ಸಂಗಾತಿಗಳ ಸ್ಮರಣೆ
.ವಿ. ಶ್ರೀನಿವಾಸ

ಭಾರತ ರಾಜಕಾರಣದಲ್ಲಿ ರಾಮಮನೋಹರ ಲೋಹಿಯಾ ಬಹು ಎತ್ತರದ ಪರ್ವತ. ಅಷ್ಟೇ ಆಳವಾದ ಗಂಗೆ ದೊರೆಯುವ ಸ್ಥಳ. ಈ ಮಹಾನ್ ವ್ಯಕ್ತಿ ಸೋಷಲಿಸ್ಟ್ ಪಾರ್ಟಿಯ ಚೇತನಶಕ್ತಿಯಾಗಿದ್ದರು ಎಂಬುದು ನೆನಪಿದೆಯೇ?

ಗಾಂಧಿ ಪಡಿನೆರಳಲ್ಲಿ, ಮಾರ್ಕ್ಸ್‌ನ ಧಗೆಯಲ್ಲಿ ತನ್ನ ಸಿದ್ಧಾಂತವನ್ನು ಸಂರಕ್ಷಿಸಿಕೊಂಡವರು. ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ ನಂತರ, ಅಮೇರಿಕೆಯಲ್ಲಿ ಅಣುಬಾಂಬು ಸೃಷ್ಟಿಕರ್ತ ಐನ್‌ಸ್ಟೀನ್‌ರ ಗಹಗಹಿಸುವ ನಗುವಲ್ಲಿರುವ ನೋವಿನ ಚೆಲುವನ್ನು ಅರ್ಥೈಸಿಕೊಂಡ, ಓರ್ವ ಕಲಾವಿದ ಸಿದ್ಧಾಂತಿ.

ರಾಮಮನೋಹರ ಲೋಹಿಯಾ ವಿಶ್ವದ ರಾಜಕೀಯವನ್ನು ಪರಿಶೋಧಿಸಿ “ಭಾರತ ಶೂದ್ರೀಕರಣವಾಗಬೇಕು” ಎಂದು ಸ್ಪಷ್ಟನುಡಿ ಆಡಿ, ಪರಂಪರೆಯೊಡನೆ ಸ್ನೇಹ ಸಂವಾದ ಮಾಡಿದರೂ ಕೂಡ, ವಸ್ತುಸ್ಥಿತಿಯೊಡನೆ ರಾಜಿ ಆಗಿದೆ ಇದ್ದ, ಮಹಾನ್ ವ್ಯಕ್ತಿ.

ಸೋಷಲಿಸ್ಟ್ ಪಾರ್ಟಿ ಸಂಗಾತಿಗಳು ಈ ಸಿದ್ಧಾಂತಿಯನ್ನು ಅರ್ಥೈಸಿಕೊಳ್ಳದೆ, ಪರಿಸರದ ವ್ಯಾಮೋಹಕ್ಕೆ ಒಳಗಾಗಿ ಈತನಿಂದ ತಪ್ಪಿಸಿಕೊಂಡು ಹೋದರೆ ದೊಡ್ಡ ಮನುಷ್ಯರಾಗಲಾರರು. ಈತನ ಸಿದ್ಧಾಂತವೇ ಸೋಷಲಿಷ್ಟರಿಗೆ ಗೀತೆ – ಕುರಾನ್, ಬೈಬಲ್. ಕರ್ನಾಟಕದ ಸೋಷಲಿಸ್ಟ್ ಪಾರ್ಟಿಗೆ ಭಾರತದ ಸೋಷಲಿಸ್ಟ್ ಪಾರ್ಟಿಯಷ್ಟೇ ಪರಂಪರೆಯಿದೆ. ಪ್ರಚಲಿತವಾಗಿ ಬಂದ “ರಾಜಕೀಯ ಮೇನಕೆ”ಯನ್ನು ತಿರಸ್ಕರಿಸಿ, “ಸೋಷಲಿಸ್ಟ್ ಸನ್ಯಾಸಿಗಳಾಗಿ” ಬದುಕಿ ಸತ್ತವರು ಕೆಲವರು; ಸಾಯದೆ ಬದುಕಿರುವವರೂ ಕೆಲವರಿದ್ದಾರೆ.

ಹುಟ್ಟಿನಲ್ಲಿ ಬ್ರಾಹ್ಮಣ ಹುಡುಗನಾಗಿ, ಪಾರ್ಟಿಯನ್ನು ಹೊಕ್ಕಳ ಬಳ್ಳಿಯಾಗಿ ಸಂಬಂಧಿಸಿಕೊಂಡು, ಬದುಕಿನ ಮೇಲೆ ಹಿಡಿತವನ್ನೇ ತಪ್ಪಿಸಿಕೊಂಡು, ಹುಚ್ಚನಾಗಿ, ದುರಂತ ಕಂಡ ಸೋಗಾಲ ನಾಗಭೂಷಣ ಯಾರಿಗಾಗಿ ಸತ್ತ? ಈಗ ಸೋಷಲಿಸ್ಟ್ ಪಾರ್ಟಿ ಸಂಸ್ಥಾಪಕ ಎಂಬುದರ ನೆನಪು ಇದೆಯೇ?

೧೯೪೨ರ ಹೋರಾಟದ ಕಾವಿನಿಂದ ಜಿಗಿದುಬಂದು ಬದುಕಿನ – ಯೌವನದ ವರುಷಳನ್ನು ಸೋಷಲಿಸ್ಟ್ ಪಾರ್ಟಿಗೆ ಬಂಡವಾಳ ರೂಪದಲ್ಲಿ ಹಾಕಿ, ಗೋಪಾಲಗೌಡರಲ್ಲಿ ಶೂದ್ರಶಕ್ತಿ ಇದೆಯೆಂದು ಅರಿತು, ಕೆ.ಜೆ. ಒಡಯರ್ ವಿರುದ್ಧ ಕಾಗೋಡು ಹೋರಾಟ ಸಂಘಟಿಸಿ ಶೂದ್ರನಿಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿಕೆ ಸಿದ್ಧ ಪಡಿಸಿದ್ದು, ಅವರ ತಪ್ಪೆ?

ಪಾರ್ಟಿಯ ಹಿರಿಯರಾಗಿ ಪಕ್ಷಾಂತರ ವಾಸನೆಯನ್ನು ಅಂಟಿಸಿಕೊಳ್ಳದೆ, ಬದುಕಿನಲ್ಲಿ ಕಷ್ಟ – ನಿಷ್ಟೊರಗಳನ್ನು ಔದಾರ್ಯದಿಂದ ಕಾಣುತ್ತಾ ಬುದುಕಿದವರು ವೈ ಆರ್. ಪರಮೇಶ್ವರಪ್ಪ.

ಕರ್ನಾಟಕದಲ್ಲಿ ಶಾಸಕರಾಗಿ ಹೋದವರು ಬಹಳ ಮಂದಿ. ಆದರೆ ಎದ್ದು ಕಾಣುವ ವ್ಯಕ್ತಿತ್ವ ಹೊಂದಿದ್ದ ಗೋಪಾಲಗೌಡ ಶಾಂತವೇರಿ ಅಂತಹವರು ಬಹು ವಿರಳ. ಇವರು ತಮ್ಮದೇ ಆದ ಗಮ್ಮತ್ತು – ದೌಲತ್ತುಗಳಿಂದ ಒಮ್ಮೆಮ್ಮೆ ಕೆಲವರನ್ನು ಬೆದರಿಸುತ್ತಾ, ಜೀವನಪರ್ಯಂತ ಸಂಗಾತಿಗಳೊಡನೆ ಪ್ರೀತಿಯ್ನು ಹಂಚಿಕೊಂಡು, ಕರ್ನಾಟಕದಲ್ಲಿ ಶೂದ್ರನ ಬದುಕಿಗೆ ಭದ್ರ ಬುನದಿ ಹಾಕಿ, ಸೋಷಲಿಸ್ಟ್ ಪಾರ್ಟಿಗೆ ರಾಜಕೀಯವಾಗಿ ಗೌರವ, ಸ್ಥಾನಮಾನ ತಂದುಕೊಟ್ಟರು.

ಅಂತರಂಗ ಬಹಿರಂಗ ಶುದ್ಧನಾಗಿ, ಸೋಷಲಿಸ್ಟ್ ಪಾರ್ಟಿಯಲ್ಲಿ ಪದ್ಮಾಸನ ಹಾಕಿ ಕೂತ ಪಟ್ಟದರಸನ ತ್ಯಾಗಜೀವನವನ್ನು ನಾವು ಮರೆತರೆ, ಖಂಡಿತ ನಮಗೆ ಶ್ರೇಯಸ್ಸು ದೊರೆಯಲಾರದು.

೨೫ ವರ್ಷಗಳ ಹಿಂದೆ ಕಾಗೋಡು ಗ್ರಾಮದ ಕಟ್ಟೆಯ ಮೇಲೆ ಕೂತು “ಉಳುವವನೆ ನೆಲದೊಡೆಯ” ಎಂದು ಘೋಷಿಸಿ, ಲಾಟಿ ಏಟು ತಿಂದು ಜೈಲು ಸೇರಿದ ಸದಾಶಿವರಾಯಾರು ಇಂದಿನ ರಾಜಕಾರಣಿಗಳಿಗೆ ಹುಚ್ಚರಾಗಿ ಕಾಣಬಹುದು. ಆದರೆ, ಅವರ ಬೆತ್ತಲದ ಬದುಕು ಜನತೆಗಾಗಿಯೇ ಮೀಸಲಿತ್ತು ಎಂಬುದು ಸತ್ಯ ಸಂಗತಿ.

ಕರ್ನಾಟಕದಲ್ಲಿ ಖ್ಯಾತ ಪತ್ರಕರ್ತ್ರ ಖಾದ್ರಿ ಶಾಮಣ್ಣ ಸೋಷಲಿಸ್ಟ್ ಪಾರ್ಟಿ ಸ್ಥಾಪಕರಲ್ಲಿ ಓರ್ವರು. ಅವರು ಕಾಗೋಡಿನ ಹೋರಾಟದಲ್ಲಿ ಭಾಗವಹಿಸಿ, ಬುದ್ಧಿಯನ್ನೆಲ್ಲ ಶೂದ್ರನಿಗಾಗಿಯೇ ವಿನಿಯೋಗಿಸುತ್ತಿರುವುದು ರಾಜಕೀಯ ಆರೋಗ್ಯದ ಲಕ್ಷಣವಲ್ಲವೇ? ಸರ್ವೋದಯದ ಭೀಮಕಾಯದ ಗರುಡ ಶರ್ಮ, ಸೋಷಲಿಸ್ಟ್ ಪಾರ್ಟಿಗಾಗಿ ದುಡಿದ ಬಾ.ಸು. ಕೃಷ್ಣಮೂರ್ತಿ, ವಿಚಾರ – ಕ್ರಿಯೆ ಎರಡನ್ನೂ ಮೇಳೈಸಿಕೊಂಡಿದ್ದ ವೆಂಕಟರಾಂ ಇವರೆಲ್ಲಾ ಜನಸಮುದಾಯದ ಉನ್ನತಿಗಾಗಿಯೇ ದುಡಿದಿದ್ದರು ಅಲ್ಲವೇ?

ಭಾರತೀಪುರ – ಸಂಸ್ಕಾರದ ಅನಂತಮೂರ್ತಿ, ನಷ್ಟ ನೋವನ್ನು ಜಮಾಯಿಸಿಕೊಮಾಡ ಶಂಕರನಾರಾಯಣ ಭಟ್, ಸೋಷಲಿಸ್ಟ್ ಪಾರ್ಟಿಗೆ ಒಲಿದು ಸ್ಥಿರವಾಗಿ ನಿಂತಿರುವ ಜೆ. ಹೆಚ್. ಪಟೇಲ್, ಶ್ರೀಘ್ರಕೋಪಿ ರಾಮಕೃಷ್ಣ, ೧೯೫೨ರಲ್ಲೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ೧೦ ಸಾವಿರ ಮತಗಳನ್ನು ಸೋಷಲಿಸ್ಟ್ ಪಾರ್ಟಿಗೆ ತುಂಬಿದ ಕುಪ್ಪಗಡ್ಡೆ ಮರಿಯಪ್ಪ, ಪೊನ್ನಮ್ಮಾಳ್, ಡಿ. ರವಳಪ್ಪ, ಎಂ.ಎಸ್. ಗೋಪಾಲಕೃಷ್ಣ ಉರಾಳ್, ಟಿ.ಹೆಚ್. ಮಹದೇವಪ್ಪ, ಬೆಂಗಾಳೆ ಧರ್ಮಪ್ಪ ಇವರೆಲ್ಲರೂ ಸಮಾಜವಾದಿ ಸಿದ್ಧಾಂತವನ್ನು ಒಪ್ಪಿದವರು.

ಸೋಷಲಿಸ್ಟ್ ಆಂದೋಲನಕ್ಕೆ ಮಧ್ಯಂತರದಲ್ಲಿ ಬಂದು ಕಾಯಾ ವಾಚಾ ಮನಸಾ ಪಾರ್ಟಿಗಾಗಿಯೇ ಜೀವನವನ್ನು ಮುಡಿಪು ಇಟ್ಟಿರುವ, ತೆರೆದ ಜೀವನದ ಎಸ್. ಎಸ್. ಭರ್ಮಪ್ಪ ಇಂದಿಗೂ ಜನತೆಯ ಉನ್ನತಿಗೆ ಸೋಷ್ಲಿಸ್ಟ್ ಪರ್ಟಿಯೇ ಗತಿ ಎಂದು ನಂಬಿದ್ದಾರೆ.

ಶೂದ್ರಶಕ್ತಯ ಕಾರಂಜಿ ಶಾಸಕ ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಶೂದ್ರ ಹೋರಾಟದ, ಕಾಗೊಡು ಅಂದೋಲನದ ಪಡಿನೆರಳು ಎಂಬುದು ಸ್ಪಟಿಕದಷ್ಟೇ ಸ್ಪಷ್ಟ.

ಆಲದ ಮರ ಎತ್ತರಕ್ಕೆ ಬೆಳೆಯುವುದೇ ಇಲ್ಲ. ಅದು ಕುಬ್ಜವಾಗಿದ್ರೂ ಪಾತಾಳದಿಮದ ರಸಹೀರಿ ತನ್ನ ಬಿಳಲುಗಳನ್ನು ಪೋಷಣೆಮಾಡಿ ಅಗಲವಾಗಿ ವಿಸ್ತರಿಸಿ ನಿಂತವರಿಗೆ ನೆರಳು ನಿಡುತ್ತದೆ. ಇದು ಸೋಷಲಿಸ್ಟ್ ಪಾರ್ಟಿಯ ಚುನಾವಣೆ ಚಿನ್ಹೆ ಎಂಬುದನ್ನು ಮರೆಯಬಾರದು.

ಇಂದಿನ ವಿಚಿತ್ರ ರಾಜಕಾರಣದಲ್ಲಿ ಒಂದು ಪಕ್ಷದ ಸದಸ್ಯರು ಅತ್ತ ಇತ್ತ ವಾಲುವುದು ಮಾಮೂಲಿ. ಆದರೆ, ಅದರಿಂದ ಜೀವನ ಭದ್ರವಾಗಬಹುದು. ಆದರೆ ಬದುಕು ಸಣ್ಣತನವನ್ನು ನೆಕ್ಕುತ್ತದೆ.

ಪಾರ್ಟಿಗೆ ಯುವಕರು ಬಂದಾಗ ಅವರನ್ನು ಅಪ್ಪಿಕೊಂಡು ಪಕ್ಷದ ಹಿರಿಯರಿಗೆ ಸಲ್ಲಬೇಕಾಗಿದ್ದ ಸ್ಥಾನಮಾನವನ್ನು ಸಲ್ಲಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುವ ಉತ್ತಮ ಸಂಪ್ರದಾಯವನ್ನು ಗೋಪಾಲಗೌಡರು ಹಾಕಿದ್ದರು. ಇದಕ್ಕೆ ಸ್ಪಷ್ಟ ಉದಾಹರಣೆ ಕುಪ್ಪಗಡ್ಡೆ ಮರಿಯಪ್ಪನವರಿಗೆ ಸಲ್ಲಬೆಕಾಗಿದ್ದ ಶಾಸನ ಸಭಾ ಅಭ್ಯರ್ಥಿ ಸ್ಥಾನವನ್ನು ಬಂಗಾರಪ್ಪ ಅವರಿಗೆ ಕೊಡಿಸಿದ್ದು.

ಕಳೆದ ೨೫ ವರ್ಷಗಳಲ್ಲಿ, ಸೋಷಲಿಸ್ಟ್ ಪಾರ್ಟಿಗೆ ಬಂದವರು ಬಹುಜನ. ಬಂದವರೆಲ್ಲ. ಪಾರ್ಟಿಯನ್ನು ಬಕಾಸುರ ದಾಹದಲ್ಲಿ ಬಳಸಿಕೊಂಡು, ಬೆಳೆದು. ಅನಂತರ ಪಕ್ಷಾಂತರಿಗಳಾದವರೇ. ಇಲ್ಲಿ ನಿಂತವರೇ ಬಹು ಕಡಿಮೆ. ಆದರೆ ಪಕ್ಷಾಂತರಿಗಳೂ ಮಾತೃಸಂಸ್ಥಯ ವಿರುದ್ಧವೇ ಪಿತೂರಿ ಮಾಡುತ್ತಿರುವುದನ್ನು ಕೂಡ ಸೋಷಲಿಸ್ಟ್ ಪಾರ್ಟಿ ಜೀರ್ಣಿಸಿಕೊಳ್ಳುತ್ತಿದೆ. ವಿರುದ್ಧವೇ ಪಿತೂರಿ ಮಾಡುತ್ತಿರುವುದನ್ನು ಕೂಡ ಸೋಷಲಿಸ್ಟ್ ಪಾರ್ಟಿ ಜೀರ್ಣಿಸಿಕೊಳ್ಳುತ್ತಿದೆ. ನಡೆದು ಬಂದ ದಾರಿಯತ್ತ ಆಗಾಗ್ಗೆ ಹಿಂತಿರುಗಿ ನೋಡುತ್ತಾ ಸತ್ತವರ ನೆರಳನ್ನು ವೀಕ್ಷಿಸುತ್ತಾ, ಇರುವವರ ಪ್ರಾಮಾಣಿಕತೆಯನ್ನು ಗುರುತಿಸುತ್ತಾ ಇದ್ದರೆ ಚೆನ್ನ. ಅದೇ ಚೆಲುವು.

* * *