ಬಡತನ, ಅಸ್ಪೃಶ್ಯತೆ, ಜಮೀನ್ದಾರಿ ಪಾಳೇಗಾರಿಕೆ, ರಾಜಮಹಾರಾಜರುಗಳ ಆಟಾಟೋಪಗಳು ಹಾಗೂ ಪುರೋಹಿತಶಾಹಿಯ ಪೂರ್ಣ ಹಿಡಿತದಲ್ಲಿ ಮಲೆನಾಡಿನ ಮುಗ್ಧ ಜನತೆ ತತ್ತರಿಸಿತು. ಇಂಥ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರದ ಅವಧಿಯಲ್ಲಿ ಗಾಂಧಿ ಚಳವಳಿಯ ಮುಖೇನ ಗೋಪಾಲಗೌಡರ ರಾಜಕೀಯ ಪ್ರವೇಶವಾಯಿತು. ಗಾಂಧಿ ಪ್ರಭಾವದಲ್ಲಿದ್ದ ಯುವಕ ಗೋಪಾಲಗೌಡರಿಗೆ, ಜನತೆಯ ಪರವಾಗಿ ಹೋರಾಡಲು ಅಹಿಂಸಾತ್ಮಕ ಹೋರಾಟ ಸಾಲದಾಗುತ್ತಿತ್ತು. ಆಗ ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಆಚಾರ್ಯ ನರೇಂದ್ರದೇವ ಇಂಥವರ ಪ್ರಭಾವದಲ್ಲಿದ್ದವರು – ಮಲೆನಾಡಿನ ಆ ಭಾಗದ ಕೆಲವು ಶ್ರೀಮಂತ ಬ್ರಾಹ್ಮಣ ಯುವಕರಾದ ಜಿ. ಸದಾಶಿವರಾಯರು, ಶಾಮ ಐತಾಳ್, ಕಾಳಿಂಗಯ್ಯನ ರಾಘವೇಂದ್ರರಾವ್; ಜೊತೆಗೆ ಗೋಪಾಲಗೌಡರ ವಯಸ್ಸಿನವರೇ ಆದ ಕೆ. ಶಂಕರನಾರಾಯಣ ಭಟ್ ಮತ್ತು ಗುಂಡುಮನೆ ರಾಮಕೃಷ್ಣಯ್ಯ ಇನ್ನಿತರರು. ಅದೇ ಕಾಲಕ್ಕೆ ಇವರೆಲ್ಲರಿಗೂ ಉಪಯುಕ್ತವಾಗಿ ದೊರೆತ ಖಡ್ಗ ಗೋಪಾಲಗೌಡರು. ಇವರಲ್ಲಿ ಹಿರಿಯರಾದ ಜಿ. ಸದಾಶಿವರಾಯರು ಈಗಲೂ ನಮ್ಮೊಂದಿಗಿದ್ದಾರೆ.

ಇವರೆಲ್ಲರ ಹೋರಾಟವೂ ಸಮಾಜವಾದದ ಹಿನ್ನೆಲೆಯಲ್ಲಿ ಗಾಂಧಿ ಚಳವಳಿಗೆ ಪೂರಕವಾಗಿಯೇ ಇತ್ತು. ಅದರಿಂದಾಗಿ ಹೊಸ ಯುವಪೀಳಿಗೆಗೆ ಸಾರ್ವಜನಿಕ ನೆಲೆಯಲ್ಲಿ ಒಂದು ಧ್ವನಿ ಸಿಕ್ಕಂತಾಯಿತು. ಮಲೆನಾಡಿನ ಬಡವರು, ಕೃಷಿಕಾರ್ಮಿಕರು, ಗೇಣಿದಾರರು ಮತ್ತು ನಿಸ್ಸಾಯಕರ ಪರವಾಗಿ ನಿಷ್ಠೂರವಾಗಿ ಮಾತಾಡುತ್ತಿದ್ದ ವ್ಯಕ್ತಿಗಳಲ್ಲಿ ತೀವ್ರಗಾಮಿಯೆಂದರೆ ಗೋಪಾಲಗೌಡರೆ; ಗೇಣಿದಾರರು ಮತ್ತು ದೀನದಲಿತರ ಗುಂಪು ಈ ಭೂಮಾಲೀಕರ ಹಿಡಿತದಿಂದ ಹೊರಬರಲು ಗೋಪಾಲಗೌಡರ ವಾಣಿಯ ಮುಖಾಂತರ ಸಮಾಜವಾದದ ಪ್ರಯೋಗ ಕೇಳಿ ಬರಲಾರಂಭಿಸಿತು.

ಗೌಡರ ಹುಟ್ಟೂರು ಶಾಂತವೇರಿ. ಆರಗದಲ್ಲಿ ನನಗೆ ಕೆಲಕಾಲ ಇವರು ಉಪಾಧ್ಯಯರಾಗಿದ್ದರು. ಸ್ವಾತಂತ್ರ್ಯಾನಂತರ ಚುನಾವಣೆಗೆ ಗೌಡರ ಪ್ರವೇಶ ವಿಚಿತ್ರವಾದದ್ದು. ಹೊಟ್ಟೆ ಬಟ್ಟೆಗಿಲ್ಲದೆ, ಮನೆಮಾರಿಲ್ಲದ ಯುವಕನನ್ನು ಬ್ರಾಹ್ಮಣ ಭೂಮಾಲೀಕರ ಮಕ್ಕಳು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಿದ್ದ ರೀತಿ ಕುತೂಹಲಕರವಾದದ್ದು; ಗೌಡರ ಚುನಾವಣೆಯ ಡಿಪಾಜಿಟ್ ಕಟ್ಟುವವರೂ ಕೂಡ ಅವರೇ ಆಗಿದ್ದರು. ನಿಧಿ ಸಂಗ್ರಹವೂ ಕೂಡ ಇದೇ ಗುಂಪಿನಿಂದ ಸಣ್ಣ ಪ್ರಮಾಣದಲ್ಲಿ ಆಗುತ್ತಿತ್ತು. ಗೌಡರು ಎಂದು ನೇರವಾಗಿ ಹೋಗಿ ಹಣಕ್ಕೆ ಕೈಚಾಚಿದವರಲ್ಲ. ಮತವನ್ನು ಯಾಚಿಸುವ ಯುವಕರ ಗುಂಪು ಊರಿಂದೂರಿಗೆ ಕಾಲ್ನಡಿಗೆಯಲ್ಲೇ ಚಲಿಸುತ್ತಿತ್ತು. ಆಗ “ಒಂದು ಮತ, ಒಂದು ರೂಪಾಯಿ’’ ಎಂಬ ಪ್ರಚಾರದೊಂದಿಗೆ ದಿನನಿತ್ಯದ ಚುನಾವಣಾ ಖರ್ಚು ಸಂಗ್ರಹವಾಗುತ್ತಿತ್ತು. ಗೌಡರಿಗಿದ್ದ ವಾಹನವೆಂದರೆ, ಒಂದು ಹಳೆಯ ಫೋರ್ಡ್‌ಕಾರು. ಇದನ್ನು ಅವರಿಗೆ ಬಾಡಿಗೆಗೆ ಕೊಟ್ಟಿದ್ದವರು ಮಂಜಪ್ಪಗೌಡ; ಗೋಪಾಲಗೌಡರ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಉದಾರವಾಗಿ ನಡೆದು ಕೊಂಡವನು ಆತ. ಇಂತಹ ವಾಹನದಿಂದ ರಸ್ತೆಗಳಿಲ್ಲದ ಹಳ್ಳಿಗಳಿಗೆ ಬರುವವರೆಗೂ ಮಧ್ಯರಾತ್ರಿಯಾದರೂ ಸರಿಯೇ – ಕಾಡಿನ ಮಧ್ಯೆ ಬೆಂಕಿಹಾಕಿಕೊಂಡು ಜನರು ಕಾದಿರುತ್ತಿದ್ದರು.

ಅವರ ಭಾಷಣ ಶೈಲಿ ಎಂದರೆ, ತಿಳಿಹಾಸ್ಯದೊಡನೆ ಪ್ರಾರಂಭವಾಗಿ, ನೆರೆದ ಜನರ ಕಷ್ಟ ಸುಖಗಳನ್ನು ಒಳಗೊಂಡಿರುತ್ತಿತ್ತು. ಆರ್ಥಿಕ, ಸಾಮಾಜಿಕ ಜೀವನವನ್ನು ಅವರಿಗೆ ತಿಳಿಯ ಹೇಳುತ್ತಾ ಗಂಟೆಗಟ್ಟಲೆ ಹೇಳುವಂತಹದ್ದು. ಇದರ ನಡುವೆ ಗೌಡರು, ತನಗೆ ಓಟುಕೊಡಿ ಎಂದು ಕೇಳುವುದನ್ನೇ ಮರೆತುಬಿಡುತ್ತಿದ್ದರು. ಆಗ ಬೇರೆಯವರು ಸೂಚನೆಕೊಟ್ಟು ‘ಓಟುಕೊಡಿ’ ಎಂದು ಅವರ ಮುಖಾಂತರ ಹೇಳಿಸಬೇಕಾಗಿತ್ತು.

ಕೆಲವೊಮ್ಮೆ ಅವರ ಭಾಷಣದ ಶೈಲಿ ಕಠೋರ ವಾಸ್ತವ ಸತ್ಯಗಳಿಂದ ಕೂಡಿದ್ದು, ಅದನ್ನು ಅರ್ಥೈಸುವ ಶಕ್ತಿ ಆ ಸಮಯದಲ್ಲಿ ಅಲ್ಲಿ ನೆರೆದಿದ್ದವರಿಗೆ ಆಗುತ್ತಿರಲಿಲ್ಲ. ಆದರೂ ಅದರ ಆಳ ಅರಿವಿನ ಪರಿಣಾಮ ಅನಂತರದಲ್ಲಿ ಗೊತ್ತಾಗಿ ಕರುಳಿಗೆ ನಾಟುವಂತಿರುತ್ತಿತ್ತು. ಇವರ ಮಾತಿನ ವೈಖರಿ, ದಿಟ್ಟತನ, ಪ್ರಾಮಾಣಿಕತೆ, ಗಾಂಧಿಮಾರ್ಗದಲ್ಲಿ ಬೆಳೆದು ಸಮಾಜವಾದಿಯಾಗಿ ಪರಿವರ್ತನೆ ಹೊಂದಿದ್ದು ಮುಂತಾದವುಗಳು ಭೂಮಾಲಿಕ ಹಿನ್ನೆಲೆಯ ಯುವಶಕ್ತಿಯನ್ನು ಒಲಿಸಿಕೊಂಡವು.

ಶಾಸನ ಸಭೆಯಲ್ಲಿ ಗೌಡರ ಪ್ರತಿಭಟನಾ ಶೈಲಿಯು ಪ್ರಾಮಾಣಿಕವಾಗಿದ್ದು ಚಾರಿತ್ರಿಕ ಹಿನ್ನೆಲೆಗಳಿಂದ ಕೂಡಿರುತ್ತಿತ್ತು. ಸಾಮಾಜಿಕ ಸ್ಥಿತಿಗತಿಗಳನ್ನು ತಾತ್ವಿಕ ದೃಷ್ಟಿಕೋನದಿಂದ ಅಳೆಯುತ್ತಿದ್ದಾಗ, ಆಳುವ ಪಕ್ಷಕ್ಕೆ ದಿಗಿಲಾಗುವಂತಿರುತ್ತಿತ್ತು. ಅಧಿಕಾರಶಾಹಿಯ ದರ್ಪ ಮನೋಭಾವವನ್ನು ದಿವ್ಯ ನಿರ್ಲಕ್ಷ್ಯ ಮತ್ತು ತುಚ್ಛೀಭಾವದಿಂದ ನೋಡುತ್ತಿದ್ದುದು ಗೌಡರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತಿತ್ತು. ಇದರ ಹಿನ್ನೆಲೆಯಲ್ಲಿ ಮೈಸೂರು ಅರಸರ ದಸರಾ ಮೆರವಣಿಗೆಗೆ, ಲಕ್ಷಾಂತರ ಜನಸಮುದಾಯದ ಮಧ್ಯೆ ಕಪ್ಪುಬಾವುಟ ಹಿಡಿದು ಧಿಕ್ಕರಿಸಿದ್ದು, ಗೋಪಾಲಗೌಡರ ಧೀಮಂತತೆಯನ್ನು ತೋರಿಸುತ್ತದೆ.

ಮಹಿಳೆಯರ ಎಲ್ಲ ರೀತಿಯ ಸಮಾನತೆಯ ಪರವಾಗಿ ಅವರಿದ್ದರು. ಅಲ್ಪಸಂಖ್ಯಾತರು ಮತ್ತು ದಲಿತರ ಬಗ್ಗೆ ಮಾತಾಡುವಾಗ, ಗೌಡರ ಊರಿನವರೇ ಆದ ದಾವೂದ್ ಸಾಹೇಬ್ ಮತ್ತು ತುದಿಗದ್ದೆ ಮಿಣುಕಮ್ಮ (ಮೇನಕಮ್ಮ) ಇವರೆಲ್ಲರ ಬಗ್ಗೆ ಗೌಡರಿಗಿದ್ದ ಅತೀವ ಕಳಕಳಿ, ಸಹಾನುಭೂತಿ ಇವರ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿತ್ತು. ಇವರಿಬ್ಬರನ್ನೂ ಅಪಾರ ಪ್ರೀತಿ, ವಿಶ್ವಾಸ ಮತ್ತು ಗೌರವಗಳಿಂದ ನೋಡಿಕೊಳ್ಳುತ್ತಿದ್ದರು. ಗೌಡರು ತೀರ್ಥಹಳ್ಳಿಗೆ ಬಂದಿದ್ದಾರೆಂದು ತಿಳಿದರೆ ಸಾಕು. ಇವರಿಬ್ಬರೂ ಅವರಿದ್ದಲ್ಲಿಗೆ ಓಡಿಹೋಗುತ್ತಿದ್ದರು. ಮಿಣುಕಮ್ಮ ಈಗಲೂ ನಮ್ಮೊಡನಿದ್ದಾಳೆ.

ಗೋಪಾಲಗೌಡರೊಡನೆ ಒಂದು ಸಾರಿ ನಾನು ಮತ್ತು ನನ್ನ ಗೆಳೆಯರು, ಆರಗದಿಂದ ಇಪ್ಪತ್ತು ಮೈಲಿ ದೂರದ ನಗರದಲ್ಲಿ ಜೋಡು ಮೇಳದ ಯಕ್ಷಗಾನಕ್ಕೆ ಹೋಗಿದ್ದೆವು. ಬೆಳಗಿನವರೆಗೂ ಆಟ ನೋಡಿ, ಹೊಟ್ಟೆ ಹಸಿದುಕೊಂಡು ಹಿಂದಿರುಗಿ ಬಂದಾಗ ಮಾರನೆದಿನ ಸಂಜೆಯಾಗಿತ್ತು. ಆಟದಲ್ಲಿ ರಾಮಗಾಣಿಗ ಮತ್ತು ಬಸವ – ಇವರ ಪಾತ್ರಗಾರಿಕೆ ಮತ್ತು ವಾಗ್‌ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರಿಗೆ ಮಹಾಭಾರತ ಮತ್ತು ರಾಮಾಯಣ ವಸ್ತುಗಳ ಬಗ್ಗೆ ಇದ್ದ ಕುತೂಹಲ ಮತ್ತು ಅಭಿಮಾನ ಗಮನಿಸುವಂತಹುದು.

ಗೋಪಾಲಗೌಡರು ಆರಗ ಹೈಸ್ಕೂಲು ಕಟ್ಟಡದ ಸಮಿತಿಯ ಅಧ್ಯಕ್ಷರಾಗಿದ್ದರು. ಅವರಿಗೆ ನೆರವಾಗಲು ನಾನು ಕಾರ್ಯದರ್ಶಿಯಾಗಿದ್ದೆ. ಆಗ ಶಾಲಾ ಕಟ್ಟಡವನ್ನು ಕಟ್ಟಲು ತೀವ್ರವಾದ ಹಣಕಾಸಿನ ತೊಂದರೆಯಿತ್ತು. ಆದ್ದರಿಂದ ಹಣ ಸಂಗ್ರಹಿಸಲು ಬೇರೆ ದಾರಿ ಹುಡುಕಿದೆ. ಸರ್ಕಾರದ ಪರವಾನಗಿಯಿಲ್ಲದೆ ಸಂರಕ್ಷಿತ ಜಾತಿಯಾದ ಕರಿಜಾಲವನ್ನು ಕಡಿಸಿ, ಹಣ ಸೇರಿಸುವ ಸಾಹಸದಲ್ಲಿದ್ದಾಗ, ಜೈಲಿಗೆ ಹೋಗುವ ಪ್ರಸಂಗವೂ ಬಂದಿತು. ಇದೇ ಕಾರಣವಾಗಿ ನಾನು ಜಿಲ್ಲಾ ಅರಣ್ಯಾಧಿಕಾರಿಗಳನ್ನು ನೋಡಬೇಕಾಗಿ ಬಂತು. ಅಂದು ರಾತ್ರಿ ಗೌಡರು, ತಾವು ಯಾವಾಗಲೂ ಉಳಿದುಕೊಳ್ಳುವ ಬೃದಂದಾವನ ಹೋಟೆಲ್‌ನಲ್ಲಿಯೇ ಮಲಗಿದರು. ಗೌಡರಿಗೆ ಸೂರ್ಯೋಧಯವಾಗುತ್ತಿದ್ದುದೇ ಬೆಳಿಗ್ಗೆ ಹತ್ತು ಗಂಟೆಗೆ; ಸೂರ್ಯಾಸ್ತವಾಗುತ್ತಿದ್ದುದು ಮಧ್ಯರಾತ್ರಿಯ ನಂತರ. ಬೆಳಿಗ್ಗೆ ಎಷ್ಟು ಹೊತ್ತಾದರೂ ಗೌಡರು ಬರಲಿಲ್ಲ. ಇದರಿಂದಾಗಿ ನಾನೊಬ್ಬನೇ ಅರಣ್ಯಾಧಿಕಾರಿಯನ್ನು ಕಾಣಲು ಹೋದೆ. ಕೊಡಗಿನ ಕಡೆಯ ಶಿಸ್ತಿನ ಅಧಿಕಾರಿ ಅವರು: ನಾನು ಅವರಿಗೆ ವಿವರಿಸುವ ಮುಂಚೆಯೇ, ನಾಟಾ ಕಡಿದಿದ್ದ ವಿಷಯ ಅವರಿಗೆ ಗೊತ್ತಿತ್ತು. ಆ ಅಧಿಕಾರಿ, ‘ನೀವು ಜೇಲಿಗೆ ಹೋಗಬೇಕಾದೀತು’ ಎನ್ನುತ್ತಿರುವಾಗಲೇ ಗೌಡರು ನಿಧಾನವಾಗಿ ಒಳಗೆ ಬಂದವರು, “ನನ್ನನ್ನೂ ಅವನ ಜೊತೆಯಲ್ಲಿಯೇ ಜೇಲಿಗೆ ಕಳಿಸಿರಿ, ನಾನು ಅಧ್ಯಕ್ಷ, ಅವನು ಹುಡುಗ, ಕಾರ್ಯದರ್ಶಿ’’ ಎಂದು ಕುಳಿತರು. ಆಗ ಕಸಿವಿಸಿಗೊಂಡ ಆ ಅಧಿಕಾರಿ, ಶಾಸಕರಾದ ನೀವೇ ಹೀಗೆ ಹೇಳಿದರೆ ಏನು ಮಾಡಲಿ ಎಂದು ಕೈಕಟ್ಟಿ ಕುಳಿತರು. ಇಲ್ಲಿ ಕಾನೂನು ಮತ್ತು ಅಧಿಕಾರ ಒಂದು ಕಡೆ, ಸತ್ಯ ಮತ್ತು ನಿಷ್ಠೆ ಇನ್ನೊಂದು ಕಡೆ. ಇವುಗಳ ನಡುವೆ ತಾಕಲಾಟ ನಡೆದು ಗೌಡರ ತತ್ವನಿಷ್ಠಗೆ ಗೆಲುವು ದೊರೆಯಿತು.

ಜಿಲ್ಲೆಯಲ್ಲಿ ‘ಕಾಗೋಡು ಸತ್ಯಾಗ್ರಹ’ ಒದಗಿಸಿಕೊಟ್ಟ ಕ್ರಾಂತಿಕಾರಕ ಸ್ವರೂಪ ಮಹತ್ವದ್ದು. ಗಣಪತಿಯಪ್ಪ ಒಬ್ಬ ಶಾಲಾಮಾಸ್ತರು. ಅವರು ಹಚ್ಚಿದ ಹೋರಾಟದ ಕಿಡಿಗೆ, ಗೌಡರ ಪ್ರವೇಶವು ಗಾಳಿ ಬೀಸಿತು. ಇದರಿಂದಾಗಿ ಆ ಹೋರಾಟ ರಾಷ್ಟ್ರದ ಗಮನ ಸೆಳೆಯಿತು. ಭೂವಿಯ ಒಡೆತನವನ್ನು ಕಸಿಯುವುದು ಕ್ರಾಂತಿಯ ಮೂಲಭೂತ ಸಿದ್ಧಾಂತ. ಅದರ ಪೂರ್ಣ ಅರಿವಿದ್ದೋ, ಅರಿವಿಲ್ಲದೆಯೋ ಗಣಪತಿಯಪ್ಪ ಮತ್ತು ಗೋಪಾಲಗೌಡರು ಅದನ್ನು ಕೈಗೆತ್ತಿಕೊಂಡರು. ಅವರಿಗೆ ಸಹಕಾರವಾಗಿ ಯುವಕರು, ಮಹಿಳೆಯರೂ ಸತ್ಯಾಗ್ರಹಕ್ಕೆ ನುಗ್ಗಿದರು. ಅದರಲ್ಲಿ ಗೋಪಾಲಗೌಡರ ಊರಿನವರೂ ಇದ್ದರು. ಎಸ್. ನಾರಾಯಣಮೂರ್ತಿ, ಆನೆಮಹಲ್ ಸೂರಣ್ಣ, ಕಾಳಮ್ಮ ನಗುಡಿ ವೆಂಕಟರಮಣ ಮುಂತಾದವರಿದ್ದರು.

ಈ ರೈತ ಸತ್ಯಾಗ್ರಹ ಭಾರತದ ಮೂಲೆಯೊಂದರಲ್ಲಿ ಆರಂಭವಾಯಿತು. ಡಾ. ರಾಮಮನೋಹರ ಲೋಹಿಯಾ ಅವರು, ಈ ಮೂಲೆಗೆ ಧಾವಿಸಿ ಬಂದು ಜೈಲಿಗೂ ಹೋಗಬೇಕಾಯಿತು. ಹೀಗೆ ಗೌಡರು ಕೇವಲ ಜಿಲ್ಲಾ ಮತ್ತು ರಾಜ್ಯಮಟ್ಟದ ಹೋರಾಟಗಳಿಗಲ್ಲದೆ, ಗೋವಾ ವಿಮೋಚನೆಯಂಥ ರಾಷ್ಟ್ರೀಯ ಹೋರಾಟಕ್ಕೂ ದುಮುಕಿದ್ದು ಗಮನಾರ್ಹವಾದದ್ದು.

ಗೌಡರ ವ್ಯಕ್ತಿತ್ವದ ಬಗ್ಗೆ ಕೆಲವು ನೆನಪುಗಳನ್ನು ಅವರದೇ ಸಂಭಾಷಣೆಯ ಮೂಲಕ ಹೇಳುವುದಾದರೆ; ಆಳುವ ಪಕ್ಷದ ಮಂತ್ರಿಗಳಲ್ಲಿ ಬಡವರಿಗೆ ಸೀಟು, ಉದ್ಯೋಗ ಕೊಡಿಸಬೇಕಾದರೆ ಹೀಗೆ ಹೇಳುತ್ತಿದ್ದರಂತೆ:

“ಏನ್ರಪ್ಪಾ ನೀವು ಮಂತ್ರಿಗಳು. ಬಡಹುಡುಗರು ಬಂದಿದ್ದಾರೆ. ಅವರಿಗೆ ಯಾರಪ್ಪಾ ಸಹಾಯ ಮಾಡೋದು?’’

ನಾನು ದೇವರೆ? ಅದೂ ಅಲ್ಲ.

ಮತ್ತೆ ಹ್ಯಾಗೆ ಇವರಿಗೆ ಸೀಟು ಕೊಡಿಸೋದು!

ಅದಕ್ಕೆ ಮಂತ್ರಿಗಳು ನಿಮ್ಮತ್ರ ಕಳಿಸ್ತೀನಿ. ಏನಾದ್ರೂ ವ್ಯವಸ್ಥೆ ಮಾಡಿ!’’

“ಗೌಡರೇ, ನೀವು ಹೇಳಿದ ಮೇಲೆ ನಂದೇನಿದೆ! ಅವರನ್ನು ಕಳಿಸಿ.’’

ಎಂದು ಹೇಳಿ ಅವರ ಕೆಲಸ ಮಾಡಿಕೊಡುತ್ತಿದ್ದರು. ಈ ರೀತಿಯಲ್ಲಿ ಬಹಳಷ್ಟು ಬಡಹುಡುಗರಿಗೆ ಬಿ.ಇ., ಎಂ.ಬಿ.ಬಿ.ಎಸ್., ಎಲ್.ಎಂ.ಪಿ. ಮುಂತಾದ ನಾನಾ ತರದ ಸೀಟುಗಳನ್ನು, ನೌಕರಿಗಳನ್ನು ಕೊಡಿಸಿದ್ದರು. ಇದರಿಂದಾಗಿ ಇವರ ಕೊನೆಯ ದಿನಗಳಲ್ಲಿ ಈ ವರ್ಗದವರು ನೆರವಾಗಿ ನಿಂತದ್ದು ಹೌದು.

ಗೋಪಾಲಗೌಡರು ಊರಕಡೆ ಬಂದಾಗಲೆಲ್ಲಾ ಅವರ ತಾಯಿಯನ್ನು ತಪ್ಪದೆ ನೋಡುತ್ತಿದ್ದರು. ‘ಗೌಡರು ಬಂದರು’ ಎಂದು ಹೇಳಿಕೊಳ್ಳುತ್ತಾ ಬರುವ ಅವರ ಬಳಗಕ್ಕೆ, ಅವರ ತಾಯಿ, ‘ಯಾ ಗೌಡನೋ ಅದು ಬಂದದ್ದು… ಅಂತೂ ಬಂದನಲ್ಲ!’ ಎಂದು ಹೇಳಿ “ಊಟಕ್ಕೆ ಏನ್ ಮಾಡಲೋ?’’ ಎಂದು ಕೇಳುತ್ತಿದ್ದರು. “ಕೈ ಕಾಲು ತಂದೀನಿ ನಾನು!’’ ಉತ್ತರ ಕೊಡುವ ಗೌಡರಿಗೆ “ನೋಡು ಯಂಗಂತದೆ ಮುಂಡೆ ಕುರ‍್ದೆ…’’ ಎಂದು ಅವರ ತಾಯಿ ಗೌಡರನ್ನು ಎಳೆಮಗುವಿನಂತೆಯೇ ಮಾತಾಡಿಸುತ್ತಿತ್ತು. “ಈ ಮುಂಡೆ ಕುರ‍್ದೆಗೆ ಮದುವೆಯಾಗಾಕೆ ಹೇಳ್ರೋ’’ ಎಂದು ಗೌಡರ ಬಳಗಕ್ಕೆ ಒತ್ತಾಯಿಸುತ್ತಿದ್ದರು. “ನನಗೆ ಯಾರು ಹೆಣ್ಣು ಕೊಡ್ತಾರೆ ಹೇಳು?’’ ಎಂದು ಗೌಡರು ನಗೆಯಾಡುತ್ತಿದ್ದರು. ಗೌಡರು ತಾಯಿಯ ಎದುರು ಮಗ, ಆದರೆ ಆಳುವವರಿಗೆ ಹುಲಿ ಎಂಬುದಕ್ಕೆ ಒಂದು ಘಟನೆ ನೆನಪಾಗುತ್ತದೆ. ಖಾಯಿಲೆ ಇದ್ದಾಗಲೇ ಗೌಡರು ಜಲ್ಲೂರಿಕೊಂಡೇ ಮಂತ್ರಿಯೊಬ್ಬರನ್ನು ನೋಡಲು ಅವರ ಮನೆಗೆ ಹೋದರು. ಗೌಡರನ್ನು ಮಂತ್ರಿಗಳ ಜವಾನ ಬಾಗಿಲಲ್ಲೇ ತಡೆದ. ಆಗ ಗೌಡರು ಜಲ್ಲು (ಕೋಲು) ಕುಟ್ಟುತ್ತಾ “ಗೋಪಾಲಗೌಡ ಬಂದಾನಂತ ಹೇಳೋ’’. ಎಂದು ಅಬ್ಬರಿಸಿದರು. ಗೌಡರ ಆರ್ಭಟವನ್ನು ಕೇಳಿಯೇ, ಒಳಗಿದ್ದ ಮಂತ್ರಿಗಳು ಬಾಗಿಲಿಗೆ ಓಡಿಬಂದು, “ಬನ್ನಿ ಗೌಡರೆ, ನಿಮ್ಮದೇ ಮನೆ!’’ ಎಂದು ಒಳಗೆ ಕರೆದೊಯ್ದರು.

ಮಾರ್ಕ್ಸ್‌ನ ಸಿದ್ಧಾಂತವನ್ನು ಆಳವಾದ ನೆಲೆಯಲ್ಲಿ ಇವರು ಅಭ್ಯಸಿಸಿದ್ದರೆಂದು ನನಗೆ ಅನ್ನಿಸುವುದಿಲ್ಲ. ಐರೋಪ್ಯ ದೇಶಗಳ ಸಮಾಜವಾದೀ ನೆಲೆಯಲ್ಲಿ ರೂಜೋ, ಲಾಸ್ಕಿ ಮುಂತಾದವರ ಪ್ರಭಾವದಲ್ಲಿ ಬೆಳೆದು ಬಂದ ಲೋಹಿಯಾರಂಥವರ ಅನುಯಾಯಿಯಾಗಿ ಸಮಾಜವಾದವನ್ನು ಒಪ್ಪಿಕೊಂಡವರು; ಹಾಗೆಯೇ ಸರ್ವಾಧಿಕಾರವನ್ನು ಅಕ್ಷರಶಃ ತರಸ್ಕರಿಸಿದವರಾಗಿದ್ದರು.

ರಷ್ಯಾದಲ್ಲಾದ ಕ್ರಾಂತಿಯ ಆರ್ಥಿಕ ಪರಿವರ್ತನೆಗಳು ಇವರ ಮೇಲೆ ಪ್ರಭಾವ ಬೀರಿದ್ದವು. ಇವರೊಬ್ಬ ಉದಾರವಾದಿ ಪ್ರಜಾಪ್ರಭುತ್ವವಾದಿಯಾಗಿದ್ದರು: ಕರ್ನಾಟಕ ಮತ್ತು ಕನ್ನಡವನ್ನು ಒಂದಾಗಿಯೇ ಭಾವಿಸಿ, ಕರ್ನಾಟಕ ಏಕೀಕರಣದ ಕನಸನ್ನು ಕಂಡವರಾಗಿದ್ದರು.