ಶಾಂತಾ ರಾವ್‌ ಹುಟ್ಟು ಕಲಾವಿದೆ. ಈಕೆಯನ್ನು ಪ್ರತಿಭಾವಂತ ನರ್ತಕಿ ಎಂದು ಸಾಧಾರಣವಾಗಿ ಗುರುತಿಸಲಾಗಿದ್ದರೂ, ಅದರಿಂದ ಆಕೆಯ ಬಹುಮುಖ ಪ್ರತಿಭೆಗೆ ನ್ಯಾಯ ದೊರಕಿಸದಂತಾಗದು ಎಂಬುದು ನಿಜ ಇದರಿಂದ ಆಕೆಯ ನೈಜ ನೈಪುಣ್ಯತೆಗೆ ಅಪಚಾರವೆನಿಸಿದಂತಾಗುವುದು. ಕಾರಣ ಶಾಂತಾ ತಮ್ಮ ಎಳೆಯ ವಯಸ್ಸಿನಿಂದಲೇ ನೃತ್ಯವಲ್ಲದೇ ಸಂಗೀತ, ಚಿತ್ರ ಕಲೆ ಮತ್ತು ಕಾವ್ಯ ರಚನೆಗಳಲ್ಲಿ ತಮ್ಮ ಆಸಕ್ತಿ ಪ್ರತಿಭೆಗಳನ್ನು ಮರೆರಯುತ್ತ ಬಂದಿದ್ದಾರೆ. ಈ ಎಲ್ಲಾ ಪ್ರಕಾರಗಳಲ್ಲೂ ಶಾಂತರ ಕ್ರಿಯಾಶೀಲತೆ ಪ್ರಕಟವಾಗಿದ್ದರೂ, ಪ್ರಖರವಾಗಿ ಬೆಳಕಿಗೆ ಬಂದದ್ದು, ಅವರ ಕಲಾವಂತಿಕೆಯನ್ನು ಪ್ರಚುರ ಗೊಳಿಸಿದ್ದು ನೃತ್ಯಕಲೆ.

ಈ ಕಟ್ಟಿನಲ್ಲೂ ಒಂದು ವಿಪರ್ಯಾಸ ತಾನೇತಾನಾಗಿ ಎದ್ದು ನಿಲ್ಲುತ್ತದೆ. ಸಾಮಾನ್ಯವಾಗಿ ಆಕೆಯನ್ನು ಗುರುತಿಸಲಾಗುತ್ತಿರುವುದು ಒಬ್ಬ ಪ್ರೌಢ ಭರತನಾಟ್ಯ ನರ್ತಕಿ ಎಂಬುದಾಗಿ. ಖ್ಯಾತ ಗುರು ಪಂದನಲ್ಲೂರು ಮೀನಾಕ್ಷಿಸುಂದರಂ ಪಿಳ್ಳೈಯವರ ಪಟ್ಟ ಶಿಷ್ಯೆಯಾಗಿ, ಆದರೆ ಶಾಂತ ಅಭ್ಯಸಿಸಿದ ಮೊದಲ ನೃತ್ಯಶೈಲಿ ಕಥಕ್ಕಳಿ. ಮುಂದೆ ಆ ವರ್ಣರಂಜಿತ ಕೇರಳದ ನಾಟ್ಯ ಪರಂಪರೆಗೆ ಪರ್ಯಾಯವೆನಿಸುವ ಮೋಹಿನಿ ಅಟ್ಟಂನಲ್ಲೂ ಪರಿಣತಿ ಪಡೆದು, ಅದೇ ಧಾಟಿಯಲ್ಲಿ ಸಿಲೋನ್‌ (ಇಂದಿನ ಶ್ರೀಲಂಕಾ) ಭೇಟಿಯ ಸಂದರ್ಭದಲ್ಲಿ, ಆ ದ್ವೀಪದಲ್ಲಿ ಪ್ರಚಾರದಲ್ಲಿದ್ದ ಕಾಂಡ್ಯನ್‌ ನೃತ್ಯ ಶೈಲಿಯನ್ನೂ ಅಭ್ಯಾಸ ಮಾಡಿದರು. ಈ ಎಲ್ಲಾ ಶೈಲಿಗಳಲ್ಲೂ ಒಂದು ನಿರ್ದಿಷ್ಟ ಮಟ್ಟವನ್ನು ಸಾಧಿಸಿದ ನಂತರವೇ ಶಾಂತಾ ಭರತನಾಟ್ಯದತ್ತ ಗಮನ ಹರಿಸಿದ್ದು. ಆ ಶ್ರೇಷ್ಠ ನೃತ್ಯ ಶೈಲಿ ಶಾಂತಾರನ್ನು  ಎಷ್ಟು ಮೋಹ ಪರವಶರನ್ನಗಿಸಿತೆಂದರೆ ಆಕೆ ಮುಂದೆ ಮುಖ್ಯವಾಗಿ ಆ ಶೈಲಿಯ ಪ್ರತಿತಪಾದಕರಾದರು, ಅದಕ್ಕೆ ಸಮಾನಾರ್ಥಕ ಎನ್ನುವಂತಹ ಕೀರ್ತಿಗೆ ಭಾಜನರಾದರು. ಆಕೆಯ ಭರತನಾಟ್ಯ  ಪ್ರದಶ್ನಗಳು ಎಷ್ಟು ಪರಿಣಾಮಕಾರಿ ಎನಿಸಿತೆಂದರೆ, ಅದನ್ನು ವೀಕ್ಷಿಸಿದ ಸರೋಜಿನಿ ನಾಯ್ಡು ಆಕೆಯನ್ನು  ವಸಂತ ಋತುವಿನ ಕುಸುಮ ಎಂದು ಬಣ್ಣಿಸಿದರೆ, ಪಂ. ಜವಾಹರಲಾಲ್‌ ನೆಹರು “ಭಾರತೀಯ ನೃತ್ಯ ಕಲೆ ಇಷ್ಟು ಮನಮೋಹಕಕ ಎಂಬ ಅರಿವು ಮೂಡಿದ್ದು ಶಾಂತಾರ ನೃತ್ಯವನ್ನ ಉ ನೋಡಿದ ನಂತರವೇ” ಎಂದು ಉದ್ಗಾರ ಮಾಡಿದರು. ಅಂತೆಯೇ ಕೆಲ ಶ್ರೀಲಂಕಾ ಪಂಡಿತರು ಆಕೆಯನ್ನು ಮರಳಿ ಬಂದ ಅಮ್ರಪಾಲಿ ಎಂದು ವರ್ಣಿಸಿದರೆ, ಪಾಶ್ಚಾತ್ಯ ವಿಮರ್ಶಕರನೇಕರು ಆಕೆಯನ್ನು ಮಾಳವಿಕಲ ಎಂದು ಹೊಗಳಿದ್ದುಂಟು.

ಇಂತಹ ಹೊಗಳಿಕೆಗಳೆಲ್ಲಾ ಈ ಶ್ರೇಷ್ಠ ಕಲಾವಿದೆಗೆ ಸಹಜವಾಗಿ ಸಲ್ಲಬೇಕಾದ ಮಾನ್ಯತೆಯಲ್ಲದೇ ಅದರಲ್ಲಿ ಯಾವುದೇ ಉತ್ಪ್ರೇಕ್ಷೆಯಲ್ಲ ಎಂಬುದರಲ್ಲಿ ಎರಡಭಿಪ್ರಾಯವಿಲ್ಲ ಎಂದರೆ ಶಾಂತ ಯಾವುದೇ ವ್ಯಾಸಂಗವನ್ನು  ಕೈಗೆತ್ತಿಕೊಂಡರೂ, ಅದರಲ್ಲಿ ತಮಗೆ ಸಮಾಧಾನವಾಗುವಷ್ಟು ಪರಿಣತಿಯನ್ನು ಪಡೆಯುವವರೆಗೂ ಬಿಡುವವರಲ್ಲ. ನೃತ್ಯವಲ್ಲದೇ ಆಕೆ ಕವಿತೆ ಮತ್ತು ಚಿತ್ರ ಕಲೆಗಳಲ್ಲಿ ಗಳಿಸಿರುವ ಸಾಧನೆಯಿಂದಲೂ ಈ ಅಂಶ ಸಮರ್ಥಗೊಳ್ಳುತ್ತದೆ. ಶಾಂತಾರ ಕವಿತೆಗಳು ಪ್ರಕಟಗೊಂಡಿಲ್ಲವಾದರೂ, ಅವುಗಳ ಶೈಲಿ, ಭಾವುಕತೆ, ಸ್ವರಭಾರ ಮತ್ತು ಪ್ರಾಸದ ಜೋಡಣೆಗಳು, ಕಮಲಾಬಾಯಿ ಛಟ್ಟೋಪಾಧ್ಯಾಯರಂತಹ ಬಹುಶೃತರಿಂದ ಮೆಚ್ಚುಗೆಗಳಿಸಿದೆ ಎಂಬುದು ಗಮನಾಹರ್ಗ. ಅಂತೆಯೇ ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ಶಾಂತಾರ “ಸಿಗ್ಗರಿಯಾ” ಶೈಲಿಯ ಬೃಹತ್‌ ಗಾತ್ರದ ಕಲಾಕೃತಿಗಳನ್ನು  ವೀಕ್ಷಿಸಿದಾಗ “ಇವು ನನ್ನ ನಿರೀಕ್ಷೆಗೆ ಮೀರಿದ ಅನುಭವ” ಎಂದರು. ಇಂತಹ ಬಹುಮುಖ ಪ್ರತಿಭೆ ಶಾಂತಾರಿಗೆ ಜನ್ಮದತ್ತ ವರ. ಅದು ಅರಳಲು ಆಕೆಗೆ ಅವಕಾಶಗಳು ಎಂದೂ ಕಡಿಮೆ ಇರಲಿಲ್ಲ. ಅದನ್ನು ಗುರುತಿಸಿದವರೂ ಅಷ್ಟೇ ಪ್ರಭಾವಶಾಲಿಗಳಾಗಿದ್ದರು ಎಂಬುದು ಗಮನಾರ್ಹ.

ದಕ್ಷಿಣ ಕನ್ನಡ ಜಿಲ್ಲೆಯ  ಶ್ರೀಮಂತ ಕುಟುಂಬದವರಾದ ಶಾಂತಾರ ತಂದೆ ತಮ್ಮ ವ್ಯವಹಾರದ ಸಲುವಗಿ ಮುಂಬಯಿಯಲ್ಲಿ ವಾಸ್ತವ್ಯ ಹೂಡಿದ್ದರು. ತಾಯಿಯೂ ಸುಸಂಸ್ಕೃತೆ. ಲಲಿತಕಲೆಗಳಲ್ಲಿ ಅತೀವ ಆಸಕ್ತಿ ಆಕೆಗೆ.

ಆಗ ಅಂದರೆ ೧೯೩೧ರ ಸುಮಾರಿನಲ್ಲಿ ಭಾರತದ ಸ್ವಾತಂತ್ರ ಚಳುವಳಿ ಭರದಿಂಧ ಸಾಗಿತ್ತು. ಅದರಲ್ಲಿ ಮುತುವರ್ಜಿ ವಹಿಸಿದ್ದ ಶಾಂತಾರ ತಂದೆಯವರನ್ನು  ಕಾಣಲು ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಧುರಿಣರನೇಕರು ಅವರ ಮನೆಗೆ ಬರುತ್ತಿದ್ದರು.,

ಆ ದಂಪತಿಗಳ ಅತಿಥಿ ಸತ್ಕಾರದಷ್ಟೇ ಆಕರ್ಷಕ ಅವರ ಮನೆಯಲ್ಲಿ ಜರುಗುತ್ತಿದ್ದ ಸ್ವಾತಂತ್ಯ್ರ ಸಂಗ್ರಾಮವನ್ನು ಕುರಿತ ಚರ್ಚೆಗಳು . ಅಂತಹ ಮುಖಂಡರಲ್ಲಿ ಆ ಸಂಸಾರಕ್ಕೆ ಅತಿ ಸಮೀಪದವರೆಂದರೆ ಕವಿ ಹರೀಂದ್ರ ನಾಥ ಛಟ್ಟೋಪಾಧ್ಯಾಯ, ಅವರ ಪತ್ನಿ ಕಮಲಾಬಾಯಿ, ಸೋದರಿ ಸರೋಜಿನಿ ನಾಯಿಡು, ಖ್ಯಾತ ವಿಮರ್ಶಕ ಜಿ. ವೆಂಕಟಾಚಲಂ (ವೆಂಕ) ಮುಂತಾದವರು. ಈ ಎಡಬಿಡದ ಚಟುವಟಿಕೆ, ಅದರಲ್ಲಿ ಪಾಲ್ಗೊಳ್ಳುತ್ತಿದ್ದ ಹಿರಿಯ, ತರುಣ ಮುಂದಾಳುಗಳ  ಉಲ್ಲಾಸಭರಿತ ಮಾತುಕತೆಗಳು ಆರು ವರ್ಷದ ಬಾಲಕಿ ಶಾಂತಾಳ ಕುತೂಹಲವನ್ನು ಕೆರಳಿಸುತ್ತಿತ್ತು. ಆಗರ್ಭ ಶ್ರೀಮಂತ ಕುಟುಂಬದ ಒಬ್ಬಳೇ ಮಗಳಾದ ಶಾಂತಾ ಅವರೆಲ್ಲರಲ್ಲೂ ಸಲಿಗೆಯಿಂದ ಬೆರೆಯುತ್ತಿದ್ದಳು. ವಯಸ್ಸಿಗೆ ತಕ್ಕ ತನ್ನ ತುಂಟಾಟಗಳಿಂದ ವಿನೋದಗೊಳಿಸುತ್ತಿದ್ದಳು. ಹಾಗೆ ಆಕೆಯ ಜಾಣತನದ, ಲವಲವಿಕೆಯ ಪ್ರವೃತ್ತಿಯಿಂದ ಉಲ್ಲಾಸಗೊಳ್ಳದಿದ್ದವರೇ ಇರಲಿಲ್ಲವೆನ್ನಬಹುದು. ಆಕೆಯ ಚುರುಕು ಬುದ್ದಿಗೆ ಮಾರು ಹೋಗುತ್ತಿದ್ದವರೂ ಇಲ್ಲದಿರಲಿಲ್ಲ.

ಶಾಂತಾ ಬೆಳೆದದ್ದು ಇಂತಹ ಮುಕ್ತ ವಾತಾವರಣದಲ್ಲಿ ಅದರಲ್ಲಿ ಯಾವುದೇ ವಿಧವಾದ ನಿರ್ಬಂಧವಾಗಲಿ, ಶಿಕ್ಷೆಯ  ಭಯವಾಗಲಿ, ಅಥವಾ ಆಕೆಯ ವಿಷಯದಲ್ಲಿ ತಲೆ ಹಾಕಿಕೊಂಡು ಬರುವವರಗಲೀ ಇರಲಿಲ್ಲ. ಆಕೆಯ ತಂದೆ, ತಾಯಿಯರೂ ಇದಕ್ಕೆ ಅಪವಾದವಲ್ಲ, ಶಾಂತ ತನಗೆ ಇಷ್ಟಬಂದದ್ದನ್ನೇ ಮಾಡುವಳು, ಎಲ್ಲಿಗೆ ಬೇಕೆಂದರಲ್ಲಿಗೆ ಹೋಗಿಬರುವಳು. ಮನೆಗೆ ಬರುವ ಹಿರಿಯರ ಜೊತೆಯಲ್ಲಿ ಎಷ್ಟೋ ವೇಳೆ ಸಿನಿಮಗೆ ಹೋಗುತ್ತಿದ್ದುದೂ ಉಂಟು. ಇಂತಹ ದಿಟ್ಟ ಪ್ರವೃತ್ತಿ ಆಕೆಯ ಇಳೀ ವಯಸ್ಸಿನಲ್ಲೂ ಅಚ್ಚಳಿಯದೇ ಉಳಿದಿದೆ ಎಂಬುದು  ಆಕೆಯ ಪರಿಚಯಸ್ಥರಿಗೆ ಹೊಸದೇನಲ್ಲ.

ಇಷ್ಟೆಲ್ಲಾ ಸ್ವಾತಂತ್ರವಿದ್ದರೂ, ಸೌಕರ್ಯಗಳಿದ್ದರೂ , ಶಾಂತ ಸಮಚಿತ್ತಳಾಗಿದ್ದಳು ಎನ್ನುವಂತಿರಲಿಲ್ಲ. ಬಾಹ್ಯದಲ್ಲಿ ಸಮಾಧಾನ ಚಿತ್ತಳಂತೆ ಕಂಡರೂ, ಆಕೆಯ ಆಂತರ್ಯದಲ್ಲಿನ ಅಸ್ಥಿರತೆಯನ್ನು ಮರೆ ಮಾಚುವಂತಿರಲಿಲ್ಲ. ಸದಾ ಯಾವುದೋ ಚಿಂತೆಯ ಲ್ಲಿ ಮಗ್ನಳಾಗಿ, ಬೇರೆ ಪ್ರಪಂಚದಲ್ಲೇ ವಿಹರಿಸುವಂತಿರುತ್ತಿತ್ತು . ಆಕೆಯ ಮುಖಚರ್ಯೆ. ಕಲೆಯ ವಿಚಾರಕ ಉದ್ಭವಿಸಿದಾಗ ಮಾತ್ರ ಶಾಂತಾಳ ಆಸಕ್ತಿ ಚಿಮ್ಮುತ್ತಿತ್ತು . ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕೆಲವರು ಆಕೆಯ ತಂದೆ, ತಾಯಿಯರನ್ನು ಆಕೆಯನ್ನು ಅದೇ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದು ಉಚಿತ ಎಂದು ಮನವರಿಕೆಮಾಡಿಕೊಡುತ್ತಿದ್ದುದೂ ಉಂಟು. ಶಾಂತಾ ಕುಣಿತದಲ್ಲಿ ತೋರುತ್ತಿದ್ದ ಲವಲವಿಕೆ, ಯಾವುದೋ ಒಂದು ತುಣುಕನ್ನು ಗುನುಗುನಿಸುವಾಗ ಆಕೆಯ ಧ್ವನಿಯಲ್ಲಿ ಮಿನುಗುತ್ತಿದ್ದ ಮಾರ್ದವತೆ ಇಂತಹ ಅಭಿಪ್ರಾಯಕ್ಕೆ ಪುಷ್ಟಿಯಿಯೂತ್ತಿದ್ದವು . ಉದಾಹರಣೆಗೆ ಹರೀಂದ್ರನಾಥರು ರಚಿಸಿದ ಹಲವು ದೇಶಭಕ್ತಿ ಗೀತೆಗಳನ್ನು ಶಾಂತಾ ಅಭ್ಯಸಿಸಿ ಅವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಅವುಗಳಲ್ಲಿ ಆಕೆಗೆ ಅತ್ಯಂತ ಪ್ರಿಯವಾದ ಗೀತೆ ಎಂದರೆ “ಶುರುಹೋಗಯ ಆ ಜಂಗ್‌”. ಇದು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿತ್ತು. ಸೋಜಿಗವೆಂದರೆ ಹರೀಂದ್ರರು  ಮೊದಲ ಬಾರಿಗೆ ಬಂಧಿಸಲ್ಪಟ್ಟು, ಸೆರೆಮನೆಗೆ ತೆರಳುವಾಗ ಶಾಂತಾ ಅದೇ ಗೀತೆಯನ್ನು ಹಾಡಿ ಹುರಿದುಂಬಿಸಿದ್ದಳು.

ಆ ಸಂದರ್ಭದಲ್ಲಿ ವ್ಯಕ್ತವಾದ ಮುಖ್ಯ ಅಂಶವೆಂದರೆ, ಶಾಂತಾಳಿಗೆ ಎಂದೂ ಶಾಲೆಯ ಕಲಿಕೆಯಲ್ಲಿ ಆಸಕ್ತಿ ಎದುರಾಗದೇ ಹೋದದ್ದು. ಆಕೆಯನ್ನು ಸದಾ ಆವರಿಸಿಕೊಂಡಿದ್ದ ವಿಷಯಗಳೆಂದರೆ ಸಂಗೀತ, ನೃತ್ಯ ಮತ್ತು ಕಾವ್ಯ ರಚನೆ. ಆಕೆಯ ಮಹದಾಸೆ ಇಂತಹ ಲಲಿತಕಲೆಗಳಲ್ಲಿ ಪ್ರಾವೀಣ್ಯತೆ ಪಡೆಯುವುದು. ಸಾಹಸಮಯ ಜೀವನದ್ತಲೇ ಆಕೆಯ ಒಲವು. ಅಂತೆಯೇ ಸಹಜವಾದ ಒ ಬ್ಬ ಗೃಹಿಣಿಯ ಅಥವಾ ತಾಯ್ತನದ ಜೀವನ ಆಕೆಯ ಮನಸ್ಸಿನಿಂದ ದೂರ. ಒಂದು ವೃತ್ತಿಯನ್ನು ಅನುಸರಿಸಿ, ಒಂದು ಕೆಲಸದಲ್ಲಾಗಲಿ ಗೃಹಕೃತ್ಯದಲ್ಲಾಗಲೀ ನಿರತಗೊಂಡು ತೃಪ್ತಿಗೊಳ್ಳುವ ಚೇತನ ಅದಾಗಿರಲಿಲ್ಲ. ಆಕೆ ಯಾವುದೋ ಒಂದು ಸಾಹಸಮಯ, ಸೃಜನಾತ್ಮಕ ಜೀವನವನ್ನು ಅರಸುತ್ತಿದ್ದಳೆಂಬುದು ಆಕೆಯ ಎಲ್ಲ ದೈನಂದಿನ ನಡವಳಿಕೆಗಳಲ್ಲೂ ಸ್ಪಷ್ಟವಾಗಿತ್ತು, ಅದೇ ಆಕೆಯ ಧರ್ಮವಾಗಿತ್ತೆಂದರೂ ತಪ್ಪಿಲ್ಲ. ಆಕೆಯ ಪ್ರತಿಭೆಯನ್ನು ಗುರುತಿಸಿದವರು ಶಾಂತಾ ಎಂಥದೇ ದಾರಿಯನ್ನು ಅನುಸರಿಸಿದರೂ ಅದರಲ್ಲಿ ಯಶಸ್ವಿಯಾಗುವಳೆಂಬ ನಂಬಿಕೆಕ ಉಳ್ಳವರಾಗಿದ್ದರು, ನಿಜ. ಅಂದರೆ ಆಕೆಗೆ ಒಬ್ಬ ಸಾಮಾನ್ಯಳಂತೆ ಜೀವನ ಸಾಗಿಸುವುದರತ್ತ ಎಂದೂ ಆಸಕ್ತಿ ಇರಲಿಲ್ಲ.

ಆಕೆಯ ಉತ್ಸಾಹವನ್ನು, ಸಂವೇದನಾಶೀಲ ಪ್ರವೃತ್ತಿಯನ್ನು ಅರ್ಥಮಾಡಿಕೊಂಡ ಮಿತ್ರರು ಆಕೆಯ  ತಂದೆ, ತಾಯಿಯರನ್ನು ಒಲಿಸಿ, ಎಂದಿನ ಶಾಲಾವಿದ್ಯಾಭ್ಯಾಸಕ್ಕಿಂತ, ನೃತ್ಯದಲ್ಲಿ ಆಕೆಯನ್ನು ತೊಡಗಿಸುವುದು ಒಳಿತು ಎಂದು ಮನವರಿಕೆಮಾಡಿಕೊಟ್ಟರು. ಅದರಿಂದ ಆಕೆಯ ಅಭಿಲಾಷೆ ಫಲಿಸುವುದಲ್ಲದೇ ಮನೆಯಲ್ಲೂ ಶಾಂತಿ ನೆಲಸುವುದೆಂಬ ಆಶ್ವಾಸನೆಯನ್ನಿತ್ತರು, ಈ ಸಲಹೆಗೆ ಶಾಂತಾಳೂ ಉತ್ಸಾಹ ತೋರಿದ್ದರಿಂದ ಆಕೆಯ ಮಾತಾ, ಪಿತೃಗಳು ಆ ಹಿತೋಕ್ತಿಗೆ ಮಣಿಯಬೇಕಾಯಿತು.

ಅದಕ್ಕನುಗುಣವಾಗಿ, ಶಾಂತಾಳನ್ನು ಆಕೆಯ ಪ್ರತಿಭೆ ಅರಳುವಂಥೆ ಮಾರ್ಗದರ್ಶನವೀಯುವ ಜವಾಬ್ದಾರಿಯನ್ನೂ ವೆಂಕರಿಗೇ ವಹಿಸಲಾಯಿತು. ಒಬ್ಬ ೧೫-೧೬ ವಯಸ್ಸಿನ ಸುಂದರ ಹಾಗೂ ಚುರುಕು ಬುದ್ಧಿಯುಳ್ಳ ತರುಣಿಯನ್ನು ಆಕೆಯ ಆಶೆ, ಆಕಾಂಕ್ಷೆಗಳಿಗನುಗುಣವಾಗಿ ಮುಂದುವರಿಯುವಂತೆ ನೋಡಿಕೊಳ್ಳುವುದೇನೂ ಸಾಧಾರಣ ಸವಾಲಲ್ಲ. ಅಂತೂ ವೆಂಕರ ಸಲಹೆಯಂತೆ ಶಾಂತಾ ಕೇರಳದ ವಿಖ್ಯಾತ ಕಲಾಮಂಡಳವನ್ನು ಪ್ರವೇಶಿಸಿದಳು.

 

ವ್ಯಾಪಾರ, ವ್ಯವಹಾರ, ಹಣಕಾಸಿನ ಮಾತುಕತೆಗಳಿಂದ ವ್ಯಾಪಕವಾದ ಮುಂಬಯಿನಿಂದ, ಪ್ರಶಾಂತ ಪರಿಸರದ ಚರುತುರಿತ ಶಾಂತಾಳಿಗೆ ಅತ್ಯಂತ ಪ್ರಿಯವಾಯಿತು. ಅಲ್ಲಿನ ತನ್ನದೆ ವಯಸ್ಸಿನ ನಿರ್ಮಲ ಮನಸ್ಸಿನ ತರುಣಿಯರ ಒಡನಾಟ ಕೂಡ ಅಷ್ಟೇ ಆಹ್ಲಾದಕರ ಎನಿಸಿತು.

ಕೋಚಿನ್‌ ರಾಜ್ಯದ ಕೇರಳ ಕಲಾಮಂಡಳಂ ಆ ಹೊತ್ತಿಗೆ, ಎಂದರೆ ೧೯೪೦ರ ಸುಮಾರಿಗೆ ವಿಶ್ವಖ್ಯಾತಿಗಳಿಸಿತ್ತು. ಉದಯ ಶಂಕರ, ಗೋಪೋನಾಥರಂತಹ ಶ್ರೇಷ್ಠ ಕಲಾವಿದರಿಂದಾಗಿ ಆ ಗುರುಕುಲದ ಕೀರ್ತಿ ಅಮರವಾಗಿತ್ತು. ಆ ಕಥಕಳಿ ಶಾಲೆಯಲ್ಲಿ ನೃತ್ಯಾಭ್ಯಾಸವನ್ನು ಪಡೆದವರಿಗೆ ಬೇಡಿಕೆ ಶಾಂತಿನಿಕೇತನ್‌, ಅಲ್ಮೋರಾ ನಂತಹ ಕೇಂದ್ರಗಳಿಂದ ಮೇಲಿಂದ ಮೇಲೆ ಬರುತ್ತಿತ್ತು. ಅಂತಹ ಖ್ಯಾತಿವೆತ್ತ ಶಾಲೆಯಲ್ಲಿ ಶಾಂತಾಳಿಗೆ ಪ್ರವೇಶ ದೊರೆತದ್ದು ಒಂದು ಯೋಗಾಯೋಗವೇ ಸರಿ!.

ಪ್ರಾರಂಭದಲ್ಲಿ ಶಾಂತಾಳಿಗೆ ಅದೇ ನೃತ್ಯ ಶಾಲೆಯ ಸಂಸ್ಥಾಪಕ ಕವಿ ವಲ್ಲತೋಳರ ಆತಿಥ್ಯ ಒದಗಿತು. ಆಕೆಗೆ ಆ ಹಿರಿಯ ಚೇತನದ ಆದರೆದ ಸ್ವಾಗತವೂ ದೊರಕಿತಲ್ಲದೇ, ಪ್ರಾಪ್ರ ವಯಸ್ಸಿನವರಿಗೆ ಬೇಕಾದ, ಮುಖ್ಯವಾದ ಮೈಕಟ್ಟು, ಮತ್ತು ಗೌರವವರ್ಣದ ಆಕೆಯನ್ನು ನೋಡಿ “ಆಹ್‌ ಎಂತಹ ಅಂಗ ಸೌಷ್ಟವ, ನೃತ್ಯಕ್ಕೆ ಹೇಳಿಮಾಡಿಸಿದಂತಹ ಶರೀರ. ಶೀಘ್ರವೇ ಭಾರತದ ಶ್ರೇಷ್ಟ ನರ್ತಕಿ ನೀನಾಗುವುದರಲ್ಲಿ ಯಾವ ಸಂಶಯವೂ ಇಲ್ಲ” ಎಂದೂ ಉದ್ಗಾರ ಅವರಿಂದ ಹೊರ ಹೊಮ್ಮಿತು.

ಸಂವೇದನಾ ಶೀಲೆ ಶಾಂತಾಳ ಮನೋಧರ್ಮಕ್ಕೂ ಸರಿಯಾಗಿ ಹಿರಿಯ ನುರಿತ ಕಥಕ್ಕಳಿ ಗುರು ರಾವುನ್ನಿ ಮೆನನ್‌ರನ್ನೇ ಗುರುವಾಗಿ ಪಡೆದರು. ಇದರಿಂದ ಆಕೆಯ ಒಂದು ಸುಂದರ ಕನಸು ನನಸಾದಂತಾಯಿತು. ಇಲ್ಲಿ ಗಮನಾರ್ಹವಾದ ಅಂಶವೆಂದರೆ, ಪುರುಷ ಪ್ರಧಾನವಾದ ಆ ಸಂಪ್ರದಾಯದಲ್ಲಿ ಶಾಂತಾ ಮೊದಲ ಮತ್ತು ಏಕೈಕಕ ಮಹಿಳಾ ಶಿಷ್ಯಳಗಿ ಪರಿವರ್ತಿಸಿದ್ದು. ಇತರ ಮಹಿಳೆಯರು ಸಾಧಾರಣವಗಿ ಸುಲಲಿತವಾದ, ಹಗುರ ನಡೆಗಳನ್ನು ಅಭ್ಯಾಸಮಾಡುತ್ತಿದ್ದರೆ ಶಾಂತಾ ಸವಾಲೆನಿಸುವ “ತೋಡಯಂ”, “ಅಷ್ಟ ಕಲಾಶಂ”ಗಳನ್ನು ಸುಲಭವಾಗಿ ಕರಗತಮಾಡಿಕೊಂಡರು. ಆಕೆಯ “ತೋಡಯಂ”ನ್ನು ವೀಕ್ಷಿಸಿದಕ ವಲ್ಲತ್ತೋಳ್‌ ರಂತಹ ಕಥಕಳಿ ಪರಿಣತರು ಆಕೆಯ ಗಂಭೀರ ನಿಲುವು, ಲೆಕ್ಕಾಚಾರದ ನಡೆಗಳನ್ನು ಬಹಳವಾಗಿ ಮೆಚ್ಚಿಕೊಂಡರು. ಅದರಿಂದ ಪ್ರಭಾವಿತರಾಗಿ ಕವಿ ವಲ್ಲತ್ತೋಳರೇ ಸ್ವತಃ ಆಕೆಗೆಂದೇ ಒಂದು “ತಾಂಡವ” ನೃತ್ಯ ಅಂಗವನ್ನು ಸಂಯೋಜಿಸಿ ಕೊಟ್ಟರು. ಅದು ಆಕೆಯ  ಮೇರು  ಅಂಗಗಳಲ್ಲೊಂದಾಗಿ ಇಂದಿಗೂ ರಾರಾಜಿಸುತ್ತಿದೆ.

ಇತ್ತ ರಾವುನ್ನಿ ಮೆನನ್‌ರು ತಮ್ಮ ನೆಚ್ಚಿನ ಶಿಷ್ಯಳಿಗೆ ರಸಭರಿತವಾದ, ಸ್ವಲ್ಪ ಭೀಭತ್ಸದಿಂದ ಕೂಡಿದ “ದುಶ್ಯಾಸನ ವಧೆ”ಯನ್ನು ಕಲಿಸಿದರು. ಇದರಿಂದ ಆಕೆಯ ಕಥಕಳಿ ನೃತ್ಯ ಸುಭದ್ರವೆನಿಸಿತು.

ಶಾಂತಾಳ ಅದೃಷ್ಟವೋ ಎಂಬಂತೆ ಅದೇ ಸಂದರ್ಭದಲ್ಲಿ ಕಲಾಮಂಡಲಂನಲ್ಲಿ ಆಗ ಎಪ್ಪತ್ತು ವಯಸ್ಸಿನ, ಮೋಹಿನಿ ಆಟ್ಟಂನಲ್ಲಿ ಅದ್ವಿತೀಯರೆನಿಸಿದ ಕೃಷ್ಣನ್‌ ಪಣಿಕ್ಕಾರ್ ವಾಸ್ತವ್ಯ ಹೂಡಿದ್ದರು. ಅವರಿಗೆ ಶಾಂತಾ ಕಥಕ್ಕಳಿಯಲ್ಲಿ ತೊಡಗಿದ್ದು ಸಮಂಜಸ ಎನಿಸದಿದ್ದರೂ , ಒಮ್ಮನಸ್ಸಿನಿದ ಆಕೆಗೆ ಲಾಲಿತ್ಯಪೂರ್ಣ ಮೋಹಿನಿ ಆಟ್ಟಂನ್ನು  ಕಲಿಸಲು ಮುಂದಾದರು. ಆ ಶೈಲಿಯ ಸೂಕ್ಷ್ಮತೆಗಳನ್ನು ಸತತ ಅಭ್ಯಾಸದಿಂದ ಕರಗತ ಮಾಡಿಕೊಂಡು  ಅದಕ್ಕೆ ಹೆಸರಾಂತ “ಕಮಾಜ್‌” ವರ್ಣವೇ ಮುಂತಾದ ಹಲವು ಸುಂದರ ಸಂಯೋಜನೆಗಳನ್ನು ಅಭ್ಯಾಸ ಮಾಡಿಸಿದರು. ಮುಂದೆ ೧೯೪೨ರ ಸುಮಾರಿಗೆ ತ್ರಿಚೂರ್ ನಲ್ಲಿ ಕಥಕ್ಕಳಿಯಲ್ಲಿಕ ತನ್ನ ರಂಗಪ್ರವೇಶವನ್ನು ಹಲವು ಹೆಸರಾಂತ ಕಲಾವಿದರ ಎದುರಿನಲ್ಲಿ ನೆರವೇರಿಸಿದರು. ಆಕೆಯ ಕಥಕ್ಕಳಿ ಅಂಗಗಳಲ್ಲದೇ, ಆ ಕಮಾಚ್ ವರ್ಣವು ಅತೀವ ಮೆಚ್ಚುಗೆ ಗಳಿಸಿತು. ಶಾಂತಾಳ ನೃತ್ಯ ಜೀವನದಲ್ಲಿ ಅದೊಂದು ಅಮೃತ ಘಳಿಗೆ, ಮರೆಯಲಾಗದ ಸನ್ನಿವೇಶ.

 

ಅದೇ ಸುಮಾರಿನಲ್ಲಿ ಸಿಲೋನ್‌ಗೆ ಭೇಟಿ ನೀಡಿದಾಗ ಕಾಂಡ್ಯನ್‌ನ ಶ್ರೀಮಂತ ರತಾವಚ್ಚೇರು ಆಕೆಯ ಸಲುವಾಗಿ ಏರ್ಪಡಿಸಿದ ಔತಣಕೂಟದಲ್ಲಿ ಆ ಪ್ರದೇಶಕ್ಕೆ ಹೆಸರಾದಕ ಕಾಂಡ್ಯನ್‌ ನೃತ್ಯವನ್ನು ವೀಕ್ಷಿಸಿ ಅದಿಂದ ಪ್ರಭಾವಿತರಾಗಿ, ಆ ಶೈಲಿಯಲ್ಲೇ ಅದ್ವಿತೀಯರೆನಿಸಿದ ದುನಯ್ಯ (ಇವರು ಈ ಹಿಂದೆ ರಾಂಗೋಪಾಲರು ತಂಡದಲ್ಲಿ ಪ್ರವಾಸ ಮಾಡಿದ್ದರಲ್ಲದೇ, ಬೆಂಗಳೂರಿನಲ್ಲೂ, ಅದೇ ಗುಂಪಿನೊಡನೆ ತಮ್ಮ ಪ್ರದರ್ಶನವನ್ನಿತ್ತಿದ್ದರು.) ಅವರಿಂದ ಆವಿಶಿಷ್ಟ ಶೈಲಿಯನ್ನು ಅಭ್ಯಾಸ ಮಾಡಿದರು. ಅವರಿಂದ ನಾಗ ವನ್ನಮ, ಇದಡಿ ಎಂಬ ಎರಡು ರಭಸದ ಸಂಯೋಜನೆಗಳನ್ನು ಕಲಿತರಲ್ಲದೇ ಕೊಲಂಬೋದ ಪ್ರತಿಷ್ಠಿತರ ಸಮ್ಮುಖದಲ್ಲಿ ಪ್ರದರ್ಶನ ಒಂದರಲ್ಲಿ ನರ್ತಿಸಿ, ಅಲ್ಲಿನ ಕಲಾರಸಿಕರ, ಪತ್ರಿಕಾ ಮಾಧ್ಯಮಗಳಿಂದ ಅಮ್ರಪಾಲಿ ಪುನರ್ ಜನ್ಮ ಎಂಬ ಹೊಗಳಿಕೆಗೆ ಪಾತ್ರರಾದರು.

ಇಷ್ಟೆಲ್ಲಾ ಸಾಧಿಸಿದ್ದರೂ, ಆಕೆಗೆ ಅತಿ ಪ್ರಿಯವಾದಕ ಭರತನಾಟ್ಯವನ್ನು ಕಲಿಯುವ ಅವಕಾಶದಿಂದ ವಂಚಿತರಾಗೆ ಉಳಿದಿದ್ದರು. ಅಂದು ಆ ಪುರಾತನ ಶೈಲಿಯಲ್ಲಿ ಖ್ಯಾತ ನಾಮರೆಂದರೆ ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೈ. ತಂಜಾವೂರು ಸಹೋದರರು ಎಂಬ ಖ್ಯಾತ ಸಂಗೀತಮನೆತನಕ್ಕೆ ಸೇರಿದ ಮೀನಾಕ್ಷಿಸುಂದರಂ ಭರತ ನಾಟ್ಯದಲ್ಲೂ ವಿಶೇಷ ಪರಿಣತರು. ವಿಶೇಷ ಶಿಸ್ತಿಗೆ, ಸಂಪ್ರದಾಯಕ್ಕೆ ಹೆಸರಾದ ಅವರ ಶಿಷ್ಯರಲ್ಲಿ ರುಕ್ಮಿಣಿದೇವಿ, ರಾಂಗೋಪಾಲ್‌ ರಂತಹ ವಿಶ್ವವಿರ್ಖಯಾತ ನೃತ್ಯ ಕಲಾವಿದರು ಪ್ರಮುಖರು. ಆ ಪಟ್ಟಿಗೆ ಸೇರಿಸಲೇ ಬೇಕಾದಂತಹ ಮತ್ತೊಂದು ಹೆಸರೆಂದರೆ ಶಾಂತಾರಾವ್‌.

ಆ ಶ್ರೇಷ್ಠಗುರುವಿನಿಂದಲೇ ಭರತನಾಟ್ಯವನ್ನೂ ಕಲಿಯಬೇಕೆಂಬುದೇ ಶಾಂತಾರ ಅಭಿಲಾಷೆ. ಅಷ್ಟೆಲ್ಲಾ ಸವಲತ್ತುಗಳಿರುವ ಆಕೆ ಬೇರೆ ಯಾರಿಂದಲಾದರು ಕಲಿಯಬಹುದಿತ್ತು. ಆದರೆ ಎಲ್ಲಾ ವಿಷಯಗಳಲ್ಲೂ ಶ್ರೇಷ್ಠವಾದುದ್ದೆನ್ನೇ ಆರಿಸುವ ಜಿಗುಟಿನ ಪರಿಪಾಠವುಳ್ಳ ಆಕೆ, ಮೀನಾಕ್ಷಿ ಸುಂದರಂರನ್ನೇ ತನ್ನ ಗುರುವಾಗಿ ಸ್ವೀಕರಿಸಿದರು. ಉದ್ದಕ್ಕೂ ನಗರವಾಸಿಯಾದ ಆಕೆಗೆ ಪಂದನಲ್ಲೂರಿನಂತಹ ಕುಗ್ರಾಮ ಸಮಂಜಸವೆನಿಸದಂತಿತ್ತಾದರೂ ಹಠವಾದಿಯದ ಶಾಂತಾ ತನ್ನ ಬಹುದಿನಗಳ ಕನಸಿನ ಪಂದನಲ್ಲೂರಿಗೆ ಪ್ರಯಾಣ ಬೆಳೆಸಿ, ಮೀನಾಕ್ಷಿ ಸುಂದರಂನ್ನು ಭೇಟಿ ಮಾಡಿ ತನ್ನ ಶಿಷ್ಯವೃತ್ತಿಗೆ ಅವರನ್ನು ಒಲಿಸಿಕೊಂಡರು.

ಅಂತೂ ಅವರ ಆಕಾಂಕ್ಷೆ ಫಲಿಸಿತಾದರೂ, ಶಾಂತಾರ ಆಯ್ಕೆ ಸುಗಮವೆನ್ನುವಂತಿರಲಿಲ್ಲ. ಆ ಗ್ರಾಮದ ಹೊಸ ವಾತಾವರಣಕ್ಕೆಕ ಹೊಂದಿಕೊಳ್ಳುವುದೇ ಒಂದು ಸವಾಲೆನಿಸಿತು, ಮೀನಾಕ್ಷಿ ಸುಂದರಂ ಆಕೆಯ ವಾಸ್ತವ್ಯವನ್ನು ಸುಖಕರವಾಗಿಸಲು ಬೇಕಾದ ಎಲ್ಲ ಅನುಕೂಲಗಳನ್ನು ಒದಗಿಸಿಕೊಟ್ಟರು. ವಿಸ್ತಾರವಾದ ಹಜಾರವು ನೂರಾರುವರ್ಷಗಳಿಗೂ ಹಳೆಯದಾದ. ಉದ್ದಕ್ಕೂ ಅನೇಕಾನೇಕ ದೇವದಾಸಿಗಳು ನೃತ್ಯಾಭ್ಯಾಸವನ್ನು ಕಲಿತ, ಹಲವಾರು ಕೊಠಡಿಗಳಿರುವ ಚಾರಿತ್ರಿಕ ಹಿನ್ನೆಲೆ ಇರುವ ತಮ್ಮ ಮನೆಯಲ್ಲಿ ಲೊಂದು ಕೊಠಡಿಯನ್ನು ಶಾಂತಾರಿಗೆ ಸಜ್ಜುಗೊಳಿಸಿ ಕೊಡಲಾಯಿತು. ಅಂತೆಯೇ, ಅವರ ಹಿರಿಯ ಮಗಳೊಬ್ಬಳು, ಶಾಂತಾರ ಯೋಗಕ್ಷೇಮವನ್ನು ವಹಿಸಿಕೊಂಢರು. ಅಂತೂ ತಮಗೆ ಅತಿ ಪ್ರಿಯವಾದ, ಮುಂದೆ ಹೆಸರನ್ನು ಗಳಿಸಿಕೊಟ್ಟ ನೃತ್ಯಕಲೆಯನ್ನು ಐದು ವರ್ಷಗಳ ಕಾಲ ಅಭ್ಯಾಸಮಾಡಿದರು. ಸತತ ಎನ್ನಲಾಗದಿದ್ದರೂ, ಗುರುಕುಲ ಪದ್ಧತಿಯಂತೆ ನೃತ್ಯ ಶಾಸ್ತ್ರದ ಸೂಕ್ಷ್ಮತೆಗಳನ್ನೆಲ್ಲಾ ಸಾಂಗವಾಗಿ ಆ ಶ್ರೇಷ್ಠ ಗುರುವಿನಿಂದ ಶ್ರಮವಹಿಸಿ ಕರಗತಮಾಡಿಕೊಂಡರು . ಅದೊಂದು ವಿಶಿಷ್ಟರೀತಿಯ ಗುರು ಶಿಷ್ಯ ಸಂಬಂಧ. ತಾತ ಎಂದೇ ಸಂಬೋಧಿಸಲ್ಪಡುತ್ತಿದ್ದ ಮೀನಾಕ್ಷಿ ಸುಂದರಂ ಸಹ ಅತ್ಯಂತ ಶ್ರದ್ಧಾಪೂರ್ವಕವಾಗಿ, ಮನಬಿಚ್ಚಿ ಈ ಪ್ರಿಯ ಶಿಷ್ಯೆಗೆ ಆ ಕಲೆಯನ್ನು ಧಾರೆ ಎರೆದರು. ಒಬ್ಬ ಉತ್ತಮ ಕಲಾವಿದೆಯಾಗಲು ಬೇಕಾದ ಎಲ್ಲ ತರಬೇತಿಗಳನ್ನು ಒದಿಗಿಸಿದರು.

ಅದರಂತೆ ಶಾಂತಾ ತನ್ನ ಅರಂಗೇಟ್ರಂನ್ನು ಚೆನ್ನೈನ ಹೆಸರಾಂತ ಮ್ಯೂಸಿಯಂ ಥಿಯೇಟರ್ ನಲ್ಲಿ ೧೯೪೩ರಲ್ಲಿ ನೆರವೇರಿಸಿದರು. ಈ ಪ್ರಶಂಸೆಗಳಿಸಿದ ಪ್ರದರ್ಶನದಂತೆ, ಪರಿಷ್ಕೃತವಿದ್ದ ೧೯೪೩ರ ಪ್ರದರ್ಶನದಲ್ಲೂ ತಾತಾ ರಿಂದಲೇ ನಟುವಾಂಗ ನೆರವೇರಿಸಲ್ಪಟ್ಟಿತು. ಎಲ್ಲ ರಸಿಕಜನ, ಮಾಧ್ಯಮಗಳಿಂದ ಮೆಚ್ಚುಗೆಯ ಸುರಿಮಳೆಯೂ ಅಷ್ಟೇ ತೆರೆದ ಮನಸ್ಸಿನಿಂದ ಕೂಡಿದ್ದು, ಶಾಂತಾರ ಶ್ರಮ ಸಾರ್ಥಕ ಎನಿಸುವಂತಾಯಿತು.

 

ಅಲ್ಲಿನಿಂದ ಆಕೆಯ ಕಲಾಜೀವನ ಅವ್ಯಾಹತವಾಗಿ ಮುಂದುವರಿಯಿತು. ಆಕೆಯ ಬೆಂಗಳೂರಿನ ಪ್ರದರ್ಶನ ೧೯೫೧-೫೨ರ ಸುಮಾರಿನಲ್ಲಿ ಪುರಭವನದಲ್ಲಿ ಜರುಗಿ ತುಂಬಿದ ಪ್ರೇಕ್ಷಕವೃಂದದ ಹೊಗಳಿಕೆಗೆ ಪಾತ್ರವಾಯಿತು. ಅಲ್ಲಿ ಗಮನ ಸೆಳೆದ ಅಂಶಗಳೆಂದರೆ ತಮ್ಮ ಪ್ರದರ್ಶನದ ಏರ್ಪಾಡಿನಲ್ಲಿಕ ಶಾಂತ ಬೆಳೆಸಿಕೊಂಡ ವಿಶೇಷ ಆಸಕ್ತಿ, ಆಡಂಬರವಿಲ್ಲದ ದಟ್ಟ ಕಪ್ಪು ಬಣ್ಣದ ಪರದೆಯ ಹಿನ್ನೆಲೆ, ವಸ್ತ್ರಾಲಂಕಾರದಲ್ಲಿ ತನ್ನ ಉಡುಪು, ಬಳಸವ ಹೂವುಗಳು ಮತ್ತು ಆಭರಣಗಳಲ್ಲಿ ಕಂಡುಬರುವ ವರ್ಣ ವಿನ್ಯಾಸ ಮತ್ತು ವಿಶೇಷ ಗಮನ ವಹಿಸಿ ತಯಾರಿಸಿದ ಕಾರ್ಯಕ್ರಮಪಟ್ಟಿ ಮತ್ತು ಅದು ಯಶಸ್ವಿಯೂ ಆಗುವಂತೆ ಜಾಗರೂಕತೆಯಿಂದ ನಡೆಸಿದ ಪೂರ್ವಸಿದ್ಧತೆ. ದೀಪ, ಧ್ವನಿ ವ್ಯವಸ್ಥೆಗಳ ಬಗ್ಗೆಯೂ ಶಾಂತಾ ಗಮನ ಹರಿಸುತ್ತಿದ್ದುದು ತಿಳಿದ ವಿಷಯವೇ.

ಸಂಗೀತದಲ್ಲೂ ಸಾಕಷ್ಟು ಪಾಂಡಿತ್ಯ ವಿರುವ ಶಾಂತಾ ತನ್ನ ಹಿನ್ನೆಲೆಯ ಸಂಗೀತ ಸಹಕಾರ ವಿಷಯದಲ್ಲೂ ಅಷ್ಟೇ ಜಿಗುಟಿನ ವ್ಯಕ್ತಿ ಎನ್ನಬಹುದು. ಅಭ್ಯಾಸದಲ್ಲಿ ಭರತನಾಟ್ಯದ ಸಂಧರ್ಭದಲ್ಲಿ ಎಂದೂ ಆಕೆ ಅಸಡ್ಡೆ ವಹಿಸಿದ್ದಿಲ್ಲ. ಪ್ರದರ್ಶನವಿರಲಿ ಇಲ್ಲದಿರಲಿ ಆಕೆಯ ದೈನಂದಿನ ಅಭ್ಯಾಸಕ್ಕೆ ಬಿಡುವಿಲ್ಲ. ಇತ್ತೀಚಿನವರೆಗೂ ಆಕೆಯ ಈ ನಿರಂತರ ಅಭ್ಯಾಸಕ್ಕೆ ನೆರವಾಗುತ್ತಿದ್ದವರು ಮೃದಂಗ ವಿದ್ವಾನ್‌ ದಿ. ನೇತಪ್ಪ ಮತ್ತು ನುರಿತ ಗಾಯಕಿ ಶಾಂತರತ್ನಂ ಈರ್ವರಿಗೂ ಭರತನಾಟ್ಯಕ್ಕೆ ನೆರವಾಗುವಂತೆ ಅತ್ಯುತ್ತಮ ಹಿನ್ನೆಲೆ ಮೇಳವನ್ನು ಸೃಷ್ಟಿಸಿಕೊಂಡಿದ್ದರು, ತಮ್ಮ ಪ್ರದರ್ಶನಗಳು ತಮ್ಮ ನಿರೀಕ್ಷಿತ ಮಟ್ಟವನ್ನು ತಲುಪಲು ಬೇಕಾದ ಎಲ್ಲ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದರು.

ಇಂತಹ ಎಡಬಿಡದ ಜವಾಬುದಾರಿಯ ನಡುವೆಯೂ ಶಾಂತಾ ತನ್ನ ಚಿತ್ರ ಬಿಡಿಸುವ ಹವ್ಯಾಸವನ್ನಾಗಲೀ ಪದ್ಯಗಳನ್ನು ರಚಿಸುವ ಪ್ರವೃತ್ತಿಯನ್ನಾಗಲಿ ಕಡೆಗಣಿಸಿರಲಿಲ್ಲ ಅವಕ್ಕೆ ನಿಶ್ಚಿತ ವರ್ಗಗಳಲ್ಲಿ ಬೇಡಿಕೆಯೂ ಇದ್ದುದರಿಂದ ಪ್ರೋತ್ಸಾಹದ ಕೊರೆತೆಯೂ ಇರಲಿಲ್ಲ ವೆಂದೇ ಹೇಳಬೇಕು.

ಈ ಮಧ್ಯೆ ಭಾಮಾಸೂತ್ರಗಳಲ್ಲಿ ಆಸಕ್ತಿ ವಹಿಸಿದ ಶಾಂತಾ ಅದರ ಆಧಾರದ ಮೇಲೆ ಬೇರೊಂದು  ವಿಶಿಷ್ಟ ನೃತ್ಯ ಶೈಲಿಯನ್ನು ಅವಿಷ್ಕಾರ ಮಾಡುವುದರಲ್ಲಿಯೂ ಯಶಸ್ವಿಯಾದರು . ಅದರ ಪ್ರದರ್ಶನಗಳೂ ರಸಿಕರ ಮೆಚ್ಚುಗೆಗಳಿಸಿದ್ದುಂಟು. ಒಂದೇ ವಿಷಾದವೆಂದರೆ ಆಕೆ ತನ್ನ ಕಲಾ ಸಂಪತ್ತನ್ನು ನೃತ್ಯಾಸಕ್ತರಿಗೆ ಕಲಿಸಿ ಅದು ಚಿರಸ್ಥಾಯಿಯಾಗುವಂತೆ ಯಾವುದೇ ಮುತುವರ್ಜಿಯನ್ನು ಬೆಳೆಸಿಕೊಳ್ಳದೆ ಹೋದರು. ಇದಕ್ಕೆ ಮುಖ್ಯ ಕಾರಣ ಅದಕ್ಕೆ ತಕ್ಕ ಮನೋವೃತ್ತಿಯುಳ್ಳ ಶಿಷ್ಯರು  ದೊರಕಿಲ್ಲ ಎಂಬ ಆಕೆಯ ಅಪವಾದ. ಅದು ಎಷ್ಟು ಸಂಗತವೊ ನಿರ್ಧರಿಸುವುದು ಕಷ್ಟ, ಇಷ್ಟ ಮಾತ್ರ ನಿಜ, ಶಾಂತಾರಲ್ಲಿ ಹುದುಗಿರುವ ಅಂತಹ ಬೆಲೆ ಬಾಳುವ ಆಸ್ತಿಗೆ ಹಕ್ಕುದಾರರಾಗಲೀ, ಮುಂದುವರಿಯುವಂತೆ ಎಸೆಗುವ ದಾರಿ ಮುಚ್ಚಿದೆಯೆಲ್ಲಾ ಎಂಬ ಕೊರಗು.

ಈಗ ತನ್ನ ಹರೆಯದ ವಯಸ್ಸಿನಲ್ಲಿ ಶಾಂತ, ಸರ್ಕಾರದ ನೆರವಿನಿಂದ ದೊರೆತ ಧನ ಸಹಾಯದಿಂದ ಶಾಂತಾರಾವ್‌ ಅಕಾಡೆಮಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅದರ ಮುಂದಿನ ಸ್ಥಿತಿ, ಗತಿಗಳೇನೆಂಬುದು ಮಾತ್ರ ಅನಿಶ್ಚಿತವಾಗಿಯೇ ಉಳಿದಿದೆ. ಅದು ಆಕೆಯ ಜೀವನದಷ್ಟೇ ಬಿಡಿಸಲಾಗದ ಒಗಟು ಎಂದರೂ ತಪ್ಪಿಲ್ಲ.

ಆಕೆಯ ಸಾಧನೆಗನುಗುಣವಾಗಿ ಶಾಂತಾರನ್ನು ಅರಸಿ ಬಮದ ಪ್ರಶಸ್ತಿಗಳು ಪುರಸ್ಕಾರಗಳು ಅಪಾರ. ಪ್ರತಿಷ್ಠಿತ ಪದ್ಮಶ್ರೀ ಅಲ್ಲದೇ, ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ, ರಾಜ್ಯ ನೃತ್ಯ ಅಕಾಡೆಮಿಗಳ ಪ್ರಶಸ್ತಿಗಳಲ್ಲದೇ ಕರ್ನಾಟಕದ ಅತ್ಯಂತ ಉನ್ನತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಅವರಿಗೆ ದೊರಕಿದೆ. ಅದರಂತೆ ಅವರ ಕೊಡುಗೆಯನ್ನು ಪಟ್ಟಿಮಾಡಲು ಮಾತ್ರ ಸಾದ್ಯವಿಲ್ಲವಲ್ಲ ಎಂಬುದೊಂದೇ ಕೊರಗು. ಹಾಗಾಗಿದ್ದಲ್ಲಿ ಅದೊಂದು ಸಾರ್ಥಕ ಬದುಕು ಎನ್ನಬಹುದಾಗಿತ್ತು. ಅದಕ್ಕೆಕ ಕಾಲ ಇನ್ನೂ ಮಿಂಚಿಲ್ಲ. ಆ ನಿಟ್ಟಿನಲ್ಲಿ ಶಾಂತಾ ಈಗಲೂ ಮನಸ್ಸು ಮಾಡಿದರೆ ಅದರಿಂದ ಆಕೆಯ ಕೀರ್ತಿಯೂ ಬೆಳಗೀತು. ನೃತ್ಯ ಕ್ಷೇತ್ರವೂ ಶ್ರೀಮಂತಗೊಂಡೀತು.