೧೯೫೫ರಲ್ಲಿ ನಾನು ಉದ್ಯೋಗದಲ್ಲಿದ್ದು, ಬೆಂಗಳೂರಿನ ವಿ.ಎಚ್.ಡಿ. ಗೃಹವಿಜ್ಞಾನ ಕಾಲೇಜಿಗೆ ಡೆಪ್ಯೂಟೇಶನ್ ಮೇಲೆ ಬಂದಿದ್ದೆ. ಆಗ ಗೋಪಾಲಗೌಡರು ಶಾಸಕರಾಗಿದ್ದರು. ಶಾಸನ ಸಭೆಯಲ್ಲಿನ ಇವರ ಭಾಷಣ, ಚಳವಳಿಗಳ ವಿಷಯವನ್ನು ಪತ್ರಿಕೆಗಳ ಮೂಲಕ ತಿಳಿದುಕೊಂಡಿದ್ದೆ. ನಾನು ಹುಬ್ಬಳ್ಳಿಯಲ್ಲಿದ್ದಾಗಲೂ ‘ಪ್ರಪಂಚ’ ಪತ್ರಿಕೆಯಲ್ಲಿ ಇವರ ವಿಷಯ ಬರುತ್ತಿತ್ತು. ಈ ರೀತಿ ಅವರ ಪರಿಚಯ ನನಗಾಗಿತ್ತು.

ನಮ್ಮ ತಂದೆ ಡಿ.ಎಲ್. ಪಾಟೀಲ್‌ರವರು ವಕೀಲರಾಗಿದ್ದರು. ಹುಬ್ಬಳ್ಳಿ ತಾಲ್ಲೂಕಿನ ನಲವಡಿ ನಮ್ಮೂರು. ನಮ್ಮ ತಂದೆಗೆ ಕಡಿದಾಳು ಮಂಜಪ್ಪನವರ ಪರಿಚಯವಿತ್ತು. ಹೀಗಾಗಿ ಕಡಿದಾಳರೇ ನಮ್ಮ ತಂದೆಯವರ ಬಳಿ “ಗೋಪಾಲಗೌಡ ತುಂಬಾ ಬುದ್ದಿವಂತ, ಆಸ್ತಿ ಇಲ್ಲದವರು. ಎಂ.ಎಲ್.ಎ. ಆಗಿದ್ದಾರೆ…’’ ಎಂದು ನಮ್ಮ ಮದುವೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರ. ಇವರ ರಾಜಕೀಯ ಜೀವನದಲ್ಲಿನ ಧೈರ್ಯ, ಪ್ರಾಮಾಣಿಕತೆ, ವೈಯಕ್ತಿಕ ಬದುಕಿನ ಸರಳತೆ – ಇವುಗಳನ್ನು ಕೇಳಿ ತಿಳಿದಿದ್ದ ನನಗೆ ಇವರ ಜೀವನ ಸಂಗಾತಿಯಾಗಲು ಆಸೆ ಇತ್ತು.

೧೯೫೬ರಲ್ಲೇ ನಮ್ಮ ಮದುವೆಗೆ ಪ್ರಯತ್ನಗಳು ನಡೆದಿದ್ದವು. ೧೯೫೭ರ ಚುನಾವಣೆಯಲ್ಲಿ ಇವರು ಬದರಿನಾರಾಯಣರ ವಿರುದ್ಧ ಸೋತರು. ಮತ್ತೆ ೧೯೬೨ರಲ್ಲಿ ಚುನಾವಣೆಯಲ್ಲಿ ಗೆದ್ದರು. ಹೀಗೆ ಅವರ ರಾಜಕೀಯ ಜೀವನದ ಏರಿಳಿತಗಳ ನಡುವೆ ನಮ್ಮ ಮದುವೆ ೧೯೬೪ ಮಾರ್ಚ್ ಎರಡರಂದು ಧಾರವಾಡದ ಟ್ಯಾಗೂರ್ ಹಾಲ್‌ನಲ್ಲಿ ನಡೆಯಿತು.

ಇವರ ಜೀವನ ಶೈಲಿ ಎಷ್ಟುಸರಳವಾಗಿತ್ತು ಅಂದರೆ, ನಮ್ಮ ಮುದವೆಯ ಆಹ್ವಾನ ಪತ್ರಿಕೆಯನ್ನೂ ಕೂಡ ಇವರು ಅಚ್ಚು ಹಾಕಿಸಿರಲಿಲ್ಲವಂತೆ! ಮದುವೆ ಮುಗಿದ ನಂತರ ನಾವು ತೀರ್ಥಹಳ್ಳಿಗೆ ಹೋದೆವು. ತೀರ್ಥಹಳ್ಳಿ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿದ್ದ ಇವರ ಅಭಿಮಾನಿಗಲು, ನಮ್ಮನ್ನು ಆಹ್ವಾನಿಸಿ, ಸತ್ಕರಿಸುತ್ತಿದ್ದ ರೀತಿಯನ್ನು ನೋಡಿದೆ. ಅಲ್ಲಿನ ಜನ ಇವರ ಬಗ್ಗೆ ಇಟ್ಟಿದ್ದ ಪ್ರೀತಿ, ಗೌರವಗಳನ್ನು ಕಣ್ಣಾರೆ ಕಂಡು ನಾನು ವಿಸ್ಮಯಪಟ್ಟೆ; ನನ್ನ ಅಭಿಮಾನ ಇನ್ನೂ ಹೆಚ್ಚಾಯಿತು.

ತಮ್ಮ ತಾಯಿಯ ಬಗ್ಗೆ ಇವರಿಗೆ ಅಪಾರ ಪ್ರೀತಿ. ಎಲ್ಲಿದ್ದರೂ ತಾಯಿಯನ್ನು ನೋಡಲು ಊರಿಗೆ ಹೋಗುತ್ತಿದ್ದರು. ನಾನೂ ಕೂಡ ರಜೆಯಲ್ಲಿ ಶಾಂತವೇರಿಗೆ ಹೋಗಿ ಇದ್ದು ಬರುತ್ತಿದ್ದೆ. ತೀರ್ಥಹಳ್ಳಿ ಮತ್ತು ಸಾಗರದ ಬಗ್ಗೆಯೂ ಇವರು ಇಷ್ಟೇ ಪ್ರೀತಿಯನ್ನು ಇಟ್ಟುಕೊಂಡಿದ್ದರು.

ಇವರು ರಾಜ್ಯದ ಬಹುದೊಡ್ಡ ರಾಜಕಾರಣಿಯಾಗಿದ್ದರೂ, ಹಣ, ಆಸ್ತಿ ಮಾಡದಿದ್ದರ ಬಗ್ಗೆ ನನಗೇನೂ ಅಸಮಾಧಾನವಿಲ್ಲ. ಏಕೆಂದರೆ ಅವರ ಸ್ವಭಾವ ನನಗೆ ತಿಳಿದಿತ್ತು. ನಾವು ಮದುವೆಯಾದ ಮೊದಲ ಮೂರು ವರ್ಷದವರೆಗೂ ಶಾಸಕರ ಭವನದಲ್ಲೇ ನಮ್ಮ ವಾಸ. ಮನೆ ಕೂಡ ಇರಲಿಲ್ಲ. ಮಗಳು ಇಳಾಗೀತ ಹುಟ್ಟಿದ ಆರು ತಿಂಗಳ ನಂತರ ಬೇರೆ ಮನೆಮಾಡಿಕೊಂಡೆವು. ೧೯೬೮ರಲ್ಲಿ ಮಗ ರಾಮಮನೋಹರ ಹುಟ್ಟಿದ.

ನಮ್ಮ ದಾಂಪತ್ಯ ಜೀವನ ನಡೆದದ್ದು ಎಂಟು ವರ್ಷ ಮಾತ್ರ. ಅದರಲ್ಲೂ ಅವರ ಕೊನೆಯ ಆರು ತಿಂಗಳಂತೂ ಅವರು ಮಾತಾಡುವುದನ್ನೇ ಕಳೆದುಕೊಂಡಿದ್ದರು. ಎಲ್ಲರಿಗೂ ಗೊತ್ತಿರುವ ಹಾಗೆ ಇವರು ಸಾರ್ವಜನಿಕ ವ್ಯಕ್ತಿ. ಇವರ ಜೀವನ ಇದ್ದದ್ದು ತೆರೆದ ಪುಸ್ತಕದಂತೆ. ಯಾವುದೂ ಮುಚ್ಚುಮರೆ ಇಲ್ಲದ ಜೀವನ, ಹಾಗೂ ಹೆಚ್ಚು ಪ್ರವಾಸದಲ್ಲಿರುತ್ತಿದ್ದರು. ಕುಟುಂಬದ ಆಗು ಹೋಗುಗಳನ್ನೆಲ್ಲಾ ತೆಲೆಗೆ ಹಾಕಿಕೊಂಡವರಲ್ಲ. ಹೀಗಾಗಿ ಮಕ್ಕಳ ಆರೈಕೆ, ಕುಟುಂಬ, ನನ್ನ ವೃತ್ತಿ ಇವೆಲ್ಲವನ್ನೂ ನಿಭಾಯಿಸುವ ಹೊತ್ತಿಗೆ ಎಂಟು ವರ್ಷ ಕಳೆದುಹೋಗಿತ್ತು. ಇದರಿಂದಾಗಿ ನನಗೂ ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಿದ್ದು. ಇದರಿಂದಾಗಿ ಅವರ ಕೆಲಸ ಕಾರ್ಯಗಳಿಗೆ ಅನೇಕ ಸಾರಿ ತೊಂದರೆ ಆಗುತ್ತಿತ್ತು. ಆದರೂ ಅದನ್ನು ಎಂದು ವ್ಯಕ್ತಪಡಿಸಿದವರಲ್ಲ. ಅವರು ಹೆಚ್ಚು ಕಾಲ ಮನೆಯಲ್ಲಿರುತ್ತಿರಲಿಲ್ಲ. ಇದೇ ನನಗೆ ಬೇಸರ ತರುತ್ತಿತ್ತು. ಆದರೆ; ಆಗ ಅದು ಅನಿವಾರ್ಯವೂ ಆಗಿತ್ತು. ಕ್ರಮೇಣ ಅದು ನಮಗೆ ಒಗ್ಗಿಹೋಯಿತು. ಆಮೇಲೆ ಅವರು ಮನೆಯಲ್ಲಿ ನಮ್ಮೊಂದಿಗೆ ಹೆಚ್ಚುದಿನ ಇದ್ದರೆ ನನಗೇ ಆಶ್ಚರ್ಯವಾಗುತ್ತಿತ್ತು.

ಇವರ ಹತ್ತಿರ ಯಾವಾಗಲೂ ಹಣ ಇರುತ್ತಿರಲಿಲ್ಲ ಎನ್ನುವುದು ಜಗತ್ತಿಗೇ ಗೊತ್ತಿರುವ ವಿಚಾರ! ಅನೇಕ ಸಾರಿ ಇವರನ್ನು ನೋಡಲು ಬರುತ್ತಿದ್ದವರಿಗೆ, ಅವರ ಊರುಗಳಿಗೆ ಮರಳಿ ಕಳಿಸಲು ನನ್ನ ಹತ್ತಿರ ಹಣ ಕೊಡಿಸುತ್ತಿದ್ದರು. ಇಂಥ ಪ್ರಸಂಗಗಳು ಹತ್ತಾರು ಇವೆ. ನನಗೆ ತಿಳಿದ ಮಟ್ಟಿಗೆ ಇವರು ಹಣ, ಆಸ್ತಿ ಬಗ್ಗೆ ಎಂದೂ ಯೋಚಿಸದವರು. ಅದನ್ನೆಲ್ಲಾ ಈಗ ನೆನೆದರೆ ಅವರ ಬಗ್ಗೆ ಹೆಮ್ಮೆ, ಅಭಿಮಾನ ಉಕ್ಕುತ್ತಿದೆ.

೧೯೬೯ರಲ್ಲಿ ಇವರ ಆರೋಗ್ಯ ಕೆಟ್ಟಿತ್ತು. ಆಗ ನಾವು ವಾಸವಿದ್ದ ಸಣ್ಣಮನೆ ಇವರ ಆರೋಗ್ಯಕ್ಕೆ ಹೊಂದುತ್ತಿರಲಿಲ್ಲ. ಆಗ ಶ್ರೀ ನಾಗಪ್ಪನವರು ತಮ್ಮದೊಂದು ಮನೆಯನ್ನು ನಮಗಾಗಿ ಬಿಟ್ಟುಕೊಟ್ಟರು. ನಾಗಪ್ಪನವರು ನಮ್ಮಿಂದ ಒಂದು ದಿನವೂ ಬಾಡಿಗೆ ಕೇಳಲಿಲ್ಲ. ಆಗ ಇವರು, “ನಾನೇನೋ ನಿಮ್ಮ ಮನೆಯಲ್ಲಿ ಇರ‍್ತೇನೆ. ಆದರೆ; ನನ್ನಿಂದ ನಿಮಗೆ ಯಾವ ಉಪಯೋಗುವೂ ಆಗೋಲ್ಲ!’’ ಅಂತ ಹೇಳಿದರು. ಶಾಸಕರಾಗಿದ್ದೂ ಮನೆಯಿಲ್ಲದ ಇವರಿಗೆ ಪ್ರಾಮಾಣಿಕತೆಯೇ ಆಸ್ತಿಯಾಗಿತ್ತು.

ಈಗ ನಾವು ವಾಸವಾಗಿರುವ ಮನೆಯ ನಿವೇಶನವನ್ನು ೧೯೬೯ರಲ್ಲಿ ವಿರೇಂದ್ರ ಪಾಟೀಲರು ಬಹಳ ಒತ್ತಾಯಮಾಡಿ ಇವರಿಗೆ ಮಂಜೂರು ಮಾಡಿದ್ದರು. ಇವರಿಗೆ ಅದೂ ಕೂಡ ಇಷ್ಟವಿರಲಿಲ್ಲ. ನಿವೇಶನವನ್ನು ಸರ್ಕಾರಕ್ಕೆ ವಾಪಸ್ ಮಾಡ್ತೀನಿ ಅಂತ ಮುಂದಾಗುತ್ತಿದ್ದರು. ನಮ್ಮ ಮಕ್ಕಳಿಗೋಸ್ಕರವಾದರೂ ಈ ನಿವೇಶನ ಇರಲಿ ಅಂತ ನಾನೇ ಒತ್ತಾಯ ಮಾಡಿ ಒಪ್ಪಿಸಿದೆ. ಕೊನೆಯವರೆಗೂ ಅವರು ಅಲ್ಲಿ ಮನೆ ಕಟ್ಟಲು ಪ್ರಯತ್ನ ಮಾಡಲೇ ಇಲ್ಲ.

ಅವರ ಓದು ತಿಳುವಳಿಕೆ ತುಂಬಾ ವಿಸ್ತಾರವಾದದ್ದು. ಬಿಡುವಿದ್ದಾಗ ಪುಸ್ತಕ ಓದುತ್ತಾ ಕುಳಿತುಬಿಡುತ್ತಿದ್ದರು. ಅಚ್ಚಕನ್ನಡದಲ್ಲಿ ಅವರು ನನಗೆ ಬರೆಯುತ್ತಿದ್ದ ಪತ್ರಗಳೂ, ಅವರ ಪ್ರೀತಿಯ ದ್ಯೋತಕಗಳಾಗಿ ಈಗಲೂ ನನ್ನಲ್ಲಿವೆ. ಅವರು ಬರೆದ ಪತ್ರಗಳಲ್ಲಿ ತೀರ ಖಾಸಗಿಯಾದದ್ದು ಏನೂ ಇರುತ್ತಿರಲಿಲ್ಲ. ಅವರ ವ್ಯಕ್ತಿತ್ವದಂತೆ ಅವರ ಮಾತು, ಬರಹ ಎಲ್ಲವೂ ಪಾರದರ್ಶಕ. ಇವರಂತೂ ಅಪ್ಪಟ ಕನ್ನಡ ಪ್ರೇಮಿ. ಅವರು ನನಗೆ ಅವರ ಗೆಲೆಯರಿಗೆ ಬರೆದ ಎಲ್ಲ ಪತ್ರಗಳೂ ಅವರ ಕನ್ನಡ ಪ್ರೀತಿಯನ್ನು ಹೇಳುತ್ತವೆ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವ ಮೊದಲೇ ಗೌಡರು ತಮ್ಮ ಮೊಹರು (ಸೀಲ್)ಗಳಲ್ಲಿ ಕರ್ನಾಟಕ ಎಂದು ಬಳಸುತ್ತಿದ್ದರು.

ಇಪ್ಪತ್ತೈದು ವರುಷಗಳ ನಂತರ ಈಗ ನೆನೆದರೆ, ಈವೊತ್ತಿನ ರಾಜಕಾರಣಿಗಳೊಂದಿಗೆ ಇವರನ್ನು ಹೋಲಿಸಲಾಗುವುದಿಲ್ಲ; ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಪರಿಶುದ್ಧವಾಗಿದ್ದರು. ಇಳಾಗೀತಾ ಮತ್ತು ರಾಮಮನೋಹರ ಈಗ ಬೆಳೆದು ದೊಡ್ಡವರಾಗಿದ್ದಾರೆ; ಅವರ ತಂದೆ ಬಗ್ಗೆ ಜನ ಹೇಳುವ ಹತ್ತಾರ ಕತೆಗಳನ್ನು ಕೇಳಿ “ನಮಗೆ ತಂದೆಯವರನ್ನು ನೋಡಿದ್ದರ ನೆನಪಿಲ್ಲ, ಆದರೆ, ಈಗಲೂ ಅವರ ಪ್ರಾಮಾಣಿಕತೆ, ಸರಳತೆ, ಅವರ ರಾಜಕಾರಣದ ಬಗ್ಗೆ ಬಲ್ಲವರು ಹೇಳುವುದನ್ನು ಕೇಳಿದರೆ, ಅವರ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತೆ’’ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಇಪ್ಪತ್ತೈದು ವರುಷಗಳ ನಂತರವೂ ಜನ ಅವರನ್ನು ನೆಪಿಸಿಕೊಳ್ಳುವುದನ್ನು, ಅಭಿಮಾನಪಡುವುದನ್ನು ನೋಡಿದರೆ ಅವರು ಎಷ್ಟು ದೊಡ್ಡವರಾಗಿದ್ದರು, ಎಂದು ನನ್ನ ಮಕ್ಕಳು ತಮ್ಮ ತಂದೆಯನ್ನ ನೆನೆದು ಅಚ್ಚರಿಪಡುತ್ತಾರೆ.