ಕಾಗೋಡು ಸತ್ಯಾಗ್ರಹ’: ಆಯ್ದ ಭಾಗಗಳು
ಜಿ. ರಾಜಶೇಖರ

ಕಾಗೋಡು ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪ ಹೊಬಳಿಯಲ್ಲಿರುವ ಒಂದು ಸಣ್ಣ ಹಳ್ಳಿ. ಎಷ್ಟು ಸಣ್ಣ ಹಳ್ಳಿ ಎಂದರೆ, ಶಿವಮೊಗ್ಗ ಜಿಲ್ಲೆಯ ಭೂಪಟ ಬಿಡಿಸಿ ನೋಡಿದರೆ ಈ ಹಳ್ಳಿಯ ಹೆಸರು ಕಾಣಿಸುವುದಿಲ್ಲ. ಅಷ್ಟೇಕೆ? ಸರಕಾರಿ ದಾಖಲೆಗಳ ಮಟ್ಟಿಗೆ ಕಾಗೋಡು ಒಂದು  ರೆವೆನ್ಯೂ ಗ್ರಾಮ ಕೂಡ ಅಲ್ಲ. ಇದರ ಒತ್ತಿನ ಹಳ್ಳಿಗಳಾದ ಹಾಗಲಪುರ, ಮರಗದ್ದೆ, ಸಣ್ಣ ಮನೆ ಮತ್ತು ಹಿರೇನಲ್ಲೂರು ಹಳ್ಳಿಗಳ ಜೊತೆ ಕಾಗೋಡು ಕಾಡೂ ಸೇರಿಕೊಂಡು ಹಿರೇನಲ್ಲೂರು ರೆವೆನ್ನೂ ಗ್ರಾಮ ಮತ್ತು ಗ್ರೂಪ್ ಪಂಚಾಯತ್ ಅಂತ ಆಗಿದೆ. ಈಗ ಈ ಹಳ್ಳಿಯಲ್ಲಿ ಒಟ್ಟು ೧೩೮ ಮನೆಗಳಿದ್ದು ೪ ಲಿಂಗಾಯತರು, ೭ ಮಡಿವಾಳರು ಮತ್ತು ೩೦ ಆದಿಕರ್ನಾಟಕ (ಹರಿಜನ)ದವರ ಮನೆಗಳನ್ನು ಬಿಟ್ಟರೆ ಉಳಿದ ೯೭ ಮನೆಗಳೂ ದೀವರ ಜಾತಿಯವರದ್ದು.

ಸತ್ಯಾಗ್ರಹ ಪ್ರಾರಂಭವಾಗುವ ವೇಳೆಯಲ್ಲೂ  ಕಾಗೋಡು ಗೌಡರು ತಾಲ್ಲೂಕಿನ ಅತಿ ಶ್ರೀಮಂತರ ಪೈಕಿ ಒಬ್ಬರಾಗಿದ್ದರು. ಈಗ ಜೀರ್ಣ ಜೀರ್ಣವಾಗಿದ್ದರೂ, ಭರ್ಜರಿಯಾಗಿಯೇ ಕಾಣಿಸುವ, ಮರಮೋಪು ಧಾರಳವಾಗಿ ಉಪಯೋಗಿಸಿ ಕಟ್ಟಿರುವ ಅವರ ಮನೆಯ ಕಟ್ಟೋಣದ ಕೆಲಸಕ್ಕೆ ೨೦೦ ಜನ ಒಕ್ಕಲುಗಳು ಬಿಟ್ಟಿ ಚಾಕರಿ ಮಾಡಿದ್ರಂತೆ. ಹೀಗಿದ್ದೂ ಆ ಮನೆ ಕಟ್ಟಿಸುವುದಕ್ಕೆ ಆ ಕಾಲದ (೧೮೯೬ – ೧೯೦೪) ೪೦೦೦ ರೂಪಾಯಿ ಖರ್ಚು ಬಿದ್ದಿತ್ತಂತೆ. ದೀವರ ಕೇರಿಯ ಯಾವ ಮನೆಗಿಂತಲೂ ದೊಡ್ಡದಾಗಿರುವ ಆ ಮನೆಯ ಕೊಟ್ಟಿಗೆಯೇ ಐವತ್ತು ಕಾಲ್ನಡೆಗಳನ್ನು ಧಾರಾಳವಾಗಿ ಕಟ್ಟಬಹುದಾದಷ್ಟು ದೊಡ್ಡದಾಗಿದೆ.

* * *

ಜಾತಿ, ಆಸ್ತಿ ಇಂಗ್ಲಿಷ್ ವಿದ್ಯಾಭ್ಯಾಸ (ಭಾರತದಲ್ಲಿ ಯಾರೇ ಆಗಲಿ ಮೇಲೆ ಏರುವುದಕ್ಕೆ ಈ ಮೂರರಲ್ಲಿ ಯಾವುದಾದರೂ ಎರಡನ್ನು ಪಡೆದಿರಲೇಬೇಕು ಎಂದು ಲೇಹಿಯಾ ವಿಶ್ಲೇಷಿಸಿದ್ದರು) ಮೂರರಲ್ಲಿ ಈಗಲೂ ಹಿಂದುಳಿದಿರವ ದೀವರು, ೨೦ ೩೦ ವರ್ಷಗಳ ಕೆಳಗಂತೂ, ಮೇಲಿನವರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ತುಳಿತದಲ್ಲಿ ಮನುಷ್ಯ ಗೌರವವನ್ನೇ ಕಳೆದುಕೊಂಡು ಪ್ರಾಣಿಗಳಂತೆ, ಬದುಕುತ್ತಿದ್ದರು. ದೀವ ಒಕ್ಕಲುಗಳು ತುಂಡು ಪಂಚೆ ಉಟ್ಟು, ಅರೆ ಹೊಟ್ಟೆ ಉಂಡು, ಉತ್ತು ಬಿತ್ತು ಬೆಳೆದು; ಸುಮ್ಮನೆ ಕೂತು ತಿಂದು ದರ್ಬಾರು ಮಾಡುವ ದಣಿಗಳಿಗೆ ಗೇಣಿ ಕೊಡಬೇಕಾಗಿತ್ತು. ಆದರೆ, ಮೇಲು ಜಾತಿಯ ದನಿಗಳ ಎದುರು ಈ ದೀವರು ಕಾಲುಮುಟ್ಟುವಂತೆ ಪಂಚೆ ಉಡುವಂತಿರಲಿಲ್ಲ; ಅದು ಮೊಣಕಾಲಿನ ಕೆಲಗೆ ಇಳಿಯಕುಡದು. ದನಿಗಳ ಮನೆಎಂದು ಇವರು ಚಪ್ಪಲಿ ಮೆಟ್ಟಿಕೊಂಡು ನಡೆಯುವಂತಿರಲಿಲ್ಲ. ದನಿಗಳು ಮನೆಯ ಚಾವಡಿಯಲ್ಲಿ ಆಸೀನರಾಗಿದ್ದಾಗ ಇವರು ಮನೆ ಎದುರು ಹಾದು ಹೋಗಬೇಕಾದರೆ ಕಾಲಿನ ಜೋಡು ಕಳಚಿ ಕೈಯಲ್ಲಿ ಹಿಡಿದುಕೊಂಡು ಬಗ್ಗಿ ಮುಂದೆ ನಡೆಯಬೇಕು. ದನಿಗಳ ಮನೆಯಲ್ಲಿ ಯಾರನ್ನೂ ಅವರು ಯಾವ ಪ್ರಾಯದವರೇ ಆಗಿರಲಿ ಏಕವಚನದಲ್ಲಿ ಮಾತಾಡಿಸುವಂತಿಲ್ಲ. ಆದರೆ, ದನಿಗಳ ಮನೆಯ ಚೋಟುದ್ದದ ಪಿಳ್ಳಿ ಕೂಡಾ ದೀವರ ಮುದುಕರನ್ನು ‘ನೀನು’, ‘ತಾನು’ ಎಂದು ಮಾತಾಡಿಸ ಬಹುದು. ಗಾಡಿ ಹೊಡೆಯುವಾಗ ದನಿಗಳು ಎದುರಾದರೆ ಕಾಲುಬಿಟ್ಟು ಕುಳಿತುಕೊಳ್ಳುವಂತಿಲ್ಲ. ಬ್ರಾಹ್ಮಣ, ಲಿಂಗಾಯತರ ಮನೆಗಳಲ್ಲಿ, ಊರಿನ ದೇವಸ್ಥಾನಗಳಲ್ಲಿ ದೀವರು ಚಾವಡಿಯ ಅಥವ ಎರಡನೆಯ ಮಜಲನ್ನು ಮಾಡುವಂತಿಲ್ಲ. ದೀವರಿಗಿಂತ ಕೆಳಗಿನವರಾದ ಹರಿಜನರಿಗೆ ಕೃಷಿಭೂಮಿಯನ್ನು ಗೇಣಿಗೆ ಸಹಿತ ಕೊಡುತ್ತಿರಲಿಲ್ಲ. ಕೂಲಿ ಮಾಡಿಕೊಂಡೇ ಬದುಕಬೇಕಾಗಿದ್ದ ಅವರಿಗೆ ಎಲ್ಲಿಯೂ ಹೊರಬಾಗಿಲಿನಿಮದ ಈಚೆಗೆ ಪ್ರವೇಶವಿರಲಿಲ್ಲ.

ಗೇಣಿ ಒಕ್ಕಲುಗಳು ದುಡಿದು ದಣಿಗಳಿಗೆ ಗೇಣಿಯನ್ನು ಸಲ್ಲಿಸಬೇಕಾಗಿತ್ತು: ಜೊತೆಗೆ ದಣಿಗಳು ಹೇಳಿದ ‘ಬಿಟ್ಟಿ’ಯನ್ನು ಮಾಡಬೇಕಾಗಿತ್ತು ದಣಿಗಳ ಮನೆ ಕೊಟ್ಟಿಗೆಗೆ ಸೊಪ್ಪು ತರುವುದು, ಕರಡ ಕತ್ತರಿಸುವುದು, ಹುಲ್ಲು ಕೊಯ್ದು ತರುವುದು, ಅಂಗಳ ಸಗಣಿ ಸಾರಿಸುವುದು, ದನ ಮೇಯಿಸುವುದು, ಹಟ್ಟಿ ಮಾಡು ಹೊದೆಸುವುದು, ಬಟ್ಟೆ ಒಗೆಯುವುದು, ದಣಿಗಳ ಮನೆಯವರು ಎಲ್ಲಿಗಾದರೂ ಹೋಗಬೇಕಾದರೆ ಗಾಡಿ ಕಟ್ಟಿ ಹೊಡೆಯುವುದು, ಅವರ ಕಾಗದ ಪತ್ರಗಳನ್ನು ಮುಟ್ಟಿಸುವುದು, ಅಡಿಕೆ ಸುಲಿಯುವುದು ಮುಂತಾದ ದನಿಗಳು ಹೇಳಿದ ಯಾವ ಕೆಲಸವನ್ನೂ ಎದುರು ಮಾತಾಡದೆ ಮಾಡಬೇಕಾಗಿತ್ತು. ಹೆಸರೇ ಹೇಳುವಂತೆ ಇದು ಬಿಟ್ಟಿ. ದನಿಗಳು ಖುಷಿವಾಸಿಯಿಂದ ವೀಳ್ಯ, ಹೊಗೆ ಸೊಪ್ಪು, ತಿಂಡಿ ಅಥವ ನುಚ್ಚು ಕೊಟ್ಟರೆ ಕೊಟ್ಟರು, ಇಲ್ಲದಿದ್ದರೆ ಕೇಳಿ ಪಡೆಯುವಂತಿಲ್ಲ. ಒಂದು ಒಕ್ಕಲು ವರ್ಷಕ್ಕೆ ಹದಿನೈದರಿಂದ ಇಪ್ಪತ್ತು ಆಳಿನ ಕೆಲಸವನ್ನು ದನಿಗಳ ಮನೆಯಲ್ಲಿ ಬಿಟ್ಟಿಯಾಗಿ ಮಾಡಬೆಕಾಗಿತ್ತು.

ಒಕ್ಕಲುಗಳ ವಿಪರೀತ ವಿಧೇಯ ವರ್ತನೆಯಾಗಲಿ; ಈ ಬಿಟ್ಟಿ ದುಡಿಮೆ, ಸಲಿಗೆ, ಪೆಚ್ಚು ಭತ್ತ ಸಲ್ಲಿಸುವ ಕ್ರಮಗಳಾಗಲೀ ಯಾವ ದನಿಯೂ ತನ್ನ ಒಕ್ಕಲುಗಲ ಮೇಲೆ ತನ್ನಷ್ಟಕ್ಕೆ ತಾನೇ ಅನಾಮತ್ತಾಗಿ ಹೇರಿದ್ದಲ್ಲ. ಅದು ರೂಢಿಯಿಂದ ಬಂದದ್ದು; ಒಕ್ಕಲುಗಳು ಕೂಡ ಹಾಗೆ ನಡೆದುಕೊಳ್ಳುವುದೇ ನೀತಿ ಸಮ್ಮತವಾದುದು ಎಂದು ತಿಳಿದಿದ್ದರು. ದನಿಗಳಿಗೆ ಕೊಡಬೇಕಾದ ಗೇಣೀ ಕೊಡದಿರುವುದು, ಅವರ ಮನೆ ಬಿಟ್ಟಿ ಕೆಲಸ ಮಾಡದೆ ಇರುವುದು, ಅವರನ್ನು ಧಿಕ್ಕರಿಸಿ ನಡೆಯುವುದು ದೇವರು ಮೆಚ್ಚುವ ಕೆಲಸಗಳಲ್ಲ ಎಂದು ನಂಬಿದ್ದರು. ಹಾಗೆ ಮಾಡುವ ಧೈರ್ಯವೂ ಅವರಲ್ಲಿ ಇರಲಿಲ್ಲ. ಅದು ಬೇರೆ ಮಾತು.

* * *

ಕಾಗೋಡು ಸತ್ಯಾಗ್ರಹದ ವೇಳೆ, ಕಾಗೋಡಿನಲ್ಲಿ ಆಗ ಇದ್ದ ೧೪ ಮನೆಯ ಹರಿಜನರು ಕಾಗೋಡು ಗೌಡರ ಕಡೆಗೆ ಇದ್ದರು. ಇಡೀ ದೇಶದ ಗಮನವನ್ನೇ ಸೆಳೆದ, ಸುತ್ತ ಮುತ್ತ ಹಳ್ಳಿಗಳಿಂದ ರೈತ ಸತ್ಯಾಗ್ರಹಿಗಳನ್ನೂ ಆಕರ್ಷಿಸಿದ ಈ ಚಳುವಳಿಯಲ್ಲಿ  ಅವರಂತೂ ಯಾವ ರೀತಿಯಲ್ಲೂ ಭಾಗವಹಿಸಲಿಲ್ಲ. ೧೪ ಮನೆಯವರಲ್ಲಿ ಆರು ಮನೆಯವರು ಗೌಡರ ಮನೆಯ ಖಾಯಂ ಕೂಲಿಗಳಾಗಿದ್ದರು; ವಂಶಪರಾಂಪರ್ಯವಾಗಿ ಗೌಡರು ದಿನಗೂಲಿಯಲ್ಲದೆ ಹಬ್ಬ ಹುಣ್ಣಿಮೆ ಸಾವು, ಹೆರಿಗೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ೧೦ – ೧೫ ಸೇರು ಭತ್ತ ಕೊಡುತ್ತಿದ್ದರು. ಮದುವೆ ಆದರೆ ನೂರಿನ್ನೂರು ರೂಪಾಯಿ ನಗದು ೮ – ೧೦ ಚೀಲ ಭತ್ತವನ್ನೂ ಕೊಡುತ್ತಿದ್ದರು. ಮದುವೆ ಆದರೆ ನೂರಿನ್ನೂರು ರೂಪಾಯಿ ನಗದು ೮ -೧೦ ಚೀಲ ಭತ್ತವನ್ನೂ ಕೊಡುತ್ತಿದ್ರು. ಕೇರಿಯ ಯಾವ ಹರಿಜನರಿಗೂ ಸ್ವಂತಹ ನೆಲವೂ ಇರಲಿಲ್ಲ; ಗೌಡರ ಗೇಣಿ ಜಮೀನು ಇರಲಿಲ್ಲ. ಆದ್ದರಿಂದಲೇ ಕಾಗೋಡು ಸತ್ಯಾಗ್ರಹದ ಬೇಡಿಕೆಗಳಿಗೂ ಇವರಿಗೂ ಯಾವ ಸಂಬಂಧವೂ ಇರಲಿಲ್ಲ. ಇವರು ಅದರಲ್ಲಿ ಭಾಗವಹಿಸಲೂ ಇಲ್ಲ. ಸತ್ಯಾಗ್ರಹದ ನಾಯಕರಿಗೆ ಇವರನ್ನು ಸಹಾನುಭೂತಿಯ ಸತ್ಯಾಗ್ರಹಕ್ಕಾದರೂ ಕರೆಯಬೇಕೆಂಧು ಹೊಳೆಯಲೂ ಇಲ್ಲ. ಅಷ್ಟು ಮಾತ್ರವೇ ಅಲ್ಲ. ಗೌಡರು ಸತ್ಯಾಗ್ರಹಿಗಳನ್ನು ಅಟ್ಟಸಿಕೊಂಡು ಹೊಗಿ ಹೊಡೆಯುವುದಕ್ಕೆ ಹರಿಜನರನ್ನೇ ಉಪಯೋಗಿಸಿಕೊಂಡಿದ್ದರಂತೆ. ಸತ್ಯಾಗ್ರಹಿಗಳ ಮೇಲೆ ಸಾಗರ, ಶಿವಮೊಗ್ಗ ಕೋರ್ಟುಗಳಲ್ಲಿ ಹಾಕಿದ್ದ ಕೇಸುಗಳ ವಿಚಾರಣೆಯಲ್ಲಿ ಹರಿಜನ ಕೇರಿಯ ಮೂರು ಮನೆಯವರು ಗೌಡರ ಪರವಾಗಿಯೇ ಸಾಕ್ಷಿ ಹೇಳಿದ್ದರು. ಇಷ್ಟಾದರೂ ಸತ್ಯಾಗ್ರಹ ಮುಗಿದ ಮೇಲೂ ಗೌಡರು ಇವರಿಗೆ ದೀವರಿಂದ ಬಿಡಿಸಿಕೊಂಡ ಜಮೀನು ಕೊಡಲಿಲ್ಲ. ಕೇರಿಯವರೆಲ್ಲ ಒಟ್ಟಾಗಿ ಗುರುವೇಗೌಡರ ಹತ್ತರ ದೀವರಿಂದ ಬಿಡಿಸಿಕೊಂಡ ಜಮೀನಿನಲ್ಲಿ ಸ್ವಲ್ಪ ತಮಗೆ ಗೇಣಿಗೆ ಕೊಡಬೇಕೆಂದು ಕೇಳಿದ್ದಕ್ಕೆ ಗೌಡರು, “ಹೇಗೂ ಕೂಲಿ ನಾಲಿ ಮಾಡಿಕೊಂಡು ಇದ್ದೀರಲ್ಲ; ಜಮೀನು ಮಾಡಿಕೊಂಡಿರುವವರು ತಾವೇನು ಮಹಾ ಸುಖವಾಗಿದ್ದಾರಾ! ಹೋಗ್ರಎಂದುಬಿಟ್ಟರಂತೆ. ಗೌಡರೇ ಅಷ್ಟು ಹೇಳಿದ ಮೇಲೆ ಮೂಂದೆ ಮಾತಾಡುವ ಧೈರ್ಯ ಇವರಿಗೆ ಬಂದೀತೆ? ಇವರೂ ಸುಮ್ಮನಾದರು.

* * *

೧೯೫೧ರ ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಎ. ಐ. ಸಿ. ಸಿ. ಅದಿವೇಶನದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರಿಗೆ ಕಾಗೋಡು ಸತ್ಯಾಗ್ರಹದ ಬಗ್ಗೆ ಒಂದು ಮುದ್ರಿತ ಕಿರುಹೊತ್ತಗೆ “ದಿ ಜೀನಿಸಸ್ ಆಫ್ ಕಾಗೋಡು”ವನ್ನು ಹಂಚಿದರು. ಅದರಲ್ಲಿ ರೆಡ್ಡಿಯವರು ಹೇಳುವ ಪ್ರಕಾರ ಗುರುವಯ್ಯಗೌಡರ ಈ ನಿರ್ಧಾರ ಅವರೊಬ್ಬರದ್ದೇ ಆಗಿರಲಿಲ್ಲ. ಸಾಗರ ತಾಲ್ಲೂಕಿನ ಜಮೀನ್ದಾರರೆಲ್ಲರೂ ಒಗ್ಗಟ್ಟಾಗಿದ್ದರು ಮತ್ತು ಗೇಣಿದಾರ ಒಕ್ಕಲುಗಳ ಚಳುವಳಿಯನ್ನು ಹತ್ತಿಕ್ಕಲು ನಿಶ್ಚಯಿಸಿದ್ದಾರೆ. ಆಗೋಡನ್ನು ಅವರು ತಾಲ್ಲೂಕಿನ ಒಕ್ಕಲುಗಳಿಗೆ ಪಾಠ ಕಲಿಸುವ ಒಂದು ನಿರ್ಣಾಯಕ ಕೇಂದ್ರವೆಂದು ಭಾವಿಸಿದರು. ಜಮೀನು ಹಾಳುಬಿದ್ದರೂ ಸರಿಯೇ, ಗೌಡರು ಒಕ್ಕಲುಗಳಿಗೆ ಮಣಿಯಕೂಡದು ಎಂಬುದು ಅವರ ನಿಲುಮೆಯಾಗಿತ್ತು ರೆಡ್ಡಿಯವರ ಪ್ರಕಾರ, ಎಂತಹ ಪ್ರಸಂಗ ಬಂದರೂ ಅದನ್ನು ಎದುರಿಸಲು ಕಾಗೋಡುಗೌಡರ ಸಹಾಯಾರ್ಥ ತಾಲ್ಲೂಕಿನ ಜಮೀನ್ದಾರರೂ ಒಟ್ಟಾಗಿ ೭೩,೦೦೦ ರೂಪಾಯಿಗಳ ಒಂದು ನಿಧಿಯನ್ನು ಸಂಗ್ರಹಿಸಿದ್ದರು. ಇದು ಎಷ್ಟು ಸತ್ಯವೆಂದು ಈಗ ತಿಳಿಯುವಂತಿಲ್ಲ. ಆದರೆ ತಾಲ್ಲೂಕಿನ ಜಮೀನ್ದಾರರಲ್ಲಿ ಒಟ್ಟಾಗಿ ಹೋರಾಡುವ ಒಂದು ಮನೋಭಾವವಂತೂ ಮೂಡಿದ್ದಿತು. ಆ ಕಾಲದ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ವರದಿಗಳನ್ನು ಗಮನಿಸಿದರೆ ತಾಲ್ಲೂಕಿನ ಜಮೀನ್ದಾರರೂ ಸಭೆಗಳನ್ನು ನಡೆಸುತ್ತಿದ್ದದು ತಿಳಿದುಬರುತ್ತದೆ. (ಈ ಜಮೀನ್ದಾರ ಸಭೆಗಳಲ್ಲಿಯೂ ಕಾಂಗ್ರೆಸ್ ನಾಯಕರೇ ಭಾಗವಹಿಸುತ್ತಿದ್ದರು.)

ಮೇಲೆ ಹೇಳಿದ ವಿಫಲ ಸಂಧಾನದ ವೇಳೆಗಾಗಲೇ ಕೊಳಗುವ ತಕರಾರು ಹಿಂದಕ್ಕೆ ಸರಿದು, ಭೂಮಿ ಬಿಡಿಸುವ ಪ್ರಶ್ನೆಯೇ ಮುಖ್ಯ ಸಮಸ್ಯೆಯಾಗಿತ್ತು. ಈ ಸಂಧಾನದ ನಂತರ ಜಿಲ್ಲಾ ಕಲೆಕ್ಟರರು ತಾಳುಗುಪ್ಪಕ್ಕೆ ಬಂದಿದ್ದವರು ಕಾಗೋಡಿನವರೆಗೂ ಬಂದು ಅಲ್ಲಿನ ಒಕ್ಕಲುಗಳಿಗೆ ’ನೀವೆಲ್ಲ ಗೌಡರ ಜಮೀನು ಬಿಟ್ಟುಬಿಡಿ; ಇಲ್ಲವಾದರೆ ಅವರು ಹೇಳಿದ ಹಾಗೆ ಇರಿ: ಎಂದು ಹೆದರಿಸಿದ್ದಾಗಿ ಸಾಗರ ತಾಲ್ಲೂಕು ರೈತ ಸಂಘದ ಡೈರಿಯಿಂದ ತಿಳಿಯುತ್ತದೆ. ಇದು ಕಾಗೋಡು ಒಕ್ಕಲುಗಳ ಸಮಸ್ಯೆ ಬಗ್ಗೆ ಸರಕಾರ ಮುಂದೆ ಹೇಗೆ ವರ್ತಿಸಿತು ಎಂಬುದರ ಮುನ್ಸೂಚನೆಯಾಗಿತ್ತು. ಸುಮಾರು ಒಂದು ವರ್ಷ ಕಾಲ ಸರಕಾರ ಯಾವ ಮಟ್ಟದಲ್ಲಿಯೂ ಈ ತಕರಾರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಒಮ್ಮೆ ಸರಕಾರ ಕಾಗೋಡಿನ ವಿಷಯದಲ್ಲಿ ಆಶಕ್ತಿ ತೋರಿಸಲು ಪ್ರಾರಂಭಿಸಿದ ಮೇಲೆ, ಚಳುವಳಿ ಮುಗಿಯುವವರೆಗೂ ಅದು ಸ್ಪಷ್ಟವಾಗಿ ಭೂಮಾಲಿಕರ ಪರವಾದ ಆಸಕ್ತಿಯೇ ಆಗಿತ್ತು.

ಕಾಗೋಡಿನ ವಿವಾದದಲ್ಲಿ ಸೋಷಿಯಲಿಸ್ಟ್ ಪಕ್ಷ ಆರಂಭದಿಂದಲೂ ಒಕ್ಕಲುಗಳಿಗೆ ಪರವಾದ ಆಸಕ್ತಿ, ಸಹಾನುಭೂತಿಗಳನ್ನು ತೋರಿಸಿತು. ಆಗ ಮೈಸೂರು ಪ್ರಾಂತ್ಯದ ಸೋಷಿಯಲಿಸ್ಟ್ ಪಕ್ದ ಕಾರ್ಯದರ್ಶಿಗಳಾಗಿದ್ದ ಸದಾಶಿವರಾಯಾರು ಮತ್ತು ಶಿವಮೊಗ್ಗ ಜಿಲ್ಲೆಯ ಪಕ್ಷದ ಅಧ್ಯಕ್ಷರಾಗಿದ್ದ ಗೋಪಾಲಗೌಡರು ಗಣಪತಿಯಪ್ಪನ ಜೊತೆ ಕಾಗೋಡಿನ ಬಗ್ಗೆ ಆಗಿಂದಾಗ್ಗೆ ಚರ್ಚಿಸುತ್ತಿದ್ದುದು ರೈತ ಸಂಘದ ಡೈರಿಯಿಂದ ತಿಳಿದುಬರುತ್ತದೆ. ಗಣಪತಿಯಪ್ಪ ಕಾಗೋಡಿನ ವಿವಾದದಲ್ಲಿ ಒಕ್ಕಲುಗಳಿಗೆ ಬೆಂಬಲ ಕೊಡುವಂತೆ ಕಾಂಗ್ರೆಸ್ ಕೂಡ ಸೇರಿಂತೆ ಎಲ್ಲ ಪಕ್ಷಗಳಿಗೂ ಬೈದಿದ್ದರು. ಕಮ್ಯೂನಿಸ್ಟ್ ಪಕ್ಷದವರು ಬೆಂಗಳೂರಿನಲ್ಲಿ ಕಾಗೋಡು ಒಕ್ಕಲುಗಳನ್ನು ಬೆಂಬಲಿಸುವ ಒಂದು ಠರಾವನ್ನು ಪಾಸು ಮಾಡಿದರು. ಅಷ್ಟೆ, ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಜಿಲ್ಲಾ ಕಾರ್ಯದಶಿಗಳು “ಈ ವಿಷಯಕ್ಕೆ ಹೆಚ್ಚು ಗಮನ ಕೊಡಲು ಅಧ್ಯಕ್ಷರಿಗೆ ಬಿಡುವಿಲ್ಲ”ವೆಂದೂ “ಈ ಸಮಸ್ಯೆಗಳು ಸ್ಥಳೀಯ ಜಮೀನುದಾರರು ಮತ್ತು ಗೇಣಿದಾರರು ತಮ್ಮ ತಮ್ಮಲ್ಲಿಯೇ ಸೌಜನ್ಯದಿಂದ ಸರಿ ಮಾಡಿಕೊಳ್ಳುವುದು ಬಹಳ ಶ್ರೇಷ್ಠವಾದ ಮಾರ್ಗ”ವೆಂದೂ ಉಪದೇಶಿಸಿ ಪತ್ರ ಬರೆದರು.

ಆಗ ಸಂಸ್ಥಾನದ ರಾಜಕೀಯ ಪಕ್ಷಗಳಲ್ಲಿ ಸೋಷಿಯಲಿಸ್ಟ್ ಪಕ್ಷ ಮಾತ್ರ ಈ ವಿವಾದದಲ್ಲಿ ಆಸಕ್ತಿ ವಹಿಸಿತು: ವಿವಾದದ ವಿವರಗಳಲ್ಲಿಯೂ ಆಸಕ್ತಿ ತೋರಿಸಿತು ಮತ್ತು ಈ ಆಸಕ್ತಿ ಸಕ್ರಿಯವಾಗಿತ್ತು. ಸದಾಶಿವರಾಯಾರು ಮತ್ತು ಗೋಪಾಲಗೌಡರು ಕಾಗೋಡಿನ ವಿವಾದ ಸತ್ಯಾಗ್ರಹದ ರೂಪ ತಳೆಯುವ ಮೊದಲೇ ಕಾಗೋಡಿಗೆ ಹೋಗಿ ಅಲ್ಲಿನ ಸ್ಥಿತಿಗತಿ ನೋಡಿಕೊಂಡು ಬಂದಿದ್ದರು. ೧೯೫೧ರ ಏಪ್ರಿಲ್ ತಿಂಗಳಲ್ಲಿಯೇ ಕಾಗೋಡಿನ ಬಗ್ಗೆ ಪಕ್ಷ ಮುಂದಿನ ಕ್ರಮ ಕೈಗೊಳ್ಳಲು ಒಂದು ವರದಿಯನ್ನು ತಯಾರಿಸಲು ಸಮಿತಿಯನ್ನು ಕೂಡಾ ರಚಿಸಿದ್ದರು.

ಆ ದಿನಗಳಲ್ಲಿ ಶಿವಮೊಗ್ಗದಲ್ಲಿ ಪಕ್ಷದ ಚಟುವಟಿಕೆಳಲ್ಲಿ ಭಾಗವಹಿಸುತ್ತಿದ್ದ, ಪಕ್ಷವನ್ನು ಹತ್ತಿರದಿಂದ ನೋಡಿ ಗೊತ್ತಿದ್ದ, ಯು. ಆರ್. ಅನಂತಮೂರ್ತಿ ಈ ಬಗ್ಗೆ ನನಗೆ ಬರೆದ ಪತ್ರದ ಸಾಲುಗಳನ್ನು ಇಲ್ಲಿ ಉದ್ಧರಿಸಬಹುದು.

“ಆಗ ಸಿ. ಜಿ. ಕೆ. ರೆಡ್ಡಿ ಸಮಾಜವಾದೀ ಪಕ್ಷದ ಕರ್ನಾಟಕದ ಅಧ್ಯಕ್ಷರಾಗಿದ್ದರು. ಆಗಿನ್ನೂ ಪಕ್ಷ ಬೆಳೆಯುತ್ತಿದ್ದ ಕಾಲ ಅದಕ್ಕೆ ಮುಂಚೆ ಪಕ್ಷವನ್ನು ಕಟ್ಟಿದ್ದ ಗೆಳೆಯ ನಾಗಭೂಷಣ ಮಾನಸಿಕ ಅಸಪಸ್ಥತೆಯಿಂದ ನರಳುತ್ತಿದ್ದರು. ಸಿ.ಜಿ.ಕೆ ಪಕ್ಷದ ಉಳಿದೆಲ್ಲರಿಗಿಂತಲೂ ಹೆಚ್ಚು ಶ್ರೀಮಂತರೂ, ವಿದ್ಯಾವಂತರೂ, ಪಕ್ಷ ಕಟ್ಟುವುದರಲ್ಲಿ ಸಮರ್ಥರೂ ಆಗಿದ್ದರು. ಆದರೆ ಅಶೋಕಮೇಹ್ತಾರ ಜೊತೆಗಾರರಾಗಿದ್ದು ಸಿ.ಜಿ.ಕೆ ಕಾರ್ಮಿಕ ಸಂಘಟನೆಯ ಮುಖಾಂತರ ಮಾತ್ರ ಸಮಾಜವಾದೀ ಅಂದೋಲನ ಸಾಧ್ಯವೆಂದು ನಂಬಿದ್ದರು. ಇವರ ಹತ್ತಿರ ಗೋಪಾಲಗೌಡರು ಕಾಗೋಡಿನಲ್ಲಿ ರೈತಸತ್ಯಾಗ್ರಹ ಆಗಬೇಕೆಂದು ವಾದಿಸಿದಾಗ ಮೊದಮೊದಲು ಸಿ.ಜ.ಕೆ ಉದಾಸೀನರಾಗಿದ್ದರಂತೆ, ಕಾರ್ಮಿಕ ಸಂಘಟನೆಯೇ ಮುಖ್ಯವೆಂದು ವಾದಿಸಿದ್ದರಂತೆ ಗೋಪಾಲಗೌಡರು ಹಠ ಹಿಡಿದಾಗ ಒಪ್ಪಿದರಂತೆ. ಗೋಪಾಲಗೌಡರ ರಾಜಕೀಯ ಚಿಂತನೆಯೇ ತನ್ನದಕ್ಕಿಂತ ಮುಂದಿತ್ತು, ಸಮಪರ್ಕವಾಗಿತ್ತು ಎಂದು ಒಂದರೆಡು ವರ್ಷಗಳ ಕೆಳಗೆ ತನ್ನ ಹತ್ತಿರ ಮಾತಾಡುತ್ತ ಸಿ.ಜಿ.ಕೆ ಹಿಂದಿನದನ್ನು ನೆನಸಿಕೊಳ್ಳುತ್ತ ಹೇಳಿದರು.

(ಕಾಗೋಡು ಸತ್ಯಾಗ್ರಹದ ಬಗ್ಗೆ ತನ್ನವೈಯಕ್ತಿಕ ನೆನಪುಗಳನ್ನು ಅನಂತಮೂರ್ತಿ ಬರೆದದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಅನಂತಮೂರ್ತಿ ಬರೆದದ್ದು, “ಕಾಗೋಡು ಸತ್ಯಾಗ್ರಹದ ಕಾಲದಲ್ಲಿ ಶಿವಮೊಗ್ಗದಲ್ಲಿ ನನ್ನ ತಂದೆ ಒಂದು ಪ್ರೆಸ್ ಇಟ್ಟಿದ್ದರು ದುರ್ಗಿಗುಡಿಯಲ್ಲಿ ಮಾರುತಿ ಪ್ರೆಸ್ ಎಂದು ಇದರ ಹೆಸರು. ಸಮಾಜವಾದಿ ಗೆಳೆಯರಿಗೆಲ್ಲ ಇದೇ ಆಫೀಸೆನ್ನಬಹುದು. ಪ್ರೆಸ್ಸಿನ ಮಹಡಿಯ ಮೇಲೆ ಸಿ.ಜಿ.ಕೆ., ಸದಾಶಿವರಾವ್, ಗೋಪಾಲಗೌಡ, ಅಣ್ಣಯ್ಯ (ವೈ. ಆರ್. ಪರಮೇಶ್ವರಪ್ಪ) ಮಲಗುತ್ತಿದ್ದುದು. ನನ್ನ ತಾಯಿ ಸತ್ಯಾಗ್ರಹದ unofficial ಖಜಾಂಚಿ. ರಾತ್ರಿಯಾದ ಮೇಲೆ ನಾನು ಮತ್ತು ಗೆಳೆಯಾರು ಕಾಂಪೋಸ್ ಮಾಡಿ ನಮ್ಮ ಟ್ರೆಡಲ್ ಮಿಷನ್ನಿನ ಮೇಲೆ ಪಾಂಫ್ಲೆಟ್ಟುಗಳನ್ನು ಅಚ್ಚು ಮಾಡೋದು. ನನ್ನ ಎಳೆತನದ ಸಾಹಿತ್ಯದ ಉಮೇದುಗಳನ್ನೆಲ್ಲ ಈ ರಾಜಕೀಯ ಪಾಂಫ್ಲೆಟುಗಳಲ್ಲಿ ನಾನು ತುರುಕುತ್ತಿದ್ದೆನೆಂಬ ನೆನಪು. ಇವು ಗೋಪಾಲನಿಗೆ (ಗೌಡರಿಗೆ) ಮಾತ್ರ ಪ್ರಿಯವಾಗುತ್ತಿದ್ದವು ಒಂದು ನನಗದರಿಂದ ಖುಷಿ. ಈ ವೇಳೆಯಲ್ಲಿ ನಾನು ರೈತ ಸತ್ಯಾಗ್ರಹ, ರೈತ ಸಮಸ್ಯೆ ಬಗ್ಗೆ ಒಂದು ಚಿಕ್ಕ ಪುಸ್ತಕ ಬರೆದು ಪ್ರಕಟಿಸಿದ್ದೆ. ಒಂದಾಣೆ ಬೆಲೆಯ ಪುಸ್ತಕ: ನಾನೇ ಅದನ್ನು ಶಿವಮೊಗ್ಗದ ಬೀದಿಗಳಲ್ಲಿ ನಡೆದು ಮಾರಿದೆ ನೆನಪು. ಈ ಪುಸ್ತಕ ಬರೆಯಲು ಪ್ರೇರಣೆ ರಮಾನಂದನ ಮಿಶ್ರ ಎಂಬ ಬಿಹಾರದ ರೈತ ನಾಯಕ. ಈಗ ಈತ ಆಶ್ರಮ ಕಟ್ಟಿಕೊಂಡು ಬಿಹಾರದಲ್ಲಿ ಎಲ್ಲೋ ಇದ್ದಾರಂತೆ: ಕುರುಡಾಗಿದ್ದಾರಂತೆ.”

* * *

ಕಾಗೋಡಿನ ಸತ್ಯಾಗ್ರಹ, ಮಲೆನಾಡ ರೈತ ಸಂಘದ ನಾಯಕತ್ವದಲ್ಲಿ ನಡೆಯುತ್ತಿದ್ದರೂ, ಸೋಷಿಯಲಿಸ್ಟ್ ಪಕ್ಷ ಅದರಲ್ಲಿ ವಿಶೇಷವಾದ ಆಸಕ್ತಿಯನ್ನು ತೋರಿಸಿತ್ತು ಎಂದು ಹೇಳಿದ್ದೇನಷ್ಟೆ. ಸತ್ಯಾಗ್ರಹದಲ್ಲಿ ಅವರು ನೇರವಾಗಿ ಪ್ರವೇಶಿಸುವುದಕ್ಕೆ ಸಾಕಷ್ಟು ಮೊದಲೇ ಕಾಗೋಡಿನ ಬಗ್ಗೆ ಸೋಷಲಿಸ್ಟರು ಪ್ರಚಾರ ಪ್ರಾರಂಭಿಸಿದ್ದರು. ಸತ್ಯಾಗ್ರಹ ಇನ್ನೂ ಸಾಗರ ತಾಲ್ಲೂಕು ರೈತ ಸಂಘ ಮತ್ತು ತನ್ನೂಲಕ ಕಮಲೆನಾಡು ರೈತ ಸಂಘದ ಹಿಡಿತದಲ್ಲಿದ್ದಾಗಲೇ ಸೋಷಲಿಸ್ಟರು ಕಾಗೋಡಿನ ಬಗ್ಗೆ ಒಂದು ಪಾಂಫ್ಲೆಟ್ ಹೊರಡಿಸಿ ಜಮೀನುದಾರರ ವಿರುದ್ಧ ಈ ಕೆಳಗಿನ ಆಪಾದನೆಗಳನ್ನು ಮಾಡಿದ್ದರು.

೧. ಕಾಗೋಡು ರೈತರು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿರುವ ಜಮೀನುಗಳಲ್ಲಿ ಪ್ರವೇಶಿಸಿದೊಡನೆ ದಸ್ತಗಿರಿ ಮಾಡಲಾಗುತ್ತಿದೆ.

೨. ಈವರೆಗೂ ಯಾವ ರೈತರೂ ಜಮೀನನ್ನು ಬಿಟ್ಟಿರುವುದಾಗಿ ಹಿಡುವಳಿದಾರರಿಗೆ ಬರೆದುಕೊಟ್ಟಿರುವುದಿಲ್ಲ; ಇಲ್ಲವೆ ಬಿಡುತ್ತೇವೆಂದು ಹೇಳಿಕೆ ಕೊಟ್ಟಿರುವುದಿಲ್ಲ.

೩. ಹಿಡುವಳಿದಾರರು ರೈತರಿಗೆ ಯಾವುದೇ ವಿಧವಾದ ಲೇಖೀ ನೋಟಿಸುಗಳನ್ನು ಕೊಟ್ಟು ಜಮೀನು ಬಿಡುವುದಕ್ಕೆ ತಿಳಿಸಿರುವುದಿಲ್ಲ.

೪. ೧೯೪೨ನೇ ಸಾಲಿನಂದೀಚೆಗೆ ಶೇಕಡಾ ೩೦ರಷ್ಟು ಗೇಣಿ ಹೆಚ್ಚಿಸಿದ್ದಾರೆ, ಆದರೆ ಜಮೀನಿನಲ್ಲಿ ಹೊಸ ಕಾಮಗಾರಿಯನ್ನು ಮಾಡಿಸಿರುವುದಿಲ್ಲ.

೫. ಪ್ರತಿಯೊಂದು ರೈತ ಕುಟುಂಬದಿಂದ ವರ್ಷಕ್ಕೆ ೫೦ ಆಳುಗಳವರೆಗೆ ಬಿಟ್ಟಿ ದುಡಿಮೆ ಮಾಡಿಸಿ ಪ್ರಯೋಜನ ಹೊಂದುತ್ತಿದ್ದಾರೆ. (ಕಾಗೋಡಿನ ದೀವರೇ ನನಗೆ ತಿಳಿಸಿದ ಪ್ರಕಾರ ಈ ಬಿಟ್ಟಿ ವರ್ಷಕ್ಕೆ ೧೨ ರಿಂದ ೨೦ ಆಳುಗಳ ದುಡಿಮೆಗಳನ್ನು ಮೀರುತ್ತಿರಲಿಲ್ಲ.) ಬಿಟ್ಟಿ ದುಡಿಮೆಯ ಸಂದರ್ಭದಲ್ಲಿ ರೈತರು ಆತ್ಮಗೌರವಕ್ಕೂ, ಸಾಮಾಜಿಕ ಗೌರವಕ್ಕೂ ಕುಂದು ಬರುವ ರೀತಿಯಲ್ಲಿ ಕೆಲಸಗಳನ್ನು ಮಾಡಿಸುತ್ತಿದ್ದರು. ಇಂಥಾ ಅಗೌರವಯುತವಾದ ಕೆಲಸವನ್ನು ಮಾಡಲು ಒಪ್ಪದೇ ಇರುವಾಗ ಬೈಯ್ಯುವುದೂ, ಹೊಡೆಯುವುದೂ ಮತ್ತು ಕುಡಿಯುವ ನೀರಿನ ಬಾವಿಗೆ ಮುಳ್ಳುಬೇಲಿ ಹಾಕಿ ನೀರಿಲ್ಲದಂತೆ ಮಾಡುವುದೂ, ಎಲ್ಲಕ್ಕಿಂತ ಹೆಚ್ಚಾಗಿ ಜಮೀನು ಕೊಡುವುದಿಲ್ಲವೆಂದು, ಊರು ಬಿಡಿಸುವೆವೆಂದೂ ಹೆದರಿಸುವುದೂ ವಗೈರೆ ಪದ್ಧತಿಗಳು ಈವರೆವಿಗೂ ಚಾಲ್ತಿಯಲ್ಲಿದ್ದವು.

೬. ಅಳತೆಯ ವಿಷಯದಲ್ಲಿ ವಿವಾದ ಬಂದ ೧೯೪೯ – ೫೦  ಮತ್ತು ೧೯೫೦ – ೫೧ನೇ ಸಾಲಿನಲ್ಲಿ ಹಿಡುವಳಿದಾರರಿಗೆ ಕೊಡಬೆಕಾದ ಗೇಣಿಯ ಧಾನ್ಯವನ್ನು ಹಿಡುವಳಿದಾರರು ತೆಗೆದುಕೊಂಡು ಕ್ರಮವಾದ ರಶೀದಿ ಕೊಡಲು ಒಪ್ಪದಿರುವುದರಿಂದ ಸರ್ಕಾರಿ ಡಿಪೋಕ್ಕೆ ಹಿಡುವಳೀದಾರರ ಹೆಸರಿನಲ್ಲಿ ಪಾವತಿ ಮಾಡಿ ರಶೀದಿ ಪಡೆಯಲಾಗಿದೆ. ಡಿಪೋದಲ್ಲಿಯ ಈ ಬಾಬ್ತು ಹಣವನ್ನೆಲ್ಲಾ ಹಿಡುವಳಿದಾರರು ತೆಗೆದುಕೊಂಡಿರುತ್ತಾರೆ.

ಸತ್ಯಾಗ್ರಹದಲ್ಲಿ ಸೋಷಲಿಸ್ಟ್ ಪಕ್ಷ ಇನ್ನೂ ಅಧಿಕೃತವಾಗಿ ಭಾಗಿಯಾಗಿರಲಿಲ್ಲ. ಆದರೂ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಸಿ. ಜಿ. ಕೆ ರೆಡ್ಡಿ ಗೃಹ ಸಚಿವರಿಗೆ ಕಾಗೋಡಿನ ಬಗ್ಗೆ ದೀರ್ಘವಾದ ಪತ್ರವೊಂದನ್ನು ಬರೆದು ಈ ಕೆಳಗಿನ ಷರತ್ತುಗಳನ್ನು ಮುಂದಿಟ್ಟರು.

೧. ಬಂಧಿತರಾಗಿರುವವರನ್ನೆಲ್ಲ ಕೂಡಲೇ ಅನಿರ್ಬಂಧಿತವಾಗಿ ಬಿಡುಗಡೆ ಮಾಡಬೇಕು ಮತ್ತು ಕುಂಟುನೆಪಗಳ ಮೇಲೆ ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ತಕ್ಷಣವೇ ವಾಪಸ್ಸು ಪಡೆಯಬೇಕು.

೨. ಧಾನ್ಯ ವಸೂಲಿಯ ಸಂಬಂಧದಲ್ಲಿ ನಡೆದ ಅತ್ಯಾಚಾರಗಳ ಬಗ್ಗೆ ತನಿಖೆ ಆಗಬೇಕು. ಜಮೀನುದಾರರ ಪರವಾಗಿ ರೆವಿನ್ಯೂ ಅಧಿಕಾರಿಗಳು ಗೇಣಿದಾರರಿಂದ ವಸೂಲು ಮಾಡಿರುವ ಭತ್ತವನ್ನು ಆಯಾ ರೈತರಿಗೆ ಕೊಡಬೇಕು; ಅಂಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

೩. ಕಾಗೋಡು ಗ್ರಾಮದಲ್ಲಿ ಇಟ್ಟಿರುವ ಪೋಲಿಸು ಪಡೆಯನ್ನು ಕೂಡಲೇ ಹಿಂತೆಗೆಯ ಬೇಕು.

೪. ರೈತರಿಂದ ಪೋಲಿಸರು ಹಾಗೂ ಜಮೀನುದಾರರು ಕಿತ್ತಿಟ್ಟುಕೊಂಡಿರುವ ವ್ಯವಸಾಯದ ಉಪಕರಣಗಳನ್ನು ಕೂಡಲೇ ವಾಪಸ್ಸು ಮಾಡಬೇಕು ಮತ್ತು ಸರ್ಕಾರ ಗೇಣಿದಾರರನ್ನು ಒಕ್ಕಲೆಬ್ಬಿಸದಂತೆ ತುರ್ತು ಶಾಸನ ಮಾಡಬೇಕು.

“ಈ ಮೇಲಿನ ಷರತ್ತುಗಳನ್ನು ಮೇ ೧೫ನೆ ತಾರೀಖಿನೊಳಗಾಗಿ ಪೂರೈಸಿಕೊಡದಿ ದ್ದರೆ ಸಾಗರದಲ್ಲಿ ನಡೆಯುತ್ತಿರುವ ಅತ್ಯಾಚಾರವನ್ನು ತಡೆಗಟ್ಟಲು ಮತ್ತು ರೈತರ ಸ್ವಾತಂತ್ರ್ಯ ಮತ್ತು ಹಕ್ಕು ಬಾಧ್ಯತೆಗಳನ್ನು ರಕ್ಷಿಸಲು ಸತ್ಯಾಗ್ರಹ ಹೂಡದೆ ಸೋಷಲಿಸ್ಟ್ ಪಾರ್ಟಿಗೆ ಬೇರೆ ದಾರಿಯೇ ಇಲ್ಲ” ಎಂದು ಆ ಹೇಳಿಕೆಯಲ್ಲಿ ರೆಡ್ಡಿ ಎಚ್ಚರಿಕೆ ಕೊಟ್ಟರು. ಸತ್ಯಾಗ್ರಹದಲ್ಲಿ ಸೋಷಲಿಸ್ಟ್ ಪಕ್ಷ ಭಾಗವಹಿಸುವುದು ಹೆಚ್ಚು ಕಡಿಮೆ ಖಚಿತವಾಗಿತ್ತು. ಜಮೀನ್ದಾರರು ಮತ್ತು ಸರ್ಕಾರದ ವಿರುದ್ಧ ನಡೆದಿದ್ದ ಈ ಚಳುವಳಿಗೆ ಎಲ್ಲಾ ಮೂಲೆಗಳಿಂದಲೂ ಬೆಂಬಲದ ಅವಶ್ಯಕತೆ ಇತ್ತು. ಮಲೆನಾಡು ರೈತ ಸಂಘ, ಚಳುವಳಿಯಲ್ಲಿ ಸೋಷಲಿಸ್ಟರೂ ಭಾಗವಹಿಸುವುದನ್ನು ಈ ದೃಷ್ಟಿಯಿಂದ ಸ್ವಾಗತಿಸಬೇಕಿತ್ತು; ಸತ್ಯಾಗ್ರಹದ ಸಂಕಷ್ಟಗಳಿಗೆ ತಮ್ಮ ಜೊತೆ ಹೆಗಲು ಕೊಡುವ ಮಿತ್ರರಿದ್ದಾರೆ ಎಂದು, ಸಂಘದ ಪದಾಧಿಕಾರಿಗಳು ಸಂತೋಷಪಟ್ಟಿದ್ದರೆ ಅದು ಸಹಜವಾಗಿರುತ್ತಿತ್ತು; ಆದರೆ, ಹಾಗಾಗಲಿಲ್ಲ.

* * *

ಕಾಗೋಡಿನ ಒಕ್ಕಲುಗಳು ಈ ಸಂಧಾನಕ್ಕೆ ಅನುಗುಣವಾಗಿ ಕಾಗೋಡು ಬಿಟ್ಟು ಹೊರ ನಡೆಯದಂತೆ ನೋಡಿಕೊಂಡಿದ್ದರಲ್ಲಿ ಸೋಷಲಿಸ್ಟರ ಅದರಲ್ಲಿಯೂ ಗೋಪಾಲಗೌಡರ ಪಾತ್ರ ದೊಡ್ಡದು. ಮೂಕಪ್ಪನವರು ನನ್ನಒಡನೆ ಹೇಳಿದ ಪ್ರಕಾರ ಶಿವಮೊಗ್ಗದಲ್ಲಿ ಈ ಸಂಧಾನ ನಡೆದ ದಿನ ರಾತ್ರಿಯೇ ಆಕಸ್ಮಾತ್ತಾಗಿ ಗೋಪಾಲಗೌಡರು ಇವರಿಗೆ ಸಿಕ್ಕಿದರು. ಸಂಧಾನದ ವಿಷಯ ಎಲ್ಲ ಕೇಳಿ ತಿಳಿದುಕೊಂಡು ಮೂಕಪ್ಪ ಮತ್ತು ಗಣಪತಿಯಪ್ಪ ಇಬ್ಬರಿಗೂ ಚೆನ್ನಾಗಿ ಛೀಮಾರಿ ಹಾಕಿದರು. ಮೂಕಪ್ಪನವರ ಮಾತುಗಳಲ್ಲಿಯೇ ಹೇಳುವುದಾದರೆ, ಗೌಡರು ಸಿಟ್ಟಿನಲ್ಲಿ ಎಂತಹ ದಡ್ಡರಯ್ಯ ನೀವು? ಇವತ್ತು ಕಾಗೋಡಿನಲ್ಲಿ ಒಕ್ಕಲುಗಲ ಭೂಮಿ ಬಿಡಿಸಿದರೆ, ನಾಳೆ ಪ್ರಾಂತ್ಯದಲ್ಲಿ ಎಲ್ಲ ಜಮೀನ್ದಾರರೂ ತಮ್ಮ ಒಕ್ಕಲುಗಳನ್ನು ಹೊಡೆದು ಓಡಿಸ್ತಾರೆ. ಇಷ್ಟು ಗೊತ್ತಾಗಲ್ವಾ? ಸತ್ಯಾಗ್ರಹ ಮುಂದುವರೆಸಿಕೊಂಡು ಹೋಗೋದು ನಿಮ್ಮ ಕೈಲಾಗದಿದ್ದರೆ ನಾವು ನಡೆಸ್ತೀವಿ. ಬೆಂಗಳೂರಿನಿಂದ, ಕೋಲಾರದಿಂದ, ತೀರ್ಥಹಳ್ಳಿಯಿಂದ, ದಾವಣಗೆರೆಯಿಂದ ಜನ ತರಿಸಿ ಸತ್ಯಾಗ್ರಹ ಮಾಡ್ತೀವಿ. ಬೇಕಾದರೆ ತೆಲಂಗಾಣದಿಂದಲೂ ಜನ ತರಿಸ್ತೀವಿಎಂದು ಮುಂತಾಗಿ ಗದರಿಸಿದರಂತೆ.

* * *

ಕಾಗೋಡು ಸತ್ಯಗ್ರಹದ ಉದ್ದಕ್ಕೂ ಸತ್ಯಾಗ್ರಹಿಗಳು ಒಮ್ಮೆಯೂ ಹಿಂಸೆಗೆ ಇಳಿಯಲ್ಲಿಲ್ಲ. ಘೋಷಣೆ ಕೂಗುವುದು, ಮೆರವಣಿಗೆಯಲ್ಲಿ ಗದ್ದೆಗಳಿಗೆ ಹೋಗುವುದು, ಜಮೀನುದಾರರು ಹಾಕಿದ್ದ ಬೇಲಿಗಳನ್ನು ಮುರಿಯುವುದು, ಅವರು ಹಂಗಾಮಿಯಾಗಿ ಜಮೀನಿನಲ್ಲಿ ನೆಟ್ಟಿದ್ದ ಗಿಡಗಳನ್ನು ಕೀಳುವುದು, ಅವರೇ ನೆಲ ಉಳುವುದು ಇವೇ ಚಳುವಳಿಯ ಕಾರ್ಯಕ್ರಮಗಳಾಗಿದ್ವು. ಸೋಷಲಿಸ್ಟರು ಸತ್ಯಾಗ್ರಹಕ್ಕೆ ನೇರ ಇಳಿದ ಮೇಲೂ ಈ ವಿಧಾನದಲ್ಲಿ ಬದಲಾವಣೆ ಆಗಲಿಲ್ಲ. ಯಾವ ಸತ್ಯಾಗ್ರಹಿಯೂ ಎದುರಾಳಿಗಳ ಮೇಲೆ ದೈಹಿಕ ಹಲ್ಲೆ ನಡೆಸಲಿಲ್ಲ. ಗೌಡರ ಮನೆಯ ಮೇಲೆ ಒಂದು ಕಲ್ಲು ಕೂಡ ಬೀಳಲಿಲ್ಲ. ಆದರೆ ಸತ್ಯಾಗ್ರಹಿಗಳ ಮೇಲೆ ಪೋಲಿಸರು ಧಾರಳವಾಗಿ ಹಿಂಸೆ ನಡೆಸಿದರು. ಲಾಠೀ ಹೊಡೆತ, ಬೂಟುಕಾಲಿನ ಒದೆತ, ಮೈಮಲೆ ಎಲ್ಲಿ ಅಂದರೆ ಅಲ್ಲಿ ಹೊಡೆತ, ಜೈಲುವಾಸ ಇವುಗಳನ್ನು ಸತ್ಯಾಗ್ರಹಿಗಳು ಬೇಕಾದಷ್ಟು ಅನುಭವಿಸಿದರು. ಸತ್ಯಾಗ್ರಹ ಕಳೆದು ಮೂವತ್ತು ವರ್ಷಗಳಾದ ಮೇಲೂ ಗಾಯದ ಕಲೆ ಮಾಸದ ದೀವರನ್ನು ನಾನೇ ಕಾಗೋಡಿನಲ್ಲಿ ಕಂಡಿದ್ದೇನೆ. ಸ್ವತಃ ಗೋಪಾಲಗೌಡರ ನೆತ್ತಿಗೇ ಲಾಠಿ ಏಟು ಬಿದ್ದಿತ್ತಂತೆ.

ಬೆಂಗಳೂರು, ಕೋಲಾರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತೀರ್ಥಹಳ್ಳಿ ಮುಂತಾದ ಊರುಗಳಿಂದ ಸೋಷಲಿಸ್ಟರ ತಂಡಗಳು ಬಂದು ಕಾಗೋಡಿನಲ್ಲಿ ಸತ್ಯಾಗ್ರಹ ನಡೆಸಿದವು ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಕೆಲವು ಸೋಷಲಿಸ್ಟರು ಹೋಗಿ ಸತ್ಯಾಗ್ರಹ ನಡೆಸಿದರು. ಸೋಷಲಿಸ್ಟರು ಸಾಗರ, ಹೊಸನಗರ, ಸೊರಬ ತಾಲ್ಲೂಕುಗಳ ಹಳ್ಳಿಗಳಲ್ಲಿ ಸತ್ಯಾಗ್ರಹದ ಬಗ್ಗೆ ವ್ಯಾಪಕವಾದ ಪ್ರಚಾರ ನಡೆಸಿದರು. ಪ್ರಚಾರ ನಡೆಸಿ ಕಾರ್ಯಕತ್ರಲ್ಲಿ ಹೆಚ್ಚಿನವರು ಮೇಲೆ ವಾರೆಂಟು ಗಳಿದ್ದವು: ಆದರೂ ತಲೆಮರೆಸಿಕೊಂಡೇ ಈ ಕೆಲಸ ಮಾಡಿದರು. ಗೋಪಾಲಗೌಡರ ಮೇಲೂ ವಾರೆಂಟ್ ಇತ್ತು. ಆದರೂ ಅವರು ತಾಲ್ಲೂಕಿನ ಮೂಲೆ ಮೂಲೆಗೂ ಸಂಚರಿಸಿ, ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಪ್ರಚೋದಿಸಿದರು. ಗೌಡರು ಕಡೆಗೂ ೧೯೫೧ರಂದು ಪೋಲಿಸರ ಕೈಗೆ ಸಿಕ್ಕಿ ಬಿದ್ಧಾಗ ಚಳುವಳಿ ಹೆಚ್ಚು ಕಡಿಮೆ ತಣ್ಣಗಾಗಿತ್ತು. ಬೆಂಗಳೂರಿನ ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರಾದ ಗರುಡಶರ್ಮ ಬಾ.ಸು. ಕೃಷ್ಣ ಮೂರ್ತಿ, ಶಿವಮೊಗ್ಗದ ಸೀತಾರಾಮ ಅಯ್ಯಂಗಾರ್, ಸಾಗರದ ಗುರುರಾಜ, ಸತ್ಯಾಗ್ರಹದ ಪ್ರಚಾರ ಕಾರ್ಯಕ್ರಮದಲ್ಲಿ ತಲೆಮರೆಸಿಕೊಂಡು ಕೆಲಸ ಮಾಡಿದವರಲ್ಲಿ ಪ್ರಮುಖರು.

* * *

೧೯೫೧ ರ ಜೂನ್ ೧೪ರಂದು ರಾಮಮನೋಹರ ಲೋಹಿಯಾ ಕಾಗೋಡಿಗೆ ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಆ ಬಗ್ಗೆ ಪ್ರಜಾವಾಣಿಯ ತಾ. ೧೬ರ ವರದಿಯ ಪ್ರಕಾರ ಕಾಗೋಡಿನಲ್ಲಿ ಲೋಹಿಯಾರವರ ಮೆರವಣಿಗೆಯಲ್ಲಿ ೨೦೦೦ ಜನರಿದ್ದರು. ಕಾಗೋಡಿನ ದೀವರು, ಈಗಲೂ ಕಾಗೋಡಿಗೆ ಲೋಹಿಯಾ ಬಂದದ್ದನ್ನು ತಮ್ಮ ಜೀವಮಾನದಲ್ಲೇ ತಾವು ಕಂಡಂತಹ ಒಂದು ಅದ್ಭುತವೆಂಬಂತೆ ಬಣ್ಣಿಸುತ್ತಾರೆ; ಲೋಹಿಯಾ ಬಗ್ಗೆ ಆತ ದೇವರೇನೋ ಎಂಬಷ್ಟು ಗೌರವದಲ್ಲಿ ಮತಾಡುತ್ತಾರೆ; ಅಷ್ಟು ದೊಡ್ಡ ಮನುಷ್ಯ ಪಾಪ ಡಿಲ್ಲಿಯಿಂದ ಇಲ್ಲಿಯವರೆಗೆ ಬಂದು ತಮಗೋಸ್ಕರ ಸತ್ಯಾಗ್ರಹ ಮಾಡಿ ಅರೆಸ್ಟ್ ಆದದ್ದು, ಸ್ವತಃ ನೆಹ್ರೂನೇ ಅವರನ್ನು ಬಿಡಿಸಿದ್ದು, ಅವರು ಬಂದ ದಿನ ಕಾಗೋಡಿನಲ್ಲಿ ಸೇರಿದ್ದ ಜನ, ಅವತ್ತು ರಾತ್ರಿ ಪೋಲಿಸರು ಮನೆ ಮನೆಗೆ ನುಗ್ಗಿ ಹೊಡೆದದ್ದು – ಎಲ್ಲವನ್ನೂ ಈಗಷ್ಟೆ ಅವನ್ನು ಕಂಡೆವೇನೋ ಎಂಬಷ್ಟು ತುರ್ತಿನಿಂದ ಉತ್ಸಾಹದಿಂದ ವಿವರಿಸುತ್ತಾರೆ. ಲೋಹಿಯಾ ಬಗ್ಗೆ ಕಾಗೋಡು ದೀವರಂತಹ ಅನಕ್ಷರಸ್ಥ ಮುಗ್ಧ ಬಡ ರೈತರಿಗೆ ಇರುವ ಗೌರವ ಹೃದಯಸ್ಪರ್ಶಿಯಾದದು; ನಿಜಕ್ಕೂ ಇಂತಹ ಜನರೇ ಅಲ್ಲವೆ ಲೋಹಿಯಾ ಬಗ್ಗೆ ಮಾತಾಡಬೇಕಾದವರು? ಆದರೆ ಕಾಗೋಡು ದೀವರಲ್ಲಿ ಯಾರಿಗೂ ತಮ್ಮಂತಹ ಜನಗಳಿಗೆ ಭಾರತದ ಸಂಸ್ಕೃತಿ ಏನು ಮಾಡಿದೆ ಎಂಬುದರ ಬಗ್ಗೆ ಲೋಹಿಯಾ ಹೇಗೆ ಯೋಚಿಸುತ್ತಿದ್ದರು ಎನ್ನುವುದು ಏನೇನೂ ತಿಳಿಯದು. ಅವರಿಗೆ ಅದನ್ನು ತಿಳಿಸುವ ಪ್ರಯತ್ನವನ್ನು ಒಬ್ಬ ಸೋಷಲಿಸ್ಟ್ ಕಾರ್ಯಕರ್ತನು ಮಾಡಿಲ್ಲ. ಸ್ವತಃ ಲೋಹಿಯಾರೇ ನಮ್ಮ ದೇಶದ ಬುದ್ಧಿ ಜೀವಿಗಳ ಚಿಂತನೆ ಜನಸಾಮಾನ್ಯರಿಂದ ದೂರ ಉಳಿದು ಶುಷ್ಕ ಸಿದ್ಧಾಂತಗಳಾಗುವ ದುರಂತದ ಬಗ್ಗೆ ಹೇಳಿದ್ದಾರೆ.

ಜೂನ್ ೧೪ರ ರಾತ್ರಿ ಒಂದು ಘಂಟೆಯ ಸುಮಾರಿಗೆ ಒಂದು ಘಂಟೆಯ ಸುಮಾರಿಗೆ ಸಾಗರ ರೈಲ್ವೆ ನಿಲ್ದಾಣದಲ್ಲಿ ಕಾಗೋಡಿನಿಂದ ವಾಪಸ್ಸಾಗಿದ್ದ ಲೋಹಿಯಾರನ್ನು, ಅವರ ಜೊತೆ ಇದ್ದ ಖಾದ್ರಿ ಶಾಮಣ್ಣ, ಮುಲ್ಕಾ ಗೋವಿಂದರೆಡ್ಡಿ, ಈಶ್ವರಪ್ಪ, ಗುರುರಾಜ್ (ಸಾಗರದ ಒಬ್ಬ ಸೋಷಲಿಸ್ಟ್ ಕಾರ್ಯಕರ್ತ) ಅವರನ್ನೂ ಪೋಲಿಸರು ಬಂಧಿಸಿದರು. ಲೋಹಿಯಾ ಬಂಧನದ ಬಗ್ಗೆ ಮೈಸೂರು ಸರ್ಕಾರ ಕೊಟ್ಟ ಹೇಳಿಕೆ ಪ್ರಕಾರ, (ಡಾ. ಲೋಹಿಯಾರವರು ತಮ್ಮ ಹಿಂದಿನ ಘೋಷಣೆಗೆ ಅನುಸಾರವಾಗಿ, ತಮ್ಮ ಒಂಬತ್ತು ಮಂದಿ ಸಂಗಡಿಗರುಗಳೊಂದಿಗೆ ಮತ್ತು ನೂರಾರು ಮಂದಿ ಇತರರೊಂದಿಗೆ, ಶ್ರೀ ಗುರುವೇಗೌಡರ ಜಮೀನಿನ ಅತಿಕ್ರಮ ಪ್ರವೇಶ ಮಾಡಿ, ಬೇಲಿಯನ್ನು ಕತ್ತರೆಂದೂ, ಕಾನುನು ವಿರುದ್ಧ ಸಭೆ ನಡೆಸಿದರೆಂದು ಪೋಲಿಸು ವರದಿಯಿಂದ ತಿಳಿದುಬರುತ್ತದೆ. ಇದರಿಂದ ಕಾನೂನು ಪಾಲಕರ ಕಣ್ಣಿಗೆ ಬಿದ್ದು ಅವರನ್ನು ಅವರ ಕೆಲವು ಮಿತ್ರರನ್ನು ಗಣನೀಯ ಅಪರಾಧಕ್ಕಾಗಿ ಬಂಧಿಸಲಾಯಿತು. (ಪ್ರಜಾವಾಣಿ ೨೧–೬–೧೯೫೧ ಮತ್ತು ೨೩–೬–೧೯೫೧)

ಪೋಲಿಸರು ಲೋಹಿಯಾರನ್ನು ಸಾಗರದ ಕೋರ್ಟಿನಲ್ಲಿ ಹಾಜರುಪಡಿಸಿ, ರೈಲಿನಲ್ಲಿ ಮೂರನೇ ದರ್ಜೆಯ ಬೋಗಿಯಲ್ಲಿ ಬೆಂಗಳೂರಿಗೆ ಒಯ್ದು ಕ್ರೆಸೆಂಟ್ ಹೌಸಿನಲ್ಲಿದ್ದಾಗ, ಅವರನ್ನು ಸೆಂಟ್ರಲ್ ಜೈಲಿನಲ್ಲಿಟ್ಟರು. ಜೂನ್ ಇಪ್ಪತ್ತರಂದು ಮತ್ತೆ ಸಾಗರದ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಲೋಹಿಯಾರನ್ನು ಹಾಜರುಪಡಿಸಿದರು. ತಮ್ಮ ಕೇಸಿನ ವಿಚಾರಣೆಗೆ ತಮ್ಮನ್ನು ಸಾಗರಕ್ಕೆ ಒಯ್ಯಬಾರದು ಎಂಬ ಲೋಹಿಯಾರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಜಾಮೀನಿನ ಮೇಲೆ ಬಿಡುಗಡೆಯಾಗಲು ಲೋಹಿಯಾ ನಿರಾಕರಿಸಿದರು. ಲೋಹಿಯಾರವರ ಜೊತೆ, ಇಪ್ಪತ್ತಾರು ಜನ ಸತ್ಯಾಗ್ರಹಿಗಳ ಮೇಲೆ ಕೇಸು ಹಾಕಲಾಗಿತ್ತು. ಅದರಲ್ಲಿ ಕೋರ್ಟಿಗೆ ಒಂಬತ್ತು ಜನ ಮಾತ್ರ ಹಾಜರಾಗಿದ್ದರು. “ಮಿಕ್ಕವರು ತಲೆ ತಪ್ಪಿಸಿಕೊಂಡಿದ್ದಾರೆ” ಎಂದು ಪೋಲಿಸರು ವರದಿ ಮಾಡಿದ್ದರಿಂದ ಸಾಗರ ಕೋರ್ಟಿನಲ್ಲಿ, ಇದೇ ಮೊಕದ್ದಮೆಯನ್ನು ಜುಲೈ ಮೂರಕ್ಕೆ ಮುಂದೆ ಹಾಕಿದರು. ಲೋಹಿಯಾರನ್ನು ಮತ್ತೆ ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಕರೆತಂದರು. (ಪ್ರಜಾವಣಿ ೨೧ – ೬ – ೧೯೫೧). ಜೂನ್ ಇಪ್ಪತ್ತೆರಡರಂದು ಸರಕಾರ ಲೋಹಿಯಾರ ಮೇಲೆ ಇದ್ದ ಎಲ್ಲಾ ಕೇಸುಗಳನ್ನು ಹಿಂದಕ್ಕೆ ತೆಗೆದುಕೊಂಡು ಜೈಲಿನಿಂದ ಬಿಡುಗಡೆ ಮಾಡಿತು. ಬಿಡುಗಡೆಯಾದ ಮೇಲೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಲೋಹಿಯಾ, “ಕಾಗೋಡು ಪ್ರಕರಣದಲ್ಲಿ ಭೂಮಿಯ ಒಡೆತನದ ಪ್ರಶ್ನೆ ಅಡಕವಾಗಿರಲಿಲ್ಲವೆಂದೂ, ಅದರ ಸ್ವಾಧೀನ ಪ್ರಶ್ನೆ ಮಾತ್ರವೆಂದೂ, ಅಕ್ರಮವಾಗಿ ಹೊರದೊಡಲ್ಪಟ್ಟಿರುವ ರೈತರಿಗೆ ಭೂಮಿ ಸೇರಿರುವುದರಲ್ಲಿ ಯಾವ ಸಂದೇಹವೂ ಇಲ್ಲವೆಂದೂ, ಮೈಸೂರು ಲ್ಯಾಂಡ್ ರೆವಿನ್ಯೂ ಕೋಡಿನ ೭೯ನೇ ವಿಧಿ ತಮ್ಮ ನಿಲುವನ್ನು ಪೂರ್ಣವಾಗಿ ಸಮರ್ಥಿಸುವುದಾಗಿಯೂ ತಿಳಿಸಿದರು. ವಿವಾದ ಆರಂಭವಾದಾಗ ರೈತರು ಹಾಗೂ ಭೂಮಾಲಿಕರ ಮಧ್ಯೆ ಸರಕರ ತಟಸ್ಥವಾಗಿರಬೇಕಿತ್ತೆಂದೂ, ಸಿವಿಲ್ ದಾವಾದ ಮೂಲಕ ಪ್ರಶ್ನೆ ಇತ್ಯರ್ಥಗೊಳ್ಳುತ್ತಿತ್ತೆಂದೂ ಮುಂದೆಯೂ ಉಲ್ಲಂಘಿಸಬೇಕಾಗಿ ಬರಬಹುದಾಗಿಯೂ ತಿಳಿಸಿ ನ್ಯಾಯ ಹಾಗೂ ಸಮಾಜದ ಅವಶ್ಯಕತೆಗಳಿಗೆ ವಿರುದ್ಧ ವಾಗಿರುವ ಕಾನೂನುಗಳನ್ನು ಉಲ್ಲಂಘಿಸಲೇಬೇಕು ಎಂದು ತಿಳಿಸಿದರು (ಪ್ರಜಾವಣಿ ೨೪ – ೬ – ೧೯೫೧).

ಲೋಹಿಯಾ ಬೆಂಗಳೂರಿನಿಂದ ರಾಂಚಿಗೆ ತೆರಳುವ ಮುನ್ನ, ಸತ್ಯಾಗ್ರಹದಲ್ಲಿ ತಾವು ಭಾಗವಹಿಸಿದ್ದರ ಬಗ್ಗೆ ಹೇಳಿದರು. ಸಣ್ಣದಾಗಲಿ, ದೊಡ್ಡದಾಗಲೀ, ಎಲ್ಲ ರೀತಿಯ ಅನ್ಯಾಯಕೃತ್ಯಗಳನ್ನೂ ವಿರೋಧಿಸಬೇಕೆಂದು ನಾನು ಜೂನ್ ನೆಯ ತಾರೀಖು ರಾಜಘಾಟಿನಲ್ಲಿ ಜನಗಳಿಗೆ ಬೋಧಿಸಿದ ನಂತರ, ಅಂತಹ ಕಾರ್ಯವನ್ನು ನಾನೇ ನಿರ್ವಹಿಸಬೇಕಾದ ಪ್ರಸಂಗ ಬಂದೀತೆಂದು ಸ್ವಲ್ಪವೂ ಯೋಚಿಸಿರಲಿಲ್ಲ.. ಶತಮಾನಗಳಿಂದ ಜಡಾವಸ್ಥೆಗೆ ತಳ್ಳಲ್ಪಟ್ಟಿರುವ ಭೂಮಿ ಕಾಣಿಗಳಿಗೆ ನೇರವಾಗಿ ಸಂಬಂಧಿಸಿದ ಚಳುವಳಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಸುಂದರ ಮೈಸೂರು ನಾಡಿಗೆ ನಾನು ಕೃತಜ್ಞ ಕಾಗೋಡಿನ ಮಾಸ್ತಿಗಳು ಮತ್ತು ಕೆಂಚಪ್ಪಗಳು ಮಾತ್ರವಲ್ಲ ಭಾರತದ ಎಲ್ಲರೂ ತಮ್ಮ ಹಕ್ಕು ತಮಗೆ ದೊರೆಯಬೇಕೆಂದು ಒತ್ತಾಯಪಡಿಸುತ್ತಿದ್ದಾರೆ. ರಾಷ್ಟ್ರ ಬೆಳೆಯಬೇಕಾದರೆ ಇಂತಹವರ ಆತ್ಮಕ್ಕೆ ಸ್ವಾತಂತ್ರ್ಯ ದೊರೆಯಬೇಕು. ಆದರೆ ಕಾಲ ಮಿಂಚಿನ ವೇಗದಿಂದ ಸಾಗುತ್ತಿದೆ. ಅಭಾವ ಹಸಿವುಗಳ ಪ್ರಕೃತ ವರ್ಷದಲ್ಲಿ ಕಾಗೋಡಿನ ಮುನ್ನೂರು ಎಕರೆ ಜಮೀನು ಸಾಗಾಗದೆ ಉಳಿಯಕೂಡದು. ಇನ್ನೊಂದೆರಡು ದಿನಗಳಲ್ಲಿ ಜಮೀನುಗಳನ್ನು ಸಾಗು ಮಾಡಲು ರೈತರಿಗೆ ಅವಕಾಶ ಮಾಡಿಕೊಡಬೇಕು. ನೆರೆಯ ಗ್ರಾಮದವರು ಸಸಿಗಳನ್ನು ಉಚಿತವಾಗಿ ಕೊಡಬೇಕು. ನನ್ನ ಮೇಲಿನ ಮೊಕದ್ದಮೆಯನ್ನು ವಾಪಸು ಪಡೆದು ನನ್ನನ್ನು ಮಾತ್ರ ಬಿಟ್ಟು ನನ್ನಂತಹವರು ಆಪಾದನೆಗಳಿಗೆ ಗುರಿಯಾಗಿರುವ ಇತರರನ್ನು ಸೆರೆಮನೆಯಲ್ಲಿ ಉಳಿಸುವುದು ಪ್ರಜಾಸತ್ತೆಗೆ ಅಥವಾ ಕಾನೂನಿನ ಮುಂದೇ ಎಲ್ಲರೂ ಸಮನೆಂಟ ತತ್ವಕ್ಕೆ ಸಲ್ಲದು (ಪ್ರಜಾವಾಣಿ ೨೭ – ೬ – ೧೯೫೧).

ರೈತರು ಎಂದೂ ತಾವೇ ತಾವಾಗಿ ಸಾಗುವಳಿಯನ್ನು ನಿಲ್ಲಿಸಿರಲಿಲ್ಲ; ಗೇಣಿ ಕೊಡುವುದಿಲ್ಲ. ಎಂದೂ ಹೇಳಿರಲಿಲ್ಲ. ಜಮೀನ್ದಾರರೇ ಅವರನ್ನು ಗದ್ದೆಗೆ ಇಳಿಯದಂತೆ ಮೊದಲು ತಡೆದರು ಎಂಬ ಸತ್ಯವನ್ನು ಸರ್ಕಾರ ಸಾರ್ವಜನಿಕರಿಗೆ ತಿಲಿಸಲೇ ಇಲ್ಲ.

ಲೋಹಿಯಾ ಕಾಗೋಡಿಗೆ ಬಂದ ದಿನ. ಅಲ್ಲಿಯ ಒಕ್ಕಲುಗಳ ನೆನಪಿನಲ್ಲಿ ಮಾಸದೆ ಇರುವುದಕ್ಕೆ ಇನ್ನೂ ಒಂದು ಕಾರಣವಿದೆ. ದಿನ ಪೋಲಿಸರು ಕಾಗೋಡಿನಲ್ಲಿ ನಡೆಸಿದಷ್ಟು ಹಿಂಸಾಚಾರ ಸತ್ಯಾಗ್ರಹದಲ್ಲಿ ಹಿಂದೆಂದೂ ನಡೆದಿರಲಿಲ್ಲವಂತೆ. ಲೋಹಿಯಾ ಕಾಗೋಡಿನಿಂದ ತೆರೆಳಿದ ಮೇಲೆ ಪೋಲಿಸರು ಕಾಗೋಡಿನಲ್ಲಿ ಸಿಕ್ಕ ಸಿಕ್ಕವರಿಗೆಲ್ಲ ಲಾಠಿಯಲ್ಲಿ ಬಾರಿಸಿದರಂತೆ, ದೀವರ ಕೇರಿಯಲ್ಲಿಯ ಆ ರಾತ್ರಿ, ಪೋಲಿಸರು ಮನೆ ಮನೆಗೂ ನುಗ್ಗಿ, ಹೆಂಗಸರು ಮಕ್ಕಳು, ಮುದುಕರು ಎಂದು ನೋಡದೆ ಹೊಡೆದರು. ಗಂಡಸರು ರಾತ್ರೋರಾತ್ರಿ, “ಪಂಚೇಲಿ ಹೇಲು ಕಟ್ಟಿಕೊಂಡುಹಳ್ಳಿಯನ್ನು ಆವರಿಸಿದ್ದ ಕಡಿಗೆ ಓಡಿ ಹೋದರು ಎಂದು ಒಬ್ಬ ದೀವರವ ನನಗೆ ಹೇಳಿದ.

* * *