ರೈತರ ಹಕ್ಕು

ಫಬ್ರವರಿ ೧೯೭೦

೨೨ ವರ್ಷಗಳಲ್ಲಿ ದೇಶದ ಜನತೆಗೆ ಅದರಲ್ಲೂ ರೈತರಿಗೆ ಬಗೆದ ದ್ರೋಹ ಭೂಸುಧಾರಣೆಗೆ ಸಂಬಂಧಪಟ್ಟ ಮೊದಲನೆಯ ದ್ರೋಹ. ಕಾರ್ಮಿಕರಿಗೆ ಬಗೆದದ್ದು ಬೇರೆ ದ್ರೋಹ ಇದೆ. ಅದು ಈಗ ಬೇಡ. ನಮಗೆ ಸ್ವಾತಂತ್ರ್ಯ ಬಂದು ೨೨ ವರ್ಷಗಳಾಯಿತು. ನಾನು ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತು ಬೇರೆ ಎಲ್ಲಾ ಕಡೆ ಹೇಳಿದ್ದೇನೆ. ೨೦ ವರ್ಷ ಗೇಣಿಯನ್ನು ನೀವು ಪಾವತಿ ಮಾಡಿದ್ದೀರಿ. ಆದ್ದರಿಂದ ಇನ್ನೂ ಗೇಣಿಕೊಡುವ ಅಗತ್ಯವಿಲ್ಲ. ನೀವು ಉಳುಮೆ ಮಾಡತಕ್ಕಂತಹ ಭೂಮಿಗೆ ನೀವೇ ಮಾಲೀಕರು. ಇನ್ನು ಅದನ್ನು ಬದಲಾಯಿಸತಕ್ಕ ಹಕ್ಕು ಯಾವ ಸರಕಾರಕ್ಕೂ ಇಲ್ಲ ಎಂಬುದಾಗಿ, ಅಂತಹ ಸರಕಾರ ಬಂದರೆ ಕತ್ತರಿಸಿ ಹಾಕೋಣ ಎಂದು ಹೇಳಿದ್ದೇನೆ. ಇದಕ್ಕೆ ಒಂದು ತಿದ್ದುಪಡಿಯನ್ನು ನಾನು ಸೂಚಿಸುವುದೂ ಟ್ರಿಬ್ಯೂನಲ್ ತಹಸೀಲ್‌ದಾರರೂ ಅಲ್ಲ. ಅವಕ್ಕೆ ಬದಲಾಗಿ ಸಂಯುಕ್ತ ಸೋಷಲಿಸ್ಟ್ ಪಾರ್ಟಿ ಎಂದು ೨೨ ವರ್ಷಗಳಿಂದ ಕಾದು ಕಾದು ಸಾಕಾಯಿತು. ಹಾದಿಯಲ್ಲಿ ಬಂದವರಿಗೆ ಹೋದವರಿಗೆ ದರಖಾಸ್ತು ಕೊಟ್ಟಿರಿ. ನಾವು ಕೈಯಲ್ಲಿ ಇರುವುದನ್ನು, ಮೈಯಲ್ಲಿ ಇರುವುದನ್ನು ಕೊಟ್ಟು ಅಲ್ಲಿ ಬೇಸತ್ತು ಮಾರ್ಗ ಕಾಣದೆ ಈವೊತ್ತು ಸ್ವತಂತ್ರ್ಯ ಜೀವಿಗಳು ಆಗಿದ್ದೇವೆ. ಸರಕಾರದ ಸಾಗುವಳಿಗೆ ಯೋಗ್ಯವಾದ ಜಮೀನನ್ನು ನಿಮ್ಮ ರೂಲ್ಸ್ ಪ್ರಕಾರ ಹರಿಜನ, ಗಿರಿಜನ ಮತ್ತು ಭೂಹೀನರು ಯಾರು ಯಾರು ಇದ್ದಾರೋ ಅವರಿಗೆ ಹಂಚಿ ಕೊಡುತ್ತಿದ್ದೇವೆ. ಅದಕ್ಕೆ ಮೊಹರು ಹಾಕಿ. ಹಾಕುವುದಿಲ್ಲ ಎಂದರೆ ಅದನ್ನು ತನಿಖೆ ಮಾಡುತ್ತೇವೆ. ಮೊಹರು ಹಾಕಿದರೆ ಬದುಕುತ್ತೀರಿ. ಮೊಹರು ಹಾಕುವುದಿಲ್ಲ ಎಂದರೆ ಸಾಯುತ್ತೀರಿ ಎನ್ನುವ ಮಾತನ್ನು ಖಡಾಖಂಡಿತವಾಗಿ ಈ ಸಭೆಯಲ್ಲಿ ಹೇಳುತ್ತೇನೆ.

ಇನ್ನು ಪರಿಹಾರ ಯಾರಿಗೆ ಯಾತಕ್ಕೆ ಎನ್ನುವ ಪ್ರಶ್ನೆ. ಈ ರಾಜ್ಯಾಂಗ ತಿದ್ದುಪಡಿ ಮಾಡಬೇಕು. ಮೂಲಭೂತ ಹಕ್ಕುಗಳಲ್ಲಿ ವಾಕ್ ಸ್ವಾತಂತ್ರ್ಯ; ದೇಶದ ಯಾವುದೇ ಭಾಗದಲ್ಲಿ ಹೋಗಲಿ ಅಲ್ಲಿ ವಾಸಮಾಡುವ ಸ್ವಾತಂತ್ರ್ಯ; ಯಾವುದೇ ಭಾಷೆ ಮಾತನಾಡುವ ಸ್ವತಂತ್ರ್ಯ ಮತ್ತು ಯಾವುದೇ ದೇವರನ್ನು ನಂಬುವ ಸ್ವತಂತ್ರ್ಯ ಇತ್ಯಾದಿ ಸ್ವಾತಂತ್ರ್ಯಗಳನ್ನು ಬಿಟ್ಟು ಆಸ್ತಿಪಾಸ್ತಿಗಳ ಪಟ್ಟಿಯನ್ನು ಮೂಲಭೂತ ಹಕ್ಕುಗಳಿಂದ ಕಿತ್ತು  ಹಾಕಬೇಕು ಎಂಬುದಾಗಿ ೧೯೬೨ನೇ ಇಸವಿಯಲ್ಲಿ ನಾನು ವಿಧಾನಸಭೆಗೆ ಬಂದಾಗ ಹೇಳಿದ್ದೆ. ಆಸ್ತಿಪಾಸ್ತಿಗಳು ಮೂಲಭೂತ ಹಕ್ಕಿನಲ್ಲಿ ಬರುವುದಿಲ್ಲ. ಆದುದರಿಂದ ಮೂಲಭೂತ ಹಕ್ಕಿನಿಂದ ಈ ಆಸ್ತಿಪಾಸ್ತಿಗಳನ್ನು ಮೊದಲು ಬಿಡಿಸಿ, ಆಮೇಲೆ ಬೆಂಗಳೂರು ಪೇಟೆಯಲ್ಲಿ ಯಾರು ಯಾರಿಗೆ ಎಷ್ಟೆಷ್ಟು ಅಂತಸ್ತು ಮನೆಗಳು ಇದೆ ಎಂದು ಶುರು ಮಾಡಿ ಆಮೇಲೆ ಉಳುಮೆ ಮಾಡುವ ಭೂಮಿಗೆ ಹೋಗೋಣ. ಈಗ ನಡೆಯುತ್ತಿರುವ ದೊಡ್ಡ ತಿಕ್ಕಾಟದಲ್ಲಿ ಇಂಡಿಕೇಟ್ ಶಕ್ತಿ ನನಗೆ ಗೊತ್ತಿದೆ. ಅದನ್ನು ಬಹಳ ರೀತಿಯಾಗಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಸಮಾಜವಾದದಲ್ಲಿ ನಂಬಿಕೆ ಇದ್ದರೆ ನನ್ನನ್ನು ಹಿಂಬಾಲಿಸಿ ಎಂದು ಹೇಳುತ್ತಾರೆ. ಅದು ದೊಡ್ಡ ಮಾತು. ನಾವು ಎಲ್ಲಾ ಅವರನ್ನು ಹಿಂಬಾಲಿಸುತ್ತೇವೆ. ಆದರೆ ಗದೆಯನ್ನು ಕೈಯಲ್ಲಿ ಹಿಡಿದು ಹಿಂಬಾಲಿಸ ಬೇಕಾಗುತ್ತದೆ. ಅಹಿಂಸೆಯನ್ನು ಇಟ್ಟುಕೊಂಡು ಹಿಂಬಾಲಿಸುವುದಕ್ಕಾಗುವುದಿಲ್ಲ. ಈ ಹೊತ್ತು ಜನತೆಗೆ ಹೊಟ್ಟೆ ಹಸಿವಿನಿಂದ ಮಾಡುವುದಕ್ಕೆ ಕೆಲಸ ಇಲ್ಲದೆ ಹಳ್ಳಿ ಹಳ್ಳಿಯಲ್ಲಿ ಭಿಕ್ಷೆಮಾಡುವ ಸ್ಥಿತಿ ಬಂದಿದೆ. ಅವರು ಹಾಗೆ ಅಹಿಂಸೆಯಿಂದಲೇ ಸತ್ತು ಹೋಗುತ್ತಾರೆ ಎಂದು ನಾನು ನೀರಿಕ್ಷೆ ಮಾಡುವುದಿಲ್ಲ. ದೇಶದ ಎಲ್ಲಾ ಕಡೆ ನೋಡಿದ್ದೇನೆ ಎಲ್ಲಾ ಕಡೆ ಓಡಾಡಿದ್ದೇನೆ. ಈ ಒಂದು ಎಚ್ಚರಿಕೆಯನ್ನು ನಾನು ಕೂಡಬಯುಸುತ್ತೇನೆ. ಸ್ವಾಮಿ, ನಿಮ್ಮ ತಿದ್ದುಪಡಿ ನೊಡಿ: ಬಹಳ ಸಂತೋಷ ಪಟ್ಟು ಆನಂದ ಬಾಷ್ಪ ಇಟ್ಟೆ ಎಂದು ಹೇಳುತ್ತೇನೆ. ಏನು ತಿದ್ದುಪಡಿ? ಸಿದ್ದವೀರಪ್ಪನವರು ಹೇಳಿದರು ಎಕರೆಗೆ ಬದಲಾಗಿ ಹೆಕ್ಟಾರ್ ಹಾಕಿದ್ದಾರೆಂದು ಅದು ಒಂದು ದೊಡ್ಡ ತಿದ್ದುಪಡಿ. ಸ್ಟಾಂಡರ್ಡ್ ಎಕರೆ ಬದಲಾಗಿ ಸ್ಟಾಂಡ್‌ರ್ಡ್ ಹೆಕ್ಟಾರ್ ದೊಡ್ಡ ತಿದ್ದುಪಡಿ.

ಜನರಲ್ ಮೈಕಾರ್ಥಿ ಅವರು ಜಪಾನಿನಲ್ಲಿ ತಂದ ರೀತಿಯಲ್ಲಿ ಭೂಮಿಯನ್ನು ಹಂಚಿ ಕನಿಷ್ಠ ಎಕರೆ ಗರಿಷ್ಟ ೧೫ ಎಕರೆ ಹಂಚುವ ವ್ಯವಸ್ಥೆ ಮಾಡಿ, ಯಾರಿಗೂ ಹೋರೆ ಆಗುವುದಿಲ್ಲ. ಗಂಡ ಹೆಂಡತಿ ಉಣ್ಣುತ್ತಾರೆ.. ದೇಶಕ್ಕೂ ಅನ್ನ ಕೊಡುತ್ತಾರೆ. ನಾನು ನಿಮ್ಮಂತ ಗೇಣಿದಾರನಲ್ಲ. ಜಮೀನುದಾರನೂ ಅಲ್ಲ. ಜಹಗೀರದಾರನೂ ಅಲ್ಲ, ನನ್ನ ಹಳ್ಳಿಯಲ್ಲಿ ನಾನು ಒಬ್ಬನಾಗಿದ್ದೇನೆ. ನನ್ನ ಹೊಟ್ಟೆಯಲ್ಲಿ ಇರುವ ಬೆಂಕಿ, ಉರಿ ನಿಮಗೆ ಗೊತ್ತಿಲ್ಲದೇ ಇರಬಹುದು. ಅದು ಬೇರೆ ಮಾತು. ಈ ಮಸೂದೆ ತರುವ ಮುಂಚೆ ಎಷ್ಟು ತಿದ್ದುಪಡಿಗಳನ್ನು ಮಾಡಿದಿರಿ? ಎಷ್ಟು ಟ್ರಿಬ್ಯೂನಲ್‌ಗಳನ್ನು ಮಾಡಿದಿರಿ? ಯಾವಾಗ? ಎಷ್ಟು ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಅವರಿಗೆ ಕೊಟ್ಟಿರಿ? ಯಾವ ರೀತಿ ಕೆಲಸ ಮಾಡಬೇಕೆಂದು ಹೇಳಿದಿರಿ? ಅವರನ್ನು ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಬಿಟ್ಟಿರಾ? ಅವರಿಗೆ ಆದೇಶಗಳನ್ನು ಕೊಟ್ಟಿದ್ದೀರಾ? ರೂಲ್ಸ್‌ಗಳನ್ನು ಯಾವಾಗ ಮಾಡಿದಿರಿ? ಸರ್ವೇ ಯಾವಾಗ ಮಾಡಿದ್ದೀರಿ? ಇವತ್ತು ಹಳ್ಳಿಯಲ್ಲಿ ಸರ್ವೆ ಏನು ಆಗಿದೆ? ತಾವು ದಯವಿಟ್ಟು ಇದನ್ನೆಲ್ಲಾ ಸಭೆಗೆ ತಿಳಿಸಬೇಕು.

ಅವರು ಬಂದೂಕು ಇರುವವರು; ಬಂದೂಕು ಇಲ್ಲದವರು ನಾವು ಏನು ಸೈನ್ಯ ಕಟ್ಟಬೇಕು? ಆದರೂ ನಾವು ಭೂ ಸೈನ್ಯ ಕಟ್ಟುತ್ತೇವೆ. ಯಾರು ಉಳುವವನಿಗೆ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೋ ಅವನು ಅದಕ್ಕೆ ಪ್ರಾಣವನ್ನು ತೆರಬೇಕು. ಈ ತುದಿಗೆ ಬಂದು ಮುಟ್ಟಿದ್ದೇವೆ. ಬಹಳ ದೂರ ಇಲ್ಲ ಆ ಕಾಲ. ಬೇಕಾದರೆ ಅವರು ಜ್ಯೋತಿಷ್ಯರನ್ನು ಹೋಗಿ ಕೇಳಲಿ, ಅವರು ಭವಿಷ್ಯ ಹೇಳುತ್ತಾರೆ. ನಾನು ಹೇಳುವುದು ಇಷ್ಟೆ. ಆದ್ದರಿಂದ ಭೂಮಾಲೀಕರು ಭೂ ಸೈನ್ಯವನ್ನು ಕಟ್ಟಿ ಉಳುಮೆಗಾರರನ್ನು ಒಕ್ಕಲೆಬ್ಬಸುವುದಾದರೆ, ಉಳುಮೆಗಾರರ ಮನೆಗಳನ್ನೂ ಕಿತ್ತು ಹಾಕುವುದಾದರೆ ಈಗ ಇರತರಕ್ಕ ರಾಜ್ಯಾಂಗದ ಪ್ರಕಾರ ಯಾವ ಗಳಿಗೆಯಲ್ಲಿ ಯಾವ ರೈತನನ್ನು ಬೇಕಾದರೂ ಒಕ್ಕಲೆಬ್ಬಿಸಬಹುದು. ಮನೆಯಿಂದ ಹೊರಗಡೆ ಹಾಕಬಹುದು. ಕೇಸು ಹಾಕಬಹುದು. ಇತ್ಯಾದಿ ಏನಾದರೂ ಹೇಳುವುದಕ್ಕೆ ಹೋದರೆ ಇವತ್ತು ಈ ದೇಶದಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ಕ್ರಾಂತಿಯಾಗುವುದಿಲ್ಲ. ರಕ್ತದ ಕ್ರಾಂತಿಯಾಗುವುದರಿಂದಲೇ ಅದು ಸಾಧ್ಯ.

ಮಾತೃಭಾಷೆಯ ಹಕ್ಕು

೨೫ ಫೆಬ್ರವರಿ ೧೯೭೦

ತಾಳವಾಡಿಯಲ್ಲಿ ಇರತಕ್ಕಂಥ ತಮಿಳರು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ವರದಿ ಓದಿದ್ದೇನೆ. ವಾಟಾಳ್‌ನಾಗರಾಜರಿಗೆ ಯಾರೂ ಬೆಂಬಲ ಕೊಡಲು ಮುಂದೆ ಬರಲಿಲ್ಲ. ನಾನು ಹೋದೆ. ರಸಲ್ ಮಾರ್ಕೆಟ್‌ನಲ್ಲಿ ಮಾತನಾಡಬೇಕಾಗಿತ್ತು. ಆಗ ನಾನು  ಮುಂದಕ್ಕೆ ನೋಡೋಣ. ಕಣ್ಣು ಇರುವುದು ಮುಂದಕ್ಕೆ; ಹಿಂದುಗಡೆ ತಲೆಯಲ್ಲಿ ಕಣ್ಣು ಇಲ್ಲ. ಆದುದರಿಂದ ಇತಿಹಾಸವನ್ನು ಹುಡುಕಿಕೊಂಡು ಹಿಂದಕ್ಕೆ ಹೋಗುವುದು ಬೇಡ; ಔರಂಗಜೇಬ್, ಪುಲಕೇಶಿ ಕಾಲಕ್ಕೆ ಹೋಗುವುದು ಬೇಡ. ಮುಂದಕ್ಕೆ ನೋಡೋಣ, ಮಂಗಳ ಗ್ರಹಕ್ಕೆ ಹೋದರು. ಇನ್ನೂ ಯಾವ ಗ್ರಹಕ್ಕೆ ಹೋಗಬೇಕು. ಈ ತರಹ ಹೋಗಿ ನೋಡದೆ ಯಾವ ಯಾವ ಹಾದಿಯಲ್ಲಿ ಹೋದವರು ಎಲ್ಲೆಲ್ಲಿ ಮುಗ್ಗರಿಸಿದ್ದಾರೆ ಅದನ್ನು ಗಮನದಲ್ಲಿ ಇಟ್ಟುಕೊಂಡು ಮುಗ್ಗರಿಸದೆ ಬೇರೆಯವರು ಹೋಗುವಂಥ; ಬೇರೆಯವರು ಪಡೆದಿರುವ ಅನುಭವವನ್ನು ಪಡೆದು ಅದಕ್ಕಿಂತ ಮುಂದಿರುವ ಹೆಜ್ಜೆಯನ್ನು ಹಾಕೋಣ ಎಂದು ಆ ಸಭೆಯಲ್ಲಿ ಹೇಳಿದಾಗ ಬಹಳ ಜನ ಒತ್ತಾಯ ಮಾಡಿದರು. ತಾಳವಾಡಿಗೆ ಬನ್ನಿ ಎಂದು

ಈ ಹೊತ್ತು ಮಾನ್ಯ ಮದ್ರಾಸಿನ ಮುಖ್ಯಮಂತ್ರಿಯವರು ಹೇಳಿರುವಂತೆ ಕರ್ಣಾಟಕ ದಲ್ಲಿರುವ ಬೆಂಗಳೂರಿನಲ್ಲಿರುವ ತಮಿಳರು ಕನ್ನಡಿಗರಾಗಿ ಇರಬೇಕು ಎಂದು ಹೇಳಿದರೆ ಅದಕ್ಕಿಂತ ಅವರಿಂದ ಅಶ್ವಾಸನೆ, ಭರವಸೆ ಏನೂ ಬೇಕು? ಅದಕ್ಕೆ ನಮ್ಮ ಸ್ನೇಹಿತರು ಕೆಲವರು ಹೇಳಿದರು. ನನ್ನ ಮನೆ ಸುಟ್ಟರು, ನಮ್ಮ ಮನೆ ಸುಟ್ಟರು, ನಾವು ತಮಿಳರಾಗಿರುವುದೇ ಅಪರಾಧವಾಗಿದೆ ಇತ್ಯಾದಿ ಇತ್ಯಾದಿ ಹೇಳಿದರು. ಬಹಳ ದೊಡ್ಡ ಪ್ರಮಾಣಕ್ಕೆ ಹೋಗದೆ. ಈ ಬಾಷಾ ಸಮಸ್ಯೆ. ಅದನ್ನು ನಾನು ಅಲ್ಲಗಳೆಯುವುದಿಲ್ಲ. ಪಶ್ಚಿಮ ಬಂಗಳದಲ್ಲಿ ಏನು ಪರಿಸ್ಥಿತಿ ಇದೆ. ಕೇರಳದಲ್ಲಿ ಏನು ಪರಸ್ಥಿತಿ ಇದೆ. ಆಂಧ್ರದಲ್ಲಿ ತಲಂಗಾಣ ಸಮಸ್ಯೆ ಏನಿದೆ. ಇದನ್ನೆಲ್ಲ ನಾನು ಗೌಣ ಮಾಡುವುದಕ್ಕೆ ತಯಾರಿಲ್ಲ. ಸಣ್ಣಪುಟ್ಟ ವಿಷಯಗಳು ಎಂದು ಹೇಳುವುದಕ್ಕೆ ತಯಾರಿಲ್ಲ. ಅನ್ನ ಬಟ್ಟೆ ಸಮಸ್ಯೆ ಇದ್ದರೂ ಮಾನದಿಂದ ಬದುಕಬೇಕು. ಯಾರಾದರೂ ಒಂದು ತುತ್ತು ಬಿಸಾಕಿದರೆ ತಿನ್ನವುದಕ್ಕಾಗುವುದಿಲ್ಲ. ಪ್ರಾಣ ಹೋದರೂ ತಿನ್ನುವುದಕ್ಕೆ ಆಗುವುದಿಲ್ಲ. ಹಾಗೆ ಕಾರಣಾಂತರದಿಂದ ಸಹಸ್ರ ಸಹಸ್ರ ವರ್ಷಗಳು ಪುರಾಣಗಳ ಇತಿಹಾಸದಿಂದ ಬಂದಿರತಕ್ಕ ಈ ದೇಶದಲ್ಲಿ ಒಂದು ಭಾಷೆಯನ್ನು ಮಾತನಾಡುವ ಹೆಚ್ಚು ಹೆಚ್ಚು ಜನ ಒಂದೊಂದು ಕಡೆ ಇದ್ದಾರೆ. ಇಲ್ಲವಾದಲ್ಲಿ  ನಮ್ಮ ರಾಷ್ಟ್ರಗೀತೆಯಲ್ಲಿ ಅನೇಕ ವಿಷಯಗಳನ್ನು ಹೇಳುವ ಅಗತ್ಯತೆ ಇರಲಿಲ್ಲ. ಅದರಲ್ಲಿ ಏನೇನಿದೆ ಎನ್ನುವುದು ತಮಗೆಲ್ಲಾ ಗೊತ್ತಿದೆ. ಕೇಂದ್ರದಲ್ಲಿ ಈ ಹೊತ್ತು ಮಹಜನ್ ಕಮಿಷನ್ ಕೊಡದೆ ಇರುವ ಭಾಗಗಳನ್ನು ಹಳಿಯಾಳ ಷಹಾಪುರ ಇವುಗಳನ್ನು ಮಹರಾಷ್ಟ್ರಕ್ಕೆ ಕೊಡುವ ಪ್ರಯತ್ನ ನಡೆದಿದೆ. ಷಹಪುರವನ್ನು ನಾನು ನೋಡಿದ್ದೇನೆ. ಬೆಳಗಾವಿಗೆ ಹೋಗುವ ಎಡಭಾಗದಲ್ಲಿ ಬರುತ್ತದೆ. ಹಿಂದೆ ಇದೇ ಸಭೆಯ ಸದಸ್ಯರಾಗಿದ್ದ ಶ್ರೀ ಸ್ವಾಮೀಜಿ ಅವರ ಗ್ರಾಮಕ್ಕೆ ಹೋಗಿದ್ದೇನೆ. ಅವರ ಊರು ಬೆಳಗಾವಿಗೆ ಹೋಗುವುದಕ್ಕೆ ಮೊದಲು ಸಿಕ್ಕುತ್ತದೆ. ಶ್ರೀ ಸ್ವಾಮೀಜಿ ಅವರ ಗ್ರಾಮ ಪಂಚಾಯಿತಿ ವ್ಯವಹಾರಗಳು ಮರಾಠಿಯಲ್ಲಿ ನಡೆಯುತ್ತವೆ. ಇದೇ ಸಂದರ್ಭದಲ್ಲಿ ನಾನು ಈ ಮಾತನ್ನು ಹೇಳುತ್ತೇನೆ. ಯಾರ ಮಾತೃಭಾಷೆ ಕನ್ನಡವಲ್ಲ, ಅವರಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವಾಗಬೇಕು, ಅವರ ಭಾಷೆಗೆ ನಾವು ಪುರಸ್ಕಾರ ಕೊಡಬೇಕು. ಈ ಸಭೆಯಲ್ಲಿ ಭಾಷಾಂತರ ಮಾಡುವುದು ಕಷ್ಟವಾಗಬಹುದು. ಬರೆದುಕೊಳ್ಳುವುದು ಕಷ್ಟವಾಗಬಹುದು. ಆದರೂ ಹೊತ್ತಿನವರೆಗೂ ನನಗೆ ಅರ್ಥವಾಗಿಲ್ಲ, ಸರ್ಕಾರಿ ಕಾಗದ ಎಂದರೆ ಇಂಗ್ಲೀಷ್‌ನಲ್ಲಿಯೇ ಇರಬೇಕು ಅದೇ ಅಧಿಕೃತ ಭಾಷೆ ಎಂದು ಹೇಳುವ ಮಾತು ಅಥವಾ ಹಿಂದಿಯಲ್ಲಿರಬೇಕು ಎಂದು ಹೇಳುವ ಮಾತು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯಾಂಗವನ್ನು ಬರೆದವರು ಏನು ಅರ್ಥದಲ್ಲಿ ಹೇಳಿದರೋ, ಏಕೆ ಹೇಳಿದರೋ ಗೊತ್ತಿಲ್ಲ. ೨೦೦ ವರ್ಷ ಆಂಗ್ಲರು ಹೇಳಿರುವುದರಿಂದ ಕನ್ನಡದಲ್ಲಿ ಹೇಳುವವರು ಯಾರೂ ಇಲ್ಲ ಎಂದು ಹೇಳಿದರೋ ಏನೋ? ಆ ಅರ್ಥದಲ್ಲಿ ಹೇಳಿದ್ದಾರೆಂದು ಕಾಣುತ್ತದೆ. ಆದರೆ ತನ್ನ ಮಾತೃಭಾಷೆಯಲ್ಲಿ ಮಾತನಾಡಬೇಡ ಎಂದು ಯಾವುದಾದರೂ ಸರ್ಕಾರ ಅಥವಾ ಯಾರಾದರೂ ದೇಶದಲ್ಲಿ ಒತ್ತಾಯಪಡಿಸಿದರೆ ನನಗೆ ಸಿಟ್ಟು, ನನ್ನ ನಾಲಿಗೆಯನ್ನು ಕತ್ತರಿಸಿದಷ್ಟು ನೋವೂ ಆಗುತ್ತದೆ. ಬೇರೆ ಕಡೆಯಲ್ಲಿ ಹೋದಾಗಲೂ ನನ್ನ ಭಾಷೆಯಲ್ಲಿ ಮಾತನಾಡಬಹುದು. ಸೋನೇಮಲದಲ್ಲಿ ನಾನು ಕನ್ನಡದಲ್ಲಿ ಮಾತನಾಡಿದಾಗ ಬೇರೆಯವರು ಮಾತನಾಡಬಹುದು. ಸೋನೇಮಲದಲ್ಲಿ ನಾನು ಕನ್ನಡದಲ್ಲಿ ಮಾತನಾಡಿದಾಗ ಬೇರೆಯವರು ಅದನ್ನು ತರ್ಜುಮೆ ಮಾಡಿದರು. ಪಾಟ್ನದಲ್ಲಿ ಹೋದಾಗ ನಾನು ಹಿಂದಿಯಲ್ಲಿಯೇ ಮಾತನಾಡಿದೆ. ಅರ್ಧರ್ಧ ಮಾತನಾಡಿದೆ, ನಮ್ಮವರು ಇಂಗ್ಲಿಷ್ ಎನ್ನುವುದು ನನಗೂ ಗೊತ್ತಿದೆ. ಈ ದೇಶದಿಂದ ಇಂಗ್ಲೀಷರನ್ನು ಕಳುಹಿಸಿದೆ ಮೇಲೆ ಇಂಗ್ಲಿಷ್ ಭಾಷೆಯನ್ನು ಕೊಲೆ ಮಾಡುವುದು ಬೇಡ ಎಂದು ನಾನು ಅದರ ತಂಟೆಗೆ ಹೋಗಿಲ್ಲ. ೨೫ ವರ್ಷವಾದರೂ ಎಲ್ಲ ವಸ್ತುಗಳಿಗೂ ಏನು ಶಬ್ದ ಎನ್ನುವುದು ನನಗೆ ಗೊತ್ತಿಲ್ಲ. ಕನ್ನಡದಲ್ಲಿ ನನ್ನ ಮನಸ್ಸು ಬಿಚ್ಚಿ ಹೃದಯ ಬಿಚ್ಚಿ, ಇನ್ನೊಬ್ಬರಿಗೆ ನಾಟುವಂತೆ ಹೇಳಬಲ್ಲೆ. ಬಹಳ ಸೂಕ್ಷ್ಮವಾದ ವಿಷಯಗಳನ್ನು ಹೇಳಬಲ್ಲೆ. ಆದರೆ ಪರಭಾಷೆಯಲ್ಲಿ ಇಷ್ಟೊಂದು ಮಾತನಾಡುವುದು ಕಷ್ಟ. ಬೇಕಾದಷ್ಟು ಸಮಸ್ಯೆಗಳಿವೆ, ಮಾನ್ಯ ಕದಂ ಮತ್ತು ಅವರ ಸ್ನೇಹಿತರು ನಮಗೆ ಶಾಲೆ ಕೊಡುವುದಿಲ್ಲ, ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಹೇಳುತ್ತಾರೆ. ಯಾರನ್ನೂ ಕಡೆಗಣಿಸಬಾರದು. ಶಿವಮೊಗ್ಗದಲ್ಲಿ ತಮಿಳು ಶಾಲೆ ಇದೆ. ಅವರಿಗೆ ಪ್ರತ್ಯೇಕ ಶಾಲೆಗಳನ್ನು ಕೊಡಬೇಕು. ೨೫ ೪೦ ಹುಡುಗರು ಮಾತ್ರ ಇದ್ದರೆ ಕನ್ನಡ ಶಾಲೆಯಲ್ಲಿ ಒಂದು ಭಾಗವನ್ನು ತೆರೆದು ಅಲ್ಲಿ ಒಬ್ಬ ತಮಿಳು ಉಪಧ್ಯಾಯರನ್ನು ಇಡುವುದರಲ್ಲಿ ರಾಜ್ಯಕ್ಕೆ ಏನೂ ನಷ್ಟವಾಗುವುದಿಲ್ಲ. ೪೦ ಮಕ್ಕಳ ತಂದೆ ತಾಯಿಗಳೂ ಮಣ್ಣಿನಲ್ಲಿ ದುಡಿಯುತ್ತಾರೆ. ಆದುದರಿಂದ ನಮ್ಮ ಪ್ರಮುಖ ಕರ್ತವ್ಯವೆಂದರೆ ಯಾವುದೇ ರಾಜ್ಯದಲ್ಲಿ ಮರಾಠಿ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನೂ, ಕನ್ನಡ ರಾಜ್ಯದಲ್ಲಿ ಮರಾಠಿ ಶಲೆ, ತಮಿಳು ಶಾಲೆ ಇತ್ಯಾದಿ ಶಾಲೆಗಳನ್ನು ತೆರೆಯಬೇಕಾದ್ದು ಬಹಳ ಅಗತ್ಯ.

ಕಣ್ಣು ಒರೆಸುವುದಕ್ಕಾಗಿ ಕಾಸರಗೋಡನ್ನು ಅದರಲ್ಲಿ ಸೇರಿಸಿದರು. ತಾಲವಡಿ ಫಿರ್ಕಾ, ಹೊಸೂರು, ಮಾಡಕಸಿರಾ ಇಂಥ ವಿವಾದಕ್ಕೆ ಕಾರಣವಿಲ್ಲದೆ ಇರತಕ್ಕ ಭಾಗಗಳನ್ನು ಕೂಡ ಕೆಲವನ್ನು ಬಿಟ್ಟಿರಿ. ಅದನ್ನೆಲ್ಲ ಹಿಂದೆ ಹೇಳಿದ್ದಾಗಿದೆ. ಸರ್ಕಾರ ಈ ತಪ್ಪು ಮಾಡಿದೆ ಎಂದು ಹೇಳಿದ್ದಾಗಿದೆ. ಆಗ ಇವರ ಮೇಲೆ ಬಹಳ ಒತ್ತಾಯ, ಒತ್ತಡ ಇತ್ತು. ಇವರು ಒಪ್ಪಿಕೊಂಡರು ಮಹಾಜನ್ ಆಯೋಗ ಆಯಿತು, ತೀರ್ಪುಕೊಟ್ಟಿದ್ದು ಆಯಿತು. ತೀರ್ಪನ್ನು ತಕ್ಷಣ ಮಹಾರಾಷ್ಟ್ರದವರೂ ತಿಸ್ಕರಿಸಿದ್ದೂ ಆಯಿತು. ನಮ್ಮವರು ಒಪ್ಪಕೊಂಡದ್ದೂ ಆಯಿತು. ಲಾಭವೋ ನಷ್ಟವೋ ಅದನ್ನು ಹೇಳಲಾರೆ. ನಾಲ್ಕು ಕೋಟಿ ಆದಾಯಕರ (ಇನ್ ಕಂಟ್ಯಾಕ್ಸ) ಬರುವಂಥ ನಿಪ್ಪಾಣಿ ಹೋದಮೇಲೆ ಭಾಕಿ ಊರು ಇದ್ದರೆ ಏನು ಅನ್ನಿಸುತ್ತದೆ. ಒಂದೊಂದು ಸಲ ನಿಪ್ಪಾಣಿ ಹೋದಮೇಲೆ ಷಹಪುರ ಇದ್ದರೆ ಏನು ಅನ್ನಿಸುತ್ತದೆ. ಆದರೆ ಶಹಾಪುರ ಕೊಡುವುದರಿಂದ ರಕ್ತಪಾತವಾದೀತು, ಬರ್ಲಿನ್ ನಗರದಂತಾದೀತು ಎಂದು ಈ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆದುದರಿಂದ ಈ ಸಮಸ್ಯೆ ಬಗ್ಗೆ ಹೆಚ್ಚು ಹೇಳಬೇಕಾದದ್ದು ಇಲ್ಲವಾದರೂ ಕೂಡ ಮಹಾರಾಷ್ಟ್ರದವರಿಗೆ ತಮ್ಮ ರಾಜ್ಯ ಮಹಾರಾಷ್ಟ್ರ ಹೇಗೆ ಆಗುತ್ತದೆ ಎಂದು ನಾನು ಕೇಳಿದ್ದೇನೆ. ನಮ್ಮ ಅಧ್ಯಕ್ಷರೊಬ್ಬರು ಮಹಾರಾಷ್ಟ್ರದವರು ಇದ್ದರು. ಈ ನಮ್ಮ ದೇಶ ಒಂದು ರಾಷ್ಟ್ರ. ಈ ನಮ್ಮ ರಾಷ್ಟ್ರದೊಳಗೆ ಮಹಾರಾಷ್ಟ್ರ ಇರಲಿಕ್ಕೆ ಸಾಧ್ಯವೇ? ಎಂದಿಗೂ ಸಾಧ್ಯವಾಗುವುದಿಲ್ಲ. ಯಾಕೆಂದರೆ ಒಂದು ಸಣ್ಣ ಕೊಡಪಾನದಲ್ಲಿ ಒಂದು ದೊಡ್ಡ ಹೆಂಡೆ ಇರಲು ಸಾಧ್ಯವೇ? ಅದಕ್ಕಾಗಿ ನಿಮ್ಮ ರಾಜ್ಯಕ್ಕೆ ಮರಾಠಾ ಎಂದು ಹೇಳಿ. ಅದನ್ನು ಒಪ್ಪುತ್ತೇನೆ. ಇದಕ್ಕೆ ಇತಿಹಾಸ ಇದೆ. ಮಹಾರಾಷ್ಟ್ರ ವಿಸ್ತರಿಸಕ್ಕತಂಥ ಮನೋಭಾವ ಬಿಡಬೇಕು ಕನ್ನಡಿಗರ ಮೇಲೆ ಕತ್ತಿ ಕಟ್ಟುವುದನ್ನು ಬಿಡಬೇಕು ಎಂದು ನಾನು ಅವರಿಗೆ ತಿಳಿಸಿದ್ದೇನೆ. ಎಲ್ಲ ಪಕ್ಷಗಳಲ್ಲಿ ಕೂಡ ಭಾಷಾ ರಾಜ್ಯ ವಿಭಜನೆಯಾದಮೇಲೆ ಒಡು ಇದೆ. ಸರ್ವಸಮ್ಮತಿ ಇದೆ ಎಂದು ಹೇಳುವುದಕ್ಕಾಗುವುದಿಲ್ಲ. ನಮ್ಮ ಪಕ್ಷದವರು ಮುಂಬಯಿನಲ್ಲಿ ಇಲ್ಲಿ ಇರತಕ್ಕಂಥ ಸ್ನೇಹಿತರನ್ನು ಕೇಳಿದರೆ ಬೆಳಗಾಂ ನಮಗೆ ಬರಬೇಕು, ನಿಪ್ಪಾಣಿ ಹಳ್ಯಾಳ ಬರಬೇಕು. ಕಾರವಾರ ಜಿಲ್ಲಾ ಪೂರ್ತಿ ಬರಬೇಕು, ಎಂಬ ಬೇಡಿಕೆ ಇಡುತ್ತಾರೆ. ನಾವು ಇರ್‌ರಾಷನಲ್ ಎಂದು ಅಂದರೆ ನೀವು ಇರ್ರಾಷನಲ್ಲಾಗಿ ಭಾವನಾತ್ಮಕವಾಗಿ ಮಾತನಾಡುತ್ತೀರಿ. ದೇಶ ಬಾಲ್ಕನೈಸ್ ಮಾಡಲು ಹೊರಟಿದ್ದೀರಿ ಎಂದು ಆರೋಪಿಸುತ್ತಾರೆ. ಎಮೋಷನಲ್ಲಾಗಿ ಭಾಷೆಯ ಬಗ್ಗೆ ವ್ಯಾಮೋಹ ಬಿಟ್ಟು ಕೊಟ್ಟರೆ, ನೀವು ರ್ಯಾಷನಲ್ಲಾದರೆ ನಾವು ನಿಮ್ಮಿಂದ ಕಲಿಯಲಿಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಉತ್ತರ ಕೊಡುತ್ತೇನೆ.

ರೈತರ ನೀರಿನ ಹಕ್ಕು

ಮಾರ್ಚ್ ೧೯೭೦

ನಮ್ಮ ಹಳೆಯ ಮೈಸೂರು ಭಾಗದಲ್ಲಿ ರೆಕಾಢ್ ಆಫ್ ರೈಟ್ಸ್ ಅಸ್ತವ್ಯಸ್ತವಾಗಿದೆ. ಕಳೆದ ೨೨ ವರ್ಷಗಳಿಂದ ಸರಿಯಾಗಿ ಪಹಣಿ ಲೆಕ್ಕವನ್ನು ಬರೆದಿಲ್ಲ. ಇದನ್ನು ಸರಿಪಡಿಸಬೇಕು. ಭಾರಿ ನೀರಾವರಿ ಯೋಜನೆಗಳಿಗಾಗಿ, ನೆನ್ನೆತಾನೆ ಈ ಸಭೆ, ಭಾರಿ ಹಣವನ್ನು ಮಂಜೂರು ಮಾಡಿತು. ನಮ್ಮ ರಾಜ್ಯದಲ್ಲಿ ನೀರಾವರಿಗೆ ಒಳಪಟ್ಟಿಂತಹ ಭೂಮಿ ಬಹಳ ಕಡಿಮೆ ಇದೆ. ಯೋಜನೆಗಳನ್ನು ಕೈಕೊಳ್ಳಲು ಅನೇಕ ಅಡ್ಡಿಗಳು ಬರುತ್ತಿವೆ. ಆದರೂ ಈ ಯೋಜನೆಗಳನ್ನು ಮುಗಿಸಬೇಕಾದ ಈಗ ವಾಟರ್ ರೇಟನ್ನು ಹಾಕುತ್ತಿದ್ದೀರಿ. ಪಾಳೆಗಾರರೂ ಮಹಾರಾಜರು ಕಟ್ಟಿಸಿರತಕ್ಕಂಥ ಕೆರೆಕಟ್ಟೆಗಳ ನೀರಿಗೆ ಮತ್ತು ಮಳೆಯ ಆಶ್ರಯದಲ್ಲಿ ಬೆಳೆಯತಕ್ಕಂಥ ಜಮೀನಿನ ಮೇಲೂ ವಾಟರ್ ರೇಟನ್ನು ಹಾಕುತ್ತಿದ್ದೀರಿ. ಇದು ನ್ಯಾಯವಲ್ಲ ಧರ್ಮವಲ್ಲ. ಆ ರೀತಿ ಹಾಕುವುದಕ್ಕೆ ನಿಮಗೆ ಹಕ್ಕೂ ಕೂಡ ಬರುವುದಿಲ್ಲ. ೧೯೪೨ರಿಂದೀಚೆಗೆ ಸಾರ್ವಜನಿಕರ ಹಣದಿಂದ ಯಾವ ಕೆರೆ ಕಟ್ಟೆಗಳನ್ನು ಮತ್ತು ಪ್ರಾಜೆಕ್ಟ್‌ಗಳನ್ನು ಕಟ್ಟಿಸಿದ್ದಿರೋ ಅಂತಹ ಕರೆರೆಗಳ ನೀರನ್ನು ಮತ್ತು ಸ್ವಾಭಾವಿಕವಾಗಿ ಬರುವ ಮಳೆಯ ನೀರನ್ನು ಉಪಯೋಗಿಸಿಕೊಂಡು ವ್ಯವಸಾಯ ಮಾಡುವವರ ಮೇಲೆ ವಾಟರ್ ರೇಟನ್ನು ಹಾಕುವುದಕ್ಕೆ ಕಾನೂನು ಪ್ರಕಾರ ನಿಮಗೆ ಅಧಿಕಾರವಿಲ್ಲ. ಅದರಿಂದ ಸರ್ಕಾರದವರು ಇದನ್ನು ಪುನರ್ವಿಮರ್ಶೆ ಮಾಡಿ ಸೂಕ್ತ ಕಾನೂನನ್ನು ಮಾಡಬೇಕು. ಇವತ್ತು ಕಂದಾಯ ವಸೂಲಿ ಮಾಡುವ ವಿಚಾರದಲ್ಲಿ ಕಳ್ಳಾಟ ಮಾಡುತ್ತಿದ್ದೀರಿ. ಕೆಲವು ಕಡೆಗಳಲ್ಲಿ ಕ್ಷಾಮ ಇದೆ ಎಂದು ಕಂದಾಯವನ್ನು ಕಾಫಿ ಮಾಡುತ್ತೀರಿ. ಬೆಳೆ ಮಳೆಯಾದ ವರ್ಷದಲ್ಲಿ ಮಾಫಿ ಮಾಡಿದ ಕಂದಾಯವನ್ನು ಸಹ ವಸೂಲಿ ಮಾಡುವುದಕ್ಕೆ ಹೊರಡುತ್ತೀರಿ. ಬ್ರಿಟೀಷರ ಕಾಲದಲ್ಲಿ ಅಂದರೆ ಷೇರ್ಷಾನ ಕಾಲದಲ್ಲಿ ಸರ್ವೇಯಾದ ಮೇಲೆ ಮತ್ತೆ ನಾವು ಸರ್ವೆ ಮಾಡಿಸಿಲ್ಲ. ಕಳೆದ ೫ – ೬ ವರ್ಷಗಳಲ್ಲಿ ಬೇಜವಾಬ್ದಾರಿಯುತವಾದ ಸರ್ವೆಮಾಡಿದ ಲೆಕ್ಕ ಇತ್ತೊ ಅದರೆ ಲೆಕ್ಕವನ್ನು ತೆಗೆದುಕೊಂಡು ಗುಣಾಕಾರಮಾಡಿ ೨೦ ರೂಪಾಯಿ ಕಂದಾಯ ಇದ್ದ ಕಡೆ ೪೦ ರೂಪಾಯಿ ಎಂದು ೬೦ ರೂಪಾಯಿಗಳು ಇದ್ದಕಡೆ ೮೦ ರೂಪಾಯಿಗಳು ಎಂದು ನಿಗದಿ ಮಾಡಿದ್ದೀರಿ ಯಾವ ಜಮೀನನ್ನು ಕೂಡ ಸರಿಯಾಗಿ ಅಳತೆ ಮಾಡಿಲ್ಲ. ನಿಮ್ಮ ಹತ್ತಿರ ಸರ್ವೇ ನಂಬರಾಗಲೀ, ನಕಾಶೆಯಾಗಲೀ ಇಲ್ಲ. ಒಂದು ಬಾಳೆ ಮರ ಇದ್ದರೆ ಆ ಭಾಗವನ್ನು ಬಾಗಾಯಿತು ಜಮೀನು ಎಂದು ಟ್ರೀಟ್ ಮಾಡಿ ೨೦ ರೂಪಾಯಿ ಕಂದಾಯವನ್ನು ೬೦ ರೂಪಾಯಿ ಮಾಡಿದ್ದೀರಿ. ಈ ಪ್ರಕಾರ ಹೊಲಸು ಮಾಡಿ ಇಟ್ಟಿದ್ದೀರಿ. ರೆವಿನ್ಯೂ ಭೂಮಿ ಎಷ್ಟಿದೆ? ಫಾರೆಸ್ಟ್ ಭೂಮಿ ಎಷ್ಟು? ಇದೆ. ಖಾಸಗೀ ಜಮೀನು ಎಷ್ಟಿದೆ? ಇದನ್ನೆಲ್ಲಾ ಸರಿಯಾಗಿ ಸರ್ವೆ ಮಾಡಿ ಒಂದು ವಿವರವಾದ ಪಟ್ಟಿಯನ್ನು ನಮ್ಮ ಮುಂದೆ ಇಡಬೇಕು. ಭೂಸುಧಾರಣ ಸಂಬಂಧದಲ್ಲಿ ಜತ್ತಿ ಸಮಿತಿಯವರು ಕೊಟ್ಟಿರುವ ಅಂಕಿ ಅಂಶಗಳು ಸಮರ್ಪಕವಾಗಿಲ್ಲ. ಅದರಲ್ಲಿ ವಿಪರೀತ ಹೆಚ್ಚು ಕಡಿಮೆಯಾಗಿದೆ. ಶಾನುಭೋಗರು ಸರಿಯಾಗಿ ಲೆಕ್ಕ ಬರೆಯದ ಕಾರಣ ಖುಷ್ಕಿ ಜಮೀನು ತರಿ ಜಮೀನಾಗಿದೆ. ತರಿ ಜಮಿನು ಬಾಗಾಯಿತು ಆಗಿದೆ. ಆದಕಾರಣ ಸರಿಯಾದ ಸರ್ವೆ ಆಫೀಸರನ್ನು ನೇಮಕ ಮಾಡಿ ಮೈಸೂರು ರಾಜ್ಯದಲ್ಲಿ ಖುಷ್ಕಿ ಜಮೀನು ಎಷ್ಟಿದೆ, ತರಿ ಜಮೀನು ಎಷ್ಟಿದೆ, ಬಾಗಾಯಿತು ಎಷ್ಟಿದೆ ಮತ್ತು ನಿಮ್ಮ ಸ್ಟಾಂಡರ್ಡ್‌ ಎಕರೆ ಪ್ರಕಾರ ಎಷ್ಟೆಷ್ಟು ಜಮೀನು ಇದೆ. ಫಾರೆಸ್ಟ್‌ಗೆ ಸಂಬಂಧಪಟ್ಟಂತೆ ಸಾಗುವಳಿಗೆ ಯೋಗ್ಯವಾದ ಭೂಮಿ ಎಷ್ಟಿದೆ ಇದನ್ನೆಲ್ಲಾ ಲೆಕ್ಕ ಮಾಡಿ ಸಭೆಯ ಮುಂದೆ ಇಡಬೇಕು.

೧೯೭೦ನೆಯ ಇಸವಿಯಲ್ಲಿ ಅಖೈರಾಗಿ ಸರ್ಕಾರ ಸಂಪೂರ್ಣವಾಗಿ ಇದರ ಲೆಕ್ಕ ಮಾಡಿದ ಬೇಕು. ಲೆಕ್ಕ ಕನ್ನಡಿ ಇದ್ದ ಹಾಗೆ ಇರಬೇಕು. ಶಿವಮೊಗ್ಗ ಜಿಲ್ಲೆಯ ಆರಗ ಗ್ರಾಮದಲ್ಲಿ ಹಿರೇ ಕೆರೆ ಇದೆ. ಅಲ್ಲಿ ನೀರು ಇದೆಯೇ, ಅದರ ಅಚ್ಚುಕಟ್ಟು ಎಷ್ಟು, ಖುಷ್ಕಿ ಎಷ್ಟು ಎಕರೆ ಇದೆಯೆಂದು ಕೇಳಿದರೆ ಅದನ್ನು ಕೇಳುವುದಕ್ಕಾಗುವುದಿಲ್ಲ. ಈಗಾಗಲೇ ೨೨ ವರ್ಷಗಳು ಕಳೆದಿವೆ. ಈ ಬಗ್ಗೆ ಇನ್ನೂ ಏನೂ ಮಾಡಿಲ್ಲ ೨೫ ಸಾವಿರ ಹಳ್ಳಿಗಳಲ್ಲಿ ವಾಸ ಮಾಡತಕ್ಕವರು ಸುಮಾರು ಎರಡು ಕೋಟಿ ಜನರು ಇದ್ದಾರೆ. ಒಂದು ಕೋಟಿ ೨೦ ಲಕ್ಷ ಜನ ಭೂಮಿಯನ್ನು ಆಶ್ರಯಿಸಿ ಜೀವನ ಮಾಡುತ್ತಿದ್ದಾರೆ. ಶೇಕಡಾ ೨೫ ಪರ್ಸೆಂಟ್ ನೀರಾವರಿ ಮಾಡಿದರೂ ಶೇಕಡಾ ೨೫ ಭಾಗ ಜಮೀನು ಮಳೆ ಬಂದರೆ ಬೆಳೆಯಾಗುತ್ತದೆ. ಇಲ್ಲದಿದ್ದರೆ ಬೆಳೆ ಆಗುವುದಿಲ್ಲ. ಕೆಲವು ಸಂದರ್ಭದಲ್ಲಿ ಬೀಜ ಕೂಡ ಕೈಗೆ ಸಿಕ್ಕುವುದಿಲ್ಲ. ಜೋಳದ ಬೆಳೆ ಹಾಳಾಗಿ ಹೋಗುತ್ತದೆ. ಹೀಗಿರುವಾಗ ಇವೊತ್ತು ದುಪ್ಪಟ್ಟು, ಮೂರು ಪಟ್ಟು ಕಂದಾಯವನ್ನು ವಸೂಲು ಮಾಡುವುದಕ್ಕೆ ತಹಶೀಲ್ದಾರರು, ಶ್ಯಾನುಭೋಗರು, ರೆವಿನ್ನೂ ಇನ್‌ಸ್ಪೆಕ್ಟರ್ ಮುಂತಾದ ಕಂದಾಯವನ್ನು ಕಲೆಕ್ಟ್ ಮಾಡತಕ್ಕ ಎಲ್ಲ ಅಧಿಕಾರಿಗಳಿಗೂ ಒಂದು ಸ್ಪಷ್ಟವಾದ ಆಜ್ಞೆಯನ್ನು ಸರ್ಕಾರ ಹೊರಡಿಸಬೇಕೆಂದು ನಾನು ರಾಜ್ಯದ ರೈತರ ಪರವಾಗಿ ತಮ್ಮನ್ನು ಒತ್ತಾಯಪಡಿಸುತ್ತೇನೆ. ಈಗ ಶಾಸ್ತ್ರೀಯವಾದ ರೀತಿಯಲ್ಲಿ ಆಯಾ ಜಮೀನಿಗೆ ಅನುಗುಣವಾಗಿ ಕಂದಾಯವನ್ನು ವಸೂಲು ಮಾಡುತ್ತಿಲ್ಲ. ದುಡ್ಡು ಇದ್ದವರು, ಕಂದಾಯ ಕೊಡುವುದಕ್ಕೆ ಯೋಗ್ಯತೆ ಇರುವವರು ಕಂದಾಯವನ್ನು ಕೊಡಲಿ, ಅಂಥವರ ಮೇಲೆ ಇವರು ಕಂದಾಯವನ್ನು ವಿಧಿಸುವುದಿಲ್ಲ. ಅವರಿಂದ ಕಂದಾಯವನ್ನು ವಸೂಲು ಮಾಡುವುದಿಲ್ಲ. ಬಡವರ ಮೇಲೆ ಹೆಚ್ಚು ಕಂದಾಯವನ್ನು ಹಾಕಿ ಅವನಿಗೆ ಇದ್ದಂತ ಮನೆಯನ್ನು ಹರಾಜು ಮಾಡಿಸಿ ಅವನಿಂದ ಕಂದಾಯವನ್ನು ವಸೂಲು ಮಾಡುತ್ತಾರೆ. ಅನಾರ್ಥಿಕ ಹಿಡುವಳಿಯ ಮೇಲೆ, ಆರ್ಥಿಕವಾಗಿ ಸಬಲವಲ್ಲದೆ ಇರತಕ್ಕ ಸಣ್ಣ ಹಿಡುವಳಿಗಳ ಮೇಲೆ ಕಂದಾಯವನ್ನು ರದ್ದು ಮಾಡಬೇಕು; ಕೃಷಿ ಭೂಮಿಯನ್ನು ಪ್ಲಾಂಟರುಗಳಿಗೆ ಕೊಡಲಾಗಿದೆ. ಈ ರೀತಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಆರು ಸಾವಿರ ಎಕರೆ ಬೇಸಾಯದ ಜಮೀನನ್ನು ಬೇರೆ ಯಾರೂ ಯಾರಿಗೋ ಕೊಟ್ಟಿದ್ದಾರೆ. ಶಿವಮೊಗ್ಗಾದಲ್ಲಿ ಷುಗರ್‌ಕೇನ್ ಕಂಪನಿಯವರು ಸ್ವಂತವಾಗಿ ಕಬ್ಬು ಬೆಳೆಯುತ್ತಾರೆ. ಅವರು ಎಷ್ಟೋ ಸಾವಿರ ರೂಪಾಯಿಗಳ ಕಂದಾಯ ಬಾಕಿ ಕೊಡಬೇಕಾಗಿದೆ. ಅದನ್ನು ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳು ವ್ಯವಹಾರ ಮಾಡುತ್ತಿದ್ದಾರೆ. ಆ ಕಂಪನಿಯವರಲ್ಲಿ ಇಷ್ಟು ಕಂದಾಯವನ್ನು ರೈಟ್ ಆಫ್ ಮಾಡಿದರೆ ನನಗೆ ಎಷ್ಟು ಕೊಡುತ್ತೀರಿ ಎಂದು ಅಧಿಕಾರಿಗಳು ಕೇಳುತ್ತಾರೆ. ಇಂಥಾ ವ್ಯವಹಾರವನ್ನು ಮಾಡಿ ದೇಶವನ್ನು ಉದ್ದಾರ ಮಾಡುವುದಕ್ಕೆ ಹೊರಟಿರುವುದರಿಂದ ಬಹಳ ಕಷ್ಟವಾಗುತ್ತದೆ. ಇದರಲ್ಲಿ ಒಂದು ಕ್ರಾಂತಿಕರವಾದ ಬದಲಾವಣೆ ಆಗಬೇಕು. ಇಲ್ಲಿ ಒಂದು ಸ್ಟಾಲಿನ್ ಪದ್ಧತಿಯನ್ನು, ಮೆಕಾರ್ಥಿ ಪದ್ಧತಿಯನ್ನು ಅನುಸರಿಸಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ದೇಶ ಅಗ್ನಿಕುಂಡವಾಗಿದೆ. ಜಮೀನು ಒಬ್ಬನದು, ಸಾಗು ಮಾಡುವವನು ಒಬ್ಬ, ಅದನ್ನು ಉಪಯೋಗ ಮಾಡುವವನು ಇನ್ನೊಬ್ಬ. ಈ ಸ್ಥಿತಿ ದೇಶದಲ್ಲಿ ಬಂದಿದೆ. ಈಗ ನಾನು ಅಸೆಂಬ್ಲಿ ಮೆಂಬರಾಗಿದ್ದೇನೆ ಎಂದು ಕೋರ್ಟಿನಲ್ಲಿ ಸ್ಟೇ ಆರ್ಡರು ತೆಗೆದುಕೊಂಡು ಬಂದು ತೀರ್ಥಹಳ್ಳಿಯಲ್ಲಿ ಯಾರ ಜಮೀನಿನಲ್ಲಿ ಯಾವ ಬೆಳೆಯನ್ನಾದರೂ ಕೊಯ್ದು ಕೊಂಡು ಬರಬಹುದು. ಆ ಒಂದು ಪರಿಸ್ಥಿತಿ ಉಂಟಾಗಿದೆ. ಈ ಪದ್ಧತಿ ಇರತಕ್ಕ ರಾಜ್ಯದಲ್ಲಿ ಈ ಸರ್ಕಾರ ಇದೆಯೆಂದು ಹೇಳುವುದಕ್ಕೆ ನಾಚಿಕೆಯಾಗುತ್ತದೆ.

ಫ್ಯಾಮಿನ್ ರಿಲಿಫ್ ಬಗ್ಗೆ ಹೇಳಬೇಕಾದರೆ, ರಿಲಿಫ್ ಕಾಮಗಾರಿಯನ್ನು ಕೈಗೊಲ್ಳುವಾಗ ಶಾಶ್ವತವಾದ ಪರಿಹಾರ ಕಾಮಗಾರಿಗಳನ್ನು ಮಾಡಬೇಕು. ಹಣವನ್ನು ಹಾಳು ಮಾಡಬರದು; ನಾನು ನೋಡಿದ್ದೇನೆ: ಫ್ಯಾಮಿನ್ ರಿಲೀಫ ಎಂದರೆ ಕೆಲವು ಆಫೀಸರು ಯಾರದೋ ಹೆಬ್ಬೆಟ್ಟು ಒತ್ತಿಸಿಕೊಂಡು ಹಣ ಖರ್ಚು ಹಾಕಿ ಕೆಲಸ ಮಾಡದೇ ಇರುವಂಥಾದ್ದು ಉಪಯೋಗವಿಲ್ಲ. ರಿಲೀಪ್ ಕಾಮಗಾರಿಗಳನ್ನು ಮಾಡುವಾಗ ಶಾಶ್ವತವಾದ ಮತ್ತು ಜನಗಳಿಗೆ ಉಪಯೋಗವಾಗುವಂತಹ ಕೆಲಸಕಾರ್ಯಗಳನ್ನು ಮಾಡಬೇಲು. ಬಾವಿಯಲ್ಲಿ ನೀರಿಲ್ಲ, ಕಟ್ಟಿರುವ ಕೆರೆಯಲ್ಲಿ ನೀರಿಲ್ಲ. ಹೊಸ ಹೊಸದಾಗಿ ಮಾಡಿರತಕ್ಕ ರಸ್ತೆಗಳಿಗೆ ಸ್ವಲ್ಪ ಮಣ್ಣು ಎರಚಿ ರಸ್ತೆಗಳನ್ನು ಮಾಡಿಸಿದ್ದೇವೆ ಎಂದು ಬಿಲ್ ಮಾಡಿ ಹಣವನ್ನು ತೆಗೆದುಕೊಳ್ಳುತ್ತಾರೆ. ಬಿದಿರಕ್ಕಿ ಹಾಕತಕ್ಕದ್ದು ಲಾಭದಾಯಕ ಎಂದು ಕೆಲವರು ಹೇಳುತ್ತಾರೆ. ಮಾತನ್ನು ಹೇಳತಕ್ಕವರಿಗೆ ಗಲ್ಲು ವಿಧಿಸಬೇಕು. ಬಡತನವನ್ನು ಮೂದಲಿಸುವುದಕ್ಕೆ ರಾಜ್ಯಾಂಗದಲ್ಲಿ ಅಧಿಕರ ಕೊಟ್ಟಿಲ್ಲ. ಆದ್ದರಿಂದ ಬಡತನವನ್ನು ಮೂದಲಿಸುವುದಕ್ಕೆ ಸಾಧ್ಯವಿಲ್ಲ. ಫ್ಯಾಮಿನ್ ರಿಲೀಫ್ ವರ್ಕೀನಲ್ಲಿ ಹತೋಟಿ ಇಟ್ಟು ಕೊಂಡು ಹಣ ಖರ್ಚು ಮಾಡಬೇಕು. ಗಲಾಟೆ ಮಾಡತಕ್ಕವರಿಗೆ ಕ್ಷಾಮವಿಲ್ಲದಿದ್ದರೂ ಆ ಪ್ರದೇಶದಲ್ಲಿ ಕೆಲಸಕಾರ್ಯಗಳನ್ನು ತೆಗೆದು ಕೊಳ್ಳುವುದಿಲ್ಲ. ಈ ಕೆಲಸ ಮಾಡುವುದರಲ್ಲಿ ಸ್ವಲ್ಪ ತಿದ್ದಿಕೊಳ್ಳಬೇಕು. ಭೂಮಾಲೀಕ ಸರ್ಕಾರದ ಹತ್ತಿರ ಸಂಪರ್ಕವನ್ನು ಇಟ್ಟುಕೊಂಡಿದ್ದಾನೆ. ಗೇಣಿದಾರ ಸರ್ಕಾರದ  ಹತ್ತಿರ ಸಂಪರ್ಕವನ್ನು ಇಟ್ಟುಕೊಂಡಿರುವುದಿಲ್ಲ. ಭೂ ಮಾಲೀಕ ಭೂ ಸೈನ್ಯವನ್ನು ಕಟ್ಟುವುದಾದರೆ ಅವನ ಸವಾಲನ್ನು ಅಂಗೀಕಾರ ಮಾಡುವುದಕ್ಕೆ ಭೂಮಾಲೀಕನೂ ಗೇಣಿದಾರನಿಗೂ ಒಂದು ದೊಡ್ಡ ಸಂಘರ್ಷಣೆ ನಡೆಯುತ್ತದೆ. ಗೇಣಿದಾರನೂ ಸೈನ್ಯ ಕಟ್ಟುತ್ತಾನೆ. ಆಗ ಮುಂದಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಕೊಡುವುದಿಲ್ಲ. ನಾನು ಸೂಚಿಸುವುದಕ್ಕೆ ಇಷ್ಟಪಡುವುದಿಲ್ಲ. ೧೯೭೦ನೇ ಇಸವಿಯಿಂದ ಯಾರಿಗೂ ರಾಜ್ಯದಲ್ಲಿ ಗೇಣೆಯನ್ನು ಕೊಡುವುದಿಲ್ಲ. ಬೇಕಾದರೆ ಭೂಮಾಲೀಕನು ಸರ್ಕಾರದಿಂದ ಅದನ್ನು ವಸೂಲಿ ಮಾಡಿಕೊಳ್ಳಲಿ. ವಿಧವೆಯರಿಗೆ ಅಪ್ರಾಪ್ತವಯಸ್ಕರಾದವರಿಗೆ, ಬುದ್ಧಿ ವಿಕಲರಾದವರಿಗೆ ಪರಿಹಾರವನ್ನು ತಕ್ಷಣ ಕೊಡಬೇಕು, ಭೂಮಾಲೀಕರ ಪರಿಹಾರವನ್ನು ಏಕ ಗಂಟಿನಲ್ಲಿ ನಗದು ಹಣವನ್ನು ಕೊಡಬೇಕು ಪ್ಲಾನ್ಟೇಷನ್ ಇವುಗಳೆನ್ನೆಲ್ಲಾ ನ್ಯಾಷನಲೈಜ್ ಮಾಡಬೇಕು. ಕೃಷಿ ಉತ್ಪನ್ನದ ಮೇಲೆ ಆದಾಯ ತೆರಿಗೆಯನ್ನು ಹಾಕಬೇಕು. ಕೃಷಿ ಉತ್ಪನ್ನ ತೆರಿಗೆಯಲ್ಲಿ ಕನಿಷ್ಠ ೧೦ ಕೋಟಿ ರೂಪಾಯಿಗಳು ಬರುತ್ತವೆ. ಇದನ್ನು ಇವರು ಲೆಕ್ಕ ಮಾಡುವುದಕ್ಕೆ ಹೋಗುತ್ತಿಲ್ಲ. ಇದರಲ್ಲಿ ಇವರಿಗೆ ಹತ್ತಿರದ ನೆಂಟರು, ಬೇಕಾದವರು ಇದ್ದಾರೆ. ಈ ರೀತಿ ಏನೇನೋ ವಿಚಾರಗಳು ಇವೆ. ಇವುಗಳೆಲ್ಲಾ ಸರ್ಕಾರದಲ್ಲಿ ನಡೆಯುತ್ತವೆ. ಬಡವರು ಪಾಪಿಗಳು. ಇವರಿಂದ ಏನೂ ಆಗುವುದಿಲ್ಲ. ಇವರಿಂದ ಸುಲಭವಾಗಿ ಓಟು ಹಾಕಿಸಿಕೊಂಡು ಇವರನ್ನು ಅನುಮಾನಕ್ಕೆ ಈಡು ಮಾಡಿದ್ದಾರೆ. ಎಲ್ಲಾ ರೈತರಿಗೂ ಪಟ್ಟಾಗಳನ್ನು ಕೊಡುವುದು, ಭೂಮಿಯನ್ನು ಪುನರ್ ಹಂಚಿಕೆ ಮಾಡುವುದು ಇವುಗಳನ್ನೆಲ್ಲಾ ಯಾವಾಗ ಮಾಡುತ್ತಾರೆಯೋ ಗೊತ್ತಿಲ್ಲ. ಗೇಣಿಯ ನಿಕಾಲೆ ಮಡುತ್ತಾರೆ ಎಂದು ಹೇಳಿದ್ದಾರೆ; ಅವರು ಏನು ನಿಖಾಲೆ ಮಾಡುತ್ತಾರೆಯೋ ಗೊತ್ತಿಲ್ಲ. ಇವರ ನೀತಿ ಬಸವ ಹುಳುವಿನ ವೇಗದಲ್ಲಿ ಹೋಗುತ್ತಿದೆ. ಇದು ಒಂದು ದೊಡ್ಡ ಸಮಸ್ಯೆ. ಎಲ್ಲಾ ಮನೆಗಳೂ ಹಾಳಾಗಿವೆ. ಇವರು ರಿತಿ ಮಾಡುತ್ತಾ ಹೋದರೆ ಹುಣ್ಣಿನ ಮೇಲೆ ಎಣ್ಣೆ ಸವರಿದ ಹಾಗೆ ಆಗಿ, ಇದು ಆಸ್ಪೋಟವಾಗುತ್ತದೆ.

ಇದರಿಂದ ಸರ್ಕಾರವು ಕುಸಿದು ಬೀಳುತ್ತದೆ ಮತ್ತು ರಾಜ್ಯದಲ್ಲಿ ಅರಾಜಕತೆ ಮತ್ತುಷ್ಟು ಹೆಚ್ಚಾಗುತ್ತದೆ. ಅದಕ್ಕಾಗಿ ನಾನು ಮಂತ್ರಿಯವರಲ್ಲಿ ಕೇಳುವುದು ಇಷ್ಟೆ; ಬಹಳ ನಿದಿಷ್ಟವಾಗಿ ಕಾನೂನನ್ನು ತಿದ್ದುಪಡಿಮಾಡಿ, ಆದಷ್ಟು ಜಾಗ್ರತೆಯಾಗಿ ಜಾರಿಗೆ ಕೊಡುವುದಕ್ಕೆ ತಾವು ಪ್ರಯತ್ನ ಮಾಡಬೇಕು ಮತ್ತು ಭೂಮಾಲೀಕರು ಭೂಸೈನ್ಯ ಕಟ್ಟುವುದನ್ನು ತಡೆಗಟ್ಟಬೇಕು. ಭೂ ಮಾಲಿಕರಿಗೆ ಪರಿಹಾರ ಕೊಟ್ಟು ಅವರನ್ನು ಭೂಮಿಗೂ, ಉಳುಮೆ ಮಾಡುವವರಿಗೂ ಮಧ್ಯಸ್ಥಗರಾರನ್ನಾಗಿ ಮಾಡಬಾರದು. ಉಳುವವನೇ ಭೂಮಿಯ ಒಡೆಯನಾಗಬೇಕೆಂದು, ಕಾಗೋಡಿನಲ್ಲಿ ನಡೆದ ಸಭೆಯಲ್ಲಿ ಏನು ಒಂದು ಬೇಡಿಕೆಯನ್ನು ನಾವು ಇಟ್ಟಿದ್ದೇವೆ, ಅದನ್ನು ಸರ್ಕಾರದವರು ಕಾರ್ಯಗತಮಾಡಬೆಕಾಗಿತ್ತು. ನೀವು ಮೊದಲೇ ಟಿಲ್ಲರ್ ಆಫ್ ದಿ ಲ್ಯಾಂಡ್ ಶುಡ್ ಬೀ ದಿ ಓನರ್ಎಂದು ಹೇಳಿದ್ದೀರಿ. ಅದನ್ನು ಇನ್ನೂ ಮಾಡಿಲ್ಲ. ಅದು ಎಲ್ಲಾ ರಾಜ್ಯಗಳಲ್ಲಿ ಸರಿಯಾಗಿ ಕಾರ್ಯಗತ ಇನ್ನೂ ಆಗಿಲ್ಲ. ಅದನ್ನು ನೀವು ಇನ್ನೂ ವಿಳಂಬ ಮಾಡುವುದು ನಿಲ್ಲಿಸಲಾಗುವುದಿಲ್ಲ. ಅಷ್ಟೊಂದು ತೀವ್ರಗತಿಯಿಂದ ಭೂಸುಧಾರಣೆಯನ್ನು ಜಾರಿಗ ಎತಂದು ಮಾಲಿಕರ ಮತ್ತು ಗೇಣೆದಾರರ ಸಂಬಂಧವನ್ನು ತೊಡೆದು ಹಾಕಬೆಕಾಗಿದೆ. ನೀವು ಅನಾರ್ಥಿಕ ಹಿಡುವಳಿಯ ಮೇಲೆ ಭೂಕಂದಾಯ ರದ್ದು ಮಾಡುವುದು ಹಾಗೂ ಕೃಷಿ ಉತ್ಪನ್ನದ ಮೇಲೆ ಕಂದಾಯ ಹಾಕುವುದು, ಇಷ್ಟು ಕೆಲಸಗಳನ್ನು ನೀವು ಮಾಡಬೇಕು ಮತ್ತು ನಿಮ್ಮ ಮತ್ತು ಉಳಿಸಬೇಕು. ಈ ಎಲ್ಲಾ ಕೆಲಸಗಳನ್ನು ಮಾಡದೆ ಅನಾವಶ್ಯಕವಾಗಿ ಕಾಲಹರಣ ಮಾಡುವುದರಿಂದ ಸುಮ್ಮನೆ ಕಾಗದ ಪತ್ರಗಳನ್ನು ಬೆಳೆಸುವುದರಿಂದ ಏನೂ ಪ್ರಯೋಜನವಿಲ್ಲ.