‘ಸುಕುಮಾರಚರಿತಂ’

ಕವಿಕಾವ್ಯ ವಿಚಾರ

ಈ ಕಾವ್ಯವು ನಿರ್ದಿಷ್ಟ ಉದ್ದೇಶವುಳ್ಳದ್ದು; ಧರ್ಮ – ಕಾವ್ಯಧರ್ಮಗಳನ್ನು ಮೇಳವಿಸಿ ಓದುಗರಿಗೆ ಉಣಬಡಿಸುವುದು. ಪಂಪನ ಈ ಆದರ್ಶವನ್ನೇ ಮುಂದಿನ ಎಲ್ಲ ಕನ್ನಡ ಕವಿಗಳೂ ಅನುಸರಿಸಿದ್ದು. ಆ ಕಾಲದ ನಂಬಿಕೆಯಂತೆ ಕವಿತೆಗೆ ತೂಕ ಬರುವುದು ಮೌಲ್ಯಗಳಿಗೆ ಆಕಾರ ಕೊಟ್ಟಾಗ ಮಾತ್ರ. ಶಾಂತಿನಾಥನು ಜೈನ ಕವಿಯಾಗಿ ಪಂಪನನ್ನು ತನ್ನ ಮಾದರಿಯಾಗಿ ಹೊಂದಿದ್ದುದು ಅಚ್ಚರಿಯಲ್ಲ. ಅದರ ಒಂದು ಭಾಗವಾಗಿ ಅವನಂತೆ ಇವನೂ ಚಂಪೂ ಕಾವ್ಯವನ್ನು ರಚಿಸಲು ಹೊರಟ. ಮಹಾಪುರಾಣದ ಆದಿ ತೀರ್ಥಂಕರ ಪುರಾಣ ಕತೆಯನ್ನು ಅವನು ಕಾವ್ಯ ಸ್ಪರ್ಶದಿಂದ ಹೃದ್ಯವಾಗಿ ಮಾಡಿದುದೇ ಈ ನಮ್ಮ ಪ್ತಸ್ತುತ ಕವಿಗೂ ಪ್ರೇರಣೆಯೊದಗಿಸಿದೆ. ಆದರೆ ಅವನಂತೆ ಇವನು ಮಾಂತ್ರಿಕನಲ್ಲ ಹಾಗಾಗಿ ಅವನಲ್ಲಿ ಪುರಾಣದ ಕಣಕ ಕಾವ್ಯತ್ವದ ಹೂರಣವನ್ನು ತುಂಬಿಸಿಕೊಂಡಂತೆ ಇಲ್ಲಿ ಕಾಣಿವುದಿಲ್ಲ. ಶಾಂತಿನಾಥ ಕಥಾ ನಿರೂಪಣೆಗೆ ಆಕರವಾಗಿ ಹೊಂದಿದ್ದ ‘ವಡ್ಡಾರಾಧನೆ’ ಯದು ಹೃದ್ಯಗದ್ಯದ ತಂಗಾಳಿಯ ತೀಟ; ‘ಸುಕುಮಾರಚರಿತಂ’ ಕಾವ್ಯದ್ದು ಬೀಸಣಿಗೆಯ ಬೀಸು. ಅಲ್ಲಿ ಸಾಹಿತ್ಯ ರಚನೆಯ ಉದ್ದೇಶವಿಲ್ಲದೆ ರಸಭರಿತ ಕಾವ್ಯ ಸೃಷ್ಟಿಯಾಗಿದೆ; ಇಲ್ಲಿ ಆ ಉದ್ದೇಶ ಅಲ್ಲಲ್ಲಿ ಯಶಸ್ಸು ಪಡೆದಿದೆ.

ಸಮ್ಯಗ್‌ದರ್ಶನದ ಒಂದು ಅಂಗವೇ ‘ಧರ್ಮಪ್ರಭಾವನೆ’ ಅದು ಎಲ್ಲ ಜೈನ ಪುರಾಣ ಕವಿಗಳ ಗುರಿಯೂ ಹೌದು. ಪಂಪನ ಕೈಯಲ್ಲಿ ‘ಅದಿಪುರಾಣ’ ಜೈನಮತ ಸಂಬಂಧೀ ಪರಿಕಲ್ಪನೆಗಳನ್ನೂ, ತತ್ತ್ವಪ್ರತಿಪಾದನೆಯನ್ನೂ ಒಳಗೊಂಡಿದ್ದರೂ ವ್ಯಕ್ತಿತ್ವದ ಬೆಳವಣಿಗೆಗೆ ಕಾರಣವಾದ ಭೋಗ ಮತ್ತು ಆಹಂಕಾರ (ಅಧುನಿಕ ಮನಃಶಾಶ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ ‘libido’ ಮತ್ತು ‘id’)ಗಳ ನಿರಸನವನ್ನು ಸಾಂಕೇತಿಕವಾಗಿ ಚಿತ್ರಿಸುತ್ತದೆ. ವೃಷಭನಾಥನ ಭವಾವಳಿಗಳ ಮೂಲಕ ವ್ಯಕ್ತಿತ್ವ ವಿಕಸನ ಚಿತ್ರಿತವಾಗುತ್ತದೆ. (ಇದೇ ಪ್ರಾಯಶಃ ಜೈನ ಪುರಾಣಗಳ ಭಾವಾವಳಿಗಳು ಸಂಕೇತಿಸುವುದು). ಜೊತೆಗೆ ಭರತ – ಬಾಹುಬಲಿಗಳ ಪ್ರಸಂಗದಲ್ಲಿ ಅಧಿಕಾರ – ಅಹಂಕಾರಗಳ ಅಟ್ಟಹಾಸ ವೈರಾಗ್ಯದ ಮುಂದೆ ಮಣಿಯುವುದು ಚಿತ್ರಿತವಾಗಿದೆ. ‘ಸುಕುಮಾರಚರಿತಂ’ ನಲ್ಲಿ ಕೂಡ ಇಂಥ ಭವಾವಳಿಯ ಚಿತ್ರವಿದೆ. ಘೋರ ಪಾಪ (ಗುರುನಿಂದೆ)ದ ಪರಿಣಾಮವಾದ ಪರಿತಾಪ – ಪ್ರಾಯಶ್ಚಿತ್ತಗಳ ವಿವಿಧ ಘಟ್ಟಗಳನ್ನು ವಾಯುಭೂತಿಯ ಭವಾವಳಿಯು ಚಿತ್ರಿಸುತ್ತದೆ ಎಂದು ಆಧುನಿಕ ಮನಸ್ಸು ವ್ಯಾಖ್ಯಾನಿಸಬಹುದು. ಅದು ಸರಿ. ಆದರೆ ನಿರ್ವಹಣೆ ತಾನೇ ಕವಿಯ ಶಕ್ತಿಯ ನಿಕಷ? ಒಟ್ಟು ಕಥಾ ಸಂವಿಧಾನದಲ್ಲಿಯೇ ತತ್ವ ಆಡಕವಾಗುವುದು ಒಂದು ತೆರ; ಜೈನ ತತ್ವಗಳನ್ನು ಪಠ್ಯ ಪುಸ್ತಕದಲ್ಲಿನಂತೆ ವಿವರಿಸುವುದು ಇನ್ನೊಂದು ತೆರ. ಜಂಬೂದ್ವೀಪದ ವರ್ಣನೆ, ಸೂರ್ಯಮಿತ್ರನಿಗೆ ಸುಧಾರ್ಮಾಚಾರ್ಯರು ಮಾಡುವ ದ್ರವ್ಯಾನುಯೋಗದ ಉಪದೇಶ, ಹೊಲೆಯರ ಹುಡುಗಿಗೆ ಸೂರ್ಯಮಿತ್ರ ಮುನಿಯು ನೀಡುವ ಅಣುವ್ರತಗಳ ಉಪದೇಶ, ಅವನ ತಪಶ್ಚರ್ಯೆಯ ಬಣ್ಣನೆ, ಸಂಸಾರ ಸ್ವರೂಪ ನೀರೂಪಣೆ, ಚಂದ್ರವಾಹನ ರಾಜನಿಗೆ ಮಾಡಿದ ಜಿನತತ್ವಸ್ವರೂಪ, ನಾಗಶ್ರೀಯ ತಪಸ್ಸಿನ ವರ್ಣನೆ, ಯಶೋಧಭದ್ರರ ಚಾತುರ್ಮಾಸ, ತ್ರಿಲೋಕಪ್ರಜ್ಞಪ್ತಿ, ದ್ವಾದಶಾನು ಪ್ರೇಕ್ಷಾಸ್ಮರಣೆ – ಇವುಗಳನ್ನು ಉಲ್ಲೇಖಿಸಿ ಡಿಎಲ್‌ಎನ್‌, “ಇದರಿಂದ ಅವನ ಗ್ರಂಥ ಜಿನಮತಾಚಾರದ ಕೈಪಿಡಿಯಾಗಿಬಿಟ್ಟಿದೆ. ಎಂದು ಹೇಳುವುದು ಸಮಂಜಸವಾಗಿಯೇ ಇದೆ. ಅಂದರೆ ಧರ್ಮ – ಕಾವ್ಯಧರ್ಮಗಳು ಇಲ್ಲಿ ಒಂದರೊಡನೊಂದು ಮಿಳಿತವಾಗದೆ, ಬೇರ್ಪಡಿಸಬಹುದಾದ ರೀತಿಯಲ್ಲಿರುವುದೇ ಕಾವ್ಯದ ಯಶಸ್ಸಿನ ಪರಿಮಿತಿಯನ್ನು ಸೂಚಿಸುತ್ತದೆ.

ಅಲ್ಲದೆ, ಶಾಂತಿನಾಥನ ಕಾವ್ಯ ಪ್ರತಿಭೆ ನಿಯಮೋಲ್ಲಂಘನೆ ಮಾಡುವಂಥದಲ್ಲ. ಹಾಗಾಗಿ ಅಷ್ಟಾದಶವರ್ಣನೆಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಆ ವರ್ಣನೆಗಳು ಬಹು ಕಡಿಮೆ; ಇರಬೇಕಾದುದರಿಂದ ಇದೆ ಎಂಬಂತೆ. ಅದು ಪರಿಮಿತಿಯಿಂದ ಕೂಡಿದೆ ಎಂಬುದು ಅವನ ಎಚ್ಚರವನ್ನೂ ಸೂಚಿಸುತ್ತದೆ. ಅದರ ವರ್ಣನೆಯಲ್ಲಿ ಕವಿಸಮಯಗಳ ಪ್ರಾಚುರ್ಯ ಹೆಚ್ಚು. ಕತೆಯೇ ಮೂಲತಃ ಹೃದಯಂಗಮವಾಗಿದೆ. ವಿವಿಧ ಮನೋಧರ್ಮಗಳ ಪ್ರಕಟಣೆ ಕತೆಗೆ ಮೆರುಗನ್ನು ನೀಡುತ್ತದೆ. ಅಣ್ಣತಮ್ಮಂದಿರಾದರೂ ಅಗ್ನಿಭೂತಿ – ವಾಯುಭೂತಿಯರ ವ್ಯಕ್ತಿತ್ವಗಳಲ್ಲಿನ ವೈದೃಶ್ಯ, ಸೂರ್ಯಮಿತ್ರ ಉಂಗುರವನ್ನು ಕಳೆದುಕೊಂಡು ದೀಕ್ಷೆ ಪಡೆಯುವವರೆಗಿನ ಬೆಳವಣಿಗೆ ಅತ್ಯಪೂರ್ವವವಾದ, ಆದರೆ ಸಹಜ ತಿರುವುಗಳನ್ನು ಪಡೆಯುತ್ತ ಕ್ಷಿಪ್ತವಾಗಿ ಅನಾವರಣಗೊಳ್ಳುವ ಸಹಜತೆ ಬೆರಗೊಳಿಸುವಂಥದು. ನಾಗಶ್ರೀ ಅಣುವ್ರತಗಳನ್ನು ಉಳಿಸಿಕೊಳ್ಳಲು ಕಾರಣವಾಗುವ ದೃಶ್ಯಾವಳಿ, ಸುಕುಮಾರನ ಭೋಗ – ಇವೆಲ್ಲ ಅಪೂರ್ವ ಸನ್ನಿವೇಶಗಳು. ‘ವಡ್ಡಾರಾಧನೆ’ಯಲ್ಲಿ ಇವೆಲ್ಲ ಅತ್ಯಂತ ಸಹಜವಾಗಿ ಅದರ ಗದ್ಯದ ಹರಿವಿನಲ್ಲಿ ತೇಲುತ್ತವೆ. ಆದರೆ ಇವು ಕಾವ್ಯದಲ್ಲಿ ಹಿಗ್ಗಲಿಕೆಗೊಳಗಾಗಿ ಕೆಲವೊಮ್ಮೆ ಬಿಗುವನ್ನೂ ಮೊನಚಕ್ಕೂ ಕಳೆದುಕೊಳ್ಳುತ್ತದೆ.

ಶಾಂತಿನಾಥನ ಶೈಲಿ ತೀರ ಪೆಡಸಾದುದೇನಲ್ಲ. ಅವನ ಗಮನ ಜನಸಾಮಾನ್ಯರ ಕಡೆಗಿದ್ದುದರಿಂದಲೂ, ವಸ್ತುವೇ ಪಾಂಡಿತ್ಯ ಪ್ರದರ್ಶನಕ್ಕೆ ತಗುವುದಲ್ಲವಾದುದರಿಂದಲೂ ಅವನು ತಕ್ಕಮಟ್ಟಿಗೆ ಸರಳ ಶೈಲಿಯ ಮಾರ್ಗವನ್ನು ಅನುಸರಿಸಿದ. ಅವನಿಗೆ ಪ್ರೇರಕವಾಗಿ ‘ವಡ್ಡಾರಾಧನೆ’ ಇದ್ದಿರಲೂ ಸಾಕು. ಎಷ್ಟೋ ಕಡೆಗಳಲ್ಲಿ ಅವನ ವಾಕ್ಯಸರಣಿ, ಅದನ್ನೇ ಬಹುಮಟ್ಟಿಗೆ ಅನುಸರಿಸುತ್ತದೆ, ಪ್ರೊ. ಡಿಎಲ್‌ಎನ್‌ ಇಂತಹ ಹತ್ತಾರು ಉಲ್ಲೇಖಗಳನ್ನು ನೀಡುತ್ತಾರೆ (ನೋಡಿ. ‘ಸುಕುಮಾರಚರಿತಂ’ ಕಾವ್ಯದ ಪ್ರಸ್ತಾವನೆ, ಪು : xxxvii-xxxviii). ಆದರೆ ಅವನ ಮೇಲೆ ಹಿಂದಿನ ಚಂಪೂ ಕವಿಗಳ ಶೈಲಿಯ ಪ್ರಭಾವವೂ ಆಗಿದೆ. ಇದಕ್ಕೆ ಎರಡು ಉತ್ತಮ ಉದಾಹರಣೆಗಳನ್ನು ನೀಡಬಹುದು.

|| ಒಂದು ದಿನಮಾ ನರೇಂದ್ರಂ ಲೀಲೆಯಿಂದೊಡ್ಡೋಲಗಂಗೊಟ್ಟಿರ್ದಶೇಷ ವಿದ್ವಜ್ಜನ ಸಭಾಭ್ಯಂತರ ಮೃಗೇಂದ್ರವಿಷ್ಟರಾರೂಢನಾಗಿರ್ಪುದುಂ ಪರನೃಪಾಸ್ಥಾನದಿಂ ವಿಜಯಜಿಹ್ವನೆಂಬೊನೊರ್ವ ವಾದಿ ಸಕಲಕಲಾವೇದಿ ಸಂವಾದಾರ್ಥಿಯಾಗಿ ಬಂದು ನಿಜ ವಿದ್ಯಾಡಂಬರಮಂ ಮೆಱೆಯಲೆಂದರಮನೆಯ ಬಾಗಿಲೊಳ್ನಿಂದು ಪತ್ತಾಲಂಬನಂ ಮಾಡಿರ್ಪುದುಂ ತದ್ವೃತ್ತಾಂತಮೆಲ್ಲಮನರಸನಱೆದು ಬರಮೇೞ್ವುದುಮ – ಪೂರ್ವಮಪ್ಪ ಶ್ಲೋಕ ಸೂನ್ಯಾಸ ಸಮಾಸಂಸಾರ ವಚನರಚನೆಗಳಿನತಿಬಳನುಮಂ ತತ್ಸಭಾಜನಮುಂ ಮನಂಗೊಳಿಸಿ

|| ಅದೆಂತೆಂದೊಡಖಿಲಕರಿ ಮಕರ ದಂತಘಾತೋಚ್ಚಲಚ್ಛೀಕರೋತ್ತುಂಗ ಭಂಗುರತರತ್ತರಂಗಮಾಲಾಕೀರ್ಣ ಲವಣಾರ್ಣವ ಪರಿವೃತಮುಮೇಕ ಲಕ್ಷ ಪರಿಮಾಣ ಯೋಜನ ಶುಂಭದ್ವಿಷ್ಕಂಭಮುಂ ಸಮವೃತ್ತಾಕಾರಪ್ರಕಾರಮುಂ ಪೂರ್ವಾಪರಾಯತ ಹಿಮವನ್ಮಹಾಹಿಮವನ್ನಿಷಧನೀಲರುಕ್ಮಿ ಶಿಖರಿ ನಾಮಾಭಿ ರಾಮವರ್ಷ ಧರ ಧರಾಧರಾವಭಾಸಿಯುಂ ಭರತ ಹೈಮವತ ಹರಿವರ್ಷ ವಿದೇಹ ರಮ್ಯಕ ಹೈರಣ್ಯ ವತೈರಾವತಾಭಿದಾನ ಕ್ಷೇತ್ರಸಪ್ತಕ ವಿರಾಜಿತಮುಂ ಗಂಗಾ ಸಿಂಧು ರೋಹಿದ್ರೋಹಿ ತಾಸ್ಯಾ ಹರಿದ್ಧರಿಕಾಂತಾ ಸೀತಾಸೀತೋದಾನಾರೀ ನರಕಾಂತಾ ಸುವರ್ಣಮಾಲಾ ರೂಪ್ಯ ಕೂಳಾರಕ್ತಾರಕ್ತೋದಾಪ್ರಭೃತಿ ಚತುರ್ದಶ ಮಹಾನದೀಪ್ರವಾಹಕಮಯಮುಂ ಜಂಬೂ ವೃಕ್ಷಲಾಂಛನ ರಮಣೀಯಮುಮಾಗಿ ನೆಗೞ್ತೆಗಂ ಪೊಗೞ್ತೆಗುಮಗುಂದಲೆಯಾದ ಜಂಬುದ್ವೀಪದ ನಟ್ಟನಡುವೆ

ಅವನ ಕಾವ್ಯ ಮಾರ್ಗದ ಮಾದರಿ ಪಂಪನಾದದರೂ, ಶೈಲಿಯಲ್ಲಿ ಶಾಂತಿನಾಥ ಅನೇಕ ಕಡೆಗಳಲ್ಲಿ ರನ್ನನ್ನು ಅನುಸರಿಸುತ್ತಾನೆ. ಇಂತಹ ಕೆಲವು ನಿದರ್ಶನಗಳನ್ನು ಪ್ರೊ. ಜಿ. ಬ್ರಹ್ಮಪ್ಪನವರು ಎತ್ತಿ ತೋರಿಸಿದ್ದಾರೆ (ನೋಡಿ, ಬೆಂಗಳುರು ವಿಶ್ವವಿದ್ಯಾಲಯದ ‘ಸಮಗ್ರ ಸಾಹಿತ್ಯ ಚರಿತ್ರೆ’, ಸಂಪುಟ ೨, ಪು: ೨೨೨-೨೩).

ಆದರೆ ಶಾಂತಿನಾಥ ದೀರ್ಘೀಕರಣದ ಪ್ರಕ್ರಿಯೆಯಲ್ಲಿ ಕಸವನ್ನು ಹೆಚ್ಚು ತುಂಬಿಲ್ಲ. ಅಲ್ಲದೆ ಕೆಲವೊಮ್ಮೆ ಅವನ ಪ್ರತಿಭೆಯ ಹೊಳಹು ಕಾಣಿಸಿಕೊಂಡು ಮನಸ್ಸಿಗೆ ಉಲ್ಲಾಸವನ್ನು ತರುತ್ತದೆ. ಸುಕುಮಾರಸ್ವಾಮಿಯ ಭೋಗವೈಭವಗಳ ವರ್ಣನೆಯು ಚೆನ್ನಾಗಿದೆ. ಆದರೆ ಇದಕ್ಕೆ ‘ವಡ್ಡಾರಾಧನೆ’ಯೇ ಪ್ರೇರಕ ಮತ್ತು ಅಲ್ಲಿ ಈ ಭಾಗವನ್ನು ತುಂಬ ಹೃದಯಂಗಮವಾಗಿಯೂ ಬೆಕ್ಕಸ ಬೆರಗುಪಡುವಂತೆಯೂ ಚಿತ್ರಿಸಲಾಗಿದೆ. ಇನ್ನುಳಿದ ಕೆಲವು ಕಡೆಗಳಲ್ಲಿಯೂ ಶಾಂತಿನಾಥ ತಕ್ಕಮಟ್ಟಿಗಿನ ಶಕ್ತಿಯನ್ನು ತೋರಿಸುತ್ತಾನೆ. ಅಂಥ ಕೆಲವನ್ನು ಉದಾಹರಿಸೋಣ. ಅಗ್ನಿಭೂತಿ-ವಾಯುಭೂತಿಗಳು ತಮ್ಮ ಬಾಲ್ಯದಲ್ಲಿ ಉಂಡಾಡಿಗಳಾಗಿ ಬೆಳೆದ ಬಗೆಯನ್ನು ಕವಿ ವರ್ಣಿಸುವ ರೀತಿಯದು:

ನಗರಾಭ್ಯಂತರ ದೇವತಾಭವನದೊಳ್ಚೌವಟ್ಟದೊಳ್ಬೀದಿವಿ
ದಿಗಳೊಳ್
ಜೂಜಿನದಿಂಡೆಯೊಳ್ತಗರಕೇಳಿವಿದ್ಯೆಯೊಳ್ದುರ್ಜನೋ
ಪಗತೋದ್ದೇಶದೊಳಂ ಪಣ್ಯವರ್ಮವೀಧಿವ್ರಾತದೊಳಮಾವಗಂ
ತಗುಣಾತ್ಮರ್
ವಿನಯಪ್ರಹೀನರವಿನೀತರ್ನೀತಿಗೆಟ್ಟಾಡುವರ್
ತಂದೆ ಕಡಂಗಿ ಕಲ್ಪಿಸುವ ವಿದ್ಯೆಯನೊಲ್ಲದೆ ತಾಯ್ಮಗುೞ್ದುನಿ
ರ್ವಂದದಿನೆಯ್ದೆ ಬಗ್ಗಿಸುವ ಬಗ್ಗಣೇಗಳ್ಕದೆ ಮಿತ್ರವರ್ಗಮೇ
ನೆಂದೊಡಮೆಂದುದಂ ನೆಗೞದೆ ಉದ್ಧತಿಯಿಂದಮವಂದಿರುರ್ಕ್ಕಿದ
ಕ್ಕುಂದಲೆವಾಯ್ವರಂತುಟೆ ಬಹುವ್ಯಸನಾರ್ತರಾನಾರೋ ಬಾರಿಪರ್
(೨. ೭-೮)

ಈ ವರ್ಣನೆಯಲ್ಲಿ ಅತಿಶಯವಾದದ್ದೇನೂ ಇಲ್ಲ. ಅದರ ಸಹಜತೆಯಲ್ಲಿಯೇ ಅದರ ಚೆಲುವಿಕೆಯಿದೆ. ಉಡಾಳರ ನಡವಳಿಕೆ ಎಲ್ಲ ಕಾಲಕ್ಕೂ ಇಂಥದೇ ಅಲ್ಲವೇ?

ಹುಟ್ಟು ಕುರುಡಿ ಮಾದಿಗರ ಹುಡುಗಿಯ ವರ್ತನೆಯನ್ನು ಈ ಕವಿ ಸಹಜವಾಗಿ ಚಿತ್ರಿಸುತ್ತಾನೆ: ಜಡೆಗಟ್ಟಿದ ತಲೆಗೂದಲು, ತಲೆಯ ಮೇಲಿಂದ ಬಾಯಿಗೆ ಇಳಿದು ಬರುವ ಹೇನುಗಳು, ದೇಹವು ಬಾವಲಿಯ ದೇಹದಂತೆ ಹೊಲಸು ವಾಸನೆಯಿಂದ ಕೂಡಿರುವುದು, ನೆಲದ ಮೇಲೆ ಚೆಲ್ಲಿದ ಅಗುಳುಗಳನ್ನೂ, ನೇರಳೆ ಹಣ್ಣುಗಳನ್ನೂ ತಡಕಾಡಿ ಆರಿಸಿಕೊಂಡು ತಿನ್ನುವ ಪರಿ ಇವೆಲ್ಲ – ಸನ್ನಿವೇಶಕ್ಕೆ ತಕ್ಕಂತೆ ನಿರೂಪಣೆಗೊಂಡಿವೆ. ಇಂಥದನ್ನು ಕಂಡಾಗ ಎಂಥವನಿಗೂ ಎದೆ ಧಸಕ್ಕೆಂದು ಬದುಕಿನ ನಿಗೂಢದ ಬಗ್ಗೆ ಮನಸ್ಸು ಯೋಚಿಸಲಾರಂಭಿಸುತ್ತದೆ. ಈಗಾಗಲೇ ಪಕ್ವಗೊಂಡ ಮನಸ್ಸಿನ ಅಗ್ನಿಭೂತಿ ಮುನಿ ಆ ಹುಡುಗಿಯನ್ನು ಕಂಡಾಗ ಅವನಿಗನ್ನಿಸುವ ಭಾವನೆಗಳಿವು:

ಇದೇಂ ಬಹುವಿಚಿತ್ರಮೋ ಭವವಿಕಲ್ಪಂ ವೈಚಿತ್ರ್ಯಮ್ಇಂ
ತಿದೇನಘಟನಮಾನಮೊ ವಿಕೃತಘೋರಸಂಸಾರಮ್
ಇಂ
ತಿದೇಂ ವೃಜಿನಬಂಧಮೋ ಕುಸೃತಿಬಂಧಸಂಬಂಧಮೆಂ
ದದೇಂ ತಳೆದನೊ ಮುನಿಪ್ರವರನಾಗಳುದ್ವೇಗಮಂ (೪. ೬೧)

ಮುನಿಯ ಉದ್ವೇಗದ ತೀವ್ರತೆಯನ್ನು ಅದನ್ನು ಹೇಳುವ ಮುಂಚಿನ ಉದ್ಗಾರಗಳ ಮೂಲಕ ಚಿತ್ರಿಸುವುದು, ಅಪರೂಪವಾದರೂ ಶಾಂತಿನಾಥನಲ್ಲಿದ್ದ, ಕುಶಲತೆಗೆ ಪ್ರತೀಕವಾಗಿದೆ.

‘ಸುಕುಮಾರಚರಿತಂ’ ಕಾವ್ಯದಲ್ಲಿ ಒಂದೆಡೆ ಬರುವ ಜಿನಪ್ರಾರ್ಥನೆ ಎಷ್ಟು ಹೃದಯಂಗಮವಾಗಿದೆ ನೋಡಿ:

ಕಿವಿಗಳ್ನಿನ್ನ ಮೃದೂಕ್ತಿಯಂ ಬಯಸಿ ಕೇಳುತ್ತಿರ್ಕೆ ಕಣ್ಗಳ್ಮಹೋ
ತ್ಸವದಿಂ ನಿನ್ನೆ ನೋಡುತ್ತಿರ್ಕೆ ಸಲೆ ಕೈಗಳ್
ನಿನ್ನ ಪಾದಾರವಿಂ
ದವನ್
ಓತು ಅರ್ಚಿಸುತ್ತಿರ್ಕೆ ಸಂದ ಮನಮೆಂದುಂ ನಿನ್ನ ದಿವ್ಯಸ್ವರೂ
ಪವನಾರಾಧಿಸುತ್ತಿರ್ಕೆ ವಿಶ್ರುತವಿನೇಯಸ್ವಾರ್ಥಚಿಂತಾಮಣೀ (೮. ೬೨)

ಸಹಜತೆಯಲ್ಲಿ ಸರಳತೆಯಿರುತ್ತದೆ; ಸರಳತೆ ಸಹಜತೆಯ ನಿಜಾಭಿವ್ಯಕ್ತಿ. ಇಲ್ಲಿನ ಪ್ರಾರ್ಥನೆ ಈ ಸಹಜತೆಯಿಂದಾಗಿಯೇ ಹೃದ್ಯವಾಗಿದೆ. ಚಮತ್ಕಾರವು ಸೋಲುವೆಡೆ ಸರಳತೆ ಗೆಲ್ಲುತ್ತದೆ; ಅದು ಭಕ್ತಿಯ ನಿರ್ಭಯತೆಯಲ್ಲಿ ಇನ್ನೂ ಮಿಗಿಲು, ಶಾಂತಿನಾಥ ಇಲ್ಲಿ ಮೈಮರೆತು ಹಾಡಿದ್ದಾನೆ.

ಒಟ್ಟಿನಲ್ಲಿ, ‘ಸುಕುಮಾರಚರಿತಂ’ನ ಶಾಂತಿನಾಥ ಪಂಪನ ಆದರ್ಶವಿಟ್ಟುಕೊಂಡು ಹೊರಟರೂ ಅವನ ಯಶಸ್ಸನ್ನು ಪಡೆದವನಲ್ಲ. ಎಷ್ಟೋ ಜನರ ಹಾಗೆ ಮಹಾಮಂಡಲೇಶ್ವರನ ಆಪ್ತನಾಗಿ ವೈಭವ-ಅಧಿಕಾರಗಳಲ್ಲಿ ಮೈಮರೆಯದೆ ಜನಹಿತವನ್ನು ಗೈಯುವ ಕಾವ್ಯರಚನೆಯ ಕಡೆ ಗಮನ ಕೊಟ್ಟದ್ದು ಅವನ ಸದಭಿರುಚಿಯನ್ನು ತೋರಿಸುತ್ತದೆ; ಒಂದು ಒಳ್ಳೆಯ ಕಥಾಚೌಕಟ್ಟನ್ನು ತನ್ನ ಕಾವ್ಯದ ವಸ್ತುವನ್ನಾಗಿ ಆಯ್ದುಕೊಂಡದ್ದು ಅವನ ಔಚಿತ್ಯಜ್ಞಾನವನ್ನು ಸೂಚಿಸುತ್ತದೆ; ತಕ್ಕಮಟ್ಟಿಗೆ ತನ್ನ ಪ್ರಯತ್ನದಲ್ಲಿ ಯಶಸ್ಸು ಪಡೆದದ್ದು ಅವನ ಶಕ್ತಿಯನ್ನು ತೋರಿಸುತ್ತದೆ. ತೀರ್ಥಂಕರೇತರ ಕತೆಯನ್ನು ಚಂಪೂ ಕಾವ್ಯವಾಗಿ ರಚಿಸುವ ಹೊಸ ಮಾರ್ಗವನ್ನು ಅನುಸರಿಸಿದ್ದು ಅವನ ಹೊಸತನದ, ಸ್ವೋಪಜ್ಞತೆಯ ಪ್ರತೀಕವಾಗಿದೆ. ಹಾಗಾಗಿ ಈ ಕಾವ್ಯಕ್ಕೆ ಚಂಪೂ ಪರಂಪರೆಯಲ್ಲಿ ಒಂದು ಗಣನೀಯ ಸ್ಥಾನವಿದೆ.

ಶಾಂತಿನಾಥ ಕಾವ್ಯದ ಇತರ ವೈಶಿಷ್ಟ್ಯಗಳು

ನಮ್ಮ ಹಿಂದಿನ ಎಲ್ಲ ಕವಿಗಳಂತೆಯೇ ಶಾಂತಿನಾಥನೂ ಉಭಯಕವಿ, ಎಂದರೆ ಎರಡು ಭಾಷೆಗಳಲ್ಲಿ – ಸಂಸ್ಕೃತ ಮತ್ತು ಕನ್ನಡ -ಕವಿತ್ವ ಮಾಡಬಲ್ಲ ಶಕ್ತಿಯಿದ್ದವನು. ಶಕ್ತಿಯಿದ್ದೂ ಇವರಾರೂ ಸಂಸ್ಕೃತದಲ್ಲಿ ಬರೆಯಲು ಹೋಗದಿರಲು ಕಾರಣ, ತಮ್ಮ ಕಾವ್ಯವು ಜನಸಾಮಾನ್ಯರನ್ನು ತಲುಪಬೇಕಾದರೆ ಆಡು ನುಡಿಯಾದ ಕನ್ನಡದಲ್ಲಿ ಬರೆಯಬೇಕೆಂಬ ಪ್ರಜ್ಞೆ. ಶಾಂತಿನಾಥನದು ಹಿಂದೆಯೇ ಸೂಚಿಸಿದಂತೆ, ಧರ್ಮಪ್ರಭಾವನೆಯ ಉದ್ದೇಶ, ಜೈನತತ್ವಗಳ ಪ್ರಚಾರ. ಹಾಗಾಗಿ ಸಹಜವಾಗಿಯೇ ಅವನ ಅಭಿವ್ಯಕ್ತಿ ಮಾಧ್ಯಮದ ಆಯ್ಕೆ ಕನ್ನಡವಾಯಿತು. ಅದಕ್ಕೆ ತಕ್ಕ ಪರಿಕರ ಅವನಲ್ಲಿತ್ತು, ಎಂದರೆ ಆ ಭಾಷೆಯ ಮೇಲಿನ ಪ್ರಭುತ್ವ ಮತ್ತು ವಸ್ತು ನಿರ್ವಹಣೆಯ ಕೌಶಲ. ಹಿಂದಿನ ಕವಿಗಳ ಮಾದರಿ ಅವನ ಕಣ್ಣ ಮುಂದಿದ್ದು ಅದನ್ನೇ ಅವನು ಅನುಸರಿಸಿದ. ಅಷ್ಟಾದಶ ವರ್ಣನೆಗಳು, ಆಶ್ವಾಸ ವಿಂಗಡಣೆ, ವೈವಿಧ್ಯಕ್ಕೆ ಮಧ್ಯೆ ಮಧ್ಯೆ ಅಕ್ಷರೇತರ ಛಂದಸ್ಸಿನ ರಚನೆಗಳು ಇತ್ಯಾದಿ. ಹಾಗಾಗಿ ‘ಸುಕುಮಾರಚರಿತಂ’ ಕಾವ್ಯದಲ್ಲಿ ನಾನಾ ಬಗೆಯ ಅಕ್ಷರವೃತ್ತಗಳು, ಕಂದ ಮತ್ತು ಗದ್ಯ ಭಾಗಗಳಲ್ಲದೆ, ತ್ರಿಪದಿ, ರಗಳೆ, ಷಟ್ಪದಿ, ಪಿರಿಯಕ್ಕರ ಮುಂತಾದ ರಚನೆಗಳೂ ಸೇರಿಕೊಂಡಿವೆ. ಅವನು ಬಳಸಿರುವ ಎರಡು ತ್ರಿಪದಿಗಳು ಅಂಶಗಣಘಟಿತವಾದವು. ಹಾಗೆಯೇ ಎಂಟು ಕಡೆ ಬಳಸಿರುವ ಪಿರಿಯಕ್ಕರಗಳೂ ಲಕ್ಷಣ ಬದ್ಧವಾಗಿವೆ, ನಾಲ್ಕು ಕಡೆ ರಗಳೆಗಳ ಬಳಕೆಯಿದೆ. ಈ ರಗಳೆಗಳಲ್ಲಿ ಎರಡು ಕಡೆ ಬಳಸಿರುವುದನ್ನು ರಗಳೆಯೆಂದೂ, ಒಂದು ಕಡೆಯದನ್ನು ಪದ್ಧಳಿಯೆಂದೂ, ಮತ್ತೊಂದನ್ನು ಆದ್ಯಂತಪ್ರಾಸರಗಳೆಯೆಂದೂ ಕರೆದಿದೆ.

ಲಲಿತೆಯ ಶ್ರೀಪದತಳಗಳಶೋಕೆಯ
ತಳಿರಂ ಪೋಲ್ವುವು ಭಾವಿಪೊಡಾಕೆಯ
ಚರಣಾಂಗುಳಿಗಳಮರ್ಕ್ಕೆಯಿನಪ್ಪಿದ
ಸುರದಂಪತಿಗಳಪೋಲ್ವೆಯನೊಪ್ಪಿದ
ವಿಳಿಲೆಯ ಪದಯುಗನಖದಾಕೃತಿಗಳ್

ಕೂರ್ಮೋನ್ನತಮೆನಿಸಿರ್ದ ಪದಂಗಳ್
ನರ್ಮಮನಾದರಿಸಿಸಿದವು ಮಡಂಗಳ್
ಪರಡು ನಿಗುಢಂ ಲಲಿತ ಲತಾಂಗಿಯ
ವರ ಜಂಘಾಯುಗಲಂಗಳ ಭಂಗಿಯ
ನಱೆಯೆಂ ಪೊಗೞಲ್
ನೆಕ್ಕೊರವಟ್ಟೆಯ
ತೆಱನೇನಲ್ಲದೆ ಬಣ್ಣಿಪ ಬಟ್ಟೆಯ
ನಂಭೋಜಾನನೆಯೂರು ಯುಗಂಗಲ್

ರಂಭಾಸ್ತಂಬ ಯುಗ ಪ್ರತಿಮಂಗಳ್
ವನಿತೆಯ ಪುಲಿನ ನಿತಂಬೋದ್ದೇಶಂ
ಮನಸಿಜಮದಗಜ ಕುಂಭನಿಕಾಶಂ
ಲಾವಣ್ಯಾಂಬುರಸದ್ರವರೂಪಂ
ಭಾವಿಪೊಡಕೆಯ ನಾಭೀಕೂಪಂ
ನೋಡೆ ಕುಮಾರಿಯ ಬಳ್ಕುವ ಮಧ್ಯಂ
ನಾಡೆ ಮನೋಜ್ಞಂ ಪೊಗೞಲಸಾಧ್ಯಂ

ಮತ್ತು ಪದ್ದಳಿ ಎಂದು ಕೆರೆದಿರುವ ಈ ರಗಳೆಯನ್ನು ಗಮನಿಸಬಹುದು.

ಪದ್ದಳಿ || ಜಯ ಜಯ ಭುವನತ್ರಯಪರಮದೇವ |
ದೇವೇಂದ್ರಾಭ್ಯರ್ಚಿತಚರಣಕಮಲ ||
ಕಮಲಾವಿರಹಿತನಿರುಪಮದೇಹ |
ದೇಹಾಶ್ರೀತಶುಭಲಕ್ಷಣವಿನೂತ ||
ನೂತನಸಂಗತಕೈವಲ್ಯಬೋಧ |
ಬೋಧಪ್ರಕಾಶವಸ್ತುಸ್ವರೂಪ ||
ರೂಪಾತಿಶಯಾನಿತವಿತತವಿಭವ |
ಬವನಿವಹಪಟಳನಿರ್ಮುಕ್ತಜೀವ ||
ಜೀವಾಜೀವಾದಿಪದಾರ್ಥನಿಳಯ |
ಲಯವರ್ಜಿತಗುಣಮಣಿಗಣ ವಿಭೂಷ ||
ಭೂಷಾದಿರಹಿತಸೌಂದರ್ಯಸಹಿತ |
ವಿನಿಹಿತವಿಶ್ರುತಪರಮಸಮಯ ||
ಮಯಜನ್ಮಜರಾಮಯ ಭಯವಿನಾಶ |
ನಾಶೀಕೃತವಿಷಯಕಷಾಯನಿಕರ ||
ಕರಣಾಪಗಮಧ್ಯಾನೋಪಯೋಗ |
ಯೋಗಿಶ್ವರವಂದಿತಪಾದಪೀಠ |
ಪೀಠಪ್ರವಿರಾಜಿತ ಗಗನಗಮನ |

ಇದೇನು ಕವಿಯೇ ಕರೆದಿರುವುದೋ, ಪ್ರತಿಕಾರರು ಹೇಳಿರುವುದೋ ಸ್ಪಷ್ಟವಾಗುವುದಿಲ್ಲ. ಸಿಕ್ಕಿರುವ ಎರಡೂ ಪ್ರತಿಗಳಲ್ಲಿ ಹೀಗಿರುವುದರಿಂದ ಪ್ರಾಯಶಃ ಕವಿಯೇ ಹಾಗೆಂದು ಕರೆದಿರಬಹುದು.

ಮಿಕ್ಕ ವಿಷಯಗಳು ಹಾಗಿರಲಿ, ಈ ಕಾವ್ಯದಲ್ಲಿ ಬಳಕೆಗೊಂಡಿರುವ ಷಟ್ಟದಿಯ ಬಗ್ಗೆ ಒಂದು ವಿಶೇಶವಿದೆ. ಅದೆಂದರೆ ಇಲ್ಲಿರುವ ಒಂದೇ ಒಂದು ಷಟ್ಟದಿಯ ಪದ್ಯ ಸಂಪೂರ್ಣವಾಗಿ ಅಂಶಗಣಘಟಿತವಾಗಿದ್ದು ಅಪರೂಪ ಉದಾಹರಣೆಯಾಗಿದೆ. ರಾಘವಾಂಕನ ನಂತರದ ಕಾಲದಲ್ಲಿ ಅಂಶಷಟ್ಟದಿಯ ಬಳಕೆ ನಿಂತು ನಾನಾ ಬಗೆಯ ಮಾತ್ರಾಷಟ್ಟದಿಗಳಷ್ಟೇ ಬಳಕೆಗೊಂಡವು. ಆದರೆ ಇಲ್ಲಿನ ಈ ಪದ್ಯವು ನಾಗರ್ಮನ ‘ಛಂದೋಂಬುಧಿ’ ಯ ಲಕ್ಷಣಪದ್ಯದಲ್ಲಿ ಹೇಳಿರುವ ಲಕ್ಷಣಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ಇದನ್ನು ಪ್ರೊ. ತೀನಂಶ್ರೀ ಅವರು ‘ಅಪೂರ್ವ ಷಟ್ಟದಿ’ ಎಂದು ಕರೆದರು; ಸಾಮಾನ್ಯವಾಗಿ ವಿದ್ವಾಂಸರು ಸಂಪೂರ್ಣ ಅಂಶಗಣಘಟತವಾದುದನ್ನು ‘ಷಟ್ಟದ’ ಎಂದು ಕರೆಯುತ್ತಾರೆ, ಮಿಕ್ಕ ಷಟ್ಟದಿಗಳಿಗಿಂತ ಇದು ಭಿನ್ನ ಎಂದು ಸೂಚಿಸಲು. ಇದು ಎಲ್ಲ ಷಟ್ಟದಿಪ್ರಭೇಧಗಳಿಗೆ ಮೂಲವೆಂಬುದು ಸಾಮಾನ್ಯ ತಿಳಿವಳಿಕೆ ಇಂತಹ ಸಂಪೂರ್ಣ ಲಕ್ಷಣಬದ್ಧವಾದ ಅಂಶಷಟ್ಟದಿಗಳು ಸಿಕ್ಕುವುದು ಅಪರೂಪ; ಇಡೀ ಕನ್ನಡ ಸಾಹಿತ್ಯದಲ್ಲಿ ಇಂತಹವು ಎರಡೇ, ಒಂದು ಶಾಸನದಲ್ಲಿ ಬರುವುದು, ಮತ್ತೊಂದು ‘ಸುಕುಮಾರಚರಿತಂ’ ಕಾವ್ಯದ್ದು (ನಾಗರ್ಮನ ಲಕ್ಷಣ ಪದ್ಯವೂ ಮಾತ್ರಾಗಣಘಟಿತವಾದಂತೆಯೂ ಕಾಣಿಸುತ್ತದೆ!). ಹಿಗಾಗಿ ಶಂತಿನಾಥ ಈ ಷಟ್ಟದಕ್ಕೆ ಕನ್ನಡ ಛಂದಸ್ಸಿನ ಇತಿಹಾಸದಲ್ಲಿ ವಿಶೇಷ ಮಹತ್ವವಿದೆ. ಆ ಷಟ್ಟದ ಹೀಗಿದೆ:

ಅದು ಪರಮಾಸ್ಪದ
ಮದು ಪುಣ್ಯಸಂಪದ
ಮದು ಮಹಾಭ್ಯುದಯ ವಿಲಾಸಾವಾಸಂ
ಅದು ದಿವ್ಯಮದು ಸೇಬ್ಯ
ಮದು ಸೌಮ್ಯಮದು ರಮ್ಯ
ಮದು ಸುಖಾಧಾರ ಸಂಸಾರಸಾರಂ (೧೨.೫೦)

ಶಾಂತಿನಾಥ ಹಳಗನ್ನಡವನ್ನು ಬಳಸಿದನು. ಅವನ ಹೊತ್ತಿಗಾಗಲೇ ಕೆಲವು ಶಬ್ಧಗಳು ಹಿಂದೆ ಸರಿದಿದ್ದವು; ಅಂದರೆ ಅಂತಃ ಶಬ್ಧಗಳನ್ನು ನಾವು ಇಂತಹ ಕಾವುಗಳಲ್ಲಿ ಕಾಣಲಾರವು. ಅದರೆ ಈತ ಅಂತಹ ಕೆಲವನ್ನು ಬಳಸಿ ತನ್ನ ಶಬ್ದಕೋಶವನ್ನು ಹಿಗ್ಗಲಿಸಿಕೊಂಡಿದ್ದಾನೆ. ‘ನೆಕ್ಕೊರವಟ್ಟಿ’, ‘ಎಕ್ಕಸಿಕ’, ‘ಕೊಡವಿ’, ‘ ಮಾಸರ’, ‘ಪುಡುಕುಣರ್‌’, ಮುಂತಾದವನ್ನು ಉಲ್ಲೇಖಿಸಬಹುದು. ಹಾಗಾಗಿ ಈ ಕವಿಯ ಕಾವ್ಯವನ್ನು ನಾವು ಕನ್ನಡ ಶಬ್ಧ ಚರಿತ್ರೆಯ ದೃಷ್ಟಿಯಿಂದಲೂ ಅಭ್ಯಸಿಸಲು ಅವಕಾಶವಿದೆ.

‘ಕಬ್ಬಿಗರ ಕಾವಂ’

ಸಂಸ್ಕೃತವು ಕನ್ನಡದ ಮೇಲೆ ಸವಾರಿ ಮಾಡಲು ಹೊರಟಾಗ ಅದನ್ನು ಪ್ರತಿಭಟಿಸಿದ ಅನೇಕ ಕವಿಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾಣಸಿಗುತ್ತಾರೆ. ಅವರಲ್ಲಿ ‘ಧರ್ಮಾಮೃತ’ದ ಕರ್ತೃ ನಯಸೇನ ಮೊದಲನೆಯವನು. ಅವನಿಗೆ ಸಂಸ್ಕೃತದ ಬಗ್ಗೆ ವಿರೋಧವಿಲ್ಲ; ಕನ್ನಡ ಕಾವ್ಯದಲ್ಲಿ ಅನವಶ್ಯಕವಾಗಿ ಸಂಸ್ಕೃತ ಪದಗಳನ್ನು ಸೇರಿಸುವುದಕ್ಕಷ್ಟೇ ಅವನ ಆಕ್ಷೇಪಣೆ. ಅಲ್ಲದೆ ಕನ್ನಡದಲ್ಲಿ ಚಿಂತಿಸಿ ಸಂಸ್ಕೃತವನ್ನು ಬಳಸುವ ಎಡಬಿಡಂಗಿತನವನ್ನು ಅವನು ವಿಡಂಬಿಸುತ್ತಾನೆ. ತನ್ನ ಕಾವ್ಯದಲ್ಲಿ ಅವನು ಸಾಕಷ್ಟು ಸಂಸ್ಕೃತ ಶಬ್ದಗಳನ್ನು ಬಳಸಿದ; ಆದರೆ ಎಷ್ಟು ಹಿತವೋ ಅಷ್ಟು; ಅಥವಾ ಕನ್ನಡದಲ್ಲಿ ಸಂಪೂರ್ಣವಾಗಿ ಮಿಳಿತಗೊಂಡವನ್ನು ಮಾತ್ರ. ಹಾಗಾಗಿ ಅಂಥವು ಕನ್ನಡದವೇ ಶಬ್ದಗಳಾಗಿಬಿಟ್ಟಿರುವುದರಿಂದ ಅಲ್ಲೇನೂ ವೈಚಿತ್ರ್ಯ ಕಾಣಿಸುವುದಿಲ್ಲ. ಅನವಶ್ಯಕವಾಗಿ ಕನ್ನಡದಲ್ಲಿ ಸಂಸ್ಕೃತವನ್ನು ಸೇರಿಸುವುದಕ್ಕಷ್ಟೇ ಅವನ ವಿರೋಧ; ಹೀಗೆ ಮಾಡುವುದೆಂದರೆ ತುಪ್ಪದ ಜೊತೆ ಎಣ್ಣೆಯನ್ನು ಬೆರಸಿದ ಹಾಗೆ ಎಂಬುದು ಅವನ ಅಭಿಪ್ರಾಯ.

ಆಂಡಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದ ಮೇಲಿನ ಸಂಸ್ಕೃತದ ಸವಾರಿಯನ್ನು ಪ್ರತಿಭಟಿಸುತ್ತಾನೆ. “ಸೊಗಯಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇೞಲಾೞರ್ ಇನಿತುಂ ಸಲೆ ಮುನ್ನಿನ ಪೆಂಪನಾಳ್ದ ಕಬ್ಬಿಗರ್” ಎಂಬ ಭಾವನೆಯನ್ನು ಹೋಗಲಾಡಿಸಿ, “ಅಚ್ಚಗನ್ನಡಂ ಬಿಗಿವೊಂದಿರೆ ಕಬ್ಬಿಗರ ಕಾವನೊಲವಿಂದೊರೆದಂ” ಎಂದು ಹೇಳುವಲ್ಲಿ ಅವನ ನಿಲವು ಸ್ಪಷ್ಟವಾಗುತ್ತದೆ. ತನ್ನ ಕಾವ್ಯದಲ್ಲಿ ನೇರವಾಗಿ ಸಂಸ್ಕೃತ ಶಬ್ದಗಳನ್ನು ಬಳಸುವುದಿಲ್ಲವೆಂಬುದು ಅವನ ಪ್ರತಿಜ್ಞೆ. ಆದರೆ ತದ್ಭವಗಳ ಬಳಕೆಗೆ ಅವನ ವಿರೋಧವಿಲ್ಲ; ಅವುಗಳೂ ಕನ್ನಡ ಶಬ್ದಗಳೆ ಎಂಬುದು ಅವನ ಭಾವನೆ. ತನ್ನ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಆಂಡಯ್ಯ ಹಲವಾರು ಹೊಸ ಶಬ್ದಗಳನ್ನು ಸೃಷ್ಟಿಸಿಕೊಳ್ಳುತ್ತಾನೆ, ತದ್ಭವಗಳನ್ನು ರೂಪಿಸಿಕೊಳ್ಳುತ್ತಾನೆ. ಇವನ ಮಾರ್ಗವನ್ನು ಮುಂದಿನ ಯಾರೂ ಅನುಸರಿಸದಿರುವುದು ಅಚ್ಚರಿಯ ವಿಷಯವೇನಲ್ಲ. ಏಕೆಂದರೆ ಅವನದು ಕೃತಕ ಮಾರ್ಗವಾಯಿತು. ಅನವಶ್ಯಕವಾಗಿ ಸಂಸ್ಕೃತವನ್ನು ಬಳಸುವುದಿಲ್ಲ ಎಂಬುದು ಸರಿಯಾದ ನಿಲುವೇ; ಆದರೆ ಸಂಸ್ಕೃತ ಶಬ್ದಗಳನ್ನೇ ಬಳಸುವುದಿಲ್ಲ ಎಂಬುದು ಅಸಹಜ. ಏಕೆಂದರೆ ಬೇರೆ ಭಾಷೆಯ ಶಬ್ದಗಳು ಬೆರೆತುಕೊಂಡು ಜನಬಳಕೆಗೆ ಬಂದರೆ ಅವು ಕನ್ನಡದವೇ ಆಗಿಬಿಡುತ್ತದೆ. ಕನ್ನಡಿಗರಿಗೆ ಅರ್ಥವಾಗುವುದೆಲ್ಲ ಕನ್ನಡದವೇ, ಹೀಗಾಗಿ ಆಂಡಯ್ಯನ ಕನ್ನಡ ಪ್ರೇಮ ಅನುಕರಣೀಯವಾದರೂ, ಅವನ ಕನ್ನಡ ಬಳಕೆಯ ಮಾರ್ಗ ಅನುಸರಣಿಯವಾಗಲಿಲ್ಲ.

ಆಂಡಯ್ಯನ ಏಕೈಕ ಕೃತಿ ಇನ್ನೂರ ಎಪ್ಪತ್ತೆರಡು ಪದ್ಯಗಳ ‘ಕಬ್ಬಿಗರ ಕಾವಂ’. ಇದರಲ್ಲಿ ಇವನು ತನ್ನ ಸ್ವಂತ ವಿಷಯವನ್ನು ಹೆಚ್ಚಿಗೆ ಹೇಳಿಕೊಂಡಿಲ್ಲ; ಆಶ್ರಯದಾತ, ತಾನಿದ್ದ ಮತ್ತು ಕಾವ್ಯರಚಿಸಿದ ಕಾಲ ಇವುಗಳ ಬಗ್ಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. ಅವನ ಅಜ್ಜ ‘ಲೆಕ್ಕಿಗರ ಪಿರಿಯ’ ನಾಗಿದ್ದ ಆಂಡಯ್ಯ; ಆತ ಪರಮ ಜಿನಭಕ್ತ; ಅವನಿಗೆ ಸಾಂತ, ಗುಮ್ಮಟ ಮತ್ತು ವೈಜಣ ಎಂಬ ಮೂವರು ಮಕ್ಕಳು; ಇವರಲ್ಲಿ ಹಿರಿಯನಾದ ಸಾಂತ ಮತ್ತವನ ಹೆಂಡತಿ ಒಲ್ಲವ್ವೆಯರ ಮಗನೇ ತಾನು ಎಂದು ಕವಿ ಹೇಳಿಕೊಳ್ಳುತ್ತಾನೆ. ಹಿರಿಯರಂತೆ ಈತನೂ ಪರಮ ಜಿನಭಕ್ತ. ಕವಿಯ ಹೆಸರು ಅಪರೂಪದ್ದು. ಇದರ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಪ್ರಾಕೃತದ ‘ಆಂಡ’ ಎಂಬ ಶಬ್ಧದ ಜೊತೆ ‘ಅಯ್ಯ’ ಎಂಬ ಸಂಬಂಧಸೂಚಕ ಪದ ಸೇರಿ ಆಂಡಯ್ಯ ಎಂದಾಗಿರಬಹುದು. ‘ಆಂಡ’ ಎಂದರೆ ಶಿವ, ಕಾಮದೇವ ಎಂಬ ಅರ್ಥಗಳಿವೆಯಂತೆ. ಆದ್ದರಿಂದ ಆಂಡಯ್ಯ ಇವನ ಹೆಸರು ಎಂಬುದು ಪ್ರಾಯಶಃ ಒಪ್ಪಬಹುದಾದ ಆಭಿಪ್ರಾಯ.

ಆದರೆ ಆಂಡಯ್ಯನು “ಕಣ್ಣಮಯ್ಯನ (ಕರ್ಣಪಾರ್ಯ) ಕಡುಜಾಣ್‌, ರನ್ನನ ಮೆಯ್ಸಿರಿ, ಗಜಗನ ಬಿನ್ನಣಂ, ಅಗ್ಗಳನ ಕಾಣ್ಕೆ, ಜನ್ನಿಗನ (ಜನ್ನ) ಜಸಂ” ಇವುಗಳನ್ನು ತನ್ನ ಆದರ್ಶವಾಗಿ ಇರಿಸಿಕೊಂಡಿದ್ದಾರೆ. ಜೊತೆಗೆ ಇವನು ಹರಿಹರನ ‘ಗಿರಿಜಾ ಕಲ್ಯಾಣ’ ವನ್ನು ನೋಡಿರುವ ಸಾಧ್ಯತೆಯಿದೆಯೆಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ. ಇವನು ಪ್ರಾಯಶಃ ಸುಮಾರು ಕ್ರಿ. ಶ. ೧೨೭೧ರ ಹೊತ್ತಿಗೆ ತನ್ನ ಕಾವ್ಯವನ್ನು ರಚಿಸಬೇಕೆಂದು ವಿದ್ವಾಂಸರು ಭಾವಿಸುತ್ತಾರೆ. ಆಂಡಯ್ಯನು ಪ್ರಾಯಶಃ ಚಾಲುಕ್ಯರ ಮಹಾಮಂಡಲೇಶ್ವರನಾಗಿದ್ದ ಕದಂಬ ಕಾಮದೇವ (ಕ್ರಿ. ಶ. ೧೧೮೦-೧೨೧೭)ನ ಆಶ್ರಯದಲ್ಲಿರಬೇಕೆಂದು ಮುಳಿಯ ತಿಮ್ಮಪ್ಪಯ್ಯನವರು ವಾದಿಸುತ್ತಾರೆ. ಕಾಮ – ಕಾಮದೇವರ ಸಮೀಕರಣ ಈ ಕಾವ್ಯದಲ್ಲಿ ನಡೆದಿದೆ ಎಂಬುದು ಅವರೊಡನೆ ಇತರ ಅನೇಕ ವಿದ್ವಾಂಸರ ಅಭಿಪ್ರಾಯ. ಕಾಮನ ಗೆಲವಿನ ಬಣ್ಣನೆಯ ನೆಲದಲ್ಲಿ ತನ್ನ ಆಶ್ರಯದಾತನ ವೀರಪರಾಕ್ರಮಗಳ ಬಣ್ಣನೆಯಿದೆ ಎಂಬುದು ತಿಳಿವಳಿಕೆ. ಈ ಕಾವ್ಯಕ್ಕೆ ಕವಿ ಕೊಟ್ಟ ಮೂಲ ಹೆಸರು ‘ಕಾಮನ ಗೆಲ್ಲ’ ಎಂಬುದು. ಅದು ಸಂಸ್ಕೃತೀಕರಣಗೊಂಡು ‘ಮದನ ವಿಜಯ’ ಎಂಬ ಹೆಸರನ್ನು ಪಡೆಯಿತೆಂದೂ, ಹೇಗೆಯೋ ಈ ಕಾವ್ಯಕ್ಕೆ ‘ಸೊಬಗಿನ ಸುಗ್ಗಿ’ ಎಂಬ ಹೆಸರೂ ಉಂಟಾಗಿ, ಪ್ರಾಯಶಃ ಪ್ರತಿಕಾರರ ಕೈತಪ್ಪಿನಿಂದಾಗಿ ‘ಕಬ್ಬಿಗರ ಕಾವಂ’ ಎಂಬ ಹೆಸರು ಬಂದಿದೆಯೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕವಿಗೆ ಅಚ್ಚಗನ್ನಡ ಭಾಷೆಯ ಬಗೆಗಿನ ಒಲವಿನಂತೆಯೇ ಕನ್ನಡ ನಾಡಿನ ಬಗ್ಗೆಯೂ ಅಪಾರ ಆಭಿಮಾನ ಅವನ ಪ್ರಸಿದ್ಧವಾದ ಪದ್ಯವಿದು :

ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾಱನಾ
ನೆಲನಂ ಮತ್ತಿನ ಮಾನಿಸರ್
ಪೊಗೞಲೇನಂ ಬಲ್ಲರ್ಎಮ್ಬೊಂದು ಬ
ಲ್ಲುಲಿಯಂ ನೆಟ್ಟನೆ ತಾಳ್ದು ಕನ್ನಡಮೆನಿಪ್ಪಾ ನಾಡು ಚೆಲ್ಚಾಯ್ತು ಮೆ
ಲ್ಲೆಲರಿಂ ಪೂತ ಕೊಳಂಗಳಿಂ ಕೆಱೆಗಳಿಂ ಕಾಲೂರ್ಗಳಿಂ ಕೆಯ್ಗಳಿಂ

ಇದನ್ನು ನೋಡಿದರೆ ಕವಿ ಮಲೆನಾಡಿನ ಪ್ರದೆಶದಲ್ಲಿದ್ದಿರಬಹುದಾದ ಸಾಧ್ಯತೆಯಿದೆ. ಇವನ ಆಶ್ರಯದಾತನಾದ ಕದಂಬ ಕಾಮದೇವನೂ ಕರಾವಳಿ ಪ್ರದೆಶದಲ್ಲಿದ್ದವನು; ಬನವಾಸಿ ಪ್ರಾಂತವನ್ನು ಗೆದ್ದವನು. ಇಡೀ ಕನ್ನಡ ನಾಡು ತಾನು ಬದುಕಿದ್ದ ಪ್ರದೇಶದ ರೀತಿಯಲ್ಲಿಯೇ ಕೊಳ ಕಾಲುವೆ ಕೆರೆಗಳಿಂದ ತುಂಬಿದೆ ಎಂದು ಹೇಳುವುದರಿಂದ ಈ ಊಹೆ ಮಾಡಬಹುದು.

ಕಥಾ ವಸ್ತು

ಶಿವನು ಕಾಮನನ್ನು ಸುಟ್ಟದ್ದು ವೈದಿಕ ಪುರಾಣಗಳಲ್ಲಿನ ಜನಜನಿತವಾದ ಕತೆ. ಆದರೆ ಅದೇ ಶಿವ ಮುಂದೆ ಕಾಮನಿಗೆ ವಶವಾಗಿ ಗಿರಿಜೆಯನ್ನು ಮದೆವೆಯಾದ. ಆದ್ದರಿಂದಲೇ ಅವನು ಅರ್ಧನಾರೀಶ್ವರನಾದ. ಹೀಗಾಗಿ ಅವನು ಪೂರ್ತಿಯಾಗಿ ಕಾಮನನ್ನು ಗೆದ್ದವನಲ್ಲ ಎಂಬ ಆಂಶವನ್ನು ಹಿಡಿದೂ, ಜೈನ ಪುರಾಣಗಳಲ್ಲಿ ಕಾಮನಿಗಿರುವ ಮಹತ್ವವನ್ನು ತೋರಿಸಲೂ ಕವಿ ಈ ವಸ್ತುವನ್ನು ಆಯ್ಕೆಮಾಡಿಕೊಂಡಿರಬೇಕು. ಜೊತೆಗೆ ಕಾಮನನ್ನು ನಿಜವಾದ ಆರ್ಥದಲ್ಲಿ ಗೆದ್ದವನು ಜಿನನು ಮಾತ್ರ ಎಂದು ಪ್ರತಿಪಾದಿಸುವುದೂ ಅವನ ಉದ್ದೇಶ. ಅದರೊಡನೆ, ಬದುಕಿನಲ್ಲಿ ಕಾಮ ದೇವತೆಯನ್ನು ಅನಿವಾರ್ಯತೆಯನ್ನೂ ತೋರಿಸುವುದೂ ಕವಿಯ ಉದ್ದೇಶವಿರಬಹುದು.

ಕಥಾಸಾರ

ಪೂವಿನ ಪೊಳಲಿನ ರಾಜ ನನೆಯಂಬ. ಅವನಿಗೆ ವಸಂತ ಋತುವಿನ ಒಂದು ರಾತ್ರೆ ಕನಸೊಂದು ಬಿತ್ತು. ಅದರಲ್ಲಿ ಅವನು ಕಂಡದ್ದು ಬೆಳುಂದಿಗಳ ಕಾಂತಿಯನ್ನೇ ಸೂರೆಗೊಂಡಂತಹ ದೇಹಶೋಭೆಯಿಂದ ಕೂಡಿದ್ದ ಒಬ್ಬ ಸುಂದರಿಯನ್ನು. ಈ ವಿಷಯವನ್ನು ಅವನು ತನ್ನ ಮೇಳದ ಕೆಳೆಯನಾದ ನಗೆಗಾರನಿಗೆ ಹೇಳುತ್ತಾನೆ. ಇದನ್ನು ಕೇಳಿದ ನಗೆಗಾರ, ಅದು ಬೆಳಗಿನ ಜಾವದ ಕನಸಾಗಿರುವುದರಿಂದ, ಬಹು ಬೇಗ ಸುಂದರಿಯೊಬ್ಬಳು ಅವನ ಕೈವಶವಾಗುವಳೆಂದು ನುಡಿಯುತ್ತಾನೆ. ಮುಂದೆ ನನೆಯಂಬನು ವಸಂತಕಾಲದಿಂದ ಕಂಗೊಳಿಸುವ ಉಪವನವನ್ನು ನೋಡಲು ಪರಿವಾರದೊಂದಿಗೆ ಹೋಗುತ್ತಾನೆ. ಮನ್ಮಥನ ನಗರದಂತಿದ್ದ ಆ ಸುಂದರವನವನ್ನು ನೋಡುತ್ತ ಬರುತ್ತಿರುವಾಗ, ದುಂಬಿಯನ್ನು ನಾಚಿಸುವ ತಲೆಗೂದಲ ಕಾಂತಿಯಿಂದಲೂ, ಚಕ್ರವಾಗಕಗಳಿಗೂ ವಿಗಿಲಾದ ತೋರ ಮೊಲೆಗಳಿಂದಲೂ, ನೆಯ್ದಿಲೆಗಿಂತಲೂ ಚೆಲುವಾದ ಕಣ್ಣುಗಳಿಂದಲೂ, ಕೆಂಪು ಚಿಗುರನ್ನು ಮೀರಿಸುವ ಪಾದಗಳಿಂದಲೂ ಕಂಗೊಳಿಸುವ ಚೆಲುವೆಯೊಬ್ಬಳು ಕಾಣಿಸುತ್ತಾಳೆ. ನನೆಯಂಬನಿಗೆ ಅವಳನ್ನು ನೋಡಿ ಆ ಕನ್ಯೆಯ ಅಪ್ಸರೆ ಇರಬೇಕೆನ್ನಿಸುತ್ತದೆ. ಅವಳ ವಿಚಾರವನ್ನು ತಿಳಿಸಬೇಕೆಂದು ರಾಜನು ಕೇಳಿಕೊಳ್ಳಲು ಅವಳು ತನ್ನ ಪೂರ್ವ ಕತೆಯನ್ನು ಹೇಳತೊಡಗುತ್ತಾಳೆ.

ಕಂಪಿನ ಪೊಳಲು ಎಂಬುದೊಂದು ಬೀಡು. ಅದರ ರಾಜ ಕರ್ವುವಿಲ್ಲ; ಅವನ ಹೆಂಡತಿ ಇಚ್ಛೆಗಾರ್ತಿ, ಅವಳು ಪರಮ ಸುಂದರಿ. ಇಬ್ಬರೂ ತುಂಬ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ. ಒಂದು ದಿನ ಆಸ್ಥಾನಕ್ಕೆ ಬಂದ ತಂಬೆಲರು ತನ್ನೊಡನೆ ಜೊನ್ನಮನುಣ್ಬ ಪಕ್ಕಿ ಎಂಬ ದೂತಿಯೊಬ್ಬಳನ್ನು ತರೆತರುತ್ತಾನೆ, ರಾಜನಿಗೆ ಕಾಣಿಕೆಗಳನ್ನಿತ್ತ ಅವಳು ಈ ರೀತಿ ಬಿನ್ನವಿಸುತ್ತಾಳೆ; “ನಿನಗೆ ಬಾಗದ ಮತ್ತು ನಿನಗೆ ಸೇವಕರಾಗದ, ನಿನ್ನ ಅಪ್ಪಣೆ ಪಾಲಿಸದ ಯಾರೂ ಇದುವರೆಗೆ ಇರಲಿಲ್ಲ. ಆದರೆ ಈಗ ಶಿವನೆಂಬ ಮಂಜುಬೆಟ್ಟದಲ್ಲಿ ವಾಸಿಸುವ ಗೊರವನು ಸನ್ಯಾಸಿಗಳನ್ನೇ ತನ್ನ ಪರಿವಾರವನ್ನಾಗಿ ಮಾಡಿಕೊಂಡು ನಿನ್ನನ್ನು ಲಕ್ಷಿಸದೆ ಇದ್ದಾನೆ. ನಿನ್ನೆ ರಾತ್ರಿ ಅವನು ಪೆರೆಯನ್ನು ಬಾಳ್ದಲೆವಿಡಿದ್ದಾನೆ. ಇದಕ್ಕೆ ತಕ್ಕುದನ್ನು ನೀನೇ ಬಲ್ಲೆ”.

ಇದನ್ನು ಕೇಳಿದ ಕರ್ಪುವಿಲ್ಲನಿಗೆ ಶಿವನ ಮೇಲಣ ಕೋಪ ಮೇರೆವರಿಯುತ್ತದೆ; ತಕ್ಷಣವೇ ಹೋಗಿ ಮುಕ್ಕಣ್ಣನನ್ನು ಇಕ್ಕಿಮೆಟ್ಟಿ ಚಂದ್ರನನ್ನು ಬಿಡಿಸಿಕೊಂಡು ಬರುತ್ತೇನೆ ಎಂದು ಗರ್ಜಿಸುತ್ತಾನೆ. ಆದರೆ ವಸಂತನು ಅವನನ್ನು ತಡೆದು, ಮೊದಲು ಶಿವನೆಡೆಗೆ ದೂತನೊಬ್ಬನನ್ನು ಕಳಿಸಬೇಕೆಂದೂ, ಸಂಧಾನ ವಿಫಲಗೊಂಡರೆ ಯುದ್ಧಕ್ಕೆ ಹೊರಡಬಹುದೆಂದೂ ನೀತಿ ನಿಪುಣತೆಯಿಂದ ಸಲಹೆಯೀಯುತ್ತಾನೆ. ಅದನ್ನು ಒಪ್ಪಿದ ದೊರೆ ತಂಗಾಳಿಯನ್ನು ದೂತನಾಗಿ ಶಿವನ ಬಳಿ ಕಳಿಸುತ್ತಾನೆ. ಅದರಂತೆ ಅವನು ಶಿವನಡೆಗೆ ಬಂದು ಕರ್ವುವಿಲ್ಲನ ವೈಭವಾಡಂಬರಗಳನ್ನೂ ಶೌರ್ಯಪರಾಕ್ರಮಗಳನ್ನೂ ಬಣ್ಣಿಸಿದ ನಂತರ, “ಅಂತಹವನು ನಿಮ್ಮ ಜತೆ ಗೆಳೆತನವನ್ನು ಬಯಸಿರುವುದು ನಿಮ್ಮ ಪುಣ್ಯ. ಅದನ್ನೊಪ್ಪಿ ಈಗಲಾದರೂ ಚಂದ್ರನನ್ನು ಸೆರೆಯಿಂದ ಬಿಡುಗಡೆಗೊಳಿಸಿ” ಎನ್ನುತ್ತಾನೆ. ಇದನ್ನು ಕೇಳಿ ಕೋಪವುಂಟಾದರೂ ಅದನ್ನು ತೋರಗೊಡದೆ ಶಿವನು ರೂಪಿಲ್ಲದ ನನೆವಿಲ್ಲನನ್ನು ಹೀಯಾಳಿಸಿ, “ನಿನ್ನ ಯಜಮಾನನ ಬಾಣಕ್ಕೆ ಪ್ರತಾಪವಿರುವುದಾದರೆ ಯುದ್ಧಕ್ಕೆ ಕರೆ ತಾ. ಯಾರು ಹೆಚ್ಚು ಬಲಿಷ್ಠರೋ ನೀನೇ ನೋಡುವೆಯಂತೆ” ಎಂದು ತೀರ್ಮಾನಿಸಿ ನುಡಿಯುತ್ತಾನೆ.

ತಂಗಾಳಿ ಬಂದು ಸಂಧಾನ ವಿಫಲವಾದುದನ್ನು ದೊರೆಗೆ ತಿಳಿಸಲು, ನನೆವಿಲ್ಲನು ಯುದ್ಧಕ್ಕೆ ಸಿದ್ಧನಾಗುತ್ತಾನೆ. ಅವನ ಅಣತಿಯಂತೆ ರಾಜಗಿಳಿಗಳೆಂಬ ಕುದುರೆಯ ಪಡೆ, ದುಂಬಿಗಳೆಂಬ ಬಿಲ್ವೀರರು, ಕ್ರೌಂಚಪಕ್ಷಿಗಳೆಂಬ ಗುರಾಣಿಯೋಧರು, ಹಕ್ಕಿಗಳ ಸಮೂಹವೆಂಬ ಭರ್ಜಿಯಭಟರು – ಇಂಥ ಒಂದು ಪಡೆಯನ್ನು ವಸಂತನು ಸಿದ್ಧಪಡಿಸುತ್ತಾನೆ. ರಾಜ ಅದರೊಡನೆ ಯುದ್ಧಕ್ಕೆ ಹೊರಡುತ್ತಾನೆ. ದಾರಿಯಲ್ಲಿ ತಾನು ಬರುತ್ತಿದ್ದರೂ ವಿಚಲಿತರಾಗದ ಸವಣರನ್ನು ಕಂಡು ಅವನ ಮೇಲೆ ಕೊಮಪಗೊಂಡಾಗ, ವಸಂತನು ಅವನನ್ನು ಸಮಾಧಾನಮಾಡಿ, ಅರಿಷಡ್ವರ್ಗವನ್ನು ಗೆದ್ದು ಸ್ಥಿರಮನಸ್ಸಿನಿಂದ ಕೂಡಿರುವ ಈ ಸವಣರ ಮೇಲೆ ಕೈಮಾಡುವುದರ ಬದಲು ಶಿವನ ಮೇಲೆ ನಿನ್ನ ಪರಾಕ್ರಮವನ್ನು ತೋರಿಸು ಎನ್ನುತ್ತಾರೆ. “ತಾಪಸಿಗಳ ಮೇಲೆ ಏರಿ ಹೋದರೆ ನಿನ್ನ ಕಬ್ಬಿನ ಬಿಲ್ಲು ಮುರಿಯದಿರುತ್ತದೆಯೇ, ಹೂಬಾಣಗಳು ಸುಟ್ಟು ಹೋಗದಿರುವುದೇ, ದುಂಬಿಯಿಂದಾದ ಹೆದೆ ಹರಿಯದಿರುವುದೇ, ತಂಗಾಳಿ ಜಾರಿ, ಮಾವು ಒಣಗಿ, ಕೋಗಿಲೆಯ ದನಿ ಇಂಗಿಹೋಗದಿರುವುದೇ?” ಎಂದು ಎಚ್ಚರಿಸುತ್ತಾನೆ. ಅದನ್ನು ಕೇಳಿ ಹಿಂಜರಿದ ನನವಿಲ್ಲನು ಸವಣರಿಗೆ ವಂದಿಸಿ ಮುಂದೆ ಸಾಗುತ್ತಾನೆ. ಅಲ್ಲಿಂದ ಮುನ್ನಡೆದೆ ಅವನ ಸೈನ್ಯ ಕೊನೆಗೆ ರನ್ನಗಲ್ಲು ಎಂಬ ಬೆಟ್ಟದ ಬಳಿ ಬಂದು ಬೀಡು ಬಿಡುತ್ತದೆ.

ಪೂಗಣೆಯನ ಯುದ್ಧರಾತ್ರೆಯ ವಿಷಯ ತಿಳಿದ ಶಿವನು ಕೆಂಡಾಮಂಡಲವಾಗಿ ಹುಸಿಪಡೆಯೊಂದನ್ನು ಸೃಷ್ಟಿಸಿ ವೀರಭದ್ರನ ಮುಂದಾಳುತ್ವದಲ್ಲಿ ಕಾಮನೊಡನೆ ಕದನಗೈಯಲು ಕಳಿಸುತ್ತಾನೆ. ಆ ಸೈನ್ಯದ ಕೆಲವು ದಾರಿಯಲ್ಲಿನ ಬೆಟ್ಟವನ್ನೇ ಒಡೆದು ಚೆಂಡಾಡುತ್ತಿದ್ದರು; ಮತ್ತೆ ಕೆಲವರು ಸಿಂಹಕ್ಕೆ ಹಲ್ಲಣವನ್ನು ಹಾಕಿ ಸವಾರಿಗೈಯುತ್ತಿದ್ದರು; ಮತ್ತು ಕೆಲವರು ರ್ಸೂನನ್ನೇ ನುಂಗಲು ಮುಂದಾದರ; ಇನ್ನೂ ಕೆಲವರು ಸಮುದ್ರವನ್ನೇ ಹೀರಿ ಅರ್ಧ ಬರಿದುಗೊಳಿಸಿದರು. ಸರಿ ಎರಡೂ ಪಡೆಗಳ ನಡುವೆ ಘೋರ ಕದನ ಆರಂಭವಾಗುತದೆ. ದೀರ್ಘ ಕಾಲದ ನಂತರ ನನೆವಿಲ್ಲನು ಶತ್ರು ಸೈನ್ಯವನ್ನು ತನ್ನ ತೋಳ್ಬಲದಿಂದ ಹಿಮ್ಮೆಟ್ಟಿಸಿದ; ಅವನ ಎದುರಿನಲ್ಲಿ ವೀರಭದ್ರನು ಸೋತುಹೋದ. ಆ ಮುಂದೆ ಎದುರಾಳಿಯಿಲ್ಲದ ಕಾಮ ಮಂಜುಬೆಟ್ಟವನ್ನು ಮುತ್ತುತ್ತಾನೆ.

ಮುಂದೆ ನಡೆಯುವುದು ಅಪರೂಪದ ಕಾಳಗ; ಶಿವ-ಕಾಮರ ಯುದ್ಧ. ಅದನ್ನು ನೋಡುವ ಸಲುವಾಗಿ ಸಗ್ಗಿಗರೆಲ್ಲ ಆಗಸದಲ್ಲಿ ನೆರೆಯುತ್ತಾರೆ. ಸ್ವಲ್ಪ ಹೊತ್ತಿನಲ್ಲಿಯೇ ಶಿವನ ಸೈನ್ಯವೆಲ್ಲ ನುಚ್ಚುನೂರಾಗುತ್ತದೆ. ಆದರೆ ಅದನ್ನು ಲೆಕ್ಕಿಸದ ಈಶನು ಬೆಳ್ಳಿಯ ಬೆಟ್ಟದಂತೆ ದೃಢವಾಗಿ ನಿಂತು ಏಕಾಂಗಿಯಾಗಿ ಕಾಮನನ್ನೆದುರಿಸುತ್ತಾನೆ. ಎದುರಿಗೆ ಅವನನ್ನು ಕಂಡ ಕಾಮನು, “ಕಡುಪಿಂ ಪೂವಿನ ಕೋಲ್ಗಳ್‌ ಗಡಣಿಸಿ ಕವಿತಂದು ನಾಂಟುವಾಗಳ್‌ ನಿನ್ನೀ ಜಡೆಯುಂ ತೊವಲುಂ ಪಾವಿನ ತೊಡವುಂ ಲಾಗುಳಮುಂ ಅಡ್ಡಮೇಂ ಬಂದಪುವೇ?” ಎಂದು ಗರ್ಜಿಸಿ ಅವನ ಮೇಲೆ ಏರಿ ಹೋಗುತ್ತಾನೆ. ಈಗಲಾದರು ಚಂದ್ರನನ್ನು ಸೆರೆಯಿಂದ ಬಿಡುಗಡೆಗೊಳಿಸಿ ಬದುಕಿಕೋ ಎಂದು ಎಚ್ಚರಿಸುತ್ತಾನೆ. ಇದಕ್ಕೊಪ್ಪದ ಶಿವನ ಮೇಲೆ ಅನಿವಾರ್ಯವಾಗಿ ತನ್ನ ಹೂಬಾಣಗಳ ಮಳೆ ಸುರಿಸುತ್ತಾನೆ. ಹಿಂದೆ ಎಂತೆಂತಹ ಜಿತೇಂದ್ರಿಯರನ್ನೂ ದಿಕ್ಕುಗೆಡೆಸಿದ್ದ ಈ ಬಾಣಗಳು ಈಗಲು ನಾಟಿಕೊಂಡಾಗ ಬಲ್ಲಿದರು ಕೋಟಲೆಗೊಳಗಾಗುತ್ತಾರೆ. “ಕಟ್ಟಾಳ್ಗಳೆನಿಪ ರಕ್ಕಸರೆ ಒಟ್ಟಜೆಗಟ್ಟಱಲೆ, ಸಗ್ಗಿಗರ್‌ ನೆಲನನೊಂಡಬಟ್ಟಿರೆ, ಕಾಳಗದೆಡೆಯೊಳ್‌ ತೊಟ್ಟನೆ ಮಾದೇವಿಯರಸಂ ಅರೆವೆಣ್ಣಾದಂ!” ಇದರಿಂದ ಕೋಪಗೊಂಡ ಶಿವನು, “ದೊಡ್ಡವನೆಂಬ ಗೌರವವನ್ನು ತೊರಿಸದೆ ನನ್ನೊಡನೆ ಕಾದಿದೆ; ಈ ತಪ್ಪಿಗಾಗಿ ನೀನು ನಿನ್ನ ಮನಃಪ್ರಿಯೆಯನ್ನು ಸೇರದೆ ಇತರರಿಗೆ ತಿಳಿಯದಂತೆ ಎಲ್ಲಿಯಾದರೂ ಮರೆಯಾಗು” ಎಂದು ಶಾಪವೀಯುತ್ತಾನೆ.

ಈ ಶಾಪದ ವಿಷಯವು ವಸಂತನಿಂದ ತಿಳಿದ ಕೂಡಲೇ ಇಚ್ಛೆಗಾರ್ತಿ ಮೂರ್ಛೆವೋಗುತ್ತಾಳೆ. ವಿರಹಾಗ್ನಿಯಿಂದ ಅವಳ ಕಣ್ಣೀರೆಲ್ಲ ಬತ್ತಿಹೋಗುತ್ತದೆ; ಏಕಾವಳಿಯ ಮುತ್ತುಗಳೆಲ್ಲ ಹರಿದು ಚೆಲ್ಲಾಪಿಲ್ಲಿಯಾಗುತ್ತವೆ; ಶ್ರೀಗಂಧದ ತಿಲಕವು ಕರಿಕಾಗುತ್ತದೆ. ಸ್ವಲ್ಪ ಕಾಲದ ಬಳಿಕ ಮೂರ್ಛೆಯಿಂದ ಎಚ್ಚೆತ್ತು ಕೊಲದ ತಣ್ಣೀರು, ಮರಳ ದಿಣ್ಣೆ, ಚಿಗುರಿನ ಹಾಸಿಗೆ, ಬಳ್ಳಿಮಾಡ – ಇವುಗಳ ನೆರವು ಪಡೆದು ತನ್ನ ದೇಹದ ಬೆಂಕಿಯನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದರೂ ವಿಫಲಳಾಗುತ್ತಾಳೆ. ಎಲ್ಲ ಕಡೆಯೂ ಪ್ರಿಯನಿಗಾಗಿ ಹುಡುಕಾಡಿ ಅವನನ್ನು ಕಾಣದೆ ಕೊರುಗುತ್ತಾಳೆ. ಈ ಕತೆಯನ್ನು ಹೇಳಿದ ಅಪ್ಸರೆಯು ಆ ಕಾಮನೇ ನನೆಯಂಬನೆಂದೂ, ತನ್ನ ಮಾತನ್ನು ಕೇಳಿದ ಅವನ ಶಾಪ ವಿಮೋಚನೆಗೊಂಡಿತೆಂದೂ ಮತ್ತೆ ಅವನಿಗೆ ಹಿಂದಿನ ಜನ್ಮ ಪ್ರಾಪ್ತವಾಗುವುದೆಂದೂ ತಿಳಿಸಿ ಮಾಯವಾಗುತ್ತಾಳೆ.

ಅಪ್ಸರೆಯು ಹೇಳಿದ ಈ ಕತೆಯನ್ನು ಕೇಳಿದ ಗಿಳಿಯೊಂದು ಈ ವಿಷಯವನ್ನೆಲ್ಲ ವಸಂತನಿಗೆ ಅರುಹುತ್ತದೆ. ಅವನ ಮೂಲಕ ಇದನ್ನು ತಿಳಿದ ಇಚ್ಛೆಗಾರ್ತಿಯು, ಬಿಸಿಲಿನಲ್ಲಿ ಬೆಂದವನು ತಂಪು ಕೊಳವನ್ನು ಹೊಕ್ಕಂತೆ, ಪುಲಕಗೊಳ್ಳುತ್ತಾಳೆ. ಶಿವನನ್ನು ಗೆದ್ದು ವಾಪಸಾಗುವ ನನೆಯಂಬನನ್ನು ಬರಮಾಡಿಕೊಳ್ಳಲು ಊರನ್ನೆಲ್ಲ ಸಿಂಗರಿಸಲು ಡಂಗುರ ಹೊಯಿಸುತ್ತಾಳೆ. ಬಂದ ರಾಜನನ್ನು ಇಚ್ಛೆಗಾರ್ತಿ ಹಾಗು ಪರಿವಾರದವರೆಲ್ಲ ಸಂತಸದಿಂದ ಸ್ವಾಗತಿಸುತ್ತಾರೆ.

ಕಾವ್ಯ ವಿಚಾರ

ಮಹಾಕಾವ್ಯಕ್ಕಿರಬೇಕಾದರೆ ಘನ ವಸ್ತುವಾಗಲೀ, ವ್ಯಾಪ್ತಿಯಾಗಲೀ ಇರದ ಈ ಕಾವ್ಯ ಹೊರನೋಟಕ್ಕೆ ವೀರಪ್ರಧಾನವಾಗಿ ಕಂಡರು ಅದು ದೇಹಬಲವನ್ನು ಸೂಚಿಸಿದೆ ಕಾಮದ ಬಲ್ಮೆಯನ್ನು ತೋರುಸುತ್ತದೆ. ಪರಾಣಗಳಲ್ಲಿ ಬರುವ ಅರ್ಧನಾರೀಶ್ವರನ ಕಲ್ಪನೆಯಲ್ಲಿ ಹುದುಗಿರುವ ಗಂಡು ಹೆಣ್ಣುಗಳ ಅನ್ಯೋನ್ಯತೆಯನ್ನು ಕಂಡುಕೊಂಡ ಆಂಡಯ್ಯನು ಕಾಮದ ಅದಮ್ಯತೆಯನ್ನು ಮನಗಾಣಿಸಲು ಈ ಕಾವ್ಯವನ್ನು ರಚಿಸಿದ್ದಾನೆಂಬುದು ಸ್ಪಷ್ಟ. ಹೀಗಾಗಿ ಕಾಮನು ಶಿವನನ್ನೇ ಗೆದ್ದನೆಂದು ಪ್ರತಿಪಾದಿಸಿ ಜೀವನದ ಪ್ರಬಲ ಶಕ್ತಿಯ ಚಿತ್ರಣವನ್ನು ಕವಿ ನೀಡುತ್ತಾನೆ. ಜೈನಪುರಾಣಗಳಲ್ಲಿ ಕಾಮನಿಗೆ ಶ್ರೇಷ್ಠ ಸ್ಥಾನವಿದೆ. ಅದನ್ನು ಹೇಳುವುದರ ಜೊತೆಗೆ, ಅವನನ್ನು ಗೆದ್ದ ಜಿನನ ಪಾರಮ್ಯವನ್ನು ನಿರೂಪಿಸುವುದೂ ಕವಿಯ ಒಂದು ಆಶಯ. ಇಲ್ಲಿನ ಪಾತ್ರಗಳೆಲ್ಲ, ಪುರಾಣ ನಿರೂಪಣೆಗೆ ಅನುಗುಣವಾಗಿಯೇ ಮನೋ ಭಾವಸೂಚಕವಾದ ಸಂಕೇತಗಳಾಗಿವೆ. ಆದರೆ ಎಲ್ಲ ಕಡೆ ವಾಚ್ಯ ವರ್ಣನೆಗೇ ಹೆಚ್ಚು ಪ್ರಾಮುಖ್ಯವಿರುವುದರಿಂದ ಕಾವ್ಯದ ಧ್ವನಿಶಕ್ತಿ ಕುಗ್ಗಿದೆ.

ಕವಿ ಜಿನಪರನಾದರೂ ಅನವಶ್ಯಕವಾಗಿ ಪರನಿಂದೆಗೆ ಕೈಹಾಕದಿರುವುದು ಅವನ ಸ್ಥಿಮಿತತೆಗೆ ಹಿಡಿದ ಕನ್ನಡಿಯಾಗಿದೆ.ಎಷ್ಟೋ ವೈರಾಗ್ಯಪರವಾದ ಕಾವ್ಯಗಳಲ್ಲೂ ಇಣುಕಿರಬಹುದಾದ ಅಸಹ್ಯವೆನ್ನಿಸುವ ಶೃಂಗಾರ ಇಲ್ಲಿಲ್ಲದಿರುವುದು ಅವನ ಔಚಿತ್ಯವನ್ನು ಎತ್ತಿ ತೋರಿಸುತ್ತದೆ. ವರ್ಣನೆಗಳು ಕೂಡ ಹಿತಮಿತವಾಗಿವೆ. ಅನವಶ್ಯಕ ಎಂಬ ವರ್ಣನಾಭಾಗಗಳು ಇದರಲಿಲ್ಲ. ಯುದ್ಧರಂಗದಲ್ಲಿ ಶಿವ-ಕಾಮರು ಪರಸ್ಪರ ಮೂದಲಿಕೆಯನ್ನು ಮಾಡುವಾಗ ಕಂಡು ಬರುವ ವಿಡಂಬನೆಯು ಎದುರಾಳಿಗಳಿಬ್ಬರ ಭರ್ತ್ಸನೆಯೆಂಬಂತೆ ಭಾವಿಸಿದಾಗ ಅದು ಸಹಜವೇ ಅನ್ನಿಸುತ್ತದೆ. ಶಿವನಿಗೆ ಸಲ್ಲಬೇಕಾದ ಮರ್ಯಾದೆಯನ್ನು ಸಲ್ಲಿಸಿರುವ ಮೂಲಕ ಆಂಡಯ್ಯನು ಒಂದು ಬಗೆಯಲ್ಲಿ ವೈದಿಕ-ಜೈನ ಬಾಂಧವ್ಯವನ್ನು ಸಾಧಿಸುತ್ತಾನೆ. ಕವಿಯ ಆಶಯಕ್ಕನುಗುಣವಾಗಿ ಇದರದ್ದು ಪರಿಮಿತ ಆದರ್ಶ; ಅದಕ್ಕನುಗುಣವಾಗಿ ಇದೊಂದು ಖಂಡಕಾವ್ಯವಾಗಿ ರೂಪಿತವಾಗಿದೆ. ವಸ್ತುವಿಗೆ ಅನುಗುಣವಾಗಿ ಇಡೀ ಕಾವ್ಯವು ಹುಸಿರೌದ್ರದ ವಾತಾವರಣವನ್ನು ಹೊದ್ದಿರುವುದು ತುಂಬ ಸಹಜವಾಗಿದೆ. ಆ ಮಟ್ಟಿಗೆ ಆಂಡಯ್ಯನನ್ನು ನಾವು ಮೆಚ್ಚಬಹುದು.

ಕಾವ್ಯವೈಶಿಷ್ಟ್ಯಗಳು

ಆಂಡಯ್ಯನಿಗೆ ತಾನು ಬಳಸಿರುವ ಕನ್ನಡದ ಸ್ವರೂಪದ ಬಗ್ಗೆ ಅಮಿತ ವಿಶ್ವಾಸ. “ಕನ್ನಡದೊಳ್ಪಿನ ನುಡಿಯಿಂ ಮುನ್ನಿದಱೊಳೆ ನೋಡಿ ತಿಳಿದುಕೊಳ್ಳುದು ಚದುರಂ; ರನ್ನದ ಕನ್ನಡಿಯಂ ನಲವಿನ್ನೊಡಿದವಂಗೆ ಕುಂದದೇನಾದಪುದೋ” ಎಂಬ ಆತ್ಮವಿಶ್ವಾಸ ಅವನದು. ಇಡೀ ಕಾವ್ಯ ಕೋಮಲ ಭಾವನೆಗಳ ಆಡುಂಬೊಲವಾಗಿರುವುದರಿಂದ ಕವಿ ಬಳಸುವ ತದ್ಭವಗಳು ಅವಕ್ಕೆ ಅನುಗುಣವಾಗಿವೆ. ಅವನನ್ನು ಇತರರು ಅನುಸರಿಸಿರಲಿ ಬಿಡಲಿ, ಆಂಡಯ್ಯ ಕನ್ನಡದ ಬಗೆಗಿನ ಅಭಿಮಾನವನ್ನು ಕೆದಕಿ ಎಚ್ಚರ ಮೂಡಿಸಿದವನು. ಜೊತೆಗೆ ತನ್ನ ಸ್ವಂತಿಕೆಯಿಂದ ಅನೇಕ ಶಬ್ದಗಳನ್ನು ಟಂಕಹಾಕಿ ನುಡಿಯ ಕೋಶವನ್ನು ತುಂಬಿಸಿದ್ದಾನೆ. ನೆನೆವಿಲ್ಲ, ಇಂಗೋಲ, ಕಂಗೋಲ್ವಿಲ್ಲ, ಕರ್ವುವಿಲ್ಲ, ಪೂಗಣೆಯ, ಕಾವ, ಅಲರ್ಗಣೆಯ, ನನೆಗಣೆಯ, ಅಲರ್ವಿಲ್ಲ, ಕಮ್ಯಂಗೋಲ, ಕಮ್ಮಂಗಣೆಯ, ಪೂಸರಲ, ಅಲರಂಬ, ಅಲರ್ವಿಲ್ಲ, ರೂವಿಲ್ಲದವ – ಇತ್ಯಾದಿ ಪರ್ಯಾಯಗಳನ್ನು ಕವಿಯು ಕಾಮನನ್ನು ಸೂಚಿಸಲು ಬಳಸಿದರೆ; ಶಿವ, ದುಟ್ಟಗೊರವ, ಮುಕ್ಕಣ್ಣ, ಬಡಗೊರಲ, ನೆತ್ತಿಗಣ್ಣವ, ಕರೆಗೊರಲಂ, ನಂಜುಗೊರಲ, ಮಾದೇವ, ತಿಸುಳಿ, ಎಳದೇವ, ಬಿಸುಗಣ್ಣ, ಬಿಸುಗಣ್ಗೊರವಂ, ಮಾದೇವಿಯರಸ, ಬಾಂದೊಱೊದಲೆಯ, ಉರಿಗಣ್ಣ, ಮೂರು ಕಣ್ಣನ್ನ್‌ ಇತ್ಯಾದಿ ಶಬ್ದಗಳನ್ನು ಶಿವನನ್ನು ಸೂಚಿಸಲು ಬಳಸಿರುವುದನ್ನು ನೋಡಿ. ಹಾಗೆಯೇ ಇಚ್ಛೆಗಾರ್ತಿ, ಜೊನ್ನಮನುಣ್ಬ ಪಕ್ಕಿ, ನಗೆಗಾರ, ನುಡಿವೆಣ್‌, ಬಿದುಗಲ್‌, ಅಱವಟ್ಟಿಗ, ದಪ್ಪಗ, ಮಲ್ಲೞೆಗೊಳ್‌ ಮುಂತಾದ ಅನೇಕ ಶಬ್ದಗಳನ್ನು ಸಹಜವಾಗಿ ಬಳಸಿರುವ ಆಂಡಯ್ಯ ನಿಜವಾಗಿಯೂ ಶಬ್ದಬ್ರಹ್ಮನೆಂದು ಕರೆಯಬಹುದಾದಷ್ಟು ಬಲ್ಲಿದ. ಇವನ ಅಚ್ಚಗನ್ನಡಪ್ರೇಮವನ್ನು ಈ ದೃಷ್ಟಿಯಿಂದ ಮುಂದೆ ಅನುಸರಿಸಿದವನು ಮುದ್ದಣನೊಬ್ಬನೇ. ಆಂಡಯ್ಯನ ವೀರ ಕನ್ನಡಾಭಿಮಾನ ಮುಂದೆ ಮಹಲಿಂಗರಂಗರು ಅಂತಹವರಲ್ಲಿಯೂ ಮಾರ್ದನಿಸಿದೆ. ಹೀಗಾಗಿ ಆಂಡಯ್ಯನು ಕನ್ನಡ ಜಾಗೃತ ಪ್ರಜ್ಞೆಯ ಪ್ರತಿನಿಧಿಗಳಲ್ಲೊಬ್ಬ ಎಂದರೆ ಅತಿಶಯೋಕ್ತಿಯಾಗಲಾರದು.