ಅವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದುರ್ಕಿನಿಂ
ದಾವನ ಪೂವಿನಂಬದಟರಂ ತಲೆವಾಗಿಸುತಿರ್ಪುದೇೞ್ಗೆಯಿಂ
ದಾವನ ಪಜ್ಜಳಿಪ್ಪ ಜಸಮೆಣ್ದೆಸೆಯೊಳ್ ನೆಲಸಿರ್ಪುದಾತನೀ
ಗಾವಗಮೆನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲ ಬಲ್ಲಹಂ   ೧

ಸಿರಿಯೆಱೆಯಂ ಮಾದೇವಂ
ಸರಸತಿಯೆಱೆಯರ್ಕಳಡಿಗಳೆಂಬೀ ಕೆಂದಾ
ವರೆಗಳ್ ಪೊರೆಗೆಮ್ಮಂ ಪೊಸ
ಸಿರಿಗಂಪಿಂ ಪಱಮೆವಱಿಯನೆಂತಂತೊಲವಿಂ     ೨

ಗುರುವಿಕೆಗಿಂಬು ಗಾಡಿಗೆ ತವರ್ಮನೆ ಮೈಮೆಗೆ ಮೇರೆ ನನ್ನಿಗಾ
ಗರಮಱಿತಕ್ಕೆ ಗೊತ್ತು ಪೆಸರ್ವೆತ್ತ ನೆಗೞ್ತೆಗೆ ತಾಣಮಾಗಿ ಬ
ಲ್ಲರ ಬಗೆಯಲ್ಲಿ ಕೂಡಿ ನೆಲಸಿರ್ದು ಪೊಗೞ್ತೆಯನಾಂತಳಾವಳಾ
ಸರಸತಿ ಕೂರ‍್ಮೆಯಿಂದೊಸೆದು ಮಾಡುಗೆ ಕಬ್ಬದ ಬರ್ದಿನೇೞ್ಗೆಯಂ            ೩

ಎನ್ನೀ ಕಬ್ಬದೊಳೆಂದುಂ
ಸನ್ನಿದಮಾಗಿರ್ಕೆಕಣ್ಣಮಯ್ಯನ ಕಡುಜಾಣ್
ರನ್ನನ ಮೆಯ್ಸಿರಿ ಗಜಗನ
ಬಿನ್ನಣಮಗ್ಗಳನ ಕಾಣ್ಕೆ ಜನ್ನಿಗನ ಜಸಂ         ೪

ಒಪ್ಪಂಬೂಸಿದವೋಲ್ ತೆಱಂಬೊಳೆವ ಕೊಂಕುಂ ಪಾಲೊಳೊಂದಿರ್ಪವೋ
ಲೊಪ್ಪಂಬೆತ್ತಿನಿದಾದ ಬರ್ದುನುಡಿಯಂ ತಳ್ತೋಜೆಯುಂ ನಿಲ್ವಿನಂ
ತಪ್ಪೊಂದುಂ ತಲೆದೋಱದಂತೆ ಪಲರೆಲ್ಲರ್ ತಿರ್ದಿದೀ ಕಬ್ಬಮೆಂ
ತಪ್ಪಂಗಂ ಪೊಸಮುತ್ತಿನೆಕ್ಕಸರದಂತೆಂದುಂ ಕೊರಲ್ಗೊಳ್ಳದೇ       ೫

ಪುರುಳುಂ ಲಕ್ಕಣಮುಂ ಮೆ
ಯ್ಸಿರಿಯುಂ ತಳ್ತೆಸೆಯೆ ಪೇೞ್ದ ಕಬ್ಬಮದೆಂತುಂ
ಪುರಳುಂ ಲಕ್ಕಣಮುಂ ಮೆ
ಯ್ಸಿರಿಯುಂ ತಳ್ತೆಸೆವ ರನ್ನದಂತೆರ್ದೆವುಗದೇ    ೬

ಕನ್ನಡದೊಳ್ಪಿನ ನುಡಿಯಂ
ಮುನ್ನಿದಱೊಳೆ ನೋಡಿ ತಿಳಿದುಕೊಳ್ವುದು ಚದುರಂ
ರನ್ನದ ಕನ್ನಡಿಯಂ ನಲ
ವಿನ್ನೋಡಿದವಂಗೆ ಕುಂದದೇನಾದಪುದೇ          ೭

ಸೊಗಯಿಸುವ ಕಬ್ಬಮಂ ಕ
ಬ್ಬಿಗರಲ್ಲದೆ ಮೆಚ್ಚರುೞಿದರೇನಱಿವರೆ ತುಂ
ಬಿಗಳಲ್ಲದೆ ಪೊವೊಳ್ ಮಗ
ಮಗಿಸುವ ಕಂಪಂ ಕಡಂದುಱೇನಱಿದಪುದೇ     ೮

ಎಱಗುವನರುಹಂ ಗುೞಿದ
ರ್ಗೆಱಗಂ ಕನಸಿನೊಳಮೋದನಲ್ಲದೆ ಮೆಚ್ಚಂ
ಮಱೆದುಂ ಪೆಱವೆಣ್ಣೊಳ್ ನೆರೆ
ದಱಿಯಂ ಲೆಕ್ಕಿಗರ ಪಿರಿಯನೆನಿಪಾಂಡಯ್ಯಂ    ೯

ದಿಮ್ಮಿದರಕ್ಕರಕ್ಕಱಿವರೊಳ್ ನುಡಿಯೊಳ್ ಕಡುಜಾಣರಂದದೊಳ್
ಪೊಮ್ಮಿದರೊಂದಿ ನಿಂದ ಸಿರಿಯೊಳ್ ಪಿರಿಯರ್ಗೆಡೆಗೊಟ್ಟು ಬಾೞ್ವರೆಂ
ದುಮ್ಮಳಿಪರ್ಗೆ ಕೇಳ್ ಮುಳಿಯರಾತನ ಮಕ್ಕಳೆನಿಪ್ಪ ಸಾಂತನುಂ
ಗುಮ್ಮಟನುಂ ಜಸಂಬಡೆದ ವೈಜಣನುಂ ನೆಱೆ ಮೆಚ್ಚೆ ಮಾನಿಸರ್  ೧೦

ಅವಱೊಳ್ ನೋೞ್ಪೊಡೆ ಮೊದಲಿಗ
ನಿವನೆನೆ ಗರುವಿಕೆಯನಾಂತ ಸಾವಂತಂಗಂ ಚೆ
ಲ್ವುವರಿವ ಬಲ್ಲವ್ವೆಗಮೊ
ಪ್ಪುವ ಲೆಕ್ಕಿಗರರಸನೊಗೆದನೆಸೆವಾಂಡಯ್ಯಂ     ೧೧

ಎಳೆವೆಂಡಿರುಟ್ಟ ದುಗುಲಮೆ
ತಳೆವುದು ಕಡೆಗಣ್ಣ ಬೆಳಗು ಪೊಸಮೆಯ್ದೊಡವು
ಜ್ಜಳಿಪ ಮೊಗಂ ಕನ್ನಡಿಯೆನೆ
ಬಳೆದನಿದೇನೆಂಬ ಸೊಬಗಿನೇೞ್ತರವವನಾ         ೧೨

ಅರುಹಂತನ ಮೆಲ್ಲಡಿದಾ
ವರೆಗಳ್ ಬಗೆಯಲ್ಲಿ ನಿಂದುವೆಂದೊಡೆ ನೆಲವಿಂ
ಸಿರಿವೆಣ್ಣವನೊಳ್ ನಿಚ್ಚಂ
ಬೆರಸಿರ್ದಪಳೆಂಬುದಿಂತಿದೇನಚ್ಚರಿಯೇ           ೧೩

ಎಳಗಿಳಿವಿಂಡಿನಂತೆ ಮಿಳಿರ್ದಾಡುವ ತುಂಬಿಯ ಬಂಬಲಂತೆ ಕೆಂ
ದಳಿರ್ಗಳ ತೊಂಗಲಂತೆ ನಡೆನೋಡುವ ಪೆಂಡಿರ ನೋಟದಂತೆ ಪೂ
ಗಳ ಪೊಸಗಂಪಿನೊಳ್ ಪೊರೆದು ತೀಡುವ ತೆಂಬೆಲರಂತೆ ತೋರ್ಪ ತಿಂ
ಗಳ ಸಿರಿಯಂತೆ ಸೋಲಿಸದೆ ಕಾವನ ಕಬ್ಬಮದಾರನಾದೊಡಂ         ೧೪

ಸೊಗಯಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ
ಬಗೆಗೊಳೆ ಪೇೞಲಾಱರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ
ಬ್ಬಿಗರದು ಮಾತನಾಡಿದವೊಲಂದವನಾಳ್ದಿರೆ ಬಲ್ಪು ನೆ
ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ       ೧೫

ಎಂದು ತಮತಮಗೆ ಬಲ್ಲವ
ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ
ನ್ನೆಂದಚ್ಚಗನ್ನಡಂ ಬಿಗಿ
ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ     ೧೬

ಸಿಂಗರಮೇೞ್ಗೆಯಂ ಪಡೆಯೆ ದೇಸೆ ಪೊದೞ್ದಿರೆ ಕೊಂಕು ತೀವೆ ಬ
ರ್ದಿಂಗಳೊಳಗಾದ ಮಾತಮರೆ ಬಲ್ಲವರಾ ಎನೆ ಚೆಂದಮೊಂದಿ ಡಾ
ಳಂಗೆಡೆಗೊಂಡು ತೋಱೆ ನನೆವಿಲ್ಲನ ಬೀರಮನೊಲ್ದು ಪೇೞ್ವೆನಾಂ
ತಿಂಗಳ ಸೊಂಪು ಗುಂಪುವಡೆದೆಣ್ದೆಸೆಗಂ ಪರಿಗೊಂಡುದೆಂಬಿನಂ       ೧೭

ಅದೆಂತೆಂದೊಡೆ; ಓರೊಂದೆಡೆಯ ಬೆಂಚೆಗಳೊಳರೆವಿರಿದ ನೀರ್ವೂಗಳ ಕಂಪಿಂಗೆ ಮಾಣದೆ ಮುಸುಱಿ ಮೊರೆವ ಪೆಣ್ದುಂಬಿಗಳ, ತುಂಬಿಗಳ ಬೞಿವಿಡಿದು ಬನದೊಳೆಡೆಯಾಡುವ ಸಬರಿಯರ ನಡೆಯನೇಡಿಸುವಂತೆ ಮೆಲ್ಲಡಿಯಿಡುವ ಪೆಣ್ಣಂಚೆಗಳ ಬಳಗಂಗಳ, ಗಳಗಳನೆ ಪಸರಿಸಿ ಪರಿದ ಬಯಲೊಳ್ ಬೆಳೆದ ಬಿಳಿಯ ಕರ್ಬಿನ ಕೋಲ್ಗೆ ಕೊರಲುದ್ದಮಾದೆಳನೀರ ಪೊನಲ, ನಲವಿಂ ಬೆಳಗೆಯ್ಗೆಱಗುವ ಪಕ್ಕಿಗಳನಲೆದು ಸೋವ ನಾಡ ಗಾಡಿಕಾರ್ತಿಯರ, ಗಾಡಿಕಾರ್ತಿಯರ ಗಾಡಿಗೆ ಸೋಲ್ತು ನಿಲ್ವ ಬಟ್ಟೆಗರ, ಗರಗರಿಕೆವಡೆದೆಳವೆಂಡಿರ ತಂಡದಿಂ ನೆಗೞ್ತೆವಡೆದು ಮೇಲೂರ್ಗಳ ಮುಂಡಾಡುವಂತಾಗಸಕೆ ನೆಗೆದ ನೆಲೆವಾಡಂಗಳ, ಗೞಿಪ್ರವರಗಿಳಿಯ ಬಳಗಕ್ಕೆ ತವರ‍್ಮನೆಯಾದ ಮಾಮರದ ಕೊಂಬು ಕೊಂಬಿನೊಳ್ ಬಿಡದೆ ಬಗ್ಗಿಪ ಕೋಗಿಲೆಗಳ ಚೆಲ್ವನೊಳಕೊಂಡಿರ್ಪುದುಮಂತು ಮಲ್ಲದೆಯುಂ

ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾಱನಾ
ನೆಲನಂ ಮತ್ತಿನ ಮಾನಿಸರ್ ಪೊಗೞಲೇನಂ ಬಲ್ಲರೆಂಬೊಂದು ಬ
ಲ್ಲಲಿಯಂ ನೆಟ್ಟನೆ ತಾಳ್ದು ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು ಮೆ
ಲ್ಲೆಲರಿಂ ಪೂತ ಕೊಳಂಗಳಿಂ ಕೆಱೆಗಳಿಂ ಕಾಲೂರ್ಗಳಿಂ ಕೆಯ್ಗಳಿಂ     ೧೮

ಇವು ಪಳ್ಳಿಗಳಿವು ಪಟ್ಟಣ
ಮಿವು ಕೆಱೆಗಳಿವೆಱಗಿ ನಿಂದ ಮುಗಿಲೋಳಿಗಳಿಂ
ತಿವು ಕಾಡಿವು ಪೆಸರ್ವಡೆದೊ
ಪ್ಪುವ ಬನಮೆಂದಱಿದು ಪೇೞ್ವುದರಿದಾ ನಾಡೊಳ್      ೧೯

ಮಲ್ಲಿಗೆಯಲ್ಲದೆ ಸಂಪಗೆ
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ
ಗಲ್ಲದೆ ಮಾವಲ್ಲದೆ ಕೌಂ
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್  ೨೦

ಅಡರ್ದೇಱಿ ಕೋಡಗಂಗಳ್
ಕಡುಪಿಂದೀಡಾಡೆ ಘೞಿಲನೊಡೆದೆಳಗಾಯಿಂ
ದೆಡೆವಿಡಿದೊಸರ್ವೆಳನೀರ್ಗಳ್
ಮಡುಗೊಂಡೋವುತ್ತುಮಿರ್ಪುವಲ್ಲಿಯ ಬನಮಂ         ೨೧

ಉಱೆ ಕಾಯ್ವ ಬಿಸಿಲೊಳೆಮ್ಮಂ
ಮಱೆದುಂ ಕೊರಗಿಸದೆ ಪೊರೆದುದೆಂದೊಲವಿಂ ಬಂ
ದೆಱಗುವವೋಲ್ ತೆನೆಯಂ ಕಾ
ಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ        ೨೨

ನೆಯ್ದಿಲ್ಗೊಳಂಗಳೆಡೆಯೊಳ್
ಕಾಯ್ದೋವದೆ ಪೋರ್ವ ಪಲವು ನೀರ್ವಕ್ಕಿಗಳಿಂ
ದೆಯ್ದುಣ್ಮುವ ಸೀರ್ಪನಿಯೊಳ್
ತೊಯ್ದೊಯ್ಯನೆ ಗಾಳಿ ಕೂಡೆ ತೀಡುತ್ತಿರ್ಕುಂ     ೨೩

ಮತ್ತಮಾ ನಾಡೊಳ್ ಕೀೞೆಂಬುದು ಕುದುರೆಯ ಬಾಯ ಕಬ್ಬಿಣದೊಳ್, ಕವರೆಂಬುದು ಚಪ್ಪರದೊಳ್, ಬಂದಿಯೆಂಬುದು ತೊಡವಿನೊಳ್, ಏಱೆಂಬುದು ನೆಲೆವಾಡದೊಳ್, ಮಡಿಯೆಂಬುದು ಮರುಗದ ತಾಣದೊಳ್, ಮೊಱೆಯೆಂಬುದು ನಂಟರೊಳ್, ಪೊಡೆಯೆಂಬುದು ಬೆಳೆಗೆಯ್ಯೊಳ್, ಕಱೆಯೆಂಬುದು ತುಱುಗಾರ್ತಿಯರೊಳ್, ಪಿಡಿಯೆಂಬುದು ಪೆಣ್ಣಾನೆಯೊಳಲ್ಲದಿಲ್ಲಂತುಮಲ್ಲದೆಯಂ –

ಪುದಿದೆಳವಳ್ಳಿಯಿಲ್ಲದ ಮರಂ ಕೊಳನಿಲ್ಲದ ತೋಂಟಮಾವಲಿ
ಲ್ಲದ ಕೆಱೆ ಗಂಡುಗೋಗಿಲೆಗಳಿಲ್ಲದ ಬಂದೆಳಮಾವು ಕಾಲ್ಗಳಿ
ಲ್ಲದ ತೋಱೆ ತುಂಬಿಯಿಲ್ಲದಲರಂಜೆಗಳಿಲ್ಲದ ಬೆಂಚೆ ಬೇಟಮಿ
ಲ್ಲದ ಬೆಲೆವೆಣ್ಗಳಿಲ್ಲ ಪೆಸರಿಲ್ಲದ ಮಾನಿಸರಿಲ್ಲದೆಲ್ಲಿಯುಂ     ೨೪

ತಾವರೆಯ ಮಲ್ಲಿಗೆಯ ಪೊಸ
ಸೇವಂತಿಯ ಬಿರಿದ ಸಂಪಗೆಯ ತನಿಗಂಪಿಂ
ತೀವಿರ್ಪುದಱಿಂದೆಂದುಂ
ಪೂವಿನ ಪೊೞಲೆಂಬುದೊಂದು ಪೆಸರೆಸೆದಿರ್ಕುಂ  ೨೫

ತೊಳಗುವ ಕರುಮಾಡಂ ನೊರೆ
ಬಳಸಿದ ಪೊಂಗೋಂಟೆ ಮೇರೆ ನೆಲೆವನೆ ಸೊಗಯಿ
ಪ್ಪೊಳಗಣ ಬೆಟ್ಟುಗಳೆನೆ ಬಗೆ
ಗೊಳಿಪುದು ಮುನ್ನೀರ ತೆಱದಿನಾ ಪೊೞಲೆಂದುಂ           ೨೬

ಬಳಸಿದ ಬಳ್ಳಿಯ ಜೊಂಪಂ
ಗಳ ಮಿಸುವೆಳದಳಿರ ಕಾವಣಂಗಳ ಪೊಸವೂ
ಗಳನಾಂತ ಮಲ್ಲಿಗೆಯ ಮನೆ
ಗಳ ಚೆಲ್ವಿಂ ಚೆಲ್ವನಾಂತುದಾ ಪೊೞಲ ಬನಂ    ೨೭

ಮತ್ತಮಾ ಬನಂ ಮುಗಿಲೆಡೆಯೊಳೆವಿಡದೆಡೆಯಾಡಿ ಬೞಲ್ದ ಬಿಜ್ಜೋದರಿಯರ್ಕಳಱವಟ್ಟಿಗೆದಾಣಮೆಂಬಂತೆಸೆವೆಳನೀರ್ಗಳಂ ಪೊತ್ತಾಗಸದೆಡೆಗಡರ್ವ ಚೆಂದೆಂಗಿನ ಮರಂಗಳೊಳಂ, ಎಸಗುವೆಲರಿನೊಡೆದೊಸರ್ವ ಪೊಸವಣ್ಣ ಪಸರದಿನೆಸೆವಸಿಯ ಕೊಂಬುನಿಂಬುಮಾಡಿ ಸುೞಿದು ಗೞಪುವೆಳೆಗಿಳಿಯ ಬಳಗಕ್ಕೆ ತಮರ‍್ಮನೆಯಾದಿಮ್ಮಾವಿನ ಪೊದಱೊಳಂ, ಒಱಲ್ದೆಱಗುವ ಪಱಮೆವಱಿಗಳಂ ತುಱುಸೆಱೆವಿಡಿವ ನಱುಗಂಪಿನ ಸೊಂಪುಗಳ್ಗಿಂಬಾದ ಪೊಂಬಾೞೆಗಳಿಂ ಬಳ್ಕುವಡಕೆಯ ಸಾಲ್ಗಳೊಳಂ, ಒಯ್ಯನೊಯ್ಯನೆ ರಯ್ಯಮಾಗಿ ಮೆಯ್ಯಱಿಯದುಯ್ಯಲಾಡುವ ಸೊಂದಿಗೋಡಗಂಗಳಿಂದೋರೊರ್ಮೆ ನೆಲಕ್ಕೆ ಜೋಲ್ವ ತಿಂತಿಣಿವಣ್ಣನಾಂತ ಸಣ್ಣಗೊಂಬಿಂದಿಂಬುವಡೆದ ದಾಳಿಂಬಂಗಳೊಳಂ, ಬಂದು ಬಂದು ನಟ್ಟ ನಡುವಗಲೊಳೋಕುಡಿಯಾಡುವೆಳವೆಂಡಿರ ಮೆಯ್ಯ ಕುಂಕುವದಿಂದೊಂದಿದ, ಕೆಂದಾವರೆವೊಗಳಂ ತಳೆದು ಸೊಂಪನೊಳಕೊಂಡ ತಾವರೆಗೊಳಂಗಳೊಳಂ ಬಸಂತಂಗೆ ನೆಲೆವೀಡಾಗಿರ್ದುದಂತುಮಲ್ಲದೆಯುಂ –

ಮೊರೆವೆಳದುಂಬಿಯ ನಲವಿಂ
ನೆರೆವಂಚೆಯ ನುಡಿವ ಗಿಳಿಯ ಕಿವಿಗಿನಿದಪ್ಪಂ
ತಿರೆ ಕರೆವ ಕೋಗಿಲೆಯ ನು
ಣ್ಚರದಿಂದಂ ಬಿರಯಿಗಳ್ಗೆ ಮಾಡುವುದೞಲಂ   ೨೮

ಕನರ್ಗೊನರೆಲ್ಲಿಯಲ್ಲಿ ಮಿಳಿರ್ದಾಡುವ ನುಣ್ದಳಿರೆಲ್ಲಿಯಲ್ಲಿ ಬ
ಲ್ನನೆಗಳವೆಲ್ಲಿಯಲ್ಲಿ ಪೊರೆದೋಱುವ ಮೊಗ್ಗೆಗಳೆಲ್ಲಿಯಲ್ಲಿ ಚೆ
ಲ್ವೆನಿಪಲರೆಲ್ಲಿಯಲ್ಲಿ ಪಸುರೇಱಿದ ಕಾಯ್ಗಳವೆಲ್ಲಿಯಲ್ಲಿ ಪ
ಣ್ಗೊನೆಗಳವೆಲ್ಲಿಯಲ್ಲಿಯೆನೆ ಸೋಲಿಸುಗಂ ಬಿಡದಾವನಂ ಬನಂ  ೨೯

ತಿಳಿದಕೊಳಂಗೊಳ್ ಸುೞಿದು ಸೀರ್ಪನಿಯಂ ಬಿಡದೆತ್ತಿಕೊಂಡು ಪೂ
ಗಳ ಪೊಸಗಂಪಿನೊಳ್ ಪೊರೆದು ತುಂಬಿಗಳಿಂಚರದಲ್ಲಿ ತಳ್ತು ಕೆಂ
ದಳಿರ್ಗಳ ತೊಂಗಲೊಳ್ ತೊಡರ್ದು ಕೂಡುವ ನಲ್ಲರ ನೀಳ್ದಸೇದೆಯಂ
ಸೆಳೆದೆಲರಲ್ಲಿ ತೀಡುವುದು ಮೆಲ್ಲನೆ ಮೆಲ್ಲನೆ ರಯ್ಯಮೆಂಬಿನಂ    ೩೦

ಅಂತು ನೋೞ್ಪರ ಬಗೆಯಂ ಬಲ್ಸೆಱೆವಿಡಿವ ಬನಮಂ ಬಳಸಿ ವಿಳಸಮಾದಂ ಪೊಂಗೋಂಟೆಯಿಂದೊಳಗೆ –

ಕಣ್ಗಿಂಬಾದುದು ರಾಯಬೀದಿ ಮುಡಿಯಿಂದಂ ಬೀೞ್ವ ಪೂಮಾಲೆಯಿಂ
ತಣ್ಗಂಪಂ ಸವಿದಲ್ಲಿವಂಗಡದೆ ಪಾಡುತ್ತಿರ್ಪ ಪೆಣ್ದುಂಬಿಯಿಂ
ನುಣ್ಗಾಲುಂಗುರವೀಯೆ ಮೆಲ್ಲುಲಿಯನೆತ್ತಂ ಬರ್ಪಬಲ್ವೆಂಡಿರಿಂ
ಜಾಣ್ಗಿಂಬಾದರವೆಂಡಿರಿಂ ಪೊಗೞ್ವರೋದಂ ಕೇಳ್ವ ಕೂರಾಳ್ಗಳಿಂ   ೩೧

ಮುತ್ತುಂ ಪಚ್ಚೆವರಲ್ಗಳುಂ ಕುಳಿಸಮುಂ ಮುಂತಾಗಿ ಕುಂದಿಲ್ಲದೊಂ
ಬತ್ತುಂ ರನ್ನದ ನುಣ್ಗದಿರ್ ನೆಗೆದು ನೀಳ್ದೊಂದೊದಱೆಳ್ ಕೂಡಿಮೆ
ಯ್ವೆತ್ತಿರ್ದಿಂದಿರವಿಲ್ಲ ಪಾಂಗನೆನಸು ಬಾಂಬಟ್ಟೆಯೊಳ್ ಬೀಱಿಕ
ಣ್ಗೆತ್ತಂ ಸೋಲಮನೀವ ರನ್ನವಸರಂ ಚೆಲ್ವಾದುದಾ ಬೀದಿಯೊಳ್ ೩೨

ತೊಳಗುವ ಪೂಗಳನೆಂದುಂ
ತಳೆದಿರ್ಪ ಕೊಳಂಗಳೆಂಬ ಸಂಕೆಯನೆನಸುಂ
ಬಳೆಯಿಸುತಿರ್ಪುದು ಬೀದಿಗ
ಳೊಳಗೆಲ್ಲಂ ನೆಗೞ್ದ ಕಂಚುಗಾಱರ ಪಸರಂ      ೩೩

ಮಿಗೆ ಬೆಲೆಯೇಱಿದ ಪೂಲಿಯ
ಮಗರಿಯ ದೋರಿಯದ ಪೞಿಯ ತಳಿರ್ವಟ್ಟೆಯ ಕಾ
ಡಿಗೆ ನೀರಿನ ಬಟ್ಟೆಯ ಮೞಿ
ಗೆಗಳಿಂ ಸೋಲಿಪುವು ಸೀರೆವರದರ ಪಸರಂ        ೩೪

ಅಲ್ಲಿಂ ಬೞಿಯಮುಣ್ಮೆ ಪೊಣ್ಮುವ ನಱುಗಂಪಿನ ಪರಸರದಂತೆ ಪಸರಿಸಿದ ತಂತಮ್ಮ ಕಾವಣಂಗಳ ಮುಂದೆ –

ಮಗಮಗಿಸುತ್ತಮಿರ್ಪ ನಱುಸುಯ್ ಪೊಸವೂಗಳ ಕಂಪನೆತ್ತೆನು
ಣ್ಮೊಗಮಿರದಚ್ಚದಾವರೆಯ ಮೆಯ್ಸಿರಿಯಂ ಪಿಡಿದೆತ್ತೆ ನೀಳ್ದ ಸೆ
ಳ್ಳುಗುರ್ಗಳ ಬೆಳ್ಪು ಕೇದಗೆಯ ಕುತ್ತೆಸಳೋಳಿಯನೆತ್ತೆ ಸುತ್ತಲುಂ
ಸೊಗಯಿಸುತಿರ್ಪ ಬಾಸಿಗಮನೆತ್ತುವರಗ್ಗದ ಮಾಲೆಗಾರ್ತಿಯರ್    ೩೫

ಅಂತು ಸೊಬಗಿಂಗೊಳಗಾಗಿ ಪುಲ್ಲವಡಿಗಿತಿಯರ ಪಸರದಿನಂದುಬಡೆದ ಸೂಳೆಗೇಱಿಯ ಕೆಲದಲಿ –

ಗುರುವರ ಗೊಟ್ಟಿಗಾಱರ ನೆಗೞ್ತೆಯ ಮಿಂಡರ ಮೇಳಗಾಱರ
ಕ್ಕರಿಗರ ಸಂದ ಕಬ್ಬಿಗರಜೋಡೆಯ ಬಂಡರ ಸಾರ್ದ ನೆತ್ತಗಾ
ಱರ ಚದುರಂಗಕಾಱರರೊರೆಗಾಱರ ಬಾಜಿಪ ಬೀಣೆಗಾಱರಾ
ಗರಮೆನೆ ಪೆಂಪು ಸೊಂಪನೊಳಕೊಂಡೆಸೆದಿರ್ಪುವು ಸೂಳೆಗೇಱಿಗಳ್   ೩೬

ಕಡಲೊಡೆಯನಿತ್ತ ರನ್ನದ
ತೊಡವಂ ತುಡು ಸೌರಿಯಿತ್ತ ಪೊಂಬಟ್ಟೆಯನಿಂ
ದುಡು ಸಸಿಯಟ್ಟಿದ ಪೂವಂ
ಮುಡಿಯೆಂಬೀ ನುಡಿಯೆ ಸೂಳೆಗೇಱಿಯೊಳೆಲ್ಲಂ           ೩೭

ಮತ್ತಮಾ ಪಟ್ಟಣಮಿಟ್ಟಣಂಬಡೆದು ಮೆಱೆವ ಪೊಂಬೆಸೆದುಪ್ಪರಿಗೆಯ ಬಿಸವಂದಮಾದ ಚುಂಚು ಲೋವೆಗಳೊಳಗೆ ಬಳಸಿ ನಲಿದುಲಿವ ಪಾರಿವಂಗಳ ಕೊರಲುಲಿಯೊಳಂ, ಪುಲ್ಲವಡಿಗಿತಿಯರೆತ್ತಿ ಪಿಡಿದ ಮಾಲೆವೂವಿನ ನಱುಗಂಪಿಂಗೆ ಕವ್ವರೆಗೊಂಡು ಮುತ್ತಿ ಮುಸುಱಿ ಮೊರೆವ ಮಱಿದುಂಬಿಗಳಿಂಚರದೊಳಂ, ಜೂದಿನ ದಿಣ್ಣೆಯೊಳ್ ಜೂದಾಡಿ ಗೆಲ್ದು ಕೈಕೊಂಡ ಪೊನ್ನರಾಸಿಗಳ ವಾರುವಂಗಳ ಪೇರಾನೆಗಳ ತೇರ್ಗಳ ವಂಗಡಮಂ ತಂಡತಂಡದಿಂ ಬೀಯಂಗೆಯ್ವರಸುಮಕ್ಕಳ ಮುಂದೋದಿ ಮೆಚ್ಚಂ ಕೊಳ್ವಕ್ಕರಿಗರಬ್ಬರದೊಳಂ, ಓಲಗದವಸರಮನಱಿದರ ಮನೆಗೆ ಪೋಪ ಬರ್ಪ ಮನ್ನೆಯರ ಮಾ ಸಾವಂತರ ಪಸಾಯ್ತರ ಬೞಿಸಲ್ವ ತುೞಿಲಾಳ್ಗಳಡ್ಡಣದೊಳೆಡ್ಡಮಾಗೆ ಕೀಲಿಸಿದ ಕಿಱುಗೆಜ್ಜೆಯ ದನಿಗೊಳೊಳಂ, ನೀರುಣಲೆಂದು ಪೊಱಮಟ್ಟು ಕೆಂದೂಳಿಯ ನೊಟ್ಟಿಕೊಳಲೆಂದು ನಿಂದು ನಿಂದು ನೆಲದ ಸೊವಡನಾರಯ್ದು ಮಸಗಿ ದೆಸೆದೆಸೆಗೆ ವಿಸಟಂಬರಿದು ಮನ್ನಣೆಯ ಮಾವಂತರುಮನಾರೆ ಕಾಱರುಮಂ ಮೀಱಿ ಗೆಂಟಱೊಳ್ ನಿಂದು ನೋಡುವ ನುಡಿಗೆ ಗಿಱ್ರನೆಯ್ದುವ ಸೊರ್ಕಾನೆಗಳ ಕಾಲ ಸಂಕಲೆಯ ಗೋಸದೊಳಂ ಇಂದಿರನ ಪೋೞಲ ಸಿರಿಯ ಸಡಗರಮಂ ಪಿಡಿಯುತಿರ್ಪುದು ಮಂತುಮಲ್ಲದೆಯಂ –

ನಲವಿಂದಿರುಳುಂ ಪಗಲುಂ
ನೆಲನೆಲ್ಲಂ ಬಾೞ್ವುದೀತನಾದ ಬೞಿಕ್ಕೆಂ
ದುಲಿಯೆ ಸಲಪುತ್ತುಮಿರ್ಪಂ
ತೊಲಗದೆ ನನೆಯಂಬನೆಂಬನಂತಾ ಪೊೞಲಂ     ೩೮

ಜಸಮಳೆಯೆಲ್ಲಮಂ ಬಳಸೆ ಬಲ್ಪು ನೆಗೞ್ತೆಯ ಬೀರರಂ ಝಳ
ಪಿಸೆ ಕಡುನನ್ನಿ ಬಂದು ಸರಣೆಂದವರಂ ತಲೆಗಾಯೆ ಚಾಗದೊಂ
ದೆಸಕವಲಂಪಿನಿಂ ಬಡವರಂ ತಣಿಪುತ್ತಿರೆ ತಕ್ಕರೊಲ್ದು ಬ
ಣ್ಣಿಸೆ ನನೆಯಂಬನೆಯ್ದೆ ನೆಲನಂ ಬಲದೋಳ್ದಲೆಯಲ್ಲಿ ತಾಳ್ದಿದಂ            ೩೯

ನುಡಿ ಸಲೆ ನನ್ನಿಗಿರ್ಕೆವನೆಯಾದುದು ಜೌವನದೇೞ್ಗೆ ಕಯ್ಗೆ ಕ
ನ್ನಡಿಯೆನಿಸಿತ್ತು ಪೆಂಪು ಪಿರಿಯರ್ಗೆಡೆಗೊಟ್ಟುದು ಗಾಡಿ ರೂಡಿಯಂ
ಪಡೆದುದು ಬೀರಮುಗ್ಗಡದ ಸೈರಣೆಗಾಗರಮಾಯ್ತು ನೋೞ್ಪೊಡೆಂ
ದಡಿಗಡಿಗೊಲ್ದು ಬಣ್ಣಿಸುವುದಾ ನನೆಯಂಬನ ಪೆರ್ಮೆಯಂ ನೆಲಂ  ೪೦

ಪಗೆಗಳುಮಂ ಪೆಂಡಿರುಮಂ
ಮಿಗೆ ಸೋಲಿಪುವವನ ಬೀರಮುಂ ಗಾಡಿಯುಮಾ
ವಗಮಡಿಸಿ ತಾಗೆ ಕಣೆಯುಂ
ಮುಗುಳ್ಗಣೆಯುಂ ಮೊನೆಯೊಳಂ ಪೊೞಲ್ವೀದಿಯೊಳಂ   ೪೧

ಪಡಿಮೊಗಮಾಗಲೊಡಂ ಕ
ನ್ನಡಿಯಂ ನೋಡುವರ ತೆಱದೆ ಮೆಯ್ಗುಂದುವರು
ಗ್ಗಡದರಸುಮಕ್ಕಳೆನೆ ಬಾ
ಳ್ವಿಡಿದಾರ್ ಬಾೞ್ದಪ್ಪರಾತನಿದಿರೊಳ್ ಪಗೆವರ್          ೪೨

ಕಡುಗಲಿ ನನೆಯಂಬನ ಬೆ
ಳ್ಗೊಡೆಯೆತ್ತಿದ ಬೞಿಯಮುೞಿದ ರಾಯರ ಕೊಡೆಗಳ್
ಗಡಣದೊಳೆ ತಲೆದಣಂಬೆಯ
ಕೊಡೆವೋಲ್ ಬೆಳ್ಗೊಡೆಗಳಾದುವದನೇವೊಗೞ್ವೆಂ        ೪೩

ಮತ್ತಮಾತಂ ತಾವರೆಯಂತೆ ಸಿರಿಯೊಳೊಂದಿಯುಂ ಪೊಡೆಯಲರನೆನಿಸಂ; ಸಿಡಿಲಂತೆ ಕಾಯ್ಪನಾಂತುಂ ಬಿಸುಗದಿರನೆನಿಸಂ; ಬಿಲ್ಗಾಱನ ಕೈಯಂತೆ ಮಿಸುಪ ಸರದಿನಳವಟ್ಟುಂ ಮಾಲೆಗಾಱನೆನಿಸಿಂ; ಪಾರ್ವರ ಕೇಱಿಯಂತೆ ಚೆಂದಂಬಡೆದ ಮಡದಿ ನೆಸೆದುಂ ತೇರೇನಿಸಂ; ಬಾನಂತೆ ಮೀನ್ಗಳಂ ತಳೆದುಂ ಮುನ್ನೀರೆನಿಸಂ; ಮಾವಿನಂತೆ ಕೋಡುಗೈಯೊಂದಿಯುಂ ಸೊರ್ಕಾನೆಯೆನಿಸಂ; ಎಂಬ ನೆಗೞ್ತೆಯಂ ಪೆತ್ತು ಪಲವುಂ ಪಗಲರಸುಗೆಯ್ಯುತ್ತುಮಿರ್ಪನ್ನೆಗಂ –

ಒಲವಿಂದೋಲಗಿಸುವೆ ನೀ
ನೆಲದೆಱೆಯನನೆಂದು ಬರ್ಪವೋಲ್ ಬಗ್ಗಿಪ ಕೋ
ಗಿಲೆಯ ತೊದಳ್ನುಡಿ ಬಿರಿಯಿಯ
ನಲೆಯುತ್ತಿರೆ ಬಿಡದೆ ಬಂದುದಂದು ಬಸಂತಂ    ೪೪

ಬಿರಯಿಗಳಂಜಿ ತಾಱೆ ಪಗಲಾಣ್ಮನ ಮೆಯ್ ಬಿಸುಪೇಱೆ ಮಾಗೆಚೆ
ಚ್ಚರದೊಳೆ ಪಾಱೆ ನೀರ್ದೆಗೆದು ಬೆಂಚೆಗಳೊಳ್ ಕೆಸಱಾಱೆ ತುಂಬಿಗಳ್
ಮೊರೆದಲರತ್ತ ಜಾಱೆ ನನೆಯಂ ತರದಿಂದರ್ಮುತ್ತೆ ಪೇಱೆತಾ
ವರೆ ತಲೆದೋಱೆ ತೀಡಿದುದು ತೆಂಕಣ ಗಾಳಿ ಬಸಂತದೇೞ್ಗೆಯೊಳ್ ೪೫

ಮತ್ತಂ ಕೆಲಬಲದ ಕಿಱುವೆಟ್ಟಿನೊಳ್ ಪುಟ್ಟಿದ ಬೇವು ಬೊಬ್ಬುಲಿಗಳಂ ತನ್ನಂತೆ ಮಾೞ್ಪ ಸಿರಿಕಂಡವೆಟ್ಟಿನೊಳ್ ಪುಟ್ಟಿಯುಂ, ಸೊಂದಿಗೋಡಗಂಗಳ ಕಾಲಾಟದಿನಲ್ಲೊಕ್ಕಲರಿನುದಿರ್ದ ದೂಳಿಗಳನಮರ್ಚಿಯುಂ, ಕಿೞ್ಬರಿಗಳೊಳ್ ಬೆಳೆದಸುಗೆಯ ಬನಮನಿರ್ಕೆಮಾಡಿ ಬಿಡದೊಳ್ವ ಪೆಣ್ಗೋಗಿಲೆಯ ಸರಂಗಳಿಂ ದೊದಳ್ನುಡಿಯಂ ಬೀರಿಯುಂ, ಎಡೆವಿಡದೆ ಕಡಲ ತಡಿಗಳೊಳ್ ಪೆಂಬಾೞೆಯ ಕಂಪು ಪೊಂಪುೞಿವೋಗೆ ನೆಗೆದ ಕೌಂಗಿನ ಸಾಲ ಸಂದಣಿಯೊಳ್ ನಿಱಿಗಱಿಗಂಪನಾಡಿಯುಂ, ಪಟ್ಟಣಂಗಳ ಪೊಱವೊೞಲ ತೋಂಟಂಗಳೊಳ್ ಬೇಱೂರ್ಗೆ ಪೋದ ನಲ್ಲರ ನೆನೆದು ದೂಱಿಸುವ ನೀಱೆಯರ ನಿಡುಸುಯ್ಯ ಗಡಣದಿಂ ಜೌವನವೇಱಿಯುಂ, ಸೊಬಗುಮಂ ಗಾಡಿಯುಮನೊಳಕೊಂಡು ತಿರುಗುವೆಳವೆಂಡಿರ ಬಟ್ಟಮೊಲೆಯಿಟ್ಟೆಡೆಯೊಳವೊಕ್ಕು ತೋರಮುತ್ತಿನಾರಮನಲ್ಲಾಡಿಯುಂ, ಕೞವೆಯ ಮಡಿಗಳ ಬೞಿವಿಡಿದು ಬೆಳೆದ ಚೆಂಗಣಿಗಿಲೆಯ ಕಂಪಿನೊಳ್ ಪೊರೆದು ಪರಿವ ತೊಱೆಗಾಲ್ಗಳ ಸೀರ್ಪನಿಗಳನೀಂಟಿಯುಂ ಇಂತು ಪಾಱುಬೊಜಂಗನ ಗೆಯ್ತ ಮನೊಳಕೊಂಡು ತೀಡೆ –

ಕಡು ಸೊರ್ಕಿಂದಲರಂಬನಾನೆಯೆನಿಪೀ ತೆಂಗಾಳಿ ತನ್ನಿಚ್ಚೆಯಿಂ
ನಡೆತಂದಪ್ಪುದು ಬೇಗದಿಂ ಬಿರಯಿಂ ನೀಂ ಪೋ ಪೋಗು ಪೋಗೆಂದು ಮುಂ
ಲಗಡೆಯೊಳ್ ಸಾಱುವ ಡೌಡೆಯೆಂಬ ತೆಱದಿಂದಂ ಬಗ್ಗಿಸುತ್ತಿರ್ದುವು
ಗ್ಗಡದಿಂ ಕೋಗಿಲೆ ಮೊಗ್ಗೆಯಿಂ ಮಿಡಿಗಳಿಂ ಸೊಂಪೇಱಿದಿಮ್ಮಾವಿನೊಳ್     ೪೬

ಅಲರ್ಗಳನಾಂತ ಪಾದರಿಗಳೊಳ್ ತರದಿಂದೆಱಗಿರ್ದ ತುಂಬಿಗಳ್
ಪಲವು ಬಸಂತನೊಲ್ದೊಲಿಸಿ ಕಾಡುವ ರೂಡಿಯ ಬರ್ದುವೆಂಡಿರಂ
ನಿಲೆ ಸೆಱೆಗೆಯ್ವೆನೆಂದು ಪಲವಾಗಿರೆ ಮಾಡಿದ ತನ್ನ ಬಳ್ಳಿ ಸಂ
ಕಲೆಗಳಿವೆಂಬಿನಂ ಬಗೆಯನಿರ್ಕುಳಿಗೊಂಡುವದೊಂದು ತಾಣದೊಳ್  ೪೭

ಇವಱ ತನಿಗಂಪನಾಂ ಸವಿ
ವೆವೆನುತ್ತೆಸೆವಲರ್ಗೆ ಕಾಪನಿತ್ತುಱೆ ಕೈಕೊಂ
ಡವೊಲೆಱಗಿ ಪಱಮೆವಱಿವಿಂ
ಡವಿದತ್ತದಿರ್ಮುತ್ತೆಯಲ್ಲಿ ಸಂದಣಿಗೊಳುತುಂ ೪೮

ಬಗೆಯದೆ ನಡೆವಳಿಗರಸಂ
ಪಗೆಯರ ಮನೆಗೆಯ್ದಿ ಬೞಿಕ ಜಾಱುವವೊಲ್ ಸಂ
ಪಗೆಯ ನನೆಗೆಯ್ದಿ ಬೞಿಕೊ
ಯ್ಯಗೆ ಜಾಱುವ ತುಂಬಿ ನಗಿಸಿದುದು ಮಲ್ಲಿಗೆಯಂ       ೪೯

ಕಡು ನಿಮಿರ್ದಕೊಂಬು ಕೊಂಬಿನೊ
ಳೆಡೆವಿಡದಲರ್ದಲರ ತೊಂಗಲಿಂ ಪುದಿದುಮಣಂ
ಗಡಣದಿನೆಯ್ತಂದೆಱಪಾ
ಱಡಿಗಾರಡಿದಾಣಮಾಯ್ತು ಸಂಪಗೆ ಪಲವುಂ    ೫೦