ಕಾಲ್ಸಮನಿಸೆ ಪೊಸಬಂಡಿನ
ಮೆಲ್ಸರಿಯಂ ಸುರಿಯುತಿರ್ಪ ಸಂಪಗೆವೊಗಳ್
ಬಲ್ಸೆಱೆವಿಡಿವಂತಿರ್ದುವು
ಮೆಲ್ಸರದಿಂ ಪಾಡುತಿರ್ಪ ಪೆಣ್ದುಂಬಿಗಳಂ       ೫೧

ಕನರ್ಗೊನರಂ ಕರ್ದುಂಕಿ ದನಿದೋಱುವ ಕೋಗಿಲೆ ಮೇಳದಾಳ್ಗ ಳೆಂ
ದೆನೆ ಗಿಳಿವಿಂಡು ಬಂದೆಱೆಯೆ ಬರ್ಪವರೆಂದೆನೆ ಪೊಣ್ಮುತಿರ್ಪ ಪೂ
ವಿನ ಪೊಸಗಂಪು ಕತ್ತುರಿಯ ಕಂಪೆನೆ ಪಾಡುವ ತುಂಬಿ ಗಾಣರೆಂ
ದೆನೆ ನನೆಯಂಬನೋಲಗದ ಸಾಲೆವೊಲಿರ್ದುವು ಬಂದ ಮಾವುಗಳ್  ೫೨

ನನೆಯುಂ ಪೇಱಿದ ತೋರಗೊಂಬು ನನೆಯುಂ ಪೂಗೊಂಚಲಂ ಪೊತ್ತು ನೆ
ಟ್ಟನೆ ಬಿಣ್ಪೇಱಿದ ಬಳ್ಳಿಗೊಂಬು ನನೆಯಂ ಪೊಗೊಂಚಲಂ ಕಾಯನಂ
ತೆನಸುಂ ತಾಳ್ದಿದ ಗುಜ್ಜುಗೊಂಬು ನನೆಯಂ ಪೊಗೊಂಚಲಂ ಕಾಯ್ಗಳಂ
ತನಿವಣ್ಣಂ ತಳೆದಳ್ಳೆಗೊಂಬು ತರದಿಂ ಚೆಲ್ವಾದುದಿಮ್ಮಾವಿನೊಳ್೫೩

ಮಲ್ಲಿಗೆಯಲ್ಲಿ ತುಂಬಿ ಮೊರೆಯುತ್ತಿದೆ ಕಂಪಿನೊಳೊಂದಿ ತೆಂಕಣಿಂ
ಮೆಲ್ಲನೆ ಗಾಳಿ ತೀಡುತ್ತಿದೆ ಕೋಗಿಲೆಗಳ್ ಪೊಸಮಾಮರಂಗಳೊಳ್
ಬಲ್ಲುಲಿಯಿಂದೆ ಬಗ್ಗಿಸುತುಮಿಂತಿದೆ ಬಂದುದು ಸುಗ್ಗಿ ತಳ್ವಿದಂ
ನಲ್ಲನೆನುತ್ತದೊರ್ವಳೆಳವೆಣ್ ಸುರಿದಳ್ ಮಿಗೆ ಕಣ್ಣ ನೀರ್ಗಳಂ     ೫೪

ಮತ್ತೋರ್ವ ಚೆನ್ನೆ ಪೊನ್ನ ಕುರುಮಾಡಮಂ ಬಳಸಿ ಬೆಳೆದ ಪೂದೋಟಮಂ ಪೊಕ್ಕು ಮೆಯ್ಗರೆದ ನಲ್ಲನಂ ನೆವದಿನಿಂತೆಂದಳದೆಂತೆನೆ –

ಎಲೆ ತಣ್ಗಾಳಿಯೇ ನೀನೇ
ಕಲೆದಪೆ ಮಱಿದುಂಬಿಯೇಕೆ ಪಲ್ಮೊರೆದಪೆ ಕೋ
ಗಿಲೆಯೇಕೆ ಕಿನಿಸಿದಪೆ ಕಾ
ದಲನಿಲ್ಲದ ಪೆಱಗೆ ನೋಯಿಪರೆ ನೀವೆನ್ನಂ      ೫೫

ಎಂಬ ಮಾತಂ ಕೇಳ್ದು ತಲ್ಲಣದಿನವಳ ನಲ್ಲನಲ್ಲಿಗೆ ಪೋಗಿ ಮೇಳದ ಕೆಳದಿ ಮೆಲ್ಲನಿಂತೆಂದಳ್ –

ಕೂಡೆ ಮುಗುಲ್ತ ಮಲ್ಲಿಗೆಗೆ ತೀಡುವ ಗಾಳಿಗೆ ತಂಡತಂಡದಿಂ
ಪಾಡುವ ತುಂಬಿಗಳ್ಗೆ ಸುೞಿವಂಚೆಗೆ ಕೋಡುವ ಪೂಗೂಳಕ್ಕೆ ಮಾ
ತಾಡುವ ಪಕ್ಕಿಗಳ್ಗೆ ದನಿದೋಱುವ ಕೊಂಚೆಗೆ ಸಣ್ಣಗಾಯ್ಗಳಿಂ
ಮೂಡುವ ಮಾಮರಕ್ಕಗಿವಳಾಕೆಯೊಳೀ ಮುನಿಸೇಕೆ ಸಾಲದೇ        ೫೬

ಮತ್ತಮೊಂದೆಡೆಯೊಳ್ –

ತರದಿಂದುಣ್ಮುವ ಕಣ್ಣ ನೀರ್ವನಿಗಳಂ ಕೈಕೊಂಡು ನುಣ್ಮುತ್ತಿನೊ
ರ್ಚರಮಂ ಪೆರ್ಮೊಲೆ ಚುನ್ನವಾಡೆ ಸೆಳೆಮಾವಂ ನೆಮ್ಮಿಪೂಗಂಪಿನೊಳ್
ಪೊರೆದಲ್ಲಾಡುವ ತುಂಬಿವಾಡನೊಲವಿಂ ಕೇಳ್ವಂದದಿಂ ನಿಂದು ಪಾ
ದರಿಗಂ ನಿಲ್ಲದೆ ಪೋದುದರ್ಕೆ ಬಗೆಗೆಟ್ಟಿರ್ದಾಕೆ ಕಣ್ಗೊಪ್ಪಿದಳ್    ೫೭

ಅದಲ್ಲದೆಯುಂ ಮತ್ತಮೊರ್ವ ಗಾಡಿಕಾರ್ತಿ ಸಂದಣಿಸಿ ಚೆಂದಂಬಡೆದ ಕೆಂದಳಿರ ಪಂದರಮಂ ಮೆಯ್ವೆಂಕೆಗಂಜಿ ಪತ್ತೆ ಸಾರ್ದಿಂತೆಂದಳ್ –

ಎಲೆ ತೀಡುವ ತೆಂಗಾಳಿಯೆ
ನಲವಿಂ ಕಾಲ್ವಿಡಿದು ತಿಳಿಪಿ ತಳ್ವಿಲ್ಲದೆ ಕಾ
ದಲನಂ ತಂದೊಡೆ ನಱುಸು
ಯ್ಯೆಲರಿಂದಂ ನಿನ್ನನಾಗಳುಂ ನೆಱೆ ಪೊರೆವೆಂ    ೫೮

ಅಂತು ಬಂದ ಬಸಂತದೊಳೊರ್ಮೆ ನನೆಯಂಬಂ ತನ್ನ ಮೇಳದ ಕೆಳೆಯನಪ್ಪ ನಗೆಗಾಱನಂ ಬೞಿಯಟ್ಟ ಬರಿಸಿ ಪಸಾಯ್ತರೆಲ್ಲರುಂ ಬಗೆಯಱಿದಿಟ್ಟೆಡೆಯಂ ತೊಲಗಿ ಪೋಗೆ, ಕೆಲಕ್ಕೆ ಕರೆದು ಕನಸಂ ಕೇಳ್ವುದೆಂದಿಂತೆಂದಂ –

ತಳತಳಿಸಿ ಬೆಳಪ ತಿಂಗಳ
ಬೆಳಗಂ ಕವರ್ವಂತೆ ಮೆಱೆವ ಮೆಯ್ವೆಳಗಿಂ ಕ
ಣ್ಗೊಳಿಪೊರ್ವಳನಾನಿಂದಿನ
ಬೆಳಗಪ್ಪೊಂದೆರಡು ಗೞಿಗೆಯಾಗಲ್ ಕಂಡೆಂ    ೫೯

ಮಿನುಗುವ ನಿಟ್ಟೆಸಳೊಳ್ ನೀ
ರ‍್ವನಿಗಳನೊಳಕೊಂಡು ತೋರ್ಪ ಕೆಂದಾವರೆಯಂ
ನೆನೆಯಿಸಿದುದು ಕಾಲುಗುರ್ಗಳಿ
ನೆನಸುಂ ಕಣ್ಗೊಳಿಪ ನಿಡಿಯ ಮೆಲ್ಲಡಿಯವಳಾ            ೬೦

ನೇರಿತೆಳವಾೞೆಗಂಬಮ
ನೋರಂತಿರೆ ನುಣ್ಪುವೆತ್ತು ಸೋಲಿಪ ಚೆಲ್ವಿಂ
ಬಾರಿಸಿ ಸೊಬಗಿಂಗೆತ್ತಿದ
ತೋರಣಗಂಬಂಬೊಲಿರ್ದುವಾಕೆಯ ತೊಡೆಗಳ್            ೬೧

ಮಿಱುಪ ಸುೞಿವಡೆದ ಸಿಂಗರ
ದೊಱೆಯೊಳ್ ತಲೆದೋರ್ಪ ತೆರೆಗಳೆಂದೆಂಬಿನಮೇಂ
ಮೆಱೆದುವೊ ಪೊರ್ಕುೞ ಗಾಡಿಯೊ
ಳಱೆಪುವ ತೆಳ್ವಸಿಱೊಳೆಸೆವ ತಿವಳಿಗಳವಳಾ     ೬೨

ಮಿಳಿರ್ದಾಡುವ ಮಱಿದುಂಬಿಯ
ನೊಳಕೊಂಡೆಸೆದಿರ್ಪ ತಾವರೆಯವೊಲ್ ಪೊಳೆಪಂ
ತಳೆದು ಕುರುಳೋಳಿಯಿಂ ಬಗೆ
ಗೊಳಿಸಿದುದೋರಂತೆ ಮಿಸುಪ ನಗೆಮೊಗಮವಳಾ          ೬೩

ಮತ್ತಮವಳ ಮೆಲ್ಲಡಿ ಮೊದಲ್ಗೊಂಡು ಮೆಲ್ಲಮೆಲ್ಲನೆ ಮೇಗಡರ್ದ ನೀಳ್ದ ಕಣ್ಗಳುಂ ಸೆಳೆನಡುವಿನಲ್ಲಾಟಮಂ ಕಂಡು ಪೊಱವಾಱಿಂದೇಱಲಾರ್ತುವಿಲ್ಲ; ಅವಳ ಕಡುಗುಣ್ಪನಾಳ್ದ ಪೊರ್ಕುೞೊಳಗೞ್ದ ಬಗೆ ಎನ್ನಂ ತೆಗೆಯಿಮೆಂದೆತ್ತಿದ ಕೈಯಂತಿರ್ದ ಬಾಸೆಯೊಳಂಟುಗೊಂಡ ಕಣ್ ತಿವಳಿಯೊಳಂ ಸಿಲ್ಕಿ ಪೋಗಲಾರ್ತುವಿಲ್ಲ; ಅವಳ ಬೆಟ್ಟಿತಪ್ಪ ಬಟ್ಟಮೊಲೆಯಿಟ್ಟೆಡೆಯೊಳ್ ತೊಟ್ಟನೆ ಸಿಲ್ಕಿದ ಕಣ್ ಕಪ್ಪಿನೊಳ್ ಕೆಡೆದ ಮಱಿವುಲ್ಲೆಯಂತೆ ಮಿಡುಕಲಾರ್ತುವಿಲ್ಲ; ಅವಳ ನಗೆಮೊಗದೊಳೊಯ್ಯ ನೊಯ್ಯನೆಱಗಿದ ಕಣ್ ಎಸೆವಪೊಸದಾವರೆಗೆಱಕದಿಂದೆಱಗಿದ ಮಱಿದುಂಬಿಯಂತೆ ಪೆಱಪಿಂಗಲಾರ್ತುವಿಲ್ಲ; ಅವಳ ಪೆಱೆನೊಸಲನಲೆವ ಬಳ್ಳಿಗುರುಳೊಳ್ ತೊಡಂಕಿದ ಕಣ್ ಕಣ್ಣಿವಲೆಯೊಳ್ ಕೆಡೆದೆರಲೆಯಂತಡಿಯಿಡಲಾರ್ತುವಿಲ್ಲ ; ಅಂತುಮಲ್ಲದೆಯುಂ –

ತೊಳಗುವ ಮುತ್ತಿನೋಲೆಗಳ ಬೆಳ್ವೆಳಗಿಂ ಸುಲಿಪಲ್ಲ ಮಿಂಚಿನಿಂ
ಪೊಳೆವಲರ್ಗಣ್ಣ ನುಣ್ಗದಿರ್ಗಳಿಂ ತಿಸರಂಗಳ ನೀಳ್ದ ಡಾಳದಿಂ
ಬಳೆದೆಸೆದಿರ್ದ ಸೆಳ್ಳುಗುರ ಮೆಯ್ವೊಳೆಪಿಂ ಮಿಗೆ ಪೆರ್ಮೆವೆತ್ತು ಕ
ಣ್ಗೊಳಿಸಿದಳಾಕೆ ಪಾಲ್ಗಡಲ ಪೆರ್ದೆರೆಯೊಳ್ ಸಿರಿ ನಿಂದಳೆಂಬಿನಂ    ೬೪

ತೊಳಗುವ ಮುತ್ತಿನೋಲೆಗಳ ಬೆಳ್ವೆಳಗಿಂ ಮಿಗೆ ಪೆರ್ಮೆವೆತ್ತು ಕ
ಣ್ಗೊಳಿಸಿದಳಾಕೆ ಪಾಲ್ಗಡಲ ಪೆರ್ದೆರೆಯುಂತಿರೆ ಜೊನ್ನದೊಂದು ಪು
ತ್ತೞಿಯವೊಲೊಪ್ಪವೆತ್ತ ಬಿದುಗಲ್ಲಿನ ಬೊಂಬೆಯ ಪಾಂಗಿನಂತೆ ಸೊಂ
ಪಳವಡೆ ಬಂದುದಂ ಕನಸಿನೊಳ್ ನೆಱೆ ನೋಡಿದೆನೆಂದು ಪೂಸರಂ   ೬೫

ಇಂತು ಕೇಳೆ ಪೇೞ್ವುದುಂ ಮೆಲ್ಲನೆ ನಗೆಗಾಱನಿಂತೆಂದಂ –

ಕನಸಿದು ನನ್ನಿ ಕೇಳ್ ನಿನಗೆ ಬೇಗದೆ ಸಾರ್ವಳದೊರ‍್ವ ಚೆನ್ನೆಯೆಂ
ದೆನೆ ನನೆಯಂಬನುಟ್ಟ ತಳಿರ್ವಟ್ಟೆಯನಾಗಳೆ ಮೆಚ್ಚುಗೊಟ್ಟು ಮೆ
ಲ್ಲನೆ ನಡೆತಂದು ಪೊನ್ನ ಕರುಮಾಡದ ಮೇಲ್ನೆಲೆಯಲ್ಲಿ ಗಾಡಿಯಿಂ
ಬೆನೆ ನೆರೆದೋಲಗಂ ನಲವು ಕೈಮಿಗೆ ತನ್ನನೆ ನೋಡುತಿರ್ಪಿನಂ        ೬೬

ಅಂತೋಲಗಂಗೊಟ್ಟು ಕುಳ್ಳಿರ್ದ ಬಿತ್ತಿಯೊಳಂದಂಬಡೆವಂತು ಬಚ್ಚಿಸಿದ ಬಣ್ಣಂಗಳಂ ಬೇಱೆವೇಱೆ ನೋಡಿ ಮೆಚ್ಚುತಿರ್ಪಾಗಳ್ ನಗೆಗಾಱಂ ಬಿನ್ನಪಮೆಂದಿಂತೆಂದಂ –

ಬರೆದ ಬನಮಿರ್ಕೆ ನೋಡೀ
ಕರುಮಾಡದೆ ಕಲದೆ ಬೆಳೆದ ಪೂದೋಂಟಮನಿಂ
ಚರದಿಂ ಬಗೆಗೊಳಿಪಂಚೆಯ
ನೆರವಿಗಳಂ ನೋಡು ತಳೆದು ಬೇಟಂಗಳುಮಂ    ೬೭

ಮಾವಿನ ಜೊಂಪಮಂ ಮಿಸುಪ ಸಂಪಗೆಯಂ ಬಗೆಗೊಳ್ವ ಜಾದಿಯಂ
ಪೂವಿನ ಗೊಂಚಲಿಂ ಪುದಿದ ಪಾದರಿಯಂ ಪರಿತರ್ಪ ತುಂಬಿಯಂ
ತಾವರೆಗಿರ್ಕೆಯಾದ ಕೊಳನಂ ನೆರೆದಾಡುವ ಜಕ್ಕವಕ್ಕಿಯಂ
ತೀವಿದ ಬಂಡು ಬಂದು ನೆರೆಯುತ್ತಿರೆ ಮೆಲ್ಲನೆ ಬರ್ಪ ಕಾಲ್ಗಳಂ     ೬೮

ಎಂದು ಬಿನ್ನವಿಸುತ್ತಿರೆ-

ಬನದೆಡೆಯಂ ನೋಡುವುದೆಂ
ದೆನಸುಂ ತುಂಬಿಗಳ ದನಿಗಳಿಂ ಕರೆವವೊಲೊ
ಯ್ಯನೆ ಬಂದು ಬಂದು ನಾಡೆಱೆ
ಯನ ಕೆಲದೊಳ್ ತೀಡಿದತ್ತು ತೆಂಬೆಲರಾಗಳ್    ೬೯

ಅಂತು ಬಂದ ತೆಂಗಾಳಿಗೆ ಪಿಡಿದ ಕೆಂದಾವರೆಯ ಮುಡಿದ ಮಲ್ಲಿಗೆಯ ಪೂಸಿದ ಸಿರಿಕಂಡದ ಕಪ್ಪುರದ ತಂಬುಲದ ನೊಸಲ ಕತ್ತುರಿಯ ಕಂಪಂ ಮೆಚ್ಚುಗುಡುವಂತೆ ಮೆಲ್ಲನೆ ಮೆಯ್ಸಾರ್ಚಿ ಬೞಿಯಂ ಬನಮಂ ನೋಡಲ್ವೇೞ್ಕುಮೆಂದು ನನೆಯಂಬಂ ಬಗೆಯೊಳ್ ನೆನೆಯುತ್ತಿರ್ಪನ್ನೆಗಂ –

ತೊಂಗಲ್ಗೊಂಡಿರ್ದು ಕೆಂಪಾದಸುಗೆಯ ತಳಿರಂ ಕಂಪುದೀವಿರ್ದ ಪೂವಂ
ಮಾಂಗಾಯಂ ಪೊಚ್ಚ ಪೊಂಬಾೞೆಯ ಮರುಗಮನಿಂಬಾದ ನಲ್ವಾೞೆವಣ್ಣಂ
ಪೊಂಗಿರ್ದಾ ನೈದಿಲೊಳ್ದಾವರೆಯ ಮುಗುಳ್ಗಳಂ ಸೊಂಪಿನಿಂ ಬೆಳ್ಪುವೆತ್ತಿ
ರ್ದಿಂಗೋಲಂ ಪಣ್ತ ದಾಳಿಂಬಗಳನೊಲವಿನಿಂ ತೋಂಟಿಗಂ ಕೊಟ್ಟನೊರ‍್ವಂ          ೭೦

ಅಂತು ಕಾಣ್ಕೆಗೊಟ್ಟವದರಿಪುದೆಂದಿಂತೆಂದಂ: ಪೆಱನಾಡೆಱೆಯಂ ನಿನ್ನ ಕೈಯೊಳ್ ಬನ್ನಂಬಡೆದು ಕಿನ್ನನಾಗೆಯವನ ಮೆಯ್ಗಂದಿದ ಚೆನ್ನ ಪಾಂಗಿನಂತೆ ಪೊಡರ್ಪುಡುಗಿದ ಜಾದಿಯಂ ನಗುವಂದದಿನರಲ್ದ ಸುರಹೊನ್ನೆಗಳೊಳಂ, ಚಲದಿಂ ಮಲೆವ ಮಱುವರಸರ ಪೊಸನೆತ್ತರೊಳ್ ಪೊರೆದ ನಿನ್ನ ಬಾಳಂತೆ ಒಳ್ಪುವಡೆದ ಕೆಂದಳಿರ್ಗಳಿಂ ಮಿಸುಗುವ ಅಸುಗೆಗಳೊಳಂ, ನಿನ್ನ ಮುಳಿಸಿದ ಬೆಂಕಿಯಿಂ ಪೊತ್ತಿ ಪೊಗೆದುರಿವ ಪಗೆವರ ಬೀಡಿನಂತೆ ಸುತ್ತಲುಂ ಪೂತ ಮುಳ್ಮುೞ್ತುಗದ ಮರಂಗಳೊಳಂ, ನಿನ್ನಡಿಯಂ ನೆರವಿಲ್ಲದೆ ನಂಬಿದೆವೆಂಬರಸರ ಚೆನ್ನ ಪೊನ್ನ ನೆಲೆವಾಡದಂತೆ ಪೂಸರಂಬಡೆದ ಕೊಸಗಿನ ಮರಂಗಳೊಳಂ, ನಿನ್ನ ಗಾಡಿಯಂ ನೋಡಿ ಕೂಡಲ್ಪಡೆಯದ ಮಡದಿಯರ ಕದಂಪಿನಂತೆ ತುಱುಗಿದಲರಿಂ ಬೆಳ್ಪೇಱಿದ ಬಕುಳಂಗಳೊಳಂ, ಬಿನದಕ್ಕೆ ಪಕ್ಕಾದ ಬನಮಂ ನೋಡಲ್ವೇೞ್ವುದೇಱೆಂಬುದುಮಾತಂಗೆ ಮೆಚ್ಚುಗೊಟ್ಟು –

ಜಡಿವ ಪಡಿಯಱರ ಸೊಗಯಿಪ
ನುಡಿಕಾಱರ ಮೇಳದರಸುಗಳ ಮೆಲ್ಲನೆ ಕೈ
ಗುಡುವ ಸೊಬಗೆಯರ ನೆರವಿಗ
ಳೊಡನೆೞ್ದಂ ಬನಮನೊಸೆದು ನೋೞ್ಪುಜ್ಜುಗದಿಂ       ೭೧

ಬೀಸುವ ಚೆನ್ನ ಸೀಗುರಿಗಳಿರ್ಕೆಲದೊಳ್ ಮಿಳಿರ್ದಾಡೆ ನಾಡೆಯುಂ
ಗೋಸಣೆವೆತ್ತ ರಾಯರಿದಿರೇೞ್ತರೆ ತುಂಬಿಗಳಚ್ಚವೂಗಳಿಂ
ದೂಸರಮಾದ ಚೊಲ್ಲೆಯದ ಕಂಪಿನೊಳೋಕುೞಿಯಾಡೆ ಸಿಂಗರಂ
ದೇಸೆಯೊಳೊಂದಿ ತೋಱೆ ತಳರ್ದಂ ನನೆಯಂಬನದೊಂದು ಚೆಲ್ವಿನಿಂ          ೭೨

ನಡೆಗಳೊಳಂಚೆ ನುಣ್ಗುರುಲೊಳಾಱಡಿ ತೋಳ್ಗಳೊಳಳ್ಳೆಗೊಂಬು ಸೋ
ರ್ಮುಡಿಗಳೊಳೈದೆ ಸೋಗೆ ಮಿಗೆ ಪೆರ್ಮೊಲೆಯೊಳ್ ಪೊಣರ್ವಕ್ಕಿ ನಿಚ್ಚಮುಂ
ಕಡು ಮುಳಿಯುತ್ತುಮಿರ್ಪುವಿದಱೊಳ್ ದೊರೆಕೊಂಡುವೆನುತ್ತೆ ಕಾಯ್ದು ದಾ
ೞಿಡುವವೊಲಾ ಬನಕ್ಕೆ ನಡೆತಂದುದು ಪೆಂಡಿರ ತಂಡಮೇೞ್ಗೆಯಿಂ೭೩

ಕಡೆಗಣ್ಗಳ್ ಕುಡಿಮಿಂಚನೀಯೆ ಸುಲಿಪಲ್ ಬೆಳ್ದಿಂಗಳಂ ಬೀಱೆ ಕೇ
ಸಡಿ ಕೆಂದಾವರೆವೂಗಳಂ ಕೆದಱೆ ಪುರ್ಬಿಂಗೋಲವಿಲ್ಗಂದಮಂ
ಕುಡೆ ತೋಳ್ ನೀಳ್ದೆಳಗೊಂಬಿನೊಳ್ ತೊಡರೆ ಗಲ್ಲಂ ನುಣ್ಪು ಕೈಮಿಕ್ಕ ಕ
ನ್ನಡಿಯಂ ಪೋಲ್ತಿರೆ ಬಂದರಲ್ಲಿ ಪಲಬರ್ ಚೆಲ್ವಪ್ಪಿನಂ ಚೆನ್ನೆಯರ್         ೭೪

ತಿಸರಂ ತೊಳಗುವ ಮುತ್ತಿನ
ಪಸರಂ ಮೊಲೆವೆಟ್ಟು ತಿವಳಿ ತೆರೆಯೆಂದೆನೆ ಸಂ
ತಸದ ಕಡಲಂತೆ ಮೆಲ್ಲನೆ
ಪೊಸವೆಂಡಿರ್ ಗಡಣಮೆಸೆವಿನಂ ತಡೆತಂದರ್    ೭೫

ಎಡೆಗಿಱಿವ ಮೊಲೆಯ ಪೊಱೆಯಿಂ
ಬಡನಡು ನಡೆ ನೋಡುವವರ ಬಗೆ ನಡುಗುವವೊಲ್
ನಡುಗೆ ನಲವಿಂದಮೊಡನೊಡ
ನಡಿಯಿಟ್ಟರ್ ನೆರೆದು ಬಿಂಕಗಾರ್ತಿಯರರೆಬರ್  ೭೬

ಇಸಲೊಡರಿಸುವಿಂಗೋಲನ
ಮಿಸುಗುವ ಪೊಸವಿಲ್ಲ ಜೇವೊಡೆಯ ದನಿಯವೊಲೆ
ಣ್ದೆಸೆಯೊಳ್ ನೇವುರದುಲಿ ಪಸ
ರಿಸೆ ಮೆಲ್ಲನೆ ಚೆಲ್ಲಾಗಾರ್ತಿಯರ್ ನಡೆತಂದರ್೭೭

ಅಂತು ಪರಿಪರಿಯ ಸಿಂಗರದಿನಂದಂಬಡೆದು ನಡೆವ ಮಡದಿಯರ ಮುಡಿಯೊಳ್ ತೊಡರ್ದು ಪೊಸವೂಗಳ ಕಂಪಿಂಗೆಳಸಿ ಮೇಲೆ ಬಳಸಿದ ಮಱಿದುಂಬಿಯ ಬಂಬಲ್ ಎತ್ತಿ ಪಿಡಿದ ಪೀಲಿದೞೆಯಾಗೆ ಬಂದು ಬನದ ಬಾಗಿಲಂ ಪುಗುವಲ್ಲಿ –

ತಳಿರಂ ಮೆಲ್ಲನೆ ನೂಂಕಿ ಮಾಮಿಡಿಗಳಂ ಸೆಂಡಾಡುತಂ ಕೂಡೆಪೂ
ಗಳ ದೂಳಿಂ ಪೊಱೆಯೇಱುತುಂ ಸೊನೆಗಳೊಳ್ ನೀರಾಟಮಂ ಮಾಡುತುಂ
ಬೞಿಯಂ ಕೈಮಿಗೆ ಬರ್ಪ ತುಂಬಿಯುಲಿಯಿಂದಂ ಡಂಗುರುಂ ಬೊಯ್ಸುತುಂ
ತಳರ್ದೇಂ ಬಂದುದೊ ಕಾವನಾನೆಯವೊಲಾ ತಣ್ಗಾಳಿ ತನ್ನಿಚ್ಚೆಯಿಂ           ೭೮

ಆ ಗಾಳಿಯ ಮೆಲ್ಸೋಂಕಿಂ
ದಾಗಳೆ ಬೆಮರೊಡನೆ ಬೆಳೆದ ಸೇದೆಯದೆತ್ತಂ
ಪೋಗೆ ನಲವಿಂದೆ ಪೊಕ್ಕಂ
ಬೇಗದೆ ಪಡಿಯಱರ ಜಡಿಪಮೆಡೆಗೊಳೆ ಬನಮಂ            ೭೯

ಅಂತು ಪೊಕ್ಕು ಪಚ್ಚೆಯ ಪಡ್ಡಳಿಯ ಪಾದರಿಯ ಪಲಸಿನ ತೆಂಗಿನ ಕೌಂಗಿನ ದಾಳಿಂಬದದವನದ ಮರುಗದ ಮಲ್ಲಿಗೆಯ ಮಾವಿನ ಮಾದಲದ ಸುರಗಿಯ ಸುರಹೊನ್ನೆಯ ಇರವಂತಿಯ ಕಂಪುಮಿಗುವ ಸಂಪಗೆಯ ಸಸಿಯ ಸಾಲ್ಗಳ ನಡುವೆ ನನೆಯಂಬಂ ನಡೆವಾಗಳ್ ಬಲಗೆಲದೊಳ್ ಕೈಗೊಟ್ಟು ಬರ್ಪ ನಗೆಗಾಱನಿಂತೆಂದಂ –

ಎಸೆವಲರ್ಗೊಂಚಲಂ ತಳೆದ ಮಲ್ಲಿಗೆ ಪೂವಿನ ಸಂತೆಕೊಂಬಿನಿಂ
ಮಿಸುಗುವ ಮಾಮರಂ ಪೆಸರ ಮಾಳಿಗೆ ಮಾಡಿದ ತೋರವೆಟ್ಟುಗಳ್
ಪೊಸೆಮನೆ ಸುತ್ತಲುಂ ಬಳಸಿ ಪರ್ವಿದ ಕೇದಗೆ ಪಚ್ಚವಾಗಿಲೆಂ
ಬೆಸಕಮನಾಳ್ದು ಪೂಗಣೆಯನಿರ್ಪ ಪೊೞಲ್ಗೆಣೆಯಾದುದೀ ಬನಂ   ೮೦

ನಿನ್ನ ಬರವಱಿದು ನಲವಿಂ
ಮುನ್ನಮೆ ಗುಡಿಗಟ್ಟಿದಂತೆ ಪೊಸವೂಗುಡಿಯಿಂ
ದನ್ನೆರೆದು ನಿಮಿರ್ದಕುಡಿಯಿಂ
ಚಿನ್ನಂ ತಳೆದೆತ್ತಿದಂತೆ ಮಲ್ಲಿಗೆಯೆಸೆಗುಂ         ೮೧

ಅಡರ್ದೆಲೆವಳ್ಳಿಗಳೆಲೆಯಂ
ಪಿಡಿದಿರ್ಪೆಳಗೌಂಗನಲ್ಲಿ ತರತರದಿಂ ನೇ
ರ್ಪಡೆ ಸಮದೆಲೆವಸರದವೊಲ್
ಕಡು ಚೆಲ್ವಂ ಪಡೆದು ತೋರ್ಪುವೀ ಬನದೆಡೆಯೊಳ್        ೮೨

ಪುದಿದ ತನಿವಣ್ಣ ಬಿರಿಕಿಂ
ದುದಿರ್ದೆತ್ತಂ ರಾಸಿಯಾದ ಬಿೞ್ತುಗಳಿಂ ಪೆಂ
ಪೊದವಿದ ಪಲವುಂ ದಾಳಿಂ
ಬದ ಮರಗಳ್ ರನ್ನವಸರದಂತೆಸೆದಿರ್ಕುಂ         ೮೩

ಮಿಸುಪಲರ್ಗಳ ಬೆಳ್ವೆಳಗಿಂ
ಮುಸುಕಿದ ತಾವರೆಗಳೆಲೆಯನಾಂತ ಕೊಳಂಗಳ್
ಪಸರಿಸಿದ ಕಂಚುಗಾಱರ
ಪಸರದವೋಲ್ ನಾಡೆ ತೋರ್ಪುವೀ ಕೆಲಬಲದೊಳ್       ೮೪

ಬಗೆಗೊಳ್ ಮೆಲ್ಲನೆ ನಡೆವಂ
ಚಿಗಳಂ ತಳೆದಿರ್ಪ ಬಳ್ಳಿಮಾವಿನ ಸಾಲ್ಗಳ್
ನೆಗೞ್ದ ಬೆಲೆವೆಣ್ಗಳಂದದೆ
ಮಿಗೆ ಸೋಲಿಪ ಸೂಳೆಗೇಱಿಯಂತಿವೆ ಬನದೊಳ್           ೮೫

ಇಟ್ಟಣಿಸಿದಲರ್ಗಳೆಸೆದಿರೆ
ಕಟ್ಟುದ್ದಮನಾಂತು ಮಿಸುಪ ಕೊಸಗಿನ ಚೆಲ್ವೇಂ
ಪುಟ್ಟಿಸಿರ್ದುದೊ ಪೊಸಸಿರಿಗೆಱ
ವೆಟ್ಟನೆ ಪೂಗಣೆಯನಿರ್ಪ ನೆಲೆಮಾಡದವೋಲ್೮೬

ನನೆಗಳ ಪೂಗಳ ಪೊಱೆಯಿಂ
ದೆನಸುಂ ತಲೆವಾಗುತಿರ್ಪ ಸೆಳೆಗೊಂಬಿಂ ನೆ
ಟ್ಟನೆ ಪರಿವಡೆದೀ ಸಂಪಿಗೆ
ನಿನಗೆಱಗದರೆಱಗಿಪಂತೆ ತೋರ್ಪುವು ಬನದೊಳ್೮೭

ನೆಗೞ್ದಿರವಂತಿಯ ಮನೆಗಳೊ
ಳಗಲಮನೊಳಕೊಂಡು ಪಲವು ಪಳುಕಿನ ಸಱಿಗಳ್
ಬಗೆಗೊಳೆ ನಿನಗಿಕ್ಕಿದ ಗ
ದ್ದುಗೆಗಳವೊಲ್ ಕೂಡೆ ತೋರ್ಪುವೀ ಕಟ್ಟಿದಿರೊಳ್       ೮೮

ಎಂದು ಮುನ್ನಿಮೀ ಬನಂ ಪಟ್ಟಣದಂತಿರ್ಪುದೆಂದು ನುಡಿದ ನುಡಿಯಂ ಪರಿವಿಡಿಯಿಂ ನನ್ನಿ ಮಾಡಿದೆಯಂದು ತೊನೆಯುತ್ತೆ ಕಿಱಿದೆಡೆಯಂ ಪೋಗೆವೋಗೆ –

ಕನರ್ಗೊನರಿರ್ಕೆ ನುಣ್ದಳಿರ ಬಾೞ್ವನೆ ಕೆಂದಳಿರಿರ್ಪ ಬೀಡು ಬ
ಲ್ನನೆಯ ಪೊದಱ್ ಮುಗುಳ್ನನೆಯ ಪೆರ್ಮನೆ ಮೊಗ್ಗೆಯ ತಾಣಮಚ್ಚವೂ
ವಿನ ನೆಲೆ ಸಣ್ಣ ಗಾಯ ಬಲುಗಾಯ ಪೊೞಲ್ ನಸುದೋರೆವಣ್ಣ ತಾ
ಯ್ವನೆ ಪೊಸವಣ್ಣ ಗೊತ್ತಿದೆನೆ ಕಣ್ಗೆಸೆದಿರ್ದುದದೊಂದು ಮಾಮರಂ          ೮೯

ಮೊರೆಯದ ತುಂಬಿಯಂ ಕುರುಳ ಸಂದಣಿ ಸೋಲಿಸೆ ಜಕ್ಕವಕ್ಕಿಯಂ
ಪರಿವಡದಿರ್ದ ತೋರ ಮೊಲೆ ಬಗ್ಗಿಸೆ ನೈದಿಲನೆಯ್ದೆ ಕಣ್ಮಲರ್
ಕೊರಗಿಸೆ ನಾಡೆ ಕೆಂದಲಿರೋವದೆ ಕೆಂದಳಮಿಕ್ಕಿ ಮೆಟ್ಟೆ ಮಾ
ಮರದಡಿಯಲ್ಲಿ ನಿಂದ ಬನವೆಣ್ಣೆನಿಪಂದದಿನೊರ್ವಳೊಪ್ಪಿದಳ್    ೯೦

ಅವಳಂ ತೊಟ್ಟನೆ ಕಟ್ಟಿದರೊಳ್ಕಂಡು ನನೆಯಂಬಂ ತನ್ನ ಬಗೆಯೊಳಿಂತೆಂದಂ –

ಕರಮೆಸೆವ ರೂಪು ಕಣ್ಗ
ಚ್ಚರಿಯಂ ಪುಟ್ಟಿಸಿದುದೀಕೆಯಾವಳೋ ನೆಲದೊಳ್
ಪಿರಿದುಂ ಮಾನಸಿಯರ್ಗೀ
ಪರಿ ಚೆಲ್ವಿನಿತುಂಟೆ ಸಗ್ಗದಾಕೆಯೆ ದಿಟದಿಂ

ಎಂದು ಪತ್ತೆ ಸಾರ್ದು ನೀಮಾರ್ ಎಂದು ಮೆಲ್ಲನೆ ಬೆಸಗೊಳ್ವುದುಂ; ಆ ಅಚ್ಚರಿಸಿ ಬಿನದದಿಂ ಬನದ ಸೊಂಪಂ ನೋಡಲೆಂದೈತಂದೆಂ ಎನೆ ನಾಡೆಱೆಯನಿಂತೆಂದಂ –

ಮಿಗೆ ಮುನ್ನಂ ಕಂಡವೋಲಿರ್ದಪುದು ಮಿಸುಗುವೀ ಬಾೞೆಯೀ ಕಾಲ್ಗಳೀ ಸಂ
ಪಗೆಯೀ ನೇಱಿಲ್ಗಳೀಪಾದರಿ ಬಿಡೆಮೊರೆವೀ ತುಂಬಿಯೀ ಕೊಂಚೆಯೀ ಮ
ಲ್ಲಿಗೆಯೀ ತಣ್ಗಾಳಿಯಾ ಕೋಗಿಲೆಯ ಬಳಗಮೀ ಸೋಗೆಯೀ ಸೊಂಪಿನಿಮ್ಮಾ
ವುಗಳೀ ಚೆನ್ನ ಚೆನ್ನೈದಿಲೀ ಕೆಂದಳಿರ ತುಱುಗಲೀಯಂಚೆಯೀ ಕರ್ವುದೋಂಟಂ           ೯೨

ಅಱಿತಂ ನಿಮಗುಂಟೆಂತಾ
ತೆಱನಂ ನೀಮೆನಗೆ ಪೇೞ್ವುದುಳ್ಳುದನೆನೆ ಬಾ
ಯ್ದೆಱೆ ಸುಲಿಪಲ್ಗಳ ಮಿಂಚಂ
ಕಱೆಯುತ್ತಿರೆ ತಿಳಿಯೆ ಪೇೞಲೆಂದಿಂತೆಂದಳ್      ೯೩

ಅದೇನೆಂದೊಡೆ ಪೊಂಗೇದಗೆಯ ಬಾೞ್ವೇಲಿಯೊಳಂ, ಪನ್ನೀರ‍್ಗಾಲ್ವೆಯೊಳಂ, ಕುಂಕುವದ ಮಡುಗಳೊಳಂ, ಬಕುಳದ ಬಾಗಿಲ್ವಾಡದೊಳಂ, ಮರುಗದಟ್ಟಳೆಯೊಳಂ, ಪೊಂಬಾೞೆಯ ಪೞವಿಗೆಗಳೊಳಂ, ಪಾದರಿಯ ನೆಲೆವಾಡಂಗಳೊಳಂ, ದವನದ ದಾವಣಂಗಳೊಳಂ, ಮಲ್ಲಿಗೆಯ ಮನೆಗಳೊಳಂ, ಕಪ್ಪುರದ ಸೊದೆಯೊಳಂ, ಸೊಂಪುವಡೆದ ಕಂಪಿನ ಪೊೞಲೆಂಬ ಬೀಡುಬಗೆಗೊಳಿಸುತಿರ್ಪುದು –

ಚದುರುಂ ಮಿಕ್ಕಿರ್ದ ತಕ್ಕುಂ ನೆಲಸಿದ ಸೊಬಗುಂ ಮೈಮೆಯುಂ ಚಾಗಮುಂ ಪೆ
ರ್ಚಿದ ಸೊಂಪುಂ ಪೆರ್ಮೆಯುಂ ನನ್ನಿಗೆ ನೆಲೆಯೆನಿಸಿರ್ದಾಯಮುಂ ಬೀರಮುಂ ಕುಂ
ದದ ಚೆಲ್ವುಂ ರೂಡಿಯುಂ ಕೈಮಿಗೆ ನೆಲನನಿತಂ ಗೆಲ್ದು ತನ್ನಿಚ್ಛೆಯಿಂದಿ
ನ್ನಿದನಾಳ್ವಂ ಕರ್ವುವಿಲ್ಲಂ ಪಡೆದೊಡವೆಗಳಂ ಸಾರ್ದವರ್ಗೀಯ ಬಲ್ಲಂ      ೯೪

ಇನಿಯರನೆಂದುಂ ನೆರೆಯಿಪ
ಬಿನದಮೆ ತನ್ನಿಚ್ಛೆಯಾಗೆ ರೂಡಿಸಿದಾ ಕಾ
ವನ ನಚ್ಚಿನ ಪೆಂಡಿತಿ ಚೆ
ಲ್ವಿನ ಪುತ್ತೞಿಯಿಚ್ಚೆಗಾರ್ತಿಯೆಂಬಳ್ ಪೆಸರಿಂ  ೯೫

ಸೊಗಯಿಪ ಜಕ್ಕವಕ್ಕಿಗಳನೇೞಿಪ ಪೆರ್ಮೊಲೆಯಿಂದೆ ಮೀನ್ಗಳಂ
ನಗುವಲರ್ಗಣ್ಗಳಿಂದೆ ಸುೞಿಯಂ ಪೞಿದೊಪ್ಪುವ ಪೊರ್ಕುೞಿಂದೆ ಮೆ
ಲ್ಲನೆ ನಡೆವಂಚೆಯಂ ಜಡಿವ ಮೆಲ್ನಡೆಯಿಂದೆ ಸಮಂತು ನೋೞ್ಪರಿ
ಚ್ಚೆಗೆ ಪೊಸವೂಗೊಳಂ ಬೊಲಮರ್ದೊಪ್ಪುವಳೊಪ್ಪದಿನಿಚ್ಚೆಗಾರ್ತಿ ತಾಂ     ೯೬

ಅವಳ ಮೊಗದಂತೆ ಮೆಯ್ಸಿರಿ
ಸವನಿಸದೆನಗೆಂದು ಕಂದನೆರ್ದೆಯೊಳ್ ತಾಳ್ದಂ
ಹಿವಗದಿರನೆಂದೊಡಿನ್ನುೞಿ
ದವರೇನಂ ಪೊಗೞಲಾರ್ಪರಾಕೆಯಮೊಗಮಂ    ೯೭

ಮತ್ತಮವಳಕಾಲ ನೇವುರದಿಂಚರಮೆಂಬ ಪೆಣ್ಣಂಚೆಯ ದನಿ ಕರ್ವುವಿಲ್ಲನೆಂಬಂಚೆಯಂ ಬೞಿವೞಿಯೊಳ್ ಬರಿಸೆಯುಂ, ನುಣ್ದೊಡೆಯೆಂಬ ಪೊಂಬಾೞೆಯ ಬಾೞ್ಗಂಬಮಲರಣ್ಗೆಯನೆಂಬ ಸೊರ್ಕಾನೆಯಂ ತೊಲಗಲೀಯದೆ ನಿಲಿಸೆಯುಂ, ಪರಿವಡೆದ ಪೊಱವಾಱೆಂಬ ತಿಳಿಗೊಳಂ ಕಮ್ಮಂಗೋಲನೆಂಬ ಜಕ್ಕವಕ್ಕಿಯನೋಲಾಡಿಸೆಯುಂ, ತೊಳಪ ತೋರಮೊಲೆಗಳೆಂಬ ಪೂಗೊಂಚಲ್ ಪೂಸರಲನೆಂಬ ತುಂಬಿಗಿಂಬಾಗೆಯಂ, ನುಣ್ಪುವಡೆದ ನಳಿತೋಳ್ಗಳೆಂಬ ಸೆಳೆಗೊಂಬುಗಳ್ ಕಾವನೆಂಬ ಗಂಡುಗೋಗಿಲೆಯುಂತೇಂಕಿಸೆಯುಂ, ಮಿಸುಪ ಸುಲಿಪಲ್ವೆಳಗೆಂಬ ಕಾರಮಿಂಚಿಗೋಲ್ವಿಲ್ಲನೆಂಬ ಸೋಗೆಯಂ ಸೋಲಿಸಿಯುಂ, ಮಿಳಿರ್ವ ಬಂಬಲ್ಗುರುಳೆಂಬ ತೊಡಂಕುವಲೆ ಬಸಂತನ ಕೆಳೆಯನೆಂಬೆರಲೆಯಂಸಿ ಲಿಸ್ಕಿಸೆಯುಂ ಇಂತಳವಿಗೞಿದ ಸೊಬಗಿನ ಸೊಂಪು ಪೆರ್ಕಳಮಾಗಿರ್ಪುದುಂ –

ಅವರಿರ‍್ವರ ಮೈಮೆಯುಮಂ
ತವರಿರ‍್ವರ ರೂಡಿವಡೆದಪೊಸಗಾಡಿಯುಮಂ
ತವರಿರ‍್ವರ ಬೇಟಮುಮಂ
ತವರಿರ‍್ವರೊಳಲ್ಲದಿಲ್ಲ ಪೆಱತೊರ‍್ವರೊಳಂ    ೯೮

ಮತ್ತಮವರೊರ್ಮೆ ಪಲತೆಱದ ಮರಂಗಳಿಂದೆಡೆಗಿಱಿದಡವಿಗಳೊಳ್ ಕಾಡೊಡೆಯರಂತೆ ಬಿರಿಯಿಗಲೆಂಬ ಮಿಗಂಗಳ ಬೇಂಟೆಯನಾಡಿಯುಂ, ಮತ್ತಮವರೊರ್ಮೆ ಪೊಳೆವಕಟ್ಟಣಕದ ಕಟ್ಟಗೆಗಳಿಂದಿಟ್ಟಣಮಾದ ತಿಳಿಗೊಳಂಗಲೊಳಾನೆಯಂತೆ ನೀರಾಟಮ. ನಾಡಿಯುಂ, ಮತ್ತಮೋರೊರ‍್ಮೆ ಪಲತೆಱದ ನಳನಳಿಸಿ ಬೆಳೆದೆಳವಾೞೆಯಸುೞಿಯೆಲೆಯ ನುಡಿಯೊಳಮರ್ಚಿಯುಂ, ಮತ್ತಮೋರೊರ‍್ಮೆ ಕೞ್ತಲೆಗೆ ನೆಲೆವನೆಯೆನಿಪೆಳವಳ್ಳಿಯ ಬಳಸಿಂಗೊಳಗಾದಸುಗೆಯ ಜೊಂಪಂಗಳೊಳ್ ಕೋಗಿಲೆಯಂತೆ ಕೂಟಮನೊಡರ್ಚಿಯುಂ ಇಂತು ಪಲವುಂ ಪಗಲಂ ಕಳೆಯುತ್ತು ಮಿರ್ದೊರ‍್ಮೆ –

ಬೆಳೆದಳವಳ್ಳಿಯೊಳ್ ಪುದಿದು ತೋಱುವ ಮಾವಿನ ತೋರಗಂಬದಿಂ
ತಳಿರ್ಗಳಿನಿಂಬುವೆತ್ತ ಪೊಸಲೋವೆಗಳಿಂ ನಸುಬಾಗಿ ಕೊಂಬಿನೊಳ್
ಪೊಳೆವೆಳಗಾಯ ನುಣ್ಬೊಗರಿಯಿಂಸು ೞಿತರ್ಪೆಲರಿಂದೆ ಬಿೞ್ದ ಪೂ
ಗಳಪುಡಿಯಿಂ ಕರಂ ಸೊಗಯಿಪೋಲಗಸಾಲೆಯೊಳಿರ್ದರೊಪ್ಪದಿಂ   ೯೯

ನಡೆ ಕೆಲಕಂಚೆ ಬಿನ್ನವಿಸು ಬೇಗದೆ ಕೋಗಿಲೆ ಪಾಡಿನೋಜೆಯಂ
ಗಡಣಿಸು ತುಂಬಿ ಸೋಗೆ ದನಿಯೆತ್ತದಿರೊಯ್ಯನೆ ಬಂದು ಕುಳ್ಳಿರೀ
ಯೆಡೆಗೆ ಬಸಂತಯೆಂದು ಗಿಳಿಗಳ್ ಕಡುಪಿಂ ನಡೆತಂದು ಸುತ್ತಲುಂ
ಪಡಿಯಱರಾಗಿ ಚಪ್ಪರಿಪುವೋಲಗದೊಳ್ ಸಲೆ ಕರ್ವುವಿಲ್ಲನಾ     ೧೦೦