ನಾಪತ್ತೆಯಾದ ಮೌಲ್ಯಗಳ ನೆನಪಿಸಿಕೊಳ್ಳುತ್ತಾ
ಕೆ.ಸತ್ಯನಾರಾಯಣ

ಗೋಪಾಲಗೌಡರು  ನಿಧನರಾಗಿ ಇಪ್ಪತ್ತಾರು ವರ್ಷಗಳಾದ ಮೇಲೆ ಸಮಾಜವಾದ, ಬಡವರು, ಸಾಮಾಜಿಕ ನ್ಯಾಯ ಇಂಥ ಪದಗಳೆಲ್ಲ ಸಾಂಸ್ಕೃತಿಕ – ಸಾಮಾಜಿಕ ವಾಗ್ವಾದದಲ್ಲಿ ನಾಪತ್ತೆಯಾಗುತ್ತಿರುವ ಸಂದರ್ಭದಲ್ಲಿ ಅವರನ್ನು ಕುರಿತು. ಈ ನೆನಪಿನ ಸಂಪುಟ ಪ್ರಕಟವಾಗಿದೆ. ಗೋಪಾಲಗೌಡರ ಆಪ್ತರ ಬಳಗದಲ್ಲಿ ಕಲಾವಿದರು, ಬರಹಗಾರರೂ ಇದ್ದರು. ಹಾಗಿದ್ದಾಗ ನೆನಪಿನ ಸಂಪುಟಕ್ಕೆ ಬೇಕಾದ ಬರವಣಿಗೆಯನ್ನು ಕ್ರೋಢಿಕರಿಸುವುದಕ್ಕೆ, ಸಂಪಾದಿಸುವುದಕ್ಕೆ ವಿಶೇಷವಾದ ತೊಂದರೆಯಿದ್ದಿರಲಾರದು: ಸರ್ಕಾರಿ ಸಂಪನ್ನಮೂಲಗಳ, ಸಂಸ್ಥೆಗಳ ಬೆಂಬಲದ ಕೊರತೆಯೂ ಇರಲಾರದು. ಏಕೆಂದರೆ ಗೋಪಾಲಗೌಡರ ಶಿಷ್ಯರಲ್ಲೇ ಅದೆಷ್ಟೋ  ಜನ ಮಾಜಿ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ದಶಕಗಳೇ ಕಳೆದಿವೆ. ಗೋಪಾಲಗೌಡರು ಪ್ರತಿಪಾದಿಸುತ್ತಿದ್ದ ಜೀವನಮೌಲ್ಯ, ಜೀವನಶೈಲಿಗಳಿಂದ ಅವರ ಒಡನಾಡಿಗಳು. ಆಪ್ತರೂ ಸೇರಿದಂತೆ ನಾವೆಲ್ಲರೂ ಮಾನಸಿಕವಾಗಿ ಬಹುದೂರ ಸಾಗಿ ಬಂದಿರುವುದೇ ಈ ನೆನಪಿನ ಸಂಪುಟ ಇಷ್ಟು ತಡವಾಗಿ ಪ್ರಕಟವಾಗುತ್ತಿರುವುದಕ್ಕೆ ಸರಿಯಾದ ಕಾರಣವಿರಬೇಕು.

ಸಂಪುಟದ ಗುಣಮಟ್ಟ ಮಾತ್ರ ಈ ತಡವನ್ನು ಮರೆಸುವಂತಿದೆ: ಗೋಪಾಲಗೌಡರ ಶಾಸನಸಭೆಯ ಭಾಷಣಗಳು, ದಿನಚರಿ, ಅವರನ್ನು ಕುರಿತು ಇತರರು ಬರೆದ ಲೇಖನಗಳು, ಕಾದಂಬರಿ, ಚಲನಚಿತ್ರ ಇವೆಲ್ಲ ಬೇರೆ ಬೇರೆ ಸಂದರ್ಭದಲ್ಲಿ ಬಿಡಿಯಾಗಿ ಪ್ರಕಟಗೊಂಡ ಗೌಡರ ವ್ಯಕ್ತಿತ್ವ, ಜೀವನ, ಸಾಧನೆ ಕುರಿತ ಒಟ್ಟಂದದ ಚಿತ್ರವೆ ಸಿಗುತ್ತಿರಲಿಲ್ಲ. ಬದಲಿಗೆ ಗೌಡರ ವ್ಯಕ್ತಿತ್ವವನ್ನು ದಂತಕತೆಯಾಗಿ ಮಾರ್ಪಡಿಸುವ ಪ್ರಯತ್ನವೇ ಕಾಣುತ್ತಿತ್ತು. ಸಂಪುಟ ಶಾಂತವೇರಿಯವರ ವ್ಯಕ್ತಿತ್ವ, ಸಾಧನೆ, ಕಾಳಜಿಗಳ ಒಟ್ಟಂದದ ಚಿತ್ರಣವನ್ನು ವಸ್ತುನಿಷ್ಠಿವಾಗಿ ಕೊಡುವುದರ ಜತೆಗೆ, ೧೯೫೦ ೭೦ರ ಅವಧಿಯ ಕರ್ನಾಟಕದ ತನ್ಮೂಲಕ ಭಾರತದ ರಾಜಕೀಯ, ಸಾಮಾಜಿಕ ವಾತಾವರಣದ ಮೇಲೆ ಕ್ಷ ಕೀರಣವನ್ನು ಕೂಡ ಬೀರುತ್ತದೆ.

ಶಾಂತವೇರಿಯವರ ಬಗ್ಗೆ ಇದುವರೆಗೆ ಬಂದಿರುವ ಬರವಣಿಗೆಗಳನ್ನು ಅಭಿಪ್ರಾಯಗಳನ್ನು ಕ್ರೋಢೀಕರಿಸಿರುವುದರ ಜತೆಗೆ ಗೌಡರು ಅವರ ಪತ್ನಿಗೆ ಬರೆದಿರುವ ಮನಕರಗಿಸುವಂಥ ಖಾಸಗಿ ಪತ್ರಗಳೂ ಇವೆ. ನೆನಪಿನ ಸಂಪುಟದ ತಯಾರಿಕೆಯಲ್ಲಿ ಅಪಾರ ಕ್ಷೇತ್ರಕಾರ್ಯವೂ ಸೇರಿಕೊಂಡಿರುವುದರಿಂದ ಬರೆಲಾಗದವರು, ಬರವಣಿಗೆಯಲ್ಲಿ ಆಸಕ್ತಿಯಿಲ್ಲದವರೂ ಕೂಡ ಗೌಡರ ಬಗ್ಗೆ, ಮಾಹಿತಿ, ಅಭಿಪ್ರಾಯಗಳನ್ನು ನೀಡಿದ್ದಾರೆ.

ಶಾಂತವೇರಿಯವರ ಸಾರ್ವಜನಿಕ ಜೀವನದ ಮುಖ್ಯ ಮಜಲಾದ ಕಾಗೋಡು ಸತ್ಯಾಗ್ರಹ ಕುರಿತಂತೆ ವಿಶೇಷ ಅನುಬಂಧವಿದೆ. ಚಂದ್ರಶೇಖರ ಕಂಬಾರರು ಲೋಹಿಯಾ ಬಗ್ಗೆ  ಬರೆದಿರುವ ಅಪೂರ್ವ ಒಳನೋಟಗಳ ಬರಹ ಶಾಂತವೇರಿಯವರ ವ್ಯಕ್ತಿತ್ವವನ್ನು ಪ್ರವೇಶಿಸಲು ನೆರವಾಗುತ್ತದೆ. ಸಾರ್ವಜನಿಕ ನಾಯಕರೊಬ್ಬರ ಬಗ್ಗೆ ಇಂಥ ವಿಸ್ತೃತ ಸಂಪುಟ ಬಗೆಯಲ್ಲಿ ಪ್ರಕಟವಾಗುತ್ತಿರುವುದು ಕನ್ನಡದಲ್ಲಿ ಇದೇ ಮೊದಲಿರಬೇಕು. ಸಂಪಾದಕರಿಬ್ಬರೂ ಓದುಗರ ಅಭಿನಂದನೆಗೆ ಅರ್ಹರು.

ಗೌಡರ ವ್ಯಕ್ತಿತ್ವ ಸಂಪಾದಕರ ಮೇಲೂ ಮೋಡಿ ಹಾಕಿದಂತಿದೆ: ಗೌಡರ ಬಗ್ಗೆ ಅವರ ಊರಿನವರು, ಒಡನಾಡಿಗಲೂ ನೀಡಿರುವ ಅಭಿಪ್ರಾಯಗಳಲ್ಲಿ, ಮಾಹಿತಿಯಲ್ಲಿ ತುಂಬಾ ಎನ್ನುವಷ್ಟು ಪುನರುಕ್ತಿಗಳಿವೆ. ಈ ಭಾಗದಲ್ಲಿ ಸಂಪಾದಕರು ಸ್ವಲ್ಪ ಮುತುವರ್ಜಿ ವಹಿಸಬಹುದಿತ್ತು. ಹೀಗಿದ್ದರೂ ಕೆಲವರಿಗೆ ಗೌಡರ ಬಗ್ಗೆ ವಸ್ತುನಿಷ್ಠ ನಿಲುವುಗಳನ್ನು ತಳೆಯಲು ಅಭಿಮಾನ ಅಡ್ಡಿ ಬರುವುದಿಲ್ಲ. ಉದಾಹರಣೆಗೆ, ‘ಮಾರ್ಕ್ಸ್‌ನ ಸಿದ್ಧಾಂತವನ್ನು ಆಳವಾದ ನೆಲೆಯಲ್ಲಿ ಇವರು (ಗೌಡರು) ಅಭ್ಯಸಿಸಿದ್ದರೆಂದು ನನಗನಿಸುವುದಿಲ್ಲ’. ಎಂದು ಕೆ. ಎಂ. ಶ್ರೀನಿವಾಸ್ ಬರೆಯುತ್ತಾರೆ. (ಪುಟ-೯)

‘ಮೊದಲ ಚುನಾವಣೆ’ ಎಂಬ ಬಿ.ಎಸ್.ಚಂದ್ರಶೇಖರ್ ಅವರ ಲೇಖನ ೫೦ರ ದಶಕದ ಚುನಾವಣಾ ವಾತಾವರಣವನ್ನು ವಿವರವಾಗಿ ಇಂದಿನ ಓದುಗರಿಗೆ ಪರಿಚಯ ಮಾಡಿಕೊಡುತ್ತದೆ. ಸಂಪಾದಕರಿಗೆ ಲಭ್ಯವಾಗಿರುವ ಶಾಂತವೇರಿಯವರ ಒಂದೇ ಒಂದು ವರ್ಷದ ದಿನಚರಿ (೧೯೬೦) ಅವರ ವ್ಯಕ್ತಿತ್ವದಲ್ಲಿದ್ದ ಕನಸುಗಾರ, ಹೋರಾಟಗಾರ, ಭಾವುಕತೆ, ಕುಟುಂಬ ಪ್ರೀತಿ – ಮತ್ತೆಲ್ಲ ಆಯಾಮಗಳ ಸೂಕ್ಷ್ಮ ಪರಿಚಯ ಮಾಡಿಕೊಡುತ್ತದೆ. ಪತ್ನಿ ಸೋನಕ್ಕನವರಿಗೆ ಬರೆದ ಪತ್ರಗಳು ಅಪೂರ್ವವಾಗಿವೆ. ಇವು ರಾಜಕೀಯ ಜೀವನದ ಆದರ್ಶ, ಮಧ್ಯಮ ವರ್ಗದ ಕೌಟುಂಬಿಕ ವಾಸ್ತವ ಇವೆರಡನ್ನು ಸರಿದೂಗಿಸಲು ಗೌಡರು ಪಟ್ಟ, ಬವಣೆಯ ದಾಖಲೆಯಂತಿವೆ. ಪತ್ರಗಳು ಎಂಥ ಬಡತನದಲ್ಲಿದ್ದರೂ ಸ್ವಾಭಿಮಾನ, ನೈತಿಕ ಸಿಟ್ಟನ್ನು ಕಳೆದು ಕೊಳ್ಳದ ಗೌಡರ ವ್ಯಕ್ತಿತ್ವದ ಬಗ್ಗೆ ಆದರ ಹುಟ್ಟಿಸುವುದರ ಜತೆಗೆ, ಹೆಂಡತಿಗೆ ಸಾರ್ವಜನಿಕ ಜೀವನದ ಒಳಗುಟ್ಟುಗಳನ್ನು ತಿಳಿಹೇಳುವ ಶೈಲಿ, ವ್ಯಕ್ತಿಗತವಾದ ಪತ್ರದಲ್ಲೂ ವಸ್ತುನಿಷ್ಠ ಶೈಲಿಯನ್ನು ಅಳವಡಿಸಿಕೊಂಡಿರುವ ರೀತಿಗೂ ಪತ್ರಗಳು ಗಮನಾರ್ಹ.

‘ಶಾಸನ ಸಭೆಯ ಭಾಷಣಗಳು’ ಎಂಬ ಭಾಗ ಗೌಡರ ಗ್ರಹಿಕೆಯ ವೈವಿಧ್ಯ, ಪಾಂಡಿತ್ಯ ಮತ್ತು ದೂರದೃಷ್ಟಿಯನ್ನು ಸೂಚಿಸುತ್ತದೆ. ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಅವರು ಹೇಳಿರುವ ಮಾತು ನೋಡಿ ನಮ್ಮ ಜನಕ್ಕಾಗಿ, ನಮ್ಮ ಸಂಸ್ಕೃತಿಗಾಗಿ, ನಮ್ಮ ಭಾಷೆಗಾಗಿ, ನಮ್ಮ ಪ್ರಾಂತ್ಯಕ್ಕಾಗಿ ಹೋರಾಟ ಮಾಡುವಾಗ, ವಾದ ಮಾಡುವಾಗ ತೆಲುಗು, ತಮಿಳು ಅಥವಾ ಮರಾಠ ಜನರನ್ನು ಕೆರಳಿಸದಿರುವ ರೀತಿ ನೀತಿಯನ್ನು ಕಲಿಯಬೇಕಾದ್ದು ಬಹಳ ಅಗತ್ಯ (ಪುಟ – ೩೩೧).

ಭೂಸುಧಾರಣೆ, ಗೇಣಿದಾರರ ಹಿತಾಸಕ್ತಿ ಕುರಿತಂತೆ ಗೌಡರ ವಿಚಾರ ಎಲ್ಲರಿಗೂ ತಿಳಿದಿರುವಂತದ್ದು. ಜೈಲಿನಲ್ಲಿ ಕೊಳೆಯುತ್ತಿರುವ ಕೈದಿಗಳ ಬಗ್ಗೆ, ಪಠ್ಯಪುಸ್ತಕಗಳನ್ನು ಕುರಿತು, ವಿಧಾನಸೌಧದ ಕಟ್ಟಡದಲ್ಲಿರುವ ಸೌಂದರ್ಯ ಪ್ರಜ್ಞೆಯ ಅಭಾವದ ಬಗ್ಗೆ – ಶಾಸನ ಸಭೆಯಲ್ಲಿ ಅವರು ಮಾಡಿದ ಭಾಷಣಗಳು ಗೌಡರ ಆಸಕ್ತಿಗಳ ವೈವಿಧ್ಯ ಮತ್ತು ಆಳವನ್ನು ಸೂಚಿಸುವಂತಿವೆ. ಒಂದು ಸಂಗತಿಯನ್ನು ಸಮರ್ಥವಾಗಿ ಪ್ರತಿಪಾದಿಸುವುದಕ್ಕೆಂದು ಅವರು ಸಂಗ್ರಹಿಸಿರುವ ವಿವರಗಳು, ವಾದವನ್ನು ಬೆಳೆಸಿರುವ ರೀತಿಯಿಂದಾಗಿಯೇ ಅವರ ಸಂಸದೀಯ ಪಟುತ್ವದ ಎತ್ತರ ಇಂದಿನ ಓದುಗರ ಕಲ್ಪನೆಗೆ ಸುಲಭವಾಗಿ ಬರುತ್ತದೆ.

ಸಂಪುಟ ಕನ್ನಡ ವಿಶ್ವವಿದ್ಯಾಲಯದ ಡಾ.ರಾಮಮನೋಹರ ಲೋಹಿಯಾ ಪೀಠದ ಗ್ರಂಥಮಾಲೆಯ ಮೊದಲನೆಯ ಪ್ರಕಟಣೆಯಾಗಿರುವುದು ಉಚಿತವಾಗಿಯೇ ಇದೆ. ಲೋಹಿಯಾ ವಿಚಾರಕ್ಕೆ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಆಸರೆ ಮತ್ತು ಪ್ರಭಾವವನ್ನು ದೊರಕಿಸಿಕೊಟ್ಟವರಲ್ಲಿ ಗೋಪಾಲಗೌಡರೇ ಅಗ್ರಗಣ್ಯರು. ಸಂಪುಟದಲ್ಲಿರುವ ಅಪೂರ್ವ ಛಾಯಾಚಿತ್ರಗಳು ಗೌಡರ ರಾಜಕೀಯ ಜೀವನದ ಬೇರೆ ಬೇರೆ ಘಟ್ಟಗಳನ್ನು ಸೂಚಿಸುತ್ತವೆ. ಸಂಪುಟದ ಗಾತ್ರಕ್ಕೆ ಹೋಲಿಸಿದರೆ ಬೆಲೆಯೂ ಕಮ್ಮಿ. ವಿಶ್ವವಿದ್ಯಾಲಯ ಸಕಾರಣವಾಗಿಯೆ ಹೆಮ್ಮೆ ಪಡಬಹುದು.

* * *