ಅಣ್ಣಯ್ಯ ಮತ್ತು ನಮ್ಮ ಪಕ್ಷ
– ಜೆ. ಹೆಚ್. ಪಟೇಲ್

ಮತ್ತೊಮ್ಮೆ ಸಂದಿಸಲಾಗದಂತೆ ನಿರಂತರ ಅಗಲಿಸುವುದೇ ಸಾವಿನ ಕ್ರೂರ ಗುಣ. ಅಣ್ಣಯ್ಯನನ್ನು ಮತ್ತೆ ನಾನು ಕಾಣಲಾರೆನೆಂಬ ಯೋಚನೆಯೇ ವಿಚಿತ್ರ. ಗುಲ್ಬರ್ಗಾ ಜೈಲಿನಲ್ಲಿ, ಸ್ಥಾನಬದ್ಧರ ಮತ್ತು ಸತ್ಯಾಗ್ರಹಿಗಳ ಮಾಮುಲಿನ ಸಭೆ ನಡೆಯುತ್ತಿತ್ತು. ಆಗಾಗ್ಗೆ ಸಭೆ ಸೇರಿ ದೇಶದ ಹೊರಗಣ ಸ್ಥಿತಿಯನ್ನು ಒಳಗಿನಿಂದ ಅಳೆದು ನೋಡುವ ಪ್ರಯತ್ನದಲ್ಲಿದ್ದೆವು. ಆಗ ವೈ. ಆರ್. ಪರಮೇಶ್ವರಪ್ಪ ಅಂದರೆ ಅಣ್ಣಯ್ಯನ ಮರಣವಾರ್ತೆ ಬಂತು. ನನಗೆ ತಕ್ಷಣ ಏನು ಮಾಡಲೂ ತೋಚದೆ, ಸಭೆಯನ್ನು ಮುಂದಕ್ಕೆ ಹಾಕಿ, ಜೈಲಿನ ಆದಿಕಾರಿಗಳನ್ನು ಕಂಡು, ಬಂದ ವಾರ್ತೆ ಖಚಿತವೆಂದು ತಿಳಿದುಕೊಂಡೆ. ಸ್ನೇಹಿತರೆಲ್ಲ ಸಂತಾಪ, ಸಹಾನುಭೂತಿ ತೋರಿಸಿದರು. ನನಗೆ ಒಂದು ರೀತಿಯ ವಿಚಿತ್ರ ಸಂಕಟವಾಯಿತು: ನಿರಾಕಾರ ನೋವು. ಮನಸ್ಸು ಆಳುತ್ತಿದ್ದರೂ ದುಃಖ ಹೊರಹೊಮ್ಮಲಿಲ್ಲ. ಹಳೆಯ ಎಷ್ಟೋ ನೆನಪುಗಳು, ಜೊತೆಯಲ್ಲಿ ಕಳೆದ ಸುಮಾರು ೨೫ ವರ್ಷಗಳ ಸ್ನೇಹ. ಒಡನಡಿ ಕಳೆದಿದ್ದ ಹಲವಾರು ರಸ ಹಾಗೂ ವಿರಸ ನಿಮಿಷಗಳ ಚಿತ್ರ ಹಾದು ಹೋಯಿತು. ಶಿವಮೊಗ್ಗಕ್ಕೆ ಹೋದಾಗ ಅಣ್ಣಯ್ಯನಿಲ್ಲದ ಸ್ಥಿತಿಯೇ ದಿಗ್ಭ್ರಮೆಗೊಳಿಸುವಂಥದ್ದು.

ಇನ್ನೂ ಜೈಲಿನಲ್ಲಿಯೇ ಇರುವ ನನಗೆ ನಂಬಲು ಅಸಾಧ್ಯವಾಗುತ್ತಿದೆ ಅಣ್ಣಯ್ಯ ಸತ್ತಿದ್ದಾನೆ ಎಂದು ಯೋಚಿಸಲು. ಅವನನ್ನು ಕಡೆಯ ಬಾರಿ ನೋಡಿದ್ದು ಕಳೆದ ವರ್ಷ: ಅಂದರೆ, ೩೫ರ ನವೆಂಬರಿನಲ್ಲಿ. ಇತ್ತೀಚೆಗೆ ಪಕ್ಷದ ಚಟುವಟಿಗಳಲ್ಲಿ ಸಕ್ರಿಯಪಾತ್ರ ವಹಿಸದಂತೆ ಅವನ ಸುತ್ತ ಒಂದು ಕೌಟುಂಬಿಕ ಹಾಗೂ ವೈಯಕ್ತಿಕ ಕೊರತೆ, ಕೊರಗುಗಳ ಬಲೆಯೇ ಹಬ್ಬಿಕೊಂಡಿತ್ತು. ಒಮ್ಮೊಮ್ಮೆ ಅವನ ಅಸಹಾಯಕ ಸ್ಥಿತಿಗೆ ಬಾಯ ಕಾರಣಗಳಷ್ಟೇ ಅವನು ಜವಾಬ್ದಾರನೆಂದು ಅವನೆದುರಿಗೆ ಹೇಳಿ ಜಗಳವಾಡಿದ್ದೂ ಉಂಟು. ಅವನೊಡನೆ ಕೊನೆಯ ಮಾತು ಆಡಿ ಬಂದದ್ದು ಇಂಥದೇ ಒಂದು ಸಣ್ಣ ವಿರಸದ ಘಳಿಗೆ. ನಿಷ್ಕ್ರಿಯೆಯಿಂದ ಅನಾರೋಗ್ಯವೂ, ಅನಾರೋಗ್ಯದಿಂದ ನಿಷ್ಕ್ರಿಯೆಯೂ ಪರಸ್ಪರ ಪೂರಕಶಕ್ತಿಗಳಾಗಿ ವ್ಯಕ್ತಿಯನ್ನೂ, ವ್ಯಕ್ತಿತ್ವನ್ನೂ ಕ್ರಮೇಣ ಕೊನೆಗಾಣಿಸುತ್ತವೆ ಎಂದು ಹೇಳಿದರೆ ಅವನದೇ ಆದ ರೀತಿಯಲ್ಲಿ ಹುಸಿನಗೆ ನಕ್ಕು ತೇಲಿಸುವ ಪ್ರವೃತ್ತಿ ಅವನದು. ದೇಶದಲ್ಲಿ ಆದ ಇತ್ತೀಚಿನ ಘಟನೆಗಳಿಂದ ಬಹಳ ಉದ್ವಿಗ್ನನಾಗಿದ್ದ. ಬೇರೆಯವರಂತೆ ಬೇಗ ಅವನ ಅಂತರಾಳವನ್ನು ಹೊರಹೊಮ್ಮಿಸುವ ಪ್ರವೃತ್ತಿ ಅವನದಲ್ಲ. ಒಮ್ಮೊಮ್ಮೆ ಅವನನ್ನು ನಾನು ಶಿವಶರಣರುಗಳಲ್ಲೊಬ್ಬನಾದ ಒಡ್ಡರ ಸಿದ್ಧರಾಮನಿಗೆ ಹೋಲಿಸುತ್ತಿದ್ದೆ. ಭಾವಜೀವಿ, ಅನುಭವ ತುಂಬಿದ ವ್ಯಕ್ತಿತ್ವ, ಮಿತಭಾಷಿ, ಕರ್ಮಯೋಗಿ.

೧೯೪೭ರ ಸ್ವಾತಂತ್ರ್ಯ ಹೋರಾಟದಲ್ಲಿ ಸಾಗರ ಜೈಲಿನಲ್ಲಿದ್ದಾಗಲೇ ಅಣ್ಣಯ್ಯನ ಹೆಸರು ಕೇಳಿದ್ದೆ. ನಂತರ ಅವನನ್ನು ಮೊದಲು ನೋಡಿದ್ದು ೧೯೪೮ರಲ್ಲಿ. ಆಗ ನನಗೂ ಶಿವಮೊಗ್ಗದ ಸಮಾಜವಾದಿ ಗೆಳೆಯರಿಗೂ ಅಷ್ಟೊಂದು ಸಂಪರ್ಕವಿರಲಿಲ್ಲ. ನಾನು ದಾವಣಗೆರೆ ಕಾಲೇಜಿನಲ್ಲಿ ಓದುತ್ತಿದ್ದೆ. ಒಮ್ಮೆ ಶಿವಮೊಗ್ಗಕ್ಕೆ ಬಂದಾಗ ಆಗಲೇ ಪ್ರಸಿದ್ಧರಾಗಿದ್ದ ಅಣ್ಣಯ್ಯ ಮತ್ತು ಗೋಪಾಲಗೌಡರನ್ನು ನೋಡುವ ಹಂಬಲವಿತ್ತು. ಅನಂತರ ಕಾಗೋಡು ಹೋರಾಟದ ಸಮಯ, ನಾನು ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸದಿದ್ದರೂ, ಅಣ್ಣಯ್ಯನ ಪ್ರತಿಭೆಯ ಪರಿಚಯವಾದದ್ದು ಆಗ. ಅವನಿದ್ದಲ್ಲಿ ಕ್ರಾಂತಿಕಾರಿಗಳ ಗುಂಪು. ಅವನು ಕೇಳಿದಲ್ಲಿ ಹಣ ಹುಟ್ಟುತ್ತಿತ್ತು. ಕಾಗೋಡು ಹೋರಾಟದ ಬೆನ್ನೆಲುಬು ಅಣ್ಣಯ್ಯ. ಹೇಳಿಕೊಳ್ಳುವಂಥ ವಾಚಾಳಿಯಲ್ಲದಿದ್ದರೂ ಜೊತೆಗಿದ್ದವರ ಮೇಲೆ ಅಚ್ಚಳಿಯದ ಪರಿಣಾಮ ಬೀರುವ ಮೌನ ಪ್ರಭಾವ. ನಂತರ ಮಹಾರಾಜ ಕಾಲೇಜಿನಲ್ಲಿ ಜೊತೆ. ಅತಿ ಚಿಕ್ಕವಯಸ್ಸಿನಲ್ಲಿ ರಾಜಕಾರಣದಲ್ಲಿಳಿದ ಪ್ರಯುಕ್ತ ಅವನ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತ್ತು.

ಮೊದಲ ಸಾರ್ವತ್ರಿಕ ಚುನಾವಣೇಯಲ್ಲಿ ಗೆಳೆಯ ಗೋಪಾಲಗೌಡರು ಸಾಗರ ಕ್ಷೇತ್ರದಿಂದ ಆರಿಸಿ ವಿಧಾನಸಭೆಗೆ ಬಂದರು. ನಮ್ಮ ಪಕ್ಷದ ಉಳಿ ಅಭ್ಯರ್ಥಿಗಳು ವಿಶೇಷತಃ ಸದಾಶಿವರಾವ್, ಅಣ್ಣಯ್ಯ ಇವರುಗಳು ನಮ್ಮ ಜಿಲ್ಲೆಯ ಕ್ಷೇತ್ರಗಳಲ್ಲಿ ಪರಾಭವಗೊಂಡು, ರಾಜಕೀಯ ಪ್ರಭೆ ಶ್ರೀಗೌಡರ ವ್ಯಕ್ತಿಯತ್ವದ ಮೇಲೆಯೇ ಬೆಳೆದುಕೊಂಡು ಬಂದಿತು. ೧೯೫೭ರ ಚುನಾವಣೆಯ ಹೊತ್ತಿಗೆ ಭಾರತದಲ್ಲಿ ಸೋಷಲಿಸ್ಟ್ ಪಾರ್ಟಿ ಹಲವಾರು ರೂಪಾಂತರಗೊಂಡು. ಅಂದರೆ ಸೋಷಲಿಸ್ಟ್ ಪಾರ್ಟಿಯನ್ನು ಸ್ಥಾಪಿಸಿಕೊಂಡು. ಆ ವೇಳೆಗೆ ನಮ್ಮ ರಾಜ್ಯದಲ್ಲಿ ಗೋಪಾಲಗೌಡರ ಪ್ರಭಾವ ವಿಶಿಷ್ಟವಾಗಿತ್ತು. ಗೌಡರ ನಾಯಕತ್ವದಲ್ಲಿ ನಾವೆಲ್ಲ ಲೋಹಿಯಾವಾದ ಸೋಷಲಿಸ್ಟ್ ಪಾರ್ಟಿಯಲ್ಲಿ ತೊಡಗಿದೆವು. ಈ ಸಮಯದಿಂದ ರಾಜ್ಯದ ಹಾಗೂ ಜಿಲ್ಲೆಯ ಪಕ್ಷದ ಏರುಪೇರುಗಳು ನನ್ನನ್ನು ಅಣ್ಣಯ್ಯ, ಗೌಡರು ಮತ್ತಿತರ ಮುಖಂಡರ ಸಮೀಪಕ್ಕೆ ತಂದವು; ಒಟ್ಟಿಗೇ ಬದುಕಿದೆವು. ಇವರುಗಳ ಜೀವನ, ಪಕ್ಷದ ಜೀವಾಳವಾಯಿತು. ಪಕ್ಷದ ಜೀವವೇ ನನ್ನ ಜೀವಾಳವಾಯಿತು. ಅಲ್ಲಿಂದ ಜೊತೆಯಲ್ಲಿ ಬಾಳಿದ ನಮ್ಮ ಬದುಕೇ ಪಕ್ಷದ ಇತಿಹಾಸವಾಯಿತು. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಡಾ. ಲೋಹಿಯಾವರವರ ವಿಚಾರಕ್ಕೆ ತಲೆಬಾಗಿದ ನಾವು ಅವರ ಕುಟುಂಬದ ಅವಿಭ್ಯಾಜ್ಯ ಅಂಗವಾದೆವು.

ಇಲ್ಲಿ ಕೇವಲ ಅಣ್ಣಯ್ಯನನ್ನು ಸ್ಮರಿಸಿಕೊಳ್ಳುತ್ತಿರುವುದರಿಂದ, ಗುರುಗಳಾದ ಲೋಹಿಯಾರ ಬಗ್ಗೆ ಯಾಗಲಿ, ನಮ್ಮ ನಾಯಕರಾಗಿದ್ದ ಗೋಪಾಲಗೌಡರ ಬಗ್ಗೆಯಾಗಲಿ ಹೆಚ್ಚು ಬರೆಯಲಾರೆ.

೧೯೫೭ರ ಚುನವಣೆಯಲ್ಲಿ  ಮತ್ತೆ ಎಲ್ಲರೂ ಸೋತರು. ಈ ಕಾಲದಲ್ಲಿ ಪಾರ್ಟಿಯ ಚುಟುವಟಿಕೆಗಳು ಬಹಳ ಸೀಮಿತಗೊಂಡವು. ಬಹುಜನ ಹಿರಿಯ ಸಮಾಜವಾದಿಗಳು ಬೇರೆ ಬೇರೆ ಜೀವನಮಾರ್ಗಗಳನ್ನನುಸರಿಸಿದರು. ಶ್ರಿಗಳಾದ ಸಿ.ಜಿ.ಕೆ. ರೆಡ್ಡಿ, ಖಾದ್ರಿ ಶಾಮಣ್ಣ ಮುಂತಾದವರು ಸಕ್ರಿಯ ಪಾತ್ರವಹಿಸದಂತಾಯಿತು. ಶ್ರೀ ಮುಲ್ಕಾ ಮತ್ತು ಶಿವಪ್ಪ ಇವರುಗಳು ಪಿ.ಎಸ್.ಪಿ ಜೊತೆ ಹೊಂದಿಕೊಂಡರು. ನಮ್ಮ ಏಕೈಕ ಮಹಿಳಾ ಕಾರ್ಯಕರ್ತೆಯಾದ ಪೊನ್ನಮ್ಮಾಳ್ ನಮ್ಮಲ್ಲುಳಿದರು. ರಾಜ್ಯ ಕಛೇರಿಯಲ್ಲಿ ಗೌಡರು, ಬಾ.ಸು. ಕೃಷ್ಣ ಮೂರ್ತಿ, ವೆಂಕಟರಾಂ ಮಹೇಶ್ವರಪ್ಪ, ಇವರೊಡನೆ ಕಾಲಕಳೆಯಬೇಕಾಯಿತು. ಅವು ಎಷ್ಟು ಬೇಜಾರು ದಿನಗಳೋ ಅಷ್ಟೇ ಸ್ಮರಣೀಯವೂ ಹೌದು. ನಾವು ಬದುಕಿದ್ದು ಕೇವಲ ಲೋಹಿಯಾದ ವಿಚಾರ ಬಂಧನದಿಂದ. ಪ್ರಜಾ ಸೋಷಲಿಸ್ಟ್ ಪಾರ್ಟಿ ರಾಜ್ಯದ ಪ್ರಮುಖ ವಿರೋಧ ಪಕ್ಷವಾಯಿತು. ನಮ್ಮ ಪಕ್ಷ ಒಂದು ಸಣ್ಣ ಗುಂಪಾಯಿತು. ಎಷ್ಟೋ ಬಾರಿ ನನ್ನ ಹಿತೈಷಿಗಳು, ಲೋಹಿಯಾ ಒಬ್ಬ ಹುಚ್ಚು; ನಿಮ್ಮ ಗೋಪಾಲಗೌಡ ಇನ್ನೊಬ್ಬ ಹುಚ್ಚ. ಇವರೊಡನೆ ಏಕೆ ನಿನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿ? ಎಂದು ಉಪದೇಶ ಮಾಡಿದ್ದು ಉಂಟು. ಎಂದೆಂದೂ ಅಧಿಕಾರಕ್ಕೆ ಬಾರದ ನಿಷ್ಟ್ರಯೋಜಕರ ತಂಡವಾಯಿತು ನಮ್ಮದು. ಆದರೆ ಹೋರಾಟಗಳ ಕಾರಣ, ೧೯೫೮ರಲ್ಲಿ ನಮ್ಮ ಜಿಲ್ಲೆಯಲ್ಲೇ ೪೦೦ ಜನ ಸತ್ಯಾಗ್ರಹ ಮಾಡಿ ನಾವೆಲ್ಲಾ, ಮುರು ತಿಂಗಲ ಜೈಲು ಅನುಭವಿಸಿದೆವು ಬಳ್ಳಾರಿಯಲ್ಲಿ, ಆಗಾಗ್ಯೆ ಪ್ರತಿಭಟನೆ, ಚಳುವಳಿ, ಜೈಲು ಇವು ನಮ್ಮ ನಿತ್ಯಕರ್ಮಗಳಾದುವು. ಜಂಬೂಸವಾರಿಯನ್ನು ವಿರೋಧಿಸಿದಾಗ ಜನರ ಕೈಯಿಂದ ತಪ್ಪಿಸಿಕೊಂಡದ್ದೇ ಪೋಲೀಸರ ಸಹಾಯದಿಂದ, ಇರಲಿ.

ಈ ಕಾಲದಲ್ಲಿ ಅಣ್ಣಯ್ಯ ಸ್ವಲ್ಪ ದೂರವಿದ್ದ. ವಿಚಾರದಿಂದ ನಮ್ಮೊಡನೇ ಇದ್ದರೂ, ಸ್ವತಃ ಸಮಸ್ಯೆಗಳ ಕಾರಣ ವಕೀಲಿ, ಮನೆ ಕೋರ್ಟು ಆಗಾಗ್ಗೆ ನಮ್ಮೊಡನೆ ಗೋಷ್ಠಿ; ಇಷ್ಟರಲ್ಲೇ ಇದ್ದ. ೧೯೬೨ರಲ್ಲಿ ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಾಗ, ಅವನೂ ಅಷ್ಟೊತ್ತಿಗೆ ಮೂರನೇಬಾರಿ ಸೋತಿದ್ದ. ಪಕ್ಷದಲ್ಲಿ ಮೊದಲಿನಷ್ಟು ಸಕ್ರಿಯತೆ ಇಲ್ಲದಿದ್ದರೂ, ಆಸಕ್ತಿ ಎಂದೂ ಕಡಿಮೆಯಾಗಲಿಲ್ಲ. ಆಗಾಗ ಯಜಮಾನನಂತೆ ಒಂದೆರಡು ಮಾರ್ಗದರ್ಶನದ ಕೆಲಸ ಮಾಡುತ್ತಿದ್ದ. ೧೯೬೪ರಲ್ಲಿ ನಾನು ವಿಧಾನಪರಿಷತ್ತಿಗೆ, ಸ್ಥಳಿಯ ಸಂಸ್ಥೆಗಳ ಪರವಾಗಿ ಸ್ಪರ್ಧಿಸಿದಾಗ, ಅಣ್ಣಯ್ಯ ಮತ್ತೊಮ್ಮೆ ಸಕ್ರಿಯ ಪಾತ್ರ ವಹಿಸಿದ. ನಾನು ಸೋತರೂ ಚಿಂತೆ ಇಲ್ಲ, ಅಣ್ಣಯ್ಯ ಮತ್ತೆ ಜೀವಂತ ರಾಜಕಾರಣಕ್ಕೆ ಮುಖವಿಟ್ಟ. ಅನಂತರ ಶಿವಮೊಗ್ಗೆಯ ನಗರಸಭೆಯಲ್ಲಿ, ಅವನ ನಿರ್ದೇಶನದಲ್ಲಿ ಗೆಳೆಯ ಭರ್ಮಪ್ಪನ ಕಾರ್ಯ ವಿಚಕ್ಷಣತೆಯಲ್ಲಿ ನಮ್ಮ ಪಕ್ಷ ಪ್ರಾಮುಖ್ಯ ಪಡೆಯಿತು; ಪುರಸಭಾಧ್ಯಕ್ಷನಾಗಿ ಶುದ್ಧ ಹಸ್ತನಾಗಿ ಹೆಸರು ಪಡೆದ. ಸ್ವಲ್ಪದಿನ ಕತ್ತಲಿನಲ್ಲಿದ್ದ ಅವನ ಪ್ರತಿಭೆ ಮತ್ತೆ ಬೆಳಕಿಗೆ ಬಂತು. ನಗರದ ಹಾಗೂ ಜಿಲ್ಲೆಯ ರಾಜಕೀಯ ಚುಟುವಟಿಕೆಗೆ ಮತ್ತೆ ಕೇಂದ್ರಬಿಂದುವಾದ. ಯಥಾಪ್ರಕಾರ ಅಣ್ಣಯ್ಯನ ಗೋಷ್ಠಿಗಳಲ್ಲಿ ಶಂಕರ, ರಾಮಕೃಷ್ಣ, ಶ್ರೀನಿವಾಸ, ಭರ್ಮಪ್ಪ ಅನಿವಾರ್ಯ ಸದಸ್ಯರಾದರು.

೧೯೬೭ರ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ ಹೇಳಿಕೊಳ್ಳುವಂಥ ಸಾಧನೆ ಮಾಡದಿದ್ದರೂ, ಜಿಲ್ಲೆಯಲ್ಲಿ ನಾವು ಗಣನೀಯ ಶಕ್ತಿಯಾಗಿ ಹೊರಬಂದೆವು. ಜಿಲ್ಲೆಯ ಸಂಸತ್ಸದಸ್ಯನಾಗಿ ನಾನೋ, ವಿಧಾನಸಭಾ ಸದಸ್ಯರಾಗಿ ಶ್ರೀ ಗೋಪಾಲಗೌಡರು, ಇವರ ಜೊತೆಯಲ್ಲಿ ಶ್ರೀಗಳಾದ ಬಂಗಾರಪ್ಪ ಬಸವಣ್ಣಪ್ಪ, ಎ. ಜಿ. ಹಾಲಪ್ಪ ಇವರುಗಳೂ ಗೆದ್ದದ್ದು ಮಾತ್ರವಲ್ಲ, ಸಾಗರದಲ್ಲಿ ಕಾಗೋಡು ತಿಮ್ಮಪ್ಪ, ಹೊಸನಗರದಲ್ಲಿ ಸ್ವಾಮಿರಾವ, ಶಿವಮೊಗ್ಗ ಕ್ಷೇತ್ರದಿಂದ ಅಣ್ಣಯ್ಯ ಇವರು ಕಡಿಮೆ ಮತಗಳಿಮದ ಸೋತದ್ದು ಪಕ್ಷದ ವಿಕ್ರಮ ಸಾಧನೆಯಂತಾಯಿತು. ಶಿವಮೊಗ್ಗ ಜಿಲ್ಲೆ ಸೋಷಲಿಸ್ಟರ ತೌರು ಎಂಬ ಪ್ರಖ್ಯಾತಿ ಪಡೆಯಿತು. ಈ ಕಾಲದಲ್ಲಿ ಅಣ್ಣಯ್ಯ ತಾನು ಸೋತಿದ್ದರೂ, ನಮ್ಮೆಲ್ಲರ ಗೆಲುವಿನಿಂದ ಸಂತೃಪ್ತನಾಗಿದ್ದ, ಅವನ ಸಡಗರವೇ ಸಡಗರ. ಅವನ ಕಷ್ಟಕ್ಕೆ ತಕ್ಕ ಪ್ರತಿಫಲವೆಂಬಂತೆ ನಾವು ಕೇವಲ ಆರೇ ಜನ ಸದಸ್ಯರು ವಿಧಾನಸಭೆಯಲ್ಲಿದ್ದರೂ ಅಣ್ಣಯ್ಯ ವಿಧಾನ ಪರಿಷತ್ತಿಗೆ ಚುನಾಯಿತನಾದ ೧೯೬೮ರಲ್ಲಿ. ವಿಧಾನ ಪರಿಷತ್ತಿನ ಸದಸ್ಯತನದಿಂದ ನಿರ್ವಹಣೆಯ ಚಿಂತೆ ಕಡಿಮೆಯಾಯಿತು.

ಯಾವಾಗಲೂ ಕೊರತೆಯೇ ಜೀವನದ ಅನುಭವವಾಗಿದ್ದ ಅಣ್ಣಯ್ಯನಿಗೆ ಈಗ ನಾಲ್ಕಾರು ವರ್ಷ ಸಮಾಧಾನ. ಸ್ವಂತ ಆಸ್ತಿ ಇಲ್ಲದ ಅವನಿಗೆ ಆಶ್ರಯ ವೃಕ್ಷದಂತಿದ್ದ ಅವರ ಮಾವ ಶ್ರೀ ನಿಧಿಗೆ ರುದ್ರಪ್ಪನವರು ತೀರಿಕೊಂಡಾಗ ಗಾಬರಿ ಆಗಿದ್ದ. ಏಳಲಿ ಬೀಳಲಿ ಒಂದೇ ನಮೂನೆ. ದುಡ್ಡು ಇರಲಿ ಇಲ್ಲದಿರಲಿ ಒಂದೇ ವರ್ತನೆ. ತನಗಾಗಿ ತನ್ನ ಸಂಸಾರಕ್ಕಾಗಿ ಏನಾದರೂ ಮಾರ್ಗದಿಂದ ಆಸ್ತಿ ಮಾಡುವ ವಿಚಾರ ಭರಲೇ ಇಲ್ಲ. ಆಗಾಗ್ಯೆ ನಮ್ಮೊಡನೆ ಈ ಬಗ್ಗೆ  ತನ್ನ ಶಂಕೆಯನ್ನು ತೋಡಿಕೊಂಡದ್ದೂ ಉಂಟು, ಪ್ರವಾಸಪ್ರಿಯನಲ್ಲ. ಅವನೊಡನೆ ಮಾಡಿದ ಹಲವಾರು ಪ್ರವಾಸಗಳಲ್ಲಿ ಒಮ್ಮೆ ಬೆನರಸ್ ಸಮ್ಮೇಳನಕ್ಕೆ ಹೋಗಿದ್ದು, ಇನ್ನೊಮ್ಮೆ ಗೋವಾಕ್ಕೆ ಹೋಗಿ ಬಂದದ್ದು ಸ್ಮರಣೀಯ. ಸ್ವಯಂ ಓದುವ ಅಭ್ಯಾಸವಿಲ್ಲ ದವನಾದರೂ, ಸೂಕ್ಷ್ಮಭಾವನೆಗಳನ್ನು ಗುರುತಿಸುವ ಸಂವೇದನಾಶೀಲ ಮನಸ್ಸು ಅವನದು. ಸಣ್ಣದಾಗಿ ಯೋಚಿಸುವ ಮಾರ್ಗ ಅವನಿಗೆ ತಿಳಿಯದು. ಲಿಂಗಾಯಿತರಲ್ಲಿ ಸಾದರು, ಬಣಜಿಗರು ನಡೆಸುವ ರಾಜಕೀಯ ತೀಟೆ, ಕಿತ್ತಾಟಗಳನ್ನು ಕಂಡರೆ ತಿರಸ್ಕಾರ. ಅವನು ಸದಾ ಸಮಾಜವಾದಿ. ಎಲ್ಲರಿಗೂ ಅಣ್ಣಯ್ಯನೇ ಆಗಿದ್ದ; ತನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನವರ ಉಕ್ತಿಯ ಸಾಕಾರರೂಪವಾಗಿದ್ದ. ಅವನ ಒಂದು ದೊಡ್ಡ ಗುಣವೆಂದರೆ ಬೇರೆಯವರ ಖ್ಯಾತಿಯನ್ನು ಕಂಡು ಆನಂದ ಪಡುವುದು. ರಾಜಕಾರಣಿಗಳಲ್ಲಿ ಈ ಗುಣ ಅಪರೂಪ. ಏನಾದರೊಂದು ಘಟನೆಯಿಂದ ತನ್ನ ಹೆಸರು ಪತ್ರಿಕೆಗಳಲ್ಲಿ ಬರಬೇಕೆಂಬ ಹಂಬಲವಿರಲಿಲ್ಲ. ಬಂದರೆ ಹಿಗ್ಗುತ್ತಲ್ಲೂ ತನ್ನ ಹೆಸರು ಪತ್ರಿಕೆಗಳಲ್ಲಿ ಬರಬೇಕೆಂಬ ಹಂಬಲವಿರಲಿಲ್ಲ. ಬಂದರೆ ಹಿಗ್ಗುತ್ತಲ್ಲೂ ಇರಲಿಲ್ಲ; ಬರದಿದ್ದರೆ ಕುಗ್ಗುತ್ತಲೂ ಇರಲಿಲ್ಲ. ಒಟ್ಟಿನಲ್ಲಿ ಅಚ್ಚುಕಟ್ಟಾದ ಸೀಮಿತ ವ್ಯಕ್ತಿ. ತನ್ನ ಇತಿಮಿತಿಗಳ ಪ್ರಜ್ಞೆಯೂ ಇತ್ತು. ದೊಡ್ಡತನದ ಅರಿವೂ ಇತ್ತು. ಅವನೆದುರಿನಲ್ಲೇ ರಾಜಕೀಯವಾಗಿ ಹುಟ್ಟಿ ಬೆಳೆದು ಏನಕೇನ ಪ್ರಕರೇಣ ಪ್ರಸಿದ್ಧ ಪುರುಷರಾದ ಜನರ ಕಾಲ ಇದು.

ಪ್ರಲೋಭನೆಗೆ ತುತ್ತಾಗದೆ, ಸಿದ್ಧಾಂತಕ್ಕೆ ಅಂಟಿಕೊಮಾಡಿರುವ ಕೊನೆ ಉಸಿರಿರುವವರೆಗೂ ಪಥಭ್ರಷ್ಠರಾಗದ, ಸಾಚಾ ಜನ ಗೌಡರು ಮತ್ತು ಅಣ್ಣಯ್ಯ ಇವರುಗಳು ಸಮಾಜದಿಂದ ಪಡೆದುದರ ನೂರುಪಾಲು ಸಮಾಜಕ್ಕೆ ಕೊಟ್ಟವರು. ವಿಶ್ವಕ್ಕೆ ಬೆಳಕು ಚೆಲ್ಲುವ ಸೂರ್ಯಪ್ರಭೆ ಇವರಲ್ಲವಾದರೂ, ಸುತ್ತ ಮುತ್ತಲಿನ ಕತ್ತಲಿನ ಬೆಳಕು ಬೀರಿದ ಮೇಣದ ಬತ್ತಿಗಳು ತಮ್ಮನ್ನು ತಾವು ಸುಟ್ಟುಕೊಂಡು ಬೇರೆಯವರಿಗೆ ಸಹಾಯ ಮಾಡುವ ಇಂತಹ ಜೀವಿಗಳನ್ನು ಕುಬ್ಬ, ಕ್ಷುದ್ರದ ಸಮೂಹದಲ್ಲಿ ಕಾಣುವುದೆಂತ? ಗೌಡರ ಮರಣದ ನೆನಪು ಮಾಸುತ್ತಿದ್ದಂತೆಯೇ ಇವನೂ ಹೋಗಬೇಕು?

(೧೯೭೬ ಗುಲಬರ್ಗಾ ಸೆರೆಮನೆ)

* * *