ಕಾಗೋಡು ಚಲೋ

ಕಾಗೋಡು! ನೆನೆದೊಡನೆ ನಾನು ಅಲ್ಲಿ; ಆ ಪರಿಸರದಲ್ಲಿ, ಆ ಕಾಲದಲ್ಲಿ, ಹಿಂದಕ್ಕೆ ಮತ್ತೆ ಹೋಗಿ ಬದುಕುವುದು ಅಸಾಧ್ಯ! ನನ್ನ ಪ್ರಜ್ಞೆಯಲ್ಲಿ ಜಾಗೃತವಾಗಿರುವ ಒಂದು ಮಹಾ ಘಟನೆ, ಕಾಗೋಡು ಹೋರಾಟ. ನಾನು ಈಗ ಹೀಗೆ ಆಗಿದ್ದರೆ. ಹಾಗೆ ಆಗುವಲ್ಲಿ ಕಾಗೋಡಿನ ಕೈವಾಡ ಬಹಳವಿದೆ. ನನ್ನ ಮನಸ್ಸಿನ ಮೇಲೆ ಅಚ್ಚಳಿಯದೆ ಉಳಿದಿರುವ, ದಿನ ಕಳೆಂತೆ ಹೆಚ್ಚು ಹೆಚ್ಚು ಹಸಿರಾಗಿ ನಳನಳಿಸುತ್ತಿರುವ ಒಂದು ಪ್ರಸಂಗ ಕಾಗೋಡು. ಅದು ಆಳವಾದ ಅನುಭವ; ಅಂತೆಯೇ ನನ್ನ ಸ್ಮರಣೆಯಲ್ಲಿ ಚಿರವಾದುದು.

ಗೇಣಿ ಎಷ್ಟಿರಬೇಕೆಂದು ಒಂದು ವಿವಾದ ಮಲೇನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದ ಜಮೀನುದಾರರ – ರೈತರ ನಡುವೆ ಹುಟ್ಟಿತು: ರಾಜಿ ಆಗಲಿಲ್ಲ; ಸಂಧಾನಗಳು ಫಲಿಸಲಿಲ್ಲ. ರೈತರು ರೈತಸಂಘ, ಅರವತ್ತು ಸೇರು ಎಂದುರ. ಒಡೆಯಾರು, ಪ್ರಮಾಣ ಇರಲಿಲ್ಲ. ಎಪ್ಪತ್ತು ಸೇರಿನಂತೆ ಗೇಣಿ ಚುಕ್ತ ಮಾಡಿ ಗದ್ದೆಗೆ ಕಾಲಿಡಿ ಎಂದು ಒಡೆಯಾರು ಆಜ್ಞೆ ಮಾಡಿದರು. ಅರವತ್ತು ಸೇರಿಗಿಂತ ಒಂದು ಕಾಳು ಜಾಸ್ತಿ ಕೊಡುವುದಿಲ್ಲ. ಉಳುಮೆ ಹಕ್ಕನ್ನು ಬಿಡುವುದಿಲ್ಲ. ನಾವು ಗಳೇವು ಕಟ್ಟೇ ಸೈ ಎಂದು ರೈತರು ತಮ್ಮ ತೀರ್ಮಾನ ತಿಳಿಸಿದರು; ಇಷ್ಟೇ ಮೂಲ: ರೈತರು ಗಳೇವು ಕಟ್ಟಲು ನೇಗಿಲು – ನೊಗಹೊತ್ತುಕೊಂಡು ಗದ್ದೆಗಳಿಗೆ ಕಾಲು ಇಟ್ಟಿದ್ದೇ ತಡ, ಕಾಯುತ್ತದ್ದ ಒಡೆಯಾರು, ಅವರ ಆಳು – ಕಾಲು ಎಲ್ಲ ಸೇರಿ ಅವರನ್ನು ಹೊಡೆದು, ಒದೆದು ಗದ್ದೆಗಳಿಂದ ಅಟ್ಟಿ ಓಡಿಸಿದರು. ಘರ್ಷಣೆ ನಡೆಯಿತು. ಪೋಲೀಸರಿಗೆ ದೂರು ಹೋಯಿತು. ರೈತಸಂಘ, ಸೋಷಲಿಸ್ಟ್ ಪಾರ್ಟಿ ರೈತರ ಪರ ನಿಂತವು ಸೂಚನೆ ಕೊಟ್ಟು ಸತ್ಯಾಗ್ರಹ ಸಾರಿದರು. ದೀರ್ಘ ಹೋರಾಟದ ಭೂಮಿಗೆ ಏರ್ಪಟ್ಟಿತು.

ಗೊತ್ತಾದ ದಿನ ಸತ್ಯಾಗ್ರಹಿಗಳ ಮೊದಲ ತಂಡ ಕಾಗೋಡು ರೈತರ ಕೇರಿಯ ಅಶ್ವತ್ಥಮರದ ಬುಡದಿಂದ ಹೊರಟಿತು. ಒಡೆಯರ ಗದ್ದೆಯತ್ತ, ಗಳೇವು ಕಟ್ಟಲು, ಕಾನೂನು ಮುರಿಯಲು, ಸತ್ಯಾಗ್ರಹಿಗಳು, “ರೈತರ ಹೋರಾಟಕ್ಕೆ” ಎಂದೊಡನೆ ಅಲ್ಲಿ ನೆರೆದಿದ್ದ ಸಹಸ್ರಾರು ಜನ ರೈತರು, ಹೆಂಗಸರು, ಹುಡುಗರು ‘ಜಯವಾಗಲಿ!” ಎಂದು ಜಯಘೋಷ ಮಾಡಿದರು. ಹೀಗೆ, ‘ಇನ್‌ಕಿಲಾಬ್ – ಜಿಂದಾಬಾದ್’, ‘ಉಳುವವನೆ ಹೊಲದೊಡೆಯ’, ‘ಜಮೀನುದ್ದಾರಿ ಪದ್ಧತಿ ನಾಶವಾಗಲಿ,’ ‘ಜಮೀನುದಾರರ ದಬ್ಬಾಳಿಕೆಗೆ ಧಿಕ್ಕಾರ’, ‘ದಬ್ಬಾಳಿಕೆಯ ಸರಕಾರಕ್ಕೆ ಧಿಕ್ಕಾರ’ ಎಂದು ಮೇಲಿಂದ ಮೇಲೆ ಘೋಷಣೆಗಳು ಮೊಳಗಿದವು. ನೆರೆದಿದ್ದವರು ಸತ್ಯಾಗ್ರಹಿಗಳಿಗೆ ಹಾರಹಾಕಿ ಹರಸಿದರು. ಸತ್ಯಾಗ್ರಹಿಗಳು ಜಮೀನನ್ನು ಪ್ರವೇಶಿಸುತ್ತಿದ್ದಂತೆಯೇ ಸಿದ್ಧವಾಗಿದ್ದ ಪೋಲಿಸರು ಅವರನ್ನೆಲ್ಲ ನೇಗಿಲು ನೊಗ ಸಮೇತ ಬಂಧಿಸಿದರು. ಕಾಗೋಡಿನ ಗದ್ದೆ, ತೋಟ, ಕಾಡು ಆಕಾಶ ಬಿರಿಯುವಂತೆ ಮೊಳಗಿತು. ಸತ್ಯಾಗ್ರಹಿಗಳನ್ನು ಪೋಲಿಸರು ವ್ಯಾನಿಗೆ ತುಂಬಿಕೊಂಡು ಸಾಗರದತ್ತ ಹೋದರು. ಚಳವಳಿ ಉತ್ರವೂ, ವ್ಯಾಪಕವೂ ಆಯಿತು. ಸರಕಾರ ಹೋರಾಟವನ್ನು ಹತ್ತಿಕ್ಕಲು ಕ್ರೂರ ದಬ್ಬಾಳಿಕೆಗೆ ಇಳಿಯಿತು. ವಿದೇಶ ಪ್ರವಾಸ ಹೊರಡಲಿದ್ದ ಸೋಷಲಿಸ್ಟ್ ನೇತಾರ ಡಾ. ರಾಮಮನೋಹರ ಲೋಹಿಯಾ ಅವರು ಕಾಗೋಡಿಗೆ ಧಾವಿಸಿ ಬಂದರು. ಅವರೂ ಬಂಧನಕ್ಕೊಳಗಾದರು. ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು.

ಹೋರಾಟ ದೇಶ ವಿದೇಶಗಳಲ್ಲಿ ಪ್ರಸಿದ್ದವಾಯಿತು. ಚಿರಾಯುವಾಯಿತು.

ನಾವು ಕೆಲವರು ಸ್ವಯಂ ಆಗಿ ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾಗದೆ, ಪೋಲೀಸರ ಕಣ್ಣ ತಪ್ಪಿಸಿಕೊಂಡು ಹೋರಾಟವನ್ನು ನಿರ್ದೇಶಿಸುವ ಕೆಲಸದಲ್ಲಿ ತೊಡಗಿದ್ದೆವೆ. ಹೀಗೆ ಹೋರಾಟ ನಡೆಯುತ್ತಿರುವಲ್ಲಿ ಪೋಲೀಸರ ಕೈಗೆ ನಾನು ಸಿಕ್ಕಿಹಾಕಿಕೊಂಡಾಗ ನನಗಾದ ಅತಿ ವಿಚಿತ್ರ ಅನುಭವ ಇಂತಿದೆ.

ಕಾಗೋಡು ಹತ್ತಿರದ ಒಂದು ಹಳ್ಳಿಯಲ್ಲಿ ಒಂದು ರಾತ್ರಿ ತಂಗಿದ್ದೆ, ಉಳಿದುಕೊಳ್ಳಲು ಊರಿನವರು ಮನೆ ಗೊತ್ತು ಮಾಡಿದ್ದರು. ರಾತ್ರಿ ನಾಳಿನ ಸತ್ಯಾಗ್ರಹದ ಬಗೆಗೆ ತೀರ್ಮಾನ ತೆಗೆದುಕೊಂಡು ನಂತರ ನನ್ನನ್ನು ಆ ಮನೆಗೆ ಕರೆದುಕೊಂಡು ಹೋಗಿ, ನನ್ನ ಮಲಗುವ ವ್ಯವಸ್ಥೆ ಮಾಡಿದರು. ಅಯಾಸವಾಗಿತ್ತು; ನಾನು ಮಲಗಿ ನಿದ್ರೆ ಹೋದೆ. ಆ ಮನೆಯಲ್ಲಿದ್ದವರು ವಯಸ್ಸಾದ ತಾಯಿ ಮತ್ತು ಅವಳ ಮಗ. ಆತ ನಮ್ಮ ಸಹಾಯಕ, ನನ್ನ ಬೆಂಗಾವಲು. ಊರ ಮುಂದಲ ಮನೆ. ಮನೆಯ ಮುಂದೆ ಊರಿನ ಬಾವಿ.

ನಸುಕಿನಲ್ಲಿ ಎದ್ದು ಬಯಲು ಕಡೆ ಹೋಗಿ ಬಂದೆ. ಮುಖ ತೊಳೆದು, ಚಹಾ ಕುಡಿದು, ಮನೆಯ ಮುಂದಿನ ಚಡಿಯ ಮೇಲೆ ಹಾಕಿದ್ದ ಚಾಪೆಯ ಮೇಲೆ ಕುಳಿತು ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊತ್ದಾ’ ರಾಗ ಎಳೆಯುತ್ತಾ ಪ್ರಕೃತಿಯೊಂದಿಗೆ ಬೆರೆತು ಕೆಲ ಹೊತ್ತು ಕಳೆದು, ಸಾಗರಕ್ಕೆ ಕಳಿಸಬೇಕಾಗಿದ್ದ ದಿನದ ಟಪ್ಪಾಲನ್ನು ಸಿದ್ಧ ಪಡಿಸತೊಡಗಿದ್ದೆ. ಕವಿದಿದ್ದ ಮೋಡಗಳನ್ನು ಸೀಳಿ ಎಳೆ ಬಿಸಿಲು ನನ್ನನ್ನು ನೆಕ್ಕತೊಡಿತ್ತು. ಜನರ ಓಡಾಟವೂ ಹೆಚ್ಚುತ್ತ ನಡೆದಿತ್ತು. ಆಸಕ್ತರು ಒಬ್ಬೊಬ್ಬರಾಗಿ ಬಂದು ಸಲಮ್ ಮಾಡಿ, ಸಾಲಾಗಿ ಚಡಿಯ ಮೇಲೆ ಮಂಡಿಸಿ, ಬೀಡಿ ಎಳೆಯುತ್ತಾ ಪಿಸುಮಾತುಗಳಲ್ಲಿ ತೊಡಗಿದ್ದರು. ಹೆಣ್ಣುಮಕ್ಕಳು ಕೊಡಪಾನಗಳನ್ನು ಬಗಲಿಗೇರಿಸಿಕೊಂಡು ನೀರು ಸೇದಲು ಬಾವಿಯ ಸುತ್ತ ಸೇರುವುದು, ನೀರನ್ನು ಸೇದುವುದು, ಕೊಡಪಾನ ಹೊತ್ತು ಸಾಗುವುದು ನಡೆದಿತ್ತು. ಗಂಡಸರು ಎತ್ತುಗಳನ್ನು ಹೊಡೆದುಕೊಂಡು ಬೇಣಗಳತ್ತ ಹೊರಟಿದ್ದರು. ಹಳ್ಳಿಗೆ ಹಳ್ಳಿಯೇ ನೆನ್ನಿನ ಸತ್ಯಾಗ್ರಹ, ಬಂಧನ, ಪೋಲೀಸರು ಸತ್ಯಾಗ್ರಹಿಗಳ ಮೇಲೆ ನಡೆಸಿದ ಅತ್ಯಾಚಾರ, ಜೈಲಿನಲ್ಲಿ ಬಂದಿಗಳ ಉಪವಾಸ – ಮುಂತಾದ ಕತೆಗಳನ್ನು ಕೇಳಿ ಔಡುಗಚ್ಚಿತ್ತು. ಎಲ್ಲರ ಮುಖದಲ್ಲೂ, ನಡಿಗೆಯಲ್ಲೂ ದಿಟ್ಟತನ ಮೂಡಿತ್ತು. ಮುಂದಿನ ಪ್ರತಿಕ್ರಿಯೆಗಾಗಿ ಸಿದ್ಧತೆ ನಡೆದಿತ್ತು. ಹೋರಾಟದ ಸಂಭ್ರಮ ಸಡಗರ ಎಲ್ಲೆಲ್ಲೂ ತುಂಬಿತ್ತು.

ಇದ್ದಕ್ಕಿದಂತೆ ಕೋಳಿಮರಿಗಳ ಮೇಲೆ ಗಿಡುಗ ಎರಗಿದಂತಾಯಿತು; ಇಡೀ ವಾತಾವರಣದ ಶಾಂತಿ, ಜನರ ಕಿರಿಚು, ದಿಕ್ಕಾಪಾಲು ಓಟ, ಕೂಡು, ಗಾಬರಿ, ಕಳವಳಗಳಿಂದ ಕಲಕಿತು. ನಾನೂ ಘಟ್ಟನೆ ಎದ್ದು ನಿಂತೆ. ಎದುರಿನ ರಸ್ತೆಯಿಂದ ಕೆಲವರು ನಮ್ಮತ್ತ ಓಡೋಡಿ ಬರುವುದನ್ನು ಕಂಡೆ. ಓಡಿ ಬಂದು ಏದುತ್ತಾ ಪೋಲೀಸ್! ಪೋಲಿಸ್! ಯಾನ್ ಬಂತು! ಯಾನ್ ಬಂತು! ಬಂದೇ ಬಿಡ್ತು! ಎಂದು ಎಲ್ಲರೂ ಒಮ್ಮೆಗೆ ಕಳವಳದಿಂದ ವರದಿ ಮಾಡಿದರು. ವ್ಯಾನ್ ಬಂದೆ ಬಿಟ್ಟಿತು. ನನಗೂ ಏನೂ ಹೋಳೆಯಲಿಲ್ಲ: ಕಾಗದಪತ್ರಗಳನ್ನೆಲ್ಲ ಬಾಚಿಕೊಂಡು ಒಳಗೆ ಹೋದೆ. ಅವನ್ನೆಲ್ಲಾ ಹಾಸಿಗೆಯಲ್ಲಿ ಹುದುಗಿಸಿಬಿಟ್ಟೆ ನನ್ನ ಹಿಂದೆಯೇ ಬಾಗಿಲು ಮುಚ್ಚಿಕೊಂಡಿತು.

ಒಳಗೆ ಕತ್ತಲೆ ಆವರಿಸಿತು. ಹಿಂಬದಿಯಲ್ಲಿ ಬಾಗಿಲಿರಬಹುದೆಂದು ಹುಡುಕುತ್ತಾ ಅತ್ತ ನಡೆದ,. ಬಾಗಿಲು ಇಲ್ಲದ್ದನ್ನು ಕಂಡು ನನ್ನ ಮೇಲೆ ಆಕಾಶವೇ ಕಳಚಿ ಬಿದ್ದಾಂತಾಯಿತು. ಮುಂಬಾಗಿಲಿಗೆ ಬಂದು ಜಗ್ಗಿದೆ, ಬಡಿದೆ, ಬಾಗಿಲು ಬರಲಿಲ್ಲ. ಹೊರಗಡೆಯಿಂದ ಅದಕ್ಕೆ ಬೀಗ ಮುದ್ರೆಯಾಗಿತ್ತು. ಮುದುಕಿ ಬೀಗ ಹಾಕಿ ಹೋಗಿದ್ದಳು. ನಾನು ಬೋನಿಗೆ ಬಿದ್ದ ಇಲಿಯಂತಾದೆ. ದಿಕ್ಕು ತೋಚದಾಯಿತು. ಕಣ್ಣಿಗೆ ಕತ್ತಲೆ ಗಿರ್ರನೆ ತಿರುಗಿತು. ಕೆಟ್ಟೆ ಎಂದುಕೊಂಡೆ. ಚೇತರಿಸಿಕೊಂಡು ಕ್ಷಣಕಾಲ ಯೋಚಿಸಿ ನಡುಮನೆಗೆ ನಡೆಸೆ. ಅಟ್ಟಕ್ಕೆ ಚಾಚಿದ ಏಣಿಯೊಂದು ಗೋಚರಿಸಿತು. ನನ್ನ ಕಾಲುಗಳು ಯಾಂತ್ರಿಕವಾಗಿ ಮೆಟ್ಟಿಲುಗಳನ್ನು ಹತ್ತಿದವು. ಮೇಲೂ ಕತ್ತಲು. ಏನೇನೋ ಸಾಮಾನು, ಸರಕುಗಳು ಕಣ್ಣ ಹಾಯಿಸಿ ಎಲ್ಲವನ್ನೂ ದಿಟ್ಟಿಸಿದೆ. ಮೇಲಿನ ಛಾವಣಿಗಳ ದಬ್ಬೆ ಬಿಗಿದು ಹುಲ್ಲು ಹಾಕಿತ್ತು. ಅದನ್ನು ತೊರಿ ಹಾರಿ ಹೋಗಬಹುದೆಂದು ನೋಡುತ್ತಿದ್ದೆ. ಅಷ್ಟರಲ್ಲಿ ಪೋಲೀಸರು ಊರನ್ನೆಲ್ಲಾ ಶೋಧಿಸಿ, ಈ ಮನೆಯತ್ತ ಬರುತ್ತಿರುವುದು ಅವರ ಮಾತು ಮತ್ತು ಬೂಟಿನ ಸಪ್ಪಳಗಳಿಂದ ತಿಳಿಯಿತು. ನನಗೆ ಉಸಿರೇ ಕಟ್ಟಿದಂತಾಯಿತು.

ಪೋಲೀಸು ಅಧಿಕಾರಿ, ಯಾರದ್ದು ಈ ಮನೆ? ಯಾಕೆ ಈಗ ಹಾಕಿದೆ? ತೆಗೆಯಿರಿ ಬೀಗ ಎಂದು ಗದರಿಸಿದ. ಈ ಮನೆಯ ಮತ್ತೊಂದು ಭಾಗಕ್ಕೆ ಪೋಲೀಸರು ಒಬ್ಬರ ಹಿಂದೆ ಒಬ್ಬರು ನುಗ್ಗಿ ಬಂದರು. ಸಂದು ಮೂಲೆ ಹುಡುಕಿದರು. ಮೇಲೆ ಕೆಳಗೆ ನೋಡಿದರು. ಇಲ್ಲಾ, ಇಲ್ಲಿ, ಇಲ್ಲ! ಎಂದು ಬಂದಂತೆ ಒಬ್ಬೊಬ್ಬರಾಗಿ ಹೊರಬಿದ್ದರು. ದಫೇದಾರನೊಬ್ಬ ಅಟ್ಟದ ಕಡೆ ಕಣ್ಣುಹಾಯಿಸಿ, ನಾನು ನಿಂತಿದ್ದ ಕಡೆ ದಿಟ್ಟಿಸಿದ. ನಾನು ನಿಂತಲ್ಲಿಯೇ ಗಾಳಿ ಕಳೆದುಕೊಂಡ ಬೆಲೂನಿನಂತೆ ಕುಸಿದು ಕುಗ್ಗಿದೆ. ಮುದುಡಿ ಅಲ್ಲಿಯೇ ನನ್ನ ಮುಂದೆ ಇದ್ದ ಒಂದು ಅಕ್ಕಿಗೂಡೆಯ ಹಿಂದೆ ಕುಕ್ಕರಿಸಿದೆ. ಈ ಮಹಾರಾಯನೂ ಯಾರೂ ಇಲ್ಲ ಎಂದು ಹೊರಬಿದ್ದ. ನಾನು ಹಿಡಿದಿದ್ದ ಉಸಿರನ್ನು ಬಿಟ್ಟೆ, ಕಾಲುಗಳು ಏಳದಾದವು.

ಕುಪಿತನಾದ ಪೋಲಿಸ್ ಅಧಿಕಾರಿ, “ಏಯ್ ತಗೀ ಬೀಗ, ಇಲ್ಲ ಬಾಗಿಲು ಮುರಿದು ನುಗ್ಗುತೀವೆ” ಎಂದು ಮತ್ತೊಮ್ಮೆ ಅಧಿಕಾರವಾಣಿಯಿಂದ ಘರ್ಜಿಸಿದ. ಪೋಲೀಸರು ಭಾಗಿಲು ಮುರಿಯಲು ಸಿದ್ಧರಾಗುವಷ್ಟರಲ್ಲಿ, ಅಲ್ಲೇ ಎಲ್ಲೋ ಅವಿತುಕೊಂಡಿದ್ದ ಮುದುಕಿ ಮರು ಮಾತಾಡದೆ ಬೀಗ ತೆಗೆದು “ಯಾರೂ ಇಲ್ಲಪ್ಪಾ ಇಲ್ಲಿ. ನೋಡಿಕೊಳ್ರೋ ಮಹರಾಯ”, ಎಂದು ಗದ್ಗದಿತಳಾಗಿ ಚಡಿಯ ಮೇಲೆ ಕುಸಿದು ಕುಳಿತಳು. ಪೋಲೀಸರು ದಡಾಬಡಾ ನುಗ್ಗಿದರು. ಒಬ್ಬ ಬಾರೀ ಆಸಾಮಿ ಏಣಿಯನ್ನು ಏರಿದ. ನಾನು ಅವನನ್ನು ಗೋಡೆಯ ಮರೆಯಿಂದ ನೋಡಿದೆ: ನನ್ನ ಸ್ಥಿತಿ ನನಗೆ ಅಸಹ್ಯವಾಯಿತು. ನನಗೆ ನಾನೇ  ನಾಚಿದೆ: ನನ್ನ ಬಗ್ಗೆ ನಾನೇ ಕನಿಕರಪಟ್ಟೆ. ಇನ್ನು ಬಚ್ಚಿಟುಕೊಳ್ಳುವುದು ಸಾಧ್ಯವಿರಲಿಲ್ಲ. ಗೋಡೆಯ ಹಿಂದಿನಿಂದ ಎದ್ದುನಿಂತ. ಒಮ್ಮೆಗೇ ಪೋಲಿಸಿನವ ನನ್ನನ್ನು ನೋಡಿ ಹೌಹಾರಿದ “ಹೋ” ಎಂದು ಕಿರಿಚಿಕೊಂಡು; ಸದ್ಯ ಅಟ್ಟದಿಂದ ಜಿಗಿಯಲಿಲ್ಲ ಆತ.

“ಅಟ್ಟ ಹತ್ತಿ ಕೂತಿದ್ದೀರಾ, ಬನ್ನಿ ಕೆಳಗೆ”ಎಂದ. ತನ್ನವರನ್ನೆಲ್ಲಾ ಕೂಗಿಕರೆದ. ‘ಇಳಿಯಪ್ಪ ಬರ್ತೀನಿ’ ಎಂದು ನಾನು ಮುಂಚೆ ಹೆಜ್ಜೆ ಹಕಿದೆ. ಆತನೂ ನನ್ನನ್ನೇ ದುರುಗುಟ್ಟಿ ನೋಡುತ್ತ ಒಂದೊಂದೇ ಮೆಟ್ಟಲನ್ನು ಇಳಿಯತೊಡಗಿದ. ನಾನು ಇಳಿದೆ. ನನ್ನನ್ನು ನೋಡಿಕೊಂಡೆ: ಅಂಗಿ, ಪಂಚೆ, ಮೈಕೈ ಎಲ್ಲ ಕಪ್ಪಡರಿತ್ತು. ತಲೆ ತುಂಬ ಕರಿಜೇಡನ ಬಲೆ. ಮುಖಕ್ಕೂ ಮಸಿ ಹತ್ತಿತ್ತೆಂಬುದನ್ನು ಅಲ್ಲೇ ಗೂಡಿನಲ್ಲಿದ್ದ ಪುಟ್ಟ ಕನ್ನಡಿಯತ್ತ ಕಣ್ಣು ಹೊರಳಿಸಿದಾಗ ಕಂಡಿತು. ಇದೇ ವೇಷದಲ್ಲಿ ಮನೆಯಿಂದ ಹೊರಬಿದ್ದ. ಅಷ್ಟರಲ್ಲಿ ನೂರಾರು ಜನ ಸೇರಿದ್ದರು. ನನ್ನ ಈ ದುರವಸ್ಥೆ ಕಂಡು ಅವರ ಮುಖಗಳು ಬಿಳಿಚಿದ್ದವು; ಕಣ್ಣುಗಳಲ್ಲಿ ಮರುಕವಿತ್ತು. ಅವರನ್ನೆಲ್ಲಾ ಒಮ್ಮೆ ಮೊಗವೆತ್ತಿ ನೋಡಿ ನಕ್ಕೆ, ಅವರೂ ನಗಲಾರದೆ ನಕ್ಕರು; ತಲೆತಗ್ಗಿಸಿ ನಿಂತರು. ದಂಡಧಾರಿ ಪೋಲೀಸು ಅಧಿಕಾರಿ ನನ್ನ ಕಡೆ ನೋಡಿ ಗಹಗಹಿಸಿ ನಕ್ಕು ಹೇಳಿದ, “ಏನು ಸಬರ (ಶಿಬಿರ ಎಂಬ ಪದ ಅವನಿಗೆ ಬರದು) ಮಾಡ್ತಿ? ಎಲ್ಲಿ ಬೇರೆಯವರೆಲ್ಲಾ? ಹೇಳು ತೋರ್ಸು” ಎಂದ. ನಾನು ಆತನನ್ನು ಒಂದು ಕ್ಷಣ ಮರೆತು ನೋಡಿದೆ. ನೀರು ಹಿಡಿದು ನಿಂತಿದ್ದವನ ಹಿಂದ ಕೈ – ಕಾಲು ಮುಖ ತೊಳೆದು ಬಂದು ಚಡಿಯ ಮೇಲೆ ಕುಳಿತೆ. ಪೋಲೀಸರು ಮತ್ತೆ ಒಳಹೊಕ್ಕರು. ನಾನೂ ಒಳಗೆ ದಾಟಿದೆ. ಬಾಗಿಲ ಮೂಲೆಯಲ್ಲಿ ಒಂದು ವಸ್ತುವನ್ನು ಪೋಲೀಸಿನವನೊಬ್ಬ ಕಾಲಿನಲ್ಲಿ ಒದೆದು ನೋಡಿದ. ಬಟ್ಟೆ ತೆಗೆದ. ಅದು ಹಲಸಿನ ಕಾಯಿ ಆಗಿತ್ತು. ಚಿಟಿಕೆ ಹೊಡೆದು ಬಾರಿಸಿ ನೋಡಿ, ಮೂಸಿದ, ಹಣ್ಣೇ ಎಂದು ತಿಳಿಯಲು, ಅದು ಕಾಯಾಗಿತ್ತು. ಮತ್ತೊಂದು ಪಕ್ಕದಲ್ಲಿ ಕಣಜಕ್ಕೆ ಅಪ್ಪಿಕೊಂಡು ಉದ್ದನ ಆಕೃತಿಯೊಂದುವಾಲಿತ್ತು. ಒಬ್ಬ ಪೋಲೀಸಿನವ ಬಟ್ಟೆ ಎಳೆದ. ಆ ಆಕೃತಿ ಕಣಜಕ್ಕಿಂತ ಉದ್ದವಾಯಿತು. ಮುಖ ತಿರುವಿತು. ನೋಡುತ್ತೇನೆ; ಮಂಡಗಳಲೆಯ ಹೊಸೂರು ರಾಮನಾಯ್ಯರು! ಅವರೂ ಗಾಬರಿಯಲ್ಲಿ ನನ್ನೊಂದಿಗೆ ಒಳಹೊಕ್ಕು ಸಿಕ್ಕಿ ಬಿದ್ದವರು. ಅವರು ಒಳಗೆ ಇರುವ ಸುಳಿವು ನನಗೆ ಮೊದಲೇ ತಿಳಿದಿದ್ದರೆ ಪೋಲೀಸರಿಗೆ ಕೈಕೊಟ್ಟು ಹೇಗೋ ಪಾರಾಗಬಹುದಿತ್ತು. ಎಂದು ಕೊಂಡು ವ್ಯಥೆಪಟ್ಟೆ, ನನಗೆ ನಮ್ಮ ಕಾಗದ ಪತ್ರಗಳೆಲ್ಲಿ ಪೋಲೀಸರ ಕೈಗೆ ಸಿಕ್ಕಿಬಿಡುವವೋ ಎಂಬ ದಿಗಿಲು. ಅದಕ್ಕೇ ನಾನು ಒಳಗೆ ಬಂದುದು. ಕಾಗದ ಪತ್ರಗಳನ್ನು ಮುಚ್ಚಿಟ್ಟಿದ್ದ ಹಾಸಿಗೆ ಪಿಂಡಿಯ ಮೇಲೆ ಭದ್ರವಾಗಿ ಕುಳಿತೇ ಬಿಟ್ಟೆ, ಎಲ್ಲರೂ ಹೊರ ಬಿದ್ದ ಮೇಲೇ ಅಲ್ಲೆ, ನಿಂತಿದ್ದ ನಮ್ಮ ಸಹಾಯಕನಿಗೆ ಕಣ್ಣ ಸನ್ನೆ ಮಾಡಿ, ಬಾಯಿನಲ್ಲಿ “ನನ್ನ ಹಾಸಿಗೆ ಬಟ್ಟೆ ಎಲ್ಲ ಸಾಗರಕ್ಕೆ ಕಳಿಸಿ” ಎಂದು ಹೇಳುತ್ತಾ ಹೊರಗೆ ಬಂದೆ. ಅಷ್ಟರಲ್ಲಿ ಪೋಲೀಸರು ಅನೇಕರನ್ನು ಬಂಧಿಸಿ ಬಾವಿಕಟ್ಟೆಗೆ ತಂದಿದ್ದರು. ‘ಅಯ್ತಲ್ಲಾ ಹೂ, ನಡೀರಿ’ – ಎನ್ನುತ್ತಾ ಎಲ್ಲರಿಗೂ ನಮಸ್ಕರಿಸಿ, ಆಗಲೇ ಮೊಳಗುತ್ತಿದ್ದ ಜಯಕಾರಗಳ ಮಧ್ಯೆ ನಡೆದು ಬಂದು ವ್ಯಾನಿನಲ್ಲಿ ಕುಳಿತೆ. ಇತರ ಬಂದಿಗಳೊಂದಿಗೆ, ‘ಇನ್‌ಕಿಲಾಬ್‌ ಜಿಂದಾಬಾದ್‌’, ‘ಉಳುವವನೇ ಹೊಲದೊಡೆಯ’ ಎಂದು ಜಯ ಜಯಕಾರ ಮಾಡುತ್ತಾ ಸಾಗರಕ್ಕೆ ಬಂದೆವು. ನ್ಯಾಯಾಲಯದ ಮುಂದೆ ನಿಲ್ಲಿಸಿ, ಜೈಲಿಗೆ ಸಾಗಿಸಿದರು. ಜೈಲಿನಲ್ಲಿ ನಮಗೆ ಹಾರ್ದಿಕ ಸ್ವಾಗತ: ಜೈಜೈಕಾರ.

* * *

ಸ್ವರಾಜ್ಯ ಬಂತು

೧೯೪೨ ಭಾರತ ದಿಲ್ಲಿಯಿಂದ ಹಳ್ಳಿಯತನಕ ಒಂದೇ ಕೂಗು! ‘ಕ್ವಿಟ್ – ಇಂಡಿಯಾ’, ‘ಚಲೇಜಾವ್’, ‘ಬ್ರಿಟಿಶರೇ ಭಾರತದಿಂದ ತೊಲಗಿ’, ೧೯೫೭ರ ಸಿಪಾಯಿ ದಂಗೆಯಿಂದ ಆರಂಭವಾದ ಬಿಡುಗಡೆಯ ಹೋರಾಟದ ಸಂದೇಶ ಭಾರತದ ಜನತೆಯ ಮನೆಮನೆಗೂ ಮನಕ್ಕೂ!! ಮುಟ್ಟಿದ ಸಮಯ, ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀಕೀ ಜೈ! ಜೈ ಜೈಕಾರಗಳ ಘೋಷಣೆ ‘ಮಾಡು ಇಲ್ಲವೇ ಮಾಡಿ’, ಶಪಥ. ಮಹಾತ್ಮರೇ ಸಂಗ್ರಾಮದ ಮುಂದಾಳು, ಆದರೆ ಸರೆಯಾಳು.

ಆಗ ನಾನು ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಒಬ್ಬ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿ ಆಯ್ಕೆಯ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆಂದು ಹಾಸ್ಟಲಿನಿಂದ, ಮ್ಯಾನೇಜರವರ ಹೆದರಿಕೆಗೆ ಬೆದರಿ, ಶಾಲೆಯತ್ತ ಹೋಗುತ್ತಿದ್ದೆ. ಶಾಲೆ ಬಂದ್ ಮಾಡುವಲ್ಲೆ ಆಗಲೇ ನೂರಾರು ವಿದ್ಯಾರ್ಥಿ – ವಿದ್ಯಾರ್ಥಿನಿಯಾರು ತೊಡಗಿದ್ದುದು ದೂರದಿಂದಲೇ ಕಂಡಿತು. ಜಯಘೋಷಗಳು ಮೊಳಗುತ್ತಿದ್ದುದೂ, ಪೋಲೀಸರ ಪೇಚೂ ಎಲ್ಲಾ ನನ್ನ ಮೈನವಿರೇಳಿಸಿದವು. ಕೈಲಿದ್ದ ಕಾಗದವನ್ನು ಅಲ್ಲೇ ಬಿಸುಟು, ನನು ಸತ್ಯಾಗ್ರಹಿಯಾಗಿ, ಮೈ ಮರೆತು, ಎದೆಯುಬ್ಬಿ. ಜೈಕರ ಮಾಡುತ್ತಾ ಮುನ್ನುಗ್ಗಿದೆ. ಮುನ್ನು ಗ್ಗುವವರನ್ನು ಕೂಡಿಕೋಂಡೆ. ಶಾಲೆ ಬಂದ್ ಅನೇಕರ ಬಂಧನ, ಬಂದೀಖಾನೆಗೆ ರವಾನೆ, ಜೈ ಜೈಕಾರಗಳ ಮೊಳಗು, ಬೀಳ್ಕೊಡಿಗೆ, ಮೆರವಣಿಗೆ ಹರತಾಳ, ಬಹಿರಂಗ ಸಭೆ, ಅನೇಕರ ಭಾಷಣ, ಪ್ರಭಾತಪೇರಿ ಸಭೆ. ಇವು ತೀರ್ಥಹಳ್ಳಿಯ ಜನತೆಯ ನಿತ್ಯ ಹೋರಾಟ. ದಿನದಿನಕ್ಕೂ ಉಗ್ರರೂಪ ತಾಳಿತು. ಹೋರಾಟ ಹಳ್ಳಿ ಹಳ್ಳಿಗೂ ಹಬ್ಬಿತು. ದಿನ ಕಳೆದಂತೆ ಬಿಡುತಗಡೆಗಳೂ ಅರಂಭವಾದವು. ಹೋರಾಟ ಇಳಿಮುಖವಾಗತೊಡಗಿತು. ಬಂಧನಕ್ಕೊಳಗಾಗದೆ ಉಳಿದಿದ್ದ ನಾವು ಕೆಲವರು ಊರು ಊರು ಸುತ್ತಿ ಸುತ್ತಿ ಸಭೆ – ಮೆರವಣಿಗೆ ಮುಂದುವರಿಸಿಕೊಂಡೇ ನಡೆದವು. ಚಳವಳಿಗೆ ಇನ್ನೂ ಉಗ್ರ ಸ್ವರೂಪಕೊಡಲು, ಹೋರಾಟ ಹಿಂಸೆಯ ಹಾದಿಹಿಡಿದರೂ ಚಿಂತೆಯಿಲ್ಲವೆಂದು, ಗುಪ್ತ ಪ್ರಚಾರ, ಹಸ್ತಪತ್ರಿಕೆಗಳ ಹಂಚಾಟದಲ್ಲೇ ಭೂಗತರಾಗಿದ್ದ ಉಗ್ರಗಾಮಿಗಳು ತೊಡಗಿದರು. ಅಂತೆಯೇ ನಾವು ಕೆಲವರು ಪೋಸ್ಟ್‌ಡಬ್ಬ ಕೀಳುವುದು, ತಂತಿ ಕತ್ತರಿಸುವುದು ಮುಂತಾದ ವಿಧ್ವಂಸಕ ರಾತ್ರಿ ಚಟುವಟಿಕೆಗಳಲ್ಲಿ ತೊಡಗಿದೆವು. ನೂರಾರು ಜನ ಮುಖಂಡರು, ಸ್ಥಾನಬದ್ಧತೆ ಕೈದಿಗಳು ಅವರ ಮಧ್ಯೆ ಮೈಮುರಿ ಪೋಲೀಸರಿಂದ ಬಡಿಸಿಕೊಂಡು ಮೊಕದ್ದಮೆಯನ್ನು ಎದುರಿಸುವ ಅಂಡರ್ ಟ್ರಯಲ್ ಕೈದಿಗಳು, ನಾವು ಕೆಲವರು, ಎಲ್ಲಾ ಕೈದಿಗಳೇ, ಎಲ್ಲರ ಗುರಿಯೂ ಒಂದೇ ಮಾತೃಭೂಮಿಯನ್ನು ಪರದಾಸ್ಯದಿಂದ ಮುಕ್ತಮಾಡುವುದು. ಅದಕ್ಕಾಗಿ ಸೆರೆಮನೆವಾಸ, ತ್ಯಾಗ ಬಲಿದಾನಗಳಿಗೆ ಸಿದ್ಧರಾದವರು, ಗಾಂಧೀಯವರ ಅಹಿಂಸಾ ದೀಕ್ಷೆ ತೊಟ್ಟವರು. ತೊಡದವರು ಎಲ್ಲರೂ ಬ್ರಿಟಿಷ್ ಸರ್ಕಾರದ ಬಂದೀಖಾನೆಯ ಬಂಧುಗಳು. ಅಲ್ಲೇ ನನ್ನ ವಿವಿಧ ರಾಜಕೀಯ ದರ್ಶನ, ಸಿದ್ಧಾಂತ ಕಾರ್ಯಕ್ರಮ, ಗುರಿಗಳ ಅಭ್ಯಾಸ ಆರಂಭವಾದುದು. ಗ್ರಂಥಗಳ ಅಭಾವ. ಇದ್ದ ಪುಸ್ತಕಗಳೇ ಪುಸ್ತಕ. ಜವಾಹರಲಾಲರ ಡಿಸ್ಕವರಿ ಆಫ್ ಇಂಡಿಯಾದಿಂದ ಹಿಡಿದು ಮೀನೂ ಮಸಾನಿಯವರ ಸೋಷಲಿಸಂ ರೀಕನ್ಸಿಡರ್ಡ್ವರೆಗೂ, ಮಾರ್ಕ್ಸ್ವಾದ, ಗಾಂಧೀವಾದದಿಂದ ಹಿಡಿದು ಟ್ರಾಟ್ಸ್ಕಿಯವರೆಗೂ ಪರಿಚಯವಾಯಿತು. ಉರ್ದು, ತಮಿಳು, ಹಿಂದೀ ಉಪಾಧ್ಯಾಯಾರು ದೊರೆತರು. ಸೆರೆಮನೆಯೇ ನನಗೆ ಒಂದು ವಿಶ್ವವಿದ್ಯಾನಿಲಯವಾಯಿತು. ಅನುಭವವೇ ಅನುಭವ! ಇದೇ ನನ್ನ ರಾಜಕೀಯ ಜೀವನಕ್ಕೆ ನಾಂದಿ. ಚಿರಸ್ಮರಣೀಯ. ಕೆಲವು ತಿಂಗಳುಗಳ ಕಾಲ ನ್ಯಾಯಾಲಯದ ಮುಂದೆ ಹಾಜರಾಗುವುದು, ಮರಳಿ ಜೈಲಿಗೆ ಹೋಗುವುದು: ನಡೆದು, ಕೆಲವು ತಿಂಗಳ ಶಿಕ್ಷೆ ನ್ಯಾಯಾಧೀಶರ ತೀರ್ಪು, ಮತ್ತೆ ಸೆರೆಮನೆ ಸೇರಿದುದು, ಶಿಕ್ಷೆ ಮುಗಿಯುವುದರೊಳಗೆ ಬಿಡುಗಡೆ: ಹೊರ ಪ್ರಪಂಚಕ್ಕೆ ಪ್ರವೇಶ: ಮತ್ತೆ ತೀರ್ಥಹಳ್ಳಿ ಪೌಢಶಾಲೆಯಲ್ಲಿ ಎಸ್. ಎಸ್. ಎಲ್. ಸಿ ವ್ಯಾಸಂಗ ಮುಂದುವರಿಕೆ.

ಭಾರತ ಸ್ವಾತಂತ್ರ್ಯ ಸಂಗ್ರಾಮ ತುಟ್ಟ ತುದಿಯನ್ನು ಮುಟ್ಟಿದುದು ೧೯೪೨ರಲ್ಲೇ, ನಂತರದ ೫ ವರ್ಷಗಳನ್ನು ಸಮಾಧಾನಗಳಲ್ಲಿ ಕಳೆದೆವೆನ್ನಬಹುದು. ಸಂಧಾನವೇನೋ ಫಲಿಸಿತು.

೧೯೪೭ ಆಗಸ್ಟ್ ೧೫ ಬೆಳಗಿನ ಶೂನ್ಯಗಳಿಗೆ, ಅಶೋಕ ಚಕ್ರ ಹೊತ್ತ ಭಾರತದ ತ್ರಿವರ್ಣಧ್ವಜ ಬ್ರಿಟಿಷರ ಧ್ವಜದ ಸ್ಥಾನವನ್ನು ಎರಿ ಹಾರಾಡತೊಡಗಿತು. ಧ್ವಜವಂದನೆ, ಜನಗಣಮನ ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ. ಮೌಂಟ್ ಬ್ಯಾಟನ್ನರಿಂದ ಜವಾಹರಲಾಲ ನೆಹರೂ ಅವರಿಗೆ ಅಧಿಕಾರ ಹಸ್ತಾಂತರ.

ಅಧಿಕಾರವೇನೋ ಬಂತು ಜವಾಹರಲಾಲರ ಕೈಗೆ, ಕಾಂಗ್ರೆಸ್ ಪಕ್ಷಕ್ಕೆ. ಭರತಖಂಡ ಮಾತ್ರ ತುಂಡಾಗಿ ಬ್ರಿಟಿಷರು ನೆಟ್ಟ ಮತೀಯ ಬೀಜ ಫಲಿಸಿ, ಭಾರತ – ಪಾಕಿಸ್ತಾನಗಳಾಗಿ ರಕ್ತದ ಓಕುಳಿಯಲ್ಲಿ ಮಿಂದು ಮುಳುಗಿದವು.

ಹುಟ್ಟಿನೊಂದಿಗೇ ಹುಟ್ಟಿದ ಮತೀಯ ಹಾಲಹಲದಿಂಧ ಎರಡು ರಾಷ್ಟ್ರಗಳಲ್ಲಿ ನರಮೇಧ ನಿರಾಂತಕ ನಡೆಯಿತು. ‘ನನ್ನ ಹೆಣದ ಮೇಲೆ ಭಾರತದ ವಿಭಜನೆ ಸಾಧ್ಯಎಂದು ನುಡಿದಿದ್ದ ಗಾಂಧೀಜಿ ರಾಷ್ಟ್ರಪಿತ ಧೃತರಾಷ್ಟ್ರನಂತೆ, ಕುರುಕ್ಷೇತ್ರವನ್ನು ನೋಡಲಾಗದೆ ಕ್ಷಣಕಾಲ ಕಣ್ಣುಮುಚ್ಚಿದ, ಕಣ್ಣೀರು ಮಿಡಿದ, ಗದ್ಗದಿತ ವಿಷಕಂಠನಾದ. ನೋಹನ ನೌಕೆಯಂತೆ ರಕ್ತ ಸಾಗರದ ಮೇಲೆ ನವಖಾಲಿಗೆ ಸಾಗಿದ. ಊರು ಮನೆ, ಬಂಧು ಬಳಗ, ಗಂಡ ಹೆಂಡತಿ, ಮಕ್ಕಳು ಮರಿ ಕಳೆದುಕೊಂಡ ದುಃಖವನ್ನು ಒರೆಸಲೆತ್ನಿಸದ. ಕೊನೆಗೆ ಒಂದು ದಿನ ಸಂಜೆ ತಾನೇ ಮತೀಯ ಸೌಹಾರ್ದಕ್ಕಾಗಿ, ಮಾನವತೆಯ ಮೇಲ್ಮೆಗಾಗಿ ಗೀತೆ, ಕುರಾನು, ಬೈಬಲ್ ಪ್ರಾರ್ಥನಾ ಸಮಯ, ಮತಾಂಧಕನ ಗುಂಡಿಗೆ ಎದೆಯೊಡ್ಡಿ ಹೇ ರಾಮ! ಎಂದು ಕುಸಿದು ಬಿದ್ದ ದೆಹಲಿಯಲ್ಲಿ; ಅಸುನೀಗಿದ ಬಿರ್ಲಾ ಭವನದಲ್ಲಿ. ಆತನ ನೆತ್ತರಿನಿಂದ ದಾಹ ನೀಗಿಸಿಕೊಂಡ ಧರೆ ಪಾವನ!

ತಂದೆ ಏನು ಮಾಡಿದರೂ ಹರ ಎನ್ನದೆ, ತಾನು ಸತ್ಯವೆಂದು ನಂಬಿದ ಹರಿಯನ್ನೇ ಜಪಿಸಿ ಪ್ರಹ್ಲಾದ ಪಟ್ಟಪಾಡು ಒಂದು ಸತ್ಯಾಗ್ರಹವೇ. ತನಗೆ ನ್ಯಾಯವೆಂದು ತೋರಿದುದನ್ನು ತಿಳಿಯದವರಿಗೆ ತಿಳಿಸಿಹೇಳುವ ನನ್ನ ಜನ್ಮ ಸಿದ್ಧ ಹಕ್ಕನ್ನು ನೀವು ಮೊಟಕು ಮಾಡಲಾರಿರಿ ಎಂದು ನ್ಯಾಯಲಯಕ್ಕೆ ನಿರ್ಬಯವಾಗಿ ತಳಿಸಿ, ವಿಚಾರ ಸ್ವಾತಂತ್ರವಿಲ್ಲದೆ ಬದುಕುವುದಕ್ಕಿಂತ ಹೆಮ್‌ಲಾಕ್‌ಕುಡಿದು ಸಾಯುವುದೇ ಮೇಲೆಂದು ಅವರು ಕೊಟ್ಟ ವಿಷದ ಬಟ್ಟಲನ್ನು ಪೂರ್ಣ ಕುಡಿದು ಪ್ರಾಣಬಿಟ್ಟ ಸಾಕ್ರೆಟೀಸ್ ಮತ್ತೊಬ್ಬ ಸತ್ಯಾಗ್ರಹಿ. ಮಗದೊಬ್ಬ ಹೆನ್ರಿ ಡೆವಿಡ್ ಥೋರೋ, ೨೦ನೇ ಶತಮಾನಕ್ಕೇರಿ ಕಾಲಿಡುತ್ತಲೇ ತೀರಿಹೋದ ರಸ್ಕಿನ್, ಅವರ ವಿಚಾರಗಳಿಗೆ ಮಾರುಹೋದ ಗಾಂಧೀ. ಆತನೇ ಮುಂದೆ ಆದ ಮಹಾತ್ಮ. ಈ ಎಲ್ಲ ಸತ್ಯಾಗ್ರಹಿಗಳ, ದಾಶ್ನಿಕರ, ಮಾರ್ಕ್ಸ್‌ನ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದ ಭಾರತದ ಇತಿಹಾಸದ ಹೊಸ್ತಿಲಲ್ಲಿ ಕಣ್ಣುಜ್ಜಿದ ನನ್ನ ರಾಜಕೀಯ ಗುರು ಡಾ. ರಾಮಮನೋಹರ ಲೋಹಿಯಾ ಅವರಿಗೆ – ನಾನು ಶರಣು ಹೋಗಿರುವುದು ಈ ಮಹಾಮಹಿಮರಿಗೆ, ಅವರ ವಿಚಾರರಕ್ಕೆ. ಈ ಶತಮಾನದ ಹೆಬ್ಬಯಕೆ ವ್ಯಕ್ತಿಸ್ವಾತಂತ್ರ ಸಹಿತ ಸಂಭವ. ಸಮಾನತೆ, ಅಧಿಕಾರದ ವಿಕೇಂದ್ರೀಕರಣ, ಸುಭಕ್ಷೆ, ಶಾಂತಿ. ‘ಸರ್ವರಿಗೂ ಸಮಪಾಲು’ ‘ಸರ್ವರಿಗೂ ಸಮಬಾಳು’ ನೀಡುವ ಸಮಾಜವಾದ, ಗುರಿ; ಅಹಿಂಸಾತ್ಮಕವಾಗಿಯೇ ಕ್ರಾಂತಿಯನ್ನು ಸಾಧಿಸುವುದು ಮಾರ್ಗ ಇದು ನಾವು ತುಳಿಯಬೇಕಾದ ಹಾದಿ.

* * *