ಕಾಲ ವೇಗವಾಗಿ ಚಲಿಸುತ್ತಿತ್ತು. ನಾವು ಗೋಪಾಲಗೌಡರು ನಿರೂಪಿಸುತ್ತಿದ್ದ ಹೈಗಮಲ್ಲನ ಸಂಗತಿಯನ್ನು ಕುತೂಹಲದಿಂದ ಆಲಿಸುತ್ತಾ ಹಳ್ಳಿಗೆ ಸಾಗಿ ಬಂದೆವು

ಆದಷ್ಟು ಹೆಚ್ಚು ಜನರೊಂದಿಗೆ ಸತ್ಯಾಗ್ರಹವನ್ನು ನಡೆಸಬೇಕೆಂಬ ನನ್ನ ಆಸೆಯನ್ನು ನಾನು ಗೋಪಾಲಗೌಡರೊಂದಿಗೆ ಹೇಳಕೊಂಡೆ. ಅವರಿಗೂ ಅದೇ ರೀತಿಯ ಆಸೆಯಿತ್ತು ಅದರೆ ಅದು ಕೈಗೂಡಲಿಲ್ಲ.

“ಈಗ ಹಿಂಸೆ – ಅಹಿಂಸೆಯ ಚರ್ಚೆ, ಜಿಜ್ಞಾಸೆ ಬೇಡ, ನಮ್ಮ ಹಾದಿ ಅಹಿಂಸೆಯ ಹಾದಿ; ಮಹಾತ್ಮರು ತೋರಿದ ಹಾದಿ. ಅದರ ಬಗೆಗೆ ಯಾರಿಗೂ ಯಾವ ರೀತಿಯ ಸಂಶಯವೂ ಬೇಡ. ನಮಗೆ ಕತ್ತಿ ಹಿರಿದು, ಕುದುರೆಯ ಮೆಲೆ ಕುಳಿತು, ಯದ್ಧಕ್ಕೆ ಧಾವಿಸುವುದೇನೋ ಅತ್ಯಂತ ಪ್ರಿಯ. ಆದರೆ ನಮ್ಮ ನಾಯಕರು ಆ ಹಾದಿಯನ್ನು ತಿರಸ್ಕರಿಸಿದ್ದಾರೆ. ಹಾದಿ ಹಿಂಸೆ ಪ್ರತಿ ಹಿಂಸೆಯ ಮರಿಗಳನ್ನು ಇಡುತ್ತಾ ಸಾಗುತ್ತದೆ. ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನಲ್ಲಿ ಲಕ್ಷಾಂತರ ಯುದ್ಧ ರಕ್ತಪಾತಗಳೂ ನಡೆದಿದ್ದರೂ, ಸ್ಮಶಾನ ಶಾಂತಿ ಆಗಾಗ್ಗೇ ದೊರೆದಿದೆಯೇ ವಿನಃ ನಿಜವಾದ ಜೀವಂತ ಪ್ರೇಮಮಯ ಶಾಶ್ವತ ಶಾಂತಿ ಜಗತ್ತಿಗೆ ದೊರೆತೇ ಇಲ್ಲ. ಇಂಥ ಅಮೂಲ್ಯ ದಿವ್ಯ ಶಾಂತಿಯನ್ನು ಸಾಧಿಸುವ ಏಕೈಕ ಮಾರ್ಗ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹ ಮಾರ್ಗ. ಅದನ್ನೇ ನಾವೀಗ ಕಾಗೋಡಿನಲ್ಲಿ ನಡೆಸ್ತಾ ಇರೋದು. ಇಂದಿನ ಸತ್ಯಾಗ್ರಹ ಬಹಳ ಮಹತ್ವದ್ದು. ಅಹಿಂಸಾತ್ಮಕವಾಗಿಯೇ ನಡೆಯಬೇಕು. ಅದಕ್ಕೆ ಯಾರು ಸಿದ್ಧರಾಗಿದ್ದೀರಿ?”ಎಂದು ಗೌಡರು ಅಲ್ಲಿ ಸೇರಿದ್ದವರೆಲ್ಲರಿಗೂ ಕೇಳಿದರು.

ಅವರ ಸವಾಲಿಗೆ ಓಗೊಟ್ಟವರು ನಾವು ಮತ್ತು ಸಿದ್ಧಾಪುರ ಮತ್ತು ಮೈಸೂರಿನ ಕೆಲವು ರೈತರು. “ವಿಳಂಬ ಬೇಡ! ಬೇಗ ಸಿದ್ಧತೆಗಳನ್ನು ಮಾಡಿಕೊಂಡು ಹೊರಡಿ. ಇಂದಿನ ಸತ್ಯಾಗ್ರಹವೇನೋ ನಡೆಯುತ್ತದೆ. ನನ್ನ ಯೋಚನೆ ನಾಳೆಯ ಸತ್ಯಾಗ್ರಹದ್ದು; ನಾಡಿದ್ದಿನ ಸತ್ಯಾಗ್ರಹದ್ದು. ಅದರ ವ್ಯವಸ್ಥೆಗೆ ನಾನು ಹೊರಡಬೇಕು. ಈಗ ನೀವು ಹೊರಡಿ: ಎಂದರು.

“ಇಂಕಿಲಾಬ್ ಜಿಂದಾಬಾದ್! ಉಳುವವನೇ ನೆಲದೊಡೆಯ!” ಮೊದಲಾದ ಜಯಕಾರಗಳೊಂದಿಗೆ ಅವರನ್ನು ಬೀಳ್ಕೊಟ್ಟವು. ಅವರು ರೈತರ ಸಣ್ಣಗುಂಪಿನೊಂದಿಗೆ ಅಲ್ಲಿಂದ ನಿರ್ಗಮಿಸಿದರು.

ಗಾಂಧೀಟೋಪಿ ಧರಿಸಿ ನೀಳವಾದ ಕೋಟು, ಬಿಳಿಯ ಪ್ಯಾಂಟು ಹಾಕಿ ಕಾರಿನಿಂದ ಕೆಳಗಿಳಿದ ವ್ಯಕ್ತಿ ಶ್ರೀ ಕೆಂಗಲ್ ಹನುಮಂತಯ್ಯನವರಾಗಿದ್ದರು. ಅವರೊಡನೆ ಕಾರುಗಳಿಂದ ಹತ್ತಾರು ಕಾಂಗ್ರೆಸ್ ನಾಯಕರು, ಕೆ.ಜಿ. ಒಡೆಯರ್‌ರವರು ಮತ್ತು ಪತ್ರಕರ್ತರು ಕೆಳಗಿಳಿದರು. ಸುತ್ತಲೂ ಪ್ರಶಾಂತವಾಗಿದ್ದ ಗದ್ದೆ ಮೈದಾನವನ್ನು ತದೇಕ ದೃಷ್ಟಿಯಿಂದ ನೋಡತೊಡಗಿದರು. “ಇಲ್ಲಿ ಯಾವ ಪೊಲೀಸ್ ರಾಜ್ಯವೂ ಇಲ್ಲ” ಎಂದು ಜಮೀನ್ದಾರರು ಮತ್ತು ಕಾಂಗ್ರೆಸ್ ಎಂ.ಪಿ. ಯಾಗಿದ್ದ ಶ್ರೀ ಕೆ.ಜಿ. ಒಡೆಯರ್‌ರವು ಕೆಂಗಲ್‌ರವರಿಗೆ ವಿವರಿಸುತ್ತಿದ್ದರು ಎಂದು ತೋರುತ್ತದೆ. ಎಲ್ಲೆಲ್ಲೂ ಹಸಿರು ಬಯಲು. ಬೆಳ್ಳಕ್ಕಿಗಳು, ನೀಲ ನಭದಲ್ಲಿ ತೇಲುತ್ತಿದ್ದವು. ಪ್ರಶಾಂತತೆ ಎಲ್ಲೆಲ್ಲೂ ಕವಿದಿತ್ತು. ಅಗ ಮೇಘ ಗರ್ಜನೆಯಂತೆ ಕೇಳಿ ಬಂತು. ಸ್ವಾಮಿನಾಥನ್ ಮತ್ತು ನಮ್ಮ ಸಂಗಡಿಗರ ರಣಘೋಷಣೆ.

ಇಂಕಿಲಾಬ್….ಜಿಂದಾಬಾದ್!”

ಆಶ್ಚರ್ಯಚಕಿತರಾದ ಕಾಂಗ್ರೆಸ್ ಅಧ್ಯಕ್ಷರು, ನಾಯಕರು, ಪತ್ರಕರ್ತರು ನಮ್ಮತ್ತ ನೋಡುತ್ತಿರುವಂತೆ ನಾವು ಗದ್ದೆಯ ಕವೆಗೇಟನ್ನೂ ಬೇಲಿಯನ್ನೂ ಕಿತ್ತೆಸೆದು, ಗದ್ದೆಗೆ ನುಗ್ಗಿ, ಎಲ್ಲಿಂದಲೋ ಸಂಪಾದಿಸಿ ತಂದಿದ್ದ ಒಂದು ನೇಗಿಲಿನಿಂದ ಗದ್ದೆಯನ್ನು ಉಳುವ ಭಂಗಿಯಲ್ಲಿ ನಿಂದು, ಘೋಷಣೆಗಳನ್ನು ಕೂಗತೊಡಗಿದೆವು.

“ಉಳುವವನೇ… ನೆಲದೊಡೆಯ!”
“ರೈತ ಕಾರ್ಮಿಕರಿಗೆ …. ಜಯವಾಗಲಿ!”
“ದುಡಿಯುವ ವರ್ಗಕ್ಕೆ …. ಜಯವಾಗಲಿ!”

“ಇಂಕಿಲಾಬ್ …. ಜಿಂದಾಬಾದ್!” ಎಂಬ ಕೂಗು ಆ ನೀರವ ಗದ್ದೆಯ ಬಯಲಲ್ಲಿ ಮೊಳಗತೊಡಗಿತು. ಕೆಂಗಲ್ರವರೇನು ನನಗೆ ಹೊಸಬರಾಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಚಲೋ ಮೈಸೂರುಚಳುವಳಿಗೆ ಒಂದು ವರ್ಷಕ್ಕೂ ಮುಂಚಿತವಾಗಿ ರಾಜದ್ರೋಹದ ಆಪಾದನೆಗೆ ಗುರಿಯಾಗಿ ದಸ್ತಗಿರಿಯಾಗಿ ಸೆಂಟ್ರಲ್ ಜೈಲನ್ನು ಸೇರಿದ್ದ ಮೈಸೂರು ರಾಜ್ಯದ ಮೊಟ್ಟಮೊದಲ ನಾಯಕ ಅವರಾಗಿದ್ದರು. ಆಗ ನಾನು ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ವಿದ್ಯಾರ್ಥಿ. ಅವರನ್ನು ಜಿಲ್ಲಾ ನ್ಯಾಯಲಯಕ್ಕೆ ಬಿಗಿ ಪೊಲೀಸ್ ಪಹರೆಯಲ್ಲಿ ವಿಚಾರಣೆಗೆ ಕರೆತಂದಾಗ ನಾನು ಮತ್ತು ನನ್ನ ಸಹಪಾಠಿಗಳಾಗಿದ್ದ ಪ್ರಭಾಕರರಾಜ್ ಮೊದಲಾದ ವಿದ್ಯಾರ್ಥಿ ಸಂಗಾತಿಗಳೊಡನೆ ಕೆಂಗಲ್‌ರವರನ್ನು ನೋಡಲು ಹೋಗಿದ್ದೆವು.

ನಾವೆಲ್ಲಾ ಸೇರಿ ದುಡ್ಡು ಹಾಕಿ ಒಂದು ಡಜನ್ ಕಿತ್ತಲೆಹಣ್ಣು, ಹಾರವನ್ನು ಕೊಂಡು ಹೋಗಿ, ಅವರು ಪೊಲೀಸ್ ವ್ಯಾನ್ ಇಳಿಯುತ್ತಿದ್ದಂತೆಯೇ ಅವರಿಗೆ ವಂದಿಸಿ, ನಮ್ಮ ಕಾಣಿಕೆಯ ಫಲಪುಷ್ಟಗಳನ್ನು ಅರ್ಪಿಸಿದ್ದೆವು. ಅವರು ನಮ್ಮ ಹೆಗಲ ಮೇಲೆ ಕೈ ಇರಿಸಿ, ಅಭಿಮಾನದಿಂದ, ನಾವು ಯಾವ ಕ್ಲಾಸಿನಲ್ಲಿ ಓದುತ್ತಿದ್ದೇವೆ, ಯಾವ ಯಾವ ಊರುಗಳಿಂದ ಬಂದಿದ್ದೇವೆ ಎಂದು ವಿಚಾರಿಸುತ್ತಾ, ನಾವು ತಂದಿದ್ದ ಕಿತ್ತಳೆ ಹಣ್ಣುಗಳನ್ನು ಸುಲಿದು ತೊಳೆಗಳನ್ನು ತಿನ್ನುತ್ತಾ ನಮಗೂ ಕೊಡುತ್ತಾ ಪ್ರೀತಿಯ ಮಾತನಾಡಿದ್ದರು. ಆಗ ಅವರು ನಮ್ಮ ಆರಾಧ್ಯದೈವವಾಗಿದ್ದರು. ಸ್ವಾತಂತ್ರ್ಯ ಪೂರ್ವದ ದಬ್ಬಾಳಿಕೆಯ ದಿನಗಳಲ್ಲಿ ರಾಜದ್ರೋಹಿಎಂದು ಬಂಧನಕ್ಕೊಳಗಾಗಿ, ಸುತ್ತವರಿದ ಬಯೋನೆ ಹಿಂದೆ ತುಪಾಕಿಗಳನ್ನು ಹಿಡಿದ ಪೊಲೀಸರ ನಡುವೆ ನಗುನಗುತ್ತಾ ಇರುವ ಗಂಡಸುತನ ಇದ್ದವರು ಕೆಂಗಲ್ರವರೊಬ್ಬರೇ. ಅವರು ಸುಭಾಷ್ ಚಂದ್ರರಂತೆ ಯುವಕರ, ವಿದ್ಯಾರ್ಥಿಗಳ ಕಣ್ಣ ಮುಂದೆ ನಿಂತಿದ್ದ ಅತಿ ಎತ್ತರದ ನಾಯಕರಾಗಿದ್ದರು.

ಇದು ನೆನಪು ಮಾತ್ರ; ಗುಣಗಾನವಲ್ಲ. ಅಧಿಕಾರ ಎಲ್ಲಾ ಧೀರರನ್ನೂ ಕುಬ್ಜರನ್ನಾಗಿಸುತ್ತದೆ. ಎಲ್ಲಾ ಕುಬ್ಜರನ್ನೂ ಎತ್ತರದವರಂತೆ ಮಾಡುತ್ತದೆ. ಈಗ ಅವರು ನನ್ನ ದೃಷ್ಟಿಯಲ್ಲಿ ಕುಬ್ಜರೇ ಆಗಿದ್ದರು. ಅವರ ಕಣ್ಣೆದುರಿನಲ್ಲೇ ರೈತರ ನ್ಯಾಯಯುತ ಹಕ್ಕುಗಳಿಗಾಗಿ ಸತ್ಯಾಗ್ರಹವಾಗಿದ್ದು. ಅವರು ಸಂಬಂಧಪಡದವರಂತೆ ಎಲ್ಲವನ್ನೂ ನೋಡುತ್ತಾ ನಿಂತಿದ್ದರು. ನಮ್ಮನ್ನು ಹೊಡೆದು, ಬಡಿಯಲು ಯಾವ ಪುಂಡರ ದಂಡೂ ಬರಲಿಲ್ಲ. ಆದರೆ ಜಮೀನ್ದಾರನ ಪಾಳ್ಯದಲ್ಲಿ ತೀವ್ರ ಚಟುವಟಿಕೆ ಕಾಣಿಸಿತು. ಸ್ವಲ್ಪ ಹೊತ್ತಿನಲ್ಲೇ ನಾಲ್ಕಾರು ಪೊಲೀಸರು ಪೇಟ ಸಂಬಾಳಿಸಿಕೊಳ್ಳುತ್ತಾ ಗದ್ದೆಯಲ್ಲಿ ಏಳುತ್ತಾ ಬೀಳುತ್ತಾ ಓಡಿಬಂದರು. ನಮ್ಮೆದುರು ನಿಂತು “ ನಿಮ್ಮನ್ನು ದಸ್ತಗಿರಿ ಮಾಡಿದ್ದೇವೆ, ಬನ್ನಿ ನಮ್ಮ ಜೊತೆ” ಎಂದು ಗದ್ದೆಯಿಂದ ಹೊರಕ್ಕೆ ಕರೆದೊಯ್ದರು. ನಾವು ಹದಿನಾರು ಜನರಿದ್ದೆವು. ಮಂಜುನಾಥ ನಾಪತ್ತೆಯಾಗಿದ್ದ. ನಾವು ಕವೆಗೋಲಿನ ಗೇಟಿನ ಮೂಲಕ ರಸ್ತೆಗೆ ಕಾಲಿರಿಸಿದೆವು. ಅಲ್ಲೇ ಕೆಂಗಲ್‌ರವರ ಕಾರು ಮತ್ತು ಕಾಂಗ್ರೆಸ್ ನಾಯಕರು, ಪತ್ರಕರ್ತರ ತಂಡದೊಡನೆ ನಿಂತಿದ್ದರು. ಅವರು ನಮ್ಮನ್ನು ವಿಚಾರಿಸಿದರು.

“ನೀವೆಲ್ಲಾ ಈ ಗ್ರಾಮದವರಂತೆ ಕಾಣುವುದಿಲ್ಲವಲ್ಲಾ”

“ಹೌದು ನಾವು ಇಲ್ಲಿಯವರಲ್ಲ, ಬೆಂಗಳೂರು, ಕೋಲಾರ, ತಮಿಳುನಾಡು ಕಡೆಯಿಂದ ಬಂದಿದ್ದೇವೆ. ನಾವೆಲ್ಲಾ ಸೋಷಿಯಲಿಸ್ಟರು. ಕಾಗೋಡಿನ ರೈತರಿಗೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇವೆ….” ಎಂದು ಹೇಳುತ್ತಿರುವಂತೆಯೇ,

ಹೊಟ್ಟೆಗೆ ಹಿಟ್ಟಿಲ್ಲದ ಭಿಕಾರಿಗಳು ನೀವು! ಜೈಲಿನಲ್ಲಿ ಪುಗಸಟ್ಟೆ ಕೂಳೂ ಸಿಗುತ್ತೆ ಅಂತ ಬಂದಿರೋ ಬದ್ಮಾಷ್ಗಳು! ಸೋಷಿಯಲಿಸ್ಟರು!” ಎಂದು ಜಮೀನ್ದಾರರಾದ ಕೆ.ಜಿ. ಒಡೆಯರ್ ರವರು ನಮ್ಮ ಮೇಲೇರಿ ಬಂದರು. ಎಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪತ್ರಕರ್ತರ ಮುಂದೆಯೇ! ಒಬ್ಬ ಪಾರ್ಲಿಮಂಟ್ ಸದಸ್ಯ, ವಿದ್ಯಾವಂತ, ಸುಸಂಸ್ಕೃತ ಎನಿಸಿಕೊಂಡಿದ್ದ ಕೆ.ಜಿ. ಒಡೆಯರ್ ಬಾಯಿಂದ ಇಂಥ ಮಾತುಗಳು ಬರುವುದನ್ನು ಕೇಳಿ ನಾನು ಕ್ಷಣಕಾಲ ಅಪ್ರತಿಭನಾದೆ. ಆದರೆ, ಕ್ಷಣಾರ್ಧದಲ್ಲೇ ಅದಕ್ಕೆ ತಕ್ಕ ಶಾಸ್ತಿಯೂ ಅವರಿಗೆ ಆಯ್ತು. ನಮ್ಮೊಡನೆ ಇದ್ದ ತರುಣ ಕಟ್ಟಾಳು ಸ್ವಾಮಿನಾಥನ್ ಅವರ ಮುಂದಕ್ಕೆ, ಹಸಿದ ಹೆಬ್ಬುಲಿಯಂತೆ ಹಾರಿ ನುಡಿದ.

ದಿನಾ ನಮ್ಮ ಮನೆ ಅಂಗಳದಲ್ಲಿ ನಿಮ್ಮಂಥ ಹತ್ತಾರು ಜನ ಪುಢಾರಿಗಳು ಹೊಟ್ಟೆ ತುಂಬ ಉಂಡು ಹೋಗ್ತಾರೆ ಜಮೀನ್ದಾರ್, ನಾವು ಹೊಟ್ಟೆಗಿಲ್ಲದ ಭಿಕಾರಿಗಳಲ್ಲ. ಏನು ಮಾತಾಡ್ತೀಯೋಎಂದು ತಮಿಳಿನಲ್ಲಿ ಮೂದಲಿಸಿದ.

ಅವನ ಮಾತನ್ನು ಕೇಳಿ ಕೆ.ಜಿ. ಒಡೆಯರ್ ಕೆಂಡವಾದರು. “ಬದ್ಮಾಷ್ ನನ್ನ ಮಗನೇ! ಹೊಟ್ಟೆಗೆ ಹಿಟ್ಟಿಲ್ಲದವನೇ,…. ಮಹಾ ಸತ್ಯಾಗ್ರಹ ಮಾಡ್ತಾನಂತೆ. ಸತ್ಯಾಗ್ರಹ! ಜೈಲು ಕೂಳು ತಿನ್ನೋಕೆ ಬಂದಿರೋ ಭಿಕಾರಿ. ತಲೆಯೆಲ್ಲಾ ಮಾತಾಡ್ತಾನೆ” ಎಂದು ಸ್ವಾಮಿನಾಥನ್ ರವರನ್ನು ಮೂದಲಿಸಿದರು. ಆದರೆ, ಸ್ವಾಮಿನಾಥನ್ ತಮ್ಮನ್ನು ಹಿಡಿದುಕೊಂಡಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಸೆಣಸಾಡುತ್ತಿದ್ದರು.

ಆಗ ನಾನು ಕೆಂಗಲ್ರವರನ್ನು ಪ್ರಶ್ನಿಸಿದೆ: “ ದುರಹಂಕಾರದ ಮಾತು ಬಿಡ್ರೀ, ದುಡಿಯೋನು ಗೇಣಿದಾರ. ತಿನ್ನೋನು ಜಮೀನ್ದಾರ. ಪುಗಸಟ್ಟೆ ಕೂಳು ಇಡೀ ಜೀವಮಾನ ಕಾಲ ತಿಂದಿರೋದು ನೀವೇ. ಈಗ ರಟ್ಟೆ ಮುರಿದು ದುಡಿದು ತನ್ನೋ ಕಾರ್ಮಿಕರಿಗೆ, ಮಾತು ಹೇಳ್ತಿದ್ದೀರಾ? ತಂಬಾ ಚೆನ್ನಾಗಿದೆ ನಿಮ್ಮ ಮಾತು!… ಏನ್ ಸ್ವಾಮಿ! ನೀವೂ ಜೈಲಿಗೆ ಹೋಗಿದ್ದೋರೇ! ನೀವು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದಿರೋ; ಜೈಲು ಕೂಳು ತಿನ್ನಲು ಹೋಗಿದ್ದಿರೋಎಂದು ಪ್ರಶ್ನಿಸಿದೆ.

ಆಗ ಅವರು ನನ್ನ ಕಡೆಗೆ ಕೋಪದಿಂದ ಒಮ್ಮೆ ನೋಡಿದರು. ಏನೋ ಮಾತನಾಡಲು ಹೋದರು. ಆದರೆ ಬಿಂಕದಿಂದ ತೆಪ್ಪಗಾಗಿ, ಮುಖ ಗಂಟಿಕ್ಕಿಕೊಂಡರು. ಸುತ್ತಲೂ ಇದ್ದ ಪತ್ರಕರ್ತರು, ಕಾಂಗ್ರೆಸ್ ಮುಂದಾಳುಗಳೊಡನೆ ಮಾತನಾಡಲು ಪ್ರಾರಂಭಿಸಿದರು. ಆಗಿನ್ನೂ ಅವರು ಕೇವಲ ಕಾಂಗ್ರೆಸ್ ಅಧ್ಯಕ್ಷರೇ. ಇನ್ನೂ ಮುಖ್ಯಮಂತ್ರಿ ಆಗಿರಲಿಲ್ಲ. ವಿಧಾನಸೌಧ ಕಟ್ಟಿರಲಿಲ್ಲ. ಆದರೂ ನೀರೀಕ್ಷೆಯಲ್ಲಿ ನೆಲ ಬಿಟ್ಟು ಆಕಾಶದಿಂದ ಇಳಿದು ಬಂದವರಂತೆ ಠೀವಿ ಠೇಂಕರಗಳಿಂದ ನಡೆದುಕೊಳ್ಳುತ್ತಿದ್ದರು. ಒಂದೆರಡು ನಿಮಿಷಗಳಲ್ಲೇ ಸಣ್ಣದಾಗಿ ಮಳೆ ಹನಿಯತೊಡಗಿತು. ಎಲ್ಲರೂ ಅತ್ತಿತ್ತ ಓಡಿದರು.

ಬಡಪಾಯಿಯಂತೆ, ಪೊಲೀಸರ ಬಂಧಿಯಾಗಿ ನಿಂತಿದ್ದ ನನ್ನ ಮತ್ತು ನನ್ನ ಸಂಗಾತಿಗಳನ್ನು ಕಡೆಗಣ್ಣಿನಿಂದಲೂ ನೋಡಲಿಲ್ಲ ಕೆಂಗಲ್. ನಮ್ಮ ಮೇಲೆ ಸಿಟ್ಟಿನಿಂದ ಹರಿಹಾಯಲು ಮತ್ತೊಮ್ಮೆ ಪ್ರಯತ್ನಿಸಿದ ಕೆ.ಜಿ. ಒಡೆಯರ್ ರವರನ್ನು ತೆಪ್ಪಗಿರುವಂತೆ ಬೆರಳೆತ್ತಿ ಎಚ್ಚರಿಸಿದರು. ಅವರ ತಲೆಯ ಮೇಲೆ ಯಾರೋ ಛತ್ರಿ ಹಿಡಿದರು. ಅವರು ನೇರವಾಗಿ ತಮ್ಮ ಕಾರಿನ ಕಡೆಗೆ ನಡೆದರು. ಅಲ್ಲಿ ಅನೇಕ ಕಾಂಗ್ರೆಸ್ ನಾಯಕರು ಅವರಿಗೆ ನಮ್ಮವರ ಸೇವಕರಂತೆ ಕಾರಿನ ಬಾಗಿಲು ತೆರೆದರು. ಕೆಂಗಲ್ರವರು ಹಿಂದಿನ ಸೀಟಿನಲ್ಲಿ ತಾವೊಬ್ಬರೇ ಹೋಗಿ ಕುಳಿತರು. ಅವರ ಅಕ್ಕಪಕ್ಕದಲ್ಲಿ ಕಾಂಗ್ರೆಸ್ ನಾಯಕರು ಲೋಡು ದಿಂಬುಗಳನ್ನು ಜೋಡಿಸಿದರು. ಇನ್ನೊಬ್ಬ ಹಿರಿಯ ನಾಯಕರು ಕಾರಿನೊಳಗೆ ಮೈ ತೂರಿಸಿ, ನೆಲದವರೆಗೂ ಬಾಗಿ, ದಪ್ಪ ಶಾಲೊಂದನ್ನು ಅವರ ಕಾಲುಗಳಿಗೆ ಮಂಡಿಯವರೆಗೂ ಹೊದಿಸಿದರು. ಹೊರಗೆ ತಮ್ಮ ತಲೆಯನ್ನೆಳೆದು ಕೊಂಡು ಕೈ ಮುಗಿದು ನಡುಬಾಗಿ ನಮಸ್ಕಾರ ಮಾಡಿದರು. ಅವರೊಡನೆ ಎಲ್ಲಾ ಕಾಂಗ್ರೆಸ್ ಮುಖಂಡರೂ ಸೇರಿಕೊಂಡು ಅವರಿಗೆ ವಂದಿಸಿದರು. ಕೆಂಗಲ್ರವರು ಪ್ರತಿವಂದಿಸುವ ಶಾಸ್ತ್ರ ಮಾಡಿ ಕಾರಿನಲ್ಲಿ ಆಳವಾಗಿ ಹಿಂದಕ್ಕೊರಗಿ ಕುಳಿತುಕೊಂಡರು.

ಅವರ ಕಾರು ಹೊರಟಿತು. ಉಳಿದ ನಾಯಕರು, ಲಗುಬಗೆಯಿಂದ ಹಿಂದಿದ್ದ ತಮ್ಮ ಕಾರುಗಳಿಗೆ ತುಂಬಿಕೊಂಡರು. ಪತ್ರಕರ್ತರೂ ಹಿಂಬಾಲಿಸಿದರು. ಅವರ ಕಾರುಗಳು ಚಲಿಸಲು ಪ್ರಾರಂಭಿಸಿದವು. ಒಡನೆಯೇ ನಮ್ಮ ರಣಘೋಷಣೆಗಳು ಪ್ರಾರಂಭವಾದವು.

“ಧಿಕ್ಕಾರ, ಧಿಕ್ಕಾರ! …. ಜಮೀನ್ದಾರನಿಗೆ ಧಿಕ್ಕಾರ!”
“ಧಿಕ್ಕಾರ, ಧಿಕ್ಕಾರ! … ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರ!”
“ಇಂಕ್ವಿಲಾಬ್ ಜಿಂದಾಬಾದ್”
“ಉಳುವವನೇ ನೆಲದೊಡೆಯ!”
“ರೈತ ಕಾರ್ಮಿಕರ ಹೋರಾಟಕ್ಕೆ ಜಯವಾಗಲಿ!”
“ಇಂಕ್ವಿಲಾಬ್ ಜಿಂದಾಬಾದ್”

ಎಂಬ ಘೋಷಣೆಗಳು ನಭವನ್ನು ಸೀಳತೊಡಗಿದವು. ಕ್ಷೋಭೆ, ಕಿರುಚಾಟ, ಆಕ್ರೋಶ, ಘೋಷಣೆ, ಗದ್ದಲ, ಗಡಿಬಿಡಗಳು ಅಲ್ಲಿ ತಾಂಡವವಾಡಿತು. ಕಾಂಗ್ರೆಸ್ ನಾಯಕರ ಕಾರುಗಳು ಹೊರಟು ದೂರಕ್ಕೆ ಸಾಗಿ ಕಣ್ಮರೆಯಾದವು.

ಅಂತೂ ನಮ್ಮ ಅಂದಿನ ಗುರಿಯನ್ನು ನಾವು ಸಾಧಿಸಿದ್ದೆವು! ಸತ್ಯಾಗ್ರಹವೇ ಇಲ್ಲ ಎಂದು ಸಾಧಿಸುತ್ತಿದ್ದ ಜಮೀನ್ದಾರ ಮತ್ತು ಸರ್ಕಾರದ ಮಾತು ಸುಳ್ಳು! ಸತ್ಯಾಗ್ರಹ ಮುಂದು ವರಿಯುತ್ತಿದೆ; ಸಶಕ್ತವಾಗಿದೆ ಎಂಬುದನ್ನು ನಾವು ಮನವರಿಕೆ ಮಾಡಿಕೊಟ್ಟಿದ್ದೆವು. ಆದರೆ ಆಗಿನ ವಾರ್ತಾ ಮಾಧ್ಯಮಗಳು ನಮ್ಮ ಪರವಾಗಿರಲಿಲ್ಲ.

ಪೊಲೀಸರು ನಮ್ಮೆಲ್ಲರನ್ನೂ ಜಮೀನ್ದಾರನ ಮನೆಗೆ ಜಗುಲಿಗೆ ಕರೆದೊಯ್ದರು. ಅಲ್ಲಿ ನಮ್ಮ ಹೆಸರು ವಿಳಾಸಗಳ ಪಟ್ಟಿ ಮಾಡಿಕೊಂಡರು. ಜಮೀನ್ದಾರನ ಕಡೆಯವರು ಅಬ್ಬರ ಹಾಕುತ್ತಿದ್ದರು.

“ಕಳ್ಳ ನನ್ನ ಮಕ್ಕಳನ್ನ ನಮಗೆ ಒಪ್ಪಿಸಿ, ನಮ್ಮ ಧಣೀಯರನ್ನು ಬಯ್ದವ್ರೆ. ಈ ನನ್ನ ಮಕ್ಕಳಿಗೆ ಬುರುಡೆಗೆ ಬಿಸಿನೀರು ಕಾಯಿಸಬೇಕು. ನಮ್ಮ ಕಡೆ ಕೊಡ್ರೀ ಇವರನ್ನ ಜಮಾದಾರ ಸಾಹೇಬ್ರೆ” ಎಂದು ಅಲ್ಲಿದ್ದ ಪೊಲೀಸರನ್ನು ಗೂಂಡಾಪಡೆ ಬೇಡಿಕೊಳ್ಳುತ್ತಿತ್ತು. ಪೊಲೀಸ್ ಜಮಾದಾರ ಅವರ ಕಡೆ ನೋಡಿ, ಕಣ್ಣು ಮಿಟುಕಿಸಿ, ತುಟಿ ಮೇಲೆ ಬೆರಳಿಟ್ಟು ಅವರನ್ನು ತೆಪ್ಪಗಿರುವಂತೆ ಎಚ್ಚರಿಸಿ, ತನ್ನ ಪಾಡಿಗೆ ತನ್ನ ಕೆಲಸವನ್ನು ಮುಂದುವರೆಸುತ್ತಿದ್ದ. ನಮ್ಮೆಲ್ಲರ ವಿಳಾಸಗಳೇ ಹೇಳುತ್ತಿದ್ದುವು ಎಲ್ಲರೂ ವಿದ್ಯಾವಂತರು, ಕಾರ್ಮಿಕ ಸಂಘಗಳ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳೂ, ವಕೀಲರು ಮತ್ತು ಪತ್ರಕರ್ತರು ಎಂದು. ಮೇಲಾಗಿ ಎಲ್ಲರೂ ಕಟ್ಟುಮಸ್ತಾದ ಯುವಕರು. ಆ ಗೂಂಡಾ ಪಡೆಗಳ ದೊಣ್ಣೆಗಳನ್ನೇ ಕಿತ್ತುಕೊಂಡು ಅವರಿಗೆ ತಿರುಗಿಸಿ ಹೊಡೆಯಲು ಸಶಕ್ತರಾಗಿದ್ದೆವು. ಪೊಲೀಸ್ ಜಮಾದರ್ ನಮಗೆ ಕೇಳಿಸದಂತೆ ಅವರ ನಾಯಕನಿಗೆ ಕಿವಿಯಲ್ಲಿ ಉಸುರಿದ – ಎಲ್ಲಾದ್ರೂ ಉಂಟೆ! ಮುಂದೆ ಮುಖ್ಯಮಂತ್ರಿ ಆಗೋ ಕೆಂಗಲ್ಲರ ಕಣ್ಣೆದುರಿಗೆ, ಎಲ್ಲಾ ಪೇಪರ್ನೋರ ಕಣ್ಣೆದುರಿಗೇ ಅರೆಸ್ಟ್ ಮಾಡಿದ್ದೇವೆ. ಅಲ್ದೆ ಇವ್ಯಾರೂ ಹಳ್ಳಿ ಗಮಾರ್ಗಳಲ್ಲ. ಹುಲಿಗಳಿದ್ದಂಗೆ ಅವ್ರೆ. ನಿಮ್ಗೆ ಇವ್ರ ಸಹವಾಸ ಬೇಡಬಿಡ್ರಪ್ಪಾ. ನಾಳೆ ಬೆಳಿಗ್ಗೆ ೧೧ ಗಂಟೆಗೆ ಸಾಗರ ಮ್ಯಾಜಿಸ್ಟ್ರೇಟ್ ಕೋರ್ಟ್ನಾಗೆ ಇವ್ರನ್ನ ಹಾಜರ್ ಮಾಡದೆ ಹೋದ್ರೆ ಬಂತು ನಮ್ಮ ನೌಕರಿಗೆ ಕತ್ರಿಸುಮ್ಕಿರೋ!” ಎಂದು ಕೈ ಮುಗಿದು ಅವರನ್ನು ಬೇಡಿಕೊಂಡ. “ ವ್ಯಾನ್ ಕರೀರಪ್ಪ ಕಾನ್ಲೆ ಸ್ಟೇಷನ್‌ಗೆ ನಮ್ಮನ್ನು ಬಿಟ್ಟುಬಿಡಲಿ” ಎಂದು ಪೊಲೀಸ್ ವ್ಯಾನ್‌ಗೆ ಹೇಳಿಕಳಿಸಿದ.

ವ್ಯಾನ್ ಡ್ರೈವರ್ ಬಂದು ಜಮಾದಾರನಿಗೆ ತನ್ನ ಕೈಗಡಿಯಾರ ತೋರಿಸಿ ಕೇಳಿದ, ಹಿಗ್ಗು ತಿರಸ್ಕಾರಗಳಿಂದ: “ಇಷ್ಟು ಹೊತ್ತಿಗೆ ರೈಲು ಸಾಗರದ ಹತ್ರತ್ರ ಹೋಗಿರಲ್ವಾ? ಇನ್ನೂ ಕಾನ್ಲೆ ಇರ್ತಾನಾ? ಏಟಾಗೈತಪ್ಪೋ ಟೈಮು?” ರೈಲಿಗೆ ಹೊರಡಲು ಹೊತ್ತು ಮೀರಿದೆ ಎಂದು ಅರಿತ ಜಮಾದಾರ್ ಹೌಹಾರಿದ. “ಹೌದಲ್ಲಪ್ಪೋ! ಈ ಗಡಿಬಿಡಿಯಾಗ ಟೈಮೇ ಮರತೋಯ್ತು! ರೈಲು ಹೋಗಿರ್ತದೆ. ಈಗ ಸಾಗರಕ್ಕೆ ಕಾಲುನಡಿಗೆಯಲ್ಲಿ ನಡಿಯೋದೇ ಗತಿ. ಬಂತಲ್ಲಪ್ಪಾ ಗಾಚಾರ!” ಎಂದು ಹಣೆಹಣೆ ಚಚ್ಚಿಕೊಂಡ. ನಮ್ಮಲ್ಲರ ಕಡೆಗೆ ತಿರುಗಿ, “ಏನು ಕಾಮ್ರೇಡ್‌ಗಳೇ! ಈಗ ೧೨ ಮೈಲಿ ಗದ್ದೆ ತೆವರಿ ಮೇಲೆ ನಡೀಬೇಕು ನಾವು. ನೀವು ಮಾಡೋದ್ ಮಾಡಿದ್ರಿ, ಸತ್ಯಾಗ್ರಹ ರೈಲು ಟೈಮ್ ನೋಡ್ಕೊಂಡು ಮಾಡಾಕಿಲ್ಲೆ? ಈಗ ತಂದ್ರೀ ನಮ್ಮ ತಲೀಗೇ. ನಿಮ್ಮ ತಲೆಗೂ ಬಂತು!” ಎಂದು ಹಣೆ ಹಣೆ ಚಚ್ಚಿಕೊಂಡ.

* * *

ತಲೆ ಮರೆಸಿಕೊಂಡು, ಭೂಗತರಾಗಿ ರೈತರ ಸಂಘಟನೆಯಲ್ಲಿ ಗ್ರಾಮಾಂತರಗಳಲ್ಲಿ ತಲ್ಲೀನರಾಗಿದ್ದ ನಾಯಕರುಗಳು ಒಬ್ಬೊಬ್ಬರಾಗಿ ದಸ್ತಗಿರಿಯಾಗಿ ಜೈಲಿಗೆ ಬರತೊಡಗಿದರು. ಶ್ರೀಯುತರುಗಳಾದ ಶಾಮತವೇರಿ ಗೋಪಾಲಗೌಡರು. ಚಿತ್ರದುರ್ಗದ ಗಂಡುಗಲಿ, ಗರುಡಶರ್ಮ, ಯು.ಆರ್. ಅನಂತಮೂರ್ತಿ – ಇವರೆಲ್ಲರೂ ಒಳಕ್ಕೆ ಬಂದರು. ಪ್ರತಿದಿನವೂ ಹತ್ತಾರು ಸತ್ಯಾಗ್ರಹಿಗಳು ತಂಡತಂಡವಾಗಿ ಜೈಲು ಸೇರುತ್ತಿದ್ದರು. ಶಿವಮೊಗ್ಗ ಜಿಲ್ಲಾ ಕಾರಾಗೃಹ ತುಂಬಿ ಕಿಜಗುಟ್ಟತೊಡಗಿತು.

ಸಾಗರಕ್ಕೆ ಭೇಟಿಗಳೂ ಹೆಚ್ಚಾಗುತ್ತಾ ಹೋದುವು. ಜೈಲಿನಲ್ಲಿದ್ದ ಸತ್ಯಾಗ್ರಹಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಒಂದು ದಿನ ನಮ್ಮ ತಂಡವನ್ನು ಪೊಲೀಸರು ಸಾಗರ ಕೋರ್ಟಿಗೆ ಕರೆದೊಯ್ದರು. ವಕೀಲ ಕೆ. ವೀರಭದ್ರಪ್ಪನವರೂ ಬಂದಿದ್ದರು. ನಾಲ್ಕಾರು ನಿಮಿಷ ಕೋರ್ಟಿನಲ್ಲಿ ಮಾತುಕತೆಯಾಯ್ತು. ಹಠಾತ್ತನೆ ನ್ಯಾಯಾಧೀಶರು ನಮ್ಮೆಲ್ಲರನ್ನು ಬಿಡುಗಡೆ ಮಾಡಿಬಿಟ್ಟರು. ಪೊಲೀಸರು ನಮ್ಮನ್ನು ಬಿಟ್ಟು ತಮ್ಮ ಪಾಡಿಗೆ ತಾವು ಹೋಗಿಬಿಟ್ಟರು.

ರಾತ್ರಿ ಶಿವಮೊಗ್ಗ ಪೇಟೆ ಮಲಗುವ ವ್ಯವಸ್ಥೆ ಮಾಡಿಕೊಳ್ಳುತ್ತಿತ್ತು. ನಾವು ನೇರವಾಗಿ ರಾಮಣ್ಣ ಶೆಟ್ಟಿ ಪಾರ್ಕಿನ ಮುಂದೆ ಇದ್ದ ತುಂಗಾನದಿಯ ಮರುಳು ದಂಡೆಗೆ ಬಂದೆವು. ಒಂದು ಟವೆಲ್ಲಿನ ತುಂಬಾ ಹಾಕಿಸಿಕೊಂಡು ಬಂದಿದ್ದ ಕಡಲೆಕಾಯಿ ತಿನ್ನುತ್ತಾ, ತುಂಗಾನದಿಯ ಮರುಳು ದಂಡೆಯ ಮೇಲೆ, ಜುಳು ಜುಳು ಹರಿಯುವ ನದಿಯ ಶಾಖೆಗಳ ಮಧ್ಯೆ, ಹೊಳೆಯುವ ನಕ್ಷತ್ರಗಳ ಕೆಳಗೆ ಇಡೀ ರಾತ್ರಿ ಹಾಡುತ್ತಾ ಕುಣಿಯುತ್ತಾ ಜಲಕ್ರೀಡೆ ಯಾಡುತ್ತ ಕಳೇದೆವು. ಮರಳು ದಿನ್ನೆಗಳ ಮೇಲೆ, ಕಿನ್ನರರಂತೆ ಕಾಲಕಳೆದು ಅಲ್ಲೇ ಮಲಗಿ ನಿದ್ರೆ ಹೋದೆವು.

ಮಾರನೆಯ ಪ್ರಾತಃಕಾಲ ಬಳಿಯಲ್ಲೇ ಇದ್ದ ಪಾರ್ಟಿ ಆಫೀಸಿಗೆ ಹೋದೆವು. ಅಣ್ಣಯ್ಯ ಎಂದೇ ಜನಪ್ರಿಯರಾಗಿದ್ದ ವೈ. ಆರ್. ಪರಮೇಶ್ವರಪ್ಪ ಅಲ್ಲಿ ನಮಗಾಗಿ ಕಾಯುತ್ತಿದ್ದರು.

ಒಂದು ಸಣ್ಣ ಸಭೆ ಮಾಡಿದೆವು. ಸತ್ಯಾಗ್ರಹ ಸಮಾಪ್ತಗೊಳ್ಳುತ್ತಿತ್ತು. ಅದರೆ, ಮೂಲ ಸಮಸ್ಯೆ ಕೊನೆಗೊಂಡಿರಲಿಲ್ಲ. ಭಯೋತ್ಪಾದನೆಯ ಉಗ್ರತೆ ತಗ್ಗಿತ್ತು. ಪರಸ್ಪರ ನಂಬಿಕೆ, ದ್ವೇಷ ಮಾಯಾವಾಗಿರಲಿಲ್ಲ. ಕ್ರೌರ್ಯದ ಬೀಡಾಗಿದ್ದ ಕಾಗೋಡು ಈಗ ಧೈರ್ಯ, ಆತ್ಮವಿಶ್ವಾಸಗಳ ನೆಲೆವೀಡಾಗಿತ್ತು. ಅಹಿಂಸೆಯ ಕವಚ ತೊಟ್ಟ ಗೇಣಿದಾರರ ಅಭೇದ್ಯ ಕೋಟೆಯಾಗಿತ್ತು.

ಅವಿವೇಕ, ದರ್ಪ ಮತ್ತು ಅಟ್ಟಹಾಸದಿಂದ ಹಿಂಸಾರತಿಯಲ್ಲಿ ಸರ್ಕಾರ ಮತ್ತು ಜಮೀನ್ದಾರರು ನಿರತರಾಗಿದ್ದರೂ ಸಹ ರೈತರು ಅತ್ಯಂತ ಶಾಂತಿ ಮತ್ತು ಸಹನೆಯನ್ನು ಪ್ರದರ್ಶಿಸಿದ್ದರು. ಶ್ರೇಷ್ಠ ಮಟ್ಟದ ನಾಯಕ ಶ್ರೀ ಶಾಂತವೇರಿ ಗೋಪಾಲಗೌಡರಿಂದ  ಪವಾಡ ಸಾಧ್ಯ. ಅವರು ಅಹಿಂಸೆಯ ಕಡಿವಾಣವನ್ನು ಸ್ವಲ್ಪ ಸಡಿಲಿಸಿದ್ದರೂ ಸಾಕಾಗಿತ್ತು; ಇಡೀ ಮಲೆನಾಡು ಹಿಂಸೆ, ಪ್ರತಿಹಿಂಸೆ, ರಕ್ತಪಾತಗಳ ಬೀಡಾಗಿ ಮತ್ತೊಂದು ತೆಲಂಗಾಣವೋ, ಸಿಂಹಳವೋ ಆಗಿ ಪರಿವರ್ತನೆಗೊಳ್ಳುತ್ತಿತ್ತು. ಜಮೀನ್ದಾರರ ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿದ್ದುವು. ಗೇಣಿದಾರರು ಮತ್ತು ಜಮೀನ್ದಾರರ ರಕ್ತಸಿಕ್ತ ದೇಹಗಳು ಮಲೆನಾಡಿನ ಗದ್ದೆಗಳಲ್ಲಿ ತೋಟಗಳಲ್ಲಿ ಹೆಣಗಳಾಗಿ ಇಟ್ಟಾಡುತ್ತಿದ್ದವು. ಹಿಂಸಾರತಿಯ ಆರಂಭಕ್ಕೆ ಹೆಚ್ಚು ಶ್ರಮ ಬೇಡ. ರಕ್ತಕ್ಕೆ ರಕ್ತ ಬೀಜಾಸುರನ ಗುಣವಿದೆ: ಒಂದು ತೊಟ್ಟು ರಕ್ತ ಚೆಲ್ಲಿದರೆ ಸಾಕು. ಒಂದು ಬಳ್ಳ ರಕ್ತವನ್ನು ಪ್ರತೀಕಾರವಾಗಿ ಬೇಡುತ್ತದೆ. ಒಂದು ಗುಡಿಸಲಿಗೆ ಬೆಂಕಿ ಇಟ್ಟರೆ ಸಾಕು ಒಂದು ಹಳ್ಳಿಯೇ ಹತ್ತಿ ಉರಿಯುತ್ತದೆ. ಆದರೆ ಅವಘಡದಿಂದ ಮಲೆನಾಡನ್ನು ಪಾರು ಮಾಡಿದ ಮಹಾತ್ಮ ಶಾಂತವೇರಿಯ ಅಶಾಂತ ಸಂತ ಗೋಪಾಲಗೌಡರು. ಇನ್ನೂ ಶಾಸಕರೂ ಆಗದೆ, ತಮ್ಮ ಎಳೆ ಯೌವ್ವನದಲ್ಲೇ ಯಾವ ಪ್ರೌಢನಾಯಕನಿಗೂ ಇಲ್ಲದೆ ಇರುವ ದೂರಾಲೋಚನೆ, ಹೊಣೆಗಾರಿಕೆ ಮತ್ತು ಶಾಂತಿ ಪ್ರಿಯತೆಗಳನ್ನು ಕಟ್ಟುನಿಟ್ಟಾಗಿ ಪ್ರದರ್ಶನ ಮಾಡಿ; ಅಹಿಂಸಾ ಮಾರ್ಗದ ಆಚರಣೆಗಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ಧರಾಗಿದ್ದ ಅವರು ಮಲೆನಾಡಿನ ಮಹಾತ್ಮರೇ ಸರಿ. ಅವರ ಚಿನ್ನದ  ಪುತ್ಥಳಿಯನ್ನು ಪ್ರತಿಪ್ಠಾಪಿಸಿ, ದಿನವೂ ಪೂಜೆ ಸಲ್ಲಿಸಿದರೂ ಸಹ, ಇಂದು ಶಾಂತಿ, ಸಮೃದ್ಧಿ ಮತ್ತು ಸಿರಿಸಂಪದಗಳಲ್ಲಿ ಮೈಮರೆತಿರುವ ಮಲೆನಾಡಿನ ರೈತರು ಶ್ರೀ ಶಾಂತವೇರಿ ಗೋಪಾಲಗೌಡರು ಋಣವನ್ನು ತೀರಿಸಲಾರರು.

ಗೋಪಾಲಗೌಡರ ಅನುಭವವೇ ಬೇರೆಯದಾಗಿತ್ತು. ಅವರು ಕಾಗೋಡಿನ ಸುತ್ತಮುತ್ತಲೂ ಇದ್ದ ಸಣ್ಣ ದೊಡ್ಡ ಗ್ರಾಮಗಳಲ್ಲಿ ಆಯ್ದ ಕೆಲವು ಗೇಣಿದಾರರೊಡನೆ ಸಂಚರಿಸುತ್ತಾ ಸತ್ಯಾಗ್ರಹಕ್ಕಾಗಿ ಗೇಣಿದಾರರನ್ನು ಸಂಘಟಿಸುತ್ತಿದ್ದರು. ರಾಜ್ಯ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳೆಲ್ಲರೂ ಈಗಾಗಲೇ ಸೆರೆಮನೆವಾಸದಲ್ಲೋ ಭೂಗತರಾಗಿಯೋ, ಜಾಮೀನಿನ ಮೆಲೆಯೋ ಇದ್ದದ್ದರಿಂದ; ಕೇಂದ್ರ ಪಕ್ಷದೊಂದಿಗೆ ಕಾಗದ ಪತ್ರಗಳ ವ್ಯವಹಾರವಿರಿಸಿ ಕೊಂಡಿದ್ದರೇ ವಿನಃ ಬೇರಿನ್ನಾರ ಜೊತೆಗೂ ಹೆಚ್ಚಿನ ಪತ್ರ ವ್ಯವಹಾರಗಳು ಅವರಿಗೆ ಇರಲಿಲ್ಲ.

ಹೀಗೆ ಅವರೊಮ್ಮೆ ಕಾಗೋಡಿನ ಪಕ್ಕದ ಹಳ್ಳಿಯೊಂದರಲ್ಲಿ ತಂಗಿದ್ದು ಬೆಳಿಗ್ಗೆ ಎದ್ದು, ಪ್ರಾತರ್ವಿಧಿಗಳನ್ನು ಬಯಲಿನಲ್ಲಿ ಪೂರೈಸಿಕೊಂಡು ಬಂದು, ತಾವು ಉಳಿದುಕೊಂಡಿದ್ದ ಮನೆಯ ಕಟ್ಟೆಯ ಮೇಲೆ ತಮ್ಮ ಸಮಸ್ತ ‘ಸೆಕ್ರೆಟೇರಿಯೇಟ್’, ‘ವಾರ್ಡ್‌ರೋಬ್’ ಮತ್ತು ‘ಟ್ರಜರಿ’ ಆಗಿದ್ದ ‘ಹೋಲ್ಡಾಲ್’ ಅನ್ನು ಬಿಚ್ಚಿ ಪತ್ರ ವ್ಯವಹಾರಕ್ಕೆ ತೊಡಗಿದರಂತೆ.

ಆಗ ಬೀದಿಯಲ್ಲಿ ಕೆಲವು ರೈತರು ‘ಯಾನ್ ಬಂತು…. ಪೊಲೀಸ್ ಯಾನ್!’ ಎಂದು ಗಡುಗನನ್ನು ಕಂಡ ಕೋಳಿಪಿಳ್ಳೆಗಳಂತೆ ಗಾಬರಿಯಿಂದ ಓಡೋಡಿ, ದಿಕ್ಕಾಪಾಲಾಗಿ ಚದುರಿ ಅತ್ತಿತ್ತ ಓಡತೊಡಗಿದರಂತೆ.

ಇವರಿಗೆ ಆಶ್ರಯ ನೀಡಿದ್ದ ಗೇಣಿದಾರ ಮುದುಕಿ, ಇವರ ಹೋಲ್ಡಾಲ್ ಅನ್ನು ಗಡಿಬಿಡಿಯಿಂದ ಸುತ್ತಿ ಮನೆಯೊಳಗೆ ಅವರನ್ನು ಕರೆದೊಯ್ದು, ಮನೆಯ ಬಾಗಿಲನ್ನು ಮುಚ್ಚಿ ಬೀಗ ಹಾಕಿ ಹೊರ ನಡೆದಳಂತೆ.

ಕಾಗೋಡಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಪೊಲೀಸರ ಪೆಟ್ರೋಲಿಂಗ್ ತೀವ್ರ ತರವಾಗಿತ್ತು. ಎಷ್ಟೇ ಜಾಲಾಡಿಸಿ, ಶೋಧಿಸಿದರೂ ಸತ್ಯಾಗ್ರಹಿಗಲೂ ಪೊಲೀಸರ ಕೈಗೆ ಸಿಗುತ್ತಿರಲಿಲ್ಲ. ಆದರೆ ಸತ್ಯಾಗ್ರಹ ಮಾತ್ರ ನಡೆಯುತ್ತಲೇ ಹೋಗುತ್ತಿತ್ತು. ಅವರು ಬೇಲಿ ಕಿತ್ತು ಉಳಲು ಪ್ರಯತ್ನ ಮಾಡುತ್ತಿರುವಾಗ ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದರೇ ವಿನಃ ಅದಕ್ಕೆ ಮುಂಚೆ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿರಲಿಲ್ಲ.

ಈ ಕಾರಣದಿಂದ ಅವರ ಇಂದಿನ ಶೋಧನೆ ತೀವ್ರವಾಗಿತ್ತು. ಅವರು ಗ್ರಾಮದ ಪ್ರತಿಯೊಂದು ಮನೆಯನ್ನೂ ಜಾಲಾಡಿಸುತ್ತಾ ಹೋದರು.

ಇತ್ತು ಗೋಪಾಲಗೌಡರು, ಇದ್ದಕ್ಕಿದ್ದಂತೆಯೇ ಕತ್ತಲೆಯ ಕೊಂಪೆಯಾದ ಆ ಮನೆಯ ನಡುಮನೆಗೆ ಬಂದರು. ಆ ಮನೆಗೆ ಒಂದು ಅಟ್ಟ ಇರುವುದು ಕಾಣಿಸಿತು. ಅಲ್ಲೇ ಒಂದು ಏಣಿಯೂ ಇತ್ತು. ಗೋಪಲಗೌಡರು ಅಟ್ಟವನ್ನು ಹತ್ತಿ ನೋಡಿದರು. ಅದರಲ್ಲಿ ಅಕ್ಕಿ ತುಂಬುವ ಒಂದು ವಾಡೆ ಇದ್ದದ್ದು ಕಂಡು ಬಂತು. ಅದರ ಹಿಂದೆ ಅಡಗಿ ಕುಳಿತರು.

ಇಡೀ ಗ್ರಾಮದೊಳಗೆಲ್ಲಾ ಮನೆಮನೆಗಳಲ್ಲಿ ಶೋಧನೆ ನಡೆಸುತ್ತಿದ್ದ ಪೊಲೀಸರ ಗದ್ದಲ, ಕಿರಿಚಾಟ, ಬೂಟುಗಾಲುಗಳ ಸದ್ದು ಅವರು ಅಡಗಿದ್ದ ಮನೆಯ ಕಡೆಗೇ ಬರುತ್ತಿತ್ತು.

ಇಷ್ಟು ಹೊತ್ತಿಗೆ ಗೌಡರು ಆ ಮನೆಯ ಅಟ್ಟದಿಂದ ತಪ್ಪಿಸಿಕೊಂಡು ಹೋಗುವ ನಾನಾ ಮಾರ್ಗಗಳನ್ನು ಪರೀಕ್ಷಿಸಿ ನೋಡಿ, ಅದು ನಿರರ್ಥಕವೆಂದು ತೀರ್ಮಾನಿಸಿ, ವಾಡೆಯ ಹಿಂದೆ ನಿಸ್ಸಹಾಯಕರಾಗಿ ಅಡಗಿ ಕುಳಿತದ್ದರು.

ಕ್ಷಣಗಳು ವೇಗವೇಗವಾಗಿ ಸಾಗುತ್ತಿದ್ದವು. ಪೋಲೀಸರ ಬೂಟುಗಾಲುಗಳ ಸಪ್ಪಳ ಹತ್ತಿರ ಬರುತ್ತಿತ್ತು. ಕೊನೆಗೆ ಅವರಿದ್ದ ಮನೆಯ ಮುಂದೆ ಒಬ್ಬ ಪೊಲೀಸ್ ಅಧಿಕಾರಿ ನಿಂದು ಕಿರುಚುತ್ತಿದ್ದ.

“ಈ ಮನೆಗೆ ಯಾರು ಬೀಗ ಹಾಕಿರೋರು, ಬೀಗ ತೆಗೀತಿರೋ ಇಲ್ಲ ಈಗಲೇ ಬೀಗ ಹೊಡೆದು ಹಾಕಬೇಕೋ! ಯಾರದು ಮನೆ? ಬೀಗ ತೆಗೀರಿ!” ಎಂದು ಅಬ್ಬರಿಸತೊಡಗಿದ.

ಒಡನೆಯೇ ಆ ಮನೆಯ ಯಜಮಾನಿ ಮುದುಕಿಗೆ ಅರ್ಥವಾಯಿತು. ಇನ್ನೂ ಬೀಗದಿಂದ ಯಾವ ಪ್ರಯೋಜನವೂ ಇಲ್ಲ ಎಂದು! ಆಕೆ ಸದ್ದಿಲ್ಲದೆ ಜನರ ಮಧ್ಯದಿಂದ ನಡೆದು ಬಂದು ಆ ಮನೆಯ ಬೀಗ ತೆಗೆದಳು.

ಪೊಲೀಸರು ಬೇಟೆನಾಯಿಗಳಂತೆ ಮನೆಯೊಳಕ್ಕೆ ನುಗ್ಗಿದರು: ಗೋಪಾಲಗೌಡರು ಅಡಗಿದ್ದ ಅಟ್ಟ ಕತ್ತಲಲ್ಲಿ ಮುಳುಗಿತ್ತು; ಅವರು ಎದ್ದು ನಿಂತು ಎಲ್ಲವನ್ನೂ ಎಚ್ಚರಿಕೆಯಿಂದ ನೋಡುತ್ತಿದ್ದರು. ಒಬ್ಬ ಪೊಲೀಸ್ ಪೇದೆ ಇವರಿದ್ದ ಜಾಗವನ್ನೇ ದಿಟ್ಟಿಸಿ ನೋಡಿದ: ಕತ್ತಲಲ್ಲಿ ಇವರು ಕಾಣಲಿಲ್ಲ. ಆದರೆ ಗೌಡರು ಸದ್ದಿಲ್ಲದೆ ನಿಂತ ಹೆಜ್ಜೆಯಲ್ಲಿ ನಿಂತತೆಯೇ ಕುಸಿದು ನೆಲಕ್ಕೆ ಕುಳಿತರು.

ಎಲ್ಲವೂ ಸ್ತಬ್ದವಾಯಿತು. ‘ಬದುಕಿದೆಯಾ ಬಡಜೀವ’ ಎಂದು ಗೌಡರು ನಿಟ್ಟುಸಿರು ಬಿಟ್ಟರು. ಮನೆಯಿಂದ ಪೊಲೀಸರು ನಿರ್ಗಮಿಸಿದರು ಎಂದುಕೊಂಡರು. ಮನೆ ಎಲ್ಲವೂ ನಿಶ್ಯಬ್ಧವಾಗಿತ್ತು. ಪೊಲೀಸಿನವರು ಎಲ್ಲರೂ ಹೋಗಿದ್ದಾರೋ ಏನೋ ಎಂದು ನೋಡಲು ಗೌಡರು ವಾಡೆಯ ಹಿಂದಿನಿಂದ ಸ್ವಲ್ಪ ತಲೆ ಎತ್ತಿ ನೋಡಿದರು: ಅವರಿಗೆ ಆಶ್ಚರ್ಯ ಕಾಯ್ದಿತ್ತು.

ಕಟ್ಟಕಡೆಗೆ ಉಳಿದಿದ್ದ ಒಬ್ಬ ಪೊಲೀಸ್ ಪೇದೆ ಸದ್ದಿಲ್ಲದಂತೆ ಕುತೂಹಲದಿಂದ ಅಟ್ಟಕ್ಕೆ ಹಾಕಿದ್ದ ಏಣಿಯನ್ನು ಮುಕ್ಕಾಲು ಪಾಲು ಏರಿ, ಅಟ್ಟದ ಒಳಭಾಗವನ್ನು ನೋಡಲು ಕತ್ತು ಮುಂದೆ ಮಾಡಿದ್ದ. ಅವನು ಗೌಡರನ್ನು ಕಂಡಿದ್ದೇ ತಡ, ಏಣಿಯ ಮೆಲೆ ನಿಂತುಕೊಂಡೇ ಎರಡೂ ಕೈಗಳನ್ನು ಮೇಲಕ್ಕೆತ್ತಿ-

“ಹೋ!ಹೋ! ಹೋಯ್! ಎಯ್” ಎಂದು ಭೀತಿಯಿಂದ ಕೂಗಿಕೊಳ್ಳತೊಡಗಿದ. ಇನ್ನು ಅಡಗಿ ಪ್ರಯೋಜನವಿಲ್ಲವೆಂದು ಗೌಡರು ಪೂರ್ತಿಯಾಗಿ ಎದ್ದು ನಿಂತರು.

ಅಷ್ಟರಲ್ಲಿ ಇನ್ನಿತರ ಪೊಲೀಸರು ಮನೆಯೊಳಕ್ಕೆ ಧಾವಿಸಿದ್ದರು. ಅದನ್ನು ಕಂಡು ಧೈರ್ಯ ಪಡೆದ ಪೊಲೀಸ್ ಪ್ಯಾದೆ.

“ಅಟ್ಟ ಹತ್ತಿ ಕುಳಿತು ಕೊಂಡ್ರೆ ಬಿಡ್ತೀವ! ಇಳೀರ್ರಿ ಕೆಳಕ್ಕೆ!” ಎಂದು ಜೋರು ಮಾಡಿದರು

“ಮೊದಲು ನೀನು ಇಳಿಯಪ್ಪ. ನಾನು ಬರ್ತೀನಿ”ಗೌಡರು ಎಂದರು.

ಪೊಲೀಸಿನವನು ಹೆಮ್ಮೆಯಿಂದ ಬೀಗುತ್ತಾ, ಅವರನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, ಒಂದೊಂದೇ ಹೆಜ್ಜೆಯನ್ನು ಏಣಿಯ ಮೆಟ್ಟಿಲ ಮೇಲೆ ಇಡುತ್ತಾ ಕೆಳಗಿಳಿದ. ಅವನ ಹಿಂದೆಯೇ ಗೋಪಾಲಗೌಡರೂ ಅಟ್ಟದಿಂದ ಕೆಳಕ್ಕಿಳಿದು ಬಂದರು.

ಒಡನೆಯೇ ಅವರು ತಮ್ಮ ಮೈ – ಕೈಗಳನ್ನು ನೋಡಿಕೊಂಡರು: ಜೇಡರ ಬಲೆಯ ಕಪ್ಪು ಇಲ್ಲಣ ಕಸ – ಕಡ್ಡಿಗಳು ತಲೆ ತೋಳುಗಳಿಗೆ ಹತ್ತಿದ್ದುವು. ಅಲ್ಲೇ ಇದ್ದ ಸಣ್ಣ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಂಡರು. ತಲೆ – ಮುಖಗಳಿಗೂ ಕಪ್ಪು ಇಲ್ಲಣದ ಎಸಳುಗಳು ಹತ್ತಿಕೊಂಡಿದ್ದವು. ವಿಜಯೋತ್ಸಾಹದಿಂದ ಬೀಗುತ್ತಿದ್ದ ಪೊಲೀಸ್ ಜಮಾದಾರ್ ಕೇಳುತ್ತಿದ್ದ.

“ಏನು? ಹಳ್ಳಿ ಹಳ್ಳಿಗಳಲ್ಲಿ ‘ಸಬರ’ ಮಾಡ್ತೀರಾ?” ಅವನ ಮಾತು ಕೇಳಿ ಗೋಪಾಲ ಗೌಡರಿಗೆ ನಗು ಬಂತು. “ಸಬರ ಅಲ್ಲವೋ ಮಾರಾಯ! ಶಿಬಿರ. ಮೊದಲು ಕನ್ನಡ ಸರಿಯಾಗಿ ಮಾತಾಡೋದು ಕಲ್ತುಕೊಳ್ಳಪ್ಪ.”

“ಇರ್ಲಿ. ಈಗ ಹೇಳು…. ಬೇರೆಯವರೆಲ್ಲಾ ಎಲ್ಲಿದ್ದಾರೆ? ಹೇಳು ಹೇಳು! ಬೇಗ ಹೇಳು!” ಅಷ್ಟರಲ್ಲಿ ಯಾರೋ ಒಂದು ಚೆಂಬು ನೀರು ತಂದುಕೊಟ್ಟರು. ಗೋಪಾಲ್‌ಗೌಡರು ಪೊಲೀಸಿನವನ ಮಾತಿಗೆ ಕಿವಿಗೊಡದೆ ತಮ್ಮ ಮುಖ ಕೈಕಾಲುಗಳನ್ನು ಸ್ವಚ್ಛಮಾಡಿಕೊಳ್ಳ ತೊಡಗಿದರು.

ಅವರ ಮುಂದೆ ತಾನು ಸುಮ್ಮನೆ ಕಂಠಿಶೋಷಣೆ ಮಾಡಿಕೊಳ್ಳುವುದಕ್ಕಿಂತ ತಾನೇ ಇತರರು ಎಲ್ಲಿದ್ದಾರೆ ಎಂದು ಹುಡುಕುವುದು ಉತ್ತಮ ಎಂಬ ಪರಿಜ್ಞಾನ ಆ ಪೊಲೀಸಿನವನಿಗೆ ಉಂಟಾಯಿತು, ಎಂದು ಕಾಣುತ್ತದೆ.

ಮೈ – ಕೈ, ಕೂದಲು, ಕಚ್ಚೆಪಂಚೆ ಇವುಗಳ ಸ್ವಚ್ಛತೆ ಕಡೆಗೆ ಗೌಡರು ಗಮನಹರಿಸಿ ಬಿಟ್ಟರೆ ಆಯ್ತು. ಪೊಲೀಸರೇ ಬರಲಿ! ಭೂಕಂಪವೇ ಆಗಲಿ! ಅವರು ಆ ಪ್ರಧಾನ ಪರಿಶ್ರಮದಿಂದ ಹೊರಬರುವುದು ಬಳಿಯಿದ್ದವರು ಕಾಯ್ದು ಕಾಯ್ದು ಸಾಕಾದ ಬಳಿಕವೇ. ಈ ಅನುಭವ ಬಂದ ಒಡನೆಯೇ ಪೊಲೀಸರು ಮನೆಯನ್ನೆಲ್ಲಾ ಮತ್ತೊಮ್ಮೆ ತಾವೇ ಶೋಧಿಸತೊಡಗಿದರು. ನಡುಮನೆಯ ಮೂಲೆಯಲ್ಲಿ ಎರಡು ವಾಡೆಗಳು ಒಂದರ ಪಕ್ಕದಲ್ಲಿ ಒಂದು ಇದ್ದವು. ಅವೆರಡು ವಾಡೆಗಳನ್ನೂ ಒಂದು ದೊಡ್ಡ ಪಂಚೆಯಿಂದ ಮುಚ್ಚಲಾಗಿತ್ತು. ಪೊಲೀಸಿನವರಿಗೆ ಒಂದು ವಾಡೆಯ ಮೇಲೆ ಮನುಷ್ಯನ ತಲೆಬುರುಡೆಯಿಂತೆ ಏನೋ ಕಾಣಿಸಿತು. “ ಇನ್ನೊಂದು ಬೇಟೆ ಸಿಕ್ಕಿತು!” ಎಂದು ಪೊಲೀಸಿನವನು “ಲೇಯ್‌!” ಎಂದು ಉದ್ಗಾರ ಮಾಡಿದ. ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ವಾಡೆಯ ಮೇಲಿದ್ದ ಪಂಚೆಯನ್ನು ಅತ್ತ ಸರಿಸಿದ. ಅದರ ಕೆಳಗೆ ಇಟ್ಟಿದ್ದ ಒಂದು ಗಂಡು ಹಲಸಿನಹಣ್ಣು! ಮನುಷ್ಯನ ತಲೆಯಲ್ಲ. ನಿರಾಶೆಯಿಂದ ‘ಛೇ!’ ಎಂದ. ಆದರೆ, ಮರುಕ್ಷಣವೇ ಅದನ್ನು ಕೈಯಿಂದ ಎತ್ತಿ ಹಣ್ಣಾಗಿದೆಯೇ, ವಾಸನೆ ಬರುತ್ತಿದೆಯೇ ಎಂದು ಪರೀಕ್ಷಿಸಲು ಮೂಸಿ ನೋಡಿದ, ‘ಕಸುಗಾಯಿ!’ ನಿರಾಶನಾಗಿ ಅದನ್ನು ನೆಲಕ್ಕೆಸದ. ಅದು ಉರುಳುತ್ತಾ ಗೋಗಿ ವಾಡಯ ತಳಕ್ಕೆ ಬಡಿದು, ಅದಕ್ಕೆ ಮುಚ್ಚಿದ ಬಿಳಿ ಪಂಚೆಯನ್ನು ಅತ್ತಸರಿಸಿತು!

ಪೊಲೀಸಿನವನು ನೋಡುತ್ತಾನೆ! ವಾಡಗೆ ಎರಡು ಕಾಲು ಬಂದಿದೆ! ಅವನು ಆಶ್ಚರ್ಯ ದಿಂದ ಮುನ್ನುಗ್ಗಿ ಪಂಚೆಯನ್ನು ಎಳೆಯುತ್ತಾನೆ. ವಾಡೆಗೆ ಒತ್ತಿಕೊಂಡು ನಿಂತಿದ್ದಾರೆ. ಮಂಡಗಳಲೆಯ ಹೊಸೂರು ರಾಮಾನಾಯ್ಕರು! ಅವರು ಅಲ್ಲಿ ಅಡಗಿದ್ದುದು ಗೋಪಾಲ ಗೌಡರಿಗೂ ಗೊತ್ತಿರಲಿಲ್ಲ.

ಇಬ್ಬರನ್ನೂ ದಸ್ತಗಿರಿ ಮಾಡಿ ಸಾಗರಕ್ಕೆ ಕರೆದೊಯ್ದರು ಪೊಲೀಸಿನವರು. ಗೋಪಾಲಗೌಡರ ಸಂಗಾತಿಗಳು ಅವರ ಸೆಕ್ರೆಟರಿಯಟ್ ಅನ್ನು ಪೊಲೀಸರ ಕೈಗೆ ಸಿಕ್ಕದಂತೆ ಕಾಪಾಡಿ, ಸಾಗರಕ್ಕೆ ರವಾನಿಸಿದರು.

ಗ್ರಾಮಸ್ಥರು ಅವರ ಸುತ್ತಲೂ ಸೇರಿದರು. ಅವರು ಪೊಲೀಸ್ ವ್ಯಾನ್ ಹತ್ತುತ್ತಿದ್ದಂತೆ ಜಯಕಾರಗಳು ಮೊಳಗಿದುವು.

“ಇಂಕಿಲಾಬ್ ಜಿಂದಾಬಾದ್!”
“ಉಳುವವನೇ ನೆಲದೊಡೆಯ!”
“ಡಾ.ಲೋಹಿಯಾ ಜಿಂದಾಬಾದ್!”
“ಗೋಪಾಲಗೌಡ ಜಿಂದಾಬಾದ್!”
“ಕಾಗೋಡು ಸತ್ಯಾಗ್ರಹ ಜಿಂದಾಬಾದ್!”

* * *

ಹೀಗೆ ಗೋಪಾಲಗೌಡರು, ವಿಪರೀತ ಶ್ರಮದ ಬಳಿಕ ಶಿವಮೊಗ್ಗ ಜೈಲಿಗೆ ಬಂದರು. ಅಲ್ಲಿ ಅವರಿಗೆ ವಿಶ್ರಾಂತಿಯೇನೋ ದೊರೆಯಿತು. ಆದರೆ, ಮಾನಸಿಕವಾಗಿ ಭಾವನಾತ್ಮಕವಾಗಿ ಅವರು ಚಿಂತಾಕ್ರಾಂತರಾಗಿಯೇ ಇದ್ದರು. ಬಡ ಗೇಣಿದಾರರು ಮುಂದೆ ಹೀಗೆ ಸತ್ಯಾಗ್ರಹವನ್ನು ನಡೆಸಿಕೊಂಡು ಹೋಗುತ್ತಾರೆ? ಯಾವಾಗ ತಮ್ಮ ತಮ್ಮ ಜಮೀನುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾರೆ? ಯಾವಾಗ ಜಮೀನನ್ನು ಉಳಿಮೆ ಮಾಡಿ, ತಮ್ಮ ಕುಟುಂಬದ ಪೋಷಣೆ ಮಾಡುತ್ತಾರೆ? ಎಂದಿಗೆ ಅವರ ಮೇಲಿನ ದೌರ್ಜನ್ಯಗಳು ನಿಲ್ಲುತ್ತವೆ? ಯಾವಾಗ ಈ ಸೆರೆಮನೆವಾಸದಿಂದ ಬಿಡುಗಡೆಯಗಿ ತಮ್ಮ ಮನೆ – ಮಠ, ಹೆಂಡಿರು – ಮಕ್ಕಳೊಡನೆ ಶಾಂತಿಯಿಂದ ಬದುಕುತ್ತಾರೆ? ಮುಂದೇನು? ಎಂಬುದೆ ಅವರ ಧಾವಂತವಾಗಿತ್ತು. ದೈಹಿಕವಾಗಿ ಆಮಶಂಕೆ, ನಿತ್ರಾಣಗಳಿಗೆ ಒಳಗಾಗಿ ಅವರು ಸಾಧಾರಣವಾಗಿ ತಮ್ಮ ಈಚಲು ಚಾಪೆಯಲ್ಲೇ ಮಲಗಿರುತ್ತಿದ್ದರು. ಸದಾಶಿವರಾಯಾರು ಅವರನ್ನು ಪ್ರೀತಿಯ ತಮ್ಮನಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ಅವರಿಗೆ ಬೇಕಾದ ಗಂಜಿ, ಸಪ್ಪೆಸಾರು, ಔಷಧಿಗಳು ಎಲ್ಲವನ್ನೂ ಕಾಲಕಾಲಕ್ಕೆ ಒದಗಿಸುತ್ತಿದ್ದರು. ಅವರ ಸುತ್ತಲೂ ಬಾ.ಸು. ಕೃಷ್ಣಮೂರ್ತಿ, ಯು.ಆರ್. ಅನಂತಮೂರ್ತಿ ಮೊದಲಾದವರು ಸೇರಿ ಅಡಿಗರ, ಬೇಂದ್ರೆಯವರ, ಡಿ.ಎಸ್. ಕರ್ಕಿಯವರ, ಕುವೆಂಪುರವರ ಮಧುರ, ವೀರ, ಧೀರ ಗೀತೆಗಳನ್ನು ಗುನುಗುತ್ತಿದ್ದರು. ಖಾದ್ರಿ ಶಾಮಣ್ಣನವರಿಗೆ ಸೀತಾರಾಮ ಐಯ್ಯಂಗಾರ್ ಒದಗಿಸುತ್ತಿದ್ದ ಪತ್ರಗಳನ್ನು ಅವರು ತಂದು ಗೋಪಾಲಗೌಡರಿಗೆ ತೋರಿಸುತ್ತಿದ್ದರು. ಪಕ್ಷದ ಪೊಲಿಟ್‌ಬ್ಯೂರೋ ಅವರ ಸುತ್ತಲೂ ಸೇರುತ್ತಿತ್ತು. ತೀರ್ಮಾನಗಳು ಸಂದೇಶಗಳು ಹೊರಗಿನ ಸಂಗತಿಗಳು ಅಲ್ಲಿ ಚರ್ಚೆಯಾಗುತ್ತಿದ್ದವು. ಸೆರೆಮನೆಯಲ್ಲಿದ್ದರೂ ಈಚಲು ಚಾಪೆಯ ಮೇಲೆ ಮಲಗೇ ಇದ್ದರೂ ಅವರ ಸೆಕ್ರಟರೀಯೇಟ್  ಸದಾ ಎಡೆಬಿಡದೆ ಕಾರ್ಯ ಪ್ರವೃತ್ತವಾಗಿರುತ್ತಿತ್ತು. ಅವರು ರಾಜ ವಂಶದಲ್ಲಿ ಜನಿಸಿದವರು. ದಟ್ಟದಾರಿದ್ರ್ಯದಲ್ಲಿ ವಿಧಿ ಅವರನ್ನು ಬೇಕೆಂದೇ ಹುಟ್ಟಿಸಿತು. ಬಾಳಿನುದ್ದಕ್ಕೂ ಕಷ್ಟಕಾರ್ಪಣ್ಯಗಳನ್ನೇ ಸರಮಾಲೆ ಹೆಣೆದಿತ್ತು ಏಕೆ? ತನ್ನ ಸಹಮಾನವರ ಬನ್ನ ಬವಣೆಗಳನ್ನು ಅಂತಃಕರಣಪೂರ್ವಕವಾಗಿ ಅರ್ಥಮಾಡಿಕೊಳ್ಳಲಿ ಎಂದು. ನಾನು ‘ಫುಡ್ ಮಿನಿಸ್ಟರ್‌ಗಿರಿ’ ಬಿಟ್ಟದ್ದನ್ನು ಅಭಿನಂದಿಸಿದರು.

“ನೀನು ಚೆನ್ನಾಗಿ ಓದಿಕೊಂಡಿದ್ದೀಯೆ. ನೀನು ಅದೃಷ್ಟ೨ವಂತ. ಒಳ್ಳೆಯ ತಂದೆತಾಯಿಗಳು ನಿನಗೆ ಸಿಕ್ಕಿದರು. ಕಾಲೇಜು ಓದಿ ಪದವಿ ಪರೀಕ್ಷೆಯನ್ನು ಮುಗಿಸಿ ಬಂದಿದ್ದೀಯೇ. ನನಗೆ ಆ ಅದೃಷ್ಟ ದೊರೆಯಲಿಲ್ಲ. ಈಗ ನೀನು ತಿಂಡಿಪೋತರ ಹೊಗಳಿಕೆಗೆ ಮರುಳಾಗಿ ಅಡಿಗೆ ಭಟ್ಟನಾಗಿ ಬಿಡಬೇಡ. ನೀನು ವಿದ್ಯಾಮಂತ್ರಿಯಾಗಿದ್ದಾಗ ಜೈಲಿನಲ್ಲಿ ನಡೆಯುತ್ತಿದ್ದ ಮಧ್ಯಾಹ್ನದ ಸ್ಟಡೀ ಕ್ಲಾಸಸ್ ಎಷ್ಟು ಉದ್ಭೋಧಕವಾಗಿರುತ್ತಿದ್ದವು. ಹಾರಾಲ್ಡ್ ಲಾಸ್ಕಿ, ಸಿ..ಎಂ.ಜೋಡ್, ಜಿ,ಡಿ. ಹೆಚ್. ಕೋಲ್ …. ಇವರ ಕೃತಿಗಳ ಗಂಧವೇ ಇಲ್ಲಿ ಯಾರಿಗೂ ಇರಲಿಲ್ಲ. ಜಗತ್ತಿನ ಉದಾತ್ತ ಚಿಂತಕರ ವಿಚಾರದ ನೆರಳೂ ಇಲ್ಲಿ ಬಿದ್ದಿರಲಿಲ್ಲ. ನೀನು ನಮ್ಮೆಲ್ಲರಿಗೆ ಅದರ ಅರಿವನ್ನು ಉಂಟು ಮಾಡಿಕೊಟ್ಟೆ ಫಿಲಿಫ್ ಸ್ಕ್ರಾಟ್ಎಂಬ ಮಹನೀಯಾರು ಯಾರೋ ನನಗೆ ಗೊತ್ತಿಲ್ಲ. ಆದರೆ ಅವರು ನಾಗಭೂಷಣ ನಮ್ಮ ಪಾರ್ಟಿ ಅಧ್ಯಕ್ಷ ಆಗಿದ್ದಾಗ ಬಳೇಪೇಟೆಯ ಮೂರನೇ ಅಂತಸ್ತಿನ ಲೈಟಿಲ್ಲದ ಹರಕು ಚಾಪೆಯ ಆಫೀಸಿನಲ್ಲಿ ನಡೆಸುತ್ತಿದ್ದ ವ್ಯಾಖ್ಯಾನಗಳು ಅಮೋಘವಾಗಿರುತ್ತಿದ್ದವು ಎಂಬುದನ್ನು ಕೇಳಿದ್ದೇನೆ. ಆತ ಹುಟ್ಟಿನಿಂದ ಇಂಗ್ಲೀಷ್‌ನವನೇ, ನಿಷ್ಠೆಯಿಂದ ಲೆಫ್ಟಿಸ್ಟ್, ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಕಾರಾಗೃಹಗಳಿಂದ ತಪ್ಪಿಸಿಕೊಂಡು; ಆತ ಅಜ್ಞಾತವಾಗಿ ಎಸ್. ಎನ್. ಹೊಸಾಳಿಯವರ ‘ಮೈಸಿಂಡಿಯಾ’ ಇಂಗ್ಲಿಷ್ ವಾರಪತ್ರಿಕೆಯಲ್ಲಿ ದುಡಿಯುತ್ತಿದ್ದರು. ನಿಮಗೆ ಪಾಠ ಹೇಳಿಕೊಟ್ಟ ಬಳಿಕ ಹಳೆಯ ಸೀಮೆಎಣ್ಣೆ ದೀಪ ಹಚ್ಚಿದ ಮುರುಕಲು ಸೈಕಲ್ ಹತ್ತಿ ಕಂಟೋನ್ವೆಂಟ್ ಕಡೆಗೆ ಹೊರಟು ಬಿಡುತ್ತಿದ್ದರು ಎಂದು ನೀನು ಹೇಳುವುದನ್ನು ನಾನು ಕೇಳಿದ್ದೇನೆಯೇ ಹೊರತು ನಾನು ಅವರನ್ನು ನೋಡಿಲ್ಲ. ಅವರು ಧನ್ಯರು. ಜಗತ್ತಿನ ದುಡಿಮೆಗಾರರ ನಿಜವಾದ ಗುರುಗಳು. ಮಾರ್ಕ್ಸ್, ಏಂಜಲ್ಸ್, ಗಾಂಧಿ ಮೊದಲಾದ ಮಹಾನ್ ಚಿಂತಕರ, ಸಾಧಕರ ಅಮರ ಸಂದೇಶಗಳನ್ನು ಜಗತ್ತಿಗೆ ಪ್ರಸಾರ ಮಾಡುವ ಅಮರ ಪ್ರಚಾರಕರು; ಸಮಾಜವಾದದ ಸಂತರು. ಅವರು ಪಕ್ಷ ಪಕ್ಷ ಎಂದು ದುಡಿದವರಲ್ಲ. ದುಡಿಮೆಗಾರರ ಜಗತ್ತನ್ನು ನ್ಯಾಯ ಸಮಾನತೆಗಳ ತಳಹದಿಯ ಮೇಲೆ ಸ್ಥಾಪಿಸಲು ದುಡಿದ ಭೂಲೋಕದ ದೇವತೆಗಳು! ನೀನು ಹೋಂ ಮಿನಿಸ್ಟರ್ ಗಿರಿಯನ್ನು ಬಿಡು. ಮತ್ತೆ ವಿದ್ಯಾಮಂತ್ರಿಯಾಗು. ಸ್ಟಡೀ ಕ್ಲಾಸ್ಗಳನ್ನು ಪ್ರಾರಂಭಿಸುಎಂದೆಲ್ಲಾ ಬುದ್ದಿ ಹೇಳುತ್ತಿದ್ದರು.

ಗೋಪಾಲಗೌಡರಿಗೆ ಕುಶಾಗ್ರಮತಿ ಇತ್ತು. ಅವರ ಒಳನೋಟ ನನ್ನನ್ನು ಎಚ್ಚರಿಸಿತು. ಮತ್ತೆ ನಾನೆಂದೂ ನನ್ನ ಹಿರಿಯ ಸಂಗಾತಿಗಳ ಪ್ರಶಂಸೆಗೆ ಮರುಳಾಗಿ, ಸಕ್ಕರೆ ಪೊಂಗಲ್, ಪುಳಿಯೋಗರೆ, ತೇಂಗೊಳಲ್‌ಗಳನ್ನು ಅತ್ಯಂತ ಅಸಕ್ತಿಯಿಂದ ತಯಾರಿಸಿ, ಜೈಲಿನಲ್ಲಿದ್ದ ಸಂಗಾತಿಗಳಿಗೆ ಒದಗಿಸುವ ಕಾರ್ಯಕ್ಕೆ ಕೈ ಹಾಕಲಿಲ್ಲ. ಮತ್ತೆ ನನ್ನ ವ್ಯಾಸಂಗ, ಪಾಠ ಪ್ರವಚನಗಳ ಕಡೆ ಗಮನ ಹರಿಸದೆ.

ಅವರು ಜೈಲಿನಲ್ಲಿ ನನಗೆ ಹೇಳಿದ ಅಕ್ಬರಾಯಣಕತೆಯನ್ನು ನಾನು ಈಗಲೂ ನೆನೆಸಿಕೊಂಡು ಬಿದ್ದು ಬಿದ್ದು ನಗುತ್ತೇನೆ.

ನಾವು ಜೈಲು ಸೇರಿರುವುದು: ನಮ್ಮ ‘ಯುದ್ದಭೂಮಿ’ಯ ದಣಿವನ್ನು ಪರಿಹರಿಸಿ ಕೊಳ್ಳುವುದಕ್ಕೆ: ಸಿದ್ದಾಂತ ಜ್ಞಾನವನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ನಮ್ಮ ಸಾಮರ್ಥ್ಯವನ್ನು ಅಧಿಕಗೊಳಿಸಿಕೊಳ್ಳುವುದಕ್ಕೆ: ದುಡಿಯುವ ವರ್ಗದ ಪರವಾಗಿ ಹೂಡಬೇಕಾಗಿರುವ ಮುಂದೆ ಬರುವ ಹೋರಾಟಗಳನ್ನು ಎದುರಿಸಲು ಸರ್ವಸಾಮರ್ಥ್ಯ ಗಳಿಸಿಕೊಳ್ಳುವುದಕ್ಕೆ; ಹೊಟ್ಟೆಬಾಕ ರಾಗುವದಕ್ಕಲ್ಲ! ಹೊಗಳೂ ಭಟ್ಟರಾಗುವುದಕ್ಕಲ್ಲ! ಇಂಥ ಜನರಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಮುಂದಿನ ಹೋರಾಟಗಳಿಗೆ ಅಣಿಗೊಳ್ಳಬೇಕು. ಎಷ್ಟು ಕೋಟಿ ಮುಗ್ಧರು, ನಿಸ್ಸಹಾಯಕರು, ಕಡು ಬಡವರು, ಭೂ ಹೀನರು, ನೌಕರಿಹೀನರು, ಅನ್ಯಾಯ ದೌರ್ಜನ್ಯಕ್ಕೆ ಒಳಗಾದ ಸ್ತ್ರೀಯಾರು, ಅಸಡ್ಡೆಗೆ ಒಳಗಾಗಿರುವ ಮಕ್ಕಳು ವೃದ್ಧರು ದೇಶದಲ್ಲಿ ನಿನ್ನಂಥ ನನ್ನಂಥ ನಿಸ್ವಾರ್ಥ ಕಾರ್ಯಕರ್ತರಿಗಾಗಿ ತುದಿಗಾಲಿನಲ್ಲಿ ಕಾಯ್ದು ನಿಂತಿದ್ದಾರೆ. ಅವರನ್ನು ನಿರಾಶೆಗೊಳಿಸುವುದನ್ನು ನಾನು ಕನಸುಮನಸಿನಲ್ಲೂ ಊಹಿಸಿಕೊಳ್ಳಲಾರೆ!

“ಈಗ ನೋಡು, ನೀನು ಎಂಥ ಕೆಲಸ ಮಾಡಿ ಇಲ್ಲಿಗೆ ಬಂದಿದ್ದೀಯ! ನಿನ್ನ ಮೇಲೆ ನಿನ್ನ ತಂದೆ ತಾಯಿ ಎಷ್ಟು ನಿರೀಕ್ಷೆಗಳನ್ನಿರಿಸಿಕೊಂಡು ನಿನ್ನನ್ನು ಓದಿಸಿದ್ದಾರೆ. ಪದವಿಧರನನ್ನಾಗಿ ಆಡಲು ಯತ್ನಿಸಿದ್ದಾರೆ. ಗೆಜೆಟೆಡ್ ಉದ್ಯೋಗಿಯಾಗಲು ವ್ಯವಸ್ಥೆ ಮಾಡಿದ್ದರೆ. ಆದರೆ ನೀನು ಮಾಡಿರುವುದೇನು? ಅವರ ಸೇವೆಯನ್ನು ನಿರ್ಲಕ್ಷಿಸಿ, ನಿನ್ನ ಸುಖವನ್ನು ನಿನ್ನ ಭವಿಷ್ಯವನ್ನು ನಿರ್ಲಕ್ಷಿಸಿ; ಇದ್ಯಾವುದೋ ಹೋರಾಟಕ್ಕೆ ಬಂದು, ಜೈಲು ಸೇರಿದ್ದೀಯ. ಏಕೆ? ನಿನ್ನ ಸ್ವಂತ ಸುಖಕ್ಕಿಂತ, ನಿನ್ನ ಸ್ವಂತ ಭವಿಷ್ಯಕ್ಕಿಂತ, ನಿನ್ನ ತಂದೆ ತಾಯಿ ಅಕ್ಕ ತಂಗಿ ತಮ್ಮಂದಿರ ಭವಿಷ್ಯಕ್ಕಿಂತ ದುಡಿಯುವ ಶ್ರಮವರ್ಗದ ಸೇವೆ ಅದಕ್ಕಿಂತಲೂ ದೊಡ್ಡದು; ಅದಕ್ಕಿಂತಲೂ ಅಧಿಕ, ಎಂದು ನಂಬಿರುವುದರಿಂದ ಅಲ್ಲವೇ? ನೀನು ನಾನು ಮುರ್ಖರೆಂದು ಜಗತ್ತು ಕರೆಯುತ್ತದೆ. ಮಹತ್ಕಾರ್ಯ ನಮ್ಮದು. ಆದರ್ಶ ನಮ್ಮದು. ಪ್ರಾಣ ಹೋಗಲಿ ಆದರ್ಶವನ್ನು ನಾವು ಬಿಡದೆ ಇರಬೇಕುಎಂದು ಭಾವಾವೇಶದಿಂದ ನನಗೆ ಹೇಳುತ್ತಿದ್ದರು. ಯೌವ್ವನದ ಮಾಂತ್ರಿಕ; ಬದುಕಿನ ಮಹಾಸಾಗರದ ಉತ್ತುಂಗ ವೀಚಿಗಳ ದೈತ್ಯಶಕ್ತಿಯ ಭೋರ್ಗರೆತ ಆರ್ಭಟಗಳೇ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಮಂತ್ರಮುಗ್ಧಗೊಳಿಸುತ್ತಿತ್ತು!

* * *