ಶಾಂತವೇರಿ ಗೋಪಾಲಗೌಡ ಕರ್ನಾಟಕ ಕಂಡ ಅಪರೂಪದ ಸಮಾಜವಾದಿ ಚಿಂತನೆಯ ಹೋರಾಟದ ರಾಜಕಾರಣಿ. ೧೯೨೩ ಮಾರ್ಚ್ ೧೪ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಶಾಂತವೇರಿಯ ಗೇಣಿದಾರ ರೈತ ಕುಟುಂಬದಲ್ಲಿ ಹುಟ್ಟಿದರು. ತಂದೆ: ಕೊಲ್ಲೂರಯ್ಯ ಗೌಡ; ತಾಯಿ: ಶೇಷಮ್ಮ. ಶಿವಮೊಗ್ಗದಲ್ಲಿ ಇಂಟರ್‌ ಮೀಡಿಯಟ್‌ವರೆಗೆನ ವಿದ್ಯಾಭ್ಯಾಸ. ವಿದ್ಯಾರ್ಥಿದೆಸೆಯಲ್ಲಿದ್ದಾಗಲೆ ನಾಯಕತ್ವದ ಗುಣಗಳನ್ನು ರೂಪಿಸಿಕೊಂಡಿದ್ದ ಗೋಪಾಲಗೌಡರು ೧೯೪೨ರ ‘ಕ್ವಿಟ್‌ ಇಂಡಿಯಾ’ ಚಳವಳಿಗೆ ದುಮುಕಿ ಜೈಲುವಾಸ ಅನುಭವಿಸಿದರು.

ಡಾ. ರಾಮಮನೋಹರ ಲೋಹಿಯಾ ಅವರ ನೆಚ್ಚಿನ ಶಿಷ್ಯರಾಗಿದ್ದ ಗೋಪಾಲಗೌಡರು, ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದ ಸಂಘಟನೆಗೆ ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ೧೯೫೧ರಲ್ಲಿ ನಡೆದ ಕಾಗೋಡು ರೈತ ಸತ್ಯಾಗ್ರಹ, ಸಮಾಜವಾದಿ ನಾಯಕರನ್ನಾಗಿ ರೂಪಿಸಿತು. ಕಾಗೋಡು ರೈತ ಸತ್ಯಗ್ರಹದ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಸಮಾಜವಾದಿ ಕಪಕ್ಷದ ನೇತೃತ್ವದಲ್ಲಿ ಭೂಹೀನ ಮತ್ತು ಕೃಷಿ ಕೂಲಿಕಾರರಿಂದ ಅನೇಕ ಹೋರಾಟಗಳು ಹುಟ್ಟು ಪಡೆದವು. ಕರ್ನಾಟಕ ಏಕೀಕರಣ, ರಾಜಧನ ರದ್ಧತಿ, ಭೂಸುಧಾರಣೆ, ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನ, ಗೋವಾ ವಿಮೋಚನೆ, ಕಾನೂನುಭಂಗ ಚಳವಳಿಗಳಲ್ಲಿ ಸಕ್ರಿಯ ಪಾತ್ರ; ಅನೇಕ ಸಾರಿ ಬಂಧನ. ಹೀಗೆ ಹೋರಾಟಗಳಿಂದಲೇ ರೂಪುಗೊಂಡ ವ್ಯಕ್ತಿತ್ವ ಶಾಂತವೇರಿ ಅವರದು.

೧೯೫೨ರಲ್ಲಿ ಸಾಗರ-ಹೊಸನಗರ ಕ್ಷೇತ್ರ, ೧೯೬೨ ಮತ್ತು ೧೯೭೭ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಒಟ್ಟು ಮೂರು ಸಲ ಶಾಸಕರಾಗಿ ಆಯ್ಕೆಯಾದರು. ಶಾಸನ ಸಭೆಯಲ್ಲಿ ಜನಭಾಷೆಯಲ್ಲಿ ಇಲ್ಲದ ರಾಜ್ಯಪಾಲರ ಇಂಗ್ಲಿಷ್‌ ಭಾಷಣದ ಪ್ರತಿಯನ್ನು ಹರಿದು ತುಳಿದಿದ್ದು, ಮಂತ್ರಿಮಾನ್ಯರ ಅವಿವೇಕ ಮತ್ತು ಅಪ್ರಮಾಣಿಕತೆಯನ್ನು ಸಹಿಸದೆ ನೈತಿಕ ಸಿಟ್ಟಿನಿಂದ ಮೈಕ್‌ ಮುರಿದೆಸೆದಿದ್ದು; ಮೈಸೂರು ದಸರಾ ವಿರೋಧಿಸಿದ್ದು – ಇವೇ ಮುಂತಾದ ಗೋಪಾಲಗೌಡರ ಸೈದ್ಧಾಂತಿಕ ಹೋರಾಟದ ಕೆಲವು ಚಿತ್ರಿಕೆಗಳು ನಾಡಿನ ನೆನಪಿನಲ್ಲಿ ಇಂದಿಗೂ ಉಳಿದಿವೆ. ತತ್ವನಿಷ್ಠ ರಾಜಕಾರಣದ ಪ್ರತಿರೂಪವಾಗಿದ್ದ ಶಾಂತವೇರಿಯವರು ೧೯೬೨ರಲ್ಲಿ ಡಾ. ರಾಮಮನೋಹರ ಲೋಹಿಯಾ ಅವರ ನಿಧನದ ನಂತರ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಸಾಹಿತ್ಯ, ಸಂಗೀತ, ಕಲೆಗಳ ಬಗ್ಗೆ ಅಪಾರ ಒಲವಿದ್ದ ಗೋಪಾಲಗೌಡರು ಅರವತ್ತರ ದಶಕದಲ್ಲಿ ‘ಮಾರ್ಗದರ್ಶಿ’ ಪತ್ರಿಕೆಯನ್ನು ಹೊರತಂದರು.

ಪಾರದರ್ಶಕ ಪ್ರಾಮಾಣಿಕತೆ, ತುಂಬು ಮಾನವಪ್ರೀತಿ ಮತ್ತು ನಿರ್ಭೀತಿಯ ಜಾಯಮಾನಕ್ಕೆ ಹೆಸರಾಗಿದ್ದ ಶಾಂತವೇರಿಯವರು ೧೯೭೨ರ ಜೂನ್‌ ೯ ರಂದು ತಮ್ಮ ನಲವತ್ತೊಂಬತ್ತನೇ ವಯಸ್ಸಿನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು.