ಗೋಪಾಲನ ಸ್ನೇಹದ ಸವಿನೆನಪು ಸುಮಧುರ ಜೇನು. ಆತ್ಮೀಯತೆಯ ಸೌರಭ. ನಮ್ಮಿಬ್ಬರ ನಂಟು ೧೯೫೦ಕ್ಕಿಂತಲೂ ಹಿಂದಿನದು. ಒಮ್ಮೆ ತೀರ್ಥಹಳ್ಳಿಯ ರಾಮಮಂದಿರದಲ್ಲಿ ನನ್ನ ಸಂಗೀತ ಕಛೇರಿ, ಅಂದಿನ ಅಧ್ಯಕ್ಷತೆ ಗೋಪಾಲನದೆ. ಅಂದು ಸಂಗೀತದ ಬಗ್ಗೆ ಪಾಂಡಿತ್ಯಪೂರ್ಣವಾಗಿ ಆತ ಮಾತನಾಡಿದ. ಕಾಳಿಂಗರಾಯರು ನಮ್ಮ ನಾಡಿನ ಹೆಮ್ಮೆಯ, ಗಾನಗಂಧರ್ವ ಎಂದು ಪ್ರಶಂಸಿಸಿದ. ಆತನಿಗೆ ಸಂಗೀತದಲ್ಲಿ ಅಪಾರ ಹುಚ್ಚು. ಆ ಬಗ್ಗೆ ಆತನದು ಸದಭಿರುಚಿ. ಎಂದೂ ಸಂಗೀತಕ್ಕೆ ಮಾರುಹೋದ ಸಂಸ್ಕಾರಯುತ ಚೇತನ. ಈ ಸಂಗೀತ ಪ್ರೇಮ ನಮ್ಮಿಬ್ಬರನ್ನು ನಿರಂತರವಾಗಿ ಬಂಧಿಸಿತು. ಸ್ನೇಹ ಗಾಢವಾಯಿತು. ಆ ಸಲುಗೆಯಿಂದ ಒಂದಾಗಿ ಬೆರೆತು ಬಾಳಿದೆವು. ಕಷ್ಟದಲ್ಲೂ ಸುಖವನ್ನು ಕಂಡೆವು. ಸಂಗೀತದಲ್ಲಿ ಮುಳುಗಿ ಮೈಮರೆತೆವು.

ಗೋಪಾಲ ಭಾವಜೀವಿಯಂತೆ ಬುದ್ಧಿಜೀವಿಯೂ ಆಗಿದ್ದ. ಆತನ ಮನಸ್ಸು ಪರಿಪಕ್ವತೆಯಿಂದ ಬಿರಿದಿತ್ತು. ಆತ ಸ್ವಾತಂತ್ರ್ಯದ ಧ್ರುವತಾರೆಯನ್ನೇ ದಿಟ್ಟಿಸುವ ಸ್ವಾತಂತ್ರ್ಯ ಪ್ರೇಮಿ ಮಾತ್ರವಾಗಿರಲಿಲ್ಲ ಅದನ್ನು ಸಂರಕ್ಷಿಸುವ, ಸುತ್ತಲೂ ಕವಿದಿದ್ದ ಅಂಧಕಾರದ ನಿವಾರಣೆಯ ಅರಿವೂ ಆತನಿಗೆ ಇತ್ತು. ಸಮಾನತೆಗೆ ಅಡ್ಡಿಯಾಗಿ ಬಂಡೆಯಂತೆ ಅಚಲವಾಗಿ ನಿಂತಿದ್ದ ಜನರ ಅಜ್ಞಾನ, ಮೌಢ್ಯ, ಶೋಷಣೆ, ಸ್ವಾರ್ಥ ಮುಂತಾದ ದುರ್ಗುಣಗಳ ಬೇರುಗಳನ್ನು ಕೀಳಲು ಅನವರತ ಚಿಂತಿಸುತ್ತಿದ್ದ. ಅದಕ್ಕಾಗಿ ಶಕ್ತಿ ಸಂಚಯವನ್ನು ಮಾಡುತ್ತಿದ್ದ. ಬುದ್ಧಿಯನ್ನು ಸದಾ ಸಾಣೆಹಿಡಿಯುತ್ತಿದ್ದ. ಆತನದು Stubern and Study Mind ಸಾಹಿತ್ಯದ ಸನ್ನಿಧಿಯಲ್ಲಿ ಮುಳುಗೆದ್ದು ಬಂದು, ಒಂದು ಅಪೂರ್ವ ವಿಚಾರಜಾಗೃತಿಯ ವರ್ಚಸ್ಸಿಗೆ ಒಳಗಾಗಿ ಬಂದವ. ಪಂಪ-ರನ್ನರಂಥ ಕಾವ್ಯಗಳನ್ನು ಚೆನ್ನಾಗಿ ಅರಗಿಸಿಕೊಂಡಿದ್ದ. ರನ್ನ ಕವಿಯ ಬಗ್ಗೆ ಆತನಿಗೆ ಅಪಾರ ಹೆಮ್ಮೆ. ಕವಿಯ ಆತ್ಮಪ್ರತ್ಯಯದ ಅಗ್ಗಳಿಕೆ ಈತನದ್ದು. ಕುಮಾರವ್ಯಾಸ ಆತನ ಪ್ರಿತಯ ಕವಿ. ಈ ಕವಿಯ ಪದ್ಯಗಳು ಎನಿತೋ ಬಾಯಿಪಾಠ; ಸೊಗಸಾಗಿ ಹಾಡುತ್ತಲೂ ಇದ್ದ. ಹರಿಶ್ಚಂದ್ರಕಾವ್ಯ ಜೈಮಿನಿಭಾರತವನ್ನು ಭಾವಪೂರ್ಣವಾಗಿ ಓದುತ್ತಿದ್ದ. ಹೀಗೆ ಆತ ಸಾಹಿತ್ಯದಿಂದ ತನ್ನ ಹೃತ್‌ಪಾತ್ರೆಯನ್ನು ತುಂಬಿಸಿಕೊಂಡಿದ್ದ. ಭಾವಗೀತೆಗಳಿಗೆ ಮನಸೋತಿದ್ದ. ಕ್ರಾಂತಿಗೀತೆಗಳನ್ನು ಸ್ಫೂರ್ತಿಯುಕ್ಕುವಂತೆ ವಾಚಿಸುತ್ತಿದ್ದ. ಬೇಂದ್ರೆಯವರ ಕುರುಡು ಕಾಂಚಾಣವನ್ನು ಭಾವ ತುಂಬಿ ಹಾಡುವಾಗ ನಾನೇ ಹೇಳುತ್ತಿದ್ದೆ. ‘ನನಗಿಂತ ನೀನೇ ಚೆನ್ನಾಗಿ ಹಾಡಿತ್ತೀಯಾ’ ಎಂದು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಗಂಗಾವತರಣ’ ಎಲ್ಲರಂತೆ ಆತನಿಗೂ ಹೆಚ್ಚು ಪ್ರಿಯ. ಹೀಗೆ ಸಂಗೀತ ಆತನಿಗೆ ಪಂಚಪ್ರಾಣ. ಎಲ್ಲಾದರೂ ಒಳ್ಳೆಯ ಸಂಗೀತ ಕಛೇರಿಯಿದ್ದರೆ ಹೋಗುತ್ತಿದ್ದೆವು. ಒಟ್ಟಿನಲ್ಲಿ ಆತನ ಸಂಗೀತ ಕಲೆಯ ಬಗೆಗಿನ ಅನನ್ಯ ಪ್ರೇಮ ಅಸಾಧಾರಣವಾದುದು. ಆತನಿಗೆ ಸಂಗೀತದ ಎಲ್ಲ ಪ್ರಕಾರಗಳ ಪರಿಜ್ಞಾನವಿತ್ತು. ಆದರೆ ಶಾಸ್ತ್ರೀಯ ಅಧ್ಯಯನ ನಡೆಸಿದ್ದನೆಂದು ಹೇಳಲಿಕ್ಕಾಗದು.

ಆತ ಸಾಹಿತ್ಯ-ಸಂಗೀತ ಪ್ರೇಮದಿಂದ ಬದುಕನ್ನು ಅರಳಿಸಿಕೊಂಡಿದ್ದು ಮಾತ್ರವಲ್ಲ; ಅದರಿಂದ ಕ್ರಾಂತಿಯನ್ನೂ ತರಬಯಸಿದ್ದ. ನಾಡಿನಲ್ಲಿ ಕ್ರಾಂತಿಕಹಳೆ ಮೊಳಗಬೇಕು. ಹಳೆ ಮತ ತೊಲಗಿ ಹೊಸ ಮನುಜಮತ ಉದಯವಾಗಬೇಕು. ಹೊಸನಾಡು ಕಟ್ಟುವ ಬಯಕೆಯ ಬೀಜ ಬಿತ್ತರಿಸುವ ಬಯಕೆ ಹೊಂದಿದ್ದ. ಬದುಕಿನ ವಿಕಾಸ ಪಥಕ್ಕೆ ಸಾಹಿತ್ಯ-ಸಂಗೀತವನ್ನು ಬಳಸಿಕೊಳ್ಳುವ ಹುಚ್ಚು ಅವನದು. ಸಮಾಜದಲ್ಲಿ ಬದಲಾವಣೆಗೆ ಬಂಡಾಯಕ್ಕೆ ಕ್ರಾಂತಿಕಾರಿ ಭಾವನೆಯ ಕವಿತೆಗಳನ್ನು ಹಾಡಿಸುತ್ತಿದ್ದನು. ಅಂತೆಯೇ ಅವುಗಳನ್ನು ವಿಶ್ಲೇಷಣೆ ಮಾಡುವ ರೀತಿಯೂ ಚಂದ. ಆತ ಒಳ್ಳೆಯ ವಿಮರ್ಶಕ, ಆತನದು ತುಲನಾತ್ಮಕ ದೃಷ್ಟಿ. ಸಹೃದಯತೆಯಿಂದ ಸ್ವೀಕರಿಸುವ ಗುಣಸ್ವಬಾವ. ಕನ್ನಡದಲ್ಲೆಂತೋ ಅಷ್ಟೇ ಇಂಗ್ಲೀಷಿನಲ್ಲಿಯೂ ಪರಿಣತಿಯಿತ್ತು. ಆದರೆ ಎಂದೂ ಆತ ದೊಡ್ಡಸ್ತಿಕೆಗಾಗಿ ಇಂಗ್ಲೀಷ್ ಬಳಸಿದವನಲ್ಲ.

ಗೋಪಾಲ ಇತಿಹಾಸ ಚಕ್ರವನ್ನು ಹಿಂದಕ್ಕುರುಳಿಸುವ ಯಥಾಸ್ಥಿತಿವಾದಿಯಲ್ಲ. ದೂರ ದೃಷ್ಟಿಯುಳ್ಳ ವಾಸ್ತವವಾದಿ. ಆತ ಶೋಷಣೆಯಿಂದ ಮುಕ್ತವಾದ ಸುಂದರ ಸಮಾಜದ ಕನಸು ಕಂಡಿದ್ದ. ಅನಿಷ್ಟ ಶಕ್ತಿಗಳ ಮುಂದೆ ಪ್ರಚಂಡ ದಾಳಿ ನಡೆಸಿದ್ದ. ಅದಕ್ಕನುಗುಣವಾದ ಅದ್ಭುತ ಕ್ರಿಯಾಶಕ್ತಿಯೂ ಆತನಲ್ಲಿತ್ತು. ಒಮ್ಮೆ ನಾನು ಕೇಳಿದ್ದೆ. ಕಾಗೋಡು ಸತ್ಯಾಗ್ರಹಕೆಕ ನಿಜವಾದ ಕಾರಣವೇನು? ಎಂದು. ಆತ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಲು, ರೈತರ ಭೂಸಮಸ್ಯೆಗಿಂತ ಮಿಗಿಲಾಗಿ ಮಾನವೀಯತೆಗೆ ಕಳಂಕ ಬರುವ ಕ್ರೌರ್ಯ, ಹಿಂಸೆ, ಅಮಾನುಷ ವರ್ತನೆವಿರುದ್ಧ ಆತ ಬಂಡಾಯ ಹೂಡಿದ್ದ. ಆ ಜಮೀನ್ದಾರರ ಮುಂದೆ ಒಕ್ಕಲು ಮಕ್ಕಳು ಒಂದು ಒಳ್ಳೆಯ ಬಟ್ಟೆ, ಚಪ್ಪಲಿ ಹಾಕುವಂತಿರಲಿಲ್ಲ; ಹೆಂಗಸರು ರವಕೆಯನ್ನೂ ತೊಡುವಂತಿರಲಿಲ್ಲವಂತೆ. ಅದು ಗುಲಾಮತನದ ಸಂಕೇತವಾಗಿತ್ತು. ಇದು ನನ್ನ ಹೋರಾಟದ ಚಾಲನೆಗೆ ಇಂಬುಕೊಟ್ಟ ಒಳ-ತಿರುಳು-ಎನ್ನುತ್ತಿದ್ದ. ಹೀಗೆ ಅನ್ಯಾಯ ಎಲ್ಲಿಯೇ ನಡೆಯಲಿ ಅದಕ್ಕಾಗಿ ಆತನ ಮನಸ್ಸು ಕುದಿಯುತ್ತಿತ್ತು ಮತ್ತು ತಕ್ಷಣ ಪ್ರತಿಭಟಿಸುತ್ತಿತ್ತು.

ಗೋಪಾಲನಂಥ ಕನ್ನಡ ಪ್ರೇಮಿ ರಾಜಕಾರಣದಲ್ಲಿ ವಿರಳ. ನಮ್ಮಲ್ಲಿ ಕನ್ನಡದ ಹುಚ್ಚು ನೆತ್ತಿಗೇರಿದ್ದ ಕಾಲ. ವಿಶಾಲ ಕರ್ನಾಟಕದ ಬಗ್ಗೆ ವಿಶೇಷವಾಗಿ ಕನಸು ಕಾಣುತ್ತಿದ್ದ ಕಾಲ. ಒಮ್ಮೆ ಗೋಪಾಲನ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಿದ್ಧತೆ ನಡೆಯಿತು. ಪುರಭವನದಲ್ಲಿ ಸಮಾರಂಭ; ನನ್ನದೇ ಪ್ರಾರ್ಥನೆ. ಗಂಗಾವತರಣವನ್ನೇ ಹಾಡಿದೆ. ಸಮಾರಂಭ ಮುಗಿದ ಮೇಲೆ ಗೋಪಾಲ ನನ್ನನ್ನು ಭಾವಪರವಶತೆಯಿಂದ ತಬ್ಬಿಕೊಂಡು, ರಾಯರೆ, ಇಂದು ನೀವು ಹಾಡಿದ ರೀತಿ, ಆದ ಪರಿಣಾಮ ಅದ್ಭುತವಾದುದೆಂದು ಸಂತೋಷಪಟ್ಟ. ಕನ್ನಡದ ಜಾಗೃತಿಗಾಗಿ ಒಂದು ಯುವಜನ ಸೇನೆಯನ್ನೇ ಹುಟ್ಟುಹಾಕಿದ ಕನ್ನಡದ ಸೇನಾನಿ ಆತ. ಗೋಪಾಲನ ದೇಶಭಕ್ತಿ, ನಾಡಪ್ರೇಮ ಅನುಕರಣೀಯವಾದುದು. ಅಂಥ ಮೇಧಾವಿ, ದೂರ ದೃಷ್ಟಿಯ ಧೀಮಂತ ರಾಜಕಾರಣಿ ಇನ್ನೊಬ್ಬ ಇದ್ದಾನೆಯೇ? ಆಗಾಗ ಕನ್ನಡಿಗರ ಭಾಷಾ ಅಭಿಮಾನಶೂನ್ಯತೆಯನ್ನು ಕಂಡು ಕೆರಳುತ್ತಿದ್ದ; ಹೇಡಿತನವನ್ನು ಖಂಡಿಸುತ್ತಿದ್ದ.

ಆತನದು ಸೂಕ್ಷ ಸ್ವಭಾವ; ಅವನ ಮನಸ್ಸು ಎಲ್ಲೋ ಇರುತ್ತಿತ್ತು. ಏನೋ ಆಲೋಚಿಸುತ್ತಿದ್ದ. ಇದೇ ಆತನ ವಿಶಿಷ್ಟತೆ. ಸದಾ ಚಿಂತನಪರತೆ. ಆತ ತನ್ನ ಮನಸ್ಸನ್ನು ಕೇವಲ ರಾಷಕೆ, ನಾಡಿಗೆ ಮಾತ್ರ ಮೀಸಲಿಟ್ಟಿರಲಿಲ್ಲ. ಆತನದು ವಿಶ್ವವ್ಯಾಪಕವಾದ ದೊಡ್ಡ ಮನಸ್ಸು. ಉದಾರನೀತಿ, ಆತ ವಿಶ್ವಕುಟುಂಬಿ. ಇಡೀ ವಿಶ್ವದ ತುಮುಲವನ್ನೇ ತನ್ನ ತಲೆಯಲ್ಲಿ ತುಂಬಿಕೊಂಡಿದ್ದ. ಒಮ್ಮೆ ನಾನು ಆತನ ರೂಂನಲ್ಲಿ ಮಲಗಿದ್ದೆ. ಬೆಳಿಗ್ಗೆ ಎದ್ದು ಬೆಡ್ ಕಾಫಿ ಹೀರುತ್ತಿದ್ದ. ಆತ ರಾಯರೇ, ಕೆನಡಿ Kennedy shot dead ಎಂದ. ಆಗ ನಾನು ‘what’ ಎಂದೆ. ಇಬ್ಬರಿಗೂ shock!

Shock ಸುಧಾರಿಸಿಕೊಂಡು ಅದು ಹೇಗಾಯಿತು? ಏಕಾಯಿತು? ಎನ್ನುತ್ತಿದ್ದ. ಕೆನಡಿ ಸತ್ತರೆ ನಮಗ್ಯಾಕೆ ನೋವಾಗಬೇಕು? ಮತ್ತೊಂದು ಮರುಗಳಿಗೆಯಲ್ಲಿಯೇ ಆತನ ಮನಸ್ಸು ಮಲೆನಾಡಿನ ಮೂಲೆಯೊಂದಕ್ಕೆ ಹರಿಯುತ್ತಿತ್ತು. ತುಂಗಾನದಿಯಲ್ಲಿ ಮಾನಪ್ಪ ಬಿದ್ದು ಸತ್ತುಹೋದರಂತೆ! ಹೇಗೆ ಸತ್ತರು? ಅವರಿಗೆ ಈಜು ಬರುತ್ತಿತ್ತಲ್ಲ? ಹೀಗೆ ಆತನ ಮನಸ್ಸು ವಿಶ್ವವಿಹಾರಿಯಾಗಿರುತ್ತಿತ್ತು. ಆತನದು ಮನುಷ್ಯ ಗೌರವವನ್ನೇ ಆದರಿಕೊಂಡ ಮಾನವೀಯ ದೃಷ್ಟಿ. ಕೆಲವು ಸಲ ಸುಮ್ಮನೆ ಶೂನ್ಯ ಮನಸ್ಕನಾಗಿಬಿಡುತ್ತಿದ್ದ. ಹೀಗೆ ಆತ ವಿಶ್ವ, ಸಮಾಜವಾದ, ಬಡಜನತೆ, ಮೂಢನಂಬಿಕೆ ಇಂಥ ವಿಚಾರಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಅದನ್ನೊಂದು ವಿಪ್ಲವದ ಕಡಲನ್ನಾಗಿಸಿಕೊಂಡಿದ್ದ. ದೇಹದ ಆರೋಗ್ಯದ ಬಗ್ಗೆ ನಿಗವನ್ನೇ ನೀಡದೆ ಮಾನವ ಕಲ್ಯಾಣದ ಬಗ್ಗೆಯೇ ಚಿಂತಿಸಿ, ಕೊರಗಿ, ಕರಗಿ ಹೋದ. ಆತ ಮನುಷ್ಯತ್ವದಲ್ಲಿ ಅತ್ಯುನ್ನತ ಶಿಖರವನ್ನೇರಿದ ಶ್ರೇಷ್ಠಮಾನವ.

ಗೋಪಾಲ ಬೆಂಕಿಯಂಥ ಮನುಷ್ಯ. ಆತ ಎಷ್ಟು ಸರಳ ಹೃದಯಿಯೋ ಅಷ್ಟೇ ಮುಂಗೋಪಿ. ಆತನಲ್ಲಿ ನವುರಾದ ಹಾಸ್ಯಪ್ರಿಯತೆಯಿತ್ತು. ಅಷ್ಟೇ ಸಿಡುಕೂ ಇತ್ತು. ಆತ ಸಿಟ್ಟುಗೊಂಡಾಗ ತುಂಬ ಲಕ್ಷಣವಾಗಿ ಕಾಣಿಸುತ್ತಿದ್ದ. ತುಂಬಾ ಸ್ವಾಭಿಮಾನಿ. ವಿಚಾರಶೀಲನಾಗಿ, ಔಚಿತ್ಯಪೂರ್ಣವಾಗಿ ಮಾತಾಡುತ್ತಿದ್ದ. ಒಮ್ಮೆ ಶಾಸನ ಸಭೆಯಲ್ಲಿ ಮುಖ್ಯಮಂತ್ರಿ ಜತ್ತಿಯವರು ಜೈಲು ಸುಧಾರಣೆಯ ಬಗ್ಗೆ ಹೇಳಿಕೆ ಕೊಡುತ್ತಿದ್ದರು. ಆಗ ಮಧ್ಯೆ ಗೋಪಾಲ ಎದ್ದು “ಸ್ವಾಮಿ, ತಾವು ಯಾವ ಜೈಲಿಗೆ ಹೋಗಿದ್ದಿರಾ?’’ ಎಂದರು. ಜತ್ತಿ ಬುದ್ಧಿವಂತರು, ‘ಇಲ್ಲ’ ಎಂದು ಕೂತುಬಿಟ್ಟರು. ಹೊರಗಡೆ ಬಂದಮೇಲೆ ನಾನು ಕೇಳಿದೆ. ‘ಇವತ್ತು ನಿಮ್ಮಿಬ್ಬರಿಗೂ ಮಾತಿನ ಚಕಮಕಿ ನಡೆಯುತ್ತದೆಂದು ತಿಳಿದಿದ್ದೆ’ ಎಂದೆ. ಆಗ ಆತ, ‘ಅಯ್ಯೋ ಅವರೆಂದೂ ಜೈಲಿಗೆ ಹೋಗಿಲ್ಲ: ಅದು ನನ್ಗೊತ್ತು. ಹೋಗಿದ್ದೆನೆಂದು ಹೇಳಿದ್ರೆ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಬುದ್ಧಿವಂತರು ಒಂದೇ ಮಾತಿನಲ್ಲಿ ಮುಗಿಸಿಬಿಟ್ಟರು ನಾನು ಏನು ಮುಂದೆ ಮಾತಾಡೋದು ಎಂದು ಸುಮ್ಮನಾಗಿಬಿಟ್ಟೆ’ ಅಂದ.

ತಾನು ನಂಬಿದ ಸಮಾಜವಾದಿ ತತ್ವಕ್ಕೆ ತನ್ನನ್ನು ಸಂಪೂರ್ಣವಾಗಿ ಆತ ಸಮರ್ಪಿಸಿಕೊಂಡುಬಿಟ್ಟ; ಪಕ್ಷದ ಬೆಳವಣಿಗೆಗೆ ಮುಡುಪಿಟ್ಟ. ಆತನದು ದಿಟ್ಟ ಧೀರ ಹೆಜ್ಜೆ. ಒಂಟಿಯಾಗಿದ್ದೂ ಕರ್ನಾಟಕದಲ್ಲಿ ಗಟ್ಟಿಯಾಗಿ ಪಕ್ಷವನ್ನು ಬೆಳೆಸಿದ. ಗಾಳಿ ಬಂದಹಾಗೆ ತೂರುವ ವ್ಯಕ್ತಿಯಾಗಿರಲಿಲ್ಲ. ಆತನಲ್ಲಿ ದೃಢತೆ, ಸ್ಥಿರತೆ, ಶಕ್ತಿ ಇತ್ತು. ಅಂಥ ರಾಜಕಾರಣಿ ಇನ್ನೊಬ್ಬನ್ನಿಲ್ಲ. ಆತ ಗಾಳಿಯನ್ನೂ ತಡೆದು ನಿಲ್ಲಿಸುವ ಧೀಮಂತ. ಆತನನ್ನು ಪಥಭ್ರಷ್ಟನನ್ನಾಗಿಸಲು ಅನೇಕರು ಹೆಣಗಿ ಹಣ್ಣಾಗಿದ್ದರು. ಆದರೆ, ಆತ ಎಂದೂ ವಿಚಲಿತನಾಗಲಿಲ್ಲ. ತುಂಬು ಛಲವಾದಿ. ಆತ ಇಂದು ಇದ್ದಿದ್ದರೂ ಏಕಮೇವಾದ್ವಿತೀಯ ವ್ಯಕ್ತಿಯಾಗಿರುತ್ತಿದ್ದನೇ ಹೊರತು ಪಕ್ಷಾಂತರಿಯಾಗುತ್ತಿರಲಿಲ್ಲ. ಆತ ಲೋಹಿಯಾಗೆ ಯೋಗ್ಯ ಶಿಷ್ಯ. ಗುರುವಿನ ಗುಣಗಳೇ ಈತನಲ್ಲೂ ಇದ್ದವು. ಆತ ನಂಬಿದಂತೆ ನಡೆದ. ಆತನದು ಪರ್ವತದಂಥ ವ್ಯಕ್ತಿತ್ವ. ಆತನನ್ನು ಬಣ್ಣಿಸಲು, ಹೋಲಿಸಲು ಸಾಧ್ಯವೇ?

ಗೋಪಾಲನ ಬದುಕಿನ ಘಟನೆಯನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಆತ ಹೇಳಿ ಕೇಳಿ ಕುಡಿದು ತಿನ್ನುವ ಜಾತಿಯವ; ಚಿಕ್ಕವನಾಗಿರುವಾಗ, ಒಮ್ಮೆ ಅಪ್ಪ-ಮಗ ಕೋಳಿ ಕತ್ತರಿಸಲು ದೈವದ ಬನಕ್ಕೆ ಹೋದರಂತೆ. ಈತನಿಗೆ ಕೋಳಿ ಹಿಡಿದುಕೊಳ್ಳಲು ಹೇಳಿ, ತಂದೆ ಕತ್ತನ್ನು ಹಿಡಿದು ಕತ್ತರಿಸಿದರಂತೆ. ಕೋಳಿಯ ಮುಂಡ ಮೇಲ್ಮಖವಾಗಿ ಕೊಸರಿಕೊಂಡಿತಂತೆ. ಆಗ ತಂದೆಯ ಮೈ-ಮುಖವೆಲ್ಲ ರಕ್ತವಾಯಿತಂತೆ. ಸಿಟ್ಟಿನಿಂದ ಅವರು ದನಬಡಿದಂತೆ ಆತನನ್ನು ಬಡಿದರಂತೆ. ರಾತ್ರಿ ಊಟಕ್ಕೆ ಅದನ್ನು ಬಡಿಸಿದಾಗ ಅದನ್ನು ಈತ ತಿನ್ನಲಿಲ್ಲ; ಅಂದಿನಿಂದ ಮಾಂಸಾಹಾರವನ್ನು ವರ್ಜಿಸಿದ. ಅಂದು ಬಿಟ್ಟವನು ಕೊನೆಯವರೆಗೂ ತಿನ್ನದೆ ನಿಷ್ಠೆ ಸಾಧಿಸಿದ. ದೇವರು-ದಿಂಡರ ಬಗ್ಗೆ ನಂಬಿಕೆ ಇಟ್ಟವನಲ್ಲ. ಬಡತನದಲ್ಲೂ ಚೆಲುವನ್ನು ಕಾಣುತ್ತಿದ್ದ. ಸರಳತೆಯಲ್ಲೂ ತೃಪ್ತಿಯನ್ನು ಕಾಣುತ್ತಿದ್ದ. ರಾಜಕಾರಣಿಯಲ್ಲಿ ಸತ್ಯ ಮತ್ತು ಸದ್ಗುಣಗಳು ಕಡಿಮೆ. ಆದರೆ, ಈ ನನ್ನ ಗೋಪಾಲ ಆ ಎರಡು ಗುಣಗಳಿಂದಲೂ ಪ್ರಬುದ್ಧ ರಾಜಕಾರಣಿಯಾಗಿ ಪ್ರಜ್ವಲಿಸುತ್ತಿದ್ದ. ಆತ ಸಮಾಜಸೇವೆಗಾಗಿಯೇ ಹುಟ್ಟಿ; ಸಮಾಜ ಸೇವೆಯಲ್ಲಿ ಕರಗಿ ಹೋದ ಧನ್ಯಜೀವಿ. ಅವನ ಬದುಕು ಶ್ರೀಗಂಧದ ಕೊರಡಿನಂತೆ; ಕಾಲ ಕಳೆದಂತೆ ಸುಗಂಧವನ್ನು ಚೆಲ್ಲಿಕೊಡುವ ವ್ಯಕ್ತಿತ್ವ. ಈಗಲೂ ಆತನ ಪ್ರೀತಿ ಪ್ರೇಮ ವಾತ್ಸಲ್ಯ ಮುತ್ತಿನಂಥ ನೇರ ಮಾತುಗಳು ಕಣ್ಮುಂದೆ ಹಸಿರಾಗಿ ನಿಲ್ಲುತ್ತಿವೆ.

ಗೋಪಾಲ ನಮ್ಮ ನಾಡಿನ ಆದರ್ಶ ಪುತ್ರ. ಆತನ ಮೈ-ಮನಸ್ಸಿನಲ್ಲೆಲ್ಲ ಈ ನಾಡಿನ ದೀನ ದಲಿತ ಶ್ರೀಸಾಮಾನ್ಯರೇ ನಲಿದಿದ್ದಾರೆ. ಅವನೊಬ್ಬ ಮಹಾವ್ಯಕ್ತಿ. ಇರುವಷ್ಟು ದಿವಸವೂ ಮಹತ್ವವನ್ನೇ ಇಟ್ಟುಕೊಂಡು, ಮಹತ್ವವನ್ನೇ ಉಳಿಸಿಕೊಂಡು, ಮಹತ್ವವಾಗಿಯೇ ಹೋದ. ಆತ ಹೋಗಿಲ್ಲ; ಆತ ಇನ್ನೂ ಇದ್ದಾನೆ. ಆತನ ನಶ್ವರ ದೇಹ ಮಾತ್ರ ಹೋಗಿದೆ. ವ್ಯಕ್ತಿಯ ಒಳಗಿನ ಭಾವನೆಗಳೂ ಇನ್ನೂ ಉಳಿದಿವೆ.