ಗೇಣಿದಾರರ ಸಂಕಷ್ಟ

೨೧ ಡಿಸೆಂಬರ್ ೧೯೬೭

ಈಗ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಹೊಸನರ, ಷಿಕಾರಿಪುರ, ಸೊರಭ, ಶ್ರೀರಂಗಪಟ್ಟಣ ಇತ್ಯಾದಿ ಮಲೆನಾಡಿನ ಹಾಗೂ ಇನ್ನಿತರ ತಾಲ್ಲೂಕುಗಳಲ್ಲಿ ಗೇಣಿಗೆ ಸಂಬಂಧಪಟ್ಟ ಅಪೀಲುಗಳು ನೂರಾರು ಏತಕ್ಕೆ, ಸಾವಿರಾರು ಗೇಣಿ ವಿವಾದಗಳು ಇತ್ಯರ್ಥವಾಗದೇ ತಹಶೀಲುದಾರರುಗಳ ಕೋರ್ಟಿನಲ್ಲಿ ಬಿದ್ದು, ಸುಮಾರು ಆರೇಳು ವರ್ಷಗಳಿಂದಲೂ ಗೇಣಿದಾರರು ಹಾಗೂ ಜಮೀನುದಾರರು ಒಂದೇ ಸಮನೆ ಕೋರ್ಟಿಗೆ ಹೋಗಿ ಲಾಯರುಗಳಿಗೆ ಫೀ ಕೊಟ್ಟು ಹತವಾಗಿದ್ದಾರೆ. ಅದರಲ್ಲೂ ಎಷ್ಟೋ ಕಡೆಗಳಲ್ಲಿ ಲಾಯರುಗಳಿಗೆ ದುಡ್ಡು ತೆತ್ತು ಭಿಕಾರಿಗಳಾಗಿಯೂ ಆಗಿ ಮನೆ ಮರಗಳನ್ನೂ ಇದಕ್ಕಾಗಿ ಕಳೆದುಕೊಂಡಿದ್ದಾರೆ. ಮೊದಲಿಗೆ ಈ ಕೇಸುಗಳನ್ನು ಇತ್ಯರ್ಥ ಮಾಡುವ ಡೆಪ್ಯುಟಿ ತಹಶೀಲುದಾರರುಗಳು ಎಂದಿದ್ದರು. ಈಗ ಅವರುಗಳು ಇಲ್ಲ. ಹೋಗುವುದಿಲ್ಲ. ನಾನು ಹೇಳುವುದು ಕಾಂಗ್ರೆಸ್ಸಿನವರು ಒಪ್ಪಿದಂತಹ ತತ್ವ ಎಂದರೆ ಉಳುವವನಿಗೆ ನೆಲ ಕೊಡುವುದು ಎಂದು ‘ಲ್ಯಾಂಡ್ ಟು ದಿ ಟೆಲ್ಲರ್’ ಎನ್ನುವ ಒಂದು ನಿರ್ಣಯದಂತೆ ಒಂದು ದೃಢವಾದ ತೀರ್ಮಾನವನ್ನೂ ಮಾಡಿದ್ದೇವೆ ಎಂದು ಮೇಲಿಂದ ಮೇಲೆ ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಯಾವ ರೈತರಿಗೂ ಇದರ ಪ್ರಯೋಜನವಾಗುವಂತೆ ಮಾಡಲಿಲ್ಲ. ಸರಕಾರದವರೇನೋ ಭೂ ಸುಧಾರಣೆ ಜರಿಗೆ ತರುತ್ತೇವೆ, ಇದರಿಂದ ಬಡರೈತರಿಗೆ ಉಪಕಾರವಾಗುತ್ತದೆ ಎಂದು ಬಾಯಲ್ಲಿ ಹೇಳುತ್ತಾರೆಯೇ ವಿನಃ ಕಾರ್ಯತಃ ಏನೂ ಮಾಡುತ್ತಿಲ್ಲ, ಇದರ ಬಗ್ಗೆ ಬೇಕಾದಷ್ಟು ಚರ್ಚೆ ಕೇಂದ್ರ ಸರಕಾರದಲ್ಲಿ ಹಾಗೂ ರಾಜ್ಯ ಸರಕಾರಗಳಲ್ಲಿ ನಡೆದವು. ಮತ್ತು ಎಲ್ಲ ಜವಾಬ್ದಾರಿಗಳನ್ನು ಪಾರ್ಲಿಮೆಂಟಿನವರೇ ಹಿಡಿದುಕೊಳ್ಳದೇ ಆಯಾ ರಾಜ್ಯ ಸರಕಾರಗಳಿಗೆ ಇದರ ಜವಾಬ್ದಾರಿಗಳನ್ನು ಬಿಟ್ಟಿದೆ ಎಂದೂ ಹೇಳಿದರು. ಇದರಿಂದಾಗಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿ ಸೀಲಿಂಗ್‌ ಇರಬೇಕು ಎಂದು ನಿಗದಿ ಮಾಡಿದ್ದಾರೆ. ಇದಕ್ಕಾಗಿ ಬೇರೆ ಬೇರೆಯಾದ ಕಾನೂನೂಗಳನ್ನು ಮಾಡಿದರು. ನಮ್ಮ ರಾಜ್ಯದಲ್ಲಿ ಇದರ ಬಗ್ಗೆ ಬಹಳವಾಗಿ ಮಾಡುತ್ತೇವೆ ಎಂದು ಹೇಳುತ್ತಾರೆಯೇ ಹೊರತು ಏನನ್ನೂ ಮಾಡಲಿಲ್ಲ ಎನ್ನುವುದನ್ನು ನೋಡಿದರೆ ಈ ಭೂಸುಧಾರಣೆಯ ಬಗ್ಗೆ ಅವರು ಉಪೇಕ್ಷೆ ತೋರಿಸಿ ಕೆಲಸವಾಗದಂತೆ ಮಾಡುತ್ತಿರುವ ಈ ಭ್ರಷ್ಟಸರಕಾರ ಎಂದರೆ ಈ ಮೈಸೂರು ಸರಕಾರ. ಇಂತಹ ಒಂದು ಕಾನೂನು ಮಾಡುತ್ತೇವೆ ಎಂದು ಮೊದಲನೇ, ಎರಡನೇ ಹಾಗೂ ಮೂರನೇ ಯೋಜನೆಗಳನ್ನು ಮಾಡಿದರೂ ಕೂಡ ಏನೂ ಆಗಲಿಲ್ಲ. ಇದಕ್ಕಾಗಿ ಬೇಕಾದಷ್ಟು ವಿವರಗಳನ್ನು ಸಂಗ್ರಹಿಸಿದರು. ಜತ್ತಿಯವರ ಕಮಿಟಿ ಎಂದು ಮಾಡಿ ಅವರ ವರದಿಯಾಯಿತು. ಅವರ ರಿಪೋರ್ಟು ಬಂದಮೇಲೆ ರಾಜ್ಯ ಸರಕಾರ ಭೂಸುಧಾರಣೆ ವಿಷಯದಲ್ಲಿ ಕಾರ್ಯಗತ ಮಾಡುತ್ತೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಪ್ಪತ್ತು ವರ್ಷಗಳಿಂದಲೂ ಗೇಣಿದಾರರನ್ನು ಕಾಪಾಡಿಕೊಂಡು ಬರುತ್ತೇವೆ ಎಂದು ಹೇಳುತ್ತಲೇ ಬರುತ್ತಿದ್ದೀರಿ. ೧೯೪೭ ರಲ್ಲೇ ಮೊರಾರ್ಜಿ ಕಮಿಟಿಯಂತೆ ಗೇಣಿ ಕಾನೂನು ಬಂದಾಗಿತ್ತು. ಅದರಂತೆ ಒಪ್ಪಿದರೆ ಈ ಭೂಸುಧಾರಣೆಯನ್ನು ಜಾರಿಗೆ ತರಬಹುದಾಗಿತ್ತು. ಆದರೆ, ಆಗ ಭೂಸುಧಾರಣೆ ಮಾಡಲಿಲ್ಲ. ಹೀಗೆ ೧೯೪೭ ರಿಂಧ ೨೯೬೭ರವರೆಗೆ ಸುಮಾರು ಇಪ್ಪತ್ತು ವರ್ಷಗಳಿಂದಲೂ ಇದನ್ನು ಮುಂದೂಡುತ್ತಾ ನಿಧಾನ ಮಾಡುತ್ತಲೇ ಬಂದಿದ್ದಾರೆ. ತಮಗೆ ಬೇಕಾದ ಸಿಬ್ಬಂದಿ ಇದ್ದೇ ಇದೆ. ಸರ್ವೆ ಕೆಲಸಕ್ಕೆ ಹೇಗೆ ಸರ್ವೆ ಮಾಡುತ್ತೀರೋ ಹಾಗೆ ಎಲ್ಲ ಹಳ್ಳಿಗಳಲ್ಲಿಯೂ ಇರತಕ್ಕ ರಿಕಾರ್ಡುಗಳ ಆಧಾರದ ಮೇಲೆಯೇ ರೈತರಿಗೆ ಖಾತೆ ಹಾಕಿಸಿ ಕೊಡುವುದು ಮಾತ್ರವಲ್ಲ, ಮಿನಿಮಂ ಪ್ರೀಮಿಯಂ ಇಂತಿಷ್ಟು ಎಂದು ಗೇಣಿದಾರರಿಗೆ ಕೊಡಬೇಕು ಎಂದು ಹೇಳಿದರೆ ಅದು ಕ್ರಮಬದ್ಧವಾಗುವುದಿಲ್ಲ. ಅದುದರಿಂದ, ನಾನು ಇಲ್ಲಿ ಕೊನೆಯದಾಗಿ ಒಂದು ಮಾತನ್ನು ಒತ್ತಾಯದಿಂದ ಹೇಳುತ್ತಿದ್ದೇನೆ. ಭೂಸುಧಾರಣೆಯನ್ನು ಸುಮಾರು ಇಪ್ಪತ್ತು ವರ್ಷಗಳಿಂದಲೂ ಜಾರಿಗೆ ತರುವುದಕ್ಕೆ ಆಗದೇ ಇರುವುದರಿಂದ ಸರಿಯದ ವ್ಯವಸ್ಥೆ ಮಾಡದೇ ಎಷ್ಟೋ ಕಡೆಗಳಲ್ಲಿ ವಕೀಲರುಗಳಿಗೆ ಹೆಚ್ಚು ಫೀಸುಗಳನ್ನು ಕೊಟ್ಟು ಜಮೀನುದಾರರುಗಳು ಅವರವರ ಜಮೀನನ್ನು ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ರಿಸಂಪ್‌ನ್‌ ಕೇಸುಗಳು ದಿನೇ ದಿನೇ ಹೆಚ್ಚುತ್ತಿವೆ. ಎಷ್ಟೋ ಕಡೆಗಳಲ್ಲಿ ಭೂಮಿಗಳನ್ನೂ ಬಿಡಿಸುತ್ತಿದ್ದಾರೆ. ಆದುದರಿಂದ ತಾವು ಗೇಣಿದಾರರಿಗೆ ಏನು ಭೂಮಿ ಕೊಡತ್ತೇವೆಂದು ಹೇಳುತ್ತಿದ್ದೀರಿ ಅದರಂತೆ ಏನೂ ಆಗಲಿಲ್ಲ. ಇದನ್ನು ಬೇಗ ಸರಕಾರ ಕಾರ್ಯಗತಮಾಡಬೇಕು; ಇಲ್ಲದಿದ್ದರೆ ಗೇಣಿದಾರರುಗಳಾಗಿರುವವರು ೧೯೬೮ನೇ ಇಸವಿಯಲ್ಲಿ ನಾವು ಇನ್ನು ಮುಂದೆ ಯಾರಿಗೂ ಗೇಣಿ ಕೊಡುವುದಿಲ್ಲ. ಪ್ರೀಮಿಯಂ ಕೊಡುವುದಕ್ಕೆ ಆಗುವುದಿಲ್ಲ ಮತ್ತು ನಿಮ್ಮ ಕಾನೂನಿಂದ ಹಾಗೂ ನಿಮ್ಮ ಆಜ್ಞೆಗಳಿಂದ ಏನು ಆಗುವುದಿಲ್ಲ ಎಂದು ಹೇಳುತ್ತಲೇ ಗೇಣಿದಾರರು ಬರುತ್ತಿದ್ದಾರೆ. ಇದರಿಂದ ಅವರೇ ಮುಂದೆ ಸ್ವತಂತ್ರ ಅಧಿಕಾರಿಗಳಾಗಿ ವರ್ತನೆ ಮಾಡುತ್ತಾರೆ. ಈ ಒಂದು ಭಾವನೆ ಎಲ್ಲರಲ್ಲಿಯೂ ಈಚೆಗೆ ಬರುತ್ತಿದೆ. ಇದನ್ನು ತಾವು ನಾನು ಸರಕಾರಕ್ಕೆ ಕೊಡುವ ನೋಟೀಸು ಎಂದು ಬೇಕಾದರೂ ಪರಿಗಣನೆಗೆ ತೆಗೆದುಕೊಳ್ಳಬಹುದು.

ರಾಜಭವನ

೨೧ ಡಿಸೆಂಬರ್ ೧೯೬೭

ಸ್ವಾಮಿ, ರಾಜಭವನದ ಬಗ್ಗೆ ಹಿಂದೆ ಈ ಊರಿನಲ್ಲಿರುವ ಬೆಂಗಳೂರು ಪ್ಯಾಲೇಸನ್ನು ಸುಮಾರು ನಾಲ್ಕು ಕೋಟಿಯಷ್ಟು ಬೆಲೆಗೆ ಕೊಂಡುಕೊಳ್ಳಬೇಕೆಂದು ರಾಜ್ಯ ಸರಕಾರದಲ್ಲಿತ್ತು. ಈಚೆಗೆ ಆಯೋಚನೆಯನ್ನು ಬಿಟ್ಟಿದಾರೆ ಎಂದು ಗೊತ್ತಾಯಿತು. ಆ ನಂತರ ಈಗ ಇರುವ ರೆಸ್ಸಿಡೆನ್ಸಿ ರಾಜಭವನವನ್ನು ಇನ್ನೂ ಚೆನ್ನಾಗಿ ರಿಪೇರಿ ಮಾಡಬೇಕು ಎಂದು ಇದರುವರೆಗೆ ಎಷ್ಟು ಹಣ ಕೊಟ್ರೂ ಅದು ಸಾಲದು ಎಂದು ಪುನಃ ಕೇಳುತ್ತಿದ್ದಾರೆ. ಇಂತಹ ವ್ಯವಹಾರಗಳನ್ನು ಮಾಡುವುದು ಬಿಡಬೇಕು ಎಂದು ಇಲ್ಲಿ ಹೇಳಲು ಇಷ್ಟಪಡುತ್ತೇನೆ. ಇಲ್ಲಿರುವ ಡಿಮ್ಯಾಂಡು ೧೦ರಲ್ಲಿ ಪುನಃ ಫರ್ನಿಚರುಗಳು ಹಾಳಾಗಿವೆ ಎಂದು ಏನೇನೋ ಹೇಳಿ ಸುಮಾರು ಎರಡು ಲಕ್ಷ ರೂಪಾಯಿಗಳೂ ಬೇಕೆಂದು ಅದಕ್ಕೆ ಒಪ್ಪಿಗೆ ಕೇಳುತ್ತಿದ್ದಾರೆ. ಇದೇನು ಸರಕಾರ ಉಳಿತಾಯ ಮಾಡುವ ರೀತಿಯೇ? ಇದು? ಇದು ಕಾಂಗ್ರೆಸ್ಸಿನವರ ನೀತಿಯೇ? ಇದೇನು ಯಾವ ರೀತಿಯ ಭೋಗದ ಕಲ್ಪನೆ ಮಾಡಬೇಕೆಂದು ಇದ್ದೀರಿ ಎನ್ನುವುದು ನನಗಂತೂ ಅರ್ಥವಾಗುವುದಿಲ್ಲ. ಅಲ್ಲಿ ಅಲಂಕಾರಕ್ಕಾಗಿ ಹಾಸಲು ಹೊಸ ಮ್ಯಾಟ್‌ಗಳು ಮತ್ತು ಬೆಲೆ ಬಾಳುವ ಕಾರ್ಪೆಟ್‌ಗಳನ್ನು ಕೊಂಡಿದ್ದೀರಿ! ಇದನ್ನೆಲ್ಲಾ ಸರ್ಕಾರದ ಖರ್ಚಿನಲ್ಲಿ ವೆಚ್ಚ ಮಾಡಬಾರದು. ಯಾವ ಹಾಸಿಗೆ ಮೇಲೆ ಗೌರ್ನರ್ ಮಲಗಬೇಕು? ಯಾವ ಸೋಫಾದ ಮೇಲೆ ಅವರು ಕುಳಿತುಕೊಳ್ಳೇಕು ಎಂದು ನಿರ್ಧರಿಸಿ ಅದನ್ನೆಲ್ಲಾ ಒದಗಿಸಬೇಕಾದರೆ ಏನಾದರೂ ನಿಮ್ಮ ಪಿತೃ – ಪಿತಾಮಹರು ಆಸ್ತಿ ಪಾಸ್ತಿ ಇಟ್ಟಿದ್ದರೆ ಅದರಲ್ಲಿ ಖರ್ಚುಮಾಡಿ. ಒಂದು ಕೆರೆ ಕಟ್ಟುವುದಕ್ಕಗಿ ೧೦ ಸಾವಿರ ರೂಪಾಯಿ ಖರ್ಚುಮಾಡುವುದಕ್ಕೆ ಯೋಗ್ಯತೆ ಇಲ್ಲ. ಪ್ರಾಥಮಿಕ ಶಾಲೆ ಕಟ್ಟುವುದಕ್ಕಾಗಿ ದುಡ್ಡು ಇಲ್ಲ, ರಸ್ತೆಗಳನ್ನು ಮಾಡಿಸುವುದಕ್ಕೆ ದುಡ್ಡು ಇಲ್ಲ. ರೀತಿ ಗೌರ್ನರ್ಗಾಗಿ ಲಕ್ಷ, ಲಕ್ಷ, ೧೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವುದು ಎಂದರೇನು? ಯಾವ ಮಹಾ ದೇವೇಂದ್ರ ಲೋಕದವರು ನೀವೆಲ್ಲಾ! ಯಾವ ಸುಪ್ಪತ್ತಿಗೆ ಮೇಲೆ ಇದ್ದೀರಿ ನೀವು? ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡುತ್ತಾ ಇರುವುದನ್ನು ನೋಡಿದರೆ ಜನರಿಗೆ ಹಾಕಿಕೊಳ್ಳುವುದಕ್ಕೆ ಬಟ್ಟೆ ಇಲ್ಲ, ಬೆತ್ತಲೆ ತಿರುಗುತ್ತಿದ್ದಾರೆ. ಇದನ್ನು ಸಾರ್ವಜನಿಕರೂ, ಶಾಸಕರೂ ವಿಚಾರ ಮಾಡಬೇಕು ಎಂದು ಹೇಳುತ್ತೇನೆ.

ಜನತೆ ಮತ್ತು ಜನ ಭಾಷೆಗಳು

೨೬ ಫೆಬ್ರುವರಿ ೧೯೬೮

ಮಾನ್ಯ ರಾಜ್ಯಪಾಲರು ಈ ಸದನದ ಚರಿತ್ರೆಯಲ್ಲೇ ಮೊದಲನೇ ಬಾರಿ ತಮ್ಮ ಭಾಷಣವನ್ನು ಕನ್ನಡದಲ್ಲಿ ಮಾಡಿ ಒಂದು ಸತ್ ಸಂಪ್ರದಾಯವನ್ನು ಹಾಕಿಕೊಟ್ಟಿದ್ದಾರೆ. ಅಲ್ಲದೆ ಕನ್ನಡ ನಾಡು ಮತ್ತು ಕನ್ನಡ ನುಡಿಗೆ ಗೌರವ, ಆದರ ಮತ್ತು ಅಭಿಮಾನವನ್ನು ತೋರಿಸಿದ್ದಾರೆ. ಅದಕ್ಕಾಗಿ ನನು ನನ್ನ ಮತ್ತು ಈ ಸದನದ ಹಾಗೂ ಕನ್ನಡನಾಡಿನ ಎಲ್ಲ ಜನರ ಪರವಾಗಿ ಕೃತಜ್ಞತಾಪೂರ್ವಕವಾಗಿ ಅಭಿನಂದನೆಗಳನ್ನು ನಮ್ಮ ಮಾನ್ಯ ರಾಜ್ಯಪಾಲರಿಗೆ ಅರ್ಪಿಸಲು ಇಚ್ಛಿಸುತ್ತೇನೆ. ಒಂದು ವಿಷಯವನ್ನು ಮಾತ್ರ ನಾನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಬಹುಸುತ್ತೇನೆ. ರಾಜ್ಯಪಾಲರು ಕನ್ನಡೇತರರಾಗಿದ್ದರೆ ಆಗ ಅವರು ಈ ಸದನದಲ್ಲಿ ಯಾವ ಭಾಷೆಯಲ್ಲಿ ಮಾತನಾಡಬಹುದು ಎನ್ನುವ ಪ್ರಶ್ನೆ. ಅವರು ಹಿಂದಿ ಬರತಕ್ಕವರಾಗಿದ್ದರೆ ಅವರು ಹಿಂದಿಯಲ್ಲಿ ಭಾಷಣ ಮಾಡುತ್ತರೆ. ಅದನ್ನು ತಕ್ಷಣ ಕನ್ನಡದಲ್ಲಿ ಭಾಷಾಂತರ ಮಾಡುತ್ತಾರೆ. ಹಿಂದಿ ಬಾರದೆ ಇರುವವರು ಇದ್ದರೆ ಅವರು ತಮ್ಮದೇ ಆದ ಭಾರತೀಯ ಭಾಷೆಯಲ್ಲಿ, ಅವರ ಮಾತೃಭಾಷೆಯಲ್ಲಿ ಭಾಷಣವನ್ನು ಮಾಡುತ್ತಾರೆ. ಅದನ್ನು ಕನ್ನಡಕ್ಕೆ ತಕ್ಷಣ ಭಾಷಾಂತರ ಮಾಡತಕ್ಕ ವ್ಯವಸ್ಥೆಯನ್ನು ಮಾಡಬಹುದು. ಆದ್ದರಿಂದ ನಮ್ಮ ರಾಜ್ಯಪಾಲರು ಈ ಸದನದಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಒಂದುಕಾರಣಕ್ಕಾಗಿಯೇ ಅವರು ಈ ರಾಜ್ಯದಲ್ಲಿ ರಾಜ್ಯಪಾಲರಾಗಿ ಮುಂದುವರಿಯಬೇಕು ಎಂದು ನಾನು ಒಪ್ಪಿಕೊಂಡವನಲ್ಲ. ಪ್ರತಿವರ್ಷವೂ ಈ ಭಾಷಣದ ಉದ್ದವನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ರಾಜ್ಯಪಾಲರ ಭಾಷಣವು ಒಂದು ದೊಡ್ಡ ಕರಟು ಪುರಾಣ ಇದ್ದ ಹಾಗೆ ಇದೆ. ನಾನು  ಈ ಭಾಷಣವನ್ನು ಕುಳಿತು ಓದಿ ನೋಡಿದೆನು, ‘ಭುವನೇಶ್ವರದ ಬೆಳಕು’ ಏನಾದರೂ ಇದರ ಮೇಲೆ ಬಿದ್ದಿದೆಯೋ ಏನೋ ಎಂದು ಕಾಣುತ್ತದೆ. ಸಮಾಜವಾದದ ಕೃತಿ ರಾಜ್ಯಪಾಲರ ಭಾಷಣದಲ್ಲಿ ಎಲ್ಲೂ ನನಗೆ ಕಂಡುಬರಲಿಲ್ಲ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದಮೇಲೆ ಒಂದು ದೊಡ್ಡ ಅಭ್ಯಾಸ ಏನಾಗಿದೆ ಎಂದರೆ, ಪ್ರತಿ ೫ ವರ್ಷಕ್ಕೊಂದು ಸಲ ಗುರಿಯನ್ನು ಬದಲಾಯಿಸುವುದು ಮತ್ತು ಅದೇ ಕಾರ್ಯಕ್ರಮವನ್ನು ಬದಲಾವಣೆ ಮಾಡದೆ ಕೇವಲ ತನ್ನ ಗುರಿಯನ್ನು ಕಾಲಾಕಾಲಕ್ಕೆ ಬದಲಾಯಿಸುವುದರಿಂದ ಯಾವ ಸಾರ್ಥಕತೆಯೂ ಆಗುವುದಿಲ್ಲ. ಅದಕ್ಕೆ ಈ ಭಾಷಣವೇ ಸಾಕ್ಷಿಯಾಗಿದೆ. ಈಗ ನಮ್ಮ ಮುಂದೆ ಕೆಲವು ಭಾವನಾತ್ಮಕವಾದ ಸಮಸ್ಯೆಗಳಿವೆ; ಅವು ಏನೆಂದರೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ಇಡಬೇಕು ಎನ್ನತಕ್ಕ ಒಂದು ಆಶೆ ಇದೆ. ಇದರ ಬಗ್ಗೆ ನಿರ್ಣಯ ಕೂಡ ಈ ಸಭೆಯಲ್ಲಿ ಒಂದು ಚರ್ಚೆ ಆಯಿತು. ಅದನ್ನು ಮತಕ್ಕೆ ಹಾಕುವ ಸಂದರ್ಭದಲ್ಲಿ ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ನಿಜಲಿಂಗಪ್ಪನವರು ಮಧ್ಯೆ ಪ್ರವೇಶಿಸಿ ಆ ವಿಷಯವನ್ನು ನನಗೆ ಬಿಡಿ, ಅನಂತರ ಈ ಕೆಲಸವನ್ನು ನಾನು ಮಡುತ್ತೇನೆ ಎಂದು ಹೇಳಿದರು. ಆದರೆ ಇದುವರೆಗೂ ಈ ಪ್ರಶ್ನೆ ಸರ್ಕಾರದ ಮುಂದೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಶ್ರೀಮಾನ್ ದೊಡ್ಡ ಮೇಟಿಯವರೂ ಬಹುಶಃ ಈ ಒಂದು ಬೇಡಿಕೆಯನ್ನು ಕೈಬಿಟ್ಟಿದ್ದಾರೋ ಏನೋ ನನಗೆ ಅದು ಗೊತ್ತಿಲ್ಲ. ಹಾಗೆಯೇ ನಮ್ಮ ಕನ್ನಡ ರಾಜ್ಯಕ್ಕೆ ಸೇರಲೇ ಬೇಕದಂತಹ ಕನ್ನಡ ಪ್ರದೇಶಗಳಾದ ಕಾಸರಕಗೋಡು, ಸೊಲ್ಲಾಪುರ ಮುಂತಾದ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರದವರು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಗೋವಾದ ಬಗ್ಗೆ ಮಾತನಾಡುತ್ತಾ ಅದು ನಮ್ಮ ರಾಜ್ಯಕ್ಕೆ  ಸೇರತಕ್ಕಂಥ ಪ್ರದೇಶವಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮಾನ್ಯ ಮರಾಠಿ ಸ್ನೇಹಿತರು ನಮ್ಮನ್ನು ಮುಂಬಯಿ ರಾಜ್ಯಕ್ಕೆ ಬಿಟ್ಟುಕೊಡಿ ಎಂದರು ಈ ಪ್ರಶ್ನೆಯನ್ನು ಯಾವ ರೀತಿ ಬಗೆಹರಿಸಬೇಕು ಎನ್ನುವ ಬಗ್ಗೆ ಹಿಂದೆ ಮುಂಬೈ ಮತ್ತು ಮೈಸೂರು ರಾಜ್ಯದಲ್ಲಿ ಎರಡು ಸಮಿತಿಗಳನ್ನು ನೇಮಿಸಿದ್ದರು. ನಮ್ಮ ಮೈಸೂರಿನಲ್ಲಿ ನೇಮಿಸಿದ್ದ ಸಮಿತಿಗೆ ಶ್ರೀಮಾನ್ಯ ಚನ್ನಯ್ಯನವರು ಅಧ್ಯಕ್ಷರಾಗಿದ್ದರು. ಆ ಬಗ್ಗೆ ಅವರು ಸರ್ಕಾರಕ್ಕೆ ವರದಿಯನ್ನು ಕೊಟ್ಟಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ.

ಇನ್ನು ಕನ್ನಡ ರಾಜ್ಯಭಾಷೆಯಾಗಬೇಕು, ಕನ್ನಡ ವ್ಯವಹಾರ ಭಾಷೆಯಾಗಬೇಕು, ಕನ್ನಡ ಶಿಕ್ಷನ ಮಾಧ್ಯಮವಾಗಬೇಕು ಎನ್ನುವ ಒಂದು ಸಿದ್ಧಾಂತವನ್ನು ಸಾಮಾನ್ಯವಾಗಿ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಅಲ್ಲದೆ ಕನ್ನಡ ರಾಜ್ಯಭಾಷೆ ಆಗಬೇಕು ಎನ್ನುವುದರ ಬಗ್ಗೆ ನಾವು ಒಂದು ಮಸೂದೆಯನ್ನು ಕೂಡ ಇಲ್ಲಿ ಅಂಗೀಕಾರ ಮಾಡಿದ್ದೇವೆ. ಸರ್ಕಾರ ಮಾತ್ರ ವ್ಯವಹಾರದಲ್ಲಿ ತನ್ನ ಧೋರಣೆಯಲ್ಲಿ, ನೀತಿಯಲ್ಲಿ, ಇನ್ನೂ ಇಂಗ್ಲೀಷಿಗೆ  ಗಂಟುಬಿದ್ದು ಕನ್ನಡದ ಅಭಿವೃದ್ಧಿಗಾಗಲೀ ಕನ್ನಡ ಭಾಷೆಯನ್ನು ವ್ಯವಹಾರಕ ಭಾಷೆಯನ್ನಾಗಿ ಮಾಡುವುದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳನ್ನಾಗಲಿ, ಮಾಡಿಕೊಳ್ಳುತ್ತ ಇಲ್ಲ ಎನ್ನುವುದನ್ನು ನಾವು ನೋಡಬಹುದಾಗಿದೆ. ಇದಕ್ಕೆ ಸರ್ಕಾರದವರು ಏನು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೋ ಅವನ್ನು ಆದಷ್ಟು ಬೇಗ ಕೈಗೊಳ್ಳಬೇಕು. ಈಗ ಗ್ರಾಮ ಪಂಚಾಯಿತಿ, ತಾಲ್ಲೂಕು ಬೋರ್ಡು ಇಂಥ ವಿಕೇಂದ್ರಿಕೃತವಾದ ಸಂಸ್ಥೆಗಳಿಗೆ ಇವತ್ತಿಗೂ ಇಂಗ್ಲೀಷ್ ಭಾಷೆಯಲ್ಲಿಯೇ ಸರ್ಕ್ಯುಲರ್‌ಗಳನ್ನೂ ಕಾಗದಗಳನ್ನೂ ಬರೆಯುತ್ತಾರೆ. ಇದು ತೀರ ಅವಮಾನಕರ. ಎಲ್ಲಿಯತನಕ ಸಾಮಂತಷಾಹಿ ಭಾಷೆಯಲ್ಲಿ ಜನತಂತ್ರವನ್ನು ನಡೆಸಿಕೊಂಡು ಹೋಗುತ್ತಾರೆಯೇ ಗೊತ್ತಿಲ್ಲ. ಶ್ರೀಮಾನ್ ಪಿ. ಕೋದಂಡರಾಯರಂಥವರು, ಬ್ರಿಟಿಷ್ ಸಾಮಾಜದಲ್ಲಿ ಬೆಳೆದುಬಂದವರು, ಏನೋ ಒಂದು  ಕನಸನ್ನು ಕಾಣುತ್ತ ಇರಬಹುದು. ದೇಶದಲ್ಲಿ ಇಂಗ್ಲೀಷ್ ಭಾಷೆ ಶಾಶ್ವತವಾಗಿ ಉಳಿಯುತ್ತದೆ ಎಂದು. ಅದು ಅವರಿಗೆ  ಕುರುಡನಿಗೆ ಇರತಕ್ಕ ಒಂದು ಊರುಗೋಲು ಇದ್ದ ಹಾಗೆ. ಅದನ್ನು ಕಿತ್ತುಕೊಂಡರೆ ಅವರ ವ್ಯವಹಾರವೆಲ್ಲ ನಿಂತುಹೋಗುತ್ತದೆ. ಆದುದರಿಂದಲೇ ಅವರು ಆ ಭಾಷೆಯಲ್ಲಿ ವ್ಯವಹಾರವನ್ನು ನಡೆಸಿಕೊಂಡು ಹೋಗುವುದಕ್ಕೆ ಪ್ರಯತ್ನಪಡುತ್ತಾರೆ. ಕೋಟ್ಯಾನುಕೋಟಿ ಜನರ ವ್ಯವಹಾರ, ಅವರ ವಿದ್ಯಾಭ್ಯಾಸ, ಅವರಿಗೆ ನಾವು ವಿಷಯವನ್ನು ತಿಳಿಸತಕ್ಕದ್ದು ಯಾವ ಭಾಷೆಯಲ್ಲಿ ಎನ್ನುವುದರ ಬಗ್ಗೆ ಬಹುಶಃ ಇಲ್ಲಿರತಕ್ಕವರು ಯಾರೂ ಭಿನ್ನಾಭಿಪ್ರಾಯವನ್ನು ಹೊಂದಿಲ್ಲ. ಅದು ಮಾತ್ರ ಮಾತೃಭಾಷೆಯಲ್ಲಿಯೇ ಆಗಬೇಕು, ಪ್ರಾದೇಶಿಕ ಭಾಷೆಯಲ್ಲಿಯೇ ಆಗಬೇಕು, ಅದರ ಬಗ್ಗೆ ಮೈಸೂರು ಸರರ್ಕಾರ ತಡಮಾಡದೆ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಬೇಕು. ಅದಕ್ಕೆ ಬೇಕಾದ ಭಾಷಾಕೋಶ, ಟೈಪ್‌ರೈಟರ್ ಹೀಗೆ ಆ ದಿಕ್ಕಿನಲ್ಲಿ ಏನೇನು ಸೌಲಭ್ಯಗಳು ಬೇಕೋ, ಅವನ್ನೆಲ್ಲ ಒದಗಿಸಬೇಕು. ಜೊತೆಗೆ ಸಾಧ್ಯವಾದಮಟ್ಟಿಗೂ ಹಿಂದಿಯ ಬೆಳವಣಿಗೆಗೆ ಉತ್ತೇಜನವನ್ನೂ ಅದನ್ನು ಕಲಿಯುವುದಕ್ಕೆ ವ್ಯವಸ್ಥೆಯನ್ನೂ ಮಾಡಬೇಕು. ಇವತ್ತು ಯಾರೋ ಕೆಲವರು ಹಿಂದಿ ರಾಷ್ಟ್ರಭಾಷೆಯಾಗಬೇಕು ಎನ್ನುವ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇರುವುದಕ್ಕೆ ಸಾಧ್ಯವೇ ಇಲ್ಲ. ಹಿಂದಿ ಬಿಟ್ಟರು ಬೇರೆ ಭಾಷೆ ರಾಷ್ಟ್ರಭಾಷೆಯಾಗುವುದಕ್ಕೆ ಸಾಧ್ಯವೂ ಇಲ್ಲ. ಈ ದಿಕ್ಕಿನಲ್ಲಿ ಮೈಸೂರು ದೇಶ ಸ್ವಲ್ಪ ದೂರದೃಷ್ಟಿಯಿಂದ, ಎಚ್ಚರಿಕೆಯಿಂದ ಕೆಲಸಕಾರ್ಯಗಳನ್ನು ಆರಂಭಮಾಡಬೇಕೆಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ.

ಕಾಂಗ್ರೆಸ್ ವಸ್ತುಪ್ರದರ್ಶನಕ್ಕೆ ಜಾಗ

ಮಾರ್ಚ್ ೧೯೬೯

ಮಾನ್ಯ ಅಧ್ಯಕ್ಷರೇ, ಸುಭಾಷ್ ನಗರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ವಸ್ತು ಪ್ರದರ್ಶನವನ್ನು ನಡೆಸುವ ಸಲುವಾಗಿ ಸ್ಥಳವನ್ನು ೯೯ ವರ್ಷಗಳ ಗುತ್ತಿಗೆಗೆ ಕೊಟ್ಟಿದ್ದಾರೆ. ಅಥವ ಕೊಡುತ್ತಾರೆ ಎಂಬ ವಿಷಯವನ್ನು ಕೇಳಿ ಗಾಬರಿಗೊಂಡ ನಾವು ಈ ಎರಡೂವರೆ ಗಂಟೆ ಚರ್ಚೆಗೆ ಅನುಮತಿಯನ್ನು ಪಡೆದುಕೊಂಡಿದ್ದೇವೆ. ಈಗ ತಾನೆ ಮಾತನಾಡಿದ ಸಾಗರ ಕ್ಷೇತ್ರದ ಸದಸ್ಯರು ಹಾಲು ಹಸುಳೆ. ಇಷ್ಟು ಹೇಳಿ ನನ್ನ ವಿಚಾರ ಸ್ವಲ್ಪ ಹೇಳುತ್ತೇನೆ. ಅದಕ್ಕೆ ಅವಕಾಸ ಕೊಡಬೇಕು. ನಾನು ೧೯೪೨ರಲ್ಲಿ ಎಸ್. ಎಸ್. ಎಲ್. ಸಿ. ಓದುತ್ತಿದ್ದಾಗ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಚಳವಳಿಯನ್ನು ಗಾಂಧೀಜಿಯವರು ಆರಂಭಿಸಿದ್ದರು ಅದರಲ್ಲಿ ಭಾಗವಹಿಸಿ ಜೈಲಿಗೆ ಹೋದೆ.

೬ – ೮ ತಿಂಗಳ ಜೈಲುವಾಸ ಅನುಭವಿಸಿದ್ದೇನೆ. ಆಗ ನಾನು ಯುವಕ, ಕಾಂಗ್ರೆಸ್ ಸದಸ್ಯನಾಗಿದ್ದೆ. ೧೯೪೮ರಲ್ಲಿ ನಾಸಿಕ್ ಸಮ್ಮೇಳನದಲ್ಲಿ ಕಾಂಗ್ರೆಸ್ ಬಂಡವಳಶಾಹಿಗಳ ಕೈಗೊಂಬೆ ಎನ್ನುವ ಅಭಿಪ್ರಾಯ ಬಂದು, ನಾವು ಕಾಂಗ್ರೆಸ್ಸನ್ನು ಬಿಟ್ಟವರು. ಆದ್ದರಿಂದ ಪಕ್ಷದ ದೊಷಣೆ ಮಾಡುವಂತಹ ವಿಷಯ ಏನೂ ಇಲ್ಲ. ನಾನು ೧೯೪೬ – ೪೭ರಲ್ಲಿ ಕಾಂಗ್ರೆಸ್ ವಸ್ತುಪ್ರದರ್ಶನವನ್ನು ನೋಡಿದ್ದೇನೆ. ಕಾಂಗ್ರೆಸ್ ಅಧಕಾರಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ಕಾಂಗ್ರೆಸ್ ವಸ್ತುಪ್ರದರ್ಶನ ಈ ನಗರದಲ್ಲಿ ನಡೆದುಕೊಂಡು ಬಂದಿದೆ. ಅವತ್ತು ಇದ್ದದ್ದು ಏನು? ಗಾಂಧೀಜಿಯವರ ತತ್ವವನ್ನು ಪ್ರತಿಪಾದನೆ ಮಾಡುವುದಕ್ಕೆ, ಸ್ವಸಹಾಯ, ಸ್ವಧರ್ಮ, ಸ್ವದೇಶಿ ಎಂದು ಹೇಳಿ ಗಾಂಧೀಜಿಯವರು ಏನು ಪ್ರತಿಪಾದನೆ ಮಾಡಿದರು ಆ ಒಂದು ಭಾವನೆಗಳನ್ನು, ಈ ದೇಶದ ಜನತೆಯಲ್ಲಿ ನುಡಿಯ ಮೂಲಕ ಅವರನ್ನು ಕಾಂಗ್ರೆಸ್‌ಗೆ ಸೆಳೆಯಬೇಕು ಅನ್ನುವ ಕಾರಣಕ್ಕಾಗಿ ಅವತ್ತು ವಸ್ತು ಪ್ರದರ್ಶನವನ್ನು ಮಾಡಿದರು. ಅವತ್ತು ಈ ಸರ್ಕಾರ ಇರಲಿಲ್ಲ. ಎಲ್ಲರನ್ನೂ ಕೈಕಾಲು ಕಟ್ಟಿ, ಖಾದಿ ಟೋಪಿಯನ್ನು ಹಾಕಿ, ನೂಲು ತೆಗೆಯುವುದನ್ನು ಏರ್ಪಾಡು ಮಾಡಿ ಅತ್ವಶ್ಥಮ್ಮನವರು, “ಅಕ್ಕ ತಕಲಿ ಇದೇ, ಪರಮ ಪಾವನವೋ” ಎಂದು ಹಾಡಿದರಲ್ಲಾ ಅದು ಇವತ್ತು ಏನಾಗಿದೆ? ಸಾಗರದ ಸದಸ್ಯರು ಮಾಡಿದ ಭಾಷಣ ಕೇಳಿ ಬಹಳ ವ್ಯಥೆ ಆಯಿತು. ನನಗೆ ಅವರು ಉತ್ಸಾಹಶಾಲಿಗಳು, ತರುಣರು, ಎಂ.  ಎ. ಬಿ. ಎಲ್. ಓದಿದ್ದಾರೆ. ಆಗರ್ಭ ಶ್ರೀಮಂತರು, ತುಂಬ ಅಡಿಕೆ ಬೆಳೆಯುತ್ತಾರೆ. ನನ್ನ ಸ್ನೇಹಿತರೂ ಹೌದು, ಆದರೆ ಅವರು ಒಂದು ವಿಷಯವನ್ನು ಮರೆಯುತ್ತಾರೆ. “ಬಲಿಗೆ ಎಂದೇ ತಂದ ಕರು ತಾ ಬಲ್ಲುದೇ ತನ್ನ ಕೊಲ್ಲುವುದ” ಎಂಬುದನ್ನು ಇನ್ನು ಸ್ವಲ್ಪ ಹೊತ್ತಿಗೆ ಕೊಲ್ಲಬೇಕೆಂದಿರುವಾಗ ಕೊಲ್ಲುವುದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅದಕ್ಕೆ ಮುಂಚೆ ಮೂದಲಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ನಾವು ಹೇಳುವ ಅಂಶ ಏನೂ ಎಂಬುದನ್ನು ತಾವು ತೀಳಿದುಕೊಳ್ಳಬೇಕು.

ಈ ವಸ್ತು ಪ್ರದರ್ಶನ ಸುಮಾರು ೧೯೪೬ರಿಮದಲೇ ಅಲ್ಲಿ ನಡೆಯುತ್ತಿದೆ. ಅದರಲ್ಲಿ ಅನೇಕ ಗುಣದೋಷಗಳು ಇರುತ್ತವೆ. ಈ ಬೆಂಗಳೂರು ನಗರದಲ್ಲಿ ವಿರೋಧ ಪಕ್ಷದವರಿಗೆ ಭಾಷಣಗಳನ್ನು ಮಾಡುವುದಕ್ಕೆ ಒಂದು ಸರಿಯಾದ ಜಾಗವಿಲ್ಲ. ಹೊರಗಡೆಯಿಂದ ಯಾರಾದರೂ ಒಬ್ಬ ದೊಡ್ಡ ವ್ಯಕ್ತಿಗಳೂ ಬಂದು ಭಾಷಣ ಮಾಡಬೇಕೆಂದರೆ ಸ್ಥಳವಿಲ್ಲ. ಆದ್ದರಿಂದ ನಾವು ಈ ವಿಷಯವನ್ನು ಇಷ್ಟು ಗಹನವಾಗಿ ಮತ್ತು ಗಂಭೀರವಾಗಿ ಚರ್ಚೆ ಮಾಡಬೇಕಾದ ಅಗತ್ಯ ಉಂಟಾಯಿತು.

ಈ ನಗರದಲ್ಲಿ ಇಷ್ಟೊಂದು ಸ್ಥಳಾಭಾವ ಇರುವಾಗ, ಇತ್ತೀಚೆಗೆ ರಾಜಕೀಯ ಪರಸ್ಥಿತಿ ಬೇರೆ ಒಂದು ಉಲ್ಬಣ ಸ್ಥಿತಿಗೇರುತ್ತಿರುವಾಗ, ಕೋಟ್ಯಾನುಕೋಟಿ ರೂಪಾಯಿಗಳ ಬೆಲೆಬಾಳತಕ್ಕ ಬಹಳ ಆಯಕಟ್ಟು ಸ್ಥಳವನ್ನು ಅದರಲ್ಲೂ ಒಬ್ಬ ದೊಡ್ಡ ರಾಷ್ಟ್ರನಾಯಕನ ಹೆಸರನ್ನು ಇಟ್ಟಿರತಕ್ಕ ಸುಭಾಷ್ ನಗರ ಮೈದಾವನ್ನು ಶಾಶ್ವತವಾಗಿ ಕಟ್ಟಡಗಳನ್ನು ಕಟ್ಟಿಸಿಕೊಳ್ಳಲು ಜಾಗವನ್ನು ಒಂದು ರಾಜಕೀಯ ಪಕ್ಷಕ್ಕೆ ಕೊಡತಕ್ಕದ್ದು ಸರಿಯೇ ತಪ್ಪೇ ಅನ್ನುವುದನ್ನು ನಾವೀಗ ವಿಚಾರ ಮಾಡಬೇಕಾಗಿದೆ. ನನಗೆ ವೈಯಕ್ತಿಕವಾಗಿ ಆ ಕಾಂಗ್ರೆಸ್ ಸಂಸ್ಥೆಯ ಮೇಲೇನೂ ದ್ವೇಷವಿಲ್ಲ. ಏಕೆಂದರೆ ನಾವೆಲ್ಲರೂ ಆ ಕಾಲಗರ್ಭದಲ್ಲಿ ಕರಗಿ ಹೋಗತಕ್ಕವರಾಗಿದ್ದೇವೆ. ಈಗಾಗಲೇ ಈ ಮನೆಯಲ್ಲಿ ಹಿರಿಯ ನಾಯಕರಾದ ಶ್ರೀ ಎಚ್. ಎಂ. ಚನ್ನಬಸಪ್ಪನವರು ಆ ಜಾಗವನ್ನು ಕಾಂಗ್ರೆಸ್ ಪಾರ್ಟಿಗೆ ೯೯ ವರ್ಷದ ಗುತ್ತಿಗೆ ಕೊಟ್ಟಿರುವುದು ಬಹಳ ಅನುಚಿತವಾದದ್ದು ಎಂದು ಹೇಳಿದ್ದಾರೆ. ಆದರೆ ಇನ್ನು ಒಂದು ನೂರು ವರ್ಷಗಳು ಕಳೆದ ನಂತರ ಯಾರು ಇರುತ್ತಾರೋ – ಯಾರೂ ಇರುವುದಿಲ್ಲವೋ ಅನ್ನುವಾಗ ಇನ್ನು ಈ ಸಂಸ್ಥೆಗಳ ಪಾಡೇನು? ಮಹಾತ್ಮಾ ಗಾಂಧಿ ಹುಟ್ಟಿ ಇಲ್ಲಿಗೆ ಆಗಲೇ ಒಂದು ನೂರು ವರ್ಷಗಳು ಆದವು. ಆದರೆ ಗಾಂಧೀಜಿಯ ಕೊಲೆಯಾದದ್ದು ೧೯೪೮ರಲ್ಲಿ, ಅದು ಶುಕ್ರವಾರ, ಈ ದಿವಸ ಗುರುವಾರ ಬೆಳಕು ಹರಿದರೆ ಮತ್ತೆ ಶುಕ್ರವಾರ. ಆದರೆ ಆ ಗಾಂಧೀಜಿ ಇದ್ದಾರೇನು? ಇಲ್ಲ, ಅವರ ಫೋಟೋ ಇಟ್ಟುಕೊಂಡಿದ್ದಾರೆ ಆ ಪಕ್ಷದವರು, ಆ ಪಕ್ಷವರು ತಮ್ಮ ಕೈಲಿ ಸರ್ಕಾರ ಇದೆ ನಾವೇನು ಮಾಡಿದರೂ ನಡೆಯುತ್ತದೆ ಎಂದರೆ ಹೇಗೆ ಸಾಧ್ಯ? ಈ  ದಿವಸ ಮಂತ್ರಿಗಳಾಗಿರ ತಕ್ಕವರು ಯಾರು ಯಾರಿಗೆ ಏನೇನು ಆಶೋತ್ತರಗಳನ್ನು ಹೇಲೆ ಲೈಸೆನ್ಸ್‌ಗಳನ್ನು ಕೊಡುತ್ತೇವೆ ಪರ್ಮಿಟ್‌ಗಳನ್ನು ಕೊಡುತ್ತೇವೆ ಎಂದು ಆ ಸರ್ಕಾರಿ ಮಳಿಗೆಗಳಿಂದ ಹಣವನ್ನು ವಸೂಲಿ ಮಾಡಿಕೊಂಡಿಲ್ಲವೆ? ಹೆಸರಿಗೆ ಸರ್ಕಾರಿ ಮಳಿಗೆಗಳು: ಅವುಗಳ ಆದಾಯ ಕಾಂಗ್ರೆಸ್ ಪಕ್ಷಕ್ಕೆ. ಅವರು ಕೊಡುವ ಲೆಕ್ಕಕ್ಕಿಂತ ಹೆಚ್ಚು ಹಣ ಕಾಂಗ್ರೆಸ್ ಪಕ್ಷಕ್ಕೆ ಸಂಪಾದನೆಯಾಗಿದೆ. ಖಾಸಗಿ ಜನರಿಗೆ ಮತ್ತು ಯಾರು ಯಾರೀಗೆ ಏನೇನು ಲೈಸನ್ಸ್‌ಗಳನ್ನು ಕೊಡುವುದಾಗಿ ಹೇಳಿ ಹಣವನ್ನು ವಸೂಲ್ಮಾಡಿದ್ದಾರೆ ಅನ್ನುವುದನ್ನೆಲ್ಲಾ ಸವಿಸ್ತಾರವಾಗಿ ವಿಚಾರಮಾಡಬೇಕಾಗಿದೆ. ಹಿಂದೆ ಯಾರೋ ಒಬ್ಬರು ಕಾಂಗ್ರೆಸ್‌ ಅಧ್ಯಕ್ಷ ಪದವಿಯಲ್ಲಿದ್ದು ಒಂದು ಕಡೆ ಅವರು ನಡೆಸಿದ ವಸ್ತುಪ್ರದರ್ಶನಕ್ಕೆ ಬಳಸಲಾಗಿದ್ದ ಜಿಂಕ್‌ಷೀಟುಗಳನ್ನು ದುರುಪಯೋಗಪಡಿಸಿದರು ಎಂದು ಯಾರೋ ಒಂದು ಸಣ್ಣ ಪತ್ರಿಕೆಯವರು ಅದನ್ನು ಪ್ರಕಟಣೆಮಾಡಿದ್ದಕ್ಕೆ ನನಗೆ ಆ ಸಂಪಾದಕ ಅಪಮಾನ ಮಾಡಿದ್ದಾನೆ ಎಂದು ಆತನ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೊಡಿದಾಗ ಅವರು ಮಾಡಿರತಕ್ಕ ತಪ್ಪು ಸಾಬೀತಾದ್ದರಿಂದ ಇವರು ತಮ್ಮ ಕೈಲೇ ಅಧಿಕಾರವಿದೆ. ನಾವೇನು  ಮಾಡಿದರೂ ನಡೆಯುತ್ತದೆ ಎಂದು ಆ ಪ್ರದೇಶವನ್ನು ಇವರು ೯೯ ವರ್ಷಗಳವರೆಗೆ ಲೀಜಿಗೆ ಕೊಡಬಹುದೇ? ಅದರಲ್ಲೂ ಅದನ್ನು ಕೊಟ್ಟಿರುವುದು ಯಾರಿಗೆ? ಒಂದು ರಾಜಕೀಯ ಪಕ್ಷಕ್ಕೆ! ಅದರಲ್ಲೂ ತಮ್ಮದೇ ಆದಂಥ ಪಕ್ಷಕ್ಕೆ. ಒಬ್ಬ ಮಂತ್ರಿಗಳು ಹೇಳಿದರು ೯೯ ವರ್ಷಗಳೇಕೆ ೯೯೯ ವರ್ಷಗಳೆಂತಲೇ ಮಾಡಿ ಎಂದು; ಅದನ್ನೂ ಮಾಡಬಹುದು. ಆದರೆ ಅಂಥ ಲೀಜುಗಳನ್ನು ಮಾಡತಕ್ಕ ಕಾಲದಲ್ಲಿ ಇದ್ದದ್ದು ಬ್ರಿಟಿಷ್ ಸ್ವರಾಜ್ಯದ ವಸಾಹತು, ಈ ವಿಚಾರ ಹಾಗಿರಲಿ, ಈ ದಿವಸ ಈ ಚರ್ಚೆಯಲ್ಲಿ ಭಾಗವಹಿಸಿರತಕ್ಕ ನಾಲ್ಕು ಜನ ಮಂತ್ರಿಗಳೂ ನಾಲ್ಕು ರೀತಿಯಲ್ಲಿ ಮಾತನಾಡಿದ್ದಾರೆ. ಅದರ ಮೇಲೆ ಶ್ರೀಮಾನ್ ಅಜೀಜ್‌ ಸೇಟುರವರು ಬೇರೆ ಇನ್ನೂ ನಾವು ಗಾಬರಿ ಆಗುವಂಥ ಒಂದು ಸ್ಟೇಟ್‌ಮೆಂಟನ್ನು ಮಾಡಿದ್ದಾರೆ. ಇದರ ವಿಚಾರದಲ್ಲಿ ಪೂರ್ಣವಾಗಿ ಮಾನ್ಯ ಮುಖ್ಯಮಂತ್ರಿಗಳೂ ಹೇಳುತ್ತಿರುವುದು ನೋಡಿದರೆ ಇದೆಲ್ಲವನ್ನೂ ಮತ್ತೆ ಸಂಪೂರ್ಣವಾಗಿ ವಿಚಾರ ಮಾಡಬೇಕಾಗುತ್ತದೆ. ನಮಗೆ ಈ ವಿಚಾರದಲ್ಲಿ ಪೂರ್ಣ ಮಾಹಿತಿ ಇರುವುದಿಲ್ಲ. ಅದನ್ನು ಮಾನ್ಯ ಮುಖ್ಯಮಂತ್ರಿಗಳೇ ಹೇಳಬೇಕು. ಅಲ್ಲಿ ಎಷ್ಟು ಸ್ಟಾಲುಗಳನ್ನು ಹಾಕಿದ್ದಾರೆ. ಏನು ಎತ್ತ ಎನ್ನುವುದೊಂದೊ ಗೊತ್ತಿರಲಿಲ್ಲವೇ? ಆದರೆ ನನಗೆ ಈ ಜೂಜು, ಲಾಟರಿ, ಸಟ್ಟಾ, ಷೇರ್ ಮಾರ್ಕೆಟ್ ಇವುಗಳಲ್ಲಿ ನಂಬಿಕೆ ಇಲ್ಲ. ನನಗೇನಿದ್ದರೂ ಬೋಧಪ್ರದವಾದ ವಸ್ತು ಪ್ರದರ್ಶನಗಳನ್ನು ಮಾಡುವುದರಲ್ಲಿ ಆಸಕ್ತಿ ಜಾಸ್ತಿ. ಸರ್ಕಾರದವರು ವೇಷ ಹಾಕಿಕೊಂಡು ಜನಗಳಿಗೆ ಏನೇನು ತೋರಿಸಬೇಕೋ ಎಲ್ಲಾ ತೋರಿಸಲಿ. ಬಡಜನಗಳು ಸಂತೋಷಪಟ್ಟು ಸಾಯಲಿ. (ನಗು). ನಾವು ಚಿಕ್ಕವರಾಗಿದ್ದಾಗ ನಮ್ಮ ತಂದೆ ತಾಯಿಗಳು ಕೊಟ್ಟಂತ ಮೂರು ಕಾಸು, ಅರ್ಧಾಣೆ ತೆಗೆದುಕೊಂಡು ಬೊಂಬೆ ಪೆಟ್ಟಿಗೆಯನ್ನು ನೋಡುತ್ತಿದ್ದೆವು. ಅದರಲ್ಲಿ ಈ ಚಿತ್ರ ನೋಡು, ಆ ಚಿತ್ರ ನೋಡು, ರಾಜನನ್ನು ನೋಡು, ಆ ರಾಣಿಯನ್ನು ನೋಡು; ಹೀಗೆ ಒಬ್ಬ ಬೊಂಬೆಪೆಟ್ಟಿಗೆ ಹಿಡಿದುಕೊಂಡು ತೋರಿಸುತ್ತಿದ್ದ. ಹಾಗೆ ನಿಮ್ಮ ಪ್ರದರ್ಶವನ್ನೂ ಸಹ ತೋರಿಸಿ ದಯವಿಟ್ಟು; ಜನರು ಕೂಡ ನಿಮ್ಮ ಪ್ರದರ್ಶನ ನೋಡುವುದಕ್ಕೆ ಕಾತುರರಾಗಿದ್ದಾರೆ. ಆದರೆ ತಾವು ಸ್ಟಾಲುಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ಕೊಡತಕ್ಕದ್ದಲ್ಲ. ಕೊಡುವುದು ತಪ್ಪು, ಶಾಶ್ವತವಾದಂಥ ಒಂದು ವಸ್ತು ಪ್ರದರ್ಶನವನ್ನು ಬೋಧಪ್ರದವಾದ ವಸ್ತುಪ್ರದರ್ಶನವನ್ನು ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮ್ಯೂಜಿಯಂ ರೀತಿಯಲ್ಲಿ ಮ್ಯೂಜಿಯಂ ಪ್ರದರ್ಶನವನ್ನು ಮಾಡವುದಾದರೆ ಅಂತಹ ಮಹಾನುಭಾವರ ಜನ್ಮ ಸಾರ್ಥಕವಾಗುವ ರೀತಿಯಲ್ಲಿ ಸರ್ಕಾರದವರು ನಡೆದುಕೊಳ್ಳುವುದಾದರೆ, ಅದನ್ನು ಮಾಡಿ. ಇದು ಈ ದೇಶದಲ್ಲಿ ಕಾಂಗ್ರೆಸ್ ಚುನಾವಣೆಗೋಸ್ಕರ ಆಗಿದೆಯೆಂದಾಗ ಬಾರದು. ಕಾಂಗ್ರೆಸ್ಸಿನಲ್ಲಿ ಒಂದು ದಿವಸ ಜೈಲಿಗೆ ಹೋದವರ ಪುನರ್ವ್ಯವಸ್ಥೆಯಾಗಿದೆ. ನಿಮ್ಮ ಈ ಕುಟಿಲ ನೀತಿ ನನಗೆ ಗೊತ್ತಿಲ್ಲವೇ? ನೀವು ಸಂಪಾದನೆ ಮಾಡಿರುವ ಹಣ ಸಾಲದೇ? ನೀವು ಕಟ್ಟಿರುವ ಕಾಂಗ್ರೆಸ್ ಆಫೀಸ್ ನನಗೆ ಗೊತ್ತಿಲ್ಲವೇ? ಕಾಂಗ್ರೆಸ್ಸನ್ನು ನಾನು ನೋಡಿಲ್ಲವೇ? ಆದ್ದರಿಂದ ಮಾನ್ಯ ಕಾಂಗ್ರೆಸ್ ಸದಸ್ಯರು ಹೇಳುವಷ್ಟು ಲಘುವಾದ ರೀತಿಯಲ್ಲಿ ನಾವು ಹೇಳುತ್ತಿದ್ದೇವೆಂದು ಭಾವಿಸಬಾರದು. ನಾನು ಕೆಟ್ಟ ಭಾಷೆಯನ್ನು ಬಳಸುವುದಕ್ಕೆ ಇಷ್ಟಪಡುವುದಿಲ್ಲ. ನಿಮ್ಮ ಹಿತದೃಷ್ಟಿಯಿಂದ ಇಂತಹ ಕೆಲಸವನ್ನು ಮಾಡಬಾರದು. ಮಾನ್ಯ ಮುಖ್ಯಮಂತ್ರಿಗಳು ಇದನ್ನೇ ಪ್ರಿಸೀಡೆಂಟ್ ಆಗಿ ಮಾಡಿಕೊಳ್ಳಬೇಡಿ ಎಂದು ಹೇಳಿದರು. ಮಾನ್ಯ ಶ್ರೀ ಚನ್ನಬಸಪ್ಪನವರು ಗೋಯಂಕಾ ಅವರಿಗೆ ಭೂಮಿ ಕೊಟ್ಟಿರುವಾಗ್ಗೆ, ಹಿಂದೂ ಅವರಿಗೆ ಜಾಗ ಕೊಡಬೇಡವೇ ಎಂಬ ಬಗ್ಗೆ ಪ್ರಸ್ತಾಪ ಮಾಡಿದರು. ಅದರಲ್ಲಿಯೂ ತಪ್ಪಿನ ಸರಪಳಿಯಾಯಿತು. ಇವರಿಗೆ ಯಾವ ಕಾನೂನು? ಬಹಳ ತ್ಯಾಗದಿಂದ ಹುಟ್ಟಿದಂಥ ಸಂಸ್ಥೆ. ನೀವು ಪುಣ್ಯವಂತರು. ೨೦ ವರ್ಷಗಳಿಂದಲೂ ಆಡಳಿತ ಪಕ್ಷದಲ್ಲಿ ಇದ್ದೀರಿ. ನಾವು ವಿರೋಧಪಕ್ಷದಲ್ಲಿ ಕೂತು ಬಂದಿದ್ದೇವೆ. ನೀವು ಅಪರಾಧಿಗಳಾಗಿದ್ದೀರಿ. ನಾಳೆ ನಿಮ್ಮನ್ನು ನೇಣು ಹಾಕುವಾಗ ನನ್ನ ಕಣ್ಣಿನಲ್ಲಿ ನೀರು ಬರುತ್ತದೆ. ಏಕೆಂದರೆ, ನಾನು ಸಹೃದಯವಂತ. ಬೇಲೂರು ಶ್ರೀ ನಿವಾಸಯ್ಯಂಗಾರ್ ಅವರನ್ನು ಕೊಲೆಮಾಡಿದಂಥ ಕೃಷ್ಣನನ್ನು ಗಲ್ಲಿಗೆ ಹಾಕಿದ ದಿವಸ ನನ್ನ ಕಣ್ಣಿನಲ್ಲಿ ನೀರು ಬಂದಿದೆ. ನಿಮ್ಮನ್ನು ನಿರ್ವಂಶ ಮಾಡಬೇಕೆಂದು ಹೇಳುವ ಚಾಣಕ್ಯತಂತ್ರ ಮಾಡುವವ ನಾನಲ್ಲ. ನೀವೂ ಮನುಷ್ಯರೇ, ನಾವೂ ಮನುಷ್ಯರೇ, ನಮ್ಮಲ್ಲಿ ಗದ್ದೆ ಹೂಡುವವರು ಇದ್ದಾರೆ. ಕರಿ ಕಾಯುವವರು ಇದ್ದಾರೆ. ಕಂಬಳಿ ನೇಯುವವರು ಇದ್ದಾರೆ. ನಾವು ಏನು  ದೇವಲೋಕದಿಂದ ಬಂದವರಲ್ಲ. ಕಾಂಗ್ರೆಸ್ ವಸ್ತು ಪ್ರದರ್ಶನ ನಡೆಯುವ ಬಗ್ಗೆ ತೀರ್ಮಾನ ಮಾಡುವುದಾದರೆ, ಒಳ್ಳೆಯ ರೀತಿಯ ನಿತಿ ಇರತಕ್ಕ ಪ್ರದರ್ಶನ ಮಾಡಿ. ಅದು ಭೋಧಕವಾಗಿರಲಿ, ಮನರಂಜನೆ ಇರಲಿ, ಕಲಾವಿದರಿಗೆ ಪ್ರೋತ್ಸಾಹ ಕೊಡುವಂತಿರಲಿ. ಸಿನಿಮಾಕ್ಕೆ ಹೋಗುವುದಕ್ಕಾಗದೇ ಇರುವ ಜನಸಾಮಾನ್ಯರು ಎರಡಾಣೆ ಮತ್ತು ನಾಲ್ಕಾಣೆ ಕೊಟ್ಟು ಅದನ್ನು ನೋಡಲಿ, ಅಮೇರಿಕಾ ಮತ್ತು ರಷ್ಯಾದವರು ಇಡೀ ಜಗತ್ತಿನಲ್ಲಿ ಮಾಯಾ ಸೃಷ್ಟಿ ಮಾಡಿದಂತೆ ಮಾಡಿ ಜನತೆಯ ಹಣ ಈ ಬಡ ಸರ್ಕಾರದ ಬೊಕ್ಕಸಕ್ಕೆ ಬಂದು ಬೀಳಲಿ. ದಿವಸಕ್ಕೆ ಸಾವಿರ ರೂಪಾಯಿಗಳು ಬರಲಿ, ತಿಂಗಳಿಗೆ ೩೦ ಸಾವಿರ ರೂಪಾಯಿಗಳು ಬರಲಿ. ಇದರಲ್ಲಿ ಅವರ ರಾಜಕೀಯ ನಡೆಯದೆ ಇರಬೇಕು.

ಜಾತಿ ಮತ್ತು ವರ್ಗರಹಿತ ಸಮಾಜ

೨೫ ಮಾರ್ಚ್ ೧೯೬೯

ಇವೊತ್ತು ನೀವು ವರ್ಣ – ವರ್ಗಗಳನ್ನು ರಚನೆ ಮಾಡಿಕೊಂಡಿದ್ದೀರಿ, ನೀವು ವರ್ಷ ವರ್ಷ, ಏನು ಕೆಲಸ ಮಾಡಿದ್ದೀರಿ? ಅದರ ಮೇಲೆ ವರ್ಣಗಳನ್ನು ರಚನೆ ಮಾಡಿಕೊಂಡಿದ್ದೀರಿ, ಡಾ. ಲೋಹಿಯಾ ಅವರು ವರ್ಣ ಮತ್ತು ವರ್ಗ ಎನ್ನುವುದಕ್ಕೆ ಕ್ಯಾಸ್ಟ್ ಈಸ್ ಆನ್ ಇಮ್ಮೊಬೈಲ್ ಕ್ಲಾಸ್, ಕ್ಲಾಸ್ ಈಸ್ ಎ ಮೊಬೈಲ್ ಕ್ಯಾಸ್ಟ್ ಎಂದು ಹೇಳಿದ್ದಾರೆ. ಇದನ್ನು ನೀವು ವಿಚಾರ ಮಾಡಭೇಕು. ಇವೊತ್ತು ಸಮಾಜವಾದದ ಮಾತು ಹೇಳುವುದಾದರೆ ವರ್ಗಗಳನ್ನು ಮತ್ತು ವರ್ಣಗಳನ್ನು ತೊಡೆದು ಹಾಕುವಂತಹ ದಾರಿಯಲ್ಲಿ ಹೋಗದಿದ್ದರೆ ಸಮಾಜ ವಾದವನ್ನು ತರುವುದು ದೂರದ ಕನಸಾಗಿಯೇ ಉಳಿಯುತ್ತದೆ. ಇತ್ತೀಚೆಗೆ ನಾನು ಒಂದು ಸಾಸರಿ ಯಳಂದುರಿಗೆ ಹೋಗಿದ್ದೆ. ಅಲ್ಲಿ ಸವರ್ಣ ಹಿಂದುಗಳು ಮತ್ತು ಹರಿಜನರು ಜೊತೆಯಲ್ಲಿ ಇದ್ದುದನ್ನು ನೋಡಿ ನನಗೆ ಆಶ್ಚರ್ಯ ಆಯಿತು ಮತ್ತು ಅಲ್ಲಿ ಹರಿಜನರಿಗೆ ಭೂಮಿ, ಕಾಣಿ ಇದ್ದದನ್ನು ನೊಡಿದೆ. ಅವರು ರೇಷ್ಮೆಗೂಡನ್ನು ತೆಗೆಯುತ್ತಾ ಇದ್ದುದನ್ನು ನಾನು ನೋಡಿದೆನು. ನಾನು ರಾಜ್ಯದಲ್ಲಿ ಅನೇಕ ಕಡೆ ನೋಡಿದ್ದೇನೆ. ಆದರೆ ಇಂಥಾ ಅಪೂರ್ವವಾದ ಸವರ್ಣ ಹಿಂದೂಗಳೂ ಮತ್ತು ಹರಿಜನರು ಜೊತೆಯಲ್ಲಿ ಇದ್ದದ್ದನ್ನು ನಾನು ನೋಡಲಿಲ್ಲ. ಅಲ್ಲಿ ಅವರು ರೀತಿ ಇರುವುದನ್ನು ನೋಡಿ ನನಗೆ ತುಂಬ ಸಂತೋಷವಾಯ್ತು. ಹಿಂದೆ ನಮ್ಮಲ್ಲಿ ಜೀತದ ಪದ್ಧತಿ. ಇತ್ತು. ಆಗ ಹರಿಜನರು ಜಮೀನ್ದಾರನ ಮನೆಯಲ್ಲಿ ಜೀತ ಮಾಡುವುದರ ಜೊತೆಗೆ ಅವರ ಮನೆಗೆ ಹರಿಜನರ ಕುಟುಂಬಗಳನ್ನು ಬಳುವಳಿಯಾಗಿ ಕಳುಹಿಸುತ್ತಿದ್ದರು ಎಂದು ಹೇಳುತ್ತಾರೆ. ಹರಿಜನರು ಜಮೀನ್ದಾರನ ಮನೆಯಲ್ಲಿ ಜೀತಕ್ಕೆ ಇದ್ದುಕೊಂಡು ಅವರಿಗೆ ಗುಲಾಮನಾಗಿ ಇರುತ್ತಿದ್ದರು. ಗುಲಾಮ ಎಂದರೆ ಯಾರಿಗೆ ಯಜಮಾನನನ್ನು ಬದಲಾಯಿಸುವ ಅಧಿಕಾರ ಇರುವುದಿಲ್ಲವೋ ಅವನನ್ನು ಗುಲಾಮ ಎಂದು ಹೇಳುತ್ತಾರೆ. ರೀತಿಯ ಜೀತದ ಪದ್ಧತಿ ನಮ್ಮ ರಾಜ್ಯದಲ್ಲಿ ಈಗಲೂ ಇದೆ. ಜೀತದ ಪದ್ಧತಿಯಲ್ಲಿ ತೆಗೆಯುವುದು ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವುದು, ಈ ಪ್ರಶ್ನೆ ಇನ್ನೂ ಕಾಗಗದ ಮೇಲೆ ಪರಿಹಾರವಾಗುತ್ತಿದೆ. ಹಳ್ಳಿಗಳಲ್ಲಿ ಅದು ಇನ್ನೂ ಜೀವಂತ ವಾಗಿಯೇ ಇದೆ. ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಹರಿಜನರಿಗೆ ಪ್ರವೇಶವಿಲ್ಲ. ದೇವಸ್ಥಾನಗಳಲ್ಲಿ ಅವರಿಗೆ ಪ್ರವೇಶ ಇಲ್ಲ. ಮಹಾತ್ಮಾ ಗಾಂಧೀಯವರು ಮಾಡಿದಂತಹ ಚಳುವಳಿಗಳು ಮತ್ತು ಬಸವಣ್ಣನವರು ಮಾಡಿದಂತಹ ಚಳುವಳಿ ಹಾಗೆಯೇ ಉಳಿದಿವೆ. ಚಳುವಳಿಯ ಪರಿಣಾಮ ಏನೂ ಆಗಿಲ್ಲ. ಸವರ್ಣ ಹಿಂದೂಗಳಲ್ಲಿ ಅವರ ಮನಸ್ಸು ಮತ್ತು ಹೃದಯದಲ್ಲಿ ಯಾವೂದೋ ಒಂದು ಭಾಗದಲ್ಲಿ ಅಸ್ಪೃಶ್ಯತೆ ಎನ್ನುವುದು ನಾಡಿ, ಆ ಅಸ್ಪೃಶತೆಯನ್ನು ನಿವಾರಣೆ ಮಾಡಬೆಕಾಗಿದ್ದರೆ ಅದಕ್ಕೆ ದುಡ್ಡು ಖರ್ಚುಮಾಡಿ ಅದನ್ನು ಕಿತ್ತು ಹಾಕಬೇಕು. ಆದ್ದರಿಂದ ನಾವು ವರ್ಣ ರಹಿತ ಮತ್ತು ವರ್ಗರಹಿತವಾದ ಸಮಾಜದ ಪ್ರಯತ್ನ ಮಾಡಬೇಕು. ರಾಜ್ಯಾಂಗದಲ್ಲಿ ಹೇಳಿರುವ ಹಾಗೆ ದೇಶದಲ್ಲಿ ಬಹಳ ಕೆಳಗೆ ಬಿದ್ದಿರತಕ್ಕ ಜನ ಕೆಲವರು ಇದ್ದಾರೆ. ಅವರಿಗೆ ಒಂದು ವಿಶೇಷವಾದ ಸವಲತ್ತನ್ನು ಕೊಡಬೇಕು ಎಂದು ಡಾ. ಅಂಬೇಡ್ಕರ್ ಅವರು ಬಹಳ ವಾದ ಮಾಡಿ ಹರಿಜನರೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಡಾ. ಲೋಹಿಯಾ ಅವರು ಸಮಾನ ಅವಕಾಶಗಳನ್ನು ಕಲ್ಪಿಸಿಕೊಡದಿದ್ದರೆ ವಿಶೇಷವಾದ ಸವಲತ್ತನ್ನು ಕೊಡಬೇಕು ಎಂದು ಹೇಳಿದ್ದಾರೆ. ದೃಷ್ಟಿಯಿಂದ ಹರಿಜನರಿಗೆ, ದೀನ ದಲಿತರಿಗೆವಿಶೇಷವಾದ ಸವಲತ್ತನ್ನು, ಸೌಲಭ್ಯವನ್ನು ಸರ್ಕಾರದವರು ಒದಗಿಸಿ ಕೊಡಬೇಕು ಎಂದು ನಾನು ಹೇಳುತ್ತೇನೆ. ದೇಶದಲ್ಲಿ ಬರೀ ಶ್ರಿಮಂತ ಬಡವ ಎನ್ನುವ ಭೇದ ಇಲ್ಲದಂತೆ ಮಾಡುವುದಕ್ಕೆ ಎಲ್ಲರೂ ಪ್ರಯತ್ನ ಮಾಡಬೇಕು.

ಷೆಡ್ಯೂಲ್ಡ್ ಕ್ಯಾಸ್ಟ್‌ಗೆ ಸೇರಿದವರು ಪಟ್ಟಿಯನ್ನು ತಯಾರು ಮಾಡುವುದಕ್ಕೆ ಕೇಂದ್ರ ಸರ್ಕಾರದವರು ಒಂದು ಕಮೀಷನ್ ನೇಮಕ ಮಾಡಿದ್ದರು. ಆ ಕಮಿಷನ್ನಿನವರು ಎಲ್ಲಾ ಕಡೆಗೂ ಬಂದು ಪಟ್ಟಿ ಮಾಡಿ, ಷೆಡ್ಯೂಲ್ ಟ್ರೈಬ್ಸ್ ಮತ್ತು ಕಡು ಕುರುಬರ ಒಂದು ಪಟ್ಟಿ ಮಾಡಿ, ಅಕ್ಷರಭ್ಯಾಸ ಇಲ್ಲದೆ ಇರುವವರು ಮತ್ತು ಮನೆಯೊಳಗಡೆ ಬರಬಾರದು ಎಂದು ಇರುವವ ಹಾಗೂ ಯಾರು ಸಾಮಾಜಿಕವಾಗಿ ಯಾವುದೇ ಒಂದು ಮಟ್ಟಕ್ಕೆ ಬಂದಿಲ್ಲವೋ ಅಂಥವರನ್ನೂ ಒಂದು ಪಟ್ಟಿ ಮಾಡುವುದಾದರೆ ಅವರ ಬೇಡಿಕೆಗಳನ್ನು ಇಡೇರಿಸುವುದಕ್ಕೆ ಸಾಧ್ಯವಾಗಬಹುದು ಎಂದು ನನಗೆ ಅನಿಸುತ್ತದೆ. ೧೦೦ಕ್ಕೆ ೯೦ ಜನಗಳಿಗೆ ಅನ್ನ ಬಟ್ಟೆಗಳಿಲ್ಲದೆ ಅವರು ದರಿದ್ರಾವಸ್ಥೆಯಲ್ಲಿದ್ದರೆ ಅವು ಬಹಳ ಕಷ್ಟವಾಗುತ್ತದೆ. ಹರಿಜನರನ್ನು ಮುಟ್ಟಿದರೆ ಸ್ನಾನ ಮಾಡಬೇಕು. ಅವರ ಜೊತೆಯಲ್ಲಿ ಮಾತನಾಡಿದರೆ ಸ್ನಾನ ಮಾಡಬೇಕು ಎನ್ನುವ ಮಟ್ಟಕ್ಕೆ ಸಮಾಜ ಹೋಗುವುದಾದರೆ ಅದನ್ನು ತೊಡೆದು ಹಾಕಬೇಕು. ಕೆಳಗೆ ಬಿದ್ದಿರತಕ್ಕವರಿಗೆ, ದೀನದಲಿತರಿಗೆ ವಿಶೇಷವಾದ ವಿದ್ಯಾಭ್ಯಾಸ ಸೌಕರ್ಯಗಳನ್ನು ಒದಗಿಸಿಕೊಡಬೇಕು. ವಸತಿ ಸೌಕರ್ಯಗಳನ್ನು ಒದಗಿಸಿಕೊಡಬೇಕು.

ನಮ್ಮ ದೇಶ ಇಬ್ಬಾಗ ಆದಮೇಲೆ ಬೇಕಾದಷ್ಟು ಜನ ನಿರಾಶ್ರಿತರು ಬಂದರು. ಅವರ ಪುನರ್ವ್ಯವಸ್ಥೆಗೆ ಕೋಟ್ಯಾಂತರ ರೂಪಾಯಿಗಳನ್ನು ಸರ್ಕಾರದವರು ಖರ್ಚು ಮಾಡಿದರು. ಈಗ ನಮ್ಮಲ್ಲಿ ಹರಿಜನರು ೧೮ ಪರ್ಸೆಂಟ್ ಇದ್ದಾರೆ. ಅವರ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿಗಳನ್ನು ವರ್ಷ ಒದಗಿಸಿದ್ದೀರಿ. ಇದು ಸಾಕಾಗುವುದಿಲ್ಲ. ರೀತಿ ಮಾಡುವುದಾದರೆ ಬಹುಶಃ ಇನ್ನು ಸಾವಿರ ವರ್ಷಗಳಾದರೂ ಇದು ಹೋಗುವುದಿಲ್ಲ.

ಕೊನೆಯದಾಗಿ ಇತ್ತೀಚೆಗೆ ನಾನು ಪತ್ರಿಕೆಯಲ್ಲಿ ನೋಡುತ್ತಿದ್ದೇನೆ. ಸಜೀವವಾಗಿ ಹರಿಜನರನ್ನು ಸುಡುವುದು, ಕೊಲ್ಲುವುದು, ಗರಗಸದಲ್ಲಿ ಕೊಯ್ಯುವುದು ಇಂಥಾದ್ದೆಲ್ಲಾ ನಡೆಯುತ್ತಿದೆ. ಇದಕ್ಕೆಲ್ಲ ಪೋಲಿಸೀನವರು ಇದ್ದಾರೆ. ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಸರ್ಕಾರದವರು ಹೇಳಬಹುದು. ಅದು ಬೇರೆ ಮಾತು. ಆದರೆ ಇದನ್ನೆಲ್ಲಾ ತಡೆಗಟ್ಟುವುದಕ್ಕೆ ಸರ್ಕಾರದವರು ಒಂದು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ದೇಶದಲ್ಲಿ ಇದೇ ರಿತಿ ಹರಿಜನರ ಬಗ್ಗೆ ಕೃತ್ಯಗಳು ನಡೆಯುವುದಾದರೆ ಭೀಮಸೇನೆಯಂತಹ ಸೇನೆಗಳೂ ಹೊರಗೆ ಬಂದು ದೇಶದಲ್ಲಿ ಮಹಾ ಕ್ರಾಂತಿ, ರಕ್ತಕ್ರಾಂತಿಯಾಗುತ್ತದೆ ಎಂದು ನನಗೆ ಅನಿಸುತ್ತದೆ.

ಹಿಂದೂ ಮುಸ್ಲಿಂ ಗಲಾಟೆಯಾದರೆ ರಕ್ತ ಹರಿಯುತ್ತದೆ, ಅದೇ ರೀತಿ ಹರಿಜನರನ್ನು ತುಳಿಯುವುದಕ್ಕೆ ಹೋದರೆ ಮತ್ತಷ್ಟು ರಕ್ತ ಹರಿಯುತ್ತದೆಂದು ಹೇಳುತ್ತೇನೆ. ಇದು ಅನಿವಾರ್ಯ ಎಂದು ಸರ್ಕಾರದ ಭಾವನೆಯಾಗಿದ್ದರೆ ಆ ಭಾವನೆ ನಿಮಗೆ ಸರಿ ಎಂದು ಕಾಣಬಹುದು. ಹೊನ್ನಾಳಿಯ ಒಬ್ಬ ಗ್ರಾಮಸೇವಕನು ತನ್ನ ಪ್ರಾಣಕ್ಕೆ ಆಪತ್ತು ಇದೆ ಎಂದು ಹೇಳಿದ ಮೇಲೆ ಪೋಲಿಸರು ಹೋದರ. ಆದರೂ ಆಗ್ರಮಸೇವಕನನ್ನು ಯಾರೋ ಸಾಯಿಸಿಬಿಟ್ಟರು. ಯಾರು, ಯಾವಾಗ ಎಲ್ಲಿ ಯಾರನ್ನು ಕೊಲ್ಲುತ್ತಾರೆಂಬುದು ಪೋಲೀಸರಿಗೆ ಗೊತ್ತಿರುವುದಿಲ್ಲ. ಹರಿಜನರು, ಗಿರಿಜನರು, ಮುಸ್ಲಿಮರು, ಸ್ತ್ರೀಯಾರುಗಳಿಗೆ ವಿಶೇಷ ಅವಕಾಶ ಕಲ್ಪಿಸಿ ಕೊಡಬೇಕೆಂದು ಲೋಹಿಯಾ ಅವರು ಹೇಳಿದ್ದಾರೆ. ಇವತ್ತು ಅನೇಕ ಜಾತಿಗಳು ಇರಬಹುದು. ಜಾತಿಯ ಹೆಸರಿನಿಂದ ಅನೇಕ ದುರುಪಯೋಗಗಳಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿಚಾರ ಮಾಡುವಾಗ ಅಸ್ಪೃಶ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅಂತಹವರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಈ ವಿಚಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೆ ಒಳ್ಳೆಯದು. ಇದರಲ್ಲಿ  ಒಡಕು ತರುವುದು ಸರಿಯಲ್ಲ. ಬ್ರಾಹ್ಮಣರಲ್ಲಿಯೂ ಕೂಡ ಬಡವರು ಇರುತ್ತಾರೆ. ವರ್ಣದಲ್ಲಿ ಅವರು ಉತ್ತಮರಿದ್ದರೂ ಕೂಡ ನಾವು ಯಾರಿಗೆ ಕಡಿಮೆ ಎಂದು ಹೇಳುತ್ತಾರೆ. ಈ ವಿಚಾರದಲ್ಲಿ ನಾಗಣ್ಣನವರ ಕಮಿಟಿಯನ್ನು ಮಾಡಲಾಗಿತ್ತು. ಆದರೆ ಆ ಕಮಿಟಿಯಲ್ಲಿ ಯಾವ ನಿರ್ಣಯವನ್ನೂ ಕೂಡ ಮಾಡುವುದಕ್ಕಾಗಲಿಲ್ಲ. ನಾನೇ ರಾಜ್ಯದಲ್ಲಿ ಜಾತಿಗಳ ಒಂದು ಪಟ್ಟಿ ಮಾಡುವುದಾದರೆ, ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು ಮತ್ತು ಅನುಕೂಲವಗಿರುವ ಕೆಲವು ಜನಾಂಗದವರನ್ನು ಒಂದು ಪಟ್ಟಿಗೆ ಸೇರಿಸುತ್ತೇನೆ. ಇವರುಗಳು ಮುಂದುವರೆದಿರುವುದರಿಂದ ಇವರಿಗೆ ಯಾವ ಒಂದು ಸೌಲಭ್ಯಗಳೂ ಸಿಗಬಾರದು. ಕೇವಲ ಪರ್ಸೆಂಟ್ನಷ್ಟು ಅನುಕೂಲಗಳು ಸಿಗಬೇಕೆಂದು ಹೇಳುತ್ತೇನೆ. ಉಳಿದ ೯೬ ಪರ್ಸೆಂಟ್ನಷ್ಟು ಅನುಕೂಲಗಳು ಇನ್ನಿತರ ಹಿಂದುಳಿದ ಪಂಗಡದವರಿಗೆ ಸಿಗಬೇಕು. ವರ್ಗ ಮತ್ತು ವರ್ಣ ಇವುಗಳಲ್ಲಿ ಮುಂದುವರೆದವರು ಮತ್ತು ಹಿಂದುಳಿದವರ ಪಟ್ಟಿ ಮಾಡಿ ಹಿಂದುಳಿದವರಿಗೆ ಕೊಡಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕು. ಹಿಂದುಳಿದವರು ಶಾಲೆಗಳಲ್ಲಿ ಫೀ ಕೊಡಬೇಕಾಗಿಲ್ಲವೆಂದು ಸರ್ಕಾರದವರು ಹೇಳುತ್ತಾರೆ. ಅದರೆ ಕೆಲವು ಶಾಲೆಗಳಲ್ಲಿ ಇಂತಹ ಹುಡುಗರಿಂದ ೨೦ – ೩೦ ರೂಪಾಯಿಗಳನ್ನು ಫೀ ಎಂದು ವಸೂಲು ಮಾಡುತ್ತಿರುವುದರಿಂದ ಕೆಲವರು ಶಾಲೆಯನ್ನೇ ಬಿಟ್ಟುಬಿಟ್ಟಿದ್ದಾರೆ. ಮತ್ತೆ ಕೆಲವು ಶಾಲೆಗಳಲ್ಲಿ ಹಿಂದುಳೀದ ಹುಡುಗರನ್ನು ಹಿಂದಿನ ಬೆಂಚ್‌ನಲ್ಲಿ ಕೂರಿಸುತ್ತಾರೆ. ಡಾಕ್ಟ್ರರ್‌ಗಳನ್ನು ನೇಮಕ ಮಾಡುವಾಗಲೂ ಕೂಡ ಹಿಂದುಳಿದವರಿಗೆ ಸರಿಯಾದ ಪ್ರಶಸ್ತ್ಯ ಸಿಗುತ್ತಿಲ್ಲ. ಹಿಂದುಳಿದವರಿಗೆ ಮನೆಗಳನ್ನು ಕಟ್ಟಿಸಿ ಕೊಡಲು ಸರ್ಕಾರದವರು ಸೊಸೈಟಿಗಳನ್ನು ಮಾಡಿದ್ದಾರೆ. ಈ ಸೊಸೈಟಿಗಳಿಂದ ಹಿಂದುಳಿದವರಿಗೆ ಯಾವ ಪ್ರಯೋಜನವೂ ಆಗುತ್ತಿಲ್ಲ. ಮೊದಲು ಹಿಂದುಳಿದವರಿಗೆ ಅಕ್ಷರವನ್ನು ಹೇಳಿಕೊಡಬೇಕು. ಆದಕಾರಣ ಒಂದು ಅಕ್ಷರಸೇನೆ ಮತ್ತು ರಚನಾ ಸೇನೆಯನ್ನು ಏರ್ಪಾಡು ಮಾಡಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಒಂದು ಕಾಗದವನ್ನು ಸಹ ಬರೆದಿದ್ದೇನೆ. ಇವತ್ತು ನಮ್ಮ ದೇಶದಲ್ಲಿ ೧೪ ಆಣೆ ಕೂಲಿ ತೆಗೆದುಕೊಂಡು ೧೪ ಗಂಟೆ ಕೆಲಸ ಮಾಡುವ ಜನರು ಇದ್ದಾರೆ. ಪಬ್ಲಿಕ್ ಸರ್ವಿಸ್ ಕಮೀಷನ್ ಅವರು ಅಪಾಯಿಂಟ್ ಮಾಡಿಕೊಳ್ಳುವಾಗ ಹಿಂದುಳಿದವರಿಗೆ ಪ್ರಾಶಸ್ತ್ಯ ಕಡದೆ ಇಷ್ಟು ಉದ್ದ ಇರಬೇಕು, ಇಷ್ಟು ತೂಕ ಇರಬೇಕು, ಎದೆ ಇಷ್ಟು ಅಗಲ ಇರಬೇಕು ಎಂಬುದನ್ನೆಲ್ಲಾ ಪರೀಕ್ಷೆ ಮಾಡುತ್ತಾರೆ. ಇದೇ ಪದ್ಧತಿಯನ್ನು ಇನ್ನು ಮುಂದೆಯೂ ಕೂಡ ಅನುಸರಿಸುವುದಾದರೆ ನಾವು ರಾಷ್ಟ್ರವನ್ನು ಕಟ್ಟುವುದಕ್ಕಾಗುವುದಿಲ್ಲ. ಅಸ್ಪೃಶ್ಯತೆಯನ್ನು ತೊಡೆದುಹಾಕುವುದಕ್ಕಾಗುವುದಿಲ್ಲ. ಇದೇ ಪದ್ಧತಿ ಮುಂದುವರೆದರೆ ಕ್ರಾಂತಿ ಆದೀತು, ಮಹಾಕ್ರಾಂತಿ ಆದೀತು, ರಕ್ತಕ್ರಾಂತಿ ಆದೀತು.