ಕರಪತ್ರಗಳು

ಕಾಗೋಡು ರೈತ ಹೋರಾಟಕ ಒಂದು ಕರಪತ್ರ

ಕಾಗೋಡು                                  ರೈತರ

ರೈತ                                         ಐತಿಹಾಸಿಕ

ದಿನಾಚರಣೆ!                               ಹೋರಾಟ !!

ಸರ್ಕಾರದ ಮೊದಲನೇ ಸೋಲು!

ರೈತರು ಭೂಮಿಯನ್ನು ಉಳುತ್ತಿದ್ದಾರೆ !!

ಜಮೀನ್ದಾರರ ದೌರ್ಜನ್ಯ? ಸರ್ಕಾರದ ದಬ್ಬಾಳಿಕೆ ಮತ್ತು ಹಿತ ಶತ್ರುಗಳ ಪಿತೂರಿಯ ವಿರುದ್ಧ ಕಾಗೋಡಿನಲ್ಲಿ ಸಾಂಸ್ಥಾನ ಸೋಷಿಲಿಯಲಿಸ್ಟ್ ಪಾರ್ಟಿ ಮತ್ತು ರೈತವರ್ಗದ ಏಕೀಕೃತ ಪ್ರಚಂಡ ಹೋರಾಟ!!

ಸಂಸ್ಥಾನ ಸೋಷಿಯಲಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಶ್ರೀಗಳಾದ ಜಿ. ಸದಾಶಿವರಾವ್, ಚಿತ್ರದುರ್ಗದ ಜಿಲ್ಲಾ ಕಾರ್ಯದರ್ಶಿ ಕೆ.ವೀರಭದ್ರಪ್ಪ, ಎಂ.ಎ.ಎಲ್.ಎಲ್.ಬಿ, ಎಲ್.ಜಿ. ಗೊವಿಂದಪ್ಪ ಬಿ.ಎ.,ಎಲ್ ಎಲ್ಬಿ. ಮುನ್ಸಿಪಲ್ ಕೌನ್ಸಿಲರ್, ಶಿವಮೊಗ್ಗಾ ಸಾಗರ ತಾಲ್ಲೂಕು ರೈತ ಕಾರ್ಯದರ್ಶಿ ಹೆಚ್‌. ಗಣಪತಿಯಪ್ಪ, ಎಸ್. ರಾಮಯ್ಯ ಕಾರ್ಯದರ್ಶಿ ತೆರಿಗೆದಾರರ ಸಂಘ, ಪಾಟೀಲ್ ಬಿ.ಎ., ಎಲ್. ಎಲ್. ಬಿ., ಹುಚ್ಚಪ್ಪ ಮತ್ತಿತರ ೮೬ ಜನರ ಬಂಧನ.

ತಾ ೨- ೬ – ೧೯೫೧ ನೇ ಶನಿವಾರ ಮಧ್ಯಾಹ್ನ ೩ ಘಂಟೆಗೆ
ಹೊಸನಗರದ ಗಾಂಧಿ ಮೈದಾನದಲ್ಲಿ
ಸಾಥಿ ಕೌರ್ಗಡಿ ಶೇಷಗಿರಿಯಪ್ಪನವರ
ಅಧ್ಯಕ್ಷತೆಯಲ್ಲಿ
ಸಾಥಿ ಗೋಪಾಲಗೌಡ ಶಾಂತವೇರಿ, ಸ.ಸ. ಕುಮಟ, ವೈ.ಹೆಚ್. ವಾಲದ್
ಮತ್ತಿತರ ಮುಖಂಡರು ಸಭೆಯನ್ನುದ್ದೇಶಿಸಿ ಭಾಷಣ ಮಾಡುವರು.

ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ

ರೈತನ ಉಳುಮೆಯ ಹಕ್ಕಿನ ಜಯವಾಗಲಿ

ಕ್ರಾಂತಿ ಜಯವಾಗಲಿ                  ಕಾಗೋಡು ರೈತರಿಗೆ ಜಯವಾಗಲಿ
ಸಾಗರ                               ಜಿ.ಆರ್.ಜಿ.ನಗರ್, ಕಾರ್ಯದರ್ಶಿ
೧–೬–೧೯೫೧                      ಸೋಷಿಯಲಿಸ್ಟ್ ಪಾರ್ಟಿ, ಸಾಗರ ಶಾಖೆ

ಗಜಾನನ ಪ್ರಿಂಟಿಂಗ್ ಪ್ರೆಸ್

ತಾರೀಖು ೮ – ೧೦ ೧೯೫೮ ರಲ್ಲಿ ಹೊನ್ನೆಮರಡು ಮುಳುಗಡೆ ಪ್ರದೇಶದ

ರೈತರು ಮತ್ತು ಕೂಲಿಕಾರರು
ಶ್ರೀ ಎಸ್. ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ಬಹಿರಂಗಸಭೆ ಸೇರಿ ಅಂಗೀಕರಿಸಿದ
ನಿರ್ಣಯಗಳು

೧. ಲಿಂಗನಮಕ್ಕಿ (ಹೊನ್ನೆಮರಡು) ಆಣೆಕಟ್ಟಿನಿಂದ ಮುಳುಗಡೆಗೆ ಬರುವ ಪ್ರದೇಶದಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಗಳೂ ತಮ್ಮ ಆಸ್ತಿ ಮತ್ತು ಉದ್ಯೋಗ ಕಳೆದುಕೊಳ್ಳುವುದರಿಂದ ಅವರಿಗೆ ಸರ್ಕಾರ ಪರಿಹಾರ ಕೊಟ್ಟು ಪುನರ್ ವ್ಯವಸ್ಥೆ ಕಲ್ಪಿಸುವುದಾಗಿ ಸ್ಥಿರ ಆಸ್ತಿಗಳಿಗೆ ಮಾತ್ರ ಪರಿಹಾರಕೊಟ್ಟು ಜೀವನಾಧಾರ ಉದ್ಯೋಗವನ್ನು ಕಳೆದುಕೊಳ್ಳುವ ಗೇಣೀದಾರರು ಕೂಲಿಕಾರರು, ಮತ್ತಿತರ ಸಣ್ಣಪುಟ್ಟ, ಕಸುಬಿನವರಿಗೆ ಪರಿಹಾರ ಕೊಡದಿರುವುದು ಅನ್ಯಾಯವೆಂದು ಈ ಸಭೆಯು ಅಭಿಪ್ರಾಯಪಡುತ್ತದೆ. ಆದುದರಿಂದ ಸ್ಥಳಾಂತರ ಹೊಂದಲಿರುವ ೫ ಜನರ ಕುಟುಂಬವೊಂದಕ್ಕೆ ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಪರಿಹಾರವನ್ನು ಪ್ರತಿಯೊಂದು ಕುಟುಂಬಕ್ಕೂ ಕೊಡಬೇಕೆಂದು, ಹಾಗೆ ಮಾಡಲು ಸರ್ಕಾರ ಈಗಿರುವ ಕಾನೂನನ್ನು ಮುಂಬರುವ ಶಾಸನ ಸಭೆಯಲ್ಲೇ ಸೂಕ್ತವಾಗಿ ತಿದ್ದುಪಡಿ ಮಾಡಿಸಬೇಕೆಂದೂ ಈ ಸಭೆಯು ಸರ್ಕಾರವನ್ನು ಒತ್ತಾಯ ಪಡಿಸುತ್ತದೆ.

೨. “ಉಳುವವನೇ ಹೊಲದೊಡೆಯ” ನೆಂಬ ಆಧಾರದ ಮೇಲೆ ಭೂ ಸುಧಾರಣಾ ಕಾನೂನು, ಆಗಲಿರುವ ಈ ಸಂದರ್ಭದಲ್ಲಿ ಮುಳುಗಡೆ ಪ್ರದೇಶದ ಗೇಣಿದಾರರಿಗೆ ಅವರ ಉಳುಮೆಯಲ್ಲಿರುವ  ಜಮೀನಿಗೆ  ಸಲ್ಲುವ ಪರಿಹಾರ ದ್ರವ್ಯದ ಅರ್ಧದಷ್ಟಾದರೂ ಪರಿಹಾರ ದೊರೆಯಬೇಕು. ಮತ್ತು ಮೊಬಲಗು ಕಾನೂನು ರೀತ್ಯ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು.

೩. ಹಿರೇಭಾಸ್ಕರ ಅಣೆಕಟ್ಟಿನಿಂದ ಹಿಂದೆ ಮುಳುಗಡೆಯಾದ ಪ್ರದೇಶದಲ್ಲಿ ಎರಡು ಪಟ್ಟು ಆದಾಯಕ್ಕೆ ಸರ್ಕಾರ ಸಾಗುವಳಿಗೆ ಕೊಟ್ಟಿರುವ ಜಮೀನಿಗೂ ಈ ಮುಳುಗಡೆಯಲ್ಲಿ ಮುಳುಗಡೆ ಯಾಗುವ ಇತರ ಜಮೀನುಗಳಿಗೆ ಕೊಡುವಷ್ಟೇ ಪರಿಹಾರವನ್ನು ಕೊಡಬೇಕು.

೪. ಮುಳುಗಡೆ ಪ್ರದೇಶದಲ್ಲಿ ಸರ್ಕಾರವು ವಶಪಡಿಸಿಕೊಂಡ ಗೇಣಿದಾರರ ಸಾಗುವಳಿಯಲ್ಲಿರುವ ಜಮೀನಿನ ಫಸಲು, ಆಯಾ ಗೇಣಿದಾರರಿಗೆ ಸಲ್ಲತಕ್ಕದೆಂದೂ, ಅದರಲ್ಲಿ ಖಾತೆದಾರರಿಗೆ ಯಾವ ಪಾಲೂ ಸಿಗತಕ್ಕದಲ್ಲವೆಂದೂ ಸರ್ಕಾರ ಆಜ್ಞೆ ಹೊರಡಿಸಬೇಕೆಂದು  ಈ ಸಭೆಯು ಕೇಳಿಕೊಳ್ಳುತ್ತದೆ.

೫. ಈ ಯೋಜನೆಯ ಮೊದಲನೇ ಹಂತವೂ ೧೯೬೧ನೇ ಯಿಸ್ವಿಯಲ್ಲೇ ಮುಗಿಯಲಿರುವುದರಿಂದ ಸ್ಥಳಾಂತರ ಹೊಂದಲಿರುವ ಜನರಿಗೆ ಉಚಿತ ಪುನರ್ ವ್ಯವಸ್ಥೆ ಕಲ್ಪಿಸುವ ಕಾರ್ಯವು ತ್ವರಿತವಾಗಿ ಒಮ್ಮೆಗೇ ನಡೆಯುವಂತೆ ಕೂಡಲೇ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಸಭೆಯು ಸರ್ಕಾರವನ್ನು ಆಗ್ರಹ ಪೂರ್ವಕವಾಗಿ ಒತ್ತಾಯಪಡಿಸುತ್ತದೆ.

೬. ಈಗಾಗಲೇ ಈ ಮುಳುಗಡೆ ಪ್ರದೇಶದಲ್ಲಿ ಆಸ್ತಿಗಳಿಗೆ ಕೊಟ್ಟಿರುವ ಪರಿಹಾರವು ಇಂದಿನ ಮಾರ್ಕೆಟ್ ಬೆಲೆಯ ಅರ್ಧಕ್ಕೂ ಕಡಿಮೆಯಾಗಿರುವುದನ್ನು ವಿಷಾದದಿಂದ ಗಮನಿಸಿ ನ್ಯಾಯವಾದ ಪರಿಹಾರವನ್ನು ಎಲ್ಲಾ ಆಸ್ತಿಗಳಿಗೂ ಸಲ್ಲಿಸಬೇಕೆಂದು ಸರ್ಕಾರಕ್ಕೆ ಈ ಸಭೆಯು ಸಲಹೆ ಮಾಡುತ್ತದೆ.

೭. ಈ ಮುಳುಗಡೆ ಪ್ರದೇಶದ ಜನರ ಪರಿಹಾರ ಮತ್ತು ಪುನರ್ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು, ಈ ಸಭೆಯಲ್ಲೇ ೩೧ ಜನರುಳ್ಳ ಒಂದು ಸಮಿತಿಯನ್ನು ಸರ್ವಾನುಮತದಿಂದ ಚುನಾಯಿಸಲಾಯಿತಲ್ಲದೆ ಈ ಸಮಿತಿಗೆ ಶ್ರೀ ಎಸ್. ಗೋಪಾಲಗೌಡರನ್ನು ಅಧ್ಯಕ್ಷರನ್ನಾಗಿಯೂ, ಶ್ರೀ ಹೆಚ್. ಗಣಪತಿಯಪ್ಪನವರನ್ನು ಕಾರ್ಯದರ್ಶಿಯಾಗಿಯೂ ಮತ್ತು ಶ್ರೀ ಕಿಡದುಂಬೆ ಕರಿಯಪ್ಪನವರನ್ನು ಉಪಾಧ್ಯಕ್ಷರು ಮತ್ತು ಖಜಾಂಚಿಯಾಗಿಯೂ, ಆಯ್ಕೆ ಮಾಡಲಾಯಿತು.

ಮಾನ್ಯರಾದ ಶ್ರೀ…….

ನಿರ್ಣಯಗಳ ಯಥಾನಕಲನ್ನು ತಮ್ಮ ಅವಗಾಹನೆ ಬಗ್ಗೆ ಕಳಿಸಿರುತ್ತೇವೆ. ಈ ಬಗ್ಗೆ ತಮ್ಮಿಂದ ಸಾಧ್ಯವಾಗುವ ಎಲ್ಲಾ ಸಹಾಯ – ಸಹಕಾರಗಳನ್ನು ನೀಡಬೇಕಾಗಿ ಮುಳುಗಡೆ ಪ್ರದೇಶದ ಜನರ ಪರವಾಗಿ ಕೇಳಿಕೊಳ್ಳುತ್ತೇವೆ. ನಮ್ಮ ಕೋರಿಕೆಯ ಈ ಪತ್ರ ತಲ್ಪದ ಬಗ್ಗೆ ತಮ್ಮ ಉದಾರ ಸಹಾನು ಭೂತಿಯೊಂದಿಗೆ ಉತ್ತರ ಬರೆಯಬೇಕಾಗಿ ಅಪೇಕ್ಷಿಸುತ್ತೇವೆ.

ಎಸ್. ಗೋಪಾಲಗೌಡ
ಅಧ್ಯಕ್ಷ

ಹೆಚ್. ಗಣಪತಿಯಪ್ಪ
ಕಾರ್ಯದರ್ಶಿ

* * *

ಉರಗಳ್ಳಿ ಇನಾಂ ರೈತರ ಬಹಿರಂಗ ಸಭೆ

ರೈತ ಬಾಂಧವರೇ,

ಇನಾಂ ರದ್ದಿಯಾತ ಕಾನೂನಿನ ಅನ್ವಯದಲ್ಲಿ ನಮ್ಮ ಗ್ರಾಮದ ರೈತರಿಗೆ ಇನಾಂದಾರರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಆಗಿರುವ ಅನ್ಯಾಯವನ್ನು ಖಂಡಿಸುವ ಸಲುವಾಗಿ

ಇದೇ ದಿನಾಂಕ ೧೬ – ೬ – ೧೯೬೦ನೇ ಶನಿವಾರ ಮಧ್ಯಾಹ್ನ ೧ ಗಂಟೆಗೆ

ಮಾರಮ್ಮನ ದೇವಸ್ಥಾನದ ಮುಂಭಾಗದಲ್ಲಿ

ಬಹಿರಂಗ ಸಭೆ
ಏರ್ಪಡಿಸಲಾಗಿದೆ

ಶ್ರೀ ಮೇಗಳದೊಡ್ಡಿ ಲಿಂಗೇಗೌಡರು
ಅಧ್ಯಕ್ಷತೆ ವಹಿಸುವರು

ಕರ್ನಾಟಕ ರಾಜ್ಯ ಸೋಷಲಿಸ್ಟ್ ಪಾರ್ಟಿಯ ಅಧ್ಯಕ್ಷ
ಶ್ರೀ ಗೋಪಾಲಗೌಡ ಶಾಂತವೇರಿಯವರು
ಪ್ರಸಿದ್ಧ ವಕೀಲರಾದ ಶ್ರೀ. ಬಿ.ಕೆ. ಶ್ರೀರಾಮಯ್ಯ
ಶ್ರೀ ಹೆಚ್. ಎಂ. ಮುನಿವೆಂಕಟರಮಣ ಇವರುಗಳು
ಭಾಷಣ ಮಾಡುವವರು

ರೈತ ಬಾಂಧವರೆಲ್ಲರೂ ಸಭೆಗೆ ಬರಬೇಕಾಗಿ ಕೋರಿದೆ.

ಉರಗಳ್ಳಿ, ರಾಮನಗರ ತಾಲೂಕು, ಬೆಂಗಳೂರು ಜಿಲ್ಲೆ

೧೫ – ೬ – ೬೦

ನಿಮ್ಮ
ಗೌಡಯ್ಯ ಮತ್ತು ಗ್ರಾಮದ ಮುಖ್ಯಸ್ಥರು

ಮಾರ್ಗದರ್ಶಿ ಮುದ್ರಣಾಲಯ ಬೆಂಗಳೂರು

* * *