ಹಿಂದೂಸ್ಥಾನಿ ಹಾಡುಗಾರಿಕೆ ಹಾಗೂ ಹಿಂದೂಸ್ಥಾನಿ ಪದ್ಧತಿಯ ಗಮಕ ಎರಡೂ ಕಲಾ ಪ್ರಕಾರಗಳಲ್ಲಿ ಹೆಸರು ಪಡೆದಿರುವ ಶ್ರೀಮತಿ ಎಸ್.ಕೌತಾಳ ಅವರು ಕರ್ನಾಟಕದ ಹಿಂದುಸ್ತಾನಿ ಮಹಿಳಾ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಶ್ರೀಮತಿ ಶಾಂತಾ ಕೌತಾಳ ಅವರಿಗೆ ಈಗ ೭೨ರ ಹರೆಯ. ಆದರೆ ಸಾಧನೆಗೆ ಅವರ ವಯಸ್ಸು ಅಡ್ಡಿ ಬಂದಿಲ್ಲ. ಈಗಲೂ ಅಭ್ಯಾಸ, ಪಾಠ, ಕಾರ್ಯಕ್ರಮ ಎಂದು ಚಟುವಟಿಕೆಯಿಂದಿರುತ್ತಾರೆ. ಶಾಂತಾ ಅವರಿಗೆ ಸಂಗೀತದ ಆರಂಭಿಕ ಮಾರ್ಗದರ್ಶನ ದೊರೆತದ್ದು ಸೋದರಮಾವ ಶ್ರೀ ಶ್ಯಾಮರಾವ ತಂಗಡಿಯವರಲ್ಲಿ. ವಿವಾಹದ ನಂತರ ಕಾರಣಾಂತರಗಳಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಸಂಗೀತ ಸಂಪರ್ಕ ನಿಂತೇಹೋಯಿತು. ಆನಂತರ ಶ್ರೀ ಅನಂತ ತೇರದಾಳ, ಶ್ರೀ ಈಶ್ವರಪ್ಪ ಮಿಣಜಗಿ, ಶ್ರೀ ಬಸಪ್ಪ ಮಾಸ್ತರ ಹೆರಕಲ್ ಮುಂತಾದ ಮಹಾನುಭಾವರುಗಳಲ್ಲಿ ಶಿಕ್ಷಣ ಪಡೆದು ಮತ್ತಷ್ಟು ಪಕ್ವವಾಗಿ ತಮ್ಮ ಸಂಗೀತ ಸೇವೆಯನ್ನು ಮುಂದುವರಿಸಿದರು.

ಎಂಭತ್ತರ ದಶಕ ಪೂರ್ತಿ ಮೈಸೂರು ಆಕಾಶವಾಣಿಗೆ ಹಾಡುತ್ತಿದ್ದ ಶಾಂತಾ ಅವರು ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಹಾಡುತ್ತಿದ್ದಾರೆ. ದಿವಂಗತ ರಮಾಕಾಂತ ಟಂಕಸಾಲಿಯವರ ಸಂಗೀತ ನಿರ್ದೇಶನದಲ್ಲಿ ರಾಮರಕ್ಷಾ, ಗೋಪಿ ಗೀತ, ದ್ವಾದಶ ಸ್ತೋತ್ರ ಮತ್ತು ದಿವಂಗತ ಮಾಹುಲಿ ಗೋಪಾಲಚಾರ್ಯರು ರಚಿಸಿರುವ ಶ್ರೀ ತೊರವೆ ನರಸಿಂಹ ಸುಪ್ರಭಾತ ಧ್ವನಿಸುರುಳಿಗಳಲ್ಲಿ ಶ್ರೀಮತಿ ಶಾಂತಾ ತಮ್ಮ ಪ್ರಬುದ್ಧ ಧ್ವನಿಯಲ್ಲಿ ಹಾಡಿದ್ದಾರೆ. ಅಲ್ಲದೆ ಶ್ರೀಮತಿ ಶಾಂತಾ ಅವರು ಕರ್ನಾಟಕ ಸಂಗೀತದಲ್ಲಿ ಜನಪ್ರಿಯವಾಗಿರುವ ಗಮಕ ಕಲೆಗೆ ಹಿಂದೂಸ್ಥಾನಿ ಸಂಗೀತವನ್ನು ಅಳವಡಿಸಿ ಯಶಸ್ವಿಯಾಗಿದ್ದಾರೆ. ತಮ್ಮ ಈ ಸಾಧನೆಗೆ ತೊರವೆ ರಾಮಾಯಣ ಮತ್ತು ಕುಮಾರವ್ಯಾಸ ಭಾರತ ಮಹಾ ಕಾವ್ಯಗಳನ್ನು ಬಳಸಿಕೊಂಡು ಗಮಕವಾಚಕ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆ ಗಳಿಸಿದ್ದಾರೆ.

ಮೈಸೂರು ದಸರಾ, ಉಡುಪಿಯ ಶ್ರೀ ಕೃಷ್ಣಮಠ, ಕೊಯಮತ್ತೂರು, ನವರಸಪುರ ಉತ್ಸವಗಳಂತಹ ಪ್ರತಿಷ್ಠತಿ ಉತ್ಸವಗಳಲ್ಲಿ ಶ್ರೀಮತಿ ಶಾಂತಾ ಶಾಸ್ತ್ರೀಯ ಗಾಯನ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈಗ ದಾಸ ಸಾಹಿತ್ಯವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಶಾಂತಾ ಅವರು ಕಾರ್ಯೋನ್ಮುಖರಾಗಿ ಯಶಸ್ವಿಯಾಗುತ್ತಿದ್ದಾರೆ.

ಶ್ರೀಮತಿ ಶಾಂತಾ ಕೌತಾಳ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೫-೦೬ನೇ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.