ಏಕೀಕೃತ ಕರ್ನಾಟಕ

ಏಪ್ರಿಲ್೧೯೫೬

ಅನೇಕ ವರ್ಷಗಳಿಂದ ನಾವು ಆಶಿಸಿದ್ದ ಕರ್ನಾಟಕ ಪ್ರಾಂತ್ಯ ಈ ದಿನ ರೂಪಿತವಾಗುವ ಕಾಲ ಸನ್ನಿಹಿತವಾಗಿದೆ. ಬರುವ ಅಕ್ಟೋಬರ್ ಒಂದನೆಯ ತಾರೀಖು ಈ ಮಸೂದೆ ಕಾನೂನಾಗಿ ಅಂದು ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬರಲಿದೆ. ಒಂದು ವಿಷಯವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಕರ್ನಾಟಕ ಪ್ರಾಂತ್ಯದ ಉದ್ದೇಶವನ್ನು ಈಡೇರಿಸಿಕೊಳ್ಳುವ ಸಲುವಾಗಿ ಈ ನಾಡಿನಲ್ಲಿ ಯಾವ ದುರಂತದ ಕಾರ್ಯವಾಗಲಿ; ಯಾವ ರಕ್ತಪಾತವಾಗಲಿ ನಡೆಯದೇ ಇದ್ದುದು ಒಂದು ದೊಡ್ಡ ಆದರ್ಶದ ಮಾತಾಗಿದೆ.

ಕರ್ನಾಟಕದ ರಾಜ್ಯ ಅಸ್ತಿತ್ವಕ್ಕೆ ಬರುತ್ತಿದ್ದರೂ ಕೂಡ ಈ ರಾಜ್ಯ ಅಪೂರ್ಣವಾಗಿ ನಮಗೆ ಇಂದು ಬರುತ್ತಿದೆಯೆಂದು ನಾವು ಹೇಳಬೇಕಾಗಿದೆ. ಏಕೆಂದರೆ ಸ್ಥೂಲವಾಗಿ, ಸಾಮಾನ್ಯವಾಗಿ ನಾವು ಈ ಹೊಸ ಪ್ರಾಂತ್ಯಗಳನ್ನು ಭಾಷೆಯ ಆಧಾರದ ಮೇಲೆ ರಚಿಸುತ್ತಿದ್ದೇವೆ. ಸಂಪೂರ್ಣವಾಗಿ ಅಕ್ಷರಶಃ ಭಾಷೆಯನ್ನೇ ನಾವು ಆಧಾರವಾಗಿ ಇಟ್ಟುಕೊಳ್ಳದೆ ಹೋದಾಗ್ಯೂ ಕೂಡ ಭಾವನೆಯಲ್ಲಿ ಮತ್ತು ಸ್ಥೂಲವಾಗಿ ಭಾಷೆಯ ಆಧಾರದ ಮೇಲೆಯೇ ಎಲ್ಲ ಪ್ರಾಂತ್ಯಗಳು ರೂಪುಗೊಂಡಿವೆಯೆಂದು ಹೇಳಿದರೆ ಅದರಲ್ಲಿ ಯಾವ ತಪ್ಪೂ ಇಲ್ಲ, ಉತ್ಪ್ರೇಕ್ಷೆಯೂ ಇಲ್ಲ ಎಂದು ನಾನು ತಿಳಿದಿದ್ದೇನೆ.

ಮೊದಲಿನಿಂದಲೂ ಕನ್ನಡ ರಾಜ್ಯದಲ್ಲಿ ಸೇರಬೇಕೆಂದು ನಾನಾ ವಿಧವಾಗಿ ಅಪೇಕ್ಷೆಪಟ್ಟಿರುವ ಕನ್ನಡ ಭಾಗಗಳನ್ನು ಈ ಮಸೂದೆಯಲ್ಲಿ ಕೈಬಿಟ್ಟಿರುವುದು ನ್ಯಾಯವಾದುದಲ್ಲ. ಆದ್ದರಿಂದ ಅಂತಹ ಪ್ರದೇಶಗಳನ್ನು ಈ ಮಸೂದೆಯಲ್ಲಿ ಅಡಕಮಾಡಿ ಮುಂದೆ ಅಸ್ತಿತ್ವಕ್ಕೆ ಬರತಕ್ಕ ಕರ್ನಾಟಕ ರಾಜ್ಯದಲ್ಲಿ ಆ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು. ನನಗೆ ಯಾವೊಂದು ಅನುಮಾನವೂ ಇಲ್ಲದಿರುವ ಕೆಲವು ಕನ್ನಡ ಪ್ರದೇಶಗಳ ಉದಾಹರಣೆಯನ್ನು ಇಲ್ಲಿ ಹೇಳುತ್ತೇನೆ. ಇಂದು ಕಾಸರಗೋಡಿನಲ್ಲಿ ಚಂದ್ರಗಿರಿ ನದಿಯ ಪಶ್ಚಿಮ ಭಾಗಕ್ಕೆ ಬರುವ ಪ್ರದೇಶ ದಕ್ಷಿಣ ಕನ್ನಡಕ್ಕೆ ಹತ್ತಿಕೊಂಡಿರುವ ಭಾಗ, ಉತ್ತರ ಕನ್ನಡ ಪ್ರದೇಶಕ್ಕೆ ಸೇರುವ ಭಾಗ, ತಾಳವಾಡಿ ಫಿರ್ಕಾ, ಹೊಸೂರು, ನೀಲಗಿರಿ ಮುಂತಾದ ಕಡೆ ಇರುವ ಕನ್ನಡ ಪ್ರದೇಶಗಳು ಈ ರಾಜ್ಯಕ್ಕೆ ಸೇರಬೇಕಾಗಿವೆ. ಮತ್ತೊಂದು ಎದ್ದು ಕಾಣತಕ್ಕ ಕನ್ನಡ ಭಾಗವಾದ ಮಡಕಸಿರಾ, ಅದಕ್ಕೆ ಒಂದು ಎನ್‌ಕ್ಲೇವ್‌ ರೀತಿಯಲ್ಲಿರುವ ಪ್ರದೇಶಗಳು ಇವೆ. ಅವನ್ನೂ ಕೂಡ ಕನ್ನಡ ರಾಜ್ಯದಲ್ಲೇ ಸೇರಿಸಬೇಕು. ಹೀಗೆ ಕೆಲವು ಕನ್ನಡ ರಾಜ್ಯಕ್ಕೆ ಸೇರಬೇಕಾದ ಭಾಗಗಳು ಈ ದಿವಸ ಸೇರದಿರುವುದರಿಂದ ಅಷ್ಟರಮಟ್ಟಿಗೆ ಅದು ಅಪೂರ್ಣವಾಗಿದೆಯೆಂದು ಹೇಳಬೇಕಾಗಿದೆ.

ಎಸ್‌.ಆರ್.ಸಿ. ವರದಿಯಲ್ಲಿ ಹೇಳಿದ್ದ ಪ್ರಕಾರ ಮುಂದೆ ರಚನೆಯಾಗುವ ಹೊಸ ಪ್ರಾಂತ್ಯಕ್ಕೆ ಕರ್ನಾಟಕ ಎಂದು ಹೆಸರಿಡಬೇಕೆಂದಿತ್ತು. ಆದರೆ ಈ ರೀತಿ ಒಂದು ಹೆಸರನ್ನಿಟ್ಟರೆ ಮೈಸೂರಿನಲ್ಲಿ ಒಂದು ದೊಡ್ಡ ಚಳವಳಿಯೇ ಪ್ರಾರಂಭವಾಗುತ್ತದೆ, ಅದನ್ನು ತಡೆಗಟ್ಟಬೇಕೆಂಬ ಪರಿಣಾಮಕ್ಕಾಗಿ ಈಗ ಆ ಹೊಸ ರಾಜ್ಯಕ್ಕೂ ಕೂಡ ಈ ಮೈಸೂರೆಂಬ ಹೆಸರೇ ಇರಲಿ ಎಂದು ಇದನ್ನು ಕೊಡಲಾಗಿದೆ. ಆದರೆ ಕೆಲವರು ಈ ಹೆಸರಿನಲ್ಲೇನಿದೆ ಎಂದು ಹೇಳುತ್ತಿದ್ದಾರೆ. ಇದರ ಹಾಗೆ ಯಾರು ಹೆಸರಿನಲ್ಲೇನಿದೆ ಎಂದು ಹೇಳುತ್ತಿದ್ದಾರೋ ಅಂಥವರು. ಈ ಹೆಸರೇ ಇರಲಿ ಎಂದು ಹೇಳುವುದಕ್ಕೆ ಬದಲಾಗಿ, ನೂತನ ಪ್ರಾಂತ್ಯಕ್ಕೆ ಮೈಸೂರೆಂದು ಕರೆಯುವುದಕ್ಕೆ ಬದಲಾಗಿ ಕರ್ನಾಟಕ ಎಂದು ಹೆಸರಿಸುವುದಕ್ಕೆ ಅವರೇಕೆ ಒಪ್ಪುತ್ತಿಲ್ಲವೋ ಅದು ನನಗೆ ಅರ್ಥವಾಗುತ್ತಿಲ್ಲ. ಆದರೆ ಹೊರಗಡೆಯಿಂದ ಬರತಕ್ಕಂಥ ಜನರಿಗೆ ಈ ರೀತಿ ಮಾಡಿದ್ದರಿಂದ ಅವರಿಗೊಂದು ಅನುಮಾನ ಉಂಟಾಗಿ ಮನಸ್ಸಿನಲ್ಲಿ ಒಂದು ಕಸಿವಿಸಿಯಾಗಿರುತ್ತದೆ. ಯಾರು ಈ ಹೊಸ ರಾಜ್ಯ ನಿರ್ಮಾಣದ ಬಗ್ಗೆ ತಮ್ಮ ಪೂರ್ಣ ವಿರೋಧವನ್ನು ಸೂಚಿಸಿದ್ದರೋ ಅವರು ಮಾತ್ರ ಈಗ ಈ ಹೊಸ ರಾಜ್ಯಕ್ಕೆ ಮೈಸೂರೆಂದು ಹೆಸರಿಡಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಯಾವ ಅಭಿಪ್ರಾಯವೇನೇ ಇರಲಿ: ಮುಂದೆ ರಚಿತವಾಗಲಿರುವ ನೂತನ ಕನ್ನಡ ಪ್ರಾಂತ್ಯಕ್ಕೆ ಕರ್ನಾಟಕಎಂದು ಹೆಸರಿಡತಕ್ಕದ್ದೇ ಸರಿಯೆನ್ನುವುದು ನನ್ನ ಖಚಿತವಾದಂಥ ಅಭಿಪ್ರಾಯವಾಗಿದೆ. ಆದರೆ ಹೀಗೆ ಮುಂದೆ, ಪೂರ್ಣವಾಗಲಿರುವ ಒಂದು ಹೊಸ ರಾಜ್ಯಕ್ಕೆ ‘ಮೈಸೂರು’ ಎಂದು ಹೆಸರಿಡತಕ್ಕದ್ದರಿಂದಲೇ ಆ ಮೈಸೂರಿನ ಕೆಲವು ಜನರಿಗೆ ಬಹಳ ಸಂತೋಷವನ್ನು ಉಟುಮಾಡತಕ್ಕದ್ದಾಗಿದೆ ಎಂದು ಹೇಳುವ ಪಕ್ಷಕ್ಕೆ ನಾನು ಈ ಹೆಸರಿನ ಬಗ್ಗೆ ಅಂಥ ಒಂದು ಚಳಚಳಿಯನ್ನಾಗಲಿ ಅಥವಾ ಹೋರಾಟವನ್ನಾಗಲಿ ನಡೆಸತಕ್ಕ ಪ್ರಯತ್ನಕ್ಕೆ ಸಧ್ಯಕ್ಕೆ ಹೋಗುವುದಿಲ್ಲ.

ಖಾದಿ

೨೭ ಸೆಪ್ಟೆಂಬರ್ ೧೯೫೬

ನಾವು ಒಂದು ವಿಷಯವನ್ನು ಹೇಳಬೇಕಾಗಿದೆ. ಕೆಲವರು ಕಳ್ಳಭಟ್ಟಿ ತಯಾರು ಮಾಡುವವರು ಸಹ ಖಾದಿಯನ್ನು ಹಾಕುತ್ತಾರೆ (ನಗು) ಇವೊತ್ತು ‘ಖಾದಿ’ ವಿಚಾರವಾಗಿ ಚರ್ಚಿಸುತ್ತಿರುವುದೂ, ಬೋರ್ಡನ್ನು ರಚನೆಮಾಡುವುದೂ, ಖಾದಿ ಒಂದು ಉದ್ಯೋಗ, ಒಂದು ಗ್ರಾಮ ಕೈಗಾರಿಕೆ, ಒಂದು ಗೃಹ ಕೈಗಾರಿಕೆ, ಅದನ್ನು ನಡೆಸಿಕೊಂಡು ಹೋಗಬೇಕು ಮತ್ತು ಇತರ ಗ್ರಾಮ ಕೈಗಾರಿಕೆಗಳನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದು ಬೋರ್ಡನ್ನು ರಚನೆ ಮಾಡುವುದು ಸೂಕ್ತವಾದದ್ದು ಎನ್ನುವ ಅಂಶವನ್ನು ನಾವು ವಿಚಾರಮಾಡಿ ಅದಕ್ಕೆ ರೂಪವನ್ನು ಕೊಟ್ಟು ಬೋರ್ಡ್‌ರಚನೆ ಮಾಡಬೇಕಾಗಿದೆ. ಇದು ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವಾಗುತ್ತದೆ. ಆದರೆ ಕಾಂಗ್ರೆಸ್‌ ಮೊದಲಿನಿಂದಲೂ ಖಾದಿಯನ್ನು ತನ್ನ ಅಧಿಕೃತ ವೇಷಭೂಷಣವನ್ನಾಗಿ ಮಾಡಿಕೊಂಡು ಬಂದಿದ್ದರಿಂದ ಅದು ರಾಜಕೀಯ ಸಮಸ್ಯೆಯಾಗಿ ನಮ್ಮ ದೇಶದಲ್ಲಿ ಬಂದು ನಿಂತಿದೆ. ಖಾದಿಯನ್ನು ಹಾಕಿದವರೆಲ್ಲರೂ ಕಾಂಗ್ರೆಸ್ಸಿನವರು ಎಂದು ಆಪಾದನೆ ಮಾಡುವುದಕ್ಕೆ ಹೇಳುತ್ತಿಲ್ಲ. ಅಧಿಕಾರ ಬಂದ ಮೇಲೆ ಆಪಾದನೆಯಾಗುವುದಕ್ಕೆ ಕಾರಣವಾಯಿತು. ಕಾಂಗ್ರೆಸ್‌ಅಧಿಕಾರಕ್ಕೆ ಬಂದ ಮೇಲೆ ಖಾದಿಯನ್ನು ಹಾಕಿದವರೆಲ್ಲ ಸಾಮಾನ್ಯವಾಗಿ ಅಧಿಕಾರದಲ್ಲಿರತಕ್ಕ ವರ್ಗಕ್ಕೆ ಸೇರಿದವರು ಎಂದಾಗಿದೆ. ಖಾದಿ ಹಾಕುವುದು ಒಂದು Identification ಆದ ಹಾಗಾಗಿದೆ. ಕೆಲವರಿಗೆ ಖಾದಿ ಹಾಕಿದವರನ್ನು ನೋಡಿ ಭಯವೂ ಆಗುತ್ತದೆ. ಮತ್ತೆ ಕೆಲವರಿಗೆ ಸಿಟ್ಟು ಬರುತ್ತದೆ. ಸಿಟ್ಟು ಬರಲು ಕಾರಣವೇನೆಂದರೆ ಕೆಲವರು ಖಾದಿ ಹಾಕಿದವರು ತಪ್ಪು ಮಾಡಿರುತ್ತಾರೆ. ಕೆಲವರು ಬ್ಲಾಕ್‌ ಮಾರ್ಕೆಟ್‌ ವ್ಯಾಪಾರ ಮಾಡುತ್ತಿದ್ದರು ಮತ್ತೆ ಕೆಲವರು ಇನ್ನೂ ಏನೇನೋ ಮಾಡುತ್ತಿದ್ದರು. ಸರ್ಕಾರದ ಪಕ್ಷವೆಂದು ಇವೆಲ್ಲ ನಡೆಯುತ್ತವೆ. ಆದುದರಿಂದ ಜನರು ಸಾಮಾನ್ಯವಾಗಿ ಆ ಉಡುಪನ್ನು ಅನುಕರಣೆ ಮಾಡುವುದಕ್ಕೆ ಪ್ರಯತ್ನ ಮಾಡಿದರು. ಎಷ್ಟೋ ಜನ ಕಾಂಗ್ರೆಸ್ಸಿನವರು ಬಾರ್ ನಡೆಸುತ್ತಿದ್ದಾರೆ. It does not fit in. ಇವೆರಡು ಸರಿಹೊಂದುವುದಿಲ್ಲ. ಇವೆರಡೂ ಹೊಂದಿಕೊಂಡು ಹೋಗುವುದಕ್ಕೆ ಬಹಳ ಕಷ್ಟವಿದೆ. ನಾನು ಪರ್ಮಿಟ್‌ವಗೈರೆ ಅನುಕೂಲಗಳನ್ನು ಹೊಂದಲು ಖಾದಿ ಹಾಕುತ್ತಿದ್ದೇನೆಂದು ಎಷ್ಟೋಸಲ ಜನ ಆಡಿಕೊಂಡಿದ್ದನ್ನು ಕೇಳಿದ್ದೇನೆ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಜನರು ನನ್ನ ಕಡೆ ಬೆರಳು ತೋರಿಸಿಕೊಂಡು, ಧಾಂಡಿಗ ಹೋಗುತ್ತಿದ್ದಾನೆ; ಇವನು ಅಠಾರ ಕಛೇರಿಯಿಂದ ಬಂದ, ಯಾವುದೋ ಪರ್ಮಿಟ್ಟಿಗೆ ಹೊಂಚು ಹಾಕಿಕೊಂಡು, ಬೆಂಗಳೂರಿನಲ್ಲಿದ್ದಾನೆ ಮುಂತಾದ ಏನೇನೋ ಆರೋಪಗಳನ್ನು ಎಷ್ಟೋ ಸಲ ನನ್ನ ಕಿವಿಗೆ ಬೀಳುವ ಹಾಗೆ ಹೇಳಿದ್ದು ಉಂಟು. (ನಗು) ಆದುದರಿಂದ ಉಡುಪಿಗೆ ಗೌರವವೂ ಇದೆ. ವೇಷವನ್ನು ಕಂಡರೆ ಭಯವೂ ಇದೆ, ಬಟ್ಟೆಯನ್ನು ಹಾಕುವವರ ಬಗ್ಗೆ ಸಿಟ್ಟೂ ಬರುತ್ತದೆ ಮತ್ತು ಕುತ್ಸಿತ ಟೀಕೆಗಳಿಗೂ ಅವಕಾಶವಿದೆ. ಇದೂ ಬಹಳ ಗಮನಾರ್ಹವಾದ ವಿಷಯ ಮತ್ತು ಬೇರೆ ಸಮಯದಲ್ಲಿ ಚರ್ಚಿಸಬೇಕಾದ ವಿಷಯ.

ವಿದ್ಯಾರ್ಥಿ ಸಂಘ
(ಮೈಸೂರು ವಿಶ್ವವಿದ್ಯಾನಿಲಯದ ಮಸೂದೆಯ ಚರ್ಚೆ)

೧೮ ಅಕ್ಟೋಬರ್ ೧೯೫೬

ಈ ಮಸೂದೆಯಲ್ಲಿ ಒಂದು ವಿಷಯವನ್ನು ನಾನು ನೋಡಲಿಲ್ಲ. ಏನೆಂದರೆ ವಿದ್ಯಾರ್ಥಿ ಸಂಘಗಳಿಗೆ ಸಂಬಂಧಪಟ್ಟ ವಿಷಯ. ಇವುಗಳಿಗೆ ಯಾವ ಪ್ರಾವಿಷನ್‌ ಸಹ ಇಲ್ಲಿ ಮಾಡಿಲ್ಲ. ಯೂನಿಯನ್‌, ಅಸೋಸಿಯೇಷನ್‌; ಸಂಘಗಳು ಇತ್ಯಾದಿಗಳನ್ನು ಮಾಡುವುದಕ್ಕೆ ಈ ಮಸೂದೆಯಲ್ಲಿ ಯಾವ ಪ್ರಾವಿಷನ್ನೂ ಇಲ್ಲ. ಇದುವರೆಗೂ ವಿದ್ಯಾರ್ಥಿಗಳು ತಮ್ಮ ಸಂಘಟನೆಯನ್ನು ಒಂದು ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದರು. ಅವರು ತಮ್ಮಲ್ಲಿ ಒಂದು ಹೆಚ್ಚಿನ ಸಂಘಟನೆಯನ್ನು ನಡೆಸಿಕೊಂಡು ಹೋಗುವುದಕ್ಕೆ ಅವಕಾಶವಾಗಿತ್ತು. ಇವೊತ್ತು ಸಾವಿರಾರು ಜನ ವಿದ್ಯಾರ್ಥಿಗಳು ಒಂದೊಂದು ಕಾಲೇಜಿನಲ್ಲಿ ಓದುತ್ತಾ ಇರುತ್ತಾರೆ. ಅವರು ಪ್ರತ್ಯೇಕ ಪ್ರತ್ಯೇಕ ತರಗತಿಗಳಿಗೆ ಸೇರಿರುತ್ತಾರೆ. ಅವರು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಎರಡು ಮೂರು ವರ್ಷಗಳ ಕಾಲ ಒಂದೇ ಕಾಲೇಜಿನಲ್ಲಿ ಓದಿದರೂ ಕೂಡ ಅವರಿಗೆ ನೇರವಾದ ಪರಿಚಯಕ್ಕಾಗಲೀ, ಪರಸ್ಪರ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಾಗಲಿ ಅವಕಾಶ ಬಹಳ ಕಡಿಮೆಯಾಗಿರುತ್ತದೆ. ಹಿಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಎಂದರೆ ದೇಶದಲ್ಲಿ ಚಳವಳಿ ನಡೆಯುತ್ತಿರುವಾಗ ವಿದ್ಯಾರ್ಥಿಗಳಿಗೆ ಯಾವಾಗಲೂ ಕರೆಕೊಡುವುದಿತ್ತು. ಈಚೆಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯಾರ್ಥಿಗಳು ಯಾವೊತ್ತೂ ಏನೂ ಪ್ರದರ್ಶನ (Demonstration) ಗಳನ್ನು ಮಾಡಬಾರದೆನ್ನುವ ಅಭಿಪ್ರಾಯ ಸರಕಾರಕ್ಕೆ ಉಂಟಾಗುತ್ತಾ ಬಂತು. ನನ್ನ ಅನುಭವದಿಂದಲೇ ಆ ರೀತಿ ಬೇಡವೆಂದಾಯಿತು ಎಂದು ಕಾಣುತ್ತದೆ. ಹೀಗೆ ಅಧಿಕಾರಗಳ ಮುಖಾಂತರ ಇದು ಕಾರ್ಯರೂಪಕ್ಕೆ ಬಂದು, ಇವೊತ್ತು ವಿದ್ಯಾರ್ಥಿಗಳ ಸಂಘಗಳಿರಬಾರದು, ಅವು ಏನೂ ಕೆಲಸ ಮಾಡಬಾರದು ಎಂದು ಈ ರೀತಿ ಕಡ್ಡಾಯ ಉಂಟಾಗಿದೆ. ಸಾಮಾನ್ಯವಾಗಿ ಇವೊತ್ತು ದೇಶದಾದ್ಯಂತ ಯಾವ ಸಂಘವೂ ಜೀವಂತವಾಗಿಲ್ಲವೆಂದು ಹೇಳಿದರೆ ತಪ್ಪಾಗಲಾರದು. ವಿದ್ಯಾರ್ಥಿಗಳ ಸಂಘಗಳಿದ್ದು, ಅವರು ಸಂಘಟಿತರಾಗಿದ್ದ ಮಾತ್ರಕ್ಕೆ ಮುಷ್ಕರವನ್ನು ಹೂಡಬೇಕು, ಆಡಳಿತ ವರ್ಗದ ಮೇಲೇರಿ ಹೋಗಿ ಪ್ರದರ್ಶನವನ್ನು ಮಾಡಬೇಕು ಎನ್ನುವ ಅಭಿಪ್ರಾಯವೇನೂ ಇಲ್ಲ. ನಾನು ಮೊದಲೇ ಹೇಳಿದ ಹಾಗೆ ಅವರಲ್ಲಿ ಒಂದು ಸೌಹಾರ್ದ, ಸಂಪರ್ಕದ ಪರಿಚಯಗಳು ಬೆಳೆದು ಬರುವುದಕ್ಕೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಕ್ಕೆ ತರಗತಿಯ ಹೊರಗಡೆ ಒಂದು ವೇದಿಕೆ ಮತ್ತು ಒಂದು ಸ್ಥಳವಿರಬೇಕು; ಯೂನಿಯನ್‌ಗಳಿಗೆ ಬೇರೆ ಕಟ್ಟಡಗಳಿರಬೇಕು; ಹೊರಗಡೆಯ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವನ್ನು ವಿಶ್ವವಿದ್ಯಾನಿಲಯದಲ್ಲಿ ಕಲ್ಪಿಸಿಕೊಡಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಇದಕ್ಕೆ ಒಂದು ಪ್ರಾವಿರ್ಷ ಮಾಡಬೇಕಾಗಿತ್ತು ಎಂದು ನಾನು ಸರಕಾರದವರಲ್ಲಿ ಒತ್ತಾಯಪೂರ್ವಕವಾಗಿ ಹೇಳುತ್ತಿದ್ದೇನೆಯೇ ಹೊರತು, ಇಂಥ ಒಂದು ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳಬೇಕು, ಅಥವಾ ಒಂದು ರಾಜಕೀಯ ಆಂದೋಲನವನ್ನು ಮಾಡುವುದಕ್ಕೆ ಈ ಸಂಘಗಳು ಸಹಾಯಕಾರಿಯಾಗಬೇಕೆನ್ನುವ ಅಭಿಪ್ರಾಯದಿಂದ ಹೇಳುತ್ತಿಲ್ಲ. ಆದುದರಿಂದ ಈ ವಷಯವನ್ನು ಸರ್ಕಾರದವರು ಈಗಲೂ ಕೂಡ ಪರಿಶೀಲಿಸಬಹುದು. ಅದಕ್ಕೆ ತಡವಾಗಿಲ್ಲ. ಅಂಥ ಒಂದು ಅವಕಾಶವನ್ನು ಕಲ್ಪಿಸಿಕೊಡುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಹಳ ಒಳ್ಳೆಯದೆಂದು ನಾನು ಈ ಸಂದರ್ಭದಲ್ಲಿ ಸೂಚಿಸಿರುತ್ತೇನೆ.

ಸಿಂಹಾವಲೋಕನ

೨೦ ಅಕ್ಟೋಬರ್ ೧೯೫೬

ಸ್ವಾಮಿ, ಪ್ರಸ್ತುತ ಮೈಸೂರು ರಾಜ್ಯ ಅಸ್ತಮಿಸಿ ನೂತನ ಮೈಸೂರು ರಾಜ್ಯ ಉದಯಿಸುವ ಈ ಒಂದು ಪರ್ವಕಾಲ ದುಃಖ ಮತ್ತು ಸುಖಗಳಿಂದ ಕೂಡಿದೆ: ಸೂರ್ಯನು ಪಶ್ಚಿಮದಲ್ಲಿ ಮುಳುಗಿ, ಪೂರ್ವದಲ್ಲಿ ಮತ್ತೆ ನೂತನವಾದ ಚೆಲುವಿನಿಂದ ಶಕ್ತಿಯಿಂದ ಉದಯಿಸುವಂತೆ ಮೈಸೂರು ರಾಜ್ಯವೂ ಕೂಡ ಕ್ಷಣಕಾಲ ಅಸ್ತಮಿಸಿ ಮತ್ತೆ ಉದಯಿಸುವಲ್ಲಿದೆ, ದಿನ ಪ್ರಸ್ತುತ ಮೈಸೂರಿನ ಇತಿಹಾಸ ಅಧ್ಯಾಯ ಕೊನೆಗೊಳ್ಳುಲಿದೆ. ಮುಖ್ಯವಾಗಿ ಈ ವಿಧಾನ ಸಭೆಯ ಇತಿಹಾಸ ಇಲ್ಲಿಗೆ ಮುಗಿಯಿತೆನ್ನಬೇಕು. ಈ ಸಂದರ್ಭದಲ್ಲಿ ಅಗಲುವಿಕೆಯು ಕ್ಷಣಿಕವಾದರೂ ಕೂಡ ದುಃಖಕರವೇ. ಇದು Farewell ಎನ್ನುವ ಒಂದು ದೃಷ್ಟಿಯಿಂದ ಆದರೆ ಪುನಃ ಒಂದೇ ರಾಜ್ಯದಲ್ಲಿ ಸೇರಿ ಮುಂದುವರಿಯುವ ಒಂದು ವ್ಯವಸ್ಥೆಯಲ್ಲಿ ನಾವಿದ್ದೇವೆನ್ನುವುದು ಸುಖದ ಮತ್ತು ಸಂತೋಷದ ಸಂದರ್ಭ. ಈ ಸಭೆಗೆ ಮೊಟ್ಟಮೊದಲು ನಾನು ಹಿಂದಿನ ಚರಿತ್ರೆಗೆ ಹೋಗುವುದಿಲ್ಲ. ಈ ಸಭೆಯು ಆರಂಭವಾದಾಗ ವಿರೋಧಪಕ್ಷದಿಂದ ನಾನು ಈ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕೆಂದು ತೀರ್ಮಾನ ಮಾಡಿಕೊಂಡು ಸ್ಪರ್ಧೆ ಮಾಡಿ ೧೮ ಓಟುಗಳನ್ನು ತೆಗೆದುಕೊಂಡು ಸೋತೆನು. ಆ ಸಂದರ್ಭದಲ್ಲಿ ಶ್ರೀಮಾನ್ ಎಚ್. ಸಿದ್ಧಯ್ಯನವರು ಅಧ್ಯಕ್ಷರಾದರು.

ಅವರು ಅಧ್ಯಕ್ಷರಾಗಿ ಈ ಸಭೆಯನ್ನು ಬಹಳ ದಕ್ಷತೆಯಿಂದ ನಡೆಸಿಕೊಂಡು ಹೋದರು. ಅವರು ಕಾಲವಾದುದು ದುರದೃಷ್ಟಕರ. ಅದರಿಂದುಂಟಾಗಿರುವ ನಷ್ಟವನ್ನು ತುಂಬಿಕೊಳ್ಳಲಾಗದಿದ್ದರೂ ನಮ್ಮ ಜಿಲ್ಲೆಯವರೇ ಆದ ಶ್ರೀಮಾನ್ ರುದ್ರಪ್ಪನವರು ಮತ್ತೆ ಅವಿರೋಧವಾಗಿ ಆರಿಸಿಬಂದು ಈವೊತ್ತಿನವರೆಗೆ ಸಭೆಯ ಕಾರ್ಯಕಲಾಪಗಳನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುತ್ತಿರುವುದು ನನಗೆ ಒಂದು ಹೆಮ್ಮೆಯ ವಿಷಯವೇ ಆಗಿದೆ. ಈ ಸಭೆಯ ಕಾಂಪೋಸಿಷನ್ ಹೇಳುವುದಾರೆ, ಹಿಂದೆ ಮಂತ್ರಿಗಳಾಗಿದ್ದವರೂ, ನುರಿತವರೂ, ಅನುಭವಿಗಳೂ ಮತ್ತು ಆರಿಸಿ ಬಂದವರೂ ಸದಸ್ಯರಾಗಿದ್ದರು. ಈ ಸಭೆಯಲ್ಲಿ ವಿಧಾನ ಸಭೆಯ ಅಭಿವೃದ್ಧಿಗೆ ಏನೇನು ಕೆಲಸಗಳನ್ನು ಮಾಡಿದೆ ಎನ್ನುವುದನ್ನು ನಾವು ನೋಡಿದರೆ ಇನಾಂ ಮತ್ತು ಜಹಗೀರುಗಳನ್ನು ರದ್ದುಪಡಿಸುವ ಕಾನೂನುಗಳು ಮತ್ತು ಈಚೆಗೆ ಕೋಲಾರದ ಚಿನ್ನದಗಣಿ ಮತ್ತು ಬಿ.ಟಿ.ಸಿ. ಸರ್ವಿಸಸ್ ರಾಷ್ಟ್ರೀಕರಣ ಮಾಡುವ ಕಾನೂನುಗಳು ಅಂಗೀಕೃತವಾಗಿವೆ. ಇಂತಹ ಕೆಲವು ಎದ್ದು ಕಾಣತಕ್ಕ ಕೆಲಸಗಳನ್ನು ನಾವು ಮಾಡಿದ್ದೇವೆ. ಆಯುವ್ಯಯಗಳ ತನಿಖೆಯ ಅಂಗೀಕಾರ ಮುಂತಾದ ಕ್ರಮವಾಗಿ ಆಗತಕ್ಕ ಕೆಲಸಗಳ ಜೊತೆಗೆ ವಿಶೇಷ ಕೆಲಸಗಳನ್ನೂ ಸಾಧಿಸಿದ್ದೇವೆ. ಈ ಸಭೆಯಲ್ಲಿ ಮೊದಲು ಆರಂಭದಲ್ಲಿದ್ದ ಸದಸ್ಯರಲ್ಲಿ ಶ್ರೀಯುತರುಗಳಾದ ಸಿದ್ಧಯ್ಯನವರು, ಶಂಕರಲಿಂಗೇಗೌಡರು ಮತ್ತು ಟಿ. ಸಿ. ಬಸಪ್ಪನವರು ಕಾಲಾಧೀನರಾದರು. ಎಸ್. ಎಂ. ಮರಿಯಪ್ಪನವರು ಮತ್ತು ಟಿ. ನಾಗಪ್ಪನವರು ತಮ್ಮ ಸ್ಥಾನಗಳನ್ನು ಕಳೆದುಕೊಂಡರು. ಗಂಗಪ್ಪನವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಹೊಸದಾಗಿ ಈ ಸಭೆಗೆ ಬಳ್ಳಾರಿಯಿಂದ ಸದಸ್ಯರು ಬಂದರು. ಇನ್ನೆರಡು ಮುಖ್ಯ ಘಟನೆಗಳಿವೆ. ಮುಖ್ಯಮಂತ್ರಿಗಳಾಗಿದ್ದ ಶ್ರೀಮಾನ್ ಹನುಮಂತಯ್ಯನವರು ತಮ್ಮ ಮಂತ್ರಿಮಂಡಲದ ಮುಖಂಡತ್ವವನ್ನು ಕಳೆದುಕೊಂಡದ್ದು ಮತ್ತೊಂದು ಘಟನೆ. ಹಾಗೆಯೇ ಶ್ರೀಮಾನ್ ಟಿ. ಸಿದ್ಧಲಿಂಗಯ್ಯ್ಯನವರು ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡದ್ದೂ ಕೂಡ ಒಂದು ಮುಖ್ಯಘಟನೆ , ಕಾರಣಗಳನ್ನು ವಿವರಿಸುವುದಕ್ಕೆ ನಾನು ಹೋಗುವುದಿಲ್ಲ.

ಇನ್ನು ಸಭೆಯ ಮೇಲೆ, ಇಂಪ್ರಷನ್, ಸಭೆಯಲ್ಲಿ ಎಂತೆಂಥ ಸದಸ್ಯರಿದ್ದರೆಂಬುದು ಅದನ್ನೆಲ್ಲ ಹೇಳುವುದಕ್ಕೆ ಕಾಲಾವಕಾಶವಿಲ್ಲ, ಅವಕಾಶವಿದರೂ ನನ್ನ ಇಂಪ್ರಷನ್ಸ್ ಏನಿದೆಯೆಂಬುದನ್ನು ಸೂಚಿಸಲು ನಾನು ಆಶೆಪಟ್ಟಿದ್ದೆ. ಇಲ್ಲಿ ಎದ್ದು ಕಾಣತಕ್ಕ ಕೆಲವು ವ್ಯಕ್ತಿಗಳ ವಿಚಾರ ಮಾತ್ರ ಒಂದೆರಡು ನಿಮಿಷಗಳಲ್ಲಿ ಹೇಳಿ ಮುಗಿಸುತ್ತೇನೆ. ವ್ಯಕ್ತಿತ್ವಕ್ಕೆ ಅಪಾಚಾರವಾಗುವ ಹಾಗೆ ಏನಾದರೂ ಹೇಳಿದ್ದರೆ ಕ್ಷಮಿಸಬೇಕು. ಖಂಡಿತ ಹಾಗೇನೂ ಹೇಳಿಲ್ಲ ಎಂದು ನಾನು ಭಾವಿಸಿದ್ದೇನೆ. ವಿರೋಧ ಪಕ್ಷದಲ್ಲಿ ಶ್ರೀ ಇಮಾಂರವರು ಮತ್ತು ಶ್ರೀ ಎಲ್. ಸಿದ್ಧಪ್ಪನವರು ಹಿಂದೆ ಮಂತ್ರಿಗಳಾಗಿದ್ದು ಆಡಳಿತ ಅನುಭವವನ್ನು ಪಡೆದವರಾಗಿ ಟ್ರೆಜರಿ ಬೆಂಚಿಗೆ ಎದುರಾಗಿ ಕುಳಿತಿದ್ದು ವಿರೋಧ ಪಕ್ಷದ ಸಂಖ್ಯೆ ಬಹಳವಾಗಿ ಕಡಿಮೆಯಾಗಿದ್ದರೂ ಸರಕಾರದ ಅಧಿಕಾರವನ್ನು ಬ್ಯಾಲೆನ್ಸ್‌ ಮಾಡಿದರು ಎಂದು ನಾನು ತಿಳಿದುಕೊಂಡಿದ್ದೇನೆ. ಸರಕಾರಕ್ಕೆ ಪ್ರಗತಿಪರವಾಗಿ ಯಾವ ಸಂದರ್ಭದಲ್ಲಿ ಎಲ್ಲೆಲ್ಲಿ ನಾವು ನಡೆದುಕೊಂಡಿದ್ದೇವೆ, ಎಲ್ಲೆಲ್ಲಿ ನಡೆದುಕೊಂಡಿಲ್ಲ ಎನ್ನುವುದು ಬೇರೆ ಪ್ರಶ್ನೆ, ಅಂತೂ ಅವರಿದ್ದುದರಿಂದ ಈ ಸಭೆಯಲ್ಲಿ ಒಂದು ಬ್ಯಾಲೆನ್ಸ್ ಆಫ್ ಪವರ್, ಸಮತೂಕ ಆಗುವುದಕ್ಕೆ ಕಾರಣವಾಯಿತೆಂದು ಹೇಳಬಹುದು. ಹಾಗೆಯೇ ವಿರೋಧ ಪಕ್ಷದಲ್ಲಿ ಮೊದಲು ನಾವು ಸಾಕಷ್ಟು ಮಂದಿ ಇದ್ದೆವು. ಕ್ರಮವಾಗಿ ಕೆಲವರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರನ್ನು ನಾನು ಅನಿವಾರ್ಯವಾಗಿ ಡಿಫೆಕ್ಟರ್ಸ್ ಎಂದು ಕರೆಯಬೇಕಾಗಿದೆ. ಕಾಂಗ್ರೆಸ್ ನವರಲ್ಲಿ ಬಹು ಮಂದಿ ಕಡೆಗೆ ಬಂದು ದೊಡ್ಡ ವಿರೋಧ ಪಕ್ಷವಾಗುತ್ತದೆ ಎಂದು ನಾನು ತಿಳಿದುಕೊಂಡಿದ್ದೆ. ಆದರೆ ಅದಕ್ಕೆ ಬದಲಾಗಿ ಬಹುಮಂದಿ ವಿರೋಧ ಪಕ್ಷದವರು ಕಾಂಗ್ರೆಸ್ಸಿಗೆ ಸೇರಿದರು. ಏಕೆಂದರೆ ಅಧಿಕಾರವೆಲ್ಲಿದ್ದರೆ ಅಲ್ಲಿಗೆ ಸ್ವಾಭಾವಿಕವಾಗಿ ಬಹು ಜನರು ಅಂಟಿಕೊಳ್ಳುವುದುಂಟು. ಆದ್ದರಿಂದ ಅದರಂತೆ ಅಂಥ ಒಂದು ಘಟನೆ ನಡೆದಿದೆ.

ಇನ್ನು ವಿರೋಧ ಪಕ್ಷದ ಕೆಲವರ ಹೆಸರನ್ನು ಮಾತ್ರ ಹೇಳುತ್ತೇನೆ. ಈ ಸಭೆಯಲ್ಲಿ ಮಾತಿನಮಲ್ಲರು ಇದ್ದರು. ‘ಮೌನೇನ ಕಲಹಂ ನಾಸ್ತಿ’ ಅನ್ನುವಂತೆ ಮೌನವಾಗಿರತಕ್ಕ ಸದಸ್ಯರೂ ಇದ್ದರು. ಶ್ರೀಮಾನ್‌ ಶ್ರೀನಿವಾಸ ಅಯ್ಯಂಗಾರ್ ಅವರು ಸರಕಾರವನ್ನು ಅಂಕಿ-ಅಂಶಗಳಿಂದ ಎದುರಿಸುತ್ತಿದ್ದರು. ಬಹಳವಾದ ಅವರ ಶ್ರಮವನ್ನೂ ಮತ್ತು ಅವರ ಭಾಷಣಗಳಲ್ಲಿದ್ದ ಉತ್ತಮ ಸಲಹೆಗಳನ್ನೂ ಸರಕಾರ ಉಪಯೋಗಿಸಿ ಕೊಳ್ಳದಿರಬಹುದು. ಆದರೂ ಕೂಡ ಅವರು ದೇಶಕ್ಕೆ ಬಹಳ ಉಪಕಾರ ಮಾಡಿದ್ದಾರೆ. ಯಾವತ್ತೂ ಅವರು ಇಂಡಿಯಾ ದೇಶದ ಬಜೆಟ್ಟನ್ನೆಲ್ಲಾ ತರಿಸಿ ಅಂಕಿ ಸಂಖ್ಯೆಗಳನ್ನು ಓದುತ್ತಾರೆ, ಓದಿ ನೋಟ್ಸ್‌ ಮಾಡಿಕೊಂಡು ಭಾಷಣ ಮಾಡುತ್ತಿದ್ದರು. ಹಾಗೆಯೇ ಇನ್ನೂ ಮೂರು ಜನರಿದ್ದರು. ಗುಂಡು ತಲೆಯ ಗಂಡು ಎದೆಯ ಶ್ರೀ ನಾಗಯ್ಯ ರೆಡ್ದಿಯವರಿದ್ದರು. ಅವರೆಂದರೆ ಶ್ರೀ ಕೆ. ಹನುಮಂತಯ್ಯನವರಿಗೂ ಮತ್ತು ಶ್ರೀ ಟಿ. ಚಿನ್ನಯ್ಯನವರಿಗೂ ಯಾವತ್ತೂ ಸಿಂಹಸ್ವಪ್ನವಾಗಿದ್ದರು. ಅನೇಕ ಪಕ್ಷಗಳಿದ್ದವು. ಕಾಂಗ್ರೆಸ್ ಪಕ್ಷ ಬಹು ಸಂಖ್ಯೆಯಲ್ಲಿತ್ತು. ಪ್ರಜಾಸೋಷಲಿಸ್ಟ್ ಪಕ್ಷವಿರೋಧ ಪಕ್ಷ ವಾಗಿದ್ದು ಈಗಲೂ ಸೋಷಲಿಸ್ಟ್ ಆಗಿಯೇ ಇದೆ. ಒಬ್ಬರೇ ಇದ್ದು ಮಿತಭಾಷಿಯಾಗಿ ಸಭೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಮಾತನಾಡತಕ್ಕಂತಹ ಸದಸ್ಯರಾದ ಶ್ರೀವಾಸವನ್‌ರವರಿದ್ದರು. ಎತ್ತರದಲ್ಲಿ ಬಹಳ ಕುಳ್ಳಗಿರತಕ್ಕ ಶ್ರೀ ಶಿವಪ್ಪನವರು ಬಹಳ ಎತ್ತರವಾಗಿರುವ ಶ್ರೀ ಥಾಮಸ್ ಅವರಂತಹವರು ಈ ಸಭೆಯಲ್ಲಿದ್ದರು. ಇನ್ನು ಈ ಸಭೆಯಲ್ಲಿ ಮೂರು ಜನ ಮಹಿಳಾ ಸದಸ್ಯರು ಅಲಂಕರಿಸಿದ್ದರು. ಅವರಿಂದ ಈ ಸಭೆಗೆ ಒಂದು ಹೆಚ್ಚಿನ ಅಲಂಕಾರ ದೊರೆಯಿತು ಎನ್ನುವುದರಲ್ಲಿ ಸಂಶಯವಿಲ್ಲ.

ಇನ್ನು ಮಂತ್ರಿ ಮಂಡಲದವರು ಬೇಕಾದಷ್ಟು ಕೆಲಸಗಳನ್ನು ನಿರ್ವಹಿಸಿರುತ್ತಾರೆ. ಆದರೆ ಅವರ ಬಗ್ಗೆಯೂ ಇತ್ತೀಚೆಗೆ ಬದಲಾವಣೆಯಾದ ಮಂತ್ರಿ ಮಂಡಲದ ಆಡಳಿತದ ಬಗ್ಗೆಯೂ ಯಾವ ಟೀಕೆ ಮಾಡುವುದಕ್ಕೂ ನಾನೀಗ ಆಶೆ ಪಡುವುದಿಲ್ಲ. ಅದು ಅಷ್ಟಾಗಿ ನನಗೆ ಸಂಬಂಧಪಟ್ಟ ವಿಷಯವೂ ಅಲ್ಲ.

ಇನ್ನೊಂದು ವಿಚಾರ, ಸಭೆಯಲ್ಲಿ ಎದ್ದು ಕಂಡು ಬರುವಂತಹ ವ್ಯಕ್ತಿ ಎಂದರೆ ಶ್ರೀಯುತ ಕೆ. ಪಟ್ಟಾಭಿರಾಮನ್ ರವರು . ಅವರು ವಿರೋಧ ಪಕ್ಷದಲ್ಲಿದ್ದಾಗ್ಯೂ ಸರಕಾರದವರು ಅವರ ವಿಚಾರದಲ್ಲಿ ಭಯಪಟ್ಟು ಕೊಂಡು, ಆದರಿಂದ, ಆಸಕ್ತಿಯಿಂದ ಹಾಗೂ ಗೌರವದಿಂದ ಅವರ ಭಾಷಣಗಳನ್ನು ಕೇಳುತ್ತಿದ್ದರು. ಅಂತಹ ಒಬ್ಬ ವ್ಯಕ್ತಿಗಳಾಗಿದ್ದರು ಶ್ರೀ ಕೆ. ಪಟ್ಟಾಭಿರಾಮನ್ ರವರು.

ಇನ್ನು ಶ್ರೀ ವಿ. ಆರ್. ನಾಯ್ಡು ಅವರು. ಇವರು ವೆಂಕಟರಮಣ ಸ್ವಾಮಿ ಭಕ್ತರು. ಯಾವತ್ತೂ ಈ ಸಭೆಯಲ್ಲಿ ಬೇಸರ ಉಂಟಾಗಿದ್ದಾಗ, ಇಲ್ಲವೇ ವಿರಸ ಪ್ರಸಂಗಗಳು ಬಂದಂಥ ಸಂದರ್ಭದಲ್ಲಿ ಏನಾದರೊಂದು ವಿಷಯ ಎತ್ತಿ ಸಭೆಯನ್ನು ಹಾಸ್ಯ ರಸದಲ್ಲಿ ಮುಳುಗುವಂತೆ ಮಾಡುತ್ತಿದ್ದರು. ಹೀಗೆ ಈ ಸಭೆಯ ನಾನಾ ರೂಪದ ವ್ಯಕ್ತಿಗಳನ್ನು ಹೊಂದಿದ್ದು ತನ್ನ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಅಂತೂ ಒಟ್ಟಿನಲ್ಲಿ ಎಲ್ಲರೂ ತಮ್ಮ ಗಮನದಲ್ಲಿ ದೇಶದ ಹಿತದೃಷ್ಟಿಯನ್ನಿಟ್ಟುಕೊಂಡು ಮಹತ್ತರವಾದ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ಎಂದು ಹೇಳಬಹುದು. ಇಂತಹ ಪ್ರಜಾರಾಜ್ಯದ ಆಡಳಿತದಲ್ಲಿ ಮುಂದೆ ವಿರೋಧ ಪಕ್ಷದ ಸದಸ್ಯರು ಸಾಕಷ್ಟು ಗಣನೀಯ ಸಂಖ್ಯಯಲ್ಲಿರಬೇಕು. ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಮರ್ಯಾದೆ, ಸ್ಥಾನಮಾನಗಳು ದೊರೆಯಬೇಕು. ಅವರು ನೀಡತಕ್ಕ ಸಲಹೆಗಳಿಗೆ ಸಾಕಷ್ಟು ಗಮನ ಕೊಟ್ಟು ಅವುಗಳನ್ನು ಪರಿಶೀಲನೆ ಮಾಡಬೇಕು ಎಂದು ಸಲಹೆ ಮಾಡುತ್ತೇನೆ. ಇನ್ನು ನಾನು ನನ್ನ ವಂದನೆಗಳನ್ನು ಈ ವಿಧಾನ ಸಭೆಯಲ್ಲಿ ಎಲ್ಲರಿಗೂ ಅರ್ಪಿಸುತ್ತೇನೆ. ಆದರೆ ನಾನು ಬೇರೆ ಬೇರೆಯಾಗಿ ಹೇಳಲು ಹೋಗುವುದಿಲ್ಲ. ನಾನು ಎಷ್ಟೋ ಸಲ ಮಾತನಾಡುವಾಗ ನಿಧಾನವಾಗಿ ಮಾತನಾಡುವ ಸ್ವಭಾವದವನಾದ್ದರಿಂದ ತಮ್ಮೆಲ್ಲರಿಗೂ ಬೇಸರವನ್ನು ಉಂಟುಮಾಡಿರುತ್ತೇನೆ. ಆದಾಗ್ಯೂ ತಾವುಗಳೆಲ್ಲರೂ ಅದನ್ನು ಸಹಿಸಿಕೊಂಡು ಬಂದಿದ್ದೀರಿ. ಬಗ್ಗೆ ಅಧ್ಯಕ್ಷರು ಮತ್ತು ಎಲ್ಲ ಮಾನ್ಯ ಸದಸ್ಯರೂ ನನ್ನನ್ನು ಕ್ಷಮಿಸಬೇಕೆಂದು ಅರಿಕೆ ಮಾಡಿಕೊಂಡು ಎಲ್ಲರಿಗೂ ಮತ್ತೊಮ್ಮೆ ವಂದನೆಗಳನ್ನರ್ಪಿಸಿ ನನ್ನ ಭಾಷಣವನ್ನು ಮುಗಿಸಿತ್ತೇನೆ.

ವಿದಾಯ

೧೯ ಮಾರ್ಚ್ ೧೯೫೭

ಹೊಸ ಸದಸ್ಯರಿಗೆ ಶುಭಾಶಯಗಳು.

ಸ್ವಾಮಿ, ಕೊನೆಯದಾಗಿ ಇನ್ನೊಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಿ ನನ್ನ ಭಾಷಣವನ್ನು ಮುಗಿಸುತ್ತೇನೆ. ಇಲ್ಲಿಯವರೆಗೆ ಕಳೆದ ಐದು ವರುಷಗಳ ಕಾಲ ಈ ಸಭೆಯಲ್ಲಿದ್ದ ಮಾನ್ಯ ಸದಸ್ಯರುಗಳಿಗೆ ಇದೇ ಕೊನೆಯ ಅಧಿವೇಶನವಾಗಿದೆ. ಈಗ ಇರುವ ಅನೇಕ ಸದಸ್ಯರು ಮತ್ತೆ ಬಾರದೇ ಇರುವುದರಿಂದ ಇನ್ನು ಮುಂದೆ ಹೆಚ್ಚಿನ ಸೇವೆ ಸಲ್ಲಿಸಲು ಅಂಥವರಿಗೆ ಅವಕಾಸವಿಲ್ಲ. ಮೊನ್ನೆ ತಾನೆ ಆದ ಚುನಾವಣೆಯಲ್ಲಿ ನಮ್ಮಲ್ಲಿ ಅನೇಕರಿಗೆ ಮತದಾರರು ಓಟು ಕೊಡದೆ ವಾಪಸ್ ಕರೆಸಿಕೊಂಡಿದ್ದರಿಂದ ಗಂಭೀರವಾಗಿ ಮನೆಗೆ ಹೋಗಬೇಕಾಗಿದೆ. ಪ್ರಜಾಪ್ರಭುತ್ವದ ನಿಯಮಗಳಿಗೆ ಅನುಸಾರವಾಗಿ ಮತದಾರರು ಕೊಟ್ಟಿರುವ ನಿರ್ಣಯಕ್ಕೆ ತೆಲೆಬಾಗಿ ಒಪ್ಪಬೇಕಾಗಿದೆ. ಈ ಸನ್ನಿವೇಶದಲ್ಲಿ ನಮ್ಮ ಮೇಲೆ ಏನೂ ಜವಾಬ್ದಾರಿಯೂ ಉಳಿದಿಲ್ಲ. ಹೋಸದಾಗಿ ಚುನಾವಣೆಯಲ್ಲಿ ಆರಿಸಿ ಬಂದು ಇನು ಮುಂದೆ ಈ ಸಭೆಯಲ್ಲಿ ಕುಳಿತುಕೊಳ್ಳತಕ್ಕಂಥ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಳೆದ ಹತ್ತು ವರುಷಗಳ ಕಾಲ ಆಡಳಿತವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೀರಿ. ಮುಂದಿನ ಐದು ವರ್ಷಗಳಲ್ಲಿ ಭವಿಷ್ಯದ ಬಹುಭಾಗ ನಿರ್ಧಾರವಾಗುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕ್ರಾಂತಿಯಾಗಬಹುದು. ಇದೇ ಶಾಂತ ಪರಿಸ್ಥಿತಿಯು ಮುಂದೆಯೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಭೆ ಮುಂದೆ ಜವಾಬ್ದಾರಿಯಿಂದ ಜನಹಿತ ಕಾಯದೆಗಳನ್ನು ಮಾಡಿ, ಜನತೆಗೆ ನ್ಯಾಯ ಹಾಗೂ ನಿಷ್ಪಕ್ಷಪಾತವಾದ ಆಡಳಿತ ಒದಗಿಸಿಕೊಡಬೇಕಾಗಿದೆ.

ಕಳೆದ ಐದು ವರ್ಷಗಳಲ್ಲಿ ನಾವು ಹೆಚ್ಚೇನೂ ಸಾಧಿಸಲು ಸಾಧ್ಯವಾಗಲಿಲ್ಲ. ನಮ್ಮಿಂದ ಜನತೆಗೆ ಬಹಳ ನೀರೀಕ್ಷಿಸಿತ್ತು. ಜನತೆಯು ನೀರೀಕ್ಷಿಸಿದಷ್ಟು, ಕೆಲಸಕಾರ್ಯಗಳು ಆಗದೇ ಇದ್ದರೂ ಕೆಲವು ಅತಿ ಮಹತ್ವದ ಸುಧಾರಣೆಗಳು ಆಗಿವೆ. ಅವುಗಳಲ್ಲಿ ಪ್ರಾಮುಖ್ಯವಾದುವುಗಳು ಎಂದರೆ ಚಿನ್ನದ ಗಣಿಯ ರಾಷ್ಟ್ರೀಕರಣ; ಬಿ. ಟಿ. ಸಿ. ರಾಷ್ಟ್ರೀಕರಣ, ಗೇಣಿಶಾಸನವನ್ನು ರಚಿಸಿದ್ದೇವೆಹಾವು ಸಾಯಬಾರದು, ಕೋಲೂ ಮುರಿಯಬಾರದು ರೀತಿಯಲ್ಲಿ ಶಾಸನ ರಚಿಸಿ ಅದರಿಂದ ಯಾರಿಗೂ ಉಪಯೋಗವಾಗಿಲ್ಲ. ಅಂಥ ಕಾನೂನನ್ನು ರಚಿಸಿ ಶ್ರೀ ಕಡಿದಾಳ್ ಮಂಜಪ್ಪನವರು ಕೀರ್ತಿ ಸಂಪಾದಿಸಿದ್ದಾರೆ. ಜನತೆ ಕಾಂಗ್ರೆಸ್ಸಿನ ಚುನಾವಣೆ ಘೋಷಣೆಯನ್ನು ನೋಡಿ ಓಟು ಕೊಟ್ಟಿಲ್ಲ. ಹೆಸರು, ಹಣ, ಚುನಾವಣೆ ವೈಖರಿ, ಸರಕಾರದ ದುರುಪಯೋಗಗಳಿಂದ ಅವರಿಗೆ ಓಟುಗಳು ಬಂದಿವೆ. ಈ ಸಭೆಯಲ್ಲಿ ಇನ್ನು ಮುಂದೆ ಬರತಕ್ಕಂಥ ಸದಸ್ಯರುಗಳು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ದೇಶಕ್ಕೆ ಹೆಚ್ಚಿನ ಸೇವೆಯನ್ನು ಸಲ್ಲಿಸುತ್ತಾರೆಂದು ತಿಳಿದುಕೊಂಡು ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ.