೨೨-೯-೧೯೩೮ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶಾಂತಾ ಅವರ ತಂದೆ ಜನಾರ್ಧನ ಅಯ್ಯಂಗಾರ್ ಹಾಗೂ ಅಣ್ಣ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಉತ್ತಮ ವೀಣಾ ವಿದ್ವಾಂಸರು. ಶಾಂತಾ ಅವರು ತಂದೆಯಿಂದಲೇ ವೀಣಾಭ್ಯಾಸ ಆರಂಭಿಸಿದರಾದರೂ ಇವರ ಒಲವು ಗಾಯನದತ್ತ ತಿರುಗಿತು. ಎಂ.ಆರ್. ಶಂಕರಮೂರ್ತಿ ನಂತರ ಆರ್.ಕೆ. ಶ್ರೀಕಂಠನ್‌ ಅವರುಗಳಲ್ಲಿ ಗಾಯನದಲ್ಲಿ ಶಿಕ್ಷಣ ಪಡೆದು ಉತ್ತಮ ಗಾಯಕಿ ಆದರು.

ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯಾದ ಇವರ ಗಾಯನ ಆಕಾಶವಾಣಿ-ದೂರದರ್ಶನಗಳಿಂದ ಪ್ರಸಾರವಾಗುತ್ತಿರುತ್ತದೆ. ಅನೇಕಾನೇಕ ಸಭೆ ಸಂಸ್ಥೆಗಳಲ್ಲೂ, ಉತ್ಸವಗಳಲ್ಲೂ ಇವರ ಕಾರ್ಯಕ್ರಮ ನಡೆದಿದೆ. ಲಂಡನ್ನಿನ ಭಾರತೀಯ ವಿದ್ಯಾ ಭವನ ಮತ್ತು ತೆಲುಗು ಸಂಘ, ನ್ಯೂಯಾರ್ಕ್ ಕನ್ನಡ ಕೂಟ ಸೇರಿದಂತೆ ಇಂಗ್ಲೆಂಡ್ , ಅಮೆರಿಕಾ, ಕೆನಡಾ ದೇಶಗಳಲ್ಲಿ ಇವರು ಕಾರ್ಯಕ್ರಮ ನೀಡಿದ್ದಾರೆ.