ಪ್ರಾಥಮಿಕ ಶಿಕ್ಷಣ

ಸೆಪ್ಟಂಬರ್ ೧೯೬೨

ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಅತಿ ಕೆಟ್ಟ ರೀತಿಯಲ್ಲಿ ಅನಾದರಕ್ಕೆ ಈಡಾಗಿರುವ ಒಂದು ವಿಷಯವೆಂದರೆ ಅದು ವಿದ್ಯಾಭ್ಯಾಸ ಎಂದು ನಾವು ಹೇಳದೆ ವಿಧಿಯಿಲ್ಲ. ಅದರಲ್ಲಿಯೂ ಮುಖ್ಯವಾಗಿ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿಗಳನ್ನು ಮತ್ತು ಆ ಕ್ಷೇತ್ರದಲ್ಲಿ ನಾವು ಸ್ವಾತಂತ್ರ್ಯಾ ನಂತರದಲ್ಲಿ ಸಾಧಿಸಿರು ಪ್ರಗತಿಯನ್ನು ಪರಿಶೀಲಿಸುವುದಾದರೆ, ಅದು ಬಹಳ ಮಟ್ಟಿಗೆ ನಿರೀಕ್ಷಿಸಿದ ಪ್ರಗತಿಯನ್ನು ಸಾಧಿಸಿಲ್ಲ!

ರಾಜ್ಯಾಂಗದಲ್ಲಿ ಎಲ್ಲ ಆರು ವರ್ಷ ತುಂಬಿದ ಮಕ್ಕಳಿಗೆ ಉಚಿತವಾಗಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಲೇಬೇಕು ಎಂಬ ನಿರ್ದೇಶನ ಎಲ್ಲ ರಾಜ್ಯಗಳಿಗೂ ಇದ್ದರೂ ಕೂಡ ಆ ನಿರ್ದೇಶನವನ್ನು ಅಕ್ಷರಶಃ ಪರಿಪಾಲನೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಹಿಂದೆ ಕೂಡ ಉಚಿತ ಮತ್ತು ಕಡ್ಡಯ ಪ್ರಾಥಮಿಕ ಶಿಕ್ಷಣ ದೊರಕಬೇಕೆಂದು ಪ್ರಯತ್ನ ನಡೆದಿತ್ತು. ಆದರೆ ಈಗ ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಬಗ್ಗೆ ಏನೊಂದು ನಿತಿಯನ್ನನುಸರಿಸುತ್ತಾ ಬಂದಿದ್ದಾರೋ ಆದು ಸ್ವತಹ ತನಗೆ ತಾನೇ ಮೋಸ ಮಾಡಿಕೊಳ್ಳತಕ್ಕ ಒಂದು ಪ್ದಧತಿ. ಇದನ್ನು ಮಾನ್ಯ ವಿದ್ಯಾಸಚಿವರು ಗಮನಿಸಬೇಕು. ಅವರು ಏನು ಹೇಳುತ್ತಾರೆಂದರೆ ಕಡ್ಡಾಯ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡಿದ್ದೇವೆ, ಅದರಂತೆ ನಾವು ಈ ಪ್ರಾಥಮಿಕ ವಿದ್ಯಾಭ್ಯಾಸದ ಸೌಲಭ್ಯವನ್ನು ಎಲ್ಲ ಹಳ್ಳಿಗೂ ವಹಿಸತಕ್ಕ ಪ್ರಯತ್ನದಲ್ಲಿದ್ದೇವೆ ಎಂದು ಆದರೆ ಆರು ವರ್ಷ ತುಂಬಿದ ಎಲ್ಲ ಮಕ್ಕಳನ್ನೂ ಕಡ್ಡಾಯವಾಗಿ ಶಾಲೆಗಳಿಗೆ ಸೇರಿಸತಕ್ಕ ಕ್ರಮ ಈಗ ಹಾಲಿ ಸರ್ಕಾರದ ಯೋಜನೆಯಲ್ಲಿಲ್ಲ. ಯೋಜನೆಯಲ್ಲಿದ್ದರೂ ಅವರು ಅದನ್ನು ಕಾರ್ಯಗತ ಮಾಡುವ ಕ್ರಮಗಳನ್ನು ತೆಗೆದುಕೊಂಡಿಲ್ಲ. ಯಾವ ವಿದ್ಯಾರ್ಥಿ ಶಾಲೆಗೆ ಸೇರುತ್ತಾನೆಯೋ ಅವನು ಸೇರಿದ ದಿವಸದಿಂದ ಶಾಲೆಯನ್ನು ಬಿಟ್ಟುಹೋಗುವಷ್ಟು ದಿವಸ ಮಾತ್ರ ಅವನಿಗೆ ಉಚಿತವಾದ ವಿದ್ಯಾಭ್ಯಾಸ ದೊರೆಯುತ್ತದೆ: ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಹೀಗೆ ಅವನು ನಾನಾ ಕಾರಣಗಳಿಂದಾಗಿ ಮುಖ್ಯವಾಗಿ ಬಡತನದ ಕಾರಣದಿಂದಾಗಿ, ಶಾಲೆಯನ್ನು ಬಿಟ್ಟು ಹೋದರೆ ಅವನು ಎಲ್ಲಿ ಹೋದ? ಏನು ಮಾಡುತ್ತಿದ್ದಾನೆ? ಅವನು ಹೋಟಲಿನಲ್ಲಿ ಲೋಟ ತೊಳೆಯುವುದಕ್ಕೆ ಸೇರಿಕೊಂಡಿದ್ದಾನೆಯೇ? ಅಥವಾ ಎಲ್ಲಿ ಯಾದರೂ ಬೇರೆ ಕಡೆಗಳಲ್ಲಿ ಹೊಟ್ಟೆಪಾಡಿಗಾಗಿ ತಿರುಗಾಡುತ್ತಿದ್ದಾನೆಯೇ ಎನ್ನುವ ವಿಷಯದ ಕಡೆ ಸರ್ಕಾರ ಗಮನ ಕೊಡುತ್ತ ಇಲ್ಲ. ನಾವು ಎಷ್ಟೋ ಮಕ್ಕಳನ್ನು ನೋಡುತ್ತಿದ್ದೇವೆ. ಬೀದಿಯಲ್ಲಿ ಅಲೆಯುವ ಚಿಕ್ಕ ಮಕ್ಕಳನ್ನು ನೋಡುತ್ತಿದ್ದೇವೆ. ಬಹಳ ಕಡೆಗಳಲ್ಲಿ , , , ೧೦ ವರ್ಷದ ಮಕ್ಕಳು ಶಾಲೆಗೆ ಹೋಗುವುದಕ್ಕೆ ಅವಕಾಶವಿಲ್ಲದೆ ಇರುವುದನ್ನು ನಾವು ನೋಡುತ್ತಿದ್ದೇವೆ. ಅದುದರಿಂದ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ ಎಂದು ಬಹಳ ವಿಷಾದದಿಂದ ಹೇಳಬೇಕಾಗುತ್ತದೆ.

ಮಾನ್ಯ ವಿದ್ಯಾಸಚಿವರು ಪ್ರಾಥಮಿಕ ವಿದ್ಯಭ್ಯಾಸವನ್ನು ಮಾತ್ರವಲ್ಲ ಪ್ರೌಢ ವಿದ್ಯಾಭ್ಯಾಸವನ್ನು ಕೂಡ ಉಚಿತವಾಗಿ ಮತ್ತು ಕಡ್ಡಾಯವಾದ ರೂಪದಲ್ಲಿ ಕೊಡಬೇಕಾಗುತ್ತದೆ; ಅದು ಅವಶ್ಯಕ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈಗ ರಾಜ್ಯದಲ್ಲಿ ಕೊಡುತ್ತಿರುವ ಪ್ರೌಢ ವಿದ್ಯಾಭ್ಯಾಸ ಪದ್ಧತಿಯಲ್ಲಿ ಬಡವರಿಗೆ ಬಹಳ ಜನರಿಗೆ ಅದು ಉಚಿತವಾಗಿ ದೊರಕುತ್ತಿದೆ ಎನ್ನುವ ಅಭಿಪ್ರಾಯವನ್ನು ಕೂಡ ಅವರು ತಿಳಿಸಿದ್ದಾರೆ. ಈ ವಿಷಯವನ್ನು ಸಮರ್ಥಿಸುತ್ತ ಅವರು ನಮ್ಮ ಮುಂದೆ ಅಂಕಿ – ಅಂಶಗಳನ್ನು ಇಟ್ಟರೆ ಈ ರಾಜ್ಯದಲ್ಲಿ ಪ್ರೌಢ ವಿದ್ಯಾಭ್ಯಾಸವು ಕೂಡ ಎಲ್ಲ ಮಕ್ಕಳಿಗೂ ಉಚಿತವಾಗಿ ದೊರೆಯುವಂತೆ ಮಾಡುವುದಕ್ಕೆ ಎಷ್ಟು ಹಣವನ್ನು ನಾವು ಹೆಚ್ಚಾಗಿ ಒದಗಿಸಬೇಕು ಎಂದು ಈ ಮಾನ್ಯ ಸಭೆ ಅದರಲ್ಲಿಯೂ ಮುಖ್ಯವಾಗಿ ಹಣಕಾಸಿನ ಸಚಿವರು ವಿಚಾರಮಾಡಬಹುದು. ಏಕೆಂದರೆ ಈ ವಿದ್ಯಾಭ್ಯಾಸ ಇತರ ಎಲ್ಲ ಹಣ ತೊಡಗಿಸತಕ್ಕ ಯೋಜನೆಗಳಿಗಿಂತ ಹೆಚ್ಚು ಫಲವನ್ನು ಕೊಡತಕ್ಕದ್ದು, ಶಾಶ್ವತವಾದದ್ದು ಮತ್ತು ಭದ್ರವಾದದ್ದು. ಪ್ರೊಫೆಸರ್ ಗಾಲಬ್ರೇತ್ ಅವರು ಹಿಂದೆ ನಮ್ಮ ದೇಶದಲ್ಲಿ ಅಮೆರಿಕದ ರಾಯಭಾರಿಯಾಗಿದ್ದವರು ಒಂದು ಮಾತನ್ನು ಹೇಳುತ್ತಾರೆ: ವಿದ್ಯಾಭ್ಯಾಸದಲ್ಲಿ ತಂದೆ ತಾಯಿಗಳೂ ಅಥವಾ ರಾಜು ತೊಡಗಿಸತಕ್ಕ ಹಣ, ಅದು ಕೇವಲ ಖರ್ಚು ಮಾತ್ರ ಅಗುವುದಿಲ್ಲ. ಅದು ಹಣವನ್ನು ತೊಡಗಿಸತಕ್ಕ ಯೋಜನೆ ಎಂದಾಗುತ್ತದೆ. ಅದರ ಫಲಗಳು ಶೀಘ್ರವಾಗಿ ಮತ್ತು ಒಳ್ಳೆಯ ರೀತಿಯಿಂದ ಬೆಳೆಯುತ್ತವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಖ್ಯವಾಗಿ ಪ್ರಾಥಮಿಕ ವಿದ್ಯಾಭ್ಯಾಸ ಎಷ್ಟು ಒಳ್ಳೆಯ ರೀತಿಯಲ್ಲಿ ನಡೆಯುತ್ತದೆಯೋ ಅದರ ಆಧಾರದ ಮೇಲೆ ಮುಂದಿನ ಮಕ್ಕಳ ಭವಿಷ್ಯ ನಿಂತಿರುತ್ತದೆ.

ಇವೊತ್ತು ನಮ್ಮ ಹಳ್ಳಿಗಳ ಪರಿಸ್ಥಿತಿಯನ್ನು ನೋಡಿದರೆ. ಅಲ್ಲಿಯ ಪಾಠಪ್ರವಚನಗಳನ್ನು ಗಮನಿಸಿದರೆ, ಅಲ್ಲಿನ ಮಕ್ಕಳ ಸ್ಥಿತಿಗತಿ ನಿಜಕ್ಕೂ ಕರುಣಾಜನಕವಾಗಿದೆ. ಮಲೆನಾಡಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ಆ ಮಕ್ಕಳು ಶಾಲೆಗಳಿಗೆ ಹೋಗತಕ್ಕ ಸನ್ನಿವೇಶವನ್ನು ನೆನೆದರೆ ದುಃಖವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೃದಯವಿದ್ರಾವಕವಾದ ಪರಿಸ್ಥಿತಿಯನ್ನು ನೋಡುತ್ತೇವೆ. ನನ್ನ ಕ್ಷೇತ್ರದಲ್ಲಿ ಮೀನುಹೊಳೆ ಎಂಬ ಒಂದು ನದಿ ಇದೆ. ದೇಶದ ಅನೇಕ ಕಡೆಗಳಲ್ಲಿ ಸೇತುವೆಗಳೂ, ರಸ್ತೆಗಳು, ಆಗುವಾಗ ಮೀನುಹೊಳೆ ಸರ್ಕಾರದ ಗಮನವನ್ನು ಸೆಳೆಯಲಿಲ್ಲ. ಕಾರಣವೇನೋ ಗೊತ್ತಾಗಲಿಲ್ಲ. ಅದೇ ಜಿಲ್ಲೆಯವರು ಮಂತ್ರಿಗಳಾಗಿದ್ದಾಗಲೂ ಅದನ್ನು ಪೂರೈಸಲಾರದೆ ಹೋದರು. ಇದನ್ನು ಏಕೆ ಹೇಳುತ್ತಿದ್ದೇನೆಂದರೆ ನದಿಗೆ ಸೇತುವೆ ಹಾಕುವುದಕ್ಕೆ ಈ ಸಂದರ್ಭದಲ್ಲಿ ಒತ್ತಾಯಪಡಿಸುತ್ತಿದ್ದೇನೆಂದರೆ ನದಿಗೆ ಸೇತುವೆ ಹಾಕುವುದಕ್ಕೆ ಈ ಸಂದರ್ಭದಲ್ಲಿ ಒತ್ತಾಯಪಡಿಸುತ್ತಿದ್ದೇನೆಂದು ಯಾರು ತಪ್ಪು ಭಾವಿಸಬಾರದು. ಅಲ್ಲಿ ಮಳೆಗಾಲದಲ್ಲಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳತನಕ ಆ ನದಿ ತುಂಬಿ ಹರಿಯುತ್ತದೆ. ಅಲ್ಲಿಯ ಮಕ್ಕಳು ತೂಗು ಸೇತುವೆ – ಅದಕ್ಕೆ ಸಾರ ಎಂದು ಹೆಳುತ್ತಾರೆ; ಸೊಪ್ಪು, ಸೌದೆ, ಮಣ್ಣು, ಹಾಕಿ ಅದನ್ನು ಕಟ್ಟಿರುತ್ತಾರೆ – ಅದರ ಮೇಲೆ ಮಕ್ಕಳು ಪ್ರತಿದಿನ ಮೇಗರವಳ್ಳಿ ಶಾಲೆಗೆ ನಡೆದುಬರುತ್ತಾರೆ. ನಮ್ಮಲ್ಲಿ ಎಷ್ಟೋ ಕಡೆ ಶಾಲೆಗಳ ಕಟ್ಟಡಗಳು ಸೋರುತ್ತಿರುತ್ತವೆ. ಮಳೆಗಾಲದಲ್ಲಿ ಅದಕ್ಕೆ ಇರಸಲುತಟ್ಟಿ ಕಟ್ಟುವವರು ಕೂಡ ಇರುವುದಿಲ್ಲ. ಕೆಲವು ಕಡೆ ಕಿಟಕಿಗಳು, ಬಾಗಿಲುಗಳೂ ಇಲ್ಲದೆ ಇರತಕ್ಕೆ ಸಂದರ್ಭಗಳಿರುತ್ತವೆ. ಕೆಲವು ಕಡೆ ಖಾಸಗಿ ಜನರ ಜಗುಲಿಯ ಮೇಲೆ, ಕೋಣೆಯಲ್ಲಿ, ಅಂಗಳದಲ್ಲಿ ಶಾಲೆಗಳನ್ನು ನಡೆಸತಕ್ಕ ಪ್ರಮೇಯವಿರುತ್ತದೆ. ಈಚೆಗೆ ಸರ್ಕಾರದವರು ಈ ಪ್ರಾಥಮಿಕ ಶಾಲಾ ಕಟ್ಟಡಗಳೆಲ್ಲವನ್ನು ತಾಲ್ಲೂಕು ಅಭಿವೃದ್ಧಿ ಮಂಡಲಿಯವರಿಗೆ ವಹಿಸಿಬಿಟ್ಟಿದ್ದೇವೆ. ಸಾರ್ವಜನಿಕರೂ ಕಟ್ಟಡಗಳನ್ನು ಕಟ್ಟಿಕೊಳ್ಳಬೇಕು ಎಂದು ಹೇಳುತ್ತಾರೆ. ಖಾಸಗಿಯವರು ಯಾರಾದರೂ ಶಾಲೆಗೆ ಕಟ್ಟಡವನ್ನು ಕೊಟ್ಟರೆ ಅದರ ರಿಪೇರಿಯನ್ನೂ ಅವರೇ ಮಾಡಿಸುತ್ತಾ ಇರಬೇಕು ಎಂದು ಸರ್ಕಾರದವರು ಬಿಟ್ಟಿರತಕ್ಕದ್ದು ಇದೆ. ತೀರ್ಥಹಳ್ಳಿ ತಾಲ್ಲೂಕು ನಾಲೂರು ಪ್ರಾಥಮಿಕ ಶಾಲೆಯನ್ನು ಉದಾಹರಿಸುತ್ತೇನೆ. ಆ ಶಾಲೆಗೆ ಇರಸಲುತಟ್ಟಿ ಕಟ್ಟುವ ವಿಷಯದಲ್ಲಿ ಜಿಜ್ಞಾಸೆ ಬಂತು. ಆ ಶಾಲೆಯನ್ನು ಸರ್ಕಾರದವರು ವಹಿಸಿಕೊಂಡಿಲ್ಲ. ಕಾರಣವೇನೆಂದರೆ ಸರ್ಕಾರದವರು ಹೇಳುವ ರೀತಿಯಲ್ಲಿ ಆ ಕಟ್ಟಡವಿಲ್ಲ ಎನ್ನುವ ವಿವಾದದಿಂದ. ಹೀಗಾಗಿ ಎರಡು ಮೂರು ಮಳೆಗಾಲದಲ್ಲಿ ಕಟ್ಟಡ ಮಳೆಯ ಹೊಡೆತಕ್ಕೆ ಸಿಕ್ಕಿ, ಸಾವಿರಾರು ರೂಪಾಯಿ ಹಾಕಿ ಯಾರೋ ದಾನಿಗಳು ಕಟ್ಟಿಕೊಟ್ಟಂತ ಶಾಲಾ ಕಟ್ಟಡ, ಒಂದು ಮಳೆಗಾಲದಲ್ಲಿ ಬಿದ್ದು ಹೋಯಿತು. ಇಂಥ ಕೆಲವು ಸಾಮಾನ್ಯ ಬುದ್ಧಿಗೆ ಹೊಳೆಯತಕ್ಕ ಕೆಲಸಗಳನ್ನು ದೊಡ್ಡ ಸರ್ಕಾರ ಇಷ್ಟೆಲ್ಲ ಸಿಬ್ಬಂದಿಯನ್ನು ಇಟ್ಟುಕೊಂಡು ಮಾಡಲಾರದೆ ಹೋಗಿ, ಅದಕ್ಕೆ ಕೆಲವು ಕಾನೂನುಗಳ ಅಡಚಣೆಯನ್ನು ಹೇಳುತ್ತದೆ.

ಸರ್ಕಾರದ ಉಪಯುಕ್ತವಾದ ಕಟ್ಟಡಕ್ಕೆ ಆಗಲೀ ಅಥವಾ ಯಾವುದಾದರೂ ಸೇತುವೆಗೆ ಆಗಲಿ, ಹಾನಿ ಬರತಕ್ಕ ಸಂದರ್ಭದಲ್ಲಿ ಅವರು ಕಣ್ಣು ಬಿಟ್ಟು ಬುದ್ಧಿಯನ್ನು ಉಪಯೋಗಿಸುವುದಕ್ಕೆ ಏನಾದರೂ ಪ್ರಯತ್ನ ಮಾಡಬೇಕಾದದ್ದು ಅವರ ಮತ್ತೊಂದು ಆದ್ಯ ಕರ್ತವ್ಯವಾಗುತ್ತದೆ. ಹಳ್ಳಿಗೆ ಎಲ್ಲಾ ಒಂದೇ ಮಂತ್ರ – ದೇಶಕ್ಕೆ ಎಲ್ಲಾ ಒಂದೇ ತಂತ್ರ ಎಂದು ಏನು ಈ ರಾಜ್ಯಭಾರ ಮಾಡುವವರು ಅಭಿಪ್ರಾಯ ಪಡುತ್ತಾರೆ. ಇದರಲ್ಲಿ ಕೆಲವು ಸಲ ಆಯಾಯ ಪ್ರದೇಶದ ಸ್ಥಿತಿಗತಿಗಳನ್ನು ಅನುಲಕ್ಷಿಸಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಎಲ್ಲಿ ಶಾಲೆ ಕಟ್ಟಡ ಕಟ್ಟಿಸಬೇಕಾದರೂ, ನೀವು ಸಾರ್ವಜನಿಕರಿಂದ ಹಣವನ್ನು ಎತ್ತಿ ಸಂಗ್ರಹಿಸಿ ಕೊಡಿ ಎಂದು ಹೇಳುತ್ತಾರೆ. ಅದು ಪಟ್ಟಣಗಳಿಗೆ ಎಷ್ಟರಮಟ್ಟಿಗೆ ಅನ್ವಯಿಸುತ್ತದೆಯೋ ಗೊತ್ತಿಲ್ಲ. ಎಲ್ಲಿ ಮುನಿಸಿಪಾಲಿಟಿಗಳು ಇವೆಯೋ, ಕಾರ್ಪೋರೇಷನ್‌ಗಳು ಇವೆಯೋ ಅಲ್ಲಿ ಯಾರು ಹಣವನ್ನು ಎತ್ತಿ ಕೊಡುತ್ತಾರೆ ಎನ್ನುವುದು ಒಂದು ಪ್ರಶ್ನೆ. ಇನ್ನು ಕಟ್ಟಡಗಳ ವಿಷಯದಲ್ಲೂ ಕೂಡ; ಕೊಡಗಿನಲ್ಲಿ ಕಟ್ಟಡ ಕಟ್ಟುವುದಾದರೆ ಅಲ್ಲಿ ಎಷ್ಟು ಹಣವನ್ನು ಕೊಡಬೇಕಾದೀತು? ಮಲೆನಾಡಿನಲ್ಲಿ ಹುಲಿಕಲ್ ಘಾಟಿನಲ್ಲಿ ಕಟ್ಟಡ ಕಟ್ಟುವುದಾದರೆ ಎಷ್ಟು ಹಣ ಕೊಡಬೇಕಾದೀತು? ತೀವ್ರ ಗಾಳಿ ಬೀಸತಕ್ಕ, ಹೆಚ್ಚು ಮರಮುಟ್ಟು ಸಿಕ್ಕದೇ ಇತರಕ್ಕ ಬಿಜಾಪುರದ ಕಡೆ ಎಷ್ಟು ಹಣ ಕೊಡಬೇಕಾದೀತು? ಅದೇ ಬೆಂಗಳೂರಿನಂಥ ಪಟ್ಟಣದಲ್ಲಿ ಸ್ಥಳವನ್ನು ಮತ್ತು ಬೇರೆ ಸಾಮಗ್ರಿಗಳನ್ನು ಕೊಂಡುಕೊಳ್ಳುವುದಕ್ಕೆ ಎಷ್ಟು ಹಣ ಕೊಡ ಬೇಕಾದೀತು? ಇವುಗಳನ್ನು ಗಮನದಲ್ಲಿ ಇಟ್ಟುಕೊಳ್ಳದೇ ಒಂದು ಪ್ರಾಥಮಿಕ ಶಾಲೆಗೆ ಇಷ್ಟು ಹಣ ಕೊಡುತ್ತೇವೆ. ಉಳಿದದ್ದು ನೀವು ಕೊಡಿ ಎಂದು ಕಣ್ಣು ಮುಚ್ಚಿಕೊಂಡು ಸರಕಾರ ಕಾನೂನು ಚಲಾಯಿಸುವುದಕ್ಕೆ ಮುಂದೆ ಹೋಗುತ್ತದೆ. ಎಷ್ಟೋ ಕಡೆಗಳಲ್ಲಿ ಎರಡು ಹಳ್ಳಿಗಳ ಮಧ್ಯದಲ್ಲಿ ಇರತಕ್ಕ ಒಂದು ಶಾಲೆ ಬಿದ್ದು ಹೋಗತಕ್ಕ ಪರಿಸ್ಥಿತಿಯಲ್ಲಿರುತ್ತದೆ. ಆ ಕಡೆ ಗ್ರಾಮದವರು ಈ ಕಡೆ ಗ್ರಾಮದವರು ಸರಿಪಡಿಸಲಿ ಎಂದು ಇರುತ್ತಾರೆ. ಈ ಕಡೆ ಗ್ರಾಮದವರು ಆ ಕಡೆ ಗ್ರಾಮದವರು ಸರಿಪಡಿಸಲಿ ಎಂದು ಇರುತ್ತಾರೆ. ತಲೆ ಮೇಲೆ ಮಣ್ಣು ಕಲ್ಲು ಬೀಳುತ್ತಿರುತ್ತದೆ. ಹಳ್ಳಿಯಲ್ಲಿ ಕಿಟಕಿ ಬಾಗಿಲು ಮಕ್ಕಳ ತಲೆಯ ಮೇಲೆ ಬೀಳುವ ಪರಿಸ್ಥಿತಿಯಿರುತ್ತದೆ. ಮುರಿದ ಬಾಗಿಲು ರಿಪೇರಿ ಮಾಡಿಸುವುದಕ್ಕೆ ಗ್ರಾಮದವರು ಆಗ್ರಹಪಡಿಸುತ್ತಾರೆ. ಉಪಾಧ್ಯಾಯರು ಮತ್ತು ಮಕ್ಕಳ ತಲೆಯ ಮೇಲೆ ಬೀಳುವ ಪರಿಸ್ಥಿತಿಯಿರುತ್ತದೆ. ಮುರಿದ ಬಾಗಿಲು ರಿಪೇರಿ ಮಾಡಿಸುವುದಕ್ಕೆ ಗ್ರಾಮದವರು ಆಗ್ರಹಪಡಿಸುತ್ತಾರೆ. ಉಪಾಧ್ಯಾಯರು ಮತ್ತು ಮಕ್ಕಳ ತಲೆ ಮೇಲೆ ಅದು ಬಿದ್ದು ಹೋಗುವತನಕ ಗ್ರಾಮಪಂಚಾಯತಿಯವರೂ, ಸರಕಾರದವರೂ ಹಾಗೆಯೇ ಇರುತ್ತಾರೆ. ಇದು ಹಳ್ಳಿಯ ಒಂದು ಅಸಂಗತ ಪರಿಸ್ಥಿತಿ. ಇಂಥಾದ್ದನ್ನು ನಾನು ನೋಡಿದ್ದೇನೆ. ಇವುಗಳನ್ನು ಪರಿಹಾರ ಮಾಡುವುದಕ್ಕೆ ಇಂತಹ ಸಂದರ್ಭಗಳನ್ನು ಒಂದಲ್ಲ ಒಂದು ರೀತಿಯಲ್ಲಿ ದಾಟಿ ಹೋಗಿ ಅಲ್ಲಿ ಸರಿಯಾದ ವ್ಯವಸ್ಥೆಗಳನ್ನು ಕಲ್ಪಿಸುವುದಕ್ಕೆ ಸರ್ಕಾರದವರು ಮಾನವೀಯವಗಿ ವಿಚಾರ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಅಠಾರ ಕಛೇರಿ ಬುದ್ಧಿ ಅಲ್ಲ ಸ್ವಂತ ಬುದ್ಧಿ ಇರಬೇಕು; ಮಂತ್ರಿ ಮಂಡಲದ ಬುದ್ಧಿ ಅಲ್ಲದೆ, ಸರ್ಕಾರದ ತಲೆ ಅಲ್ಲದೆ, ಪ್ರತಿಯೊಬ್ಬರಿಗೂ ಭುಜದ ಮೇಲೆ ಒಂದು ತಲೆ ಇರುತ್ತದೆ; ಆ ತಲೆಯಲ್ಲಿ ಒಂದು ಮಿದುಳು ಇದ್ದಿರುತ್ತದೆ, ಅದನ್ನು ಉಪಯೋಗಿಸಿ ಸರ್ಕಾರಕ್ಕೆ ತಿಳಿಸಿ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ತಲೆಯಲ್ಲಿ ಬುದ್ಧಿ ಇಲ್ಲ ಎಂದರೆ ನನ್ನ ತಲೆಯಲ್ಲಿ ಇದೆ. ಅದನ್ನು ಸ್ವಲ್ಪ ದಾನವಾಗಿ ಕೊಡುತ್ತೇನೆ ಎಂದು ಸರ್ಕಾರಕ್ಕೆ ಹೇಳುವಷ್ಟು ಛಾತಿ ಅಥವಾ ವಿಶಾಲ ಮನೋಭಾವ ದೊಡ್ಡವರು ಮತ್ತು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತಿರುವ ಅಧಿಕಾರಿಗಳಿಗೆ ಬರಬೇಕು. ಆದ್ದರಿಂದ ಈ ಕಟ್ಟಡಗಳ ವಿಷಯದಲ್ಲಿ ಏನು ವಿಶೇಷ ಸನ್ನಿವೇಶ ಇದೆಯೋ ಇದನ್ನು ಸರ್ಕಾರದವರು ತೀವ್ರವಾಗಿ ಗಮನಿಸಬೇಕು. ತಾಲ್ಲೂಕು ಬೋರ್ಡು ಸಮಿತಿಗೆ ಹಣವನ್ನು ಕೊಡದೇ ಸಾವಿರಾರು ಶಾಲಾ ಕಟ್ಟಗಳನ್ನು ನೀವೇ ವಹಿಸಿಕೊಂಡು ಅವುಗಳನ್ನು ರೀಪೇರಿ ಮಾಡಿ ಇಟ್ಟು ಕೊಳ್ಳಬೇಕಾಗುತ್ತದೆ. ಅವುಗಳನ್ನು ವಿಸ್ತರಿಸಿ ಎಂದು ಹೇಳುವುದರಲ್ಲಿ ಏನೂ ಅರ್ಥವಿಲ್ಲ. ನಾನು ಕಳೆದ ಏಪ್ರಿಲ್‌ನಲ್ಲಿ ಪ್ರವಾಸ ಮಾಡಿದಾಗ ಕೆಲವು ಶಾಲೆಗಳನ್ನು ನೋಡಿದೆ. ಅವು ಈ ೧೦ ವರ್ಷಗಳಲ್ಲಿ ಮಕ್ಕಳಿಂದ ಕಿಕ್ಕಿರಿದು ಉಸಿರು ಕಟ್ಟುವಹಾಗಿವೆ. ೪೦ ಮಕ್ಕಳೂ ಕಲಿತುಕೊಳ್ಳತಕ್ಕ ಸ್ಥಳದಲ್ಲಿ ೧೦೦ ಮಕ್ಕಳು ಕುಳಿತಿರುವ ದೃಶ್ಯ. ಕಟ್ಟಡ ಕಿರಿದು, ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಇದೆ. ವಿಸ್ತರಿಸುವುದಕ್ಕೆ ಸರ್ಕಾರದವರು ಗ್ರಾಂಟ್ ಕೊಟ್ಟಿಲ್ಲ ಹಾಗೂ ಕಟ್ಟಡಕ್ಕೆ ಸ್ಥಳ ಅಕ್ವೈರ್ ಮಾಡಿಕೊಟ್ಟರೆ ನಮಗೆ ಅದು ಇದೆ, ಇವು ಇದೆ ಎಂದು ಊರಿನವರಿಗೆ ಇವರು ತೊಂದರೆ ಹೇಳುತ್ತಾರೆ. ತಾಲ್ಲೂಕು ಬೋರ್ಡ್ ಸಮಿತಿಯವರು ನಮಗೆ ಅಷ್ಟು ಹಣ ಇಲ್ಲ. ಇದ್ದದ್ದೇ ೩೦೦೦ ರೂಪಾಯಿ, ಅದನ್ನು ೩೦ ಹಳ್ಳಿಗಳಿಗೆ ಹಂಚಿದ್ದೇವೆ ಎಂದು ಹೇಳುತ್ತಾರೆ. ಒಂದು ಹಳ್ಳಿಗೆ ಹೆಚ್ಚು ಹಣ ಸಿಕ್ಕಿ ಒಳ್ಳೆಯ ಕಟ್ಟಡ ಆಗಬಹುದು, ಇನ್ನೊಂದು ಹಳ್ಳಿಗೆ ಹೆಚ್ಚು ಸಿಕ್ಕದೆ ಕೆಟ್ಟ ಕಟ್ಟಡ ಆಗಬಹುದು. ಇದನ್ನು ಗಮನಕ್ಕೆ ತೆಗೆದುಕೊಳ್ಳದೇ ಹೋದರೆ ಒಬ್ಬರ ತೊಡೆಯ ಮೇಲೆ ಒಬ್ಬರು ಕುಳಿತುಕೊಳ್ಳುವ ಪರಿಸ್ಥಿತಿಯನ್ನು ಈಗಾಗಲೇ ನಾನು ನೋಡಿದ್ದೇನೆ. ಕುಳಿತುಕೊಳ್ಳುವುದಕ್ಕೆ ಮಣೆಯೇ? ಅಥವ ಏನಾದರೂ ವ್ಯವಸ್ಥೆಯೇ? ಮಕ್ಕಳು ನೆಲದ ಮೇಲೆ ತೆವಳುತ್ತಾ ಇರುತ್ತಾರೆ. ಇಂಥಾ ಪರಿಸ್ಥಿತಿಯಲ್ಲಿ ಇವತ್ತು ವಿದ್ಯಾಭ್ಯಾಸವನ್ನು ಕೊಡುತ್ತೇವೆ. ಇದರಲ್ಲಿ ಈ ಕಡೆ ಒಂದು ಶಾಲೆ ಆದರೆ, ಅದರ ಬೆನ್ನಿಗೆ ಇನ್ನೊಂದು ಶಾಲೆ ಈ ಕಡೆ ಉಪಾಧ್ಯಾಯ ಭೂಗೋಳ ಪಾಠ ಮಾಡುತ್ತಾ ಇದ್ದರೆ, ಆ ಕಡೆ ಉಪಾಧ್ಯಾಯ ಲೆಕ್ಕದ ಪಾಠ ಮಾಡುತ್ತಾ ಇರುತ್ತಾನೆ. ಇಬ್ಬರಿಗೂ ಒಂದೇ ಹಲಗೆ ಇರುತ್ತದೆ. ಇಂಥ ಮಕ್ಕಳು ಬೆನ್ನಿಗೆ ಬೆನ್ನು ಕೊಟ್ಟು ಕುಳಿತಿರತಕ್ಕ ಪರಿಸ್ಥಿತಿಯಲ್ಲಿ ಏನು ವಿದ್ಯಾಭ್ಯಾಸ ಆದೀತು? ಮಲೆನಾಡಿನಂಥ ಪ್ರದೇಶ, ಕೊಡಗಿನಂಥ ಪ್ರದೇಶ ಮತ್ತು ಮರಮುಟ್ಟು ಸಿಕ್ಕದ ಬಿಜಾಪುರ ಪ್ರದೇಶ ಈ ಎಲ್ಲಾ ಪ್ರದೇಶಗಳನ್ನೂ ಗಮನಕ್ಕೆ ತೆಗೆದುಕೊಂಡು ದೊಡ್ಡ ಹಳ್ಳಿ ಯಾವುದು, ಯಾವುದಕ್ಕೆ ಹೆಚ್ಚು ಸಿಕ್ಕಬೇಕು, ಎಲ್ಲಿ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸಬೇಕು, ತುರ್ತಾಗಿ  ಪೂರೈಸಬೇಕು ಎಂಬುದನ್ನು ಗಮನಿಸಿ ಸರ್ಕಾರದವರು ಕ್ರಮ ತೆಗೆದುಕೊಳ್ಳದೆ ಹೋದರೆ ಇದು ಬಹಳ ದೊಡ್ಡ ಅಪಾಯಕ್ಕೆ ಹಾದಿಯಾಗುತ್ತದೆ.

ಇನ್ನೊಂದು ಮಾತನ್ನು ಈ ಸಂದರ್ಭದಲ್ಲಿ ಹೇಳಬೇಕು; ಕಟ್ಟಡ ಇಲ್ಲದೇ ಇದ್ದರೆ ಕಟ್ಟಡ ಕಟ್ಟಿ ಕೊಡಿ, ಹಣ ಕೊಡಿ, ನೀವೇ ಉಪಾಧ್ಯಾಯರನ್ನು ನೇಮಕ ಮಾಡಿ ಶಾಲೆಯನ್ನು ತೆರೆಯತ್ತೇವೆ ಎಂಬ – ಈ ಮಾರವಾಡಿ ಹೇಳುವ – ಷರತ್ತುಗಳನ್ನು ಸರ್ಕಾರದವರು ಅನೇಕ ಸಲ ಹಾಳುತ್ತಾರೆ. ೨೦ ಹುಡುಗರನ್ನು ಕೊಡಿ ಇಲ್ಲದೇ ಇದ್ದರೆ ೩೦೦೦ ರೂಪಾಯಿ ಡಿಪಾಸಿಟ್ಟು ಮಾಡಿ ಎಂದು ಈ ತರಹ ಸರ್ಕಾರದಿಂದ ಕೇಳುವುದು ಬಹಳ ಅಸಹನೀಯವಾದುದು; ಇಷ್ಟು ಬೇಜವಾಬ್ದಾರಿಯಿಂದ ಸರ್ಕಾರದವರು ವರ್ತಿಸುತ್ತಿದ್ದಾರಲ್ಲ ಎಂದು ಒಂದೊಂದು ಸಲ ಆಶ್ಚರ್ಯವಾಗುತ್ತದೆ. ೬ ವರ್ಷ ತುಂಬಿದ ಎಲ್ಲಾ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಕಡ್ಡಾಯ ಶಿಕ್ಷಣ ಕೊಡಬೇಕು. ಇದು ರಾಜ್ಯಾಂಗದ ನಿರ್ದೆಶನ ಎಂದು ಹೇಳುತ್ತೀರಿ. ಇದು ನಿಮ್ಮ ಒಪ್ಪಿತವಾದ ಗುರಿಯಾಗಿದೆ. ಇದನ್ನು ಕಾರ್ಯಗತ ಮಾಡುವುದರಲ್ಲಿ ಇದ್ದೇವೆ ಎಂದು ಒಂದೇ ಉಸಿರಿನಲ್ಲಿ ಹೇಳಿದರೆ, ಇನ್ನೊಂದು ಉಸಿರಿನಲ್ಲಿ ಶಾಲೆಗಳಿಗೆ ಹುಡುಗರನ್ನು ಕಳುಹಿಸಿದರೂ ಕೂಡ ಕೆಲವು ಊರುಗಳಲ್ಲಿ ೩ – ೪ ಮೈಲಿಗಳ ದೂರದಲ್ಲಿ ಶಾಲೆ ಹತ್ತಿರ ಎಲ್ಲೂ ಇಲ್ಲ ಎಂದರೂ ಅವರಿಗೂ ಈ ಉತ್ತರವನ್ನು ಸರ್ಕಾರದವರು ಕೆಲವು ಸಲ ಕೊಡುತ್ತಾರೆ. ಇದನ್ನೂ ಕೂಡ ಮಾನ್ಯ ವಿದ್ಯಾ ಸಚಿವರು ವಿಚಾರ ಮಾಡಬೇಕು. ಮಕ್ಕಳ ಸಂಖ್ಯೆ ೧೯ ಇರಬಹುದು; ಶಾಲೆ ತೆಗೆಯಲಿಕ್ಕೆ ೨೦ ಜನ ಹುಡುಗರು ಇಲ್ಲ ಎಂದು ಶಾಲೆ ತೆಗೆಯದೇ ಹೋದರೆ ೧೯ ಮಕ್ಕಳ ಗತಿ ಏನು? ಕೆಲವು ಸಲ ಕಾನೂನಿಗೆ ಕಣ್ಣು ಇರುವುದಿಲ್ಲ ಹೃದಯ ಮನಸ್ಸು ಇರುವುದಿಲ್ಲ. ಇಂತಹ ಕಾನೂನುಗಳನ್ನು ಜನರ ಮುಂದೆ ಹಿಡಿಯುವುದರಿಂದ ಏನು ಪ್ರಯೋಜನ? ೧೯ ಮಕ್ಕಳನ್ನು ಕೊಡುವ ಹಳ್ಳಿಯೇ ಆದಾಗ ೨೦ ಮಕ್ಕಳೂ ಇಲ್ಲ ಎಂದು ಶಾಲೆ ತೆರೆಯದಿದ್ದರೆ ೧೯ ಮಕ್ಕಳು ಬೇರೆ ಕಡೆ ಹೋಗಿ ಊಟ ಎಲ್ಲಿ ಮಾಡಬೇಕು? ಅವರಿಗೆ ವಿದ್ಯಾಭ್ಯಾಸ ಹೇಗೆ ಕೊಡಿಸಬೇಕು? ಈ ಒಂದು ಸಂದರ್ಭವನ್ನು ತಾವು ತಪ್ಪಿಸಿಕೊಂಡು ಹೊಣೆಗಾರಿಕೆಯನ್ನು ತೀರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾವ ಆರು ವರ್ಷ ತುಂಬಿದ ಹೆಣ್ಣು ಮತ್ತು ಗಂಡು ಮಗುವನ್ನೂ ಶಾಲೆಯ ಹೊರಗಡೆ ಅಲೆಯುವುದನ್ನು ನೋಡುವುದಕ್ಕೆ ನನ್ನಿಂದ ಸಾಧ್ಯವಿಲ್ಲ.

ಇನ್ನು ಸರ್ಕಾರದವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆಯತಕ್ಕ ಮಕ್ಕಳಿಗೆ ಅದರಲ್ಲೂ ಹಳ್ಳಿಗಾಡಿನ ಜನಾಂಗದವರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ಕೊಡಬೇಕೆಂದು ಅದಕ್ಕಾಗಿ ಹಣವನ್ನು ಮೀಸಲಾಗಿಟ್ಟಿದ್ದಾರೆ. ಆದರೆ, ಈ ಯೋಜನೆ ಕೆಲವು ವೇಳೆ ಕೇವಲ ಒಂದು ಪ್ರಚಾರಾರ್ಥಯೋಜನೆ ಆಗಿರುತ್ತದೆಯೇ ವಿನಃ ನಿಜವಾಗಿಯೂ ಜನರಿಗೆ ಇದರಿಂದ ಏನು ಸೌಲಭ್ಯ ದೊರೆಯಬೇಕೋ ಅದು ದೊರೆಯುತ್ತಿಲ್ಲ. ಕೆಲವು ಮಕ್ಕಳಿಗೆ ಬಟ್ಟೆಕೊಡಬೇಕೆಂಬ ಒಂದು ವ್ಯವಸ್ಥೆ ಮಾಡಿದ್ದಾರೆ. ಆ ಬಟ್ಟೆಗಳನ್ನು ಸರಬರಾಜು ಮಾಡುವುದಲ್ಲಿ ಅಳತೆಗೆ ಸರಿಯಾದ ಬಟ್ಟೆಗಳನ್ನು ತರುವುದಿಲ್ಲ. ರೆಡಿಮೇಡ್ ಷಾಪುಗಳಲ್ಲಿ ಕೊಂಡುಬಿಡುತ್ತಾರೆ. ಆರಾಣೆ ಬೆಲೆ ಇದ್ದರೆ ಎಂಟಾಣೆ ಬಿಲ್ ಹಾಕಿಸಿ ಅದರಲ್ಲೂ ಎರಡಾಣೆ ಜೇಬಿಗೆ ಬಿಡುವ ಜನಗಳಿದ್ದಾರೆ. ನಮ್ಮ ಕಡೆ ಹೆಣದ ಬಾಯಿನಲ್ಲಿ ರತಕ್ಕ ಬೆಣ್ಣೆ ತಿನ್ನ ತಕ್ಕ ಜನ ಎಂದು ಹೇಳುತ್ತಾರೆ. ಅಂಥ ಜನ ಇವರು. ಹರಿಜನರ ಮಕ್ಕಳ ಬಟ್ಟೆಗಾಗಿ ಐದು ರೂಪಾಯಿ ಗ್ರಾಂಟ್ ಕೊಟ್ಟಿದ್ದರೆ ಅದರಲ್ಲೂ ಒಂದೂವರೆ ರೂಪಾಯಿ ಉಳಿಸಿಕೊಳ್ಳುವಂಥ ಜನ ನಮ್ಮಲ್ಲಿದ್ದಾರೆ. ವಿಚಾರಗಳು ನಾವು ಎಷ್ಟರಮಟ್ಟಿಗೆ ಕೆಟ್ಟು ಹೋಗಿದ್ದೇವೆಂಬುದನ್ನು ಸೂಚಿಸುತ್ತವೆ. ಮಕ್ಕಳ ವಿಚಾರದಲ್ಲೂ ಅನೇಕ ಪುಣ್ಯಾತ್ಮರು ನಾನು ರೀತಿಯಲ್ಲಿ ದಾನಧರ್ಮಗಳನ್ನು ಮಾಡುತ್ತಾರೆ. ಹಾಗೆ ಯಾರಾದರೂ ಹಣಕೊಟ್ಟರೆ ಅದಕ್ಕೆ ಒಂದು ಸರಿಯಾದ ವ್ಯವಸ್ಥೆ ಬೇಡವೇ? ನಮ್ಮ ಕಡೆ ಹುಡುಗರು ಮೈಲುಗಳಿಂದ ಬರುತ್ತಾರೆ. ಅವರಿಗೆ ದಿನವೆಲ್ಲ ಊಟ ಇರುವುದಿಲ್ಲ. ಸಂಜೆ ಮನೆಗೆ ಹೋಗುವಾಗ ಅವರ ಬಾಯಲ್ಲಿ  ಒಂದು ಹನಿ ಎಂಜಲು ಸಹಾ ಇರುವುದಿಲ್ಲ. ಈ ಹಿಂದೆ. ಡಾ. ಲೋಹಿಯರವರು ಒಬ್ಬ ಮನುಷ್ಯನ ಆದಾಯ ಮೂರಾಣೆ ಇದೆಯೆಂದು ಹೇಳಿದಾಗ ಸಭೆಯಲ್ಲಿ ಒಂದು ಕೋಲಹಲವೆ ಎದ್ದಿತ್ತು. ಭರತಖಂಡದಲ್ಲಿ ೨೭ ಕೋಟಿ ಜನ ಹಳ್ಳಿಗಾಡಿನಲ್ಲಿರುತ್ತಾರೆ. ಪೇಟೆಯಲ್ಲಿ ಇರತಕ್ಕ ಜನರಿಗೆ ಹೇಗೋ ದುಡ್ಡು ಬರುತ್ತದೆ. ಅವರು ನಾಯಿಯ ಬಾಲಕ್ಕೂ ದುಡ್ಡನ್ನು ಕಟ್ಟಬಲ್ಲರು. ಪೇಟೆಯಲ್ಲಿ ರತಕ್ಕ ಒಬ್ಬ ಕಂಟ್ರಾಕ್ಟರನ ಮಗ ದಿನಕ್ಕೆ ಹತ್ತು ರೂಪಾಯಿಗಳನ್ನು ಬೇಕಾದರೂ ಖರ್ಚುಮಾಡಬಲ್ಲ. ಮಂತ್ರಿಗಳ ಮಕ್ಕಳು ಕಾರಿನಲ್ಲೇ ಓಡಾಡಬಹುದು. ಆದರೆ ಹಳ್ಳಿ ಮಕ್ಕಳಿಗೆ ಗಂಜಿಗೆ ಉಪ್ಪು ಸಿಕ್ಕುವುದು ಕಷ್ಟವಾಗಿರುತ್ತದೆ. ಶೀತ ಪ್ರದೇಶದಲ್ಲಿ ಬೆಳಗ್ಗೆ ನೀರು ಕುಡಿಯುವುದಕ್ಕಾಗುವುದಿಲ್ಲ; ಅಂಥ ಬಡಮಕ್ಕಳಿಗೆ ಕಾಫಿ ಎಲ್ಲಿಂದ ಬರಬೇಕು? ಬಡವರ ಮಕ್ಕಳಿಗೆ ಅನೇಕ ವೇಳೆ ಊಟಕ್ಕೆ ತೊಂದರೆ ಇರುತ್ತದೆ. ಮಕ್ಕಳಿಗೆ ಪಾಠ ಪ್ರವಚನಗಳಲ್ಲಿ ಮನಸ್ಸು ಹೇಗೆ ತಾನೆ ಸರಿಯಾಗಿ ನಿಲ್ಲಲು ಸಾಧ್ಯ? ಹಳ್ಳಿಗಾಡಿನಲ್ಲಿ ರತಕ್ಕ ಅನೇಕ ತಂದೆ – ತಾಯಿಗಳಿಗೆ ಅವರ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ; ಏಕೆಂದರೆ ಆ ಮಕ್ಕಳಿಗೆ ಪುಸ್ತಕ, ಬಟ್ಟೆ, ಸೀಸದ ಕಡ್ಡಿ, ಫೀಜು, ಕೈಗೆ ಎರಡಾಣೆ ಇಷ್ಟನ್ನು ಒದಗಿಸಲು ಸಾಧ್ಯವಿರುವುದಿಲ್ಲ. ಪಟ್ಟಣದಲ್ಲೂ ಇಂಥ ಕೆಲವು ಜನಗಳಿರುತ್ತಾರೆ. ಅಂಥವರು ಯಾರೆಂದರೆ ಬಿನ್ನಿ, ಮಿನರ್ವ ಇತ್ಯಾದಿ ಮಿಲ್ಲುಗಳಲ್ಲಿ ಕೆಲಸಮಾಡತಕ್ಕ ಜನರು; ಪೋಲೀಸ್ ಕಾನ್‌ಸ್ಟೇಬಲ್‌ಗಳು, ಬಡಉಪಧ್ಯಾಯರುಗಳು ಇಂಥವರು ಪಟ್ಟಣಗಳಲ್ಲಿದ್ದರೂ ಅವರು ಬಡವರೇನೆ! ಆದರೆ ಈ ಉಪಾಧ್ಯಾಯರ ಮಕ್ಕಳಿಗೆ ಶಾಲಾ ಫೀ ಇಲ್ಲ ಎಂದು ಮಾನ್ಯ ಮಂತ್ರಿಗಳು ಹೇಳಬಹುದು. ಆದರೆ ಈ ಉಪಾಧ್ಯಾಯರ ಮಕ್ಕಳಿಗೆ ಶಾಲಾ ಫೀ ಇಲ್ಲ ಎಂದು ಮಾನ್ಯ ಮಂತ್ರಿಗಳೂ ಹೇಳಬಹುದು. ಆದರೆ ಈ ಹುಡುಗ ಶಾಲೆಗೆ ಹೋಗಬೇಕಾದರೆ ಅತನಿಗೆ ಚಡ್ಡಿ, ಅಂಗಿ, ಪುಸ್ತಕ, ಪೆನ್‌ಸಿಲ್‌ಕಡ್ಡಿ ಇತರೆ ವೆಚ್ಚಕ್ಕಾಗಿ ಕೈಯಲ್ಲಿ ದಿನಕ್ಕೆ ಒಂದೆರಡಾಣೆ ದುಡ್ಡು ಇವನ್ನೆಲ್ಲ ಲೆಕ್ಕ ಹಾಕಿದರೆ ಇದೆಷ್ಟಾಗುತ್ತದೆ?

ಹಾಗೆ ಕೇಳಿದರೆ ಮಾನ್ಯ ವಿದ್ಯಾ ಸಚಿವರು ಒಂದು ರೀತಿಯಾಗಿ ಉತ್ತರ ಕೊಡುತ್ತಾರೆ. ಅವರ ತಲೆಯಲ್ಲಿ ವಿಷಯಗಳು ಬರುತ್ತಿರುತ್ತವೆ. ಪಾದರಸದಂತೆ ಅವರ ಬುದ್ಧಿಯೂ ಓಡುತ್ತಿರುತ್ತದೆ. ಇದು ಅಲ್ಲದೆ ಈಚೆಗೆ ಅವರೇನು ಮಾಡಿದ್ದಾರೆಂದರೆ, ಪ್ರತಿಯೊಂದು ಮಗುವೂ ಕೂಡ ಎರಡು ರೂಪಾಯಿಗಳನ್ನು ಕಲ್ಯಾಣ ನಿಧಿಗಾಗಿ ಕೊಡಬೇಕೆಂದು ನಿಗದಿ ಮಾಡಿದ್ದಾರೆ. ಇಂತಹ ನಿಧಿಯನ್ನು ಹೈಸ್ಕೂಲುಗಳಿಗೆ ಮಾತ್ರ ಎಂದರೂ ಕೊಡುವುದು ಕಷ್ಟವಾಗುತ್ತದೆ. ಕೆಲವು ಕಡೆ ಶ್ರೀಮಂತರ ಮಕ್ಕಳು ಪ್ರೈಮರಿ ಶಾಲೆಗಳಲ್ಲಿ ಓದಿಸುವುದಕ್ಕೆ ಸುಮಾರು ಇನ್ನೂರು ರೂಪಾಯಿಗಳಷ್ಟು ಖರ್ಚು ಮಾಡುತ್ತಿದ್ದಾರೆ. ಸುಮಾರು ೬, ೭ ಮತ್ತು ೮ ವರ್ಷದ ಮಕ್ಕಳು ಬೆಂಗಳೂರಿನಲ್ಲಿರುವ ಪ್ರೈಮರಿಶಾಲೆಗಳಲ್ಲಿ ಓದುತ್ತಿದ್ದಾರೆ. ಡೆಹರಾಡೂನಿನಲ್ಲಿ ಹಾಗೂ ಮಸ್ಸೂರಿ ಮುಂತಾದ ಕಡೆಗಳಲ್ಲಿರುವ ಶಾಲೆಗಳಿಗೆ ಹೋಗುವ ಮಕ್ಕಳಿಂದಲೂ ಶುಲ್ಕವನ್ನು ವಸೂಲು ಮಾಡುತ್ತಿದ್ದಾರೆ. ಶಾಲೆಗಳಿಗೆ ಹೋಗುವ ಮಕ್ಕಳಿಗಾಗಿ ಶಾಲೆಯು ಅರಂಭವಾಗಿ ಅವರ ವಿದ್ಯಾಭ್ಯಾಸವು ಪೂರೈಕೆಯಾಗುವವರೆಗೆ ಕೆಲವು ಸೌಕರ್ಯಗಳನ್ನು ಕೊಡಬೇಕೆಂದು ಅಷ್ಟು ಹಣವನ್ನು ಕೊಡಬೇಕೆಂದು ಮಾಡಿರುವುದನ್ನು ನಾವು ಒಪ್ಪುತ್ತೇವೆ. ಆದರೆ, ಕೆಲವು ಬೆರೆ ಸಂದರ್ಭಗಳಲ್ಲಿಯೂ ಇಂತಹ ಶಾಲೆಗಳಲ್ಲಿ ಹಣದ ವಸೂಲಿ ನಡೆಯುತ್ತಿದೆ. ಇದನ್ನು ಮಾಡಿರುವುದರಿಂದ ಮಕ್ಕಳು ಶಾಲೆಗೆ ಬರುವುದು ಕಷ್ಟವಾಗುತ್ತದೆ. ಅಲ್ಲದೆ ಸರ್ಕಾರದವರು ಮಾನವೀಯತೆಯ ದೃಷ್ಟಿಯಿಂದ ಇಂತಹ ಸೌಲಭ್ಯಗಳನ್ನು ಕೊಡುವಂತಿರಬೇಕು ಎಂದು ಹೇಳುತ್ತ, ಇದರಲ್ಲಿ ಬಟ್ಟೆಯನ್ನೂ ಕೊಡಬೇಕೆಂದು ಮಾಡಿದ್ದಾರೆ. ಇದಕ್ಕಾಗಿ ಲಷ್ಕಾಂತರ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿ, ಸುಮಾರು ಐದು ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಬೇಕು ಎಂದು ಹೇಳುವಾಗ ಇದರ ವ್ಯವಸ್ಥೆ ಚೆನ್ನಾಗಿ ನಡೆಯಬೇಕು. ಆದರೆ, ಹಣವೇನೋ ಖರ್ಚಾಗುತ್ತದೆ. ಅದರಂತೆ ಇದರ ವ್ಯವಸ್ಥೆ ಸರಿಯಾಗಿ ಆಗುತ್ತಿದೆ ಎನ್ನುವುದು ಕಾಣುತ್ತಿಲ್ಲ. ಇವೊತ್ತು ಸೆಪ್ಟಂಬರ್ ತಿಂಗಳು ೭ ನೇ ತಾರೀಖಿನಲ್ಲಿದ್ದೇವೆ. ಆದರೆ, ಕೆಲವು ಊರುಗಳಲ್ಲಿರುವ ಶಾಲೆಗಳಿಗೆ ಇನ್ನೂ ದುಡ್ಡು ತಲುಪಿಯೇ ಇಲ್ಲ. ದುಡ್ಡನ್ನು ಹಂಚುವ ಚಾನಲ್ಲು ಏನಿದೆ, ಅದರಿಂದ ಹಣದ ವರ್ಗಾವಣೆಯ ಗೊಂದಲದಿಂದ ಮತ್ತು ಮಂತ್ರಿಗಳ ಸ್ವಂತ ಕೆಲಸಗಳಿಂದಲೂ…. ಹೀಗೆ ಬೇರೆ ಬೇರೆ ಕೆಲಸಗಳು ಅಡ್ಡ ಬರುವುದರಿಂದ ತಡವಾಗುತ್ತಿದೆ. ಕೊಡಚಾದ್ರಿ ಮತ್ತು ಪಶ್ಚಿಮ ತುದಿಯಲ್ಲಿರುವ ಹುಲಿಕಲ್ಲು ಇತ್ಯಾದಿ ಊರುಗಳಿಗೆ ಹೋಗಬೇಕಾದರೆ ಡಿ.ಡಿ.ಪಿ..ನಿಂದ ಡಿ.ಪಿ.; ಡಿ.ಪಿ. ಕಡೆಯಿಂದ ಇನ್ಸ್ಪೆಕ್ಟರು ಕಡೆಗೆ, ಇನ್ಸ್ಪೆಕ್ಟರು ಕಡೆಯಿಂದ ಹೆಡ್ ಮಾಸ್ಟರವರ ಕಡೆಗೆ ಹಣ ಹೋಗಿ ತಲುಪಬೇಕಾದರೆ ಬಹುಶಃ ನವಂಬರು ಕೊನೆಯ ಹೊತ್ತಿಗೆ ಹೋದರೆ ಅವರ ಪುಣ್ಯ.

ನಾವೆಲ್ಲಾ ಈಗ ಸ್ಕಾಲರ್‌ಷಿಪ್ಪುಗಳನ್ನು ಹಂಚುವುದನ್ನು ನೋಡುತ್ತಿದ್ದೇವೆ. ಕೆಲವು ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ಪು ೫೦೦ – ೬೦೦ ರೂಪಾಯಿಗಳಷ್ಟು ಅವರ ವಿದ್ಯಾಭ್ಯಾಸ ಮುಗಿದಮೇಲೆ ತಲುಪಿರುವ ಸಂದರ್ಭಗಳು ಇವೆ. ಇಂತಹ ಒಂದು ಸ್ಥಿತಿ ಈಗ ಇದೆ. ಈಗ ಬಟ್ಟೆಯನ್ನು ಹಂಚಬೇಕೆಂದು ಮಾಡಿದ್ದಾರೆ. ಇದನ್ನು ಕೊಡುವುದು ಅತ್ಯಗತ್ಯ. ಆದರೆ, ಕೆಲವು ಕಡೆ ಒಂದು ಹತ್ತಿಪ್ಪತ್ತು ಮಂದಿ ಹರಿಜನರ ಮಕ್ಕಳುಗಳೂ ಇವೆ. ಅವು ಶಾಲೆಗೆ ಹೋಗಲು ಬಟ್ಟೆಯೇ ಇರುವುದಿಲ್ಲ. ಅಂತಹ ಮಕ್ಕಳು ಆರು ವರ್ಷ ತುಂಬಿದಾಕ್ಷಣ ಶಾಲೆಗೆ ಕಳುಹಿಸಬೇಕೆಂದು ಕಡ್ಡಾಯ ಮಾಡಿದ್ದೀರಿ! ಇವರ ಬಗ್ಗೆ ಸರ್ಕಾರ ಸರ್ವೆ ಮಾಡಿ ಎಲ್ಲೆಲ್ಲೆ ಎಷ್ಟು ವರ್ಷದ ಮಕ್ಕಳುಗಳು ಇವೆ ಎನ್ನುವುದನ್ನು ತಿಳಿಯಲು ಸರಿಯಾದ ಕಾರ್ಯಕ್ರಮವನ್ನು ಹಾಕಿಕೊಂಡಂತೆ ತೋರುವುದಿಲ್ಲ. ಎಲ್ಲ ಮಕ್ಕಳನ್ನು ಈಗ ಕಡ್ಡಾಯವಾಗಿ ವಿದ್ಯಾಭ್ಯಾಸಕ್ಕಾಗಿ ಶಾಲೆಗಳಿಗೆ ಕಳುಹಿಸುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ಇದನ್ನು ಕಾರ್ಯಗತ ಮಾಡುವಾಗ ಆರು ವರ್ಷದ ಮಕ್ಕಳು ಎಂದು ಶಾಲೆಗೆ ಕಳುಹಿಸುತ್ತಾರೆ. ಆದರೆ ೭ನೆಯ ವರ್ಷದಲ್ಲಿ ಎಷ್ಟು ಜನ ಮಕ್ಕಳು ಶಾಲೆ ಬಿಟ್ಟರು ಎನ್ನುವುದು ಅಂಕಿ ಸಂಖ್ಯೆಗಳೇನಾದರೂ ಇವೆಯೇ ಎಂದರೆ ಅದು ಕೂಡ ಇಲ್ಲ. ಎಷ್ಟೋ ಕಡೆ ನಾವು ನೋಡಿರುವಂತೆ ಗೇಣಿ ಜಮೀನು ಮಾಡುವವರ ಮಕ್ಕಳು ೭, ೮, ೯ ವರ್ಷದ ಹುಡುಗರುಗಳು ಕಟ್ಟಿಕೊಂಡು ಉಳುವುದಕ್ಕೆ ಹೋಗುತ್ತಾರೆಯೇ ಹೊರತು, ಅವರನ್ನು ಶಾಲೆಗಳಿಗೆ ಸೇರಿಸುವುದಕ್ಕೆ ಪ್ರಯತ್ನ ಮಾಡುವುದಿಲ್ಲ. ಹೀಗೆ ಲೆಕ್ಕಕ್ಕೆ ಆರು ತುಂಬಿದ ಮಕ್ಕಳು ಎಷ್ಟು ಜನರು ಶಾಲೆಗಳಿಗೆ ಬಂದು ಏಳನೇ ವರ್ಷದಲ್ಲಿ ಬಿಡುತ್ತಿರುವರು ಎನ್ನುವುದರ ಲೆಕ್ಕವೂ ಸಿಕ್ಕುತ್ತಿಲ್ಲ…

ಇನ್ನು ‘ಮಿಡ್ ಡೇ ಮೀಲ್ಸ್’ ಎನ್ನುವುದನ್ನು ಜಾರಿಗೆ ತರಬೇಕು ಎಂದು, ಇದಕ್ಕಾಗಿ ತಾಲ್ಲೂಕು ಅಭಿವೃದ್ಧಿ ಮಂಡಲಿಗಳವರು ಮತ್ತು ಶಾಲೆಯ ಉಪಾಧ್ಯಾಯರುಗಳೂ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳುತ್ತಿದ್ದಾರೆ ಇದರಲ್ಲಿ ಹೆಚ್ಚಿನ ಆಸಕ್ತಿಯನ್ನು ಶಾಲೆಯಲ್ಲಿರುವ ಉಪಾಧ್ಯಾಯರುಗಳೇ ವಹಿಸಬೇಕು ಹಾಗೂ ಗ್ರಾಮಸೇವಕರು ಇದಕ್ಕೆ ಸಹಾಯ ಮಾಡಬೇಕು. ಅಲ್ಲದೆ ಇದರಲ್ಲಿ ಇನ್ನೊಂದು ವಿಚಾರವನ್ನು ತಮಗೆ ಹೇಳಬೇಕಾಗಿದೆ. ನಿಜವಾಗಿಯೂ ಕೆಲವು ಕಡೆ ಕೊಡುವ ಪದಾರ್ಥಗಳು ತಿನ್ನಲು ಯೋಗ್ಯವಾಗಿರುವುದಿಲ್ಲ. ಅವು ಹೇಗಿರುತ್ತದೆ ಎಂದರೆ ಎಮ್ಮೆ ಕರ ಹಾಕಿದಾಗ ಮಡ್ಡಿಯಂತೆ ಕಲ್ಲು ಮಣ್ಣು ಎಲ್ಲವನ್ನೂ ಕಲೆಸಿ ಕೊಡುವಂತಿರುತ್ತದೆ. ಇಂತಹ ಪದಾರ್ಥಗಳನ್ನು ತಿನ್ನಬೇಕೆಂದು ಕೊಟ್ಟರೆ ಬಡವರ ಮಕ್ಕಳು ಹೇಗೋ ತಿನ್ನುತ್ತಾರೆ. ಅದರೆ ಶ್ರೀಮಂತರ ಮಕ್ಕಳು ಅದನ್ನು ಆಚೆಗೆ ಚೆಲ್ಲುತ್ತಾರೆ. ಬಡವರ ಮಕ್ಕಳು ಇನ್ನು ತಿಂದು ಅಪೆಂಡಿಸೈಟಿಸ್ ಎನ್ನುವ ರೋಗಕ್ಕೆ ತುತ್ತಾಗುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತೇವೆಂದು ಮಾಡಿದರೂ ಅದನ್ನು ಅಸಕ್ತಿಯಿಂದ ಕಳಕಳಿಯಿಂದ ಮಾಡದೇ ಹೋದರೆ ಇದರಿಂದೇನೂ ಅನುಕೂಲವಾಗುವುದಿಲ್ಲ.

ಸ್ವಾಮಿ, ‘ ಮಿಡ್ ಡೇ ಮೀಲ್ಎಂದು ಏನು ಕೊಡುತ್ತಾರೆಯೋ ಅದು ಎಲ್ಲ ಶಾಲೆಗಳಲ್ಲಿ ದೊರೆಯುವುದಿಲ್ಲ. ಇದೊಂದು ಪ್ರಚಾರ ಸಾಧನವಾಗಿದೆಯೇ ಹೊರತು, ಇದು ಅಂತಃಕರಣಪೂರ್ವಕವಾಗಿ ನಿಷ್ಠೆಯಿಂದ ಕಾರ್ಯಗತವಾಗುತ್ತಿಲ್ಲ. ಮಕ್ಕಳಿಗೆ ದೊರೆಯಬೇಕಾದ ಹಣ ಪ್ರಾಮಾಣಿಕವಾಗಿ ದೊರೆಯುತ್ತಿಲ್ಲ. ಈ ಯೋಜನೆ ಸಫಲವಾಗ ಬೇಕೆಂಬ ಕಳಕಳಿಯ ಉದ್ದೇಶವಿಲ್ಲ. ಇದನ್ನು ತೀವ್ರ ಸರಿಪಡಿಸಬೇಕು. ೨೦ ಹುಡಗರಿಗೆ, ೫೦ ಮಕ್ಕಳಿಗೆ ಮಧ್ಯಾಹ್ನದ ಆಹಾರ ಕೊಡಲಾಯಿತು ಎಂದು ಲೆಕ್ಕದಲ್ಲಿ ಮಾತ್ರ ಲೆಕ್ಕದಲ್ಲಿ ಈ ಯೋಜನೆ ಸಫಲಮಾಡಿ ತೋರಿಸುವುದು ನಮಗೆ ಬೇಡ. ರುಚಿ ಯಾವಾಗಲೂ ತಿಂಡಿ ತಿನ್ನುವುದರಲ್ಲಿ ಇದೆ. ಮಕ್ಕಳು ಊಟ ಮಾಡಬೇಕು, ಮೈ ಹಿಡಿಯಬೇಕು, ಅವರು ಸಮಾಧಾನಪಡಬೇಕು. ಇದು ಆಗದಿದ್ದರೆ ಈ ಯೋಜನೆ ನಿಷ್ಫಲವಾಗುತ್ತದೆ. ಅಮೇರಿಕಾ ದೇಶದವರು ನಮಗೆ ಹಾಲಿನ ಪುಡಿ ಕಳುಹಿಸುತ್ತಿದ್ದಾರೆ. ಅದನ್ನು ಶಾಲಾ ಮಕ್ಕಳಿಗೆ ಒದಗಿಸಬೇಕೆಂಬುದು ಅವರ ಮುಖ್ಯ ಉದ್ದೇಶ. ಆದರೆ ಈ ಹಾಲಿನ ಪುಡಿ ಮಕ್ಕಳಿಗೆ ಕೊಡುವುದಕ್ಕೆ ಉಪಯೋಗಿಸದೆ, ಅದನ್ನು ಮಾರ್ಕೆಟ್ಟಿನಲ್ಲಿ ಮಾರಾಟ ಮಾಡಿಕೊಂಡು ದುಡ್ಡ ಸಂಪಾದನೆ ಮಾಡುವ ಉದ್ಯೋಗವಾಗಿದೆ. ಕೇಂದ್ರದಲ್ಲಿಯೂ ಎಂ.ಪಿ. ಇದ್ದಾರೆ. ನಮ್ಮಲ್ಲಿಯೂ ಎಂ. ಪಿ. ಇದ್ದಾರೆ. ನಮ್ಮಲ್ಲಿಯ ಎಂ.ಪಿ ಎಂದರೆ ಮಿಲ್ಕ್ ಪೌಡರ್ ಬ್ಯಾರೆಲ್‌ಗಟ್ಟಲೆ ಮಾರಾಟ ಮಾಡಿ ದಕ್ಕಿಸಿಕೊಂಡು ನೂರಾರು ರೂಪಾಯಿ ಸಂಪಾದನೆ ಮಾಡುವವರು ಅಗಿದ್ದಾರೆ. ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ಬೇಗನೆ ತಡೆಗಟ್ಟಬೇಕಾದುದು ಅಗತ್ಯವಾಗಿದೆ. ಈ ಸಂದರ್ಭದಲ್ಲಿ ನಾನು ಒಂದು ಸೂಚನೆ ಮಾಡುತ್ತೇನೆ. ಈ ಹಾಲಿನ ಪುಡಿಯನ್ನು ಒದಗಿಸಿ, ಬ್ಯಾರೆಲ್ ಒಡೆದು ಹಾಲಿನ ಪುಡಿ ಕೊಡುವ ಸಮಾರಂಭ ಮಾಡಬೇಕು.

ಹಾಲಿನ  ಪುಡಿಯನ್ನು ಕೊಡತಕ್ಕ ದೇಶದವರು ಇತ್ತೀಚೆಗೆ ವಿವಂಚನೆ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೇ ಪರಿಣಾಮ ಉಂಟು ಮಾಡುವುದಿಲ್ಲ. ಆದುದರಿಂದ ಇದಕ್ಕೆ ಆಸ್ಪದ ಕೊಡಕೂಡದು. ಉದಾರವಾಗಿ ಕೊಟ್ಟಿರತಕ್ಕಂಥ ಹಾಲಿನ ಪುಡಿಯನ್ನು ಮಾರಾಟ ಮಾಡಿಕೊಂಡು ಹಣ ಸಂಪಾದಿಸುವ ಅಧೋಗತಿಯ ಮಟ್ಟಕ್ಕೆ ಇಳಿದಿರುವುದು ಭೂಷಣವಲ್ಲ. ಇತ್ತೀಚೆಗೆ ಕೇರಳದಿಂದ ಹಾಲಿನ ಪುಡಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದುದನ್ನು ಪೋಲಿಸರು ಹಿಡಿದಿದ್ದಾರೆ. ಮದ್ರಾಸಿನಿಂದ ತರುವ ಹಾಲಿನ ಪುಡಿಯನ್ನು ಆಂಧ್ರದಲ್ಲಿ, ಆಂಧ್ರದ್ದು ಕೇರಳದಲ್ಲಿ, ಕೇರಳದ್ದು ಮೈಸೂರಿನಲ್ಲಿ ಈ ರೀತಿ ಮಾರಾಟವಾಗುತ್ತಿದೆ. ಈ ರೀತಿ ಮಾರಾಟ ಮಾಡುವವರಿಗೆ ಬ್ಯಾರಲ್ ಗಟ್ಟಲೆ ಹಾಲಿನ ಪುಡಿ ದೊರೆಯುತ್ತದೆ. ಒಳ್ಳೇ ಸದುದ್ದೇಶದಿಂದ ಕೊಟ್ಟಿರತಕ್ಕ ಹಾಲಿನ ಪುಡಿಯನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಲೆಕ್ಕಪತ್ರದಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಆದರೆ ವಾಸ್ತವಂಶ ಬೇರೆ ರೀತಿಯಾಗಿದೆ. ಇದನ್ನು ಮಾನ್ಯ ವಿಧ್ಯಸಚಿವರು ಕಣ್ಣು ಬಿಟ್ಟು ನೋಡಿ ಕೂಡಲೇ ಸರಿಪಡಿಸಬೇಕು. ಒಂದೊಂದು ಊರಿಗೆ ಒಂದೊಂದು ಸಂಸ್ಥೆಗೆ ಎಷ್ಟೆಷ್ಟು ಹಂಚಲಾಯಿತು ಎನ್ನುವುದಕ್ಕೆ ಅಂಕಿ – ಅಂಶಗಳ ವಿವರ ಕೊಟ್ಟು ಪ್ರಕಟಿಸಬೇಕು. ಯಾವ ಯಾವ ಗ್ರಾಮಕ್ಕೆ ಯಾವ ಯಾವ ಏಜೆನ್ಸೀ ಮೂಲಕ ಎಷ್ಟೆಷ್ಟು ಕೊಟ್ಟಿದೆ ಅದನ್ನು ಸಹ ಆಗಾಗ್ಗೆ ತಿಳಿಸಬೇಕು. ಅಂದರೆ ಯಾವ ಶಾಲೆಗೆ ಎಷ್ಟು ಹಾಲಿನಪುಡಿ ಒದಗಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಹಾಲಿನಪುಡಿ, ಮಧ್ಯಾಹ್ನದ ಊಟ, ಬಟ್ಟೆ ಇವುಗಳನ್ನು ಹಂಚುವಾಗ ಗ್ರಾಮ ಪಂಚಾಯತಿಯ ಸದಸ್ಯರು, ಉಪಾಧ್ಯಾಯರು ಹಾಜರ್ ಇರಬೇಕು. ಸಾರ್ವಜನಿಕರಿಗೆ ಈ ವಿಷಯದಲ್ಲಿ ಕೆಲವು ಸೌಲಭ್ಯ ಕೊಡಬೇಕು. ಈಗ ಕೊಟ್ಟಿರತಕ್ಕ ಸೌಲಭ್ಯ ಸಾಲದು ಎಂದು ಹೇಳುತ್ತೇನೆ.

ರಾಷ್ಟ್ರೀಕೃತ ಸಾರಿಗೆ

೧೧ ಸೆಪ್ಟೆಂಬರ್ ೧೯೬೨

ಒಂದು ಮಾತು ನನಗೆ ಈ ಚರ್ಚೆಯಲ್ಲಿ ಹೆಚ್ಚು ವ್ಯಥೆ ಉಂಟುಮಾಡಿತು. ಏನೆಂದರೆ ರಾಷ್ಟ್ರೀಕರಣ ನೀವು ಮುಂದುವರಿಸುತ್ತೀರ ಎಂದು ಕೇಳಿದ್ದಕ್ಕೆ ಚೇಸಿಗಳು ಸಿಕ್ಕುತ್ತಿಲ್ಲ ಎಂದು ಹೇಳಿದ್ದು ಕೇಳಿ ಹಾಗೇ ಕುಸಿದು ಹೊತುಹೋಗಿಬಿಟ್ಟೆ, ಚೇಸಿಗಳು ಇಲ್ಲ ಎಂದು ಸರಕಾರದವರು ಹೇಳಿದರೆ ಅದು ವಿಚಾರ ಮಾಡಬೇಕಾದ ವಿಷಯವೇ ಸರಕಾರವೂ ವಿಚಾರ ಮಾಡಬೇಕು, ಬೇರೆ ಜನರೂ ವಿಚಾರ ಮಾಡಬೇಕಾಗುತ್ತದೆ. ಅದನ್ನು ಅವರ ಬಾಯಿಯಿಂದ ತಿಳಿದುಕೊಳ್ಳುವುದಕ್ಕೆ ನಾನು ಈ ಸಂದರ್ಭದಲ್ಲಿ ಚರ್ಚೆಗೆ ಹೆಚ್ಚು ಮಹತ್ವವನ್ನು ಕೊಡುತ್ತೇನೆ.

ಇನ್ನು ಈ ರಾಷ್ಟ್ರೀಕೃತ ಸಾರಿಗೆ ಸೇವೆ ಅಥವಾ ವ್ಯವಸ್ಥೆ ಎಂದು ಏನು ಕರೆಯಬಹುದು, ಇದರಲ್ಲಿ ಬೆಂಗಳೂರು ಸಾರಿಗೆ ವ್ಯವಸ್ಥೆ ರಾಷ್ಟ್ರೀಕರಣ ಮಾಡುವಾಗ ನಾನು ಬಹಳ ಆಸೆಯನ್ನು ಇಟ್ಟುಕೊಂಡಿದ್ದೆ. ಆದರೆ, ಅದು ನಿರಾಸೆಗೆ ಕಾರಣವಾಯಿತು. ಸರಕಾರದವರು ರಾಷ್ಟ್ರೀಕರಣದ ನಂತರದ ಪ್ರಗತಿಯನ್ನು ಅಂಕಿ – ಅಂಶಗಳ ಆಧಾರದ ಮೇಲೆ ಕೊಟ್ಟು, ಅದರ ಆಧಾರದ ಮೇಲೆ ನಾವು ಪ್ರಗತಿಯ ದಿಕ್ಕಿನಲ್ಲಿ ಹೋಗಿದ್ದೇವೆ ಎಂದು ಹೇಳಿ ಸಮರ್ಪಿಸುತ್ತಾರೆ ವಾಸ್ತವಿಕವಾಗಿ ನಾವು ಈ ವ್ಯವಸ್ಥೆಯಲ್ಲಿ ಪ್ರತಿದಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಲೇಬೇಕಾಗಿರುವ ಸುಮಾರು ಎರಡು ಲಕ್ಷ ಜನರ ಅನುಭವವನ್ನು ನೋಡಿದ್ದೇವೆ. ಆದರೆ, ಈ ಸಾರಿಗೆ ಸಮಪರ್ಕವಾಗಿಲ್ಲದಿರುವುದು ಮಾತ್ರವಲ್ಲ ತುಂಬ ಅವ್ಯವಸ್ಥೆಯಿಂದ ಕೂಡಿದೆ; ಈ ಬೆಂಗಳೂರು ಸಾರಿಗೆ ವ್ಯವಸ್ಥೆಯನ್ನು ನಂಬಿಕೊಂಡಿರುವ ಪ್ರಯಾಣಿಕರಿಗೆ ಬಹಳ ಸಲ ಕಾಲಕ್ಕೆ ಸರಿಯಾಗಿ ಅವರು ತಮ್ಮ ಉದ್ದೇಶಿತ ಸ್ಥಳಗಳಿಗೆ ಹೋಗಿ ಮುಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ. ಎರಡು ಲಕ್ಷ ಜನರು ಕನಿಷ್ಠ ಪಕ್ಷ ಎರಡು ಲಕ್ಷ ಕೆಲಸಮಾಡುವ ಗಂಟೆಗಳಾದರೂ ಬಸ್ಸ್ಟಾಪುಗಳಲ್ಲಿ ಪ್ರತಿದಿನ ನಷ್ಟವಾಗುತ್ತದೆ. ಬರೀ ಹಣದ ನಷ್ಟವಲ್ಲ. ಎರಡು ಲಕ್ಷ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಬಸ್‌ಗಾಗಿ ಗಂಟೆಗಟ್ಲೆ ಕಾಯುತ್ತಿದ್ದಾರೆ. ನಾನು ಅದನ್ನು ಲೆಕ್ಕಹಾಕಿ ಕನಿಷ್ಠ ಹಿಡಿದಿದ್ದೇನೆ. ಒಬ್ಬ ಮನುಷ್ಯ ಒಂದು ಕಡೆಯಿಂದ ಹೋಗಿಬರುವ ಟ್ರಿಪ್ಪಿನಲ್ಲಿ ಕಾಯುವುದರಿಂದ ೨ ಲಕ್ಷ ಮ್ಯಾನ್ ಅವರ್  (ಅದರಲ್ಲಯೂ ಕಡಮೆ ಮಾಡಿದ್ದೇನೆ) ಕನಿಷ್ಟ ನಷ್ಟವಾಗುತ್ತದೆ. ಇದು ಹಣಕ್ಕಿಂತ ಬಹಳ ದೊಡ್ಡ ನಷ್ಟ. ಆಮೇಲೆ ಕೆಂಪೇಗೌಡ ರಸ್ತೆಯಲ್ಲಿ ಆರು ಗಂಟೆಯ ನಂತರ ಕಾಯುವಾಗ ತಲೆಮೇಲೆ ಕಾಗೆಗಳು ಪಾಯಿಖಾನೆ ಮಾಡುತ್ತವೆ. ಆ ತೊಂದರೆಗಳನ್ನೆಲ್ಲಾ ಬಿಟ್ಟಿದ್ದೇನೆ. ಆ ಕಷ್ಟವನ್ನೆಲ್ಲಾ ಕೂಡಿಸಿಕೊಂಡು ಬಿ.ಟಿ.ಎಸ್ ಮೇಲೆ ದಾವ ಹಾಕುವುದಕ್ಕೆ ಆಗುವುದಿಲ್ಲ. ಇದನ್ನೆಲ್ಲಾ ನಮ್ಮ ಜನ ಒರೆಸಿಕೊಳ್ಳುತ್ತಾರೆ. ಅದು ಅವರಿಗೆ ಹೊಳೆಯುವುದಿಲ್ಲ. ಅದೆಲ್ಲಾ ಮಾಡಿದರೆ ನಿಮಗೆ ಕೆಲಸ ಮಾಡುವುದು ತೀರಾ ಕಷ್ಟವಾಗುತ್ತದೆ. ಆದ್ದರಿಂದ ಸಣ್ಣ ಪುಟ್ಟ  ತೊಂದರೆಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ನಿಲ್ದಾಣದಲ್ಲಿ ಜೇಬುಗಳ್ಳರಿಂದ ಆಗತಕ್ಕಂಥ ನಷ್ಟ, ಊಟಕ್ಕೆ ಬರುತ್ತೇನೆಂದು ಹೇಳಿ ಕಾಲಕ್ಕೆ ಸರಿಯಾಗಿ ಹೋಗುವುದಕ್ಕೆ ಆಗದೆ ಇರುವುದು, ಇಂಥವುಗಳನ್ನೆಲ್ಲ ದೊಡ್ಡದು ಮಾಡಿ ಹೇಳುವುದಕ್ಕೆ ಇಷ್ಟಪಡುವುದಿಲ್ಲ.

ತಾವು ಅಂಕಿ – ಅಂಶಗಳನ್ನು ಕೊಟ್ಟು ರಾಷ್ಟ್ರೀಕರಣವಾಗುವಾಗ ಎಷ್ಟು ಬಸ್ಸುಗಳಿದ್ದವು? ಅವು ಎಷ್ಟು ಮೈಲಿ ಓಡಾಡುತ್ತಿದ್ದವು? ಸ್ಟಾಪಿಗೆ ಎಷ್ಟು ಖರ್ಚು? ಆಯಿತು. ಮೈಲಿಗೆ ಎಷ್ಟು ಖರ್ಚು ಮಾಡುತ್ತಾ ಇದ್ದೀರಿ? ಆವಾಗ ಏನೇನು ವ್ಯವಸ್ಥೆ ಇತ್ತು? ಈಗ ಏನು ಆಗಿದೆ? ಎಂದು ೧೯೬೨ – ೬೩ ಎಲ್ಲ ಅಂಕಿ – ಅಂಶಗಳನ್ನೂ ಹೇಳುತ್ತಿದ್ದೀರಿ ಅದು ಹೆಚ್ಚಿದೆ. ಆಗ ೧೯೫೬ – ೬೭ರಲ್ಲಿ ೧೪೮ ಬಸ್ಸುಗಳಿದ್ದವು, ೧೧೦ ಬಸ್ಸುಗಳು ಓಡಾಡುತ್ತಿದ್ದವು. ೫೯ ರಸ್ತೆ ದಾರಿಗಳು ಇದ್ದವು. ಅದರಲ್ಲಿ ೧೮ ರೂಟ್ ಮೈಲೇಜ್ ಇತ್ತು ಹೀಗೆಲ್ಲಾ ಇತ್ತು. ಅದನ್ನು ತಾವೇ ಹೇಳುವುದು ಕ್ಷೇಮ.

ಅದೆಲ್ಲ ಸಾಮಾನ್ಯವಾಗಿ ಏನು ದೊಡ್ಡದು ಎಂದು ಲೆಕ್ಕ ಮಾಡುವ ಕ್ರಮ ಬಂದಿದ ಟಿ.ವಿ.ಎಸ್ ಸಂಸ್ಥೆಗೆ ಹೋಲಿಸಿ ನಾವು ಭುಜತಟ್ಟಿಕೊಳ್ಳಬಹುದು ಎನ್ನುವ ಅಭಿಪ್ರಾಯವೂ ಇದೆ. ಯಾವುದಾದರೂ ಸಾಪೇಕ್ಷವೇ, ರಿಲೆಟಿವ್, ಆಗಿ ತೆಗೆದುಕೊಳ್ಳಬೆಕೇ ಹೊರತು ಆಬ್ಸಲ್ಯೂಟ್ ಆಗಿ ತೆಗೆದುಕೊಂಡು ಅರ್ಥಮಾಡಿಕೊಳ್ಳುವುದಕ್ಕಾಗುವುದಿಲ್ಲ. ಒಬ್ಬರು ರಾಷ್ಟ್ರೀಕರಣಕ್ಕೂ ಆಗುತ್ತದೆ. ೧೯೫೬ – ೫೭ರಲ್ಲಿ ಕರ್ನಾಟಕವಾಗುವುದಕ್ಕೆ ಮುಂಚೆ ಹಳೆಯ ಮೈಸೂರು. ಇದ್ದಾಗ, ಬೆಂಗಳೂರು ಆ ಸ್ಥಿತಿಯಲ್ಲಿದ್ದಾಗ ಏನು ಸಾರಿಗೆ ವ್ಯವಸ್ಥೆ ಖಾಸಗಿ ಜನರ ಕೈಯಲ್ಲಿತ್ತು. ಅದನ್ನು ಸರ್ಕಾರದವರು ತೆಗೆದುಕೊಂಡು ರಾಷ್ಟ್ರೀಕರಣ ಮಾಡಿ ಅದರಲ್ಲಿ ಏನೇನು ಅನುಕೂಲಗಳನ್ನು ಕಲ್ಪಿಸಿದ್ದೀರೆಂಬುದನ್ನು ಬಸವನಗುಡಿಗೆ ಹೋಗುವ ಮನುಷ್ಯನನ್ನು ಕೇಳಿದರೆ ಗೊತ್ತಾಗುತ್ತದೆ. ತಾವು ಹೇಳಬಹುದು, ಬೇರೆ ಮಾರ್ಗಗಳನ್ನು ಪ್ರಾರಂಭಿಸಿದ್ದೇವೆ ಎಂದು. ಈ ವಿಚಾರಕ್ಕೆ ಒಬ್ಬ ಮನುಷ್ಯನನ್ನೇ ತೆಗದುಕೊಳ್ಳಬೇಕು. ಬಿ.ಟಿ.ಎಸ್. ಪ್ರಾರಂಭವಾದ ಲಾಗಾಯ್ತ ಓಡಾಡಿರುವವರನ್ನು ವಯಸ್ಸಾದವರನ್ನು ಪಟ್ಟಿಮಾಡಿ ಅವರನ್ನು ಕೇಳಬೇಕಾಗುತ್ತದೆ. ಮೊನ್ನೆ ಸಚಿವರು ಸ್ವತಃ ಈ ವ್ಯವಸ್ಥೆಯು ನೋಡಬೇಕು. ಅದು ಹೇಗೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಬಿ.ಟಿ.ಎಸ್ ಬಸ್ಸುಗಳಲ್ಲಿ ಓಡಾಡಿದರು ಎಂದು ಕೇಳಿದೆ. ಅದು ಸಂತೋಷದ ವಿಷಯವೇ, ಓಡಾಡಬೇಕಾದ್ದೇ. ಗುರುತು ಮರೆಸಿಕೊಂಡು ಓಡಾಡಿದ್ದು ಒಳ್ಳೆಯದ್ದು. ಅವರಿಗೆ ಏನು ಅನುಭವ ಬಂತು ಎನ್ನುವುದು ನನಗೆ ಗೊತ್ತಾಗಿಲ್ಲ. ನನ್ನ ದಷ್ಟಿ ಇರುವುದು ಎಲ್ಲ ಎಂದರೆ ಅವರು ಟಿಕೆಟ್ ತೆಗೆದುಕೊಂಡು ಹೋಗಿದ್ದರೋ? ಹಾಗೆಯೇ ಹೋಗಿದ್ದರೋ? ಎನ್ನುವುದರಲ್ಲಿ. ಏಕೆಂದರೆ ಟಿಕೆಟ್ ಕೊಡುವ ಸಂಬಂಧದಲ್ಲಿ ಇನ್ನೂ ಬಹಳ ಸೋರಿಹೋಗುವ ವ್ಯವಸ್ಥೆ ಇದೆ. ಎಲ್ಲೆಲ್ಲಿ ಎಷ್ಟು ಹೊತ್ತು ನಿಲ್ಲುತ್ತದೆ, ಹೇಗೆ ನಡೆಯುತ್ತದೆ? ಎನ್ನುವುದು ಸಚಿವರು ಕಂಡಿರಬಹುದು. ನಾನೂ ಬಸ್ಸಿನಲ್ಲಿ ಓಡಾಡಿದ್ದೇನೆ, ಓಡಾಡಿದ್ದಕ್ಕೆ ಅನುಭವವಿದೆ. ಆದುದರಿಂದ ಆ ರೀತಿ ನಿತ್ಯವೂ ಪ್ರಯಾಣ ಮಾಡುವ ಒಬ್ಬ ಮನುಷ್ಯ ಈ ಸಭೆಗೆ ಬರುವುದಕ್ಕೆ ಅಧ್ಯಕ್ಷರು ಅವಕಾಶವನ್ನು ಕಲ್ಪಿಸಿಕೊಟ್ರೆ ಬಸವನಗುಡಿಯಿಂದ ಮಲ್ಲೇಶ್ವರಕ್ಕೆ ಹೋಗಿ ಬರಲು ಒಬ್ಬ ಪ್ರಯಾಣಿಕನಿಗೆ ಏನೇನು ಅನುಕೂಲಗಳು, ತೊಂದರೆಗಳಿವೆ ಬಿ.ಟಿ.ಎಸ್. ಹುಟ್ಟಿದ ಲಾಗಾಯಿತು ಎಂದು ಅವನನ್ನು ಕೇಳಿದರೆ ಹೇಳುತ್ತಾರೆ – ವ್ಯವಸ್ಥೆ ಎಷ್ಟು ಕುದುರಿದೆ, ಎಷ್ಟು ಚೆನ್ನಾಗಿ ಆಗುತ್ತಿದೆ ಎನ್ನುವುದನ್ನ. ಅವನ ಅನುಭವ ಹೆಚ್ಚು ಮಹತ್ವವಾದದು. ಅವಾನು ಪರವಾಯಿಲ್ಲ ಎಂದು ಹೇಳಿದರೆ, ಒಂದು ಸಮಾಧಾನದ ಉಸಿರನ್ನು ಎಳೆದರೆ ಒಳ್ಳೆಯದು. ಅವನ ಮಾತನ್ನು ನಂಬಬಹುದು ಎಂದು ನನಗನ್ನಿಸುತ್ತದೆ. ಹಾಗೆ ನಾವು ಕೇಳಿದ್ದರಿಲ್ಲಿ, ನಾವು ವಿಚಾರ ಮಾಡಿದ್ದರಲ್ಲಿ ನಮಗೆ ಅನ್ನಿಸುವುದು: ಅವರ ಗೊಣಗು ಹೆಚ್ಚಿದೆ. ಅವನು ಹಿಂದೆ ಕೊಡುತ್ತಿದ್ದಂಥ ಒಂದು ಆಣೆಗೆ ಎಷ್ಷೋ ದೂರ ಪ್ರಯಾಣ ಮಾಡುತ್ತಿದ್ದನಲ್ಲ ೧೧ ನಯೇ ಪೈಸೆಗೆ ಹೋಗುತ್ತಿದ್ದನಲ್ಲ ಅದು ಈಗ ಎಷ್ಟು ಜಾಸ್ತಿಯಾಗಿದೆ ಎನ್ನುವುದನ್ನು ಕೂಡ ತಾವು ನೋಡಬೇಕು. ಹೆಚ್ಚಿಗೆ ಇನ್ನೂ ಕೆಲವು ಸೌಲಭ್ಯಗಳನ್ನು ಒದಗಿಸಿದ್ದೇವೆಂದು ಹೆಳಿಕೊಳ್ಳುತ್ತೀರಿ. ರಾತ್ರಿಯ ಕಾಲದಲ್ಲಿ ವಿಶೇಷವಾದ ಸಾರಿಗೆ ವ್ಯವಸ್ಥೆಯನ್ನು ಮಾಡಿದ್ದೇವೆ, ಶಾಲಾ ಮಕ್ಕಳಿಗೆ ವಿಶೇಷವಾದ ವ್ಯವಸ್ಥೆಯನ್ನು ಮಾಡಿದ್ದೇವೆ. ಆಫೀಸಿಗೆ ಹೋಗತಕ್ಕವರಿಗೆ ಪೀಕ್ ಅವರ್ ಸರ್ವಿಸ್ ಎಂದು ಹೆಚ್ಚು ಒತ್ತಡವಿರುವ ಸಮಯದಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದೇವೆ; ಹೊಸದಾಗಿ ಈ ಎಕ್ಸ್‌ಪ್ರೆಸ್ ಬಸ್ಸ್ ಎಂದು ಮಾಡಿದ್ದೇವೆ ಎಂದು ಹೇಳುತ್ತೀರಿ. ಒಂದು ಕಡೆ ಟಿಕೆಟ್ ಕೊಟ್ಟು ಹತ್ತಿಬಿಡುತ್ತಾನೆ. ಟಿಕೆಟ್ ಕೊಡಲಿಲ್ಲವೆನ್ನುವ ದೂರಿಲ್ಲ, ಅಲ್ಲಲ್ಲಿ ಟಿಕೆಟ್ ಕೊಡುವ ಟಿ.ಐ.ಪಿಗಳ ತೊಂದರೆ ಇಲ್ಲ. ನೇರವಾಗಿ ಹೋಗುತ್ತದೆ ಎನ್ನುವುದನ್ನೆಲ್ಲಾ ಹೇಳುತ್ತೀರಿ. ಅವೆಲ್ಲ ಒಳ್ಳೆಯ ಕೆಲಸಗಳೇ. ತಾವೆಲ್ಲ ಮೂರ್ತಿಯವರ ಕಾರ್ಟೂನ್ ನೋಡಿರಬಹುದು. ಎಕ್ಸ್‌ಪ್ರೆಸ್ ಬಸ್ಸುಗಳ ಹೋಗುವ ಮಾರ್ಗದಲ್ಲಿ ಇಬ್ಬರು ಕಟ್ ಪ್ಯಾಸೆಂಜರ್ಸ್ ನಿಂತಿದ್ದರು. ಅವರನ್ನು ಯಾರೂ ಬಸ್ಸಿನಲ್ಲಿ ಹತ್ತಿಸಿಕೊಳ್ಳುವುದಿಲ್ಲ. ಅವರ ಗತಿ ಏನು? ಬಹಳ ಮೃದುವಾದ ರೀತಿಯಲ್ಲಿ ಅವ್ಯವಸ್ಥೆ ಎಂದು ಹೇಳಬಹುದು, ಬಿರುಸಾಗಿ ಹೇಳಬೇಕು ಎಂದರೆ ಹುಚ್ಚು ತನದ ಓಡಾಟ ಎಂದು ಹೇಳಬಹುದು. ಇಷ್ಟೊಂದು ಹಣವನ್ನು ಹಾಕಿ ಬಸ್ಸುಗಳನ್ನು ಓಡಿಸುತ್ತಾ ಇದ್ದು, ಪ್ರಯಾಣಿಕನು ಹೆಚ್ಚು ದರವನ್ನು ಕೊಟ್ಟೂ ಲಾಭವಿಲ್ಲ ಎಂದು ಹೇಳುವುದು ಸರಿಯಲ್ಲ. ಜೊತೆಗೆ ಹಣಕಾಸಿನ ದೃಷ್ಟಿಯಿಂದಲೂ ಈ ವ್ಯವಸ್ಥೆ ತನ್ನನ್ನು ತಾನು ವಹಿಸಿಕೊಂಡು, ತನ್ನನ್ನು ತಾನು ಬೆಳಸಿಕೊಂಡು ಹೋಗುವಷ್ಟಾದರೂ ದುಡಿದುಕೊಳ್ಳಬೇಕು. ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮನಿಗಳನ್ನು ಕಟ್ಟಿಸುವುದಕ್ಕೆ ಅದರಿಂದಲೇ ಹಣ ಬರಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅದೇ ಸಂಸ್ಥೆಯಿಂದ ಹಣ ಬಂದರೆ ಒಳ್ಳೆಯದು. ತಾನು ಸರಿಯಾಗಿದ್ದು, ಸಂಬಂಧಪಟ್ಟವರೆಲ್ಲರೂ ಸರಿಯಾಗಿದದ್ದು, ಯಾವ ಸಮಾಜಕ್ಕೆ ಸೇವೆಸಲ್ಲಿಸಬೇಕೋ ಅದಕ್ಕೆ ಅವರು ತೃಪ್ತಿಕರವಾಗಿ ಸೇವೆಯನ್ನು ಸಲ್ಲಿಸಬೇಕು ಎನ್ನವುದೇ ರಾಷ್ಟ್ರೀಕರಣದ ಮುಖ್ಯವಾದ ಉದ್ದೇಶ.

ಮುಂಬೈ ಕರ್ನಾಟಕದಲ್ಲಿ ಮತ್ತಿತರ ಕಡೆಗಳಲ್ಲಿ ರಸ್ತೆ ಸಾರಿಗೆಯನ್ನು ರಾಷ್ಟ್ರೀಕರಣ ಮಾಡಿದ್ದಾರೆ. ನಮ್ಮಲ್ಲಿ ಮಂಗಳೂರು ಮತ್ತು ಹಳೇ ಮೈಸೂರಿನ ಕೆಲವು ಭಾಗಗಳಲ್ಲಿ ರಾಷ್ಟ್ರೀಕರಣ ಮಾಡಿಲ್ಲ. ನಾನು ಒಂದು ಆಪಾದನೆಯನ್ನು ಸರ್ಕಾರದ ಮೇಲೆ ಮಾಡಬೇಕೆಂದು ಇದ್ದೇನೆ. ಈ ಭಾಗಗಳಲ್ಲಿ ಕೆಲವು ದೊಡ್ಡ ಮೋಟಾರ್ ಕಂಪನಿಗಳು ಅಸ್ತಿತ್ವದಲ್ಲಿವೆ; ಅವು ಸಾಕಾದಷ್ಟು ಪ್ರಭಾವಶಾಲಿ ಜನರಿಂದ ಕೂಡಿವೆ. ಮೈಸೂರು ಸರ್ಕಾರದ ಮೇಲೆ ಗಣನೀಯವಾದ ಪ್ರಮಾಣದಲ್ಲಿ ಅವು ಪ್ರಭಾವವನ್ನು ಬೀರುವ ಶಕ್ತಿಯನ್ನು ಪಡೆದಿವೆ. ಆ ಕಾರಣದಿಂದಲೇ ಈ ರಾಷ್ಟ್ರೀಕರಣ ಮಾಡತಕ್ಕ ಕೆಲಸ ಕುಂಠಿತವಾಗುತ್ತಾ ಮುಂದೆ ಮುಂದೆ ಹೋಗುತ್ತಾ ಇದೆ ಮತ್ತು ಆ ದಿಕ್ಕಿನಲ್ಲಿ ಮೈಸೂರು ಸರ್ಕಾರ ಹೋಗುವುದಕ್ಕೆ ಹೆದರುತ್ತಾ ಇದೆ ಅಥವಾ ಮುಲಾಜನ್ನು ಇಟ್ಟುಕೊಂಡಿದೆ ಎಂದು ಈ ಆಪಾದನೆಯನ್ನು ಮಾಡಲೇಬೇಕು; ಮಾಡುತ್ತಾ ಇದ್ದೇನೆ. ಆದ್ದರಿಂದ ಇವತ್ತು ಸರ್ಕಾರದ ಪರವಾಗಿ ಮಾನ್ಯ ಸಚಿವರು ಬಹಳ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ರಾಷ್ಟ್ರೀಕರಣದ ಬಗ್ಗೆ ಹೇಳಿಕೆಯನ್ನು ಕೊಡಬೇಕು; ಎಷ್ಟು ಕಾಲಾವಧಿ ಹಿಡಿಯಬಹುದು? ಈ ವ್ಯವಸ್ಥೆಯನ್ನು ಅವರು ಹೇಗೆ ನಡೆಸಿಕೊಂಡು ಹೋಗುವವರಿದ್ಧಾರೆ, ನಷ್ಟವನ್ನು ಹೇಗೆ ತುಂಬಿಕೊಡುವವರಿದ್ದಾರೆ ಮತ್ತು ಈ ವ್ಯವಸ್ಥೆಯನ್ನು ಹೋಗಲಾಡಿಸುವುದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಅವರಿಂದ ಯಾವ ಸ್ಪಷ್ಟವಾದ ಉತ್ತರವೂ ಇವೊತ್ತು ನಮಗೆ ಸಿಕ್ಕುತ್ತಿಲ್ಲ. ಆಡಳಿತದ ಹಿತದೃಷ್ಟಿಯಿಂದ ಕಾರ್ಪೋರೇಷನ್‌ ಮಾಡಿದಾಗಲೂ ಇಲ್ಲಿ ಓಡಾಡುವ ಜನರು ಸಾರ್ವಜನಿಕರು, ಅವರ ಹಣವನ್ನು ಇದರಲ್ಲಿ ವಿನಿಯೋಗಿಸಿದ್ದೇವೆ? ಈ ಬಗ್ಗೆ ಸರ್ಕಾರವನ್ನು ಸಾರ್ವಜನಿಕರೆಲ್ಲರೂ ಕೇಳುವುದಕ್ಕೆ ಹಕ್ಕು ಬಾಧ್ಯತೆಗಳನ್ನು ಹೊಂದಿರುತ್ತಾರೆ. ಈ ವಿಷಯದಲ್ಲಿ ಮಾನ್ಯ ಸಭೆಗೆ ಉತ್ತರ ದೊರಕಬೇಕಾಗುತ್ತದೆ. ಅದು ಬಹಳ ಅಗತ್ಯ ಮತ್ತು ಮುಖ್ಯವಾಗಿದೆ.