ಶ್ರೀ ಗೋಪಾಲಗೌಡ

ದಿವಂಗತ ಶಾಂತವೇರಿ ಗೋಪಾಲಗೌಡರು ಸಾಮಾನ್ಯ ಅರ್ಥದಲ್ಲಿ ಒಬ್ಬ ರಾಜಕಾರಣಿ. ಆದರೆ ಅವರ ವ್ಯಕ್ತಿತ್ವವನ್ನು ರಾಜಕಾರಣಕ್ಕಷ್ಟೆ ಸಂಕುಚಿತಗೊಳಿಸುವುದು ಅವರ ನೆನಪಿಗೆ ಆದರೂ, ಜನಮನದಲ್ಲಿ ಅವರು ಎಂದೆಂದಿಗೂ ಉಳಿಯುವುದು ಒಬ್ಬ ಹೋರಾಟಗಾರನಾಗಿ. ಅವರು ಶಾಸಕರಾಗಿ ಮಾಡಿದ್ದೂ ಅದೇ. ಸಂವಿಧಾನವಾಗಲಿ, ಶಾಸನ ಸಭೆಯಾಗಲೀ, ರಾಜಕೀಯ ವೇದಿಕೆಯಾಗಲೀ, ಅವು ದಲಿತ ಕೋಟಿಯ ಕಣ್ಣೀರು ಒರೆಸುವ ಸಾಧನವಾಗದಿದ್ದರೆ ಅವುಗಳಿಂದ ಅವರಿಗೇನೂ ಪ್ರಯೋಜನವಿರಲಿಲ್ಲ. ಆದುದರಿಂದಲೇ ಅನೇಕ ಸಂದರ್ಭಗಳಲ್ಲಿ ಅವರ ನಿಲುವು. ನಡವಳಿಕೆ ಅನೇಕರಿಗೆ ದಿಗ್ಭ್ರಮೆಯನ್ನು ಉಂಟುಮಾಡಿರಬೇಕು. ದೀನರ ಉದ್ಧಾರಕ್ಕೆ ಅಡ್ಡಿಯಾಗುವಂಥ ಕಟ್ಟುಪಾಡುಗಳು ಎಷ್ಟೇ ಶಾಸನಬದ್ಧವಾಗಿದ್ದರೂ ಅವರ ಗೌರವಕ್ಕೆ ಪಾತ್ರವಾಗಲಿಲ್ಲ. ತಮ್ಮ ಗುರು ಡಾ. ರಾಮಮನೋಹರ ಲೋಹಿಯಾರವರಂತೆ ಸಾರ್ವಜನಿಕ ಜೀವನದಲ್ಲಿ ಬೂಟಾಟಿಕೆ, ಸೋಗನ್ನು ಸಹಿಸದ ನಿಷ್ಠುರವಾದಿ. ಶ್ರೀ ಗೋಪಾಲಗೌಡರು ವೈಯಕ್ತಿಕವಾಗಿ ಅಪಾರ ಗೆಳೆಯರನ್ನು ಗಳಿಸಿಕೊಂಡರು, ಉಳಿಸಿಕೊಂಡರು. ಅವರ ಗುರಿ ಸಾಧನೆಯತ್ತ ನಾಡು ಅವರು ನಿರೀಕ್ಷಿಸಿದಷ್ಟು ಶೀಘ್ರಗತಿಯಲ್ಲಿ ಚಲಿಸಲಿಲ್ಲವೆಂದು ಅವರು ತಾಳ್ಮೆಗೆಟ್ಟಿದ್ದರೂ ಹತಾಶರಾಗಲಿಲ್ಲ. ಅದೇ ಅವರ ಬದುಕಿನ ಸತ್ವ. ಸಮಾಜವಾದವಾಗಲೀ, ಹಿಂದುಳಿದವರ ಕಲ್ಯಾಣವಾಗಲೀ, ಭಾಷೆಯ ಪ್ರಶ್ನೆಯಾಗಲೀ ರಾಜಿಯೇ ಇಲ್ಲದ ಹೋರಾಟ ನಡೆಸಿ, ನಾಡಿನ, ರಾಜ್ಯದ ಜನತೆಯ ಅನಂತ ಕೃತಜ್ಞತೆಗೆ ಪಾತ್ರರಾದರು.

(ಪ್ರಜಾವಾಣಿ ಸಂಪಾದಕೀಯ : ೧೦೦೬೧೯೭೨)

* * *