ಹಳೇ ಮೈಸೂರಿನ ಮಲೆನಾಡು ಭಾಗದಲ್ಲಿ ಗಿರಿಕಂದರಗಳಿಂದ ಕೂಡಿದ ಸುಂದರವಾದ ಊರು ತೀರ್ಥಹಳ್ಳಿ; ಈ ಕ್ಷೇತ್ರದಲ್ಲಿ ವ್ಯವಸಾಯಿಗಳೇ ಬಹುಸಂಖ್ಯಾತರು; ಬತ್ತದ ಗದ್ದೆಗಳಲ್ಲಿ ಶ್ರಮವಹಿಸಿ ದುಡಿದು ಜೀವಿಸುವ ಸಮುದಾಯ. ಈ ಸಮುದಾಯದ ಒಡಲಲ್ಲಿ ಜನ್ಮ ತಳೆದ ನಿಜವಾದ ಮಲೆನಾಡ ಮಣ್ಣಿನ ಮಗ ಗೋಪಾಲ.

ಸ್ವಾತಂತ್ರ ಹೋರಾಟದ ಹಾಗೂ ಅದರಲ್ಲಿ ಸಮಾಜವಾದಿಗಳು ವಹಿಸಿದ ಪಾತ್ರದಿಂದ ತುಂಬಾ ಪ್ರಭಾವಿತಗೊಂಡ ವ್ಯಕ್ತಿ ಈ ಗೋಪಾಲ. ಬ್ರಿಟಿಷರ ಶಕ್ತಿ ಕುಂದಿ ಸ್ವಾತಂತ್ರ ಪಡೆಯುವ ದಿನ ಹತ್ತಿರವಾಗುತ್ತಿದ್ದಂತೆಯೇ ಭಾರತ ಸಂಘರಾಜ್ಯದಲ್ಲಿ, ವಿಲೀನ ಹಾಗೂ ಜನತೆಯ ಜನತಂತ್ರಾತ್ಮಕ ಹಕ್ಕುಗಳಿಗಾಗಿ ಹೋರಾಟ ಹುಟ್ಟಿಕೊಂಡಿತು. ರಾಜಶಾಹಿಯ ವಿರುದ್ಧ ಹೋರಾಟದಲ್ಲಿ ಯುವಸಮಾಜವಾದಿ ಗೋಪಾಲ ಸಕ್ರಿಯ ಪಾತ್ರವಹಿಸಿದ.

ಗೋಪಾಲ ಮತ್ತು ಅವರ ಸಹಚರರು ಜನತೆಯ ನಡುವೆ ಇದ್ದು ನಡೆಸಿದ ಅವಿರತ ಹೋರಾಟದಿಂದಾಗಿ ಶಿವಮೊಗ್ಗ ಜಿಲ್ಲೆ ಸಮಾಜವಾದಿ ಚಳವಳಿಯ ಒಂದು ಪ್ರಬಲ ಕೇಂದ್ರವಾಗಲು ಸಾಧ್ಯವಾಯಿತು.

ಈ ಭಾಗದ ಕೃಷಿಯು ಸಂಪೂರ್ಣವಾಗಿ ಭೂಮಾಲೀಕರ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿತ್ತು. ರೈತಾಪಿ ಜನರನ್ನು ದಯೆ ದಾಕ್ಷಿಣ್ಯವಿಲ್ಲದೇ ಶೋಷಣೆ ನಡೆಸುತ್ತಿದ್ದರು. ಈ ಶೋಷಕರಿಗೆಲ್ಲ ಕಾಂಗ್ರೆಸ್ ಪಕ್ಷದ್ದೇ ಆಶ್ರಯ. ಗೋಪಾಲ ಎರಡು ರಂಗಗಳಲ್ಲಿ ತನ್ನ ಹೋರಾಟ ನಡೆಸಬೇಕಾಯ್ತು. ಒಂದು ಭೂಮಾಲಿಕರ ದಬ್ಬಾಳಿಕೆ, ಶೋಷಣೆ ವಿರುದ್ಧ; ಇನ್ನೊಂದು ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ.

೧೯೪೯ರ ಪಟನಾ ಸಮಾಜವಾದೀ ಸಮ್ಮೇಳನದಲ್ಲಿ ಡಾ. ರಾಮಮನೋಹರ ಲೋಹಿಯಾ ಅವರು ಪ್ರಸಿದ್ಧ ‘ಬಡೇ ಚಲೋ’ ನಿರ್ಣಯವನ್ನು ಮಂಡಿಸಿದರು. ಇದು ವ್ಯಾಪಕ ಹೋರಾಟಕ್ಕೆ ಇತ್ತ ಕರೆಯಾಗಿದ್ದಿತು. ಕೃಷಿ ಕ್ಷೇತ್ರದಲ್ಲಿಯೇ ಮಹತ್ವದ ಈ ಹೋರಾಟ ನಡೆಯಬೇಕಿತ್ತು. ಹಿಂದ್ ಕಿಸಾನ್ ಪಂಚಾಯತ್ ಹೆಸರಿನಲ್ಲಿ ರೈತ ಜನರ ಬೃಹತ್ ಸಂಘಟೆಯೊಂದನ್ನು ಕಟ್ಟಲಾಯಿತು. ಲೋಹಿಯಾ ಅವರೇ ಸಂಘಟನೆಯ ಅಧ್ಯಕ್ಷ. ರಾಮನಂದನ ಮಿಶ್ರಾ ಪ್ರದಾನ ಕಾರ್ಯದರ್ಶಿ. ಭೂಮಾಲೀಕತ್ವ, ಬೆನ್ನು ಮುರಿಯುವಂಥ ಸಾಲದ ಹೊರೆ ಹಾಗೂ ಅಪಾರ ಕಂದಾಯದ ವಿರುದ್ಧ ಹೋರಾಟಕ್ಕೆ ಈ ಸಮ್ಮೇಳನದಲ್ಲಿ ಕರೆ ನೀಡಲಾಯಿತು. ಶಿವಮೊಗ್ಗ ಜಿಲ್ಲೆಯ ಕಾಗೋಡು ರೈತರ ಹೋರಾಟದ ಒಂದು ಪ್ರಮುಖ ಕೇಂದ್ರವಾಯಿತು. ಈ ಹೋರಾಟದಲ್ಲಿ ಡಾ. ಲೋಹಿಯಾ ಹಾಗೂ ರಾಮನಂದನ ಮಿಶ್ರಾ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದವರು ಗೋಪಾಲ ಮತ್ತು ಅವರ ಸಂಗಡಿಗರು. ಗೋಪಾಲನ ಹೋರಾಟದ ಬದುಕಿನಲ್ಲಿ ಅದೊಂದು ಪ್ರಮುಖ ಘಟನೆಯಾಯಿತು; ಆತ ಮತ್ತೆಂದೂ ಹಿಂದೆ ತಿರುಗಿ ನೋಡಲಿಲ್ಲ, ಹೋರಾಡುತ್ತಾ ಮನ್ನುಡೆದ. ಅಲ್ಲಿಂದ ಮುಂದೆ ನಡೆದ ಜನತಾ ಹೋರಾಟಗಳಲ್ಲಿ ಗೋಪಾಲ ಅನೇಕ ಬಾರಿ ಜೈಲು ಕಾಣಬೇಕಾಯ್ತು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೋಪಾಲ ಮೈಸೂರು ವಿಧಾನ ಸಭೆಗೆ ಆಯ್ಕೆಯಾದ. ಆತ ಅತ್ಯುತ್ತಮ ಸಂಸದೀಯ ಪಟುವಾಗಿದ್ದ. ಕನ್ನಡದಲ್ಲಿ ಅಮೋಘ ಭಾಷಣಕಾರ. ವೃಥಾ ಖರ್ಚುವೆಚ್ಚ, ಆಡಳಿತದಲ್ಲಿನ ಭ್ರಷ್ಟಾಚಾರ ಮತ್ತು ದಬ್ಬಾಳಿಕೆ ವಿರುದ್ಧ ಸತತ ಹೋರಾಟ ನಡೆಸಿದ ಧೀರ. ಆಗಿನ ಮುಖ್ಯಮಂತ್ರಿ ಕೆ. ಹನುಮಂತಯ್ಯನವರು ಭಾರೀ ವಿಧಾನ ಸೌಧವನ್ನು ಕಟ್ಟಿಸಲು ಆರಂಭಿಸಿದಾಗ ಗೋಪಾಲ ಈ ‘ಶಿಲ್ಪ ದುಂದುಗಾರಿಕೆಯನ್ನು’ ಪ್ರತಿಭಟಿಸಿದ.

ವೃಥಾ ಖರ್ಚುವೆಚ್ಚದ ವಿರುದ್ಧ ಸಮಾಜವಾದಿಗಳು ನಡೆಸಿದ ಹೋರಾಟಕ್ಕೆ ಜನ ಕೋಪಗೊಳ್ಳುತ್ತಿದ್ದರು. ಆದರೆ, ಸಮಾಜವಾದಿಗಳು ಹೋರಾಟವನ್ನು ನಿಲ್ಲಿಸುತ್ತಿರಲಿಲ್ಲ. ಮೈಸೂರು ನಗರದಲ್ಲಿ ಮಹಾರಾಜರ ನೇತೃತ್ವದಲ್ಲಿ ದಸರಾವನ್ನು ಸಂಭ್ರಮದಿಂದ, ವೈಭವದಿಂದ ಆಚರಿಸಲಾಗುತ್ತಿತ್ತು. ಸ್ವರಾಜ್ಯದ ಬಳಿಕವೂ ಈ ಪರಿಪಾಠ ಮುಂದುವರಿಯಿತು. ಈ ಯಜಮಾನಿಕೆ ಪ್ರವೃತ್ತಿಯನ್ನು ಕಂಡು ಗೋಪಾಲ ಮತ್ತವರ ಸ್ನೇಹಿತರಿಗೆ ಸಹಿಸಲಾಗಲಿಲ್ಲ. ಪ್ರತಿವರ್ಷವೂ ದಸರಾ ವೇಳೆಯಲ್ಲಿ ಗೋಪಾಲ ಮತ್ತು ಅವನ ಸ್ನೇಹಿತರು ಪ್ರತಿಭಟನೆ ವ್ಯಕ್ತಪಡಿಸುತ್ತಲೇ ಇದ್ದರು. ಒಮ್ಮೆ ಜನ ತಿರುಗಿಬಿದ್ದು ಗೌಡ ಮತ್ತು ಗೆಳೆಯರನ್ನು ಚೆನ್ನಾಗಿ ಥಳಿಸಿದರು. ಅನೇಕರು ವಕ್ರವೆಂದು ಕರೆಯುವ ಇಂಥ ಮನೋಭಾವ ಗೋಪಾಲನ ವ್ಯಕ್ತಿತ್ವದ ಖುಷಿ ಕೊಡುವ ಅಂಶಗಳಾಗಿದ್ದವು.

ಐವತ್ತರ ದಶಕದ ಮಧ್ಯಭಾಗದಲ್ಲಿ ಸಮಾಜವಾದಿ ಚಳವಳಿಯನ್ನು ಅಪ್ಪಳಿಸಿದ ಭಾರೀ ವಿವಾದದಲ್ಲಿ ಗೋಪಾಲ ಡಾ. ಲೋಹಿಯಾ ಅವರನ್ನು ಪೂರ್ಣ ಬೆಂಬಲಿಸಿದ. ಲೋಹಿಯಾ ಸ್ಮರಣಾರ್ಥ ರಚಿಸಿದ ದತ್ತಿಗೆ ಅವನು ಅಧ್ಯಕ್ಷ ಕೂಡ.

ಸಮರ್ಪಣ ಮನೋಭಾವ, ಧೈರ್ಯ, ಋಜುತ್ವ ಆತನಲ್ಲಿ ಮನೆಮಾಡಿದ್ದವು. ಗೋಪಾಲ ಅಪರೂಪದ ರಾಜಕಾರಣಿ, ಗೋಪಾಲನ ಇಡೀ ಜೀವನ ಹೋರಾಟದಿಂದಲೇ ತುಂಬಿದ್ದರೂ ಆತ ಕೇವಲ ರಾಜಕೀಯಜೀವಿಯಾಗಿರಲಿಲ್ಲ; ಅವನ ವ್ಯಕ್ತಿತ್ವ ವೈವಿಧ್ಯದಿಂದ ಕೂಡಿದ್ದಿತು. ಆತ ಸಂಗೀತಪ್ರಿಯ, ಸಾಹಿತ್ಯ, ಶಿಲ್ಪದಲ್ಲಿ ಆತನಿಗೆ ಅಪಾರ ಆಸಕ್ತಿ. ಸಂಗೀತವನ್ನು ಅಭ್ಯಾಸ ಮಾಡಿದ್ದನೋ ಇಲ್ಲವೋ, ಆದರೆ ಆತನ ದನಿ ತುಂಬಾ ಇಂಪಾಗಿತ್ತು. ಅವನ ಕಂಠದಿಂದ ಮನಮಿಡಿಸುವ ಸ್ವರ ಹೊರಡುತ್ತಿತ್ತು. ಇದರಿದಾಗಿ ಕರ್ನಾಟಕದ ಸಾಹಿತ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಗೋಪಾಲನಿಗೆ ಅನೇಕ ಸ್ನೇಹಿತರಿದ್ದುದು ಅಚ್ಚರಿಯೇನಲ್ಲ. ಗೋಪಾಲ ಹಳೆಯ ಮೈಸೂರಿನ ಉದಾತ್ತ ಸಂಸ್ಕೃತಿಯ ನಿಜವಾದ ಪ್ರತಿನಿಧಿಯಾಗಿದ್ದ. ಮೈಸೂರಿನ ತುಂಬುವಿಶ್ವಾಸ, ನಿಸರ್ಗ ಸೌಂದರ್ಯ, ಅದರ ಸಂಸ್ಕೃತಿ, ಶಿಲ್ಪಕಲೆಗೆ ನಾನು ಮಾರು ಹೋಗಿದ್ದೇನೆ. ಮೈಸೂರಿನ ಸಂಸ್ಕೃತಿ, ಅಲ್ಲಿನ ಜನರನ್ನು ಕಂಡು ಪುಲಕಿತನಾಗಿದ್ದೇನೆ.

ಇಷ್ಟು ವರ್ಷಗಳಲ್ಲಿ ನಾನು ಮೈಸೂರಿಗೆ ಅನೇಕ ಬಾರಿ ಹೋಗಿದ್ದೇನೆ. ಕರ್ನಾಟಕದ ಈ ಪ್ರವಾಸಗಳಲ್ಲಿ ಗೋಪಾಲ ಯಾವಾಗಲೂ ನನ್ನ ಜತೆ ಇರುತ್ತಿದ್ದ. ರಾಜಕೀಯ ಕೆಲಸಗಳೇ ಅಲ್ಲದೆ ಅಲ್ಲಿನ ಶಿಲ್ಪಸೌಂದರ್ಯ, ನೀಲಪರ್ವತಗಲು, ಕಾಡು ಮೇಡುಗಳು ಮತ್ತು ನದಿ ಜಲಪಾತಗಳನ್ನು ಕಂಡು ಕಣ್ಣಿಗೆ ಹಬ್ಬವನ್ನು ಮಾಡಿಕೊಂಡಿದ್ದೇವೆ. ಈ ಪ್ರವಾಸಗಳಿಂದಾಗಿ ನಾನು ಗೋಪಾಲನ ಹೃದಯ ವೈಶಾಲ್ಯ, ಆತ್ಮೀಯತೆ, ಪ್ರಾಮಾಣಿಕತೆ ತುಂಬಿತುಳುಕುವ ಭಾವನೆಗಳನ್ನು ಕಂಡು ವಿಸ್ಮಿತನಾಗಿದ್ದೇನೆ. ಶಿವಮೊಗ್ಗ ಮತ್ತು ತೀರ್ಥಹಳ್ಳಿಗಳಲ್ಲಿ ಪ್ರವಾಸ ಕಾಲದಲ್ಲಿ ಗೋಪಾಲ ಮತ್ತು ಆ ಪ್ರದೇಶದ ರೈತರ ನಡುವೆ ಇರುವ ಸಂಬಂಧ ಮತ್ತು ಆತ್ಮೀಯತೆಯನ್ನು ಅರಿತುಕೊಂಡಿದ್ದೇನೆ. ಗೋಪಾಲ ಜನರೊಡನೆ ಬೆರೆತು ಅವರೊಡನೆ ಒಂದಾಗಿ ಅವರಲ್ಲಿ ಒಬ್ಬನಾಗಿದ್ದ. ಆತನಿಗೆ ನಾನು ಎಂದು. ನೀಡಬಹುದಾದ ಪ್ರಶಸ್ತಿ ‘ಲೋಕಪ್ರಿಯ ಧುರೀಣ’.