ಕಾಗೋಡು ರೈತ ಸತ್ಯಾಗ್ರಹ
– ಪಂಡಿತ್ ರಾಮನಂದನ ಮಿಶ್ರ
(ಮಹಾಕಾರ್ಯದರ್ಶಿ: ಅಖಿಲಭಾರತ ಹಿಂದ್‌ಕಿಸಾನ್ ಪಂಚಾಯತ್)

ಮಲೆನಾಡಿನ ದುಸ್ಥಿತಿ

ಸುಂದರ ನಂದನವನ ಮಾನವನ ಕೀಳುತನದಿಂದ ನರಕವಾಗಿ ಪರಿವರ್ತಿತವಾದದ್ದನ್ನು ಮೈಸೂರಿನಿಂದ ಪಶ್ಚಿಮ ಸಮುದ್ರ ತೀರದವರೆವಿಗೆ ಬೊಂಬಾಯಿ, ತಿರುವಾಂಕೂರುಗಳಲ್ಲಿ ವಿಶಾಲವಾಗಿ ಹಬ್ಬಿರುವ ಮಲೆನಾಡಿನಲ್ಲಿ ನಾವು ನೋಡುತ್ತೇವೆ.

ಮನೋಹರವಾದ ಜಲಾಶಯ ಜಲಪಾತಗಳನ್ನೊಳಗೊಂಡು ಸಮುದ್ರ ತೀರದಿಂದ ಎರಡು ಸಾವಿರ ಕೆಲವೆಡೆ ನಾಲ್ಕು ಸಾವಿರ ಅಡಿಗಳಷ್ಟು ಎತ್ತರವಾಗಿರುವ ಈ ಮಲೆನಾಡು ಪ್ರದೇಶದಲ್ಲಿ ಕಾಡು ದಟ್ಟವಾಗಿ ಹಬ್ಬಿದೆ; ಈ ಭಾಗದ ಪೂರ್ವದಲ್ಲಿ. ವಾಸಿಸುವ ಜನ ಕನ್ನಡಿಗರು. ಈ ರಮ್ಯಮನೋಹರ ನಿಸರ್ಗದಡಿಯಲ್ಲಿ ಭತ್ತವಿಲ್ಲದೆ ಔದ್ಯೋಗಿಕ ಪ್ರಾಮುಖ್ಯತೆ ಪಡೆದ ಅಡಿಕೆ ಶೆ. ೮೦ ರಷ್ಟು ಬೆಳೆದರೂ ಜನರಿಗೆ ಅನ್ನವಿಲ್ಲ ಉಳುಮೆಮಾಡುವ ಶ್ರಮಜೀವಿ ರೈತನು ಮೈತುಂಬ ಸಾಲದಿಂದ ನರಳುತ್ತಿದ್ದಾನೆ. ಯುದ್ದ ಮತ್ತು ಏರಿದ ಬೆಲೆ ಅವನಿಗೆ ಯಾವ ಸುಖ ಸೌಲಭ್ಯತೆಯನ್ನೂ ದೊರಕಿಸಿಕೊಟ್ಟಿಲ್ಲ. ಅವನು ಬೆವರು ಸುರಿಸಿ ಬೆಳೆದುದರಲ್ಲಿ ಶೇ. ೯೦ರಷ್ಟು ಬೆಳೆಯನ್ನು ಯಾವುದೋ ಪಟ್ಟಣದಲ್ಲಿ , ಎಲ್ಲೋ ದೂರದಲ್ಲಿ ವಾಸಿಸುವ ಒಡೆಯನಿಗೆ (Absentee Land – lord) ಸಲ್ಲಿಸಬೇಕು.

ಶ್ರೀಮತಿ ಕಮಲಾದೇವಿಯರೊಡನೆ ಕೆಲವರ್ಷಗಳ ಹಿಂದೊಮ್ಮೆ ಶಿವಮೊಗ್ಗೆಯ ಸುಪ್ರಸಿದ್ಧ ತಾಲೂಕಾದ ತೀರ್ಥಹಳ್ಳಿಯ ಬಳಿಯಿರುವ ಗ್ರಾಮಾಂತರ ಪ್ರದೇಶಗಳಲ್ಲಿ ನಾನು ಪ್ರಯಾಣ ಮಾಡುತ್ತಿದ್ದಾಗ, ಸುಂದರತಮ ನಿಸರ್ಗದಡಿಯಲ್ಲಿ ಅನ್ನ ಆಹಾರವಿಲ್ಲದೆ ನರಳುವ ರೈತರನ್ನು ನೋಡಿ ತಂಬಾ ವ್ಯಥೆಯಾಯಿತು. ಇಲ್ಲಿನ ಮನೋಹರತೆಯಿಂದ ಆಕರ್ಷಿತರಾಗಿ ಹಿಂದೊಮ್ಮೆ ಬೇಟಿಯಿತ್ತಿದ್ದ ಮಹಾತ್ಮ ಗಾಂಧೀ ಮತ್ತು ಪಂಡಿತ ನೆಹರುರವರೂ ಈ ಸ್ವರ್ಗದ ರಮ್ಯತೆಯ ಆನಂದದ ಜೊತೆಯಲ್ಲಿ ದಾರಿದ್ರ್ಯದ ಹಸಿವು ನೋವುಗಳ ವಿಷಮತೆಯನ್ನು ಕಂಡು ಮರುಗಿದ್ದರು. ಈಗ ನಮ್ಮೊಡನೆ ಇಲ್ಲದ ತೀರ್ಥಹಳ್ಳಿಯ ಮಹಾ ಸ್ವಾತಂತ್ರ್ಯವೀರ ರಾಘವೇಂದ್ರರಾಯರಿಂದ ಮೊದಲ ಭಾರಿಗೆ ಈ ವೈಪರೀತ್ಯದ ತವರುಭೂಮಿಯನ್ನು ನಾ ಕಂಡೆನು.

ಮೈಲಿಗೆ ೧೦೦ರಷ್ಟು ಜನಸಾಂದ್ರತೆಯಿಂದ ಕೂಡಿ ಅತ್ಯಪಯುಕ್ತ ವಾಯುಗುಣವುಳ್ಳ ಮಲೆನಾಡನ್ನು ಸ್ವರ್ಗವನ್ನಾಗಿ ಅತಿ ಸುಲಭವಾಗಿ ಮಾಡಬಹುದಿತ್ತು. ನಾನಿಲ್ಲಿ ಮಲೆನಾಡು ಜನತೆಯ ಸಾಮಾಜಿಕ ಸ್ಥಿತಿಯನ್ನು ವಿವರಿಸಲು ತೀರ್ಥಹಳ್ಳಿಯ ಗಣನೆಯನ್ನು ಕೊಡುತ್ತೇನೆ.

(ಸಂಖ್ಯೆಗಳು ೧೯೯೪ರ ಜನಗಣತಿಗೆ ಸಂಬಂಧಿಸಿದವು)
ಒಟ್ಟು ಸಂಸಾರ – ೧೦೫೯೯
ಸ್ವತಃ ಭೂಮಿಯಿರುವ ಉಳುಮೆಗಾರರು – ೭೦೦
ಉಳುಮೆಯಿಲ್ಲದೆ ಬೇರೆ ಮಾರ್ಗದಿಂದ ಜೀವಿಸುವವರು – ೧೦೦೦
ಜಮೀನ್ದಾರರು (Absentee Land – lords) – ೧೦೦೦
ಗೇಣಿದಾರರು – ೭೯೦೦

ಸುಮಾರು ೫೫ ಸಾವಿರ ಜನಸಂಖ್ಯೆಯಲ್ಲಿ ೪೦ ಸಾವಿರ ಜನ ಎಂದರೆ ಶೇ. ೯೦ರಷ್ಟು ಮಂದಿ ಗೇಣಿದಾರರು. ಇವರು ಎಲ್ಲಿಯೋ ವಾಸಿಸುವ ಭೂಮಾಲಿಕನಿಗೆ ಬೆಳೆವ ಬೆಳೆಯಲ್ಲಿ ಅರ್ಧಕ್ಕಿಂತ ಹೆಚ್ಚನ್ನು ತೆರಬೇಕು. ಇದರಿಂದಲೇ ಗೇಣಿದಾರರು ಜೀವನಕ್ಕೆ ಸಾಕಾಗುವ ಉತ್ಪತ್ತಿಯಿಲ್ಲದೆ ಬಾಳಬೇಕಾಗಿದೆ.

ನಾನು ತೀರ್ಥಹಳ್ಳಿಯನ್ನು ಬಿಟ್ಟ ನಂತರ ಈ ಭಾಗದಲ್ಲಿ ಇನ್ನೊಂದು ಚಿಕ್ಕ ಕೇದ್ರದಿಂದ ಆಕರ್ಷಿತನಾದೆ. ಇಲ್ಲಿ ಅಮೆರಿಕಾ ಯುರೋಪಿನಿಂದ ಆಗಮಿಸಿದ ಮಹಾ ಮೇಧಾವಿಗಳಾದ ಡಾಕ್ಟರುಗಳು ಮಲೇರಿಯಾದ ವಿಪತ್ತನ್ನು ಹೊಗಲಾಡಿಸಲು ಹೋರಾಡುತ್ತಿದ್ದರು. ಸರ್ಕಾರ ಈ ಸ್ಥಳಗಳಲ್ಲಿ ಇದಲ್ಲದೆ ಬೇರೆ ಯಾವ ಸಾಮಾಜಿಕ ನ್ಯೂನತೆಗಳೂ ಇಲ್ಲವೆಂದು ಭಾವಿಸಿರಬಹುದೇನೋ? ಆದರೆ, ಎಲ್ಲಿಯೋ ವಾಸಿಸಿ ತನ್ನ ಭಾಗವನ್ನು ಕೇಳುವ ಜಮೀನ್ದಾರರು ಮಾತ್ರ ಸಾಮಾಜಿಕ ಅನ್ಯಾಯಗಳ ಬಲದಿಂದಲೇ ಜೀವಿಸುತ್ತಿದ್ದಾರೆ.

ಶತಮಾನಗಳಿಂದ ಮಲೆನಾಡಿನಲ್ಲಿ ಬಡತನ, ರೋಗರುಜಿನಗಳಿಂದ ನರಳುತ್ತಿರುವ ರೈತಜನಾಂಗ ಮೊಟ್ಟಮೊದಲನೆಯದಾದ ತಮ್ಮ ಹಕ್ಕಿನ ಹೋರಾಟವನ್ನು ಸಾಗರ ತಾಲ್ಲೂಕಿನಲ್ಲಿರುವ ಕಾಗೋಡಿನಲ್ಲಿ ಹೂಡಿರುವುದರ ಹಿನ್ನೆಲೆಯನ್ನು ಇದರಿಂದಲೇ ನಾವು ತಿಳಿಯಬಹುದಾಗಿದೆ.

ಕಾಗೋಡು

ಸಾಗರ ತಾಲ್ಲೂಕನ್ನುಳಿದ ಆಚೆ ೧೦ ಮೈಲು ದಾಟಿದರೆ ಮೈಸೂರು ಸಂಸ್ಥಾನದ ಚರಿತ್ರೆಯಲ್ಲಿಯೇ ಐತಿಹಸಿಕ ಘಟನೆ ನಡೆಯುತ್ತಿರುವ ಕಾಗೋಡು ಎಂಬ ಚಿಕ್ಕಗ್ರಾಮವಿದೆ. ಸಾಲದ ಶೋಲದಲ್ಲಿ ಬೆಳೆದು. ವಂಶಪರಂಪರ್ಯವಾಗಿ ಸುಮಾರು ಮುನ್ನೂರು ಎಕರೆ ಭೂಮಿಯನ್ನು ಸಾಗುಮಾಡುತ್ತಿರುವ ಎಪ್ಪತ್ತೆರಡು ಸಂಸಾರಗಳ ಬೀಡು ಕಾಗೋಡು. ತಲೆಮಾರುಗಳಿಂದಲೂ ಸ್ವಾನುಬವದಲ್ಲಿದ್ದ ಭೂಮಿಯಿಂದ ತಮ್ಮನ್ನು ಪೋಲೀಸು ಬಲದಿಂದ ಓಡಿಸಲೆತ್ನಿಸಿದ ಭೂಮಾಲಿಕರಾದ ಶ್ರೀಕೆ.ಜಿ. ಒಡೆಯರ ವಿರುದ್ಧ ಅಲ್ಲಿ ರೈತರು ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ವರ್ಷವರ್ಷವೂ ಖಂಡುಗದ ಅಳತೆಯನ್ನು ಏರಿಸುತ್ತಿರುವುದನ್ನು ಸಂಘಟಿತ ಬಲದಿಂದ ಎದುರಿಸಿದ್ದೇ ಹೋರಾಟಕ್ಕೆ ಮೂಲಕಾರಣ. ಕಳೆದ ವರ್ಷ ಸೋಷಲಿಸ್ಟ್ ಪಾರ್ಟಿಯವರು ನ್ಯಾಯದ ಅಳತೆಯಂತೆ ೬೦ ಸೇರಿನ ಕೊಳಗದಲ್ಲಿ ಗೇಣಿಸುವಂತೆ ರೈತರಿಗೆ ಹೇಳಿದರು. ಅವರು ಅಂತೆಯೇ ವರ್ತಿಸಿದರು. ಅದ್ದರಿಂದಲೇ ಕಾಂಗ್ರೆಸ್‌ದಲ್ಲಿ ಬಹಳ ಪ್ರಭಾವಶಾಲಿಗಳಾದ ಭೂಮಿಯ ಮಾಲೀಕರಾದ ಶ್ರೀಕೆ.ಜಿ.ಒಡೆಯರು ಸರ್ಕಾರದ ಪೋಲೀಸ್ ಪಡೆಯ ಸಹಾಯದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರು. ಏಪ್ರಿಲ್ ೧೮ನೇ ತಾರೀಖಿನ ದಿನದಿಂದ ಎಂದಿನಂತೆ ತಮ್ಮ ಹೊಲದುಳುಮೆಗೆ ಹೊರಟ ರೈತರರನ್ನು ಅಕ್ರಮವಾಗಿ ಅಕ್ರಮ ಪ್ರವೇಶ ಮಾಡಿದರೆಂದು ಬಂಧಿಸುವುದು ಮೊದಲಾಯಿತು. ಇದಕ್ಕಿಂತ ಕೆಲದಿನಗಳ ಹಿಂದೆ ಮೈಸೂರು ಸೋಷಲಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ಸದಾಶಿವರಾವ್ ಮತ್ತು ಅಧ್ಯಕ್ಷ ಕಾಮ್ರೇಡ್ ಸಿ.ಜಿ.ಕೆ. ರೆಡ್ಡಿಯವರು ಗೃಹಮಂತ್ರಿಗಳಿಗೆ, ಸರ್ಕಾರ ಈ ವಿವಾದದಲ್ಲಿ ಕೈಹಾಕಕೂಡದೆಂದೂ; ರೈತನ ಹಿತದೃಷ್ಟಿಯೇ ಬಹುಮುಖ್ಯವೆಂದೂ; ಮಾಲೀಕರು ಈ ವಿವಾದದ ಪರಿಹಾರಕ್ಕೆ ಸಿವಿಲ್‌ ವ್ಯಾಜ್ಯ ಹೂಡಬಹುದೇ ವಿನಹ ಪೊಲೀಸ್ ಸಹಯ ಪಡೆಯುವುದು ಅತಿ ಅನ್ಯಾಯವೆಂದು ಪತ್ರ ಬರೆದರು. ಬಹಳ ದಿನ ತಡೆದು ಈ ಪತ್ರಗಳಿಗೆ ಅಸಡ್ಡೆಯಿಂದ ಚುಟುಕು ಉತ್ತರ ಸಚಿವರ ಕಾರ್ಯದರ್ಶಿಗಳಿಂದ ಬಂದಿತು. ಅಂತೆಯೇ ಅನಿವಾರ್ಯವಾಗಿ ಸೋಷಲಿಸ್ಟ್ ಪಕ್ಷ ರೈತರ ಬೆಂಬಲದಿಂದ ಸತ್ಯಾಗ್ರಹ ಹೂಡಿತು.

ಸಂದರ್ಭದಲ್ಲಿ ನನಗೆ ಭಾರತೀಯನನ್ನು ಪಾಶ್ಚಿಮಾತ್ಯ ಹೆಂಗಸು ವಿವಾಹವಾದದ್ದನ್ನು ವ್ಯಭಿಚಾರವೆಂದು ಪರಿಗಣಿಸಿದ ಆಫ್ರಿಕಾದ ಕರಾಳಶಾಸನ ನೆನಪಾಗುತ್ತದೆ. ಒಕ್ಕಲೆಬ್ಬಿಸುವಂತಹ ಮಹದನ್ಯಾಯಕ್ಕೆ ಸರ್ಕಾರ ಎಡೆಗೊಟ್ಟಿರುವುದು ವಿಷಾದಾರ್ಹವಾಗಿದೆ. ಅನೀತಿಯುತವಾದ ಸಾಮಾಜಿಕ ಅನ್ಯಾಯವೆಸಗುವ ಜಮೀನುದಾರರಿಗೆ ಸರ್ಕಾರ ತನ್ನ ಪೂರ್ಣ ಬೆಂಬಲವಿತ್ತು ಪೊಲೀಸ್ ಪಡೆಯನ್ನೇ ಅವರ ಹಿತರಕ್ಷಣೆಗೆ ಇಟ್ಟಿರುವುದು ಯಾವ ನಾಗರೀಕನೂ ಸಹಿಸಲಾರದ ಅಮಾನುಷ ಕೃತ್ಯ.

ಇವಲ್ಲದೆ. ಇನ್ನೂ ಒಂದು ಆಶ್ಚರ್ಯಕರ ವಿಷಯ ಕಾಗೋಡಿನಲ್ಲಿ ಜರುಗುತ್ತಿದೆ. ೧೮೮ನೇ ಇಸವಿಯ ಕಾಯಿದೆ ನಂ. ೪ರ ನಂತರ ಅಮಲಿಗೆ ಬಂದ ಮೈಸೂರು ರೆವಿನ್ಯೂ ಕೋಡಿನ ೭೯ನೇ ಸೆಕ್ಷನ್ನಿನ ಪ್ರಕಾರ ಬೇಸಾಯಗಾರನಾದ ರೈತನಿಗೆ ಸಂಪೂರ್ಣ ರಕ್ಷಣೆಯಿದೆ. (ಬೆಂಗಾಲ್ ಟೆನೆನ್ಸಿ ಆಕ್ಟಿನ ೨೧ನೇ ಸೆಕ್ಷನ್ನನ್ನು ಇದು ಹೋಲುತ್ತದೆ.) ಆದುದರಿಂದ ಅಮಲಿನಲ್ಲಿರುವ ಕಾನೂನಿನಂತೆ, ಹಿಂದಿನಿಂದ ನೆಡೆದುಬಂದ ಸಂಪ್ರದಾಯದಂತೆ, ರೈತರನ್ನು ಒಕ್ಕಲೆಬ್ಬಿಸಲು ಯಾವ ಹಕ್ಕೂ ಸರ್ಕಾರಕ್ಕಿರುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ದೃಷ್ಟಿಯಿಂದಲೇ ಗೇಣಿದರವನ್ನು ಮಿತಿಮೀರಿ ಏರಿಸಿರುತ್ತಾರೆ. ನೂರಾರು ವರ್ಷಗಳಿಂದ ಉತ್ತಿಬಿತ್ತಿ ತನ್ನ ಅನುಭವದಲ್ಲಿದ್ದ ವಸ್ತುಸ್ಥಿತಿಯಲ್ಲಿರುವ ಕಾನೂನನ್ನೇ ದುರ್ಲಕ್ಷಿಸಿ ಕರೆದಿದೆ. ಸರ್ಕಾರ ನಿಜವಾಗಿಯೂ ಅತಿಕ್ರಮ ಪ್ರವೇಶಿಯಾದ ಜಮೀನ್ದಾರನಿಗೆ ಪೋಲೀಸ್ ಪಡೆಗಳ ಸಹಾಯವನ್ನು ಇತ್ತಿದೆ. ಆದುದರಿಂದ ಶಾಸನಭಂಗ ಮಾಡಿದವರು ಸರ್ಕಾರ ಮತ್ತು ಜಮೀನ್ದಾರರೇ ವಿನಹ ಸೋಷಲಿಸ್ಟರು. ರೈತರು ಅಲ್ಲ. ಜಾರಿಯಲ್ಲಿರುವ ಕಾನೂನಿನ ಪ್ರಕಾರವೂ ತಮಗೆ ರಕ್ಷಣೆ ದೊರೆಯದಂತೆ ಸರ್ಕಾರ ಎಸಗಿರುವ ಹೀನವೃತ್ತಿಯ ವಿರದ್ಧ ರೈತರು ಹೋರಾಟ ನಡೆಸಿದ್ದಾರೆ ಅಷ್ಟೆ.

ಕಾಗೋಡು ರೈತರ ಹೋರಾಟ ಇಡೀ ಮಲೆನಾಡಿನ ಭವಿಷ್ಯವನ್ನು ನಿರ್ಧರಿಸಲಿದೆ. ಇದು ಬರಿಯ ೩೦೦ ಎಕರೆ ಭೂಮಿಯ ಪ್ರಶ್ನೆಯಲ್ಲ. ೭೨ ಸಂಸಾರಗಳ ಪ್ರಶ್ನೆಯಲ್ಲ. ಹೆಚ್ಚು ಗೇಣಿಯ ಆಸೆಯಿಂದಲೋ ಅಥವಾ ಸ್ವಂತ ಸಾಗುವಳಿ ಮಾಡುವ ದೃಷ್ಟಿಯಿಂದಲೋ ಶತಮಾನಗಳಿಂದ ಉಳುಮೆಮಾಡುವ ರೈತರನ್ನೆಲ್ಲಾ ಒಕ್ಕಲೆಬ್ಬಿಸುವ ಹೊಂಚುಹಾಕಿ ಮಲೆನಾಡಿನ ಎಲ್ಲಾ ಜಮೀನ್ದಾರರು ಶ್ರೀ ಕೆ.ಜಿ. ಒಡೆಯರನ್ನು ತಮ್ಮ ಬಲಪರೀಕ್ಷೆಯ ಪ್ರಯೋಗಮಾಡಲು ಬಿಟ್ಟಿದ್ದಾರೆ ಅಷ್ಟೆ. ಶ್ರೀ ಕೆ.ಜಿ. ಒಡೆಯರು ಕಾಂಗ್ರೆಸ್ ಪಕ್ಷದ ಪ್ರಭಾವಶಾಲಿ ನಾಯಕರಾಗಿರುವುದೇ ಇದಕ್ಕೆ ಕಾರಣ. ಈ ಒಕ್ಕಲೆಬ್ಬಿಸುವುದು ಸಾಂಕ್ರಾಮಿಕ ರೋಗದಂತೆ ಮಲೆನಾಡಿನಲ್ಲೆಲ್ಲಾ ಹಬ್ಬಲಿದೆ. ಕಾಗೋಡು ರೈತರ ವಿಜಯದಲ್ಲಿಯೇ ಮಲೆನಾಡಿನ ರೈತಕೋಟಿ ತಮ್ಮ ಬಲವನ್ನು ನಿರ್ಧರಿಸಬೇಕಾಗಿದೆ.

ಮಲೆನಾಡಿನ ಜಮೀನ್ದಾರರು ತಾವು ಉತ್ತರದೇಶದ ಭೂಮಾಲಿಕರಂತಲ್ಲವೆಂದೂ ತಾವು ಹಿಡುವಳಿದಾರ ರೈತರೆಂದೂ ಕರೆದುಕೊಳ್ಳುತ್ತಾರೆ. ಇದು ಆಶ್ಚರ್ಯಕರವಾದ ವಿಷಯವಾಗಿದೆ. ಕಾಗೋಡಿನ ಹಿಡುವಳಿದಾರ ರೈತರಾದ ಶ್ರೀ ಕೆ.ಜೆ. ಒಡೆಯರು ಸರ್ಕಾರಕ್ಕೆ ಎಕರೆಗೆ ೨ ರೂ. ನಷ್ಟು ಕಂದಾಯ ಸಲ್ಲಿಸುತ್ತಾರೆ. ಇವರಿಗೆ ರೈತರಿಂದ ಎಕರೆಗೆ ೩೦ ರೂ. ನಷ್ಟು ಗೇಣಿ ಸಂದಾಯವಾಗುತ್ತದೆ. (ಪ್ರೊಕ್ಯೂರ್‌ಮೆಂಟ್ ದರದಂತೆ. ಬ್ಲಾಕ್‌ಮಾರ್ಕೆಟ್ ದರದಲ್ಲಿ ಇನ್ನೂ ಹೆಚ್ಚಾಗುವುದು) ಎಂದ ಮೇಲೆ ಬೇರೆ ಜಮೀನ್ದಾರರಿಗಿಂತ ಯಾವ ಕಡಿಮೆ ಸೌಲಭ್ಯ ಇವರಿಗಿದ್ದು ಹಿಡುವಳಿದಾರ ರೈತರೆನಿಸಿಕೊಂಡಿದ್ಧಾರೋ ನನಗೆ ತಿಳಿಯದು. ನಮ್ಮ ದೇಶದ ಯಾವ ಮೂಲೆಯಲ್ಲೇ ಆಗಲಿ  ನನಗೆ ಕಂಡುಬಂದಿರುವುದು ಎರಡೇ ವರ್ಗ. ಮೊದಲನೆಯವರು ಜಮೀನಿನ ಬಳಿಯಿರದೆ ಗೇಣಿದಾರ ಸಲ್ಲಿಸುವ ಗೇಣಿಯಿಂದ ಜೀವಿಸುವ ಜಮೀನ್ದಾರರು. ಎರಡನೆಯವರು ಉಳುಮೆಮಾಡುವ ರೈತರು. ಎರಡನೇ ರೈತವರ್ಗದಲ್ಲಿ ಖಾಯಂ ಗೇಣಿದಾರರೂ ಇರಬಹುದು. ಚಾಲಗೇಣಿದಾರರೂ ಇರಬಹುದು. ಅಂತೂ ಎರಡು ವರ್ಗದಲ್ಲಿ ಉದ್ಭವಿಸುವ ಸಮಸ್ಯೆ ಒಂದೇ.

ಇಂತಹ ಜಮೀನ್ದಾರವರ್ಗ ಹಾಕಿದ ಮಹಾಸವಾಲನ್ನು ಕಾಗೋಡಿನ ರೈತವರ್ಗ ಎದುರಿಸಿದೆ. ಶಾಂತಿಪ್ರಿಯರೂ ಸಹನಶೀಲರು ಆದ ರೈತರು ವಂಶಪಾರಂಪರ್ಯವಾಗಿ ಅನುಭವಿಸುತ್ತಿದ್ದ ಜಮೀನಿನಿಂದ ತಮ್ಮನ್ನು ಸರ್ಕಾರ ಮತ್ತು ಜಮೀನ್ದಾರರ ಒಕ್ಕಲೆಬ್ಬಿಸುವ ಪ್ರಯತ್ನದ ವಿರುದ್ಧ ಸಿಡಿದೆದ್ದಿದ್ದಾರೆ. ಇರುವ ಕಾನೂನಿನ ಪ್ರಕಾರವೂ ತಮಗೆ ರಕ್ಷಣೆ ದೊರಕಿಸಿಕೊಡಲು ಸರ್ಕಾರ ನಿರಾಕರಿಸಿ ಶಾಸನಭಂಗದಂತಹ ದುಷ್ಕೃತ ವೆಸಗಿದರೂ  ತಮ್ಮ ಸುಸಂಘಟಿತ ಬಲ ಒಂದರಲ್ಲೇ ನಂಬಿಕೆಯಿಟ್ಟು ಪ್ರಚಂಡ ಹೋರಾಟದ ಶಾಂತಿಯು ಮುನ್ನಡೆಯಲ್ಲಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

ಸತ್ಯಾಗ್ರಹ

ಮೇಲೆ ತಿಳಿಸಿದಂತೆ ಸರ್ಕಾರವೇ ಶಾಸನಭಂಗವೆಸಗಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವೆಸಗಿದಾಗ ರೈತರು ಸೋಷಲಿಸ್ಟರ ಸಹಾಯ ಪಡೆದು ಅನಿವಾರ್ಯವಾಗಿ ಸತ್ಯಾಗ್ರಹ ಹೂಡಬೇಕಾಯಿತು. ಇಡೀ ರೈತವರ್ಗದ ಭವಿಷ್ಯ ನಿರ್ಧರಿಸುವ ಈ ಹೋರಾಟವನ್ನು ಯಶಸ್ವಿಗೊಳಿಸುವ ಕರ್ತವ್ಯ ದೃಷ್ಟಿಯಿಂದ ಸೋಷಲಿಸ್ಟ್ ಪಕ್ಷ ತನ್ನ ಪೂನಃಬೆಂಬಲವನ್ನು ಈ ಹೋರಾಟಕ್ಕಿತ್ತಿತು. ಇಲ್ಲಿಯವರೆವಿಗೆ ಸುಮಾರು ೪೦೦ ಜನರ ದಸ್ತಗಿರಿಯಾಗಿದೆ. ಮೈಸೂರು ಸೋಷಲಿಸ್ಟ್ ಪಕ್ಷದ ಕಾರ್ಯಕಾರೀ ಸಮಿತಿಯ ಮುಖ್ಯ ಸದಸ್ಯರೆಲ್ಲರೂ ಬಂಧಿತ ರಾಗಿದ್ದಾರೆ. ರೈತರ ಕರೆಯನ್ನು ಮನ್ನಿಸಿ ಸಾಗರಕ್ಕೆ ಬಂದ ಡಾ. ರಾಮಮನೋಹರ ಲೋಹಿಯಾರವರು ಬಂಧಿತರಾದರು. ೨೪ ಗಂಟೆಯೊಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾವು ಸತ್ಯಾಗ್ರಹ ಹೂಡುವೆನೆಂಬ ನಿಲುವಿಗನುಸರಿಸಿ ಕಾಗೋಡಿನ ರೈತರನ್ನೊಡಗೂಡಿ ಉಳುಮೆ ನಡೆಸಿದುದೇ ಅವರ ಬಂಧನಕ್ಕೆ ಕಾರಣ. ಡಾ. ರಾಮಮನೋಹರರ ಬಂಧನ ಕಾಮ್ರೇಡ್ ಜಯಪ್ರಕಾಶರೆಂದಂತೆ ಕಾಂಗ್ರೆಸ್ ಸರ್ಕಾರದ ಪ್ರಜಾಪ್ರಭುತ್ವಕ್ಕೆ ಭಾಷ್ಯ ಬರೆದಂತಾಗಿದೆ. ರೈತವರ್ಗವಾದರೋ ಪ್ರಚಂಡ ಉತ್ಸಾಹದಿಂದ ಈ ಹೋರಾಟವನ್ನು ಸಾಗಿಸುತ್ತಿದೆ. ಪೋಲೀಸರ ಅಮಾನುಷ ದೌರ್ಜನ್ಯಗಳೂ ಮಿತಿಮೀರಿದೆ. ಲಾಠಿ ಏಟಿನ ಪ್ರಸಂಗಗಳೂ ನಿತ್ಯದ ಮಾತಾಗಿದೆ ಗಣೇಶನೆಂಬುವವನಿಗೆ ಹೊಟ್ಟೆಯ ಮೇಲೆ ಅತ್ಯಂತ ಚಿಂತಾಜನಕವಾದ ಗಾಯವಾಯಿತು. ಇಂತಹ ನಿದರ್ಶನಗಳು ಇನ್ನೂ ಅನೇಕವಿದೆ. ನಾನು ಸಾಗರದ ಲಾಕಪ್ಪಿಗೆ ಭೇಟಿಯಿತ್ತಾಗ ರಾತ್ರಿ ೮ ಗಂಟೆಯವರೆಗೆ ಉಪವಾಸವಿದ್ದ ರೈತರನ್ನು ಕಂಡು ಮರುಗಿದೆ. ಡಾ. ಲೋಹಿಯಾರವರನ್ನು ನಾನು ನನ್ನ ಜನ್ಮದಲ್ಲೇ ನೋಡಿರದಂತಹ ರೀತಿಯಲ್ಲಿ ಸರ್ಕಾರಿ ಕಂಡುಕೊಳ್ಳುತ್ತಿದ್ದಿತು. ಹೆಸರಿಗೆ ಕ್ರೆಸೆಂಟ್ ಭವನದಲ್ಲಿಟ್ಟು, ಮಲಗುವಾಗ ಏಳುವಾಗ ಪೋಲೀಸ್ ಕಾವಲನ್ನು ಇಟ್ಟಿದ್ದರು. ಅತಿ ಸಾಮಾನ್ಯವಾದ ಕೀಳುದರ್ಜೆಯ ಮೂರನೇ ತರಗತಿಯ ಡಬ್ಬಿಯಲ್ಲಿ ಅವರನ್ನು ಬೆಂಗಳೂರಿನಿಂದ ಸಾಗರಕ್ಕೆ ಒಯ್ಯತ್ತಿದ್ದ ದೃಶ್ಯ ನೋಡಿ ನನ್ನ ರಕ್ತ ಕುದಿಯಿತು.

ಮಾನವ ವರ್ಗದ ನಾಗರೀಕತೆಯನ್ನೇ ದುರ್ಲಕ್ಷಿಸಿ ಸರ್ಕಾರ ಎಸಗುತ್ತಿರುವ ಈ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ಧ ಮಲೆನಾಡಿನ ರೈತವರ್ಗ ಸಂಘಟಿತರಾಗಿ ಹೂಡಿದ ಈ ಐತಿಹಾಸಿಕ ಹೋರಾಟ ಮೈಸೂರು ಸಂಸ್ಥಾನದ ಚರಿತ್ರೆಯಲ್ಲಿ ಸುವರ್ಣಕ್ಷರಗಳಲ್ಲಿ ಬರೆಯಲ್ಲಿಡುವುದು.

ರೈತಜನದ, ಅಖಿಲಭಾರತದ ಮತ್ತು ವಿಶ್ವದ ಕಲ್ಯಾಣವಾಗಬೇಕಾದರೆ ಇರುವ ಮೂರು ಮಂತ್ರವೆಂದರೆ ಸಂಘಟನೆ, ರಚನೆ, ಸಂಘರ್ಷ, ಸೋಷಲಿಸ್ಟ್‌ಪಾರ್ಟಿ ಜನತೆಯ ಹಿತಸಾಧನೆಯ ಏಕಮಾತ್ರ ಉದ್ದೇಶದಿಂದ ಈ ಮೂರು ಮಂತ್ರದ ಶಕ್ತಿಯ ಬಲದಿಂದ ನಾಡನ್ನು ಕಟ್ಟಲು ಹೊರಟಿದೆ. ಕೋಟ್ಯಾಂತರ ಭಾರತೀಯರ ಈಗ ಹಾಳಾಗುತ್ತಿರುವ ಮನುಷ್ಯಬಲದ ಸಂಘಟನೆಯಲ್ಲಿಯೇ ಜನತೆಯ ಕಲ್ಯಾಣ, ವಿಶ್ವದ ಉದ್ಧಾರ ಸಾಧ್ಯವಾದೀತು. ಮೈಸೂರು ಸಂಸ್ಥಾನದವರು ಯಾವ ಸುಧಾರಣೆಯನ್ನೂ ರೈತನಿಗೆ ದೊರಕಿಸಿಕೊಡಲು ಅಸಮರ್ಥರಾದುದು ಈ ಮಾನವಬಲವನ್ನು ದುರ್ಲಕ್ಷಿಸಿದುದರಿಂದಲೇ, ಎತ್ತರದ ಪ್ರದೇಶದಿಂದ ಇಳಿದು ಹಾಳಾಗುತ್ತಿರುವ ನೀರನ್ನು ಜನತೆಯ ಹಿತಕ್ಕೆ ಉಪಯೋಗಿಸಲು, ಮಲೇರಿಯಾ ರೋಗದ ನಿವಾರಣೆ ಮಾಡಲು – ಕಮಿಟಿಗಳನ್ನು, ಡೆವಲಪ್‌ಮೆಂಟ್ ಬೋರ್ಡುಗಳನ್ನು ನಿರ್ಮಿಸಿದರೆ ಸಾಲದು. ನಾನು ಮೇಲೆ ತಿಳಿಸಿದಂತೆ ಈಗ ವ್ಯಯವಾಗುತ್ತಿರುವ ಮಾನವಶಕ್ತಿಯ ಸಂಘಟನೆಯಾಗಬೇಕು. ಈಗ ಸಂಘರ್ಷದ ಹಾದಿಯಲ್ಲಿರುವ ಮಲೆನಾಡು ರೈತರ ವಿಜಯದ ನಂತರ ಅವರ ಕೇಳಿಕೆಗಳ ಪೂರ್ಣ ಸಿದ್ಧಿಯನಂತರ ದೇಶಕ್ಕಾಗಿ ಒಂದು ಘಂಟೆಯೆಂಬ ಕೂಗಿನಿಂದ ಇಡೀ ರೈತವರ್ಗವನ್ನೇ ಸಂಘಟಿಸಿ ಮಲೆನಾಡನ್ನು ಕೆಲವು ವರ್ಷಗಳಲ್ಲೇ ನಂದನವನವಾಗಿ ಮಾಡಬಹುದೆಂದು ತೋರಿಸಬಲ್ಲೆ.

ಸ್ವಾರ್ಥಿಮಾನವ ನರಕವಾಗಿ ಪರಿವರ್ತಿಸಿದ ಮಲೆನಾಡು ಕೆಲವು ದಿನಗಳಲ್ಲೇ ಸ್ವರ್ಗವಾದೀತು.

ರೈತರಿಗೆ ಜಯವಾಗಲಿ

* * *