ಮಲೆನಾಡಿನ ಮಹಾತ್ಮ
ಸಿ.ಬಿ. ಚಂದ್ರಶೇಖರ್

ಸತ್ಯಾಗ್ರಹ ತತ್ತರಿಸಿ ನಿಂತು ಹೋಗಿತ್ತು; ಸರ್ಕಾರ ಡಾ. ಲೋಹಿಯಾ ಅವರನ್ನು ಬಿಡುಗಡೆ ಮಾಡಿತ್ತು. ಅವರು ಅಮೇರಿಕಾಕ್ಕೆ ಹಾರಿದ್ದರು. ಇತ್ತ ರೈತ ಸತ್ಯಾಗ್ರಹಿಗಳ ಮೇಲೆ ಪೋಲೀಸರ ದಬ್ಬಾಳಿಕೆ, ಹಿಂಸೆ ಹೆಚ್ಚಿತ್ತು. ಭಯದ ವಾತಾವರಣವನ್ನು ಅವರು ಅಲ್ಲಿ ನಿರ್ಮಿಸಿದ್ದರು. ಸಾಗರದ ಗಂಧದ ಕೋಠಿಯ ಜೈಲುಗಳು ಭರ್ತಿಯಾಗಿದ್ದುದರಿಂದ, ಕಾಗೋಡಿನಲ್ಲಿ ಸತ್ಯಾಗ್ರಹ ಮಾಡಲು ಯಾರೇ ಬರಲಿ, ಅವರನ್ನು ಕ್ರೂರವಾಗಿ ಥಳಿಸುವುದು; ಪೊಲೀಸ್ ವ್ಯಾನಿಗೆ ಕುರಿಗಳಂತೆ ತುಂಬಿಕೊಂಡು ಹೋಗಿ, ದೂರದ ಕಾಡುಗಳಲ್ಲಿ ಅವರನ್ನು ಮನಸೋ ಇಚ್ಛೆ ಚಚ್ಚಿ ಅಲ್ಲೇ ಬಿಟ್ಟು ಬರುವುದು; ಇಷ್ಟನ್ನು ಪೊಲೀಸರು ಪೂರ್ವಯೋಜಿತವಾಗಿ ಮಾಡುತ್ತಿದ್ದರು. ಜಮೀನುದಾರರ ಗೂಂಡಾ ಪಡೆಯ ಪಾತ್ರ, ಪೊಲೀಸರ ಪಾತ್ರಕ್ಕಿಂತಲೂ ಅದಿಕವಾಗಿತ್ತು. ರೈತರು ಮತ್ತು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದವರು. ಅವರಿಗೆ ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ದಾವಣಗೆರೆಯ ಹುಡುಗರಿಗೆ ಅತ್ಯಂತ ಕ್ರೂರವಾಗಿ ಥಳಿಸಿದ್ದರು. ಅವರಲ್ಲೊಬ್ಬನಾಗಿದ್ದ ರೇವಣಸಿದ್ಧಪ್ಪ ಎಂಬ ಯುವಕನಿಗೆ ಕರುಳು ಹೊರಕ್ಕೆ ಬರುವಂತೆ ಹೊಡೆದಿದ್ದರು. ಅವನು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿದ್ದ. ಇದೆಲ್ಲವನ್ನೂ ನೋಡಿ ಬಂದ ಬಳಿಕ ದೊಡ್ಡ ವೀರಾಗ್ರಣಿಗಳಂತೆ ನಮ್ಮೊಡನೆ ಬೆಂಗಳೂರಿನಿಂದ ಜೊತೆಗೆ ಬಂದಿದ್ದ ಇಬ್ಬರು ವೃತ್ತಿರಾಜಕಾರಣಿಗಳೂ ತಮಗೆ ಟೆಲಿಗ್ರಾಂ ಬಂದವೆ. ತುರ್ತಾಗಿ ಹಿಂತಿರುಗಬೇಕಾಗಿದೆ ಎಂದು ಹೇಳಿ, ಅಲ್ಲುಕಿರಿದು, ಕೈ ಮುಗಿದು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕಂಬಿ ಕಿತ್ತರು! ವಿದ್ಯಾರ್ಥಿಗಳಿಗೆ, ಯುವಕರಿಗೆ ಕೆಲವು ರಾಜಕಾರಣಿಗಳು ಇದೇ ರೀತಿ ಹುರಿದುಂಬಿಸಿ ಮುಂದಕ್ಕೆ ತಳ್ಳಿ, ತಾವು ಹಿಂದೆ ಉಳಿದು ಫಲಿತಾಂಶಕ್ಕಾಗಿ ಕಾಯುವುದು ಸಾಮಾನ್ಯ ನಡವಳಿಕೆಯೇ ಆಗಿದೆ. ಆದರೆ, ಇದು ಅಂದು ನನಗೆ ಆದ ಮೊದಲ ಅನುಭವ.

ಕಾಗೋಡು ನಿಶ್ಚೇಷ್ಠಿತವಾಗಿದೆ. ಅಲ್ಲಿ ಯಾವ ಚಳುವಳಿಯೂ ನಡೆಯುತ್ತಿಲ್ಲ. ಎನ್ನುವೂ ಶಾಂತವಾಗಿದೆ. ಗಲಭೆ ನಡೆಸಿದ್ದ ಕೆಲವು ಪುಂಡರು ಮಾತ್ರ ಜೈಲಿನಲ್ಲಿದ್ದಾರೆ. ಉಳಿದವರೆಲ್ಲಾ ಡಾ. ಲೋಹಿಯಾ ಅವರಂತೆ ಬಿಡುಗಡೆಯಾಗಿದ್ದಾರೆ. ಕಾಗೋಡು ಸತ್ಯಾಗ್ರಹ ನಿಂತು ಹೋಗಿದೆ. ಎಲ್ಲಾ ಶಾಂತವಾಗಿದೆ ಎನ್ನುವ ಸುಳ್ಳು ಸಮಾಚಾರವೇ ಪತ್ರಿಕೆಗಳಲ್ಲಿ ಬರುತ್ತಿತ್ತು. ಸರ್ಕಾರದ, ಜಮೀನ್ದಾರರ ಹುನ್ನಾರವೇ ಇದಾಗಿತ್ತು. ಹೀಗಿರುವಾಗ ಅಲ್ಲಿನ ನಿಜ ಪರಿಸ್ಥಿತಿ ಅರಿಯಲು, ಕರ್ನಾಟಕ ಪತ್ರಕರ್ತರ ಒಂದು ಪ್ರಾತಿನಿಧಿಕ ತಂಡದೊಡನೆ, ಆಗ ಮೈಸೂರು ಸಂಸ್ಥಾನದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶ್ರೀ ಕೆ. ಹನುಮಂತಯ್ಯನವರು ಕಾಗೋಡು ಗ್ರಾಮಕ್ಕೆ ೨೬..೧೯೫೧ರಂದು ಭೇಟಿ ನೀಡುತ್ತರೆಂಬ ಸುಳಿವು ನಮಗೆ ದೊರೆಯಿತು.

ಸರ್ಕಾರದ ಅಪಪ್ರಚಾರವನ್ನು ಸುಳ್ಳು ಎಂದು ಇಡೀ ಜಗತ್ತಿಗೆ ಎತ್ತಿ ತೋರಿಸಲು ಇದಕ್ಕಿಂತ ಉತ್ತಮ ಅವಕಾಶ ಇನ್ನು ಒಂದು ಇರಲಿಲ್ಲ. ಅಂದು ೧೮.೪.೧೯೫೧ರಂದು  ಸತ್ಯಾಗ್ರಹ ಆರಂಭವಾದ ದಿನದಂದು ನಡೆದಂತೆ; ಸಹಸ್ರಾರು ರೈತರು ತಂಡತಂಡವಾಗಿ ಬಂದು ಸತ್ಯಾಗ್ರಹ ಮಾಡುವಂತೆ ಏರ್ಪಡಿಸುವುದು ಎಲ್ಲರ ಮಹದಾಸೆ ಆಗಿತ್ತು. ಈ ಆಸೆಯ ಈಡೇರಿಕೆಗೆ ಕೆಲವು ದಿನಗಳು ಉಳಿದಿದ್ದವು.

ಆದುದರಿಂದ ರೈತರನ್ನು ಸತ್ಯಾಗ್ರಹಕ್ಕೆ ಪ್ರೇರೇಪಿಸಿ, ಹುರಿದುಂಬಿಸಿ, ಕಳಿಸುತ್ತಿದ್ದ ಜೈಲಿನ ಹೊರಗಿದ್ದ ಕೆಲವು ಕಾರ್ಯಕರ್ತರು ವಿಶೇಷವಾಗಿ ಶ್ರಮಿಸತೊಡಗಿದರು. ಇವರುಗಳಲ್ಲಿ ಶಾಂತವೇರಿ ಗೋಪಾಲಗೌಡರು, ಚಿತ್ರದುರ್ಗದ ಟಿ. ಎನ್. ಗಂಡುಗಲಿ, ಗರುಡಶರ್ಮ, ಭಾ.ಸು. ಕೃಷ್ಣ ಮೂರ್ತಿ, ಬರಸಿನ ದ್ಯಾವಪ್ಪ, ಮಂಡಗಳಲೆ ರಾಮನಾಯ್ಕ, ಹೆಚ್. ಗಣಪತಿಯಪ್ಪ, ಸವಾಜಿ ಬೀರ ನಾಯ್ಕ (ಇವರು ಶ್ರೀ ಕಾಗೋಡು ತಿಮ್ಮಪ್ಪನವರ ಪಿತಾಮಹರು) ಮರಿಯಪ್ಪ ಇವರುಗಳು ಪ್ರಮುಖರು. ಮಸ್ತಿಯಮ್ಮ ಮೊದಲಾದ ಹತ್ತಾರು ಸ್ತ್ರೀ ಕಟ್ಟಾಳುಗಳೂ ಇವರ ಜೊತೆಗಿದ್ದರು. ನನಗಿದ್ದ ಅಲ್ಪಕಾಲಾವಧಿಯಲ್ಲಿ ಇವರುಗಳನ್ನೆಲ್ಲಾ ಸಂಪರ್ಕಿಸುವುದು ಅಸಾಧ್ಯವೇ ಆಗಿತ್ತು. ಕಗ್ಗಾಡು, ಹರಿಯುವ ತೊರೆಗಳು, ಬೀಳುವ ಮಳೆ, ಪೊಲೀಸರ ಹದ್ದಿನ ಕಣ್ಣು ಇವೆಲ್ಲವುಗಳನ್ನು ಎದುರಿಸಿ ಸಂಚಾರ ಮಾಡಬೇಕಾಗಿತ್ತು. ನಾನು ಮತ್ತು ನನ್ನ ತಂಡದವರಿಗೆ ೨೬..೫೧ ದೊಡ್ಡ ದಿನ.

ಸತ್ಯಾಗ್ರಹ ನಡೆಯುತ್ತಿದ್ದ ಕಾಗೋಡು ಗ್ರಾಮದ ಸುತ್ತ ಪೊಲೀಸರು ಮತ್ತು ಗೂಂಡಾ ಪಡೆಯ ಸರ್ಪಕಾವಲನ್ನು ಹಾಕಲಾಗಿತ್ತು. ಅದ್ದರಿಂದ ನಾವು ಸದ್ದುಗದ್ದಲಗಳಿಲ್ಲದೆ ಅಲ್ಲಿಗೆ ನುಸುಳಿ ಹೋಗಿ ವಿವಿಧೆಡೆ ಅವಿತುಕೊಂಡು, ನಿರ್ಣಾಯಕ ಸಮಯದಲ್ಲಿ ಹೊರಬಂದು ಸತ್ಯಾಗ್ರಹ ಮಾಡಬೇಕಾಗಿತ್ತು. ಇಲ್ಲದಿದ್ದರೆ ನಮ್ಮ ಪಡೆ ಕಾರ್ಯಾಚರಣೆಗೆ ಇಳಿಯುವ ಮೊದಲೇ ಪೊಲೀಸ್ ಮತ್ತು ಪುಂಡರ ಕೈಗೆ ಸಿಕ್ಕಿಬಿದ್ದು, ನಮ್ಮ ಕಾರ್ಯಾಚರಣೆಯ ಮೂಲ ಉದ್ದೇಶವೇ ನೆರವೇರದಂತೆ ಅಗಿ ಎಲ್ಲಾ ವಿಫಲವಾಗುತ್ತಿತ್ತು.

ಹಳ್ಳಿಯಲ್ಲಿ ಗ್ರಾಮಸ್ಥರು ಇರಲಿಲ್ಲ. ಪೊಲೀಸರು, ಗೂಂಡಾಗಳಿಗೆ ಹೆದರಿ ಎಲ್ಲರೂ ಕಾಡುಬಿದ್ದಿದ್ದರು. ನಾನು ಮಂಜುನಾಥನ ಜೊತೆ ಅವರಿದ್ದ ಗುಪ್ತಸ್ಥಳಕ್ಕೆ ಹೊರಟೆ. ಗದ್ದೆಯ ತೆವರಿಗಳ ಮೇಲಿನ ಕಾಲುದಾರಿಯಲ್ಲಿ ನಡೆಯುತ್ತಾ, ನಡೆಯುತ್ತಾ ಇದ್ದಂತೆ ಹಠಾತ್ತನೆ ಜುಳು – ಜುಳು ಎಂದು ವೇಗವಾಗಿ ಆಳೆತ್ತರದ ಕೆಳಗೆ ಹರಿಯುತ್ತಿದ್ದ ಹಳ್ಳ ಎದುರಾಗುತ್ತಿತ್ತು. ೧೦ ಅಡಿ ಅಗಲದ ಆ ಹಳ್ಳದ ಮೇಲೆ ಒಂದು ಅಡಿಕೆ ಮರವನ್ನೇ ಸೇತುವೆಯಾಗಿ ಇಟ್ಟಿದ್ದರು. ಅದರ ಮೇಲೆ ಜೋಕಾಲಿ ಹೊಡೆಯುತ್ತಾ ನಡೆದು ದಾಟಬೇಕಾಗಿತ್ತು. ನಡೆಯುತ್ತಾ ನಡೆಯುತ್ತಾ ಮಧ್ಯಕ್ಕೆ ಬಂದಾಗ ಆ ಅಡಿಕೆ ಪಟ್ಟೆ ಮೇಲೆ ಕೆಳಗೆ ತೂಗಾಡಲು ಪ್ರಾರಂಭಿಸುತ್ತಿತ್ತು. ಸ್ವಲ್ಪ ಏನಾದರೂ ಎಚ್ಚರ ತಪ್ಪಿದರೆ ಗೋವಿಂದ! ಸೇತುವೆಯಿಂದ ಕೆಳಕ್ಕೆ ನೀರಿಗೆ ಬಿದ್ದು, ಫಜೀತಿ ಪಟ್ಟು ಮೇಲೆದ್ದು ರಸ್ತೆಗೆ ಬರಬೇಕಾಗಿತ್ತು. ಇಂಥ ನಾಲ್ಕಾರು ತೂಗಾಡುವ ಸೇತುವೆಗಳನ್ನು ದಾಟಿ ಗುಡ್ಡದ ಬಯಲನ್ನು ಸೇರಿದೆವು ಅಲ್ಲಿನ ದೃಶ್ಯ ಅತ್ಯಂತ ರಮ್ಯವಾಗಿತ್ತು.

ಹೆಂಗಳೆಯರು ಕಲ್ಲು ದುಂಡಿಗಳನ್ನಿಟ್ಟು ಒಲೆ ಹೂಡಿ ಮಡಿಕೆ – ಕುಡಿಕೆಗಳಲ್ಲಿ ಅಡಿಗೆಗೆ ಸಿದ್ಧರಾಗುತ್ತಿದ್ದರು. ಗಂಡಸರು ಗುಂಪು ಗುಂಪಾಗಿ ಕುಳಿತು ಕಾಫಿಯ ಚೆಂಬುಗಳನ್ನು ಇಟ್ಟುಕೊಂಡು, ಬೀಡಿ ಸೇದುತ್ತಲೋ ತಂಭಾಕು ಹಾಕುತ್ತಲೋ ಹರಟುತ್ತಿದ್ದರು. ತಮ್ಮ ಕೋವಿಯ ನಳಿಕೆಗೆ ಚರೆ – ಮದ್ದು ತುಂಬಿ ಶಿಕಾರಿಗೆ ಸಿದ್ಧವಾಗುತ್ತಿದ್ದರು. ಅವರೆಲ್ಲರೂ ಕುತೂಹಲದಿಂದ ನಮ್ಮನ್ನು ನೋಡಿ, ನಾವು ಯಾರೆಂದು ಸೌಜನ್ಯದಿಂದ ವಿಚಾರಿಸಿ ಕೊಂಡರಾದರೂ, ಯಾರೂ ನಮ್ಮೊಂದಿಗೆ ಸತ್ಯಾಗ್ರಹಕ್ಕೆ ಬರಲು ಒಪ್ಪಲಿಲ್ಲ.

ಸಾವ್ಯಾರನ ಕಡೆ ಬಡ್ಡೀ ಮಕ್ಕಳಿಂದ ಬಡಿಸಿಕೊಳ್ಳಾಕೆ ನಾವೇನು ದನಗಳಾ? ನಮಗೂ ಮೀಸೆ ಇಲವಾ? ಕೈನಗೆ ಇದು ಇಲ್ವಾ?” ಎಂದು ಕೋವಿ ತೋರಿಸುತ್ತಿದ್ದರು. “ಏಟು ತಿನ್ನಾಕೆ ನಾವು ಬರಾಕಿಲ್ಲ ಹೋಗಿ. ಬೇಕದ್ರೆ ನಡೀರಿ ಆ ಬೋಳೀಮಕ್ಕಳ ಸದ್ದು ಅಡಗಿಸಿ ಬರೋವ. ಅವನ ಮನೆಗೆ ಬೆಂಕಿ ಮುಟ್ಟಿಸಿ, ಅವನ ಕಡೆಯಾರ್ಗೆ ಕೋವಿ ರುಚಿ ತೋರಿಸಿ, ನಮ್ಮ ಹಳ್ಳಿಗೆ ನಾವು ಹಿಂದಕ್ಕೆ ಹೋಗಾನ. ಇದ್ದಾಕೆ ಈ ಹೆಣ್ಣು ಬಾಳು!” ಎಂದು ನಮ್ಮನ್ನು ಛೇಡಿಸಿದರು.

ಸುಮಾರು ಹತ್ತು – ಹನ್ನೊಂದು ಗಂಟೆಯಾಗಿತ್ತು. ಸುತ್ತಮುತ್ತಲಿನ ಕಾಡು ಮೇಡುಗಳಿಂದ ಇನ್ನೂ ನೂರಾರು ರೈತರು ಇಲ್ಲಿಗೆ ಬಂದು ಸೇರಿದರು. ಕೆಲವರ ಕೈಯಲ್ಲಿ ಕೋವಿಗಳಿದ್ದವು. ಮಲೆನಾಡಿನ ರೈತರು ಸಾಮಾನ್ಯವಾಗಿ ಒಂದು ದೊಡ್ಡ ಮಚ್ಚು ಮತ್ತು ಕೋವಿಗಳು ಇಲ್ಲದೆ ಮನೆ ಬಿಟ್ಟು ಹೊರಬೀಳುವುದೇ ಇಲ್ಲ. ಅದೊಂದು ಕಾಲಿನ ಮೆಟ್ಟಿನಂತೆ. ಕೈಗೋವಿ ಇರಲೇಬೇಕು. ಅವರನ್ನು ಕಂಡು ನನಗೆ ಆಗ ಹತ್ತಿ ಉರಿಯುತ್ತಿದ್ದ ತೆಲಂಗಾಣ ರೈತ ಚಳುವಳಿ ನೆನಪಿಗೆ ಬಂತು. ಸ್ವಲ್ಪ ಎಚ್ಚರತಪ್ಪಿ ಅಹಿಂಸಾತ್ಮ ನಿಯಂತ್ರಣ ಸಡಿಲ ಮಾಡಿದ್ದರೆ ಸಾಕ; ತೆಲಂಗಾಣ ರೈತರ ಹಿಂಸಾಕಾಂಡ ಮೀರಿಸುವ ಮಾರಣಃಓಮ ಮೈಸೂರಿನ ಮಲೆನಾಡಿನಲ್ಲಿ ನಿರ್ಮಾಣವಾಗುತ್ತಿತ್ತು. ಅಷ್ಟರಲ್ಲಿ ಹೊತ್ತು ಮೀರಿತ್ತು. ಎಲ್ಲಿಂದಲೋ ಹತ್ತಾರು ಮಂದಿ ಕೋವಿಧಾರಿ ಬೆಂಬಲಿಗರೊಡನೆ ಒಬ್ಬ ಗಡ್ಡದ ವ್ಯಕ್ತಿ ಅಲ್ಲಿಗೆ ಬಂದ. ಅವನೊಬ್ಬ ನಿಗೂಢ ವ್ಯಕ್ತಿ. ಅವನೊಡನೆ ಹತ್ತಾರು ದೊಂದಿಗಳ ಕಂತೆಯೂ ಇತ್ತು. ಒಂದೆರಡು ಸೀಮೆ ಎಣ್ಣೆ ಸೀಸೆಗಳೂ ಇದ್ದವು. ಅವನ ಒಳ ಉಡುಪಿನಲ್ಲಿ ಒಂದು ರಿವಾಲ್ವಾರ್ ಇದ್ದದ್ದೂ ತೋರಿ ಬಂತು.

ಮಂಜುನಾಥ ತೀವ್ರ ನಿರಾಶನಾಗಿದ್ದ, ನನ್ನನ್ನು ಕೈ ಹಿಡಿದು ನನ್ನ ಸಂಗಾತಿಗಳಿದ್ದೆಡೆಗೆ ಕರೆದೊಯ್ಯುತ್ತಾದಾರಿಯುದ್ದಕ್ಕೂ ಹೇಳಿದ. ಅವನು ಘಟ್ಟದ ಕೆಳಗಿನ ಕುಂದಾಪುರ ತಾಲ್ಲೂಕಿನ ಒಬ್ಬ ಕಾರ್ಯಕರ್ತ. ಇಲ್ಲಿನ ಪ್ರದೇಶವನ್ನು ಅವನು ಚೆನ್ನಾಗಿ ಅರಿತಿದ್ದ. ಅವನು ಹೇಳ ತೊಡಗಿದ:

ಇವರೆಲ್ಲಾ ಬರೀ ರೈತರಲ್ಲ, ಸ್ವಲ್ಪಮಟ್ಟಿಗೆ ಕ್ಷತ್ರಿಯ ಗುಣವೂ ಮನೆ ಮಾಡಿದೆ. ಹಿಂದೆ ಕೆಳದಿಯ ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇವರ ಹಿರೀಕರು ಅಲ್ಲಿನ ಪದ್ಧಾತಿ ದಳದ ಸೈನಿಕರಾಗಿದ್ದರು. ‘ಹಳೇಪೈಕ’ ದವರು ಎಂದು ಅವರನ್ನು ಕರೆಯುತ್ತಾರೆ. ಅವರಿಗೆ ಈಗ ಬೇಸಾಯಕ್ಕಿಂತ ಒಲೀಸರಿಗೆ ಚಳ್ಳೆಹಣ್ಣು ತಿನ್ನಿಸುವುದೇ ಬಲುಪ್ರಿಯವಾದ ಉದ್ಯೋಗವಾಗಿದೆ. ಇವರ ಮುಖ್ಯದಂಥೆ ಕಳ್ಳಭಟ್ಟಿ, ಅಲ್ಲಿ ನೋಡಿ!” ಎಂದು ಒಂದು ಪೊದೆಯ ಅಂತರಾಳದಲ್ಲಿ ಅಡಗಿಸಿದ್ದ ಮಾಡಿಕೆ, ಪೈಪು, ಮುಚ್ಚಳ, ಬೊಂಬುಗಳನ್ನು ತೋರಿಸಿದ

ನನಗೆ ದೊರೆತಿದ್ದ ಸಂಗಾತಿ ಮಂಜುನಾಥ್ ಒಬ್ಬನೇ. ಈಗ ಕಾಗೋಡಿನ ಸುತ್ತಮುತ್ತಣ ಗ್ರಾಮಗಳಲ್ಲಿನ ಗೇಣಿದಾರರುಗಳನ್ನು ನಾನು ಅವನೋಡನೆ ಕಂಡಿದ್ದರೂ ಅವರು ದಂಗೆ ಎದ್ದಿದ್ದರು. ಅಹಿಂಸಾತ್ಮಕ ಸತ್ಯಾಗ್ರಹ ಅವರನ್ನು ಭ್ರಮನಿರಸನಗೊಳಿಸಿತ್ತು. “ಉಳುವವನೇ ನೆಲದೊಡೆಯ!”, “ಕಾಗೋಡು ಸತ್ಯಾಗ್ರಹಕ್ಕೆ ಜಯವಾಗಲಿ”, “ಇಂಕಿಲಬ್ ಜಿಂದಾಬಾದ್” ಎಂದು ಘೋಷಣೆಗಳನ್ನು ಕೂಗುವುದು, ಬಿದಿರು ಬೇಲಿ ಕಿತ್ತು ಒಡೆಯನ ಗದ್ದೆಗೆ ನುಗ್ಗುವುದು, ನೇಗಿಲಿಂದಲೋ, ತೆಂಗಿನ ಮಟ್ಟೆಗಳಿಂದಲೋ ಆ ಗದ್ದೆ ಉಳುವ ನಾಟಕವಾಡಲು ಹೋಗುವುದು. ಒಡೆಯನ ಕಡೆಗೆ ಸೇರದೇ ಇದ್ದ ಆ ಊರಿನ ಹೊಲೆಮಾದಿಗರಿಂದ ದೊಣ್ಣೆಗಳಿಂದ ಒದೆ ತಿನ್ನುವುದು, ಪೊಲೀಸರ ಬೂಟುಗಾಲು ಮತ್ತು ಲಾಠಿಗಳಿಂದ ಒದೆ ತಿನ್ನುವುದು. ಗದ್ದೆ ಬಿಟ್ಟು ಊರು, ಕೇರಿ – ಮನೆ – ಮಠ ಸಿಕ್ಕುವವರೆಗೂ ಹೊಡೆಸಿಕೊಳ್ಳುವುದು. ವಾಚಾಂಗೋಚರವಾಗಿ ಬೈಯಿಸಿಕೊಳ್ಳುವುದು. ರಾತ್ರಿಯೇನಾದರೂ ಮನೆಯಲ್ಲಿ ಮಲಗಿದ್ದರೆ ಆಗಲೂ ಪೊಲೀಸರಿಂದ, ಗೂಂಡಾಗಳಿಂದ ಹಲ್ಲೆಗೆ ಈಡಾಗುವುದು. ಇದು ಯಾವ ಸೀಮೆಯ ಹೋರಾಟ? ಯಾವ ಸೀಮೆಯ ಸತ್ಯಾಗ್ರಹ? ಅಹಿಂಸೆ ಹೆಸರಿಗೆ ಮಾತ್ರ! ನಡೀತಿರೋದು ಬರೀ ಹಿಂಸೆ, ದೌರ್ಜನ್ಯ! ನಮಗೆ ಇದನ್ನು ಸಹಿಸಿಕೋಂಡು ಸಾಕಾಗಿದೆ. ಇನ್ನು ನವು ಈ ರೀತಿ ಕೈ ಕಟ್ಟಿಸಿಕೊಂಡು, ದನದ ರೀತಿ ಚಚ್ಚಿಸಿಕೋಳ್ಳೋದಿಲ್ಲ. ನಾವೋ ನಮ್ಮ ಅಪ್ಪನಿಗೆ ಹುಟ್ಟಿದ ಮಕ್ಕಳು! ಒಂದು ಕೈ ತೋರಿಸೇ ಬಿಡತೇವೆ!” ಎಂದು ಕೋವಿ, ಕುಡುಗೋಲು ಝಳಪಿಸುತ್ತಿದ್ದವರೇ ಎಲ್ಲರೂ. ಇವರನ್ನು ತಿದ್ದಿ, ಅಹಿಂಸಾತ್ಮಕ ಹೋರಾಟಕ್ಕೆ ಕರೆದೊಯ್ಯುವುದು ಬ್ರಹ್ಮನಿಂದಲೂ ಅಸಾಧ್ಯವಾದ ಕೆಲಸವಾಗಿತ್ತು.

“ನೋಡಪ್ಪ! ಇಲ್ಲೇ ಸಿಕ್ಕಿಬಿಟ್ಟರು ಇವರೆಲ್ಲಾ” ಎಂದರು ಯಾರೋ ಒಬ್ಬರು. ಧ್ವನಿ ಎಲ್ಲೋ ಕೇಳಿದ ಧ್ವನಿಯ ಹಾಗಿತ್ತು. ನಾನು ಹಿಂತಿರುಗಿ ನೋಡಿದೆ:

ಗೋಪಾಲಗೌಡರು ಇನ್ನೂ ನಾಲ್ಕು ಜನರೊಡನೆ ನಮ್ಮ ಕಡೆಗೆ ಬರುತ್ತಿದ್ದರು. ಅವರೊಡನೆ ಇದ್ದವರೆಲ್ಲರೂ ಸ್ಥಳೀಯ ರೈತರು ವಂದನೆ – ಪ್ರತಿವಂದನೆ ಸಲ್ಲಿಸಿದೆವು. ಗೌಡರು ನನ್ನನ್ನು ಸಂತಸದಿಂದ ವಿಚಾರಿಸಿದರು. “ನೀವು ಬಂದ ಸುದ್ದಿ ತಿಳೀತು. ನೀವೆಲ್ಲಾ ಎಲ್ಲಿ ಕಣ್ಮರೆಯಾಗಿಬಿಟ್ಟಿರಿ?” ಎಂದು ಚಿಂತಿಸ್ತಿದ್ದೆ. ಎಲ್ಲಿದ್ದೀರಿ? ಎಷ್ಟು ಜನ ಇದ್ದೀರಿ? ನೀವು ಹೇಗೆ ಇಲ್ಲಿಗೆ ಬಂದಿರಿ? ಎಂದೆಲ್ಲಾ ಅತ್ಯಂತ ಪ್ರೀತಿ ವಾತ್ಸಲ್ಯಗಳಿಂದ ವಿಚಾರಿಸಿದರು.

ನಾನು ಅವರಿಗೆ ಎಲ್ಲವನ್ನೂ ವಿವರಿಸಿದೆ. ಅವರು ನಮ್ಮ ಮಾತು ಕೇಳಿ ಸಮಾಧಾನದಿಂದ ನಿಟ್ಟುಸಿರುಬಿಡುತ್ತಾ ನನ್ನ ಭುಜ ತಟ್ಟಿದರು. ತಮ್ಮ ಜೊತೆಯಲ್ಲಿದ್ದ ಸಂಗಾತಿಗಳತ್ತ ತಿರುಗೆ ಹೇಳಿದರು.

“ನೋಡ್ರಯ್ಯ ಇವರು ಚಂದ್ರಶೇಖರ್ ಅಂತ ನನ್ನ ಗೆಳೆಯ. ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು. ಬೆಂಗಳೂರಿನಿಂದ ಇಲ್ಲಿಗೆ ಸತ್ಯಾಗ್ರಹಕ್ಕಾಗಿ ಬಂದ್ದಾರೆ. ಜೊತೆಗೆ ಕೋಲಾರದ ಗಣಿ ಹಾಗೂ ಕೆ.ಜಿ.ಎಫ್ ಫ್ಯಾಕ್ಟರಿಗಳಿಂದಲೂ ಕೆಲಸದವರನ್ನು ಕರ್ಕೊಂಡು ಬಂದಿದ್ದಾರೆ. ಅವರು ೧೬ ಜನ ಬಂದಿದ್ದಾರೆ. ನಮ್ಮ ಆಪತ್ಭಾಂಧವರಾಗಿ ಬಂದಿದ್ದಾರೆ. ನಾನು ನಿಮ್ಮ ಅಧ್ಯಕ್ಷ ಮೂಕಪ್ಪನಿಗೆ ಶಿವಮೊಗ್ಗದಲ್ಲಿ ಏನು ಹೇಳಿದ್ದೆ? ಕಾಗೋಡಿನ ಜಮೀನು ಬಿಟ್ಟು ಕೆಂಜಿಗಾಪುರಕ್ಕೆ ವಲಸೆ ಹೋಗೋದು ಬ್ಯಾಡ್ರಯ್ಯ ಅಂತ. ನಾನು ಹಾಗೇಕೆ ಹೇಳಿದ್ದೆ? ಎಂದು ನೀವು ತಿಳ್ಕೊಳ್ಳಿ. ಮೊಟ್ಟ ಮೊದಲನೆಯದಾಗಿ ಇಲ್ಲಿ ನೀವು, ಸರ್ಕರ ಮತ್ತು ಒಡೆಯನ ಒಳಸಂಚಿಗೆ ಒಪ್ಪಿಕೊಂಡ್ರೆ; ಬರೀ ಕಾಗೋಡಿನಲ್ಲಿರೋ ನಿಮ್ಮನ್ನಲ್ಲ; ನಿಮ್ಮಂತೆ ಪ್ರಾಂತ್ಯದಲ್ಲಿರೋ ಎಲ್ಲಾ ಗೇಣಿ ಮಕ್ಕಳನ್ನೂ ಅವರು ಮಾಡ್ತಿದ್ದ ಜಮೀನಿಂದ ಕಿತ್ತೆಸೀತಾರೆ. ಒಳಸಂಚಿಗೆ ಬಲಿಯಾಗಬೇಡಿ. ಸತ್ಯಾಗ್ರಹ ಮುಂದುವರಿಸಿ, ನಿಮಗೆ ಬೆಂಬಲ ಬರುತ್ತೆ; ಬೆಂಗಳೂರಿನಿಂದ ಬರುತ್ತೆ; ಕೋಲಾರದಿಂದ ಬರುತ್ತೆ; ದಾವಣಗೆರೆಯಿಂದ ಬರುತ್ತೆ; ಇಡೀ ದೇಶದಿಂದ ಬರುತ್ತೆ ಎಂದು ಹೇಳಿರಲಿಲ್ಲವೇ? ಈಗ ನೋಡಿ, ಚಂದ್ರಶೇಖರ್ ನನ್ನ ಮಾತನ್ನು ಸತ್ಯ ಎಂದು  ತೋರಿಸಿಕೊಟ್ಟಿದ್ದಾರೆಎಂದು ನನ್ನ ಕಡೆ ತಿರುಗಿದರು. ಅಷ್ಟರಲ್ಲಿ ಪಕ್ಕದ ಗ್ರಾಮದಲ್ಲಿ ವಿರ್ಶಮಿಸಿಕೊಳ್ಳುತ್ತಿದ್ದ ನನ್ನ ಸಂಗಾತಿಗಳು ನಾವಿದ್ದ ಕಡೆಗೇ ಬರುತ್ತಿದ್ದರು. “ನೋಡಿ! ಎಲ್ಲರೂ ಬರುತ್ತಿದ್ದಾರೆ! ಎಂದು ನಾನು ಹೇಳಿದೆ.

ಗೌಡರು ಸಂತಸದಿಂದ ಕುಣಿದು “ನೋಡ್ರಯ್ಯ! … ನೋಡಿ! … ಎಲ್ಲೆಲ್ಲಿಂದ ಬಂದಿದ್ದಾರೆ, ನಿಮ್ಮ ಬೆಂಬಲಿಗರು. ನೀವೇನು ಅನಾಥರೇನಯ್ಯಾ! ನಿಮ್ಮ ಹಿಂದೆ ಇಡೀ ದೇಶವೇ ಇದೆ. ಒಡೆಯನ ಅನ್ಯಾಯ, ಒಡೆಯನ ದೌರ್ಜನ್ಯ ಎದುರಿಸಿಯೇ ತೀರೋಣ ಎನ್ನುತ್ತಿದ್ದಂತೆಯೇ, ಗುಡ್ಡದ ಕಡೆಯಿಂದ ಕೆಲವು ಕೋವಿಧಾರಿ ರೈತರು ನಮ್ಮ ಕಡೆಗೆ ಧಾವಿಸಿ ಬರುತ್ತಿದ್ದರು. ನಿಮಿಷ ನಿಮಿಷಕ್ಕೂ ಈ ರೀತಿ ಕೋವಿ ಹಿಡಿದು ಬರುತ್ತಿದ್ದ ರೈತರ ಸಂಖ್ಯೆ ಹೆಚ್ಚಾಯಿತು. ಅವರನ್ನೆಲ್ಲಾ ನಾವು ನಸುನಗುತ್ತಾ ನೋಡುತ್ತಿದ್ದವು. ಅವರೆಲ್ಲರೂ ಮೊದಲೇ ನಮಗೆ ಭೇಟಿಯಾಗಿದ್ದ ಭಿನ್ನ ಮತೀಯ, ಉಗ್ರವಾದಿ ರೈತರುಗಳೇ ಆಗಿದ್ದರು. ಅವರನ್ನೆಲ್ಲಾ ಈಗ ಗೌಡರು ಕಟುವಾಗಿ ನೋಡಿದರು. ವ್ಯಂಗ್ಯವಾಗಿ, ವ್ಯಾಘ್ರಧ್ವನಿಯಲ್ಲಿ ಕೇಳಿದರು. “ಏನಿದು ಕೋವಿ, ಕಠಾರಿ?”

ಕೋವಿಧಾರಿ ರೈತರು ಸುತ್ತಲೂ ನಿಂತರು. ಅವರು ಒಬ್ಬರೂ ಮಾತನಾಡಲಿಲ್ಲ. ಗೌಡರೇ ಮತ್ತೆ ಮಾತನಾಡಿದರು, ಯಾರ ಮೇಲಾದ್ರೂ ದಂಡಯಾತ್ರೆ ಹೊರಟಿದ್ದಿರೋ?” ಗುಂಪಿನಲ್ಲಿದ್ದ ರೈತರು ತಮ್ಮ ತಮ್ಮ ಮುಖಗಳನ್ನು ನೋಡಿಕೊಂಡು, ಮುಸಿ ಮುಸಿ ನಕ್ಕರು. ಅವರಲ್ಲೊಬ್ಬನುಡಿದ, “ಹೌದು ದಂಡುಗೂಡಿ ಹೊಂಟೀವಿ…. ಒಡೆಯನ ಮೇಲೆ!”

“ತುಂಬಾ ಒಳ್ಳೇದು. ನೀವೆಲ್ಲಾ ಕೆಳದಿ ಸಾಮ್ರಾಜ್ಯ ಕಟ್ಟಿದ ಶೂರರು ಅಲ್ಲವೇನ್ರಪ್ಪಾ! ಸಾಮಾನ್ಯರೇ!” ಎಂದೊಡನೆಯೇ ರೈತರ ಗುಂಪು, ‘ಹ್ಹೇ ಹೆ ಹ್ಹೇ!’ ಎಂದು ಗಹಗಹಿಸಿ ನಕ್ಕಿತು. ಗೌಡರು ಕೆಲಕಲ ಗಾಢಾಲೋಚನೆಯಲ್ಲಿ ಮುಳುಗಿದ್ದು ಮತ್ತೆ ಪ್ರಶ್ನಿಸಿದರು.

ನಿಮ್ಮ ಆಕ್ರಮಣ ಯಾವಾಗ ಪ್ರಾರಂಭ?”

“ಈಗಿಂದೀಗಲೇ”

“ಈಗೀಂದೀಗಲೇ ಪ್ರಾರಂಭವೇನ್ಯ್ಯಾ? ಏನೇನು ಮಾಡ್ಬೇಕು? ಯಾರ್ಯಾರನ್ನು ಕೊಲ್ಲಬೇಕು? ಎಂದು ಯೋಚ್ನೆ ಮಾಡಿದ್ದೀರಿ?”

ಆಗೊಬ್ಬ ಅತ್ತಿತ್ತ ನೋಡಿ ಮೆಲ್ಲಗೆ ಹೇಳಿದ, “ಮೊದಲು ಒಡೆಯನ ಹಿತ್ತಲಲ್ಲಿರೋ ಹುಲ್ಲಿನ ಬಣವೆಗೆ ಬೆಂಕಿ ಹಾಕಾದು. ಅದನ್ನು ಆರಿಸಾಕೆ ಜನ ಬರ್ತಿದ್ದಾಂಗೆ ಅವನ ಮನೆಗೆ ಬೆಂಕಿ ತೋರೋದು. ಆ ಮೇಲೆ ಆ ಸಬ್‌ಇನ್ಸ್‌ಪೆಕ್ಟರ್ ಬುಡನ್ ಷರೀಫ್‌ಗೆ ಗುಂಡಿಕ್ಕೋದು. ಇಷ್ಟು ಕೆಲಸಾನ್ನ ಮೊದಲಿಗೇ ಮಾಡಿ ಮುಗಿಸ್ಪೇಕು…” ಆತನ ಮಾತು ಮುಗಿಯುವ ಮುಂಚೇಯೇ ಗೌಡರು ಅವನನ್ನು ತಡೆದು, “ನಿನ್ನ ಪ್ರಲಾಪ ನಿಲ್ಲಿಸು ಸಾಕು ಅವಿವೇಕಿ!” ಎಂದು ನಿಷ್ಠೂರವಾಗಿ ಹೇಳಿದರು.

ತಮ್ಮೆದುರು ನಿಂತಿದ್ದ ಬಂಡುಕೋರ ರೈತರನ್ನು ತದೇಕ ದೃಷ್ಟಿಯಿಂದ ನೋಡಿದರು. ಅವರು ಕಣ್ಣುಗಳು ಮರಕ, ತಿರಸ್ಶಾರ, ಭಾವೋದ್ರೇಕದಿಂದ ಹೊಳೆಯುತ್ತಿದ್ದವು.

“ನಿಮ್ಮ ಪ್ಲಾನ್ ಎಷ್ಟು ಸೊಗಸಾಗಿದೆ. ಇದನ್ನು ನಿಮಗೆ ಯಾರು ಹೇಳಿ ಕೊಟ್ಟರಯ್ಯಾ?” ಎಂದು ಕೇಳುತ್ತಿದ್ದಂತೆಯೇ ರೈತರು ತಮ್ಮ ಬೆನ್ನ ಹಿಂದೆ ತಿರುಗಿ ನೋಡತೊಡಗಿದರು. ಇಷ್ಟು ಹೊತ್ತಿಗಾಗಲೇ ಗುಡ್ಡದ ಕಡೆಗೆ ಹೋಗಿದ್ದ ಬಂಡುಕೋರ ರೈತರ ಗುಂಪೆಲ್ಲವೂ ಹಿಂತಿರುಗಿ ಬಂದು ಅಲ್ಲಿ ೩೦ – ೪೦ ಜನರ ಸಾಕಷ್ಟು ದೊಡ್ಡ ಗುಂಪೇ ಸೇರಿತ್ತು. ಆ ಗುಂಪಿ ಹಿಂದೆ ಯಾರಿಗೂ ಕಾಣದಂತೆ ನಿಂತಿದ್ದ ಗಡ್ಡಧಾರಿ ವ್ಯಕ್ತಿ ನಗುತ್ತಾ ಮುಂದೆ ಬಂದ:

“ಇವರೇ ನಮ್ಮ ಗುರುಗಳು” ಎಂದರು ರೈತರು.

ಅತ ಗೋಪಾಲಗೌಡರ ಬಳಿಗೆ ಬಂದು ಉದ್ಧಟತನದಿಂದ ನಿಂತ. ಗೌಡರು ಅವನನ್ನು ಆಶ್ಚರ್ಯದಿಂದ ನೋಡಿ ವಿಚಾರಿಸಿದರು, “ಯಾರ್ರೀ ನೀವು?”

“ನಾನು ಯಾರೆಂದು ನಿಮಗೆ ಗೊತ್ತಿಲ್ಲವೇ!”

ಖಂಡಿತ ಗೊತ್ತಿಲ್ಲ ಮಾರಾಯ! ಕೃಪೆ ಮಾಡಿ ತಿಳಿಸಿಬಿಡು!”

ನಾನು ಕೆಳದಿ ಮಠದ ಇಮ್ಮಡಿ ರೇವಣಸಿದ್ಧ ಪ್ರಭು.”

“ಕೆಳದಿ ಮಠದ ಸ್ವಾಮಿಗಳೇನು?”

“ಅಲ್ಲ, ಅದರ ಭಕ್ತರು.”

ಕಾಗೋಡು ಒಡೆಯರ ಮೇಲೆ ನಿಮಗೇಕೆ ಅಷ್ಟು ದ್ವೇಷ?”

ಅವರು ನಮ್ಮ ಆಸ್ತಿ ಅಪಹರಿಸಿದ್ದಾರೆ.”

“ಏನು ಆಸ್ತಿ?”

“ಸಮಸ್ತ ಆಸ್ಥಿಯೂ ನಮ್ಮದೇ ಮಣಗದ್ದೆ, ತಟ್ಟೆಉಂಡಿ, ಹಿರೇನಲ್ಲೂರು, ಸುಣವಂತೆ, ಶುಂಠಿಕಪ್ಪ, ಯಲಗುಂದಿ, ಇಲ್ಲಿರುವ ಜಮೀನೆಲ್ಲವೂ ನಮ್ಮದೇ.”

“ಭೇಷ್! ಭೇಷ್!” ಎಂದು ಗೌಡರು ಗಟ್ಟಿಯಾಗಿ ನಕ್ಕು ನುಡಿದರು: “ಮತ್ತೆ ಇಷ್ಟು ವರ್ಷ ನೀವೇನು ಮಾಡುತ್ತಿದ್ದೀರಿ? ಈ ವಿಚಾರ ಯಾರಿಗೂ ತಿಳಿದಿಲ್ಲವೇ?”

“ಅದಕ್ಕೆ ನಾನು ಇಲ್ಲಿ ನೆಲೆಸಿರದಿರುವುದೇ ಕಾರಣ. ನಾನು ರಾಣೆಬೆನ್ನೂರಿನಲ್ಲಿ ಒಂದು ಪ್ರಿಟಿಂಗ್ ಪ್ರೆಸ್ ನಡೆಸುತ್ತಿದ್ದೇನೆ. ನಮ್ಮ ಹಿರೀಕರು ರಾಣಿಚೆನ್ನಮ್ಮನ ಜೊತೆ ರಾಣಿಬಿದನೂರಿಗೆ ದಂಡಯಾತ್ರೆ ಗೋಗಿ ಅಲ್ಲಿ ಒಂದು ಶಾಖೆ ನೆಲೆಸಿತು.”

ಒಳ್ಳೆಯದು. ಈಗ ನಿಮ್ಮ ದಂಡಯಾತ್ರೆ ಇಲ್ಲಿಗೆ ದಯಮಾಡಿಸಿದ ಕಾರಣ? ಕಾಗೋಡನ್ನು ಎರಡನೇ ಈಸೂರು ಮಾಡೋಕೆ ಹೊರಟಿದ್ದೀರೋ? ಇಲ್ಲಿ ಯಾರನ್ನು ಗಲ್ಲಿಗೆ ಹಾಕಿಸೋಕೆ ಹವಣಿಸಿದ್ದೀರಿ? ನನ್ನನ್ನೇ? ಸವಾಯ್ ಬೀರನಾಯ್ಕರನ್ನೇ?”

“ಹಾಗೇನಿಲ್ಲ! ನಮ್ಮ ಹಿರೀಕರಿದ್ದ ಇಲ್ಲಿನ ಆಸ್ತಿಗಳನ್ನು ಅಪಹರಿಸಿದವರು ಈ ಒಡೆಯರ್ ರವರ ಹರೀಕರು. ಅದರ ಪ್ರತೀಕಾರಕ್ಕೆ ನಾವು ಬಂದಿದ್ದೇವೆ. ಹೀಗೆ ಪಡೆದುಕೋಂಡು ಜಮೀನುಗಳನ್ನು ಈ ನನ್ನ ದೀವರ ಬಂಧನಗಳಿಗೆ ಹಂಚಿ ಹೋಗಲು ಬಂದಿದ್ದೇನೆ” ಎಂದು ತನ್ನ ಎರಡು ಕೈಗಳನ್ನು ಚಾಚಿ, ಸುತ್ತ ನಿಂತಿದ್ದ ದೀವ ರೈತರನ್ನೆಲ್ಲಾ ತೋರಿಸಿದ.

ಅದನ್ನು ಕೇಳಿ ಗೌಡರು ನಸುನಕ್ಕರು; ಮೆಚ್ಚುಗೆಯಿಂದ ತಲೆದೂಗಿದರು. ಬಾಯಲ್ಲಿ ಲೊಚ್! ಲೊಚ್! ಎಂದು ಲೊಚಗುಟ್ಟಿದರು. ಅವರನ್ನು ಕುರಿತು ಪ್ರಶ್ನಿಸಿದರು.

“ಈಗ ಏನೇನು ಸಿದ್ಧತೆಗಳನ್ನು ಮಾಡಿಕೊಂಡಿದ್ದೀರಿ: ಕೋವಿ, ಕಠಾರಿ, ಕೊಳ್ಳಿ, ಬೆಂಕಿ, ಸಿಪಾಯಿಗಳು, ರಣತಂತ್ರ ಎಲ್ಲವೂ ಸಿದ್ಧವೇ? ಇಲ್ಲವೇ ಮತ್ತಿನ್ನೇನಾದರೂ ನೆರವು ಬೇಕೇ? ಬಾಂಬು ಪಿಸ್ತೂಲು?” ಎನ್ನುತ್ತಿದ್ದಂತೆಯೇ ಆಗ,

“ಇದೇ, ಇದೆ. ಪಿಸ್ತೂಲು ಇದೆ! ಕೋವಿಗಳೂ ಇವೆ! ಸೀಮೇಎಣ್ಣೆ ದೊಂದುಗಳು ಎಲ್ಲಾ ಸಿದ್ಧವಾಗಿವೆ.”

“ಭೇಷ್! ಭೇಷ್! ಎಂಥ ಭರ್ಜರಿ ದಂಡನಾಯಕರು ನಮಗೆ ಸಿಕ್ಕಿಬಿಟ್ಟಿರಿ? ಇಮ್ಮಡಿ ರೇವಣಸಿದ್ಧ ಪ್ರಭುಗಳೇ! ಇನ್ನೇನು ಚಿಂತೆ ನಮಗೆ” ಎಂದು ವ್ಯಂಗ್ಯವಾಗಿ ನುಡಿದು” ಯಾವಾಗ ನಿಮ್ಮ ಧಾಳಿ?” ಎಂದು ಪಿಸುದನಿಯಲ್ಲಿ ವಿಚಾರಿಸಿದರು.

“ಈ ರಾತ್ರಿ”

“ತುಂಬಾ ಒಳ್ಳೆಯದು! ತುಂಬಾ ಒಳ್ಳೆಯದು!” ಎಂದು ಗೌಡರು ತೆಪ್ಪಗಾದರು. ಆ ಹಿಂಸಾಪ್ರಚೋದೊಕನನ್ನು ಸುಧೀರ್ಘಕಾಲ ಕಣ್ಣಲ್ಲಿ ಕಣ್ಣಿಟ್ಟು ತೀಕ್ಷ ಪರೀಕ್ಷಕ ದೃಷ್ಟಿಯಿಂದ ಎವೆಯಿಕ್ಕದೆ ನೋಡಿದರು. ಅವನು ಮೊದಲು ತಲೆತಗ್ಗಿಸಿ ನೆಲ ನೋಡತೊಡಗಿದ. ಒಡನೆಯೇ ಗೌಡರು ಕಣಸೆ ಚೆಟ್ಯನನ್ನೂ ಬಿಳಿಯನ ಕಣ್ಣ, ಕೃಷ್ಣಪ್ಪ, ಚೊಂಟಕೆಂಚ ಮೊದಲಾದ ರೈತ ಕಟ್ಟಾಳುಗಳಿಗೆ ಏನೋ ಕಿವಿಯಲ್ಲಿ ಹೇಳಿದರು. ಅವರೆಲ್ಲರೂ ಇಮ್ಮಡಿ ರೇವಣಸಿದ್ಧ ಪ್ರಭುಗಳ ಬಳಿ ಬಂದು ಸುತ್ತಲೂ ನಿಂತರು.

“ಇವರೆಲ್ಲಾ ನಿಮ್ಮ ಅಂಗರಕ್ಷಕರು ಪ್ರಭುಗಳೇ! ಇನ್ನು ಮುಂದೆ ನೀವೇ ನಮ್ಮ ಧಣಿಗಳು. ನಿಮ್ಮನ್ನು ಕಟ್‌ಎಚ್ಚರದಿಂದ ನೋಡಿಕೊಳ್ಳಬೇಕಲ್ಲವೇ?” ಎಂದರು. ಆದರೆ ಇಮ್ಮಡಿ ರೇವಣಸಿದ್ಧಪ್ಪ ಪ್ರಭೂಗಳು ಯಾಕೋ ಕವಿಸಿಗೊಂಡು ಇದ್ದಲ್ಲಿಯೇ ಮಿಸುಕಾಡತೊಡಗಿದರು. ಅತ್ತಿತ್ತ ನೋಡತೊಡಗಿದರು. ಅವರನ್ನು ಸುತ್ತವರೆದಿದ್ದ ಪ್ರತಿಯೊಬ್ಬ ರೈತನ ಕೈಯಲ್ಲೂ ಹರಿತಾದ ಕುಡುಗೊಲುಗಳು ಇದ್ದವು. ಆಗ ಗೌಡರು ಪ್ರಭುಗಳನ್ನು ತೀಕ್ಷ್ಣವಾಗಿ ನೋಡಿ, ಅವರನ್ನು ಬೆರಳು ಮಾಡಿ, ರೈತರೆಲ್ಲರಿಗೂ ತೋರಿಸುತ್ತಾ ವಿಚಾರಿಸಿದರು.

ಮಹಪುರುಷರನ್ನು ನೀವು ಯಾರಾದರೂ ಮೊದಲು ಪ್ರಾಂತ್ಯದಲ್ಲಿ ನೋಡಿದ್ದೀರಾ? ಇವರು ಇಲ್ಲಿ ಎಂದಾದರೂ ವಾಸ ಮಾಡಿದ್ದಾರೆಯೆ? ನೀವು ಯಾರಾದ್ರೂ ನೋಡಿದ್ರೆ ಹೇಳಿ!”

ಮೊದಲೆಂದೂ ನೋಡಿಲ್ಲ ಗೌಡರೇ! ನಾವ್ಯಾಕೆ ಸುಳ್ಳಾಡಬೇಕು. ಈಚೆಗೆ ಒಂದೆರಡು ದಿನಗಳಿಂದಷ್ಟೇ ಸ್ವಾಮಿಗಳು ಇತ್ತ ಕಾಣ ಬಂದಿರೋದು!”

“ಒಂದೆರಡು ದಿನಗಳಿಂದ ಮಾತ್ರ ಇವರನ್ನು ನೋಡಿರಬಹುದು. ಆದ್ರೆ, ಅದಕ್ಕೂ ಮುಂಚೆ ಇವರ ವಿಚಾರವಾಗಿ ಏನಾದ್ರೂ ಕೇಳಿದ್ದೀರಾ? ಇವರು ಯಾರು? ಎತ್ತಾ? ಎನೋ ಹೇಳ್ತಾದಿರಲ್ಲ. ಇವರೇ ನಿಜವಾದ ಭೂಮಾಲೀಕರು ಅಂತ. ಇದು ನಿಜಾನಾ? ಸುಳ್ಳಾ? ನಿಮಗೆ ಯಾರಿಗಾದ್ರೂ ತಿಳಿದಿದ್ರೆ ಹೇಳ್ರಯ್ಯಾ, ಹೇಳಿ?”

“ನಮಗೇನೇನೂ ತಿಳೀದು ಗೌಡರೇ!” ಎಂದು ಭಿನ್ನವಿಸಿಕೊಂಡರು ರೈತರು. ಗೌಡರು ದೀರ್ಘವಾಗಿ ನಿಟ್ಟುಸಿರು ಬಿಟ್ಟು ಉದ್ಗಾರ ಮಾಡಿದರು. ಮತ್ತೇ ನೀವೆಂಥ ದಡ್ಡರಯ್ಯ! ಗೊತ್ತು ಗುರಿ ಇಲ್ಲದೆ ಇರೋ ಮಹಾನುಭಾವನ ಹಿಂದೆ ಕತ್ತಿ, ಕೋವಿ, ಕೊಳ್ಳಿ ಹಿಡಿದು ದಂದಡು ಕಟ್ಟಿಕೋಂಡು ಹೋಗೋಕೆ ನಿಂತಿದ್ದೀರಲ್ಲಾ!”

ಗೌಡರು ಹೀಗೆ ಎನ್ನುತ್ತಿದ್ದಂತೆಯೇ ಒಬ್ಬ ಯುವಕ, ಗಟ್ಟಿಯಾಗಿ ಆಳು ಮೂತಿ ಮಾಡಿ ಆಕ್ಷೇಪಣೆ ಎತ್ತಿದ: “ಮತ್ತಿನ್ನೇನು ಮಾಡೋದು? ಗದ್ದೆ ಉಳಕೆ ಹೋಗಾದು; ದನಕ್ಕೆ ಬಡಸ್ಕೊಂಡಂಗೆ ಬಡೀಸ್ಕೊಳ್ಳೋದು. ಪೊಲೀಸನೋರ ಬೂಟ್ ಕಾಲಿಗೆ ವದಿಸ್ಕೋಳೋದು ಚಿನ್ನಪ್ಪನ ಕೂಲಿಗಳಿಂದ ಉಗಿಸ್ಕೊಳ್ಳೋದು. ಇದೇ ನೀವು ಮಾಡ್ತಿರೋ ಸತ್ಯಾಗ್ರಹ. ಇಂಥ ಬಾಳು ಏಕೆ ಬಾಳ್ಬೇಕು? ನಾವು ಏಟಿಗೆ ಎದುರೇಟು ಕೊಡೇದೆ ಸೈ!” ಎಂದು ಭಾವೋದ್ವೇಗದಿಂದ ನುಡಿದು ಕಣ್ಣೀರಿಟ್ಟ. ಗೌಡರು ಮೌನವಾದರು.

ರೈತರ ಗುಂಪಿನಲ್ಲಿ ಗುಜುಗಜ ಗದ್ದಲ ಪ್ರಾರಂಭವಾಯಿತು. ಎಲ್ಲರೂ ತಮ್ಮ ತಮ್ಮಲ್ಲೇ ಮಾತನಾಡತೊಡಗಿದರು. “ನೋಡು ನನಗೆ ಹ್ಯಾಂಗೆ ಬಡಿದ್ದಾರೆ. ದನ ಚಚ್ಚಿದಂಗೆ ಚಚ್ಚಿದ್ಧಾರೆ. ಆ ಚಿನ್ನಪ್ಪನ ಕಡೆ ಲೌಡಿ ಮಕ್ಕಳು” ಎಂದು ಒಬ್ಬ ತನ್ನ ಬೆನ್ನ ಮೇಲೆ ಮೂಡಿದ್ದ ಕಪ್ಪು ಬರೆಯನ್ನು ತೋರಿಸಿದರೆ, ಇನ್ನೊಬ್ಬ ತನ್ನ ಇಂಗಿ ಹೋದ ಎಡಗಣ್ಣನ್ನು ತೋರಿಸಿ ಪೊಲೀಸರ ಲಾಠೀ ಏಟು ನನ್ನ ಕಣ್ಣಿಗೆ ಬಿದ್ದು ಎಡಗಣ್ಣ ಗುಡ್ಡೆನ್ನೇ ಹೊರಕ್ಕೆ ಬಂತು ನನ್ನ ಕಣ್ಣೇ ಹೋಯ್ತುಎಂದು ಇನ್ನೊಬ್ಬ ದೂರುತ್ತಿದ್ದ. ಮಗದೊಬ್ಬ ನನ್ನ ಹೆಂಡತಿ ಕೈಬೆರಳನ್ನೇ ಮುರಿದು ಹಾಕ್ಯಾರೆ ಲೌಡಿ ಮಕ್ಕಳು. ಅವಳ ಕೈಯಲ್ಲಿದ್ದ ಹಸುಗೂಸನ್ನೂ ಬಿಟ್ಟಿಲ್ಲ. ಆದರ ಕೈ ಕೂಡ ಮುರಿದುಹೋಗದೆಎಂದು ಗೋಳಾಡಿದ.

“ನಿಮಗೇನು ಗೊತ್ತಾಗ್ತದೆ ನಮ್ಮ ಬವಣೆ? ಗದ್ದಗೆ ನುಗ್ಗಿ, ಒದೆ ತಿನ್ನಿ: ಇದೇ ಹೇಳ್ತೀರಿ, ಈ ನಮ್ಮ ಪ್ರಭುಸ್ವಾಮಿಗಳೇ ಸೈ! ಏಟಿಗೆ ಎದುರೇಟು ಕೊಡಿ ಅನ್ನೋ ಧಿರರು, ನಾವು ಅವರು ಹೇಳ್ದಂಗೆ ಕೇಳ್ತೀವಿ. ಒಡೆಯನ ಮನೆಗೆ ಬೆಂಕಿ ಇಡೋದೆ ಸೈ. ಏಟಿಗೆ ಏಟು! ರಕ್ತಕ್ಕೆ ರಕ್ತ!” ಎಂಬ ಸಿಟ್ಟಿನ ಮಾತುಗಳೂ ಎಲ್ಲರಿಂದಲೂ ಎಲ್ಲ ಕಡೆಯಿಂದಲೂ ಕೇಳಿ ಬರತೊಡಗಿದವು.

ಅವರ ಮಾತುಗಳನ್ನು ಕೇಳಿ ಗೊಪಾಲಗೌಡರು ಕಣ್ಣಲ್ಲಿ ನೀರು ತುಂಬಿಕೊಂಡುರ. ಅವರು ತಲೆತಗ್ಗಿಸಿ ಕಣ್ಣೀರೋರೆಸಿಕೊಂಡು, ಮಾತಾಡತೊಡಗಿದರು. ಅವರು ಭಾವಪರವಶರಾಗಿದ್ದರು. ಅವರ ಧ್ವನಿ ಗದ್ಗದಿತವಾಗಿತ್ತು.

“ಈಗೇನು ಮಾಡೋಣ! ನ್ಯಾಯ, ಕಾನೂನು, ನೀತಿ, ಧರ್ಮ ಎಲ್ಲಾ ನಮ್ಮ ಕಡೆಗೇ ಇದ್ದರೂ ಸರ್ಕಾರದ ಬೆಂಬಲ, ಅನ್ಯಾಯ ಮಾಡ್ತಾ ಇರೋ ಜಮೀನದ್ಧಾರನ ಕಡೆಗೇ ಇದೆ. ಅವನು ನಡೆಸ್ತಾ ಇರೋ ದೌರ್ಜನ್ಯ, ಹಿಂಸಾಚಾರಕ್ಕೆ ಬೆಂಬಲ ಕೊಡ್ತಿದೆ. ಇದರ ಎಲ್ಲಾ ಉದ್ದೇಶ ನಮ್ಮನ್ನ ಅಂದ್ರೆ ನೀವು ರೈತರನ್ನು ಗೇಣಿದಾರರನ್ನು ಪ್ರತಿಹಿಂಸೆ ಮಾಡಲು ಪ್ರಚೋದಿಸುವುದೇ ಆಗಿದೆ ಒಳಗುಟ್ಟನ್ನು ನೀವು ಚೆನ್ನಾಗಿ ತಿಳ್ಕೋಬೇಕು!”

ಇದುವರೆಗೆ ನಮ್ಮಲ್ಲಿ ನೂರಾರು ಜನಕ್ಕೆ ಅವರು ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾರೆ ಅನ್ಯಾಯದ ಮೇಲೆ ಅನ್ಯಾಯ ಮಾಡಿದ್ದಾರೆ. ದೌರ್ಜನ್ಯದ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹೆಂಗಸರು ಮಕ್ಕಳು ಎಂದು ಕರುಣೆ ಇಲ್ಲದೆ ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲು ದುಂಡಿಯಿಂದ ಹೊಡೆದಿದ್ದಾರೆ. ರಕ್ತಸುರಿಸಿದ್ಧಾರೆ. ಕಣ್ಣೀರಿಡಿಸಿದ್ಧಾರೆ. ನಿಮ್ಮ ಬಾಳು ಬದುಕಿಗೆ ಬೆಂಕಿ ಇಟ್ಟಿದ್ಧಾರೆ.

ಆದರೆ ನೀವು ಜಮೀನ್ದಾರನ ಮನೆಯ ಮೇಲೆ ಒಂದು ಕಲ್ಲನ್ನೂ ಬೀರಿಲ್ಲ. ಅವನ ಕಡೆಯ ಒಂದು ನಾಯಿಗೂ ಕಾಲು ಮುರಿದಿಲ್ಲ. ಅತ್ಯಂತ ಶಾಂತಿಯಿಂದ ನಿಮ್ಮ ಹೋರಾಟ ನಡೆಸಿಕೊಂಡು ಹೋಗುತ್ತಿದ್ದೀರಿ. ನಿಮ್ಮ ಶಿಸ್ತು ನಿಮ್ಮ ಶಾಂತಿ, ನಿಮ್ಮ ಕೆಚ್ಚು, ನಿಮ್ಮ ಸಹನೆ ಇವೆಲ್ಲಾ ಸಾಮಾನ್ಯರಿಗೆ ಬರೋದಿಲ್ಲ. ಈಗೇನಾದ್ರೂ ಮಹತ್ಮಾಗಾಂಧಿಯವರು ಇಲ್ಲಿ ಇದ್ದು ನಿಮ್ಮ ಹೋರಾಟವನ್ನು ಕಣ್ಣಾರೆ ಕಂಡಿದ್ದರೆ ನಿಮ್ಮನ್ನು ವೀರಾದಿ ವೀರರು, ಭಾರತಮಾತೆಯ ಸುಪುತ್ರರು ಎಂದು ಅಭಿನಂದಿಸುತ್ತಿದ್ದರು. ನಿಮ್ಮೊಡನೆ ಅವರೂ ಸೇರಿಕೊಂಡು ಹೋರಾಟ ಮಾಡುತ್ತಿದ್ದರು. ಈಗ ಅವರು ನಿಮ್ಮೊಡೆನೆ ಇಲ್ಲ ಎಂದುಕೊಳ್ಳಬೇಡಿ ಅವರ ಆತ್ಮ ನಿಮ್ಮೊಡನೆ ಇದೆ. ನಿಮ್ಮ ಅಹಿಂಸಾತ್ಮಕ ಸತ್ಯಾಗ್ರಹದಲ್ಲಿ ಇದೆ. ಮೊನ್ನೆ ಇಲ್ಲಿಗೆ ಬಂದು ನಿಮ್ಮೊಡನೆ ಸೇರಿ ಸತ್ಯಾಗ್ರಹ ಮಾಡಿದ ಡಾ. ರಾಮಮನೋಹರ ಲೋಹಿಯಾ ವರನ್ನು ಆಗಲೇ ಮರೆತುಬಿಟ್ಟಿರಾ? ಅವರು ಯಾರು? ಮಹಾತ್ಮರ ಶಿಷ್ಯರು. ಪ್ರತೀಕಾರ ಮನುಷ್ಯನ ಸಹಜ ಪ್ರತಿಕ್ರಿಯೇ. ಈ ಸಹಜ ಪ್ರತಿಕ್ರಿಯೆ ಬಿಟ್ಟವರೇ ದೊಡ್ಡವರು. ಕ್ಷಮೆ ದೊಡ್ಡವರ ದಾರಿ! ನಾವು ದೊಡ್ಡವರ ಸಹಜ ಪ್ರತಿಕ್ರಿಯೆ ಹಾದಿ ಅನುಸರಿಸೋಣ. ಡಾ. ಲೋಹಿಯಾ ತೋರಿದ ದಾರಿಯಲ್ಲಿ ನಡೆಯೋಣ”.

ಇಷ್ಟು ದಿನಗಳ ಕಾಲ ಉಳಿಸಿಕೊಂಡು ಬಂದ ಸತ್ಯಾಗ್ರಹದ ಕೀರ್ತಿಗೆ ಕಳಂಕ ತರುವುದು ಬೇಡ. ನಾನು ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುತ್ತೇನೆ, ಇಂದು ಬಂದು ನಾಳೆ ಹೊರಟು ಹೋಗುವ ರಾಣಿಬೆನ್ನೂರಿನ ಪ್ರಭುಗಳ ಹಿಂದೆ ಹೋಗಬೇಡಿ. ಹಿಂಸಾಚಾರಕ್ಕೆ ಇಳಿಯಬೇಡಿ!” ಎಂದು ಭಾವೋದ್ವೇಗದಿಂದ ಮಾತನಾಡಿದರು. ರೈತರಲ್ಲಿ ಬಹುಪಾಲು ಜನರು ಅವರ ಮಾತುಗಳನ್ನೇನೋ ಮೆಚ್ಚಿಕೊಂಡರು. ಆದರೆ, ಇಮ್ಮಡಿ ರೇವಣಸಿದ್ದ ಪ್ರಭುಗಳ ಹಿಂಸಾತ್ಮಕ ಮಾರ್ಗ ತುಂಬಾ ಆಕರ್ಷಕವಾಗಿ ಕಾನೂತ್ತಿತ್ತು. ಅವರು ಯಾವ ಪ್ರತಿಕ್ರಿಯೆಯನ್ನೂ ತೋರದೆ ಮೌನವಾಗಿದ್ದರು.

ಗೌಡರು, ಈಗ ನಮ್ಮ ಕಡೆಗೆ ನೋಡಲು ಸ್ವಲ್ಪ ಅವಕಾಶ ಸಿಕ್ಕಿತು. ತಮ್ಮ ಸಂಗಾತಿಗಳಾದ ನಮ್ಮನ್ನು ಕರೆದು ಅಲ್ಲಿನ ರೈತರಿಗೆಲ್ಲರಿಗೂ ತೋರಿಸಿ, “ನೋಡಿ ಈ ಗೆಳೆಯರೆಲ್ಲಾ ಬೆಂಗಳೂರು, ಕೋಲಾರ, ಕೆ.ಜಿ.ಎಫ್. ಗಳಿಂದ ಬಂದಿದ್ದಾರೆ. ಆ ಮಾರ್ಗ ಬಿಟ್ಟು ಅತ್ತಿತ್ತ ಕದಲುವುದಿಲ್ಲ. ನೀವೂ ಕದಲಬಾರದು. ಅವರೊಡನೆ ಹೋಗಿ, ಅವರು ನಿಮ್ಮ ಬೆಂಬಲಕ್ಕೆ ಬಂದಿರುವಾಗ ನೀವೂ ಅವರ ಬೆಂಬಲಕ್ಕೆ ಹೋಗದಿದ್ದರೆ ಅದು ಮರ್ಯಾದೆಯೇ? ನ್ಯಾಯವೇ? ಅವರೋಡನೆ ಯಾರೂ ಹೋಗ್ತೀರಾ ಈ ಕಡೆ ಬನ್ನಿ!” ಎಂದು ಕರೆದರು.

ಅವರ ಕರೆಯನ್ನು ಯಾರೂ ಲೆಕ್ಕಿಸಲೇ ಇಲ್ಲ. ಯಾವ ಪ್ರತಿಕ್ರಿಯೆಯೂ ರೈತರಿಂದ ಬರಲಿಲ್ಲ. ಕೆಲವು ನಿಮಿಷಗಳ ತೀವ್ರ ಮುಜುಗರದ ಮೌನದ ಬಳಿಕ ಜನರು ಅತ್ತಿತ್ತ ಚದುರತೊಡಗಿದರು.

“ಅವರು ಬೆಂಗಳೂರಿನಿಂದಲೇ ಬಂದಿರಬಹುದು. ಆದರೆ, ಅವರಿಗೆ ಇನ್ನೂ ಏಟು ಬಿದ್ದಿಲ್ಲ. ಏಟು ಬೀಳಲಿ, ಅವರೂ ಇಲ್ಲಿಂದ ಕಂಬಿ ಕೀಳೋರೆ! ಹೋಗಿ ಹೋಗಿ ಗೌಡ್ರೇ! ಯಾರು ಒದೆ ತಿನ್ನೋಕೆ ಒಪ್ತಾರೆ?” ಎಂದು ನುಡಿದ ಒಬ್ಬ ರೈತ.

ಅವನ ನುಡಿ, ಅವನ ನಡತೆ ಗೋಪಾಲಗೌಡರಿಗೆ ಕೆರಳಿಸಿತು, ಅವರು ಕನಲಿ ಕೆಂಡವಾದರು. “ಇಲ್ಲಿ ಬಾರಯ್ಯಾ ನೀನು” ಎಂದು ಕರೆದರು. ಅವನು ಧೈರ್ಯವಾಗಿ ತನ್ನ ಕೋವಿಯೊಡನೆ ಗೌಡರ ಮುಂದೆ ಬಂದು ನಿಂತ. “ಯಾರು ನೀನು?”

“ನಾನು ಮಂದಗದ್ದೆ ವೆಂಕ್ಯಾ…!

“ಹೀಗೆ ಮಾತಾಡೋಕೆ ನಿನಗೆ ನಾಚಿಕೆ ಆಗೋಲ್ವೆ? ಏನು ಹೇಳ್ದೆ ನೀನು? ಏಟು ತಿಂದ ಮೇಲೆ ಅವರೂ ಇಲ್ಲಿಂದ ಕಂಬಿ ಕೀಳೋರೆ ಅಂದೆ ಅಲ್ವಾ! ಏಟು ತಿಂದು ಕಂಬಿ ಕೀಳೋಕೆ ಅವು ನಿನ್ನಂತ ಹೇಡಿಗಳೇ? ಈಗ ನಿಮ್ಮೋರು ನೂರಾರು ಜನ ಮತ್ತೆ ಮತ್ತೆ ಸತ್ಯಾಗ್ರಹ ಮಾಡ್ತಿಲ್ವೇ? ಏಟು ತಿನ್ನುತ್ತಾ ಇಲ್ವೆ? ಪೊಲೀಸಿನೋರಿಗೆ ಚಳ್ಳೆ ಹಣ್ಣು ತಿನ್ನಿಸಿ ಮತ್ತೆ ಮತ್ತೆ ಹೋರಾಟಕ್ಕೆ ನುಗ್ಗುತ್ತಾ ಇಲ್ವೆ?” ಎಂದು ಪ್ರಶ್ನಿಸಿದರು. ಅವರ ಎದೆ ಉದ್ವೇಗದಿಂದ ಏರಿಳಿಯುತ್ತಿತ್ತು. ಅವರ ಕಣ್ಣಗಳು ಕೋಪದಿಂದ ಕೆಂಡ ಉಗುಳುತ್ತಿದ್ದುವು. ಅವರು ಹಠಾತ್ತನೇ ಅವನ ಕೋವಿಯ ಮೇಲೆ ಕೈ ಇರಿಸಿ ಹೇಳಿದರು. “ನೀನೊಬ್ಬ ಹೇಡಿ! ನಿನಗೆ ಕೋವಿ ಒಂದು ಕೇಡು!” ಹಗೆಂದವರೇ ಕಸಕ್ಕೆಂದು ಅವನ ಕೋವಿಯನ್ನು ಕಸಿದುಕೊಂಡರು.

ಅದನ್ನು ಮೇಲಕ್ಕೆ ಎತ್ತಿ ಹಿಡಿದು ಗಟ್ಟಿಯಗಿ ಕೂಗಿ ಹೇಳಿದರು.

“ಇವೆಲ್ಲಾ ಹೇಡಿಗಳ ಆಯುಧಗಳು. ಅವನ್ನೆಲ್ಲಾ ಇತ್ತ ಕಡೆಗೆ ಕೊಡಿ. ಇಲ್ಲಿ ಕೊಡಿ!” ಕಣಸೆ ಚೆಟ್ಯಾನಾಯ್ಕ ಮತ್ತಿತರ ಅವರ ಕಟ್ಟಾ ಅನುಯಾಯಿಗಳಿಗೆ ಕೂಗಿ ತಿಳಿಸಿದರು.

“ಎಲ್ಲರ ಹತ್ರ ಇರೋ ಕೋವಿಗಳನ್ನು ಕಸಕೊಳ್ಳಿ!” ಎನ್ನುತ್ತಾ ತಮ್ಮ ಹತ್ತಿರವಿದ್ದ ಒಬ್ಬಿಬ್ಬರ ಕೋವಿಗಳನ್ನು ತಾವೇ ಸ್ವತಃ ಕಸಿದುಕೊಳ್ಳಲಾರಂಭಿಸಿದರು.

ಎಚ್ಚರ! ಗೌಡರೇ ಮದ್ದು ಚರೆ ತುಂಬವ್ರೆಯಾರೋ ಗುಂಪಿನಿಂದ ಕೂಗಿ ಎಚ್ಚರಿಸಿದರು. ಅಷ್ಠರಲ್ಲಿ ಒಂದು ಕೋವಿಯಿಂದ ಮದ್ದು ಸಿಡಿದೇ ಬಿಟ್ಟಿತು!

‘ಢಮಾರ್’ ಶಬ್ದದಿಂದ ಜನರು ಬೆಚ್ಚಿದರು. ಅವಾಕ್ಕಾದರು. ಗಾಬರಿಯಿಂದ ಅತ್ತಿತ್ತ ಓಡಿದರು. ಗೌಡರ ಕೈಯಲ್ಲೇ ಇದ್ದ ಕೋವಿ ಸಿಡಿದಿತ್ತು. ದೈವವಶಾತ್ ಗುಂಡು ಗಾಳಿಗೆ ಹಾರಿತ್ತು. ಯಾರಿಗೂ ಅಪಾಯವಾಗಿರಲಿಲ್ಲ. ಎಲ್ಲರೂ ಹೆದರಿ ಸ್ಥಬ್ಧರಾಗಿ ನಿಂತರು.

ಗೌಡರು ಅವಘಡದಿಂದ ತತ್ತರಿಸಿ ಹೋಗಿದ್ದರು. ಅದೃಷ್ಟ ಚೆನ್ನಗಿತ್ತು! ಇಲ್ಲದಿದ್ದರೆ ಸತ್ಯಾಗ್ರಹ ಮಾಡಲು ಬಂದಿದ್ದ ನಾವೆಲ್ಲ ಅವರ ಉತ್ತರಕ್ರಿಯೆಗೆ ಹಾಜರಾಗಬೇಕಾಗಿತ್ತು. ಆಗ ನಿಟ್ಟುಸಿರಿಡುತ್ತಾ ಗೌಡರು ನುಡಿದರು. ಅವರ ಕಣ್ಣುಗಳು ಒದ್ದೆಯಾಗಿದ್ದವು. ಧ್ವನಿ ಗದ್ಗದಿತವಾಗಿತ್ತು.

ಗುಂಡು ನನ್ನನ್ನೇ ಬಲಿ ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಆಗಲಾದರೂ ನೀವು ಬುದ್ಧಿ ಕಲಿತುಕೊಳ್ಳುತ್ತಿದ್ದೀರಿ ಅಂತ ಕಾಣುತ್ತೆ. ಆದರೆ ಚಿಂತೆ ಮಾಡ್ಬೇಡಿ. ಒಂದು ಮಾತು ಸ್ಪಷ್ಟವಾಗಿ ತಿಳ್ಕೋಳ್ಳಿ. ಬೇಕಾದ್ರ ನಿಮ್ಮ ಕೋವಿಗಳಿಂದ ನನ್ನನ್ನು ಇಲ್ಲೇ ಸುಟ್ಟು ಹಾಕಿ; ಆಮೇಲೆ ನೀವು ಜಮೀನ್ದಾರನ ಮೇಲೆ ಕೈ ಎತ್ತಬೇಕು. ನನ್ನ ಮೈಯ್ಯಲ್ಲಿ ಒಂದು ಹನಿ ರಕ್ತ ಇರೋವರ್ಗೂ ನಾನು ಈ ಕೆಲ್ಸ ಮಾಡಲು ನಿಮ್ಮನ್ನು ಬಿಡೋಲ್ಲ. ನನ್ನ ಹೆಣದ ಮೇಲೆ ನೀವು ಜಮೀನ್ದಾರನ ಮನೆ ಸೂಡೋಕೆ ಹೋಗ್ಬೇಕು; ಕೊಲೆ, ಕೊಳ್ಳೆಗೆ ತೊಡಗಬೇಕು. ಚೆನ್ನಾಗಿ ತಿಳ್ಕೊಳ್ಳಿ ಮಾತನ್ನುಎಂದು ಸ್ಪಷ್ಟವಾಗಿ ಖಡಾಖಂಡಿತವಾಗಿ ಗುಂಡು ಹೊಡೆದಂತೆ ಹೇಳಿ ನಮ್ಮೊಡನೆ ನಡೆದು ಬಂದರು.

ಎರಡು ಹೆಜ್ಜೆ ಬಂದವರೇ ಹಿಂತಿರುಗಿ, ಖಾರವಾದ ಧ್ವನಿಯಲ್ಲಿ ವಿಚಾರಿಸಿದರು. “ಎಲ್ಲಿ ಆ ಹೈಗ ಮಲ್ಲ! ಇಮ್ಮಡಿ ರೇವಣಸಿದ್ಧ ಪ್ರಭು. ಇಮ್ಮಡಿಯೋ, ಮುಮ್ಮಡಿಯೋ ಸಾಲದ್ದಕ್ಕೆ ‘ಪ್ರಭು’ ಬೇರೆ ಕೊಸರಿಗೆ” ಎಂದು ನಿಂತರು. ತಿರಸ್ಕಾರದಿಂದ ಹಿಂತಿರುಗಿ ನೋಡಿದರು. ಆ ಗಡ್ಡಧಾರಿ ಮನುಷ್ಯ ಅಲ್ಲಿಂದ ಅಂತರ್ಧಾನನಾಗಿದ್ದ!” ಮಲೆನಾಡಿನ ಕಾನನಗಳಲ್ಲಿ ಆಧುನಿಕ ಹೈಗಮಲ್ಲರಿಗೇನೂ ಕೊರತೆ ಇಲ್ಲ. ಬನ್ನಿ ಕಳ್ಳ! ಇಲ್ಲಿಂದ ಓಡಿಬಿಟ್ಟಿದ್ದಾನೆ!” ಎಂದು ನಮ್ಮನ್ನು ಪಕ್ಕದ ಹಳ್ಳಿಗೆ ಕರೆದೊಯ್ದರು. ಎಲ್ಲ ರೈತರೂ ಅವರನ್ನು ಹಿಂಬಾಲಿಸಿದರು.

* * *