ಅಭಾವ ಪರಿಸ್ಥಿತಿ

೨೫ ಸೆಪ್ಟಂಬರ್ ೧೯೬೫

ಮಾನ್ಯ ಅಧ್ಯಕ್ಷರೇ, ಕಳೆದ ಎರಡೂವರೆ ದಿವಸಗಳಿಂದ ಈ ಸಭೆಯಲ್ಲಿ ಮಾನ್ಯ ಸದಸ್ಯರು ರಾಜ್ಯದ ಪರಿಸ್ಥಿತಿಯನ್ನು, ಮುಖ್ಯವಾಗಿ ಅಭಾವ ಪರಿಸ್ಥಿತಿಯನ್ನು ಒತ್ತಿ ಹೇಳಿದ್ದಾರೆ. ನಾನು ಈ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಇಷ್ಟಪಡುತ್ತೇನೆ. ಮಾನ್ಯ ಹುಚ್ಚಮಾಸ್ತಿಗೌಡರು ಈ ನಿರ್ಣಯವನ್ನು ತಂದು ಆ ನಿರ್ಣಯದ ಮೂಲಕ ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದಕಾಗಿ ಅವರು ಅಭಿನಂದನಾರ್ಹರು ಎಂದು ನಾನು ತಿಳಿಸುತ್ತೇನೆ. ಈಗ ಚರ್ಚೆಯನ್ನು ನಾನು ಕೇಳಿದ ಮೇಲೆ, ಈ ನಿರ್ಣಯ ಚರ್ಚೆಯಲ್ಲಿಯೇ ಪರ್ಯವಸಾನವಾಗುತ್ತದೆಯೇ? ಸರ್ಕಾರ ಆ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತದೆಯೇ? ಪರಿಸ್ಥಿತಿಯ ತೀವ್ರತೆಯನ್ನರಿತು ಕಾರ್ಯೋನ್ಮುಖವಾಗುತ್ತದೆಯೇ? ಎನ್ನುವ ಸಂಶಯ ನನಗೆ ಬಂತು. ಸರ್ಕಾರದವರು ಕೇಳುತ್ತಿದ್ದಾರೆ ಮತ್ತು ಸರ್ಕಾರದವರು ಪರಿಸ್ಥಿತಿಯನ್ನು ನೋಡುತ್ತಿದ್ದಾರೆ. ಈಚೆಗೆ ಜಿಲ್ಲಾಧಿಕಾರಿಗಳ ಸಭೆ ಸೇರಿದಾಗ ಬಹುಶಃ ಈ ಮಳೆಯ ಪರಿಸ್ಥಿತಿಯನ್ನು ಅವರು ಅಂಕಿ – ಸಂಖ್ಯೆಗಳಿಂದ ಸರ್ಕಾರದ ಮುಂದೆ ಇಟ್ಟು ಏನು ಕಾರ್ಯ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಎನ್ನುವ ವಿಷಯದ ಬಗ್ಗೆ ಚರ್ಚೆ ಮಾಡಿರಬಹುದು ಎಂದು ನಾನು ಭಾವಿಸುತ್ತೇನೆ.

ಚೀನಾ ಆಕ್ರಮಣದ ನಂತರ ದೇಶದಲ್ಲಿ ಉಂಟಾಗಿರುವ ತುರ್ತುಪರಿಸ್ಥಿತಿ ಇನ್ನೂ ಉಳಿದುಕೊಂಡೇ ಹೋಗುತ್ತಿದೆ. ಜೊತೆಗೆ ಈಗ ನಮ್ಮ ರಾಜ್ಯದಲ್ಲಿ ಮಳೆಬಾರದೆ, ಅಭಾವ ಪರಿಸ್ಥಿತಿಯುಂಟಾಗಿದೆ. ಎರಡು ಪರಿಸ್ಥಿತಿಗಳ ಮಧ್ಯೆ ಸಿಕ್ಕಿರುವ ಜನರ ಸ್ಥಿತಿ ನಿಜವಾಗಿಯೂ ಕಂಗಾಲು ಪರಿಸ್ಥಿತಿ ಎಂದು ನಾನು ಭಾವಿಸುತ್ತೇನೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಕರ್ತವ್ಯವೇನು? ಜನರ ಕರ್ತವ್ಯವೇನು? ಬದುಕಬೇಕಾದರೆ ಏನು ಉಪಾಯ ಹುಡುಕಬೇಕು? ಎನ್ನುವುದು ಬಹಳ ಮುಖ್ಯವಾದ ವಿಷಯ. ಮಾನ್ಯ ದೇವೇಂದ್ರಪ್ಪನವರು ಹೇಳಿದ ಹಾಗೆ ಇಂದ್ರ ಮಳೆ ಕರೆಯುತ್ತಾನೆ; ಬಸವಣ್ಣ ಉಳುತ್ತಾನೆ: ಭೂತಾಯಿ ಬೆಳೆಯುತ್ತಾಳೆ. ತೆರಿಗೆ ರಾಜದಂಡವಯ್ಯ ಬೂದಿಬಸವಯ್ಯ. ವರುಣ, ಮಾರುತ, ಇವರನ್ನು ಪರ್ಜನ್ಯ ಜಪದ ಮೂಲಕ ಒಲಿಸಿಕೊಳ್ಳಲು ಪ್ರಯತ್ನಿಸುವುದು ಈ ಸಭೆಯ ಮೂಲಕ ಸರ್ಕಾರದ ಮೂಲಕ ಆಗುವಂಥ ಕೆಲಸವಲ್ಲ. ಆಸ್ತಿಕರು ಆ ಒಂದು ಪದ್ಧತಿಯನ್ನು ನಡೆಸಿಕೊಂಡು ಹೋಗಬಹುದು.

ಸರ್ಕಾರಕ್ಕೆ ಇವತ್ತು ದೊಡ್ಡ ಜವಾಬ್ದಾರಿ ಇದೆ. ಎರಡು ಕೋಟಿ ಮುವತ್ತೈದು ಲಕ್ಷ ಜನರಿಗೆ ಅನ್ನ, ನೀರು, ಬಟ್ಟೆ ಉದ್ಯೋಗ ವಸತಿ ಇವುಗಳನ್ನು ಒದಗಿಸಿಕೊಡಲೇಬೇಕಾದಂಥ ಗುರುತರವಾದ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಹೊಣೆಯನ್ನು ಅವರು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಿರುವಾಗ ವರ್ಷ ತೆರಿಗೆಗಳು ತರ್ತುಪರಿಸ್ಥಿತಿಯ ಕಾರಣದಿಂದಾಗಿ, ಕೆಲವು ಸಂದರ್ಭಗಳಲ್ಲಿ ಒಂದಕ್ಕೆ ಎರಡಾದುದು ಉಂಟು. ಭೂಕಂದಾಯ ನಾಲ್ಕು ಕೋಟಿಯಿಂದು ಎಂಟು ಕೋಟಿ ಆಯಿತು. ಹಾಗೆಯೇ ಅನೇಕ ತೆರಿಗೆಗಳನ್ನು ನಾವು ದೇಶದ ರಕ್ಷಣೆಯ ಸಂಬಂಧದಲ್ಲಿ ಜನರ ಮೇಲೆ ಹೊಸದಾಗಿ ಹೊರಿಸಬೇಕಾಯಿತು.

ನಮ್ಮ ದೇಶದಲ್ಲಿ ನೂರಕ್ಕೆ ೮೦ ಜನ ಭೂಮಿಯನ್ನು ಆಶ್ರಯಿಸಿಕೊಂಡು, ಭೂಮಿಯಿಂದ ಬಂದ ಬೆಳೆಯನ್ನು ಮಾರಾಟ ಮಾಡಿ, ಅದನ್ನೇ ಊಟಮಾಡಿ ಅವರ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಡಾ. ರಾಮಮನೋಹರ ಲೋಹಿಯಾ ಅವರು ಹೇಳಿದ ಹಾಗೆ ದೇಶದಲ್ಲಿರುವುದು ೨೭ ಕೋಟಿ ಜನರ ದಿನದ ಆದಾಯ ಮೂರಾಣೆ ಎಂದು ಹೇಳಬಹುದು. ರೈತರು ಜೋಳ, ರಾಗಿ ಬೆಳೆಯುತ್ತಾರೆ. ಮಳೆ ಬಂದರೆ, ಬಿತ್ತಿದ ಬೀಜದಿಂದ ಕೈಗೆ ಬೆಳೆ ಸಿಕ್ಕರೆ, ಅದನ್ನು ಮಾರಾಟ ಮಾಡಿ ಜೀವನಮಾಡಬೇಕು. ಅಷ್ಟು ಹೀನ ಪರಿಸ್ಥಿತಿ ಹಳ್ಳಿಗಳಲ್ಲಿ ರೈತರದ್ದಾಗಿದೆ. ಮಾನ್ಯ ಸದಸ್ಯರು ಹೇಳಿದ ಹಾಗೆ, ನಮ್ಮ ರಾಜ್ಯದಲ್ಲಿ ಎಷ್ಟೋ ಯೋಜನೆಗಳನ್ನು ಮಾಡಿದ್ದರೆ, ಕೆಲಸಮಾಡಲು ಮಾರ್ಗದರ್ಶನ ಮಾಡಿದ್ದರೆ, ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿತ್ತು. ತಂಗಭದ್ರಾ ಅಣೆಕಟ್ಟು ಕಟ್ಟಿ ದುಡ್ಡು ಖರ್ಚು ಮಾಡಿದ್ದಾರೆ. ನೀರು ಹೊಲದ ಮೇಲೆ ಹೋಗುವ ಹಾಗೆ ಮಾಡಿದ್ದಾರೆ. ಆದರೆ, ನೀರು ಬಳಸಲು ಸಾಧ್ಯವಾಗಿಲ್ಲ. ಈ ಪರಿಸ್ಥಿತಿಯನ್ನು ನಾವು ವ್ಯಾಪಕ ದೃಷ್ಟಿಯಿಂದ ನೋಡಬೇಕು. ಇಂದು ನಾವು ಆಧುನಿಕ ಯುಗದಲ್ಲಿ ಇದ್ದೇವೆ. ಇದು ಸ್ಛುಟ್ನಿಕ್ ಯುಗ. ಮಾನವನು ಪ್ರಕೃತಿಯ ಒಂದು ಅಂಶ, ಅಂಗವಾದರೂ ಪ್ರಕೃತಿಯನ್ನು ತನ್ನ ಹತೋಟಿಗೆ ತರಲು ಸತತ ಹೋರಾಡುತ್ತಿದ್ದಾನೆ. ಆದರೂ ಕೂಡ ಅದಕ್ಕೆ ಪ್ರಕೃತಿಯ ಒಪ್ಪಿಗೆ ಬೇಕು. ಆಗಾಗ್ಗೆ ಭೂಕಂಪವಾಗುತ್ತದೆ. ನದಿಗಳು ಹೊರಸೂಸಿ ಹರಿದು ಪ್ರವಾಹಕ್ಕೆ ತುತ್ತಾಗುತ್ತಾರೆ. ಮಳೆ ಹೋಗಿ ಕ್ಷಾಮ ಉಂಟಾಗುತ್ತದೆ. ಅತಿವೃಷ್ಟಿ ಅನಾವೃಷ್ಟಿಗೆ ಜನ ತುತ್ತಾಗುತ್ತಾರೆ. ಪ್ರಕೃತಿಯ ದಯದಾಕ್ಷಿಣ್ಯದಲ್ಲಿ ಇಂದು ನಾವು ಬದುಕುತ್ತಿದ್ದೇವೆ. ಅದರಲ್ಲಿಯೂ ನಮ್ಮ ರಾಜ್ಯದಲ್ಲಿ ನಮ್ಮ ದೇಶದಲ್ಲಿ ಮುಖ್ಯವಾಗಿ ರೈತನ ಜೀವನ ಮಳೆ ನೀರಿನ ಮೆಲೆ ನಿಂತಿದೆ; ಪ್ರಕೃತಿಯನ್ನು ಅವಲಂಬಿಸಿಕೊಂಡಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಸರಕಾರದ ಮಟ್ಟಿಗೆ ಪರಿಹಾರದ ಕೆಲವು ತುರ್ತುಕಾರ್ಯಗಳನ್ನು ತಿಳಿಸಬೇಕೆಂದಿದ್ದೇನೆ. ಮುಖ್ಯವಾಗಿ ಇಂಥ ಸನ್ನಿವೇಶದಲ್ಲಿ ಸರಕಾರ ಎಲ್ಲ ಅವಶ್ಯಕ ವಸ್ತುಗಳ ಬೆಲೆ ಹತೋಟಿಯಲ್ಲಿ ಹಿಡಿದು ಇಡಬೇಕು. ಇಂಥ ಸಂದರ್ಭದಲ್ಲಿ ಕಳ್ಳ ವ್ಯಾಪಾರ ಮಾಡುವವರು ಹೆಚ್ಚಾಗಿ ದುರುಪಯೋಗಪಡಿಸಿಕೊಂಡು ಲಾಭ ಪಡೆಯತಕ್ಕಂಥ ಜನ ಇದ್ದಾರೆ. ಜನರಲ್ಲಿ ಪ್ಯಾನಿಕ್ ಕ್ರಿಯೇಟ್ ಮಾಡಿ ಮಳೆ ಬೆಳೆ ಇಲ್ಲ – ಎಂದು ಪ್ರಚಾರ ಮಾಡುತ್ತಾ ಇಂಥ ಜನ ದೇಶದಲ್ಲಿ ಕ್ಷೋಭೆ, ಹಾಹಾಕಾರ ಉಂಟು ಮಾಡುತ್ತಾರೆ. ಇಂಥ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಚೀನಿಯರೂ ಸಹ ಲಾಭ ಪಡೆಯುತ್ತಾರೆ. ಆದುದರಿಂದ ಸಂದರ್ಭದಲ್ಲಿ ಸರಕಾರ ಎಲ್ಲ ವಸ್ತುಗಳ ಬೆಲೆಯನ್ನು ಹತೋಟಿಯಲ್ಲಿಡಲು ತೀವ್ರ ಪರಿಣಾಮಕಾರಿ ಕ್ರಮತೆಗೆದುಕೊಳ್ಳಬೇಕು. ಇದು ಇಡೀ ದೇಶಕ್ಕೆ ಸಂಬಂಧಪಟ್ಟ ವಿಷಯ. ಕೇಂದ್ರ ಸರಕಾರ ರಾಜ್ಯ ಸರಕಾರ ಒಟ್ಟಾಗಿ ಮೂಲ ಅವಶ್ಯಕ ವಸ್ತುಗಳ ನಿತ್ಯ ಬಳಕೆಗೆ ಬೇಕಾಗತಕ್ಕ ವಸ್ತುಗಳ ಬೆಲೆ ಏರದಂತೆ ಅಲ್ಲಲ್ಲಿ ಅಗ್ಗದರದ ಅಂಗಡಿಗಳನ್ನು ತೆರೆಯಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಮೂಲಕ ಇಂಥ ಅಗ್ಗದ ದರದ ಅಂಗಡಿಗಳನ್ನು ತೆರೆದು  ಆಹಾರ ಧಾನ್ಯಗಳನ್ನು ಸೂಕ್ತವಾದ ಬೆಲೆಗೆ ದೊರೆಯುವ ಹಾಗೆ ಮಾಡಿ ಹತೋಟಿಯಲ್ಲಿ ಇಡಬೇಕಾದುದು ಸರಕಾರದ ಮೊದಲನೇ ಕೆಲಸ.

ಮೇವು ಇಲ್ಲದೆ ಇಂದು ದೇಶದಲ್ಲಿ ಸಹಸ್ರಾರು ಜಾನುವಾರುಗಳು ಸಾಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು ೧೬ ವರ್ಷವಾದರೂ ನೀರಿನ ಅಭಾವ ಹೋಗಿಲ್ಲ. ಎಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬಾವಿಗಳ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಸಹಸ್ರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಬಾವಿ ಇಲ್ಲದೆ, ಕೆರೆಯ ನೀರು ಕಟ್ಟೆ ನೀರನ್ನೋ ಕುಡಿದು ಬದುಕುವ ಒಂದು ಹೀನ ಸ್ಥಿತಿ ಇದೆ. ಜನರಿಗೆ ಕುಡಿಯುವ ನೀರನ್ನು ಒದಗಿಸಬೇಕು, ಜಾನುವಾರುಗಳಿಗೆ ಇನ್ನೂ ಹೆಚ್ಚಿನ ನಿಗಾ ಕೊಟ್ಟು, ನೀರನ್ನು ಒದಗಿಸಬೇಕಾದದು ಅಗತ್ಯವಾದುದು. ಮೂಕಪ್ರಾಣಿಗಳಾದ ಜಾನುವಾರುಗಳಿಗೆ ನೀರು ಎಲ್ಲಿಂದ ಬರಬೇಕು? ನೀರಿಲ್ಲದೆ ಅವು ಸಣ್ಣಗೆ ಆಗಿ ಸಹಸ್ರಾರು ಸಾಯುತ್ತಿವೆ. ಈ ರೀತಿಯಾದರೆ ಹಳ್ಳಿಯ ಆರ್ಥಿಕ ವ್ಯವಸ್ಥೆ ಹಾಳಾಗಿ ಹೋಗುತ್ತದೆ. ಜಾನುವಾರುಗಳಿಗೆ ಕೂಡಲೇ ನೀರು ಒದಗಿಸುವುದು: ಈ ತುರ್ತುಪರಿಸ್ಥಿತಿಯಲ್ಲಿ ಈ ಕೆಲಸವನ್ನು ಸರಕಾರ ಮಾಡಬೇಕು. ಇನ್ನು ಹಳ್ಳಿಗಳಲ್ಲಿ ಬೇಸಾಯ ಮಾಡುತ್ತ ಕೂಲಿ ಜನರು ಸಹಸ್ರಾರು, ಲಕ್ಷ ಸಂಖ್ಯೆಯಲ್ಲಿ ಇದ್ದಾರೆ. ಆಭಾವ ಪರಿಸ್ಥಿತಿಯಲ್ಲಿ ಅವರಿಗೆ ಕೆಲಸವಿರುವುದಿಲ್ಲ; ಯಾರೂ ಕರೆಯುವುದಿಲ್ಲ. ಅಂಥವರು ಅನ್ನವಿಲ್ಲದೆ ದಿಕ್ಕಾಪಾಲು ಆಗುತ್ತಿದ್ದಾರೆ. ಆಹಾರವಿಲ್ಲದೆ ಸೊಪ್ಪು ತಿಂದು ಬದುಕುವುದಕ್ಕೆ ಪ್ರಯತ್ನಿಸುವಾಗ, ಕಾಯಿಲೆ ಕಸಾರಿಕೆ ಬಿದ್ದು ಸಾಯುವ ಪರಸ್ಥಿತಿ ಉಂಟಾಗಿದೆ. ಮುಖ್ಯವಾಗಿ ಭೂಮಿ ಇಲ್ಲದ ಹರಿಜನರು ಇದ್ದಾರೆ. ಹಳ್ಳಿಯಲ್ಲಿ ಅವರಿಗೆ ಉದ್ಯೋಗವಿಲ್ಲ. ಜಮೀನಿನಲ್ಲಿ ಸಿಕ್ಕತಕ್ಕಂಥ ಕೆಲಸವನ್ನು ನೆಚ್ಚಿಕೊಂಡು ಜೀವನ ಮಾಡುತ್ತಿರುತ್ತಾರೆ. ಅವರಿಗೆ ಕೂಲಿ ಸಿಕ್ಕುವುದಿಲ್ಲ. ಅಂಥವರಿಗೆ ಏನೂ ಕೆಲಸ ಸಿಕ್ಕುವುದಿಲ್ಲ.

ಒಟ್ಟಿನಲ್ಲಿ ಜನರಿಗೆ ನೆರವು ನೀಡಬೇಕು. ಅಭಾವ ಪರಿಸ್ಥಿತಿ ಉಂಟಾದ ಪ್ರದೇಶದಲ್ಲಿ ಜನ ಊರು ಬಿಟ್ಟು ಅಲೆದಾಡುತ್ತಿದ್ದಾರೆ. ಅಂಥವರ ಸಲುವಾಗಿ ಗಂಜಿ ಕೇಂದ್ರ ತೆರೆಯಬೇಕು. ಎರಡು ಹೊತ್ತು ಗಂಜಿ ಕುಡಿದು ಬುದುಕುವ ಕಾಲ ಬರುತ್ತಿದೆ. ಇಂಥ ಕಾಲದಲ್ಲಿ ಬೇರೆ ಮಾರ್ಗ ಇಲ್ಲದಿರುವಾಗಿ ಇಂಥ ಜನರ ರಕ್ಷಣೆಯ ಭಾರ ಸರಕಾರ ಹೊರಬೇಕಾಗುತ್ತದೆ. ಇನ್ನು ದುಡಿದು ಜೀವನ ಮಾಡುವವರಿಗೆ ಉದ್ಯೋಗ ಒದಗಿಸಬೇಕು. ಆಯಾಯ ಊರಿನ ಜನರನ್ನೇ ಅಲ್ಲಿಯ ಕೆಲಸಕ್ಕೆ ಹಚ್ಚಬೇಕು; ಬಾವಿ ತೋಡುವುದಕ್ಕೆ ಸಾಲಾ, ಸಣ್ಣ ಪಿಕಪ್ ಹಾಕುವುದಕ್ಕೆ ಕೆರೆ ಹೂಳು ತೆಗೆಯುವುದು. ಮನೆಕಟ್ಟುವುದಕ್ಕೆ ಬೇಕಾದ ಸಲಕರಣೆ ತಯಾರು ಮಾಡುವುದು, ಮನೆ ಕಟ್ಟತಕ್ಕಂಥ ಕೆಲಸ, ಗೋ ಕಟ್ಟೆ ಕೆಲಸ, ಹಳ್ಳಿಗಳಲ್ಲಿ ಹಳ್ಳಿಯ ಜನರಿಗೆ ಅನುಕೂಲವಾಗುವ ಅವರಿಗೆ ಕೂಲಿ ಕೊಡಬೇಕು ಮತ್ತು ಅಗ್ಗದ ದರದಲ್ಲಿ ಆಹಾರ ಧಾನ್ಯ ಒದಗಿಸಬೇಕು.

ಈ ರೈತರಿಗೆ ಬೀಜ ಕೊಡುವುದು, ಮುಂಗಡ ಸಾಲ ಕೊಡುವುದು ಇದೆಲ್ಲಾ ಮಾಡಬೇಕಾದ್ದೇ. ಫಸಲು ಉಳಿಸುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಅಬಾವ ಪ್ರದೇಶಗಲ್ಲಿ ಈಗಾಗಲೇ ಅನೇಕರು ಬೇಡಿಕೆಯನ್ನು ಸರ್ಕಾರದವರ ಮುಂದೆ ಇಟ್ಟಿದ್ದಾರೆ. ಕಂದಾಯವನ್ನು ಮಾಫಿಮಾಡಬೇಕೆಂದು ಹೇಳಿದ್ದಾರೆ. ಈ ಗೊಂದಲ ಸಮಯದಲ್ಲಿ ಏನಾಗುತ್ತದೆ ಎಂದರೆ ಪಹಣಿ ಬರೆಯುವಾಗ ೬ ಆಣೆ ಎಂದು ಬರೆದಿರುತ್ತಾರೆ. ೬ ಆಣೆಗಿಂತ ಕಡಿಮೆಯಾದರೆ ಮಾಫಿಮಾಡಬೇಕೆಂದು ಕಾನೂನು ಇರುತ್ತದೆ, ಸಹಾಯ ಮಾಡುತ್ತಾರೆ. ಆದ್ದರಿಂದ ಶ್ರೀಮಾನ್ಯ ಕೃಷ್ಣಪ್ಪನವರು ಆ ಬರವಣಿಗೆಯ ಕಡೆಗೆ ಗಮನಕೊಡದೇ ಎಲ್ಲಿ ಅಭಾವ ಪರಿಸ್ಥಿತಿ ಇದೆ. ಫಸಲು ಒಣಗಿಹೋಗಿ ಹಾಳಾಗುತ್ತಾ ಇದೆ, ಆ ಪ್ರದೇಶಗಳಲ್ಲಿ ಕಂದಾಯ ಮಾಫೀ ಮಾಡಬೇಕು ಮತ್ತು ಈ ಸರ್‌ಚಾರ್ಜ್ ಹಾಕಿದ ಗಳಿಗೆ ಒಳ್ಳೆಯದಲ್ಲ ಎಂದು ಕಾಣುತ್ತದೆ. ಅದನ್ನು ವಸೂಲು ಮಾಡುವುದನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಇನ್ನೂ ಕೆಟ್ಟ ಪರಿಸ್ಥಿತಿ ಬಂದರೆ ಅಂತಹ ಪರಿಸ್ಥಿತಿಯಲ್ಲಿ ಸರ್‌ಚಾರ್ಜನ್ನು ಒಂದಕ್ಕೆ ಎರಡರಷ್ಟು ಮಾಡಿರುವುದನ್ನು ತೀವ್ರವಾಗಿ ವಸೂಲು ಮಾಡುವುದಕ್ಕೆ ಹೋಗಬಹುದು. ನಮ್ಮ ರಾಜ್ಯದಲ್ಲಿ ೧೫೨೦೩೦ ರೂಪಾಯಿ ಒಳಗೆ ಕಂದಾಯ ಕೊಟ್ಟು ಕೊಂಡು ಬಂದಿರತಕ್ಕ ನಮ್ಮ ರೈತರಿಗೆ ಸಂದರ್ಭದಲ್ಲಿ ಪೂರ್ಣ ಕಂದಾಯ ಮಾಫಿಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಪರಿಸ್ಥಿತಿಯನ್ನು ಹೊಗಲಾಡಿಸವುದಕ್ಕೆ ಸರ್ಕಾರದವರು ದೊಡ್ಡ ದೊಡ್ಡ ನೀರಾವರಿ ಯೋಜನೆಗಳನ್ನು ಮತ್ತು ಸಣ್ಣ ನೀರಾವರಿ ಯೋಜನೆಗಳನ್ನು ಮಾಡುತ್ತಿದ್ದಾರೆ. ದೊಡ್ಡ ಯೋಜನಗಳು ಇನ್ನೂ ಫಲ ಕೊಟ್ಟಿಲ್ಲ. ಉದಾಹರಣೆಗೆ ಭದ್ರಾ ಮತ್ತು ತುಂಗಭದ್ರಾ ಸಣ್ಣ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಎಂದು ಹೇಳಿ ವರ್ಷಕ್ಕೆ ೨ ಕೋಟಿ ರೂಪಾಯಿಗಳನ್ನು ವಿದ್ಯಚ್ಛಕ್ತಿ ಬೊರ್ಡಿನವರಿಗೆ ಕೊಟ್ಟು ಅವರ ಮೂಲಕ ಪಂಪ್‌ಸೆಟ್ಟುಗಳನ್ನು ಕೊಡುತ್ತೇವೆ. ವಿದ್ಯಚ್ಛಕ್ತಿ ಕೊಡುತ್ತೇವೆ ಎಂದು ಮಾಡಿದ್ದೀರಿ ಅದು ಇನ್ನೂ ಪೂರ್ತಿ ಸಫಲವಾಗಿಲ್ಲ. ಅದರ ಬಗ್ಗೆ ಈಗಾಗಲೇ ಅನೇಕ ಸದಸ್ಯರು ಒತ್ತಾಯ ಮಾಡಿ ಆ ಕೆಲಸ ಬೇಗ ಆಗಬೇಕೆಂದು ಹೇಳಿದ್ದಾರೆ. ಎಲ್ಲಿಯ ತನಕ ನಮ್ಮ ದೇಶದ ಬಹುಸಂಖ್ಯೆಯ ಜನರು ಈಗಿರುವ ರೀತಿಯಲ್ಲಿ ವ್ಯವಸಾಯವನ್ನೇ ತಮ್ಮ ಜಿವನಾಧಾರಾವಾಗಿ, ಕಸಬನ್ನಾಗಿ ಅವಲಂಬಿಸಿಕೊಂಡಿರುತ್ತಾರೋ ಮತ್ತೆ ಎಲ್ಲಿಯ ತನಕ ಮಳೆ ಬಂದು ಬೆಳೆ ಬೆಳೆಯತಕ್ಕ ವ್ಯವಸ್ಥೆಗೆ ಒಳಗಾಗಿರುತ್ತಾರೋ, ಅಲ್ಲಿಯ ತನಕ ಈ ಕ್ಷಾಮ, ಅಭಾವ ಪರಿಸ್ಥಿತಿಗಳು ಪದೇ ಪದೇ ಬರುತ್ತಲೇ ಇರುತ್ತವೆ. ಇದನ್ನು ಹೋಗಲಾಡಿಸಬೇಕಾದರೆ ನಾವು ಕೃತಕವಾದ ನೀರಿನ ಸರಬರಾಜನ್ನು ಮಾಡಿಕೊಳ್ಳಬೇಕು. ಅದಕ್ಕನುಗುಣವಾಗಿ ನಮ್ಮ ಸಣ್ಣ ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದೇ ಹೋದರೆ ರೈತನಿಗೆ ಆಗತಕ್ಕ ನಷ್ಟವನ್ನು ಯಾರೂ ಕಟ್ಟಿಕೊಡುವುದಕ್ಕೆ ಆಗುವುದಿಲ್ಲ. ಆದ್ದರಿಂದ ಅಂತಹ ಒಂದು ಯೋಜನೆಯನ್ನು ಇವತ್ತು ನಾವು ಕ್ರಮೇಣ ತೆಗೆದುಕೊಳ್ಳಬೇಕಾಗುತ್ದೆ. ಇಲ್ಲದೇ ಹೋದರೆ ರೈತನಿಗೆ ಆಗತಕ್ಕ ನಷ್ಟವನ್ನು ಯಾರೂ ಕಟ್ಟಿಕೊಡುವುದಕ್ಕೆ ಆಗುವುದಿಲ್ಲ. ಆದ್ದರಿಂದ ಅಂಥಹ ಒಂದು ಯೋಜನೆಯನ್ನು ಇವತ್ತು ನಾವು ಕ್ರಮೇಣ ತೆಗೆದುಕೊಳ್ಳಬೇಕಾಗುತ್ತದೆ. ಇನ್ನೂ ಮಳೆಗಾಲದಲ್ಲಿ ಹೊಳೆಗಳು ಹುಚ್ಚೆದ್ದು ದಡೆದ ಮೇಲೆ ಹರಿದು ಬರುತ್ತವೆ. ಕೆಲವು ಕಡೆ, ಕಳೆದ ಮಳೆಗಾಲದಲ್ಲಿ ಹೊಳೆಗಳು ಹುಚ್ಚೆದ್ದು ದಡದ  ಮೇಲೆ ಹರಿದು ಬರುತ್ತವೆ. ಕೆಲವು ಕಡೆ, ಕಳೆದ ಮಳೆಗಾಲದಲ್ಲಿ ಪ್ರವಾಹ ಬಂದಾಗ ಅಪಾಯ ಸ್ಥಿತಿಯುಂಟಾಯಿತು. ಪ್ರತಿವರ್ಷವೂ ಹೊಳೆಗಳು ಮೇಲೆ ಬಂದು ಅನೇಕರು ಮನೆಗಳನ್ನು ಕಳೆದುಕೊಂಡಿರುತ್ತಾರೆ. ಅಂತಹ ಹುಚ್ಚು ಹೊಳೆಗಳ ಮರ್ದನ ಮಾಡತಕ್ಕ ಕಾರ್ಯಕ್ರಮ ಹಾಕೊಳ್ಳಬೇಕಾಗಿದೆ. ನಮ್ಮ ರಾಜ್ಯದಲ್ಲಿ ವರದಾ ನದಿ ಇದೆ. ಅನೇಕ ಸಾರಿ ಹೇಳಿದ್ದೇನೆ. ಹೆಚ್ಚು ಹೆಚ್ಚಾಗಿ ಕೈಗಾರಿಕರಣ ಮಾಡಬೇಕು ಮತ್ತು ಒಂದು ವರ್ಷಕ್ಕೆ ಆಗುವಷ್ಟು ಯಾವಾಗಲೂ ನಮ್ಮಲ್ಲಿ ಸ್ಟಾಕ್ ರಾಗಿ, ಜೋಳ, ಗೋಡೌನ್ಗಳಲ್ಲಿ ಇಟ್ಟುಕೊಂಡಿರಬೇಕು.

ಇನ್ನು ಮಲೆನಾಡಿನ ವಿಷಯದಲ್ಲಿ ಒಂದು ಮಾತನ್ನು ಹೇಳುವುದಾದರೆ ಮಲೆನಾಡಿನಲ್ಲಿ ತುಂಗಭದ್ರಾ ನದಿ ಹರಿಯುತ್ತದೆ, ಶರಾವತಿ ಇದೆ. ಇವುಗಳಿಂದ ಶಿವಮೊಗ್ಗ ಜಿಲ್ಲೆಯ ಜನರಿಗೆ ಎಷ್ಷು ಪ್ರಯೋಜನವಾಗಿದೆ ಎಂಬುದನ್ನು ಸರ್ಕಾರದವರು ಗಮನದಲ್ಲಿಟ್ಟುಕೊಳ್ಳಬೇಕು. ಶಿವಮೊಗ್ಗ ಜಿಲ್ಲೆಯ ಸಂಪತ್ತನ್ನು ತೆಗೆದುಕೊಂಡು ಬೇರೆ ಕಡೆ ಅನುಕೂಲಗಳನ್ನು ಕಲ್ಪಸಿಕೊಡುತ್ತಾ ಇದಾರೆ. ಈಗ ಹೊಸದಾಗಿ ತೀರ್ಥಹಳ್ಳಿಯಲ್ಲಿ ಆಣೆಕಟ್ಟು ಹಾಕಬೇಕೆಂದು ಸರ್ವೇ ನಡೆಯುತ್ತಾ ಇದೆ. ನನ್ನ ಕ್ಷೇತ್ರದಲ್ಲಿ ಶರಾವತಿಯಿಂದ ಹೊಸನಗರ ತಾಲ್ಲೂಕಿನ ಬಹುಭಾಗ ಮುಳುಗಿ ಹೋಯಿತು. ತೀರ್ಥಹಳ್ಳಿಯಿಂದ ಇನ್ನು ಉಳಿದ ಎರಡು ತಾಲ್ಲೂಕುಗಳೂ ಮುಳುಗುವ ಪರಸ್ಥಿತಿ ಬರಬಹುದು. ಹೀಗಾಗಿ ಮಲೆನಾಡು ಪ್ರದೇಶದ ತೀರ್ಥಹಳ್ಳಿಯನ್ನು ಮುಳುಗಿಸಿ ಬಯಲು ಸೀಮೆಯಲ್ಲಿ ಬೆಳೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲೇ ಬೇಕೇ ಎನ್ನುವುದನ್ನು ಸರ್ಕಾರದವರು ಯೋಚನೆ ಮಾಡಬೇಕು. ಪರಿಸ್ಥಿತಿ ಕೆಟ್ಟು ಹೋದ ಮೇಲೆ ಕಾರ್ಯ ಮಾಡತಕ್ಕ ರೀತಿ ಆಗಬಾರದು.

ಬರಗಾಲದ ಸಮಸ್ಯೆ

ಆಗಸ್ಟ್ ೧೯೬೬

ಮಾನ್ಯ ಅಧ್ಯಕ್ಷರೆ, ಈಗೆ ಈ ರಾಜ್ಯದಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆ ಬಿದ್ದಿದೆ. ಹಾಗೂ ಬೀಳುತ್ತಾ ಇದೆ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಇನ್ನೂ ಸಾಕಷ್ಟು ಮಳೆ ಬಿದ್ದಿಲ್ಲ. ಕೆಲವು ಕಡೆ ಏನೂ ಮಳೆ ಬಿದ್ದಿಲ್ಲ. ಹಿಂದೆ ಇದ್ದಂಥ ಅಭಾವ ಪರಿಸ್ಥಿತಿ ಈಚೆಗೆ ಬಹಳ ಉತ್ಕಟವಾಗಿದೆ ಎಂಬ ವರದಿಗಳನ್ನು ಕೇಳುತ್ತಾ ಇದ್ದೇವೆ. ಕೆಲವು ಕಡೆಗಳಲ್ಲಿ ಆಹಾರ ದೊರೆಯದೆ ಉಪವಾಸ ಬಿದ್ದ ಜನರು ಸತ್ತಿರತಕ್ಕ ವರದಿಗಳೂ ಕೂಡ ಬಂದಿವೆ. ಚನ್ನಗಿರಿ ತಾಲ್ಲೂಕಿನಲ್ಲಿ ಹೋದ ತಿಂಗಳೂ ಅಂತಹ ಒಂದು ವರದಿ ಬಂತು. ಆಮೇಲೆ ಅದು ನಿಜವಲ್ಲ ಎಂದು ಹೇಳಿ ಜಿಲ್ಲಾಧಿಕಾರಿಗಳು ಒಂದು ವರದಿಯನ್ನು ಕೊಟ್ಟರು. ಉಪವಾಸ ಬಿದ್ದು ಹೊಟ್ಟೆಗೆ ಇಲ್ಲದೆ ಸತ್ತದ್ದು ಇಲ್ಲ ಎಂದು. ಈಚೆಗೆ ಕಡೂರು ತಾಲ್ಲೂಕಿನಿಂದ ಎರಡು ವರದಿಗಳು ಬಂದವು: ಒಬ್ಬ ಗರ್ಭಿಣಿ ಸ್ತ್ರೀ ತನ್ನ ಎರಡು ಮಕ್ಕಳ ಜೊತೆಯಲ್ಲಿ ಕೆರೆಯಲ್ಲಿ ಹಾರಿ ಪ್ರಾಣ ಬಿಟ್ಟಳು, ಎರಡು ಮೂರು ದಿವಸದ ಮೇಲೆ ಹೆಣಗಳು ಮೇಲೆ ಬಂದವು ಎಂದು ವರದಿ ಬಂತು. ಇನ್ನೊಂದು ಕಡೆ ಗಂಜಿಯಲ್ಲಿ ವಿಷ ಬೆರೆಸಿ ತಾನು ತನ್ನ ಮಕ್ಕಳೂ ಎಲ್ಲ ತಿಂದು ಪ್ರಾಣ ಬಿಟ್ಟರು. ಅದು ಕೂಡ ಕಡೂರು ತಾಲ್ಲೂಕಿನಲ್ಲೇ ಆದದ್ದು. ಇತ್ತೀಚೆಗೆ ನಡೆದ ಘಟನೆ, ಮಕ್ಕಳು ಮತ್ತು ಮಹೀಳೆ ತೀರಿಹೋದರು. ಗಂಡ ಹೇಗೆ ಆಸ್ಪತ್ರೆಗೆ ಹೋಗಿ ಬದುಕಿ ಬಂದ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಮದರಾಸ್ ಕೂಡ ರೀತಿಯಾಗಿ ಹೊಟ್ಟೆಗಿಲ್ಲದ ಕಾರಣಕ್ಕಾಗಿ ಅತ್ಮಹತ್ಯೆ ಮಾಡಿಕೊಳ್ಳುವುದು ದಿನನಿತ್ಯದ ಸ್ಥಿತಿಯಾಗಿದೆ. ಇಲ್ಲಿ ಒಂದು ವರದಿ ಇದೆ: ೪೦ ವರ್ಷದ ಒಬ್ಬಳು ಸ್ತ್ರೀ ತನ್ನ ಮೂವರು ಮಕ್ಕಳೊಂದಿಗೆ ಕ್ರೋಂ ಪೇಟೆ ಕಾಂಜೀವರಂ ಪ್ರಯಾಸಂಜರ್ ಟ್ರೈನ್‌ಗೆ ಸಿಕ್ಕಿ ಅವರೆಲ್ಲರೂ ಸತ್ತು ಹೋದರು ಎಂದು ವರದಿ ಬಂದಿದೆ. ನಮ್ಮ ದೇಶದಲ್ಲಿ ಈ ರೀತಿಯಾಗಿ ಜನ ಹೊಟ್ಟೆಗಿಲ್ಲದೆ ಸಾಯುವ ಸ್ಥಿತಿ, ಇದು ಬಹಳ ಜನರಿಗೆ ವಿಶೇಷವಾಗಿ ಕಾಣುವುದಿಲ್ಲ. ಕಾರಣ ನಾವು ಎಲ್ಲಿ ಹೋದರೂ ಬಸ್ ಸ್ಟಾಂಡ್‌ನಲ್ಲಾಗಲಿ, ರೈಲ್ವೇ ಸ್ಟೇಷನ್‌ನಲ್ಲಾಗಲಿ ಅಥವಾ ಹೋಟೆಲ್‌ನಲ್ಲಾಗಲಿ ಬೀದಿಯಾಲ್ಲಾಗಲಿ, ಅಪಾರ ಸಂಖ್ಯೆಯಲ್ಲಿ ಭಿಕ್ಷೆ ಬೇಡುವವರನ್ನು ನೋಡುತ್ತೇವೆ. ಅದು ಒಂದು ವರ್ಗ ಇನ್ನೂ ಅರೆ ಹೊಟ್ಟೆ ಊಟ ಮಾಡತಕ್ಕ ಜನರ ಸಂಖ್ಯೆ ನಮ್ಮ ದೇಶದಲ್ಲಿ ಬಹಳವಾಗಿ ಇದೆ. ಲೋಹಿಯಾರವರು ಮೊನ್ನೆ ಪಾರ್ಲಿಮೆಂಟಿನಲ್ಲಿ ಹೇಳಿದ ಹಾಗೆ ಎರಡು ದೊಡ್ಡ ಆಘಾತಗಳನ್ನು ದೇಶ ಎದುರಿಸುತ್ತಾ ಇದೆ. ಒಂದು: ಪ್ರಕೃತಿಯ ಪ್ರಕೋಪಕ್ಕೆ ಒಳಗಾಗಿ ಹೊದ ವರ್ಷ ಹಿಂಗಾರು ಮಳೆ ಬಾರದೆ ದೇಶದ ಬಹು ಭಾಗದಲ್ಲಿ ಮುಖ್ಯವಾದ ಎಲ್ಲಾ ಬೆಳೆಗಳೂ ನಾಶವಾದದ್ದು; ಅದರಿಂದಾಗಿ ಆಹಾರ ಉತ್ಪನ್ನಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಮತ್ತೊಂದು: ಜೂನ್ ೬ನೆಯ ತಾರೀಕು ಕೇಂದ್ರ ಸರ್ಕಾರದವರು ರೂಪಾಯಿನ ಬೆಲೆಯನ್ನು ೩೬.೫ ಪರ್ಸಂಟ್‌ನಷ್ಟು ಇಳಿಸಿದ್ದು ಅಥವಾ ಅಪಮೌಲ್ಯ ಮಾಡಿದ್ದು. ಈ ಎರಡು ಒಟ್ಟಗೂಡಿ ಇವತ್ತು ದೇಶದಲ್ಲಿ ಪ್ರತಿಯೊಂದು ಜೀವನಾವಶ್ಯಕ ವಸ್ತುವಿನ ಬೆಲೆಯೂ, ಹಿಂದೆ ಎಂದೂ ಎಲ್ಲೂ ಕಂಡಿರಿಯದ ರೀತಿಯಲ್ಲಿ ಏರುತ್ತಾ ಇದೆ.

ಆ ಬಂಗಾಳದಲ್ಲೂ ಕ್ಷಾಮವಿಲ್ಲ ಅಂತರೇ ಹೇಳುತ್ತಾರೆನೋ? ಹಿಂದೆ ಯಾವಾಗಲೋ ಕ್ಷಾಮದಿಂದ ಜನರು ರಸ್ತೆಗಳಲ್ಲೇ ಸತ್ತು ಬಿದ್ದು ಹೆಣಗಳೂ, ಒಡಾಡುತ್ತಿದ್ದ ಜನರ ಕಾಲಿಗೆ ತಗುಲುತ್ತಿದ್ದವಂತೆ: ಈಗಲೂ ಹೆಣಗಲೂ ಕಾಲಿಗೆ ತಗುಲಿದರೇನೇ ಈ ಜನರು ದೇಶದಲ್ಲಿ ಕ್ಷಾಮ ಬಂದಿದೆ ಎಂದು ಹೇಳುತ್ತಾರೇನೋ? ಅಂಥ ಜನರಿವರು. ಆದರೆ, ಇಲ್ಲಿ ಸರ್ಕಾರ ಅನ್ನವುದೊಂದಿದೆ. ಕೂಳಿಲ್ಲದ ಜನರು ಆಹಾರ ಮಂತ್ರಿಗಳಲ್ಲಿ ಹೋಗಿ ಮೈಲು ಜೋಳವನ್ನಾದರೂ ಕೊಡಿ ಎಂದರೆ ಅದನ್ನೂ ಸಹಾ ಸಕಾಲಕ್ಕೆ ಕೊಡುತ್ತಿಲ್ಲ. ಯಾರೋ ಒಬ್ಬರು ಒಬ್ಬ ಮನುಷ್ಯನು ಆಹಾರವಿಲ್ಲದೆ ಬರಿ ನೀರನ್ನೇ ಕುಡಿದುಕೊಂಡು ೬೦ ದಿವಸಗಳು ಜೀವಿಸಬಲ್ಲನೆಂದು ಹೇಳುತ್ತಿದ್ದರು. ಪೊಟ್ಟಿ ಶ್ರೀರಾಮುಲುರವರು ಸುಮಾರು ನಲವತ್ತು ದಿವಸ ಉಪವಾಸ ಮಾಡಿ ಸತ್ತರು ಎಂದು ನಮಗೆ ಗೊತ್ತಾಗಿದೆ. ಬರೀ ನೀರು ಕುಡಿದೇ ಮನುಷ್ಯ ಬದುಕುವುದಿಲ್ಲ. ಹಳ್ಳಿಯಲ್ಲಿರುವ ಜನ ಹೊಟ್ಟೆ ತುಂಬಿಕೊಳ್ಳಲು ಮೂರು ನಾಲ್ಕು ದಿವಸಗಳಾಗುವಷ್ಟು ಗಂಜಿ ಕುಡಿದು ಜೀವಿಸಿರುತ್ತಾರೆ. ಇಲ್ಲವೇ ಚುರುಮುರಿ ಕಾಳು ಅಂತಹುದನ್ನು ತಿಂದುಕೊಂಡು ಮೂರು ಅಥವ ಆರು ತಿಂಗಳೂ ಬದುಕಬಹುದು. ಇವೊತ್ತು ನಮ್ಮಲ್ಲಿ ಕಮ್ಯೂನಿಕೇಷನ್ನುಗಳು ಬಂದಿವೆ. ರಸ್ತೆಗಳು ಬಂದಿವೆ. ರೈಲುಗಳಿವೆ. ಹೀಗೇ ಎಲ್ಲಿಂದಲಾದರೂ ಸ್ವಲ್ಪ ಧಾನ್ಯ ತಂದು ಹೊಟ್ಟೆ ಹೊರೆದುಕೊಳ್ಳುವುದಕ್ಕೆ ಜನ ಸಾಮಾನ್ಯ ಪರಿಸ್ಥಿತಿ ಎಂದು ತಿಳಿಯುವುದಾದರೆ ಅದು ಬಹಳ ತಪ್ಪು. ಪರಿಸ್ಥಿತಿ ನಿಜವಾಗಿಯೂ ಬಹಳ ಉತ್ಕಟವಾಗಿದೆ. ಈಗಾಗಲೇ ನಮ್ಮ ಆಹಾರ ಮಂತ್ರಿಗಳು ಹಳ್ಳಿಗಳಿಗೆ ಕೊಡಲು ನಮ್ಮಲ್ಲಿ ಅಕ್ಕಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಹಳ್ಳಿಗಳಲ್ಲಿರುವ ಜನರ ಸ್ಥಿತಿ ಸರ್ಕಾರಕ್ಕೆ ಇನ್ನೂ ಸರಿಯಾಗಿ ತಿಳಿದಿಲ್ಲ. ಏನೋ ನಗರ ಪ್ರದೇಶದಲ್ಲಿ ಸುಮಾರು ೫೦ ಲಕ್ಷದಷ್ಟು ಜನರಿರಬಹುದು. ಬಾಕಿ ಇರುವ ಸುಮಾರು ಎರಡು ಕೋಟಿ ಜನರೆಲ್ಲಾ ಬರೀ ಹಳ್ಳಿಗಳಲ್ಲೇ ಇದ್ದಾರೆ. ಇದಕ್ಕಾಗಿ ನಮ್ಮ ಸರಕಾರದವರು ಆಗಲೇ ಹೇಳಿದರು. ನಾವು ಬೆಳೆಯಾಗದೇ ಇರುವ ಕಡೆಗಳಲ್ಲಿ ಕಂದಾಯ ಮಾಫಿ ಮಾಡಿದ್ದೇವೆ; ಲೆವಿ ವಸೂಲು ಮಾಡುತ್ತಿಲ್ಲ ಎಂದು ಇರುವ ೧೯ಜಿಲ್ಲೆಗಳಲ್ಲಿ ೧೬ ಜಿಲ್ಲೆಗಳು ಕ್ಷಾಮ ಅಥವಾ ಅಭಾವದ ಪರಸ್ಥಿತಿಗೆ ಸಿಕ್ಕಿವೆ ಎಂದು ನಿಮ್ಮ ಲೆಕ್ಕದಿಂದಲೇ ಗೊತ್ತಾಗುತ್ತದೆ. ಇದಕ್ಕಾಗಿ ಅಲ್ಲಲ್ಲಿ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಹಿಂದೆ ಇಲ್ಲಿ ಸರಕಾರದವರು ಬಿದಿರಕ್ಕಿ ತಿನ್ನಲಿ ಎಂದು ಹೇಳಿದರು. ಬಡತನದ ಬೇಗೆಯಿಂದ ನರಳುತ್ತಿರುವ ಜನರ ಬಗ್ಗೆ ಇಷ್ಟು ಹಗೂರವಾಗಿ ಮಾತನಾಡುವುದು ಸರಿಯಲ್ಲ. ಸಾಗರದಿಂದ ನಮ್ಮ ಶಿವಮೊಗ್ಗ ಜಿಲ್ಲೆಯವರಿಗೆ ಸುಮಾರು ೨೦ – ೨೨ ಲಕ್ಷ ಬೇಸಾಯ ಮಾಡುವ ಜನರಿದ್ದಾರೆ. ಏನಾದರೂ ಮಳೆ ಬಂದರೆ ಬೆಳೆ ಬೆಳೆಯುವವರು ಇವರನ್ನು ಕೆಲಸಕ್ಕೆ ಕರೆದು ಕೆಲಸ ಮಾಡಿಸಿಕೊಳ್ಳುತ್ತಾರೆ. ಮಳೆಯೇ ಬರದೇ ಹೋದರೆ ಅವರೇನು ತಾನೆ ಮಾಡಲು ಆಗುತ್ತದೆ? ಮಳೆ ಬಂದಾಗ ಬಿತ್ತಲೂ ಹಾಗೂ ಹೊಟ್ಟೆ ಹೊಡೆಯಲು ಅಥವಾ ಬೇರೆ ಯಾವ ಕೆಲಸಕ್ಕಾದರೂ ಅವರನ್ನು ಕರೆದು ಕೆಲಸ ಮಾಡಿಸುತ್ತಾರೆ. ಇಂತಹ ಕೂಲಿ ಜನ ನಮ್ಮ ಜಿಲ್ಲೆಯಲ್ಲಿ ನೂರಕ್ಕೆ ೨೫ ಜನ ಇರುತ್ತಾರೆ. ಈಗ ಮಳೆಯೇ ಇಲ್ಲದಿರುವಾಗಿ ಇವರಿಗೆ ಯಾರು ತಾನೆ ಕೆಲಸ ಕೊಡುತ್ತಾರೆ? ಹೇಗೋ ಬಡ ಜೀವ ಹಿಡಿದುಕೊಂಡು ಬದುಕಿದ್ದಾರೆ. ಇದು ಬಹಳ ಮುಖ್ಯವಾದ ಪ್ರಶ್ನೆ. ಹಿಂದೆ ಇಲ್ಲಿ ಸರಕಾರದವರು ಅಕ್ಕಿ ಮಾರುವ ರೇಟನ್ನು ಹೇಳುವಾಗ ಒಂದು ಕೀಲೋ ಅಕ್ಕಿಗೆ ೫೦ ಪೈಸೆಯಂತೆ ಇದ್ದುದು ಈಗ ಹೆಚ್ಚು ಕಡಿಮೆ ಸರಕಾರದವರ ರೇಟ್ ೯೯ ಪೈಸೆವರೆಗೆ ಬಂದಿದೆ. ಹಾಲಿ ಇವೊತ್ತು ಬೆಂಗಳೂರು ಪೇಟೆಯಲ್ಲಿ ಸಾಮಾನ್ಯವಾದ ಒಂದು ಕಿಲೋ ಅಕ್ಕಿಗೆ ಎರಡು ರುಪಾಯಿನಂತೆ ಇದೆ. ಅದರಲ್ಲೂ ಪಲಾವ್ ಮಾಡುವುಕ್ಕಾಗಿ ಉಪಯೋಗಿಸುವ ಡೆಹರಾಡೂನು ಅಕ್ಕಿ ಹಾಗೂ ಬಾಸುಮತಿ ಅಕ್ಕಿ ಬಹುಶಃ ಒಂದು ಕೆ.ಜಿ.ಗೆ ಮೂರುವರೆಯಿಂದ ನಾಲ್ಕು ರೂಪಾಯಿಗಳವರೆಗೆ ಮಾರಾಟವಾಗುತ್ತಿರಬಹುದು. ಐದು ರೂಪಾಯಿ ಆದರೂ ಪರವಾಗಿಲ್ಲ. ಅವರು ಮಾರುತ್ತಿದ್ದಾರೆ. ಅದನ್ನು ಬೇಕಾದ ಜನ ಕೊಂಡುಕೊಳ್ಳುತ್ತಿದ್ದಾರೆ. ಇದು ಬೇರೆ ವಿಚಾರ. ಮಾನ್ಯ ಆಹಾರ ಮಂತ್ರಿಗಳಾದ ಜತ್ತಿಯವರು ಪೊಕ್ಯೂರುಮೆಂಟು ಮಾಡೇಕೆಂದು, ಎಲ್ಲರ ಮನೆಗಳಿಗೂ ನುಗ್ಗಿ ತರಬೇಕೆಂದು ಢಿಪೆನ್ಸ್ ಆಫ್ ಇಂಡಿಯಾ ಕಾನೂನಿನಂತೆ ಬೆಳೆದಿರುವವನ ಮನೆಯ ಕಣಜವನ್ನು ಪೋಲಿಸರು ಹೋಗಿ ಬಿಚ್ಚಿ ಅದರಲ್ಲಿರುವ ಕಾಳನ್ನು ಲೆಕ್ಕ ಮಾಡಿ ಅಳೆದುಕೊಂಡು ಬರುತ್ತಿದ್ದಾರೆ. ಅವರು ಮಾಡುವ ಲೆಕ್ಕಗಳೇ ಒಂದು ತರಹ ಹೊಸ ನಮೂನೆಯ ಲೆಕ್ಕ. ಇದರಿಂದ ಜನರಲ್ಲಿ ಹಾಹಾಕಾರವಾಗಿ ಒಂದು ತರಹದ ವಿಚಿತ್ರ ಪರಿಸ್ಥಿತಿ ಹಳ್ಳಿಗಳಲ್ಲಿ ಉಂಟಾಗಿದೆ. ಇದಲ್ಲದೆ ಆಹಾರ ಕಾರ್ಪೋರೇಷನ್ನಿನವರು ಅಕ್ಕಿಯನ್ನು ಸಂಶೋಧನೆ ಮಾಡಿ ಇದರಲ್ಲಿ ಎಷ್ಟು ಕಾಳನ್ನು ಲೆಕ್ಕ ಮಾಡಿ ಅಳೆದುಕೊಂಡು ಬರುತ್ತಿದ್ದಾರೆ. ಹೀಗೆ ಮಾಡಿ ನಮ್ಮ ರಾಜ್ಯದಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ಅಕ್ಕಿಕಾಳು ಉಪಯೋಗಿಸಲು ಲಾಯಕ್ಕಾಗಿಲ್ಲ ಎಂದು ಇದನ್ನು ಕಂಡೆಮ್ ಮಾಡಿದರು. ಇಲ್ಲಿ ಸರ್ಕಾರ ಕೊಟ್ಟಿರುವ ಒಂದು ನೋಟ್‌ನಂತೆ ನಮ್ಮ ಶಿವಮೊಗ್ಗ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹ ಆಹಾರದ ಹಾಹಾಕಾರವೇನಿಲ್ಲ ಎಂದು ಹೇಳಿದ್ದಾರೆ. ಸರಕಾರ ಆಹಾರದ ವಿತರಣೆ ಬಗ್ಗೆ ಈ ಭಾಗಗಳಲ್ಲಿ ಸರಿಯಾಗಿ ಕಾರ್ಯಕ್ರಮ ತೆಗೆದುಕೊಂಡಿಲ್ಲ.

ಅರಣ್ಯ ಭೂಮಿ

ಜುಲೈ ೧೯೬೭

ಅರಣ್ಯ ಭೂಮಿಗೆ ಸಂಬಂಧಪಟ್ಟ ಹಾಗೆ ಹೊಸ ಕಾನೂನನ್ನು ಮಾಡಿದ್ದಾರೆ. ಅರಣ್ಯವನ್ನು ವಿಸ್ತಾರ ಮಾಡುವುದನ್ನು ಅರಣ್ಯ, ಇಲಾಖೆಯವರು ಮಾಡಬೇಕು. ನಮ್ಮಲ್ಲಿ ಅರಣ್ಯವನ್ನು ಬೆಳೆಸುವುದು ಒಂದು ದೊಡ್ಡ ಕೆಲಸವಾಗಿದೆ. ಅರಣ್ಯವನ್ನು ಕಡಿದು ಕಡಿದು ಧ್ವಂಸಮಾಡಿದ್ದಾರೆ. ಇದನ್ನು ಮಲೆನಾಡಿನಲ್ಲಿ ಹೋಗಿ ಯಾರಾದರೂ ನೋಡಿದರೆ ಗೊತ್ತಾಗುತ್ತದೆ. ಯಾರಾದರೂ ಹಿಂದೆ ಮಲೆನಾಡಿಗೆ ಹೋಗಿ ಇದ್ದು ಬಂದಿರುವ ನೌಕರರು, ಈಗ ಅಲ್ಲಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಮಂಡಗದ್ದೆಯಿಂದ ಸುತ್ತಮುತ್ತು ೧೫೨೦ ಮೈಲಿಯವರೆಗೆ ಎಲ್ಲಿ ನೋಡಿದರೂ ಅರಣ್ಯವನ್ನೆಲ್ಲ ಕಡಿದುಹಾಕಿದ್ದಾರೆ. ಬಯಲು ಸೀಮೆ ಕಂಡಹಾಗೆ ಕಾಣುತ್ತದೆ. ಕಾಡೆಲ್ಲ ಧ್ವಂಸವಾಗಿರುವುದರಿಂದ ಮಳೆ ಕಡಿಮೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ಭದ್ರಾವತಿಯಲ್ಲಿಯೂ ಸುತ್ತ ಮುತ್ತ ೩೦ ೪೦ ಮೈಲು ಇದ್ದಂಥ ಕಾಡನ್ನೆಲ್ಲಾ ಕಡಿದುನುಂಗಿ ನೀರು ಕುಡಿದಿದ್ದಾರೆ. ಅದು ಕಾಗದದ ಕಾರ್ಖಾನೆಗಳಿಗೆ ಧ್ವಂಸವಾಗಿದೆ. ಅರಣ್ಯಇಲಾಖೆಯವರು ಬಹಳ ಸಂತೋಷದಿಂದ ಎರಡೂವರೆ ಕೋಟಿ ರೂಪಾಯಿಗಳ ಆದಾಯ ಬಂದಿದೆ ಎಂದು ಹೇಳುತ್ತಾರೆ. ೨೦ ವರ್ಷಗಳ ಅವಧಿಯಲ್ಲಿ ಇಷ್ಟು ಆಯಿತು. ಅರಣ್ಯ ಇಲಾಖೆಯವರು ಸಾಗವಾನಿ ಮತ್ತು ಹೆಚ್ಚಿಗೆ ಬೆಲೆಬಾಳತಕ್ಕ ಕೆಲವು ಮತಗಳನ್ನು ಮಾರಾಟ ಮಾಡುವುದರಲ್ಲಿ ಕೆಲವು ಮೋಸ ನಡೆದಿದೆ. ಹೆಚ್ಚಿಗೆ ಬೆಲೆಬಾಳತಕ್ಕ ಕೆಲವು ಮರಗಳನ್ನು ಮಾರಾಟ ಮಾಡುವುದರಲ್ಲಿ ಕೆಲವು ಮೋಸ ನಡೆದಿದೆ. ಹೆಚ್ಚಿಗೆ ಬೆಲೆಬಾಳತಕ್ಕ ಕೆಲವು ಮರಗಳನ್ನು ಮತ್ತು ನಾಟಾಗಳನ್ನು ಸಾಮಿಲ್ಲುಗಳಿಗೆ, ಕಾರ್ಖಾನೆಗಳಿಗೆ ಅರಣ್ಯ ಇಲಾಖೆಯವರು ಮಾರಾಟಮಾಡಿದ್ದಾರೆ. ಅವುಗಳನ್ನ ಮಾರ್ಕೆಟ್ ರೇಟ್‌ಗಿಂತ ಜಾಸ್ತಿ ಕೊಟ್ಟಿದ್ದಾರೆಯೋ ಹೇಗೆ ಎಂಬುದನ್ನು ಗಮನಿಸಬೇಕು. ಇದರಿಂದ ಏನೂ ಲಾಭವಿಲ್ಲ. ಗಂಧದ ಮರ ಮಾರಾಟವಾಗುತ್ತಿದೆ. ಹೊಸದಾಗಿ ಕಾಡು ಮಾಡುತ್ತೇವೆಂದು ಹೆಳಿ, ಕಾಡು ಕಡಿದುಹಾಕಿ, ನಾಟಾ ಹೊತ್ತುಕೊಂಡು ಹೋಗುತ್ತಿದ್ದಾರೆ. ನಿಜವಾಗಿಯೂ ಅರಣ್ಯ ಸಂಪತ್ತು ದೇಶದಲ್ಲಿ ಹೆಚ್ಚಾಗಬೇಕು; ಹಸಿರು ಬೆಳೆಸಬೇಕು. ಸಂಪತ್ತು ಹೆಚ್ಚಿಸಬೇಕು ಇದು ಅವಶ್ಯಕ.

ಪೋಲೀಸ್ ದೌರ್ಜನ್ಯ

೧೨ ಡಿಸೆಂಬರ್ ೨೯೬೭

ಮಾನ್ಯ ಶ್ರೀ ರಾಮರಾಯರಿಗೆ ಬುದ್ಧಿ ತೋಚಲಿಲ್ಲವೋ ಅಥವಾ ಗೊತ್ತಾಗಲಿಲ್ಲವೋ ಅಂತೂ ಒಂದು ಸ್ಟೇಟ್ಮೆಂಟ್ ಓದಿದ್ದಾರೆ. ಅವರು ಮೇಲ್ಮನೆಯ ಸದಸ್ಯರು, ಜನರ ಪ್ರತಿನಿಧಿಗಳಿಂದ ಆರಿಸಲ್ಪಟ್ಟವರು; ನೇರವಾಗಿ ಅವರು ಜನತೆಯಿಂದ ಓಟುಪಡೆದವರಲ್ಲ. ಅಂದ ಮೇಲೆ ಜನರ ಹಂಗು ನನಗಿಲ್ಲ. ಜನತೆಯ ಮುಂದೆ ನಾನು ಹೋಗುವ ಹಾಗಿಲ್ಲವೆಂದು ಅವರು ತಿಳಿದಿದ್ದಾರೆ. ನಾನು ಅವರಿಗೆ ಹೇಳುತ್ತೇನೆ: ತಾವು ಗೃಹಮಂತ್ರಿಗಳಾಗಿರಬೇಕೆಂದು ಅಪೇಕ್ಷೆ ಪಟ್ಟಿದ್ದೀರಿ. ನಾನು ಬಹಳ ವಿಷಾದದಿಂದ ಹೇಳುತ್ತಿದ್ದೇನೆ. ಗೃಹಮಂತ್ರಿಗಳು ಸಹ ಸುಳ್ಳು ಹೇಳುತ್ತಾರೆಂಬುದು ಸ್ಟೇಟ್ಮೆಂಟ್ ನೋಡಿದ ಮೇಲೆ ಮಾತ್ರ ನನಗೆ ಗೊತ್ತಾಯಿತು. ಈ ಮನೆಗೆ ಗೃಹಮಂತ್ರಿಗಳಾದ ತಾವು ಜವಾಬ್ದಾರರೇ ಹೊರತು ಐ. ಜಿ. ಪಿ. ಅವರಲ್ಲ. ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ನಮ್ಮ ರಾಜ್ಯವನ್ನು ದಿವಾನರು ನೋಡಿಕೊಳ್ಳುತ್ತಿದ್ದರು. ಅವರ ಮೇಲೆ ಮಹಾರಾಜರು ಇರುತ್ತಿದ್ದರು. ನವನಾಯಕರುಗಳು ಆಗಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕಾನೂನುಗಳು ಇರಲಿಲ್ಲ. ಆದರೆ ಈಗ ಯಾವ ಕೆಲಸ ಮಾಡಬೇಕಾದರೂ ಕಾನೂನಿನ ಅಡ್ಡಿ ಇದೆ. ಈಗ ಇರುವುದು ಕಾನೂನಿನ ಆಡಳಿತ, ಪೋಲೀಸಿನವನು ನನ್ನ ಮೇಲೆ ದೊಣ್ಣೆ ಎತ್ತಬೇಕಾದರೆ ಕಾನೂನು ಬೇಕು. ೨೦ ವರ್ಷದಿಂದಲೂ ಒಂದೇ ಸಮನೆ ಬಡಜನಗಣತೆಯ ಮೇಲೆ ೧೦೦ ಕೊಟಿ ರೂಪಾಯಿಗಳವರೆಗೆ ತೆರಿಗೆ ಹಾಕಿ; ಹಣದಲ್ಲಿ ಪೋಲೀಸಿನವರಿಗೆ ಬೇಕಾದ ಲಾಠಿ, ಬಂದೂಕು ಒದಗಿಸಿ, ಬಡವರ ಮನೆಗಳಿಗೆ ನುಗ್ಗಿಸಿ ಲೂಟಿ ಮಾಡಿಸುತ್ತಿದ್ದೀರಿ. ದಿವಂಗತ ರಾಮಮನೋಹರ ಲೋಹಿಯಾ ಅವರು ಗೋಲಿಬಾರ್ ಪ್ರಕರಣವಾದಾಗಲೆಲ್ಲ ರೀತಿ ಹೇಳುತ್ತಿದ್ದರು: ಅಹಿಂಸೆಯ ಗರ್ಭದಿಂದ ಜನಿಸಿದ ಕಾಂಗ್ರೆಸ್ ಅದೇ ಗರ್ಭವನ್ನು ಒದೆಯುತ್ತಿದೆಯೆಂದು; ಅದರಂತೆ ತಾವು ದಿವಸ ಅಹಿಂಸೆಯ ಗರ್ಭವನ್ನು ಒದೆದಿದ್ದೀರಿ. ಇದಕ್ಕೆ ಪ್ರಾಯಶ್ಚಿತ್ತ ಇದ್ದೇ ಇದೆ. ತಾವು ಸುಳ್ಳುಗಳ ಕಂತೆಯನ್ನೇ ಬಹಳ ಹೇಳಿದ್ದೀರಿ. ಈ ರೀತಿಯ ಸುಳ್ಳುಗಳನ್ನು ಹೇಳಲು ಮಾನ್ಯ ಅಧ್ಯಕ್ಷರು ನಿಮಗೆ ಅವಕಾಸ ಕೊಟ್ಟಿದ್ದು ಸರಿಯೇ ಎಂಬುದನ್ನು ಯೋಚನೆ ಮಾಡಿನೋಡಿ.

ಸಭೆಯಲ್ಲಿ ನಾವೆಲ್ಲ ಸತ್ಯವನ್ನು ಹೇಳುತ್ತೇವೆಂದು ಅಧ್ಯಕ್ಷರಾದ ತಾವು ನಮಗೆ ವಚನ ಕೊಡಿಸಿದರಲ್ಲ! ಪ್ರಮಾಣವಚನವೆಲ್ಲಾ ಎಲ್ಲಿ ಹೋಯಿತು? ಮಾನ್ಯ ಮಂತ್ರಿಗಳು ಸಭೆಯಲ್ಲಿ ಕೊಟ್ಟಿರುವ ಸ್ಟೇಟ್ಮೆಂಟ್ನಲ್ಲಿ ಮೂರು ಕಾಸಿನ ಸತ್ಯವಿದ್ದರೆ ನಾನು ಕ್ಷಣದಲ್ಲಿ ಸಭೆಯಿಂದ ಹೊರಗೆ ಹೋಗುತ್ತೇನೆ; ಮತ್ತೆ ಬರುವುದಿಲ್ಲ. ರೀತಿಯಾದ ಸುಳ್ಳಿನ ಹೇಳಿಕೆಯನ್ನು ಬರೆದುಕೊಟ್ಟ ಪೋಲೀಸ್ ಆಫೀಸರ್ ಹೇಳಲಿ, ಇದು ಸತ್ಯ ಎಂಬುದಾಗಿ, ಇಷ್ಟೊಂದು ಅಂಧಾ ದರ್ಬಾರ್ ನಡೆಯುವುದಕ್ಕೆ ಅವಕಾಶಕೊಟ್ಟರೆ ಇನ್ನು ದೇಶಕ್ಕೆ ಉಳಿಗಾಲವಿಲ್ಲವೆಂದು ನಾವು ತೀರ್ಮಾನ ಮಾಡಬೇಕಾಗಿದೆ. ಇದೇ ರೀತಿಯ ಪ್ರಕರಣ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ, ಇಡೀ ರಾಜ್ಯದಲ್ಲಿ ನಡೆಯುತ್ತಲೇ ಇದೆ. ಆದರೆ ಪೋಲೀಸ್ ಇಲಾಖೆಯನ್ನು ಸುಧಾರಣೆ ಮಾಡುವ ಕೆಲಸವನ್ನು ನೀವು ಇದುವರೆಗೆ ಮಾಡಲಿಲ್ಲ. ಅಂದರೆ ಪೋಲೀಸರಿಗೆ ಹುಲ್ಲು ತಿನ್ನಿಸಿ ಅವರಿಗೆ ಅಹಿಂಸೆಯನ್ನು ಉಪದೇಶ ಮಾಡಿ, ಬುದ್ಧನ ಶಿಷ್ಯರನ್ನಾಗಿ ಮಾಡಬೇಕೆಂದು ಹೇಳುತ್ತಿಲ್ಲ. ತಮ್ಮ ಸ್ಟೇಟ್‌ಮೆಂಟ್‌ನಲ್ಲಿ ಲಾಠಿ ಚಾರ್ಜು ಆಯಿತೆಂದು ಹೇಳಿದ್ಙೀರಿ. ಆ ಜಾಗದಲ್ಲಿ ಮ್ಯಾಜಿಸ್ಟ್ರೇಟ್ ಸಹ ಇದ್ದನೆಂದು ಹೇಳಿದ್ದೀರಿ. ಪೋಲೀಸಿವನರು ಬಡವರ ಮನೆಗಳಿಗೆ ನುಗ್ಗುವಾಗ ಈ ಮ್ಯಾಜಿಸ್ಟ್ರೇಟ್ ಏನು ಮಾಡುತ್ತಿದ್ದರು ಎಂದು ಕೇಳುತ್ತೇನೆ. ಹನುಮಂತಪುರ, ಮದ್ದಯ್ಯನ ಪಾಳ್ಯ, ತಗ್ಗೀಹಳ್ಳಿ, ಬಡಕೌಸಹಳ್ಳಿ, ಚಿಕ್ಕಹಂದ್ರಾಳ, ದೊಡ್ಡ ಹಂದ್ರಾಳ ಮುಂತಾದ ಪ್ರದೇಶಗಳಿಗೆ ನಾವು ಭೇಟಿ ಕೊಟ್ಟಾಗ ಅಲ್ಲಿಯ ಗಂಡಸರು ಯಾರೂ ಇರಲಿಲ್ಲ. ಸುಮಾರು ೮೦ – ೯೦ ಜನರನ್ನು ಪೋಲೀಸರು ಹಿಡಿದುಕೊಂಡು ಹೋಗಿದ್ದಾರೆಂದು ಅಲ್ಲಿಯ ಹೆಂಗಸರು ಹೇಳಿದರು. ಇಷ್ಟು ಜನರೂ ಸಹ ಪ್ರತಿದಿನವೂ ಮಧೂಗಿರಿ ಪೋಲೀಸ್‌ಸ್ಟೇಷನ್‌ಗೆ ಹೋಗಿ ನಾವು ಸ್ಥಳದಲ್ಲೇ ಇದ್ದೇವೆಂಧು ಹೇಳಿಕೆ ಕೊಟ್ಟು ಬರಬೇಕಂತೆ. ಪೋಲಿಸ್ ಆಕ್ಟ್‌ನ್ನು ನಾವು ಇನ್ನೂ ಸುಟ್ಟಿಲ್ಲ: ಸುಡಬೇಕಾಗಿದೆ. ಪ್ರಜಾಪ್ರಭುತ್ವ ಸುಮ್ಮನೆ ಬರುವುದಿಲ್ಲ. ಅದು ಕೆಳಗಿನಿಂದ ಬೆಳೆದು ಮೊಳಕೆಯಾಗಿ ಬರಬೇಕು. ಇವತ್ತು ನಮ್ಮ ತಾಯಿಯನ್ನು ಯಾರಾದರೂ ಮುಟ್ಟಿದ್ದರೆ ಸುಮ್ಮನಿರುವುದಕ್ಕಾಗುತ್ತದೇ? ಅಥವಾ ನಿಮ್ಮ  ಮನೆಯ ಹೆಂಗಸರನ್ನು ಯಾರಾದರೂ ಮುಟ್ಟಿದ್ದರೆ ನೀವು ಸುಮ್ಮನಿರುತ್ತೀರಾ? ನಿಮಗೆ ರಕ್ತವಿಲ್ಲವೇ? ಜನತೆಯೆಂದ ಮೇಲೆ ಎಲ್ಲರೂ ಒಂದೇ, ಜಾಕೀರ್ ಹುಸೇನರಿಗೂ ಒಂದೇ ಓಟು, ಅವರ ಮನೆ ಕೆಲಸ ಮಾಡುವವನಿಗೂ ಒಂದೇ ಓಟು.

ನಾವು ಮಧುಗಿರಿಗೆ ಹೋದಾಗ ಕೆಲವರು ಪೋಲೀಸ್‌ ಸ್ಟೇಷನ್‌ನಲ್ಲಿ ರುಜುಹಾಕಿ ಹೊರಟು ಹೋಗಿದ್ದರು. ಅವರನ್ನು ಭೇಟಿ ಮಾಡುವುದಕ್ಕಾಗಲಿಲ್ಲ. ಪಾಪಯ್ಯ ಶೆಟ್ಟಿ ಮತ್ತು ಖಾಸಿಂಸಾಹೇಬರು ಬಿ. ಎಲ್. ಗೌಡರಿಗೆ ಭೇಟಿಯಾಗಿದ್ದಾರೆ. ನಾವು ವಿಧಾನಸಭೆ ಮುಗಿದ ಮೇಲೆ ಹೋಗಿದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.  ಬ್ಯಾಲ್ಯ ಗ್ರಾಮದಲ್ಲಿ ೬ ಜನ ಹರಿಜನರು, ೪ ಜನ ಒಕ್ಕಲಿಗರು, ಒಬ್ಬ ಚೌರ ಮಾಡುವವರು ನಮ್ಮನ್ನು ಭೇಟಿಯಾಗಿದ್ದರು. ಇವರುಗಳು ಕಬ್ಬನ ಬೆಳೆಗಾರರಲ್ಲ. ತೆಗ್ಗಿಹಳ್ಳಿಯಲ್ಲಿ ಅಶ್ವತ್ಥಪ್ಪನವರನ್ನು ನಾವು ನೋಡಿದೆವು. ಅವರು ಶ್ರೀಮಾನ್ ನಿಜಲಿಂಗಪ್ಪನವರ ಜೊತೆಗೆ ಮಾತನಾಡಿದ್ದಾರೆ. ಈಗ ಹೋಗಿ ಭೇಟಿಯಾದರೂ ಅವರು ಮತನಾಡುವರು. ಅಶ್ವತ್ಥಪ್ಪನವರು ಹೇಳಿದ ಹಾಗೆ ತೆಗ್ಗಿಹಳ್ಳಿಯಲ್ಲಿ ಇವರು ಸೊಸೆಯವರನ್ನು ಮೊದಲು ಕರೆಸಿ ಅತ್ಯಾಚಾರ ಮಾಡುವುದಕ್ಕೆ ಹೋದರು. ಬೆಳಗಿನ ಜಾವದಲ್ಲಿ ಪೋಲೀಸರು, ದೊಡ್ಡ ದೊಡ್ಡ ಅಧಿಕಾರಿಗಳು ಅಲ್ಲಿಗೆ ಹೋಗಿ ಶಿಕಾರಿ ಮಾಡಿದ ಹಾಗೆ ಆಗಿದೆ. ಮೂಕಪ್ರಾಣಿಗಳಾದ ಜನ ಅವರ ಮೇಲೆ ಕೈ ಎತ್ತಲು ಸಾಧ್ಯವಾಗಲಿಲ್ಲ. ವಿಷಯ ಎಷ್ಟು ಗಂಭೀರವಾಗಿದೆ ಯೋಚನೆ ಮಾಡಿ. ನಾನು ಮೈಸೂರು, ಹುಣಸೂರು, ತಾಲ್ಲೂಕಿಗೂ ಹೋಗಿದ್ದೇನೆ. ನಿಜವಾಗಿಯೂ ನೀವು ಇವತ್ತು ಇನ್ಕಂಟ್ಯಾಕ್ಸ್, ಕೊಡತಕ್ಕಂಥವರನ್ನು ನೋಡಿಕೊಂಡು, ಕಾರಿನಲ್ಲಿ ಓಡಾಡಿಕೊಂಡು ಇರುವವರನ್ನು ನೋಡಿಕೊಂಡು, ಬೀಸಣಿಗೆ ಕೆಳಗೆ ಇರುವವರನ್ನು ನೋಡಿಕೊಂಡು ರಾಜ್ಯಬಾರ ಮಾಡುತ್ತಿದ್ದೀರಿ, ನಾಚಿಕೆ ಇಲ್ಲದ ಜನ. ಅಂಥವರನ್ನು ಹಿಡಿಯುವುದಕ್ಕೆ ನಿಮಗೆಲ್ಲಿ ಅಧಿಕಾರ ಬರುತ್ತದೆ? ಹನುಮಂತಪುರದಲ್ಲಿ ನಡೆದ ಘಟನೆ ಒಂದೇ ಅಲ್ಲ. ಇಂಥ ಘಟನೆಗಳ ಬಗ್ಗೆ ಅನೇಕ ಸಾರಿ ಹೇಳಿದ್ದೇನೆ. ನಮಗೆ ಅಲ್ಲಿ ನಡೆದ ಘಟನೆ ತಿಳಿಸದ ಸಂಜೀವಮ್ಮ ಅವರಿಗೆ ನಮ್ಮ ತಾಯಿಯ ವಯಸ್ಸು ಆಗಿದೆ. ಅಂತಹವರು ಸಾಮಾನ್ಯವಾಗಿ ಎಂದೂ ಸುಳ್ಳು ಹೇಳುವುದಿಲ್ಲ. ತಿಮ್ಮಪ್ಪ ಅವರು ಹೇಳಿಕೆ ಕೊಟ್ಟಿದ್ದಾರೆ. ನಾವು ಹೋದಾಗ ಕಣ್ಣೀರು ಇಟ್ಟುಕೊಂಡು ಹೆದರಿದ್ದರು. ವೆಂಕಟಮ್ಮ ಎಂಬ ಹದಿನಾರು ವರ್ಷದ ಹುಡುಗಿಯ ಮಾನಭಂಗ ಮಾಡಿದ್ದಾರೆ. ರಿಜರ್ವ್ ಪೋಲೀಸ್ನವರು ಬಂದ ಮೇಲೆ ಏನು ಆದೀತು? ಏನು ಆಗಲಿಕ್ಕಿಲ್ಲ? ಅಧಿಕಾರಿಗಳು ಲೂಟಿ ಮಾಡಿ ಎಂದು ಆಜ್ಞೆ ಮಾಡುತ್ತಾರೆ. ಅಂಥ ವೇಳೆಯಲ್ಲಿ ಅವರು ಯಾರ ಮೇಲೆಯಾದರೂ ಏನು ಬೇಕಾದರೂ ಮಾಡುತ್ತಾರೆ. ಇಂಥ ಘಟನೆ ನಡೆದಿದೆ: ಕರಿಯಮ್ಮ ಎನ್ನುವವಳು ೧೨ ವರ್ಷದ ಸಣ್ಣ ಹುಡುಗಿ. ಈರಮ್ಮ, ಗಂಗಮ್ಮ, ಲಕ್ಷಮ್ಮ ಆದಿಲಕ್ಷ್ಮಮ್ಮ ನಾಲ್ವರು ಮಹಿಳೆಯರು ನಾಪತ್ತೆಯಾಗಿದ್ದಾರೆ. ಮದುವೆಯ ಹಸೆಮಣೆ ಮೇಲೆ ಕುಳಿತಿದ್ದ ಸಣ್ಣ ಹುಡುಗಿಯನ್ನು ಎಳೆದುತಂದು ಅವರ ಮೇಲೆ ಪೋಲೀಸರು ಅತ್ಯಾಚಾರ ಮಾಡಿದ್ದಾರೆ. ನಾವು ಹೋದಾಗ ಅವಳು ಊರಲ್ಲಿರಲಿಲ್ಲ. ಎಲ್ಲಿಯೋ ಅಡಗಿಕೊಂಡಿದ್ದಾಳೆ. ಇನ್ನೊಬ್ಬಳ ಶವಸಂಸ್ಕಾರಕ್ಕಗಿ ಬೇರೆಕಡೆ ಹೋಗಿದ್ದಳು. ಅಲ್ಲಿ ನಡೆದ ಘಟನೆ ಬಗ್ಗೆ ಅವರು ಹೇಳುವುದನ್ನು ಕೇಳುವುದಕ್ಕೆ ನಮಗೇ ನಾಚಿಕೆ ಆಯಿತು. ಅವರು ಹೇಳುತ್ತಾರೆಂದು ನಾವು ಬರೆದುಕೊಂಡೆವು.

೩೦ ಸೇರು ಭತ್ತ ೩ ಸೇರು ಅವರೆ, ೧೪ ಕೆಜಿ ಬೆಲ್ಲ, ೫ ಸೇರು ಹಾರಕ ಮನೆಯಲ್ಲಿ ಇತ್ತು; ಈಗ ಏನೂ ಇಲ್ಲ ಎಂದು ಹೇಳಿ ಎಲ್ಲವನ್ನು ಲೂಟಿಹೊಡೆದು ತೆಗೆದುಕೊಂಡು ಹೋದರು ಎಂದು ತಿಳಿಸಿದರು. ಈ ರೀತಿಯ ಲೂಟಿಮಾಡಿರುವುದನ್ನು ನೋಡಿದರೆ ನಮಗೆ ತೆನ್ನಾಲಿ ರಾಮಕೃಷ್ಣನ ಕುದುರೆ ಕಥೆ ನೆನಪಾಗುತ್ತದೆ. ಈ ರಿಸರ್ವ್ ಪೋಲೀಸಿನವರು ಎಲ್ಲಿಯಾದರೂ ಕೆಲಸಕ್ಕೆ ಬಂದರೆ, ಕೈಕಾಲುಗಳಿಗೆ ಬಟ್ಟೆ ಪಟ್ಟಿಕಟ್ಟಿಕೊಂಡು ಸಿದ್ಧರಾಗಿ ಪ್ರೇತದಂತೆ ನಿಂತಿರುತ್ತಾರೆ. ಇಂಥದ್ದು ಏನಾದರೂ ಸಿಕ್ಕರೆ ಅವರಿಗೆ ಅದೇ ದೊಡ್ಡ ಹಬ್ಬ ಇಂಥವರಿಗೆ ಜನರ ರಕ್ಷಣೆಯ ಕೆಲಸಕೊಟ್ಟು ಬಿಟ್ಟರೆ ಯಾವ ಹೆಣ್ಣು ಮಕ್ಕಳಾದರೇನು? ಯಾವ ಮುದುಕಿಯಾದರೇನು? ಹುಚ್ಚುನಾಯಿ ಯಾರನ್ನು ಕಚ್ಚುತ್ತದೆ ಎಂಬುದು ಗೊತ್ತಿರುತ್ತದೆಯೇ? ಒಂದು ಲಕ್ಷ ರೂಪಾಯಿ ಲೂಟಿಯಾಗಿ ಹೋಯಿತು ಎಂದು ನಾನು ಹೇಳಿದರೆ ನೀವು ಅದನ್ನು ನಂಬುವುದಿಲ್ಲ. ಇವರಲ್ಲಿ ಏನಿದೆ ಇವನೊಬ್ಬ ಕನಕದಾಸ, ಕಬೀರದಾಸ – ಸುಮ್ಮನೆ ಹೇಳುವುದಕ್ಕೆ ಬಂದಿದ್ದಾನೆ ಎಂದು ಅನ್ನುತ್ತಾರೆ. ಅದರೆ, ಅಶ್ವತ್ಥಪ್ನವರು ಹೇಳಿದ ಹಾಗೆ ೫೮೦ ರೂಪಾಯಿ ನಾಪತ್ತೆಯಾಗಿದೆ ಎಂದು ಬರೆದುಕೊಂಡಿದ್ದೇವೆ. ಸುಬ್ಬಯ್ಯಶೆಟ್ಟಿಯವರ ಮನೆಯಲ್ಲಿ ೫೮೦ ರೂಪಾಯಿ ನಾಪತ್ತೆ ಯಾಗಿದೆ ಎಂದು ಅವರ ಬಂಧುಗಳು ಸಹ ಹೇಳಿದ್ದಾರೆ ಒಂದು ಹೊಲಗೆ ಮೆಷಿನ್‌ ಕೂಡ ಹೋಗಿದೆ. ವೆಂಕಟಾಚಲಪ್ಪನವರದ್ದು ದೊಡ್ಡ ಅಂಗಡಿ ಇದೆ. ೩೦ ರೂಪಾಯಿ ಸೀರೆ ಇತ್ತು; ಅದೂ ಇಲ್ಲ ಎಂದು ತಿಳಿಸಿದ್ದಾರೆ. ತೆಗ್ಗಿನಹಳ್ಳಿ ಈರಪ್ಪನಾವು ಹೇಳಿದ ಹಾಗೆ ಹೆಣ್ಣು ಮಕ್ಕಳೂ ಕಣ್ಮರೆಯಾದದ್ದು ರಾಮರಾಯರಿಗೇ ಗೊತ್ತಾಗಿದೆಯೇ? ನಾನು ಉತ್ಪ್ರೇಕ್ಷೆ ಮಾಡಿ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಆದರೇನೋ ಪೋಲೀಸಿನವರ ಈ ಕೃತ್ಯ ಸಮರ್ಥನೆ ಮಾಡಿದ್ದಾರೆ. ಇದರ ಮೇಲೇನೇ ನನ್ನ ಎಲ್ಲ ಆಕ್ರೋಶ. ಶ್ರೀಮಾನ್ ಸಿದ್ದ ವೀರಪ್ಪನವರು ಒಂದು ಮುತ್ತಿನಂಥ ಮಾತನ್ನು ಹೇಳಿದರು. ರಾಮರಾಯರಿಗೆ ತಾಯಿ ಮಕ್ಕಳು ಇಲ್ಲವೇ? ಗೃಹಮಂತ್ರಿ ರಾಮರಾಯರ ಆಜ್ಞೆ ಮೆರೆಗೆ ಐ.ಜಿ.ಪಿ. ಕೆಲಸ ಮಾಡುತ್ತಾರೆ. ಇವರು ಟೆಲೆಫೋನ್ ಮಾಡಿದರೋ ಯಾವ ತರಹ ಹೇಳಿದರೋ ಅದು ನನಗೆ ಗೊತ್ತಿಲ್ಲ. ಇವರಿಗೆ ಮೊದಲು ಅಧಿಆರವಿರಲಿಲ್ಲವೇ? ಪ್ರಜಾಪ್ರಭುತ್ವದಲ್ಲಿ ತಪ್ಪು ಮಾಡಿದರೆ ನೋಡದೇ ಇರಬಹುದು. ಅಧಿಕಾರವಿರಲಿಲ್ಲವೇ? ಪ್ರಜಾಪ್ರಭುತ್ವದಲ್ಲಿ ತಪ್ಪು ಮಾಡಿದರೆ ನೋಡದೇ ಇರಬಹುದು. ಅಧಿಕಾರಿಗಳು ಕೋಪದಲ್ಲಿ ಕಪಾಳಕ್ಕೆ ಹೊಡೆಯುವುದು ಸರಿಯಲ್ಲ. ಇವರಿಗೆ ಅಧಿಕಾರ ಮೇಲಿಂದ ಬಂದಿಲ್ಲ. ಅಧಿಕಾರಿಗಳಿಗೆ ದೇಸ ರಕ್ಷಣೆ ಮಾಡುವ ಅಧಿಕಾರ ಕೊಟ್ಟಿದೆ. ಬ್ರಿಟಿಷರ ಕಾಲದಲ್ಲೂ ಕೂಡ ಪೋಲೀಸ್ ಅಧಿಕಾರಗಳಿಗೆ ಇಷ್ಟು ಅಧಿಕಾರ ಕೊಟ್ಟಿರಲಿಲ್ಲ. ಆದರೆ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರ ಕೊಟ್ಟು ಬಿಟ್ಟಿದೆ. ಇವರು ಯಾವ ರೀತಿ ಅಧಿಕಾರ ಉಪಯೋಗಿಸುತ್ತಾ ಇದ್ದಾರೆ ಎನ್ನುವುದನ್ನು ವಿಚಾರಮಾಡಬೇಕು. ಇಲ್ಲದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ತಾವು ಈ ವಿಷಯ ಸಮರ್ಥನೆಮಾಡಿಕೊಂಡದ್ದು ತಪ್ಪು ಎಂದು ಹೇಳುತ್ತೇನೆ. ತಾವು ಅಧಿಕಾರದಲ್ಲಿರುವಾಗ ನಿಮ್ಮ ಅಧಿಕಾರಿಗಳನ್ನು ರಕ್ಷಿಸಬೇಕು ಎಂಬ ಒಳ್ಳೆ ಉದ್ದೇಶದಿಂದ ಮಾಡಿರುತ್ತೀರಿ, ಅಧಿಕಾರಿಗಳಿಗೆ ದುರುದ್ದೇಶವಿರುವುದಿಲ್ಲ ಅವರಿಗೆ ರಕ್ಷಣೆ ಕೊಡಬೇಕು ಎಂಬ ಅಭಿಪ್ರಾಯ ಇದೆ. ನ್ಯಾಯವಾದ ಅಭಿಪ್ರಾಯ ಇಟ್ಟುಕೊಂಡಿದ್ದರೆ ಇಂಥ ಸಂದರ್ಭದಲ್ಲಿ ತಾವು ಆ ಸ್ಥಳಕ್ಕೆ ಹೋಗಿ ಬಂದಿರಾ? ಮಾನ್ಯ ಸದಸ್ಯರಾದ ಶ್ರೀಮಾನ್ ಶಿವಣ್ಣನವರ ರಾಜೀನಾಮೆ ಪತ್ರ ಬಂತು. ಅವರನ್ನು ಕರೆಸಿ ಕೇಳಿದೀರಾ? ಅವರ ಜೊತೆಗೆ ಮಾತನಾಡಿದಿರಾ? ನಾನು ಆರೋಗ್ಯ ಇಲ್ಲವಾದರೂ ಕೂಡ ಅಲ್ಲಿಗೆ ಹೋದೆ. ನಾನು ಈ ವಿಷಯ ಮಾತನಾಡಬೇಕಾದರೆ ಅಲ್ಲಿಗೆ ಹೋಗಿ ನಾನು ನೋಡಬೇಕು ಎಂದು ಹೋದೆ. ಕಣ್ಣಿಂದ ನೋಡಿದರೂ ಕೂಡ ಅದನ್ನು ಪರಾಂಬರಿಸಿ ಪರೀಕ್ಷಿಸಿ ನೋಡಬೇಕು ಎಂದು ಹಿರಿಯರು ಹೇಳಿದ್ದಾರೆ. ಪೋಲೀಸ್ ಅಧಿಕಾರಿ ದೂರು ತಂದು ಕೊಟ್ಟ, ಹಳ್ಳಿಯಲ್ಲಿ ನಂಬರ್ ಆಫ್ ಕ್ರಷರ್ಸ್ ಇದೆ ಎಂದು ಹೇಳಿದ, ನಿಮ್ಮ ಹತ್ತಿರ ಈಗಲಾದರೂ ಇದರ ವಿವರಗಳು ಇವೆಯೇ? ತಹಸೀಲ್ದಾರನ ಜೊತೆಯಲ್ಲಿ ಸಬ್ ಇನ್‌ಸ್ಟೆಕ್ಟ್‌ರ್  ಏಕೆ ಹೋಗಿದ್ದ? ಇಷ್ಟೆಲ್ಲ, ನೀವು ತಕ್ಷಣ ಪರಿಶೀಲನೆ ಮಾಡಿಕೊಂಡು, ನಿಮಗೆ ಧೃಡವಾಗಿ ನಂಬಿಕೆಯಾದ ಮೇಲೆ, ಇಂಥವನು ತಪ್ಪು ಮಾಡಿದ್ದಾನೆ. ಅವನು ತಪ್ಪಿತಸ್ಥ ಅಂದಮೇಲೆ ಮಾತ್ರ ಆ ಅಧಿಕಾರಿಗೆ ಮುಂದುವರಿಯುವುದಕ್ಕೆ ಅವಕಾಶ ಕೊಡಬೇಕು.

ನನ್ನ ಮೇಲೆ ವಿಧಾನಸೌಧ ಚಲೋ ಸಂಬಂಧದಲ್ಲಿ ಕೇಸು ಹಾಕಿದ್ಧಾರೆ. ನಾನು ಅಲ್ಲಿ ಹೋಗಿ ನಿಂತುಕೊಂಡರೆ ಪೀನಲ್ ಕೋಡಿನ ೨೦ನೇ ಸೆಕ್ಷನ್ ಹಾಕಿದರು. ಕೋರ್ಟಿನಲ್ಲಿ ಸತ್ಯವಾಗಿ ಹೇಳುತ್ತೇನೆ. ಎಂದು ಪ್ರಮಾಣ ಮಾಡಿ ಏನು ಬೇಕಾದರೂ ಹೇಳುತ್ತಾರೆ. ಅಲ್ಲಿ ನಡೆದುದನ್ನು ನಾನು ಹೇಳುತ್ತೇನೆ. ನಾನು ಕಲ್ಲು ಹೊಡೆಯುತ್ತೇನೆಯೇ? ವಿಧಾನ ಸೌಧ ಚಲೋ ಎಂದು ಮೆರವಣಿಗೆ ಹೋಗುವುದೇ ಒಂದು ದೊಡ್ಡ ತಪ್ಪೇ? ಅದಕ್ಕೆ ಮೂರು ತಿಂಗಳಿನಿಂದ ಕೇಸು: ಯಾವನೋ ಒಬ್ಬ ಸಬ್ ಇನ್‌ಸ್ಪೆಕ್ಟರ್ ಐ.ಪಿ.ಸಿ. ಪ್ರಕಾರ ತಪ್ಪು ಮಾಡಿದ್ದಾನೆಂದು ಬರೆದು ತರುತ್ತಾನೆ. ಮರ್ಯಾದೆ, ಮಾನ ಇರುವವರು, ಜವಾಬ್ದಾರಿ ಇರುವವರು ದೇಶದ ಆಡಳಿತ ನಡೆಸುವವರು ಏನು ಎಂಬುದನ್ನು ನೋಡಬೇಡವೇ? ಅವನು ಏನು ಬೇಕಾದರೂ ಬರೆದು ತರಬಹುದು. ಇದನ್ನೆಲ್ಲ ಸರಿಯಾಗಿ ನಿರ್ವಹಿಸಬೇಕು ಎನ್ನುವುದಕ್ಕಾಗಿ ನಾವು ಇದನ್ನು ಒತ್ತಾಯಪಡಿಸಬೇಕಾಗಿದೆ. ಈ ಪ್ರಕರಣವನ್ನು ಸಭೆಯ ಮುಂದೆ ಹೇಳಬೇಕಾಗಿ ಬಂದಿದೆ, ಹೇಳುತ್ತಿದ್ದೇನೆ.