ಅದಟಿನಳುರ್ಕೆಯಂ ಕಿಡಿಸಲಾಂಬರಮೇ ತನಗೊಂದು ಕರ್ಬುಸಾ
ಲದೆ ಮಱಿದುಂಬಿ ಸಾಲದೆ ಪಸುರ್ಮಿಡಿ ಸಾಲದೆ ಬಂದ ಮಾವು ಸಾ
ಲದೆ ಸುೞಿವಂಚೆ ಸಾಲದೆಳಗೌಂಗುಱೆಸಾಲದೆ ಕಾಯ್ತ ತೆಂಗು ಸಾ
ಲದೆ ಪೊಸನೀಱೆವೆಣ್ಣನುಡಿ ಸಾಲದೆ ತೆಂಕಣ ಗಾಳಿ ಸಾಲದೇ         ೧೫೧

ಎಂದು ಗದ್ದುಗೆವೊಯ್ದು ಕಣ್ಣ ಕೆಂಪು ಕಿಸುಸಂಜೆಯಂ ಪಸರಿಸೆ ದೆಸೆ ದೆಸೆಗೆ ಮಸಗೆ ನಿಸ್ಸಾಳಮಂ ಸೂಳೈಸಲ್ವೇೞ್ದಾಗಳ್ –

ಮಾಣದೆ ನಿಚ್ಚಮುಂ ಪೊಣರ್ವ ರಾಯರ ತಕ್ಕಡಿಗಾೞೆ ಬಳ್ಕಿ ನೀ
ರ್ದಾಣಮನಂಟುಗೊಂಡದಟರಾಗಳೆ ಬಾಯ್ವಿ ಡೆಸೊರ್ಕಿನಿಂದೆ ಕ
ಣ್ಗಾಣದ ಬೀರರುಗ್ಗಡಿಸೆ ಬಗ್ಗಿಪ ಕೋಗಿಲೆಯೆಂಬ ಪೊಯ್ವ ನಿ
ಸ್ಸಾಣದ ಬಲ್ಸರಂ ಕಿವಿಯ ಬಾನೆಡೆಯಂ ಬಳಸಿತ್ತು ಬೇಗದಿಂ        ೧೫೨

ಅಂತು ತೊಟ್ಟನೆ ಪಳಂಚಲೆದು ತನ್ನ ಮನದನ್ನರಪ್ಪ ಬಸಂತಮೆಲ್ಲೆಲರ್ಗಳೆಂಬ ಕೆಳೆಯರೊಡನೆ ಇಂದು ಪಡೆಯೆಲ್ಲಮಂ ಪಲವುಂ ಸನ್ನಣದಿಂ ಬರಲಿಮೆಂದು ಪೇೞೆ, ಕಮ್ಮಂಗಣೆಯನ ನುಡಿಯನಾಲಿಸಿ ಹಸಾದವನಿಟ್ಟು ಸುಗ್ಗಿಯುಮಾ ತೆಂಗಾಳಿಯುಮಿರ್ವರುಂ ಸಜ್ಜುವಂ ಪಡೆದು ಚೌವಂದದ ದೞಕಂ ಸೆಲವಿತ್ತೊಡಗೊಂಡು ಬರೆಯಾಗಳ್ ಪಲವೆಡೆಯ ಕಡೆಯ ಬಾಡಗಳ ಬನಂಗಳೊಳ್ ತಾಣಂದರಮಾಗಿರ್ಪ ಕೆಂಗಣ್ವಕ್ಕಿಯಲರ್ವಕ್ಕಿ ಕನ್ನಡವಕ್ಕಿ ಪೊಣರ್ವಕ್ಕಿ ಮೊದಲಾದ ದಟ್ಟಿಯ ಕೂರಾಳ್ಗಳುಂ ತಂತಮ್ಮ ಪಡೆವೆರಸು ಬಂದು ಕಾಣ್ಬುದುಮವರಂ ಮನ್ನಿಸಿ ನಾಲ್ಕುಂ ತೆಱದ ಪುಸಿವಡೆಯಂ ಬಿಜ್ಜೆಯಿಂ ಪುಟ್ಟಿಸಿ ಮುಂಗುಡಿಯೊಳ್ ನಡೆವಂತೆ ಬೆಸಸಿ ಕಣ್ಗಿಂಬಾಗಿರೆ ಬೀರವಸದನಂಗೆಯ್ದು –

ಪಲವುಂ ಮೇಳದ ಬೀರರ್
ಕೆಲದೊಳ್ ಬರೆ ತುಱುಗಿ ಪಿಡಿದ ಬೆಳ್ಗೊಡೆ ಚೆಲ್ವಂ
ಗೆಲೆ ತನ್ನರಮನೆಯೊಳ್ ಸಿರಿ
ನಲವಿಂ ನೆಲಸಿರ್ಪ ಪೊೞ್ತಿನೊಳ್ ಪೊಱಮಟ್ಟಂ            ೧೫೩

ಸೊಗಯಿಪ ತಳಿರ್ದೋರಣಮಂ
ನುಗುಳುತ್ತುಂ ಪಲರ ಪರಕೆಯಂ ಕೈಕೊಳುತುಂ
ಪೊಗೞ್ವವರಂ ಮನ್ನಿಸುತುಂ
ಬಗೆವುಗೆ ಪೊಱವೊೞಲನೆಯ್ದಿದಂ ನನಗಣೆಯಂ೧೫೪

ಮೊಗಸಾಲೆ ಚಂಪೆಯಂ ಚೌ
ಕಿಗೆ ಮೆಱೆದಿರೆ ಹರಿಸದಿಂದೆ ಬೀಡಂ ಬಿಟ್ಟಾ
ಪಗಲಂ ಕಳೆದಂದಿನ ಮಱು
ವಗಲಂ ನಡೆದೆತ್ತಿ ಬರುತುರ್ಮಿರ್ದಂ ಕಾವಂ      ೧೫೫

ಅಗಳ್ –

ಅರಗಿಳಿವಿಂಡು ವಾರುವದ ಮೋಹರವಾಱಡಿವಿಂಡು ಬಿಲ್ಲ ಬೀ
ರರ ಪಡೆ ಕೊಂಚೆವಿಂಡು ಪಲವಡ್ಡಣದೊಡ್ಡಮಳ್ವಕ್ಕಿವಿಂಡು ಮೆ
ಯ್ವೆರಸುವ ಕೊಂತಗಾಱರಣಿಯಾಗಿರೆ ಬಂದು ಬಸಂತನೊಲ್ದು ಸಂ
ವರಣೆಯನೆಯ್ದೆ ತೋಱಿ ತಲೆದೂಗಿಸಿದಂ ನನೆವಿಲ್ಲಬೀರನಾ       ೧೫೬

ಅಂತೊಯ್ಯನೆ ಮುಂದೆ ಮೋಹರಂ ಬಡೆದು ತಳರ್ವ ಪುಸಿವಡೆಯಲ್ಲಿ –

ಗಲ್ಲದ ಸೊರ್ಕುನೀರ ಪೊನಲಿಂ ನೆಲೆವರ್ಚಿ ಕಡಲ್ ತುಳುಂಕೆ ಬೆ
ಟ್ಟೆಲ್ಲವನೌಂಕುವಂತಿಡುವ ಕಾಲ್ವೊಱೆಯಿಂ ನೆಲನಾೞೆ ಬೇಗದಿಂ
ನೆಲ್ಲಿಯ ಕಾಯ್ಗಳಂ ಬಡಿಗೆ ಕೊಂಡವೊಲೆತ್ತಿದ ತೋರಹತ್ತದಿಂ
ಜಲ್ಲನೆ ತುಂಬಿಗಳ್ ಕೆದಱೆ ಬಂದುವು ಬಿಂಕದಿನಂಕದಾನೆಗಳ್        ೧೫೭

ತೊಳಗುವ ಪೊನ್ನ ಪಲ್ಲಣದ ನುಣ್ಬೆಳಗಾಗಸಮಂ ಮುಸುಂಕೆ ಪ
ಜ್ಜಳಿಸುವ ಪಕ್ಕರಕ್ಕೆಗಳ ಗೆಜ್ಜೆಯ ಬಲ್ಲುಲಿನೀಳ್ದು ದಿಕ್ಕಿನೊಳ್
ಬಳಸೆ ಕೊಡಂಕೆಯೊಳ್ ಪೊಳೆವ ಚೌರಿಯ ಗಾಳಿಯ ಕೋಳ್ಗೆಬೆಟ್ಟುಗಳ್
ತಳರೆ ಪೊಗೞ್ತೆಯಂ ತಳೆದ ತೇಜಿಯ ತಟ್ಟು ತೆರಳ್ದುದೆತ್ತಲುಂ      ೧೫೮

ಪೂಡಿದ ವಾರುವಂಗಳ ತೆರಳ್ಕೆಗೆ ನೇಸಱ ತೇರ ತೇಜಿಗಳ್
ಪಾಡೞಿದಿರ್ಪಿನಂ ಪರಿವ ಗಾಲಿಯ ಕೋಳ್ಗೆ ಕೆಳರ್ತು ಬೆಟ್ಟುಗಳ್
ಕೂಡೆ ಸಡಿಲ್ವಿನಂ ಪೊಡೆವ ಬೀರರ ಜಂಕೆಗೆ ಗೊಂಟಿನಾನೆಗಳ್
ಕೋಡುವಿನಂ ಕಡಂಗಿಪರಿತಂದುವು ತೋರ್ಕೆಯ ತೇರ್ಗಳೋಳಿಯಿಂ  ೧೫೯

ಸಿಡಿಲ ಪೊಡರ್ಪನೇೞಿಸುವ ಸಿಂಗಮನಂಜಿಪ ರಕ್ಕಸರ್ಕಳಂ
ನಡುಗಿಪ ಮಾರಿಯಂ ಪೊಸೆದು ಮುಕ್ಕುವ ಮಿೞ್ತುವನೊತ್ತಿ ಸೊರ್ಕಿನಿಂ
ಪಿಡಿವ ಕಡಂಗಿ ನಿಂದ ಜವನಂ ಮುಱದಿಕ್ಕುವ ತಕ್ಕನಾಂತು ಮುಂ
ಗುಡಿಯೊಳೆ ಬಂದುದಂದು ತುೞಿಲಾಳ್ಗಳ ಬಲ್ಲಣಿಗೆಲ್ಲವೆಂಬಿನಂ೧೬೦

ಕುದುರೆಯ ತಟ್ಟುಗಳ್ ನೆರೆದ ಬಲ್ದೆರೆಯಂ ಪಿಡಿದಿರ್ದಬಾಳ್ಗಳು
ಣ್ಮಿದ ನಿಡುವಾಳೆಯಂ ಬಿಳಿಯ ಸತ್ತಿಗೆಗಳ್ ನೊರೆವಿಂಡನಾನೆಗಳ್
ಕೆದಱದೆ ಹಂತಿಗೊಂಡ ನೆಗೞಂ ಪೊಸತೇರ್ ಪಡಗಂ ನೆಗೞ್ಚೆಪೆ
ರ್ಚಿದ ಕಡಲೆಂಬಿನಂ ಮಸಗಿ ಬಂದುದು ಪೆರ್ಬಡೆ ಕರ್ಬುವಿಲ್ಲನಾ     ೧೬೧

ಅಂತು ಬೆಡಂಗುವೆತ್ತು ನಡೆವ ಪುಸಿವಡೆಯ ಪೆಱಗೆ ಪೞೆಯ ಪಾಡಿಯಂ ಕೂಡಿಕೊಂಡು –

ಮಿಳಿರ್ವ ಪೊಸದಳಿರೆ ಪೞಯಿಗೆ
ಗಿಳಿಗಿಳೆ ಪೂಡಿರ್ದ ಕುದುರೆ ತಂಗಾಳಿಯೆ ಕ
ಣ್ಗೊಳೆ ತೇರೆಸಗುವನೆನೆ ಬಂ
ದೆಳಮಾವಿನ ತೇರನೇಱಿ ನಡೆದಂ ಕಾವಂ          ೧೬೨

ತರದಿಂದೆತ್ತಿದ ಕೆಂದಾ
ವರೆಗಳ್ ಕೆಂಗೊಡೆಗಳಂದಮಂ ಪಡೆವಿನಮಾಂ
ತರಸಂಚೆಯೆಂಬ ಸಾವಂ
ತರ ಬಳಗಂ ಬಳಸೆ ಬಂದನಂದು ಬಸಂತಂ         ೧೬೩

ನನೆಯೆಸಳಂದಮಾದ ಗುೞಮುಂ ಪೊಳೆಯುತ್ತಿರೆ ನೀಳ್ಪುವೆತ್ತ ಪೂ
ವಿನ ಪೊಸಟೆಕ್ಕೆಯಂಮಿಳಿರೆ ಪಕ್ಕದ ಕೋಗಿಲೆಯೆಂಬ ಗಂಟೆಗಳ್
ದನಿಗುಡೆ ಕೈಯ ಕೋಳ್ಗೆ ಕಡುಗೂರದವರ್ ದೆಸೆಯತ್ತ ಚೆಲ್ಲೆ ಮೆ
ಲ್ಲನೆ ನಡೆತಂದುವಂದು ಪೊಸಮಾವೆನಿಪ್ಪುಗ್ಗಡದಗ್ಗದಾನೆಗಳ್    ೧೬೪

ಕೆಂದಳಿರೆಪಕ್ಕರಕ್ಕೆಗ
ಳಂದಬಂಡೆದೆಸೆವ ಪಲ್ಲಣಂಗಳ ಸೊಂಪುಂ
ಸಂದಿಸೆ ನೀಳ್ಪಿಂ ನಡೆದುದು
ಸಂದರಗಿಳಿಯೆಂಬ ಕುದುರೆಗಳ ದೞವೆತ್ತಂ        ೧೬೫

ಮಿನುಗುವ ಕೊಂಬಿನಚ್ಚು ಕಿಱುಗೊಂಬಿನ ತಳ್ತರಗೀಲ್ ಕವಲ್ತ ಕೊಂ
ಬಿನ ಮಡವಡ್ಡವಂದ ನಳಿಗೊಂಬಿನ ಪತ್ತುಗೆ ಜೋಲ್ವ ಬಳ್ಳಿಗೊಂ
ಬಿನ ಬಲೆ ತೋರಗೊಂಬಿನ ನೊಗಂ ನಿಡುಗೊಂಬಿನ ಮೂಂಕು ಕಣ್ಗೆ ಚೆ
ಲ್ವೆನೆ ನಡೆತಂದುವಂದಸುಗೆಯೆಂಬ ನೆಗೞ್ತೆಯ ತೇರ್ಗಳೆತ್ತಲುಂ      ೧೬೬

ಕಿಱುಮುಗುಳ ಗೆಜ್ಜೆಯಿಂದಂ
ಮಿಱುಗುವ ಕೆಂದಳಿರ ಹರಿಗೆ ಬಗೆಗೊಳೆ ಬಂದ
ತ್ತುಱದೆ ಮಱಿಗೋಗಿಲೆಗಳೆಂ
ಬಱಿಕೆಯ ಪೆಸರ್ವೆತ್ತ ಹರಿಗೆಕಾಱರ ತಂಡಂ       ೧೬೭

ಪಿಡಿದಲರ್ವಿಲ್ಲುಂ ಮೆಲ್ಲೆಸ
ಳುಡೆದೊವಲುಂ ಮಿಸುಪ ನನೆಯ ಮೊನೆಯಂಬುಂ ನೇ
ರ್ಪಡೆ ಮೇಲೆ ಮೇಲೆ ನಡೆದುದು
ಗಡಣದೆ ಮಱೆದುಂಬಿಯೆಂಬ ಬಿಲ್ಲಣಿ ಬೀರರ್            ೧೬೮

ಕಡು ನಿಮಿರ್ದು ಪೊಳೆವ ಪೊಸಪೂ
ಗುಡಿಯೆಂಬಗ್ಗಳಿಕೆವಡೆದ ಸಬಳಮನೊಲವಿಂ
ಪಿಡಿದು ಬರುತಿರ್ದುದೆತ್ತಂ
ಕಡು ಸೊರ್ಕಿದ ತುಂಬಿಯೆಂಬ ಡೊಂಕಣಿಕಾಱರ್೧೬೯

ಅಂತು ನಡೆತರ್ಪ ಪಡೆವೆರಸು ನಿಚ್ಚವಯಣಂ ಬರುತಿರ್ಪಾಗಳ್ ಪಲವುಂ ಪರಿಯ ಪಕ್ಕಿಗಳ ಪೆರ್ಚಿದ ಸರಂಗಳಿಂ ಹರಣಂಬಡೆದಂತೆ ಪರಿವಡೆದು ತಿಂತಿಣಿವಡೆದ ಪೇರಡವಿಯೊಳ್ ಪೊಗೞ್ತೆವೆತ್ತು –

ತುಱುಗಿ ನಡೆವ ಮುಗಿಲ ನಡುವೆ ಪೊಳೆವ ಮಿಂಚಿದೆಂಬಿನಂ
ಮಿಱುಪ ತೆರೆಗಳೆಡೆಗಳೊಳಗೆ ಸುೞಿವ ಮೀನ್ಗಳಾವಗಂ
ಮೆಱೆವ ತೊಱೆಯ ತಡಿಯ ತಳಿರ ಮನೆಗಳಲ್ಲಿ ನಿಚ್ಚ ಮುಂ
ಬಱಿದೆ ಮುಳಿದು ತಿಳಿಪೆ ತಿಳಿದು ನೆರೆವ ಬೇಡವೆಣ್ಡಿರಿಂ    ೧೭೦

ಅಂತುಗಾಡಿವಡೆದ ಕಾಡಂ ಪಿಂದಿಕ್ಕಿ ಮೆಲ್ಲ ಮೆಲ್ಲನೆ ನಡೆವಾಗಳ್ –

ಕಟ್ಟಿದ ತಂತಿಯಂ ಮಿಡಿದು ಗೊಂದಣದಿಂದರುಹಂತನೇೞ್ಗೆಯಂ
ನೆಟ್ಟನೆ ಪಾಡಿ ಸೋಲಿಸುವ ಸಗ್ಗದ ಪೆಣ್ಡಿರ ನುಣ್ಚರಕ್ಕೆ ಮೆ
ಯ್ಗೆ ಟ್ಟೆಳವುಲ್ಲೆಗಳ್ ಪಲವು ಮಾಲಿಸೆ ಮೆಯ್ಸಿರಿಮೆತ್ತ ತೞ್ಪಲಿಂ
ಬೆಟ್ಟಮದೊಂದು ದಿಟ್ಟಗೆಡೆಯಾದುದು ತೊಟ್ಟನೆ ಕರ್ಪುವಿಲ್ಲನಾ            ೧೭೧

ಅಂತು ನೆಗೞ್ದಿರ್ದ ಬೆಟ್ಟಂ
ಸಂತಸದಿಂ ನಿಂದು ನೋಡುತಿರೆ ಬಿನ್ನಪವೆಂ
ದಿಂತೆಂದಂ ಕೈಮುಗಿದು ಬ
ಸಂತಂ ಜತಿಯೊರ್ವನಿಲ್ಲಿ ನೆಲಸದೆ ಮಾಣಂ      ೧೭೨

ಎಂಬನ್ನೆಗಂ –

ಕೊಲ್ಲುದುದೆ ದಿಟದಿನಱನೆಂ
ದೆಲ್ಲಾ ಪರಿಯಿಂದೆ ಪೇೞ್ದ ಪಿರಿಯರ ನುಡಿಯಂ
ಬಲ್ಲಿತೆನೆ ನಂಬಿ ಬೇಂಟೆಯ
ನೊಲ್ಲದೆ ಬಿಟ್ಟರ್ದ ಬಿಯದರೊಪ್ಪಿದರದಱೊಳ್        ೧೭೩

ಮಡುಗಳೊಳಗಲರ್ದ ಪೂವಂ
ಕಡು ನಲವಿಂ ತಿಱಿದು ಬೇಗದಿಂ ಸವಣನ ಮೆ
ಲ್ಲಡಿಗೆ ತಲೆದುಡಿಗೆ ಮಾಡುವ
ಪಿಡಿಗಳ್ ನೆಗೞ್ದಿರ್ದುವದಱ ತೞ್ಪಲ ಬನದೊಳ್          ೧೭೪

ತೊಲಗದೆಗೆಡೆಗೊಂಡಿರ್ದುವು
ಸಲೆಮುಳಿಸಂ ಬಿಟ್ಟು ಸೋಗೆಯುಂ ಪಾವುಗಳುಂ
ಪುಲಿಯುಂ ಮಱಿವುಲ್ಲೆಗಳುಂ
ಕಲಿಸಿಂಗಮುಮಾನೆಯುಂ ಕರಂ ನಲವಿಂದಂ      ೧೭೫

ಅಂತು ಮೈಮೆವಡೆದ ಬೆಟ್ಟದ ಮೇಲೆ ಕೈಯೆತ್ತಿ ಪಲರುಂ ಜತಿಗಳ್ ತವಸಿಂ ಗೊಳಗಾಗಿ –

ಬಗೆ ನೊಸಲಲ್ಲಿ ಕೂಡೆ ನಿಲೆ ತಪ್ಪದೆ ಮೂಗಿನ ಚೌಕದಲ್ಲಿ ದಿ
ಟ್ಟಿಗಳಿರೆ ಮೆಯ್ಯ ಮಣ್ ಕೊರಲ್ಗೆ ಪುತ್ತಿಡೆ ಪರ್ಬಿದ ಬಳ್ಳಿ ಸುತ್ತಲುಂ
ಸೊಗಯಿಸೆ ಕೈಯನಿಕ್ಕಿ ಮಿಗೆ ತನ್ನನೆ ತಾನೊಲವಿಂದೆ ಜಾನಿಸು
ತ್ತಗಲದೆ ನಿಂದನೊರ್ವ ಸವಣಂ ಬಗೆಗೊಳ್ವೆಱೆತಟ್ಟಿತೆಂಬಿನಂ        ೧೭೬

ಅವರಂ ಭೋಂಕನೆ ಕಟ್ಟಿದಿರೊಳ್ ಕಂಡು ಕಿಡಿಕಿಡಿಯಾಗಿ ಕರ್ವುವಿಲ್ಲನಿಂತೆಂದಂ – ಇನ್ನೆಗಮೆನಗಿದಿರಾಗಿ ಮಲೆದು ಪೋಗದೆ ಪೋಗದೆ ನಿಲ್ವ ತವಸಿಗಳನೊರ್ವರುಮಂ ಕನಸಿನೊಳಂ ಕಂಡೆನಿಲ್ಲ, ಸವಣನೊರ್ವನೆ ತೊಲಗದಿದಿರಾಗಿನಿಂದಂ ಇದರ್ಕೆ ತಕ್ಕುದಂ ಮಾೞ್ಪೆನೆಂದು ಕರ್ವುವಿಲ್ಗೆ ಕೈಯಂ ನೀಡೆ ಬಸಂತನಿಂತೆಂದಂ –

ತನಗೆ ಸವನಪ್ಪವಂ ಪೊಣ
ರ್ದನೆ ಕಾದುವುದಜ್ಜನಪ್ಪವಂಗೆಱಗುವುದೆಂ
ಬಿನಿತೆ ವಲಮರಸುಗಾದೆಗ
ಳನುವಂ ನೀನಱಿದು ಬಿಲ್ಗೆ ಕೈನೀಡುವರೆ         ೧೭೭

ಪೞವಗೆಗಳಾಱುಮಂ ಗೆ
ಲ್ದಳವಿಂ ಕೈಯಿಕ್ಕಿ ನಿಂದ ಕಲಿಯೆಂದುಂ ತ
ನ್ನೊಳಗುಂ ಪೊಱಗುಂ ತೋಱದ
ಬಳಿಯಂಗೆಱಗಿರ್ದು ಬಾೞ್ವುದೀ ಮೂಲೋಕಂ೧೭೮

ಕಿಱುಕುಳನೆಂದೇೞಿಸಲೀ
ತೆಱನಲ್ಲವೆ ಮುಂದೆ ನಿಂದ ಸವಣನರೂಪೇ
ತರ ಮಾತೊ ಗಂಡುತನಮಂ
ಮೆಱೆ ತಿಸುಳಿಯೊಳೆಱಗು ಪಿಱಿಯವರ್ಗೆಳೆಯೊಡೆಯಾ    ೧೭೯

ಎನೆ ಗದಗದನೆ ನಡುಗಿ ಮುಂದೆ ತಿಸುಳಿಯಂ ಗೆಲ್ವುದರ್ಕೆ ಮುಡಿಗಿಕ್ಕುವಂತೆ ನಿಡುಗೈಗಳಂ ಮುಡಿಗಿಕ್ಕಿ ನಡೆದು, ಅಂತುಮೆಲ್ಲದೆಯುಂ –

ಉಱದೞಲಿಂದಮಾ ತವಸಿಯಂ ಮುಳಿದೆಚ್ಚೊಡೆ ಕರ್ವುವಿಲ್ಲು ತಾಂ
ಮುಱಿಯದೆ ಪೂವಿನಂಬು ಕರಿಕೇೞದೆ ತುಂಬಿಯ ನಾರಿ ಬೇಗದಿಂ
ಪಱಿಯದೆ ತನ್ನ ನಚ್ಚಿನೆಲರೊಯ್ಯನೆ ಜಾಱದೆ ಬಂದ ಮಾವು ಬೀ
ತೊಱಗದ ಗಂಡುಗೋಗಿಲೆಯ ಸೊರ್ಕೊಳಸೋಱದೆ ಸೈತೆಪೋಕುಮೇ         ೧೮೦

ಎಂದು ಬಗೆವರ ಬಗೆಪಿಂದುೞಿಯೆ ತಳರ್ದು ಬನಂ ಬಿಡಿದು ಕಟ್ಟುದ್ದಮಾಗಿ ಬೆಳೆದಬಿದಿರ ಕೊನೆಯ ಕೋಳ್ಗೆ ಪಱಿವಱಿಯಾದ ಮುಗಿಲಪೊಱೆಯಿಂ ಸುರಿವ ಮುತ್ತುಗಳಂ ಕಾರ ಮುಂಬನಿಯ ತಂದಲೆಂದು ಬಂದು ನುಂಗಲಂಗೈಸುವ ಚಾದಗೆಯ ಮಱಿಗಳುಮಂ ಬೆಂಗದಿರ್ಗಂ ತಣ್ಗದಿರ್ಗಂ ತೆಱಪುಗುಡದ ಮರದುಱು ಗಲ ಕೞ್ತಲೆಯಂ ಕಾರಿರುಳ್ಗೆತ್ತು ಸುೞಿಯಲನುಗೆಯ್ವ ಗೂಗೆಗಳುಮಂ ತನಿವಣ್ಣ ಗೊಂಚಲಿಂ ಮಿಂಚುವಡೆದ ಮೇಲ್ಮರನನಡರ್ವ ಕೋಡಂಗಂಗಳ ಬಳ್ಳಿವಾಲಮನೆಳನಾಗರೆಂದು ಸೆಳೆದುಕೆಡಪಿ ಕಡದೀಡಾದಲವ್ವಳಿಸುವ ಮುದಿ ಮುಂಗುಲಿಗಳುಮಂ, ಕಡವೆ ತುೞಿದು ಕಡದಿಡೆದೆಯೊಳೆಲೆ ಕೞಲ್ದು ಕೆಡೆದ ತೋರಗೊಂಬುಗಳಂ ಪೆರ್ವಾವೆಂದು ಪೊರ್ದಲಂಜಿ ಗೆಂಟಱೊಳ್ ತೂಗಿನೋಡಿ ಪೆಱಕಾಲೊಳೋಡುವ ಕಿಱುನರಿಗಳುಮಂ, ಈಡಿಱಿವ ಕಾಡಾನೆಗಲ ಕೋಡಪೊಯ್ಲಿಂದುದಿರ್ದೆತ್ತಲುಂ ಪರೆದ ಗುರುಗುಂಜಿಯಂ ನೋಡಿ ಕೆಂಬರಲೆಂದು ಬಗೆದು ಬೇಗದಿಂದಾಯಲೆಂದುಜ್ಜುಗಿಪ ಬಿಯದರೆಳವೆಣ್ಣಿರುಮಂ ಬಿಱುಗಾಳಿಯ ಪೊಯ್ಲಿಂ ನೆಗೆದೊಗೆದ ಬಿದಿರ ಬಿಲ್ಲುಲಿಯಿಂ ಬೇಡರ ಬಲ್ಲುಲಿಯಿನೆ ಲ್ಲಿಯುಂ ನಿಲ್ಲದೆ ತಲ್ಲಣದಿನೋಡಲೊಡರ್ಚುವೆಳವುಲ್ಲೆಗಳುಂ, ಸುೞಿಗಾಳಿಗೆ ಸುೞಿಯೆ ನೆಗೆದು ಪಾಱುವ ತಱಗೆಲೆಯ ತುಱುಗಲಂ ಕಿಱುವಕ್ಕಿವಿಂಡೆಂದು ಕೊಱಂಡುಗಳಂ ಮಡುಮಿಡಿವಿಲ್ಲೊಳಿಸಲೆಸಗಿ ಮಱುಗುವ ತುಱುಗಾವ ಕಿಱುಕುಳದ ಕೆಳೆಯರುಮಂ ನೋಡುತ್ತುಂ ನಿಚ್ಚವಯಣದಿಂ ಬರೆವರೆ –

ಬಿಡದೆಸಪೆಲರಿಂದಂ ಪೊಣ್ಮುತಿರ್ಪಚ್ಚಗಂಪಂ
ಪಿಡಿದಲರ್ಗಳ ಚೊಂಪಂ ಜೋಲ್ದು ಚೆಲ್ವಾಗೆ ಬಿಣ್ಪಿಂ
ದಿಡಿದ ಮರಗಳಿಂದಂ ಬೆಳ್ಳಿವೆಟ್ಟಕ್ಕೆ ನಿಚ್ಚಂ
ಪಡಿಯೆನಿಸುವುದೆತ್ತಂ ರನ್ನಗಲ್ಲೆಂಬ ಬೆಟ್ಟಂ    ೧೮೧

ಹರಿಸದೆ ಕೂಡುವ ಬಿಜ್ಜೋ
ದರಿಯರ ಕೊರಲುಲಿಗಳಿಂದಮಂತಾ ಬೆಟ್ಟಂ
ಬಿರಯಿಗಳ ಮೊತ್ತಮಂ ಚ
ಪ್ಪರಿಪಂತಿರೆ ಸಾರ್ದು ನೋಡಿದಂ ನನೆಗಣೆಯಂ೧೮೨

ನೋೞ್ಪರ ಕಣ್ಗಚ್ಚರಿಯಂ
ಮಾೞ್ಪವೊಲಾಗಸಮನಣೆವ ಕೋಡುಂಗಲ್ಲಿಂ
ನೀೞ್ಪಂ ತಳೆದಾ ಬೆಟ್ಟದ
ತಾೞ್ಪುದಿದ ಬನಂಗಳಲ್ಲಿ ಬೀಡಂ ಬಿಟ್ಟಂ       ೧೮೩

ಆಗಳೆಡೆಗಿಱಿದ ಪೂಗುಡಿಯ ಗುಡಿಗಳೊಳಂ, ನೆಗೆದ ಸುರಹೊನ್ನೆಯ ಮೊಗಸಾಲೆಯೊಳಂ, ಮಡಲ್ಗೊಂಡ ಮಲ್ಲಿಗೆಯ ಮಂಡವಿಗಳೊಳಂ ಸಂಪಗೆಯ ಜೊಂಪದ ಚಂಪೆಯದೊಳಂ, ಕಂಪನಪ್ಪಿದಿರವಂತಿಯ ಕಾವಣಂಗಳೊಳಂ, ಗಾಡಿವಡೆದ ಬಕುಳದ ಗೂಡಾರದೊಳಂ, ಬೀಗಿ ಪೞಪೞನೆ ಬೆಳೆದ ಬಾೞೆಯ ತೀವುರಿಯೊಳಂ, ಸೊಂಪಾದ ಪಾದರಿಯ ಚೌಕಿಗೆಗಳೊಳಂ, ಬಿಟ್ಟ ಬೀಡು ಬರೆದಂತೆ ಕಂಡರಿಸಿದಂತೆ ಕಣ್ಗೆಸೆದಿರ್ದುದನ್ನೆಗಮಿತ್ತಲ್ –

ಪೂಗಣೆಯನೆತ್ತಿ ಬಂದುದ
ನಾಗಳೆ ಸಿವನಱಿದು ನೊಸಲ ಕಣ್ಪಾಯ್ದವನಂ
ಬೇಗದೆ ನಡೆದವನೊಳ್ ನೀಂ
ತಾಗೆನೆ ನಸುನಗುತುಮಾತನಂದಿಂತೆಂದಂ          ೧೮೪

ನೆಲನಂ ಪೋಗೊದೆಯೆಂಬುದೇನುಗಿದುಬೆಟ್ಟಂ ಹಿಟ್ಟು ಮಾಡೆಂಬುದೇ
ನುಲಿದೆಣ್ಟುಂ ದೆಸೆಯಾನೆಯಂ ಪಿಡಿದು ಕೋಡಂ ಕಿೞ್ತು ತಾರೆಂಬುದೇ
ನೆಲೆ ಪೆರ್ಮಾರಿಯನಾವಗಂ ಪೊಸೆದು ನೀಂ ಮುಕ್ಕೆಂಬುದೇನಳ್ಕದೀ
ಯಲರ್ವಿಲ್ಲಾತನ ಪಾಡಿಯಂ ಕಡುಪಿನಿಂ ತಾಗೆಂಬುದೇಂ ಬೀರಮೇ೧೮೫

ಮತ್ತಮೊರ್ವಂ ಮೂದಲಿಸಿಯಲ್ಲದೆ ತಗದ ಮುನ್ನೆಱಗಿದಲ್ಲದಿಱಿಯದ ಸಾಱಿದಲ್ಲದೆ ಕೊಲ್ಲದ ಮುಱಿಯಿಱಿದಲ್ಲದೆ ಮೊರೆದೆಸೆಯದ ಪೆಸರಂ ತಳೆದ ಕೂರಾಳಿಂತೆಂದಂ –

ಕಡುಮುಳಿದೋಡಿ ನಿಂದ ತುೞಿಲಾಳ್ಗಳನಾಂ ತಱಿದೊಕ್ಕಲಿಕ್ಕದಿ
ರ್ದೊಡೆ ಬಿಡದಾಂತ ಸೂನಿಗೆಯ ಭಂಡಿಗಳಂ ಸಿಡಿಲಂತೆ ಪೊಯ್ಯದಿ
ರ್ದೊಡೆ ನಡೆತರ್ಪ ತೇಜಿಗಳನೋವದೆ ಭಂಡಣದಲ್ಲಿ ಸೀೞದಿ
ರ್ದೊಡೆ ಪೆಸರಾನೆಯಂ ಮುಱಿಯದಿರ್ದೊಡೆ ನಚ್ಚಿನ ನಿನ್ನ ಲೆಂಕನೇ           ೧೮೬

ಮಿಸುಪ ಸುಲಿಪಲ್ಲ ಬೆಳಗೆ
ಣ್ದೆಸೆಯಂ ಪರಿದಡರ್ದು ಪೊಳೆವ ಜೊನ್ನದ ಸೊಂಪಂ
ಮಸುಳಿಸೆ ಮತ್ತಮದೊರ್ವಂ
ಬಿಸುಗಣ್ಣನ ಮುಂದೆ ನಿಂದು ತಾನಿಂತೆಂದಂ      ೧೮೭

ಕೊಂಡಾಡುವ ಕಲ್ಗಾಪಿನ
ಗಂಡರ್ಕಳನಱಸಿ ಕೆದಱಿ ನಿಟಿಲೆನೆ ಮುಱಿವೆಂ
ಬಂಡಣದೆಡೆಯೊಳ್ ಬಾೞೆಯ
ದಿಂಡಂ ಮುಱಿವಂತೆ ಕಾವನಾನೆಯ ಕೊಂಬಂ    ೧೮೮

ಮತ್ತಮೊರ್ವಂ ತಕ್ಕಿನ ರಕ್ಕಸರನೊಕ್ಕಲಿಕ್ಕಿದ ಪೆಸರ ಪೇರಱಿಕೆಯೊಳಿಂತೆಂದಂ –

ತೊಱೆಯಂ ಪೊಕ್ಕಾದಂ ಮೆ
ಯ್ಯಱಿಯದೆ ಸೊರ್ಕಾನೆ ಮುಳಿದು ಬೆಳ್ದಾವರೆಯಂ
ಮುಱಿವವೊಲಾ ಕಾಳೆಗದೊಳ್
ತಱಿಸಂದೊಳವೊಕ್ಕು ಮುಱಿವೆನಾತನ ಕೊಡೆಯಂ        ೧೮೯

ಬಂದ ಕಡುಗುದುರೆ ಪೊಲದೊಳ್
ನಿಂದವರಂ ತಿವಿದುವಕಟ ನೋಡಿರೆ ತಾನಿಂ
ತೆಂದಱಿಯ ಬಾರದಿದು ಪೊಸ
ತೆಂದೊರ್ಮೆಯೆ ಪೊಱಗೆ ಪುಯ್ಯಲಾದತ್ತಾಗಳ್೧೯೦

ಅಂತಳುರ್ವ ಮಾಸಬುದಮಂ ಕೇಳ್ದು ಇವು ಕಾವನ ಕುದುರೆಗಳಾಗದೆ ಮಾಣವೆಂದು ಬಗೆಯೊಳಿಟ್ಟಣಿಸಿ ಕಡು ಮುಳಿದು

ಪೊಸತಪ್ಪ ಕಡಲಿದೆಂಬಂ
ತೆಸೆದೊಪ್ಪಿರೆ ತಿಸುಳಿ ಬೇಗದಿಂ ಪುಟ್ಟಿಸಿದಂ
ಪುಸಿವಡೆಯಂ ಕಡುಮೆಱೆದಿರೆ
ಪಸರಂಬಡದಾನೆ ಕುದುರೆ ತೇರಾಳ್ಗಳುಮಂ      ೧೯೧

ಅಂತು ಪುಟ್ಟಿಸೆ ಮೊದಲಿಗನಪ್ಪ ಬಿಸುಗಣ್ಣೊಳೊಗೆದ ಬೀರಂ ತನ್ನೊಡನಾಡಿಗಳಪ್ಪಗ್ಗದಬೀರರ್ವ್ಗೆರಸು ಆ ಪಡೆಯಂ ಕೂಡಿಕೊಂಡು ಸೂೞೆಸುವ ನಿಸ್ಸಾಳದ ತಾಟಿಸುವ ತಂಬಟದ ಬಾರಿಸುವ ಬೀರವಱೆಯ ಪೊಡೆವ ಡಕ್ಕೆಯ ಪಿಡಿದ ಬಿರುದಿನ ಕಾಳೆಯ ಬಲ್ಲುಲಿಯ ಸಡಗರಮೆಲ್ಲಾ ದೆಸೆಗಳಂ ಕಿವುಂಡುವಡಿಸೆ ಮಂಜುವೆಟ್ಟದಿಂ ಪೊಱಮಡಲೊಡನೆ –

ಮೀನಗೆಯಾಂತ ನೀಳ್ದ ಪೊಸಟೆಕ್ಕೆಯಮೊಪ್ಪಿ ರೆ ಬರ್ಪ ಗಾಲಿಯಂ
ತಾನೊಳಗಾದ ಬೆಟ್ಟು ಪುಡಿಯಾಗಿರೆ ಪೆರ್ಚಿದ ಕಾಲದೂಳಿಯಿಂ
ಬಾನೆಡೆ ನಾಡೆಯುಂ ಪೊಡವಿಯಂತಿರೆ ಕೈದುಗಳಿಂದೆ ಬಂದುವಂ
ದಾನೆಗಳೊಡ್ಡು ತೇರ್ಗಳಣಿ ತೇಜಿಯ ತಟ್ಟುಲಿವಾಳ ಮೊಗ್ಗರಂ     ೧೯೨

ತರದಿಂ ಮೇಲೊಗೆದಿರ್ಪ ಪೀಲಿದೞೆಗಳ್ ತಳ್ತಾಗಸಂ ರೂಪುಗೆ
ಟ್ಟಿರೆ ಕೂರ್ವಾಳ ತೊಳಪ್ಪ ನುಣ್ಬೊಗರದೆತ್ತಂ ಪರ್ವಿ ಕಾರ್ಮಿಂಚಿನಂ
ತಿರೆ ಬಿಲ್ಲಾಳ್ಗಳ ಬಲ್ಸರಂ ದೆಸೆಗಲಂ ತಳ್ಪೊಯ್ಯೆ ಮಾಱಾಂತ ಬೀ
ರರ ಸೊರ್ಕೊಮೊದರ್ಲೋಡೆ ಬಂದುದಳವಿಂಪಾಡಿಂತು ಮುಕ್ಕಣ್ಣನಾ         ೧೯೩

ಕೆಲಬರ್ ಬಟ್ಟೆಯ ಬೆಟ್ಟನಾರ್ದೊಡೆದು ಸೆಂಡಾಡುತ್ತು ಮೆಕ್ಕೆಕ್ಕೆಯಿಂ
ಕೆಲಬರ್ ಸಿಂಗಮನೊತ್ತಿ ಪಲ್ಲಣಿಸಿ ಬಲ್ಪಿಂದೇಱುತುಂ ಬೇಗದಿಂ
ಕೆಲಬರ್ ಪೆರ್ಚಿದ ನೇಸಱಂ ನೊಣೆಯುತುಂ ಕೈ ನೀಡಿ ಮುನ್ನೀರ್ಗಳಂ
ಕೆಲಬರ್ ಪೀರ್ದರೆ ಮಾಡುತುಂ ನಡೆದರೆತ್ತಂ ಬೀರರಾ ಪಾಡಿಯೊಳ್            ೧೯೪

ಪೊಡವಿ ನಿಲಲಾಱದೊಲೆದೋ
ರ್ಗುಡಿಸುಗುಮೆಂದಲ್ಲಿ ಬೆ‌ಟ್ಟನಿಟ್ಟಾರ್ಪಿಂದಂ
ಪಿಡಿದೆಣ್ದೆಸೆಯಾನೆಗಳಂ
ಕಡುನಲವಿಂದೇಱಿ ಬರುತುಮಿರ್ದರ್ ಕೆಲರ್    ೧೯೫

ಬಿಸುಪಮರ್ದ ನೊಸಲ ಕಣ್ಣುಂ
ತಿಸುಳಂಗಳನಾಂತ ಕೈಗಳುಂ ನೋೞ್ಪರನಂ
ಜಿಸೆ ನಡೆತಂದರ್ ಕೆಲಬರ್
ಪೆಸರಾಳ್ಗಳ್ ಬೆಟ್ಟನಣ್ಣೆಕಲ್ಲಾಡುತ್ತುಂ         ೧೯೬

ತಕ್ಕಿನೊಳಾಂತಾ ಜವನೊಳ
ವೊಕ್ಕೆಮ್ಮೊಳ್ ಪೊಣರ್ದನಾದೊಡಂ ಮಿಗೆ ಸುಗಿವಂ
ತಿಕ್ಕುವೆವೆನುತ್ತೆ ಸಾಸಿಗ
ರೆಕ್ಕೆಕ್ಕೆಯಿನಿರದೆ ಕೆಲಬರಿದಿರೇೞ್ತಂದರ್           ೧೯೭

ಅಂತಾಗಸಮೀಂದಂತೆಯುಮೆಳೆ ಬೆಸಲಾದಂತೆಯುಂ ಮುನ್ನೀರ್ ಮೇರೆವರಿದಂತೆಯುಂ ನಡೆದು ಭಂಡಣದೆಡೆಯೊಳ್ ತಂಡತಂಡದಿಂದೆಡ್ಡಮಪ್ಪಂತೊಡ್ಡಿ ನಿಲಲೊಡನೆ –

ಕಾಲಾಳ್ಗಳ ತೇರ್ಗೊಡೆಯರ
ಮೇಲಾಳ್ಗಳ ಜೋದರುಲಿಗಳೆಣ್ಬುಂ ದೆಸೆಯೊಳ್
ಕಾಲೂಱೆ ತಕ್ಕು ನಿಂದುದು
ಮೇಲೊಡ್ಡಿದುದೈದೆ ಬಂದ ಮಾರ್ಪಡೆಯನಿತುಂ          ೧೯೮

ಕುಱುಪಿನ ಮಾಣಿಕವರಿಗೆಯ
ತೆಱಪುಗಳೊಳ್ ಪೊಳೆವ ಬಾಲ ಬೆಳ್ವೆಳಗಂದೇಂ
ಮೆಱೆದುವೊ ಕೆಮ್ಮುಗಿಲೆಡೆಯೊಳ್
ಮಿಱುಗುವ ಮಿಂಚೆಂಬ ತೆಱದಿನೆರಡುಂ ಪಡೆಯೊಳ್        ೧೯೯

ಪಡೆಯಿಂದಮೊಗೆದು ಪರ್ವಿದ
ಪುಡಿ ಮೆಯ್ಯಂ ಪತ್ತೆ ಪೋಗಿ ಬಾಂದೊಱೆಯಂ ಪೊ
ಕ್ಕಡಿಗಡಿಗೋಲಾಡುವವೊಲ್
ಕಡುನೆಗೆದೊಪ್ಪಿದುವು ಮಿಳಿರ್ವ ಕೆಂಬೞವಿಗೆಗಳ್           ೨೦೦