವುದಕ್ಕೂ ಹೋಗುವುದಿಲ್ಲ. We are not questoning their bonafides or intentions, ಆದರೆ ಯಾವ ಮಾರ್ಗದಲ್ಲಿ ಅವರು ಮುಂದುವರಿದು, ಏನು ಮಾಡಿದರು ಎನ್ನುವುದೇ ಬಹಳ ಮುಖ್ಯ. ಅಕೌಂಟ್ಸ್ ಇಟ್ಟಿಲ್ಲವೆನ್ನುವುದೂ ದೊಡ್ಡ ಲೋಪ. ಅಕೌಂಟ್ಸ್ ಇಡದೆ ಇರುವುದು, ಇಂಥದ್ದನ್ನೆಲ್ಲ ಮಾಡಿದರೆ ಭಾರಿ ಭಾರಿ ಕೆಲಸಗಳನ್ನು ಮಾಡುವಾಗ ದೇಶದ ಹಣ ಪೋಲಾಗಿ ಲೆಕ್ಕಸಿಕ್ಕದೆ ಹೋದರೆ, ಅದಕ್ಕಿಂತ ಅಪರಾಧ ಮತ್ತೊಂದು ಇರುವುದಿಲ್ಲ. ಆದುದರಿಂದ ಇಂಥವುಗಳು ಮುಂದೆ ನಡೆದುಕೊಂಡು ಹೋಗದಂತೆ ಬಹಳ ಎಚ್ಚರಿಕೆಯಿಂದ ಇರಬೇಕು.

ಟ್ರಕ್ಕುಗಳ ವಿಷಯ ಹೇಳುತ್ತಿದ್ದರು. ಈ ಟ್ರಾನ್ಸಾಕ್ಸನ ಬಗ್ಗೆ ಯಾರೋ ಒಬ್ಬ ದೊಡ್ದವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅದನ್ನು ಈ ಸಮಿತಿಯವರು ಪ್ರಶ್ನೆ ಮಾಡಿಬಿಟ್ಟಿದ್ದಾರಲ್ಲ ಎಂದು ವಿಷಾದವನ್ನು ಸೂಚಿಸಿದರು.

ಅದು ಅಭಿಪ್ರಾಯದ ಮಾತು. ಆ ಟ್ರಾನ್ಸಾಕ್ಸನ್ ಬಹಳ ಲಾಭದಾಯಕವಾಗಿತ್ತು ಎಂದು ಯಾರೋ ಒಬ್ಬರು ಹೇಳಿರಬಹುದು. ಲಾಭದಾಯಕವಲ್ಲ ಎಂದು ಮತ್ತೊಬ್ಬರು ಅಭಿಪ್ರಾಯಪಡಬಹುದು. ಮತ್ತೆ ಸಮಿತಿಯವರು ಒಂದು ಒಳ್ಳೆಯ ಮಾತನ್ನೂ ಆಡಿಲ್ಲ, ಏಕ ಮುಖವಾದ ಅಭಿಪ್ರಾಯ ಕೊಟ್ಟರು ಎಂದು ಹೇಳಿದರು. ಯಾವಾಗ ಕಮಿಟಿಯವರು ಇಲ್ಲಿ ತಪ್ಪುಗಳು ನಡೆದಿವೆ, ಹುಡುಕಬೇಕು ಎಂದು ಹೊರಟರೋ ಅದರ ಬಗ್ಗೆ ಒಳ್ಳೆಯ ಮಾತನ್ನು ಆಡುವುದೆಂತು? ಇದಕ್ಕೆ ಮತ್ತೆ ಉದಾಹರಣೆ ಕೊಡಬೇಕಾಗುತ್ತದೆ. ಬೇಲೂರು ಶ್ರೀನಿವಾಸಯ್ಯಂಗಾರ್ ಅವರ ಕೊಲೆ ಉದಾಹರಣೆ. ನಾವು ಬಹಳ ಕಷ್ಟಪಟ್ಟು ಕೊಲೆ ಮಾಡಿ, ಇಷ್ಟೆಲ್ಲ ಮಾಡಿದರೂ ನೇಣು ಹಾಕುವಾಗ ಒಂದು ಒಳ್ಳೆಯ ಮಾತು ಆಡಲಿಲ್ಲವಲ್ಲಾ ಎಂದರೆ ಕೊಲೆ ಮಾಡಿದವರ ಬಗ್ಗೆ ಏನು ಹೇಳುವುದಕ್ಕಾಗುತ್ತದೆ? ಸಮಿತಿಯನ್ನು ನೇಮಕ ಮಾಡಿರುವುದು ಹಣ ಪೋಲಾಗಿದೆಯೇ, ಲೆಕ್ಕ ಸರಿಯಾಗಿದೆಯೇ ಇಲ್ಲವೇ ಇಂಥದನ್ನೆಲ್ಲ ನೋಡಿ ಉಳಿತಾಯ ಮಾಡುವುದಕ್ಕೆ ಸಾಧ್ಯವಿದ್ದರೆ ಉಳಿಸುವ ಮಾರ್ಗಗಳನ್ನು ತಿಳಿಸಲು, ಸಮಿತಿಯವರು ಪ್ರಶಂಸೆ ಮಾಡುವುದಕ್ಕೆ ಹೊರಟರೆ ಬಹಳ ಚೆನ್ನಾಗಿ ಮಾಡಿದ್ದೀರಿ, ಇದು ಚೆನ್ನಾಗಿದೆ, ಅದು ಚೆನ್ನಾಗಿದೆ, ಖರ್ಚು ಚೆನ್ನಾಗಿದೆ ಎಂದು ಹೇಳುವುದಕ್ಕೆ ಹೊರಟರೆ, ಆಗ ಇದು ಎರಡು ಮುಖವಾದುದೋ ಅಥವಾ ಏಕಮುಖವಾದುದೋ? ಯಾವಾಗ ಇಂಥ ಕೆಲಸ ಮಾಡುವುದಕ್ಕೆ ಅವರನ್ನು ನಿಯಮಿಸಿದ್ದೇವೆಯೋ ಅವರು ಅದನ್ನು ಮಾಡಲೇಬೇಕು.

ಸಮಿತಿಯವರು ತಮ್ಮ ವ್ಯಾಪ್ತಿಮೀರಿ ಹೋಗಿದ್ದಾರೆ ಮತ್ತು ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ಇರುವುದಕ್ಕಿಂತ ಬಹುದೂರ ಹೋಗಿದ್ದಾರೆ ಎಂದು ಹೇಳಿದರು. ಅದು ಅವರ ಒಂದು ತೀರ್ಮಾನ, ಒಂದು ಕರ್ತವ್ಯ ಪರಿಪಾಲನೆಯ ಪ್ರಶ್ನೆಯಾಗುತ್ತದೆ. ಆದುದರಿಂದ ನನಗೆ ಸಾರ್ವಜನಿಕ ಹಣಕಾಸು ಖರ್ಚು ಮಾಡುವ ಬಗ್ಗೆ ಮತ್ತು ಇಂಥ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಕಟ್ಟುವ ಬಗೆಗೆ, ತೋರುವುದು ಏನೆಂದರೆ, ಮುಖ್ಯವಾಗಿ ಹಿಡಿತ ಚೆನ್ನಾಗಿರಬೇಕು. ಯಾವಾಗಲೂ ನಾವು ಯಾವುದೋ ಒಂದು ಕಾಲದಲ್ಲಿದ್ದೇವೆ ಎಂದು ನೆನಪು ಮಾಡಿಕೊಂಡು ಅದರಂತೆ ಮುಂದುವರಿಯುವುದಕ್ಕೆ ಹೋಗಬಾರದು. ಹಾಗೆ ಮಾಡಿರುವುದರಿಂದ ದೇಶಕ್ಕೂ ಹಾನಿಯನ್ನು ತಂದು ಮತ್ತು ದೇಶದ ಹಿತವನ್ನು ಹಾನಿಮಾಡಿ, ಆ ರೀತಿ ಒಂದು ನಷ್ಟಕ್ಕೆ ದೇಶವನ್ನು ಗುರಿಪಡಿಸಬಾರದು ಎನ್ನುವುದೇ ನಮ್ಮ ಬಹಳ ದೊಡ್ಡ ಆಗ್ರಹವೆಂದು ಹೇಳುತ್ತೇನೆ.

ಆಡಳಿತ ಭಾಷೆಯಾಗಿ ಕನ್ನಡ

ಸೆಪ್ಟೆಂಬರ್ ೧೯೬೨

ನಾನು ಈ ರಾಜ್ಯದಲ್ಲಿ ಆಡಳಿತ ಭಾಷೆ ಕಡ್ಡಾಯವಾಗಿ ಕನ್ನಡ ಆಗಬೇಕು ಎನ್ನುವ ಬಗ್ಗೆ ಹೇಳಿದಂಥ ಕೆಲವು ಶಬ್ದಗಳನ್ನು ವಿಸ್ತರಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ. ಮಸೂದೆ ಮಾನ್ಯ ಸದಸ್ಯರಾದ ಎಸ್. ಎಂ. ಕೃಷ್ಣ ಅವರು ಹೇಳಿದ ಹಾಗೆ ಸರಳ ಮತ್ತು ಸುಂದರವಾಗಿಲ್ಲ. ಅವರಿಗೆ ಹಾಗೆ ಕಂಡಿದ್ದರೆ ನನಗೆ ಕಾಂಚನ ಮೃಗದ ರೂಪದಲ್ಲಿ ಇರುವ ಮಾರೀಚನ ಹಾಗೆ ಕಾಣುತ್ತಾ ಇದೆ. ಈ ವಿಷಯವನ್ನು ಚರ್ಚೆ ಮಾಡುವುದು ಒಳ್ಳೆಯದು. ಇದರೊಳಗೆ ಹೇಗೆ ಆ ದೃಷ್ಟಿ ಕಾಣುತ್ತದೆ ಎಂದು ನನ್ನ ಅಭಿಪ್ರಾಯವನ್ನು ನಾನು ಸಭೆಯ ಮುಂದೆ ಇಡುತ್ತೇನೆ.

ಕನ್ನಡದಲ್ಲಿ ಇನ್ನೂ ಆಗಬೇಕಾದ ಕೆಲಸ ಬಹಳ ಇದೆ. ಇದನ್ನು ಅನೇಕ ಮಾನ್ಯ ಸದಸ್ಯರು ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ಒಂದು ವಿಷಯದ ಬಗ್ಗೆ ನಾನು ಒಂದೆರಡು ಮಾತುಗಳನ್ನು ಹೇಳುತ್ತೇನೆ. ನಾವು ಎಲ್ಲದಕ್ಕೂ ಮೊದಲು ಮನಸ್ಸು ಮಾಡಬೇಕು. ಏಕೆಂದರೆ ಒಲ್ಲದ ಗಂಡನಿಗೇ ಮೊಸರಿನಲ್ಲಿ ಕಲ್ಲು ಸಿಕ್ಕುವುದು. ಕನ್ನಡದಲ್ಲಿ ಏನಾದರೂ ಹೇಳಿದರೆ ಅದಕ್ಕೆ ಅರ್ಥವೇ ಇಲ್ಲವೇನೋ ಎಂಬಂತೆ ಕೆಲವರ ಭಾವನೆ ಇದೆ. ಅಂಥವರು ಇಂಗ್ಲಿಷ್ ಭಾಷೆಯಿಂದಲೇ ಬೆಳೆದು, ಇಂಗ್ಲಿಷ್ ನೀರು ಕುಡಿದು, ಇಂಗ್ಲಿಷ್ ಊಟ ಮಾಡಿ, ಅದರಲ್ಲಿಯೇ ಮಲಗುತ್ತಿರುವುದು ಬಹಳ ವಿಚಿತ್ರ ಸನ್ನಿವೇಶ. ಇದು ಸನ್ನಿವೇಶದ ತಪ್ಪು; ಅವರ ಮೇಲೆ ತಪ್ಪು ಆರೋಪಿಸುವುದಿಲ್ಲ. ಕಾಲಕ್ಕೆ ತಕ್ಕ ಹಾಗೆ ಅಂಥವರು ತಮ್ಮ ಮನೋಭಾವನೆ ಬದಲಾಯಿಸುವುದಿಲ್ಲವೇ ಅವರ ಬಗ್ಗೆ ನಾವು ಬಹಳ ವಿಷಾದಪಡಬೇಕಾಗಿದೆ. ಇವತ್ತು ಸರಕಾರದವರು ಯಾವುದೋ ಒಂದು ವಿಷಯ ಬಂದರೂ ತುರ್ತುಪರಿಸ್ಥಿತಿಯನ್ನು ಮುಂದೆ ತರುತ್ತಿದ್ದಾರೆ. ಆದರೆ, ಮಂತ್ರಿಮಂಡಳವನ್ನು ಸಣ್ಣದು ಮಾಡಬೇಕೆಂದು ವಿಷಯ ಬಂದಾಗ ಮಾತ್ರ ತುರ್ತುಪರಿಸ್ಥಿತಿ ಅವರ ಮುಂದೆ ಬರುವುದಿಲ್ಲ. ಕನ್ನಡದಲ್ಲಿ ಶಬ್ದಕೋಶ, ವಿಶ್ವಕೋಶ ಸಿದ್ಧ ಮಾಡತಕ್ಕದ್ದು ಇದೆ. ಇದು ಸಂಪೂರ್ಣವಾಗಿ ನಿಂತಿದೆ. ರೀತಿ ಮಾಡೆ ಅದಕ್ಕೆ ಹಣ ಒದಗಿಸಬೇಕು. ತುರ್ತುಪರಿಸ್ಥಿತಿ ಮುಂದೆಮಾಡಿ ಕೆಲಸ ಕುಂಠಿತಗೊಳಿಸಬಾರದು. ಟೈಪ್‌ರೈಟರ್ ವಿಷಯವೂ ಅಷ್ಟೇ. ಹೀಗೆ ಅನೇಕ ಸಾಧನೆಗಳನ್ನು ಸರಕಾರ ಸಿದ್ಧಮಾಡಬೇಕಾಗಿದೆ. ಟೆಕ್ಸ್ಟ್‌ಬುಕ್ಸ್ ವಿಷಯವೂ ಇದೆ. ಇದರಲ್ಲಿ ವ್ಯಾಪಾರದ ದೃಷ್ಟಿಗೆ ಅವಕಾಶ ಕೊಡಬಾರದು ನಮ್ಮ ಕನ್ನಡ ರಾಜ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ – ಪ್ರೌಢ ವಿದ್ಯಾಭ್ಯಾಸ, ವಿಶ್ವವಿದ್ಯಾನಿಲಯದ ವಿದ್ಯಾಭ್ಯಾಸ – ಕನ್ನಡ ಮಾಧ್ಯಮದ ಮೂಲಕವೇ ಆಗಬೇಕು ಎಂಬುದು ನಮ್ಮ ಆಶಯ. ಈ ತತ್ವವನ್ನು ಎಲ್ಲ ಬಾಷಾತಜ್ಞರು ಒಪ್ಪುತ್ತಾರೆ. ಮಾತೃಭಾಷೆಯಲ್ಲಿ ಆಗುವಷ್ಟು ವಿಷಯ ಸಂಗ್ರಹಣೆ ಬೇರೆ ಭಾಷೆಯಲ್ಲಿ ಆಗುವುದು ಸಾಧ್ಯವಿಲ್ಲ. ಆದುದರಿಂದ ಇದನ್ನು ಮೊದಲು ಕಾರ್ಯಗತ ಮಾಡಬೇಕಾಗಿದೆ. ಇದುವರೆಗೆ ಆಗದೇ ಇರುವುದು ನಮ್ಮ ದುರದೃಷ್ಟ. ಶ್ರೀ ಕೆ.ವಿ. ಪುಟ್ಟಪ್ಪನವರು ವಿಶ್ಯವಿದ್ಯಾನಿಲಯದ ವೈಸ್ ಚಾನ್ಸಲರ್ ಆಗಿದ್ದಾಗ್ಗೆ ಕನ್ನಡವು ಶಿಕ್ಷಣ ಮಾಧ್ಯಮಾವಾಗಬೇಕು ಎಂದು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರು. ಶ್ರೀಮತಿ ನಾಗರತ್ನಮ್ಮ ನವರು ಮೈಸೂರು ಮಹಾರಾಣಿ ಕಾಲೇಜ್ ಬಗ್ಗೆ ಒಂದು ಮಾತನ್ನು ಹೇಳಿದರು. ೧೨ ಜನ ವಿದ್ಯಾರ್ಥಿನಿಯರು ಕನ್ನಡ ಮಾಧ್ಯಮದ ಮೂಲಕ ಪರೀಕ್ಷೆಗೆ ಕುಳಿತ ಎಲ್ಲರೂ ಬಿ.ಎ ಪಾಸ್ ಆಗಿದ್ದಾರೆ. ಕನ್ನಡ ಮಾಧ್ಯಮ ತೆಗೆದುಕೊಂಡವರಿಗೆ ಶಿಕ್ಷಣ ಮುಂದುವರಿಸಲು ಆವಕಾಶ ಇಲ್ಲದ ಕಾರಣ ಬೇರೆ ಕಡೆ ಕಳಿಸುವುದಕ್ಕೆ ಒತ್ತಾಯ ತಂದಿದ್ದಾರೆಂದು ಕೇಳಿದ್ದೇನೆ. ಈ ರೀತಿ ಮಾಡುವುದರಿಂದ ಕನ್ನಡಕ್ಕೆ ದ್ರೋಹ ಮಾಡಿದಂತಾಗುತ್ತದೆ. ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸುತ್ತಿದ್ದಾರೆ. ಈ ರೀತಿ ಆತಂಕ ಒಡ್ಡುವುದು ಸರಿಯಲ್ಲ. ಕನ್ನಡ ಭಾಷೆಗೆ ಕನ್ನಡ ಜನರಿಗೆ ದ್ರೋಹ ಬಗೆದು ಕೆಟ್ಟತನ ಮಾಡುತ್ತಿದ್ದಾರೆಂದು ಬಹಳ ವ್ಯಸನದಿಂದ ಹೇಳಬೇಕಾಗಿದೆ. ಹೀಗಿರುವಾಗ ಸರಕಾರ ಕಣ್ಣು ಮುಚ್ಚಿ ಕುಳಿತು ಕೊಳ್ಳಬಾರದು.