ಶಾಂತವೇರಿ ಗೋಪಾಲಗೌಡ: ಬದುಕಿನ ಹೆಜ್ಜೆಗಳು

 

೧೯೨೩

ಮಾರ್ಚ್ ೧೪ ಜನನ
ಶಿವಮೊಗ್ಗ ಜಿಲ್ಲೆ ತೀಥಹಳ್ಳಿ ತಾಲ್ಲೂಕು ಆರಗ ಗ್ರಾಮಕ್ಕೆ ಹೊಂದಿ ಕೊಂಡಿರುವ ಶಾಂತವೇರಿಯಲ್ಲಿ.

ತಂದೆ : ಕೊಲ್ಲೂರಯ್ಯ ಗೌಡ. ಗೇಣಿದಾರ ರೈತ ಕುಟುಂಬ

ತಾಯಿ : ಶೇಷಮ್ಮ

ಅಣ್ಣ : ಎಸ್. ಧರ್ಮಯ್ಯ ಗೌಡ

ಅಕ್ಕ : ಸಿದ್ಧಮ್ಮ

ಆರಗದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ.

ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಟೆಕ್ಟರಾಗಿದ್ದ ಅಣ್ಣ ಎಸ್. ಧರ್ಮಯ್ಯಗೌಡರ ಜೊತೆಯಿದ್ದು ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ.

 

೧೯೪೧

ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ;

ಸ್ವಾತಂತ್ರ್ಯ ಚಳವಳಿಗೆ ಪ್ರವೇಶ, ಕೆಲವು ಒಡನಾಡಿಗಳ ಜೊತೆಗೆ ಪೋಸ್ಟ್‌ಡಬ್ಬ ಕೀಳುವುದು, ತೀರ್ಥಹಳ್ಳಿ – ಕೊಪ್ಪರಸ್ತೆಯ ಟೆಲಿಗ್ರಾಫ್ ವೈರ್‌ಗಳನ್ನು ಕತ್ತರಿಸುವುದರ ಮೂಲಕ ಸ್ವಾತಂತ್ರ್ಯ ಚಳವಳಿಯಲ್ಲಿ ನೇರವಾಗಿ ಭಾಗವಹಿಸಿದ್ದು.

 

೧೯೪೨

ಎಸ್. ಎಸ್. ಎಲ್. ಸಿ. ವಿದ್ಯಾರ್ಥಿ.

ಕ್ವಿಟ್‌ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದು. ಸ್ವಾತಂತ್ರ್ಯ ಹೋರಾಟಗಾರರ ಬಂಧನವನ್ನು ವಿರೋಧಿಸಿ, ತೀರ್ಥಹಳ್ಳಿಯ ಶ್ರೀರಾಮ ಮಂದಿರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮೊದಲ ರಾಜಕೀಯ ಭಾಷಣ.

ನವೆಂಬರ್ ತಿಂಗಳ ಎರಡನೆಯ ವಾರದಲ್ಲಿ, ಟೆಲೆಗ್ರಾಫ್ ವೈರ್ ಕತ್ತರಿಸಿದ ಸೆರೆವಾಸ. ಜೈಲಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಭಾಷ್ಯಂ, ಮರಿಯಪ್ಪ, ಎಚ್, ಸಿದ್ಧಯ್ಯ ಮುಂತಾದವರ ಸಂಪರ್ಕ.

ಶಿವಮೊಗ್ಗದಲ್ಲಿ ಹರಿಜನರೊಡನೆ ದೇವಾಲಯ ಪ್ರವೇಶಕ್ಕೆ ಪ್ರಯತ್ನ;

ಆರಗದಲ್ಲಿ ವಿರಕ್ತಮಠದ ಆವರಣದಲ್ಲಿ ಹರಿಜನರಿಗಾಗಿ ರಾತ್ರಿ ಶಾಲೆಗಳನ್ನು ನಡೆಸಿದ್ದು.

 

೧೯೪೪

ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ್ದು;

ಶಿವಮೊಗ್ಗದಲ್ಲಿ ಜ್ಯೂನಿಯರ್ ಇಂಟರ್ ಮೀಡಿಯಟ್‌ಗೆ ಸೇರಿದ್ದು.

 

೧೯೪೬

ನಂಜನಗೂಡಿನಲ್ಲಿ ನಡೆದ ವಿದ್ಯಾರ್ಥಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದು.

 

೧೯೪೭

ಶಿವಮೊಗ್ಗದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಸಮಾವೇಶದ ಸಂಘಟನೆ; ಜಯಪ್ರಕಾಶ್ ನಾರಾಯಣ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಸಮಾವೇಶದಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ವ್ಯವಸ್ಥಾಪಕನಾಗಿ ಸೇರಿದ್ದು; ಸಾರ್ವಜನಿಕ ವಿದ್ಯಾರ್ಥಿನಿಲಯದ ರೀತಿಯಲ್ಲಿ ಅದನ್ನು ಪರಿವರ್ತಿಸಲು ಪ್ರಯತ್ನಗಳನ್ನು ನಡೆಸಿದ್ದು.

ಸ್ವಾತಂತ್ರ್ಯ ಚಳವಳಿಯಲ್ಲಿ ತೀವ್ರವಾಗಿ ಪಾಲ್ಗೊಂಡಿದ್ದು, ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕಿನಲ್ಲಿ ಹಲವಾರು ವೇಷಗಳಲ್ಲಿ ಬಂದು ಸಾರ್ವಜನಿಕ ಭಾಷಣ; ಅನೇಕ ಸಂದರ್ಭಗಳಲ್ಲಿ ಭೂಗತರಾಗಿ ಹೋರಾಟ ಮುಂದುವರಿಕೆ.

 

೧೯೪೮

ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಮಾಜವಾದಿಗಳ ಗುಂಪು ಹೊರಬಂದು ಸಮಾಜವಾದಿ ಪಕ್ಷದ ರಚನೆ.

ಕಾಂಗ್ರೆಸ್ ಸದಸ್ಯತ್ವವನ್ನು ತೊರೆದು ಸಮಾಜವಾದಿ ಪಕ್ಷದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು.

ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸಮಾಜವಾದಿ ಪಕ್ಷದ ಪ್ರಥಮ ಸಮಾವೇಶದ ಸಂಘಟನೆ; ಅಶೋಕ ಮೆಹತಾ ಅವರಿಂದ ಸಮಾವೇಶ ಉದ್ಘಾಟನೆ.

ಹಿಂದ್‌ಕಿಸಾನ್ ಪಂಚಾಯತ್ ವತಿಯಿಂದ ತೀರ್ಥಹಳ್ಳಿಯಲ್ಲಿ ರೈತ ಸಮಾವೇಶದ ಸಂಘಟನೆ. ರಾಮನಂದನ್ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ರೈತ ಸಮಾವೇಶದಲ್ಲಿ ಭಾಗವಹಿಸಿದ್ದರು.

 

೧೯೪೯

ಜುಲೈ ೭ ಮತ್ತು ೮ ರಂದು ದಾವಣಗೆರೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೆಳನದಲ್ಲಿ ಭಾಗವಹಿಸಿದ್ದು; ನೇತಾಜಿ ಸುಭಾಸ್ ಚಂದ್ರಬೋಸರ ಅಣ್ಣ ಶರತ್‌ಚಂದ್ರ ಬೋಸರಿಂದ ಸಮ್ಮೇಳನ ಉದ್ಘಾಟನೆ. ಕರ್ನಾಟಕ ರಾಜ್ಯ ಏಕೀಕರಣ ಸಂಘಟನೆಯ ಪ್ರಚಾರ ಸಮಿತಿಗೆ ಅಧ್ಯಕ್ಷ.

 

೧೯೫೧

ಏಪ್ರಿಲ್ ೧೮ರಂದು ಸಾಗರ ತಾಲೂಕು ರೈತಸಂಘದಿಂದ ಕಾಗೋಡು ರೈತ ಸತ್ಯಾಗ್ರಹ ಆರಂಭ. ನೂರಾರು ರೈತರ ಬಂಧನ. ಅಸಹಾಯಕ ಸ್ಥಿತಿಯಲ್ಲಿದ್ದ ರೈತಸಂಘಕ್ಕೆ ಸಮಾಜವಾದಿ ಪಕ್ಷದ ಬೆಂಬಲ. ಇದರಿಂದಾಗಿ ಚಳವಳಿ ತೀವ್ರಗೊಂಡಿತು.

ಮೇ ೧೯ ರಂದು ಸಮಾಜವಾದಿ ಪಕ್ಷದ ಜಿ. ಸದಾಶಿವರಾಯರಿಂದ ಕಾಗೋಡು ಗ್ರಾಮದಲ್ಲಿ ಸತ್ಯಾಗ್ರಹ, ಪೋಲಿಸರಿಂದ ಬಂಧನ. ಗೋಪಾಲಗೌಡರು ಪೋಲಿಸ್ ವಾರೆಂಟ್‌ನಿಂದ ತಪ್ಪಿಸಿಕೊಂಡು ಸತ್ಯಾಗ್ರಹಕ್ಕಾಗಿ – ಭೂಗತರಾಗಿದ್ದುಕೊಂಡು ರೈತರ ಸಂಘಟನೆ ಮಾಡಿದ್ದು

ಜೂನ್ ೧೩ರಂದು ಕಾಗೋಡು ಗ್ರಾಮಕ್ಕೆ ಡಾ. ರಾಮಮನೋಹರ ಲೋಹಿಯಾ ಅವರ ಭೇಟಿ; ಸತ್ಯಾಗ್ರಹದಲ್ಲಿ ಪಾಲ್ಗೊಂಡು ಪೋಲೀಸರಿಂದ ಬಂಧನ.

ಜುಲೈ ೩ ರಂದು ಕಾಗೋಡು ಪಕ್ಕದ ಗ್ರಾಮವೊಂದರಲ್ಲಿ ಮಂಡಗಳಲೆಯ ಹೊಸೂರು ರಾಮನಾಯ್ಯರ ಜೊತೆಯಲ್ಲಿ ಬಂಧನ. ಸಾಗರ ಜೈಲಿಗೆ ರವಾನೆ.

ಸೆಪ್ಟಂಬರ್ ೨೧ ರಂದು ಜಯಪ್ರಕಾಶ್ ನಾರಾಯಣ್ ರವರು ಸಾಗರಕ್ಕೆ ಬಂದು ಕಾಗೋಡು ಸತ್ಯಾಗ್ರಹವನ್ನು ಬೆಂಬಲಿಸಿ ಸಾರ್ವಜನಿಕ ಭಾಷಣ ಮಾಡಿದರು.

 

೧೯೫೨

ಮೈಸೂರು ವಿಧಾನಸಭೆಗೆ ಮೊದಲ ಸಾರ್ವತ್ರಿಕ ಚುನಾವಣೆ. ವಿಧಾನಸಭೆಯ ೯೯ ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ ೫೦ ಸ್ಥಾನಗಳಿಗೆ ಸ್ಪರ್ಧಿಸಿತು. ಗೋಪಾಲಗೌಡರಿಂದ ಸಾಗರ – ಹೊಸನಗರ ಚುನಾವಣೆಗೆ ಸ್ಪರ್ಧೆ. ಕಾಂಗ್ರೆಸ್‌ನ ಎ. ಆರ್. ಬದರಿನಾರಾಯಣ ಅಯ್ಯಂಗಾರರ ವಿರುದ್ಧ ಜಯಗಳಿಸಿ ವಿಧಾನಸಭೆಯ ಪ್ರವೇಶ.

ಜೂನ್ ೧೮: ಶಾಸನ ಸಭಾಧ್ಯಕ್ಷತೆಗೆ ಸಾಮಕೇತಿಕ ಸ್ಪರ್ಧೆ.

 

೧೯೫೪

ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ; ಏಕೀಕರಣವನ್ನು ಪ್ರತಿಪಾದಿಸಿ ಶಾಸನ ಸಭೆಯಲ್ಲಿ ಅನೇಕ ಸಾರಿ ಭಾಷಣ.

 

೧೯೫೫

ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ಸಮಾಜವಾದಿ ಪಕ್ಷದ ಸಂಸ್ಥಾಪನಾ ಸಭೆಯಲ್ಲಿ ಭಾಗವಹಿಸಿದ್ದು; ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆ

 

೧೯೫೬

ನವೆಂಬರ್ ೧ ರಂದು ಕರ್ನಾಟಕ ಏಕೀಕರಣ.

ಶಾಸನ ಸಭೆಯಲ್ಲಿ ರಾಜ್ಯಪಾಲರ ಇಂಗ್ಲಿಷ್ ಭಾಷಣದ ಪ್ರತಿಯನ್ನು ಹರಿದು ತುಳಿದಿದ್ದು.

 

೧೯೫೭

ರಾಜ್ಯ ವಿಧಾನಸಭೆಗೆ ಎರಡನೆಯ ಮಹಾಚುನಾವಣೆ. ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧೆ. ಕಾಂಗ್ರೆಸ್ ಅಭ್ಯರ್ಥಿ ಎ. ಆರ್. ಬದರಿನಾರಾಯಣ ಅಯ್ಯಂಗಾರರ ವಿರುದ್ಧ ಸೋಲು.

ರಾಜ್ಯದಲ್ಲಿ ಸಮಾಜವಾದಿ ಪಕ್ಷ ಕಟ್ಟಲು ಅವಿರತ ಶ್ರಮ. ರಾಜ್ಯಾದ್ಯಂತ ಪ್ರವಾಸ ಸಮಾಜವಾದಿ ಪಕ್ಷದಿಂದ ಅಖಿಲ ಭಾರತ ಮಟ್ಟದಲ್ಲಿ ಹದಿನೆಂಟು ಅಂಶಗಳ ಚಳುವಳಿ ಆರಂಭ.

ಕರ್ನಾಟಕದಲ್ಲಿ ಸಮಾಜವಾದಿ ಯುವಜನ ಸಭಾ ಸ್ಥಾಪನೆ.

 

೧೯೫೮

ರಾಜ್ಯಾದ್ಯಂತ ಕಾನೂನುಭಂಗ ಚಳವಳಿಯ ಸಂಘಟನೆ ನೂರಾರು ಸತ್ಯಾಗ್ರಹಿಗಳ ಬಂಧನ.

 

೧೯೬೦

ಗೋವಾ ವಿಮೋಚನಾ ಚಳವಳಿಗಾಗಿ ಸಂಘಟನೆ; ಸರ್ವಪಕ್ಷೀಯ ಚಳವಳಿಗೆ ಚಾಲನೆ ನೀಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು.

ಸಮಾಜವಾದಿ ಪಕ್ಷದ ‘ಮಾರ್ಗದರ್ಶಿ’ ಪತ್ರಿಕೆ ಪ್ರಕಟಣೆ.

ಜೂನ್ ೧: ಸಮಾಜವಾದಿ ಪಕ್ಷದಿಂದ ಕಾನೂನುಭಂಗ ಚಳವಳಿಗೆ ಚಾಲನೆ ನೀಡಿದ್ದು: ಸಾವಿರಾರು ಕಾರ್ಯಕರ್ತರ ಬಂಧನ.

ಜೂನ್ ೧೯: ರಾಮನಗರ ತಾಲ್ಲೂಕು ಉರಗಹಳ್ಳಿ ಇನಾಂ ರೈತರ ಭೂ ಹಕ್ಕಿನ ಹೋರಾಟದ ಸಭೆ.

 

೧೯೬೨

ರಾಜ್ಯ ವಿಧಾನಸಭೆಗೆ ಮೂರನೆಯ ಮಹಾಚುನಾವಣೆ: ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ; ಚುನವಣೆಯಲ್ಲಿ ಜಯ. ಎರಡನೇ ಭಾರಿಗೆ ವಿಧಾನಸಭೆಯ ಪ್ರವೇಶ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಜ್ಯ ಸಮಾಜವಾದಿ ಪಕ್ಷದ ಸಮಾವೇಶದ ಸಂಘಟನೆ.

 

೧೯೬೪

ಮಾರ್ಚ್ ೨ ರಂದು ಧಾರವಾಡದ ಟ್ಯಾಗೋರ್ ಹಾಲ್‌ನಲ್ಲಿ ಹುಬ್ಬಳ್ಳಿಯ ವಕೀಲರಾದ ಡಿ.ಎಲ್. ಪಾಟೀಲ ಮಗಳು ಸೋನಕ್ಕ ಅವರೊಡನೆ ಮದುವೆ.

 

೧೯೬೭

ಮಗಳು ಇಳಾಗೀತ ಹುಟ್ಟಿದ್ದು.

ರಾಜ್ಯ ವಿಧಾನಸಭೆಗೆ ನಾಲ್ಕನೇ ಮಹಾಚುನಾವಣೆ. ತೀರ್ಥಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ; ಚುನಾವಣೆಯಲ್ಲಿ ಜಯ. ಮೂರನೇ ಭಾರಿಗೆ ವಿಧಾನಸಭೆಯ ಪ್ರವೇಶ.

ಆಕ್ಟೋಬರ್ ೧೨: ಡಾ. ರಾಮಮನೋಹರ ಲೋಹಿಯ ಅವರ ನಿಧನ;

ಕೇಂದ್ರ ಪಾರ್ಲಿಮೆಂಟರಿ ಬೋರ್ಡ್‌ನ ಅಧ್ಯಕ್ಷರಾಗಿ ಆಯ್ಕೆ.

ರಾಜ್ಯದಲ್ಲಿ ಭೂ ಆಕ್ರಮಣ ಚಳವಳಿಗೆ ಚಾಲನೆ.

 

೧೯೬೮

ಮಗ ರಾಮಮನೋಹರ ಹುಟ್ಟಿದ್ದು.

ಚಿಕ್ಕಮಗಳೂರಿನಲ್ಲಿ ಕೋಮುಘರ್ಷಣೆಯಿಂದಾಗಿ ಸಾವು – ನೋವು;

ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಸಮಾಜವಾದಿ ಪಕ್ಷಕ್ಕೆ ವರದಿ ಸಲ್ಲಿಸಿ, ಕೋಮುವಾದಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡದ್ದು; ಇದರಿಂದಾಗಿ ಇವರಿಗೆ ಕೋಮುವಾದಿಗಳಿಂದ ಬೆದರಿಕೆಗಳೂ ಬಂದವು.

 

೧೯೭೧

ಕಾಂಗ್ರೆಸ್‌ಪಕ್ಷ ಅಂತರಿಕ ತಿಕ್ಕಾಟಗಳಿಂದ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ರಾಜೀನಾಮೆ. ವಿರೋಧ ಪಕ್ಷಗಳಿಂದ ಸಮ್ಮಿಶ್ರ ಸರ್ಕಾರದ ರಚನೆಗೆ ತೀವ್ರ ಪ್ರಯತ್ನ. ಸಮ್ಮಿಶ್ರ ಸರ್ಕಾರದ ನಾಯಕತ್ವಕ್ಕೆ ಗೋಪಾಲಗೌಡರೇ ಅರ್ಹವ್ಯಕ್ತಿ ಎನ್ನುವ ಒಟ್ಟಾಭಿಪ್ರಾಯ. ಆದರೆ, ಅನೇಕ ಕಾರಣಗಳಿಂದ ಈ ಪ್ರಯತ್ನ ವಿಫಲ.

ನವಂಬರ್ ೧: ಶಿವಮೊಗ್ಗ ನಗರಸಭೆಯ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು. ಜಾರ್ಜ್ ಫರ್ನಾಂಡಿಸ್, ಜೆ.ಎಚ್. ಪಟೇಲ್ ಮತ್ತು ಕೆ.ಜಿ. ಮಹೇಶ್ವರಪ್ಪ ಇದೇ ಸಭೆಯಲ್ಲಿ ಭಾಗವಹಿಸಿದ್ದರು; ಗೋಪಾಲಗೌಡರ ಕೊನೆಯ ಸಾರ್ವಜನಿಕ ಸಭೆ.

ನವೆಂಬರ್ ೨೪: ಅನಾರೋಗ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು.

 

೧೯೭೨

ಜೂನ್ ೯ ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನ.