“ನಾನು ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲ, ಶಾಲೆಗೆ ಹೋದವಳಲ್ಲ” ಎನ್ನುವ ಶಾಂತಾರಾವ್, ದಕ್ಷಿಣ ಕನ್ನಡ ಜಿಲ್ಲೆಯವರು. ಹುಟ್ಟು ಕಲಾವಿದೆಯಾದ ಶಾಂತಾರಿಗೆ ಚಿಕ್ಕಂದಿನಿಂದ ಸಂಗೀತ, ನೃತ್ಯ, ಚಿತ್ರಕಲೆ ಮತ್ತು ಸಾಹಿತ್ಯಗಳಲ್ಲಿ ಆಸಕ್ತಿ, ಇವರು ಶಾಸ್ತ್ರೀಯವಾಗಿ ಭರತನಾಟ್ಯ-ಕಥಕ್ಕಳಿ ನೃತ್ಯ ಶೈಲಿಗಳನ್ನು ಕಲಿತವರಾದರೂ, ಅಷ್ಟೇ ದಕ್ಷತೆಯನ್ನು ಇವರ ಕವಿತೆಗಳಲ್ಲಿ ಚಿತ್ರಗಳಲ್ಲಿ ಕಾಣಬಹುದು.

ಹೆಸರಾಂತ ಪಂದನಲ್ಲೂರ್ ಮೀನಾಕ್ಷಿ ಸುಂದರಂ ಪಿಳ್ಳೆಯವರ ಮೆಚ್ಚಿನ ಶಿಷ್ಯೆಯಾದ ಶಾಂತಾ, ಆ ಸಂಪ್ರದಾಯದಲ್ಲಿ ಮೊದಲ ಪಂಕ್ತಿಗೆ ಸೇರಿದ ಕಲಾವಿದೆ. ಇವರ ಕಥಕ್ಕಳಿಯ ಗುರು ರಾಮನ್ನಿ ಮೆನನ್. ಆ ಸಮಯದಲ್ಲಿಯೇ ಕೇರಳ ಕಲಾ ಮಂದಿರದಲ್ಲಿ ಮೋಹಿನಿ ಅಟ್ಟಂ ಶೈಲಿಯಲ್ಲಿಯೂ ಪರಿಣತಿ ಗಳಿಸಿದರು. ಆ ಲಾಸ್ಯಮಯ ಶೈಲಿಯನ್ನು ರಂಗಕ್ಕೆ ತಂದ ಕೀರ್ತಿ ಶಾಂತಾರಿಗೇ ಸೇರಿದ್ದು. ಅಲ್ಲದೇ ಸಿಂಹಳ ದ್ವೀಪ(ಶ್ರೀಲಂಕಾ)ಕ್ಕೆ ತೆರಳಿ. ಅಲ್ಲಿನ ವಿಶಿಷ್ಟ ಕ್ಯಾಮಡಿಯನ್ ನೃತ್ಯವನ್ನು ಕರಗತ ಮಾಡಿಕೊಂಡರು. ಅಲ್ಲದೇ ಭಾಮಾ ನೃತ್ಯ ಎಂಬ ತಮ್ಮದೇ ಶೈಲಿಯನ್ನು ಸೃಷ್ಟಿಸಿದ್ದಾರೆ.

ಶಿಸ್ತು ಮತ್ತು ಸಂಪ್ರದಾಯಕ್ಕೆ ಮನ್ನಣೆ ಕೊಡುವ ಶಾಂತಾರಿಗೆ ಕರ್ನಾಟಕ ಸಂಗೀತದ ಬಗ್ಗೆ ಬಹಳ ಗೌರವ, ಪ್ರೇಮ. ಅಷ್ಟೇ ಪ್ರೀತಿ ಚಿತ್ರಕಲೆಯ ಬಗ್ಗೆ. ಶ್ರೀಲಂಕಾದ ಹೆಸರಾಂತ “ಸಿಗರಿಯ” ಶೈಲಿಯನ್ನು ಕರಗತ ಮಾಡಿಕೊಂಡಿರುವ ಶಾಂತಾ ಆ ಶೈಲಿಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ.

ಆದರೆ ಇವರ ಜೀವನ ನೃತ್ಯಕ್ಕೆ ಮೀಸಲು, ಅದರ ದೆಸೆಯಿಂದ ದೇಶ-ವಿದೇಶಗಳಲ್ಲಿ ಸಂಚಾರಮಾಡಿ, ಕಾರ್ಯಕ್ರಮಗಳನ್ನಿತ್ತು ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ ಶಾಂತಾ.

ರಾಜ್ಯದ ಅತ್ಯುನ್ನತ “ಶಾಂತಲಾ” ಪ್ರಶಸ್ತಿಯನ್ನು ಗಳಿಸಿರುವ ಶಾಂತಾರಿಗೆ ರಾಜ್ಯ ಸಂಗೀತ ನಾಟಕ ಅಕೆಡೆಮಿ ೧೯೬೭-೬೮ನೇ ಸಾಲಿನ ಪ್ರಶಸ್ತಿಯೂ ಸಂದಿದೆ.