….ಅದೇ ಸಮಯದಲ್ಲಿ ಯಾರೋ ನನಗೆ ಬೆಂಗಳೂರಲ್ಲೇ ಇದ್ದ ಗೋಪಾಲಗೌಡರನ್ನು ಪರಿಚಯಿಸಿದರು. ಅದು ನನ್ನ ಮೊದಲ ಸಮಾಜವಾದಿ ಸಂಪರ್ಕ ಎಂದು ಕಾಣುತ್ತದೆ. ನಾನು ಅಷ್ಟು ವರ್ಷ ಶಿವಮೊಗ್ಗೆಯಲ್ಲಿದ್ದರೂ ನನಗೆ ಅಲ್ಲಿಯ ಭರ್ಮಪ್ಪ, ಅಣ್ಣಯ್ಯ, ಮಹೇಶ್ವರಪ್ಪ, ಪಟೇಲ್ ಮುಂತಾದವರ ಪರಿಚಯ ಆಗಿರಲಿಲ್ಲ. ಬೆಂಗಳೂರಲ್ಲಿ ಆನರ್ಸ್ ಓದುತ್ತಿದ್ದಾಗ ಲೋಹಿಯಾ ಬಗ್ಗೆ ಕೇಳಿದ್ದೆ ಮತ್ತು ಪ್ರಜಾವಾಣಿಯ ಗೆಳೆಯರಿಂದಾಗಿ ಲೋಹಿಯಾ ಅವರನ್ನು ಗೇಲಿ ಮಾಡುವುದನ್ನು ಕಲಿತಿದ್ದೆ. ಸಮತಾವಾದ ಎಂದರೆ ಬಸವರಾಜ ಕಟ್ಟೀಮನಿ, ನಿರಂಜನ ಆಗಾಗ ಸಿಟ್ಟಿನಿಂದ ಮಾತಾಡುತ್ತಿದ್ದುದು ಎಂದು ತಿಳಿದಿದ್ದೆ ಆದರೆ, ಅದೂ ಅಷ್ಟು ನಿಜವಿರಲಾರದು. ಯಾಕೆಂದರೆ ನನಗೆ ಮುಂಚಿನಿಂದಲೂ ಸರ್ಕಾರ ವ್ಯಕ್ತಿಯ ಜೀವನದಲ್ಲಿ ತಲೆಹಾಕುವುದು ಇಷ್ಟವಾಗುತ್ತಿರಲಿಲ್ಲ; ರಷ್ಯಾ ಬಗ್ಗೆ ಯಾರು ಎಷ್ಟೇ ಹೇಳಿದರೂ ಅಲ್ಲಿಯ ವ್ಯವಸ್ಥೆಯೇ ಅಸಹ್ಯ ಅನ್ನಿಸುತ್ತಿತ್ತು. ಅಲ್ಲಿ ಚಿಕ್ಕ ಮಕ್ಕಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಪೋಷಿಸುತ್ತದೆ ಎಂಬುದನ್ನು ಪ್ರಶಂಸಿಸಿ ಬರೆದ ಒಂದು ಪುಸ್ತಕ ನನಗೆ ಹಿಡಿಸಲಿಲ್ಲ. ಸ್ಟಾಲಿನ್ ಸತ್ತಾಗ ನಮ್ಮ ಶಾಲೆಯಲ್ಲಿ ಸಭೆ ಸೇರಿಸಿ ಶ್ರದ್ಧಾಂಜಲಿ ಅರ್ಪಿಸಿದ್ದರೂ ನನಗೆ ಆತನ ಬಗ್ಗೆ ಅನುಮಾನ ಇದ್ದೇ ಇತ್ತು. ಆದರೆ, ಲೋಹಿಯಾ ಅವರಲ್ಲಿ ಕಮ್ಯುನಿಸಂ ಮತ್ತು ಬಂಡವಾಳಶಾಹಿಯಿಂದ ಸಮಾನ ದೂರದ ನಿಲುವನ್ನು ಕಂಡಾಗ ಕುತೂಹಲಗೊಂಡಿದ್ದೆ, ಸಮಾನತೆಯ ಜೊತೆಗೆ ವ್ಯಕ್ತಿಸ್ವಾತಂತ್ರ್ಯ ಇರುವಂಥ ಏಪಾನು ಸಮಾಜವಾದಿಗಳು ಇಷ್ಟಪಡುತ್ತಾರೆ. ಇಂಗ್ಲಿಷ್ ಬಲ್ಲವರಾದರೂ ಸ್ಥಳೀಯ ಭಾಷೆಯನ್ನು ಬೆಂಬಲಿಸುತ್ತಾರೆ, ಅಸಹಾಯಕರ ನೆರವಿಗೆ ನಿಲ್ಲುತ್ತಾರೆ… ಇಷ್ಟು ಮಾತ್ರ ತಿಳಿದಿದ್ದೆ.

ನನ್ನ ಖಾಸಗಿ ಸಮಸ್ಯೆಗಳು ಜಟಿಲವೆನ್ನಿಸುತ್ತಿದ್ದ ವೇಳೆಯಲ್ಲಿ ಗೋಪಾಲಗೌಡರು ನನಗೆ ಪರಿಚಿತರಾದರು. ಅವರ ವ್ಯಕ್ತಿತ್ವ, ಸಾಧನೆ ಕೂಡ ನನಗೆ ಗೊತ್ತಿರಲಿಲ್ಲ. ೧೯೬೦ರ ವೇಳೆಯಲ್ಲಿ ಅವರು ಶಾಸನಸಭೆಯ ಸದಸ್ಯರಾಗಿರಲಿಲ್ಲ. ಚುನಾವಣೆಯಲ್ಲಿ ಸೋತಿದ್ದರು. ಏನಾಯಿತೆಂದರೆ, ಮಹಾ ಚುರುಕು ಬುದ್ದಿಯ, ವ್ಯಾಮೋಹಿಯಾದ, ಅಲ್ಲೋಲಕಲ್ಲೋಲ ಮನಸ್ಸಿನ ಗೋಪಾಲಗೌಡರು ಚಿಕ್ಕಲಾಲ್‌ಬಾಗ್ ಹತ್ತಿರದ ತಮ್ಮ ಆಫೀಸಿನಲ್ಲಿ ಇರುತ್ತಾ ಅನೇಕ ಗೆಳೆಯರನ್ನು ಸಂಧಿಸುತ್ತಿದ್ದರು. ಅದರಲ್ಲಿ ಅವರಿಗೆ ಸಾಹಿತಿಗಳು, ಕಲಾವಿದರೆಂದರೆ ತುಂಬ ಇಷ್ಟ; ಅಧಿಕಾರವಿಲ್ಲದ ಆಗಿನ ದಿನಗಳಲ್ಲಿ ಅವರು ಒಂದು ರೀತಿಯಲ್ಲಿ ಗುರಿ ಇಲ್ಲದ ಜೀವನ ನಡೆಸುತ್ತಿದ್ದಂತೆ, ರಾಜಕೀಯವೇ ದುಷ್ಟವೃತ್ತಿಯೆಂಬ ಅನುಮಾನ ಅವರಲ್ಲಿ ಬಲವಾಗುತ್ತಿದ್ದಂತೆ ಕಾಣುತ್ತಿತ್ತು. ನಾನೊಮ್ಮೆ ಅವರ ಚಿಕ್ಕಲಾಲ್‌ಬಾಗ್ ಆಫೀಸಿಗೆ ಹೋಗಿದ್ದೆ. ಅಲ್ಲಿಗೆ ಖಾದ್ರಿಶಾಮಣ್ಣ, ಬಾ.ಸು. ಕೃಷ್ಣಮೂರ್ತಿ ಮುಂತಾದವರು ಬಂದಿದ್ದರು.

ಹರಟೆ ಕೊಚ್ಚುವುದರಲ್ಲಿ ಪ್ರಚಂಡರಾಗಿದ್ದ ಗೋಪಾಲ್ ಅವತ್ತು ಕೂಡ ತಮ್ಮ ತೀರ್ಥಹಳ್ಳಿಯ ಬಗ್ಗೆ ಅದ್ಭುತವಾಗಿ ಮಾತಾಡಿದರು. ಮಂತ್ರಿಗಳ ಹತ್ತಿರ ಯಾವುದೋ ಕೆಲಸಕ್ಕಾಗಿ ಬಂದಿದ್ದ ತೀರ್ಥಹಳ್ಳಿಯ ಒಬ್ಬರು ಅಲ್ಲಿದ್ದರು. ಅವರ ಕೆಲಸ ಮಾಡಿಕೊಡಲು ಯಾರಾದರೂ ಮಂತ್ರಿಗಳ ಜೊತೆಗೆ ಮಾತಾಡಬೇಕಾಗಿತ್ತು. ಗೋಪಾಲ್ ತುಂಬ ಮುಜುಗರ ಅನುಭವಿಸುತ್ತಿದ್ದಂತಿತ್ತು. ಯಾಕೆಂದರೆ ಅವರು ಹಿಜಂರಿಯದೆ ಸಂಪರ್ಕಿಸುತ್ತಿದ್ದುದು ಆಗಿನ ಮಂತ್ರಿ ಕಡಿದಾಳ್‌ರನ್ನು ಮಾತ್ರ. ಗೋಪಾಲ್‌ರ ರಾಜಕೀಯ ಎದುರಾಳಿಯೇ ಅವರು ನಂಬುತ್ತಿದ್ದ ವ್ಯಕ್ತಿಯಾಗಿದ್ದರು. ಕಡಿದಾಳ್ ಕೂಡ ಶುದ್ಧ ಹಸ್ತದ ರಾಜಕಾರಣಿ; ಗೋಪಾಲ್‌ರ ರಾಜಕೀಯ ಸಿದ್ಧಾಂತ, ಆಂದೋಲನ ಇತ್ಯಾದಿಯೆಲ್ಲ ಅವರಿಗೆ ಒಂದು ರೀತಿಯಲ್ಲಿ ವಿಚಿತ್ರ ಹುಡುಗಾಟಗಳಂತೆ ಕಾಣುತ್ತಿದ್ದರೂ, ಗೋಪಾಲರ ವ್ಯಕ್ತಿತ್ವ ಅವರಿಗೆ ಗೊತ್ತಿತ್ತು. ನಾನು ಮತ್ತೆ ಮತ್ತೆ ಗೋಪಾಲ್ ಬಗ್ಗೆ ಹೇಳುವ ಸಂದರ್ಭ ಬರಲಾರದಾದ್ದರಿಂದ ಇಲ್ಲಿಯೇ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ. ನಾನು ಚಿಕ್ಕಲಾಲ್‌ಬಾಗ್ ಕೋಣೆಯಲ್ಲಿ ಅವರನ್ನು ನೋಡಿದ ಒಂದೆರಡು ದಿನದಲ್ಲಿಯೇ ಅವರು ಮಿನರ್ವ ಹತ್ತಿರದ ನಾನಿದ್ದ ಮನೆಗೆ ಬಂದುಬಿಟ್ಟರು. ಅಂಥ ಪ್ರಖ್ಯಾತ ರಾಜಕಾರಣಿ ನನ್ನನ್ನು ಹುಡುಕಿಕೊಂಡು ಬಂದದ್ದು ನನ್ನಲ್ಲಿ ಕಸಿವಿಸಿ ಉಂಟುಮಾಡಿತು; ಗೋಪಾಲ್‌ಗೆ ಕೊಡಲು ನನ್ನಲ್ಲಿ ಅಂಥ ಪಾಂಡಿತ್ಯವಾಗಲಿ, ಜೀವನಾನುಭವವಾಗಲಿ ಇರಲಿಲ್ಲ; ಸಾಹಿತಿಯಾಗಿ ಕೂಡ ಏನೇನೂ ಬರೆದಿರಲಿಲ್ಲ. ಗೋಪಾಲ್ ಬಂದೊಡನೆ ಅವರನ್ನು ಇಂದಿರಾಗೆ ಪರಿಚಯಿಸಿ, ಕಾಫಿ ಕೊಟ್ಟು ಗೊಂದಲಮಯವಾಗಿ ಮಾತಾಡಿದೆ. ನಮ್ಮ ಸೋಷಲಿಸ್ಟರ ಪ್ರಕಾರ ನಾನು ಪ್ರೇಮವಿವಾಹ ಮಾಡಿಕೊಳ್ಳಬೇಕಾಗಿತ್ತು. ಆದರೆ, ನಾನು ಬೇರೆಯವರು ಗೊತ್ತು ಮಾಡಿದ್ದ ಹುಡುಗಿಯನ್ನು ಮದುವೆಯಾಗಲು ನಿಶ್ಚಯಶಾಸ್ತ್ರ ಮಾಡಿಕೊಂಡು, ಶಿವವ್‌ಗೆಯ ಕಾಲೇಜಿನಲ್ಲಿ ಕೆಟ್ಟ ವರ್ತನೆಯಿಂದ ಕಷ್ಟಗಳಲ್ಲಿ ಸಿಕ್ಕಿಹಾಕಿಕೊಂಡು, ಬೆಂಗಳೂರಿಗೆ ಬಂದಿದ್ದೆ. ಇದರಲ್ಲಿ ಒಂದೊಂದು ಅವಿವೇಕಿಯೊಬ್ಬನ ಕೃತ್ಯವೆಂಬಂತೆ ಖಂಡನೆಗೆ ತಕ್ಕ ಕೆಲಸವಾಗಿತ್ತು. ಒಬ್ಬ ಟ್ಯಾಲೆಂಟೆಂಡ್ ಹುಡುಗನ ತಿಕ್ಕಲು ನಡವಳಿಕೆ ಎಂದು ಗೋಪಾಲ್ ತರಹದವರು ಮನ್ನಿಸಬಹುದಾಗಿತ್ತು ಮಾತ್ರ. ಇಂಥ ವೇಳೆಯಲ್ಲಿ ನನ್ನನ್ನು ನೋಡಲು ನಾನಿದ್ದಲ್ಲಿಗೇ ಬಂದಿದ್ದ ಗೋಪಾಲ್ ಕಂಡು ದಿಗಿಲುಗೊಂಡೆ; ಗೋಪಾಲ್ ತರಹದ ವ್ಯಕ್ತಿಯ ಪರಿಚಯಕ್ಕೆ ನಾನು ಯೋಗ್ಯನಾಗಲು ಸಾಧ್ಯವೇ ಎಂದು ಖೇದಗೊಂಡೆ. ಅದೇನಾದರೂ ಇರಲಿ, ಮಿನರ್ವಾದಿಂದ ಇಬ್ಬರೂ ನಾಲ್ಕಾರು ಗಂಟೆ ಜೆ.ಸಿ. ರಸ್ತೆ, ಕೆಂಪೇಗೌಡ ರಸ್ತೆ (ಆಗ ಅದು ಮೆಜೆಸ್ಟಿಕ್ ರಸ್ತೆ) ಮುಂತಾದ ಜನನಿಬಿಡ ರಸ್ತೆಗಳಲ್ಲಿ ಅಡ್ಡಾಡುತ್ತಾ ಮಾತಾಡಿದೆವು. ನಾನು ಹೆಚ್ಚು ಮಾತಾಡಲಿಲ್ಲ ಅನ್ನಿಸುತ್ತದೆ. ನನ್ನಲ್ಲಿದ್ದ; ಪ್ರತಿಯೊಂದು ಸರಕೂ ಇಲ್ಲ ಪುಸ್ತಕದಿಂದ ಬಂದದ್ದು, ಇಲ್ಲ ನನ್ನ ಉದ್ವೇಗದಿಂದ ಬಂದದ್ದು; ಲೈಂಗಿಕ ಅನುಭವ ಕುರಿತು ಮಾತಾಡಬಹುದೋ ಇಲ್ಲವೋ ಗೊತ್ತಿರಲಿಲ್ಲ. ಹಾಗಾಗಿ ಸುಮ್ಮನಿದ್ದೆ. ಗೋಪಾಲ್ ಆಗ ಲೋಹಿಯಾ, ಜೆ.ಪಿ. ಗಾಂಧಿಕುರಿತು ಮಾತಾಡಿದರು; ಸೋಷಲಿಸ್ಟರ ಸಂಕೀರ್ಣ ನಿಲುವನ್ನು ಕುರಿತು, ಅದು ಸಂಕೀರ್ಣವಾಗುವುದರ ಅನಿವಾರ್ಯತೆಯನ್ನು ಕುರಿತು ವಿವರಿಸಿದರು. ಗೋಪಾಲ್ ಎಂಥ ಪ್ರೀತಿ ತುಂಬಿದ ವ್ಯಕ್ತಿಯೆಂದರೆ ಶಿವಮೊಗ್ಗೆಯ ನನ್ನ ಗಲಾಟೆಯ ಬಗ್ಗೆ ಅವರು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ; ಆ ಬಗ್ಗೆ ಆಗಲೇಕೇಳಿ, ಅದೆಲ್ಲ ಸಹಜ ಎಂದು ಅವರು ತೀರ್ಮಾನಿಸಿದಂತಿತ್ತು.

ಅಲ್ಲಿಂದ ಒಂದೆರಡು ದಿನವಾದ ಮೇಲೆ ಗೋಪಾಲ್ ಮತ್ತು ಖಾದ್ರಿ ಶಾಮಣ್ಣ ಮಾತಾಡುತ್ತಿದ್ದಾಗ, ನಾನು ಅವರಿದ್ದಲ್ಲಿಗೆ ಬಂದೆ. ಖಾದ್ರಿಯ ಮಾತುಗಳನ್ನು ಗೋಪಾಲ್ ವ್ಯಂಗ್ಯವಾಗಿ ಆಲಿಸುತ್ತಿದ್ದಂತಿತ್ತು. ಅಷ್ಟರಲ್ಲೇ ಖಾದ್ರಿ ವಿನೋಬಾ ಜೊತೆಗೆ ಭೂದಾನ ಚಳವಳಿಯಲ್ಲಿ ಭಾಗವಹಿಸಿ ಬಂದಿದ್ದರು. ಭೂಮಾಲೀಕರ ಕ್ರೌರ್ಯವನ್ನು ಬಲ್ಲ ಗೋಪಾಲ್‌ಗೆ ಖಾದ್ರಿಯವರು ಅವಾಸ್ತವ ನಿಲುವು ಅನ್ನಿಸಿತ್ತು; ಆದ್ದರಿಂದ, ಭೂಮಾಲೀಕರ ಭೋಜನದ ರುಚಿಯನ್ನು ಬಲ್ಲವರಿಗೆ ಉಳುವವರ ಕಷ್ಟ ಗೊತ್ತಾಗುವುದಿಲ್ಲ, ಅಂದರು. ಅಂಥ ಒಂದು ಸಂದರ್ಭದಲ್ಲೇ ಗೋಪಾಲ್ ಪಟ್ಟಭದ್ರ ಸ್ವಭಾವದ ಜನಕ್ಕೆ, ನೀವು ಆಕಾಶವನ್ನು ಹಂಚಿ ಮುಗಿದಮೇಲೆ ಭೂಮಿಯನ್ನು ಹಂಚಿ ಎನ್ನುವವರು ಎಂದು ರೇಗಿದ್ದರು. ಈ ದಿನಗಳಲ್ಲಿ ನಾನು ‘ಗೋಪಾಲ್ ಹೇಗೆ ಬದುಕುತ್ತಿದ್ದರೆ, ಅವರ ಜೀವನದ ವಿವರಗಳೇನು’ ಎಂದು ವಿಚಾರಿಸಿ ತಿಳಿದುಕೊಳ್ಳುವ ವ್ಯವಧಾನ ಕೂಡ ಇಲ್ಲದ ಪ್ರಕ್ಷುಬ್ಧ ಮನಸ್ಸಿನ ಹುಡುಗನಾಗಿದ್ದೆ. ಒಂದು ದಿನ ಗೋಪಾಲ್ ಖಾದ್ರಿಯವರನ್ನು ಸ್ವಲ್ಪ ಹಣ ಬೇಕೆಂದು ಕೇಳಿದಂತಿತ್ತು. ‘ಒಂದು ಪೈಸೆ ಕೂಡ ಇಲ್ಲ’ ಎಂದು ಕೇಳಿದ ಖಾದ್ರಿ ಎದ್ದು ಪಂಚೆ ಸರಿಮಾಡಿಕೊಳ್ಳುತ್ತಿದ್ದಾಗ ಸೊಂಟದಿಂದ ನೂರು ರೂಪಾಯಿನ ನೋಟು ಬಿತ್ತು. ಗೋಪಾಲ್ ಅದನ್ನು ಸುಮ್ಮನೇ ನೋಡುತ್ತಿದ್ದರು. ಆ ನೋಟನ್ನೂ ಎತ್ತಿಕೊಂಡು ಖಾದ್ರಿ ಹೊರಟುಹೋದರು.ಆಗ ಕೂಡ ನನಗೆ ಗೋಪಾಲ್‌ರ ಆರ್ಥಿಕ ಸ್ಥಿತಿಯ ಬಗ್ಗೆ ಕುತೂಹಲವಾಗಲಿಲ್ಲ; ನನ್ನಲ್ಲಿ ಅಂಥ ಹಣವಿಲ್ಲದಿದ್ದರೂ ಅವರನ್ನು ನಾನಿದ್ದಲ್ಲಿಗೆ ಊಟಕ್ಕೆ ಕರೆಯುವುದು, ಅವರನ್ನು ಹೋಟೆಲ್‌ಗೆ ಕರೆದೊಯ್ದು ಒಟ್ಟಿಗೇ ಊಟ ಮಾಡುವುದು ಕಷ್ಟವಾಗುತ್ತಿರಲಿಲ್ಲ. ನನ್ನ ಗೋಳುಗಳಲ್ಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಅದು ಹೊಳೆಯಲಿಲ್ಲ; ನಾಯಕರಾಗಿದ್ದು ಅನೇಕ ಗಣ್ಯಮಿತ್ರರನ್ನು ಪಡೆದಿದ್ದ ಅವರನ್ನು ಊಟಕ್ಕೆ ಕರೆಯಲು ನನಗೆ ಸಂಕೋಚವಾಗಿರಬಹುದು. ಅಂತೂ ಮಹಾ ಸ್ವಾಭಿಮಾನಿಯಾಗಿದ್ದು, ಸದಾ ತಣ್ಣಗೆ ಮಾತಾಡುತ್ತಿದ್ದ ಗೋಪಾಲ್ ಆಗಾಗ ಸ್ಫೋಟಗೊಳ್ಳುತ್ತಿದ್ದರು. ಸಮಾಜದ ನೀಚರು, ಶೋಷಕರನ್ನು ಕಂಡರೆ ಕೆಂಡವಾಗುತ್ತಿದ್ದರು; ಆದರೆ ಆತ ಮಹಾ ಸ್ವಾಭಿಮಾನದ ಮನುಷ್ಯ. ಹಾಗಾಗಿ ಅವರು ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈಚಾಚಲಾರರು. ಅವರು ತಮ್ಮ ಕಷ್ಟಗಳನ್ನು ಎಂದೂ ಹೇಳಿಕೊಳ್ಳುತ್ತಿರಲಿಲ್ಲ. ಸಮಾಜವಾದಿ ನಿಲುವಿಗೆ ತಕ್ಕಂತೆ ಜಾತಿ, ಭಾಷೆ, ಆಸ್ತಿಯ ಬಗ್ಗೆ ಸ್ಪಷ್ಟವಾಗಿ, ಮನಮುಟ್ಟುವಂತೆ ಮಾತಾಡಬಲ್ಲರಾಗಿದ್ದರೂ ಮನುಷ್ಯರ ಎದುರು ಎಲ್ಲ ಸಿದ್ಧಾಂತ ಮರೆತು ಅಕ್ಕರೆಯ ಮೂರ್ತಿಯಾಗುತ್ತಿದ್ದರು. ಒಮ್ಮೆ ಸಾಗರದ ಸಮಾಜವಾದಿ ಘಟಕಕ್ಕೆ ಬ್ರಾಹ್ಮಣರೊಬ್ಬರನ್ನು ಅಧ್ಯಕ್ಷರನ್ನಾಗಿ ಆರಿಸಿದರು. ಎಲ್ಲವನ್ನೂ ಕೇಳಿದಮೇಲೆ ಗೋಪಾಲ್, ‘ಅದೆಲ್ಲ ಸರಿ, ಆದರೆ, ಬೆರಳು ಹಾಕಿ ಮಕ್ಕಳು ಮಾಡಿದ್ದನ್ನು ಯಾರೂ ನೋಡಿಲ್ಲ’ ಎಂದು ತಣ್ಣಗೆ ಹೇಳಿದರು.

ಹಾಗೆ ಹೇಳುವಾಗ ಗೋಪಾಲ್ ನಗುತ್ತಿರಲಿಲ್ಲ; ಸತ್ಯವನ್ನು ಹೇಳುವಂತೆ ಗಂಬೀರವಾಗಿ ಅಂದುಬಿಟ್ಟಿದ್ದರು. ಅವರಿಗೆ ಅನಂತಮೂರ್ತಿಯವರ ಬಗ್ಗೆ ಪ್ರೀತಿ, ವ್ಯಂಗ್ಯ ಗೌರವ ಎಲ್ಲವೂ ಇತ್ತು; ಅನಂತಮೂರ್ತಿಯವರು ಅವರಿಗೆ ಒಂದು ಕಾಗದ ಬರೆದರೆ ಅದನ್ನು ತಾವು ಓದುತ್ತಿದ್ದ ಪುಸ್ತಕದಲ್ಲಿ ಇಟ್ಟುಕೊಂಡು ಅದನ್ನು ಆಗಾಗ ಓದಿ ಎಲ್ಲರಿಗೂ ಹೇಳುತ್ತಿದ್ದರು. ಅನಂತಮೂರ್ತಿ ಕಾಮನ್‌ವೆಲ್ತ್ ಸ್ಕಾಲರ್‌ಶಿಪ್ ಮೇಲೆ ಇಂಗ್ಲೆಂಡಿಗೆ ಹೋಗಲು ಸಂಭ್ರಮದಿಂದ ರೆಡಿಯಾಗುತ್ತಿದ್ದಾಗ ಕರ್ನಾಟಕದ ಸಮಾಜವಾದಿ ಪಕ್ಷಧ ಎಲ್ಲರೂ ತಾವೇ ಹೋಗುತ್ತಿದ್ದಂತೆ ಕುಣಿದಾಡುತ್ತಿದ್ದರು. ಅನಂತಮೂರ್ತಿಯವರ ಉತ್ಸಾಹ ಅಸಂಗತ ಎನ್ನುವ ಮಟ್ಟಕ್ಕೆ ಹೋಗಿತ್ತು.ಆಗ ಅದೆಲ್ಲವನ್ನೂ ಮೌನವಾಗಿ ನೋಡುತ್ತಿದ್ದ ಗೋಪಾಲ್ ಹೇಳಿದರು: ‘ಅನಂತು ನೀವು ಇಂಗ್ಲೆಂಡಿಗೆ ಹೋಗ್ತಿರೋದು ಹಡಗಿನಲ್ಲಿ ಅಲ್ವಾ?’ ಅನಂತಮೂರ್ತಿ ‘ಹೌದು’ ಅಂದರು. ಆಗ ಗೋಪಾಲ್, ‘ಹಡಿಗಿನಲ್ಲಿ ಪ್ರತೀದಿನ ನೂರಾರು ಇಲಿ ಹೆಗ್ಗಣಗಳು ಇಂಗ್ಲೆಂಡಿಗೆ ಹೋಗುತ್ತಿರುತ್ತವೆ, ಅಲ್ಲಿಂದ ಬರುತ್ತಿರುತ್ತವೆ, ಅದರಲ್ಲಿ ಅಂಥ ವಿಶೇಷವೇನಿಲ್ಲ’ ಅಂದರು. ಎಲ್ಲರ ‘ಹೋ’ ಎಂಬ ನಗೆಯ ಮಧ್ಯೆ ಅನಂತಮೂರ್ತಿ ಸುಮ್ಮನೆ ಕೂತರು. ಇನ್ನೊಂದು ಸಲ ಸೋಷಲಿಸ್ಟ್ ಕ್ಯಾಂಪೊಂದರಲ್ಲಿ ಚರ್ಚೆ, ಊಟ, ಎಲ್ಲ ಆದಮೇಲೆ ರಾತ್ರಿ ಮಲಗಿದ್ದಾಗ ಒಬ್ಬ ಪಕ್ಕದಲ್ಲಿ ಬಯಂಕರವಾಗಿ ಗೊರಕೆ ಹೊಡೆಯುತ್ತಿದ್ದ, ತೇಗುತ್ತಿದ್ದ, ಸಹಿಸುವವರೆಗೂ ಸಹಿಸಿದ ಗೋಪಾಲ್ ಎದ್ದು “ಲೋ ರಮೇಶ, ನಿಮ್ಮ ಸಮಾಜವಾದವನ್ನು ಒಂದು ರಾತ್ರಿ ಮರೆತು ಈ ಗೊರಕೆ ಭೂತವನ್ನು ಹೊರಗೆ ಮಲಗಿಸು!’’ ಎಂದೂ ಕೂಗಿದರು.

ಶಿವಮೊಗ್ಗೆಗೆ ನಾನು ಹಿಂದಿರುಗಿ ಅಧ್ಯಾಪಕನಾಗಿ ಮುಂದುವರಿದಾಗ ಗೋಪಾಲ್ ಅನೇಕಸಲ ಶಿವಮೊಗ್ಗೆಯಲ್ಲಿ ಸಿಕ್ಕರು. ಒಂದು ದಿನ ಕಾಲೇಜಿನ ಚರ್ಚಾಸ್ಪರ್ಧೆಯೊಂದಕ್ಕೆ ಅವರೂ ಬಂದಿದ್ದರು. ಅವತ್ತು ಆ ಸ್ಪರ್ಧೆ ಹಸೂಡಿ ಭವನದಲ್ಲಿ ಇತ್ತು. ಹಾಲ್ ಜನರಿಂದ ತುಂಬಿಹೋಗಿತ್ತು. ಚರ್ಚೆ ರಂಗೇರಿತ್ತು. ಆಗ ಅಧ್ಯಕ್ಷರು ಸಭೆಯಲ್ಲಿದ್ದ ಕೆಲವರು ಸಾರ್ವಜನಿಕರಿಂದ ಮಾತಾಡಿಸಿದರು. ನಾನು ಗೋಪಾಲ್ ಮಾತಾಡಬೇಕೆಂದು ಸೂಚಿಸಿದೆ. ಅಧ್ಯಕ್ಷರು ಹಾಗೆಂದು ಸಭೆಗೆ ಹೇಳಿದರು. ಗೋಪಾಲ್ ಆಗ ವೇದಿಕೆಗೆ ಬಂದು, “ನಾನು ಈ ಬಗ್ಗೆ ಸರಿಯಾಗಿ ಯೋಚಿಸಿಲ್ಲವಾದ್ದರಿಂದ ಮಾತಾಡುವುದಿಲ್ಲ’’ ಎಂದಷ್ಟೇ ಹೇಳಿ ತಮ್ಮ ಕುರ್ಚಿಗೆ ಬಂದು ಕುಳಿತರು.

ಹೊರನೋಟಕ್ಕೆ ಎಲ್ಲವೂ ಸರಿಯಾಗಿದ್ದಂತೆ ಕಾಣುತ್ತಿದ್ದರೂ ಶಿವಮೊಗ್ಗೆಯ ಸೋಷಲಿಸ್ಟರು ಸಂಜೆಯಾಯಿತೆಂದರೆ ಬ್ಯಾಗ್‌ಗಟ್ಟಲೆ ವ್ಹಿಸ್ಕಿ ತಂದು, ಪಾರ್ಟಿ ನಡೆಸಿ, ಒಂದು ಬಗೆಯ ಆತ್ಮಹತ್ಯೆಯ ಕ್ರಿಯೆಯಲ್ಲಿ ನಿತರಾಗಿರುತ್ತಿದ್ದರು. ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು; ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಯಕ್ತಿ ಪಡೆದು ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ. ಅಂತೂ ಗೋಪಾಲ್ ಒಂದು ಹಂತದಲ್ಲಿ ಎಲ್ಲರ ಗೆಳೆಯರಾಗಿ ಖುಷಿಯಾಗಿದ್ದರು; ಇನ್ನೊಂದು ಹಂತದಲ್ಲಿ ಸಮಾಜವಾದಿ ಪಕ್ಷಕ್ಕೆ ಭವಿಷ್ಯವೇ ಇಲ್ಲವೆಂದು ದುಗುಡಗೊಳ್ಳುತ್ತಿದ್ದರು. ಈ ಮಧ್ಯೆ ಅವರು ಮದುವೆಯಾದರು, ಮಕ್ಕಳು ಪಡೆರು, ಹತೋಟಿಮೀರಿದ ರಕ್ತದೊತ್ತಡದಲ್ಲಿ ತತ್ತರಿಸತೊಡಗಿದರು. ಈ ದಿನಗಳಲ್ಲೇ ಒಂದು ರಾತ್ರಿ ವಿಕ್ಟೋರಿಯಾ ಹೋಟೆಲ್‌ನಲ್ಲಿ ನಾನು, ಅನಂತಮೂರ್ತಿ, ಗೋಪಾಲ್, ನಾರಾಯಣರೆಡ್ಡಿ ಮುಂತಾದವರು ಸೇರಿದ್ದೆವು. ಅವತ್ತು ಗೋಪಾಲ್ ಕುಡಿದು ಮಾತಾಡಿದ ರೀತಿಯನ್ನು ನಾನೆಂದೂ ಮರೆಯಲಾಗದು; ತೀರ್ಥಹಳ್ಳಿಯಲ್ಲಿನ ಅವರ ವೈಯಕ್ತಿಕ ಅನುಭವ, ಅತ್ಯಂತ ವರ್ಣರಂಜಿತ ಸಾಮಾನ್ಯರ ವ್ಯಕ್ತಿಚಿತ್ರಣ, ತುಂಬಸಾಮಾನ್ಯವಾದದ್ದನ್ನು ಕೂಡ ನಾಟಕೀಯವಾಗಿಯೂ ಅರ್ಥಪೂರ್ಣವಾಗಿಯೂ ಮಾಡುವ ಅವರ ಮಾತಿನ ಚಾತುರ್ಯ, ರಾಜಕೀಯ, ಸಾಹಿತ್ಯ, ಸಾಮಾನ್ಯ ಜನರ ಕಾಳಜಿಗಳು ಎಲ್ಲವನ್ನೂ ಒಗ್ಗೂಡಿಸಿ ನಿರೂಪಿಸುತ್ತಿದ್ದ ವೈಖರಿ… ಎಲ್ಲವೂ ನನ್ನಲ್ಲಿ ಖುಷಿ, ಆತಂಕ, ಕಸಿವಿಸಿ ಹುಟ್ಟಿಸಿದವು. ಅದು ಗೋಪಾಲ್‌ರ ಕೊನೆಯ ಅಧ್ಯಾಯ ಎಂಬುದು ಅದೆಂತೋ ನನ್ನಲ್ಲಿ ಭಯ ಹುಟ್ಟಿಸತೊಡಗಿತ್ತು. ಹಾಗೇ ಆಯಿತು. ಗೋಪಾಲ್ ಕೆಲವು ವಾರಗಳ ತರುವಾಯ ತೀರ್ಥಹಳ್ಳಿಯ ಸಮಾಜವಾದಿ ಯುವಜನಸಭಾದ ಸಭೆಗೆಂದು ಬರುವಷ್ಟರಲ್ಲಿ ನಡೆಯಲಾರದಷ್ಟು ಅಸ್ಥಿರವಾಗಿದ್ದರು;ಕೇವಲ ನಲವತ್ತೆಂಟು ವರ್ಷದ ಅವರು ಪೂರ್ಣ ಶಿಥಿಲಗೊಂಡಿದ್ದರು. ಆದರೂ ಅಂದು ಕೂಡ ಅವರು ಹೃದಯಸ್ಪರ್ಶಿಯಾಗಿ ಮಾತಾಡಿದರು; ಮನಸ್ಸಿನ ಮೂಲೆಯಲ್ಲಿ ಎಲ್ಲೆಲ್ಲಿಯೋ ಇದ್ದ ನೆನಪಿನ ಚೂರುಗಳು ಸಭೆಯಲ್ಲಿ ನಗೆ, ನಿಟ್ಟುಸಿರಿನ ಅಲೆ ಎಬ್ಬಿಸುತ್ತಿದ್ದವು. ಕೊನೆಯ ಚಿತ್ರ ವಿಕ್ಟೋರಿಯಾ ಆಸ್ಪತ್ರೆಯದು. ಅವರು ಎಂಥಾ ಜೀವನಪ್ರೇಮಿ ಎಂದರೆ ಅಲ್ಲಿ ನೆರೆದಿದ್ದ ನಮ್ಮಂಥ ಲೇಖಕರನ್ನೆಲ್ಲ ಕೈಯಿಂದಲೇ ಸನ್ನೆಮಾಡಿ ಮಾತಾಡಲು ಪ್ರೋತ್ಸಾಹಿಸುತ್ತಿದ್ದರು. ಮಾತಾಡಲು ಆಗದಿದ್ದರೆ ಕನಿಷ್ಠ ನಮ್ಮೆಲ್ಲರ ಮಾತು ಕೇಳಬೇಕೆಂಬ ಆಶೆ ಗೋಪಾಲ್‌ದು.