ಪಠ್ಯಪುಸ್ತಕಗಳು

ಸೆಪ್ಟಂಬರ್ ೧೯೬೩

ಪಠ್ಯಪುಸ್ತಕಗಳ ವಿಷಯದಲ್ಲಿ ಬಹುಶಃ ದೇಶದ ಎಲ್ಲಾ ಜವಾಬ್ದಾರಿ ಜನರೂ ಕೆಲವು ವೇಳೆ ವಿವೇಚನೆಗೆ ತುತ್ತಾಗಿದ್ದಾರೆಂದು ಅನುಸುತ್ತದೆ. ಈ ಪಠ್ಯಪುಸ್ತಕಗಳ ವಿಷಯದಲ್ಲಿ ವ್ಯಾಪಾರ ಸಂಸ್ಥೆಗಳು ಇವೆ. ಪ್ರಕಟಣೆ ಸಂಸ್ಥೆಗಳು ಇವೆ. ಆ ಪುಸ್ತಕಗಳಿಗೆ ಹೆಸರು ಇಡುವವರು ಬೇರೆ ಇದ್ದರೆ. ಅವುಗಳಿಗೆ ಬೆಲೆಯನ್ನು ಗೊತ್ತು ಮಾಡುವವರು ಇದ್ದಾರೆ. ನಮ್ಮ ಕಾಲದಲ್ಲಿ ಇವುಗಳೆಲ್ಲ ಇರಲಿಲ್ಲ. ಯಾರ ಮನೆಯಲ್ಲೋ ಓದುವ ಪುಸ್ತಕಗಳನ್ನು ತಂದು ನಾವು ಓದಿಕೊಳ್ಳುತ್ತಿದ್ದೇವು. ಒಂದು ಊರಿನಲ್ಲಿ ಒಬ್ಬ ವಿದ್ಯಾವಂತ ಇದ್ದರೆ ಮಕ್ಕಳಿಗೆ ಪುಸ್ತಕಗಳು ದೊರೆಯುತ್ತಿದ್ದವು. ಹಾಗೆ ಇರುವುದು ಒಳ್ಳೆಯದು.

ನಾನು ಕನ್ನಡಪಂಡಿತನಲ್ಲ: ಆದರೆ ಯಾವ ಕಡೆ ಹೇಗೆ ಬರೆಯಬೇಕು ಎಂಬುದು ಸ್ವಲ್ಪ ಗೊತ್ತಾಗುತ್ತದೆ. ರಾಷ್ಟ್ರದ ಬಾವುಟದಲ್ಲಿ ಚಕ್ರವಿರಬೇಕೆ? ಅಥವಾ ಚರಕವಿರಬೇಕೆ? ಎಂಬುದು ಹೊತ್ತಿಲ್ಲದೆ ಚಿತ್ರಿಸಿದ್ದಾರೆ. ಹೋಟೆಲ್ ಮಾಲೀಕ ಚಕ್ರವನ್ನು ಚರಕ ಎಂದು ತೋರಿಸಬಹುದು: ಅವನಿಗೆ ಗೊತ್ತಿರುವುದಿಲ್ಲ. ಆದರೆ, ಸರ್ಕಾರ ನಡೆಸುವವರು ತಪ್ಪು ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅದು ಕಾಂಗ್ರೆಸ್ಸಿನ ಕೈವಾಡ ಎಂದು ಆಪಾದನೆ ಮಾಡಬೇಕಾಗುತ್ತದೆ ಬರೆದ ಮನುಷ್ಯ ಕೈಯಿಂದ ಚಿತ್ರ ಬರೆದಿರಲಾರ, ಗಮನಿಸದೆ ಒಂದು ಶಬ್ದ ಹಾಕಿರಬಹುದು. ಆದುದರಿಂದ ನೀವು ತಿದ್ದುಪಡಿ  ಮಾಡಿಕೊಂಡಿರಬಹುದು. ಆದರೆ, ಪಠ್ಯ ಪುಸ್ತಕಗಳಲ್ಲಿ ಇಂಥಾದ್ದು ಇದ್ದರೆ ಸಮಿತಿಯು ಕಣ್ಣ ಮುಚ್ಚಿಕೊಂಡು ಒಪ್ಪಿಗೆ ನೀಡಿತೆ? ಜಲಜನಕ, ಆಮ್ಲಜನಕ ಇವು ಯಾವ ವರ್ಗಕ್ಕೆ ಸೇರಿವೆ ಎಂದು ವಿವರಣೆ ಕೊಡುವುದರಲ್ಲಿ ತಪ್ಪಿದರೆ ಪಠ್ಯಪುಸ್ತಕಗಳಲ್ಲಿ ಹೇಗೆ ಸರಿಪಡಿಸುವುದು? ಪ್ರತಿವರ್ಷ ಲಕ್ಷಗಟ್ಟಲೆ ಪುಸ್ತಗಳನ್ನು ಮಕ್ಕಳು ಕೊಳ್ಳುವುದಿಲ್ಲವೇ? ಬರೆದಿರುವುದರಲ್ಲಿ ತಪ್ಪಿದ್ದರೆ, ಮಕ್ಕಳು ಅದನ್ನೇ ಕಾಪಿ ಮಾಡುತ್ತಾರೆ. ಪುಸ್ತಕದಲ್ಲಿ ತಪ್ಪಿದೆಯೆಂದು ಯಾರಿಗೆ ಗೊತ್ತಾಗುತ್ತದೆ?

ಹತ್ತು ಪುಸ್ತಕಗಳನ್ನು ನೋಡಿ ಒಂದು ಪುಸ್ತಕವನ್ನು ಈ ಸಭೆಯಲ್ಲಿ ನಾನು ಬರೆದು ಕೊಡದಿದ್ದರೆ ನಾನು ಗೋಪಾಲಗೌಡನಲ್ಲ. ೧೦ ಪುಸ್ತಕಗಳನ್ನು ತಂದು ಅದರಲ್ಲಿರುವ ಪಾಠಗಳನ್ನು ಹಿಂದು ಮುಂದುಮಾಡಿ ಒಂದು ಪುಸ್ತಕ ಮಾಡಬಹುದು. ಅದು ಸರಿಯಾದ ಕ್ರಮವೇ? ಮೂಲವಿಷಯ ಸಂಶೋಧನೆಮಾಡಿ ಯಾರೂ ಪುಸ್ತಕ ಬರೆದಿಲ್ಲ. ಪುಟ, ಹೆಸರು, ಅನುಕ್ರಮಚಿತ್ರ ಬದಲಾಯಿಸಿ ಪುಸ್ತಕಮಾಡಿ, ಪ್ರಕಾಶನದವರ ಹತ್ತಿರ ಕೈವಾಡ, ಮಾರಾಟಗಾರರ ಬಳಿ ಕೈವಾಡ, ನಡೆಸುತ್ತಾರೆ. ಒಂದು ವ್ಯವಸ್ಥಿತವಾದ ರೀತಿಯಲ್ಲಿ ಇದೆಲ್ಲ ನಡೆಯುತ್ತಿಲ್ಲ. ಅಕ್ರಮವು ನಡೆಯುತ್ತಿದೆ ಎಂದು ವ್ಯಸನದಿಂದ ಹೇಳಬೇಕಾಗಿದೆ. ಇದನ್ನು ಕಡಿಮೆ ಮಾಡಬೇಕು, ಪಠ್ಯ ಪುಸ್ತಕಗಳ ರಾಷ್ಟ್ರೀಕರಣ ಮಾಡುವುದಾಗಿ ಹೇಳುತ್ತೀರಿ. ಜನಜೀವನ ಉತ್ತಮಗೊಳಿಸುವುದಕ್ಕೆ ದೋಷರಹಿತ ವ್ಯವಸ್ಥೆ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ಜಗತ್ತಿಗೆ, ಸಮಾಜಕ್ಕೆ ದೊಡ್ಡ ಅಪಾಯ. ತಮಗೆ ಬೇಕಾದ ಕೆಲವರಿಂದ ಪುಸ್ತಕಗಳನ್ನು ಬರೆಸಿ, ಅವರಿಗೆ ಉಪಕಾರಮಾಡಿ ಹತ್ತಾರು ಸಾವಿರ ಮಕ್ಕಳಿಗೆ ಹಂಚಿ ಓದಬೇಕೆಂದು ಹೇಳಿದರೆ, ಅವು ಸರಿಯಾಗಿಲ್ಲದಿದ್ದರೆ ಚಳುವಳಿಯನ್ನು ಅದರ ವಿರುದ್ಧ ಮಾಡಬೇಕಾಗುತ್ತದೆ. ಆದುದರಿಂದ ವಿದ್ಯಾಸಚಿವರು ಇದನ್ನು ಚೆನ್ನಾಗಿ ಗಮನಿಸಬೇಕು. ಈ ಗಿನ ರೀತಿ ಸರ್ಕಾರಕ್ಕೆ ಗೌರವ ತರುವಂತಿಲ್ಲ. ಪುನಃ ಪಠ್ಯ ಪುಸ್ತಕಗಳ ವಿಚಾರದಲ್ಲಿ ಈಗ ನಡೆದಿರುವ ಪ್ರಕರಣಗಳು ನಡೆಯದಂತೆ ತಡೆಮಾಡಬೇಕು. ನುರಿತ ಪಂಡಿತರು, ಜ್ಞಾನಿಗಳೂ ಅನೇಕರಿದ್ದಾರೆ; ಸಮಾಜ ಜೀವನದಲ್ಲಿ ಆಸಕ್ತಿಯಿರುವವರಿದ್ಧಾರೆ: ಮಕ್ಕಳ ವಿಚಾರದಲ್ಲಿ ಮಮತೆಯುಳ್ಳವರಿದ್ದರೆ. ಅವರಿಗೆ ಸಂಬಳ, ಭತ್ಯ ಕೊಡಬೇಕಾಗಿಲ್ಲ. ಅವರನ್ನು ಕೇಳಿ ಮರ್ಯಾದೆಯಿಂದ ಅವರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಿದರೆ ಎಷ್ಟೋ ಒಳ್ಳೆಯದು.

ಪಠ್ಯಪುಸ್ತಕಗಳ ಪರಿಷ್ಕರಣ ಮಾಡುವಾಗ ಒಂದು ಗೊತ್ತಾದ ಕಾರ್ಯಕ್ರಮವನ್ನು ಅನುಸರಿಸಿಕೊಂಡು ಬರಬೇಕು. ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಇವತ್ತು ಇರತಕ್ಕಂಥ ಲೋಪದೋಷಗಳನ್ನು ಕುಂದುಕೊರತೆಗಳನ್ನು ತಾವು ಹೋಗಲಾಡಿಸಿ, ತಮ್ಮ ಆಡಳಿತವನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿ, ಉಪಧ್ಯಾಯರ ಸಂಬಳ ಸಾರಿಗೆಗಳ ವಿಷಯದಲ್ಲಿ ಅವರ ಸೌಲಭ್ಯಗಳನ್ನು ಹೆಚ್ಚಿಸುವ ವಿಷಯದಲ್ಲಿ ಸರ್ಕಾರ ತೀವ್ರ ಗಮನಕೊಡಬೇಕು. ಅವರ ಕೊರತೆಗಳನ್ನು ಹೋಗಲಾಡಿಸುವುದಕ್ಕೆ ಪ್ರಯತ್ನ ಮಾಡಬೇಕು.

ಭೂದಾನ ಚಳುವಳಿ

ಸೆಪ್ಟಂಬರ್ ೧೯೬೩

ಮಾನ್ಯ ಕಂದಾಯ ಸಚಿವರು ಮಂಡಿಸಿರುವ ಭೂದಾನಯಜ್ಞವಿಧೇಯಕವನ್ನು ನಾನು ವಿನೋಬಾಜಿಯವರ ಕ್ಷಮೆ ಬೇಡಿ ವಿರೋಧಿಸುತ್ತೇನೆ. ಈ ಮಸೂದೆ ಅತ್ಯಂತ ವಿವಾದಾಸ್ಪದವಾದ ಮಸೂದೆ. ಯಾರು ಶಾಸನರಹಿತ ಸಮಾಜವನ್ನು ರಚಿಸಬೇಕು ಎಂದು ಅಶಿಸಿದ್ದರೋ ಅಂಥ ಮಹಾತ್ಮನ ಹೆಸರಿನಲ್ಲಿ ನಾವು ಒಂದು ಶಾಸನವನ್ನು ರಚಿಸುತ್ತೇವೆ. ಪೂಜ್ಯ ವಿನೋಬಾರವರು ಹೇಳುತ್ತಾರೆ; ಕಾನೂನು ಎನ್ನತಕ್ಕದ್ದು ಹೇಗೆ ಒಂದು ಪುಸ್ತಕವನ್ನು ಬರೆದಾದ ಮೇಲೆ ಕೊನೆಯಲ್ಲಿ ಇತಿಶ್ರೀ – ದಿ ಎಂಡ್ ಎಂದು ಬರೆಯುತ್ತಾರೆಯೋ ಹಾಗೆ ವ್ಯವಸ್ಥೆಯಲ್ಲಿ ಪೂರ್ಣಪಾಲನೆಯಾದ ಮೇಲೆ ಅದಕ್ಕೆ ಒತ್ತತಕ್ಕ ಒಂದು ಮುದ್ರೆ ಎಂದು.

ಸಮಾಜದಲ್ಲಿ ಬದಲಾವಣೆ ಆಗಬೇಕು; ಅನಂತರ ಶಾಸನಗಳು ಬರಬೇಕೆಂದು ಅವರು ಹೇಳಿದ್ದಾರೆ. ಈ ಭೂದಾನ ಚಳುವಳಿ ಯಾವಾಗ ತೆಲಂಗಾಣದಲ್ಲಿ ಕಮ್ಯೂನಿಸ್ಟರು ಈ ಭೂ ಸಮಸ್ಯೆಯನ್ನು ಬಗೆಹರಿಸುವದಕ್ಕೆ ಹಿಂಸಾತ್ಮಕವಾದ ಕಾರ್ಯಕ್ರಮವನ್ನು ಕೈಕೊಂಡರೋ, ಯಾವಾಗ ಅಲ್ಲಿ ರಕ್ತಪಾತ ನಡೆಯಿತೋ ಆ ಸಂದರ್ಭದಲ್ಲಿ ವಿನೋಬಾ ಅವರು ಆ ಪ್ರದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿ ಭೂಹೀನ ಹರಿಜನರು ಭೂಮಿ ಕೊಡಿ ಎಂದಾಗಲೇ ಒಂದು ಗ್ರಾಮದಲ್ಲಿ ಅವರಿಗೆ ಭೂಮಿ ಕೊಟ್ಟರು. ಈ ಭೂಮಿ ಕೊಡತಕ್ಕ ಅಥವಾ ಕೇಳತಕ್ಕ ಕೆಲಸವನ್ನು ಒಂದು ಚಳವಳಿಯಾಗಿ ಮಾಡಬೇಕೆಂದು ಅವರು ಆಶಿಸಿದರು. ಅವರಿಗೆ ಮೊದಲು ಭೂಮಿ ದಾನ ಬಂದದ್ದು ೧೯೫೧ ಏಪ್ರಿಲ್ ೧೮ರಲ್ಲಿ; ಅವರು ಈ ಚಳುವಳಿಯನ್ನು ಪ್ರಾರಂಭ ಮಾಡಿದ್ದು ಅದೇ ವರ್ಷ ಏಪ್ರಿಲ್ ೨೮ನೇ ತಾರೀಖು. ಅದರೆ, ನಾನು ಮೊದಲೇ ಹೇಳಿದಹಾಗೆ ಇದು ಬಹಳ ವಿವಾದಸ್ಪದವಾದ ವಿಷಯ. ಏಕೆಂದರೆ ನಾವೆಲ್ಲಾ ಲೌಕಿಕರು, ಲೌಕಿಕವಾಗಿ ವ್ಯವಹರಿಸುತ್ತೇವೆ: ಲೌಕಿಕವಾಗಿ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಬೇಕಾಗುತ್ತದೆ. ಭಾವೆ ಅವರು ಸೂಚಿಸಿರುವ ಪರಿಹಾರ ಅಲೌಕಿಕವಾದುದ್ದು ಮನುಷ್ಯನ ಅಂತಃಕರಣಕ್ಕೆ ಪ್ರಾರ್ಥನೆ ಮಾಡಿಕೊಳ್ಳತಕ್ಕದ್ದು. ಮನುಷ್ಯ ತನ್ನ ಭಾವನೆಯನ್ನು ತಿದ್ದಿಕೊಳ್ಳಬೇಕು; ಅವನು ಅಪರಿಗ್ರಹ ಮಾಡಬೇಕೆಂದು ಅವರು ಹೇಳಿದ್ದಾರೆ. ಸೋಷಿಯಲಿಸ್ಟರು ಅಥವಾ ಕಮ್ಯೂನಿಸ್ಟರು ಹೇಳತಕ್ಕ ಸಮಾನತೆಯ ರಾಜ್ಯದಲ್ಲಿ ಆಸ್ತಿಪಾಸ್ತಿಗಳನ್ನು ಕಿತ್ತು ಕೊಳ್ಳತಕ್ಕ, ಅಪಹರಣ ಮಾಡತಕ್ಕ ವ್ಯವಸ್ಥೆ ಇದು, ಅಭಿಪ್ರಾಯ ಇದು ಎಂದು ಅದನ್ನು ಬಿಟ್ಟು ಯಾರು ಆಸ್ತಿಪಾಸ್ತಿಗಳನ್ನು ಹೊಂದಿರುತ್ತಾರೆಯೋ ಅವರು ಅದನ್ನು ಹೊಂದಿರಬಾರದು, ತ್ಯಜಿಸಬೇಕು, ಅಪರಿಗ್ರಹವನ್ನು ಅವರೇ ಆಶ್ರಯಿಸಬೇಕು. ಆದ್ದರಿಂದ ಇತಿಹಾಸದಲ್ಲಿ ಭೂ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ. ಎಂದು ಹೇಳಿದರು.

ಇತಿಹಾಸದಲ್ಲಿ ಭೂ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ಯಯತ್ನ ಮಾಡಿದ್ದು ಮತ್ತು ಬಗೆಹರಿಸಿ ಒಂದು ಹೆಜ್ಜೆ ಇಟ್ಟಿದ್ದು ಎಂದರೆ ರಷ್ಯಾದಲ್ಲಿ ಕ್ರಾಂತಿಯ ನಂತರ ಸಬಲವಾಗಿ ತೆಗೆದುಕೊಂಡು ಹೆಜ್ಜೆ ಅದು. ಅದಕ್ಕೆ ಬದಲಾಗಿ ವಿನೋಭಾ ಅವರು ಅಹಿಂಸಾತ್ಮಕವಾಗಿ ಒಂದು ಹೆಜ್ಜೆಯನ್ನು ನಾವು ಇಡೋಣ, ಈ ದೇಶದಲ್ಲಿ ಧಾರ್ಮಿಕ ಶ್ರದ್ಧೆಯ ಜನ ಅವರವರಾಗಿಯೇ ತ್ಯಾಗಮಾಡಿಯಾರು; ಅಂಥವರನ್ನು ನಾವು ಕೇಳಿಕೊಳ್ಳೋಣ ; ೩೦ ಕೋಟಿ ಎಕರೆ ಜಮೀನು ಇದೆ. ಅದರಲ್ಲಿ ಆರನೇ ಒಂದು ಭಾಗ ಅಂಶವನ್ನು ಪ್ರತಿಯೊಬ್ಬರೂ ಕೊಟ್ಟರೆ ಕೋಟಿ ಎಕರೆಯಾಗುತ್ತದೆ. ಅದನ್ನು ಹಂಚಿದರೆ ಎಲ್ಲರಿಗೂ ಭೂ ಹೀನರಿಗೆ ಭೂಮಿ ದೊರಕಿದಂತಾಗುತ್ತದೆ ಎನ್ನುವ ಒಂದು ಗುರಿಯನ್ನು ಅವರು ಇಟ್ಟುಕೊಂಡು ಚಳುವಳಿಯನ್ನು ಪ್ರಾರಂಭಮಾಡಿದರು. ಮಹಾತ್ಮ ಗಾಂಧಿಯವರು ಏನು ಅಹಿಂಸತಾತ್ಮಕವಾದ ಒಂದು ಸತ್ಯಾಗ್ರಹದ ಮತ್ತು ಅಹಿಂಸೆಯ ತತ್ವದ ಮೇಲೆ ಈ ದೇಶದಲ್ಲಿ ಸ್ವಾತಂತ್ರ್ಯವನ್ನು ಗಳಿಸಿದರೋ ಹಾಗೆಯೇ ಅಹಿಂಸೆಯ ಆಧಾರದ ಮೇಲೆ ಈ ಆರ್ಥಿಕ ಕ್ರಾಂತಿಯನ್ನು ಸಾಧಿಸಬೇಕು ಎನ್ನುವುದು ಭಾವೆಯವರ ಬಯಕೆಯಾಗಿತ್ತು. ನಾನು ಮೊದಲಿನಿಂದಲೂ ಈ ಒಂದು ಚಳವಳಿಯನ್ನು ಸಂಶಯಾಸ್ಪದವಾದ ದೃಷ್ಟಿಯಲ್ಲಿ ನೋಡುತ್ತಾ ಬಂದವನು. ವರ್ಗಸಂಘರ್ಷಕ್ಕೆ ಬದಲಾಗಿ ಈ ಒಂದು ಸೂತ್ರವನ್ನು ಈ ದೇಶದ ಮುಂದೆ ಇಡುವುದಾದರೆ ಕ್ರಾಂತಿಯ ಮಾತು ಮೌನವಾಗುತ್ತದೆ, ಮಂದವಾಗುತ್ತದೆ, ವರ್ಗ ಸಂಘರ್ಷಣೆಗೆ ಅಡ್ಡಿ ಬರುತ್ತದೆ. ಚಳುವಳಿಯಿಂದ ಭೂಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದ್ದೆವು. ಅವರು ಅದಕ್ಕೆ ಮಾನಸಿಕ ಕ್ರಾಂತಿ ಆಗಲಿ, ತ್ಯಾಗ ಮನೋಬುದ್ಧಿ ಜನರಿಗೆ ಬರಲಿ; ರಕ್ತಪಾತವಾಗುವ ಹಿಂಸಾಕ್ರಾಂತಿ ಬೇಡ ಎಂದು ಹೇಳಿದರು. ಕ್ರಾಂತಿ ಎಂದರೆ ರಕ್ತ ಹರಿಯಲೇಬೇಕು ಎಂಬ ಯಾವ ನಿಯಮವೂ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವು ರಕ್ತವನ್ನು ಹರಿಸದೇ ಹೋರಟ ನಡೆಸಿ ಗಳಿಸುವುದಕ್ಕೆ ಸಾಧ್ಯವಾಯಿತು. ಭೂದಾನ ಚಳುವಳಿ ವಿಫಲವಾಗಿದೆ ಎಂದು ಹೇಳದೇ ವಿಧಿ ಇಲ್ಲ. ನಾವು ಮೈಸೂರು ರಾಜ್ಯದಲ್ಲಿ ಕಾಗೋಡಿನಲ್ಲಿ ಭೂಮಿಗಾಗಿ ಒಂದು ಹೋರಾಟ ಮಾಡಿದೆವು. ಆಗ ಅಹಿಂಸಾತ್ಮಕವಾಗಿ ಭೂಮಿಯನ್ನು ಬೇಡುವುದಕ್ಕೆ ಹೋಗತಕ್ಕ ಅಥವಾ ವಿವಾದದ ವಿರುದ್ಧ ಹೋಗತಕ್ಕ ರೈತರನ್ನು ಸರ್ಕಾರದವರು ಹಿಡಿದು ಜೈಲಿಗೆ ಹಾಕುತ್ತಾ ಇದ್ದರು. ಅದೇ ಸರಿಯಾದ ಮಾರ್ಗ ಎಂದು ಕೂಡ ಅನುಸುತ್ತಾ ಇತ್ತು. ಆದರೆ ಮಾನ್ಯ ಸಚಿವರು ಭೂ ಸಮಸ್ಯೆಯನ್ನು ಬಗೆಹರಿಸದೇ ಶ್ರೀಮಾನ್ ಭಾವೆ ಅವರ ಹೆಸರಿನಲ್ಲಿ ಈ ಭೂದಾನ ಯಜ್ಞ ಮಸೂದೆಯನ್ನು ತಂದು ನಮ್ಮ ಮುಂದೆ ಇಟ್ಟಿದ್ದಾರೆ. ಇದು ಒಂದು ದೊಡ್ಡ ವಿಪರ್ಯಾಸವನ್ನು ಸೂಚಿಸುತ್ತದೆ. ಕಾರಣವೇನೆಂದರೆ ಶ್ರೀ ಭವೆ ಅವರಿಗೆ ಒಂದು ಮಠ ಕಟ್ಟಿ ಇಡಬೇಕು. ಭೂದಾನ ಯಜ್ಞ ಮಂಡಲಿ ಎಂದು ಭೂಮಿಯನ್ನು ದಾನವಾಗಿ ತೆಗೆದುಕೊಂಡು ಇಟ್ಟಿದ್ದೀರಿ. ಎಲ್ಲಾ ಮಠಗಳೂ ಹೀಗೆಯೇ ಹುಟ್ಟಿದ್ದು. ಶಂಕರಾಚಾರ್ಯರು ಮಹಾ ಅದ್ವೈತಿಗಳಾಗಿ ಈ ದೇಶದಲ್ಲಿ ಚಳುವಳಿ ಮಾಡಿದರು. ಅವರಿಗೆ ಮಠಗಳನ್ನು ಸ್ಥಾಪನೆ ಮಾಡಿದರು. ನಾವು ಈ ಕಾಲಕ್ಕೆ ಬಂದಮೇಲೆ ಶೃಂಗೇರಿ ಇನಾಂ ಜಹಗೀರಿಯನ್ನು ಕಾನೂನು ತಂದು ರದ್ದುಪಡಿಸಿದ್ದೇವೆ, ಅದಾದ ನಂತರ ಪುನಃ ಶ್ರೀ ಭಾವೆ ಅವರ ಹೆಸರಿನಲ್ಲಿ ಒಂದು ಮಠವನ್ನು ಸ್ಥಾಪನೆ ಮಾಡುವುದಕ್ಕೆ ಕಂದಾಯ ಸಚಿವರು ಕಾನೂನು ಮೂಲಕ ಹೋಗುತ್ತಾ ಇದ್ದಾರೆ. ಈ ಮಠಕ್ಕೆ ನಾವು ಉಂಬಳಿ ಕೊಡುತ್ತೇವೆ. ಅದು ಹೇಗೆ ಇರಬೇಕು, ಅದಕ್ಕೆ ಯಾರು ಅರ್ಹರು? ಯಾರನ್ನು ನೇಮಕ ಮಾಡಬೇಕು? ಎಂದು ಹೇಳಿ ಹೊಸದಾಗಿ ಒಂದು ಮಠವನ್ನು ಸ್ಥಾಪನೆ ಮಾಡುವುದಕ್ಕೆ ಹೋಗುತ್ತಾ ಇದ್ದಾರೆ. ನಾನಾಗಲೇ ಹೇಳಿದೆ ಶ್ರೀ ಭಾವೆ ಅವರು ಯಾವಾಗಲೂ ಮಠ ಮತ್ತು ಒಂದು ಶಾಸನಬದ್ಧವಲ್ಲದ ಸಮಾಜದ ವಿರುದ್ಧ ಹೋರಾಡತಕ್ಕವರು; ಅವರು ಯಾವತ್ತೂ ಸತತವಾದ ಸತ್ಯಗ್ರಹವನ್ನು ಇದಕ್ಕಾಗಿ ಮಾಡಿದವರು; ಅವರು ಕಾಂಚನ – ಮುಕ್ತಿಯನ್ನು ಮಾಡಿಕೊಂಡಿದ್ದಾರೆ.

ಈ ಮಸೂದೆಯನ್ನು ಇರುವ ಹಾಗೆ ಅಂಗೀಕಾರಮಾಡಿ ಕಾನೂನಿನ ಕಡತಕ್ಕೆ ಏರಿಸುವುದಾದರೆ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಂತಾಗುವುದಿಲ್ಲ ಎಂದು ಹೇಳುತ್ತೇನೆ. ಕಾರಣವೇನೆಂದರೆ ಅವರ ದೃಷ್ಟಿಯಿಂದ ೨೨ – ೨೩ ಸಾವಿರ ಎಕರೆಗಳಷ್ಟು ಜಮೀನನ್ನು ಅತಂತ್ರವಾದ ಹಿಡುವಳಿದಾರರುಗಳ ವಶದಲ್ಲಿರುವುದನ್ನು ಸರಕಾರದ ಮೂಲಕ ಒಳಪಡಿಸಿಕೊಳಬೇಕೆನ್ನುವುದು. ಅಲ್ಲದೆ ಸರಕಾರದವರು ಭೂದಾನ ಚಳುವಳಿ ಸಮಿತಿಯವರನ್ನು ಕೇಳಿ ಇದನ್ನು ಮಾಡಿದ್ದಾರೆಯೇ? ಅಲ್ಲದೆ ಇದರ ವಿಷಯದಲ್ಲಿ ಪೂರ್ವಾಪರ ಯೋಚನೆ ಮಾಡಿಲ್ಲ. ಆಚಾರ್ಯ ಭಾವೆಯವರು ಇದರ ಬಗ್ಗೆ ಏನು ಹೇಳಬೇಕೆಂದಿದ್ದಾರೆ? ಅವರ ಅಭಿಪ್ರಾಯವನ್ನೂ ತಿಳಿದುಕೊಂಡಿಲ್ಲ. ಆದರೆ, ಅವರ ಹೆಸರಿನಲ್ಲಿ ಭೂದಾನ ಚಳುವಳಿಯ ಸಮತಿಯ ಮೂಲಕ ಸಂಪಾದನೆಯಾಗಿರತಕ್ಕ ಭೂಮಿಯನ್ನು ಒಂದು ಟ್ರಸ್ಟು ಮೂಲಕ ಧರ್ಮದರ್ಶಿಗಳನ್ನು ನೇಮಕ ಮಾಡಬೇಕೆಂದು ಏನು ಇದರಲ್ಲಿ ಇಟ್ಟುಕೊಂಡಿದ್ದಾರೋ? ಅಂತಹ ಒಂದು ಮಂಡಲಿಯನ್ನು ಮಾಡಿಕೊಂಡು ಅವರ ಮೂಲಕ ಭೂಮಿಯನ್ನು ಹಂಚಿಕೊಡುವ ಅಧಿಕಾರವನ್ನು ಕೊಟ್ಟಿರುವುದು ಸಮಂಜಸವಾಗುವುದಿಲ್ಲ. ಅದೂ ಇಂತಹ ಸನ್ನಿವೇಶದಲ್ಲಿ ಭೂಮಿಯ ಸಮಸ್ಯೆ ಹದಗೆಟ್ಟು ಕುಳಿತಿರುವಾಗ, ಖಚಿತವಾದ ಯಾವ ಹೆಜ್ಜೆಯನ್ನೂ ಇಡದೇ ಇರುವಾಗ,. ಭೂಮಿಯ ಹಂಚಿಕೆಯೇ ಸರಿಸಮವಾಗಿ ಆಗದೆ ಇರುವಾಗ, ಇನಾಂ ಜಹಗೀರುಗಳನ್ನು ನಾವು ಸೃಷ್ಟಿ ಮಾಡಬೇಕೆ ಎನ್ನುವುದು ಬಹುಮುಖ್ಯವಾದ ಪ್ರಶ್ನೆ. ಆಚಾರ್ಯ ಭಾವೆಯವರ ಬಗ್ಗೆ ನನಗೂ ಬಹಳ ಗೌರವವಿದೆ. ಅವರ ಚಳುವಳಿಯ ಬಗ್ಗೆ ನಾನು ಗೌರವವನ್ನು ಹೊಂದಿದ್ದೇನೆ. ಆದರೆ ಮಾರ್ಗದಲ್ಲಿರುವ ಅಲೌಕಿಕವಾದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ನನ್ನ ದೃಢವಾದ ನಂಬಿಕೆ. ಆದರೆ, ಅವರು ಹೋಗುತ್ತಿರುವ ಮಾರ್ಗದಂತೆ ಸಂಪತ್ತನ್ನು ಗಳಿಸಲು ಸಾಧ್ಯವಿಲ್ಲ. ಅವರೇ ಹೇಳುವಂತಹ ಮನುಷ್ಯರನ್ನು ಸೃಷ್ಟಿ ಮಾಡುವುದೂ ಸಾಧ್ಯವಿಲ್ಲ. ಅದನ್ನು ನಾವು ಚರ್ಚಿಸುವುದು ಉಚಿತವಲ್ಲ ಮತ್ತು ಅದು ಅಪ್ರಕೃತ. ಅಹಿಂಸೆಯ ಆಧಾರದ ಮೇಲೆ ನಡೆಯುತ್ತಿರುವ ಈ ಚಳುವಳಿಯಲ್ಲಿ ಹಿಂಸೆಯಿಂದ ಒತ್ತಾಯ ತರುವುದನ್ನು ತೊಡೆದುಹಾಕಲು ಸಾಧ್ಯವಿಲ್ಲ. ಶ್ರೀಕೃಷ್ಣನೂ ಕೂಡ ಯುದ್ದವನ್ನು ತಪ್ಪಿಸಲಿಕ್ಕೆ ಆಗಲಿಲ್ಲ. ಕುರುಕ್ಷೇತ್ರ ನಡೆದೇ ನಡೆಯಿತು. ಇವೊತ್ತು ಉಂಟಾಗಿರತಕ್ಕಂಥ ಭೂಮಿಯ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಅವರು ಹೇಳುವುದು ಒಂದು ಪವಾಡ. ಭೂಮಿಯ ಸಮಸ್ಯೆ ಪವಾಡದಂತೆ ನಡೆಯುವುದಿಲ್ಲ ಎನ್ನುವುದು ಎಲ್ಲರೂ ತಿಳಿದು ಹೇಳುವ ಮಾತು. ಇದರ ಬಗ್ಗೆ ಆಚಾರ್ಯ ಭಾವೆಯವರೊಡನೆ ಸರಕಾರದವರು ವೈಯಕ್ತಿಕವಾಗಿ ಮಾತನಾಡಬೇಕು, ನಮ್ಮ ಅಭಿಪ್ರಾಯಗಳನ್ನು ಅವರಿಗೂ ತಿಳಿಸಬೇಕು. ಚಳುವಳಿ ವಿಫಲವಾಗಿದೆ ಎಂದು ಅವರು ಹೇಳುವ ಪ್ರಕಾರ ಮುಂದೆ ಇದಕ್ಕಾಗಿ ಏನೇನು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಇದನ್ನು ತಾವಿಲ್ಲಿ ವಿಚಾರ ಮಾಡಬೇಕು. ಹೊಸದಾಗಿ ಭೂದಾನದ ಗೇಣಿದಾರನೆಂದು ಒಬ್ಬರನ್ನು ಈಗಿರುವ ಇತರ ಗೇಣಿದಾರರೊಂದಿಗೆ ಸೃಷ್ಟಿ ಮಾಡಿದ್ದಾರೆ. ಈ ಹೊಸ ಭೂದಾನದ ಗೇಣಿದಾರ ಯಾರಾದರೂ ಭೂದಾನಕ್ಕಾಗಿ ಕೊಟ್ಟಿರುವ ಭೂಮಿಯನ್ನು ಉಪಯೋಗಿಸುತ್ತಿರುವಾಗ ಅಂತಹ ಬಡ ರೈತನ ಒಕ್ಕಲನ್ನು ಕಾನೂನು ಪ್ರಕಾರ ರದ್ದು ಮಾಡುವಾಗ ಅವನನ್ನು ಬಿಡಿಸಬಹುದು ಎಂದು ಇದರಲ್ಲಿ ಯಾವ ಒಂದು ಶ್ರೇಯಸ್ಸಿಗೋಸ್ಕರ ಆಚಾರ್ಯ ಭಾವೆಯವರು ಇಡೀ ದೇಶದಲ್ಲಿ ಕಾಲ್ನಡಿಗೆಯಲ್ಲೇ ಓಡಾಡುತ್ತಿದ್ದಾರೋ ಅಂತಹವರ ತತ್ವಕ್ಕೆ ವಿರೋಧವಾಗಿ ನಾವು ಕಾನೂನುಗಳನ್ನು ಮಾಡಿ, ಇದರೊಳಗೆ ಇಂತಹ ವಿಧಿಗಳನ್ನೂ ಪ್ರಕರಣಗಳನ್ನೂ ಹಾಕಿದ್ದೇವೆ. ಖಂಡಿತವಾಗಿಯೂ ಇದು ಪಾಸಾದರೆ ಈ ಶಾಸನದಿಂದ ಸರ್ವೋದಯ ಸಮಾಜವಾಗಬೇಕು ಎನ್ನುವ ಉದ್ದೇಶ ನೆರವೇರುತ್ತದಯೆ? ‘ಕೃಷ್ಣಾರ್ಪಣಮಸ್ತು’ ಎನ್ನುವಂತೆ ಇದೆ ಇದರ ತತ್ವ. ದೇಶದಲ್ಲಿ ಎಲ್ಲಿಯೂ ಇಲ್ಲದಂತಹ ಪದ್ಧತಿ ಇಲ್ಲಿ ಕಂಡುಬರುತ್ತಿದೆ. ಎಂದು ನಾನು ಹೇಳಬೇಕಾಗಿದೆ.

ಸಮಾಜದಲ್ಲಿ ಧಾರ್ಮಿಕ ಸಂಸ್ಥೆಗಳು

೧೧ ಸೆಪ್ಟಂಬರ್ ೧೯೬೩

ಸ್ವಾಮಿ, ಮಾನ್ಯ ರೆವಿನ್ಯೂ ಸಚಿವರು ಈ ಸಭೆಯ ಪರ್ಯಾಲೋಚನೆಯಾಗಿ ನಮ್ಮ ಮುಂದಿಟ್ಟಿರುವ ಮೈಸೂರು ರಾಜ್ಯದ ಧಾರ್ಮಿಕ ಮತ್ತು ದಾನೀಯ ಸಂಸ್ಥೆಗಳಿಗೆ ಸಂಬಂಧಪಟ್ಟ ಈ ವಿಧೇಯಕವನ್ನು ಪರಿಶೀಲನೆ ಮಾಡುವಾಗ ಕೆಲವು ಮಾತುಗಳನ್ನು ಹೇಳುವುದು ಉಚಿತ ಎಂದು ನಾನು ಭಾವಿಸುತ್ತೇನೆ. ನಮ್ಮ ದೇಶದಲ್ಲಿ ಜನಸಂಖ್ಯೆಯಷ್ಟೆ ದೇವರುಗಳ ಸಂಖ್ಯೆಯೂ ಇದೆ ಎಂದು ಹೇಳಬಹುದು.

ಮನುಷ್ಯನ ಇತಿಹಾಸದಲ್ಲಿ ಈ ದೈವೀಕಾಂಡ ಬಹಳ ವಿಸ್ತಾರವಾದುದು ಎಂದು ಹೇಳಬಹುದು. ಮನುಷ್ಯ ದೇವರನ್ನು ಯಾವತ್ತು ಸೃಷ್ಟಿಮಾಡಿದ ಎಂಬ ತಾರೀಖು ಇತಿಹಾಸದಲ್ಲಿ ಎಲ್ಲಯೂ ಖಚಿತವಾಗಿ ದೊರೆಯುವುದಿಲ್ಲ. ಆ ಭಾವನೆ ಅವನಲ್ಲಿ ಬೆಳೆದು, ಅವನ ದೇವರುಗಳು ಅವನ ಮನಸ್ಸಿನಲ್ಲಿ ರೂಪಗೋಡು, ಅವು ಅವನಿಗೆ ಬೇಕದಂತೆ ಆಕಾರ ಹೊಂದಿ ಭೂಮಿಯ ಮೇಲೆ ವಾಸಮಾಡುವುದಕ್ಕೆ ಯಾವಾಗ ಪ್ರಾರಂಭಮಾಡಿದವು ಎನ್ನುವ ಇತಿಹಾಸ ಕೂಡ ಬಹಳ ಪ್ರಾಕೃತ ಮತ್ತು ಪುರಾತನವಾದುದು. ಬಹುಶಃ ಇವನಂತೆಯೇ ದೇವರ ಹಿಂದೆಯೂ ಅಷ್ಟೇ ಕಲ್ಪಾಂತರ ಕಾಲ ಇದೆ ಎಂದು ಅಂದುಕೊಳ್ಳಬಹುದು. ದೇವರು ಮತ್ತು ಧರ್ಮದ ಹೆಸರಿನಲ್ಲಿ ಮನುಷ್ಯ ಹರಿಸಿದಷ್ಟು ರಕ್ತವನ್ನು ಬೇರೆ ಯಾವ ಉದ್ದೇಶಕ್ಕಾಗಿಯೂ ಹರಿಸಿರಲಾರ ಎಂದು ಅನ್ನಿಸುತ್ತದೆ. ಮತೀಯ ಭಾವನೆಯ ಉತ್ಕಟ ಘರ್ಷಣೆಯಿಂದಾಗಿ ನಮ್ಮ ದೇಶ ಇಬ್ಭಾಗ ಕೂಡ ಆಗಬೇಕಾಯಿತು. ಇದಕ್ಕಾಗಿ ಜನರ ಬಲಿ ಕೂಡ ಆಗಬೇಕಾಯಿತು. ಇವತ್ತು ನಮ್ಮ ಸಮಾಜದಲ್ಲಿ ಹೇಗೆ ಧನಿಕರು, ಬಡವರು ಎನ್ನತಕ್ಕ ಭೇದವಿದೆಯೋ ಹಾಗೆಯೇ ಈ ಧಾರ್ಮಿಕ ವಿಶ್ವದಲ್ಲಿಯೂ ಕೂಡ, ದೇವರುಗಳ ರಾಜ್ಯದಲ್ಲಿಯೂ ಕೋಟ್ಯಾಧೀಶರಾದ ದೇವರುಗಳಿದ್ದಾರೆ. ಹೊತ್ತು ಹೊತ್ತಿಗೆ ತೆಂಗಿನಕಾಯಿ, ನೀರು, ಇಲ್ಲದೆ ಬರೀ ನೀರು ಮತ್ತು ಒಂದು ತುಳಸಿದಳ ತಲೆಯ ಮೇಲೆ ಬಿದ್ದಿರುತ್ತವೆ. ಅಲ್ಲದೆ ಹಾಗೆ ಏನೂ ಬೀಳದೆ ಇರತಕ್ಕ ನಿರ್ಗತಿಕರಾಗಿರತಕ್ಕ, ರಸ್ತೆಯ ಪಕ್ಕದಲ್ಲಿ ಕೇಳುವವರಿಲ್ಲದೆ ಬಿದ್ದಿರುವ ಎಷ್ಟೋ ದೇವರುಗಳನ್ನು ನೋಡಿ ನಾವು ಕನಿಕರ ಪಡುತ್ತೇವೆ. ಮಾನವ ಸಮಾಜದಲ್ಲಿರುವ ಆರ್ಥಿಕ ಏರುಪೇರುತಳನ್ನು ಇಲ್ಲಯೂ ನಾವು ಕಾಣುತ್ತೇವೆ. ಶ್ರೀಮಂತ ದೇವರುಗಳು ಇವೆ. ಅತಿ ಗರೀಬರಾದ ದೇವರುಗಳೂ ಇವೆ. ಎಷ್ಟೋ ದೇವರುಗಳನ್ನು ನಾವು ಇವತ್ತು ನೋಡಿದರೆ ಗುಡಿ ತಲೆಯ ಮೇಲೆ ಬಿದ್ದು, ಅದೂ ಬಚಾವಾಗದೆ, ಉಸಿರು ಕಟ್ಟಿದಂತಾಗುತ್ತದೆ. ಇಂಥ ದೇವರುಗಳ ಲೆಕ್ಕವನ್ನು ತೆಗೆದು ನೋಡಿದರೆ ಆ ದೇವರುಗಳ ಹೆಸರಿನಲ್ಲಿ ನೂರಾರು ಎಕರೆ ಜಮೀನು ನಾಲ್ಕಾರು ಜಿಲ್ಲೆಗಳಲ್ಲಿರುವುದು ಕಂಡುಬರುತ್ತದೆ. ಅ ಜಮೀನುಗಳು ಅಪರೂಪವಾಗಿ ಅವುಗಳನ್ನು ಸರಿಯಗಿ ನಡೆಸಿಕೊಂಡು ಹೋಗದೆ, ಅಲ್ಲಿ ಇದ್ದಂಥ ಪೂಜೆ ಪುನಸ್ಕರ ಮಾಡುವುದಕ್ಕೆ ಜವಾಬ್ದಾರರಾಗಿರುವವರಿಗೆ ಕಾಲ ಕಾಲಕ್ಕೆ ಸಲ್ಲಬೇಕಾದ ತಸ್ದೀಕುಗಳು ಸಲ್ಲದೆ, ದೇಶಾಂತರವಾಗಿ ಹೋಗಿ ದೇವರು ದಿಕ್ಕುದೆಸೆ ಕಾಣದೆ, ಆಸ್ತಿಪಾಸ್ತಿ ಬೇರೆಯವರ ಪಾಲಾಗಿ, ಪೂಜಾರಿಯು ಸಂತ್ರಸ್ತನಾಗಿ ಬೇರೆ ಕಡೆ ಹೋಗಿ ಕೂಲಿ ಕೆಲಸ ಮಾಡುವುದು, ಅಡಿಗೆ ಮಾಡುವುದು, ಕಾಫಿ ಹೋಟಲಿನಲ್ಲಿ ಲೋಟ ತೊಳೆಯುವುದು ಈ ಮಟ್ಟಕ್ಕೆ ಪರಿಸ್ಥಿತಿ ಅವನನ್ನು ಗುರಿ ಮಾಡಿದೆ. ಬಹುಶಃ ಈ ಎಲ್ಲ ದೃಶ್ಯಗಳನ್ನೂ ನೋಡಿ ಮಾನ್ಯ ಕಂದಾಯ ಸಚಿವರಿಗೆ ಮರುಕ ಬಂದು ಈ ಮಸೂದೆಯನ್ನು ಸಭೆಯ ಪರ್ಯಾಲೋಚನೆಗೆ ಇಟ್ಟಿದ್ದಾರೆಂದು ನಾನು ತಿಳಿಯುತ್ತೇನೆ. ಮಾನವ ಸಮಾಜದಲ್ಲಿ ಹೇಗೆ ಬಾಯಿ ಇಲ್ಲದೆ ಇರುವ ಜನರ ಬಗ್ಗೆ ಮಾತನಾಡಲು ಆಶಿಸುತ್ತೇನೆಯೋ ಮಸೂದೆಯ ಸಂಬಂಧದಲ್ಲಿ ಕೂಡ ಅದೇ ರೀತಿ ಹಣಕಾಸಿನ ಬಲದಿಂದ ಸರ್ಕಾರವನ್ನು ಯಾರು ಎದುರಿಸಲಾರರೋ, ಯಾರ ಆಸ್ತಿ ಪಾಸ್ತಿಗಳು ಪರಾಧೀನವಾಗಿ ಹೋಗಿ ಬಿಟ್ಟಿದೆಯೋ, ಯಾರ ತಲೆಯ ಮೇಲೆ ಒಂದು ತುಳಸಿದಳ, ಒಂದು ಹನಿ ಒಳ್ಳೆಯ ಉದಕ ಕೂಡ ಬೀಳುತ್ತಿಲ್ಲವೋ ಅಂಥ ದೇವರ ಕಡೆ ಇವೊತ್ತು ಸರ್ಕಾರದ ಗಮನವನ್ನು ಸೆಳೆಯಬೇಕು. ಅಂಥ ದೇವರನ್ನು ನಾವು ಕೈಬಿಡಬಾರದು ಎಂದು ನಾನು ಇವೊತ್ತು ಹೇಳುತ್ತಿದ್ದೇನೆ.

ಈ ಧಾರ್ಮಿಕ ಕ್ಷೇತ್ರದಲ್ಲಿಯೂ, ದೇವರುಗಳ ರಾಜ್ಯದಲ್ಲಿಯೂ ಕೂಡ ನಾನು ಮೇಲು, ತಾನು ಮೇಲು, ನಿನಗೆ ಒಂದು ತಲೆ ಇದ್ದರೆ ನನಗೆ ಮೂರು ತಲೆ ಇವೆ, ನನಗೆ ಐದು ತಲೆ ಇವೆ, ನನ್ನ ಜನ್ಮದ ಪರಿ ಬೇರೆ. ನನ್ನ ವಿಶ್ವದ ಆಡಳಿತ ಕ್ರಮ ಬೇರೆ ಎಂದು ಹೇಳುತ್ತಾರೆ. ಚಂಡಿ, ಚಾಮುಂಡಿ, ಮೂಕಾಂಬಿಕಾ, ಇವರೆಲ್ಲ ಒಂದು ಅಂತಸ್ತಿನಲ್ಲಿದ್ದರೆ; ಅವರ ಅಕ್ಕ ತಂಗಿಯರಾದ ಮಾರಿ, ಮಸಣಿ, ಎಲ್ಲಮ್ಮ – ಇವರೆಲ್ಲ ಒಂದೇ ಪೀಳಿಗೆಯವರಾದರೂ, ಒಂದೇ ಮನೆತನದಲ್ಲಿ ಹುಟ್ಟಿದವರಾದರೂ ಇವರ ಅಂತಸ್ತೇ ಬೇರೆ. ಇವರಿಗೆ ಗುಡಿ ಇದ್ದರೆ ಪೂಜಾರಿ ಇಲ್ಲ. ಪೂಜಾರಿ ಇದ್ದರೆ ಅವನಿಗೆ ಹೊಟ್ಟೆಗಿಲ್ಲ. ಇವು ಅನಾಥರಾಗಿ ದಾರಿಯಲ್ಲಿ ಹೋಗುವವರನ್ನು ಕೈ ಕೈ ಬೇಡುತ್ತವೆ. ದಾರಿಯಲ್ಲಿ  ಹೋಗುವವರು ಕೈಮುಗಿಯುವುದಕ್ಕೆ ಬದಲಾಗಿ ಅವೇ ಭಕ್ತರನ್ನು ಯಾಚಿಸಬೇಕಾಗಿದೆ. ದೇವರನ್ನು ಕೈ ಬಿಟ್ಟು ಹೋಗುವಷ್ಟು ಸ್ಥಿತಿ ಬಂದಿದೆ. ತಮ್ಮ ಊರಿನಲ್ಲಿಯೂ ಈ ತರಹ ಅನಾಥರಾಗಿರತಕ್ಕ ದೇವರುಗಳಿರಬಹುದು. ಇದು ನಿಜಕ್ಕೂ ಕನಿಕರದ ವಿಷಯ. ಒಬ್ಬ ಪಂಚಕಜ್ಜಾಯವನ್ನು ತಿಂದರೆ, ಇತರರಿಗೆ ಕೋಳಿ, ಕುರಿ, ಕೋಣ, ಎಮ್ಮೆ. ಒಂದೊಂದು ಸಲ ವಿಸ್ಮಯವಾಗುತ್ತದೆ. ಒಂದೊಂದು ಸಲ ಗಾಬರಿಯಾಗುತ್ತದೆ. ಇಲ್ಲಿ ಏನೋ ಕಾನೂನು – ಕಾಯದೆ ನಾವು ಮಾಡಬಹುದು; ಗೊಂದಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಹಾಗೆಯೇ ಯೋಚನೆ ಮಾಡುವಾಗ ದೇವರ ಸ್ಥಿತಿಯೂ ಅದೇ ರೀತಿ ಇರುವಂತೆ ಕಾಣುತ್ತದೆ. ನಾವು ನಿಜಕ್ಕೂ ಲೌಕಿಕವಾಗಿ ವಿಮರ್ಶಿಸುವುದಕ್ಕೆ ಈ ಸಭೆಯಲ್ಲಿ ಸೇರಿದ್ದರೂ ಆಧ್ಯಾತ್ಮಕ ಪ್ರಪಂಚವನ್ನು, ಅಲೌಕಿಕ  ಬದುಕನ್ನು ಗಣನೆಯ ತೆಗೆದುಕೊಳ್ಳ ಬೇಕಾಗುತ್ತದೆ.

ಕೆಲವು ಶಾಲೆಗಳನ್ನು ಕಟ್ಟಿಸಿ, ಕೆಲವು ಊಟದ ಛತ್ರದ ವ್ಯವಸ್ಥೆ ನಡೆಸಿ, ಭಕ್ತರಾಗಿ ಸಮಾಜಕ್ಕೆ ಕೆಲವು ಸೇವೆಗಳನ್ನು ಕೆಲವು ಸಂಸ್ಥೆಗಳವರು ಮಾಡಿದ್ದಾರೆ. ಇನ್ನು ಕೆಲವು ಸಂಸ್ಥೆಗಳು, ಬೆಂಗಳೂರಿನಲ್ಲಿ ಎಷ್ಟೋ ನೋಡಿದ್ದೇನೆ, ವ್ಯಾಪಾರಿ ಸಂಸ್ಥೆಗಳಂತೆ ನಡೆದುಕೊಂಡು ಹೋಗುತ್ತ ಇವೆ. ಅವರು ಹೇಳುವುದು ನಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂದು. ನಮ್ಮ ಆವರಣದಲ್ಲಿ ಯಾರು ಇದ್ದಾರೆ ಅವರಿಗೂ ನಮಗೂ ಸಂಬಂಧವಿಲ್ಲ. ಬಾಡಿಗೆಗೆ ರೂಮು ಕೊಟ್ಟಿದ್ದೇವೆ; ಬಾಡಿಗೆ ಬರುತ್ತದೆ; ಮಾರ್ಕೆಟ್ ರೇಟ್‌ನಂತೆ. ಆದ್ದರಿಂದ ನಮ್ಮ ದುಡಿಮೆ ಹೆಚ್ಚಿಸಿಕೊಳ್ಳುತ್ತೇವೆ ಎಂದು ವಾದ ಮಾಡುತ್ತಾರೆ. ದೇವರ ಆದಾಯ, ಧಾರ್ಮಿಕ ಸಂಸ್ಥೆಗಳ ಆದಾಯ ಹೆಚ್ಚಬರೆಕು, ಏಕೆ ಹೆಚ್ಚಬೇಕೆಂದರೆ ತನ್ನ ಹಿರಿಮೆಯಿಂದ ಪ್ರಚಾರ ಮಾಡಿಕೊಳ್ಳುವ ಅಥವಾ ತನ್ನ ಆಡಳಿತ ಮಂಡಲಿಯನ್ನು ನಡೆಸುವ ಸಹಾಯಕ್ಕೆ ಆ ಹಣ ಆಗಬಾರದು. ವಿಸ್ತರಣಾ ಯೋಜನೆಯನ್ನು ಕೆಲವು ಸಂಸ್ಥೆಗಳು ಹಾಕಿಕೊಂಡು ಕೆಲಸ ಮಾಡುತ್ತಿವೆ ಎಂದು ಕೇಳಿದ್ದೇವೆ. ಅವರ ಉನ್ನತಿಗಾಗಿಯೇ ಅವರು ವಿಸ್ತರಣಾ ಯೋಜನೆನ್ನು ಅನುಸರಿಸುತ್ತಾ ಹೋದರೆ ಅದು ಬಹುಶಃ ಕೆಲವು ಸಲ ಜನರ ಉನ್ನತಿಗೆ ಅಡ್ಡಿಯನ್ನು ತರಬಹುದು. ಕೆಲವು ದೇವರುಗಳ ಹೆಸರನ್ನು ಧರ್ಮದರ್ಶಿಗಳು ಎಂದರೆ ಆ ದೇವರಿಗೆ ಊಟ ಉಪಚಾರಕ್ಕೆ ಹಾಕಿ, ದೇವರ ರಕ್ಷಣೆ ಮಾಡುವುದಕ್ಕೆ ಇದ್ದಂಥ ಮನುಷ್ಯರು ದೇವರ ಹೆಸರನ್ನೇ ತಮ್ಮ ಹೆಸರನ್ನಾಗಿಟ್ಟುಕೊಂಡು ಎರಡು ಮೂರು ತಲೆಮಾರಿನಲ್ಲಿ ದೇವರ ಹೆಸರಿನ ಖಾತೆಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ. ಇದು ಬಹಳ ನಡೆದಿದೆ. ಇನ್ನು ಕೆಲವು ಕಡೆ ವಾದ ಇರಬಹುದು, ದೇವರ ಮೇಲೆ ಕೇಸು ಹಾಕಿ, ಅದಕ್ಕೆ ಸೇರಿದ ಆಸ್ತಿ ಯಾರಿಗೆ ಸೇರಬೇಕು? ಅದಕ್ಕೆ ಹಕ್ಕುದಾರರು ಯಾರು? ಎಂದು ಅನೇಕ ಕಡೆ ವಿವಾದಗಳು ಬಂದಿವೆ. ಇದು ನಡೆಯುತ್ತಾ ಇರುತ್ತದೆ. ದೇವರಿಗೆ ಇಷ್ಟವಿಲ್ಲದೇ ಇದ್ದರೂ ಪೂಜಾರಿಗಳು ಅವರ ಇಚ್ಛಯ ಪ್ರಕಾರ ನಡೆಸಿಕೊಂಡು ಹೋಗುತ್ತಾರೆ. ಸುಪ್ರೀಂಕೋರ್ಟ್‌ಗೂ ಹೋಗುತ್ತಾರೆ. ಅದು ಕಾನೂನು ಮೂಲಕ ಹೋಗತಕ್ಕದ್ದು. ವ್ಯಕ್ತಿ ಇದ್ದ ಕಡೆ ವಿವಾದ ಬರುತ್ತದೆ. ಅದರಂತೆ ಧಾರ್ಮಿಕ ಸಂಸ್ಥೆಗಳೂ ಬರುತ್ತವೆ. ಈ ಮಸೂದೆಯಿಂದ ನಾನು ಬಯಸುವುದು ಎರಡು ವಿಷಯಗಳನ್ನು; ಏನೆಂದರೆ ಆಯಾಯಾ ಸಂಸ್ಥೆಗಳು ಹಣ, ಆಸ್ತಿ ಪಾಸ್ತಿಗಳು ಏನೇನನ್ನು ಹೊಂದಿದ್ದವು ಈಗ ಆ ಸಂಸ್ಥೆಗಳಿಗೆ ಸೇರಿರತಕ್ಕ ಆಸ್ತಿಪಾಸ್ತಿಗಳು ಮತ್ತು ಬಂಗಾರ ಇತ್ಯಾದಿಗಳು ಪರಭಾರೆ ಆಗದೇ ಇರುವ ರೀತಿಯಲ್ಲಿ ಈ ಕಾನೂನು ಆ ದೇವರುಗಳಿಗೆ ಮತ್ತು ಸಂಸ್ಥೆಗಳಿಗೆ ರಕ್ಷಣೆ ಕೊಡುತ್ತವೆ ಮತ್ತು ಕೊಡಬೇಕು ಎನ್ನುವುದು ಒಂದನೆಯದು. ಎರಡನೆಯದು: ಪರಸ್ಪರ ಒಬ್ಬರನ್ನೊಬ್ಬರು ನಂಬಿ ಕುಳಿತಿರುವ ದೇವರು ಮತ್ತು ಭಕ್ತರು. ನಾನು ಮನುಷ್ಯನ ಅಭಿವೃದ್ಧಿಯ ಕಡೆಗೆ ಈ ಸಂಸ್ಥೆಗಳು ಹೆಚ್ಚಿನ ಲಕ್ಷ್ಯವನ್ನು ಕೊಡಬೇಕೆಂದು ಹೇಳುವವನು. ಈ ರೀತಿ ಆಗಬೇಕೆನ್ನುವುದು ಎರಡನೆಯ ಬಯಕೆ. ಹೆಚ್ಚಾಗಿ ವಿದ್ಯಾಸಂಸ್ಥೆಗಳಿಗೆ ಹಣವನ್ನು ಒದಗಿಸಬಹುದು. ಮತ್ತು ಚೈನ ಗಡಿಯಲ್ಲಿ ನಡೆಯತಕ್ಕ ಹೋರಾಟಕ್ಕೆ ಚಿನ್ನವನ್ನು ಮತ್ತು ಹಣವನ್ನು ಒದಗಿಸಬಹುದು. ಏಕೆಂದರೆ ರಾಷ್ಟ್ರ ರಕ್ಷಣೆ ನಮಗೆಷ್ಟು ಅಗತ್ಯವೋ ಹಾಗೆಯೇ ದೇರುಗಳಿಗೂ ಅಷ್ಟೇ ಅಗತ್ಯ. ಅದಕ್ಕೂ ಹಣವನ್ನು ಹೊಂದಿಸಬಹುದು. ಬಲತ್ಕಾರ ಮಾಡಿ ಕಿತ್ತು ಕೊಳ್ಳಬೇಕೆಂದು ಹೇಳುವುದಿಲ್ಲ. ರಾಷ್ಟ್ರ ಕಂಗೆಟ್ಟು ಭಕ್ತರು ದಿಕ್ಕೆಟ್ಟು ಕುಳಿತಾಗ ಯಾವ ಧಾರ್ಮಿಕ ಸಂಸ್ಥೆಯೂ ರಾಷ್ಟ್ರದ ಮತ್ತು ತನ್ನ ಭಕ್ತರ, ಜನತೆಯ ಹಿತವನ್ನು ಅಲಕ್ಷಿಸಿ ತನ್ನ ಹಿತವನ್ನೇ ಗಮನಿಸುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ.

ಬಡದೇವರಾಗಿದ್ದರೆ ಅದನ್ನು ಯಾರೂ ಕೂಡ ನಮ್ಮದೆಂದು ಹೇಳುವುದಿಲ್ಲ ಬಡತನದಲ್ಲಿರತಕ್ಕ ಜನರು ಸಂಬಂಧಿಕರಾಗಿದ್ದರೂ ಅವರನ್ನು ದೊಡ್ಡ ಸ್ಥಾನದಲ್ಲಿರುವರು ನಮ್ಮ ಹತ್ತಿರದ ಸಂಬಂಧಿಗಳು ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ದುಡ್ಡಿನ ದೇವರಾದರೆ ಇದು ನಮ್ಮ ದೇವರು, ಇದರ ಹಕ್ಕು ನಮಗೆ ಸೇರಬೇಕು; ವಂಶಪಾರಂಪರ್ಯವಾಗಿ ನಾನೆ ಛತ್ರಿಹಿಡಿಯುತ್ತಿದ್ದವನು ನಾವೆಲ್ಲರೂ ನೋಡಿದ್ದೇವೆ. ಇವೆಲ್ಲ ದುಡ್ಡಿನ ದೇವರ ಹತ್ತಿರ ನಡೆಯುತಕ್ಕ ವಿಚಾರಗಳು. ಇನ್ನಾದರೂ ಈ ಸಂಸ್ಥೆಗಳು ಒಂದು ಒಳ್ಳೆಯ ರೀತಿಯಲ್ಲಿ ನಡೆಯುವಂತೆ ಮಾಡೋಣ. ಆಯಾಯ ಧಾರ್ಮಿಕ ಸಂಸ್ಥೆಯವರು ಅವರವರ ಧರ್ಮದ ಹಿರಿಮೆಯ ಬಗ್ಗೆ ಪ್ರಚಾರ ನಡೆಸಲು ಯಾವ ಅಡ್ಡಿ ಆತಂಕಗಳೂ ಇರಬಾರದು. ಅವರು ಜನತೆಗೆ ಒಂದು ಒಳ್ಳೆಯ ತಿಳುವಳಿಕೆಯನ್ನು ನೀಡುವ ಬಗ್ಗೆ ಯಾವ ಅಡಚನೆಗಳೂ ಇರಬಾರದು. ಈ ಸಂಸ್ಥೆಗಳು ಇನ್ನು ಹೆಚ್ಚಿನ ಆಸ್ತಿಪಾಸ್ತಿಗಳನ್ನು ವಿಸ್ತರಿಸುವುದಕ್ಕೆ ಅವಕಾಶವಿಲ್ಲದಿದ್ದರೂ ಹಾಲಿ ಬರತಕ್ಕ ಆದಾಯವೇನಿದೆ ಅದನ್ನು ಓಳ್ಳೇ ರೀತಿಯಲ್ಲಿ ಸದ್ವಿನಿಯೋಗವಾಗುವಂತೆ ಯೋಗ್ಯವ್ಯವಸ್ಥೆಯನ್ನು ಏರ್ಪಡಿಸುವುದು ಒಳ್ಳೆಯದು. ಕೆಲವು ಕಡೆ ಈ ಉತ್ಪತ್ತಿಗೆ ಕೆಲವರು ಗುತ್ತಿಗೆದಾರರಾಗಿ ಜನರಿಂದ ಬರತಕ್ಕ ವರಮಾನವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥಾದ್ದು ಮೊದಲು ತಪ್ಪಬೇಕು. ನನಗೆ ತಿಳಿದಮಟ್ಟಿಗೆ ಈ ರಿಜಿಸ್ಟ್ರೇಶನ್ ವಿಚಾರದಲ್ಲಿ ಕೆಲವರಿಗೆ ಬೇಜಾರಿರಬಹುದು.

ಈ ಹಿಂದೆ ಒಂದು ಓಟರ್ಸ್ ಲಿಸ್ಟನ್ನು ತಯಾರಿಸಬೇಕೆಂದು ಹೊರಟಾಗ ಕೆಲವರು ಆ ಲಿಸ್ಟಿನಲ್ಲಿ  ತಮ್ಮ ಹೆಸರನ್ನು ಬರೆಸಲು ಒಪ್ಪಲಿಲ್ಲ. ಆದರೆ ಈಗ ನಮ್ಮ ರಾಜ್ಯದಲ್ಲಿ ದೇವರುಗಳಿವೆ, ಎಷ್ಟು ಆಸ್ತಿಯಿದೆ, ಎಷ್ಟು ಜನ ಭಕ್ತಾದಿಗಳಿದ್ದಾರೆ, ಯಾರು ಭಕ್ತಾದಿಗಳಿಗೆ ಹಿಂಸೆ ಕೊಡುತ್ತಿದ್ದಾರೆ. ಯಾವ ಯಾವ ದೇವರಲ್ಲಿ ಎಷ್ಟೆಷ್ಟು ಚಿನ್ನ ಇದೆ ಎಂಬುದೆಲ್ಲ ಲೆಕ್ಕದಲ್ಲಿರಬೇಕು. ಈ ಚಿನ್ನದ ದೇಶೆಯಿಂದ ದೇವರಿಗೂ ಬೀಗ ಬಿದ್ದಿದೆ. ನಾನೊಂದು ಸಾರಿ ತಿರುಪತಿಗೆ ಹೋಗಿದ್ದೆ. ಅಲ್ಲಿ ದೇವರನ್ನು ಕೋಣೆಯಲ್ಲಿ ಕೂಡಿಸಿ, ಬಲವಾದ ಕಬ್ಬಿಣದ ಸಲಾಕಿ ಬಾಗಿಲನ್ನು ಮಾಡಿಸಿ, ಅದಕ್ಕೆ ಬಲವಾದ ಒಂದು ಕಬ್ಬಿಣದ ಬೀಗ ಹಾಕಿದ್ದರು. ಸಾಮಾನ್ಯವಾಗಿ ಆ ಬಾಗಿಲನ್ನು ತೆಗೆಯುವುದೇ ಇಲ್ಲವಂತೆ, ಯಾರಾದರೂ ಅಂಥ ದೊಡ್ಡ ಮನುಷ್ಯರು ಬಂದಾಗ ಮಾತ್ರ ಯಾರೋ ಒಬ್ಬರು ಸ್ನಾನಮಾಡಿ ಬಟ್ಟೆಹಾಕಿಕೊಂಡು ಬಂದು ಆ ಬೀಗವನ್ನು ತೆಗೆದು ದೇವರಿಗೆ ಪೂಜೆ ಮಾಡಿ ಮತ್ತೆ ಹಾಗೇ ಬೀಗ ಹಾಕಿಬಿಡುತ್ತಾರಂತೆ. ಅದನ್ನೆಲ್ಲ ನೋಡಿದಾಗ, ಜನರಿಗೆ ಈ ದೇವರಲ್ಲಿ ಭಕ್ತಿಯಿಲ್ಲವೋ ಅಥವ ದೇವರಿಗೆ ಈ ಜನರಲ್ಲಿ ವಿಶ್ವಾಸವಿಲ್ಲವೋ ಎಂಬ ಅಭಿಪ್ರಾಯಗಳು ಬಂದು ಆ ದೇವರ ಬಗ್ಗೆ ನಾನು ಬಹಳ ಮರುಕಪಟ್ಟೆನು. ಅಂತೂ ನಾನು ಸಹ ಒಂದು ಸಮಸ್ಕಾರಮಾಡಿ ಬಂದೆ. ದೇವರಿಗಿಂತ ಚಿನ್ನದ ಮೇಲೆ ಅಷ್ಟು ಆಸೆಯಿದ್ದರೆ ದೇವರು ತನಗೆ ಭಕ್ತ ಬೇಡ ಎಂದು ಹೇಳಲಿ. ಇಲ್ಲವೆ ದೇವರಿಗೆ ಭಕ್ತ ಬೇಕಾಗಿದ್ದರೆ ಚಿನ್ನವವನ್ನಾದರೂ ಬೇಡ ಎಂದು ಹೇಳಬೇಕು. ಎರಡೂ ಇದ್ದಲ್ಲಿ ಬಹಳ ತಾಪತ್ರಯ. ದುಡ್ಡಿದ್ದ ದೇವರಿಗೆ ಕೋಟಿಗಟ್ಟಲೆ ಭಕ್ತರಿರುತ್ತಾರೆ. ಬಂಗಾರದ ನೆಪದಿಂದ ದೇವರ ಮುಖಕ್ಕೆ ಬೀಗ ಹಾಕಿದ್ದಾರೆ. ನಾವೀಗ ದೇವರುಗಳನ್ನು ಸೆರೆಯಿಂದ ಮುಕ್ತಿ ಕಾಣಿಸಬೇಕಾಗಿದೆ. ಈ ಕಾನೂನಿನ ಮುಖ್ಯ ಉದ್ದೇಶ ಭಕ್ತಿಗೆ ಒಂದು ನಿಯಂತ್ರಣ ಮಾಡಬೇಕೆಂದಲ್ಲ, ದೇವರ ಹೆಸರಿನಲ್ಲಿ ಭಕ್ತರಿಂದ ವಸೂಲಾಗತಕ್ಕ ಹಣವೇನಿದೆಯೋ ಅದನ್ನು ಸದ್ವಿನಿಯೋಗ ಆಗುವ ಬಗ್ಗೆ ಒಂದು ನಿಯಂತ್ರಣ ಮಾಡಬೇಕೆಂಬುದು. ಈ ವಿಚಾರದಲ್ಲಿ ಸರ್ಕಾರದವರು ನಿಗಾವಹಿಸಿ ಒಳ್ಳೆಯ ರೀತಿಯಲ್ಲಿ ಇವು ತಮ್ಮ ಆಡಳಿತವನ್ನು ನಡೆಸಿಕೊಂಡು ಹೋಗುವಂತೆ ಅವಕಾಸ ಕಲ್ಪಿಸಿಕೊಡುವುದು ಉಚಿತ ಎಂದು ನಾನು ಭಾವಿಸುತ್ತೇನೆ.

ನೀರಾವರಿ

೨೯ ಫೆಬ್ರವರಿ ೧೯೬೪

ಇನ್ನು ನೀರಾವರಿ ಯೋಜನೆಗಳ ಬಗ್ಗೆ ಮೈಸೂರು ಸರ್ಕಾರ ತನ್ನ ವಿಳಂಬ ನೀತಿಯನ್ನು ಅನುಸರಿಸಿಕೊಂಡಿರುವುದಲ್ಲದೆ, ಕೃಷ್ಣಾ ಗೋದಾವರಿ ನೀರನ್ನು ಪಡೆದುಕೊಳ್ಳುವ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ. ಆಲಮಟ್ಟಿಯಲ್ಲಿ ಮೊದಲು ಕೃಷ್ಣಾನದಿಗೆ ಅಣೆಕಟ್ಟನ್ನು ಕಟ್ಟುತ್ತೇವೆ – ಎಂದು ಜಿಜಾಪುರದಲ್ಲಿ ಹೋದಾಗ ಮುಖ್ಯಮಂತ್ರಿಗಳು ಹೇಳುತ್ತಾರೆ. ಲೋಕೋಪಯೋಗಿ ಶಾಖೆ ಮಂತ್ರಗಳು ಗುಲ್ಬರ್ಗದವರು. ಅವರು ನಾರಾಯಣಪುರದಲ್ಲಿ ಕಟ್ಟಬೇಕು ಎಂದು ಪ್ರಯತ್ನ ಮಾಡುತ್ತಿದ್ದರೆಂದು ಕಾಣುತ್ತದೆ. ಎರಡು ಕಡೆಗಳಲ್ಲಿಯೂ ಏಕಕಾಲದಲ್ಲಿ ಅಡಿಗಲ್ಲನ್ನು ಹಾಕಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದೂ ಹೇಳುತ್ತಾರೆ. ನೂರು ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚ ಮಾಡತಕ್ಕ ದೊಡ್ಡ ಯೋಜನೆಯ ಬಗ್ಗೆ ಇಷ್ಟು ತಾತ್ಸಾರ ಮನೋಭಾವನೆಯನ್ನು ಹೊಂದಿದ್ದರೆ ಈ ಯೋಜನೆ ಎಷ್ಟರಮಟ್ಟಿಗೆ ಸಾರ್ಥಕವಾದೀತು ಎನ್ನುವುದನ್ನು ಯೋಚನೆ ಮಾಡಬೇಕು. ನಾರಾಯಣ ಪುರದಲ್ಲಿ ಆಗಬೇಕು ಎನ್ನವುದರ ಬಗ್ಗೆ ಪ್ಲಾನಿಂಗ್ ಕಮಿಷನ್‌ನವರ ಅಭಿಪ್ರಾಯವೂ ಇದ್ದ ಹಾಗೆ ಕಾಣುತ್ತದೆ. ನನಗೆ ಗೊತ್ತಿದ್ದ ಪ್ರಕರ ನಾರಾಯಣಪುರದಲ್ಲಿ ಆಣೆಕಟ್ಟನ್ನು ಕಟ್ಟುವುದರಿಮದ ಮುಂದೆ ಹೆಚ್ಚು ನೀರು ದೊರೆತು ಆಲಂಪುರ ಮತ್ತು ಗದ್ವಾಲ್ಕಕೆ ಸೇರಿದ ಅನೇಕ ಸಹಸ್ರರಾರು ಎಕರೆಗಳಿಗೆ ನೀರು ಹರಿಯುತ್ತದೆ. ಯಾವತ್ತೂ ಕ್ಷಾಮ ಡಾಮರಗಳಿಗೆ ತುತ್ತಾಗತಕ್ಕ ಬಿಜಾಪುರದ ಭಾಗಗಳಿಗೆ ನೀರು ಕಡಿಮೆಯಾಗುತ್ತದೆ. ನಮಗೆ ಈಗಾಗಲೇ ಕೇಂದ್ರ ಸರ್ಕಾರದವರು ಏನು ನೀರಿನ ಹಂಚಿಕೆಯನ್ನು ಮಾಡಿದ್ದಾರೆಯೋ ಅದರಲ್ಲಿ ಬಹುಭಾಗ ನೀರು ಪುನಃ ಆಂಧ್ರಕ್ಕೆ ಹೋಗುವುದರಲ್ಲಿದೆ. ಮಹಾರಾಷ್ಟ್ರದವರಿಗೆ ಕೂಡ ಮತ್ತಷ್ಟು ನೀರನ್ನು ಕೊಡುತ್ತೇವೆ ಎಂದು ಕೇಂದ್ರದವರು ಒಪ್ಪಿಕೊಂಡಿದ್ದಾರೆ. ನಮಗೆ ಯಾವ ಯಾವ ನದಿಗಳಿಂದ ಎಷ್ಟೆಷ್ಟು ನೀರು ಬರುತ್ತದೆಯೋ ಅದನ್ನು ಕೊಟ್ಟುಬಿಡಿ ಎಂದು ನೀವು ಕೇಳುತ್ತಿದ್ದೀರಿ. ಆದರೆ, ನಿಮ್ಮ ಹತ್ತಿರ ಯಾವ ಯಾವ ಯೋಜನೆಗಳು ಸಿದ್ಧವಾಗಿವೆ? ಅದಕ್ಕೆ ಬೇಕಾದ ಹಣವಿದೆಯೇ? ಸಿಬ್ಬಂದಿ ಇದೆಯೇ? ದಕ್ಷತೆ ಇದೆಯೇ? ಇದ್ದರೆ, ಆ ಪ್ರಕಾರ ಕೆಲಸವನ್ನು ಪ್ರಾರಂಭಮಾಡಿ, ಕ್ಲಿಯರೆನ್ಸ್ ಕೊಡುತ್ತೇವೆ ಎಂದು ಅವರು ಹೇಳುತ್ತಾರೆ. ನೀರಿನ ಹಂಚಿಕೆಯ ವಿಷಯದಲ್ಲಿ ಅರ್ಬಿಟ್ರೇಷನ್‌ಗೆ ಕೇಳಿ ಎಂದರೆ ಆ ರೀತಿ ಕೇಳುವುದಕ್ಕೆ ತಯಾರಿಲ್ಲ. ಶರಾವತಿಯಲ್ಲಿ ನಡೆದ ವಿಚಾರಗಳಿಂದ ಮುಖ ಉಳಿಸಿಕೊಳ್ಳಬೇಕಾಗಿತ್ತು; ಅದಕ್ಕೋಸ್ಕರ ಕೇಂದ್ರದಿಂದ ರಾಯರು ಬಂದಾಗ, ಅವರನ್ನು ಶರಾವತಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ಅವರಿಂದ ಒಂದು ಸರ್ಟಿಫಿಕೇಟನ್ನು ಪಡೆದುಕೊಂಡಿರಿ. ಆದರೆ, ಕೃಷ್ಣಾ ಗೋದಾವರಿ ನೀರಿನ ಬಗ್ಗೆ ಯಾಗಲೀ ನೀರಾವರಿ ಯೋಜನೆಗಳ ಬಗ್ಗೆ ಯಾಗಲೀ ಮತನಾಡಿ ನಿಮ್ಮ ಬೇಡಿಕೆಯನ್ನು ಅವರ ಮುಂದೆ ಇಟ್ಟು ಅವರನ್ನು ಒಪ್ಪಿಸುವುದಕ್ಕೆ ಸಾಧ್ಯವಾಗಲಿಲ್ಲ. ಇಂಥ ರೀತಿ – ನೀತಿಯನ್ನು ಥಾವು ಅನುಸರಿಸಿಕೊಂಡು ಹೋದರೆ ಎಂಥ ದೊಡ್ಡ ಅಪರಾಧವನ್ನು ತಾವು ರಾಜ್ಯಕ್ಕೆ ಮಾಡುತ್ತಿದ್ದೀರಿ, ಮುಂದೆ ಎಂದಾದರೂ ಅದನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವೇ? ಎನ್ನುವುದನ್ನು ಸರ್ಕಾರ ತುಂಬ ಗಂಭೀರವಾದ ರೀತಿಯಲ್ಲಿ ವಿಚಾರಮಾಡಬೇಕು. ಇದು ಸಣ್ಣ ವಿಷಯವಲ್ಲ ಶಾಶ್ವತವಾಗಿ ಎಷ್ಟೋ ತಲೆಮಾರುಗಳಿಗೆ ಬರತಕ್ಕ ಪ್ರಶ್ನೆ. ಆದುದರಿಂದ ನದಿನೀರಿನ ಹಂಚಿಕೆಯ ವಿಷಯದಲ್ಲಿ ಕೇಂದ್ರದವರ ಜೊತೆಯಲ್ಲಿ ತಾವು ಕುಳಿತುಕೊಂಡು, ಸಂಬಂಧಪಟ್ಟ ಬೇರೆ ರಾಜ್ಯಗಳವರ ಜೊತೆಯಲ್ಲಿ ಥಾವು ಕುಳಿತುಕೊಂಡು, ಸಂಬಂಧಪಟ್ಟ ಬೇರೆ ರಾಜ್ಯಗಳವರ ಜೊತೆಯಲ್ಲಿ ಕುಳಿತು, ತಮ್ಮ ಹಿಸ್ಸೆಗೆ ಎಷ್ಟು ನೀರು ಬರಬೇಕೋ ಅದನ್ನು ತೀರ್ಮಾನಮಾಡದೆ ಹೋದರೆ ಬಹಳ ದೊಡ್ಡ ಅನಾಹುತವನ್ನು ಈ ರಾಜ್ಯಕ್ಕೆ ಮಾಡುತ್ತಿದ್ದೀರಿ ಎಂದು ನಾನು ಮತ್ತೊಮ್ಮೆ ಬಹಳ ವಿಷಾದದಿಂದ ಹೇಳಬೇಕಾಗುತ್ತದೆ.

ಆಂಧ್ರದ ನೀರಾವರಿ ಮತ್ತು ವಿದ್ಯುಚ್ಚಕ್ತಿ ಮಂತ್ರಿಗಳು ಒಂದು ಮಾತನ್ನು ಹೇಳಿದ್ದಾರೆ: ಮೈಸೂರು ರಾಜ್ಯದಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ಗುಬ್ಬಲಘಟ್ಟದಲ್ಲಿ ಒಂದು ಕೆರೆಯನ್ನು ಕಟ್ಟಿದರೆ ಅದರಿಂದ ಮಡಕಸಿರಾಕ್ಕೆ ನೀರು ಬರುವುದಿಲ್ಲ ಎಂದು. ಮಡಕಸಿರಾ ಕನ್ನಡ ರಾಜ್ಯಕ್ಕೇ ಸೇರಬೇಕಾಗಿತ್ತು. ಈ ಕೆರೆ ಕಟ್ಟುವುದಕ್ಕೆ ಆಂಧ್ರದ ಮಂತ್ರಿಗಳು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ನದೀ ಪಾತ್ರದಲ್ಲಿ ಬಾವಿ ತೋಡುವುದಕ್ಕೆ ಅಣೆಕಟ್ಟನ್ನು ಕಟ್ಟುವುದಕ್ಕೆ, ಪ್ರತಿಯೊಂದಕ್ಕೂ ಪ್ರತಿಭಟನೆಯನ್ನು ಸಲ್ಲಿಸುತ್ತಾರೆ. ಹೀಗಿರುವಾಗ ನಮ್ಮ ರಾಜ್ಯ ಸರ್ಕಾರದವರು ಸುಮ್ಮನೆ ಕೊಡುವುದರಲ್ಲಿ ಅರ್ಥವಿಲ್ಲ. ಶ್ರೀ ವೀರೇಂದ್ರ ಪಾಟೀಲರು ಆಗಾಗ ತಮ್ಮ ಭಾಷಣದಲ್ಲಿ ನಾವು ಪ್ರತಿಭಟನೆಯನ್ನು ಸೂಚಿಸುತ್ತೇವೆ, ನಮಗೆ ೧೯೫೧ ಒಪ್ಪಂದ ಒಪ್ಪಂದವೇ ಅಲ್ಲ. ನಮಗೆ ೧೯೬೩ರಲ್ಲಿ ಕೊಟ್ಟ ನೀರು ಸಾಲದು ಎಂದು ಹೇಳಿದ್ದೇವೆ. ಎಂದು ಹೇಳುತ್ತಿದ್ದಾರೆ. ಇದು ಬಹಳ ದೊಡ್ಡ ಸಮಸ್ಯೆ. ಜನರು ಏನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ. ಬಿಜಾಪುರದಲ್ಲಿ ನೋಡಿದರೆ, ಅಲ್ಲಿಯ ಜನರು ಎಷ್ಟು ಕಳವಳಕ್ಕೀಡಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಮಂತ್ರಿಗಳಾದ ತಾವು ಅಲ್ಲಿಗೆ ಹೋಗಿ, ಭಾಷಣ ಮಾಡುವಾಗಿ ಮೂಗಿಗೆ ತುಪ್ಪ ಹೆಚ್ಚುವ ಹಾಗೆ ಮಾತನಾಡುತ್ತೀರಿ. ಮಲಪ್ರಭಾ, ಲೋಯರ್ ಭೀಮಾ ಮುಂತಾದ ಅನೇಕ ಯೋಜನೆಗಳನ್ನು ಕಾರ್ಯಗತ ಮಾಡುತ್ತೇವೆ ಎಂದು ಹೇಳುತ್ತೀರಿ. ಆದರೆ ವಾಸ್ತವವಾಗಿ ಏನು ಮಾಡುತ್ತಿದ್ದೀರೆಂದು ನೋಡಿದರೆ, ನಮಗೆ ತುಂಬಾ ಕಳವಳವಾಗುತ್ತದೆ.

ಇನ್ನು ವಿದ್ಯುಚ್ಛಕ್ತಿಯ ವಿಷಯದಲ್ಲಿ ಹೇಳುವುದಾದರೆ ಶರಾವತಿಯಲ್ಲಿ ಅನೇಕ ಲೋಪ ದೋಷಗಳಿವೆ. ಕೋಟ್ಯಾಂತರ ರೂಪಾಯಿಗಳಷ್ಟು ಸಾರ್ವಜನಿಕ ಹಣ ಅಲ್ಲಿ ವ್ಯರ್ಥವಾಗಿದೆ, ದುರುಪಯೋಗವಾಗಿದೆ ಎಂದು ಸ್ಪಷ್ಟವಾಗಿ ಈ ಸಭೆಯಲ್ಲಿ ಹೇಳಿದ್ದೇನೆ. ಕೂಡಲೇ ವಿಚಾರ ಮಾಡುತ್ತೇವೆಂದೂ, ಅದರ ಬಗ್ಗೆ ಒಂದು ಶ್ವೇತಪತ್ರವನ್ನು ಪ್ರಕಟಣೆ ಮಾಡುತ್ತೇವೆಂದೂ ಹೇಳಿದರು. ಅದನ್ನು ಈವರೆಗೂ ಕೊಡುವುದಕ್ಕೆ ಸರಕಾರಕ್ಕೆ ಸಾಧ್ಯವಾಗಿಲ್ಲ. ಇದುವರೆಗೆ ಅಲ್ಲಿ ನಡೆದಿರುವ ಕೆಲಸದಲ್ಲಿ ಅನೇಕ ಲೋಪ ದೋಷಗಳಿವೆ; ಇನ್ನೂ ಆಗುತ್ತಿವೆ. ತಲಕಳಲೆ ಮತ್ತು ಮಳಲಿ ಜಲಾಶಯಗಳನ್ನು ಮಂತ್ರಿಗಳು ಉದ್ಘಾಟನೆ ಮಾಡಿದರು. ಏಕೆ ಮಾಡಿದರು, ಯಾವ ದೃಷ್ಟಿಯಿಂದ ಮಾಡಿದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಈ ಹೊತ್ತು ಚೀಫ್ ಇಂಜಿನಿಯರು ನಿವೃತ್ತರಾಗಬೇಕೆಂದಿದೆ. ಇನ್ನೊಬ್ಬರು ನಿವೃತ್ತರಾದರು. ಇವರು ಯಾವ ಕಂಟ್ರಾಕ್ಟ ಮೇಲೆ ಉಸ್ತುವಾರಿ ಮಾಡಬೇಕಾಗಿತ್ತೋ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ಅನೇಕ ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ವಿಶೇಷ ಸಿಬ್ಬಂದಿಯನ್ನು ನೇಮಕಮಾಡಿ ಅಲ್ಲಿ ಸ್ವಲ್ಪ ಸಿಮೆಂಟು, ಇಲ್ಲ ಸ್ವಲ್ಪ ಕಬ್ಬಿಣ ಲಾರಿಗಳಲ್ಲಿ ಸಾಗಿಹೋಗುತ್ತಿದ್ದುದನ್ನು ಹಿಡಿದು ಆ ಮೇಲೆ ಯಾವುದೋ ಬರುವುದು ತಡವಾಯಿತು, ಅದಕ್ಕಗಿ ಸರಿಮಾಡಿಕೊಂಡೆವು ಎಂದು ಶಹಭಾಸ್‌ಗಿರಿ ಬಂದಿದೆ ಎಂದು ಹೇಳಿದರು. ಈ ವ್ಯವಹಾರದಲ್ಲಿ ಎಲ್ಲವೂ ಸರಿಯಗಿ ನಡೆದಿದೆ ಎಂದು ಯಾರು ಹೇಳುವಂತಿಲ್ಲ. ಆದುದರಿಂದ ಅಲ್ಲಿ ಲೋಪ ದೋಷಗಳೇನು ನಡೆದಿವೆಯೋ ಅದನ್ನು ಇನ್ನು ಮುಂದಾದರೂ ನಿವಾರಿಸಿ ಸರಿಯಾಗಿ ಕೆಲಸ ನಡೆಸಬೇಕು. ಸರಕಾರ ತನ್ನ ಮಾತನ್ನು ಉಳಿಸಿಕೊಳ್ಳಲಿ. ಪ್ರಾಮಾಣಿಕವಾಗಿ ಕೆಲಸ ನಡೆಸಿಕೊಂಡು ಹೋಗಲು ವ್ಯವಸ್ಥೆ ಮಾಡುತ್ತಾರೆಂದು ಆಶಿಸುತ್ತೇನೆ.

ಸ್ವಾಮಿ, ಸಮಾಜದವಾದ ಘೋಷಣೆಯನ್ನು ಮಾಡಿರುವ ಕಾಂಗ್ರೆಸ್ ಸರ್ಕಾರಗಳು ಪ್ರತಿಕ್ಷಣದಲ್ಲೂ ಈಗಲೂ ಕೂಡ ದೇಶದಲ್ಲಿ ಶೋಷಿತ ವರ್ಗಕ್ಕೆ ಎಲ್ಲಾ ರೀತಿಯ ಅಭಯಗಳನ್ನು ಕೊಡುತ್ತಾ ಬರುತ್ತಾ ಇದ್ದಾರೆ. ಚೇಂಬರ್ ಆಫ್ ಕಾಮರ್ಸ ಫೆಡರೇಷನ್ನಿನ ಸಮಾರಂಭಕ್ಕೆ ಹೋಗಿ ಕೇಂದ್ರದ ಮಂತ್ರಿಗಳು, ಅಲ್ಲಿನ ಶ್ರೀಮಾನ್ ಭರತ್‌ರಾಮ್ ಮತ್ತು ಶ್ರೀಮಾನ್ ಗೋಯಂಕ ಅವರಿಗೆ ಸಮಾಜವಾದದ ಆರ್ಥಿಕ ವ್ಯವಸ್ಥೆಯನ್ನು ಯಾವರೀತಿ ರೂಢಿಸಿಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಅವರಿಗೆ ಅಂತರಂಗವಾಗಿ ಮತ್ತು ಬಹಿರಂಗವಾಗಿ ಆಶ್ವಾಸನೆಗಳನ್ನು ಕೊಡುತ್ತಿದ್ದಾರೆ. ಅವರ ಭಾರೀ ಉದ್ಯಮಗಳಿಗೆ ರಕ್ಷಣೆಯನ್ನೂ ಸಹ ಕೊಡುತ್ತಿದ್ದಾರೆ.