ಕರ್ನಾಟಕದ ಗಡಿಭಾಗಗಳು

೨೮ ಜೂನ್ ೧೯೬೪

ಮುಖ್ಯವಾಗಿ ಸರಕಾರದವರು ಮನಗಾಣಬೇಕಾದ ಅಂಶವೇನೆಂದರೆ, ಕನ್ನಡ ರಾಜ್ಯ ಉದಯವಾಗಿ ಎಂಟು ವರ್ಷಗಳಾದರೂ ಸಂಬಂಧಪಟ್ಟ ಗಡಿಪ್ರದೇಶದಲ್ಲಿರುವ ಕನ್ನಡ ಭಾಗಗಳನ್ನು ಇನ್ನೂ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳದೆ ಇರುವ ವಿಷಯದಲ್ಲಿ ಕಾಲವಿಳಂಬವಾಗುವುದರಿಮದ ಆಯಾಯ ಭಾಗದಲ್ಲಿನ ಕನ್ನಡ ಜನರಿಗೆ ಹೆಚ್ಚಿನ ಹಾನಿ ಉಂಟಾಗಿದೆ. ಮಹಾತ್ಮಾಗಾಂಧೀಜಿಯವರು ನಾಗಪುರ ಕಾಂಗ್ರಸ್ಸಿನಲ್ಲಿ ಕಾಂಗ್ರಸ್ ಸಂಸ್ಥೆಯ ಸಂಘಟನೆಗಾಗಿ ಇದನ್ನು ಉಪಯೋಗಿಸುವುದಕ್ಕೆ ಭಾಷಾವಾರು ಪ್ರಾಂತ ರಚನೆ ಭಾಷೆಯ ಆಧಾರದ ಮೇಲೆ ಮಾಡಬೇಕೆಂದು ತೀರ್ಮಾನಕ್ಕೆ ಬಂದರು: ಇದಕ್ಕೆ ಕಾರಣವೇನೆಂದರೆ ಈ ದೇಶದ ವಿವಿಧ ರಾಜ್ಯಗಳ ರಚನೆಗೆ ಹಿಂದೆ ಯಾವುದೇ ಒಂದು ವೈಚಾರಿಕ ಹಿನ್ನೆಲೆ ಇರಲಿಲ್ಲ. ಆದುದರಿಂದ ಸ್ವಾತಂತ್ರ್ಯ ಬೇಡಿಕೆಯ ಜೊತೆಗೆ ರಾಜ್ಯಗಳ ಪುನರ್ನಿರ್ಮಾಣವು ಭಾಷೆಯ ಆಧಾರದ ಮೇಲೆ ನಡೆಯಬೇಕು ಎಂಬ ವಿಷಯ ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಲ್ಲರ ಅಭಿಪ್ರಾಯವಾಗಿತ್ತು. ಎಲ್ಲ ರಾಜ್ಯಗಳ ಎಲ್ಲ ಭಾಷೆಯ ಜನರ ಅಭಿಪ್ರಾಯ ಈ ರೀತಿಯಾಗಿತ್ತು ಎಂಬುದನ್ನು ಕಂಡುಕೊಳ್ಳಬಾರದು. ಈಸಂದರ್ಭದಲ್ಲಿ ಇದ್ದಕ್ಕಾಗಿ ಅನೇಕ ಸಮಿತಿಗಳೂ ಏರ್ಪಾಡಾಗಿದ್ದವು. ಇದಲ್ಲದೆ ಯಾವ ಯಾವ ರಾಜ್ಯವನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದಕ್ಕೆ ಕೂಡ ಸಾಕಷ್ಟು ಆಂದೋಲನೆ; ಚರ್ಚೆ ನಡೆದು ಇವತ್ತಿನ ದಿವಸ ರಾಷ್ಟ್ರದಲ್ಲಿ ಈ ಭಾಷೆಯ ಆಧಾರದ ಮೇಲೆ ರಾಜ್ಯ ನಿರ್ಮಾಣ ಮಾಡತಕ್ಕಂಥ ಕೆಲಸ ಬಹುಮಟ್ಟಿಗೆ ಪೂರ್ತಿಯಾಗಿದೆ. ರಾಜ್ಯ ಪುನರ್ವಿಂಗಡಣೆ ಆಯೊಗದವರು ಕೊಟ್ಟ ವರದಿಯ ಆಧಾರದ ಮೇಲೆ ಕೇಂದ್ರ ಸರಕಾರದವರು ಕಾನೂನು ರಚನೆ ಮಾಡಿದರು ಮತ್ತು ಆ ವಿಧೀಯಕದ ಆಧಾರದ ಮೇಲೆ ಕರ್ನಾಟಕದ ರಾಜ್ಯ ಆಯಿತು. ಆದರೆ ಈ ಕನ್ನಡ ರಾಜ್ಯ ಏರ್ಪಾಡಾಗುವಾಗ ಕೆಲವು ಭಾಗಗಳು ಬೇರೆ ರಾಜ್ಯದಲ್ಲಿ ಕಾರಣಾಂತರದಿಂದ ಉಳಿದುಹೊದವು. ಈ ವಿಷಯದಲ್ಲಿ ಈಗಾಗಲೇ ಈ ಪ್ರದೇಶ ಕರ್ನಾಟಕಕ್ಕೆ ಸೇರಬೇಕು ಎಂದು ಹೇಳಿ ಹೊರಗಡೆ ಉಳಿದಿರ ತಕ್ಕಂಥವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉದಾಹರಣೆಗಾಗಿ ಕಾಸರಗೋಡು, ಈ ಒಂದು ಭಾಗವನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಮ್ಮ ಸರಕಾರ ಹಾಗೂ ಕೇಂದ್ರ ಸರಕಾರ ಸೂಕ್ತ ಕಾರ್ಯಕ್ರಮವನ್ನು ಬೇಗ ತೆಗೆದುಕೊಳ್ಳಬೇಕಾದುದು ಅತ್ಯಗತ್ಯ. ತಾಳವಾಡಿ ಫಿರ್ಕಾ ಬಗ್ಗೆ ಸಹ ಈ ಮಾತು ಹೇಳಬೆಕಾಗುತ್ತದೆ. ಮಡಕಸಿರಾ ಆಂಧ್ರದಲ್ಲಿ ಸೇರಿದೆ. ಅಕ್ಕಲಕೋಟೆ ಮಹಾರಾಷ್ಟ್ರದಲ್ಲಿ ಸೇರಿದೆ. ಗಡಿ ಉದ್ದಕ್ಕೂ ಕರ್ನಾಟಕದಿಂದ ಹರಿದುಹೋಗಿ ಎಷ್ಟೋ ಗ್ರಾಮಗಳು ಎಷ್ಟೋ ಭಾಗಗಳು ಬೇರೆ ರಾಜ್ಯದಲ್ಲಿ ಉಳಿದು ಹೋಗಿವೆ. ಈ ಭಾಗಗಳನ್ನು ಕರ್ನಾಟಕ ರಾಜ್ಯದಲ್ಲಿ ಸೇರಿಸುವುದಕ್ಕೆ ಗಡಿಗೆ ಸಂಬಂಧಪಟ್ಟ ಟ್ರೆಬ್ಯೂನಲ್ ರಚನೆಮಾಡಿ ಅದಕ್ಕೆ ಈ ಕೆಲಸ ವಹಿಸುವುದು ಬಹಳ ಸೂಕ್ತ. ಈ ಕೆಲಸ ಜಾಗ್ರತೆಯಾಗಬೇಕೆಂದು ಈ ಸಂದರ್ಭದಲ್ಲಿ ನಾನು ಹೇಳಲು ಬಯಸುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರರ್ಕಾರದವರು ತುರ್ತು ಪರಿಸ್ಥಿತಿ ಮುಂದೆಮಾಡಿ ಈ ಒಂದು ಸಮಸ್ಯೆಯನ್ನು ಪರಿಹರಿಸದೆ ಮುಂದೆ ಹಾಕುವುದರಿಂದ ಅನುಕೂಲಕ್ಕಿಂತ ಹಾನಿಯೇ ಜಾಸ್ತಿ ಇದೆ ಎಂದು ಹೇಳಬಯಸುತ್ತೇನೆ. ರಾಜ್ಯ ಪುನರ್ವಿಂಗಡಣ ಆಯೋಗದವರು ಗಡಿಗಳ ಹೊಂದಾಣಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಇದ್ದ ಭಾಗದಲ್ಲಿ ಅಂಥ ವ್ಯಾಜ್ಯವನ್ನು ಟ್ರಿಬ್ಯೂನಲ್‌ಗೆ ವಹಿಸಬೇಕು ಎಂದು ಸಲಹೆ ಕೊಟ್ಟಿದ್ದರು. ಅದನ್ನು ನಮ್ಮ ರಾಜ್ಯ ಸರಕಾರವು ಪುರಸ್ಕರಿಸಲಿಲ್ಲ. ಗಡಿ ಹೊಂದಾಣಿಕೆಯ ಬಗ್ಗೆ ಏನೂ ಕಾರ್ಯಕ್ರಮ ತೆಗೆದುಕೊಳ್ಳಲಿಲ್ಲ. ಒಂದು ಕ್ರಮವನ್ನು ಬಹಳ ಒತ್ತಾಯದ ನಂತರ ಮಹಾರಾಷ್ಟ್ರ ಕರ್ನಾಟಕದ ಗಡಿ ವಿಷಯದಲ್ಲಿ ಮೈಸೂರು ಸರಕಾರದವರು ತೆಗೆದುಕೊಂಡರು. ಶ್ರೀ ಜತ್ತಿ ಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಶ್ರೀ ಚವಾಣ ಅವರು ಮಹಾರಾಷ್ಟ್ರದ ಮುಖ್ಯ ಮಂತ್ರಿಯವರಾಗಿದ್ದ ನಾಲ್ಕು ಜನರ ಒಂದು ಗಡಿ ಸಮಿತಿ ಎಂದು ನೇಮಕ ಮಾಡಿದರು. ಮಹಾರಾಷ್ಟ್ರ ರಾಜ್ಯದ ಸದಸ್ಯರಾಗಿ ಶ್ರೀ ಎಚ್. ವಿ. ಪಾಟಸ್ಕರ್ ಮತ್ತು ಶ್ರೀ ಎಂ. ಡಿ. ಭಟ್ ಅವರನ್ನು ಅವರು ನಾಮಕರಣ ಮಾಡಿದರು. ನಮ್ಮ ಮೈಸೂರು ರಾಜ್ಯದ ಪರವಾಗಿ ಶ್ರೀ ಎಸ್. ಚನ್ನಯ್ಯ ಹಾಗೂ ಶ್ರೀ ಎಸ್. ಎಸ್. ಮಳೀಮಠ ಅವರನ್ನು ಸದಸ್ಯರನ್ನಾಗಿ ನಾಮಕರಣ ಮಾಡಿದರು. ಈ ಗಡಿ ಸಮಿತಿ ೩೦ – ೧೧ – ೧೯೬೦ ರಲ್ಲಿ ನೇಮಕವಾಯಿತು. ಈ ಸಮಿತಿಯವರು ಗಡಿ ಭಾಗಗಳಲ್ಲಿ ಪ್ರವಾಸಮಾಡಿ ಅನೇಕರು ಪರಿಶೀಲನೆ ಮಾಡಿದ್ದಾರೆ. ನಂತರದಲ್ಲಿ ನಮ್ಮ ಸದಸ್ಯರು ಕೊಟ್ಟ ವರದಿಯನ್ನು ಇನ್ನೂ ಸರಕಾರದವರು ಪ್ರಕಟಿಸಿಲ್ಲ. ಆದರೆ ಮಹಾರಾಷ್ಟ್ರ ಸರಕಾರದವರು ಪ್ರಕಟಮಾಡಿ ಈಗಾಗಲೇ ಎಲ್ಲಾ ಕಡೆ ಹಂಚಿದ್ದಾರೆ.

ಗಡಿಯಲ್ಲಿ ಹೊಂದಾಣಿಕೆಯಾಗಿ, ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹೋಗುವ ಭಾಗಗಳು, ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಭಾಗಗಳು ಎಷ್ಟಿವೆ. ಅವುಗಳನ್ನು ಹೊಂದಾಣಿಕೆಯಿಂದ ಹಂಚುವುದು ಸೂಕ್ತವೆ, ಅಗತ್ಯವೇ ಅಪೇಕ್ಷಣೀಯವೆ ಎಂಬ ವಿಷಯವನ್ನು ನಾವು ಪರಿಶೀಲನೆ ಮಾಡಿದರೆ ಅನೇಕ ಸಂದರ್ಭಗಳಲ್ಲಿ ಗಡಿ ಉದ್ದಕ್ಕೂ ಹೀಗೆ ಮಾಡತಕ್ಕಂಥಾದ್ದು ಅಪೇಕ್ಷಣೀಯ ಅಂಥ ಹೇಳಿ ನಮಗೆ ಗೊತ್ತಾಗುತ್ತದೆ. ಅದಕ್ಕೆ ಕಾರಣಗಳಿವೆ. ಅಲ್ಲಿರುವ ಜನರು ಈಗಿರುವ ರಾಜ್ಯದ ಹೊರಗಡೆಯ ರಾಜ್ಯಕ್ಕೆ ಸೇರಬೇಕು ಅಂತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾಷಾಸಂಖ್ಯೆಯಲ್ಲಿ ಅಧಿಕ ಸಂಖ್ಯೆಯ ಜನ ಯಾವ ಒಂದು ರಾಜ್ಯದ ಭಾಷೆಯನ್ನು ಮಾತನಾಡುತ್ತಿದ್ದಾರೆ ಎಂದೂ ನೋಡಬೇಕು. ಇವತ್ತು ಆ ಪ್ರಶ್ನೆ ಅಷ್ಟು ದೊಡ್ಡ ಪ್ರಶ್ನೆಯಲ್ಲ. ಅದನ್ನು ಪದೇ ಪದೇ ಚರ್ಚಿಸುವುದರಿಂದ, ಅದನ್ನು ಎತ್ತಿ ಆಡುವುದರಿಂದ ಕ್ಷೇಮವಿಲ್ಲವೆಂದು ಯಾರಾದರೂ ಹೇಳುವುದಾದರೆ ಅದು ಅಷ್ಟು ಸರಿಯಿಲ್ಲ.

ಸಮಗ್ರ ಭಾರತದ ಐಕ್ಯತೆ ದೃಷ್ಟಿಯಿಂದ ರಾಜ್ಯಗಳ ಬೆಳವಣಿಗೆ ಮತ್ತು ಐಕ್ಯತೆ ದೃಷ್ಟಿಯಿಂದ ಸಣ್ಣ ಪುಟ್ಟ ಹೊಂದಾಣಿಕೆಗಳಲ್ಲಿ ಊರಿನ ಉದ್ದಕ್ಕೂ ಇರುವ ಸಮಸ್ಯೆ ಒಂದು ಬೃಹತ್ ಸಮಸ್ಯೆಯಾಗಿ ಇಡೀ ದೇಶಕ್ಕೆ ಕಟುಪರಿಸ್ಥಿತಿ ಉಂಟಾಗುವುದಾದರೆ, ಆಗಿ ನಾವು ಆ ಒಂದು ಸಮಸ್ಯೆಯನ್ನು ಇವತ್ತು ಕೆದಕುವುದು ಸೂಕ್ತವಾದುದುಲ್ಲ. ಆದರೆ, ಅಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರದವರೂ, ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳೂ ಮನಸ್ಸು ಮಾಡಬೇಕು. ದೊಡ್ಡ ವಿಷಯಗಳನ್ನು ಪ್ರಸ್ತಾಪ ಮಾಡುವಾಗ, ಚೀಣಾದ ಆಕ್ರಮಣವನ್ನು ಪ್ರಸ್ತಾಪ ಮಾಡುವಾಗ, ದೇಶದಲ್ಲಿ ಅನ್ನ – ಬಟ್ಟೆ ಸಮಸ್ಯೆಗಳನ್ನು ಮಾತನಾಡುವಾಗ ಅಥವಾ ದೇಶದ ಸಮಗ್ರ ಅಭಿವೃದ್ಧಿಯನ್ನು ಕುರಿತು ಮಾತನಾಡುವಾಗ, ಹೊಂದಾನಿಕೆ ವಿಷಯ ಸಣ್ಣದಾಗಿ ಕಾಣುತ್ತದೆ. ಆದರೆ, ಆ ಭಾಗದಲ್ಲಿ ವಾಸಮಾಡುವ ಜನರ ದೈನಂದಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ್ದು ಎಲ್ಲ ಸರಕಾರಗಳ ಕರ್ತವ್ಯ. ಉದಾಹರಣೆಗೆ ಕಾಸರಗೋಡಿನ ಮಕ್ಕಳ ವಿದ್ಯಾಭ್ಯಾಸ ತೆಗೆದುಕೊಳ್ಳೋಣ: ಅವರು ಯಾವ ಶಾಲೆಗೆ ಹೋಗಬೇಕು? ಮಂಗಳೂರು ಕಾಲೇಜಿಗೆ ಬಂದು ಸೇರಿಕೊಳ್ಳಿ ಎಂದು ಹೇಳಿದರೆ, ಅವರು ಅಲ್ಲಿಗೆ ಹೋಗುವುದು ಹೇಗೆ? ಈ ಸಮಸ್ಯೆ ಕಾದಿರುವುದಿಲ್ಲ. ಈ ವರ್ಷ ಸೇರಿಸಿಕೊಂಡರೆ ಉಂಟು, ಇಲ್ಲದಿದ್ದರೆ ಆ ಹುಡುಗರೆಲ್ಲಾ ವಿದ್ಯಾಭ್ಯಾಸ ಬಿಡಬೇಕು. ಈ ದೊಡ್ಡ ಅನಾನುಕೂಲತೆ ಇದೆ. ಅದಕ್ಕಗಿ ಮದ್ರಾಸಿಗೆ ಅಥವಾ ಬೆಂಗಳೂರಿಗೆ ಅಥವ ಮುಂಬಯಿಗೆ ಹೋಗುವ ಸ್ಥಿತಿಯಲ್ಲಿ ಪ್ರತ್ಯಕ್ಷವಾಗಿ ಅನುಕೂಲಗಳು ಇರುವುದಿಲ್ಲ. ಇದು ವಿದ್ಯಾಭ್ಯಾಸದ ವಿಷಯ. ಇನ್ನೂ ಅಲ್ಲಿ ಆಡಳಿತದಲ್ಲಿ, ಈಗ ಕನ್ನಡ ಮಾತನಡತಕ್ಕಂಥ ಜನರು ಇರುವ ಕಡೆ, ಮಲಯಾಳ ಭಾಷೆಯಲ್ಲಿ ವೋಟರ್ಸ್ ಲಿಸ್ಟ್ ಆಗಲಿ, ಗ್ರಾಮಪಂಚಾಯತಿ ರೆಕಾರ್ಡುಗಳಾಗಲಿ, ಸಭೆ, ಚರ್ಚೆಗಳು ಎಲ್ಲವೂ ಬೇರೆ ಭಾಷೆಯಲ್ಲಿ ನಡೆಯುತ್ತಾ ಹೋದರೆ ಮಲಯಾಳಿಯನ್ನು ಕಲಿಯುವುಕ್ಕೆ ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅವರು ತಮಗೆ ಏನೇನು ಅನಾನುಕೂಲಗಳು ಆಗುತ್ತಿವೆಯೋ ಅವುಗಳನ್ನು ಸಹಿಸಿಕೊಂಡು ಇರಬೇಕು. ಇಂಥ ತೋಡರುಗಳನ್ನು ನೋಡಬೇಕು. ಕಾಸರಗೋಡು ಕರ್ನಾಟಕದಲ್ಲಿದ್ದರೆ, ಅವರಿಗೆ ಮಂಗಳೂರು ಜಿಲ್ಲೆ ಹತ್ತಿರವಾಗುತ್ತದೆ. ಅವರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಅದರೆ, ಇವತ್ತು ಆ ಜನರೆಲ್ಲರೂ ಪ್ರತಿಯೊಂದು ವಿಷಯಕ್ಕೂ ಕೇರಳ ರಾಜ್ಯಕ್ಕೆ ಹೋಗಬೇಕಾಗುತ್ತದೆ. ಅದರಿಂದ ಅವರಿಗೆ ಹೆಚ್ಚಿನ ಕಷ್ಟನಷ್ಟ ಉಂಟಾಗುತ್ತಿದೆ. ಈ ಒಂದು ಉದಾಹರಣೆಯಿಂದ, ಎಲ್ಲ ಭಾಗದಲ್ಲಿರುವ ಬೇರೆ ಭಾಷೆ ಆಡುವ ಜನರು ಬೇರೆ ರಾಜ್ಯದಲ್ಲಿ ಸೇರಿಹೋಗಿದ್ದರೆ, ಅವರ ಕಷ್ಟಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ನಿಜವಾಗಿ ಅವರ ದೃಷ್ಟಿಯಿಂದ ಅದು ಬಹಳ ದೊಡ್ಡ ಸಮಸ್ಯೆ. ಅದಕ್ಕೆ ಜಾಗ್ರತೆಯಾಗಿ ಪರಿಹಾರವನ್ನು ಕೊಡಬೇಕಾದುದು ಆಯಾ ಸರಕಾರಗಳ ಕರ್ತವ್ಯ ಕೂಡ ಆಗುತ್ತದೆ.

ಇನ್ನು ಇಷ್ಟು ಹೇಳಿದ ಮೇಲೆ, ನಾನು ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡಣೆಯಾಗಬೇಕು ಅಂತ ಮೊದಲಿನಿಂದಲೂ ವಾದಮಾಡಿ, ಅದಕ್ಕೆ ಸಾಕಷ್ಟು ಪ್ರಯತ್ನ ಮಾಡಿದವರಲ್ಲಿ ಒಬ್ಬ. ಅಂದಮಾತ್ರಕ್ಕೆ ಯಾವುದೇ ಭಾಷೆಯ ಜನರು ರಾಜ್ಯದಲ್ಲಿದ್ದರೆ, ಭಾಷೆಯನ್ನು ಆಡದೆ ಇರುವ ರಾಜ್ಯದಲ್ಲಿದ್ದರೆ, ಅವರನ್ನು ಅವರ ಭಾಷೆ ಮಾತನಾಡತಕ್ಕಂಥ ರಾಜ್ಯಕ್ಕೆ ಸಾಗಿಸಬೇಕೆ ಎಕ್ಸ್ಚೇಂಜ್ ಆಫ್ ಪಾಪುಲೇಶನ್ ಆಗಬೇಕೆಂದು ಯಾರಾದರೂ ವಾದ ಮಾಡಿದರೆ ಅದು ಮೂರ್ಖತನದ ವಾದ ಅಂಥ ತ್ಯಜಿಸಬೇಕಾಗುತ್ತದೆ. ಈ ವಾದಗಳನ್ನು ಲಾಜಿಕಲ್ ಕಂಕ್ಲೂಷನ್ನಿಗೆ ಜನತೆ ತೆಗೆದುಕೊಂಡು ಹೋಗುವುದಾದರೆ, ಅಂಥ ವಾದಗಳನ್ನು ಒಪ್ಪಿಕೊಳ್ಳಬೇಕಾಗುತ್ತದ. ಇವತ್ತು ಈ ರಾಜ್ಯದಲ್ಲಿ ಬಹಳ ಜನ ತೆಲುಗು ತಮಿಳು ಮರಾಠಿ ಭಾಷೆಯನ್ನು ಮಾತನಾಡತಕ್ಕಂಥವರೂ ಇದ್ದಾರೆ; ತುಳು, ಕೊಂಕಣಿ ಮತ್ತು ಕೊಡವ ಭಾಷೆಯನ್ನು ಆಡುವವರಿದ್ದಾರೆ. ಇಂಗ್ಲೀಷನ್ನು ಮಾತೃ ಭಾಷೆಯನ್ನಾಗಿ ಉಳ್ಳವರೂ ಇದ್ದಾರೆ. ಗುಜರಾತಿ ಭಾಷೆ ಮಾತನಾಡುವವರಿದ್ದಾರೆ. ಬೆಂಗಳೂರಿನಲ್ಲಿ ಬಂಗಾಳಿ ಮಾತನಾಡುವ ಜನರಿದ್ದಾರೆ. ಹಿಂದಿ ಮಾತನಾಡತಕ್ಕಂಥವರೂ ಸಾಕಷಟು ಸಂಖ್ಯೆಯಲ್ಲಿದ್ದಾರೆ. ಈ ಒಂದು ಭಾಷಾ ಸಂಘಟನೆ ಬಹುಶಃ ಭಾರತದ ಎಲ್ಲಾ ಭಾಗದಲ್ಲಯೂ ಇದೆ. ಮುಖ್ಯವಾಗಿ ಮದ್ರಾಸು, ಮುಂಬಯಿ, ಕಲ್ಕತ್ತ, ದೆಹಲಿ, ಅಹಮದಾಬಾದ್ ಅಥವಾ ಇನ್ನು ಯಾವುದೇ ಅಂಥ ದೊಡ್ಡ ಪಟ್ಟಣಗಳನ್ನು ತೆಗೆದುಕೊಂಡರೆ, ಸಾಮಾನ್ಯವಾಗಿ ಭಾರತದ ಎಲ್ಲಾ ಭಾಷೆಗಳನ್ನೂ ಮಾತನಾಡುವ ಜನರು ಬೇರೆ ರಾಜ್ಯಗಳಲ್ಲಿ ಹೋಗಿ ನೆಲಸಿರುವುದನ್ನು ನಾವು ನೊಡಬಹುದು. ಬಹಳ ಕಟ್ಟುನಿಟ್ಠಾಗಿ ಪ್ರತ್ಯೇಕ ಭಾಷೆಯನ್ನು ಮಾತನಾಡತಕ್ಕಂಥ ಜನರ ಸಂಖ್ಯೆಯನ್ನು ನಾವು ನಿರ್ಧಾರವಾಗಿಟ್ಟುಕೊಂಡು ಗೆರೆಗಳನ್ನು ಎಳೆದು, ಆಯಾ ಭಾಷೆಗಳ ಜನರು ಇದೇ ಚೌಕಟ್ಟಿನಲ್ಲಿ ಬರಬೇಕು ಅನ್ನುವ ವ್ಯವಸ್ಥೆಯನ್ನು ದೇಶದಲ್ಲಿ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗೆ ಮಾತನಾಡುವುದೂ ಕೂಡ ಬಹಳ ಅಹಿತವಾದ ಮಾತಾಗುತ್ತದೆ.

ಅದ್ದರಿಂದ ನಾವು ಪರಭಾಷೆಯ ಬಗ್ಗೆ ಸಹಿಷ್ಣುತೆ ಹಾಗೂ ಅಂತಹ ಭಾಷೆಯನ್ನು ಮಾತನಾಡತಕ್ಕ ಜನರು ಯಾವುದಾದರೂ ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿದ್ದರೆ ಅವರಿಗೆ ರಕ್ಷಣೆ ಕೊಡಬೇಕು. ಅದನ್ನು ನಿರ್ವಂಚನೆಯಿಂದ ಕೊಡಬೇಕದ್ದು ಅಗತ್ಯ ಮತ್ತು ಕರ್ತವ್ಯವೂ ಕೂಡ ಆಗುತ್ತದೆ. ಇದನ್ನು ಎಲ್ಲ ಅಲ್ಪಸಂಖ್ಯಾತರು ಕೇಳುವುದಕ್ಕೆ ಮುಂಚೆಯೇ ನಾವು ಕೊಡಬೇಕಾಗುತ್ತದೆ. ಸರ್ಕಾರದವರೂ ಇದಕ್ಕೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಎಲ್ಲಾದರೂ ಒಂದು ಭಾಗದಲ್ಲಿ ಅವರು ಹೆಚ್ಚು ಸಂಖ್ಯೆಯಲ್ಲಿ ಇದ್ದರೆ ಅವರಿಗೆ ಶಾಲೆಗಳನ್ನು ಕೊಡುವುದು, ಅವರ ಭಾಷೆಯಲ್ಲಿ ಏನಾದರೂ ಮುಖ್ಯ ಸರ್ಕಾರಿ ಪ್ರಕಟನೆಗಳು ಇದ್ದರೆ ಅವನ್ನು ಪ್ರಕಟಿಸಿ ಅವರಿಗೆ ಮುಟ್ಟಿಸುವುದು ಮತ್ತು ಇನ್ನೂ ಅನೇಕ ರೀತಿಯಲ್ಲಿ ನಡೆಯತಕ್ಕ ವ್ಯವಾಹರದಲ್ಲಿ ಅವರಿಗೆ ಯಾವತ್ತೂ ಇದು ನಮ್ಮ ರಾಜ್ಯವಲ್ಲ ಎಂಬ ಭಾವನೆ ಬರದ ರೀತಿಯಲ್ಲಿ ಅಡಳಿತವನ್ನು ನಡೆಸಿಕೊಂಡು ಹೋಗುವುದಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿಕೊಂಡರೆ ಅವರು ಸಮಾಧಾನ ಪಡುತ್ತಾರೆ.

ಇವತ್ತು ವಾಸ್ತವವಾಗಿ ಈ ಸಮಸ್ಯೆ ಏಕೆ ನೆನಗುದಿಗೆ ಬಿದ್ದಿದೆ? ಮೈಸೂರು ರಾಜ್ಯದ ಮಂತ್ರಿಗಳು ಏಕೆ ಈ ಸಮಸ್ಯೆಯನ್ನು ನೇರವಾಗಿ ಎದುರಿಸುವುದಕ್ಕೆ ಹಿಂದು ಮುಂದು ನೋಡುತ್ತಾರೆ ಎನ್ನುವುದಕ್ಕೆ ಒಂದು ಕಾರಣ; ಏನೆಂದರೆ, ಈ ಮರಾಠಿ ಮಾತನಾಡತಕ್ಕ ಜನರು, ಆ ಭಾಗಗಳಿಂದ ಬಂದು ಇಲ್ಲಿ ಪ್ರತಿನಿಧಿಸುತ್ತಾ ಇರುವ ನಮ್ಮ ಮಾನ್ಯ ಸ್ನೇಹಿತರು ಕಳೆ ಎಂಟು ವರ್ಷಗಳಿಂದ, ಜನರು ಈ ರಾಜ್ಯ ಸಂಘಟನೆ ಆದಲಾಗಾಯ್ತು ಯಾರು ಬಂದು ಇಲ್ಲಿ ಮಂಡಿಸಿದ್ದಾರೆ ಅವರು ಪದೇ ಪದೇ ಅದೇ ತಮ್ಮ ಕರ್ತವ್ಯವೋ ಎಂಬಂತೆ ಈ ಒಂದು ವಿಷಯವನ್ನು ಪ್ರಸ್ತಾಪ ಮಾಡುತ್ತಾ ಇದ್ದಾರೆ. ಇದೆಲ್ಲಾ ಮೈಸೂರು ರಾಜ್ಯ ಸರ್ಕರದ ತಿಂಗಳಿಗೆ ಒಂದು ವಿಧದ ಪರಿಣಾಮವನ್ನು ಮಾಡಿರಬಹುದು ಎಂದು ನನಗೆ ಅನಿಸುತ್ತದೆ. ಅವರು ಈ ಸಬೇಯಲ್ಲಿ ಮರಾಠಿ ಭಾಷೆಯಲ್ಲೇ ಮಾತನಾಡುವುದು ಮತ್ತು ಈ ಗಡಿಗೆ ಸಂಬಂಧಪಟ್ಟ ವಿಷಯಗಳನ್ನೇ ಯಾವಾಗಲೂ ಮಾತನಾಡುತ್ತಾ ಇರುವುದು ಮತ್ತು ಆ ಹೊರಭಾಗಗಳವರಿಗೆ ಸಂಬಂಧಪಟ್ಟವರಂತೆ ಮಾತನಾಡುವುದು. ಈ ಎಲ್ಲಾ ಕಾರಣಗಳಿಂದ ಅವರು ಹೊರಭಾಗಗಳಿಂದ ಬಂದವರು, ನಮ್ಮ ಮೇಲೆ ದಾಳಿ ಮಾಡುವುದಕ್ಕೆ ತೊಂದರೆ ಕೊಡುವುದಕ್ಕೆ ಅವರು ಬಂದಿದ್ದಾರೆ ಎಂದ ಬಹುಶಃ ಮೈಸೂರು ಸರ್ಕರದ ಮಂತ್ರಿಗಳಿಗೆ ಅನಿಸಿರಬಹುದು ಎಂದು ನನಗೆ ಭಾಸವಾಗುತ್ತದೆ.

ಒಂದು ವಿಶೇಷ ಪರಿಸ್ಥಿತಿಯಲ್ಲಿ ಅವರು ಇಲ್ಲಿಗೆ ಆರಿಸಿ  ಬಂದು, ಇಲ್ಲಿ ಉಪಸ್ಥಿತರಿರುವುದರಿಂದ ಮತ್ತು ಕನ್ನಡದಲ್ಲಿ ಮಾತನಾವುದು, ಕನ್ನಡ ರಾಜ್ಯದಲ್ಲಿ ಹೊಂದಿಕೊಳ್ಳುವುದಕ್ಕೆ ಮನಸ್ಸು ಮಾಡದೇ ಇರುವುದರಿಂದ ಈ ಸಮಸ್ಯೆ ಯಾವತ್ತಿನಿಂದಲೂ ಉಲ್ಬಣ ಸ್ಥಿತಿಯಲ್ಲೇ ಮುಂದುವರಿದುಕೊಂಡು ಬರುತ್ತಾ ಇದೆ ಮತ್ತು ಈ ಸಭೆಯ ಮುಂದೆ ಜ್ವಲಂತವಾಗಿ ಉಳಿದಿರತಕ್ಕ ಸಮಸ್ಯೆಯಾಗಿದೆ. ಇದಕ್ಕೆ ಪರಹಾರವನ್ನು ಯಾವುದಾದರೂ ರೀತಿಯಲ್ಲಿ ಹುಡುಕಿ ಈ ಸಮಸ್ಯೆ ಮುಗಿಯಿತು, ಎಂದು ಮಾಡದಿದ್ದರೆ ಬಹಳ ಕಠಿಣವಾಗುತ್ತದೆ. ಆದ್ದರಿಂದ ಈ ಸಮಸ್ಯೆಗೆ ಕೊಡಬೇಕಾದ ಗಂಭೀರ ಮಹತ್ವವನ್ನು ಕೊಟ್ಟು ಇದನ್ನು ತೀರ್ಮಾನ ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಸ್ವಾಮಿ, ಈ ವಿಷಯ ಬಂದಾಗಲೆಲ್ಲ ಬೆಳಗಾವಿ, ನಿಪ್ಪಾಣಿ, ಕಾರವಾರ – ಇವು ಮೂರು ಸಹ ಹೆಚ್ಚು ಪ್ರಾಧಾನ್ಯವಾಗಿ ಆಗಾಗ ನಮ್ಮ ಮುಂದೆ ಬಂದು ನಿಲ್ಲುತ್ತಾ ಇವೆ.

ಮುಂಬೈ ಪ್ರಾಂತ್ಯದ ಪಕ್ಕದಲ್ಲಿ ಗಡಿಭಾಗಗಳಲ್ಲಿರುವ ಜನರು ಮೂರು – ನಾಲ್ಕು ಭಾಷೆಗಳಲ್ಲಿ ಪ್ರವೀಣರಾಗಿರತ್ತಾರೆ. ಅವರನ್ನು ಕಲ್ಯಾಣ್ ಬಿಟ್ಟು ಪುಣೆಗೆ ಬರುವವರೆಗೂ ಕನ್ನಡಿಗರು ಎಂದು ಪತ್ತೆ ಹೆಚ್ಚುವುದು ಕಷ್ಟವಾಗುತ್ತದೆ; ಮರಾಠಿ ಅಥವ ಹಿಂದಿಯಲ್ಲೇ ಮಾತನಾಡುತ್ತಾ ಇರುತ್ತಾರೆ ಬೆಳಗಾವಿ ದಾಟಿದ ಮೇಲೆ ಕನ್ನಡ ಶುರುಮಾಡುತ್ತಾರೆ. ಮಾತೃ ಭಾಷೆಯನ್ನು ಬಿಟ್ಟು ವ್ಯಾವಹಾರಿಕ ಭಾಷೆಯನ್ನು ಉಪಯೋಗಿಸುತ್ತಾ ಇರುತ್ತಾರೆ. ಕನ್ನಡಿಗರಿಗೆ ಬೇರೆ ಭಾಷೆಯನ್ನು ಆಡುವುದೇ ಒಂದು ಸೌಜನ್ಯವಾಗಿದೆ. ತಮಿಳರಿಗೆ ತಮಿಳಿನಲ್ಲೇ ಕೇಳುತ್ತಾರೆ. ಏನಪ್ಪಾ ಎಲ್ಲಿಗೆ ಹೋಗುತ್ತೀ? ಎಂದು ಕೇಳುವುದಿಲ್ಲ. ಎನ್ನಪ್ಪ ಎಂಗೆ ಪೋರೆ ಎಂದು ಕೇಳುತ್ತಾರೆ. ಇದು ಕನ್ನಡಿಗರಿಗೆ ಸೌಜನ್ಯರೂಪವಾಗಿ ಬಂದಿರತಕ್ಕ ಬಲಹೀನತೆ ಎಂದು ಹೇಳಬಹುದು. ಅದೇ ಒಬ್ಬ ತಮಿಳು ಮನುಷ್ಯ ಮಾತನಾಡಲಿ ಅಥವಾ ಇನ್ನಾರಾದರೂ ಆಗಲಿ, ಅವರು ತಮ್ಮ ಭಾಷೆಯಲ್ಲೇ ಹೇಳುವುದು, ಅದು ಬೇರೆಯವರಿಗೆ ತಿಳಿದಾದರೂ ತಿಳಿಯಲಿ; ಇಲ್ಲದೇ ಇದ್ದರೂ ಹೋಗಲಿ, ಬೇರೆಯವನ ಭಾಷೆಯಲ್ಲಿ ಮಾತನಾಡುವುದಕ್ಕೆ ಪ್ರಯತ್ನ ಮಾಡುವುದಿಲ್ಲ. ಅದು ಅವರ ಭಾಷೆಯ ಮೇಲೆ ಇರತಕ್ಕ ಒಂದು ನಿಷ್ಠೆ. ಅದು ಸ್ವಭಾವ. ಆದರೆ ನಮ್ಮ ಭಾವನೆ ಏನಿದೆ, ಅದು ನಮ್ಮ ಸ್ಥಾನವನ್ನು ಬಿಟ್ಟುಕೊಡತಕ್ಕ ಭಾವನೆ. ಕಾಮರಾಜ ನಾಡಾರ್ ಅವರು ಇಂಡಿಯಾ ದೇಶದ ಉದ್ದಕ್ಕೂ ತಮಿಳಿನಲ್ಲೇ ಮಾತನಾಡುತ್ತಿದ್ದಾರೆ. ನಮ್ಮ ಜನ ಹಾಗಲ್ಲ. ಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ಏನಾಗುತ್ತದೆಯೋ ಎಂದು ಅವಮಾನಪಟ್ಟುಕೊಳ್ಳತಕ್ಕವರು, ಕನ್ನಡ ಒಂದು ಭಾಷೆಯೇ ಅಲ್ಲವೇನೋ, ಅದರಲ್ಲಿ ಶಬ್ದಗಳು ಇದೆಯೋ ಇಲ್ಲವೋ ಎಂದು ಅಂದುಕೊಳ್ಳತಕ್ಕವರು, ಕನ್ನಡದಲ್ಲಿ ಮಾತನಾಡಿದರೆ ದಡ್ಡ ಎಂದು ಅಂದುಕೊಳ್ಳುತ್ತಾರೆಯೋ ಏನೋ ಎಂಬ ರೀತಿಯಲ್ಲಿ ಇನ್ಫೀರಿಯಾರಿಟೀ ಕಾಂಪ್ಲೆಕ್ಸ್ ಕನ್ನಡಿಗರಲ್ಲಿ ಇದೆ. ಬೇರೆಯವರಿಗೆ ತಮ್ಮ ಜಾಗವನ್ನು ಬಿಟ್ಟುಕೊಟ್ಟು ಹಿಂದಕ್ಕೆ ಸರಿಯುವುದು ಅವರ ಸ್ವಭಾವ. ಚಿಕ್ಕಮಗಳೂರು ಮತ್ತು ಶಿವಮೊಗ್ಗಾ ಜಿಲ್ಲೆಗಳಲ್ಲಿ ಬಹುಭಾಗ ಮಲೆಯಾಳಿ ಜನರ ಕೈ ಸೇರಿದೆ; ಸಾವಿರಾರು ಎಕರೆ ಜಮೀನು ಮಾಡಿಕೊಂಡು ಇದ್ದಾರೆ. ಇಲ್ಲಿಗೆ ತಮಿಳರು ಬರುತ್ತಾ ಇದ್ದಾರೆ ಮತ್ತು ಅವರ ಹಕ್ಕನ್ನು ಸ್ಥಾಪನೆ ಮಾಡುತ್ತಾ ಇದ್ದಾರೆ. ಅದು ಬೇರೆ ಮಾತು. ಇವತ್ತು ಕೊಂಕಣಿಯವರು ಮರಾಠಿಯವರ ಜೊತೆಯಲ್ಲಿ ಸೇರಿ, ಸಂಪರ್ಕವನ್ನು ಬೆಳೆಸಿ ಕಾರವಾರ, ಹಳಿಯಾಳ ಮತ್ತು ಸೂಪ ತಾಲ್ಲೂಕುಗಳು ಮಹರಾಷ್ಟ್ರಕ್ಕೆ ಹೋಗಬೇಕೆಂದು ಕೇಳುವುದು ನಮ್ಮ ಮರಾಠಿ ಸ್ನೇಹಿತರಿಗೆ ಯೋಗ್ಯವಲ್ಲ ಎಂದು ಬಹಳ ನಮ್ರವಾಗಿ ಸಂದರ್ಭದಲ್ಲಿ ಹೇಳುತ್ತೇನೆ.

ಶ್ರೀಮಾನ್ ಹೆಗಡೆಯವರು ಗೋವಾವನ್ನು ಮಹಾರಾಷ್ಟ್ರದವರು ಕೇಳುತ್ತಾ ಇದ್ದಾರೆ ಎಂದು ಹೇಳಿದರು. ಗೋವಾದಲ್ಲಿ ಪೋರ್ಚುಗೀಸರ ಭಾಷೆ ಇದೆ. ಮಹಾರಾಷ್ಟ್ರದವರು ಅದನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪ್ರಯತ್ನ ಮಾಡುತ್ತಾ ಇದ್ದಾರೆ. ಕನ್ನಡಿಗರು ಕರ್ನಾಟಕಕ್ಕೆ ಸೇರಿಸಬೇಕೆಂದು ಪ್ರಯತ್ನ ಮಾಡುತ್ತಾ ಇದ್ದಾರೆ. ಆದ್ದರಿಂದ ಇದು ಗೋವಾ ಜನರಿಗೆ ಬಿಟ್ಟಿದ್ದು, ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಚವಾಣ್‌ರವರು ಭಾಷಣ ಮಾಡುತ್ತಾ ಗೋವಾ ಮಹಾರಾಷ್ಟ್ರ ಎಂದು ಹೇಳಿದರು. ಈಗ ಮಹಾರಾಷ್ಟ್ರದವರ ಜೊತೆಯಲ್ಲಿ ಮತ್ತು ಗೋವಾದವರ ಜೊತೆಯಲ್ಲಿ ವಿನಂತಿ ಮಾಡಿಕೊಳ್ಳುವುದು ಏನೆಂದರೆ, ಕರ್ನಾಟಕ ರಾಜ್ಯದಲ್ಲಿರುವ ಕರಾವಳಿ ಪ್ರದೇಶದಲ್ಲಿ ಗೋವಾ ಮತ್ತು ಮಂಗಳೂರು, ಎರಡು ಬಂದರುಗಳನ್ನು ಅಭಿವೃದ್ಧಿ ಮಾಡುವುದಾದರೆ ಮತ್ತುತ ಕರಾವಳಿ ಪ್ರದೇಶವನ್ನು ಅಭಿವೃದ್ಧಿ ಮಾಡುವುದದಾದರೆ ಅದರಿಂದ ಇಡೀ ರಾಷ್ಟ್ರದ ಆದಾಯ, ಸಂಪತ್ತು ಮತ್ತು ಎಲ್ಲ ರೀತಿಯ ಸೌಲಭ್ಯ ಹೆಚ್ಚುತ್ತದೆ. ಕರ್ನಾಟಕಕ್ಕೆ ಇದು ಒಳ್ಳೆಯ ಬಾಗಿಲಾಗುತ್ತದೆ. ಆದ್ದರಿಂದ ನಮ್ಮ ಆಯಾತ ನಿರ್ಯಾತಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆಯೆಂದು ಹೇಳುವುದರ ಜೊತೆಗೆ ಗೋವಾ ಭವಿಷ್ಯ ಕೂಡ ಒಳ್ಳೆಯ ರೀತಿಯಿಂದ ಬೆಳೆಯುವುದಕ್ಕೆ ಸಾಧ್ಯ. ರೈಲ್ವೆಯನ್ನು ನೇರವಾಗಿ ಬೆಳಗಾವಿಯಿಂದ ಮರ್ಮಗೋವಾದವರೆಗೆ ಹಾಕಿದರೆ ಹೆಚ್ಚು ಸೌಲಭ್ಯ ಸಿಕ್ಕುತ್ತದೆ. ನಾವು ಗೋವಾದಿಂದ ಹೊರಟರೆ ಮುಂಬಯಿ ಬಂದರಿಗೆ ಹೋಗಲೇಬೇಕು. ಇದನ್ನು ವಿಮರ್ಶೆ ಮಾಡಿ, ಭೂಪಟ ಇಟ್ಟುಕೊಂಡು ನಿಷ್ಕಲ್ಮಷ ಮನಸ್ಸಿನಿಂದ ಪರಿಶೀಲಿಸಿದರೆ ಗೋವಾದಿಂದ ಮಂಗಳೂರುವರೆಗಿನ ಪ್ರದೇಶವನ್ನು ಒಂದೇ ಆಡಳಿತಕ್ಕೆ ಸೇರಿಸಿದರೆ ಸೌಲಭ್ಯ ಹೆಚ್ಚುತ್ತದೆ. ಅದಕ್ಕೆ ಕೋಟಿಗಟ್ಟಲೆ ನಾವು ಖರ್ಚುಮಾಡಬೇಕಾಗುತ್ತದೆ. ಎಕನಮಿಕಲೀ ವೈಯಾಬಲ್ ನಡೆಸಿಕೊಂಡು ಹೋಗುವಾಗ ಪುನಃ ರಾಜ್ಯ ವಿಂಗಡಿಸಬಹುದು. ಈಗಿರುವ ರೇಖೆಯೇ ಶಾಶ್ವತವೆಂದು ನಾನು ತಿಲಿದುಕೊಂಡಿಲ್ಲ. ಇತಿಹಾಸವಾಗಲಿ ಅಥವ ಭೇರೆ ಹಳೆಯ ಸಂಪರ್ಕವಾಗಲಿ ಈಗ ನಾನು ಹೇಳುವುದಿಲ್ಲ. ಹೇಳಬೇಕೆಂದರೆ ಮಂಗೇಶ ಎಂಬ ಗೋವಾದಲ್ಲಿರುವ ದೇವರು ಕನ್ನಡಿಗರ ದೇವರು, ಹನುಮಂತ ಕನ್ನಡದವನು. ದೇಶದ ಇನ್ನಾವ ಭಾಗದಲ್ಲೂ ದೇವರಿಲ್ಲ. ನಮ್ಮವರೇ ಮುಂಚೆ ಅಲ್ಲಿ ಆಳಿದರೆಂಬುದಕ್ಕೆ ಸಾಕಾದಷ್ಟು ಪುರಾವೆ ಇದೆ. ಕರ್ನಾಟಕದವರೇ ಬಹಳ ಮುಂದೆ ಹೋಗಿ ಹಡಗು ನಡೆಸಿದರೆಂದು ಇತಿಹಾಸ ಇದೆ. ಅದನ್ನೆಲ್ಲ ಹೇಳಲು ನಾನು ತಯರಾಗಿಲ್ಲ. ಇತಿಹಾಸದ ವಿಚಾರವಿರಲಿ, ನಮ್ಮ ದೃಷ್ಟಿ ಭವಿಷ್ಯದ ಮೇಲೆ ನಿಂತಿದೆಯೇ ಹೊರತು ಹಿಂದೆ ನಡೆದುದರ ಮೇಲಿಲ್ಲ. ನಾನು ಗೋವಾ ನಮಗೆ ಕೊಡಿ ಎಂದು ಆಶೆಯ ಆಧಾರದ ಮೇಲೆ ಕೇಳುತ್ತಿಲ್ಲ. ಜನರ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಕನಾಟಕ ಹಿತದೃಷ್ಟಿಯಿಂದ ಗೋವಾದಲ್ಲಿ ಎಲ್ಲಾ ಸವಲತ್ತು ಕಲ್ಪಿಸಿಕೊಡಬಹುದು. ನಾವು ಸರ್ವಸ್ವತಂತ್ರ ರಾಜ್ಯಗಳನ್ನು ಪಡೆದಿಲ್ಲ. ಎಲ್ಲ ವ್ಯವಹಾರಗಳೂ ಕೇಂದ್ರ ಸರ್ಕಾರದ ಕೈಲೇ ಇರುತ್ತವೆ. ಇಡೀ ಭಾರತದ ಅಭಿವೃದ್ಧಿ ಮಾಡಿದರೆ ಎಲ್ಲಾ ರಾಜ್ಯಗಳಿಗೂ ಅನುಕೂಲವಿದೆ. ಈ ದೃಷ್ಟಿಯಿಂದ ನಾನು ಗೋವಾ ಕೇಳುತ್ತೇನೆ; ಮತ್ತು ಕೊಂಕಣಿ ಮಾತನಾಡುವವರು ಕನ್ನಡವನ್ನು ತಮ್ಮ ವ್ಯವಹಾರಭಾಷೆಯಾಗಿ ಒಪ್ಪಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯವರೂ ಒಪ್ಪಿದ್ದಾರೆ.

ಕೊಂಕಣ ಎಂಬುದು ಹಿಂದೆ ಒಂದು ರಾಜ್ಯವಾಗಿತ್ತು. ಆಮೇಲೆ ಅದು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂದು ವಿಭಾಗವಾಯಿತು. ಕೊಂಕಣಿ ಜನರು ಹರಿದಾಡುವ ಜನರು: ಅವರು ಉದ್ಯೋಗವನ್ನು ಹುಡುಕಿಕೊಂಡು ಎಲ್ಲ ಕಡೆಗೂ ಹೋಗುತ್ತಾರೆ. ಮುಂಬಯಿಯಲ್ಲಿ ಮರಾಠ ಜನರು ಅವರನ್ನು ಕೀಳಾಗಿ ಕಾಣುತ್ತಾರೆ. ಆದರೆ ಕೊಂಕಣಿಯವರು ಮರಾಠಿ ಭಾಷೆಯವರಲ್ಲ. ಕಾರವಾರವನ್ನು ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಬೇಕೆಂದಿರುವುದು ಸರಿಯಲ್ಲ. ವಾಸ್ತವಾಂಶ ನೋಡಬೇಕು ಕಾರವಾರ, ಸೂಪ, ಖಾನಾಪುರ, ಹಳಿಯಾಳ ಇಷ್ಟು ಪ್ರದೇಶಗಳನ್ನು ಈಗ ಕೇಳುತ್ತಿದ್ದಾರೆ. ಅಲ್ಲಿರುವವರು ಮರಾಠಿ ಮಾತನಡುವವರು ಎಂದು ಹೇಳುತ್ತಾರೆ. ಆದರೆ ಕೊಂಕಣಿಯವರು ಮರಾಠರಾಗುವುದಿಲ್ಲ. ಭೌಗೋಳಿಕವಾಗಿಯೂ ಕೂಡ ಪ್ರದೇಶ ಕನ್ನಡ ವಿಭಾಗದಲ್ಲೇ ಸೇರಿದೆ.

ನಾನು ನಿಪ್ಪಾಣಿ ಮುಂತಾದ ಕನ್ನಡ ಭಾಗಗಳನ್ನು ಸೂಕ್ಷ್ಮವಾಗಿ ನೋಡಿ ತಿಳಿದು ಕೊಂಡಿದ್ದೇನೆ. ಆ ಭಾಗದ ಎಲ್ಲ ಪಟ್ಟಣಗಳಲ್ಲೂ ನಮ್ಮವರು ಹೆಚ್ಚು ಸಂಖ್ಯೆಯಲ್ಲಿ ವ್ಯವಹಾರ ಉದ್ಯಮಗಳಲ್ಲಿ ನಿರತರಾಗಿದ್ದಾರೆ. ಸೊಲ್ಲಾಪುರ ನಮ್ಮ ಕೈಬಿಟ್ಟು ಹೋಗುವುದಕ್ಕೆ ಕಾರಣವಿದೆ. ಅವರು ಹೆಚ್ಚಾಗಿ ಊರುಬಿಟ್ಟು ಹೊರಗಡೆಗೆ ಹೋಗುತ್ತಾರೆ. ಎಲ್ಲ ಪೇಟೆಗಳಲ್ಲಿಯೂ ಹೆಚ್ಚಿನ ವ್ಯಾಪಾರಗಳನ್ನು ಇಟ್ಟುಕೊಂಡಿದ್ದಾರೆ. ಹಾಗೆ ಇತಿಹಾಸವನ್ನು ನೊಡಿ ಹೇಳುವುದಾದರೆ, ನಮ್ಮ ಕನ್ನಡ ಜನರು ಹಿಂದೆ ಮಧೂರೆಯ ತನಕ ಕೂಡ ಹೋಗಿದ್ದರು ಎಂದು, ಈಗ ಭಾಗಗಳು ಹರಿದು ಹೋಗಿವೆ ಎಂದೂ ಹೇಳಬಹುದು. ಈಗ ಅಲ್ಲಿರುವ ಕೆಲವು ಹಳ್ಳಿಗಳಲ್ಲಿಯೂ ಕನ್ನಡ ಮಾತನಾಡುವ ಭಾಷೆಯನ್ನು ಅಲ್ಲಿಯವರು ಲಿಂಗಾಯಿತರ ಭಾಷೆ ಎಂದು ಹೇಳುತ್ತಿದ್ದರು. ಅಲ್ಲಿದ್ದ ಮುಲ್ಕಿ ಭಾಷೆಯಲ್ಲೇ ವ್ಯವಹಾರಗಳನ್ನು ಮಾಡುತ್ತಿದ್ದರು. ಇದು ಅಲ್ಲಿ ಸಾವಿರಾರು ವರ್ಷಗಳಿಂದಲೂ ಬೆಳೆದುಕೊಂಡೇ ಬಂದಿರತಕ್ಕಂಥದ್ದು. ಹಾಗೆ ಈಗ ಅಕ್ಕಲ್‌ಕೋಟೆ ಹಾಗೂ ಸೋಲಾಪುರ ಈ ಭಾಗಗಳಲ್ಲಿ, ಅಲ್ಲಿನ ಜನ ಮಾತನಾಡುವ ಭಾಷೆಯನ್ನು ನೋಡಿದರೆ ಅವರು ಒಂದೆರಡು ಶಬ್ದಗಳನ್ನು ಉಪಯೋಗಿಸಿದರೆ ಅದರ ಜೊತೆಯಲ್ಲಿ ಕೆಲವು ಮರಾಠಿ ಹಾಗೂ ಉರ್ದು ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ. ಈ ಭಾಗಗಳನ್ನು ನಾವು ಪುನಃ ಪಡೆಯಬೇಕು. ಅದಕ್ಕಾಗಿ ನಮ್ಮ ಜನರು ವೋಟು ಮಾಡಿ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನುವಂತಹ ವಾದಗಳನ್ನು ಮಾಡುವುದು ಸಮಂಜಸವಲ್ಲ. ನಮಗೇ ನಿಪ್ಪಾಣಿ ಪ್ರದೇಶ ಬೇಕು ಎಂದರೆ ಕೇಳಿ, ಬೆಳಗಾಂ ಭಾಗ ನಮಗೇ ಬೇಕು ಎಂದು ಕೇಳಬಹುದು. ಅದನ್ನು ಕೊಡಬೇಕೆಂದು ಕೇಳುವಾಗ ನೀವುಗಳು ತರಹದ ಒಂದು ಅಂಕೆ ಸಂಖ್ಯೆಗಳನ್ನು ಇಲ್ಲಿ ಕೊಡುವುದರಿಂದ ಏನಾಗುತ್ತದೆ ಎಂದರೆ ಸರಿಯಾದ ಬೆಳಕನ್ನು ಚೆಲ್ಲುವುದಕ್ಕೆ ಬದಲಾಗಿ ಕತ್ತಲೆಯನ್ನು ಜಾಸ್ತಿ ಮಾಡಿಕೊಂಡಂತಾಗುತ್ತದೆ. ನಾವು ಇಂದು ಭಾರತದಲ್ಲಿ ಬಾಲ್ಕನೈಸೇಷನ್ನು ಮಾಡಲು ಹೊರಟಿಲ್ಲ, ಇದಕ್ಕಿಂತ ಹೆಚ್ಚಿಗೆ ಏನುಮಾಡಿದ್ದಾರೆಂದು ರಾಜ್ಯಕ್ಕೆ ಹೊಂದಿಕೊಂಡು ಇರತಕ್ಕ ಸಾಮಾನ್ಯವಾದ ಭಾಗಗಳಲ್ಲಿ ಅಲ್ಲಿರುವ ಭಾಷೆಯ ಆಧಾರದ ಬೇಡಿಕೆಯನ್ನು ಈಡೇರಿಸಬಹುದು. ಆದರೆ, ಅಲ್ಲಿನ ಜನ ಸುರಕ್ಷಿತವಾಗಿದ್ದು ಹೊಂದಿಕೊಂಡು ಹೋಗುತ್ತಿದ್ದರೆ ಅಂತಹ ಪ್ರದೇಶಗಳನ್ನು ಪಡೆಯಬೇಕೆಂದು ಒತ್ತಾಯ ಮಾಡಬೇಕಾಗಿಲ್ಲ. ಇಲ್ಲಿ ಜನಸಂಖ್ಯೆಯನ್ನು ಅದಲುಬದಲು ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ನಾನು ಮಾನ್ಯ ಸ್ನೇಹಿತರಾದ ಶ್ರೀಮಾನ್ ವಿ.ಎಸ್. ಪಾಟೀಲರಲ್ಲಿ ವಿನಂತಿ ಮಾಡಿಕೊಳ್ಳುವುದು ನಮ್ಮ ಸೂಕ್ತವಾದ ಸಮಂಜಸವಾದ ಮತ್ತು ಯೋಗ್ಯವಾದ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿದರೆ, ಅದನ್ನು ಸರಕಾರ ಮಾನ್ಯ ಮಾಡಬಹುದು. ಅದರ ಜೊತೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ನೀವೆಲ್ಲರೂ ಅಂತಹ ಒಂದು ವಾತಾವರಣವನ್ನು ಅವರಿಗೆ ಕಲ್ಪಿಸಿಕೊಡಿ ಎಂದು ನಾನು ಕೇಳುತ್ತೇನೆ. ಶ್ರೀಮಾನ್ ಕದಂರವರು ಹೇಳುವಂತೆ ಕಾರವಾರವನ್ನು ಕೊಡಬೇಕೆಂದು ಕೇಳಿದರೆ ಅವರ ಆಸೆ ಈಡೇರುವುದಿಲ್ಲ. ಇದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಕೊಟ್ಟು ಮತ್ತು ತೆಗೆದುಕೊಳ್ಳುವ ಒಂದು ಮನೋಭಾವವನ್ನು ಕಲ್ಪಿಸುವಾಗ ಅದಕ್ಕೆ ತಕ್ಕ ವಾತವರಣ ಕಲ್ಪಿಸಬೇಕು ಮತ್ತು ಯಾರೂ ಇದನ್ನು ಟೇಪು ತೆಗೆದುಕೊಂಡು ಹೋಗಿ ಅಳತೆ ಮಾಡಬೇಕಾಗಿಲ್ಲ. ಮೇಲಾಗಿ ಯಾರೂ ಇದನ್ನು ಟೇಪು ತೆಗೆದುಕೊಂಡು ಹೋಗಿ ಅಳತೆ ಮಾಡಬೇಕಾಗಿಲ್ಲ. ಮೇಲಾಗಿ ಬಾರ್ಡರಿನಲ್ಲಿರುವ ಕೆಲವು ಹಳ್ಳಿಗಳಲ್ಲಿ ಕನ್ನಡ ಮಾತನಾಡುವ ಜನರಿದ್ದರೂ ಅವರುಗಳು ಮರಾಠಿ ಭಾಷೆಯಾಡುವ ಪ್ರದೇಶದಲ್ಲಿದ್ದರೂ ಅಲ್ಲಿಯೇ ಉಳಿಯಬೇಕು.

ಬಹುದಿನಗಳಿಂದ ಕನ್ನಡ ಬಹುದಿನಗಳಿಂದ ಕನ್ನಡ ಮಾತನಾಡುವ ಜನ ಮರಾಠಿ ಭಾಷೆಯಾಡುವ ಜನರಾಗಿರಬಹುದು ಮತ್ತು ಅವರು ಅಲ್ಲಿಯೇ ನೆಲಸಿರುವುದರಿಂದ ಮರಾಠಿಗರೊಂದಿಗೆ ಮುನಿಸಿಪಾಲಿಟಿಗಳಿಗೆ ಹಾಗೂ ಗ್ರಾಮ ಪಂಚಯಿತಿಗಳಿಗೆ ಚುನಯಿತರಾಗಿ ಬಂದಿರಬಹುದು. ಆದ್ದರಿಂದ ಇವೊತ್ತು ನಾವು ಯಾವ ಕಾರಿಡಾರನ್ನೂ ಕೇಳುತ್ತಿಲ್ಲ. ಭಾಷೆ ನಿಜವಾಗಿಯೂ ಜೀವಂತ ಸಂಬಂಧವನ್ನು ಇಚ್ಛಿಸುತ್ತದೆ. ದೇಶದಲ್ಲಿ ಭಾಷೆಯ ಆಧಾರದ ಮೇಲೆ ಜನರು ತಮ್ಮ ಜೀವನವನ್ನು ರೂಪಿಸಿಕೊಂಡು ಆಯಾ ಪ್ರದೇಶಗಳಲ್ಲಿ ಸವಲತ್ತುಗಳನ್ನು ಪಡೆಯುತ್ತ ಬಂದಿದ್ದಾರೆ. ಅಂತಹ ನೇರವಾದ ಗೆರೆಯನ್ನು ಇಲ್ಲಿ ಎಳೆಯುವುದಕ್ಕೆ ಶಕ್ಯವಿಲ್ಲ. ಬೆಳಗಾಂ ಹತ್ತಿರ ಇದೆ ಎಂದರೆ ನಾಳೆ ಕೊಲ್ಲಾಪುರ ಇನ್ನೊಂದು ಭಾಗಕ್ಕೆ ಸಮಿಪವಾಗಿದೆ ಎಂದು ಹೇಳಬಹುದು. ಈ ರೀತಿಯಾಗಿ ಇಂತಹ ಅಂಕೆ ಸಂಖ್ಯೆಗಳನ್ನು ತಂದು ತೋರಿಸಿದರೆ ಅದು ತಪ್ಪಾಗುತ್ತದೆ. ಯಾವ ಕಾರಿಡಾರ್ ನಮಗೆ ಬೇಕಿಲ್ಲ ಮತ್ತು ನೇರವಾದ ಯಾವ ಗೆರೆಯೂ ಬೇಕಿಲ್ಲ. ಸಾಮಾನ್ಯವಾಗಿ ದೇಶದ ಜನರೊಡನೆ ಅನುಸರಿಸಿಕೊಂಡು ಹೊಂದಾಣಿಕೆ ಮಾಡಿಕೊಂಡರೆ ಸಾಧ್ಯವಾಗಬಹುದು. ಅಂತಹ ಒಂದು ಸುಧಾರಣೆಯನ್ನು ಮಾಡಲಿಕ್ಕೆ ಸಾಧ್ಯವಿಲ್ಲವೇ ಎನ್ನುವುದನ್ನು ಸ್ವಲ್ಪ ವಿಚಾರಮಾಡಬೇಕು. ಇವೊತ್ತು ಗ್ರಾಮವನ್ನು ಒಂದು ಘಟಕವನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಒಂದು ವಾದ ಬೆಳೆದುಕೊಂಡು ಬಂದಿದೆ. ಗ್ರಾಮಾಂತರದೊಳಗಿರುವ ಜನರ ಎಲ್ಲರ ಅಭಿಪ್ರಾಯಗಳನ್ನು ತಿಳಿದುಕೊಂಡು ವಿಚಾರ ಮಾಡಬೇಕಾಗುತ್ತದೆ. ಈ ಹಿಂದೆ ಮಾನ್ಯ ಪಾಟಸ್ಕರ್‌ರವರು ಒಂದು ಸಲಹೆ ತಂದಿದ್ದರು. ಅದು ಎರಡು ಮೂರು ಗ್ರಾಮಗಳನ್ನು ಭಾಷೆಯ ಆಧಾರದ ಮೇಲೆ ಸೇರಿಸುವಾಗಿ ಒಂದು ಗ್ರಾಮ ನದಿಯ ಆಚೆ ದಂಡೆಯಲ್ಲಿದ್ದರೆ ಅದನ್ನು ಒಂದೇ ಭಾಗಕ್ಕೆ ಸೇರಬೇಕು ಎಂದು ಆ ನೀತಿಯನ್ನು ಅನ್ವಯಿಸುವುದಕ್ಕಾಗುವುದಿಲ್ಲ ಎಂದು ಹೇಳಿದ್ದರು. ಇವೊತ್ತು ಸಾಧಾರಣವಾಗಿ ಜನಕ್ಕೆ ಅನುಕೂಲವಿದೆಯೇ ಇಲ್ಲವೇ ಎನ್ನುವುದನ್ನು ವಿಚಾರ ಮಾಡಬೇಕಾಗಿದೆ. ಆ ಮಟ್ಟದಲ್ಲಿ ಹಾನಿಯೇನೂ ಇಲ್ಲ ಎಂದು ಕಂಡು ಬಂದರೆ ಗ್ರಾಮವನ್ನು ಘಟಕವನ್ನಾಗಿ ಇಟ್ಟುಕೊಂಡು ಇನ್ನುಳಿದ ಬೇರೆ ಭಾಗಗಳನ್ನೂ ಸೇರಿಸಿಕೊಂಡು ಹೊಂದಾಣಿಕೆ ಮಾಡುವುದಕ್ಕೆ ಯಾವ ಅಭ್ಯಂತರವೂ ಇರಬಾರದು.

ಈ ಸಭೆಯಲ್ಲಿ ಮಾನ್ಯ ಸದಸ್ಯರಾದ ಶ್ರೀಮಾನ್ ಪಾಟೀಲರವರು ತಂದರುವ ನಿರ್ಣಯವನ್ನು ಪರಿಶೀಲನೆ ಮಾಡುವುದಕ್ಕೆ ನಾಲ್ಕು ಕಾರಣಗಳನ್ನು ಕೊಟ್ಟಿದ್ದಾರೆ. ಮೊದಲನೆಯದು, ಭಾಷಾ ಸಂಖ್ಯಾತರು, ಭಾಷೆಯ ಸಂಖ್ಯ ಎಂದರೆ ಶೇಕಡಾ ಎಪ್ಪತ್ತರಷ್ಟು ಒಂದೇ ಭಾಷೆಯನ್ನಾಡುವವರಾಗಿರಬೇಕು, ಹಾಗಿದ್ದರೆ ಒಂದೇ ಭಾಷೆಯ ರಾಜ್ಯಕ್ಕೆ ಸೇರಬೇಕು ಎನ್ನುವುದನ್ನು ರಾಜ್ಯ ಪುನರ್ವಿಂಗಡಣೆ ಮಾಡಿದಾಗ ಅಲ್ಲಿದ್ದವರು ಒಪ್ಪಿದ್ದಾರೆ; ಬೇರೆಯವರೂ ಒಪ್ಪುತ್ತಾರೆ. ಕೇವಲ ಒಂದು ಭಾಷೆಯ ಮೇಲೆ ನಿರ್ಧಾರ ಮಾಡುವುದಿಲ್ಲ. ಭಾಷೆಯಾಡವವರೂ ಮೆಜಾರಿಟಿಯಲ್ಲಿರಬೇಕು. ಹಾಗಿಲ್ಲದಿದ್ದೆ ಹೊಂದಾಣಿಕೆ ಮಾಡುವುದು ಕಷ್ಟವಾಗುತ್ತದೆ. ಭಾಷೆಯಾದ ಮೇಲೆ ಎರೆಡನೆಯದು ಪ್ರಾದೇಶಿಕ ಸಾಮೀಪ್ಯದ ಬಗ್ಗೆ ಹೇಳಿದ್ದಾರೆ. ಯಾವೂದೇ ಭಾಗದಲ್ಲಿ ಹೊಂದಾಣಿಕೆಯಾಗಬೇಕಾದರೆ ಹೆಚ್ಚು ಜನಸಂಖ್ಯೆ ಇರುವವರು ಅಲ್ಲಿದ್ದಾರೆಂದು ಇನ್ನೋಂದು ರಾಜ್ಯಕ್ಕೆ ಸೇರಿಸುವುದಕ್ಕೆ ಆಗುವುದಿಲ್ಲ. ಗ್ರಾಮವನ್ನು ಕನಿಷ್ಠ ಘಟಕವನ್ನಾಗಿ ಮಾಡುವಾಗಿ ಬಹುಸಂಖ್ಯಾತರ ಅಭಿಪ್ರಾಯಗಳನ್ನಿಟ್ಟುಕೊಂಡು ನಿರ್ಧಾರಮಾಡಬೇಕೆಂದು ಮಾನ್ಯ ಪಾಟೀಲರು ಇಲ್ಲಿ ಹೇಳಿದ್ದಾರೆ. ಈ ವಿಷಯದಲ್ಲಿ ಸಾಮಾನ್ಯ ಜನರ ಅಭಿಪ್ರಾಯಗಳು ಈಗಾಗಲೇ ವ್ಯಕ್ತವಾಗಿವೆ. ಅಲ್ಲದೆ ಕೆಲವು ಜನರು ಗ್ರಾಮಪಂಚಾಯಿತಿಗಳಿಗೆ ಹಾಗೂ ವಿಧಾನಸಭೆಗೆ ಚುನಾಯಿತರಾಗಿ ಬಂದಿರಬಹುದು. ಅದರೆ ನಮ್ಮ ಸ್ನೇಹಿತರಾದ ಶ್ರೀಮಾನ್ ಕದಂರವರು ಹೇಳುವ ಹಾಗೆ ಮರಾಠಿ ಭಾಷೆಗಾಗಿ ಎಂದು ಇಲ್ಲಿ ಅವರನ್ನು ಚುನಾಯಿಸಿ ಕಳುಹಿಸಿದ್ದಾರೆ ಎನ್ನುವ ವಾದ ಸರಿಯಿಲ್ಲ. ವೋಟುಗಳನ್ನು ಜನ ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ ಎನ್ನುವ ಪ್ರಶ್ನೆ ಬೇರೆ.

ಗ್ರಾಮ ನೌಕರರು

೨೪ ಡಿಸೆಂಬರ್ ೧೯೬೪

ಹಳೆ ಮೈಸೂರಿನಲ್ಲಿ ಈ ಪಟೇಲ್ ಶ್ಯಾನುಭೋಗರುಗಳು ತಮ್ಮ ವಂಶಪಾರಂಪರ್ಯವಾಗಿ ಬಂದ ಹಕ್ಕನ್ನು ರದ್ದುಪಡಿಸಿದ್ದಾರೆಂದು ಹೈಕೋರ್ಟಿನಲ್ಲಿ ಕೇಸನ್ನು ಹಾಕಿದ್ದರು. ಆದರೆ, ಈಗ ಆ ಹಕ್ಕನ್ನು ರದ್ದುಪಡಿಸಿದ್ದರಿಂದ ತಪ್ಪೇನೂ ಆಗಿಲ್ಲವೆಂದು ಹೈಕೋರ್ಟಿನಲ್ಲಿ ನಿರ್ಣಯವಾಗಿದೆ. ಇದರಿಂದ ಹಳೇ ಮೈಸೂರಿನಲ್ಲಿ ಈ ಗ್ರಾಮಾಧಿಕಾರಿಗಳನ್ನು ನೇಮಿಸತಕ್ಕ ವಿಚಾರದಲ್ಲಿ ಸ್ವಲ್ಪ ನಿಧಾನವಾಗಿದೆ. ಇನ್ನೂ ಬೊಂಬಾಯಿ ಕರ್ನಾಟಕ ಪ್ರಾಂತ್ಯದಲ್ಲಿ ಅನೇಕರನ್ನು ಈಗಾಗಲೇ ನೇಮಕಮಾಡಲಾಗಿದೆ. ಇಲ್ಲಿ ಇನ್ನೂ ನೇಮಕ ಮಾಡದೆ ಇರುವುದರಿಂದ ಕೆಲವಾರು ತೊಂದರೆಗಳು ಉಂಟಾಗಲು ಅವಕಾಶವಾಗಿದೆ. ಹೀಗೆ ನಮ್ಮ ಹಳೇ ಮೈಸೂರಲ್ಲಿ ಈ ಗ್ರಾಮನೌಕರರುಗಳ ನೇಮಕದ ಬಗ್ಗೆ ತಡವಾದ್ದರಿಂದ ಈ ಕೆಲಸಗಳು ಏನಾಗಿವೆ, ರೆಕಾರ್ಡುಗಳೂ ಏನಾಗಿವೆ. ಎಂಬ ಒಂದು ಸ್ವಚ್ಛ ಚಿತ್ರ ನಮ್ಮ ಮುಂದೆ ಇಲ್ಲ. ನಮ್ಮ ಭೂಸುಧಾರಣೆಯ ಕಾನೂನು ಕಾರಣಾಂತರಗಳಿಂದ ಜಾರಿಗೆ ಬರುವುದು ನಿಧಾನವಾದ್ದರಿಂದ ಇದು ಜಾರಿಗೆ ಬರುವುದರೊಳಗೆ ಅನೇಕ ಜನ ಗೇಣೀದಾರರಗೆ ತುಂಬಾ ಅನ್ಯಾಯವಾಗುವುದೆಂದು ತಿಳಿದು ಬಂದಿದೆ. ಈ ಪಹಣಿ ಲೆಕ್ಕಗಳನ್ನು ಬರೆಯುವಾಗ ಅದರಲ್ಲಿ ಅನೇಕ ಲೋಪದೋಷಗಳಾಗುತ್ತವೆ. ಅವುಗಳಲ್ಲಿ ದೊಡ್ಡದಾದ ಲೋಪದೋಷವೆಂದರೆ ಅನೇಕ ವರ್ಷಗಳಿಂದ ಜಮೀನು ಮಾಡುತ್ತಿರುವ ಗೇಣೀದಾರನ ಹೆಸರನ್ನು ಕೈಬಿಟ್ಟು, ಯಾವತ್ತೊ ಕೃಷಿಮಾಡದಂಥ ಜನರ ಹೆಸರನ್ನು ಈ ಪಹಣೀ ಲೆಕ್ಕದಲ್ಲಿ ಸೇರಿಸುತ್ತಿದ್ದಾರೆ. ಇದನ್ನು ಈ ದಿವಸ ತಾವುಗಳೆಲ್ಲರೂ ನೋಡಬಹುದು. ಇದರಿಂದ ಅನೇಕ ಗೇಣಿದಾರರಿಗೆ ಬಹಳ ತೊಂದರೆಯಾಗುತ್ತದೆ. ಈ ವಿಚಾರಕ್ಕೆ ಸರ್ಕಾರ ಕೂಡಲೇ ಗಮನಕೊಡಬೇಕೆಂದು ಹೇಳುತ್ತೇನೆ. ಯಾವ ಜಮೀನಿನಲ್ಲಿ ಸಾಕಷ್ಟು ನೀರಾವರಿ ಸೌಕರ್ಯವಿಲ್ಲದೆ ಬೆಳೆಬರುವುದಿಲ್ಲವೋ ಅಂಥಾ ಜಮೀನುಗಳಿಗೂ ಮತ್ತು ಸಣ್ಣ ಲಾಭದಾಯಕವಲ್ಲದ ಖುಷ್ಕಿ ಹಿಡುವಳಿಗಳಿಗೂ ಜಮೀನು ಕಂದಾಯವನ್ನು ಸಂಪೂರ್ಣವಾಗಿ ವಿನಾಯಿತಿ ಮಾಡುವುದು. ಈ ದಿವಸ ಈ ಜಮೀನುಗಳಲ್ಲಿ ಬೆಳೆಯಾಗಲೀ ಆಗದಿರಲೀ ಆತನು ಭೂಮಾಲೀಕನಾದ್ದರಿಂದ ಕಂದಾಯವನ್ನು ಕೊಡಬೇಕೆಂದಿದೆ. ಆದುದರಿಂದ ಇಂಥ ಅನಾಥ ಲಾಭದಾಯಕವಲ್ಲದ ಹಿಡುವಳಿದಾರುಗಳಿಗೆ ಕಂದಾಯವನ್ನು ಪೂರ್ತಿಯಾಗಿ ವಿನಾಯಿತಿ ಮಾಡಬೇಕೆಂದು ಸಲಹೆ ಮಾಡುತ್ತೇನೆ. ಆದರೆ ಇದರಲ್ಲಿ ಇನ್ನೂ ಅನೇಕ ಸೂಕ್ತವಾದ ಒಂದು ಕ್ಲಾಜನ್ನು ಅಳವಡಿಸಬೇಕೆಂದು ಹೇಳುತ್ತೇನೆ. ಅನೇಕ ತಿದ್ದುಪಡಿಗಳನ್ನು ಮಾಡಬೇಕಾಗಿರುವುದರಿಂದ, ಅದಕ್ಕೆಲ್ಲಾ ಅವಕಾಶ ಮಾಡಿಕೊಟ್ಟು ಅನಂತರ ಇದನ್ನು ಪಾಸ್ ಮಾಡುವುದು ಉತ್ತಮ ಎಂದು ಹೇಳಿ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.