ಬ್ಯಾಂಕ್ ರಾಷ್ಟ್ರೀಕರಣ

ಮಾರ್ಚ್ ೧೯೬೪

ಇವೊತ್ತು  ಬ್ಯಾಂಕುಗಳ ರಾಷ್ಟ್ರೀಕರಣ ಆಗಬೇಕು ಎನ್ನುವ ಬೇಡಿಕೆ ಇದೆ. ನಾವು ಒತ್ತಾಯಪೂರ್ವಕವಾಗಿ ಎಲ್ಲಾ ಖಾಸಗೀ ಬ್ಯಾಂಕುಗಳ ವ್ಯವಹಾರವನ್ನೂ ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಮಾಡುತ್ತಿದ್ದೇವೆ. ಆದರೆ, ಕೇಂದ್ರದವರು ಇನ್ನೂ ಡೋಲಾಯಮಾನವಾಗಿದ್ದಾರೆ. ರಾಜ್ಯ ಸರ್ಕಾರದವರಂತೂ ಕೆಲವು ಖಾಸಗೀ ಬ್ಯಾಂಕುಗಳೊಡನೆ ವ್ಯವಹರಿಸುವಾಗ ಆ ಬ್ಯಾಂಕುಗಳ ಮರೆಹೊಕ್ಕಂತೆ ಕಾಣುತ್ತದೆ. ಇವೊತ್ತು. ರಾಜ್ಯಸರ್ಕಾರದವರು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಕೇಂದ್ರದ ಒತ್ತಾಯವನ್ನು ತರಬೇಕು. ಶ್ರೀಮಾನ್ ನಿಜಲಿಂಗಪ್ಪನವರು ಭುವನೇಶ್ವರದಿಂಧ ಬರುವ ದಾರಿಯಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಬೇಕಾಗಿಲ್ಲ ಎಂದು ಹೇಳಿದಾಗ ನಾನು ಪತ್ರಕೆಯಲ್ಲಿ ಓದಿದ ನೆನಪು ಉಂಟು. ಭೂವನೇಶ್ವರದ ತೀರ್ಮಾನಕ್ಕೆ ತದ್ವಿರುದ್ಧವಾಗಿ ಅವರು ಹೇಳಿಕೆಯನ್ನು ನೀಡಬಹುದೇ? ಸಮಾಜದಲ್ಲಿ ಖಾಸಗಿಯವರು ಬಂಡವಾಳವನ್ನು ದೇಶದಲ್ಲಿ ಬೆಳೆಸಿದ್ದಾರೆ. ಆ ಬೆಳೆಯನ್ನು ದರಿದ್ರರಿಗೆ ಹಂಚುವುದರ ಮೂಲಕ ಸಮಾಜವಾದ ಬರತಕ್ಕದ್ದಲ್ಲ. ಅಥವಾ ಮುಂದುವರಿದಿರತಕ್ಕ ಅಮೇರಿಕಾ ಮತ್ತು ರಷ್ಯಾ ಮುಂತಾದ ರಾಷ್ಟ್ರಗಳಿಂದ ಸಾಮಾನುಗಳನ್ನಾಗಲೀ ಯಂತ್ರೋಪಕರಣಗಳನ್ನಾಗಲೀ, ಆಹಾರವಸ್ತಗಳನ್ನಾಗಲೀ ಅಥವ ನೇರವಾಗಿ ಹಣವನ್ನಾಗಲೀ ತಂದು ನಮ್ಮ ದೇಶದಲ್ಲಿರತಕ್ಕೆ ೪೫ ಕೋಟಿ ದರಿದ್ರರಿಗೆ ಹಂಚಿ ಊಟದ ವ್ಯವಸ್ಥೆ ಮಾಡುವುದರಿಂದ ಈ ದೇಶವನ್ನು ಸಮಾಜವಾದದ ರಾಷ್ಟ್ರವನ್ನಾಗಿ ಮಾಡಿ ಆರ್ಥಿಕಾಭಿವೃದ್ಧಿಯನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಚೆನ್ನಾಗಿ ಮನಗಾಣಬೇಕಾಗಿದೆ. ಇವೊತ್ತು ಖಾಸಗಿ ಉದ್ಯಮಗಳನ್ನು ರಾಷ್ಟ್ರೀಕರಣ ಮಾಡತಕ್ಕ ಕಾರ್ಯವನ್ನು ಕೈಗೊಳ್ಳುವುದಕ್ಕೆ ಕೇಂದ್ರದವರು ಮುಂದೆ ಬರುತ್ತಾ ಇಲ್ಲ. ಈಗ ಮೂಲತಃ ಮೂರು ಯೋಜನೆಗಳನ್ನು ಮಾಡಿದ್ದರೆ. ಅದರಲ್ಲಿ ಈ ವರ್ಷದ ಮಾರ್ಚಿ ತಿಂಗಳಿತ ಆಖೈರಿನಲ್ಲಿ ಮೂರನೇ ಪಂಚವಾರ್ಷಿಕ ಯೋಜನೆಯ ಮೂರನೆಯ ವರ್ಷವನ್ನು ಮುಕ್ತಾಯಮಾಡುವ ಕಾಲದಲ್ಲಿ ಅದನ್ನು ಸಮೀಕ್ಷೆಮಾಡಿ ಈ ಯೋಜನೆಯ ಫಲ ದೊರೆತಿದೆಯೇ ಎನ್ನುವುದನ್ನು ಅವರು ಹೇಳುವಾಗ ಕಾಂಗ್ರೆಸ್ನವರ ಆಳ್ವಿಕೆಯಲ್ಲಿ ಪ್ರಗತಿ ಕುಂಠಿತವಾಗಿದೆ ಎನ್ನುವುದನ್ನು ನಾವು ನೋಡುತ್ತೇವೆ. ಇದಕ್ಕೆ ಕಾರಣವೇನೆಂದರೆ ನಾಗಪುರದಲ್ಲಿ ಕಾಂಗ್ರೆಸ್‌ನವರು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ನಾವು ಸಹಕಾರ ಪದ್ಧತಿಯಲ್ಲಿ ಬೇಸಾಯವನ್ನು ಆಚರಣೆಗೆ ತರುತ್ತೇವೆ ಎಂದು ಹೇಳಿದ್ದು ಮತ್ತು ಆಹಾರಧ್ಯಾನಗಳ ವ್ಯಾಪಾರವನ್ನು ಸರ್ಕಾರದವರು ವಹಿಸಿಕೊಂಡು ಸ್ಟೇಟ್ ಟ್ರೇಡಿಂಗ್ ಮಾಡುತ್ತೇವೆಂದು ಹೇಳಿದ್ದು, ಆಗ ಸ್ಟೇಟ್ ಟ್ರೇಡಿಂಗ್ ಮಾಡುವುದಕ್ಕೆ  ಹೋದ ಶ್ರೀ ಅಜಿತ್ ಪ್ರಸಾದ್ ಜೈನ್ ಅವರು ತಮ್ಮ ಆಹಾರ ಖಾತೆಯನ್ನು ಕಳೆದುಕೊಂಡರು. ಕೊನೆಗೆ ಅವರು ದೇಶಭ್ರಷ್ಟರಾಗಿ ತುಮಕೂರಿಗೆ ಬಂದು ಅಲ್ಲಿ ಚುನಾವಣೆಗೆ ನಿಂತು ಪಾರ್ಲಿಮೆಂಟಿಗೆ ಹೋಗುವ ಸ್ಥಿತಿ ಬಂತು. ಆಗ ಆಹಾರಧಾನ್ಯವನ್ನು  ಕೊಂಡು ವ್ಯಾಪಾರ ಮಾಡುವುದಕ್ಕೆ ಸರ್ಕಾರದವರ ಹತ್ತಿರ ದುಡ್ಡು ಇರಲಿಲ್ಲ. ಹಣವನ್ನು ಕೊಡತಕ್ಕ ಅಧಿಕಾರ ರಿಜರ್ವ್‌ ಬ್ಯಾಂಕಿನವರ ಕೈಯಲ್ಲಿತ್ತು. ಆದರೆ, ರಿಜರ್ವ್‌ ಬ್ಯಾಂಕಿನವರು ಆಗ ಸರ್ಕಾರದವರಿಗೆ ಆಹಾರ ಧಾನ್ಯವನ್ನು ಕೊಂಡು ಸ್ಟೇಟ್ ಟ್ರೇಡಿಂಗ್ ವ್ಯಾಪಾರವನ್ನು ಮಾಡಲಿಲ್ಲ. ಅದನ್ನು ಹಾಗಯೇ ಕೈಬಿಟ್ಟರು. ಅಮೇಲೆ ಕೊಡೊಕ್ಕಲು ಪದ್ಧತಿಯ ವ್ಯವಸಾಯವನ್ನು ಜಾರಿಗೆ ತರುತ್ತೇವೆ ಎಂದು ಹೇಳಿ ನಾಗಪುರದ ಆಧಿವೇಶನದಲ್ಲಿ ತೀರ್ಮಾನವನ್ನು ತೆಗೆದುಕೊಂಡಿದ್ದರು. ಅದನ್ನು ಜಾರಿಗೆ ತರಲಿಲ್ಲ. ಆ ಕೆಲಸವೂ ಹಾಗೆಯೇ ಕಾಗದದ ಮೇಲೆ ಉಳಿದಿದೆ. ಆಳುವ ಪಕ್ಷ ಇದರ ಕಡೆ ಗಮನವನ್ನು ಕೊಟ್ಟಿಲ್ಲ.

ಆಮೇಲೆ ಭೂಸುಧಾರಣೆಯನ್ನು ಜಾರಿಗೆ ತರದ ವಿಳಂಬ ಮಾಡಿದ್ದಾರೆ. ಭೂಸುಧಾರಣೆಯನ್ನು ಜಾರಿಗೆ ತಂದು ಉಳುಮೆ ಮಾಡತಕ್ಕ, ರೈತನಿಗೆ ಭೂಮಿಯನ್ನು ಹಂಚಿ ಹಿಡುವಳಿದಾರರಿಗೆ ಹಣಸಹಾಯವನ್ನು ಒದಗಿಸಿ, ನೀರಿನ ಸೌಕರ್ಯವನ್ನು ಒದಗಿಸಿಕೊಟ್ಟು ಬೀಜ ಗೊಬ್ಬರ ಮುಂತಾದ ವ್ಯವಸಾಯ ಸಾಮಗ್ರಿಗಳನ್ನು ಒದಗಿಸಿಕೊಟ್ಟರೆ, ರೈತ ಹೆಚ್ಚಿಗೆ ಬೆಳೆದರೆ ದೇಶದಲ್ಲಿ ಹೆಚ್ಚು ಆಹಾರೋತ್ಪಾದನೆ ಆದೀತು. ಆದರೆ ಇವೊತ್ತು ದುಡಿಯುವ ರೈತರಿಗೆ ಗೇಣಿಮಾಡತಕ್ಕ ರೈತರಿಗೆ ಬೇಕಾದ ಸೌಕರ್ಯವನ್ನು ಒದಗಿಸುವ ಕಡೆ ಸರ್ಕಾರ ಲಕ್ಷ್ಯವನ್ನು ಕೊಟ್ಟಿಲ್ಲ. ಇವೊತ್ತಿನ ದಿವಸ ಭೂಮಾಲೀಕರು, ಗೇಣಿದಾರರನ್ನು ಅಧಿಕ ಸಂಖ್ಯೆಯಲ್ಲಿ ಭೂಮಿಯಿಂದ ಹೊರಗೆ ಹಾಕುತ್ತಿದ್ದಾರೆ. ಅವರನ್ನು ದೇಶಾದ್ಯಂತ ಹೊರದೂಡುತ್ತಿದ್ದಾರೆ. ಅವರಿಗೆ ಹೊಟ್ಟೆಗೆ ಇಲ್ಲ, ಬಟ್ಟೆಗೆ ಇಲ್ಲ. ಎಲ್ಲಾ ಕಡೆಗಳಲ್ಲೂ ಆ ಒಂದು ಚಿತ್ರವನ್ನು ನಾವು ನೋಡಬಹುದು. ಹಳ್ಳಿ ಹಳ್ಳಿಗಳಲ್ಲಿ ಜನ ಗುಳೆಕಟ್ಟಿಕೊಂಡು ಕುಟುಂಬ ಬೇಟೆಗೆ ಹೊರಡುತ್ತಿದ್ದಾರೆ. ಈಗ ದೇಶದಲ್ಲಿ ಸಣ್ಣ ನೀರಾವರಿ ಕಾಮಗಾರಿಗಳು ದೊಡ್ಡ ನೀರಾವರಿ ಕಾಮಗಾರಿಗಳು ಇವುಗಳಿಗೋಸ್ಕರವಾಗಿ ಲಕ್ಷಗಟ್ಟಲೆ ಕೋಟಿಗಟ್ಟಲೇ ಹಣವನ್ನು ಖರ್ಚುಮಾಡುತ್ತಿದ್ದರೂ ಕೂಡ ವಾಸ್ತವವಾಗಿ ೧೯೬೨ – ೬೩ನೇ ಸಾಲಿನಲ್ಲಿ ದೇಶಾದ್ಯಂತ ಎಲ್ಲಾ ಬೆಳೆಗಳೂ ಬತ್ತಿ ಹೋಗಿವೆ ಎನ್ನುವುದು ಸರ್ಕಾರದವರು ಕೊಟ್ಟಿರತಕ್ಕ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ. ಇಂಥ ಒಂದು ದುಷ್ಕಾಲದಲ್ಲಿ ಕೂಡ ೪೫ ಕೋಟಿ ಜನಸಂಖ್ಯೆ ಇರತಕ್ಕ ದೇಶದಲ್ಲಿ ೩೦ ಕೋಟಿ ಎಕರೆ ಜಮೀನಿನಲ್ಲಿ ಬೆಳೆಯನ್ನು ಬೆಳೆಯತಕ್ಕ ಅವಕಾಶವಿದ್ದರೂ ಕೂಡ ೪೫ ಕೋಟಿ ಜನಗಳಿಗೆ ಎರಡು ಹೊತ್ತು ಊಟವನ್ನು ಕೊಡುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೧೫ ವರ್ಷಗಳಾಗಿದ್ದರೂ ಕೂಡ ಈ ಒಂದು ಕೆಲಸವನ್ನು ಮಾಡತಕ್ಕ ಶಕ್ತಿಯನ್ನು ನಮ್ಮ ಸರ್ಕಾರ ಪಡೆದಿಲ್ಲ ಎಂದು ಹೇಳಿದರೆ ಇದಕ್ಕಿಂತ ಅವಮಾನಕರವಾದ ಪರಸ್ಥಿತಿ ಜಗತ್ತಿನಲ್ಲಿ ಬೇರೊಂದಿಲ್ಲ. ನಮ್ಮಲ್ಲಿ ದುಡಿಯತಕ್ಕ ರೈತರಿದ್ದಾರೆ. ಒಳ್ಳೆಯ ಫಸಲು ಕೊಡತಕ್ಕ ಭೂಮಿ ಇದೆ. ಎಲ್ಲಿ ನೋಡಿದರೆ ಅಲ್ಲಿ ನೀರು ಬರತಕ್ಕ ನೀರಿನ ಆಶ್ರಯಗಳಿವೆ. ಇವುಗಳನ್ನು ನಾವು ಕರಗತ ಮಾಡಿ ಅನ್ನ ಬೆಳೆಯುವುದಕ್ಕೆ ಸಾಧ್ಯವಾಗದೆ, ಯಾರೋ ಅಮೇರಿಕದಿಂದ ಕಣಜವನ್ನು ತಂದು ತಮ್ಮಲ್ಲಿ ಕಟ್ಟುತ್ತಾರೆ; ಇನ್ನೊಬ್ಬರು ಮತ್ತೊಂದು ಸಹಾಯವನ್ನು ಮಾಡುತ್ತಾರೆ ಎಂದು ಮೂಲತಃ ಆಗಬೇಕಾಗದ ಭೂಸುಧಾರಣೆಯನ್ನು ಜಾರಿಗೆ ತರದೆ, ಹೆಚ್ಚು ಬೆಳೆ ಬೆಳೆಯಿರಿ ಎಂದು ನಾವು ಚಳವಳಿಗಳನ್ನು ಮಾಡಿದರೆ, ಕ್ಯಾಂಪೇನ್ ಮಾಡಿದರೆ, ಪ್ರಚಾರ ಮಾಡಿದರೆ, ಅದರಿಂದ ಹೆಚ್ಚು ಬೆಳೆ ಬೆಳೆಯುತ್ತೇವೆಯೆ ಎಂದು ತಾವು ಪುನರ್ವಿಮರ್ಶೆ ಮಾಡಬೇಕು.

ಸಮಾಜವಾದವು ಖಾಸಗಿ ದೊಡ್ಡ ಬ್ಯಾಂಕುಗಳಿಂದ, ದೊಡ್ಡ ಉದ್ಯಮಗಳಿಂದ ಕೋಟ್ಯಾಧೀಶರಿಂದ, ಬೆಂಗಳೂರು, ಬೊಂಬಾಯಿ, ಕಲ್ಕತ್ತ ಇಂಥ ಕಡೆ ಇರುವ ಷೇರು ಮಾರುಕಟ್ಟೆಗಳಿಂದ ಬರುವುದಿಲ್ಲ ಎನ್ನುವುದನ್ನು ಬಹಳ ಸ್ಪಷ್ಟವಾಗಿ ನಾವು ತಿಳಿಯಬೇಕು. ಸಮಾಜವಾದ ಬರುವುದಾದರೆ ದಷ್ಟ ಪುಷ್ಟವಾಗಿರುತಕ್ಕ ದುಡಿಮೆ ಮಾಡತಕ್ಕ ರೈತಸಮೂಹ ಹಾಗೂ ಯಾವುದಾದರೂ ಕಾರ್ಖಾನೆಗಳಲ್ಲಿ ಕಷ್ಟಪಟ್ಟು ದುಡಿಯತಕ್ಕ ಕಾರ್ಮಿಕರ ಬೆಂಬಲದಿಂದ ಮಾತ್ರ ಸಾಧ್ಯ. ಬಿರ್ಲಾಗಳು, ಚೆಟ್ಟಿಯಾರರು ಇಂಥವರೆಲ್ಲ ನಮಗೆ ಬೆಂಬಲವನ್ನು ಕೊಟ್ಟರೆ ಅವರ ಬೆಂಬಲದಿಂದ ದೇಶದಲ್ಲಿ ಸಮಾಜವಾದವನ್ನು ತರುವುದಕ್ಕೆ ಸಾಧ್ಯವಾಗುತ್ತದೆ. ಅವರನ್ನು ಎದುರು ಹಾಕಿಕೊಳ್ಳಬಾರದು, ಅವರ ಮರ್ಜಿಯನ್ನು ಹಿಡಿಯಬೇಕು, ಅವರು ಏನು ಕೇಳಿದರೆ ಅದಕ್ಕೆ ಮೊದಲು ಜಾಗ ಕೊಡಬೇಕು, ಅವರಿಗೆ ರಕ್ಷಣೆಯನ್ನು ಕೊಡಬೇಕು, ಅವರು ನಮ್ಮ ದೇಶದಲ್ಲಿ ಸಮಾಜವಾದವನ್ನು ತರುತ್ತಾರೆ, ಸಮಾನತೆಯನ್ನು ತರುತ್ತಾರೆ, ಸುಭಿಕ್ಷವನ್ನು ತರುತ್ತಾರೆ ಎಂದೂ ಮಿಶ್ರವಾಗಿರತಕ್ಕ ಪದ್ಧತಿಯನ್ನು ನಡೆಸಿಕೊಂಡು ಹೋಗುತ್ತಾರೆ ಎನ್ನುವುದು ಶೋಚನಿಯ ಸ್ಥಿತಿ. ಇದು ಆಳತಕ್ಕ ಪಕ್ಷ ತಾನಾಗಿ ತಾನು ಮೋಸಪಡಿಸಿಕೊಳ್ಳತಕ್ಕ ಸ್ಥಿತಿ.

ಸರ್ಕಾರದವರೇ ಒಪ್ಪುತ್ತಾರೆ, ಯೋಜನೆಯ ಅವಧಿಯಲ್ಲಿ ಸ್ವಾತಂತ್ರ್ಯ ಬಂದನಂತರ ಹಣದ ಉಬ್ಬರವಾಗುವುದಕ್ಕೆ ಹೊಸ ನೋಟುಗಳನ್ನು ಚಲಾವಣೆಗೆ ತಂದಿರುವುದೂ ಕಾರಣ ಎಂದು ಅದಕ್ಕನುಸಾರವಾಗಿ ಅಂತರಾಷ್ಟ್ರೀಯ ಬೆಲೆಗಳ ಮಟ್ಟದಲ್ಲಿ ನಾವು ಬಂಗಾರವನ್ನು ಇಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಒಪ್ಪುತ್ತಾರೆ. ಹೊಸ ನೋಟುಗಳ ಚಲಾವಣೆ ಮತ್ತು ಸಾಲಗಳು ಅದಕ್ಕೆ ಕೊಡತಕ್ಕ ಬಡ್ಡಿ ಹಾಗೂ ಇವತ್ತು ಯೋಜನೆಗಳ ಹೆಸರಿನಲ್ಲಿ ಮಾಡಿರತಕ್ಕ ಖರ್ಚು ಇವುಗಳಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಒಂದೇ ಸಮನೆ ಏರುತ್ತ ಹೋಗುತ್ತಿವೆ.

ಬೆಲೆಗಳ ಸ್ಥಿರೀಕರಣ

ಮಾರ್ಚ್ ೧೯೬೪

ಬೆಲೆಗಳನ್ನು ಸ್ಥೀರಿಕರಣ ಮಾಡುವ ವಿಷಯದಲ್ಲಿ ನಾವು ಹಣ ಸಹಾಯ ಮಾಡಿ ಬತ್ತವನ್ನು ಕೊಳ್ಳುವದಕ್ಕೆ ವ್ಯವಸ್ಥೆ ಮಾಡಿದೆವು ಎಂದು ಹೇಳಿದರು. ಈ ವರ್ಷದ ಅಖ್ಯೆರಿನಲ್ಲಿ ಆ ವ್ಯವಸ್ಥೆಗೆ ಹತ್ತು ಲಕ್ಷ ರೂಪಾಯಿ ಮನಬಂದಂತೆ ಹಂಚುತ್ತಾರೆ ಅಷ್ಟೆ. ಈ ವರ್ಷ ಇನ್ನೂ ಸೊಸೈಟಿಗಳಿಗೆ ಹಣ ಮುಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಫೆಬ್ರವರಿ ಅಖೈರಿನಲ್ಲಿ ನಾನು ಇಲ್ಲಿಗೆ ಬರುವವರೆಗೂ ಇನ್ನೂ ಮುಟ್ಟಿರಲಿಲ್ಲ. ಆ ವೇಳೆಗೆ ವ್ಯಾಪಾರವಾಗುತ್ತಿತ್ತು. ಗೋಡೌನ್ ಇರುತ್ತದೆ. ಅದಕ್ಕೆ ಬೇರೆ ತರಹ ಏರ್ಪಾಡು ಮಾಡಿ ಅಲ್ಲಿ ಬತ್ತವನ್ನಿಟ್ಟು ದುಡ್ಡು ತೆಗೆದುಕೊಂಡು ಹೋಗುತ್ತಾರೆ. ಸುಗ್ಗಿಯ ಕಾಲದಲ್ಲಿ ಖಾಸಗಿ ಜನರಿಂದ ಬೆಲೆಗಳು ಬಿದ್ದು ಹೋದಾಗ ಏನು ಲೂಟಿ ನಡೆಯುತ್ತದೆ, ಆ ಲೂಟಿಗೆ ನೀವು ಹೆಚ್ಚಿನ ಸಹಾಯವನ್ನು ಮಾಡಿದಂತಾಯಿತು; ಲೂಟಿ ಮಾಡುವವರಿಗೆ ಬೆಲೆಗಳನ್ನು ಸ್ಥಿರೀಕರಿಸಬೇಕು ಎನ್ನುವ ತತ್ವವನ್ನು ಒಪ್ಪಿಕೊಳ್ಳುವ ಸರ್ಕಾರ ಇವತ್ತು ಮೂಲ ಅಗತ್ಯ ವಸ್ತುಗಳ ವ್ಯಾಪಾರವನ್ನು ಕೈಕೊಳ್ಳಬೇಕಾದದ್ದು ಬಹಳ ಅವಶ್ಯಕ. ಹಾಗೂ ಯಾರ ದುಡಿಮೆ ಅಥವಾ ಸಂಬಳ ಒಂದು ನಿಯಮ ಒಂದು ಲಿಮಿಟ್ ಆಗಿ ಇರುತ್ತದೆಯೋ ಅವರು ಏರುತ್ತಿರುವ ಬೆಲೆಗಳಲ್ಲಿ ವರ್ಷಕ್ಕೆ ಎರಡು ಸಲ ಏರತಕ್ಕ ಬೆಲೆಗಳ ಜೊತೆಯಲ್ಲಿ ಸೆಣಸಾಟವಾಡಿ ತಮ್ಮ ಜೀವನವನ್ನು  ನಡೆಸುವುದಕ್ಕಾಗುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಆದುದರಿಂದ ತುಟ್ಟಿಭತ್ಯವನ್ನು ಕೊಡುವಾಗ ಬೆಲೆಗಳೂ ಹಿಡಿತದಲ್ಲಿ ಇರಬೇಕು ಅಥವ ಏರುತ್ತಿರುವ ಬೆಲೆಗಳಿಗೆ ಮತ್ತು ಹೆಚ್ಚು ಮಾಡುವ ತುಟ್ಟಿಭತ್ಯಕ್ಕೆ ನಿಗದಿಯಾದ, ನೇರವಾದ ಸಂಬಂಧವಿರಬೇಕು. ಇಲ್ಲದೆ ಹೋದರೆ ಇದು ಕಣ್ಣ ಒರೆಸತಕ್ಕ ಪರಿಹಾರವಾಗುತ್ತದೆ. ಅದರಿಂದ ಯಾರೂ ಜೀವನವನ್ನು ನಡೆಸಿಕೊಂಡು ಹೋಗುವುದಿಲ್ಲ. ಬೆಲೆಗಳನ್ನು ಸ್ಥಿರೀಕರಿಸಬೇಕು ಎನ್ನುವ ವಿಷಯದಲ್ಲಿ ಇದು ಕೇವಲ ರಾಜ್ಯದ ಒಂದು ಕೆಲಸವಾಗುವುದಿಲ್ಲ. ಅದಕ್ಕೆ ಕೇಂದ್ರದವರ ಸಹಾಯ ಬೇಕು ಎಂದು ಹೇಳುತ್ತೇನೆ. ಅನೇಕ ಮೂಲವಸ್ತುಗಳ ವ್ಯಾಪಾರವನ್ನು ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಕೇಂದ್ರ ತೆಗೆದು ಕೊಳ್ಳಬೇಕು, ರಾಜ್ಯ ಸರ್ಕಾರಗಳಿಗೆ ಆದೇಶ ಕೊಡಬೇಕು, ಅದರಂತೆ ನಡೆಸಿಕೊಂಡು ಹೋಗಬೇಕು.

ಸಾಮಾನ್ಯವಾಗಿ ಒಂದು ವಿಷಯದ ಬಗ್ಗೆ ಅಭಿನಂದನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ವೃದ್ಧಾಪ್ಯ ವೇತನದ ತತ್ವವನ್ನು ತತ್ವಶಃ ತಾವು ಅಂಗೀಕರಿಸಿದ್ದೀರಿ. ಆದರೆ ೭೦ ವರ್ಷದವರು ಅದರಲ್ಲಿಯೂ ನಿರ್ಗತಿಕರದ ಮುದುಕರಿಗೆ ಕೊಡುತ್ತೇವೆ ಎಂದು. ೭೦ ವರ್ಷದ ಮಿತಿಯನ್ನು ಗೊತ್ತುಮಾಡುವುದಾದರೆ ಸಾಮಾನ್ಯವಾಗಿ ಎಲ್ಲರಿಗೂ ಕೊಡಬಹುದು. ೭೦ ವರ್ಷದವರು ಬಹಳ ಕಡಿಮೆ ಜನ ಸಿಕ್ಕುತ್ತಾರೆ. ವೃದ್ಧಾಪ್ಯ ವೇತನ ಕೊಡುವುದನ್ನು ನಾವು ತತ್ವಶಃ ಒಪ್ಪಿದರೂ ಕೂಡ ವಯಸ್ಸಿನ ಮಿತಿಯನ್ನು ಐದು ವರ್ಷ ಕಡಿಮೆ ಮಾಡಿ ೬೫ ಇಳಿಸಿದರೆ ಮತ್ತು ೧೫ ರೂಪಾಯಿಗಳನ್ನು ಕೊಡುವ ಕಡೆ ೭೦ ರೂಪಾಯಿಗಳನ್ನು ಕೊಟ್ಟರೆ ಏನೋ ಒಂದು ಒಳ್ಳೆಯ ಕೆಲಸವನ್ನು ಮಾಡಿದಂತಾಗುತ್ತದೆ ಎಂದು ನಾನು ತಿಳಿದು ಕೊಂಡಿದ್ದೇನೆ.

ಗೋಲಿಬಾರ್

೧೨ ಮಾರ್ಚ್ ೧೯೬೪

ಮಾನ್ಯ ಅಧ್ಯಕ್ಷರೇ ನಿಡೋಣಿಯಲ್ಲಿ ನಡೆದ ಘಟನೆಯನ್ನು ಬಿಟ್ಟರೆ ಮತ್ತೆ ಯಾವ ಘಟನೆಯೂ ನಡೆದಿಲ್ಲ ಎಂದು ವರಿದಿ ಮಾಡಿದ್ದಾರೆ. ಈಚೆಗೆ ಇಡಪನೂರಿನಲ್ಲಿ ಸಾಮೂಹಿಕ ಬೆಂಕಿಯ ಅನಾಹುತಕ್ಕೆ ಒಳಗಾಗಿ ಜನಗಳು ಸತ್ತರು. ಈ ವಿಷಯದಲ್ಲಿ ರಾಯಚೂರು ಜಿಲ್ಲೆಯ ಪೋಲೀಸಿನವರು ಏನು ಮಾಡುತ್ತಿದ್ದರು? ಎಷ್ಟು ದಿವಸಗಳಿಂದ ವೈಷಮ್ಯ ಇತ್ತು? ಅವರು ಅಷ್ಟೊಂದು ಪ್ರಕೋಪಕ್ಕೆ ಹೋಗುವವರೆಗೂ ಬಿಡುವಷ್ಟು ಪೋಲೀಸಿನವರು ಅಜಾಗರೂಕತೆಯಿಂದ ಇದ್ದರೆ ಈ ಪ್ರಶ್ನೆಗೆ ರಾಜ್ಯದ ಪೋಲೀಸು ಇಲಾಖೆ ಇದರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಮತ್ತು ಒಳ್ಳೆಯ ರೀತಿಯಲ್ಲಿ ಕಾನೂನು ಪರಿಪಾಲನೆ ಮಾಡುತ್ತಿಲ್ಲ ಎಂದು ಹೇಳುವುದಕ್ಕೆ ಇದು ಒಂದು ದೊಡ್ಡ ದೃಷ್ಟಾಂತವಾಗಿದೆ.

ಇನ್ನು ೪–೧–೧೯೬೪ರಲ್ಲಿ ಬೆಂಗಳೂರಿನಲ್ಲಿ ಒಂದು ಗೋಲೀಬಾರ್ ಘಟನೆ ನಡೆಯಿತು. ಈ ಸಂದರ್ಭದಲ್ಲಿ ನಮಗೆ ಗೊತ್ತಿರುವ ಹಾಗೆ ಸರ್ಕಾರದ ರೋಡ್ ಟ್ರಾನ್‌ಸ್ಪೋರ್ಟ್ ಡ್ರೈವರ್ ಅನ್ನು ಒಬ್ಬ ಸಬ್‌ಇನ್‌ಸ್ಪೆಕ್ಟರು ಅನುಚಿತವಾದ ರೀತಿಯಲ್ಲಿ ವರ್ತಿಸಿದ ಮತ್ತು ಅವನನ್ನು ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ಹೊಡೆದ ಎಂದು ವರದಿಗಳು ಬಂದಿವೆ. ಇಂಥಾ ಒಂದು ಸಂದರ್ಭದಲ್ಲಿ ಇಡೀ ಬೆಂಗಳೂರಿನ ಎಲ್ಲಾ ಮೋಟಾರುಗಳು ನಿಂತವು ನಂತರದಲ್ಲಿ ಮಾರ್ಕೆಟ್ಟಿನ ಹತ್ತಿರ ದೊಡ್ಡ ಗುಂಪು ಸೇರಿತು. ಗಲಾಟೆ ಆಯಿತು. ಆಗ ತಮ್ಮ ರಕ್ಷಣೆಗಾಗಿ ಕಾನೂನು ಪರಿಪಾಲನೆಗಾಗಿ ಗೋಲೀಬಾರು ಮಾಡಿದರು. ಅದರಿಂದ ಇಬ್ಬರು ನಿರಪರಾಧಿಗಳು ಆ ಸಂದರ್ಭದಲ್ಲಿ ಸತ್ತು ಹೋದರು. ಈ ವಿಷಯದಲ್ಲಿ ಸರ್ಕಾರದವರು ಯಾವುದೇ ಒಂದು ನ್ಯಾಯಾಂಗ ವಿಚಾರಣೆ ಮಾಡುವುದಕ್ಕೆ ಒಪ್ಪಿಲ್ಲ. ಕೊನೆಗೆ ಏನು ಕಾರಣ ಇದೆ ಎಂದರೆ ಮೂಲತಃ ಪೊಲೀಸಿನವರ ವರ್ತನೆಯೇ ಇದಕ್ಕೆ ಕಾರಣ. ಆದರೆ ಪೊಲೀಸಿನವರು ಅದಕ್ಕೆ ಸಮಂಜಸವಾದ ಉತ್ತರವನ್ನು ಕೊಡಲಿಲ್ಲ. ಸಾಮಾನ್ಯವಾಗಿ ಆ ರೀತಿ ಗೋಲೀಬಾರ್ ಮಾಡದಿದ್ದರೆ ಬಹಳ ಅಪಾಯವಾಗುತ್ತಿತ್ತು. ಲಕ್ಷಾಂತರ ರೂಪಾಯಿಗಳೂ ಸಾರ್ವಜನಿಕರು ಹಾಗೂ ಸರ್ಕಾರದ ಆಸ್ತಿಗಳಿಗೆ ನಷ್ಟವಾಗುವ ಸಂಭವ ಇತ್ತು; ಮತ್ತು ಪ್ರಾಣಹಾನಿಯೂ ಆಗುತ್ತಿತ್ತು ಎಂದು ಸರ್ಕಾರದವರು ಸಂಜಾಯಿಷಿ ಹೇಳಬಹುದು. ಏಕಾಏಕಿ ಅಂತಹ ಒಂದು ಘಟನೆ ನಡೆಯುವುದಕ್ಕೆ ಅವಕಾಶವನ್ನು ಕೊಟ್ಟು ಗೋಲೀಬಾರ್ ಮಾಡಿ ಇಬ್ಬರನ್ನು ಕೊಂದಿರತಕ್ಕದ್ದು ಖಂಡನೀಯ, ಅದು ಪೋಲೀಸ್ ಇಲಾಖೆಯ ದಕ್ಷತೆ ಎಂದು ಹೇಳುವುದುಕ್ಕಾಗುವುದಿಲ್ಲ, ಅದು ಪೋಲೀಸ್ ಇಲಾಖೆಯ ಒಂದು ಸ್ವೇಚ್ಛಾವರ್ತನೆ ಎಂದು ಬಹಳ ವಿಷಾದದಿಂದ ಹೇಳಬೇಕಾಗುತ್ತದೆ. ನಾನು ಒಂದು ವಿಷಯದಲ್ಲಿ ಪೋಲೀಸಿನವರ ನಡೆತೆಯನ್ನು ಪ್ರಶಂಸೆ ಮಾಡಬೇಕಾಗಿದೆ. ಹೀಗೆ ಕೆಲವು ತಿಂಗಳ ಹಿಂದೆ ವಿದ್ಯಾರ್ಥಿಗಳು ಈ ರಾಜ್ಯದಲ್ಲಿ ಒಂದು ತಿಂಗಳ ಕಾಲ ಮುಷ್ಕ ರವನ್ನು ಆರಂಭಮಾಡಿ ನಡೆಸಿದರೂ ಆ ಸಂದರ್ಭದಲ್ಲಿ ಪೋಲೀಸಿನವರು ವಿಶೇಷವಾದ ಎಚ್ಚರಿಕೆಯಿಂದ ವರ್ತಿಸಿದರು. ಮತ್ತು ಯಾವುದೇ ಒಂದು ಹಿಂಸಾಚಾರಣೆಗಾಗಲೀ, ಪ್ರಚೋದನೆಗಾಗಲೀ ಅವಕಾಸ ಕೊಡದಂತೆ ನಡೆದುಕೊಂಡುರು ಎಂದು ನಾನು ಮೆಚ್ಚಿಗೆಯನ್ನು ವ್ಯಕ್ತಪಡಿಸುವುದಕ್ಕೆ ಇಚ್ಚೆಪಡುತ್ತೇನೆ.

ದಲಿತರು

೧೨ ಮಾರ್ಚ್ ೧೯೬೪

ಹರಿಜನರು ಕರಟಿಗೆಯಲಿ ಕಾಫಿಯನ್ನು ಕುಡಿಯುತ್ತಾರೆ ಅಥವಾ ತಮಗಾಗಿ ಇಟ್ಟಿರುವ ಲೋಟದಲ್ಲಿ ಕಾಫಿಯನ್ನು ಕುಡಿದು ಅದನ್ನು ತಾವೇ ತೊಳೆದು ಇಟ್ಟಕೊಂಡು ಹೋಗುವುದು ಪದ್ಧತಿಯಾಗಿದೆ ನಾನು ಖಾಸಗಿ ಸ್ಥಳಗಳ ವಿಚಾರದಲ್ಲಿ ಹೇಳುತ್ತಿಲ್ಲ. ಅನೇಕ ಮನೆಗಳಲ್ಲಿ ಅವರು ಒಳಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಅವರು ಕುಡಿಯುವ ಲೋಟದಲ್ಲಿ ನೀರು ಕೊಡುವುದಿಲ್ಲ; ಅವರನ್ನು ಮುಟ್ಟಿಸಿಕೊಳ್ಳುವುದಿಲ್ಲ. ನಮ್ಮಲ್ಲಿ ಬಹಳ ಜನ ಐದು ಸಾವಿರ ವರ್ಷಗಳ ಹಿಂದೆ ಯಾವ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದರೋ ಅದೇ ರೀತಿ – ಅವರ ಗಾಳಿ ಬೀಸಬಾರದು, ಅವರ ನೆರಳು ತಾಗಬಾರದು ಎನ್ನುವ ಪರಸ್ಥಿತಿಯಲ್ಲಿದ್ದಾರೆ. ಅದು ನನಗೆ ಗೊತ್ತು. ಆದರೆ ಸಾರ್ವಜನಿಕ ಸ್ಥಳದಲ್ಲಾದರೂ ಇವರಿಗೆ ಯೋಗ್ಯವಾದ ಗೌರವಾಯುತ ಸ್ಥಾನಮಾನಗಳು ಇವೆಯೇ ಎಂದರೆ ಇಲ್ಲ. ಕೆಲವು ಶಾಲೆಗಳಲ್ಲಿ ಸಹ ಅವರನ್ನು ಇತರ ಜನಗಳಿಂದ ಪ್ರತ್ಯೇಕವಾಗಿ ಕೊಡಿಸುತ್ತಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಆದುದರಿಂದ ಅಸ್ಪೃಶ್ಯತೆಯ ಬಗ್ಗೆ ೪೮ ಕೇಸುಗಳನ್ನು ಹಾಕಿದ್ದಾರೆ ಎಂದರೆ ಅದರಲ್ಲಿ ಏನು ಅರ್ಥವಾಗುತ್ತದೆ? ಪೋಲೀಸು ಇಲಾಖೆಗೆ ಈ ಒಂದು ಕಾನೂನು ಇದೆ ಎನ್ನುವುದರ ಅರಿವಾಗಲೀ ಇದನ್ನು ಅಕ್ಷರಶಃ ಕಾರ್ಯಗತ ಮಾಡಬೇಕು ಎನ್ನುವ ಕಳಕಳಿಯಾಗಲೀ ಇಲ್ಲ ಎನ್ನವುದು ಗೊತ್ತಾಗುತ್ತದೆ. ಯಾವುದಾದರೂ ಇಂಥ ಸಂದರ್ಭವನ್ನು ಅವರ ಗಮನಕ್ಕೆ ತಂದರೆ – ಅವರೂ ಕೂಡ ಸವರ್ಣ ಹಿಂದೂಗಳಂತೆ, ಅವರ ಮನೋಭಾವದಂತೆ ವರ್ತಿಸಿ ಇದಕ್ಕೆಲ್ಲ ಕೇಸು ಹಾಕಬೇಕೋ? ಹೊರಗಡೆ ಕುಳಿತುಕೊಂಡು ಕುಡಿದು ಹೋದರೆ ಅಗುವುದಿಲ್ಲವೋ? ದೊಡ್ಡ ಕೇಸು ಹಾಕುವುದಕ್ಕೆ ಬಂದ – ಎಂದು ಅವನನ್ನು ಕಳಿಸಿಬಿಡುತ್ತಾರೆ. ಈ ಕಾನೂನನ್ನು ಜಾರಿಗೆ ಕೊಡುವುದಕ್ಕೆ ಯಾವ ಪ್ರಯತ್ನವನ್ನೂ ಮಾಡಿಲ್ಲ ಎನ್ನುವುದು ಕಾಣುತ್ತದೆ. ೧೯೬೧ ರಲ್ಲಿ ೮೪, ೧೯೬೨ರಲ್ಲಿ ೫೪, ೧೯೬೩ರಲ್ಲಿ ನವೆಂಬರ್ ತಿಂಗಳವರೆಗೂ ೪೮ ಕೇಸುಗಳನ್ನು ಹಾಕಿದ್ದೇವೆಂದು ಹೇಳಿದ್ದಾರೆ. ಅಸ್ಪೃಶ್ಯತಾ ಕಾನೂನಿನ ಪ್ರಕಾರ ಕೇಸುಗಳನ್ನು ಹಾಕಿದ್ದೇವೆಂದು ಹೇಳಿದ್ದಾರೆ. ಅಸ್ಪೃಶ್ಯತಾ ಇಲಾಖೆಗೆ ಅರಿವಾಗಿಲ್ಲ ಎಂದು ನನಗನ್ನಿಸುತ್ತದೆ.

ಪೋಲೀಸರು

೧೨ ಮಾರ್ಚ್ ೧೯೬೪

ಸುಮರು ೭೫ ಲಕ್ಷ ರೂಪಾಯಿಗಳನ್ನು ಈ ವರ್ಷದಲ್ಲಿ ನಾವು ಮನೆಗಳನ್ನು ಕಟ್ಟಿಸುವುದಕ್ಕಾಗಿ ಕೊಡುತ್ತಿದ್ದೇವೆ. ಈಚೆಗೆ ಎಲ್ಲ ಕಾನ್‌ಸ್ಟೇಬಲ್‌ಗಳಿಗೂ ಮತ್ತು ನೌಕರರಿಗೂ ಮನೆಗಳನ್ನು ಕಟ್ಟಿಸಿಕೊಡುವ ಪ್ರಯತ್ನ ನಡೆದಿದೆ. ಅದು ಸ್ವಾಗತಾರ್ಹವಾದುದು ಮತ್ತು ಅ ದಿಸೆಯಲ್ಲಿ ಇನ್ನೂ ಹೆಚ್ಚಿನ ಕೆಲಸವಾಗಬೇಕು. ಒಂದು ದೃಷ್ಟಿಯಿಂದ ಪೋಲೀಸಿನವರನ್ನು ಕಟುವಾಗಿ ನಾನು ಟೀಕಿಸುತ್ತೇನೆ. ಕಳ್ಳತನಗಳನ್ನು ಪತ್ತೆ ಹಚ್ಚುವಾಗ, ಲಂಚ ರುಷವತ್ತು ಭ್ರಷ್ಟಾಚಾರಗಳನ್ನು ತಡೆಗಟ್ಟುವಾಗ ಇಂಥ ಸಂದರ್ಭಗಳಲ್ಲಿ ಆ ಎಲ್ಲ ಮಾತುಗಳಿಗೂ ಹೊರತಾಗಿರಬೇಕು. ಅಂಥ ಪ್ರಾಮಾಣಿಕ ಜನರಾಗಿರಬೇಕು. ಆದರೆ, ಅಷ್ಟರಮಟ್ಟಿನ ಅದು ಬರಬೇಕಾದರೆ ಮೂಲತಃ ಸಣ್ಣದರ್ಜೆಯ ನೌಕರರೇನಿದ್ದಾರೆ ಅವರ ಸಂಬಳ ಸಾರಿಗೆಗಳನ್ನು ಮತ್ತು ಸೌಲಭ್ಯಗಳನ್ನು ನಾವು ಸರಿಯಾಗಿ ಕೊಡದೆ, ಅವರು ಅನೇಕ ವೇಳೆ ಇಂಥ ಸಣ್ಣ ಸಣ್ಣ ಅನೀತಿಗಳಿಗೆ ಹೋಗಬೇಕಾಗುತ್ತದೆ. ಸಾಮಾಜಿಕ ವಾತಾವರಣದಲ್ಲಿ ನೀತಿಯುತವಾದ ಬಾಳ್ವೆಯನ್ನು ಸಮಾಜದವರೆಲ್ಲರೂ ನಡೆಸಿಕೊಂಡು ಹೋಗಬೇಕು, ಎಲ್ಲಿಯೂ ತಪ್ಪುಗಳಾಗಬಾರದು, ಎಲ್ಲಿಯೂ ಕೆಟ್ಟ ಕೆಲಸಗಳು ನಡೆಯಬಾರದು. ಅದನ್ನೆಲ್ಲ ನಿಲ್ಲಿಸಬೇಕು ಎಂದರೆ ಪೋಲೀಸಿನವರ ಸಹಾಯದಿಂದ ಮಾತ್ರ ಎಂದರೆ ತಪ್ಪಾಗುತ್ತದೆ. ಎಷ್ಟರಮಟ್ಟಿಗೆ ಈ ತಕ್ಸೀರುಗಳನ್ನು ತಡೆಗಟ್ಟುವುದರಲ್ಲಿ ಸಾರ್ವಜನಿಕರ ಸಹಾಯ ದೊರೆಯುತ್ತದೆ ಎನ್ನುವುದು ದೊಡ್ಡ ವಿಷಯ. ಬಹಳ ಸಲ ಒಬ್ಬ ದೊಡ್ಡ ಮನುಷ್ಯ ಏನಾದರೂ ತಪ್ಪು ಮಾಡಿದರೆ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಬೇಕು ಎಂದರೆ ಯಾರೂ ಮುಂದೆ ಬರುವುದಿಲ್ಲ. ಪೋಲೀಸ್ ಇಲಾಖೆಯಲ್ಲಿ ದಕ್ಷತೆ ಇದೆ, ಪ್ರಾಮಾಣಿಕತೆ ಇದೆ. ಅವರು ತಮ್ಮ ಕೆಲಸವನ್ನು ಮನಃಪೂರ್ವಕವಾಗಿ ಒಳ್ಳೆಯ ರೀತಿಯಲ್ಲಿ ನಡೆಸುತ್ತಿದ್ದಾರೆ. ಆದರೆ, ತಮ್ಮ ಕೆಲಸವನ್ನು ನಿರ್ವಹಿಸುವುದರಲ್ಲಿ ಯಾರು ಯಾರಿಗೆ ಅದಕ್ಷತೆ ಇದೆ. ಅದೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಅವರ ಮಧ್ಯ ಪ್ರವೇಶದಿಂದ ಆಯಿತು ಎಂದು ಹೇಳುತ್ತೇನೆ. ನಿನ್ನೆಯ ದಿನ ನಾವು ಕೆಲವು ಉದಾಹರಣೆಗಳನ್ನು ಕೊಟ್ಟೆವು. ಟ್ರಾನ್ಸ್‌ಫರ್ ವಿಷಯದಲ್ಲಿ , ಪ್ರಮೋಷನ್ ವಿಷಯದಲ್ಲಿ ಭ್ರಷ್ಟಾಚಾರಕ್ಕೆ ಒಳಗಾಗಿರುವ ಅಧಿಕಾರಿಗಳಿಗೆ ರಕ್ಷಣೆಕೊಡತಕ್ಕ ವಿಷಯದಲ್ಲಿ ಮಧ್ಯೆ ಪ್ರವೇಶ ಮಾಡುವುದು ಕಾಂಗ್ರೆಸ್ ಸರ್ಕಾರದಲ್ಲಿ ಜನಜನಿತವಾಗಿರುವುದನ್ನು ನಾವು ಇವತ್ತು ನೋಡಬಹುದು. ಅಂಥ ಒಂದು ವರ್ತನೆ ನಮಗೆ ಕಂಡುಬರುತ್ತಿದೆ. ಅದು ಎಲ್ಲಿಯತನಕ ಇರುತ್ತದೆಯೋ ಅಲ್ಲಿಯವರೆಗೂ ಪ್ರಾಮಾಣಿಕತೆಯಿಂದ ಧೈರ್ಯವಾಗಿ ವರ್ತಿಸುವುದಕ್ಕೆ ಸಾಧ್ಯವಿಲ್ಲ. ಈ ವಿಷಯದಲ್ಲಿ ಸರ್ಕಾರದವರು ಕೇವಲ ಪಕ್ಷದ ಹಿತದೃಷ್ಟಿಯಿಂದ ಮಾತ್ರ ಈ ಇಲಾಖೆಯನ್ನು ನೋಡಿದರೆ ಸಾಲದು. ಸಾರ್ವಜನಿಕರ ಹಿತದೃಷ್ಟಿಯಿಂದ, ಸಾರ್ವಜನಿಕ ಕಾನೂನು ಪರಿಪಾಲನೆಯ ದೃಷ್ಟಿಯಿಂದ ನೋಡಬೇಕು. ಈ ಮಾತನ್ನು ಅನೇಕ ಸಲ ಹೇಳಿದ್ದೇನೆ. ಆದರೂ ಆ ದೆಸೆಯಲ್ಲಿ ಬಹಳ ಪ್ರಗತಿಯನ್ನು ನೋಡುವುದಕ್ಕೆ ಸಾಧ್ಯವಾಗಿಲ್ಲ.

ಈಗ ಕಡಿಮೆ ಸಂಬಳ ಬರತಕ್ಕ ಜನರಿಗೆ ಸರ್ಕಾರದವರು ಐದು ರೂಪಾಯಿ ತುಟ್ಟಿ ಭತ್ಯೆಯನ್ನು ಕೊಡಬೇಕೆಂದು ಹೇಳಿದ್ದಾರೆ. ಈ ಕಾನ್‌ಸ್ಟೇಬಲ್‌ಗಳ ಕೆಲಸ ತಮಗೆ ಗೊತ್ತಿದೆ. ಬೆಳಿಗ್ಗೆ ೮ ಗಂಟೆಗೆ ಕಾಲುಪಟ್ಟಿ ಕಟ್ಟಿಕೊಂಡು ಹೊರಟರೆ ರಾತ್ರಿ ೮ ಗಂಟೆಯವರೆಗೂ ಮನೆಯನ್ನು ಸೇರುವುದಕ್ಕಾಗುವುದಿಲ್ಲ. ಅವನು ಪ್ರಾಮಾಣಿಕನಾಗಿರಬೇಕಾದರೆ ಅವನಿಗೆ ಪ್ರತಿನಿತ್ಯ ಆಗುವ ಅಗತ್ಯ ಖರ್ಚನ್ನಾದರೂ ಸರ್ಕಾರ ಕೊಡಬೇಕು. ಯಾರಾದರೂ ಪ್ರಮುಖ ವ್ಯಕ್ತಿಗಳು ಬಂದರೆ ನಿಮ್ಮ ಪೋಲೀಸಿನವರು ಬಹಳ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಪ್ರಶಂಸೆ ಮಾಡಿ ಹೋಗುತ್ತಾರೆ. ಆದರೆ, ಅವರು ಬೆಳಿಗ್ಗೆ ೮ ಗಂಟೆಗೆ ಬರುತ್ತಾರೆಂದು ಪೋಗ್ರಾಂ ಇದ್ದರೆ ರಾತ್ರಿ ೮ ಗಂಟೆಗೆ ಬರುತ್ತಾರೆ. ಅಲ್ಲಿಯವರೆಗೂ ಕಾನ್‌ಸ್ಟೇಬಲ್ ಆದವನು ಮರದ ಅಡಿಯಲ್ಲಿಯೋ ಅಥವಾ ಬಿಸಿಲಿನಲ್ಲಿಯೋ ನಿಂತಿರಬೇಕು. ಈ ತೆರನಾದ ದೃಶ್ಯವನ್ನು ನೋಡುವುದಕ್ಕಾಗುವುದಿಲ್ಲ. ಆದುದರಿಂದ ನಾವು ಅವರ ಬಗ್ಗೆ ಮಾನವೀಯತೆಯ ದೃಷ್ಟಿಯಿಂದ ನೋಡಿ, ಅವರಿಗೂ ಹೆಂಡಿರು ಮಕ್ಕಳು ಇದ್ದಾರೆ, ಅವರಿಗೂ ಕಷ್ಟ ಕಾರ್ಪಣ್ಯಗಳಿವೆ, ಅವರಿಗೂ ಅನುಕೂಲಗಳನ್ನು ಕಲ್ಪಿಸಬೇಕು ಎನ್ನುವ ಕಡೆಗೆ ನಾವು ತೀವ್ರಗಮನ ಕೊಡಬೇಕು ಮತ್ತು ಅವರ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಯೋಗ್ಯ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಅವನ ವರ್ತನೆಯಲ್ಲಿ ಪರಿವರ್ತನೆಯಾಗಬಹುದು; ಜನತಂತ್ರದಲ್ಲಿ ಯಾವ ವರ್ತನೆ ಇರಬೇಕು ಎಂದು ಹೇಳುತ್ತೇವೆಯೋ ಅದನ್ನು ನಿರೀಕ್ಷಿಸಬಹುದು. ಅದಕ್ಕೆ ಸರ್ಕಾರದವರು ಗಮನ ಕೊಡಬೇಕು ಎಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

ನ್ಯಾಯಾಂಗ ವ್ಯವಸ್ಥೆ

೧೨ ಮಾರ್ಚ್ ೧೯೬೪

ಇನ್ನು ಜನಸಾಮಾನ್ಯರಿಗೆ ದೊರೆಯಬೇಕಾದ ನ್ಯಾಯವೇನಿದೆ ಅದು ಅವರಿಗೆ ಸಕಾಲಕ್ಕೆ ನೇರವಾಗಿ ದೊರೆಯುತ್ತಿಲ್ಲ. ಈ ವಿಚಾರದಲ್ಲಿ ಹೆಚ್ಚು ವಿಳಂಬವಾಗುತ್ತಿದೆ. ಜನಸಾಮಾನ್ಯರಿಗೆ ದೊರೆಯಬೇಕಾದ ನ್ಯಾಯ ಹೆಚ್ಚು ವೆಚ್ಚವಿಲ್ಲದೆ ಅವರವರ ಬಾಗಿಲಿಗೇ ಬರುವಂತೆ ಮಾಡುತ್ತೇವೆಂಬ ಮಾತು ಒಂದು ಗಗನಕುಸುಮವಾಗೇ ಉಳಿಯಿತು. ಇದು ಜನರಿಗೆ ಲಭಿಸಲಾರದೆಂಬ ಶಂಕೆ ನನಗೆ ಉಂಟಾಗಿದೆ. ಕೆಲವು ಸಂದರ್ಭಗಳಲ್ಲಿ ಆಸಾಮಿ ತೀರಿಕೊಂಡರೂ ಅವನ ಕೇಸುಗಳು ಕೋರ್ಟಿನಲ್ಲಿನ್ನೂ ತೀರ್ಮಾನವಾಗಿರುವುದಿಲ್ಲ. ಆದರೆ ನಾವು ಹೊರಗಡೆ ಈ ವಿಚಾರಗಳನ್ನೇನದರೂ ಹೇಳಿದರೆ ಅದು ಒಂದು ತಕ್ಸೀರಾಗುತ್ತದೆ. ಜಡ್ಜಿಗಳಿಗೆ ನೀವು ಹೀಗೆ ಕೇಸುಗಳನ್ನು ವಿಚಾರಣೆ  ಮಾಡಿ ಎಂದು ಯರೂ ಹೇಳುವುದಕ್ಕಾಗುವುದಿಲ್ಲ. ಇದೊಂದು ಸ್ವಯಂ ನಿಯಂತ್ರಣ. ಇದು ತನ್ನ ಸ್ವಯಂ ಚಲಿತದಲ್ಲೇ ತನ್ನ ಕರ್ತವ್ಯವನ್ನು ಅರಿತುಕೊಂಡು ಕೆಲಸ ಮಾಡಬೇಕಾಗಿದೆ. ಆದರೆ ಈಗ ಕೇಸುಗಳು ಬೇಗ ತೀರ್ಮಾನವಾಗುವುದಿಲ್ಲ. ಅದರೆ ಈ ಕೋರ್ಟ್ ಬಾಬಿನಲ್ಲೂ ವರ್ಷೇ ವರ್ಷೇ ಟ್ಯಾಕ್ಸ್‌ಗಳು, ಸ್ಟಾಂಪ್ ಡ್ಯೂಟಿಯನ್ನು ಬಡಜನರ ಮೇಲೆ ಹೇರುತ್ತಲೇ ಇದ್ದಾರೆ. ಇದನ್ನೆಲ್ಲಾ ನೋಡಿ ಬಡವವನಾಗಿರತಕ್ಕವನು ನಾಲ್ಕು ಏಟನ್ನು ತಿಂದರೂ ಚಿಂತೆಯಿಲ್ಲ ಎಂದು ಈ ಕೋರ್ಟುಗಳಿಗೆ ಹೋಗಿ ಮನೆ ಮಠಗಳನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ತೆಪ್ಪಗಿದ್ದು ಬಿಡುತ್ತಾರೆ. ಜನರು ತಮ್ಮ ಆಸ್ತಿ, ಮಾನ, ನ್ಯಾಯ, ಧರ್ಮ, ಇವುಗಳ ಸುರಕ್ಷತೆಯ ಬಗ್ಗೆ ಅವರು ನಿರ್ಭಯವಾಗಿರಬೇಕು. ಆದರೆ ಅದಕ್ಕೆ ಇಂದು ಅವಕಾಶಮಾಡಿಲ್ಲ. ನಮ್ಮ ಅಧ್ಯಕ್ಷರು ಕೂಡ ೪೦ ವರ್ಷಗಳಿಗೆ ಮೇಲ್ಪಟ್ಟು ವಕೀಲಿ ಕೆಲಸ ಮಾಡಿದ್ಧಾರೆ. ಅಂಥವರ ಅನುಭವವನ್ನಾದರೂ ಲಾ ಇಲಾಖೆಯವರು ಪಡೆಯಬಹುದು; ಅದನ್ನೂ ಸಹ ಅವರು ಮಾಡುತ್ತಿಲ್ಲ. ಭಾಷೆಯ ವಿಷಯವಾಗಿ ನಾನು ಅನೇಕ ಸಾರಿ ಮಾತನಾಡಿದ್ದೇನೆ. ಜಡ್ಜ್‌ಮೆಂಟನ್ನು ಇಂಗ್ಲೀಷಿನಲ್ಲಿ ಬರೆದು ಜನರನ್ನು ಗಲ್ಲಿಗೆ ಹಾಕುವುದು ಬೇಡ, ಕನ್ನಡದಲ್ಲೇ ಆ ಜಡ್ಜ್‌ಮೆಂಟನ್ನು ಬರೆದು ಆ ಶಿಕ್ಷೆಯನ್ನು ಕೊಡಬಹುದಲ್ಲ? ಕನ್ನಡದಲ್ಲಿ ಹೇಳಿದ್ದನ್ನು ಜಡ್ಜಿ ಇಂಗ್ಲೀಷಿನಲ್ಲಿ ಬರೆದುಕೊಳ್ಳುವಾಗ ಏನು ಬೇಕಾದರೂ ಬರದುಕೊಳ್ಳಬಹುದು. ಕನ್ನಡದಲ್ಲಿ ಒಬ್ಬ ಮನುಷ್ಯ ನನ್ನನ್ನು ದೊಣ್ಣೆಯಿಂದ ಹೊಡೆದೆನೆಂದು ಹೇಳುತ್ತಾನೆ. ಆಗ ಜಡ್ಜಿ ಅದನ್ನು ಹಿ ವಾಸ್ ಹಿಟ್ ಬೈ ಎ ಸ್ಟಿಕ್ ಎಂದು ಬರೆದುಕೊಳ್ಳಬಹುದು. ಇನ್ನೊಬ್ಬನು ಹತ್ತು ಕಾಲ್ನಡಿಗಳು ಇವೆ ಎಂದು ಹೇಳುತ್ತಾನೆ ಇಂಥದನ್ನೆಲ್ಲಾ ತರ್ಜುಮೆ ಮಾಡುವುದಕ್ಕಾಗುವುದಿಲ್ಲ. ಜನರ ದಿನಬಳಕೆಯ ಭಾಷೆ ಯಾವುದಿದೆಯೋ ಅದರಲ್ಲೇ ಜಡ್ಜ್ಮೆಂಟನ್ನು ಬರೆಯುವಂತೆ ದಂಡುವುದೊಳ್ಳೆಯದು, ಇಲ್ಲವಾದರೆ ಇದರಿಂದ ಅನೇಕ ಸಂದರ್ಭದಲ್ಲಿ ಕೆಟ್ಟ ಪರಿಣಾಮವಾಗಬಹುದು. ಈ ದಿವಸ ಹೈದ್ರಾಬಾದಿನಲ್ಲಿ ಉರ್ದುಭಾಷೆಯಲ್ಲಿ ಜಡ್ಜ್‌ಮೆಂಟನ್ನು ಬರೆಯುತ್ತಿಲ್ಲವೇನು? ಹೀಗೆ ಕನ್ನಡದಲ್ಲಿ ಏಕೆ ಬರೆಯಬಾರದು? ಇನ್ನಾದರೂ ಈ ಇಂಗ್ಲೀಷ್ ಭಾಷೆಯ ವ್ಯವಹಾರವನ್ನು ನಿಲ್ಲಿಸಬೇಕೆಂದು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಪಾನ ನೀರೋಧ

೧೯ ಮಾರ್ಚ್ ೧೯೬೪

ಪೂರ್ಣವಾಗಿ ಈ ಮಾದಕ ವಸ್ತುಗಳನ್ನು ಈ ಜಗತ್ತಿನಿಂದಲೇ ಓಡಿಸಿಬಿಡಬೇಕೆಂದರೆ ಅದು ಮನುಷ್ಯ ಮಾತ್ರದವನಿಂದ ಸಾಧ್ಯವಾಗಲಾರದು ಮಾತು. ನಮಗೆ ಅವಶ್ಯಕವಾಗಿ ಬೇಕಾಗಿರತಕ್ಕ ಅನೇಕ ವಸ್ತುಗಳನ್ನು ಆಲ್ಕೋಹಾಲಿಲ್ಲದೆ ತಯಾರಿಸುವುದಕ್ಕಾಗುವುದಿಲ್ಲ. ಆಲ್ಕೋಹಾಲಿಲ್ಲದೆ ಮಾದಕ ವಸ್ತುಗಳನ್ನು ತಯಾರು ಮಾಡುವುದಕ್ಕಾಗುವುದಿಲ್ಲ. ಆ ವಸ್ತುಗಳನ್ನು ತಯಾರಿಸುವ  ಸಂದರ್ಭದಲ್ಲಿ ಆಲ್ಕೋಹಾಲನ್ನೇ ಜನರು ಅಲ್ಲೇ ಕುಡಿದರೂ ಕುಡಿಯಬಹುದು. ಈಗ ನಾವು ಈ ಮಾದಕ ಪಾನೀಯ ಸೇವನೆ ಮಾಡತಕ್ಕ ಜನರ ಬಗಗೆ ಮಾಡಿರತಕ್ಕ ಕಾನೂನು ಅಷ್ಟು ಸರಿಯಾಗಿದ್ದಂತೆ ಕಂಡುಬರುವುದಿಲ್ಲ. ಕೆಲವು ಮಾದಕ ಪದಾರ್ಥಗಳನ್ನು ಸೇರಿಸಿ ತಯಾರು ಮಾಡತಕ್ಕ ವಸ್ತುಗಳ ಬಗ್ಗೆ, ಈ ಮಾದಕ ವಸ್ತುಗಳು ಯಾವುದೇ ಆಗಿರಲಿ, ಗಾಂಜಾನೇ ಆಗಿರಲಿ, ಹೊಗೆಸೊಪ್ಪೇ ಆಗಿರಲಿ, ಶೇಂದಿಯೇ ಆಗಿರಲಿ ಅಥವಾ ಶರಾಭೇ ಆಗಿರಲಿ ಈ ಪೈಕಿ ಯಾವ ವಸ್ತುವಾದರೂ ಆಗಿರಬಹುದು, ಅದನ್ನು ತಯಾರು ಮಾಡುವ ಮೂಲದಿಂದ ಹಿಡಿದು ಅವುಗಳನ್ನು ತಯಾರುಮಾಡುವ ವಸ್ತುಗಳು, ಅವುಗಳನ್ನು ತಯಾರು ಮಾಡುವ ಕ್ರಮ, ಹಾಗೂ ತಯಾರುಮಾಡುವ ಸ್ಥಳ ಮತ್ತು ಕಾಲ ಈ ಅಂಶಗಳನ್ನೆಲ್ಲಾ ಗಣನೆಯಲ್ಲಿ ಇಟ್ಟುಕೊಂಡು ಇದನ್ನು ಯಾರು ಉಪಯೋಗಿಸಬೇಕು, ಎಂಬುದನ್ನೆಲ್ಲಾ ಕಾನೂನಿನಲ್ಲಿ ಅಡಕಮಾಡಿ, ಈ ವಸ್ತುಗಳ ಮಾರಾಟದಿಂದ ನಮ್ಮ ರಾಜ್ಯಕ್ಕೆ ಬರತಕ್ಕ ವರಮಾನ, ಈ ಸಾಮಾನುಗಳ ಮಾರಾಟದಿಂದ ಅಥವಾ ಇವುಗಳ ಸೇವನೆಯಿಂದ ಅಂದರೆ ಇವುಗಳ ತಯಾರಿಕೆಯಿಂದಲೇ ರಾಜ್ಯಕ್ಕೆ ಹಣ ಬರಬಹುದು. ಇಲ್ಲವೇ ಇವುಗಳನ್ನು ಮಾರಾಟಮಾಡುವುದರಿಂದ ರಾಜ್ಯಕ್ಕೆ ವರಮಾನ ಬರಬಹುದು ಅಥವಾ ತಯಾರಿಕೆಯಿಂದಲಾದರೂ ರಾಜ್ಯಕ್ಕೆ ಹಣ ಬರಬಹುದು. ಈ ಘಟನಾವಳಿಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಒಂದು ಸಮಗ್ರವಾದ ಕಾನೂನನ್ನು ನಾವೀಗ ತಯಾರಿಸಬೇಕಾಗಿದೆ. ಈ ಅಂಶಗಳನ್ನೆಲ್ಲಾ ನಾವು ಹಮನದಲ್ಲಿಟ್ಟುಕೊಂಡು ನಮ್ಮ ಪಾನನಿರೊಧದ ಕಾನೂನನ್ನು ಮಾರ್ಪಾಡುಮಾಡಿಕೊಳ್ಳಬೇಕು. ಇದೇ ವಿಚಾರವನ್ನು ಡಾ. ರಾಮಮನೋಹರ ಲೋಹಿಯಾ ಅವರು ಮಾತನಾಡುವಾಗ ನಮ್ಮ ದೇಶದಲ್ಲಿ ಜನರಿಗೆ ಎಲ್ಲಿಯವರೆಗೆ ತಿನ್ನಲಿಕ್ಕೆ ಅನ್ನ, ಉಡಲಿಕ್ಕೆ ಬಟ್ಟೆ ಇಲ್ಲದಂತಹ ದರಿದ್ರಾವಸ್ಥೆಯಲ್ಲಿರುತ್ತೇವೆಯೋ ಅಲ್ಲಿಯವರೆಗೆ ನಾವು ಈ ಮಾದಕವಸ್ತುಗಳನ್ನು ಯಾವ ಕಾರಣಕ್ಕೇ ಆಗಲಿ ಲಗ್ಜುರಿ ಮಸ್ತುಗಳೆಂದು ಪರಿಗಣಿಸಿ, ಅವುಗಳನ್ನು ಈ ಅಪಿಟೈಟ್ ಇತ್ಯಾದಿ ಯಾವುದೇ ಕಾರಣವಾಗಲಿ ಇವುಗಳನ್ನು ಉಪಯೋಗಿಸಬಾರದೆಂದು ಹೇಳಿದ್ದಾರೆ ಇದರಿಂದ ಅನೇಕ ಬಡ ಸಂಸಾರಗಳು ಹಾಳಾಗುತ್ತವೆಂದು ಹೇಳಿ ಇದರ ಬಗ್ಗೆ ಒಂದು ಭಯಾನಕ ಚಿತ್ರವನ್ನೇ ಅವರು ನಮ್ಮ ಮುಂದೆ ಇಟ್ಟಿದ್ದಾರೆ.