ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರಕಾರದ ಆರ್ಥಿಕ ನೆರವಿನಿಂದ ರೂಪಿಸಿ, ಪ್ರಕಟಿಸುತ್ತಿರುವ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು. ೨೦೦೬ರ ಶರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಈ ಸಮಗ್ರ ಕನ್ನಡ ಜೈಸಾಹಿತ್ಯ ಸಂಪುಟಗಳ ಯೋಜನೆಯನ್ನು ರೂಪಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ಸಮಗ್ರ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಸಂಪುಟಗಳನ್ನು ಹೊರತಂದಿದ್ದು, ಈಗ ಸಮಗ್ರ ಜೈನಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಶರೀರವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನಸಾಹಿತ್ಯ ಸಂಪುಟದ ಯೋಜನೆಯನ್ನು ೨೦೦೬ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಭಾಗವಾಗಿ ಕರ್ನಾಟಕ ಸರಕಾರ ಅಂಗೀಕರಿಸಿ ಸಾರಸ್ವತ ಮಹಾಮಸ್ತಕಾಭಿಷೇಕ ಮಾಡಿದ ಪುಣ್ಯಕ್ಕೆ ಪಾತ್ರವಾಗಿದೆ. ಈ ಯೋಜನೆಯ ಮಹತ್ವವನ್ನು ಮನಗಂಡು ಉದಾರವಾದ ಆರ್ಥಿಕ ನೆರವು ನೀಡಿದ ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್‌. ಧರ್ಮಸಿಂಗ್‌ ಅವರಿಗೂ, ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ.ಪಿ. ಪ್ರಕಾಶ್‌ ಅವರಿಗೂ, ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್‌.ಡಿ. ರೇವಣ್ಣ ಅವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಂದು ಚಾಲನೆಗೊಂಡ ಯೋಜನೆಗೆ ಮತ್ತೆ ಜೀವ ತುಂಬಿದ ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್‌. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಸ್ತಾವವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪರಿಷತ್ತಿನ ಸದಸ್ಯರಾದ ಡಾ. ಎಂ. ಆರ್‌. ತಂಗಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಲ್‌. ಹನುಮಂತಯ್ಯ, ಶ್ರೀ ಹಸನಬ್ಬ ಅವರ ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಮತ್ತು ಜೈನಸಾಹಿತ್ಯದಲ್ಲಿ ವಶೇಷ ಪಾಂಡಿತ್ಯವುಳ್ಳ ಡಾ. ಹಂಪ, ನಾಗರಾಜಯ್ಯ ಮತ್ತು ಡಾ. ಕಮಲಾ ಹಂಪನಾ ಅವರು ಈ ಸಂಪುಟಗಳ ರೂಪರೇಷೆಯಿಂದ ತೊಡಗಿ ಕರ್ನಾಟಕ ಸರ್ಕಾರಕ್ಕೆ ಇದರ ಮಹತ್ವವನ್ನು ಮನವರಿಕೆ ಮಾಡಿಕೊಡುವವರೆಗೆ ವಿಶೇಷವಾದ ಕಾಳಜಿ ವಹಿಸಿ ಸಹಕರಿಸಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಸಾಹಿತ್ಯ ಕೃತಿಗಳ ಮೂಲಕ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಾಕಾವ್ಯಗಳು. ಶಿವಕೋಟ್ಯಾಚಾರ್ಯರ ವೊಡ್ಡಾರಾಧನೆ ಕನ್ನಡ ಮೊತ್ತಮೊದಲ ಉಪಲಬ್ಧ ಗದ್ಯಗ್ರಂಥ. ಸಂಸ್ಕೃತವೇ ಸಾಹಿತ್ಯನಿರ್ಮಾಣದ ಪ್ರಧಾನ ಭಾಷೆಯಾಗಿದ್ದ ಭಾರತ ದೇಶದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯ ರಚನೆ ಮಾಡುವ ಮೂಲಕ ಜೈನಕವಿಗಳು, ಪ್ರಾದೇಶಿಕ ಸಾಹಿತ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು. ಆದಿಕವಿ ಪಂಪ ಇದು ನಿಚ್ಚಂ ಪೊಸತು ಅರ್ಣವಂಬೋಲ್ಅತಿ ಗಂಭೀರಂ ಕವಿತ್ವಂ ಎಂದು ಹೇಳಿದ್ದಾನೆ. ಪಂಪಕವಿಯು ಆದಿಪುರಾಣದಲ್ಲಿ ಆದಿನಾಥನ ಭವಾವಳಿಗಳನ್ನು ಮತ್ತು ಆತನ ಮಕ್ಕಳಾದ ಭರತ ಬಾಹುಬಲಿಯರು ರಾಜ್ಯದ ಒಡೆತನಕ್ಕಾಗಿ ಪರಸ್ಪರ ಎದುರಾಳಿಗಳಾಗುವ ಸನ್ನಿವೇಶವನ್ನು ಚಿತ್ರಿಸಿದ್ದಾನೆ. ಅಣ್ಣ ತಮ್ಮಂದಿರ ನಡುವೆ ಮುಖಾಮುಖಿ ಯುದ್ಧದಲ್ಲಿ ಅಣ್ಣ ಭರತ ಸೋಲುತ್ತಾನೆ, ತಮ್ಮ ಬಾಹುಬಲಿ ಗೆಲ್ಲುತ್ತಾನೆ. ಆದರೆ ಈ ರೀತಿ ಗೆದ್ದ ಬಾಹುಬಲಿಯು ರಾಜ್ಯದ ಒಡೆತನವನ್ನು ನಿರಾಕರಿಸಿ ವೈರಾಗ್ಯಪರನಾಗಿ ಪ್ರತಿಮಾ ಯೋಗದಲ್ಲಿ ನಿಂತು ಗೊಮ್ಮಟನಾಗುತ್ತಾನೆ. ಅಂತಹ ವೈರಾಗ್ಯದ ಪ್ರತಿಮೆಯಾದ ಗೊಮ್ಮಟನ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕನ್ನಡ ಸಾಹಿತ್ಯದ ಗೊಮ್ಮಟ ಸದೃಶ ಜೈನಕೃತಿಗಳನ್ನು ಮತ್ತೆ ಹೊಸದಾಗಿ ಶುಭ್ರಗೊಳಿಸಿ ಸಾಹಿತ್ಯ ಮತ್ತು ಶಾಸ್ತ್ರದ ವಿಭಿನ್ನ ಅರ್ಚನೆಗಳ ಮೂಲಕ ಅವುಗಳಿಗೆ ಪ್ರಕಟಣೆಯ ಅಭಿಷೇಕವನ್ನು ಮಾಡಲಾಗಿದೆ.

ಆದಿಕವಿ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪ್ರಾಚೀನ ಕಾವ್ಯಗಳಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯ ಮತ್ತು ಪುರಾಣಗಳ ನಿರ್ಮಾಣದ ಒಂದು ಪರಂಪರೆ ಕಾಣಿಸಿಕೊಳ್ಳುತ್ತದೆ. ಪಂಪನಿಂದ ತೊಡಗಿ ಪೊನ್ನ, ರನ್ನರಿಂದ ಮುಂದುವರಿದು ಮುಂದಿನ ಕವಿಗಳಲ್ಲಿ ಆಗಮಿಕ ಕಾವ್ಯಗಳಾದ ತೀರ್ಥಂಕರರ ಪುರಾಣ ಕೃತಿಗಳ ನಿರ್ಮಾಣ ಒಂದು ನೋಂಪಿಯಂತೆ ಕಾಣಸಿಗುತ್ತದೆ. ಇನ್ನೊಂದು ಕಡೆ ನಯಸೇನ, ಜನ್ನ, ಬ್ರಹ್ಮಶಿವ, ವೃತ್ತವಿಲಾಸರಂತಹ ಕವಿಗಳು ಲೌಕಿಕ ಕಥೆಗಳಿಗೆ ಜೈನ ಆವರಣವನ್ನು ನಿರ್ಮಾಣ ಮಾಡಿ ಲೌಕಿಕ-ಧಾರ್ಮಿಕಗಳನ್ನು ಒಂದು ಗೂಡಿಸುವ ವಿಶಿಷ್ಟ ಕಲೆಗಾರಿಕೆಯನ್ನು ಮೆರೆಯುತ್ತಾರೆ. ಹೀಗೆ ೨೪ ತೀರ್ಥಂಕರರ ಪುರಾಣಕಾವ್ಯ ಒಂದು ಧಾರೆಯಾದರೆ ಚರಿತ್ರೆ ಲೌಕಿಕ ಕಥೆ ನೀತಿ ಕಥೆಗಳ ಮೂಲಕ ಸಮಕಾಲೀನ ಬದುಕಿಗೆ ಸ್ಪಂದಿಸಿದ ವೈವಿಧ್ಯಮಯ ಕಾವ್ಯಪರಂಪರೆಯ ಪ್ರಾಚೀನ ಜೈನಸಾಹಿತ್ಯದ ಇನ್ನೊಂದು ಮುಖ್ಯಧಾರೆಯಾಗಿದೆ. ಇದರೊಂದಿಗೆ ಗದ್ಯ ಸಾಹಿತ್ಯದ ದೃಷ್ಟಿಯಿಂದ ಶಿವಕೋಟ್ಯಾಚಾರ್ಯರ ವೊಡ್ಡಾರಾಧನೆ ಮತ್ತು ಚಾವುಂಡರಾಯನ ಚಾವುಂಡರಾಯ ಪುರಾಣ ಇನ್ನೊಂದು ಪರಂಪರೆಯನ್ನು ಕಟ್ಟಿಕೊಡುತ್ತದೆ. ಒಂದು ಕಡೆ ಜೈನಧರ್ಮದ ಚೌಕಟ್ಟಿನ ಒಳಗಡೆ ಕತೆಗಳು ಮಾಧ್ಯಮವಾಗಿ ಬಳಕೆಯಾದರೆ, ಇನ್ನೊಂದೆಡೆ ಜೈನಧರ್ಮದ ಮೇಲ್ಮೈಗಾಗಿ ಸಾಧನೆ ಮಾಡಿದ ಸಾಂಸ್ಕೃತಿಕ ವ್ಯಕ್ತಿಯ ಸುತ್ತ ಕಥನವೊಂದು ನಿರ್ಮಾಣವಾಗುತ್ತದೆ. ಇವುಗಳ ನಡುವೆ ಇಮ್ಮಡಿ ನಾಗವರ್ಮನಂತಹ ಶಾಸ್ತ್ರಕಾರನು ಭಾಷೆ ಮತ್ತು ಕಾವ್ಯ ಲಕ್ಷಣಕ್ಕೆ ಸಂಬಂಧಿಸಿದ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾನೆ. ಮಧ್ಯಯುಗೀನ ಕಾಲದಲ್ಲಿ ರತ್ನಾಕರವರ್ಣಿಯಂತಹ ಕವಿಯು ಸಾಂಗತ್ಯದಲ್ಲಿ ಭರತೇಶ ವೈಭವ ಕಾವ್ಯರಚಿಸಿ ಜೈನ ಕಾವ್ಯಗಳ ಆಶಯದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುತ್ತಾನೆ. ೧೮೦೦ರ ಕಾಲಕ್ಕೆ ಬರುವ ದೇವಚಂದ್ರನ ರಾಜಾವಳಿ ಕಥೆಯು ಆಧುನಿಕ ಕನ್ನಡದ ಪೂರ್ವದ ಕಥಾರಚನೆಯ ಅರುಣೋದಯದ ಹೆಜ್ಜೆಯಾಗಿ ಮುಖ್ಯವಾದ ಕೃತಿಯಾಗಿದೆ.

ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನಕವಿಗಳು ೫೨೦ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಕೃತಿಗಳು ಲಭ್ಯವೆಂದು ನಾವು ಭಾವಿಸಿದರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯ ಎನ್ನಿಸುತ್ತದೆ. ಮಹಾಕಾವ್ಯದಿಂದ ತೊಡಗಿ ಮುಕ್ತಕದ ವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದವರೆಗೆ, ಜನಪದ ಕಥೆಯಿಂದ ಆರಂಭಿಸಿದ ವಿಡಂಬನ ಸಾಹಿತ್ಯದವರೆಗೆ ಕನ್ನಡ ಜೈನಸಾಹಿತ್ಯದ ಕರಹು ವ್ಯಾಪಿಸಿಕೊಂಡಿದೆ.

ಪಂಪ ಕವಿಯು ತನ್ನ ಕಾವ್ಯದಲ್ಲಿ ಮಾರ್ಗ ಮತ್ತು ದೇಸಿಗಳ ಕುರಿತು ಮಾತನಾಡುತ್ತಾನೆ. ಕನ್ನಡ ಜೈನಸಾಹಿತ್ಯದ ಬಗ್ಗೆ ಹೇಳುವಾಗ ಜೈನ ಪುರಾಣಗಳ ಪರಿಭಾಷೆ ಮತ್ತು ಪರಿಮಾಣಗಳು ಮಾರ್ಗವಾದರೆ, ಇತಿಹಾಸ, ಸಮಾಜ, ಲೌಕಿಕ ಪ್ರಪಂಚ ದೇಸಿಯಾಗುತ್ತದೆ. ಪಂಪನ ಕಾವ್ಯಗಳ ನಾಣ್ನುಡಿಯಿಂದ ತೊಡಗಿ, ವಡ್ಡಾರಾಧನೆ ಕತೆಗಳ ಗ್ರಾಮೀಣ ಬದುಕಿನಿಂದ ಮುಂದುವರಿದು, ನಯಸೇನನ ಧರ್ಮಾಮೃತದ ಕಥೆಗಳ ಮಾಲೋಪಮೆಗಳಿಂದ ಹಾದು ಬಂದು, ರತ್ನಾಕರನ ಭರತೇಶ ವೈಭವದ ನುಡಿಗಟ್ಟುಗಳ ವರೆಗೆ ಕನ್ನಡದ ನಿಜವಾದ ದೇಸಿಯನ್ನು ಜೈನ ಸಾಹಿತ್ಯ ನಿರ್ಮಿಸಿಕೊಂಡಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಕಾವ್ಯ ಪ್ರಕಾರ ಜೈನರಿಂದ ಆರಂಭವಾಯಿತು. ಸಾಂಗತ್ಯಕಾವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಜೈನಕವಿಗಳು, ಗದ್ಯವನ್ನು ಮೊದಲು ಮಾಡಿದವರು ಜೈನ ಕಥೆಗಾರರು, ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರದಂತಹ ಶಾಸ್ತ್ರಪಾಂಡಿತ್ಯವನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರು ಜೈನರು. ಹೀಗೆ ಕನ್ನಡದ ವಿದ್ವತ್ತು, ವಿವೇಕ ಮತ್ತು ಮಿಸ್ಮಯ ಕನ್ನಡ ಸಾಹಿತ್ಯದಲ್ಲಿ ಜೈನ ಕವಿಗಳಿಂದ ಅಪೂರ್ವವಾಗಿ ನಿರ್ಮಾಣವಾಗಿದೆ. ಮತ್ತು ಪ್ರಸಾರವಾಗಿದೆ.

ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಜೈನ ಸಾಹಿತ್ಯ ಯೋಜನೆಯನ್ನು ನಿಗದಿತ ಕಾರ್ಯವಿಧಾನದ ಮೂಲಕ ರೂಪಿಸಿಕೊಂಡು ವ್ಯವಸ್ಥಿಯವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ತೀರ್ಮಾನಿಸಿಕೊಂಡೆವು. ಇದಕ್ಕಾಗಿ ಈ ಕ್ಷೇತ್ರದಲ್ಲಿ ನುರಿತ ನಾಡಿನ ಹಿರಿಯರನ್ನೊಳಗೊಂಡ ಉನ್ನತ ಸಲಹಾ ಸಮಿತಿ ಹಾಗೂ ಸಂಪನ್ನೂಲ ವಿದ್ವಾಂಸರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲು ಬಯಸಲಾತು. ಅದರಂತೆ ನಾಡಿನ ಗಣ್ಯ ವಿದ್ವಾಂಸರು ಈ ಬೃಹತ್‌ ಯೋಜನೆಯಲ್ಲಿ ಪಾಲ್ಗೊಂಡರೆಂಬುದು ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ.

ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟದ ಯೋಜನೆಯ ಉನ್ನತ ಸಲಹಾ ಸಮಿತಿಯ ಸದಸ್ಯರಾದ ಡಾ. ದೇ. ಜವರೇಗೌಡ, ಡಾ. ಜಿ.ಎಸ್‌. ಶಿವರುದ್ರಪ್ಪ, ಡಾ, ಡಿ. ಟಿ. ವೆಂಕಚಾಚಲ ಶಾಸ್ತ್ರೀ, ಡಾ. ಹಂಪ. ನಾಗರಾಜಯ್ಯು., ಡಾ. ಕಮಲಾ ಹಂಪನಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ. ಎಂ. ಕಲಬರ್ಗಿ, ಡಾ. ಎಚ್‌. ಜೆ. ಲಕ್ಕಪ್ಪಗೌಡ, ಡಾ. ಎಂ. ಜಿ. ಬಿರಾದಾರ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶಾಲಯದ ನಿರ್ದೆಶಕರು, ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜಾರಾಯಿ ಇಲಾಖೆಯ ಕಾರ್ಯರ್ಶಿಗಳು ತಮ್ಮ ಸೂಚನೆ ಸಲಹೆಗಳಿಂದ ಈ ಸಂಪುಟಗಳ ಸ್ವರೂಪ ಮತ್ತು ಅನುಷ್ಠಾನಗಳ ಎಲ್ಲಾ ಹಂತಗಳಲ್ಲಿಯೂ ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಸಾರಂಗದ ನಿರ್ದೇಶಕರಾದ ಪ್ರೋ. ಮಲ್ಲೇಪುರಂ. ಜಿ. ವೇಂಕೇಟಶ ಅವರು ಸಮಿತಿಯ ಸಂಚಾಲಕರಾಗಿ ಇಡೀ ಯೋಜನೆಯ ಅನುಷ್ಠಾನದ ಕೆಲಸವನ್ನು ಹೆಜ್ಜೆ ಹೆಜ್ಜೆಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಲಸಚಿವರಾದ ಪ್ರೋ. ಕರೀಗೌಡ ಬೀಚನಹಳ್ಳಿ ಅವರು ಯೋಜನೆಯ ಆಡಳಿತ್ಮಾಕ ನಿರ್ವಹಣೆಯನ್ನು ಅಚ್ಚುಕಟ್ಟಗಿ ನಡೆಸಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಜೈನ ಸಂಸ್ಕೃತಿ ಅಧ್ಯನ ಪೀಠದ ಸಂಚಾಲಕರಾದ ಡಾ. ಎಂ. ಉಷಾ ಅವರು ಈ ಯೋಜನೆಯನ್ನು ರೂಪಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ.

ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪ್ರಕಟಣ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಗುರುತಿಸಿಕೊಳ್ಳಲಾಯಿತು. ಇದು ಡೆಮ್ಮಿ ೧/೮ ಆಕಾರದ ಸುಮಾರು ಇಪ್ಪತ್ತು ಸಂಪುಟಗಳಿಂದ ಕೂಡಿರಬೇಕು. ಪ್ರತಿ ಸಂಪುಟವೂ ಅಂದಾಜು ೬೦೦ ಪುಟಗಳಾಗಿರಬೇಕು. ಸಂಪುಟದ ಸಂಪಾದಕರು ಆಯಾ ಸಂಪುಟಕ್ಕೆ ಸೂಕ್ತವಾದ ಕವಿ ಕಾವ್ಯ ಪರಿಚಯ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವ ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಬರೆಯಬೇಕೆಂದು ನಿರ್ಣಯಿಸಲಾಯಿತು. ಸಂಪುಟಗಳು ಜನಪ್ರಿಯ ಅವೃತ್ತಿ ಆಗಿರುವುದರಿಂದ ಪಠ್ಯಗಳಲ್ಲಿ ಪಾಠಾಂತಗಳನ್ನು ನೀಡಬೆಕಾಗಿಲ್ಲ. ಪ್ರತಿಯೊಬ್ಬ ಕವಿಯ ಸಮಗ್ರ ಕಾವ್ಯವನ್ನು ಒಂದು ಸಂಪುಟದಲ್ಲಿ ತರುವುದೆಂದು ಸಮಿತಿ ತೀರ್ಮಾನಿಸಿತು. ವಸ್ತು ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ಎರಡೆರಡು ಕಾವುಗಳನ್ನು ಒಂದೇ ಸಂಪುಟದಲ್ಲಿ ಅಳವಡಿಸುವುದು ಸೂಕ್ತವೆಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಸಂಪಾದನೆಗೊಂಡು, ಪ್ರಕಟವಾಗಿರುವ ಕಾವ್ಯಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳುವುದೆಂದೂ ಅಪೂರ್ವ ಕೃತಿಗಳನ್ನು ಈ ಮಾಲೆಯಲ್ಲಿ ಸೇರಿಸಿಕೊಳ್ಳವುದೆಂದೂ ನಿಶ್ಚಯಿಸಲಾಯಿತು. ಪಂಪ, ಪೊನ್ನ, ರನ್ನ, ಜನ್ನ, ನಾಗವರ್ಮ, ನಯಸೇನ, ಸಾಳ್ವ ಮುಂತಾದವರ ಕಾವ್ಯಗಳು ಈಗಾಗಲೇ ಮುದ್ರಣಗೊಂಡಿವೆ. ಆದರೂ ಪಾಠಕ್ಲೇಶ ಆರ್ಥಕ್ಲೇಶಗಳು ಹೇಗೋ ಉಳಿದುಬಿಟ್ಟಿದೆ. ಆದುದರಿಂದ ಎಲ್ಲ ಮುದ್ರಿತ ಪಾಠಗಳನ್ನು ಗಮನಿಸಿ ಈ ಎಲ್ಲ ಕ್ಲೇಶಗಳನ್ನು ನಿವಾರಿಸಿ ಸರ್ವ ಪ್ರತಿಪಾಠಗಳನ್ನು ಇಟ್ಟುಕೊಳ್ಳುವುದು ಅಗತ್ಯವೆಂದು ಸಮಿತಿ ಬಾವಿಸಿತು. ಗ್ರಂಥದ ಕೊನೆಗೆ ಶಬ್ಧಾರ್ಥ ಕೋಶ, ಪಾರಿಭಾಷಿಕ ಕೋಶ, ಸಹಾಯಕ ಸಾಹಿತ್ಯ ನೀಡುವುದು ಆಗತ್ಯವೆಂದು ಸಂಪಾದಕರಿಗೆ ಬಿನ್ನವಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇಪ್ಪತ್ತು ಸಂಪುಟಗಳು ನಿಮ್ಮ ಎದುರಿಗಿವೆ. ಶ್ರಮಸಾಧ್ಯವಾದ ಇಂಥ ಕಾವ್ಯಗಳನ್ನು ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ವಿದ್ವಾಂಸರಾದ ಎಲ್ಲ ಸಂಪಾದಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಈಗ ನಮಗೆ ಸಾಧ್ಯವಾಗಿದೆ.

ಪ್ರಾಚೀನ ಕನ್ನಡ ಜೈನ ಸಾಹಿತ್ಯ ಪರಂಪರೆಯಲ್ಲಿ ಶಾಂತಿನಾಥ ‘ಸುಕುಮಾರ ಚರಿತಂ’ ಚಂಪೂಕಾವ್ಯವು ಅನೇಕ ದೃಷ್ಟಿಗಳಿಂದ ಅನನ್ಯವಾದ ವಿಶಿಷ್ಟವಾದ ಕೃತಿಯಾಗಿದೆ. ಹತ್ತನೆಯ ಶತಮಾನದ್ದೆಂದು ಹೇಳಲಾಗುವ ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ, ಜೈನ ಕಥೆಗಳ ಗದ್ಯ ರೂಪದ ಸಂಗ್ರಹ. ಅದೇ ಶತಮಾನದ ಅದಿಕವಿ ಪಂಪನ ಆದಿಪುರಾಣ ಮೊದಲನೆಯ ತೀರ್ಥಂಕರನಾದ ಆದಿನಾಥನ ಜೀವನ ಚರಿತೆಯ ಪುರಾಣ, ಪಂಪನ ಇನ್ನೊಂದು ಕಾವ್ಯವಾದ ವಿಕ್ರಮಾರ್ಜುನ ವಿಜಯಂ ಪುರಾಣ ಮತ್ತು ಇತಿಹಾಸಗಳನ್ನು ಸಮೀಕರಣ ಮಾಡಿದ ಲೌಕಿಕ ಚಂಪೂ ಕಾವ್ಯ, ವೊಡ್ಡರಾಧನೆಯ ಜೈನ ಕಥೆಗಳು ಲೌಕಿಕದ ಮಾದರಿಯಲ್ಲಿ ಇದ್ದುಕೊಂಡೇ ಜೈನಧರ್ಮದ ಸಾರವನ್ನು ಪ್ರಾಸಾರ ಮಾಡುವ ಲೌಕಿಕ ಉದ್ದೇಶವನ್ನು ಹೊಂದಿವೆ. ಅದಿಪುರಾಣದಂಥ ಪುರಾಣಕಾವ್ಯ ಜೈನ ತೀರ್ಥಂಕರ ಜಿವನ ಚರಿತೆಯಾಗಿ ನಿರ್ದಿಷ್ಟ ಆಗಮಿಕ ಚೌಕಟ್ಟಿಗೆ ಒಳಗಾಗಿದೆ. ಈ ಕೃತಿಗಳ ಬೆನ್ನಲ್ಲೆ ಬಂದ ಹನ್ನೊಂದನೆಯ ಶತಮಾನದ ಸುಕುಮಾರಚರಿತೆ, ವೊಡ್ಡಾರಾಧನೆ ಹಾಗೂ ಆದಿಪುರಾಣದ ಆಶಯಗಳನ್ನು ಒಟ್ಟುಗೂಡಿಸಿಯೂ ಅವುಗಳಿಂತ ಪ್ರತ್ಯೇಕ ಉಳಿಯುತ್ತದೆ.

ವೊಡ್ಡಾರಾಧನೆಯಲ್ಲಿನ ಸುಕುಮಾರನ ಗದ್ಯಕತೆ ಶಾಂತಿನಾಥನಲ್ಲಿ ಕೃತಿಯಾಗಿ ವಿಸ್ತರಣಗೊಂಡಿದೆ. ಪಂಪನ ಆದಿಪುರಾಣದ ವಿನ್ಯಾಸವಿದ್ದರೂ ಸುಕುಮಾರ ಚರಿತೆ ತೀರ್ಥಂಕರರ ಪುರಾಣಚರಿತೆ ಅಲ್ಲ. ಲೌಕಿಕ ಕಥೆಯೊಂದಕ್ಕೆ ಚಂಪೂಕಾವ್ಯದ ಆಕಾರವನ್ನು ತೊಡಿಸಿ ಜೈನ ಧರ್ಮದ ಸಾರ ಮತ್ತು ಪ್ರಸಾರ ಮಾಡುವ ಜಾಣತನ ಶಾಂತಿನಾಥನಲ್ಲಿ ಕಾಣಿಸುತ್ತದೆ. ಕೆಲವು ಶತಮಾನಗಳ ಬಳಿಕ ಬರುವ ನಯಸೇನ ಧರ್ಮಾಮೃತದ ಜತೆಗೆ ಹೋಲಿಸುವಾಗ ಶಾಂತಿನಾಥನ ವಿಶಿಷ್ಟತೆ ಗಮನ ಸೆಳೆಯುತ್ತದೆ. ನಿಜವಾದ ಅರ್ಥದಲ್ಲಿ ಮಾರ್ಗದ ದೇಹದೊಳಗೆ ದೇಸಿಯ ಆತ್ಮವನ್ನು ಮೊದಲು ತಂದುಕೊಟ್ಟವನು ಶಾಂತಿನಾಥ. ಇದಕ್ಕೆ ಪೂರಕವಾಗಿ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಬಹುದು. ಶಾಂತಿನಾಥ ಸುಕುಮಾರ ಚರಿತೆ ಕನ್ನಡ ಛಂದಸ್ಸಿನ ಚರಿತ್ರೆಯಲ್ಲಿ ಹೆಚ್ಚು ಬಾರಿ ಉಲ್ಲೇಖಗೊಂಡ ಕೃತಿ. ಈ ಚಂಪೂ ಕಾವ್ಯದಲ್ಲಿ ಕನ್ನಡದ ದೇಸಿಮಟ್ಟುಗಳಾದ ತ್ರಿಪದಿ, ರಗಳೆ, ಪಿಯಕ್ಕರ ಮತ್ತು ಅಂಶಷಟ್ಟದಿ ಕೂಡ ಪ್ರಯೋಗವಾಗಿದೆ. ರಗಳೆಯ ಮೂಲರೂಪವಾದ ಪದ್ದಳಿ ಅಥವಾ ಪಜ್ಝಟಿಕಾ ನಮಗೆ ಪ್ರಯೋಗವಾಗಿದೆ. ಮೊತ್ತಮೊದಲು ದೊರಕುವುದು ಶಾಂತಿನಾಥನ ಸುಕುಮಾರ ಚರಿತೆ ಯಲ್ಲಿಯೆ. ಪಂಪನ ಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಒಂದು ವಿಶಿಷ್ಟ ಛಂದೋರೂಪ ಅಂಶಷಟ್ಟದಿ ಕನ್ನಡ ಕಾವ್ಯಗಳಲ್ಲಿ ಮೊದಲು ಕಾಣಿಸಿಕೊಳ್ಳುವುದು ಸುಕುಮಾರಚರಿತದಲ್ಲಿ. ಷಟ್ಟದ ಅಥವಾ ಮೂಲ ಷಟ್ಟದಿ ಎನ್ನುವ ಈ ಛಂದೋಬಂಧವನ್ನು ಈಗಾಗಲೇ ಛಂದಸ್ಸಿನ ವಿದ್ವಾಂಸರು ಸಾಕಷ್ಟು ಚರ್ಚಿಸಿದ್ದಾರೆ. ಹೀಗೆ ವಸ್ತು ಭಾಷೆ ಛಂದಸ್ಸುಗಳಲ್ಲಿ ಕನ್ನಡತನವನ್ನು ಇಟ್ಟುಕೊಂಡು ಚಂಪೂವಿನ ಕಾವ್ಯ ಮಾದರಿಯಲ್ಲಿ ಸುಕುಮಾರಚರಿತವನ್ನು ಶಾಂತಿನಾಥ ರಚಿಸುವುದು ಕನ್ನಡ ಜೈನಸಾಹಿತ್ಯದ ಇತಿಹಾಸದಲ್ಲಿ ಒಂದು ಕುತೂಹಲಕಾರಿಯಾದ ಸಂಗತಿ. ಜೈನ ಕವಿಗಳು ಉದ್ದಕ್ಕೂ ದೇಸಿಯ ಕಡೆ ತುಡಿಯುತ್ತಿದ್ದರು. ಎನ್ನುವುದಕ್ಕೆ ಈ ಶಾಂತಿನಾಥನ ಸುಕುಮಾರಚರಿತೆ ಉತ್ತಮ ಸಾಕ್ಷಿಯಾಗಿದೆ. ಜನ ನಯಸೇನ ಬ್ರಹ್ಮಶಿವ ವೃತ್ತವಿಲಾಸರಂಥ ಜೈನ ಕಥನಕವಿಗಳಿಗೆ ಸುಕುಮಾರ ಕೃತಿ ಪ್ರೇರಣೆಯನ್ನು ಕೊಟ್ಟಿದೆ.

ಶಾಂತಿನಾಥ ಬಳಸುವ ಅನೇಕ ದೇಸಿಪದಗಳು ಕನ್ನಡ ಮತ್ತು ಸಂಸ್ಕೃತಗಳ ಪರ – ವಿರೋಧಗಳ ಚರ್ಚೆಗೆ ಪರೋಕ್ಷವಾಗಿ ಪ್ರೇರಣೆಯನ್ನು ಕೊಟ್ಟಿತೆಂದು ಕಾಣಿಸುತ್ತದೆ. ನಯಸೇನ ಸಂಸ್ಕೃತವನ್ನು ವಿರೋಧಿಸಿ ಕನ್ನಡ ಪರ ಮಾತಾಡುವುದಕ್ಕೂ ಆಂಡಯ್ಯನು ತನ್ನ ಕಬ್ಬಿಗರ ಕಾವದಲ್ಲಿ ಅಚ್ಚಗನ್ನಡವನ್ನು ತನ್ನ ಕಾವ್ಯದ ಭಾಷೆಯನ್ನಾಗಿ ರೂಪಿಸುವುದಕ್ಕೂ ಪರೋಕ್ಷವಾಗಿ ಸುಕುಮಾರಚರಿತದಪ್ರೇರಣೆ ಇದ್ದಿರಬಹುದು. ಕಥನದ ಶೈಲಿಯ ದೃಷ್ಟಿಯಿಂದಲೂ ಘಟನೆ ಮತು ವರ್ಣನೆಗಳನ್ನು ವಿಸ್ತರಿಸುವ ಕಲೆಗಾರಿಕೆಯನ್ನು ಇದು ಸಮರ್ಥವಾಗಿ ಬಳಸಿಕೊಂಡಿದೆ. ಭಿನ್ನ ಛಂದೋಮಾದರಿಗಳನ್ನು ಮಿಶ್ರಣ ಮಾಡುವುದರ ಮೂಲಕ ಕಥನ ಕಾವ್ಯವೊಂದಕ್ಕೆ ನಾಟಕೀಯ ಗುಣ ಪ್ರಾಪ್ತವಾಗಿದೆ. ಜನಪದ ಕಥೆಯನ್ನು ಕಾವ್ಯವಾಗಿ ರಂಗಭೂಮಿಗೆ ಪ್ರದರ್ಶನಗೊಳ್ಳುವ ಮಾದರಿಯನ್ನು ಸುಕುಮಾರಚರಿತದಲ್ಲಿ ಕಾಣಬಹುದು.

ಕನ್ನಡ ಜೈನಕವಿಗಳ ಸಾಹಿತ್ಯನಿರ್ಮಾಣದ ವಸ್ತು, ಆಕೃತಿ, ಉದ್ದೇಶಗಳು ತುಂಬಾ ಕುತೂಹಲಕಾರಿಯಾದವು. ಒಂದೇ ಕಾಲದಲ್ಲಿ ಜೀವಿಸಿದ್ದ ಜೈನಕವಿಗಳು ಕೂಡ ಭಿನ್ನ ಭಿನ್ನ ರೀತಿಯಲ್ಲಿ ತಮ್ಮ ಕೃತಿನಿರ್ಮಾಣ ಮಾಡಿದ್ದಾರೆ. ಕನ್ನಡಲ್ಲಿ ಕಾವ್ಯ ಪರಂಪರೆಯನ್ನು ಆರಂಭಿಸಿದ ಜೈನಕವಿಗಳಿಗೆ ವಸ್ತು, ಭಾಷೆ, ಕಾವ್ಯರೂಪ, ಮೌಲ್ಯಗಳ ಪ್ರತಿಪಾದನೆ ಈ ದೃಷ್ಟಿಗಳಿಂದ ಕನ್ನಡದ್ದೇ ಆದ ಅನನ್ಯತೆಗಳನ್ನು ಸ್ಥಾಪಿಸಬೇಕು ಎನ್ನುವ ಆಸಕ್ತಿ ಮತ್ತು ಚಲ ಇತ್ತು. ಕನ್ನಡದ ಮೊದಲನೆಯ ಉಪಲಬ್ಧ ಲಕ್ಷಣಗ್ರಂಥ ಕವಿರಾಜಮಾರ್ಗದಲ್ಲಿಯ ಸಂಸ್ಕೃತ ಮೀಮಾಂಸ ಕಾರರಾದಬಾಮಹ -ದಂಡಿಯನ್ನು ಮೀರಿ ಕನ್ನಡ ಕಾವ್ಯ ಲಕ್ಷಣಗಳನ್ನು ಹೇಳಬೇಕು ಎನ್ನುವ ಉತ್ಸಾಹ ಕಾಣಿಸುತ್ತದೆ. ಇದಕ್ಕಾಗಿಯೇ ಕನ್ನಡನಾಡು ಎನ್ನುವುದು ಈ ಕವಿಗಳು ಭಾವನಾತ್ಮಕವಾಗಿ ಕಲ್ಪಿಸಿಕೊಂಡರು. ಭಾವನಾತ್ಮಕವಾಗಿ ಯಾಕೆಂದರೆ : ಅದು ಇಂದಿನಂತೆ ಭೌಗೋಲಿಕವಾದ, ರಾಜಕೀಯವಾದ ಗಡಿರೇಖೆಗಳಿಂದ ಆಂರ್ತಗತವಾದ ಕನ್ನಡನಾಡು ಆಗಿರಲಿಲ್ಲ. ತಮ್ಮ ಪರಿಸರದ ನೆಲ – ಜಲ ಜನಗಳನ್ನು ಕಂಡು ಆ ಮೂಲಕ ‘ಜೀವಕೇಂದ್ರಿತ’ ಕನ್ನಡನಾಡನ್ನು ಕಲ್ಪಿಸಿಕೊಂಡ ಕವಿಗಳಲ್ಲಿ ಪಂಪ ಮೊದಲೆಯವನು. ಅವನ ಬನವಾಸಿಯ ವರ್ಣನೆ, ಮಾವು -ಮಲ್ಲಿಗೆಗಳ ಪ್ರೀತಿ ಕಾವ್ಯದ ಆಕಸ್ಮಿಕ ಅವಯವಗಳಾದರೂ ಕನ್ನಡನಾಡಿನ ನೆನಪನ್ನು ಕಟ್ಟುವ ಕೆಲಸವನ್ನು ಮಾಡಿವೆ. ಹೀಗೆ ಕನ್ನಡನಾಡು ಕನ್ನಡದ್ದೇ ಅದ ದೇಸಿಯ ಭಾಷೆ ಮತ್ತು ಕನ್ನಡದ್ದೇ ಆದ ಒಂದು ಬದುಕು – ಇದರ ಕನಸನ್ನು ಕಂಡು ಕಾವ್ಯ ಬರೆದ ಏಕೈಕ ಕವಿ ಆಂಡಯ್ಯ. ‘ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು’ ಎಂದು ಕನ್ನಡನಾಡನ್ನು ವರ್ಣಿಸುವ ಪದ್ಯದ ಜತೆಗೆ ಕಾವ್ಯದ ಮಾಧ್ಯಮವಾಗಿ ಅಚ್ಚಗನ್ನಡದ ಭಾಷೆಯೊಂದನ್ನು ನಿರ್ಮಿಸಿದ ಭಾಷಾಕೋವಿದನಾಗಿ ಆಂಡಯ್ಯ ಕನ್ನಡಸಾಹಿತ್ಯ ಮತ್ತು ಕನ್ನಡನಾಡಿನ ಇತಿಹಾಸದಲ್ಲಿ ಏಕಾಂಗಿಯಾಗಿ ಆದರೆ ಅನನ್ಯನಾಗಿ ಉಳಿಯುತ್ತಾನೆ. ಪಂಪನು ಮಾರ್ಗ-ದೇಸಿಗಳ ಸಮನ್ವಯದ ಬಗೆಗೆ ಮಾತನಾಡಿದರೆ, ನಯಸೇನನು ಕನ್ನಡದ ಪರವಾಗಿ ಸಕ್ಕದದಲಿನ್ನೇನು ಎಂದು ಪ್ರಶ್ನಿಸಿದರೆ, ಅದೇ ಕಾಲಕ್ಕೆ ಬಂದ ಆಂಡಯ್ಯನು ವಿಚಿತ್ರ ಎನಿಸಿದರೂ ಅಚ್ಚಗನ್ನಡದ ಹುಚ್ಚು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾನೆ. ನಾಗವರ್ಮ ಮತ್ತು ಕೇಶಿರಾಜರ ವ್ಯಾಕರಣ ಗ್ರಂಥಗಳಲ್ಲಿರುವ ತದ್ಭವ ಪ್ರಕರಣಗಳನ್ನು ಹೋಲಿಸಿದಾಗ, ಯಾವುದೇ ಅನ್ಯದೇಶೀಯವನ್ನು ಕನ್ನಡದಲ್ಲಿ ತದ್ಭವೀಕರಿಸಲು ಸಾಧ್ಯ ಎಂಬ ಆತ್ಮವಿಶ್ವಾಸವನ್ನು ತಂದುಕೊಡುತ್ತಾನೆ. ಅಂಥ ಆತ್ಮವಿಶ್ವಾಸದಿಂದಲೇ ಕಾಮಕ್ಕೆ ಸಂಬಂಧಿಸಿದ ಪ್ರೇಮಕಥೆಗೆ ಅಚ್ಚಗನ್ನಡ ಭಾಷೆಯ ಆವರಣವನ್ನು ನಿರ್ಮಿಸುತ್ತಾನೆ. ಕಾಮ ಮತ್ತು ಜಿನರ ಸಮೀಕರಣ ತತ್ತ್ವವನ್ನು ಗಮನದಲ್ಲಿಟ್ಟುಕೊಂಡು ಪರೋಕ್ಷವಾಗಿ ಶಿವನನ್ನೆ ಕಾಮನೆಂದು ಸಾರುವ ಮೂಲಕ ಆ ಕಾಲದ ಶೈವಧರ್ಮಕ್ಕಿಂತ ಶ್ರೇಷ್ಠ ಎನ್ನುವುದನ್ನು ಸಾರುವ ಒಳಉದ್ದೇಶ ಆಂಡಯ್ಯನಿಗಿದೆ. ಆದರೆ ಆಂಡಯ್ಯನು ಬ್ರಹ್ಮಶಿವ-ವೃತ್ತ ವಿಲಾಸರಂತೆ ಪರಧರ್ಮಗಳ ನಿಂದೆಗೆ ಕೈಹಾಕುವುದಿಲ್ಲ. ಪರಮ ಜಿನನಿಷ್ಠೆ ಮತ್ತು ಕನ್ನಡ ನಿಷ್ಠೆಗಳ ಒಬ್ಬ ಅವಧೂತನ ಮಾದರಿ ಆಂಡಯ್ಯ ಕವಿಯಲ್ಲಿ ಅಂತರ್ಗತವಾಗಿದೆ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಆಂಡಯ್ಯನ ಪ್ರಯೋಗಗಳು ಅಧ್ಯಯನಕ್ಕೆ ಯೋಗ್ಯವಾಗಿವೆ. ಆಧುನಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಸ್ಕೃತ ಪದಗಳೇ ಕನ್ನಡ ಪದಗಳೆನ್ನುವ ಭ್ರಮೆಯನ್ನು ಉಂಟುಮಾಡಿ ಸಂವಹನದ ಕ್ಲಿಷ್ಟತೆಗೆ ಕಾರಣವಾಗಿರುವಾಗ ಆಂಡಯ್ಯನ ತದ್ಭವ ಪದಗಳ ಕಡೆಗೆ ಮತ್ತು ಪದ ನಿರ್ಮಾಣದ ಮಾದರಿಗಳ ಕಡೆಗೆ ಮತ್ತೊಮ್ಮೆ ಗಮನ ಹರಿಸುವ ಅಗತ್ಯವಿದೆ.

ಡಾ. ಪಿ. ವಿ. ನಾರಾಯಣ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಕನ್ನಡಪರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ, ಕನ್ನಡದ ಕೆಲಸವನ್ನು ನಿರಂತರ ಮಾಡುತ್ತ ಬಂದಿದ್ದಾರೆ. ಅವರ ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ, ವಚನ ಸಮಗ್ರ, ಚಂಪೂ ಕವಿಗಳು – ಈ ಕೃತಿಗಳು ಕನ್ನಡ ಸಂಶೋಧನೆಯ ಮತ್ತು ವಿಮರ್ಶೆಯ ಕ್ಷೇತ್ರಕ್ಕೆ ಮಹತ್ವದ ಕೃತಿಗಳಾಗಿವೆ. ಡಾ. ಪಿ. ವಿ. ನಾರಾಯಣ ಅವರು ಅಚ್ಚಗನ್ನಡ ಕವಿ ಆಂಡಯ್ಯನ ಕಬ್ಬಿಗರ ಕಾವವನ್ನು, ದೇಸಿ ಪರಂಪರೆಯ ಕವಿ ಶಾಂತಿನಾಥನ ಸುಕುಮಾರ ಚರಿತೆಯನ್ನು ತುಂಬಾ ಪರಿಶ್ರಮ ಮತ್ತು ಆಸಕ್ತಿಯಿಂದ ಸಮರ್ಪಕವಾಗಿ ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರಲು ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ವಿಶೇಷವಾಗಿ ನೆನೆಯುತ್ತೇನೆ.

ಬಿ. ಎ. ವಿವೇಕ ರೈ
ಕುಲಪತಿ