ಶಾಂತವೇರಿಯ ಅಶಾಂತ ಸಂತನ ಹೆಜ್ಜೆಗಳು
ಕೆ. ಮರುಳಸಿದ್ದಪ್ಪ

ಭಾರತದ ಸುವರ್ಣ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿಯೇ “ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ” ಪ್ರಕಟವಾಗುತ್ತಿರುವುದು ಔಚಿತ್ಯ ಪೂರ್ಣವಾಗಿದೆ. ೧೯೪೨ರ ಸ್ವಾತಂತ್ರ್ಯ ಹೋರಾಟದ ಮೂಲಕ ನಾಡಿನ ಸಾರ್ವಜನಿಕ ಬದುಕಿಗೆ ಪ್ರವೇಶಿಸಿದ ಗೋಪಾಲಗೌಡರು ೧೯೭೨ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗುವವರೆಗೆ ಮೂರು ದಶಕಗಳ ಕಾಲ ಅನ್ಯಾಯ, ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಅವಿರತವಾಗಿ ಹೋರಾಡಿದವರು. ಆದದರಿಂದ ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಹಾಗೂ ಸಂಸ್ಕೃತಿಕ ಇತಿಹಾಸದಲ್ಲಿ ಅವರ ನೆವಪು ವಿಶಿಷ್ಟವಾಗಿಯೇ ಉಳಿಯುತ್ತದೆ. ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿಯೇ ಗೆದ್ದು ಶಾಸನ ಸಭಾ ಸದಸ್ಯರಾದ ಅವರು, ಮೂರು ಭಾರಿ ಶಾಸನ ಸಭೆಗೆ ಆಯ್ಕೆಯಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾರ್ಥಿಯಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದರೂ ೧೯೩೮ರಲ್ಲಿಯೇ ಕಾಂಗ್ರೆಸ್‌ನಿಂದ ಹೊರ ಬಂದು ಬದುಕಿರುವವರೆಗೆ ವಿರೋಧ ಪಕ್ಷದ ಜೀವಂತಿಕೆಗೆ ಕಾರಣರಾದರು. ಇಂಡಿಯಾ ದೇಶದ ಸಮಾಜವಾದಿ ಚಿಂತನೆ ಹಾಗೂ ಹೋರಾಟದಲ್ಲಿ ರಾಮಮನೋಹರ ಲೋಹಿಯಾರ ಜೊತೆಗೂಡಿ ಮುನ್ನಡೆದ ಗೋಪಾಲಗೌಡರ ನೆನಪನ್ನು ದಾಖಲೆ ಮಾಡುವ ಪ್ರಯತ್ನಗಳು ಕನ್ನಡದಲ್ಲಿ ಈಗಾಗಲೇ ನಡೆದಿದ್ದು, ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವೂ ಈ ನಿಟ್ಟಿನಲ್ಲಿ ಪ್ರವೃತ್ತವಾಗಿ “ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ” ಪ್ರಕಟಿಸಿದೆ. ಸಂಪಾದಕರಾದ ಪ್ರೊ. ಕಾಳೇಗೌಡ ನಾಗವಾರ ಮತ್ತು ಜಿ.ವಿ. ಆನಂದ ಮೂರ್ತಿ ಸಾಕಷ್ಟು ಪರಿಶ್ರಮದಿಂದ ಸಿದ್ಧಪಡಿಸಿರುವ ಈ ಕೃತಿ ಒಂದು ಉಪಯುಕ್ತ ಆಕಾರ ಗ್ರಂಥವಾಗಬಹುದಾಗಿದೆ.

“ಶಾಂತವೇರಿಯ ಅಶಾಂತ ಸಂತ” ನೆಂದು ಕವಿ ಗೋಪಾಲಕೃಷ್ಣ ಅಡಿಗರಿಂದ ನಮಸ್ಕಾರ ಜೀವನವೆರಡೂ ಅವರ ಆತ್ಮೀಯರ ನೆನಪುಗಳಲ್ಲಿ ಹೃದಯಂಗಮವಾಗಿ ಚಿತ್ರಿತವಾಗಿದೆ. ಪಿ. ಲಂಕೇಶ್, ಕಡದಾಳು ಶಾಮಣ್ಣ, ಸೋನಕ್ಕ ಗೋಪಾಲಗೌಡ, ಅಜೀಜ್ ಸೇಠ್, ಖಾದ್ರಿ ಶಾಮಣ್ಣ, ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ ಮುಂತಾಗಿ ಇಪ್ಪತ್ತು ಮಂದಿ ಬರಹಗಾರರು, ಪತ್ರಕರ್ತರು, ರಾಜಕಾರಣಿಗಳು, ಪರಿಚಯ ಮಾಡಿಕೊಟ್ಟಿರುವ ಗಣ್ಯರಲ್ಲಿ ಸೇರಿದ್ದಾರೆ. ಮೊದಲ ಅಧ್ಯಾಯವಾದ ‘ಹೃದಯವಂತನ ನಡೆ – ನುಡಿ’ಯಲ್ಲಿ ಒಬ್ಬೊಬ್ಬರೂ ಒಂದೊಂದು ವಿಶೇಷಣದಿಂದ ಅವರನ್ನು ಗುರುತಿಸಿದ್ದಾರೆ. ಅಜೀಜ್ ಸೇಠ್‌ರವರು, ಶತಮಾನದ ರಾಜಕಾರಣಿ’ ಎಂದು ಕರೆದರೆ, ಮಧುಲಿಮಯೆ ‘ಲೋಕಪ್ರಿಯ ಧುರೀಣ’ ನೆಂದು ಗುರುತಿಸುತ್ತಾರೆ. ನಿಜಲಿಂಗಪ್ಪನವರಿಗೆ ಅವರು, ‘ಎಲ್ಲರ ಮೆಚ್ಚಿನವ್ಯಕ್ತಿ’ಯಾಗಿ ಗೋಚರಿಸಿದ್ದಾರೆ. ರಾಜಕಾರಣಿಗಳಿಗಿಂತ ಸಾಹಿತಿಗಳೂ, ಕಲಾವಿದರು. ಗೋಪಾಲಗೌಡರ ಅಂತರಂಗದ ಮಿತ್ರರಾಗಿದ್ದರು. ಒಬ್ಬೊಬ್ಬರದೂ ಸ್ವಂತವೇ ಅನ್ನಿಸಿಕೊಳ್ಳುವಂತಹ ವಿಶಿಷ್ಟ ನೆನಪುಗಳೂ ಕಿರುಲೇಖನಗಳಲ್ಲಿರುವುದರಿಂದ ಪುನರಾವರ್ತನೆಗೆ ಅವಕಾಶವಾಗಿಲ್ಲ. ಲೋಕಾರೂಢಿಯ ಅಭಿನಂದನ ಗ್ರಂಥವಾಗದೆ ಹೃದಯಸ್ಪರ್ಶಿ ನೆನಪುಗಳ ಸರಮಾಲೆಯಂತಿದೆ. ಒಮ್ಮೆಮ್ಮೆ ಈ ನೆನಪುಗಳೇ ಪರಸ್ಪರ ಪೂರಕವೋ ವಿರುದ್ಧವೋ ಆಗಿ ಸ್ವಾರಸ್ಯಕರವಾದ ಓದಿಗೆ ಕಾರಣವಾಗುವುದೂ ಉಂಟು. ಖಾದ್ರಿ ಶಾಮಣ್ಣ ‘ಕ್ರಾಂತಿಯ ತಳಮಳ’ವಾಗಿದ್ದ ತಮ್ಮ ಪರಮ ಮಿತ್ರ ಗೋಪಾಲ ಗೌಡರ ನಯ, ವಿನಯ, ಸತ್ಕಾರ ಪ್ರವೃತ್ತಿಗೆ, ಹೆಸರಾಗಿದ್ದರೆಂದು ಹೇಳುತ್ತಾರೆ. “ತನ್ನ ಕಿಸೆಯಲ್ಲಿ ಒಂದೇ ಒಂದು ರೂಪಾಯಿ ಇದ್ದರೂ ಇತರಿಗಾಗಿ ಅದನ್ನೂ ವೆಚ್ಚ ಮಾಡಲು (ಅವರು) ಎಂದೂ ಹಿಂಜರಿಯಲಿಲ್ಲ” ಎಂದು ಕೊಂಡಾಡಿದ್ದಾರೆ. ಪಿ. ಲಂಕೇಶರು ತಮ್ಮ ‘ಅಕ್ಕರೆಯ ಮೂರ್ತಿ’ ಶಾಂತವೇರಿಯವರು ಈ ಬಗೆಯ ಔದಾರ್ಯದಿಂದ ಪಡುತ್ತಿದ್ದ ಪಾಡನ್ನು ವಿವರಿಸುತ್ತಾ, ಆರ್ಥಿಕವಾಗಿ ಅವರು ಪೇಚಿನಲ್ಲಿದ್ದ ಕ್ಷಣದಲ್ಲಿ ಸ್ನೇಹಿತರು ಸರಿಯಗಿ ನೋಡಿಕೊಳ್ಳಲಿಲ್ಲವೆಂದು ದುಃಖಿಸಿದ್ದಾರೆ. ಸ್ವತಹ ತಾವೇ ಸಂಕೋಚದಿಂದ ಅಥವ ವೈಯಕ್ತಿಕ ಗೋಳುಗಳಿಂದಾಗಿ ಗೋಪಾಲಗೌಡರನ್ನು ಆಗಾಗ ಕನಿಷ್ಠ ಊಟಕ್ಕೆ ಕರೆಯಲಾಗದೇ ಹೋದುದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಖಾದ್ರಿಯವರಿಗೆ ಸಂಬಂಧಿಸಿದಂತೆ ಅವರು ಒಂದು ಸ್ವಾರಸ್ಯಕರ ಘಟನೆ ನಿರೂಪಿಸಿದ್ದಾರೆ. “ಒಂದು ದಿನ ಗೋಪಾಲ್ ಖಾದ್ರಿಯವರನ್ನು ಸ್ವಲ್ಪ ಹಣ ಬೇಕೆಂದು ಕೇಳಿದಂತಿತ್ತು”. “ಒಂದು ಪೈಸೆ ಕೂಡಾ ಇಲ್ಲ” ಎಂದು ಹೇಳಿದ ಖಾದ್ರಿ ಎದ್ದು ಪಂಚೆ ಸರಿಮಾಡಿಕೊಳ್ಳುತ್ತಿದ್ದಾಗ ಸೊಂಟದಿಂದ ‘ನೂರು ರೂಪಾಯಿನ ನೋಟು ಬಿತ್ತು. ಗೋಪಾಲ್ ಅದನ್ನು ಸುಮ್ಮನೇ ನೋಡುತ್ತಿದ್ದರು. ಆ ನೋಟನ್ನು ಎತ್ತಿಕೊಂಡು ಖಾದ್ರಿ ಹೊರಟು ಹೋದರು”. ಸ್ವಾಭಿಮಾನಿಯಾಗಿದ್ದ ಗೋಪಾಲಗೌಡರು ತೀರಾ ಆತ್ಮೀಯರೆದುರಿಗೆ ಮಾತ್ರ ತಮ್ಮ ಆರ್ಥಿಕ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರೆಂದೂ ಊಟವಿಲ್ಲದಿದ್ದರೆ, “ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈಚಾಚಲಾರರೆಂದೂ, ಲಂಕೇಶ್ ಹೇಳಿದ್ದಾರೆ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯೂ ಗೌಡರಿಗೆ ಎದುರಾಯಿತೆಂಬುದನ್ನೇ ಗೌಡರು ದಿನಚರಿಯ ಪುಟವೊಂದರಲ್ಲಿ ಬರೆದುಕೊಂಡಿದ್ದಾರೆ. “ಗೆ. ಲಿಂಗಪ್ಪ ರಾತ್ರಿ ಮೈಸೂರಿಗೆ ಹೋದ. ನನ್ನ ಸ್ಥಿತಿ ನೋಡಿ ಆತನೇ ಹತ್ತು ರೂ. ಕೊಟ್ಟ. ಅದನ್ನು ಸ್ವೀಕರಿಸುವುದು ನನಗೆ ತುಂಬಾ ಕಷ್ಟವಾಯಿತು. ಆದರೂ ತೆಗೆದುಕೊಂಡೆ ಆತ ವಿದ್ಯಾರ್ಥಿ, ನನಗಿಂತಲೂ ಅಸಹಾಯಕ, ಬಡವ, ನಾನು ಅವನಿಗೆ ಸಹಾಯ  ಮಾಡುವುದು ಹೋಗಲಿ ನಾನು ಅವನಿಂದ ಹಣ ಪಡೆಯುವುದೆಂದರೆ ಅಭಾಸಕರ”ವೆಂದು ದುಃಖದಿಂದ ದಿನಚರಿಯಲ್ಲಿ ಬರೆದಿದ್ದಾರೆ.

ಕರ್ನಾಟಕ ಸಮಾಜವಾದಿ ಪಕ್ಷದ ಸಂಘಟನೆ ಹಾಗೂ ವಿವಿಧ ಹೋರಾಟಗಳಿಗೆ ಬದುಕನ್ನೇ ಸಮರ್ಪಿಸಿಕೊಂಡಿದ್ದ ಹಿರಿಯ ನಾಯಕರೊಬ್ಬರ ಇಂತಹ ಜೀವನ ಶೈಲಿ ಇಂದಿನವರಿಗೆ ದಂತಕತೆಯಾಗಿ ಕಂಡು ಬರುವುದು ಸಹಜವಾಗಿದೆ. ಮೂರು ಅವಧಿಗೆ ಶಾಸನ ಸಭಾ ಸದಸ್ಯರಾಗಿದ್ದರೂ ಬಡತನ ಅವರನ್ನು ಬಿಡಲಿಲ್ಲ. ಎಂ. ನಾಗಪ್ಪನವರು ವರ್ಣಿಸಿರುವಂತೆ ಅವರ ಪ್ರವಾಸದ ವೈಖರಿ ಹೀಗಿದೆ: “ ಹೆಗಲಲ್ಲಿ ಒಂದು ಚೀಲ, ಚೀಲದಲ್ಲಿ ಹೊದೆಯಲು ಒಂದು ಶಾಲು, ಒಂದು ಜೊತೆ ಬಟ್ಟೆ, ಕಾರ್ಯಕರ್ತರ ಮನೆಯಲ್ಲೇ ಇಳಿಯುವುದು, ಇರುವ ಊಟವನ್ನೇ ಪರಮಾನ್ನ ಮಾಡಿಕೊಂಡು ಮುಂದಿನ ಊರಿಗೆ ಹೊರಡುವುದು. ಖರ್ಚಿಗೆ ಹಣ ಕೇಳುವಂತಿಲ್ಲ. ಅವರಾಗಿ ಒತ್ತಾಯ ಪಡಿಸಿದರೆ ಮೂಂದಿನ ಊರಿಗೆ ಟಿಕೀಟು ತೆಗೆಸಿಕೊಡಿ ಎನ್ನುವುದು. ಇಷ್ಟು ಸರಳ. ತಮ್ಮ ಬಟ್ಟೆ ತಾವೇ ತೊಳೆದುಕೊಳ್ಳುವ ಅದ್ಭುತ ಸ್ವಾವಲಂಬಿ, ಅವರು.” ಬದುಕನ್ನು ಹೀಗೆ ಸರಳಗೊಳಿಸಿಕೊಂಡಿದ್ದರ ಪರಿಣಾಮವಾಗಿ ಗೌಡರ ವ್ಯಕ್ತಿತ್ವದ ಸುತ್ತ ದಿವ್ಯ ತೆಜೋ ಮಂಡಲವಿತ್ತೆಂದು ತೋರುತ್ತದೆ. ಅದುದರಿಂದಲೇ ಅವರ ಎಂತಹ ಸಿಟ್ಟನ್ನೂ ಎದುರಾಳಿಗಳು ಮೌನವಾಗಿ ನುಂಗಿಕೊಂಡು ಶರಣಾಗುತ್ತಿದ್ದರು. ಸಿಟ್ಟು ಎಂದೂ ಸ್ವಂತ ಕಾರಣಕ್ಕಾಗಿ ಬಂದುದಿಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಅಥವ ಯಾರಾದರೊಬ್ಬ ಅನ್ಯಾಯಕ್ಕೊಳಗಾದವನ ಪರವಾಗಿ ಇರುತ್ತಿತ್ತು. ಎಷ್ಟೋ ಜನ ಐ.ಎ.ಎಸ್. ಅಧಿಕಾರಿಗಳ ಕತ್ತಿನ ಪಟ್ಟೆ ಹಿಡಿದು ಕೂಗಾಡಿರುವ ನಾಲ್ಕಾರು. ಉದಾಹರಣೆಗಳನ್ನು ಅವರ ಅಭಿಮಾನಿಗಳು ಉಲ್ಲೇಖಿಸಿದ್ದಾರೆ. ಒಮ್ಮೆ ಯಾರೋ ಒಬ್ಬ ಮಂತ್ರಿ ಶಾಸನ ಸಭಾ ಸದಸ್ಯರಾಗಿದ್ದ ಅಜೀಜ್ ಸೇಠರನ್ನು ಹೀನಾಯವಾಗಿ ನಿಂದಿಸಿ ಮಾತನಾಡಿದರಂತೆ. ವಿರೋಧಿ ಸಾಲಿನಲ್ಲಿ ಕುಳಿತಿದ್ದ ಗೌಡರು ಮಂತ್ರಿಯಿದ್ದ ಸಾಲಿನ ಕಡೆ ವೇಗವಾಗಿ ನಡೆದು ಬಂದು “ಸೇಠ್ ಸಾಹೇಬರ ಜೊತೆ ಯಾರೂ ಇಲ್ಲವೆಂದು ತಿಳಿದಿದ್ದೀರಾ! ಇನ್ನೊಂದು ಸಾರಿ ಸೇಠರ ವಿಚಾರ ಮಾತಾಡಿದರೆ ನಿಮ್ಮ ಎಲ್ಲಾ ಹಲ್ಲು ಕಿತ್ತು ಕೊಟ್ಟೇನು! ಹುಷಾರ್!” ಎಂದು ಅಬ್ಬರಿಸಿದಾಗ ಸಂಬಂಧಿಸಿದ ಮಂತ್ರಿಯು ಬಾಲ ಮುದುರಿಕೊಂಡರೆಂದು ಅಜೀಜ್ ಸೇಠ್ ನೆನಪಿಸಿಕೊಂಡಿದ್ಧಾರೆ. ಈ ಸಿಟ್ಟು ಒಮ್ಮೊಮ್ಮೆ ಉಗ್ರದಾಳಿಗೂ ಅವರನ್ನು ಪ್ರಚೋದಿಸುತ್ತಿತ್ತೆನ್ನಲೂ ಉದಾಹರಣೆಗಳಿವೆ. ಕನ್ನಡಿಗ ರಾಜ್ಯಪಾಲರು ಇಂಗ್ಲೀಷಿನಲ್ಲಿ ಭಾಷಣ ಓದಿದಾಗ ಅದರ ಪ್ರತಿಯನ್ನು ಹರಿದು, ಬೂಟುಗಾಲಿನಿಂದ ಮೆಟ್ಟಿನಿಂತ ಅವರ ಚರಿತ್ರಾರ್ಹ ನಡವಳಿಕೆ ಅಂದು ಜನತೆಯನ್ನು ದಿಗ್ಭ್ರಮೆಗೊಳಿಸಿತ್ತು. ಕನ್ನಡದ ಪರವಾಗಿ ಗೇಣಿದಾರ ರೈತರ ಪರವಾಗಿ ಅಥವಾ ದಲಿತರಿಗೆ ಅನ್ಯಾಯವಾದಾಗ ಗೌಡರ ಸಿಟ್ಟು ಸಜ್ಜನಿಕೆಯ ಎಲ್ಲೆ ಮೀರುತ್ತಿದ್ದ ಅನೇಕ ನಿದರ್ಶನಗಳು ಗ್ರಂಥದಲ್ಲಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೋಕು ಆರಗ ಗ್ರಾಮಕ್ಕೆ ಹೊಂದಿಕೊಂಡಿರುವ ಶಾಂತವೇರಿಯಲ್ಲಿ ಮಾರ್ಚ್ ೧೯೨೩ರಲ್ಲಿ ಹುಟ್ಟಿದ ಗೌಡರು, ಸಾಮಾನ್ಯ ಅಂಚೆ ಪೇದೆಯೊಬ್ಬರ ಮಗ. ಗೇಣಿದಾರ ರೈತ ಕುಟುಂಬದವರಾದುದರಿಂದ ಬಾಲ್ಯದಿಂದಲೇ ಬಡತನ ಹಾಸು ಹೊಕ್ಕಾಗಿತ್ತು. ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗಲೇ ಸ್ವಾತಂತ್ರ್ಯ ಚಳವಳಿ ಪ್ರವೇಶಿಸಿದ ಅವರು ಹೋರಾಟದ ಮಾರ್ಗದಲ್ಲಿಯೇ ಮುಂದುವರಿದರು. ಚಳವಳಿ, ಜೈಲು, ಜಕೀಯದ ನಡುವೆ ಕೇವಲ ಹನ್ನೆರಡು ವರ್ಷಗಳ ಕುಟುಂಬ ಜೀವನವನ್ನು ಹೊರತು ಪಡಿಸಿದರೆ, ಅವರ ಬದುಕು ಸಂಪೂರ್ಣವಾಗಿ ಸಾರ್ವಜನಿಕವಾಗಿತ್ತು. ಅವರ ಶ್ರೀಮತಿ ಸೋನಕ್ಕನವರು ಹೇಳುವಂತೆ, “ಅವರು ಬರೆದ ಪತ್ರಗಳಲ್ಲಿ ತೀರಾ ಖಾಸಗಿಯಾದದ್ದು ಏನೂ ಇರುತ್ತಿರಲಿಲ್ಲ. ಅವರ ವ್ಯಕ್ತಿತ್ವದಂತೆ ಅವರ ಮಾತು, ಬರಹ ಎಲ್ಲವೂ ಪರದರ್ಶಕ”, ಆದರೆ ಆಪ್ತ ಸ್ನೇಹಿತರೊಡನೆ ಒಡನಾಟ, ಸಾಹಿತ್ಯ ಸಂಗೀತಗಳಲ್ಲಿ ತನ್ಮಯ ಆಗುವುದು, ಮಕ್ಕಳ ಬಗೆಗೆ ಮಮತೆ, ಇಂತಹ ಸುಖಗಳಿಂದ ಅವರು ವಿಮುಖರಾಗಿರಲಿಲ್ಲ. ಅನಂತಮೂರ್ತಿ ಅವರು ಹೇಳುವಂತೆ “ಜೀವನದ ದಿನನಿತ್ಯದ ನಿಜಕ್ಕೂ ಬದಲಾವಣೆಯ ಆತುರಕ್ಕೂ ಒಟ್ಟಿಗೆ ಸ್ಪಂದಿಸಬಲ್ಲವರಾಗಿದ್ದರು”. ಕುಮಾರವ್ಯಾಸ, ವಚನಕಾರರು, ಬೇಂದ್ರೆ, ಕುವೆಂಪು,  ಅಡಿಗರ ಕಾವ್ಯವನ್ನು ಓದಿ ಸಂತೋಷಪಟ್ಟಿದ್ದರಲ್ಲದೆ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಸಮಯ ಸಿಕ್ಕಾಗ ಉಲ್ಲೇಖಿಸಿ ವಿವರಿಸಬಲ್ಲ ಅಭಿರುಚಿಯಿತ್ತು.

“ಸತ್ಯಾಗ್ರಹಿಗಳು ಕಂಡಂತೆ” ಎಂಬ ಅಧ್ಯಾಯದಲ್ಲಿ ಗೌಡರ ಹಲವು ಹೋರಾಟಗಳಲ್ಲಿ  ಸಂಗಾತಿಗಾಳಾಗಿದ್ದವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ವಿದ್ಯಾರ್ಥಿಯಾಗಿ ಅವರು ವಹಿಸಿದ ಪಾತ್ರ, ಗೇಣಿದಾರ ರೈತ ಹೋರಾಟ, ದಲಿತರ ಮೇಲೆ ದಬ್ಬಾಳಿಕೆ ಪ್ರತಿಭಟಿಸಿ ಹೋರಾಟ, ಕನ್ನಡ ಚಳವಳಿ, ದಸರಾ ಮೆರವಣಿಗೆ ಪ್ರತಿಭಟನೆ – ಹೀಗೆ ಹಲವು ಚಳವಳಿಗಳ ನೇತೃತ್ವ ವಹಿಸಿದ್ದ ಅವರ ರಾಜಕಾರಣದ ಮೂಲ ಸೆಲೆ ಜನಪರ ಹೋರಾಟಗಳಿಂದ ಚಿಮ್ಮುತ್ತಿತ್ತು. ತಾತ್ವಿಕ ನೆಲೆಯಲ್ಲಿ ಸಮಾಜವಾದ ಸಿದ್ಧಾಂತದಲ್ಲಿ ಶ್ರದ್ಧೆ, ಅದನ್ನು ಸಾಕಾರಗೊಳಿಸಲು ಹೋರಾಟ; ತಮ್ಮ ಗುರಿ ಮುಟ್ಟಲು ಶಾಸನಬದ್ದ ವ್ಯವಸ್ಥೆಯ ಮೂಲಕವೂ ಪ್ರಯತ್ನಿಸುತ್ತಿದ್ದರು. ಇದೆಲ್ಲದರ ಗುರಿ ವ್ಯವಸ್ಥೆಯ ಮೂಲ ಸ್ವರೂಪದಲ್ಲಿಯೇ ಬದಲಾವಣೆ. ಸಣ್ಣಪುಟ್ಟ ಹೊಂದಾಣಿಕೆ, ಯಾವುದೋ ಒಂದು ಊರಿನ ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ಸುಧಾರಣೆ ಅಥವಾ ತಮ್ಮ ಬೆಂಬಲಿಗರ, ಸಂಬಂಧಿಗಳ ವರ್ಗಾವಣೆಗೆ ಯಾವಾಗುವುದು ಇಂತಹ ಕೆಲಸಗಳಿಗಾಗಿ ಜನ ತಮ್ಮ ನೆರವು ಕೇಳಬಾರದು ಎಂದು ಅವರು ಹೇಳುತ್ತಿದ್ದರು. ಕೆ.ವಿ. ಸುಬ್ಬಣ್ಣ ಅವರು ಉಲ್ಲೇಖಿಸಿರುವಂತೆ. “ಕರ್ನಾಟಕ ಅನ್ನೊ ದೊಡ್ಡ ಮರ ಇದೆಯಲ್ಲ. ಅದರ ಬೇರಿಗೆ ನೀರು ಹಣಿಸೋ ದಾರಿ ಹುಡುಕಬೇಕು. ಇದನ್ನು ಮಾಡಬೇಕು, ಹಾಗೆ ಮಾಡಿದ್ರೆ ಇಂಥ ದೊಡ್ಡ ಮರದ ಕೊಂಬೆ ಚಿಗುರು ಎಲೆ ಎಲ್ಲಾ ಎಲ್ಲಾ ಒಂದೇ ಸಲಕ್ಕೆ ನಳನಳಿಸಿ ಬೆಳೀತವೆ” ಎಂದು ಅವರು ಆಗಾಗ ಹೇಳುತ್ತಿದ್ದರಂತೆ. ಹಾಗೆಂದು ದೈನಂದಿನ ಆಪತ್ತುಗಳಲ್ಲಿ ಅದರಲ್ಲಿಯೂ ದಲಿತರ ಪರವಾಗಿ ಅವರು ಅಧಿಕಾರಸ್ಥರ ಮುಂದೆ ಹೋಗದೇ ಇರುತ್ತಿರಲಿಲ್ಲ. ಶಿವಮೊಗ್ಗೆಯ ಬಳಿ ಒಂದು ಹಳ್ಳಿಯಲ್ಲಿ ದಲಿತರು ಬಗರ್ ಹುಕ್ಕುಂ ಸಾಗುವಳಿ ಮಾಡಿದಾಗ, ಅವರ ಮೇಲೆ ಹಲ್ಲೆ ನಡೆಸಿದ ಸವರ್ಣೀಯರನ್ನು ಖಂಡಿಸಿ, ಜಿಲ್ಲಾಧಿಕಾರಿ ಬಳಿ ಶಾಂತವೇರಿಯವರು ಹೋದಾಗ ನಡೆದ ಒಂದು ಘಟನೆಯನ್ನು ಸತ್ಯಾಗ್ರಹಿಯೊಬ್ಬರು ನೆನಪಿಸಿಕೊಳ್ಳುತ್ತಾರೆ: ಜಿಲ್ಲಾಧಿಕಾರ ಗರ್ವದಿಂದಹರಿಜನರಾದರೇನು? ಬಗರ್ ಹುಕ್ಕುಂ ಸಾಗುವಳಿ ಮಾಡಿದರೆ ಏನು ಮಾಡಲು ಸಾಧ್ಯ? ಅಲ್ಲದೆ ಅವರು ವಾಸಿಸುವ ಜಾಗವೂ ಬಗರ್ ಹುಕ್ಕುಂ ಆಕ್ರಮಣ. ಅದನ್ನೂ ಬಿಡಿಸಬೇಕಾದೀತು. ಇಲ್ಲವೇ ಬೆಂಕಿ…” ಎಂದು ಹೇಳಿದಾಗ ಕೆರಳಿ ಕೆಂಡವಾದ ಗೌಡರು ತಮ್ಮ ಕೈಲಿದ್ದ ಊರು ಗೋಲಿನಿಂದ ಜಿಲ್ಲಾಧಿಕಾರಿ ಗಲ್ಲಕ್ಕೆ ತಿವಿದು, “ಏನು ಹೇಳ್ದೆ! ಇನ್ನೊಂದು ಸಾರಿ ಹೇಳು. ಗುಡಿಸಲಿಗೆ ಬೆಂಕಿ ಹಚ್ಚುತ್ತೀಯಾ? ನಾವೇನು ಮಾಡುತ್ತೇವೆ ಗೊತ್ತೆ? ನಿನ್ನನ್ನೂ ಬೆಂಕಿಯಲ್ಲಿ ಹಾಕುತ್ತೇವೆ. ಅಧಿಕಾರದ ಅಮಲಿನಲ್ಲಿ ಮಾತಾಡುತ್ತೀಯಾ? ಎಚ್ಚರಿಕೆ, ಎಂದು ಗುಡುಗಿದರಂತೆ.

ಗೋಪಾಲಗೌಡರ ಎಲ್ಲ ಹೋರಾಟಗಳ ತಲಕಾವೇರಿ ಕಾಗೋಡು ರೈತ ಸತ್ಯಾಗ್ರಹ. ಗೇಣಿದಾರರ ಹಕ್ಕಿನ ಪರವಾಗಿ ಭೂ ಮಾಲಿಕರ ವಿರುದ್ಧ ಸಾಗರ ತಾಲ್ಲೋಕು ಕಾಗೋಡಿನಲ್ಲಿ ನಡೆದ ಐತಿಹಾಸಿಕ ಚಳುವಳಿ ತೀವ್ರ ಘಟ್ಟದಲ್ಲಿ ಇದ್ದಾಗ ರಾಮಮನೋಹರ ಲೋಹಿಯಾ ಅವರೇ ಬಂದು ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾದರು. ಅವರನ್ನು ಬಿಡಿಸಲು ನೆಹರೂ ಮಧ್ಯೆ ಪ್ರವೇಶಿಸಬೇಕಾಯಿತು. ಹೀಗೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿ ಮಾಡಿದ ಕಾಗೋಡು ಸತ್ಯಾಗ್ರಹ ಕರ್ನಾಟಕದಲ್ಲಿ ಮುಂದೆ ನಡೆದ ಭೂ ಸುಧಾರಣೆಯ ಕಾನೂನುಗಳಿಗೆ ಪೀಠಿಕೆಯಂತಾಯಿತು. ಈ ಸತ್ಯಾಗ್ರಹದ ಮೂಲಕವೇ ಗೌಡರು ಅಖಂಡ ಕರ್ನಾಟಕದ ಜನನಾಯಕರಾಗಿ ಗುರ್ತಿಸಲ್ಪಟ್ಟರು. ಈ ಗ್ರಂಥದ ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಆಗ ಭಾಗವಹಿಸಿದ್ದ ಅನೇಕ ಸತ್ಯಾಗ್ರಹಿಗಳ ನೆನಪುಗಳಿಗೆ. ಸ್ವತಹ ಗೌಡರೇ ‘ಕಾಗೋಡು ಚಲೋ’ ಎಂಬ ಲೇಖನ ಬರೆದಿದ್ದು, ಅದನ್ನು ಇಲ್ಲಿ ಸೇರಿಸಲಾಗಿದೆ. “ನನ್ನ ಪ್ರಜ್ಞೆಯಲ್ಲಿ ಜಾಗೃತವಾಗಿರುವ ಒಂದು ಮಹಾ ಘಟನೆ, ಕಾಗೋಡು ಹೋರಾಟ. ನಾನು ಈಗ ಹೀಗೆ ಆಗಿದ್ದರೆ, ಹಾಗೆ ಅಗುವಲ್ಲಿ ಕಾಗೋಡಿನ ಕೈವಾಡ ಬಹಳವಿದೆ” – ಎಂದು ಅವರು ಉದ್ಗಾರ ಎತ್ತಿದ್ದಾರೆ. ಜಿ. ರಾಜಶೇಖರ್ ಬರೆದಿರುವ “ಕಾಗೋಡು ಸತ್ಯಾಗ್ರಹ”ವೆಂಬ ಕೃತಿಯ ಆಯ್ದ ಭಾಗಗಳನ್ನು ಇಲ್ಲಿ ಪ್ರಕಟಿಸಿದ್ದಾರೆ. ಸತ್ಯಾಗ್ರಹದ ಅಂಗವಾಗಿ ಅಂದು ಹೋರಟ ಕರಪತ್ರಗಳು, ಹೇಳಿಕೆಗಳು, ಪತ್ರಿಕಾ ಸಂಪಾದಕೀಯ ಮುಂತಾದ ಮಹತ್ವದ ದಾಖಲೆಗಳೆಲ್ಲವೂ ಸೇರ್ಪಡೆ ಯಾಗಿವೆ.

‘ಒಡನಾಡಿಗಳ ಕಣ್ಣಲ್ಲಿ’ ಎಂಬ ಅಧ್ಯಾಯದಲ್ಲಿ ಅರವತ್ತು ಮಂದಿ ಸಮಕಾಲೀನ ಹಿರಿಯರು ಗೋಪಾಲಗೌಡರ ಬಗೆಗೆ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಕುವೆಂಪು, ಗೊರೂರು, ಪು. ತಿ. ನ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕಡಿದಾಳು ಮಂಜಪ್ಪ, ದೇವರಾಜ ಅರಸು, ಬಿ.ಬಸವಲಿಂಗಪ್ಪ, ಕೆ.ಎಚ್. ರಂಗನಾಥ್ ಮುಂತಾದವರು ಇಲ್ಲಿ ಸೇರಿದ್ದಾರೆ. ‘ಮನ ಸಂಪನ್ನತೆಯ ಕ್ಷಣಗಳು’ ಎಂಬ ಚಿಕ್ಕ ಅಧ್ಯಾಯದಲ್ಲಿ ಗೋಪಾಲಗೌಡರಿಗೆ ಸಂಬಂಧಿಸಿದ ಒಂಬತ್ತು ಘಟನೆಗಳನ್ನು ಅವರನ್ನು ಬಲ್ಲವರು ನೆನಪಿಸಿಕೊಂಡಿದ್ದಾರೆ.

ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟದ ಅರ್ಧಭಾಗ ಸಹಜವಾಗಿಯೇ ಅವರ ಪತ್ರಗಳು, ದಿನಚರಿ, ಶಾಸನ ಸಭೆಯಲ್ಲಿ ಅವರು ಮಾಡಿದ ಭಾಷಣಗಳು ಮತ್ತು ಗೌಡರ ಬಿಡಿ ಲೇಖನಗಳನ್ನು ಒಳಗೊಂಡಿದೆ. ಗ್ರಂಥದಲ್ಲಿ ಸೇರ್ಪಡೆಯಾಗಿರುವ ಇಪ್ಪತ್ತ ಮೂರು ಪತ್ರಗಳಲ್ಲಿ ಹದಿನೈದು ಪತ್ರಗಳು ಅವರು ಮಡದಿ ಸೋನಕ್ಕವರಿಗೆ ಬರೆದವು. ಇತರರಿಗೆ ಬರೆದ ಎಂಟು ಪತ್ರಗಳಿವೆ. ಸುಮಾರು ನಾಲ್ಕು ದಶಕಗಳು ಅವರ ಸಾರ್ವಜನಿಕ ಜೀವನದಲ್ಲಿ ಸಾರ್ವಜನಿಕ ಮಹತ್ವವಿರುವ ಹಲವು ಪತ್ರಗಳಿರಬಹುದಾದರೂ ಅಂತಹ ಅಮೂಲ್ಯ ದಾಖಲೆಗಳಾವುವೂ ಇಲ್ಲಿಲ್ಲ. ಶಾಂತವೇರಿಯವರು ೧೯೬೦ನೇ ವರ್ಷದಲ್ಲಿ ಬರೆದ ದಿನಚರಿಯ ಹಲವು ಮಾದರಿಗಳು ಮಾರ ಇಲ್ಲಿವೆ. ಆದರೆ ಅವರು ಬರೆದ ದಿನಚರಿಯ ಕೆಲವು ಪುಸ್ತಕಗಳು ಹಸ್ತಪ್ರತಿಗಳೇ ಇದ್ದು ಅದು ಸಮಗ್ರವಾಗಿ ಪ್ರಕಟವಾಗಬೇಕಿದೆ. ಎಂದು ಮುನ್ನುಡಿಯಲ್ಲಿ ತಿಳಿದುಬರುತ್ತದೆ. ಸಾರ್ವಜನಿಕ ಜೀವನದಲ್ಲಿರುವ ಅವರು ಹಣಕಾಸಿನ ಲೆಕ್ಕ ಇಡುವುದರಲ್ಲಿ ಎಷ್ಟು ತೀವ್ರ ಕಾಳಜಿ ವಹಿಸುತ್ತಿದ್ದರೆಂಬ ಸಂಗತಿ ಅವರ ದಿನಚರಿಗಳಲ್ಲಿ ಕಾಣಿಸುವ ಒಂದು ಮುಖ್ಯ ವಿಚಾರ. ಹೋಟೆಲ್ಲಿನಲ್ಲಿ ತಿಂದ ತಿಂಡಿ, ಕುಡಿದ ಕಾಫಿ ಇಂತಹ ಚಿಕ್ಕ ಪುಟ್ಟ ವಿವರಗಳೂ ಇಲ್ಲಿ ನಮೂದಾಗಿವೆ. ಸ್ವಂತಕ್ಕಾಗಿ ಅವರು ಮಾಡಿದ ಯಾವ ಖರ್ಚಿನ ಮೊತ್ತವೂ – ಒಂದು ಬಾರಿಗೆ ಹತ್ತು ಹದಿನೈದು ರೂಪಾಯಿಗೆ ಹೆಚ್ಚಿಲ್ಲ.

೧೯೫೨ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸನಸಭೆಗೆ ಆರಿಸಿ ಬಂದ ಗೋಪಾಲಗೌಡರು ೧೯೫೭ – ೬೨ರ ಅವಧಿಯನ್ನು ಹೊರತುಪಡಿಸಿದರೆ ಸತತವಾಗಿ ಮೂರು ಭಾರಿ ಶಾಸನ ಸಭೆಗೆ ಆಯ್ಕೆಯಾಗಿ, ಬುದಕಿರುವವರೆಗೂ ಶಾಸನ ಸಭಾ ಸದಸ್ಯರಾಗಿದ್ದರು. ಈ ಹದಿನೈದು ವರ್ಷಗಳಲ್ಲಿ ಅವರು ಮಾಡಿರುವ ಶಾಸನಸಭಾ ಭಾಷಣಗಳಲ್ಲಿ ಕೆಲವು ಮಾದರಿಗಳನ್ನು ಆಯ್ದು ಈ ಗ್ರಂಥದಲ್ಲಿ ಸೇರಿಸಿದ್ಧಾರೆ. ರಾಷ್ಟ್ರ ಪುನರ್ ನಿರ್ಮಾಣದಲ್ಲಿ ಅವರಿಗಿದ್ದ ತೀವ್ರ ಶ್ರದ್ಧೆ, ದೇಶದ ಮೂಲ ಅಗತ್ಯಗಳ ಬಗೆಗೆ ಸ್ಪಷ್ಟ ತಿಳಿವಳಿಕೆ ಹಾಗೂ ತಾತ್ತ್ವಿಕ ಎಚ್ಚರವನ್ನು ಅವರ ಎಲ್ಲ ಭಾಷಣಗಳಲ್ಲಿ ಗುರುತಿಸಬಹುದಾಗಿದೆ. ಇಡೀ ಕರ್ನಾಟಕ ಅಥವಾ ಭಾರತಕ್ಕೆ ಅನ್ವಯಿಸಬಹುದಾದ ಸಮಸ್ಯೆಗಳ ಬಗೆಗೇ ಅವರ ಚಿಂತನೆ. ಅವರು ಶಾಸನ ಸಭೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿಯೇ ವಿರೋಧ ಪಕ್ಷಗಳಿಗೆ ಇರುವ ಮಹತ್ವವನ್ನು ವಿವರಿಸಿ, ನಂಬಿಕೆಗೆ ಬದ್ಧವಾಗಿ ತಾವು ಸಭಾಪತಿ ಸ್ಥಾನಕ್ಕೆ ಸಾಂಕೇತಿಕವಾಗಿ ಸ್ಪರ್ಧಿಸಿದ್ದಾಗಿ ಹೇಳಿದ್ದಾರೆ. ಎರಡನೆ ಭಾಷಣ ರಾಜಧನ ರದ್ದತಿಗೆ ಸಂಬಂಧಿಸಿದೆ. ಮುಂದೆ, ಪ್ರಾಥಮಿಕ ಶಿಕ್ಷಣ, ಆರೋಗ್ಯ, ಸಂಸ್ಕೃತಿ ಪ್ರಚಾರ, ಭೂ ಸುಧಾರಣೆ, ನಿಮ್ಮವರ್ಗದ ಏಳಿಗೆ, ಕರ್ನಾಟಕ ಏಕೀಕರಣ, ಆಡಳಿತದಲ್ಲಿ ಜನಭಾಷೆ, ವಿಷಯಗಳನ್ನೆತ್ತಿಕೊಂಡು ಕೂಲಂಕಶಷವಾಗಿ ಮನಮುಟ್ಟುವಂತೆ ಮಾತನಾಡಿದ್ದಾರೆ. ಗಹನವಾದ ವಿಚಾರಗಳನ್ನು ಸರಳವಾಗಿ ಸ್ಪಷ್ಟವಾಗಿ ದೃಷ್ಟಾಂತಗಳ ಮೂಲಕ ವಿವರಿಸುವುದು ಅವರ ಭಾಷಣಗಳ ವಿಧಾನ.

ಕನ್ನಡದ ಪರವಾಗಿ ತೀವ್ರ ಶ್ರದ್ಧೆ ಇರಿಸಿದ್ದ ಅವರಿಗೆ “ಭಾಷಾ ಮೋಹವು ಜನತೆಯ ಬುದ್ಧಿಭ್ರಮಣೆ ಮಾಡಬಲ್ಲುದು” ಎಂಬ ಎಚ್ಚರವೂ ಇದೆ. ನಮ್ಮ ಭಾಷೆ. ಪ್ರಾಂತಕ್ಕೆ ಹೋರಾಟ ಮಾಡುವಾಗ ಸೋದರ ಭಾಷೆಗಳ ಜನರನ್ನು ಕೆರಳಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಮತೀಯ ಅಲ್ಪಸಂಖ್ಯಾತರ ಹಿತರಕ್ಷಣೆ ಪ್ರಜಾಪ್ರಭುತ್ವದ ಕರ್ತವ್ಯವೆಂದು ಹೇಳಿರುವುದೂ ಅವರ ಸಮಾಜವಾದೀ ನಿಲುವಿಗೆ ತಕ್ಕಂತಿದೆ. ಭೂಮಿಯನ್ನು ಅಸ್ತಿಯ ಪಟ್ಟಿಯಿಂದ ಮುಕ್ತಗೊಳಿಸಬೇಕೆಂದೂ ಉತ್ಪಾದನಾ ಸಾಧನವಾದ ಭೂಮಿ ಮಾರತಕ್ಕ ಅಥವ ಕೊಳ್ಳತಕ್ಕ ವಸ್ತುವಾಗಬಾರದೆಂದು ವಾದಿಸಿ, ಉಳುವವನೇ ಭೂಮಿಗೆ ಹಕ್ಕುದಾರನೆಂದೂ, ಅದರ ಒಡೆತನ ಸರ್ಕಾರದ್ದೆಂದೂ ಪ್ರತಿಪಾದಿಸುತ್ತಾರೆ. ಯಾವ ವಿಚಾರ ಕೈಗೆತ್ತಿಕೊಂಡರೂ ಬೇರುಮಟ್ಟದ ಸುಧಾರಣೆ, ಅವರ ಗುರಿಯಾಗಿತ್ತು. ಆದುದರಿಂದ ಅವರ ಭಾಷಣವೆಂದರೆ ವಿಧಾನಸಭೆಯಲ್ಲಿ ಭರ್ತಿಯಾಗಿ ಸದಸ್ಯರು ಸೇರುತ್ತಿದ್ದರಂತೆ.

ಗೋಪಾಲ ಗೌಡರು ಬರೆದಿರುವ ಹಲವು ಲೇಖನಗಳಲ್ಲಿ ಸಂಪಾದಕರಿಗೆ ಸಂಗ್ರಹಿಸಲು ಸಾಧ್ಯವಾಗಿರುವುದು ಕೇವಲ ಎರಡು ಚಿಕ್ಕ ಲೇಖನಗಳು. ಅವರು ನಿಧನರಾಗಿ ಇಪ್ಪತೈದು ವರ್ಷಗಳು ಕಳೆದಮೇಲೆ ಅವರ ಪತ್ರಗಳು, ದಿನಚರಿ, ಲೇಖನಗಳನ್ನು ಸಂಗ್ರಹ ಮಾಡುವುದು ತುಂಬಾ ಶ್ರಮ ಸಾಧ್ಯವಾದ ಕೆಲಸವೆಂಬುದನ್ನು ಒಪ್ಪಿಕೊಂಡರೂ, ಇಂತಹ ಸಾಮಗ್ರಿಗಳೇ ಚರಿತ್ರೆಗೆ ಮೂಲ ಆಕಾರಗಳಾಗುವುದರಿಂದ ಈ ಭಾಗ ಇನ್ನೂ ಅಧಿಕೃತವಾಗಿ ಸಮಗ್ರವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ‘ಶಾಂತವೇರಿ ಗೋಪಾಲಗೌಡರ ಬದುಕಿನ ಹೆಜ್ಜೆಗಳು’ ಎಂಬ ವಿವರ ಸಂಕ್ಷಿಪ್ತವಾಗಿದ್ದರೂ ಚೊಕ್ಕವಾಗಿದೆ. ಗೋಪಾಲ ಗೌಡರಂತಹ ಧೀಮಂತ ರಾಜಕಾರಣಿಯನ್ನು ಕುರಿತು ಸಂಪುಟ ಪ್ರಕಟಿಸಿರುವ ಕನ್ನಡ ವಿಶ್ವವಿದ್ಯಾಲಯವನ್ನು ಅವರಿಗಿದ್ದ ಪರಿಮಿತಿಗಳ ಚೌಕಟ್ಟಿನಲ್ಲಿಯೂ ಗಮನಾರ್ಹವಾದ ರೀತಿಯಲ್ಲಿ ಅಚ್ಚುಕಟ್ಟಾಗಿ ಸಂಪಾದಿಸಿಕೊಟ್ಟಿರುವ ಸಂಪಾದಕರಿಬ್ಬರನ್ನೂ ಅಭಿನಂದಿಸಬಹುದಾಗಿದೆ.

(ಮಯೂರ: ೧೯೯೮)

* * *