ತೊಲಗದೆ ಪಕ್ಕದೊಳ್ ನಲಿವ ಕನ್ನಡವಕ್ಕಿಗಳೋಳಿ ಬಿಂಕದಿಂ
ಬಲಗೆಲದೊಳ್ ನೆಗೞ್ತೆವಡೆದಿರ್ಪರಸಂಚೆಯ ಪಿಂಡು ಬೇಟವ
ಗ್ಗಲಿಸಿದ ಜಕ್ಕವಕ್ಕಿಗಳವಂಗಡಮಿಂಬಱಿದಿರ್ಪಗಂಡುಗೋ
ಗಿಲೆಗಳ ತಂಡಮೊಪ್ಪೆ ಬಗೆಗೋಲಗಮೊಪ್ಪಿದುದಂದು ಕಾವನಾ     ೧೦೧

ಮಡದಿಯರ ಸುಯ್ಯಕಂಪುಂ
ಕಡುಮೆಱೆವಿನಮಿಟ್ಟ ಕತ್ತುರಿಯ ಪೊಸಗಂಪುಂ
ಮುಡಿಯಲರ್ಗಳ ನಱುಗಂಪುಂ
ಗಡಣಿಸಿ ಕಡೆಗೋಡಿವರಿದುವೊಡ್ಡೋಲಗದೊಳ್          ೧೦೨

ಕೆಂದಳದೊಂದು ಕೆಂಪು ಕಿಸುಸಂಜೆಯನಂಜಿಸೆ ಕರ್ಪುವೆತ್ತ ಕೇ
ಸಂದಳವಾದ ಕೞ್ತಲೆಯನೇೞಿಸೆ ನುಣ್ಮೊಗವಚ್ಚದಿಂಗಳಂ
ಸಂದಿಸೆ ನೀಳ್ದ ಕೆಂಬೆಳಗು ನಾಲ್ದೆಸೆಗಂ ಪೊಸತಪ್ಪ ಜೊನ್ನಮಂ
ಮುಂದಿಡೆ ಬಂದಳಾಗಳಿರುಂದದಿನೋರ್ವಳದೊಂದು ಗಾಡಿಯಿಂ     ೧೦೩

ಅಂತು ನೊಸಲೆಂಬ ಪೆಱೆಗೆ ಕೈದಾವರೆಗಳ್ ಮುಗಿಯೆ ಬಱಿದೊಂದು ತೆಂಬೆಲರ್ ಬರೆ, ಅರಸಾ, ಜೊನ್ನಮನುಣ್ಬ ಪಕ್ಕಿಬಾಗಿಲೊಳ್ ಬಂದಿರ್ಪುದೆಂದು ಬಗೆಯಱಿದು ಬಿನ್ನಪಂಗೆಯ್ದು ಒಡಗೊಂಡು ಬರ್ಪಾಗಳ್ –

ಮಿಱುಪ ಕುರುಳೋಳಿ ಮೂಡುವ
ಕಿಱುಮೊಲೆ ತಳತಳಿಸಿ ಪೊಳೆವ ಕೇಸಡಿ ನೀಡುಂ
ತುಱುಗಿದೆವೆ ಚೊಲ್ಲೆಯಂ ಮಿಗೆ
ಮೆಱೆವಿನಮೆಳವೆಂಡಿರಿರ್ದರೆರಡುಂ ಕೆಲದೊಳ್  ೧೦೪

ನೇವುರದಿಂಚರಂ ನೆಗೞೆ ಕಣ್ಬೆಳಗೋಲಗಸಾಲೆಯೆಲ್ಲಮಂ
ತೀವೆ ಬೆಡಂಗುವೆತ್ತ ನೊಸಲೊಳ್ ಕುರುಳೋಳಿಗಳುಯ್ಯಲಾಡೆ ಕೆಂ
ದಾವರೆವೂಗಳಂ ತರದೆ ಕೇಸಡಿ ಸಾಲಿಡೆ ಬಿಂಕದಿಂ ನೆಗ
ೞ್ದಾವಗಮೋಲಗಿಪ್ಪ ಸಱಿಮಿಂಡಿಯರೊಪ್ಪಿದರೆತ್ತ ನೋೞ್ದೋಡಂ        ೧೦೫

ಸಸಿಯಂ ಮೆಯ್ವೆಳಗಿಂದೆ ಪೊನ್ನೊಡೆಯನಂ ಪೆಂಪಿಂದೆ ಮಾದೇವನಂ
ಪೆಸರ್ವೆತ್ತಿಂಚರದಿಂದೆ ಸಂದ ಬಿದಿಯಂ ಜಾಣಿಂದೆ ಮೆಯ್ಗಣ್ಣನಂ
ಪೊಸತಪ್ಪಗ್ಗದ ಗಾಡಿಯಿಂದೆ ಪಿರಿದುಂ ಬೆಳ್ಮಾಡಿ ಬೇೞ್ಪಂತುಟು
ಬ್ಬಸಮಂ ಮಾಡುವ ಬರ್ದೆಯರ್ ಪಲಬರುಂ ಕಣ್ಗೇಂ ಬೆಡಂಗಾದರೋ      ೧೦೬

ಅಂತು ಮೆಱೆವೋಲಗದ ನಡುವೆ –

ಕಿವಿಗಿಂಪಂ ಕಱೆವಂತೆ ನುಣ್ಚರದೆ ಪಾಡುತ್ತಿರ್ಪ ಪೆಣ್ದುಂಬಿಗೊಪ್ಪುವ ಬಂಡಂ
ಬಿಡದೀಯುತುಂ ಗಿಳಿಗಳೋದಂ ಕೇಳ್ದು ಮೆಲ್ಪೊಂದಿ ತೋ
ಱುವ ಪಣ್ಣಂ ತಿಱಿದಿಚ್ಚೆಯಿಂದೆ ಕುಡುತುಂ ಚೆಲ್ವಿಂದೆ ಸಾರ್ತಂದು ಬೇ
ಡುವ ಮುದ್ದಂಚೆಗೆ ಕೈಯ ತಾವರೆಯ ಕಾವಂ ಚೆಲ್ಲದಿಂ ನೀಡುತುಂ           ೧೦೭

ತೊಡೆಯೊಳ್ ಕಾದಲೆಯಿರೆ ಬಲ
ಗಡೆಯಲ್ಲಿ ಬಸಂತನೊಲವಿನಿಂ ಕುಳ್ಳಿರೆ ತ
ನ್ನೆಡದೆಸೆಯೊಳ್ ಸೊಬಗಿಯರಿರೆ
ಕಡುಚೆಲ್ವಂ ಪೆಡದನಾವಗಂ ನನೆಗಣೆಯಂ        ೧೦೮

ಪರಿಪರಿಯ ರನ್ನದೊಡವಿನ
ಬೆರಕೆಯ ಬೆಳಗಡರೆ ಮೆಯ್ಯನಗ್ಗದ ಪೆಂಡಿರ್
ನೆರೆದಲರ ಚವರಮಂ ಬಿ
ತ್ತರದಿಂ ಬೀಸುತ್ತುಮಿರ್ದರೆರಡುಂ ಕೆಲದೊಳ್   ೧೦೯

ಸುಗಿವೆವೆ ಮಲೆವವರಂ ಕೋ
ಡಗಗಟ್ಟಿಂ ಕಟ್ಟಿತರ್ಪೆವೇಂ ಬೆಸಸೆಂದೊ
ಯ್ಯಗೆ ಕಿವಿಮೆಚ್ಚುವ ತೆಱದಿಂ
ಸೊಗಯಿಸಿದುವು ಕಣೆಯ ಗೞಪವಲರ್ವಿಲ್ಲವನಾ          ೧೧೦

ಮುತ್ತಿನ ಸರಕ್ಕೆ ನುಣ್ಪುಂ
ಬಿತ್ತರಿಸಿದ ಬೆಳ್ಪುಮಲ್ಲದಿಂತೀ ಪೊಸಗಂ
ಪೆತ್ತಣದೆನೆ ನಗುವಂತೆರ್ದೆ
ವತ್ತಿದ ಮಲ್ಲಿಗೆಯ ತಿಸರವೇಂ ಸೊಗಯಿಸಿತೋ           ೧೧೧

ತನಗೆಱಕದೆಱಗದವರಂ
ಮುನಿಸಿಂದಿಡಲೆಂದು ಸಮೆದ ಪಾಱುಂಬಳೆಯೆಂ
ದೆನೆ ದಾಳಿಂಬದ ಕೆಂಬಿ
ೞ್ತಿನ ರನ್ನದ ತೋಳ ಬಂದಿಯೇಂ ತೊಳಗಿದುದೋ        ೧೧೨

ಬಿರಯಿಗಳನೆಲ್ಲರಂ ಮುಳಿ
ದುರವಣೆಯಿಂ ಮೆಟ್ಟುವೆಡೆಯೊಳುಚ್ಚಳಿಸುವ ನೆ
ತ್ತರೊಳೊಂದಿದಂತೆ ಬಂದುಗೆ
ಯರಲ ತೊಡರ್ ತೊಡರ್ದು ಕಾಲೊಳೇನೊಪ್ಪಿದುದೋ ೧೧೩

ಅಂತು ನೋೞ್ಪರ ಕಣ್ಗೆ ನೆಲೆವೀಡಾದ ನನೆವಿಲ್ಲ ಬಲ್ಲಹನ ಮೇಲಾದ ಸೊಂಪಿಂಗೆ ಬೆಕ್ಕಸಂಬಡುತ್ತುಂ ಬಂದಿಂಗದಿರ್ಗಳಂ ಕಾಮ್ಕೆಗೊಟ್ಟು ಜೊನ್ನವಕ್ಕಿ ಬಿನ್ನವಿಸಿದತ್ತದೆಂತೆನೆ –

ನಿನಗೆಂದುಂ ತಲೆವಾಗದ
ನಿನಗಳ್ಕದ ನಿನ್ನ ವೇಳೆಗಾಯದ ಪಿರಿದುಂ
ನಿನಗೆ ಬೆಸಕೆಯ್ದು ಬಾೞದ
ನಿನಗೋಡದ ಪಗೆವರೆಂಬರಿಲ್ಲಿಂದುವರಂ        ೧೧೪

ಈಗಳ್ ಸಿವನೆಂಬ ದುಟ್ಟಗೊರವಂ ಮಂಜುವೆಟ್ಟಮಂ ಗೊಟ್ಟಂ ಮಾಡಿ ಕಿತ್ತಡಿಗಳಂ ಮರುಳ್ವಡೆಗಳಂ ಕೂಡಿಕೊಂಡು ನಿಮ್ಮಡಿಗಳುಮಂ ಮಱೆದು ಲೆಕ್ಕಿಸದೆ ಮೇಲೆ ಬಿೞ್ದ ಪಾವುಂ ನೇವಾಳಮಾಗೆ ಮೆಯ್ಯಱಿಯದಿರ್ಪನಂತುಮಲ್ಲದೆಯುಂ –

ತಳಿರೆಂದೊಡಸುಗೆಯೊಂದೊಡೆ
ಗಿಳಿಯೆಂದೊಡೆ ಕರೆವ ಕೋಗಿಲೆಗಳೆಂದೊಡೆ ಬಂ
ದೆಳಮಾವೆಂದೊಡೆ ನೆಱೆದಿಂ
ಗಳ ತಣ್ಬೆಳಗೆಂದೊಡುದ್ದಮುರಿವಂ ಗೊರವಂ  ೧೧೫

ಪುದಿದುರಿಗಣ್ಣ ನಾಣೆಯನದೇವೊಗೞ್ವೆಂ ಮುಗುಳೆಂದು ಮುಟ್ಟ ಬಾ
ರದು ಬನಮೆಂದು ಬಾಯ್ದೆಱೆಯಬಾರದು ಸಂಪಗೆಯೆಂದು ಸೂಡ ಬಾ
ರದು ಕೊಳನೆಂದು ಕೈದುಡುಕಬಾರದು ತಾವರೆಯೆಂದು ತೋಱ ಬಾ
ರದು ಪೊಸಸುಗ್ಗಿಯೆಂದುಸಿರಬಾರದು ತನ್ನಯ ಮಂಜುವೆಟ್ಟಿನೊಳ್         ೧೧೬

ಮತ್ತಮಾತಂ ಸರಿಯೊಳಾದೊಡಮಂಚೆಯೆಂಬುದಂ, ಕೆಱೆಯೊಳಾದೊಡಂ ಬಾೞೆಯೆಂಬುದಂ, ಸಿರಿಕಂಡದೊಳಾದೊಡಮಾಱಡಿಯೆಂಬುದಂ, ಕೊಡಗೂಸಿನುಡಿಗೆಯೊಳಾದೊಡಂ ಸೋಗಯೆಂಬುದಂ, ಬೆದಂಡೆಯೊಳಾದೊಡಂ ಪಾಡೆಂಬುದಂ, ಕೇಱೆಯೊಳಾದೊಡಂ ನೆರೆಯೆಂಬುದಂ ಚಪ್ಪರಣೆಯೊಳಾದೊಡಂ ಪಣ್ಣೆಂಬುದಂ ಸೈರಿಸಂ ; ಅಲ್ಲದೆಯುಂ ಈ ಪೋದಿರುಳ್ ಕಲಿಯ ಕಾಳೆಗಮಂ ಕಾದಿ –

ತಾರಗೆಗಳೞಿಯೆ ನೆಯ್ದಿಲ್
ನೀರಂ ಪುಗೆ ಕೂಡೆ ಮರ್ಬು ಮೆರ್ಯ್ವೆಚೆ ಕಡಲ್
ನೀರೋಡುವಿನಂ ಪೆಱೆಯಂ
ಬೀರದಿನಾ ಗೊರವನೆಯ್ದೆ ಬಾೞ್ದಲೆವಿಡಿದಂ    ೧೧೭

ಅದರ್ಕೆ ತಕ್ಕುದಂ ನಿಮ್ಮಡಿಗಳೆ ಬಲ್ಲಿರೆಂದು ಬಗೆಯೞಲಾಱೆ ಜೊನ್ನವಕ್ಕಿ ಬಿನ್ನಪಂಗೆಯ್ಯಲೊಡನೆ –

ನೆನೆದುರಿವ ತೆಲೆಯ ಕಿಚ್ಚಿನೊ
ಳೊಗುಮಿಗೆ ನೆಯ್ವೊಯ್ವ ತೆಱದೆ ಪೊಣ್ಮಿದ ಮುನಿಸಿಂ
ಭುಗಿಲನುರಿದೆೞ್ದನಾ ದಿ
ಟ್ಟಿಗಳೊರ್ಮೆಯೆ ತೋರಕಿಡಿಗಳಂ ಕೆದಱುವಿನಂ ೧೧೮

ಕಡಲೊಳ್ ನೇಸಱನೞ್ದಲುಂ ಪೊಡವಿಯಂ ನುರ್ಗೊತ್ತಲುಂ ಕೊಂಕಿ ಘೀ
ಳಿಡೆ ತಳ್ಕಿಂ ದೆಸೆಯಾನೆಯಂ ಮುಱಿಯಲುಂ ಪೊಂಬೆಟ್ಟಮಂ ನೂಂಕಲುಂ
ಪೆಡೆಯಂ ತೊಟ್ಟನೆ ಮೆಟ್ಟಿ ಬಾಸುಗಿಯನಾದಂ ಸೀೞಲುಂ ಪೊತ್ತು ಬಾ
ನೆಡೆಯಂ ಬೇಗದಿನೆತ್ತಲುಂ ಬಗೆದನಾಗಳ್‌ದಪ್ಪದಿಂ ದಪ್ಪಗಂ        ೧೧೯

ಅಂತು ದೆಸೆ ದೆಸೆಗೆ ಮಸಗಿ –

ಜನವಂ ಪತ್ತುವೆನೊಂಬತುಂ ಗರಮನೆಣ್ಟುಂ ಗೊಂಟಿನೊಳ್ ಕಟ್ಟತೂ
ಗುವೆನೇೞುಂ ಕಡಲಂ ಕಡಂಗಿ ಕುಡಿವೆಂ ತಳ್ತಾಱಿಲಂ ಪೊಯ್ದು ತೂ
ಱುವೆನೈದುಂ ಮೊಗಮುಳ್ಳನಂ ಕೆಡಪುವೆಂ ನಾಲ್ಕುಂ ದೞಂನೂಂಕೆ ನು
ರ್ಗುವೆನಾಂ ಮೂಱಡಿಯಿಟ್ಟ ನಚ್ಚಿಯೆರಡಂತೊಂದಾಗಿ ನೋೞ್ಪನ್ನೆಗಂ       ೧೨೦

ಎನಗಂ ಮಾರಿಗಮಿದಿರಾಂ
ಪನದಾವಂ ನಡೆದು ಪೋಗಿ ಬೇಗದೆ ಮುಕ್ಕ
ಣ್ಣನನಿಕ್ಕಿ ಮೆಟ್ಟಿ ಬಿಡೆ ತೊ
ಟ್ಟನೆ ಜಡೆಯಂ ಕಿೞ್ತುಬೞಿಯ ಪೆಱೆಯಂ ತರ್ಪೆಂ          ೧೨೧

ಎಂದಿಂತು ನಡೆಯಲೊಡರಿಪುದಂ ಕಂಡು ಕೆಲದೊಳಿರ್ದ ಬಸಂತನಿಂತೆಂದಂ –

ನೆಲದಱಿಕೆಯ ಬಿದಿಯಂ ಪೊಡೆ
ಯಲರನನಿಂದಿರನನದಟರಂ ತವಸಿಗಳಂ
ನೆಲೆನಟ್ಟು ನೋಯಿಸಿದುದಿ
ನ್ನಲರಂಬಿನ ಮೊನೆಗೆ ನಿಲ್ವನೇ ಬಡಗೊರವಂ    ೧೨೨

ಜವನಂ ಗೋಣ್ಮುಱಿಗೊಂಡು ಬಾಂಬೊೞಲನುರ್ಕಿಂ ಮೂಱುಮಂ ಸುಟ್ಟು ಜ
ನ್ನವನುಬ್ಬಣ್ಣರನಾರ್ದು ಕೊಂದು ಮುಳಿಸಿಂ ಪೋರ್ದಾನೆ ಮೆಯ್ಯಾತನಾ
ತೊವಲಂ ಮೆಲ್ಪೊದೆ ಮಾಡಿ ಮೂಜಗಕೆ ಕೇಡಂ ಮಾಡುವಾ ನೆತ್ತಿಗ
ಣ್ಣವನೊಳ್ ಕಾದುವ ಬಲ್ಪುಮೊಗ್ಗೆಗರನಿಂದಾರಯ್ದು ಮೇಲೆತ್ತುವೆಂ       ೧೨೩

ಪಿರಿದಪ್ಪಾಳ್ತನದಿಂದೆ ಕೂರ್ಪವರ ಮಾತಂ ಮೀಱಿದಾಳ್ಗೆಯ್ತದೊಳ್
ನೆರೆದಿಂತೀಗಳೆ ಪೋಗಿ ತಳ್ತಿಱಿವೆನೆಂಬಾ ಮಾತದಂತಿರ್ಕೆ ಚೆ
ಚ್ಚರದಿಂ ನಮ್ಮರಸಾಳನಟ್ಟಿ ಮಗುೞ್ದಾತಂ ಬಂದು ಪೇೞ್ವಂತುಟಂ
ತಿರದಿಂದಂ ತಿಳಿದೆತ್ತಿ ಕಾದುವುದು ಲೇಸಲ್ಲರ್ಗಿದೇ ಮಂತಣಂ        ೧೨೪

ಎಂದು ಬಿನ್ನಪಂಗೆಯ್ದ ಬಸಂತನ ಮಂತಣದ ಮಾತಂ ಸೊರ್ಕಾನೆ ಮಂತಣೆಯ ಮಾವಂತನ ಮಾತಂ ಮನ್ನಿಸುವಂತೆ ಮನ್ನಿಸಿ ತೆಂಗಾಳಿಯೆಂಬ ದೂದನಂ ಕರೆದು ಗೊರವನಲ್ಲಿಗೆ ಪೋಗಿ ನಮ್ಮ ಪೆಱೆಯಂ ತಡೆಯದೆ ಬಿಡಿಸಿಕೊಂಡು ಬಾಯೆಂದೊಡಾತಂ ಬೇಗಂ ಮಂಜುವೆಟ್ಟವನೆಯ್ದಿ ತೞ್ಪಲ ಬನದ ಚೆಲ್ವಂ ನೋಡಿ ಮೆಚ್ಚುತ್ತುಂ ಬಂದು ತನ್ನ ಬರವಂ ಪಡಿಯಱರ್ಗಱಿಪಿ ತೆಱಪಱಿದೋಲಗದೆಡೆಯಂ ಪುಗಲೊಡನೆ –

ಉರಿಗಣ್ಣಿನೊಗೆದ ಬೀರಂ
ಬೆರಸೊದವಿದ ನಂಜು ರೂಪುವೆತ್ತವೊಲೇನ
ಚ್ಚರಿಯಂ ಪುಟ್ಟಿಸಿದರೊ ಬಂ
ದೆರಡುಂ ಕೆಲದಲ್ಲಿ ನಿಂದ ಬೀರಗಣೇಸರ್        ೧೨೫

ಬಗೆ ಪೊಱಸೂಸದೆ ಕೈಯಂ
ಮುಗಿದೊಲವಿಂ ನೋಡಿಪೆರ್ಚುತುಂ ತಿರಿಸುಳಿಯಂ
ಪೊಗೞುತ್ತಿರ್ತರದಿಂದೋ
ಲಗದೊಳ್ ಕುಳ್ಳಿರ್ದ ಜತಿಗಳೇನೊಪ್ಪಿದರೋ  ೧೨೬

ಬಳಸಿದ ತಾರಗೆಗಳ ಮಾ
ರ್ಪೊಳೆಪೊಂದಿದ ಪೊನ್ನ ಬೆಟ್ಟು ಕೈಯಂ ಕಾಲಂ
ತಳೆದಿರ್ದುದೆಂಬಿನಂ ಕ
ಣ್ಗೊಳಿಸಿದನಂತವರ ಪಕ್ಕದೊಳ್ ಪಲಗಣ್ಣಂ   ೧೨೭

ಸೊಗಯಿಪ ಪೊನ್ನ ನೇವುರದ ಮೆಲ್ಲುಲಿ ಮಾಣದೆ ಮೂಱು ಕಣ್ಣನಂ
ಪೊಗೞ್ವವೊಲುಣ್ಮಿ ಪೊಣ್ಮೆ ಪಿರಿದುಂ ಸುೞಿವಾ ನುಡಿವೆಣ್ಣನಾಂತ ನಾ
ಲ್ಮೊಗಮಿರದಚ್ಚದಾವರೆಯ ಚೆಂದಮನಂದೊಳಕೆಯ್ಯೆ ಬಂದು ನೆ
ಟ್ಟಗೆ ಬಲವಕ್ಕದೊಳ್ ನೆಲಸಿ ಕಣ್ಗೆಸೆದಂ ಬಿದಿ ನಿಂದು ನೋೞ್ಪರಾ ೧೨೮

ದರೆಯಂ ಪೊತ್ತಾನೆಯ ಕೈ
ಗೊರೆಯನೆ ಕಡುವೆಟ್ಟಿತಾದ ನಾಲ್ಕುಂ ತೋಳುಂ
ಕರಮೆಸೆದಿರೆ ಕುಳ್ಳಿರ್ದಂ
ಸಿರಿಯರಸಂ ಕಾರ ಮುಗಿಲ ರೂವೆಂಬಿನೆಗಂ       ೧೨೯

ಮಿಗೆ ಮಾತಾಡದಿರೇೞದಿರ್ ಮಿಡುಕದಿರ್ ಮೇಲ್ಬೀೞದಿರ್ ಸೊರ್ಕದಿರ್
ನಗದಿರ್ ಬಾಯ್ಕಡಿಗೊಳ್ಳದಿರ್ ಕಿಱಿಚದಿರ್ ಮೆಯ್ಸೊಂಕದಿರ್ ಕೈಗಳಂ
ಮುಗಿದಿರ್ ನೂಂಕದಿರೆತ್ತದಿರ್ ಗೞಪದಿರ್ ನೀನೆಂದು ಮುಕ್ಕಣ್ಣನೋ
ಲಗದೊಳ್ ತನ್ನೊಡನಾಡಿಗೂಡಿ ಜಡಿದಂ ಮಾಕಾಳನೋ ರೋರ‍್ವರಂ         ೧೩೦

ಅಂತು ಮೈಮೆವೆತ್ತೋಲಗದ ನಡುವೆ ಯಾರುಮನೋಸರಿಸದೆ ಬಿಗಿದ ಪಾಸಮಿದೆಂಬಂತೆ ನೀಳ್ದ ಕೆಂಜೆಡೆಗಳೊಳಂ, ಮಿಸುಪ ನೊಸಲ ಚೆಲ್ವು ಕಣ್ದೆಱೆದಂತೆ ತೋರ್ಪ ನೊಸಲ ಕಣ್ಣೊಳಂ, ಪತ್ತೆ ಸಾರ್ದ ಮರುಳ ಮೊತ್ತಮಂ ಬುಸ್ಸೆಂದು ಬೆದಱಿಸುವ ಪಾವಿನ ತೊಡವುಗಳೊಳಂ, ಜಸಮೆ ತನಗೆ ಮೆಯ್ಸಿರಿಯೆಂಬುದನಱಿಪುವಂತೆ ಪೂಸಿದ ಬೂದಿಯೊಳಂ, ನುಣ್ಪುವಟ್ಟು ತೋಱೆ ಬಿಗಿದುಟ್ಟ ಪುಲಿದೊವಲೊಳಂ, ತಕ್ಕಿನಿಂ ಮಿಕ್ಕು ಪೋರ್ದಾನೆರಕ್ಕಸನ ಸಮ್ಮದ ಮೇಲ್ವೊದಿಕೆಯೊಳಂ ಚೆಲ್ವನಾಂತು –

ಹರಿಸದೆ ಸಗ್ಗದ ಜತಿಗಳ್
ನೆರೆದಂತೆರಡುಂ ಕೆಲಂಗಳೊಳ್ ತರದಿಂ ಕು
ಳ್ಳಿರೆ ಕುಳ್ಳಿರ್ದಂ ನಡೆನೋ
ೞ್ಪರ ಕಣ್ಗಳ ಹಬ್ಬಮೆಂಬಿನಂ ಕಱೆಗೊರಲಂ    ೧೩೧

ಅಂತೆಸೆದಿರೆಯಾ ನಂಜುಗೊರಲನ ಗಾಡಿಯಂ ನೋಡಿ ಬಗೆಯೊಳಚ್ಚರಿವಡುತುಂ ಬಂದು ತುೞಿಲ್ಗೆಯ್ದು ಕೈಗಳಂ ಮುಗಿದು ನೆರೆದೋಲಗಮನಿತುಂ ತನ್ನಂ ನಡೆ ನೋಡೆ ಬಿನ್ನಪಮೆಂದಾ ದೂದನಿಂತೆಂದಂ: ಎಲ್ಲೆಡೆಗಳುಮಂ ತನ್ನಟ್ಟಿದೋಲೆಗ ಮಿಟ್ಟುಂಡಿಗೆಗೆಂ ಬಸಂಮಾಡಿದ ನನೆವಿಲ್ಲ ಬಲ್ಲಹಂ ನಿಮ್ಮಡಿಗಳ ಪೆಸರಂ ಪಲಂಬರಿಂ ಕೇಳ್ದು ಕೆಳೆತನಮಂ ಬಳೆಯಿಸುವಿಚ್ಛೆಯಿಂದೆನ್ನಂ ಕಳಿಪಿದನಾತನ ಬಲ್ಪಂ ಪೊಗೞ್ವೊಡೆನ್ನ ಪವಣಲ್ತು ಆ ದೊಡಮಱಿವನಿತಂ ಪೇೞ್ವೆನದೆಂತೆನೆ –

ಅವನ ನುಡಿಗವನ ಮಂತಣ
ಕವನೆಸಕಕ್ಕವನ ತಕ್ಕಿನೇೞ್ಗೆ ಮೇಲಾ
ದವರ ನುಡಿಯವರ ಮಂತಣ
ಮವರೆಸಕಮುಮವರ ತಕ್ಕು ಕೀೞಾಗಿರ್ಕುಂ       ೧೩೨

ತೊಟ್ಟನಿದಂ ನಿಟ್ಟಿಸಿದಂ
ಬಿಟ್ಟನಿದೆಂಬೊಂದು ಬಿಲ್ಲ ಬಲ್ಮೆಯನಾರ್ಗಂ
ದಿಟ್ಟಿಸುವುದರಿದು ಪಗೆವರ್
ತೊಟ್ಟನೆ ಕೆಡೆದುದನೆ ಕಾಣಲುಂಟವನಿದಿರೊಳ್ ೧೩೩

ಕಡುಪಿಂದಾತನೊಳಾಂತರೋಡಿ ಬನಮಂ ಪೊಕ್ಕುಂ ಪೊದರ್ಪಾರ್ದು ಕಾ
ಲ್ವಿಡಿದುಂ ಪಚ್ಚೆಲೆವಾರ್ದು ಮೆಯ್ಗರೆದು ಕೊಂಬಂ ಪೊರ್ದಿಯುಂ ನಲ್ಮೆಯಂ
ನುಡಿದುಂ ಮೆಯ್ಸಿರಿಗೆಟ್ಟುಮಿಂತು ನೆಲದೊಳ್ ನಾಣ್ಗುಂದಿ ನಿಂದಿರ್ಪರು
ಗ್ಗಡದಿಂ ಬಂದಿದಿರೊಡ್ಡಿ ಬಾೞ್ವವರನೆಂದುಂ ಕಂಡುದಿಲ್ಲಿನ್ನೆಗಂ  ೧೩೪

ಮಾವುಗಳವು ಮಲೆವರನೆ
ಮ್ಮಾವುಗಳವೊಲುಱದೆ ಮುಱಿವುವೆಂದೊಡೆ ಕೇಳಾ
ಕಾವನ ಬರವಱಿದ ಬೞಿ
ಕ್ಕಾವನ ಸೊಕ್ಕುೞಿಯದಿನಿಸುಮೇನಿರ್ದಪುದೇ  ೧೩೫

ಸಸಿ ಕೆಳೆಯಂ ಸರಲ್ ನಿಡಿಯ ಬಲ್ನನೆ ಕರ್ವಿನ ಕೋಲೆ ಬಿಲ್ ತಳಿ
ರ್ತೆಸೆವೆಳೆಮಾವು ತುಂಬಿ ಪೊಸದಾವರೆ ಮಲ್ಲಿಗೆಯೆಂಬಿವಾಂತರಂ
ದೆಸೆವಲಿಗೆಯ್ವ ಪಾಳಿ ಮೊನೆಯೊಳ್ ನೆಗೞ್ದಿರ್ದ ಬಸಂತನೆಂ ದೊಡೇಂ
ಪೆಸರ್ವಡೆದಾತನೊಳ್ ಪೊಣರ್ದು ಪೋಪರೆಯೆಂ ಟೆರ್ದೆಯುಳ್ಳರಾದೊಡಂ   ೧೩೬

ಮಿಸುಪಲರಂಬುಗಳು ರ್ಕಿಂ
ಬೆಸಕೆಯ್ಯದೆ ಮಲೆವ ಬೀರರಂ ಪರಿದೆಂಟುಂ
ದೆಸೆಗಳೊಳಂ ಕಾಣೆವೆನಿ
ಪ್ಪಸರದೆ ಬಲ್ಮೊಱೆವುವೀಗಳಾಱಡಿ ನೆವದಿಂ   ೧೩೭

ನಿನ್ನಯ ಚಾಗಮುಂ ಸಿರಿಯುಮಾಳ್ತನಮುಂ ದೊರೆವೆತ್ತ ಮೈಮೆಯುಂ
ಮನ್ನಣೆಯುಂ ಪೊದೞ್ದ ಜಸಮುಂ ಬಗೆಯುಂ ಚಲಮುಂ ನೆಗೞ್ತೆಯುಂ
ನನ್ನಿಯಮಾರ್ಗಮಚ್ಚರಿಯನಿತ್ತಪುವೆಮ್ಮೊಡೆಯಂಗಮೀ ತೆಱಂ
ಪೊನ್ನದು ಕಮ್ಮಿತಾದ ತೆಱನಲ್ಲವೆ ನಲ್ವಗೆಗೊಂಡೊಡಿರ್ವರುಂ    ೧೩೮

ಪೊಡವಿಯೊಳಿಂತಾತನವೊಲ್
ಕಡುಬಲ್ಲಿದರಿಲ್ಲ ನಿಮ್ಮೊಳಾತಂ ಕೆಳೆಗೊಂ
ಡೊಡೆ ತೀರದುದಿನಿತಿಲ್ಲೀ
ಗಡೆ ಬಿಡುವುದು ಪೆಱೆಯ ಸೆಱೆಯನಿದು ಲೇಸಲ್ತೇ        ೧೩೯

ಎನಲೊಡನೆ ಬಗೆಯೊಲ್ಪುಟ್ಟಿದ ಮುಳಿಸಂ ಪೊಱಪೊಣ್ಮಲೀಯದೆ ಮುಗುಳ್ನಗೆ ನೆಗೆವಿನಂ ಮಾದೇವನಿಂತೆಂದಂ –

ಬಱಿವಾತನನಿನಿಸುಪೊೞ್ತುಂ
ಮೆಱೆವಿನೆಗಂ ಗೞಪಲೇಕೆ ನಿನ್ನಯ ಬಗೆಯೊಳ್
ತಱಿಸಂದಿರ್ದುದನೊರ್ಮೊದ
ಲಱಿಪದೆ ನಿನ್ನಂತು ನುಡಿವನಾವನುಮೊಳನೇ   ೧೪೦

ಉರ್ಕಾಳ್ಗಳಾದೊಡೇಂ ಕೇಳ್
ಸೊರ್ಕಾನೆಯ ಕೈಯ ಕರ್ವನಿನಿತುಂ ಸೆಳೆಯಲ್
ಬರ್ಕುಮೆ ಪೆಱೆಯಂ ಬಿಡೆನಂ
ತಿರ್ಕದು ಮತ್ತೊಂದು ಕಜ್ಜಮುಳ್ಳೊಡೆ ನುಡಿಯಾ         ೧೪೧

ಅಱೆಕೆಯ ರೂವಿಲ್ಲದ ನಿ
ನ್ನೆಱೆಯಂಗುಬ್ಬ(ಟೆ)ಯುಬೀರಮುಂಟೆಂದುದ್ದಂ
ಜಱುಚಿದೆ ಕೇರಿಲ್ಲದೆ ಕ
ಣ್ದೆಱೆವಿನೆಗಂ ಬರೆವೆನೆಂಬ ಮರುಳಂ ಪೋಲ್ತೈ ೧೪೨

ಕೋಡುವ ಕೂಂಕುವ ಚೆಂದಂ
ನೋಡಿರೆ ಕಾಳೆಗಕೆ ಬೆಂಬಲಂ ಗಡ ಪೆಂಡಿರ್
ಸೂಡುವಲರಂಬು ಗಡ ಪಿಡಿ
ದಾಡುವ ಕರ್ಬು ಗಡ ಬಿಲ್ಲಿದೇನಚ್ಚರಿಯೋ    ೧೪೩

ಪಡೆ ಮರವಟ್ಟ ಮಾವು ಗಡ ಬೆಳ್ಗೊಡೆಯಾಗಸಕೆೞ್ದ ಚಂದವಂ
ಗಡ ಪೊಸಬೆಳ್ಳಿದಾವರೆಗಳಾವೆಡೆಯೊಳ್ ನಡೆವಲ್ಲಿ ಪೊಯ್ದಪೂ
ಗುಡಿ ಗಡ ಕೊಂಬುಗೊಂಡುಸಿರದಿರ್ಪ ಬಸಂತನಿವರ್ಕೆ ತಾನೆ ಪೆ
ರ್ಗಡೆ ಗಡ ಗೆಲ್ವ ತಕ್ಕಱಿಯಲಾದುದು ನಿಮ್ಮಲರಂಬನೆಂಬನಾ      ೧೪೪

ಪಿರಿದು ಮಾತಿನೊಳೇನೈ
ಸರಲಂಗೆ ಪೊಡರ್ಪಿನೇೞ್ಗೆಯುಂಟಾದೊಡೆ ಚೆ
ಚ್ಚರದಿಂದೆತ್ತಿಸಿ ತಂದಿ
ರ್ವರ ಬಲ್ಪಂ ಬೞಿಕೆ ನೋಡು ನೀಂ ಕಾಳೆಗದೊಳ್         ೧೪೫

ಎಂಬುದುಂ ಕೇಳ್ದು ಮತ್ತಮಾ ದೂದನಿಂತೆಂದಂ –

ಎನ್ನೊಡೆಯನ ಬಲ್ಪಂ ನೀ
ವಿನ್ನುಂ ಕಂಡಱಿದುದಿಲ್ಲ ಬಿದಿಯೆಂಬಣ್ಣಂ
ಬನ್ನಂಬಟ್ಟುದನಱಿಯನೆ
ಮುನ್ನಂ ಮೆಯ್ಗಣ್ಣನಱಿಯನೇ ಪೊಡೆಯಲರಂ          ೧೪೬

ಬಾನೆಡೆಯೊಳ್ ಸುಱಿದಾಡುವ
ರೇನಱಿಯರೆ ರಕ್ಕಸರ್ಕಳಱಿಯರೆ ದಿಟದಿಂ
ಮಾನಸರಱಿಯರೆ ಬಾಸುಗಿ
ತಾನಱಿಯನೆ ಮತ್ತಮಱಿಯದೇ ನೆಲನನಿತುಂ  ೧೪೭

ಅಂತುಮಲ್ಲದೆಯುಂ ನೀಂ ನಾಲ್ಕೆರಡು ಪಗಲೊಳೆಮ್ಮೊಡೆಯನ ಕೈಯ ನನೆಯ ಕೋಲ ಕಾಲಾಟಮಂ ಕಾಣ್ಬೆರೆನುತೋಲಗಸಾಲೆಯಂ ಪೊಱಮಟ್ಟು ತುರಿಪದಿಂ ಬಂದು, ಕಂಪುವೊೞಲಂಪೊಕ್ಕು, ತೆಱಪುವಾರ್ದು ನನೆವಿಲ್ಲ ಬಲ್ಲಹನಂ ಕಂಡು, ಕಿತ್ತಡಿ ಪೆಱೆಯಂ ಬಿಡೆನೆಂದು ಕಾಳೆಗಮಂ ಮುಂದಿಟ್ಟುಕೊಂಡಿರ್ದಪನೆನಲೊಡನೆ, ನನೆಗಣೆಯಂ ಕೆಲಬಲದ ಪಸಾಯ್ತರ ಮೊಗಮಂ ನೋಡಿ, ಮುಳಿಸಂ ಮುಕ್ಕುಳಿಸಿ, ನಸು ನಗೆವೆರಸು ಇಂತೆಂದಂ

ಉಡುವ ಪುಲಿದೊವಲೊ ಕೈಯೊಳ್
ಪಿಡಿದಾ ಲಾಗುಳದ ಕೋಲೊ ಬಗರಿಗೆಯೋ ಕೆಂ
ಜೆಡೆಯೋ ಪೂಸುವ ಬೂದಿಯೊ
ಬಡಗೊರವಂಗವೇಕೆ ತನಗೆ ಕಾದುವ ಬೆಸನಂ     ೧೪೮

ಎನ್ನೆಡಗೈಯಗುರ್ವಿಸುವ ಕರ್ಬಿನ ಬಿಲ್ಗೊನೆಯಲ್ಲಿ ಬಾರದಿ
ರ್ಪನ್ನೆಗಮೆನ್ನ ಜೇವೊಡೆಯ ಬಲ್ಲುಲಿ ನಾಲ್ದೆಸೆಯಂ ಪಳಂಚದಿ
ರ್ಪನ್ನೆಗಮೆನ್ನ ಪೂಗಣೆಗಳೋವದೆ ಬೆನ್ನನೆಪೋಗಿ ನಾಂಟದಿ
ರ್ಪನ್ನೆಗಮುಂಟು ತನ್ನ ಕಡು ಸೊರ್ಕು ಬೞಿಕ್ಕದು ಪಾಱಿಪೋಗದೇ           ೧೪೯

ಕಡಲೊಳ್ ಮೆಯ್ಗರೆದಿರ್ದೊಡಂ ಪೊಡವಿಯೊಳ್ ಪೊಕ್ಕಿರ್ದೊಡಂ ಬೆಟ್ಟದೊಳ್
ನಡೆದೇಱಿರ್ದೊಡಮಳ್ಕುತುಂದೆಸೆಗಳೊಳ್ ಬಳ್ಕುತ್ತಡಂಗಿರ್ದೊಡಂ
ಕಡುಪಿಂದೊರ್ಮೆಯೆ ಪೂವಿನಂಬದಟರಂ ಮೆಯ್ದಾಗಿ ನೋಯಿಪ್ಪುದೆಂ
ದೊಡೆ ಕೇಳೆನ್ನಯ ಬಾರಿಯೊಳ್ ತಿಸುಳಿ ತಾನಿನ್ನೆತ್ತ ಪೋಗಿರ್ದಪಂ  ೧೫೦