ಡಿ. ದೇವರಾಜ ಅರಸ್ (ಮುಖ್ಯಮಂತ್ರಿಗಳು)

ಮಾನ್ಯ ಅಧ್ಯಕ್ಷಿಣಿಯವರೇ, ಈ ಸದನದ ಸದಸ್ಯರಾಗಿದ್ದ ಮತ್ತು ನಮಗೆಲ್ಲರಿಗೂ ಬಹಳ ಪ್ರಿಯ ಸ್ನೇಹಿತರಾಗಿದ್ದ ಶ್ರೀಯುತ ಗೋಪಾಲಗೌಡರ ನಿಧನದ ಬಗ್ಗೆ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ತಾವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಶ್ರೀಯುತ ಗೋಪಾಗೌಡರು ನನಗೆ ಬಹಳ ಹಳೆಯ ಸ್ನೇಹಿತರು. ಈ ಸಭೆಯಲ್ಲಿ ಅನೇಕ ವರ್ಷಗಳ ಕಾಲ ಅವರ ಜೊತೆಯಲ್ಲಿ ಕೆಲಸಮಾಡತಕ್ಕ ಅವಕಾಶ ನನಗೆ ದೊರಕಿತ್ತು. ನಮ್ಮ ಇಡೀ ರಾಜ್ಯದಲ್ಲಿ ಶ್ರೀಯುತ ಗೋಪಾಲಗೌಡರಂತಹ ಒಬ್ಬ ನಿಷ್ಠಾವಂತ ರಾಜಕಾರಣಿ ಮತ್ತು ಒಬ್ಬ ಪ್ರಾಮಾಣಿಕ ಸಾರ್ವಜನಿಕ ಕಾರ್ಯಕರ್ತ ದೌರಕಲಾರ ಎಂದು ನನ್ನ ಅಭಿಪ್ರಾಯ. ನಾನು ಕಂಡ ಹಾಗೆ ಶ್ರೀಯುತ ಗೋಪಾಲಗೌಡರಂತಹ ರಾಜಕಾರಣಿ ಸಿಕ್ಕುವುದು ಕಷ್ಟ. ಶ್ರೀಯುತರ ನಡವಳಿಕೆ, ಅವರ ವೈಯಕ್ತಿಕ ಜೀವನ ಮತ್ತು ಅವರು ಈ ಸಬೆಯಲ್ಲಿ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳು ಅವರಿಗೆ ಬಡಜನತೆಯಲ್ಲಿ ಎಷ್ಟರಮಟ್ಟಿನ ಒಂದು ಅನುಕಂಪ ಇತ್ತು ಎಂಬುದನ್ನು ತೋರಿಸುತ್ತಿತ್ತು. ಶ್ರೀಯುತ ಗೋಪಾಲಗೌಡರು ಸಮಾಜವಾದದ ತತ್ವಗಳಲ್ಲಿ ಪೂರ್ಣವಾದ ನಂಬಿಕೆಯುಳ್ಳ ಒಬ್ಬ ವ್ಯಕ್ತಿಯಾಗಿದ್ದರು. ಇಡೀ ಅವರ ರಾಜಕೀಯ ಜೀವನದಲ್ಲಿ ತನಗಾಗಿ ಆತ ಏನನ್ನೂ ಬಯಸಿದವರಲ್ಲ. ಅವರ ರಾಜಕೀಯವು ಒಂದು ಪೂರ್ಣವಾದ ತ್ಯಾಗಜೀವನ ಎಂದು ಹೇಳಿ ಅದನ್ನು ನಂಬಿದ್ದಂತಹ ವ್ಯಕ್ತಿ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅವರು ಬಹಳ ಕಾಲ ಪೂರ್ಣವಾಗಿ ಬ್ರಹ್ಮಚಾರಿಯಾಗಿಯೇ ಇದ್ದುಕೊಂಡು ಎಷ್ಟೋ ವರ್ಷಗಳ ನಂತರ ಸಂಸಾರಿಗಳಾದ ಅವರು ಏತಕ್ಕೆ ಸಂಸಾರಿಗಳಾದರು ಎನ್ನುವ ವಿಚಾರವನ್ನು ಅಂತಃಕರಣದಿಂದ ನನಗೆ ಹೇಳಿದರು. ಯಾರೇ ಆಗಲಿ ಸಂಸಾರಿಗಳಾದ ಮೇಲೆ ಅವರು ತಮ್ಮ ಕುಟುಂಬ ಮತ್ತು ತಮ್ಮ ಮಕ್ಕಳ ಜೀವನಕ್ಕಾಗಿ ಏನಾದರೂ ಕೂಡಿಡಬೇಕು, ಏನಾದರೂ ಸ್ವಲ್ಪ ಆಸ್ತಿಯನ್ನು ಮಾಡಬೇಕು ಎನ್ನುವ ಭಾವನೆ ಸ್ವಾಭಾವಿಕವಾಗಿ ಉಂಟಾಗುತ್ತದೆ ಎಂದು. ಆದರೆ ನಾನು ಅವರಲ್ಲಿ ಕಂಡಂಥಾದ್ದು ಮನಮೆಚ್ಚುವಂತಹ ಮತ್ತು ಬಹಳ ವಿರಳವಾದ ಒಂದು ಗುಣ. ಅವರು ಸಂಸಾರಿಗಳಾದ ಮೇಲೂ ಸಹ ಅವರಿಗೆ ತಮ್ಮ ಸಂಸಾರಕ್ಕಾಗಿ ಏನಾದರೂ ಕೂಡಿಡಬೇಕು ಎಂಬ ಭಾವನೆ ಅವರ ಮನಸ್ಸಿನಲ್ಲಾಗಲೀ ಕೃತಿಯಲ್ಲಾಗಲೀ ನಮಗೆ ಎಲ್ಲೂ ಕಂಡುಬರಲಿಲ್ಲ. ಅವರ ಕೊನೆಯ ಉಸಿರು ಇರುವವರೆಗೂ ಅಷ್ಟು ಪೂರ್ಣ ತ್ಯಾಗ ಮಾಡಿದಂತಹ ರಾಜಕಾರಣಿಗಳು ತುಂಬ ವಿರಳ. ನಮ್ಮ ದುರಾದೃಷ್ಟದಿಂದ ನಾವು ಸಮಾಜವಾದವನ್ನು ಜಾರಿಗೆ ತರಲು ಹೊರಟಂತಹ ಕಾಲದಲ್ಲಿ ಮತ್ತು ಸಮಾಜವಾದಯುಗ ಈಗ ತಾನೇ ಪ್ರಾರಂಭವಾಗುತ್ತಿರುವ ಸಮಯದಲ್ಲಿ ಅವರಂತಹ ಒಬ್ಬ ತ್ಯಾಗ, ಪ್ರಾಮಾಣಿಕ ಮತ್ತು ತತ್ವನಿಷ್ಠೆಯ ರಾಜಕಾರಣಿ ನಮ್ಮ ಜೊತೆಯಲ್ಲಿ ಇದ್ದಿದ್ದರೆ ಚೆನ್ನಾಗಿತ್ತು. ಅಷ್ಟೇ ಅಲ್ಲ ನಮಗೆ ಆಗಿಂದಾಗ್ಗೆ ಅವರ ಮಾತು, ಅವರ ನಡವಳಿಕೆಗಳು ಮಾರ್ಗದರ್ಶನವಾಗುತ್ತಿದ್ದವು. ಅವರು ಈಗ ಇಲ್ಲವಾಗಿದ್ದಾರೆ. ಇದರಿಂದ ನಮಗೆ ಹಾಗೂ ಇಡೀ ದೇಶಕ್ಕೆ ಒಂದು ದೊಡ್ಡ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಕೊಡಲಿ, ಮತ್ತು ಅವರ ಕುಟುಂಬಕ್ಕೆ ಅವರ ಮರಣದಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಹಾರೈಸುತ್ತೇನೆ.

ಎಚ್.ಡಿ. ದೇವೇಗೌಡ (ಹೊಳೇನರಸೀಪುರ)

ಮಾನ್ಯ ಸಭಾಧ್ಯಕ್ಷಿಣಿಯವರೇ, ಮಾನ್ಯ ಗೋಪಾಗೌಡರು ನುಡಿದಂತೆ ನಡೆದ ರಾಜಕಾರಣಿಗಳು. ಅವರ ಜೊತೆಯಲ್ಲಿ ನನಗೆ ಹತ್ತು ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ಒದಗಿತ್ತು. ರಾಜಕೀಯ ಜೀವನದಲ್ಲಿ ಅವರು ನಿಷ್ಕಳಂಕವಾದ ಜೀವನವನ್ನು ನಡೆಸಿದರು. ಇವತ್ತು ನಾವು ಭೂಸುಧಾರಣೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ಭೂಸುಧಾರಣೆಯ ಬಗ್ಗೆ ಗೋಪಾಲಗೌಡರು ಕಾಗೋಡು ಸತ್ಯಾಗ್ರಹದಿಂದ ತಮ್ಮ ಚಳವಳಿಯನ್ನು ಪ್ರಾರಂಭ ಮಾಡಿದರು. ಮುಂದೆ ಅವರು ಈ ಸಬೆಗೆ ಮೂರು ಸಾರಿ ಚುನಾಯಿತರಾಗಿದ್ದರು. ಅವರು ಒಂದು ಸಾರಿ ಅನಾರೋಗ್ಯದ ಕಾಲದಲ್ಲಿ ಮಾತನಾಡುತ್ತಾ, “ನಾವು ಬಡತನವನ್ನು ನಿರ್ಮೂಲನ ಮಾಡಬೇಕೆಂಬ ಹಂಬಲವನ್ನು ಇಟ್ಟುಕೊಂಡಿದ್ದೇವೆ. ಅದನ್ನು ನಾನು ನನ್ನ ಜೀವನದಲ್ಲಿ ಕಾಣುತ್ತೇನೊ, ಇಲ್ಲವೊ’’ ಎಂದು ಹೇಳುತ್ತಿದ್ದರು. ಇಂದು ರಾಜಕೀಯ ಜೀವನಕ್ಕೂ ಭ್ರಷ್ಟಾಚಾರಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಆದರೆ ಮಾನ್ಯ ಗೋಪಾಲಗೌಡರ ಜೀವನವನ್ನು ನೋಡಿದರೆ ಅವರು ಅದನ್ನು ಮೆಟ್ಟಿ ನಿಂತ ರಾಜಕೀಯ ಜೀವನದಲ್ಲಿ ನಡೆದಿದ್ದಾರೆ ಎಂದು ನಾನು ತಿಳಿದುಕೊಂಡಿದ್ದೇನೆ.

ಗೋಪಾಲಗೌಡರು ಡಾ. ರಾಮಮನೋಹರ ಲೋಹಿಯ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಅವರು ಸಮಾಜದ ಏಳಿಗೆಗೋಸ್ಕರ ಸಮಾಜವಾದವನ್ನು ಸ್ಥಾಪನೆ ಮಾಡುವುದಕ್ಕೋಸ್ಕರ ದುಡಿದಿದ್ದಾರೆ. ಬಹುಶಃ ಅವರ ಇಡೀ ಜೀವನದಲ್ಲೇ ಅದನ್ನು ತೋರಿಸಿಕೊಟ್ಟಿದ್ದಾರೆ. ಅಂತಹ ವ್ಯಕ್ತಿ, ರಾಜಕೀಯ ಜೀವನದಲ್ಲಿ ಸಿಗುವುದು ಬಹಳ ಕಷ್ಟ. ಅವರ ಕುಟುಂಬದ ರಕ್ಷಣೆಗೋಸ್ಕರ ಸಹಾಯ ಮಾಡುವುದರಲ್ಲಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅದಲ್ಲದೆ ಈ ರೀತಿ ಸಹಾಯ ಮಾಡುವುದರಿಂದ ರಾಜಕೀಯದಲ್ಲಿ ಒಬ್ಬ ರಾಜಕಾರಣಿ ನಿಷ್ಠೆಯಿಂದ ನಡೆದುಕೊಳ್ಳುವುದಕ್ಕೆ ಇನ್ನೂ ಹೆಚ್ಚಿನ ಒಂದು ಹುರುಪು ಸಿಗುತ್ತೆದೆಂದು ನಾನು ಭಾವಿಸುತ್ತೇನೆ.

ಕಾಗೋಡು ತಿಮ್ಮಪ್ಪ (ಸಾಗರ)

ಮಾನ್ಯ ಅಧ್ಯಕ್ಷಿಣಿಯವರೆ, ಮಾನ್ಯ ಮುಖ್ಯಮಂತ್ರಿಯವರು ನಮ್ಮ ಹಿರಿಯರ ಅಗಲಿಕೆಯನ್ನು ಕುರಿತು ಹೇಳಿದ್ದಾರೆ. ಇವತ್ತು ನಾವು ನಮ್ಮ ಒಬ್ಬ ಗುರುವನ್ನು ಕಳೆದುಕೊಂಡು ತಬ್ಬಲಿಗಳಾಗಿ ಮೂಕವೇದನೆಯನ್ನು ಅನುಭವಿಸುತ್ತಿದ್ದೇವೆ. ದಿವಂಗತ ಗೋಪಾಲಗೌಡರ ಮಾರ್ಗದರ್ಶನ ನಮ್ಮ ಜೀವನದುದ್ದಕ್ಕೂ ಇತ್ತು. ಮೂಲೆಯಲ್ಲಿ ಬಿದ್ದಿದ್ದಂತಹ ನನ್ನನ್ನು ಮತ್ತಿತರ ಅನೇಕ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಮನುಷ್ಯರಂತೆ ಮಾಡುವ ಪ್ರಯತ್ನವನ್ನು ಅವರು ತಮ್ಮ ಜೀವನದಲ್ಲಿ ನಡೆಸಿಹೋಗಿದ್ದಾರೆ. ಅವರ ಸಂಪರ್ಕವಾದರೂ ನನಗೆ ಆದುದು ಕಾಗೋಡು ಹೋರಾಟದ ಸಂದರ್ಭದಲ್ಲಿ. ಅವರು ಹೋರಾಟದ ಮುಖಂಡತ್ವ ವಹಿಸಿಕೊಂಡು ನಮ್ಮ ಊರಿಗೆ ಬಂದಾಗ ನಾನು ಅವರಿಗೆ ಊಟ-ತಿಂಡಿ ಒದಗಿಸುತ್ತಿದ್ದೆ. ಅಲ್ಲದೆ ಅವರು ಹಳ್ಳಿ ಹಳ್ಳಿಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಅವರ ಜೊತೆಯಲ್ಲಿ ನಾನೂ ಓಡಾಡುತ್ತಿದ್ದೆ. ಹಾಗೆ ಹೋರಾಟದ ಮುಖಾಂತರ ಅವರ ಸಂಪರ್ಕವನ್ನು ಬೆಳೆಸಿಕೊಂಡು ಬಂದು ಅವರ ಅತ್ಯಂತ ನಿಕಟವರ್ತಿಯಾಗಿ ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ಅವರು ರಾಜಕೀಯದಲ್ಲಿ ನಿಸ್ಪೃಹತೆ ಮತ್ತು ಹೋರಾಟಶೀಲತೆಯನ್ನು ಇಟ್ಟುಕೊಂಡು ಕೆಲಸಮಾಡಬೇಕೆಂದು ಮಾರ್ಗದರ್ಶನ ಮಾಡಿದಂತಹ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ನಮ್ಮ ಗೇಣಿದಾರ ರೈತರ ಒಂದು ಶಕ್ತಿಯೇ ಅಡಗಿಹೋಗಿದೆ. ನಮ್ಮ ಗೇಣಿದಾರರು “ಗೋಪಾಲಗೌಡರು ಹೋದ ಮೇಲೆ ನಮ್ಮನ್ನು ಯಾರು ರಕ್ಷಣೆ ಮಾಡುತ್ತಾರೆ?’’ ಎಂದು ಹೇಳುತ್ತಿದ್ದಾರೆ. ಅದರಲ್ಲೂ ನಮ್ಮ ಶಿವಮೊಗ್ಗದ ರೈತರು ಅವರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಅವರ ವ್ಯಕ್ತಿತ್ವದ ಪ್ರತಿಯೊಂದು ಹಂತದಲ್ಲಿಯೂ ನಾವು ಸೇರಿ ಬಂದಂತಹವರು. ಕೊನೆಯ ಗಳಿಗೆಯವರೆಗೂ ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಅವರು ನಮ್ಮೊಡನೆ ಸಮಾಲೋಚನೆ ಮಾಡಿ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಂತಹವರು. ಅವರು ಪ್ರಾಮಾಣಿಕರಷ್ಟೇ ಅಲ್ಲ, ನಿಸ್ವಾರ್ಥಿಗಳು ಮತ್ತು ಹೋರಾಟದಲ್ಲಿ ಕುಗ್ಗದೆ ಜಗ್ಗದೆ ನಡೆಯತಕ್ಕ ವ್ಯಕ್ತಿಯಾಗಿದ್ದರು.

ಕೆ.ಎಂ. ನಾಗಣ್ಣ (ಕಬ್ಬನ್ಪೇಟೆ)

ಸಮಾಜವಾದದಲ್ಲಿ ತಮಗೆ ನಂಬಿಕೆ ಇದೆ ಎಂದು ಹೇಳತಕ್ಕ ಜನರು ಇಂದು ಬಹಳವಾಗಿ ಇದ್ದೇವೆ. ಆದರೆ, ಎಷ್ಟು ಜನರು ಅದನ್ನು ತಮ್ಮ ಜೀವನದಲ್ಲಿ ಶ್ರೀ ಗೋಪಾಲಗೌಡರು ಅನುಷ್ಠಾನಕ್ಕೆ ತಂದ ಹಾಗೆ ತಂದಿದ್ದರು ಎಂಬುದನ್ನು ನೋಡಿದಾಗ, ಅದನ್ನು ಆಚರಣೆಯಲ್ಲಿ ತಂದಿದ್ದವರು ಬಹಳ ವಿರಳ ಎನ್ನಬೇಕು. ಆದರೆ, ಶ್ರೀ ಗೋಪಾಲಗೌಡರು ನಾನು ಮಡಿವಂತೆ ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದುದಕ್ಕೆ ಸರಿಯಾಗಿ ಅವರು ನಡೆಯುತ್ತಿದ್ದುದನ್ನು ನಾವೆಲ್ಲರೂ ನೋಡಿದ್ದೇವೆ. ದಿವಂಗತ ಗೋಪಾಲಗೌಡರಿಗೆ ದೇಶದಲ್ಲಿ ನಡೆಯುತ್ತಿದ್ದ ಅನೇಕ ಚಳುವಳಿಗಳಲ್ಲಿ ಯಾವುದು ನ್ಯಾಯ ಎಂಬುದಾಗಿ ಅವರಿಗೆ ಕಂಡುಬರುತ್ತಿತ್ತೋ ಅಂಥಾ ಚಳುವಳಿಯಲ್ಲಿ ಅವರು ಭಾಗವಹಿಸದೆ ಇರುತ್ತಿರಲಿಲ್ಲ. ಉದಾಹರಣೆಗೆ ಹೇಳುವುದಾದರೆ ಹಿಂದೆ ೧೯೬೭ರಲ್ಲಿ ನಾವು ನಮ್ಮ ಬೆಂಗಳೂರು ನಗರದಲ್ಲಿ ಒಂದು ಚಳುವಳಿಯನ್ನು ನಡೆಸಿದೆವು. ಆ ಚಳುವಳಿಯಲ್ಲಿ ಕೂಡ ಶ್ರೀ ಗೋಪಾಲಗೌಡರು ಎರಡು ದಿವಸ ಭಾಗವಹಿಸಿದ್ದರು. ಅವರು, “ನಾನು ಬೆಂಗಳೂರು ನಗರ ಕ್ಷೇತ್ರದಿಂದ ಚುನಾಯಿತನಾಗಿ ಬಂದ ಸದಸ್ಯನಲ್ಲ. ನಾನು ತೀರ್ಥಹಳ್ಳಿಯಿಂದ ಚುನಾಯಿತನಾದ ಸದಸ್ಯ’’ ಎಂದು ಹೇಳದೆ ಕಾಗೋಡು ಸತ್ಯಾಗ್ರಹದಲ್ಲಿ ಹೇಗೆ ಭಾಗವಹಿಸಿದ್ದರೋ ಹಾಗೆಯೇ ನಮ್ಮ ಚಳುವಳಿಯಲ್ಲೂ ಭಾಗವಹಿಸಿದ್ದರು. ಅದಕ್ಕಾಗಿ ಈ ದಿವಸ ನಮ್ಮ ಬೆಂಗಳೂರಿನ ಎಲ್ಲಾ ನಾಗರೀಕರೂ ಅವರ ನಿಧನಕ್ಕಾಗಿ ಅಪಾರವಾಗಿ ನೊಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನೀಯಲಿ, ಅವರ ಕುಟುಂಬಕ್ಕೆ ಈ ಸಂಕಟವನ್ನು ಭರಿಸಲು ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.