ಅಂತರಾಯ v.೩ ಮೋಕ್ಷವನ್ನು ಬಯಸಿ ಮುಂದುವರಿಯುವವನಿಗೆ ನಡುನಡುವೆ ಉಂಟಾಗುವ ತೊಡಕು; ಇವುಗಳಲ್ಲಿ ದಾನಾಂತರಾಯ, ಲಾಭಾಂತರಾಯ, ಭೋಗಾಂತರಾಯ, ಉಪಭೋಗಾಂತರಾಯ ಮತ್ತು ವೀರ್ಯಾಂತರಾಯ ಎಂದು ಐದು ಬಗೆ. ಒಟ್ಟಾರೆ ಇವನ್ನು ‘ಅಂತರಾಯಪಂಚಕ’ ಎನ್ನುತ್ತಾರೆ.
ಅಣುಬ್ರ(ವ್ರ)ತ v.೪೦ ಜೈನಗೃಹಸ್ಥರು ಧರಿಸಿ ಪೂರ್ಣ ಶ್ರದ್ಧೆಯಿಂದ ಆಚರಿಸಬೇಕಾದ ಐದು ಚಿಕ್ಕ ವ್ರತಗಳು : ಸತ್ಯ, ಅಹಿಂಸೆ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ (ಅವಶ್ಯಕವಾದುದಕ್ಕಿಂತ ಹೆಚ್ಚಿನದನ್ನು ಕೂಡಿಡದಿರುವುದು)
ಅಭವ್ಯ v.೨೨ ಸಮ್ಯಗ್ದರ್ಶನಾದಿಗಳಲ್ಲಿ ಪರಿಣತವಾಗದೆ ಸಿದ್ಧಸ್ಥಿತಿಗೆ ಏರದ ಚೇತನ
ಅವಧಿಜ್ಞಾನ xii.೮ ಕಾಲದೇಶಗಳ ಮಿತಿಯನ್ನು ಮೀರಿ ಯಾವುದೇ ಜಾಗದಲ್ಲಿ ಮತ್ತು ಯಾವುದೇ ಕಾಲದಲ್ಲಿ ನಡೆಯುವ ಸಂಗತಿಗಳನ್ನು ತಿಳಿದುಕೊಳ್ಳುವ ಶಕ್ತಿ. ಇದನ್ನು ಹೊಂದಿದವನು ‘ಅವಧಿಜ್ಞಾನಿ’.
ಆಸನ್ನಭವ್ಯ iii.೮ವ ಮೋಕ್ಷ ಸಂಪಾದಿಸುವ ಶಕ್ತಿಯಿರುವವನು ಭವ್ಯ. ಮೋಕ್ಷ ಸಂಪಾದನೆಗಿನ್ನೂ ಬಹುಕಾಲ ಕಾಯಬೇಕಾದವನು ದೂರಭವ್ಯ; ಅನತಿಕಾಲದಲ್ಲಿಯೇ (ಕೆಲವೇ ಜನ್ಮಗಳಲ್ಲಿ) ಅದನ್ನು ಪಡೆಯುವ ಶಕ್ತಿಯುಳ್ಳವನು ಅಸನ್ನಭವ್ಯ.
ಏಕಭುಕ್ತ iii.೨೯ ದಿನದಲ್ಲಿ ಒಂದೇ ಹೊತ್ತು ಊಟಮಾಡುವ ವ್ರತ ತೊಟ್ಟವನು
ಕಷಾಯ v.೭ ವ ಕರ್ಮಫಲವನ್ನು ಬೆಳೆಸುವ (ಅಂದರೆ ಸುಖದುಃಖಗಳನ್ನುಂಟು ಮಾಡುವ) ದೋಷಗಳು. ಇವು ಕೋಧ, ಮಾನ, ಮಯಾ ಮತ್ತು ಲೋಭ ಎಂಬ ನಾಲ್ಕು ಬಗೆ. ಪ್ರತ್ಯಾಖ್ಯಾನ ಮತ್ತು ಅಪ್ರತ್ಯಾಖ್ಯಾನ ಎಂಬ ಭೇದದಿಂದ ಎಂಟೂ ಆಗುತ್ತವೆ.
ಕಾಲಲಬ್ಧಿ iii.೩೯ ವ ಗುರೂಪದೇಶದಿಂದ ಆಧ್ಯಾತ್ಮಿಕ ಜೀವನ ಆರಂಭಗೊಂಡು ಮುಂದುವರಿದು ಸಮ್ಯಕ್ತ್ವ ಪಡೆಯುವ ಕಾಲ ಕೂಡಿಬರುವುದೇ ಕಾಲಲಬ್ಧಿ
ಕೇವಲದರ್ಶನಾವವರಣೀಯ iii.೩೯ ವ ಚಕ್ಷುದರ್ಶನಾವರಣೀಯ ಮತ್ತು ಅಚಕ್ಷು ದರ್ಶನಾವರಣೀಯ, ಅವಧಿದರ್ಶನಾವರಣೀಯ ಮತ್ತು ಕೇವಲದರ್ಶನಾವರಣೀಯ ಎಂಬ ನಾಲ್ಕು ಬಗೆಯ ದರ್ಶನಾವಣೀಯಗಳಲ್ಲಿ ಒಂದು. ಕೇವಲದರ್ಶನಕ್ಕೆ ಆವರಣವನ್ನುಂಟುಮಾಡುವ ಕರ್ಮ.
ಕೇವಲಿಜ್ಞಾನಾವರಣೀಯ iii.೬೯ ಕೇವಲಜ್ಞಾನವೆಂದರೆ ಲೋಕಾಲೋಕಗಳಲ್ಲಿಯ ಹಾಗೂ ತ್ರಿಕಾಲಗಳಲ್ಲಿಯ ಸರ್ವವಸ್ತುಗಳ ಸಮಗ್ರ ಜ್ಞಾನ. ಅಂತಹ ಕೇವಲ ಜ್ಞಾನವನ್ನು ಆವರಿಸುವ ಕರ್ಮ ಕೇವಲಜ್ಞಾನಾವರಣೀಯ. ಇದು ಐದು ಬಗೆಯ ಜ್ಞಾನಾವರಣೀಯಗಳಲ್ಲಿ ಒಂದು.
ಚರಣಾನುಯೋಗ iii.೩೫ ಸದಾಚಾರವನ್ನು ನಿರೂಪಿಸುವ ಶಾಸ್ತ್ರ ಭಾಗ.
ತಿರಿಕೋಪಸರ್ಗ xii.೪೧ ತಪಸ್ಸಿನ ಕಾಲದಲ್ಲಿ ಆಗುವ ತೊಂದರೆ. ಇದು ನಾಲ್ಕು ತೆರ : ದೇವೋಪಸರ್ಗ (ದೇವತೆಗಳಿಂದಾಗುವ ತೊಂದರೆಗಳು), ಮನುಷ್ಯೋಪಸರ್ಗ (ಮನುಷ್ಯರಿಂದ ಉಂಟಾಗಬಹುದಾದ ತೊಂದರೆಗಳು), ತಿರಿಕೋಪಸರ್ಗ (ಪ್ರಾಣಿಗಳಿಂದಾಗಬಹುದಾದ ತೊಂದರೆಗಳು) ಮತ್ತು ಅಚೇತನೋಪಸರ್ಗ (ಪ್ರಾಣಿಗಳಲ್ಲದ ವಸ್ತುಗಳಿಂದಾಗ ಬಹುದಾದ ತೊಂದರೆಗಳು).
ದ್ರವ್ಯಾನುಯೋಗ iii.೩೭ ವ ಪ್ರಥಮಾನುಯೋಗ, ಕರಣಾನುಯೋಗ, ಚರಣಾನುಯೋಗ ಮತ್ತು ದ್ರವ್ಯಾನುಯೋಗ ಎಂಬ ನಾಲ್ಕು ಬಗೆಯ ಅನುಯೋಗಗಳಲ್ಲಿ ಒಂದು. ಅನುಯೋಗವೆಂದರೆ ತೀರ್ಥಂಕರರು ಉಪದೇಶಿಸಿದ ಶಾಸ್ತ್ರ ಸಮುದಾಯ.
ಪರೀಷಹ xi.೮೩ ವ ಸಮ್ಯಕ್‌ಜ್ಞಾನಾರ್ಜನೆಗಿರುವ ಇಪ್ಪತ್ತೆರಡು ಬಗೆಯ ಅಡ್ಡಿಗಳು : ಹಸಿವು, ಬಾಯಾರಿಕೆ, ಚಳಿ, ಬಿಸಿ, ಕ್ರಿಮಿ ಕೀಟಗಳ ಕಡಿತ, ಬೆತ್ತಲೆಯಿಂದಾಗುವ ತೊಂದರೆ, ಅರತಿಯ ಬಾಧೆ, ಹೆಂಗಸರಿಂದಾಗುವ ತೊಂದರೆಗಳು, ಓಡಾಡುವಾಗ ಆಗುವ ತೊಂದರೆ, ಮಲಗುವಾಗಿನ ತೊಂದರೆಗಳು, ಕುಳಿತಿರುವಾಗಿನ ತೊಂದರೆಗಳು, ಬೈಗುಳು, ಹೊಡೆತ, ಭಿಕ್ಷೆ ಬೇಡುವಾಗಿನ ಕಷ್ಟನಿಷ್ಠುರ, ಭಿಕ್ಷೆ ಸಿಗದಾಗ ಆಗುವ ಖೇದ, ತಪೋಮಹಿಮೆಗಳು ಕಾಣದಿರುವುದು, ರೋಗ, ಮುಳ್ಳುಕಲ್ಲುಗಳಿಂದಾಗುವ ಬಾಧೆ, ತನ್ನ ಪ್ರಜ್ಞೆಗೆ ಅಹಂಕಾರ ಪಡುವುದು, ಉತ್ತಮ ಜ್ಞಾನಾಕಾಂಕ್ಷಿಯಾಗಿ ಅಜ್ಞಾನಕ್ಕೆ ಕೊರಗುವುದು. ಸ್ನಾನಮಾಡದಿರುವುದರಿಂದಾಗುವ ಬಾಧೆ ಮತ್ತು ಜನ ಪುರಸ್ಕರಿಸದಿದ್ದಾಗ ಆಗುವ ದುಃಖ.
ಪೃಥಕ್ತ್ವವಿತರ್ಕವೀಚಾರ viii.೬೨ ವ ಎಂಟನೆಯ ಗುಣಸ್ಥಾನದಿಂದ ಹನ್ನೆರಡನೆಯ ಗುಣಸ್ಥಾನದ ವರೆಗಿನ ಕೆಲವು ಭಾಗಗಳವರೆಗೆ ನಡೆಯುವಂತಹ ಶುಕ್ಲಧ್ಯಾನ; ಪ್ರಥಮಶುಕ್ಲಧ್ಯಾನ.
ಪ್ರತ್ಯಾಖ್ಯಾನ iii.೩೯ ವ ಮುಂದೆ ಪಾಪಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು ಮತ್ತು ಸೀಮಿತ ಅವಧಿಯವರೆಗೆ ಆಹಾರಾದಿಗಳನ್ನು ತ್ಯಜಿಸುವುದು. ಪಾಪಮಾಡುವುದಿಲ್ಲವೆಂದು ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡುವುದು ‘ಮನಃಪ್ರತ್ಯಾಖ್ಯಾನ’; ಮಾತಿನಲ್ಲಿ ಕೆಡುಕನ್ನು ಮಾಡುವುದಿಲ್ಲವೆಂಬುದು ‘ವಚನಪ್ರತ್ಯಾಖ್ಯಾನ’; ಮತ್ತು ಶರೀರದಿಂದ ಪಾಪಕೃತ್ಯಗಳನ್ನು ಎಸಗುವುದಿಲ್ಲವೆಂದು ಪ್ರತಿಜ್ಞೆಗೈಯುವುದು ‘ಶರೀರಪ್ರತ್ಯಾಖ್ಯಾನ’.
ಪ್ರಾಯೋಗ್ಯತಾಲಬ್ಧಿ iii.೩೯ ವ ಕರ್ಮವು ಕಾಲಕ್ರಮೇಣ ಕಡಿಮೆಯಾಗುವ ಪ್ರಾಪ್ತಿ. ಲಬ್ಧಿಯಲ್ಲಿ ಐದು ಬಗೆ : ಕ್ಷಯೋಪಶಮ, ವಿಶುದ್ಧಿ, ದೇಶನಾ, ಪ್ರಾಯೋಗ್ಯತಾ ಮತ್ತು ಕರಣ.
ಮಿಥ್ಯಾತ್ವ i.೫೨ ಆತತ್ವಶ್ರದ್ಧಾನದ ಉದಯದಿಂದ ಜೀವನು ಆಪ್ತರು ಮತ್ತು ತೀರ್ಥಂಕರರು ಹೇಳಿದ ಮೋಕ್ಷಮಾರ್ಗದಿಂದ ಪರಾಙ್ಮುಖನಾಗಿ ಸಮ್ಯಕ್ತ್ವರಹಿತನಾಗಿ ಮಿಥ್ಯಾದೃಷ್ಟಿಯನ್ನು ಹೊಂದುವುದು.
ವಿಭಂಗ viii.೪ ವ ‘ವಿಭಂಗ’ ಅಥವಾ ‘ವಿಭಂಗಜ್ಞಾನ’ವೆಂದರೆ ಆತ್ಮನಿಗೆ ಅಹಿತವನ್ನುಂಟುಮಾಡುವ ಪದಾರ್ಥಗಳನ್ನು ತಿಳಿಯಬಲ್ಲ ಜ್ಞಾನ.
ವ್ಯಂತರ xi.೫೪ ವ ಜ್ಯೋತಿಷಿ, ವಿಮಾನವಾಸೀ, ಭವನಪತಿ ಮತ್ತು ವ್ಯಂತರ ಎಂಬ ನಾಲ್ಕು ಬಗೆಯ ದೇವತಾವರ್ಗಗಳಲ್ಲಿ ಒಂದು. ಮಹಾಮೇರು ಪರ್ವತದ ತುದಿಯಿಂದ ಭವನಲೋಕದವರೆಗೂ ಇರುವ ದೇವತೆಗಳು.
ಶ್ರಾವಕವ್ರತ vi.೪೧ ವ ಜೈನ ಗೃಹಸ್ಥರು ಅನುಸರಿಸಬೇಕಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಅಣುವ್ರತಗಳು; ದಿಗ್ವ್ರತ, ದೇಶವ್ರತ, ದಂಡವಿರತಿವ್ರತ, ಅತಿಥಿಸಂಗ್ರಹ, ಸಲ್ಲೇಖನ ಎಂಬ ನಾಲ್ಕು ಶಿಕ್ಷಾವ್ರತಗಳು – ಇವೆಲ್ಲ ಸೇರಿ ಶ್ರಾವಕವ್ರತ ಎನ್ನಿಸಕೊಳ್ಳುತ್ತದೆ.
ಶ್ರಾವಕಾಚಾರ vi.೨೫ ವ ಶ್ರಾವಕಧರ್ಮದ ಆಚರಣೆ.
ಸಾಮಾನಿಕ ix.೩೧ ವ ಒಂದು ದೇವತಾವರ್ಗ ಮತ್ತು ಅದಕ್ಕೆ ಸೇರಿದ ದೇವತೆ.