ವಿಜಾಪೂರ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಸಂಗೀತ ದಿಗ್ಗಜರಲ್ಲಿ ಸಂಗೀತ ಶಿಕ್ಷಣ ಪಡೆದು, ಗಾಯನ ಹಾಗೂ ತಬಲಾ ವಾದನದಲ್ಲಿ ನಿಷ್ಣಾತರಾಗಿ ಮಹಾರಾಷ್ಟ್ರದ ಲಾತೂರಿನಲ್ಲಿ ನೆಲೆಸಿ, ಸಂಗೀತ ವಿದ್ಯಾಲಯ ಸ್ಥಾಪಿಸಿ ನೂರಾರು ಜನರಿಗೆ ಸಂಗೀತ ವಿದ್ಯೆ ನೀಡುತ್ತ ಕಲಾ ಸೇವೆ ಮಾಡುತ್ತಿರುವ ಪಂ. ಶಾಂತಾರಾಮ ಚಿಗ್ರಿಯವರು ಹಿಂದೂಸ್ಥಾನಿ ಸಂಗೀತವನ್ನು ಹೊರ ನಾಡಿನಲ್ಲಿ ಪ್ರಸಾರ ಮಾಡಿದ ಪ್ರಸಿದ್ಧ ಅಂಧ ಗಾಯಕರಲ್ಲೊಬ್ಬರು. ದಿನಾಂಕ ೧-೫-೧೯೩೦ ರಂದು ವಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿಗೆ ಸೇರಿದ ಖೈನೂರಿನಲ್ಲಿ ಶ್ರೀ ನೀರಗುಂಟೆಪ್ಪ ವೀರಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಶ್ರೀ ಶಾಂತಾರಾಮ ಚಿಗ್ರಿ ಅವರು ಹುಟ್ಟಿನಿಂದಲೇ ಅಂಧರು. ಸಾಮಾನ್ಯವಾಗಿ ಅಂಗವಿಕಲರನ್ನು ತಾಯಿ ಶಾರದೆ ಎಂದೂ ಕೈ ಬಿಡುವುದಿಲ್ಲ. ಅವರಲ್ಲಿ ಕಲಾ ಶ್ರೀಮಂತಿಕೆಯನ್ನು ಬೆಳೆಸಿ ಅವರ ಅಂತಃಚಕ್ಷುಗಳನ್ನು ತೆರೆಯಿಸುತ್ತಾಳೆ. ಹಾಗೇ ಶಾಂತಾರಾಮ ಚಿಗ್ರಿಯವರಲ್ಲಿ ಸುಪ್ತವಾಗಿದ್ದ ಸಂಗೀತ ಕಲೆ ಅವರ ಅಂಧತ್ವವನ್ನು ಮೀರಿ ನಿಂತಿತು. ಇವರ ಈ ಕಲೆಯ ಆಸಕ್ತಿಯನ್ನು ಕಂಡುಕೊಂಡ ತಂದೆ ತಾಯಿಗಳು ಅದನ್ನು ಪೋಷಿಸಿ, ನೀರೆರೆದು ಬೆಳೆಸಿದರು.

ಸಂಗೀತ ದಿಗ್ಗಜಗಳೆನಿಸಿದ ಪಂ. ವಿನಾಯಕರಾವ್‌ ಪಟವರ್ಧನ, ಪಂ. ನಾರಾಯಣರಾವ್‌ ವ್ಯಾಸ್‌, ಪಂ. ಓಂಕಾರನಾಥ್‌ ಠಾಕೂರ್, ಉಸ್ತಾದ್‌ ಅಹಮದ್‌ ಜಾನ್‌ ಥಿರಕ್ವಾ ಹಾಗೂ ಉಸ್ತಾದ್‌ ಬಡೇಗುಲಾಂ ಅಲಿಖಾನ್‌ ಮುಂತಾದವರಲ್ಲಿ ಶಿಷ್ಯತ್ವ ಮಾಡಿ ಅವರುಗಳ ಮಾರ್ಗದರ್ಶನದಲ್ಲಿ ಒಬ್ಬ ಸಂಗೀತ ಮೂರ್ತಿಯಾಗಿ ಕಡೆಯಲ್ಪಟ್ಟ ಚಿಗ್ರಿಯವರು ಪುಣೆ, ಮುಂಬೈ, ಹೈದ್ರಾಬಾದ್‌, ಲಾತೂರ್, ಬನಾರಸ್‌, ಅಲಹಾಬಾದ್‌ ಗ್ವಾಲಿಯರ್, ದೆಹಲಿ, ಗೋವಾ, ವೀರೇಶ್ವರ ಪುಣ್ಯಾಶ್ರಮ, ಗದಗ, ಮೈಸೂರು, ಬೆಂಗಳೂರುಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿ ಹೆಸರು ಮಾಡಿದ್ದಾರೆ. ಇವರ ಬಳಿ ಸಂಗೀತ ಕಲಿತ ಶಿಷ್ಯರು ದೇಶಾದ್ಯಂತ ಹೆಸರು ಗಳಿಸಿದ್ದಾರೆ.

ಪ್ರಸ್ತುತ ಮಹಾರಾಷ್ಟ್ರದ ಲಾತೂರಿನಲ್ಲಿ ನೆಲೆಸಿ ತಮ್ಮ ಸ್ವರ ವಿಲಾಸ ಸಂಗೀತ ಮಹಾ ವಿದ್ಯಾಲಯದ ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದು ಅನೇಕ ಕಲಾವಿದರಿಗೆ ದಾರಿ ದೀಪವಾಗಿದ್ದಾರೆ. ಕರ್ನಾಟಕದ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳ ಮಹಾ ವಿದ್ಯಾಲಯದಂಥೆ ತಾವೂ ಸಹ ಹೊರ ನಾಡಿನಲ್ಲಿ ತಮ್ಮ ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.

ಕರ್ನಾಟಕದ ವಿಜಾಪುರ ಜಿಲ್ಲೆಯ ಖೈನೂರಿನಲ್ಲಿ ಜನಿಸಿ, ಸಂಗೀತ ಕಲಿತು ಹೊರ ನಾಡಿನಲ್ಲಿ ಕರ್ನಾಟಕದ ಉತ್ತರಾದಿ ಸಂಗೀತದ ಕಂಪನ್ನು ಹರಿಸುತ್ತಿರುವ ಪಂ. ಶಾಂತಾರಾಮ ಚಿಗ್ರಿಯವರ ಅಮೂಲ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹೊರ ನಾಡಿನ ಕಲಾವಿದರಾಗಿ ನೀಡುವ ೨೦೦೩ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.