ಪೊಸಪಸಗೆಯ ಮಂಜಿಟಿಗೆಯ
ಮಿಸುಗುವ ದೋರಿಯದ ಪೞಿಯ ಪುಲ್ಲಿಯ ಸೊಂಪಂ
ಪಸರಿಸಿದ ಪಕ್ಕರಕ್ಕೆಗ
ಳೆಸೆದಿರ್ದುವು ತರದಿನೊಡ್ಡಿದೆರಡುಂ ಪಡೆಯೊಳ್           ೨೦೧

ಬೆಚ್ಚಂತಾನೆಯ ತಟ್ಟಿನೊ
ಳಚ್ಚರಿಯಂ ತಳೆದ ಱೆಂಚೆಯಂಗಳ್ ನಡೆನೋ
ೞ್ಪಚ್ಚಿಗೆ ಚೆಲ್ವಂ ಬೀಱಿದು
ವಚ್ಚರಸಿಯರೇಱಿ ಬಂದ ಪಾಱಿನ ತೆಱದಿಂ     ೨೦೨

ಪರಿಗೆಗಳಲ್ಲಿ ಕೀಲಿಸಿದ ಗೆಜ್ಜೆಯ ಬಚ್ಚಣೆವೆತ್ತ ಬಿಲ್ಗಳ
ಚ್ಚರಿಗೆಡೆಯಾದ ಕನ್ನಡಿಯ ಕೂರ್ಪಿನ ಡೊಂಕಣಿಯಲ್ಲಿ ಜುಂಜಿನಂ
ತಿರೆ ಮಿಳಿರ್ದಾಡುತಿರ್ಪ ಪೊಸಚೌರಿಯ ದಿಟ್ಟಿಗಳುಳ್ಕೆ ಮಿಂಚು ಬಿ
ತ್ತರಿಸುವ ತೋಳ ಬಾಳ ಪರಿ ನಾಡೆಯುಮೊಪ್ಪಿದುದಿರ್ವಲಂಗಳೊಳ್          ೨೦೩

ಆಗಳೆರಡುಂ ಪಡೆಯೊಡೆಯರ್ ಕಾದುವ ಪೋೞ್ತಱಿದು ಕಡು ಮುಳಿದು ಕೈಯ ಕುಂಚಮಂ ಬೇಗ ಬೇಗಂ ಬೀಸಲೊಡನೆ-

ತಡಿಮೀಱಿ ಬಂದು ತೆಂಕಣ
ಬಡಗಣ ಕಡಲೊಂದನೊಂದು ತಾಗುವ ತೆಱದಿಂ
ಬಿಡೆ ಗಜಱಿ ಮಿಕ್ಕುಂ ತಕ್ಕಿಂ
ಪಡೆಯೆರಡುಂ ದೆಸೆಗೆ ಮಸಗಿ ತಾಗಿದುದೆತ್ತಂ     ೨೦೪

ಆಗಳಾಗಸಕ್ಕೆ ನೆಗೆದು ಪರ್ವಿದ ದೂಳಿಗೞ್ತಲೆಯೊಳ್ ತಂತಮ್ಮ ಪಿಡಿದ ಬಾಳ್ವೆಳಗಿಂ ಮಾಱೊಡ್ಡಂ ಕಂಡು ಕಾಲಾಳ್ ಕಾಲಾಳ್ಗಳೊಳ್ ಕುದುರೆಗಳ್ ಕುದುರೆಗಳೊಳ್ ತೇರ್ಗಳ್ ತೇರ್ಗಳೊಳ್ ಆನೆಗಳಾನೆಗಳೊಳೋವದೆ ಕಾದಿ ಮೆಯ್ಯೇರ್ಗಳಿಂ ಜುಮ್ಮನೆಚ್ಚು ಪಾಯ್ವ ಪೊಸನೆತ್ತರಂ ನೆಗೆದ ದೂಳಿಯಿಂ ನಂದಿಸಿ ಪೆಱದೆಗೆಯಲೊಡನೆ –

ಕಡು ನೆಗೆದಬ್ಬರಂ ಮೂೞಗಿನಂತಿರೆ ಬಿಲ್ಲೊಳಮರ್ಕೆವೆತ್ತ ಕ
ನ್ನಡಿಗಳ ಬಳ್ಳಿವೆಳ್ಪು ಕುಡುಮಿಂಚಿನವೋಲಿರೆ ಗಾಳಿವಟ್ಟೆಯೊಳ್
ನಡೆವನ ಕಾಯ್ಪು ತಣ್ಣಗಿರೆ ಕಾರ್ಮುಗಿಲೊಡ್ಡುಗಳಿಂತಿವೆಂಬಿನಂ
ಗಡಣಿಸಿ ಬಂದು ಕೋಲ ಮೞೆಯಂ ಕಱೆದರ್‌ಮಿಗೆ ಬಿಲ್ಲ ಬಲ್ಲಹರ್        ೨೦೫

ಮಸಗಿ ಕವಿದಾರ್ಪಿನಿಂ ಬ
ಗ್ಗಿಸಿ ನಾಲ್ಕುಂ ದೆಸೆಗೆ ಸರಲ ಸರಿಯಂ ಸುರಿವಂ
ತಿಸುವವರ್ಗಳ ಕೈಯೊಳ್ ನಿ
ಟ್ಟಿಸಬಾರದು ತುಡುವ ಬಿಡುವ ಪವಣಂತಾರ್ಗಂ           ೨೦೬

ತಪ್ಪದೆ ನಟ್ಟಲಗಿಂದಂ
ತೊಪ್ಪನೆ ಕರುಳೊಕ್ಕು ಬೇಗದಿಂದಂ ನೆಲದೊಳ್
ಕುಪ್ಪಳಿಸಿದೊಡಂ ಬೀೞದೆ
ಚಪ್ಪರಿಸುತ್ತೆಚ್ಚರೆಕ್ಕೆಯಿಂ ಬಿಲ್ಲಾಳ್ಗಳ್         ೨೦೭

ಕಣೆ ತೀರೆ ಕಟ್ಟಿದಲಗಿಂ
ಮಣಿಯದೆ ಕೀೞ್ಕೈದುಗೊಂಡು ಕಡು ಮುಳಿಸಿ ಬಿ
ಲ್ಲಣಿ ತಳ್ತಿಱಿಯುತ್ತಿರ್ದುದು
ಖಣಿಲೆನೆ ತಲೆಪಱಿದು ಪೊಡವಿಯೊಳ್ ಬೀೞ್ವಿನೆಗಂ       ೨೦೮

ಪೊಡೆದಾಡುತೊರ್ಮೆ ಬಿಲ್ವಡೆ
ಪಡಲಿಡೆ ಕಂಡಾರ್ದು ಪರಿಗೆಕಾಱರ ತಂಡಂ
ನಡೆದು ಪಳಂಚಿದುದುರಿದಾ
ಗಡೆ ಮುಗಿಲೊಂದೊಂದಱೊಳ್ ಪಳಂಚುವ ತೆಱದಿಂ      ೨೦೯

ತೊಲಗದ ಕಂಬದಾನೆಯ ಪಸುಂಬನ ಪಕ್ಕಿಯ ಸೂಲ ಸೂಲದಿಂ
ಗಿಲಿತದ ಗಂಡಗತ್ತರಿಯ ಗೂಳಿಯ ಪಂದಿಯ ಪೊನ್ನ ಬೀರಸಂ
ಕಲೆಯ ತೋಳಪ್ಪ ಕನ್ನಡಿಯ ಚೆನ್ನಡಿಯಡ್ಡಣವೆಡ್ಡಮಾಗೆ ಮೂ
ದಲಿಸಿ ಪೊಡರ್ಪು ಪೆರ್ಚಿ ಕೆಲರುರ್ಕುಡಿಗಳ್ ತಱಿಸಂದು ಕಾದಿದರ್   ೨೧೦

ಕಡುಗದ ಪೊಯ್ಲಿಂದಂ ಕಾ
ಲಡಿಗಳ್ ಕಡಿಯಾಗೆ ನೀಡಿದುಪ್ಪರವೊಯ್ಲಿಂ
ಪೊಡವಿಗೆ ಬೀೞ್ತರೆ ತಲೆಸೊ
ರ್ಕಡಗದೆ ಕೆಲರಿಱಿದು ಬೀರಸಿರಿಯೊಳ್ ನೆರೆದರ್            ೨೧೧

ಅಂತು ಪೂಣ್ದು ನುಡಿದು ಪೆಱದೆಗೆಯದೆ ಪೊಕ್ಕು ಬೆರಸಿ ಸಣ್ಣ ನಾದ ಪೇರಱಿಕೆಯ ಪರಿಗೆಕಾಱರಂ ಕಂಡು –

ಬಿಱುವರಿಯ ಬೇಗದಿಂದಂ
ಕುಱುಪಿನ ಪೞಯಿಗೆಗಳೊಲೆಯೆ ಪೆರ್ಗಡಲೆಡೆಯೊಳ್
ನೆಱೆ ನಾವೆ ತಾಗುವಂದದೆ
ತೆಱಪಿಲ್ಲದೆ ತೇರ್ಗಳೊಡ್ಡು ತಾಗಿದುದಾಗಳ್   ೨೧೨

ತೇರೊಳಗಿರ್ದು ನಾಡೆಱೆಯರೆಚ್ಚರಲಂಬಿನ ಸೋನೆ ಸುತ್ತಲುಂ
ಭೋರೆನುತೊರ್ಮೆ ಸೈಗಱೆಯೆ ತೊಟ್ಟನೆ ಪರ್ವಿದ ಮರ್ವಿನಿಂದ ಮಾ
ತಾರಗೆವಟ್ಟೆಯಂ ದೆಸೆಗಳಂ ನೆಲನಂ ಕಡಲಂ ಬನಂಗಳಂ
ಕಾರಿರುಳೈದೆ ನುಂಗಿದವೊಲಾದುದು ಕಾಳೆಗಮೇನಳುಂಬಮೋ       ೨೧೩

ತೇರೊಳ್ ಪೂಡಿದ ತೇಜಿಗಳ್ ಸರಲ ಕೂರ್ಪಂಗಳ್ಕಿ ಪಿಮ್ಮೆಟ್ಟೆ ಕೆ
ನ್ನೀರೇಱಿಂದೊಗೆದೆಚ್ಚು ಪಾಯೆ ಪೊಡೆವಾತಂ ಜೋಲ್ದು ಕೈಗುಂದೆ ಕಂ
ಡಾರುತ್ತುಂ ಮುಳಿದೊತ್ತಿ ನೂಂಕಿ ಕಣೆಯಂ ಬಿಲ್ಲಂ ಬಿಸುಟ್ಟೆಕ್ಕೆಯಿಂ
ಕೂರಾಳೊಳ್ ತಲೆಯೊತ್ತಿ ಕಟ್ಟಿದಲಗಿಂದಂ ಕುತ್ತಿ ಮೈಯಿಕ್ಕಿದರ್  ೨೧೪

ತೇರ್ಗಳ ಗೊಂದಣಂ ಮುಱಿದು ಮೆಟ್ಟಿದ ಕೊಂಬುಡಿದಂತೆ ಬೇಗದಿಂ
ನೆರ್ಗನೆ ಬಿೞ್ದು ನುಚ್ಚುನುಱಿಯಾಗೆ ಕನಲ್ದಳವಿಂದೆ ಮಾಱಿ ಕೆ
ನ್ನೀರ್ಗಳ ಕಾೞ್ಪೊನಲ್ ಮಸಗಿ ಕೂಡೆ ಪೆಣಂಗಳನೆತ್ತಿ ಗುಂಪಿನಿಂ
ಭೋರ್ಗರೆದೆತ್ತಲುಂ ಪರಿಯೆ ಗೋೞೆಯಿಲರ್ ಕಡುಕೆಯ್ದು ಕಾದಿದರ್        ೨೧೫

ಮುಳಿಸಿಂದಂ ಕಿೞ್ತು ಬಾಳಂ ಜಡಿದಳವಿಯನಾರಯ್ದು ಝಾರೇ ಜಝಾರೇ
ಹಳುರೇ ಹೋಹೋ ಮಝಾ ಎಂಬುಲಿ ನೆಗೆವಿನೆಗಂ ಬಿಟ್ಟು ಮಾಱಾಂತ ಮೇಲಾ
ಳ್ಗಳನಾಗಳ್ ತಳ್ತು ಪೊಯ್ದಾರ್ದಿೞಿಪಿ ಕುದುರೆಯಂ ಕೊಂಡು ತಮ್ಮೊಡ್ಡಿನೊಳ್ ಕ
ಣ್ಗೊಳಿಪನ್ನಂ ಪೊಕ್ಕು ಗೆಲ್ಲಬಡೆದರದಟನಿಂ ರಾಯ ರಾವುತ್ತರಾಗಲ್        ೨೧೬

ಇಕ್ಕಿದ ಸೀಸಕಂ ಪಱಿದು ನೆತ್ತಿ ಸಿಡಿಲ್ದೊಡೆದೊಂದೆ ಗಾಯದಿಂ
ಚಕ್ಕನೆ ಭೋಂಕನೆೞ್ದು ಮಿಗೆ ಬೆನ್ನೊಳಮರ್ಚಿದ ಪೊನ್ನ ಪಲ್ಲಣಂ
ಪಕ್ಕರೆ ತೇಜಿವಾರು ಕೞಿದಿರ್ಕಡಿಯಾದುವು ಬಾಳ ಬಾಯೊಳಿಂ
ತಕ್ಕುಮೆ ತೋರ ತಕ್ಕಿದೆನೆ ಗೋೞೆಯಿಲರ್ ಕೆಲರಲ್ಲಿ ಕಾದಿದರ್   ೨೧೭

ತೊಟ್ಟನೆ ಪೊಂದಿದ ಕುದುರೆಯ
ತಟ್ಟಂ ಕಂಡಣೆದು ನೂಂಕಿ ಬಲ್ಮಾವಂತರ್
ಬಿಟ್ಟಕ್ಕಿದರಾನೆಗಳಂ
ಬೆಟ್ಟುಗಳೊರ್ಮೊದಲೆ ಮಸಗಿ ಕವಿದವೊಲೆತ್ತಂ೨೧೮

ಕೋಲ್ಗಾರೊಳ್ ಸುರಿವಾಲಿವ
ರಲ್ಗಳವೊಲ್ ನೆತ್ತಿಯಡೆಯ ಮುತ್ತುಗಳೆತ್ತಂ
ಗಲ್ಗಲನೆ ಸುರಿಯೆ ಜೋದರ್
ಬಲ್ಗಣೆಯಿಂದೆಚ್ಚರದಟಿನಿಂದಾನೆಗಳಂ           ೨೧೯

ಜಾಱದೆ ತನ್ನಾನೆಯಿನಾ
ಮಾಱಾನೆಯ ಕುಂಬತಳಕೆ ಪಾಯ್ದಳವಿಂ ಕೈ
ದೋಱಿ ಮಱುವಾನಿಸಂ ಮೆ
ಯ್ಯೇಱಂ ಕಂಡಗಿದು ಜೋಲೆ ಕೊಂದನದೊರ್ವಂ            ೨೨೦

ಅಣೆದುದುಕೊತ್ತಿ ನೂಂಕಿದುದು ಪೊಕ್ಕೊಡನಿಕ್ಕಿದುದೇಱಬಾಯ್ಗಳಿಂ
ನೆಣನುಗೆ ನೆತ್ತರುಚ್ಚಳಿಸೆ ಜಾದಿನ ಬೆಟ್ಟು ಮಗುೞ್ಚುವಂತೆ ಬಂ
ಡಣದೆಡೆಯೊಲ್ ಪೊಣರ್ವ ಪಲವಾನೆಗಳಂ ಕೆಡಪಿತ್ತದೊಂದು ಮ
ನ್ನಣಾವಡೆದಾನೆ ಬೊಬ್ಬಿಱಿಯೆ ತನ್ನಯ ಮೇಗಣ ಜೋದನಾರ್ಪಿನಿಂ         ೨೨೧

ತಲೆಗಳ ಬಟ್ಟಲಿಂ ಮೊಗೆದು ನೆತ್ತರನಾಗಳೆ ಈಂಟಿಯೀಂಟಿ
ಮೆಯ್ಗಲಿಗಳ ಕಂಡದಿಂಡೆಗಳ ಬಕ್ಕಣಮಂ ತವೆ ಮೆಲ್ದು ಮೆಲ್ದುಮೆ
ಯ್ಯೊಲೆದುಡೆ ಜೋಲ್ದು ನಾಣೞಿದು ಕಣ್ ನಸು ಮುಚ್ಚಿರೆ ತೇಗಿ ತೇಗಿ ಮಾ
ರ್ಮಲೆದಿದಿರಾಗಿ ಕೈಪಱೆಯೊಳಾಡುವ ರಕ್ಕಸಿಯರ್ಕಳೊಪ್ಪಿದರ್   ೨೨೨

ಅಂತು ನೋೞ್ಪರ ಕಣ್ಗೆ ಕೊಕ್ಕರಿಕೆಯಾದಾನೆಗಾಳಗದೊಳ್ ನಿಲ್ಲದೆ ತಲ್ಲಣದಿಂ ಪೆಱದೆಗೆವ ಬಿದಿವೆಡಂಗನೆಂಬ ಬಿಂಜಮಾಣಿಕನೆಂಬ, ಹರಿರಾಯನೆಂಬ, ತೋರಹತ್ತನೆಂಬ, ಚೌವಟಮಲ್ಲನೆಂಬ, ಮುಱಿವ ರಕ್ಕಸನೆಂಬ, ರಾಯದೞಸೂಱೆಕಾರನೆಂಬ, ತನ್ನೊಡ್ಡಿನ ಪೇರಾನೆಗಳಂ ಕಂಡು ಕಡು ಮುಳಿದು ಬಿಸುಗಣ್ಣೊಳೊಗೆದ ಬೀರಂ ಕೂರಾಳ್ಗಳಂ ಕೂಡಿಕೊಂಡಲಗನುಗಿದು ಗಿಱ್ಱನೈತಂದಾ ನನೆವಿಲ್ಲ ಬಲ್ಲಹನ ಪಾಡಿಯಂ ಕೂಡೆ ಪಾಡೞಿಯೆ ನೀಡುಂ ಮುಱಿವಾಗಳ್ –

ಕಟ್ಟಿದಿರೊಳಾಂತರಂ ನೆಱೆ
ನಿಟ್ಟಿಸಿ ನನೆವಿಲ್ಲ ಬಲ್ಲಹಂ ಮಾಱಣಿಯಂ
ನೆಟ್ಟನೆ ತೋಳ್ವಲದಿಂದೆ
ೞ್ಬಟ್ಟಿದನವನಿದಿರೊಳಾವನುಂ ನಿಂದಪನೇ      ೨೨೩

ಅಂತು ಕೈಕೊಳ್ಳದೆ ಬೆಂಬತ್ತಿ ತೇನ ತೇನಂ ಮಸಗಿ ಸಂದಣಿಸಿ ಬರ್ಪ ಸೋರ್ಕಾನೆಗಳ ಕಾಲ್ಪೊಱೆಗೆ ನೆಲನೊಂದೆಸೆಗೊಲೆದು ಜಾಱುಂಗಲ್ಲಂತೆ ತೋಱೆಯುಂ, ಮುಗಿಲಂ ಮುಂಡಾಡುವಂತಿರುದ್ದಮಾದ ಪಲತೆಱದ ಕುಱುಪಿನ ಮಿಳಿರ್ವ ಪೞಯಿಗೆಗಳ ಗಾಳಿ ಗಾಳಿವಟ್ಟೆಯೊಳ್ ನಡೆವ ಪಗಲೊಡೆಯನ ಕುದುರೆಯ ಸೇದೆಯಂ ಪಿಂಗಿಸೆಯುಂ, ತಟ್ಟೊಡೆಯದೆ ತೆರಳ್ವ ತೇಜಿಗಳ ಕಾಲ ದೂಳಿ ನೆಗೆದು ಕೊಳುಗಳದೊಳ್ ಪಸರಿಸಿ ಬೀರರನರಸುವಚ್ಚರಸಿಯರಂ ಪೊಲಂಬುಗಿಡಿಸೆಯುಂ, ಕಾಲಾಳ್ಗಳಬ್ಬರಕ್ಕೆ ತಾಯ್ಮೞಲ್ದೋಱಿ ಮೇರೆದಪ್ಪಿದ ಮುನ್ನೀರೊಳ್ ಕಡಲೊಡೆಯನೞ್ದಡಂಗೆಯುಂ, ಜವನಮಂತಣ ಸೂಲದಂತೆ ನೆಗೆದ ಕೊಂತದ ಕೂರ್ಮೊನೆಯ ಕೋಲಾಟಕ್ಕೆ ತಾರಗೆವಟ್ಟೆಯೊಳ್ ನಡೆವ ಬಿಜ್ಜೋದರಿಯರ್ ಪುಗಲಱಿಯದೆ ಸಿಡಿಮಿಡಿಗಳೊತ್ತಿರೆಯುಂ, ತೆಱಪುಗುಡದೆ ಸೂೞೈಸುವ ನಿಸ್ಸಾಳದ ಬಲ್ಸರಕೆ ದೆಸೆವಟ್ಟುಗಳ್ ನಿಬ್ಬರಂ ಬಿರಿಯೆಯುಂ, ಬೇಗದಿಂ ನಡೆದೆತ್ತಿ ಬಂದು ಮಂಜುವೆಟ್ಟಮಂ ಮೂವಳ ಸಾಗಿಮುತ್ತಿದಾಗಳ್ –

ನನೆವಿಲ್ಲಾತನ ಮುಕ್ಕ
ಣ್ಣನ ತಕ್ಕಂ ನೋಡನೇೞ್ಕುಮೆಂದೊಲವಿಂದಂ
ತನ ತನಗೆ ಬಂದು ಮುಗಿಲೊ
ಡ್ಡಿನ ಕೆಲದೊಳ್ ಸಗ್ಗದವರ್ಗಳೆಲ್ಲರ್ ನಿಂದರ್            ೨೨೪

ಕೋವಣಮುಂ ಗುಂಡಿಗೆಯುಂ
ನೇವರಿಸಿದ ಬೂದಿಯುಂ ಜಲಕ್ಕನೆ ಚೆಲ್ವಿಂ
ತೀವಿರೆ ಬಿಸುಗಣ್ಗೊರವಂ
ಕಾವನ ತೋಳ್ವಲಮನಱಿವೆನೆಂದೇೞ್ತಂದಂ      ೨೨೫

ಮಿಸುಗುವ ನಾಲ್ಕುಂ ಕೋಡಿಂ
ದೆಸೆವಾನೆಯನೇಱಿ ಪಿಡಿದ ಬೆಳ್ಗೊಡೆ ಸಸಿಯಂ
ಮಸುಳಿಸೆ ಬಂದಿರ್ದಂ ಪಾ
ಡಿಸುತುಂ ಪೆಸರ್ವಡೆದ ಗಾಣರಿಂ ಪಲಗಣ್ಣಂ     ೨೨೬

ತೊಳಗುವ ಸಂಕುಂ ಪಾಱುಂ
ಬಳೆ ನೇರ್ಪಡೆ ಪರ್ದನೇಱಿ ಬಂದೊಲವಿಂ ಪ
ಜ್ಜಲಿಪ ಮುಗಿಲೆಡೆಯೊಳಿರ್ದಂ
ತಳತಳಿಸುವ ತೊಡವನಾಂತು ಸಿರಿವೆಣ್ಣರಸಂ    ೨೨೭

ಕರಮೊಪ್ಪುವೆಣ್ಟು ತೋಳುಂ
ಬರಿವೂವಂ ನಗುವ ನಾಲ್ಕು ಮೊಗಮುಂ ಚೆಲ್ವಿಂ
ಪೊರೆಯೇಱಿರೆ ಬಂದಿರ್ದಂ
ಸರಸತಿವರನಂಚೆಯೇಱಿ ನಲವಿಂ ಬೊಮ್ಮಂ     ೨೨೮

ಅನ್ನೆಗಮಿತ್ತಲ್ –

ಕೆಟ್ಟೋಡಿ ಪಾಡಿಯೆಲ್ಲಂ
ಪಿಟ್ಟುಂ ಪಿಟ್ಟಾಗಿ ಪೋದೊಡಂ ಬಗೆಯದೆ ಕ
ಣ್ಗಿಟ್ಟಳವೆನಿಸಿದ ಬೆಳ್ಳಿಯ
ಬೆಟ್ಟೆನೆ ಪೆಱದೆಗೆಯದೀಸನೋರ್ವನೆ ನಿಂದಂ     ೨೨೯

ಅದಂ ಕಂಡು ಕಂಗನೆ ಕನಲ್ದು ಮುಟ್ಟೆವಂದು ಮೂದಲಿಸಿ ನನೆವಿಲ್ಲ ಬಲ್ಲಹನಿಂತೆಂದಂ –

ಕಡುಪಿಂ ಪೂವಿನ ಕೋಲ್ಗಳ್
ಗಡಣಿಸಿ ಕವಿತಂದು ನಾಂಟುವಾಗಳ್ ನಿನ್ನೀ
ಜಡೆಯುಂ ತೊವಲುಂ ಪಾವಿನ
ತೊಡವುಂ ಲಾಗುಳಮುಮಡ್ಡಮೇಂ ಬಂದಪುವೇ           ೨೩೦

ನಿನ್ನಗ್ಗದ ಪಡೆಯೆಲ್ಲಮ
ದೆನ್ನಯ ಪೂಗಣೆಯ ಕೊಲೆಗೆ ಗುಱಿಯಾದುದು ಕೇಳ್
ಇನ್ನಾದೊಡಮೆಳವೆಱೆಯಂ
ಕೆನ್ನಂ ಪಿಡಿದಿರದೆ ಬಿಟ್ಟು ಬಾೞ್ ಬಡಗೊರವಾ            ೨೩೧

ಎಡಗೈಯೊಳೊತ್ತಿ ಬಿಲ್ಲಂ
ಪಿಡಿದೊಯ್ಯನೆ ತೀಡಿಗೊಣೆಯುಮಂ ಕಡುಪಿಂ ಜೇ
ವೊಡೆವಾಗಳ್ ನೆಲನನಿತುಂ
ನಡುಗುವುದೆಲರ್ವೊಯ್ಲನಾಂತ ತಾವರೆಯೆಲೆವೋಲ್    ೨೩೨

ಬಿರಯಿಗಳಂಜೆ ಕೂಡದರ ಕಲ್ಲೆರ್ದೆ ಪವ್ವನೆ ಸೀೞೆಬಿರ್ಚಿದೋ
ಪರ ಕುಡುಸೊರ್ಕು ಮೆಯ್ದೆಗೆಯೆ ಪಿಂಗಿದ ನೀಱರ ಬಲ್ಪು ಪಾಱೆಪಾ
ದರಿಗರನಾಣ್ಗಳುರ್ಕುಗಿಡೆ ಬಲ್ಮುಳಿಸಿಂದಮಗಲ್ಕೆವೆತ್ತ ನ
ಲ್ಲರ ಬಗೆ ಬಳ್ಕೆ ಜೇವೊಡೆಯ ಬಲ್ಲುಲಿ ನೀಳ್ದುದು ಕರ್ವುವಿಲ್ಲನಾ           ೨೩೩

ಬಿಸುಗದಿರನ ಕಡುಗಾಯ್ಪಂ
ಮಸುಳಿಸಿದುವು ತುಱುಗಿ ನೆಗೆದು ನಾಲ್ಕುಂ ದೆಸೆಯಂ
ಮುಸುಕಿದುವು ಮುಳಿದರಂ ಜಂ
ಕಿಸಿದುವು ಬಿಡದಾರ್ದು ಕಾವನೆಚ್ಚಲರ್ಗಣೆಗಳ್  ೨೩೪

ಚಲದಿಂ ಕಾವಂ ತೆಗೆದ
ಚ್ಚಲರಂಬೆಡೆಗೊಂಡು ತೊಱೆಗಳುಂ ಬೆಟ್ಟುಗಳುಂ
ಪೊಲನುಂ ಬಾನುಂ ದೆಸೆಯುಂ
ಜಲಕ್ಕನಲರಿಂದೆ ಸಮೆದವೋಲಾಯ್ತೆತ್ತಂ        ೨೩೫

ಇವು ಮುನ್ನಾರಾರ ಬಲ್ವಂ ನೆಲೆಗಿಡಿಸವಿವಾರಾರ ತಕ್ಕಂ ನೆಲಕ್ಕಿ
ಕ್ಕವಿವಾರಾರುರ್ಕನೊತ್ತಂಬರಿದು ಕಿಡಿಸವಾರಾರ ಕಾಯ್ಪೆಲ್ಲಮಂ ನೂಂ
ಕವಿವಾರಾರೇೞ್ಗೆಯಂ ಕುಂದಿಸಿ ಕಳೆಯವಿವಾರಾರಕಲ್ಮೆಯ್ಗಳೊಳ್ ನಾಂ
ಟವೆನುತ್ತಂತೆಲ್ಲರುಂ ಬಾಯ್ವಿಡೆ ಗಡಣದೆ ಪೂಗೋಲ್ಗಳೈತಂದುವಾಗಳ್   ೨೩೬

ಅದಟರ್ ಬಾಯ್ಬಿಡೆ ಬಲ್ಲಿದರ್ ಪೆಳರೆ ಗಂಡರ್ ಜಾಱೆ ಕೈಕೊಳ್ಳದ
ಗ್ಗದ ಬೀರರ್ ತೆಗೆದೋಡೆ ತೋರಱಿಕೆಯಾಳ್ಗಳ್ ಬಳ್ಕಿ ಬೆಂಬೀೞೆ ಪೆ
ರ್ಚಿದ ಕಂಪಿಂಗಳೆಸಿರ್ಪ ತುಂಬಿಕರಿಕಂ ತಾಗಿರ್ಪಿನಂ ಬಂದುದೊ
ರ‍್ಮೊದಲೊಳ್ ಮಾವಿನ ಬಳ್ಳಿ ಮಲ್ಲಿಗೆಯ ಕೋಲೆತ್ತೆತ್ತಲುಂ ಕಾವನಾ   ೨೩೭

ಕಣೆ ಕಣೆಯನುಗುಳ್ವ ತೆಱದಿಂ
ಕಣೆ ಕಣೆಯಂ ಕಱೆವ ತೆಱದಿನೆಂಟುಂ ದೆಸೆಯೊಳ್
ಕಣೆ ಕಣೆಯನೀಂಬತೆಱದಿಂ
ಪಣಿದರನಗಿದಳರೆ ಕವಿದುವಾಗಳ್ ಕಣೆಗಳ್      ೨೩೮

ಮುಗಿಲೆಡೆಯಲ್ಲಿ ಬಂದು ಸುೞಿದಾಡುವ ಪೆಣ್ಡಿರ ಕಣ್ಣ ಬೆಳ್ಪೊ ತಾ
ರಗೆಗಳ ನೀಳ್ದ ನುಣ್ಬೆಳಗೊ ಮಿಂಚಿನ ಗೊಂಚಲೊ ಹಾದಿಗೆಟ್ಟು ತೊ
ಟ್ಟಗೆ ನೆಗೆತರ್ಪನುಣ್ಗದಿರೊ ಪೇೞೆನೆ ನೋೞ್ಪರ ಕಣ್ಗೆ ಸುತ್ತಲುಂ
ಸೊಗಯಿಸಿ ಮೇಲೆ ಮೇಲೆ ಕವಿತಂದುವು ಭೋಂಕನೆ ಪೂವಿನಂಬುಗಳ್          ೨೩೯

ಗಡಣದೆ ಮಾದೇವಿಯ ಬಗೆ
ಯೊಡೆಯನ ನೊಸಲೊಳ್ ಕದಂಪಿನೊಳ್ ಕೈಮೊಗದೊಳ್
ತೊಡೆಯೆಡೆಯೊಳ್ ತೋಳೆಡೆಯೊಳ್
ಬಿಡೆ ನಟ್ಟುವು ಕಾವನಂಬುಗಳ್ ತಾವೈದುಂ     ೨೪೦

ಕಟ್ಟಾಳ್ಗಳೆನಿಪ ರಕ್ಕಸ
ರೊಟ್ಟಜೆಗೆಟ್ಟೞಲೆ ಸಗ್ಗಿಗರ್ ನೆಲನನೊಡಂ
ಬಟ್ಟಿರೆ ಕಾಳೆಗದೆಡೆಯೊಳ್
ತೊಟ್ಟನೆ ಮಾದೇವಿಯರಸನರೆವೆಣ್ಣಾದಂ       ೨೪೧

ಮೊರೆದಾಡುವ ಮಱಿದುಂಬಿಯ
ನೆರವಿಗಳೈತಂದು ಮುಸುಱಿ ಪೊಸಗಂಪನುಣು
ತ್ತಿರೆ ಕಾವನ ಮೇಲಂದ
ಚ್ಚರಸಿಯರಿಚ್ಚೆಯೊಳೆ ಮುಗುಳೆ ಮೞೆಯಂ ಕಱೆದರ್   ೨೪೨

ಅದಂ ಕಂಡು ಕಡುಮುಳಿಸೆಂಬ ಕಿಚ್ಚಿನ ಕರ್ಬೇಗೆಯಂತಗುರ್ಬುವಡೆದು ನೊಸಲೊಳ್ ಗಂಟಿಕ್ಕಿದ ಪುರ್ಬುಗಳಂ, ಆ ಕಿಚ್ಚಿನ ನಾಲಗೆಯಂತೆ ಕೆಂಪಡರ್ದ ಕಣ್ಗಳುಂ ಪೊಱಮಡುವ ಸಾಪದಕ್ಕರದ ಪೊಯ್ಲಿಂಗೆ ನಡುಗುವಂತೆ ಕೆತ್ತುವ ತುಟಿಯುಂ, ಪರ್ಬುವ ಕನಲ್ಕೆಯೆಂಬ ಬಳ್ಳಿಕೂರ ದಂಟಾದಂತೆ ಪಿಡಿದ ಲಾಗುಳಮುಂ ಅಂಜಿಕೆಯಂ ಪುಟ್ಟಿಸೆ –

ಎರಗುವ ತುಂಬಿವಿಂಡಗಿಯೆ ಬಗ್ಗಿಪ ಕೋಗಿಲೆ ಕೊಂಬುಗೊಂಡು ಬ
ಳ್ಕುಱೆ ಮುಳಿದಡ್ಡವಾಯ್ದ ಗಿಳಿ ಮಲ್ಲೞಿಗೊಂಡೊಳಸಾರೆ ಮಾವು ಕೈ
ಮಱೆಯೆ ತೆರಳ್ದು ರೂವುಗಿಡೆ ತೆಂಬೆಲರಂಚೆಗಳೊಡ್ಡು ಪಾಱೆ ಬಾಂ
ದೊಱೆದಲೆಯಂ ಕನಲ್ದು ನಡೆತಂದು ಬಸಂತನ ಸೊರ್ಕು ಸೋರ್ವಿನಂ          ೨೪೩

ಮುಂದೆ ನಿಂದು ಪಿರಿಯರೆಂಬುದಂ ಬಗೆಯದುರ್ಕಿಂದೆನ್ನೊಳ್ ಕಾದಿದೆ ಅಂತದಱಿಂ ನಿನ್ನೋಪಳಂ ಕೂಡದೆ ಪೆಱರಱಿಯದಂತೆಲ್ಲಿಯಾದೊಡಂ ನೀ ಕಾವನೆಂಬುದಂ ಮಱೆದಿರ್, ಎಂದು ಬೇಗದೆ ಪೂಗಣೆಯಂಗೆ ಸಾಪಮನಿತ್ತುದಂ ಬಸಂತನಿಂ ನೆಲೆವೀಡಿನೊಳಿರ್ದಿಚ್ಚೆಗಾರ್ತಿ ಕೇಳ್ದು ಮುಚ್ಚೆವೋಗಿ ಬೞಿಯಮೆಂತಾನುಮೆೞ್ಚತ್ತಿರಲೊಡನೆ-

ಪರಿಗಿಡೆ ಕಣ್ಣನೀರಱತುದೆಕ್ಕಸರಂಗಳ ತೋರ ಮುತ್ತುಗಳ್
ಪುರಿದವೊಲಾದುವಿಟ್ಟ ಸಿರಿಕಂಡದ ಬೊಟ್ಟು ಕಱಂಗಿ ಕಣ್ಗೆ ಕ
ತ್ತುರಿಯವೊಲೊಪ್ಪಿ ತೋಱಿದುದು ಸೂಡಿದ ಬಾಸಿಗಮಾಗಳಂತೆ ದ
ಳ್ಳುರಿ ತಗುಳ್ದಂದದಿಂ ಕಱಿದುದಾಕೆಯ ಮೆಯ್ಬಿಸುಪೇನಳುಂಬಮೋ          ೨೪೪

ನೋಡಿದ ಮಾಮರಂ ಕೊರಗಿ ಸೀಕರಿವೋದುದು ಪೊಕ್ಕ ಪೂಗೊಳಂ
ಪಾಡೞಿದೈದೆ ಕಾಯ್ದು ಕುದಿಗೊಂಡುದು ನೀಳ್ದೊಗೆತರ್ಪ ಸುಯ್ಯೆಲ
ರ್ಗೂಡಿದ ಗಾಳಿ ಸೋಂಕಿದವರಂ ಸುಡುತಿರ್ದುದು ಪೊತ್ತ ಪೂತಳಿರ್
ಬಾಡಿ ಕಱಂಗಿ ಚುಯ್ಯೆನುತುಮಿರ್ದುವು ನೀಱೆಯ ಮೆಯ್ಯ ಬೆಂಕಿಯಿಂ          ೨೪೫

ಮತ್ತಮೊರ್ಮೆ ಮಿಸುಪೆಸಳ ಪಸರದಿನೆಸೆವ ಪೊಸಪಸೆಯೊಳ್ ಮೈಯನೀಡಾಡಿ ಪೊಳೆವುವಡೆದ ಪಾಲ್ಗಡಲ ತೆರೆದುಱುಗಲೊಳ್ ಪವಡಿಸುವ ಸಿರಿಯಂ ಪೋಲ್ತಿರ್ಪಳ್ ; ಒಡನಾಡಿಗಳಡಿಗಡಿಗೆ ತಳಿವ ಪನ್ನೀರ ತುಂತುರ್ವನಿಗಳಿಂ ಪೊಸತಪ್ಪ ಕಾರಸಿರಿಯ ಪರಿಯಂ ಪಡೆದಂತಿರ್ಪಳ್; ಅಂದಂಬಡೆದ ಕೆಂದಳಿರ ಗೊಂದಣದೊಳೊಂದಿ ನಿಂದು ಸಂದಣಿಸಿ ನೆಗೆದ ಕೆಮ್ಮುಗಿಲ ನಡುವೆ ಪೊಳವೆಳವೆಱೆಯಂತಿರ್ಪಳ್; ನಳನಳಿಸಿ ಬೆಳೆದ ಬೆಳ್ದಾವರೆಯ ತೊಳಗುವೆಳದಾವರೆಯ ಬಳಗಮಂ ತಳೆದು ಪಾವಿನ ಪಚ್ಚದಿನಚ್ಚರಿವಡೆದ ಜೋಗಿಣಿಯಂತಿರ್ಪಳ್; ಮನ್ನಣೆವೆತ್ತ ಮೇಳದ ಕೆಳದಿಯರ್‌ಮಾಣದೆ ಮೇಲೆ ಮೇಲೆ ತಂದೊಟ್ಟಿದ ಸಿರಿಕಂಡದ ಕೋೞ್ಕೆಸಱಿಂ ಪುದಿದು ಜಂತದಿಂ ಕಡೆದು ಕಂಡರಿಸಿದ ಪುತ್ತೞಿಯಂತಿರ್ಪಳ್; ತಡಿ ತಡಿಯ ತೆಂಗಿನೆಳನೀರ ಕೂಡೆ ಕರೆಕಣ್ಮುವ ಕೊಳಂಗಳೊಳವೊಕ್ಕು ತಾವರೆಯ ಪಚ್ಚೆಲೆಯಂ ಮೆಯ್ಯೊಳಾಂತು ನುಣ್ಣಿತಪ್ಪೆಳವಿದಿರ ಬಣ್ಣಮಂ ತಳೆದ ನೀರ್ವೆಣ್ಣಂತಿರ್ಪಳ್; ಅಂತುಮಲ್ಲದೆಯುಂ –

ಕುಳಿರ್ವ ಕೊಳಂಗಳೊಳ್ ಮೞಲ ದಿಂಟೆಗಳೊಳ್ ಸಮೆದಿರ್ಪ ಬೆಟ್ಟಿನೊಳ್
ಬೆಳೆದೆಳಮಾವಿನೊಳ್ ತಳಿರ ಕಾವಣದೊಳ್ ಪರಿತರ್ಪ ಕಾಲ್ಗಳೊಳ್
ಬಳಸಿದ ಬಳ್ಳಿ ಮಲ್ಲಿಗೆಯ ಮಂಡಪದೊಳ್ ಸುೞಿದಾಡಿ ಮತ್ತೆಯುಂ
ಕಳೆಯಲಿನಿತ್ತುಮಾಱಳವಳುರ್ಬಿದ ತನ್ನಯ ಮೆಯ್ಯ ಬೆಂಕೆಯಂ     ೨೪೬

ಕೆಂದಳಿರ ಪೞಿವ ಪಾಸಿನೊ
ಳಂದಂಬಡೆದಿಚ್ಚೆಗಾರ್ತಿ ನನೆವಿಲ್ಲಂ ತಾ
ನೆಂದಿಂಗೆ ಬಂದು ಕೂಡುವ
ನೆಂದಂತಡಿಗಡಿಗೆ ಗಿಳಿಗಳಂ ಬೆಸಗೊಳ್ವಳ್         ೨೪೭

ತನಿವಣ್ಣಂ ಲಂಚಮೀವೆಂ ಪುರುಳಿ ನಿನಗೆ ಪೂಗೊಂಚಲಂ ಬೇಗದಿಂದಂ
ನಿನಗೇವೆಂ ತುಂಬಿ ಕೆಂದಾವರೆಯ ಮಿಸುಪ ಮೆಲ್ಮೊಗ್ಗೆಯಂ ಮಾಣದೆಂದುಂ
ನಿನಗೀವೇನಂಚೆ ಕಂಪಂ ನಿನಗೆ ಸಲಿಸುವೆಂ ಕೂಡೆ ತಣ್ಗಾಳಿಯನ್ನೋ
ಪನನಿಂದಾರಯ್ದು ತಂದೆನ್ನೊಡಿರಿಸಿದೊಡೆಂದಾಕೆ ಮಾತಾಡುತಿರ್ಪಳ್         ೨೪೮

ಅನ್ನೆಗಮಿತ್ತಲಾ ಬಾಂದೊಱೆದಲೆಯನ ಸಾಪಂದಳೆದು ಬಂದು ನೀನೀ ಪೂವಿನ ಪೊೞಲೊಳ್ ನನೆಯಂಬನೆಂಬರಸಾದೆ ನಿನ್ನ ಸಾಪಂ ಎನ್ನ ಮಾತನೆಂದು ಕೇಳ್ದೈ ಅಂದೇ ತೀರ್ದುದು ಈ ಬಾೞೆ ಮೊದಲಾದುದೆಲ್ಲಂ ನಿನ್ನ ಪಾಡಿ – ಎಂದಚ್ಚರಿಸಿ ಪೇೞ್ದು ತನ್ನ ನೆಲೆಗೆ ಪಾಱಿ ಪೋಗೆ –

ಗಿಳಿಯೊಂದಾಮಾತಂ ಕೇ
ಳ್ದೆಳದರಿರಂ ಗುಡಿಯನೆತ್ತಿ ಕೊಂಡೊಲವಿಂ ಕ
ಣ್ಗೊಲೆ ಪೋಗಿ ಕಂಪುವೊೞಲಂ
ಗೞಿಲನೆ ಪೊಕ್ಕಱಿಪಿದುದು ಬಸಂತಂಗಾಗಳ್   ೨೪೯

ಅಂತಱಿಪಲೊಡನೆ ಕೋಗಿಲೆ ಕೈವಂದ ಮಾವಂ ಸಾರ್ದಂತೆಯುಂ, ಬಿಸಿಲೊಳ್ ಬೇಗುದಿಗೊಂಡವಂ ತಣ್ಗೊಳನಂ ಪೊಕ್ಕಂತೆಯುಂ, ಬಡವಂ ಕಸವರಮಂ ಕಂಡಂತೆಯುಂ, ನಲ್ಲಳ ನುಡಿಯಂ ಕಾದಲಂ ಕೇಳ್ದಂತೆಯುಂ, ನೀಱೆಯ ಕಾಲ್ಪೊಯ್ಲಿನಸುಗೆ ತಳಿರ್ತಂತೆಯುಂ, ಪಿರಿದಪ್ಪ ಸಂತಸಮನೆಯ್ದಿ ಬಸಂತಂ ತಳಿರ್ವನೆಯೊಳ್ ನಲ್ಲನಂ ನೆನೆದು ದೂಱಿಸುತಿರ್ಪಿಚ್ಚೆಗಾರ್ತಿಗಾ ತೆಱನೆಲ್ಲಮಂ ಬಿನ್ನಪಂಗೆಯ್ದು ನಿಸ್ಸಾಳಮಂ ಸೂೞೈ ಸವೇೞಲೊಡನೆ –

ಪಡೆಯೆಲ್ಲಂ ನಡೆ ನೋಡಿ ಮೆಚ್ಚೆ ಬಿದಿಯಂ ನಾಣೋಡೆ ಬೆಂಕೊಂಡವಂ
ಕಡಲೊಳ್ ಪಟ್ಟನನಿಕ್ಕಿ ಮೆಟ್ಟಿದದಟಂ ಮುಕ್ಕಣ್ಣನಂ ಗೆಲ್ದನೆ
ಮೊಮ್ಮಡೆಯಂ ಬಂದಪನೀಗಳಿಂತೆ ನಲವಿಂದಂ ಬಳ್ಳಿ ಮಾಡಂಗಳೊಳ್
ಗುಡಿಯಂ ಬೇಗದೆ ಕಟ್ಟಿಮೆಂದು ಪಡೆವಳ್ಳರ್ ಸುತ್ತಲುಂ ಸಾಱಿದರ್          ೨೫೦

ಕಳಸಂ ಕನ್ನಡಿ ಗುಡಿ ಪ
ಜ್ಜಳಿಸುವ ಮಾಂದಳಿರ ತೋರಣಂ ದೆಸೆದೆಸೆಯಂ
ಬಳಸಿರೆ ಬಾಜಿಪ ಪಱೆ ಕ
ಣ್ಗೊಳಿಸಿರೆ ಪೊಱಮಟ್ಟರೊಸಗೆಯಿಂ ಪೊಸವೆಂಡಿರ್      ೨೫೧

ಅಂತು ಪೊೞಲಂ ಪೊಱಮಟ್ಟು ಸಿಂಗರಗಡಲ್ ಕರೆಗಣ್ಮಿದಂತೆ ಬರ್ಪ ಪೆಂಡಿರ ತಂಡಕ್ಕೆ ತಲೆದುಡುಗೆಯಾಗಿ, ಬೆಳ್ಗೊಡೆಯ ಕುಂಚದ ಅಡಪದ ಡವಕೆಯ ಬಿಜ್ಜಣಿಗೆಯ ಕಜ್ಜಳದ ಕನ್ನಡಿಯ ಚೆನ್ನೆಯರ್ವೆರಸು ಇಚ್ಛೆಗಾರ್ತಿ ನಡೆವಾಗಳ್ –

ಸುರಯಿಯ ಚೊಲ್ಲೆಯಮುಂ ಪೊಸ
ಸುರಹೊನ್ನೆಯ ಮೊಗ್ಗೆ ಯೆಕ್ಕಸರಮುಂ ಪೊಂಬಾ
ದರಿಯ ಕಿಱುಮಗುಳ ತೊಡರುಂ
ಪರಿವಡೆದಿರೆ ಬಂದನೞ್ತಿಯಿಂದೆ ಬಸಂತಂ         ೨೫೨

ನಡೆವರಸಂಚೆಯ ತಂಡ
ಕ್ಕೆಡೆ ನೆಱೆಯದು ಪೊಡವಿ ಗಂಡುಗೋಗಿಲೆಯಣಿಗ
ಳ್ಗೆಡೆ ನೆಱೆಯದಿನಿತುಮಾಗಸ
ಮೆಡೆ ನೆಱೆಯದು ಗಿಳಿಯ ದೞಕೆ ದೆಸೆಯೆನಿತನಿತುಂ        ೨೫೩

ಅಂತು ಬಂದು ಪಿರಿದಪ್ಪೊಸಗೆಯಿಂದಿಚ್ಚೆಗಾರ್ತಿ ಕಾವನನಿದಿರ್ಗೊಳ್ವಲ್ಲಿ –

ಅಡಿಯಂ ಬಲ್ಪಿಡಿದುವು ನು
ಣ್ಡೊಡೆಯಂ ಪಿಡಿಕಿಸಿದುವಡರ್ದು ಕಾವನ ತೋಳಂ
ಬಿಡದಪ್ಪಿದುವಂದಾಕೆಯ
ಕೊಡಕೆವರಂ ನಿಮಿರ್ದು ಪೊಳೆವ ತುಱುಗೆಮೆಗಣ್ಗಳ್       ೨೫೪

ಬಿರಿದೊಳ್ದಾವರೆಗಂಪಂ
ಕೊರಲುದ್ದಂ ಪೀರ್ವ ತುಂಬಿಯೆನೆ ನೀಱನೆ ಚೆ
ಲ್ವೊರೆವ ಸವಿದುಟಿಯನೊಲವಿಂ
ಬರೆ ಪೀರ್ದುವು ನೋಡುವಿಚ್ಚೆಗಾರ್ತಿಯ ಕಣ್ಣಳ್          ೨೫೫

ನಗೆಮೊಗದೊಳ್ ತೆಱಂಬೊಳೆದು ನುಣ್ದುಟಿಯೊಳ್ ಮೊಗಮಿಕ್ಕಿ ಗಲ್ಲದೊಳ್
ಜಗುೞ್ದು ಕೊಡಂಕೆಯೊಲ್ ನುಸುಳ್ದು ಪೇರುರದೊಳ್ ಸುೞಿದಾಡಿ ತೊಳ್ಗಳೊಳ್
ಸೊಗಯಿಸಿ ಸೊರ್ಕಿ ಪೊರ್ಕುೞೊಳಡಂಗಿ ತೊಳಪ್ಪುಡೆಯೊಳ್ ಸಡಿಲ್ದು ಕಾ
ಲುಗುರ್ಗುಳೊಳೈದೆ ಮಾರ್ಪೇಳೆದುವಾಕೆಯ ಡಾಳಮನಾಂತ ದಿಟ್ಟಿಗಳ್       ೨೫೬

ನನೆಗಣೆಯನ ಮೆಯ್ವೆಳಗೆಂ
ಬಿನಿಗೊಳದೊಳ್ ಮೊದಲೆ ಮಿಳಿರ್ದು ನೆಗೆದಾಡಿದುವಂ
ದೆನಸುಂ ಕಡು ನೀಱಿಯ ಚೆ
ಲ್ವೆನೆ ತೊಳಗುವ ಕಣ್ಗಳೆಂಬ ಪೊಸಮೀಂಬೊಣರ್ಗಳ್     ೨೫೭

ಸವನಿಸೆ ಹಮ್ಮದಂ ನಡುಪಕಾಲ್‌ಬೆವರಂ ಬಿಡುತಿರ್ಪ ಗಲ್ಲಮು
ಣ್ಮುವ ನವಿರೆಚ್ಚು ಪಾಯ್ವ ಕಡೆಗಣ್ಣೊಸರಾಱುವ ಬಾಯ್ ಜಗೞ್ದು ತೋ
ಱುವಪೊಱವಾಱೊಳುಚ್ಚಳಿಪ ತೆಳ್ವದಮಿರ್ವರೊಳೊಪ್ಪೆ ನೋಡಿದರ್
ತವಕಿಪ ಕಣ್ಮಲರ್ ಸುಸಿಲನೊಪ್ಪಿಸೆ ಕಾವನುಮಿಚ್ಚೆಗಾರ್ತಿಯುಂ   ೨೫೮

ಬೞಿಕ್ಕೆ ಬಸಂತಂ ಮುಂತಾಗಿ ಬಂದು ಕಾಣ್ಕೆಗೊಟ್ಟು ಕಂಡು ತನ್ನ ಪಡೆಯೆಲ್ಲಮನಳವಱಿದು ಮನ್ನಿಸಿ ನನೆವಿಲ್ಲ ಬಲ್ಲಹಂ ಕೈವಂದ ಮಾವೆಂಬಾನೆಯನಿಚ್ಚೆಗಾರ್ತಿವೆರಸೇಱಿ ನಡೆತಂದು ಕಂಪಿನ ಪೊೞಲಂ ಪೊಕ್ಕು ಬೀದಿಗೊಂಡು ಬರ್ಪಾಗಳ್ –

ನೆಗೆದ ನೆಲಮಾಡದೊಳ್ ಪೊಸ
ದುಗುಲಮನೊಲವಿಂದೆ ಪೊದೆದು ನೋಡುವಳೊರ್ವಳ್
ಸೊಗಯಿಸಿದಳ್ ಮಿಱುಗುವ ಬೆ
ಳ್ಮುಗಿಲಂ ಮಱೆಗೊಂಡು ನಿಂದ ಬಿಜ್ಜೋದರಿವೋಲ್    ೨೫೯

ಮುಡಿ ಜಗುೞೆ ನೇವುರಂ ದನಿ
ಗುಡೆ ಬಡನಡು ಬಳ್ಕೆ ಮೇಲುದೋಸರಿಸೆ ತೊಳ
ಪ್ಪುಡೆ ಸಡಿಲೆ ಬಂದಳೊರ್ವಳ್
ನಡೆ ನೋಡಿದಳಾಗಳಂತೆ ನಾಣೞಿವಿನೆಗಂ         ೨೬೦

ಮುತ್ತಿನಪಚ್ಚಮಂ ತುಡುವುದಂ ಮಱೆದೊಪ್ಪಿರೆ ಮೇಳದಾಕೆಗಳ್
ಕತ್ತುರಿ ಬೊಟ್ಟನೆಂತಿಡುವೊಡಂ ನಿಲಲೊಲ್ಲದೆ ಸಾರ್ದು ನಲ್ಮೆಯಿಂ
ದೊತ್ತೆಯನಿತ್ತನಂ ಬಿಸುಟು ಚೌಕಿಗೆಯಂ ಪೊಱಮಟ್ಟುಗಾಡಿ ಬೆಂ
ಬತ್ತಿರೆ ಬಂದಳೊರ್ವಳೆಮೆಯಿಕ್ಕದೆ ನೋಡಿದಳೊಲ್ದು ಕಾವನಂ      ೨೬೧

ಸೋರ್ಮುಡಿ ಬೆನ್ನನಪ್ಪಳಿಸೆ ಬಿಂಕದಿನಿಕ್ಕಿದ ರನ್ನದೈಸರಂ
ಪೆರ್ಮೊಲೆಯಂ ಪಳಂಚೆ ನಗೆಗಣ್ ಮಱಿವುಲ್ಲೆಯ ಚೆಲ್ಲಗಣ್ಗಳಿಂ
ನೂರ್ಮಡಿ ಚೆಲ್ವನಾನೆ ನೊಸಲೊಳ್ ಕುರುಳುಯ್ಯಲನಾಡೆ ಬೇಗದಿಂ
ಕೂರ್ಮೆಯನಾಂತುನೀಱೆ ನಡೆತಂದಲರ್ವಿಲ್ಲನನೈದೆ ನೋಡಿದಳ್  ೨೬೨

ಮತ್ತಂ –

ಕುರುಳೋ ತುಂಬಿಯ ಬಂಬಲೋ ತೊಡೆಗಳೋ ಪೊಂಬಾೞೆಯೋ ಕಣ್ಗಳೋ
ದೊರೆವೆತ್ತೊಪ್ಪುವ ನೈದಿಲೋ ಬೆರಲೊ ಕೂರ್ಪಾಗಿರ್ದ ಪೂಗೋಲ್ಗಳೋ
ಕೊರಲೋ ನುಣ್ಪಳವಟ್ಟ ಕೌಂಗೊ ಪೊಸತಾಗಿರ್ಪಪ್ಪುವೆಂದೈದೆ ಮಿಂ
ಡರ ತಂಡಂ ಬೞಿಸಲ್ವಿನಂ ನಡೆದು ಬಂದಾ ನೀಱನಂ ನೋಡಿದಳ್   ೨೬೩

ಇಕ್ಕಿದ ರನ್ನದೋಲೆ ಪೊಸಮುತ್ತಿನ ಮೂಗುತಿ ತೋಳ ಬಂದಿ ನೀ
ಳ್ದೆಕ್ಕಸರಂ ತೊಳಪ್ಪ ಬೆರಲುಂಗುರಮಿಂಚರಮೀವ ನೇವುರಂ
ಚೊಕ್ಕಳವಪ್ಪ ಚೆಲ್ವನೊಳಕೊಂಡಿರೆ ಬೆಳ್ಳಿಯ ಬಳ್ಳಿಮಾಡಮಂ
ತಕ್ಕಿನೊಳೇರಿ ನೋಡಿದಳದೊರ್ವಳಗುರ್ವಿಪ ಕರ್ವುವಿಲ್ಲನಂ          ೨೬೪

ಅಂತು ನಡೆನೋಡುವ ನಗೆಮೊಗದ ಮುದ್ದು ಮೊಗದ ನುಣ್ಮೊಗದ ತನ್ನೋಲಗದ ಪಲತೆಱದ ಪೆಂಡಿರ ಕಣ್ಗೆ ಗಾಡಿಯಂ ಬೀಱುತುಂ ಬಂದರಮನೆಯಂ ಪೊಕ್ಕು ಪರಿವಡೆದ ಪಿರಿಯ ಕರುಮಾಡದ ಮುಂದಣ ಓಲಗಸಾಲೆಯೊಳ್ ಸಿಂಗರದ ಚೆನ್ನನಾಂತ ಪಟ್ಟವಣೆಯ ಮೇಲೆ ಇಚ್ಛೆಗಾರ್ತಿವೆರಸು ನನೆವಿಲ್ಲ ಬಲ್ಲಹಂ ಕುಳ್ಳಿರಲೊಡನೆ-

ನಿಗಳದ ನುಣ್ಚರಂ ನೆಗೆವಿನಂ ನುಡಿಗಳ್ ಕಿಪಿಗಿಂಪನೀವಿನಂ
ಮಗಮಗಿಸುತ್ತುಮಿರ್ಪ ನಱುಸುಯ್ಗಲರ್ವಕ್ಕಿ ಜಿನುಂಗುತಿರ್ಪಿನಂ
ಬಗೆಗೊಳೆ ಬಂದು ನಿಂದು ನೆಱೆದಗ್ಗದ ನೀಱೆಯರೊಲ್ದು ಪರ್ವುವಾ
ಪೊಗೞುಲಿ ಪೊಣ್ಮೆ ಬಿತ್ತರದ ಮುತ್ತಿನ ಸೇಸೆಯನಾಗಳಿಕ್ಕಿದರ್      ೨೬೫

ನೊಸಲೆಡೆಯಲ್ಲಿ ನೀಳ್ದ ಕುರುಳೋಳಿಗಳುಯ್ಯಲ ನಾಡೆಡಾಳಮಂ
ಪಸರಿಪ ತೋರ ಮುತ್ತಿನ ಸರಂ ಮೊಲೆಯೊಳ್ ತಲೆಯೊತ್ತೆ ನಾಡೆಯುಂ
ಮಿಸುಗುವ ಕಣ್ಣ ನುಣ್ಬೆಳೆಗು ಜೊನ್ನದೊಲೋರಗೆಯಾಗೆ ಸೊಂಪು ಸಂ
ದಿಸೆ ಪೊಸರನ್ನದಾರತಿಯನೆತ್ತಿದರಗ್ಗದ ಗಾಡಿಕಾರ್ತಿಯರ್           ೨೬೬

ಬಿಳಿಯ ನೆನೆಯ ಕಣೆಗೆ ನಾಡೆ ಪಗೆವರೊಡಲ ಸುಗಿಯೆ ಕೂಡೆ
ನೆಲನನೊಂದೆ ಕೊಡಯಿನಾಳ್ದು ಮಿಸುಪ ಜಸಮೆ ನಿಮಿರೆ ಕೇಳ್ದು
ಕುಳಿರ್ವ ಪೂಗೊಳಂಗಳಲ್ಲಿ ತಳಿರ ಕಾವಣಂಗಳಲ್ಲಿ
ಪಳಿಕುವೆಸದ ಬೆಟ್ಟದಲ್ಲಿ ಪರಿವ ತೊಱೆಯ ತಡಿಗಳಲ್ಲಿ
ತುಂಬಿವಿಂಡಿನಂತೆ ಪಾಡಿ ಜಕ್ಕವಕ್ಕಿಯಂತೆ ಕೂಡಿ
ದೆಸೆಯನಿಚ್ಚಯಿಂದೆ ನೋಡಿ ಸೊಗಯಿಪಂಚೆಯಂತಿರಾಡಿ
ಪೊಳೆವ ತಳಿರ ನನೆಯ ಮೊನೆಯ ತುಱುಗಿದಲರ ಬಳಸುವೆಲರ
ಮಿಳಿರ್ವ ಮಿಡಿಯ ಗಿಳಿಯ ನುಡಿಯ ಪರಿವ ಕಾಲ ಕರ್ವುಗೋಲ
ಚೆಲ್ವನಾಂತು ತೋರ್ಪ ಬನದ ನಡುವೆ ತನ್ನದೊಂದು ಬಿನದ
ಮಮರೆ ಮಿಱುಪ ಬಟ್ಟಮೊಲೆಯ ಸೊಬಗು ರೂಡಿವಡೆದ ನೆಲೆಯ
ಚೆನ್ನೆಯರ್ಕಳೊಡನೆ ಕೂಡಿ ಮುಗುಳ ಸರಮನಡರೆ ಸೂಡಿ
ನಲ್ಲರೊಡನೆ ಕೂರ್ಮೆಯಿಂದೆ ಕಾವನೊಡನೆ ಪೆರ್ಮೆಯಿಂದೆ
ಮಾವಿನಡಿಯೊಳಾಡುತುಂ ಪಾಡನೆಯ್ದೆ ಕೇಳುತುಂ
ಪೊೞ್ತನಿಂತು ಕಳೆಯುತುಂ ತೊಲಗದಿರ್ದರೆಸೆಯುತುಂ     ೨೬೭

ಇಂತು ಕಾವದೇವನುಂ ಬಸಂತನುಂ ರೂಡಿವೆತ್ತು ಗಾಡಿಯಿಂದೊಪ್ಪಿದರ್ –

ಪುರುಳುಂ ಲಕ್ಕಣಮುಂ ಮೆ
ಯ್ಸಿರಿಯುಂ ಮೆಯ್ವೆತ್ತು ಸೋಲಿಪುದಱಿಂದೊಲ್ದ
ಕ್ಕರಿಗರಿದನೋದಿ ಪೊಸತಾ
ಗಿರೆ ಸೊಬಗಿನ ಸುಗ್ಗಿಯೆಂಬ ಪೆಸರಂ ಕೊಟ್ಟರ್೨೬೮

ಮತ್ತಂ ಸಕ್ಕದಮಱಿವರ್
ಬಿತ್ತರದಿಂ ಮದನವಿಜಯಮೆಂದೊಲವೆರ್ದೆಯಂ
ಪತ್ತಿರೆ ಪೆಸರಿಟ್ಟರಿದ
ಕ್ಕತ್ತಳವೆನಿಪುದೆನೆ ಮಿಸುಪ ಪೆಸರೆಸೆವಿನೆಗಂ       ೨೬೯

ದೋಸದ ಮಾತು ಪೊರ್ದದೆನೆ ಬಲ್ಲವರಗ್ಗದ ಕನ್ನಡಂಗಳಿಂ
ಬಾಸಣಮಾಗೆ ಪೇೞ್ದೆನೊಲವಿಂ ನೆಱೆಕಬ್ಬಿಗರೊಪ್ಪೆ ನಾಡೆಯುಂ
ಗೋಸಣೆ ಮೀಱುವನ್ನಮಿದು ರಾಯನ ನಾೞ್ಕಳೊಳಿರ್ಕೆ ನಿಚ್ಚಮುಂ
ದೇಸೆಯ ಗೊತ್ತು ಜಾಣ್ಣುಡಿಯ ತಾಯ್ವನೆ ನುಣ್ಬುರುಳೇೞ್ಗೆಯೆಂಬಿನಂ     ೨೭೦

ಪದಪಿಂ ಪೊರ್ದಿದರಚ್ಚೆಯೀವ ಪದಿನೆಂಟುಂ ದೋಸಮುಂ ಪೊರ್ದದಾ
ಡಿದ ಮಾತೆಲ್ಲರ ಬಾೞ್ಕೆಯಪ್ಪಱಿವಿನೊಳ್ ಮೂಲೋಕಮಂ ಕಾಣ್ಬ ಪು
ಟ್ಟಿದವೊಲ್ ಕಣ್ಗಮರ್ದೊಪ್ಪಿ ತೋಱುವರುಹಂತಂ ನಲ್ಮೆಯಂ ಮಾೞ್ಕೆ ಬೇ
ದಿಡುದಂ ತನ್ನೞವಟ್ಟೆಗರ್ಗೆ ನೆಲನುಂ ಮುನ್ನೀರುಮಿರ್ಪನ್ನೆಗಂ     ೨೭೧

ಇದು ಪಸುಳೆವಿಸಿಲ ಮಸಕದಿನೆಸಳ್ಮಿಸುಪ ಪೊಸದಾವರೆಯ ಪಸೆಯೊಳಸದಳ ಮೆಸೆವ ಸರಸತಿಯಡಿದಳಿರ್ಗೆ ತಲೆದುಡುಗೆಯೆನೆ ಪೆಸರ್ವಡೆದ ಬಿಜ್ಜೆವಳದಿಂ ಸಮೆದ ಕಾವನಗೆಲ್ಲಂ ಮೆಱೆಯುತಿರ್ಪುದು.

|| ಮಂಗಳ ಮಹಾ ಶ್ರೀ ಶ್ರೀ ||