ಬೀಡಿ ಕೈಗಾರಿಕೆ

೧೨ ಸೆಪ್ಟೆಂಬರ್ ೧೯೬೨

ಈ ಬೀಡಿ ಕೈಗಾರಿಕೆಯಲ್ಲಿ ತೊಡಗಿರತಕ್ಕಂಥ ಕಾರ್ಮಿಕರಿಗೆ ಈಗ ಇರುವ ಕಾರ್ಮಿಕ ರಕ್ಷಣೆ ಕಾನೂನುಗಳು ಅನೇಕ ಸಲ ಅನ್ವಯವಾಗುವುದಿಲ್ಲ ಅಥವಾ ಅವುಗಳ ಲಾಭವನ್ನು ಈ ಕಾರ್ಮಿಕರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಾ ಇಲ್ಲ. ಕಾರಣ, ಪ್ರತ್ಯೇಕವಾಗಿ ಒಂದು ಕಾನೂನು ರಚಿಸಬೇಕಾಗಿದೆ ಎನ್ನುವ ಉದ್ದೇಶವನ್ನು ಅವರು ಮಸೂದೆಯ ಉದ್ದೇಶ ಮತ್ತು ಕಾರಣಗಳಲ್ಲಿ ತಿಳಿಸಿದ್ದಾರೆ.

ಈ ಬೀಡಿ ಕೈಗಾರಿಕೆಯಂತೆಯೇ ಅಗರಬತ್ತಿ ಕೈಗಾರಿಕೆ ಕೂಡ ಇದೆ. ಶಿವಕಾಶಿಯಲ್ಲಿ ನೋಡಿದರೆ ಅಲ್ಲಿ ಬೆಂಕಿಪೊಟ್ಟಣ ಕೈಗಾರಿಕೆ ಕೂಡ ಫ್ಯಾಕ್ಟರಿಯಿಂದ ಹೊರಗಡೆ ಇದ್ದು ಮನೆ ಮನೆಯಲ್ಲಿ ಮಾಡತಕ್ಕಂಥ ವ್ಯವಸ್ಥೆ ಆಗಿದೆ. ಒಂದು ದೃಷ್ಟಿ ಯಿಂದ ಈ ಕೈಗಾರಿಕೆಯನ್ನು ಗೃಹಕೈಗಾರಿಕೆ ಎಂದು ಕರೆಯಬಹುದು. ಗೃಹ ಕೈಗಾರಿಕೆಗಳನ್ನು ಮಾಡತಕ್ಕಂಥವನು ತನ್ನ ಸ್ವಂತ ಬಂಡವಾಳದಿಂದ ಮಾಡುತ್ತಾ ಇರಲಿ ಅಥವಾ ಬೇರೆ ಯಾರಿಂದಲಾದರೂ ಬಂಡವಾಳ ಪಡೆದು ಮಾಡುತ್ತಾ ಇರಲಿ, ಅಂಥ ಕೆಲವು ಕೆಲಸಗಳನ್ನು ನಿಯಂತ್ರಿಸುವುದಕ್ಕೆ ಅನುಕೂಲ ವಾಗತಕ್ಕಂಥ ಕಾನೂನುಗಳು ಇನ್ನೂ ನಮ್ಮಲ್ಲಿ ಬಂದಿಲ್ಲ; ಕಾರಣವೇನೆಂದರೆ ಕಾನೂನುಗಳನ್ನು ನಾವು ಮಾಡಬಹುದು, ಆದರೆ ಆ ಕಾನೂನನ್ನು ಅದರ ಉದ್ದೇಶ ಮತ್ತು ಅದರಲ್ಲಿ ಬರೆದಿರತಕ್ಕಂಥದ್ದನ್ನು ಕಾರ್ಯಗತಮಾಡಬೇಕಾದರೆ ಬಹಳ ಕಷ್ಟವಾಗುತ್ತದೆ. ಇವತ್ತು ನಾವು ಕೃಷಿ ಕೂಲಿಕರರಿಗೆ ಒಂದು ಕನಿಷ್ಠ ಸಂಬಳ (ಮಿನಿಮಮ್ ವೇಜಸ್) ಕೊಡಬೇಕು ಎಂದು ಒಂದು ಕಾನೂನನ್ನು ಮಾಡಿದ್ದೇವೆ. ಅದನ್ನು ಜಾರಿಗೆ ಕೊಡುವಂತ ಪ್ರಯತ್ನ ಕೆಲವು ಕಡೆಗಳಲ್ಲಿ ಇಲಾಖೆಯವರು ಮಾಡಿದ್ದರೂ ಪೂರ್ತಿ ಜಾರಿಗೆ ತರುವುದಕ್ಕೆ ಆಗುತ್ತಾ ಇಲ್ಲ. ಕಾರಣ ಏನೆಂದು ವಿಚಾರ ಮಾಡಿದರೆ ಈಗ ಸಮಾಜದಲ್ಲಿ ನಿರುದ್ಯೋಗ ದಿನೇ ದಿನೇ ಹೆಚ್ಚುತ್ತಾ ಇದೆ. ಜೊತೆಗೆ ಅವಶ್ಯಕ ವಸ್ತುಗಳ ಬೆಲೆ ಏರುತ್ತಿರುವುದು; ಜನಸಂಖ್ಯೆ ಒಂದೇ ಸಮನೆ ಏರುತ್ತಾ ಇರುವುದು – ಈ ಮೂರನ್ನೂ ಗಣನೆಗೆ ತೆಗೆದುಕೊಂಡರೆ, ಕೈಗಾರಿಕೆಗಳ ಅಭಿವೃದ್ಧಿಯ ಒಂದು ವೇಗ ಮತ್ತು ನಮ್ಮ ದೇಶದ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತಾ ಇರುವ ಪ್ರಮಾಣ ಒಂದೊಂದು ಸಲ ಅನಿಸುತ್ತದೆ – ನ್ಯಾಯವಾದ ಉದ್ಯೋಗವನ್ನು ಕಲ್ಪಿಸಿಕೊಡದೆ ಇರುವ ಸರಕಾರಕ್ಕೆ ಇಂಥ ಉದ್ಯೋಗ ಕೊಟ್ಟು, ಇಷ್ಟೇ ಕಾಲ ದುಡಿಸಿ ಕೊಳ್ಳಬೇಕು – ಅನ್ನುವ ಹಕ್ಕು ಕೊಡುವುದು ಎಲ್ಲಿ ಬರುತ್ತದೆ ಎಂಬ ಪ್ರಶ್ನೆ ಏಳುತ್ತದೆ.

ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಬದ್ಧವಾದ ಕೈಗಾರಿಕೆಗಳನ್ನು ಕೃಷಿಯನ್ನು, ನಮ್ಮ ಜನಜೀವನವನ್ನು ಯೋಜನಾಬದ್ಧವಾಗಿ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ, ಸರಕಾರದ್ದು. ಸಂದರ್ಭಗಳು ಬಂದಾಗಲೇ ಹಂಗನ್ನು ಹರಿಸಿಕೊಳ್ಳುವುದಾದರೆ, ಆವಾಗ ಜನರಿಗೆ ಗತ್ಯಂತರವಿಲ್ಲದೆ, ಎಷ್ಟೇ ಕೆಟ್ಟ ಪರಿಸ್ಥಿತಿಯಿರಲಿ, ಅಲ್ಲಿ ಹೊಟ್ಟೆ ಒತ್ತಡವನ್ನು, ಹಸಿವನ್ನು ಇಂಗಿಸಿಕೊಳ್ಳಲು ದುಡಿಯಲೇಬೇಕಾಗುತ್ತದೆ. ಇದನ್ನು ಮಾನ್ಯ ಕಾರ್ಮಿಕ ಸಚಿವರು ಗಮನಿಸುತ್ತಾರೆ ಎಂದು ತಿಳಿದುಕೊಂಡಿದ್ದೇನೆ. ವಸ್ತುಸ್ಥಿತಿ ಎನು ಅನ್ನುವುದು ಬಹಳ ಮುಖ್ಯ. ಬಡಕಾರ್ಮಿಕರು ಇಂಥ ಕೆಟ್ಟವಾತಾವರಣದಲ್ಲಿಯೂ, ಗೊತ್ತಾದ ಕಾಲಕ್ಕಿಂತ ಹೆಚ್ಚು ಕಾಲ ಏಕೆ ದುಡಿಯುತ್ತಾರೆ, ಕನಿಷ್ಠ ಮಿತಿ ಸಂಬಳಕ್ಕಿಂತ ಕಡಿಮೆ ಪಡೆಯುತ್ತಾರೆ ಎನ್ನುವುದು ಈ ಪರಿಸ್ಥಿತಿಯ ವಿವರಣೆಯಿಂದ ದೊರೆಯುತ್ತದೆ. ಈ ಪರಿಸ್ಥಿತಿಯ ಒತ್ತಡದಿಂದ ಮದ್ರಾಸಿನ ಒಂದು ಮೂಲೆಯಿಂದ ಶರಾವತಿಯ ಮೂಲೆಗೆ ಬಂದು ಹೆಣ್ಣು ಮಗಳು ದುಡಿಯುತ್ತಾಳೆ. ಆ ಬರುತ್ತಾಳೆ. ಮಗುವನ್ನು ಕಲ್ಲು ಮೇಲೋ, ಮರದ ಸಂದಿಯಲ್ಲಿಯೋ ಬಿಟ್ಟು ಶರಾವತಿಗೆ ಮಣ್ಣು ಹೊರುವುದುಕ್ಕೆ ಏಕೆ ಬರುತ್ತಾಳೆ? ಪರಿಸ್ಥಿತಿಯ ಒತ್ತಡದಿಂದ – ತಾನು ಹುಟ್ಟಿದ ಊರು, ಬಂದುಬಳಗ ಬಿಟ್ಟು, ದಿವಸಕ್ಕೆ ಒಂದು ಒಂದೂವರೆ ರೂಪಾಯಿ ಕೂಲಿಗೆ ದುಡಿಯುವುದಕ್ಕಾಗಿ ಎನ್ನುವುದನ್ನು ತಾವು ಗಮನಿಸಬೇಕಾಗಿದೆ.

ನಾವು ಇವೊತ್ತು ಪಾಣೆಮಂಗಳೂರಿಗೆ ಹೋಗಿ ನೋಡಿದರೆ ಗುಲ್ಬರ್ಗ, ಧಾರವಾಡ, ಹುಬ್ಬಳಿಗಳಲ್ಲಿ ನೋಡಿದರೆ, ಸಿರಾದಲ್ಲಿ ನೋಡಿದರೆ ಅಥವಾ ಬೀಡಿ ಕೈಗಾರಿಕೆಗಳು ಹೆಚ್ಚಾಗಿರುವ ಯಾವುದೇ ಊರಿನಲ್ಲಿ ನೋಡಿದರೆ ಈ ಪರಿಸ್ಥಿತಿಯನ್ನು ಗಮನಿಸಬಹುದು. ತೀರ್ಥಹಳ್ಳಿಯಲ್ಲಿಯೂ ಒಂದು ಬೀಡಿ ಫ್ಯಾಕ್ಟರಿ ಇದೇ – ಮೂರನೇ ನಂಬರ್ ಬೀಡಿ ಎಂದು. ಮೊದಲು ಈ ಕಾನೂನುಗಳೆಲ್ಲ ಬರುವುದಕ್ಕೆ ಮುಂಚೆ ಅವರು ಕೂಡ ಸೂಪರ್ ವಿಷನ್ ದೃಷ್ಟಿಯಿಂದ ಒಳ್ಳೆಯದಾಗುತ್ತದೆಂದು ಸಾಧ್ಯವಾದ ಮಟ್ಟಿಗೂ ಒಂದು ಹಾಲಿನಲ್ಲಿ ಸ್ಥಳಮಾಡಿ ಎಲ್ಲರೂ ಅಲ್ಲಿ ಕುಳಿತುಕೊಂಡು ಕೆಲಸ ಮಾಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಈ ಕಾನೂನು ಬಂದ ಮೇಲೆ, ಕನಿಷ್ಟ ಕೂಲಿ, ಕಾಲದ ಮಿತಿ, ರಿಜಿಸ್ಟರುಗಳನ್ನು ಇಡುವುದು, ಅಧಿಕಾರಿಗಳು ಕೇಳತಕ್ಕ ಸಮಜಾಯಿಷಿಯನ್ನು ಕೊಡುವುದು, ಇವನ್ನೆಲ್ಲ ಮಾಡುತ್ತ ಹೋದರೆ ನಮ್ಮ ಬಂಡವಾಳ ಕರಗುತ್ತದೆಂದೂ, ನಮಗೆ ಲಾಭ ದೊರೆಯುವುದಿಲ್ಲವೆಂದೂ ಈ ಹೊಸ ಮಾರ್ಗವನ್ನು ಮಾಲೀಕರು ಹುಡುಕಿದರು. ಒಂದು ಊರಿನಲ್ಲಿ ಒಬ್ಬ ಬೀಡಿ ಫ್ಯಾಕ್ಟರಿಯ ಮಾಲಿಕನಿದ್ದರೆ, ವಾಸ್ತವವಾಗಿ ಅವನು ಏನು ಮಾಡುತ್ತಾನೆಂದರೆ ಆ ಊರಿನಲ್ಲಿ ಎಷ್ಟು ಜನ ಈ ಉದ್ಯೋಗವನ್ನು ಕೈಕೊಳ್ಳುವುದಕ್ಕೆ ತಯಾರಿದ್ದಾರೆಂದು ತಿಳಿದುಕೊಂಡು ಅವರಿಗೆ ಎಷ್ಟು ಬೇಕೋ ಅಷ್ಟು ತಂಬಾಕು ಹಂಚುತ್ತಾನೆ. ಅದಕ್ಕಾಗಿ ಬೇಕಾದ ಎಲೆ ಹಂಚುತ್ತಾನೆ. ದಾರ ಕೊಡುತ್ತಾನೆ. ಅವರು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ – ಹಗಲು ಕಟ್ಟುತ್ತಾರೆ. ಅದರಿಂದ ಕೂಲಿ ಎಂಟಾಣಿ, ಹತ್ತಾಣಿ, ಹದಿನಾಲ್ಕಾಣೆ, ಒಂದು ರೂಪಾಯಿ ಹೀಗೆ ಒಬ್ಬನು ದುಡಿಯಬಹುದು. ಅದೂ ಯಂತ್ರದಂತೆ ಕೆಲಸ ಮಾಡಿದರೆ, ಒಂದು ಸೆಕೆಂಡಿಗೆ ಒಂದು ಬೀಡಿ ಕಟ್ಟಬಹುದು ಎಂದು ಯೋಚನೆ ಮಾಡಿದ್ದರೆ, ಒಂದು ಸೆಕೆಂಡಿಗೆ ಒಂದು ಬೀಡಿ ಕಟ್ಟಬಹುದು ಎಂದು ಯೋಚನೆ ಮಾಡಿದ್ದರೆ, ಒಬ್ಬ ಒಂದು ಸಾವಿರ ಬೀಡಿಕಟ್ಟುತ್ತಾನೆಂದರೆ ಯಂತ್ರದಂತೆ ಕೆಲಸ ಮಾಡಬೇಕು. ಹೆಂಗಸರು ಮತ್ತು ಮಕ್ಕಳು ಅಷ್ಟೊ ಕಟ್ಟುವುದಕ್ಕೆ ಸಾಧ್ಯವಿಲ್ಲ. ಬೀಡಿಗಳ ವ್ಯಾಪಾರದಲ್ಲಿ ಅವರ ಖರ್ಚೆಲ್ಲ ಹೋಗಿ ತಂಬಾಕಿನ ಮೇಲೆ ಹಾಕಿರತಕ್ಕ ಎಕ್ಸೈಸ್ ಡ್ಯೂಟಿ, ಎಲೆಗಳ ಮೇಲೆ ಹಾಕಿರತಕ್ಕ ಡ್ಯೂಟಿ, ಇವನ್ನೆಲ್ಲ ಕೊಟ್ಟು ಅವನಿಗೆ ಎಷ್ಟು ಲಾಭ ಉಳಿಯುತ್ತದೆ ಎನ್ನುವುದೂ ಒಂದು ಪ್ರಶ್ನೆ ಬರುತ್ತದೆ. ಮಾರ್ಕೆಟ್ಟಿನಲ್ಲಿ ಬೀಡಿ ಕೊಳ್ಳತಕ್ಕವರೆಲ್ಲ ದಿವಸಕ್ಕೆ ಮೂರಾಣೆ ಸಂಪಾದನೆ ಮಾಡಿ ಜೀವನ ಮಾಡುವವರು. ತೀರ ಕೆಳಮಟ್ಟದಲ್ಲಿ ದಿವಸಕ್ಕೆ ಮೂರಾಣೆ ಸಂಪಾದನೆ ಮಾಡಿ ಜೀವನ ಮಾಡುವವರು. ತೀರ ಕೆಳಮಟ್ಟದಲ್ಲಿ ಜೀವನ ಮಾಡತಕ್ಕವರು. ಅದು ಬದುಕುವ ಜೀವನವೆಲ್ಲ, ಸಾಯುವುದರ ಬದಲು ಬದುಕಿರುವುದು, ಇಂಥ ಜನ ಏನಿದ್ದಾರೆ ಅವರು ಬೀಡಿ ಕೊಳ್ಳುತ್ತಾರೆ, ಸೇವನೆ ಮಾಡುತ್ತಾರೆ. ತೀರ ಬಡವರು, ಮುಸಲ್ಮಾನರ ಹೆಣ್ಣು ಮಕ್ಕಳು, ಬೇರೆ ಏನೂ ಕೆಲಸ ದೊರೆಯದೆ ಇರತಕ್ಕ ಗಂಡಸರೂ, ಮಕ್ಕಳೂ ಇವರು ಬೀಡಿ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಎಂಟು ಗಂಟೆ ಕೆಲಸ ಮಾಡಬೇಕು ಎಂದರೆ, ಎಂಟು ಗಂಟೆಗೆ ೬೦೦ ಬೀಡಿ ಕಟ್ಟುತ್ತಾನೆಂದರೆ ಎಷ್ಟು ಸಂಬಳ ಕೊಡುತ್ತೀ ಎಂದರೆ ಎಷ್ಟೋ ಕೊಡುವುದಕ್ಕಾಗುವುದಿಲ್ಲವೆಂದು ಹೇಳುತ್ತಾನೆ. ತನಗೆ ಲಾಭ ಬರುವುದಿಲ್ಲ ವೆನ್ನುತ್ತಾನೆ. ಈ ಕೆಲವು ವಿಶೇಷ ಅಂಶಗಳನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದು ತೀರ ಕೆಟ್ಟ ಪರಿಸ್ಥಿತಿ ಎಂದು ಹೇಳಬಹುದು. ಈ ಕಾರಣದಿಂದಲೇ ಈ ಪರಿಸ್ಥಿತಿಯನ್ನು ನಾನು ಸ್ವಲ್ಪ ವಿವರಿಸಿ ಹೇಳುವುದಕ್ಕೆ ಇಷ್ಟಪಟ್ಟೆ, ಕಾನೂನನ್ನು ಮಾಡಿದರೂ ಹೀಗೆಯೇ ಇದು ನಡೆಯತಕ್ಕದ್ದು, ತಪ್ಪಿದರೆ ಶಿಕ್ಷೆಯಾಗುತ್ತದೆಂದು ಹೇಳುವ ಮಾತು ಸರಿ, ಕಾನೂನನ್ನು ಪರಿಪಾಲನೆ ಮಾಡುವುದು, ಅದರಂತೆ ನಡೆದುಕೊಂಡು ಹೋಗುವುದಕ್ಕೆ ಅಗತ್ಯವಾಗಿ ಬೇಕಾದ ಸನ್ನಿವೇಶಗಳು ಮತ್ತು ಅವಶ್ಯ ಸಾಮಗ್ರಿಗಳೂ ನಮ್ಮಲ್ಲಿವೆಯೇ ಎನ್ನುವುದು ಬಹಳ ಮುಖ್ಯವಾದ ಪ್ರಶ್ನೆ. ಆ ಕಾರಣದಿಂದ ಇವೊತ್ತು ಈ ಬೀಡಿ ಕೈಗಾರಿಕೆಯಲ್ಲಿ ಕೆಲವರು ಕಾನೂನು ಬಾಹಿರವಾಗಿ, ಮತ್ತು ಅನುಚಿತವಾದ ಲಾಭಗಳನ್ನು ಗಳಿಸಿ, ಹೆಚ್ಚು ಲಾಭವನ್ನೂ ಪಡೆಯತಕ್ಕ ಮಾಲೀಕರೂ ಇದ್ದಾರೆಂಧು ಇಟ್ಟು ಕೊಂಡರೂ ಬಹಳಷ್ಟು ಜನರು ಜೀವನೋಪಾಯಕ್ಕೇ ಗತ್ಯಂತರವಿಲ್ಲದೆ, ಈ ಉದ್ಯಮವನ್ನೂ ಅವಲಂಬಿಸಿಕೊಂಡು ಜೀವನ ಮಾಡುವುದಕ್ಕೆ, ಮನೆಯಲ್ಲಿ ಅದನ್ನು ಮಾಡಿಕೊಂಡು ಹೋಗುತ್ತಿದ್ದಾರೆ.

ಗೃಹಕೈಗಾರಿಕೆಗಳನ್ನು ತನ್ನ ಮನೆಯಲ್ಲಿ ತನ್ನ ಸ್ವಂತ ಬಂಡವಾಳದಿಂದ ಅಥವಾ  ಬೇರೆಯವರು ಕೊಡತಕ್ಕ ಬಂಡವಾಳದಿಂದ, ಕೆಲಸ ಮಾಡಿ ಆ ಕೈಗಾರಿಕೆಯಿಂದ ಜೀವನ ಮಾಡುವನನ್ನು ನಿಯಂತ್ರಿಸುವ ಕಾನೂನು ಇನ್ನು ಬರುವುದಕ್ಕೆ ಸಾಧ್ಯವಾಗಿಲ್ಲ. ಅಗರ ಬತ್ತಿಯ ಪರಿಸ್ಥಿತಿಯೂ ಹಾಗೆಯೇ ಇದೆ. ಅದು ಒಂದು ದೃಷ್ಟಿಯಲ್ಲಿ ಬೀಡಿ ಕೈಗಾರಿಕೆಗಿಂತ ಕೆಟ್ಟ ಪರಿಣಾಮವನ್ನುಂಟುಮಾಡತಕ್ಕದ್ದು. ಅದರಲ್ಲಿ ಸುವಾಸನೆಯ ವಸ್ತುಗಳು ಮತ್ತು ಇತರ ವಸ್ತುಗಳು ಸೇರುತ್ತವೆ. ನೇರವಾಗಿ ನಮ್ಮ ಶರೀರವನ್ನು ಹಾಳುಮಾಡತಕ್ಕ ವಸ್ತುಗಳು ಅದರಲ್ಲಿರುತ್ತವೆ. ಅಗರಬತ್ತಿ ಕೈಗಾರಿಕೆಯಲ್ಲಿಯೂ ಹೆಚ್ಚು ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ; ಅದನ್ನು ಒಳ್ಳೆಯ ಸ್ಥಿತಿಯಲ್ಲಿ ನಡೆಸಿಕೊಂಡು ಹೋಗುವುದಕ್ಕೆ ಇಂಥ ಒಂದು ಮಸೂದೆಯನ್ನು ತರಬೇಕೆಮದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಸರ್ಕಾರದ ಸ್ಥಿತಿ, ಕಾನೂನುಗಳ ಸ್ಥಿತಿ ಏನು ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಯಾವ ಕೆಲಸವನ್ನು ಮಾಡಬೇಕು ಎಂದು ಹೇಳಿದರೂ ಈಗ ಅವರು ಹಣದ ಅಭಾವವನ್ನು ದೇಶದ ಮುಂದೆ ಇಡುತ್ತಿದ್ದಾರೆ. ಈ ಹಣದ ಅಭಾವದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಮುಂದೆ ಬರುತ್ತದೆ. ಈ ಎರಡು ಕಾರಣಗಳೇನಿವೆ, ಇವು ಜನಜೀವನದ ಮೇಲೂ ಘೋರವಾದ ಪರಿಣಾಮವನ್ನುಂಟುಮಾಡಿವೆ. ಇಂಥ ಸಂದರ್ಭಗಳಲ್ಲಿ ಈ ವಿಧೇಯಕಗಳನ್ನು ತಂದು ಕಾನೂನಿನ ಕಡಿತಕ್ಕೆ ಏರಿಸುವುದು ಎಷ್ಟು ಮುಖ್ಯವೋ ಅದಕ್ಕಿಂತ ನೀವು ಈ ಕಾನೂನುಗಳನ್ನು ಒದಗಿಸುವ ಸೌಲಭ್ಯಗಳಿಗೆ ಬದಲಾಗಿ ಇನ್ನೇನಾದರೂ ಸೌಕರ್ಯಗಳನ್ನು ಕಲ್ಪಿಸಿಕೊಡಬಹುದೇ ಎನ್ನುವುದನ್ನು ವಿಚಾರಮಾಡಬೇಕು. ಈ ಕೈಗಾರಿಕೆಯನ್ನು ಸಹಕಾರ ಪದ್ದತಿಯ ಮೇಲೆ ನಡೆಸಿಕೊಂಡು ಹೋಗಬಹುದು, ಸರ್ಕಾರ ನೇರವಾಗಿ ಈ ಕೈಗಾರಿಕೆಗೆ ಯಾವೊಂದು ಜವಾಬ್ದಾರಿಯನ್ನು ಹೊತ್ತು ಕೊಳ್ಳದೆ ಯಾವ ಯಾವ ಊರುಗಳಲ್ಲಿ ಈ ಬೀಡಿ ಉದ್ಯಮದಲ್ಲಿ ತೊಡಗಿರತಕ್ಕ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆಯೋ ಅಲ್ಲಿ ಹತ್ತು ಜನರಿಗಿಂತ ಹೆಚ್ಚಾಗಿ ಅಥವ ೨೫ – ೫೦ ಜನರಿಗಿಂತ ಹೆಚ್ಚಾಗಿದ್ದಾರೆ. ಅವರಿಗೆ ಸುಲಭದರದಲ್ಲಿ ಅಥವ ಒಂದು ಖಚಿತವಾದ ದರದಲ್ಲಿ ಎಲೆ, ತಂಬಾಕು ಮತ್ತು ಅದಕ್ಕೆ ಬೇಕಾದ ಇನ್ನಿತರ ಸಾಮನುಗಳನ್ನು ಒದಗಿಸಿ ಅವರು ಕಟ್ಟತಕ್ಕ ಬೀಡಿಗಳನ್ನು ಮಾರಾಟಮಾಡುವುದಕ್ಕೆ ಒಂದು ವ್ಯವಸ್ಥೆ ಮಾಡಿ ಅದರ ಮೂಲಕ ಅವರಿಗೆ ಸಹಾಯ ನೀಡಬಹುದು ಎಂದು ನನಗೆನ್ನಿಸುತ್ತದೆ. ಇದನ್ನು ಪ್ರತ್ಯೇಕವಾಗಿ ಸರ್ಕಾರ ಪರಿಶೀಲನೆ ಮಾಡುವುದು ಕೂಡ ಈ ದುಸ್ಥಿತಿಯಲ್ಲಿ ಬಹಳ ಅತ್ಯಗತ್ಯವೆಂದೆನ್ನಿಸುತ್ತದೆ.

ದಿನಕ್ಕೆ ಎಂಟು ಗಂಟೆ ಕಾಲ ಕೆಲಸ ಮಾಡಬೇಕೆಂದು ಪ್ರಪಂಚದಲ್ಲಿ ಎಲ್ಲರೂ ಒಪ್ಪಿರತಕ್ಕ ಕಾನೂನು. ಈಗ ನಮ್ಮ ಮುಂದಿರುವ ಕಾನೂನಿನಲ್ಲಿ ದಿನಕ್ಕೆ ಹತ್ತು ಗಂಟೆಯ ತನಕ ಕೆಲಸ ಮಾಡಬಹುದು. ವಾರಕ್ಕೆ ೫೪ ಗಂಟೆ ಕೂಡ ಕೆಲಸಮಾಡಬಹುದು ಎಂದು ಇದೆ ನಿಜವಾಗಿಯೂ ಪರಿಸ್ಥಿತಿ ಹೇಗಿದೆ ಎಂದರೆ ಸರಿಯಾಗಿ ೧೪ ಗಂಟೆ ಕೆಲಸ ಮಾಡಿದರೂ ಅವರಿಗೆ ವೇಜಸ್ ಸಿಕ್ಕುವುದಿಲ್ಲ. ಒಬ್ಬ ಕೆಲಸಗಾರನು ಸಾಧಾರಣವಾಗಿ ಒಂದು ವಾರಕ್ಕೆ ೫೮ ಗಂಟೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರೆ ಓವರ್ ಟೈಂ ವರ್ಕ್ ಅಗುವುದರಿಂದ ಹೆಚ್ಚಿಗೆ ಕೊಡಬೇಕಾಗುತ್ತದೆ. ಆದರೆ ಬೀಡಿ ಕೆಲಸ ಮಾಡಿದರೂ ಅವರಿಗೆ ನ್ಯಾಯವಾಗಿ ದೊರೆಯಬೇಕಾದ ವೇತನ ದೊರೆಯುವುದಿಲ್ಲ.

ಇದನ್ನು ನಿಯಂತ್ರಣ ಮಾಡುವುದು ಕಷ್ಟವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳ ಬಹುದು. ಒಂದು ದಿವಸಕ್ಕೆ ಎಂಟು ಗಂಟೆ ಕೆಲಸ ಮಾಡಿದರೆ ಹೊಟ್ಟೆ ತುಂಬುವಷ್ಟು ಕೂಲಿ ಪಡೆದುಕೊಳ್ಳುತ್ತಾರೆಯೇ ಎಂಬುದನ್ನು ವಿಚಾರ  ಮಾಡಬೇಕಾಗುತ್ತದೆ. ಈ ಕೆಲಸ ಕೈ ಚಳಕದ ಮೇಲೆ ಸಹ ಹೋಗುತ್ತದೆ. ಒಂದು ಗೆರೆ ಹಾಕಿ ಇದನ್ನು ಕಡ್ಡಾಯವಾಗಿ ಮಾಡಲು ಸಾಧ್ಯವಿದೆ ಎಂದು ನಾನು ಭಾವಿಸುವುದಿಲ್ಲ.

ಲೇಸೆನ್ಸ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಸೂದೆಯಲ್ಲಿ ಹೇಳಿದೆ. ಅದರೆ ಈ ಕೆಲಸ ಮಾಡುವ ಜನರು ಎಲೆ, ತಂಬಾಕು ತಂದು ಮನೆಯಲ್ಲಿಯೇ ಕುಳಿತು ಬೀಡಿ ತಯಾರು ಮಾಡಿ ಮಾರಾಟ ಮಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ಲೈಸನ್ಸ್ ತೆಗೆದುಕೊಳ್ಳಬೇಕು ಎಂಬ ಬಲಾತ್ಕಾರ ಮಾಡಿದರೆ ಕಷ್ಟವಾಗುತ್ತದೆ. ಮನೆಯಲ್ಲಿ ಕುಳಿತು ಕೆಲಸ ಮಾಡಿದರೆ ಇದೊಂದು ಗೃಹಕೈಗಾರಿಕೆಯಾಗುವುದರಿಂದ ಫ್ಯಾಕ್ಟರಿ ಕಾನೂನು ಅನ್ಯಯಿಸುವುದಕ್ಕಾಗುವುದಿಲ್ಲ. ಅವರ ಮೇಲೆ ಕ್ರಮತೆಗೆದುಕೊಳ್ಳುವುದು ತಪ್ಪಾಗುತ್ತದೆ. ಕಾನೂನು ಚೆನ್ನಾಗಿದೆ. ಆದರೆ ಕೆಲಸ ಮಾಡತಕ್ಕಂಥ ಸ್ಥಳದಲ್ಲಿ ವಾತಾವರಣ ಚೆನ್ನಾಗಿ ಇರಬೇಕು: ನೀರಿನ ಸೌಕರ್ಯ ಇರಬೇಕು. ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆ ಇರಬೇಕು. ಸಾಮಾನ್ಯವಾಗಿ ಕಾನೂನಿನಲ್ಲಿ ಒದಗಿಸಿರುವ ಎಲ್ಲ ಅನುಕೂಲತೆ ಒದಗಿಸಿಕೊಡಬೇಕು. ಸಾಧಾರಣವಾಗಿ ಈ ಕಾನೂನನ್ನು ಕಾರ್ಯಗತ ಮಾಡತಕ್ಕಂಥದ್ದು ದೊಡ್ಡುದು. ಇದರಲ್ಲಿ ತೊಡಕು ಇದೆ. ಯಾರೂ ವಿರೋಧಿಸುವುದಿಲ್ಲ. ಈ ಕಾನೂನನ್ನು ಕಾರ್ಯಗತಮಾಡಲು ಅಧಿಕಾರಿಗಳೂ ಮೆದುತನ ತೋರಿಸದೆ ನಿಷ್ಠೂರವಾಗಿ ಕಾರ್ಯಗತ ಮಾಡಿದರೆ ಕಠಿಣ ಸನ್ನಿವೇಶ ಉಂಟಾಗುತ್ತದೆ. ಆದ್ದರಿಂದ ಸಾಧ್ಯವಾದ ಮಟ್ಟಿಗೆ ಎಲ್ಲೆಲ್ಲಿ ಹತ್ತಾರು ಜನ ಸೇರಿ ಬೀಡಿ ಕೆಲಸ ಮಾಡುತ್ತಾರೆಯೋ ಅಂಥಲ್ಲಿ ಫ್ಯಾಕ್ಟರಿ ಆಕ್ಟ್, ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಆಕ್ಟ್, ಮಿನಿಮಮ್ ವೇಜೆಸ್ ಆಕ್ಟ್ ಪ್ರಕಾರ ಏನೇನು ಸೌಲಭ್ಯ ಒದಗಿಸಬೇಕು ಅವುಗಳನ್ನು ಕೊಡುವಂತೆ ಮಾಲೀಕರ ಮೇಲೆ ಒತ್ತಾಯ ತರಬೇಕು – ಎಂದರೆ ಕಾನೂನಿನ ಉದ್ದೇಶ ಸಫಲವಾಗುವುದು. ಈ ಮಸೂದೆ ಸೆಲೆಕ್ಟ್ ಕಮಿಟಿಗೆ ಹೋಗಿ ಬಂದು ಕಾನೂನು ಪಾಸರಾಗಿ, ನೋಟಿಫಿಕೇಷನ್ಸ್ ಹೊರಡಿಸಿ, ನಿಯಮಗಳನ್ನು ತಯಾರಿಸುವುದಕ್ಕೆ ಇನ್ನೊಂದು ಚುನಾವಣೆಯ ಕಾಲ ಬಂದರೂ ಬರಬಹುದು. ಈ ಕಾರ್ಮಿಕರಲ್ಲಿ ಮಹಿಳೆಯರು ಹೆಚ್ಚಾಗಿ ಇದ್ದಾರೆ. ಅವರೆಲ್ಲರಿಗೂ ರಕ್ಷಣೆ ಕೊಟ್ಟು ಕಾಪಾಡಿ ಸಹಾಯಮಾಡುತ್ತಾರೆಂದು ಆಶಿಸಿ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈಲು ಸುಧಾರಣೆ

೨೬ ಸೆಪ್ಟಂಬರ್ ೧೯೬೨

ಆಳುವ ಪಕ್ಷದವರು ಹೆಚ್ಚು ಸಂಖ್ಯೆಯಲ್ಲಿ ಈ ಮನೆಯಲ್ಲಿದ್ದಾರೆ. ಅವರಲ್ಲಿ ನುರಿತವರೂ, ತಿಳುವಳಿಕೆ ಇರತಕ್ಕವರೂ ಇದ್ದಾರೆ. ಅವರು ಈ ಮಸೂದೆಯನ್ನು ವಿಚಾರಮಾಡಿ ಸಭೆಯ ಮುಂದೆ ತರಬೇಕು, ಮಸೂದೆಯಲ್ಲಿ ತರಕ್ಕೆ ಲೋಪದೋಷಗಳನ್ನು ಅರ ಮನಗಾಣಬೇಕು ಅದಿಲ್ಲದೆ ಸಂಬಂಧಪಟ್ಟ ಮಂತ್ರಿಗಳ ಮೂಲಕ ಸಭೆಯ ಮಂದೆ ಮಂಡಿಸಿ, ಅದನ್ನು ನಾವು ಅಂಗೀಕರಿಸುವಂತೆ ಮಾಡೋಣ; ನಮಗೆ ಹೆಚ್ಚು ಸಂಖ್ಯೆ ಸದಸ್ಯರ ಬೆಂಬಲವಿದೆ ಎನ್ನುವ ಒಂದೇ ಒಂದು ಕಾರಣದಿಂದ ಮಸೂದೆಗಳನ್ನು ಒಂದೇ ಸಲ ಪ್ರಿಂಟ್‌ಮಾಡಿ, ಅದ್ನು ಕನ್‌ಸಿಡರೇಷನ್ ಮಾಡುವುದು, ಕ್ಲಾಸ್ ಬೈ ಕ್ಲಾಸ್ ಅಂಗಿಕರಿಸುವುದು, ಪಾಸ್ ಮಾಡುವುದು ಇವೆಲ್ಲ ಒಂದೂವರೆ ಗಂಟೆಯಲ್ಲಿ ಮುಗಿಯಬೇಕು, ಈ ರೀತಿಯ ಕೆಲವು ಅವಸರದ ಒತ್ತಡವನ್ನು ಮಾನ್ಯ ಸದಸ್ಯರ ಮೇಲೆ ತರುತ್ತಿದ್ದಾರೆ.

ಇದು ಆಳುವವರ ಕರ್ತವ್ಯಲೋಪವನ್ನು ಮಾತ್ರ ತೋರಿಸುವುದಲ್ಲದೆ, ಇಂಥ ಮಸೂದೆಯಿಂದ ಉಂಟಾಗುವ ಅನರ್ಥಕ್ಕೆ ಅವರೇ ಹೊಣೆಯಾಗುತ್ತಾರೆ. ಆದುದರಿಂದ ಇದನ್ನು ಪೂರ್ವಭಾವಿಯಾಗಿ ಪರಿಶೀಲನೆ ಮಾಡಬೇಕು.

ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್ ಏನು ಇದೆಯೋ ಅದನ್ನು ನಾವು ಬಹುಶಃ ರಾಜಕೀಯ ಕಾನೂನು ಎಂದು ಹೇಳಬಹುದು. ಸರಕಾರದ ನೀತಿಗೆ ವಿರೋಧವಾಗಿರುವ ಜನ, ದಂಗೆ ಎದ್ದಂಥ ಜನ, ಪರದೇಶವರು ಧಾಳಿಮಾಡಿದಾಗ್ಗೆ ಪಿತೂರಿ ನಡೆಸುವ ಜನ ಇವರನ್ನು ಹತೋಟಿಯಲ್ಲಿ ಇಟ್ಟು ಕೊಳ್ಳಲು, ಸರಕಾರ ತನ್ನ ಅಸ್ತಿತ್ವವನ್ನು ಜನಬೆಂಬಲದಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಕಾಲಕ್ಕೆ ಕಾನೂನು ಉಳಿಸಿಕೊಂಡು ಬರಲಾಗಿದೆ. ಮಾತನ್ನು ಬಹುನಮ್ರತೆಯಿಂದ ರಾಮಮನೋಹರ ಲೋಹಿಯಾ ಅವರು ಒಂದು ಐತಿಹಾಸಿಕ ಹೇಳಿಕೆಯಲ್ಲಿ ಹೇಳಿದ್ದಾರೆ. ಯಾವ ಕಾಂಗ್ರೆಸ್ಸ್ ಸತ್ಯಾಗ್ರಹದ ಗರ್ಭದಿಂದ ಹುಟ್ಟಿದೆಯೋ ಅಂಥ ಕಾಂಗ್ರೆಸ್ಸ್ ಅಧಿಕಾರದ ಗದ್ದುಗೆಗೆ ಏರಿದಕೊಡಲೆ ಅದನ್ನೇ ಒದ್ದು ಬಿಟ್ಟಿದೆ. ಸಾಮಾನ್ಯ ಕಾರ್ಮಿಕರು ಮುಷ್ಕರ ಹೂಡಿದಾಗ, ಕಾನೂನುಭಂಗ ಚಳವಳಿ ಮಾಡಿದಾಗ, ಕಾನೂನು ವಿರೋಧ ಹೋರಾಟಮಾಡಿದಾಗ, ಸ್ವಾತಂತ್ರ್ಯ ಬಂದು ೧೬ ವರ್ಷಗಳಲ್ಲಿ ಎಷ್ಟು ಸಾವಿರ ಜನರನ್ನು ಕಾಂಗ್ರೆಸ್ ಸರಕಾರ ಗುಂಡಿಕ್ಕಿ ಕೊಂದಿಲ್ಲ? ಸಹಸ್ರಾರು ಜನರನ್ನು ಸೆರೆಮನೆಗೆ ತಳ್ಳಿಲ್ಲ? ಸರಕಾರದ ಈ ದೃಷ್ಟಿಕೋನ ಬದಲಿಸಬೇಕಾಗಿದೆ. ರಾಜಕೀಯ ತಕ್ಸೀರು ದೇಶದಲ್ಲಿ ನಡೆದಿಲ್ಲ. ಕಾಂಗ್ರೆಸ್ಸಿನವರು ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾ ಇದ್ದಾಗ ಜೈಲ್ ಸುಧಾರಣೆಯಾಗಬೇಕು; ರಾಜಕೀಯ ಕೈದಿಗಳನ್ನು ಗೌರವದಿಂದ ಕಾಣಬೇಕು: ರಾಜಕೀಯ ಕೈದಿಗಳು ದೇಶಪ್ರೇಮಿಗಳು ಎಂದು ಹೋರಾಟಮಾಡಿದ್ದಾರೆ. ಪರಕೀಯರಾದ ಬ್ರಿಟಿಷರು ನಮ್ಮ ರಾಜಕೀಯ ಕೈದಿಗಳನ್ನು ಎಷ್ಟು ಗೌರವದಿಂದ ಯೋಗ್ಯತೆಯಿಂದ ನಡೆಸಿಕೊಂಡಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು. ಇಂದು ಅಧಿಕಾರದಲ್ಲಿರುವ ಆಳುವ ಪಕ್ಷದಲ್ಲಿ ಸೌಜನ್ಯ ಇರಬೇಕು. ಇವರು ಇತಿಹಾಸ ಸುಳ್ಳುಮಾಡಲಾರರು.

ಗಂಗಾಧರ ನಾಮೋಶಿಯವರು ಜೈಲಿನಲ್ಲಿ – ಗೃಹಸಚಿವರು ಅಲ್ಲಿಗೆ ಭೇಟಿ ನೀಡಿದಾಗ ಕಕ್ಕಸ್ಸು ತೊಳೆಯುತ್ತಿದ್ದರೆಂಬುದನ್ನು ತಿಳಿದು ನನಗೆ ತುಂಬಾ ನೋವಾಯಿತು. ರಾಜ್ಯಭಾರ ಮಾಡತಕ್ಕಂಥವರ ಈ ದೃಷ್ಟಿ ಖಂಡಿತವಾಗಿಯೂ ಒಳ್ಳೆಯದಲ್ಲ. ಈಗ ಏನೋ ಅಧಿಕಾರದ ಗದ್ದುಗೆಗೆ ಅಂಟಿಕೊಂಡಿರಬಹುದು. ಆದರೆ, ಸ್ವಲ್ಪ ಕಾಲದಲ್ಲಿ ನೀವು ಕೈದಿಯಾಗಿ ಬಂದೀಖಾನೆಯಲ್ಲಿ ಇರುವುದಿಲ್ಲ ಎಂದು ಯಾರೂ ನಿಮಗೆ ಗ್ಯಾರಂಟಿ ಭರವಸೆ ಕೊಡಲಾರದು. ಬೇರೆ ಪಕ್ಷ ಅಧಿಕಾರಕ್ಕೆ ಬಂದಾಗ ನೀವು ಬಂದೀಖಾನೆಗೆ ಹೋಗುವ ಸಂದರ್ಭ ಬರಬಹುದು. ಆದುದರಿಂದ ದಯವಿಟ್ಟು ಇದನ್ನು ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ರಾಜಕೀಯಬಂದಿ ಯಾರು ಎಂಬುದನ್ನು ಡಿಫೈನ್ ಮಾಡಲು ಬ್ರಿಟಿಷರು ಒಪ್ಪಲಿಲ್ಲ. ಯಾರು ರಾಜಕೀಯ ಬಂದಿಗಳು ಎಂಬುದನ್ನು ನಾನು ಹೇಳುತ್ತೇನೆ. ಮಹಾತ್ಮಾ ಗಾಂಧಿಜೀಯವರು, ವಿನೋಭಾ ಭಾವೆ, ಪಂಡಿತ ಜವಾಹರಲಾಲನೆಹರು, ಡಾಕ್ಟರ್ ರಾಜೇಂದ್ರಪ್ರಸಾದ್, ನಿಜಲಿಂಗಪ್ಪನವರು. ಇವರನ್ನು ರಾಜಕೀಯ ಖೈದಿಗಳೆಂದು ಅರೆಸ್ಟ್ ಮಾಡಿದ್ದರು. ಗಾಂಧೀಜಿಯವರು, ಉಪ್ಪಿನ ಸತ್ಯಾಗ್ರಹ ಮಾಡಿದ್ದಾರೆ. ಬೇರೆ ಕಾನೂನು ಭಂಗಮಾಡಿದರೆ ರಾಜಕೀಯ ಬಂದಿಗಳೂ ಆಗುವುದಿಲ್ಲವೇ? ಇವತ್ತಿನ ದಿವಸ ದೇಶದಲ್ಲಿ ರಾಜಕೀಯಬಂದಿಗಳು ಇವರುವುದಿಲ್ಲ ಎಂದು ಹೇಳುವ ಮಾತು ನಾಚಿಗೇಡು; ಮೌಢ್ಯದ ಮಾತು ಆಗುತ್ತದೆ. ಸ್ವಾತಂತ್ರ್ಯ ಬಂದಮೇಲೆ ಆರೇಳು ಬಾರಿ ನಾನು ಸೆರೆಮನೆಗೆ ಹೋಗಿದ್ದೇನೆ. ರಾಜಕೀಯ ಕಾರಣಕ್ಕಾಗಿ ಸೆರೆಮನೆಗೆ ಹೋಗಿದ್ದೇನೆ. ಕ್ರಿಮಿನಲ್ ಖೈದಿಯಾಗಿ, ಸಿವಿಲ್ ಖೈದಿಯಾಗಿ ಜೈಲಿಗೆ ನಾನು ಹೋಗಿಲ್ಲ. ರಾಜಕೀಯ ಖೈದಿಯಾಗಿ ಜೈಲಿಗೆ ಹೋಗಿದ್ದೇನೆ. ಸ್ವಾತಂತ್ರ್ಯ ಬಂದಮೇಲೆ ನಮ್ಮ ದೇಶದ ಜೈಲುಗಳಲ್ಲಿ ಮುಖ್ಯವಾಗಿ ನೋಡಿಕೊಳ್ಳುವ ದೃಷ್ಟಿ ಬಹಳ ನಿಕೃಷ್ಟವಾಗಿ ಹೋಗಿದೆ. ನಾನು ೧೯೫೮ರಲ್ಲಿ ಜೈಲಿಗೆ ಹೋದಾಗ ಇದರ ಬಗ್ಗೆ ಐದು ದಿವಸ ಉಪವಾಸ ಮಾಡಿದ್ದೇನೆ. ಆಹಾರದ ನೀತಿಯ ವಿರುದ್ಧ ಪ್ರತಿಭಟನೆ ಮಾಡಿದ್ದೇನೆ. ಶಿವಮೊಗ್ಗ ಜೈಲಿನಲ್ಲಿ ಒಬ್ಬ ಜೇಲರನು ಕೈದಿಗಳು ಇಟ್ಟಿರತಕ್ಕ ಪದಾರ್ಥಗಳನ್ನು – ಅಂದರೆ ಪಾದರಕ್ಷೆ, ಅಡಿಕೆ ಕತ್ತರಿ, ಉಂಗುರ ಮುಂತಾದ ವಸ್ತುಗಳನ್ನು – ತೆಗೆದುಕೊಂಡುಬಿಡುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ಯಾವ ಕಾನೂನಿನಿಂದ ಸವಲತ್ತು ಕೊಟ್ಟಿದ್ದರು ನನಗೆ ತಿಳಿಸಬೇಕು. ಜೈಲು ಅಧಿಕಾರಿಗಳು ಟ್ರಂಕು ತುಂಬಾ ಸಾಭೂನು, ತಗ್ಗು ಮುಂತಾದ ಅನೇಕ ಸಾಮಾನುಗಳನ್ನು ತೆಗೆದುಕೊಂಡು ಹೋಗಿರುವುದನ್ನು ನಾನು ನೋಡಿದ್ದೇನೆ. ಸರಕಾರದ ದೃಷ್ಟಿ ಬದಲಾಗಬೇಕಾಗಿದೆ. ನಾಮೋಶಿಯವರಾಗಲಿ ಗೋಪಲಗೌಡನಾಗಲಿ ದೇಶಪ್ರೇಮದಲ್ಲಿ ನಿಮಗಿಂತ ಕಡಿಮೆಯಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತೇನೆ. ಆದುದರಿಂದ ಇಂಥ ದೃಷ್ಟಿ ಇರಬಾರದು. ಇದನ್ನು ನಾಯಿಹುಚ್ಚು ಎಂದು ಕರೆದು ಆ ರೀತಿ ರಾಜಕೀಯ ಬಂದಿಗಳನ್ನು ನಡೆಸಿಕೊಂಡು ಹೋಗತಕ್ಕಂಥಾದ್ದು ಖಂಡಿತ ತಪ್ಪು ಎಂದು ಹೇಳುತ್ತೇನೆ. ಇಂದು ಪೊಲಿಟಿಕಲ್ ಪ್ರಿಜನರ್ಸ್ ಇಲ್ಲ, ಡೆಟೆನ್ನೈ ಯಾರೂ ಪದಗಳ ವ್ಯಾಖ್ಯಾನಕೊಟ್ಟು ಸ್ಪಷ್ಟೀಕರಣ ಮಾಡಿ ಡೆಫಿನೀಷನ್ನಿನಲ್ಲಿ ತರಬೇಕು. ರಾಜಕೀಯ ಕೈದಿಗಳನ್ನು ಮರ್ಯಾದೆಯಿಂದ ನೊಡಿಕೊಳ್ಳಬೇಕು. ಒಬ್ಬ ವಯಸ್ಸಾದ ಮಾನ್ಯ ಸದಸ್ಯರು ಚರ್ಚೆಯ ಕಾಲದಲ್ಲಿ ಮಾತನಾಡುತ್ತಾ ಹೇಳಿದರು. ಜೈಲು ಅಂದರೆ ನರಕದ ಹಾಗೆ ಇರಬೇಕು, ತಲೆಯ ಮೇಲೆ ಗರಗಸ ಎಳೆಯಬೇಕು, ಎಣ್ಣೆ ಕುದಿಯುವ ಬಾಂಡಲಿಯಲ್ಲಿ ಕೈ ಹಾಕಿಸಬೇಕು, ಕಣ್ಣು ಕೀಳಿಸಬೇಕು – ಎಂದು ಮುಂತಾಗಿ ನರಕದ ಭೀಕರ ಕಲ್ಪನೆ ಹೇಳಿದರು. ಅವರ ಕಣ್ಣು ಕೀಳಿಸಿದ್ದರೆ ಅವರು ಇಂದು ಇಲ್ಲಿ ಬರುವುದು ಕಷ್ಟವಾಗುತ್ತಿತ್ತು.

ಕೈದಿ ಎಂದರೆ ಹಾಗಲ್ಲ: ನೆನಪನ್ನು ಮನುಷ್ಯ ಉಳಿಸಿಕೊಳ್ಳಬೇಕು, ವಯಸ್ಸಾದಮೇಲೆ ವಯಸ್ಸಾಗುತ್ತಾ ಆಗುತ್ತಾ ಕಣ್ಣು ಕುರುಡಾಗುತ್ತದೆ; ಪ್ರಜ್ಞೆಯೂ ಕಡಿಮೆಯಾಗುತ್ತದೆ. ಒಪ್ಪುತ್ತೇನೆ. ಆದರೆ, ರಾಜಕೀಯ ಕೈದಿಗಳಿಗೆ ಅದು ಈ ಮಸೂದೆಯ ದೊಡ್ಡ ಲೇಪವಾಗುತ್ತದೆ. ಅದನ್ನು ಸರಿಪಡಿಸಬೇಕು. ಇನ್ನು ಸುಂತನಕರ್ ಅವರು ಹೇಳಿರುವ ಬೇರೆ ಜೈಲುಗಳನ್ನೂ ಕೂಡ ಇದರಲ್ಲಿ ಸೇರಿಸದೇ ಇರುವುದು ಒಂದು ದೊಡ್ಡ ಲೋಪವಾಗುತ್ತದೆ. ಬೇರೆ ಜೈಲುಗಳನ್ನು ಕೂಡ ಇದರಲ್ಲಿ ಸೇರಿಸಬೇಕು. ಅಲ್ಲಿ ಈ ಎಲ್ಲಾ ಸವಲತ್ತುಗಳನ್ನೂ ಈ ಮಸೂದೆಯಲ್ಲಿ ರತಕ್ಕ ವಿಶಿಷ್ಟ ನಿಯಮಗಳನ್ನು ಪರಿಪಾಲನೆ ಮಾಡುವುದಕ್ಕೆ ಅವಕಾಶಕೊಡಬೇಕು. ಇಲ್ಲದೇ ಹೋದರೆ ಈ ಮಸೂದೆ ಅಪೂರ್ಣವಾಗುತ್ತದೆ. ತಾವೇನೋ ಬಹುಸಂಖ್ಯೆಯಲ್ಲಿದ್ದೀರಿ ಎಂದು ಇದನ್ನು ಪಾಸ್ ಮಾಡಿದರೂ ಕೂಡ ಇದರಲ್ಲಿರುವ ಲೋಪದೋಷಗಳನ್ನು ತಿದ್ದುಪಡಿಮಾಡಿ ಸರಿಪಡಿಸಬೇಕೆಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

ಮಹಾಜನ್ ಆಯೋಗ

೧೫ ಡಿಸೆಂಬರ್ ೧೯೬೨

ಮಾನ್ಯ ಸಭೆಯ ಮುಂದೆ ಈ ಮಹಾಜನ್ ಕಮೀಷನ್ನಿನ ವರದಿಯ ಪ್ರತಿಗಳು ಇವೆ. ಅವುಗಳನ್ನು ಸದಸ್ಯರಿಗೂ ಕೊಟ್ಟಿದ್ದಾರೆ. ಮಾನ್ಯ ಸದಸ್ಯರುಗಳು ಎಲ್ಲ ವಿಷಯಗಳನ್ನೂ ವಿವರವಾಗಿ ತಿಳಿದುಕೊಂಡಿದ್ದಾರೆಂದು ನಾನು ನಂಬುತ್ತೇನೆ. ಈ ವಿವರಗಳನ್ನು ಓದುವುದಕ್ಕೆ ಹೋಗಿ ಅಮೂಲ್ಯವಾದ ಕಾಲವನ್ನು ತೆಗೆದುಕೊಳ್ಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಆದರೂ ಸ್ವಲ್ಪ ಮಟ್ಟಿನ ಹಿನ್ನೆಲೆಯನ್ನು ಹೇಳಬೇಕಾಗುತ್ತದೆ. ಭಾಷೆಯ ಆಧಾರದ ಮೇಲೆ ಈ ದೇಶದ ಆಡಳಿತದ ಘಟಕಗಳನ್ನು ಪುನರ್‌ರಚಿಸಿಕೊಳ್ಳಬೇಕು. ಸಹಸ್ರಾರು ವರ್ಷಗಳ ಹಿಂದೆ ಐತಿಹಾಸಿಕವಾಗಿ ಏರ್ಪಾಟು ಆಗಿರತಕ್ಕಂಥ ರಾಜ್ಯಗಳನ್ನು ಯಾವುದಾದರೂ ಒಂದು ಆಧಾರದ ಮೇಲೆ ಪುನರ್ವಿಂಗಡಣೆ ಮಾಡಬೇಕೆಂಬ ಮಾತು ಈ ದೇಶದ ಮುಂದೆ ಬಹಳ ಹಿಂದೆ ಬಂತು. ಇದು ೪೦ – ೫೦ ವರ್ಷಗಳ ಹಿಂದಿನ ಮಾತು. ಆಗಿನಿಂದಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆ ನಂತರದಲ್ಲಿ ೧೯೨೧ರ ಸಮಯದಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಹೋರಾಟವನ್ನು ಕೈಗೊಂಡಾಗ ಈ ತತ್ವವನ್ನು ಆಧಾರಮಾಡಿ ಭಾಷೆಯ ಆಧಾರದ ಮೇಲೆ ಕಾಂಗ್ರೆಸ್ಸಿನ ಕ್ರಾಂತಿ ಸಭೆಗಳನ್ನು, ಪ್ರದೇಶಿಕ ಸಮಿತಿಗಳನ್ನು ರಚನೆಮಾಡಿಕೊಳ್ಳಲು ೧೯೪೨ರಲ್ಲಿ ಬೆಳಗಾಮಿನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಅಲ್ಲಿಗೆ ಮಹಾತ್ಮ ಗಾಂಧೀಜಿಯವರೇ ಖುದ್ದಾಗಿ ಬಂದು ದೇಶದ ಐಕ್ಯತೆಗೆ, ಬೆಳವಣಿಗೆಗೆ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಮಾತನ್ನು ಆಗ ಪ್ರಸ್ತಾಪ ಮಾಡಿದ್ದರು. ಆ ಮಹಾರಾಷ್ಟ್ರದವರು, ಕೇರಳದವರು, ತಮಿಳುನಾಡಿನವರು, ಆಂಧ್ರದವರು ಮತ್ತು ಅನೇಕ ಭಾಷೆಯ ಜನರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು. ಆಂಧ್ರದವರು ಮತ್ತು ಅನೇಕ ಭಾಷೆಯ ಜನರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು. ಆಂಧ್ರದಲ್ಲಿ ಪೊಟ್ಟಿ ಶ್ರೀರಾಮುಲುರನ್ನುವವರು ಅವಮರಣಾಂತ ಉಪವಾಸ ಮಾಡಿದರು. ಆಮೇಲೆ ಕೇಂದ್ರ ಸರ್ಕಾರದವರು ಭಾಷಾವಾರು ಪ್ರಾಂತ್ರ ರಚನೆಗೆ ರೂಪ ಕೊಡಬೇಕಾಗಿ ಬಂತು. ಪಾರ್ಲಿಮೆಂಟಿನಲ್ಲಿ ೧೦–೮–೧೯೫೨ರಲ್ಲಿ ಪಂಡಿತ್ ನೆಹರೂ ಅವರು ಒಂದು ಭಾಷಣವನ್ನು ಮಾಡಿದರು. ಅದು ಆದ ಮೇಲೆ ೧–೧೦–೫೩ರಲ್ಲಿ ಆಂಧ್ರ ಪ್ರದೇಶ ಆಯಿತು. ಆಗ ನಮಗೆ ಮೊದಲನೆಯದಾಗಿ, ಮೈಸೂರು ರಾಜ್ಯಕ್ಕೆ ಬಳ್ಳಾರಿ ಬಂತು. ಆಗ ನಾವು ಅದನ್ನು ಸ್ವಾಗತ ಮಾಡಿದೆವು.

೧೯೫೩ನೇ ಇಸವಿಯಲ್ಲಿ ಶ್ರೀಮಾನ್ ಸಿದ್ಧವೀರಪ್ಪನವರೂ ಇದ್ದರು. ಅವರಿಗೂ ಈ ವಿಷಯ ಗೊತ್ತಿದೆ. ಬಳ್ಳಾರಿ ನಮ್ಮ ರಾಜ್ಯಕ್ಕೆ ಬಂದಾಗ ಕೂಡ ಅನೇಕ ಮಾರ್ಪಾಡುಗಳು ಆದವು. ಬಳ್ಳಾರಿ ಪೂರ್ತಿ ನಮ್ಮ ಮೈಸೂರಿಗೆ ಬರಲಿಲ್ಲ. ಪ್ರಾಂತ್ಯಗಳ ರಚನೆಯ ಬೇಡಿಕೆಗಳು ಒತ್ತಾಯವಾಗಿ ೨೯–೧೨–೧೯೫೩ರಲ್ಲಿ ಉಚ್ಚಮಟ್ಟದಲ್ಲಿ ಆಯೋಗವನ್ನು ರಚನೆ ಮಾಡತಕ್ಕ ತೀರ್ಮಾನ ದೇಶದ ಮುಂದೆ ಬಂದುದ್ದರಿಂದ, ಕೇಂದ್ರ ಸರ್ಕಾರದವರು ಇದೇ ತೀರ್ಮಾನವನ್ನು ಕೈಗೊಂಡರು. ಅದೇ ಈಗಲೂ ಪ್ರಖ್ಯಾತವಾಗಿರತಕ್ಕ ಎಸ್. ಆರ್. ಸಿ. ಕಮಿಷನ್. ಅದರಲ್ಲಿ ಇದ್ದಂತಹ ಫಜಲ್ ಆಲಿ ಅವರಾಗಲೀ, ಫಣಿಕರ್ ಆಗಲೀ ಇವೊತ್ತು ಇಲ್ಲ, ಕುಂಜ್ರು ಒಬ್ಬರಿದ್ದಾರೆ. ಇಬ್ಬರು ನಿಧನ ಹೊಂದಿದ್ದಾರೆ. ಅವರು ಈ ಒಂದು ಮಹಾನ್ ಕೆಲಸವನ್ನು ಮಾಡಿದರು. ದೇಶದಲ್ಲಿ ಹೋರಾಟ ಮಾಡಿ ಬಹಳ ಕಷ್ಟಪಟ್ಟು ಅವರು ಒಂದು ವರದಿಯನ್ನು ಕೊಟ್ಟರು. ಆಮೇಲೆ ೧೯೫೬ರಲ್ಲಿ ಪಾರ್ಲಿಮೆಂಟನಲ್ಲಿ ಈ ವರದಿಯ ಮೇಲೆ ಚರ್ಚೆ ನಡೆದು ಕಾನೂನು ರೂಪವನ್ನು ಪಡೆಯಿತು. ಅದು ಆದ ಮನೇಲೆ ಈ ರಾಜ್ಯಗಳು ರೂಪಗೊಂಡು ಅಸ್ತಿತ್ವಕ್ಕೆ ಬಂದವು. ಎಸ್. ಆರ್. ಸಿ. ಕಮಿಷನಿನ್ನ ಸಲಹೆ ಪ್ರಕಾರ ಆಗಿರತಕ್ಕ ಈ ನಮ್ಮ ರಾಜ್ಯವು ಅಪೂರ್ಣವಾಗಿದೆ. ನಮಗೆ ನ್ಯಾಯ ದೊರಕಿಸಿ, ನಮ್ಮ ಎಷ್ಟೋ ಲಕ್ಷ ಜನ ಕನ್ನಡಿಗರು ಗಡಿ ಭಾಗದ ಹೊರಗಡೆ ಉಳಿದಿದ್ದಾರೆ. ನಮಗೆ ಅನ್ಯಾಯವಾಗಿದೆ. ಎನ್ನುವ ಕನ್ನಡಿಗರು ಗಡಿ ಭಾಗದ ಹೊರಗಡೆ ಉಳಿದಿದ್ದಾರೆ. ನಮಗೆ ಅನ್ಯಾಯವಾಗಿದೆ. ಎನ್ನುವ ಮಾತನ್ನು ನಾನು ಹಿಂದೆ ಹೇಳಿದ್ದೇನೆ. ಎಸ್. ಆರ್. ಸಿ. ವರದಿಯ ಚರ್ಚೆಯಾಗುವಾಗ ಮೈಸೂರಿನಲ್ಲಿ ಸಭೆಯನ್ನು ಕರೆದಿದ್ದರು. ಆಗ ಈ ವಿಷಯದಲ್ಲಿ ಮಾತನಾಡುತ್ತಾ ನಮ್ಮ ರಾಜದಯ ಹೊರಗಡೆ ಉಳಿದಿರುವ ಭಾಗಗಳು ಅವು ಅಚ್ಚ ಕನ್ನಡದ ಭಾಗಗಳು ಎಂದು ನಾನು ಹೇಳಿರಬಹುದು. ಹೀಗೆ ಬೇರೆ ಬೇರೆ ಸಂಸ್ಥೆಗಳು, ಸಾಹಿತ್ಯ ಪರಿಷತ್ತು, ಇವುಗಳು ಗಡಿನಾಡಿನಲ್ಲಿರುವ ಭಾಗಗಳು ಕರ್ನಾಟಕ್ಕೆ ಸೇರಬೇಕು. ಎನ್ನುವ ಅಭಿಪ್ರಾಯವನ್ನು ಆಗಿಂದಾಗ್ಗೆ ಸಮ್ಮೇಳನಗಳ ಮೂಲಕ, ಮನವಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ ರಾಜ್ಯದ ವಿಧಾನ ಸಭೇಗೆ ಮತ್ತು ರಾಜ್ಯದ ರಾಜಕೀಯ ಮುಖಂಡರಿಗೆ ಸಲ್ಲಿಸುತ್ತಾ ಬಂದಿದ್ದಾರೆ. ಈಗಲು ಆಂದೋಲನಗಳು ನಡೆಯುತ್ತಾ ಇವೆ.

ಬೆಳಗಾಂ, ನಿಪ್ಪಾಣಿ ಕೇಳಿದ್ದಕ್ಕೆ ಚರ್ಚೆಯಾಗಿ ಪಾರ್ಲಿಮೆಂಟ್ ಅದನ್ನು ಅಖೈರಾಗಿ ತೀರ್ಮಾನ ಮಾಡಿದೆ. ಮಹಾರಾಷ್ಟ್ರದವರು ಅದು ಸಾಧ್ಯವಿಲ್ಲ. ಈ ಭಾಗ ಪಡೆದುಕೊಳ್ಳಬೇಕು, ಇದು ನಮಗೆ ಸೇರಬೇಕು. ಎಂಬ ಆದ ಇಟ್ಟರು ಮತ್ತು ೧೯೫೭ರಿಂದ ೧೯೬೬ರವರೆಗೆ ಒಂದೆ ಸಮನೇ ಚಳವಳಿ ನಡೆದಿದೆ. ಇದು ಆದಮೇಲೆ ಇತ್ತೀಚಿನ ಘಟನೆಗಳು ಕಣ್ಣಿಗೆ ಕಟ್ಟಿದಂತೆ ಇವೆ. ಎಸ್.ಆರ್.ಸಿ. ವರದಿ ಪ್ರಕಾರ ನಮ್ಮ ರಾಜ್ಯಕ್ಕೆ ಬಂದಂಥ ೮೧೪ ಹಳ್ಳಿಗಳನ್ನು ಮಹಾರಾಷ್ಟ್ರದವರು ಕೇಳುತ್ತಾರೆ. ಈ ಒಂದು ಬೇಡಿಕೆ ಬಹಳ ಉಗ್ರವಾದ ರೀತಿಯಲ್ಲಿ ಚಳುವಳಿ ರೂಪದಲ್ಲಿ ನಡೆಯಿತು. ಮಹಾರಾಷ್ಟ್ರದವರ ಬೇಡಿಕೆಗೆ ಆಧಾರ ಏನು ಅಂದರೆ, ಪಾಟಸ್ಕರ್ ಸೂತ್ರದ ಅಂದರೆ ಹಳ್ಳಿ ಘಟಕವಾಗಿ ಇಟ್ಟುಕೊಂಡು ವಿಭಜನೆ ಮಾಡಿಕೊಳ್ಳಬೇಕು. ಆಂಧ್ರ, ಮದ್ರಾಸ್ ವಿಭಜನೆಯಾಗುವ ಮುನ್ನ ಮದ್ರಾಸಿನಲ್ಲಿ ಆಂಧ್ರ ಇತ್ತು. ಈ ಗಡಿ ವಿವಾದವನ್ನು ಪರಸ್ಪರ ಒಪ್ಪಿಕೊಂಡು ಹಳ್ಳಿಯನ್ನು ಘಟಕವಾಗಿ ಇಟ್ಟುಕೊಂಡು ಅವರು ಹಂಚಿಕೊಂಡು ಒಂದು ಗೆರೆ ಎಳೆದರು. ಇದು ಪಾಟಸ್ಕರ್ ಸೂತ್ರ. ಆದರೆ ಮಹಾರಾಷ್ಟ್ರ ಗುಜರಾತ ಮಧ್ಯ ಗಡಿ ವಿವಾದ ಬಂದಾಗ್ಗೆ ಮಹಾರಾಷ್ಟ್ರದವರು ಹಳ್ಳಿ ಘಟಕ ಎಂದು ಒಪ್ಪಿಕೊಳ್ಳುವುದಕ್ಕೆ ಸಿದ್ದವಾಗಿಲ್ಲ. ಆದರೆ ಈಗ ಪಾಟಸ್ಕರ್ ಸೂತ್ರದ ಪ್ರಕರ ತೀರ್ಮಾನವಾಗಬೇಕು ಎಂದು ಹೇಳುತ್ತಾರೆ. ಎಸ್.ಅರ್.ಸಿ. ಅವರು ಜಿಲ್ಲೆಯನ್ನು ಒಂದು ಘಟಕವಾಗಿ ಇಟ್ಟುಕೊಳ್ಳೋಣ, ಜಿಲ್ಲೆ ಒಡೆಯುವುದು ಬೇಡ, ತಾಲ್ಲೂಕುವರೆಗೆ ಅಂದರೆ, ಹಳ್ಳಿ ಒಂದು ಘಟಕವಾಗಬೇಕು ಎಂಬುದು ಒಂದು ವಾದ. ಎರಡನೇ ವಾದ ಏನು ಅಂದರೆ, ಗಡಿ ಪ್ರಶ್ನೆಯಲ್ಲಿ ಮಹಾರಷ್ಟ್ರ ಏಕೀಕರಣ ಸಮಿತಿಯವರು ಒಂದೆ ಸಮನೆ ಚುನಾವಣೆಗಳಲ್ಲಿ ಸ್ಥಾನಗಳಿಸಿದ್ದಾರೆ, ಜನ ಅವರಿಗೆ ವೋಟು ಕೊಟ್ಟು ಕಳಿಸಿದ್ಧಾರೆ, ಆದುದರಿಂದ ಈ ಪ್ರದೇಶ ಮಹಾರಾಷ್ಟ್ರದಲ್ಲಿ ಸೇರಬೇಕು ಎಂದು ಮತ್ತು ಒಂದು ವಾದ. ಅವರು ಬಹುಸಂಖ್ಯಾತರಾಗಿದ್ದಾರೆ. ಶೇಕಡ ೫೧ ಆದರೆ ಅವುರ ಬಹುಸಂಖ್ಯಾತರು. ಎಸ್. ಆರ್. ಸಿ. ಯಲ್ಲಿ ಶೇಕಡ ೭೬ ಇರಬೇಕು ಎಂದು ಹೇಳಿದೆ. ಬರೀ ಭಾಯೆ ಆಧಾರದ ಮೇಲೆ ವಿಂಗಡಣೆ ಮಾಡಬಾರದು, ಕಂಟಿಗ್ಯುಯಿಟಿ ಇರಬೇಕು. ಆಡಳಿತ ಸೌಕರ್ಯಇರಬೇಕು, ಹೋಮೊಜಿನಿಟಿ ಇರಬೇಕು ಎಂದು ಹೇಳಿದೆ. ಇದನ್ನೇ ನೆಹರು ಅವರೂ ಸಹ ಹೇಳಿದ್ದಾರೆ. ಎಸ್.ಆರ್.ಸಿ ಯವರೂ ಹೇಳಿದ್ಧಾರೆ. ಇದನ್ನು ರಾಜ್ಯಗಳನ್ನು ಬರೀ ಭಾಷೆಯ ಆಧಾರದ ಮೇಲೆ ವಿಂಗಡನೆ ಮಾಡುವುದಕ್ಕಾಗುವುದಿಲ್ಲ ಎಂದು, ಬೇರೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆ ಭಾಗಗಳ ಅಭಿವೃದ್ಧಿಯಾಗಬೇಕು, ಜನಗಳ ಏಳಿಗೆಯಾಗಬೇಕು, ಜನರ ನಡುವೆ ಘರ್ಷಣೆಗಳು ನಡೆಯುತ್ತಾ ಇರುವಾಗ ಶ್ರೀಮಾನ್ ನಿಜಲಿಂಗಪ್ಪನವರು ಆಗ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಚವಾಣ ಅವರಿಗೆ ಒಂದು ಪತ್ರ ಬರೆದು ಇದನ್ನು ತಿಳಿಸಿದ್ದಾರೆ. ಭಾರತ ಒಂದು ದೇಶ, ಅದರ ಐಕ್ಯತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಣ್ಣ ಪುಟ್ಟ ತಂಟೆಗಳಿದ್ದರೆ ನಾವು ಕುಳಿತು ಚರ್ಚೆ ಮಾಡಿ ಬಗೆಹರಿಸೋಣ ಎಂದು ಬರೆದಿದ್ದಕ್ಕೆ ಅವರು ಅದನ್ನು ಒಂದು  ದೃಷ್ಟಿಯಿಂದ ಒಪ್ಪಿಕೊಂಡಿದ್ದಾರೆ. ಅದಾರೆ ಚಳುವಳಿ ನಿಲ್ಲಲಿಲ್ಲ. ಇದಾದ ಮೇಲೆ ಶ್ರೀಮಾನ್ ಜತ್ತಿಯವರು ಮುಖ್ಯಮಂತ್ರಿಗಳಾಗಿದ್ದರು. ಅವರು ಒಂದು ನಿಲುವನ್ನು ಎಸ್.ಆರ್.ಸಿ. ವರದಿಯ ಬಗ್ಗೆ ತೆಗೆದುಕೊಂಡರು. ಎಸ್.ಆರ್.ಸಿ. ವರದಿ ಕೊಟ್ಟ ಮೇಲೆ ಸಾರ್ವಭೌಮ ಅಧಿಕಾರವುಳ್ಳ ಪಾರ್ಲಿಮೆಂಟಿನಲ್ಲಿ ಕುಲಂಕಷವಾಗಿ ಚರ್ಚೆ ಮಾಡಿ ಎರಡೂ ಪಕ್ಷಗಳಿಗೆ ಸಮಾಧಾನವಾಗುವ ಹಾಗೆ ಕಾನೂನನ್ನು ರಚನೆ ಮಾಡಿ ಅದರ ಆಧಾರದ ಮೇಲೆ ರಾಜ್ಯಗಳನ್ನು ಮಾಡಿಕೊಂಡಿದ್ದೇವೆ. ಪುನಃ ಪುನಃ ಅದನ್ನು ಕೆದಕುವುದು ಬೇಡ ಎಂದು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಸಣ್ಣ ಪುಟ್ಟ ಹೊಂದಾಣಿಕೆಗೆ ನಾವು ತಯಾರಿದ್ದೇವೆ ಎಂದು ಹೇಳಿದರು. ಸಣ್ಣ ಪುಟ್ಟ ಹೊಂದಾಣಿಕೆಯ ಅರ್ಥ ಹೇಳಲಿಲ್ಲ.

ರಾಷ್ಟ್ರೀಯ ರಜಾದಿನಗಳು

೩೦ ಮಾರ್ಚ್ ೧೯೬೩

ಮಾನ್ಯ ಕಾರ್ಮಿಕ ಮಂತ್ರಿಗಳು ಈ ಸಭೆಯ ಮುಂದೆ ಮಂಡಿಸಿರುವ, ಈ ಔದ್ಯೋಗಿಕ ಸಂಸ್ಥೆಗಳ ರಾಷ್ಟ್ರೀಯ ರಜಾದಿನಗಳ ಮಸೂದೆಯ ವಿಷಯದಲ್ಲಿ ಕೆಲವು ಅಭಿಪ್ರಾಯಗಳನ್ನು ನಾನು ಕೊಡಬೇಕೆಂದು ಇದ್ದೇನೆ. ಬಹುಶಃ ಚಿಲಿಯಲ್ಲಿ ಕೂಡ “ಮೇ ದಿನ” ಒಂದು ರಜಾ ದಿವಸ ಎಂದು ತಿಳಿದುಕೊಂಡಿದ್ದೇನೆ. ನನಗೆ ಅಷ್ಟಾಗಿ ಗೊತ್ತಿಲ್ಲ. ಚಿಲಿಗೆ ನಾನು ಹೋಗಿಲ್ಲ. ‘ಮೇ ದಿನಚಾರಣೆ’ ಕಾರ್ಮಿಕರಿಗೆ ಜಗತ್ತಿನಲ್ಲಿಯೇ ಅತ್ಯಂತ ಮಹತ್ವದ ದಿನ. ಬಹುಶಃ ಇದಕ್ಕಿಂತ ಮಹತ್ವದ ದಿನ ಕಾರ್ಮಿಕರಿಗೆ ಮತ್ತೊಂದು ಇಲ್ಲ ಎಂದು ಈಗಾಗಲೇ ವಿಶ್ವವ್ಯಾಪ್ತಿ ಒಪ್ಪಿಕೊಳ್ಳಲಾಗಿದೆ. ಆದರೆ ದುರಾದೃಷ್ಟ, ನಮ್ಮ ದೇಶದಲ್ಲಿರತಕ್ಕ ಐ.ಎ.ಟಿ.ಯು.ಸಿ., ಎ.ಐಎ.ಟಿ.ಯು.ಸಿ., ಎಚ್.ಎಂ.ಎಸ್ ಇವು ಕೇಂದ್ರ ಸರ್ಕಾರದ ಬಲಜೋಬು, ಎಡಜೋಬು ಮತ್ತು ಮುಂದುಗಡೆ ಕುಳಿತುಕೊಳ್ಳುವ ಸಂಸ್ಥೆಗಳಾಗಿವೆ. ಕಾರ್ಮಿಕರ ಹಿತವನ್ನು ಇವು ಲಕ್ಷ್ಯಮಾಡಿ ಅವರ ಹಿತವನ್ನು ಕಾಪಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಅಸ್ತಿತ್ವ, ಮುಖಂಡರ ಘನತೆ, ಗೌರವ ತಮ್ಮಲ್ಲೇ ಭಿನ್ನಾಭಿಪ್ರಾಯ ತೋರುವಂಥಾ ಸಂಸ್ಥೆಗಳಾಗಿರುವುದು, ಈ ದೇಶದ ಕಾರ್ಮಿಕರ ದೌರ್ಭಾಗ್ಯವೆಂದು ಹೆಳಬೇಕಾಗಿದೆ. ಇದಕ್ಕೆ ಇನ್ನೂ ಒಂದು ಕಾರಣ ಹೇಳಬಹುದು. ಒಂದು ಕಡೆಯಿಂದ ಅನೀತಿ ಹುಟ್ಟಿದರೆ ಅದು ಎಲ್ಲಾ ಕಡೆಗೂ ಹಬ್ಬಿ ವ್ಯಾಪಿಸುತ್ತದೆ, ವಿಷದ ಗಾಳಿ ಇದ್ದ ಹಾಗೆ. ಕಾರ್ಮಿಕರಿಗೆ ಸಂಬಂಧಪಟ್ಟ ರಜಾದಿನಗಳನ್ನು ಘೋಷಣೆ ಮಾಡತಕ್ಕ ಮಸೂದೆ ಈಗಿರುವುದರಿಂದ ಮೇ ದಿನಾಚರಣೆಗೆ ಪ್ರಥಮ ಸ್ಥಾನ ಸಲ್ಲಬೇಕಾಗಿದೆ. ಮೇ ದಿನ ಮೊದಲನೆ ದಿನ. ಸಂಬಳಕೊಟ್ಟು ರಜಾ ಕೊಡತಕ್ಕ ದಿನವಾಗಬೇಕು ಇದನ್ನು ಕಡ್ಡಾಯ ಮಾಡಿದರೆ ಒಳ್ಳೆಯದು.

‘ಎರಡನೆಯದಾಗಿ ಗಾಂಧಿ ಜಯಂತಿ ವಿಷಯವಾಗಿ ಅವರು ಪ್ರಸ್ತಾಪ ಮಾಡಿದ್ದಾರೆ. ಕಾರ್ಮಿಕ ಸಂಘಗಳ ಬಗ್ಗೆ ಅವರು ಮೇ ದಿನಚರಣೆಯ ವಿಷಯದಲ್ಲಿ ತಾಳಿದ ವರ್ತನೆಯ ಆದರೆ ಆಡಳಿತ ನಡೆಸುತ್ತಿರುವ ಮಹಾತ್ಮಾ ಗಾಂಧೀಜಿಯವರು ಯುಗಪ್ರವರ್ತಕರು, ಆದರೆ ಆಡಳಿತ ನಡೆಸುತ್ತಿರುವ ಮಹಾತ್ಮಾ ಗಾಂಧೀಜಿಯವರ ಅಧಿಕೃತ ಅನುಯಾಯಿಗಳು ಎಂದು ಹೆಳತಕ್ಕವರಿಗೆ ಅವರ ವಿಷಯದಲ್ಲಿ ಅಷ್ಟು ಗೌರವ, ನಂಬಿಕೆ ಬಂದಂತೆ ಕಾಣಲಿಲ್ಲ. ಕೇವಲ ಒಂದು ದಿವಸ ರಾಜಘಾಟ್‌ನಲ್ಲಿ ಹೋಗಿ ಆಷಾಢಭೂತಿತನದಿಂದ ಫೋಟೋ ತೆಗೆಸಬೇಕೆನ್ನುವುದಕ್ಕೆ, ರಾಮಧ್ಯನ್ ಹಾಡಿ ವರ್ಷಕ್ಕೊಂಮ್ಮೆ ಚರಕಾ ನೂಲು ತೆಗೆಯತಕ್ಕ ಈ ನಕಲಿ ಗಾಂಧಿವಾದಿಗಳನ್ನು ನೋಡುವುದಕ್ಕೆ ಬಹಳ ದುಃಖಪಡುತ್ತೇನೆ. ಹೇಗೆ ಕಾರ್ಮಿಕ ಸಂಘಗಳು, ಅಂತಹ ಬೋರ್ಡ್ ಹಾಕಿಕೊಂಡಿರತಕ್ಕ ಸಂಘಗಳು ಇವತ್ತು ತಮ್ಮ ನೀತಿ ನಿಲುವನ್ನು ದಿವಾಳಿ ಮಾಡಿಕೊಂಡು ಈ ದೇಶದಲ್ಲಿ ಬದುಕಿಕೊಂಡಿವೆಯೋ ಹಾಗೆಯೇ ಗಾಂಧೀಯವರ ಹೆಸರಿನಲ್ಲಿ ಬದುಕಿರತಕ್ಕ ಈ ಸರ್ಕಾರಗಳೂ ಅವರ ಎಲ್ಲಾ ನೆನಪನ್ನು ಕೂಡ ಕಳೆದುಕೊಂಡು ಉಳಿದುಕೊಂಡಿರತಕ್ಕ, ಗಾಂಧಿ ಹೆಸರಿನಲ್ಲಿ ಬದುಕಿಕೊಂಡಿರತಕ್ಕ ಸಂಸ್ಥೆಗಳು ಎಂದು ಹೇಳಬಹುದು. ಮಹಾತ್ಮಾ ಗಾಂಧೀಜಿಯವರ ಜನ್ಮ ದಿನ ಮತ್ತು ಮರಣದ ದಿನ ಈ ಎರಡನ್ನೂ ಕಡ್ಡಾಯವಾಗಿ ಈ ದೇಶದ ಜನ, ಅವರಿಗೆ ಏನಾದರೂ ಕೃತಜ್ಞತೆ ಇರುವುದಾದರೆ ಎಳ್ಳಷ್ಟಾದರೂ ಪ್ರಾಮಾಣಿಕತೆ, ನಂಬಿಕೆ ಇರುವುದಾದರೆ ಈ ದೇಶ ಬದುಕಿ ಬಾಳುವ ತನಕ ಆ ಮಹಾವ್ಯಕ್ತಿಯ ನೆನಪನ್ನು ತಂದುಕೊಳ್ಳುವುದಕ್ಕೆ ಮತ್ತು ಅವರ ತತ್ವಗಳನ್ನು ಈ ದೇಶದ ಜನ ಆಚರಣೆಯಲ್ಲಿ ತರುವುದಕ್ಕೆ ಪ್ರಯತ್ನ ಮಾಡಬೇಕು.