ಇದೊಂದು ಸಂಯುಕ್ತ ಸಂಪುಟ; ಇದರಲ್ಲಿ ಎರಡು ಕಾವ್ಯಗಳು ಪಾಠಾಂತರಗಳಿಲ್ಲದೆ ಪ್ರಸ್ತಾವನೆ-ಅರ್ಥಕೋಶಗಳೊಡನೆ ಸೇರ್ಪೆಡೆಯಾಗಿವೆ: ಅವುಗಳೆಂದರೆ ಶಾಂತಿನಾಥನ ‘ಸುಕುಮಾರಚರಿತಂ’ ಮತ್ತು ಆಂಡಯ್ಯನ ‘ಕಬ್ಬಿಗರ ಕಾವಂ’. ಇವು ಕಾಲಾನುಗುಣವಾಗಿ ಈ ಕ್ರಮದಲ್ಲಿವೆ. ಎರಡೂ ಚಂಪೂ ಕೃತಿಗಳಾದರೂ, ಅವುಗಳ ಸ್ವರೂಪದಲ್ಲಿ ತುಂಬ ಭಿನ್ನತೆಯಿದೆ. ಮೊದಲನೆಯದು ಸುಮಾರು ಒಂಬೈನೂರು ಪದ್ಯಗಳನ್ನು ಒಳಗೊಂಡಿದ್ದಾರೆ, ಎರಡನೆಯದರಲ್ಲಿರುವುದು ಕೇವಲ ಇನ್ನೂರ ಎಪ್ಪತ್ತೆರಡು ಪದ್ಯಗಳು. ಇವೆರಡೂ ಜೈನ ಕವಿಗಳ ರಚನೆಗಳು; ಆದರೆ ‘ಸುಕುಮಾರಚರಿತಂ’ ನಲ್ಲಿರುವ ಜೈನ ಮತ ಸಂಬಂಧೀ ವಿವರಗಳು ‘ಕಬ್ಬಿಗರ ಕಾವಂ’ ನಲ್ಲಿಲ್ಲ. ಹಾಗಾಗಿ ಇವೆರಡನ್ನೂ ಒಟ್ಟಿಗೆ ಸೇರಿಸಿರುವುದರಲ್ಲಿ ಬೇರಾವ ಉದ್ದೇಶವೂ ಇರದೆ, ಎರಡೂ ಪುಟ್ಟದಾಗಿವೆ ಎಂಬುದೇ ಕಾರಣವಾಗಿದೆ.

ಸುಕುಮಾರ ಚರಿತಂ

ಕವಿಕಾವ್ಯ ವಿಚಾರ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹನ್ನೊಂದನೆಯ ಶತಮಾನವನ್ನು ಸೃಜನಶೀಲ ಕೃತಿ ಸಂಖ್ಯೆಯ ದೃಷ್ಟಿಯಿಂದ ‘ಬರಡುಗಾಲ’ವೆಂದು ಕೆಲವು ಮಂದಿ ಸಾಹಿತ್ಯ ಚರಿತ್ರಕಾರರು ಕರೆಯಲು ಇಷ್ಟಪಡುತ್ತಾರೆ. ಏಕೆಂದರೆ ಈ ಶತಮಾನದಲ್ಲಿ ಇಬ್ಬರೇ ಒಳ್ಳೆಯ ಕವಿಗಳು ಕೃತಿರಚನೆ ಮಾಡಿದ್ದು, ಒಬ್ಬ ‘ಪಂಚತಂತ್ರ’ವನ್ನು ಬರೆದ ದುರ್ಗಸಿಂಹನಾದರೆ, ಮತ್ತೊಬ್ಬ ‘ಸುಕುಮಾರಚರಿತಂ’ ಎಂಬ ಕಾವ್ಯವನ್ನು ರಚಿಸಿದ ಶಾಂತಿನಾಥ. ಎರಡೂ ಚಂಪೂ ಕೃತಿಗಳಾದರೂ ರಾಜನೀತಿಗೆ ಸಂಬಂಧಿಸಿದ ‘ಪಂಚತಂತ್ರ’ವು ಗದ್ಯ ಪ್ರಚುರತೆಯಿಂದ ಕೂಡಿ ವಸುಭಾಗಭಟ್ಟನ ಸಂಸ್ಕೃತ ಕೃತಿಯ ಅನುವಾದವಾಗಿದ್ದರೆ, ‘ಸುಕುಮಾರಚರಿತಂ’ ಅನ್ಯಮೂಲಗಳಿಂದ ಕಥಾವಸ್ತುವನ್ನು ಆಯ್ದುಕೊಂಡಿದ್ದರೂ ನಿರ್ವಹಣೆಯ ದೃಷ್ಟಿಯಿಂದ ಒಂದು ಸ್ವತಂತ್ರ ಜೈನ ಸಾಹಿತ್ಯ ಕೃತಿಯಾಗಿದೆ. ದುರ್ಗಸಿಂಹ ಬ್ರಾಹ್ಮಣ; ಶಾಂತಿನಾಥ ಜೈನ. ಜೈನಕವಿಗಳು ಇದುವರೆಗೆ ಧಾರ್ಮಿಕ ವಸ್ತುವನ್ನು ತೀರ್ಥಂಕರ ಚರಿತ್ರೆಗಳ ಮೂಲಕ ಪ್ರಚುರ ಪಡಿಸಲು ಚಂಪೂ ಪ್ರಕಾರವನ್ನು ಬಳಸಿದ್ದರು. ಪಂಪ ಪೊನ್ನ ರನ್ನರನ್ನು ಮುಂದಿನವರು ಕವಿ ‘ರತ್ನತ್ರಯ’ ರೆಂದು ಕರೆದದ್ದು ಈ ಕಾರಣಕ್ಕಾಗಿಯೇ. ಶಾಂತಿನಾಥ ಈ ದೃಷ್ಟಿಯಿಂದ ಹೊಸ ಮಾರ್ಗವನ್ನು ತುಳಿದ; ಸುಕುಮಾರಸ್ವಾಮಿಯ ಕತೆಯನ್ನು ವಿಸ್ತಾರವಾದ ಕಾವ್ಯವಾಗಿಸಲು ಪ್ರಯತ್ನಿಸಿ ತಕ್ಕ ಮಟ್ಟಿಗೆ ಸಫಲನಾದ. ಹಾಗಾಗಿ ಈ ಕೃತಿಗೆ ಚಂಪೂ ಕಾವ್ಯ ಪರಂಪರೆಯಲ್ಲಿ ಒಂದು ವಿಶಿಷ್ಟವಾದ ಮತ್ತು ತಕ್ಕಮಟ್ಟಿಗಿನ ಗೌರವಸ್ಥಾನ ಪ್ರಾಪ್ತವಾಗಿದೆ.

‘ಸುಕುಮಾರ ಚರಿತಂ’ ಕಾವ್ಯವನ್ನು ಬರೆದ ಶಾಂತಿನಾಥನು ತನ್ನ ಬಗ್ಗೆ ತಕ್ಕಮಟ್ಟಿನ ವಿವರಗಳನ್ನು ಎರಡು ಕಡೆ ನೀಡಿದ್ದಾನೆ; ತನ್ನ ಏಕೈಕ ಕಾವ್ಯದ ಒಡಲಲ್ಲಿ, ಮತ್ತು ಎರಡು, ಈ ಕಾವ್ಯ ರಚಿತವಾದನಂತರ ಶಾಂತಿನಾಥನೇ ಪಠ್ಯ ರಚಿಸಿರುವ ಒಂದು ಶಾಸನದಲ್ಲಿ ಅದನ್ನು ಶಿಕಾರಿಪುರದ ೧೩೬ನೇ ಶಾಸನ ಎಂದು ಗುರುತಿಸಲಾಗುತ್ತದೆ. ಅದರ ಪ್ರಕಾರ ಶಾಂತಿನಾಥನ ತಂದೆ ಗೋವಿಂದಾರಾಜ, ಗುರುಗಳು ವರ್ಧಮಾನಯತಿಗಳು; ಕರ್ಣಪಾರ್ಯ ಎಂಬ ಅಣ್ಣ ಹಾಗೂ ರೇವಣ ಎಂಬ ತಮ್ಮ.

ಜನಕಂ ಶ್ರೀಜೈನಭಾಸ್ವತ್ಕ್ರಮಯುಗಲ ಸರೋಜಾತಭೃಂಗಂ, ವಿಶಿಷ್ಟೇ
ಷ್ಟವಿಧಾನಂ ಸತ್ಯ ರತ್ನಾಕರನೆನಿಸಿದ ಗೋವಿಂದರಾಜಂ ಮುನೀಂದ್ರಾ
ಭಿನುತ ಶ್ರೀವರ್ಧಮಾನಬ್ರತಪತಿಗಳು ಪಾಧ್ಯಾಯರಾರ್ಹಂತ್ಯಧರ್ಮಂ
ತನಾಗಾರ್ಮಂ ಭೂಷೆ ರತ್ನತ್ರಯಮೆನೆ ನೆಗೞ್ದಂ ಧಾತ್ರಿಯೊಳ್
ಶಾಂತಿನಾಥಂ

ಈ ಪದ್ಯದಲ್ಲಿ ಕವಿಯ ಧಾರ್ಮಿಕಶ್ರದ್ಧೆ ಮತ್ತು ಅಭಿಮಾನ ಎದ್ದು ಕಾಣುತ್ತದೆ. ಅವನು ಕೆಲವಂಶಗಳಲ್ಲಿ ಪಂಪನನ್ನು ಹೋಲುತ್ತಾನೆ; ಮತ್ತೆ ಕೆಲವರಲ್ಲಿ ಅವನನ್ನು ಅನುಸರಿಸುತ್ತಾನೆ. ಪಂಪನ ಆತ್ಮಪ್ರತ್ಯಯ ಇವನಲ್ಲೂ ಇದೆ. “ಸಹಜಕವಿ ಚತುರಕವಿ ನಿಸ್ಸಹಾಯಕವಿ ಸುಕರಕವಿ ಮಿಥ್ಯಾತ್ವಪ್ರಹರಕವಿ ಸುಭಗಕವಿ ನುತ ಮಹಾಕವೀಂದ್ರಂ ಸರಸ್ವತೀಮುಖಮುಕುರಂ” ಎಂದು ತನ್ನ ಕಾವ್ಯಶಕ್ತಿಯನ್ನು ಹೊಗಳಿಕೊಳ್ಳುತ್ತಾನೆ.

ಪಂಪನೊಡನೆ ಈತನ ಕಾವ್ಯಶಕ್ತಿಯನ್ನು ಹೋಲಿಸಲಾಗದಿದ್ದರೂ, ಒಂದೆರಡು ವಿಷಯಗಳಲ್ಲಿ ಅವನ ಜೊತೆ ಈತನನ್ನೂ ಕುಳ್ಳಿರಿಸಬಹುದು. ಇವನು ಕ್ರಿ. ಶ. ೧೦೬೫ ರಿಂದ ೧೦೬೯ರವರೆಗೆ ಬನವಾಸಿ ಪನ್ನಿರ್ಚ್ಛಾಸಿರ ನಾಡಿನ ಮಹಾಮಂಡಲೇಶ್ವರನಾಗಿದ್ದ ಲಕ್ಷ್ಮಣರಾಜನ ಆಶ್ರಯದಲ್ಲಿದ್ದನು. ಈ ರಾಜನು ಚಾಲುಖ್ಯ ಚಕ್ರವರ್ತಿಗಳಾಗಿದ್ದ ತ್ರೈಲೋಕ್ಯಮಲ್ಲ ಸೋಮೇಸ್ವರ (ಕ್ರಿ. ಶ. ೧೦೪೨-೧೦೬೮) ಮತ್ತು ಭುವನೈಕಮಲ್ಲ ಸೋಮೇಶ್ವರ (ಕ್ರಿ. ಶ. ೧೦೬೮-೧೦೭೬) – ಈ ಇಬ್ಬರ ವಿಶ್ವಾಸಕ್ಕೆ ಪಾತ್ರನಾಗಿ ಪ್ರಬಲನಾಗಿದ್ದವನು. ಪ್ರಾಯಶಃ ಶಾಂತಿನಾಥನು ‘ಸುಕುಮಾರಚರಿತಂ’ ಕಾವ್ಯವನ್ನು ರಚಿಸಿದ ನಂತರ ಲಕ್ಷ್ಮಣರಾಜನ ಆಶ್ರಯಕ್ಕೆ ಬಂದಿರಬೇಕು. ಏಕೆಂದರೆ ಈ ಕಾವ್ಯದಲ್ಲಿ ಆತನ ಪ್ರಸ್ತಾಪವಿಲ್ಲ; ಆದರೆ ಶಾಸನದಲ್ಲಿ ಅವನನ್ನು ಕುರಿತ ಧಾರಾಳವಾದ ಸ್ತುತಿ ಪದ್ಯಗಳಿವೆ. ಈ ಶಾಸನದಲ್ಲಿ ಅನೇಕ ಪದ್ಯಗಳು ಮೂಲತಃ ‘ಸುಕುಮಾರಚರಿತಂ’ ಕಾವ್ಯದವಾಗಿದ್ದು ಕೆಲವೆಡೆ ಅಲ್ಪಸ್ವಲ್ಪ ಬದಲಾವಣೆಗಳಿಂದ ಕೂಡಿವೆ. ಈ ಶಾಸನದ ಕಾಲ ಕ್ರಿ. ಶ. ೧೦೬೮ (ಶಕ ೯೯೦); ಲಕ್ಷ್ಮಣರಾಜ ಮಹಾ ಮಂಡಲಾಧಿಪತಿಯಾದದ್ದು ಕ್ರಿ. ಶ. ೧೦೬೫ರಲ್ಲಿ. ಆದ್ದರಿಂದ ‘ಸುಕುಮಾರಚರಿತಂ’ ಕಾವ್ಯ ಅದಕ್ಕಿಂತ ಮುಂಚೆಯೇ ರಚಿತವಾಗಿದ್ದಿರಬೇಕು. ಆದರೆ ಎಷ್ಟು ಹಿಂದೆ? ನಗರದ ಎರಡು ಶಾಸನಗಳನ್ನು ಮಲ್ಲಿನಾಥ ಎಂಬೊಬ್ಬನು ಕ್ರಿ. ಶ. ೧೦೬೨ರಲ್ಲಿ ರಚಿಸಿದ್ದು, ನಗರದ ೫೮ನೇ ಶಾಸನದಲ್ಲಿನ ಪದ್ಯವೊಂದು ‘ಸುಕುಮಾರಚರಿತಂ’ ಕಾವ್ಯದ ಮೊದಲ ಆಶ್ವಾಸದ ೨೬ನೆಯ ಪದ್ಯದ ನೇರ ಪ್ರಭಾವಕ್ಕೆ ಒಳಗಾಗಿದೆಯೆಂದು ಹೇಳುವ ಡಿಎಲ್‌ಎನ್‌, ಆದ್ದರಿಂದ ಕಾವ್ಯದ ರಚನಾ ಕಾಲವು ಕ್ರಿ. ಶ. ೧೦೬೦ ಎಂದು ತೀರ್ಮಾನಿಸುತ್ತಾರೆ.

ಶಾಂತಿನಾಥನು ಲಕ್ಷ್ಮಣರಾಜನ ಆಪ್ತನಾಗಿದ್ದುದು ಮಾತ್ರವಲ್ಲದೆ, ಅವನ ಭಂಡಾರಾಧಿಕಾರಿಯೂ ರಾಜಕಾರ್ಯದುರಂಧರನೂ ಆಗಿದ್ದನು. ಅಂದರೆ ಶಾಂತಿನಾಥನೂ ಪಂಪನಂತೆಯೇ ರಾಜವಲಯದಲ್ಲಿ ಪ್ರಭಾವಶಾಲಿಯೂ ಶ್ರೀಮಂತನೂ ಆದ ಕವಿಯಾಗಿದ್ದ. ಅಥವ ಕಾವ್ಯ ಪ್ರೌಢಿಮೆಯು ರಾಜಾಶ್ರಯಕ್ಕೆ ಬರುವ ವೇಳೆಗಾಗಲೇ ಪ್ರಸಿದ್ಧವಾಗಿತ್ತು. ಹಾಗಾಗಿ, ಕವಿ ಕೇಳಿದಾಕ್ಷಣ ಲಕ್ಷ್ಮಣರಾಜನು ಬಳ್ಳಿಗಾವೆಯಲ್ಲಿ ಒಂದು “ಜಿನನಾಥಾವಾಸಮಂ ವಾಸವಕೃತಮೆನೆ ಮುನ್ನಂ ಶಿಲಾಕರ್ಮ್ಮದಿಂ ಶಾಸನಮಪ್ಪಂತಾಗಿರಲ್ಮಾಡಿಸಿ” ದನಂತೆ. ಈ ಬಸದಿಯ ಬಳಿ ಸ್ಥಾಪಿತಗೊಂಡ ಶಾಸನವೇ ಈಗ ಪ್ರಸಿದ್ಧವಾದ ಶಿಕಾರಿಪುರದ ೧೩೬ನೇ ಶಾಸನವೆಂದು ವಿದ್ವಾಂಸರ ಅಭಿಪ್ರಾಯ. ಇಂಥ ಶಾಂತಿನಾಥನು ಅದೇ ಪಂಪನಂತೆಯೇ “ಈ ಸುಕುಮಾರಿಚರಿತದೊಳ್‌ ನೋಱ್ಕೆ ಕಾವ್ಯಧರ್ಮಮುಮನಮಳ ಜಿನಧರ್ಮಮುಮಂ” ಎಂದು ತನ್ನ ರಚನೆಗೆ ಇಬ್ಬಗೆಯ ಉದ್ದೇಶವನ್ನು ಇರಿಸಿಕೊಂಡಿದ್ದಾನೆ. ಕವಿ ರಾಜಾಶ್ರಯಕ್ಕೆ ಬರುವ ಮುಂಚೆಯೇ ಕಾವ್ಯವನ್ನು ರಚಿಸಿದ್ದರಿಂದ ಪಂಪನಂತೆ ಅನವಶ್ಯಕವಾಗಿ ಆಶ್ರಯದಾತನ ವೈಭವಿಕರಣಕ್ಕೆ ಕೈಹಾಕಬೇಕಾದ ಅವಶ್ಯಕತೆಯೊದಗಲಿಲ್ಲ. ಅದು ಅವನ ಅದೃಷ್ಟ.

ಈ ಕಾವ್ಯದ ಪ್ರಾರಂಭದಲ್ಲಿ ಕವಿಯು ಅನೇಕ ಸಂಸ್ಕೃತ ಕನ್ನಡ ಸ್ಮರಣೆ ಮಾಡಿದ್ದಾನೆ. ಅಕಳಂಕದೇವ, ವಾದಿರಾಜ, ಧನುಂಜಯ -ಈ ಮೂವರು ಸಂಸ್ಕೃತ ಕವಿಗಳಾದರೆ, ಕನ್ನಡದ ಪಂಪ, ಪೊನ್ನ, ರನ್ನ – ಇವರನ್ನು ಹೊಗಳಿದ್ದಾನೆ. ಅಲ್ಲದೆ ಅವನು ಹೊಗಳುವ ಮತ್ತೊಬ್ಬ ಸಂಸ್ಕೃತ ಕವಿ ಒಬ್ಬ ‘ಕವಿಗಳಾದಿತ್ಯ’ ಎಂದು ಪ್ರಖ್ಯಾತನಾದವನು. ಪ್ರಾಶಯಃ ಅವನು ಸಂಸ್ಕೃತ ಗದ್ಯದಲ್ಲಿ ಶಲಾಕಾಪುರುಷರ ಕತೆಯನ್ನು ಹೇಳಿದ ಕವಿ ಪರಮೇಷ್ಠಿಯೆಂದು ಡಿಎಲ್‌ಎನ್‌ ಅವರ ಊಹೆ. ಕವಿ ಪ್ರಶಂಸೆಯ ನಂತರ ಶಾಂತಿನಾಥನು ಒಂದು ಗುರು ಸಮೂಹವನ್ನೇ ಸ್ತುತಿಸಿದ್ದಾನೆ; ಅವರಲ್ಲಿ ಕವಿಯ ಸ್ವಂತ ಗುರುವಾದ ವರ್ಧಮಾನನ ಹೆಸರೂ ಸೇರಿದೆ. ಈ ಗುರುಗಣದವರೆಲ್ಲ ಕೊಂಡಕುಂದಾನ್ವಯ ಮೂಲಸಂಗ ದೇಶಿಗಣ ಪುಸ್ತಕಗಚ್ಛಕ್ಕೆ ಸೇರಿದವರು.

‘ಸುಮಾರಿಚರಿತಂ’ ಕಾವ್ಯದ ಮೂಲವಾದವು ಎಂದು ಬಗ್ಗೆಯೂ ಜಿಜ್ಞಾಸೆ ನಡೆದಿದೆ. ಸಾಮಾನ್ಯವಾಗಿ ಪರಂಪರಾಗತವಾದ ಜೈನ ಕತೆಗಳನ್ನು ಪ್ರಾಕೃತದಲ್ಲಿ ಗಾಹೆಯ ರೂಪವಾಗಿ ಸಂಕ್ಷಿಪ್ತಗೊಳಿಸಿವುದೂ, ಮುಂದೆ ಅವುಗಳನ್ನು ಆರಾಧನಾ ಗ್ರಂಥಗಳಲ್ಲಿ ವಿಸ್ತರಿಸಿ ರೇಕಾಚಿತ್ರದಂತೆ ಬರೆದಿರುವುದೂ, ಈ ಮುಂದೆ ಕೆಲವು ಕವಿಗಳು ಇವುಗಳನ್ನು ಮತ್ತಷ್ಟು ವಿಸ್ತಾರಗೊಳಿಸಿ, ವರ್ಣನೆ – ವಿವರಣೆಗಳಿಂದ ಪುಷ್ಪಗೊಳಿಸಿ ಕಾವ್ಯಗಳಾಗಿ ಬರೆದಿರುವುದೂ ಕಾಣುತ್ತದೆ. ಇವುಗಳಲ್ಲಿ ಸಾಕಷ್ಟು ಪ್ರಸಿದ್ಧವಾದ ಸುಕುಮಾರನ ಕತೆಯೂ ಈ ಪ್ರಕ್ರಿಯೆಗೆ ಒಳಗಾದದ್ದೇ. ಹಾಗಾಗಿ ಸುಕುಮಾರನ ಬಗೆಗಿನ ಕತೆಗಳು ಕನ್ನಡ ಸಂಸ್ಕೃತ ಪ್ರಾಕೃತ – ಈ ಮೂರು ಭಾಷೆಗಳಲ್ಲಿ ದೊರೆಯುತ್ತವೆ. ಶಾಂತಿನಾಥನಿಗಿಂತ ಹಿಂದೆ ಇದ್ದ ಸುಕುಮಾರ ಕತೆಗಳು ಪ್ರಾಕೃತದಲ್ಲಿವೆ, ಸಂಸ್ಕೃತದವು ಅವನಿಗಿಂತ ಈಚಿನವು. ಆದರೆ ಕ್ರಿ. ಶ. ೯೩೨ರ ಹೊತ್ತಿಗೆ ರಚಿತವಾದ ಹರಿಷೇಣನ ಸಂಸ್ಕೃತ ‘ಬೃಹತ್ಕಥಾಕೋಶ’ ಎಂಬ ಗ್ರಂಥದಲ್ಲಿ ಇನ್ನೂರ ಅರವತ್ತು ಶ್ಲೋಕಗಳಲ್ಲಿ ಸುಕುಮಾರನ ಕತೆ ಬಂದಿದೆ. ಅದನ್ನು ಕವಿ ನೋಡಿದ್ದಿರಬಹುದು. ಆದರೆ ಕನ್ನಡ ‘ವಡ್ಡಾರಾಧನೆ’ ಯಲ್ಲಿನ ವಿವರಗಳೊಂದಿಗೆ ಈ ಕಾವ್ಯದ ವಿವರಗಳು ಹೆಚ್ಚು ತಾಳೆಯಾಗುವುದರಿಂದ ಅದನ್ನು ತನ್ನ ಸ್ಫೂರ್ತಿಯ ಸಲೆಯಾಗಿ ಬಳಸಿಕೊಂಡಿರುವ ಸಾಧ್ಯತೆಗಳು ಹೆಚ್ಚು, ‘ವಡ್ಡಾರಾಧನೆ’ ಯ ಕಾಲ ಖಚಿತವಾಗಿ ತಿಳಿಯದು; ಹೀಗಾಗಿ ಕೆಲವರು ಅದನ್ನು ಶಾಂತಿನಾಥನಿಗಿಂತ ಈಚಿನದಿರಬಹುದು, ‘ಸುಕುಮಾರಿಚರಿತಂ’ ಕಾವ್ಯದ ಪ್ರಭಾವವೇ ‘ವಡ್ಡಾರಾಧನೆ’ ಯ ಮೇಲಾಗಿರಬಹುದು ಎಂದೂ ಅನುಮಾನಿಸುತ್ತಾರೆ. ಇವೆರಡನ್ನು ಡಿಎಲ್‌ಎನ್‌ ವಿವರವಾಗಿ ಹೋಲಿಸಿದ್ದಾರೆ. ಎರಡರಲ್ಲಿಯೂ ಅಭಿಪ್ರಾಯ ಹಾಗೂ ಶಬ್ಧ ವಿನ್ಯಾಸದಲ್ಲಿ ಸಾಕಷ್ಟು ಸಾಮ್ಯವಿದೆ; ‘ವಡ್ಡಾರಾಧನೆ’ ಯಲ್ಲಿ ಸಂಗ್ರಹವಾಗಿ ಸೂಚಿತವಾದ ಅನೇಕ ಅಂಶಗಳು ‘ಸುಕುಮಾರಿಚರಿತಂ’ ನಲ್ಲಿ ವಿಸ್ತರಣಗೊಂಡು ಕತೆ ವಿಸ್ತೃತರೂಪವನ್ನು ತಳೆಯುತ್ತದೆ; ‘ವಡ್ಡಾರಾಧನೆ’ ಯ ಪದಪ್ರಯೋಗ ರೀತಿ, ಶೈಲಿ, ಭಾಷಾಸ್ವರೂಪ ಇವೆಲ್ಲ ಶಾಂತಿನಾಥನಿಗಿಂತ ಹಿಂದಿನವು; ಶಾಂತಿನಾಥ ಅನುಕರಣಶೀಲನಾದ್ದರಿಂದ (ಪಂಪ ಪೊನ್ನ ರನ್ನರ ಕಾವ್ಯಗಳಿಗೆ ಅವನು ಸಾಕಷ್ಟು ಋಣಿಯಾಗಿದ್ದಾನೆ.) ‘ವಡ್ಡಾರಾಧನೆ’ ಯನ್ನು ಅನುಸರಿಸುವ ಸಾಧ್ಯತೆಯೇ ಹೆಚ್ಚು; ಅಲ್ಲದೆ ಕತೆ ಸಾಮಾನ್ಯವಾಗಿ ಸಂಕ್ಷಿಪ್ತತೆಯಿಂದ ವಿಸ್ತಾರದ ಕಡೆ ಸಾಗುವುದೇ ಹೊರತು ಅದರ ವಿರುದ್ಧವಾಗಿಯಲ್ಲ ಎಂದು ಹೇಳಿ, ಈ ಎಲ್ಲ ಕಾರಣಗಳಿಂದ ಶಾಂತಿನಾಥನು ‘ವಡ್ಡಾರಾಧನೆ’ ಯನ್ನೇ ಅನುಸರಿಸಿದ್ದಾನೆ ಎಂದು ತೀರ್ಮಾನಿಸುತ್ತಾರೆ, ಡಿಎಲ್‌ಎನ್‌ ಆದರೆ ಅವರು ಕೇವಲ ಅನುಕರಣಶೀಲನಲ್ಲ, ಸ್ವಂತಿಕೆಯೂ ಇದೆ. ಹೀಗಾಗಿ ವಿಸ್ತರಣಕಾರ್ಯದಲ್ಲೂ, ಕೆಲವಂಶಗಳನ್ನು ಬಿಡುವುದರಲ್ಲೂ, ಕೆಲವು ಹೊಸ ಅಂಶಗಳನ್ನು ಸೇರಿಸುವುದರಲ್ಲೂ ಅವನು ಸ್ವೋಪಜ್ಞೆಯನ್ನು ತೋರಿಸುತ್ತಾನೆ. ಇದರಿಂದ ಅವನು ‘ವಡ್ಡಾರಾಧನೆ’ ಯ ಸುಮಾರು ಮೂವತ್ತು ಪುಟಗಳ ದೀರ್ಘಕತೆಯನ್ನು ಪಡೆದ ಕತೆಯನ್ನು ಒಂಭೈನೂರು ಪದ್ಯಗಳಿಗೂ ಮಿಕ್ಕಿದ ಕಾವ್ಯವಾಗಿ ಮಾರ್ಪಡಿಸಿ ತಕ್ಕಮಟ್ಟಿಗಿನ ಯಶಸ್ಸು ಪಡೆದಿದ್ದಾನೆ.

ಕತೆಯ ಹಂದರ

ಜಂಬೂದ್ವೀಪದ ಮೇರುಪರ್ವತದ ದಕ್ಷಿಣಕ್ಕಿರುವುದು ಮಹಿಮಾಸ್ಪದವಾದ ವತ್ಸದೇಶ; ಅದರ ರಾಜಧಾನಿ ಕೌಶಂಭಿಪುರ. ಅದರ ದೊರೆ ಅತಿಬಲ ಎಂಬ ಅರಸು; ರಾಣಿ ಮನೋಹರಿ. ರಾಜನಿಗೆ ಮಂತ್ರಿ ಮತ್ತು ಪುರೋಹಿತನಾಗಿದ್ದನು ಸೋಮಶರ್ಮನೆಂಬ ಬ್ರಾಹ್ಮಣ, ಅವನ ಹೆಂಡತಿ ಕಾಶ್ಯಪಿ. ಈ ಬ್ರಾಹ್ಮಣ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು, ಅಗ್ನಿಭೂತಿ ಮತ್ತು ವಾಯುಭೂತಿ ಎಂಬುವವರು. ಇವರಿಗೆ ವಿದ್ಯೆಯಲ್ಲಿ ಆಸಕ್ತಿಯಿರಲಿಲ್ಲ; ಆದರೆ ವಿಷಯಾಸಕ್ತಿ ಧಾರಳವಾಗಿತ್ತು. ಮನೆಯಲ್ಲಿ ಬೇಕಾದಷ್ಟು ಇದ್ದುದರಿಂದ ಈ ಮಕ್ಕಳು ಉಂಡುತಿಂದು ಉಂಡಾಡಿಗಳಾಗಿ ಬೆಳೆದರು; ತಂದೆ ಗಳಿಸಿದನ್ನು ಉಡಾಯಿಸುವುದೇ ತಮ್ಮ ಪರಮಕರ್ತವ್ಯವೆಂಬಂತೆ ವೆಚ್ಚ ಮಾಡಿದರು. ಇದರಿಂದಾಗಿ ತಂದೆಯ ಮನಸ್ಸು ಕೊರಗಿನಿಂದ ತುಂಬಿತು; ಕೆಲಕಾಲದ ಬಳಿಕ ಇದೇ ನೋವಿನಿಂದ ಅವನು ಕಾಲವಶನಾದ.

ಸೋಮಶರ್ಮನ ಸಾವಿನ ಸುದ್ದಿ ತಿಳಿದು ದುಃಖಿತನಾದ ಅತಿಬಲನು ಅಗ್ನಿಭೂತಿ – ವಾಯುಭೂತಿಗಳನ್ನು ಆರಮನೆಗೆ ಬರಮಾಡಿಕೊಂಡು ಸಾಂತ್ವನದ ಮಾತುಗಳನ್ನಾಡಿದ. ಅಲ್ಲದೆ ಅವರಿಗೆ ಗೌರವ ಸಲ್ಲಿಸಿ, ಅವರ ತಂದೆಯ ಪದವಿಯನ್ನು ದಯಪಾಲಿಸಿ ಕಳಿಸಿಕೊಟ್ಟ. ಆದರೇನು, ನಾಯಿ ಬಾಲಕ್ಕೆ ದಬ್ಬೆ ಕಟ್ಟಿದಂತಾಯಿತು. ಒಮ್ಮೆ ರಾಜಾಸ್ಥಾನಕ್ಕೆ ವಿಜಯಜಿಹ್ವನೆಂಬ ವಾದಿ ಎಲ್ಲಿಂದಲೋ ಬಂದು ತನ್ನ ಚಾತುರ್ಯವನ್ನು ಪ್ರದರ್ಶಿಸಿದ. ತನ್ನಲ್ಲಿಯೂ ದೊಡ್ಡ ವಿದ್ವಾಂಸರಿರುವುದನ್ನು ಅವನಿಗೆ ತೋರಿಸಲು ರಾಜನು, ಸೋಮಶರ್ಮನ ಮಕ್ಕಳು ತಂದೆಯಂತೆಯೇ ಪಂಡಿತರೆಂದು ಭಾವಿಸಿದ್ದರಿಂದ, ಅವರನ್ನು ಬರಹೇಳಿದ. ಆದರೆ ಆವರು ಶುಂಠರಾದದ್ದರಿಂದ ಕಕ್ಕಾಬಿಕ್ಕಿಗಳಾಗಿ, ಕಣ್ಣೀರು ಸುರಿಸುತ್ತ ನಿಂತರೇ ವಿನಾ ವಾದಮಾಡುವ ಯಾವುದೇ ಸಾಮಾರ್ಥ್ಯವನ್ನು ಪ್ರದರ್ಶಿಸಲಿಲ್ಲ. ಇದರಿಂದ ಅತಿಬಲನಿಗೆ ನಿರಾಸೆಯೂ ಆಯಿತು; ಅವಮಾನವಾದಂತೆಯೂ ಅಯಿತು. ಅವರಿಗಿತ್ತಿದ್ದ ಸ್ಥಾನಮಾನಗಳನ್ನು ರಾಜ ಕಿತ್ತುಕೊಂಡು ಇಬ್ಬರನ್ನೂ ಮನೆಗಟ್ಟಿದ.

ಮನೆಗೆ ಮರಳಿದ ಅಣ್ಣತಮ್ಮಂದಿರು ತಾಯಿಗೆ ಮುಖ ತೋರಿಸಲಾರದೆ ಅಳುತ್ತ ನಿಂತರು. ಬಹಳ ವಿಚಾರಿಸಿದ ಮೇಲೆ ನಡೆದದ್ದನ್ನೆಲ್ಲ ವಿವರಿಸಿದರು; ವಿದ್ಯೆ ಕಲಿಯದೆ ಅವಮಾನಗೊಂಡ ಬಗೆಯನ್ನು ಅರುಹಿದರು; ಈಗ ತಾವು ವಿದ್ಯೆ ಕಲಿಯಲು ತಯಾರಿರುವುದನ್ನು ಸೂಚಿಸಿದರು. ತಾಯಿ ಮೊದಮೊದಲು ಮೂದಲಿಕೆಯ ಮಾತುಗಳನ್ನಾಡಿದರೂ ಕೊನೆಗೆ, ಅವರು ಪಶ್ಚಾತ್ತಾಪ ಪಡುವುದನ್ನು ಕಂಡು ಅವರನ್ನು ಸಮಾಧಾನಮಾಡಿ, ಇನ್ನೂ ಕಾಲ ಮಿಂಚಿಲ್ಲವೆಂದು ತಿಳಿಸಿ, ಮಗಧ ದೇಶದ ಸುಬಲ ಮಹಾರಾಜನ ಮಂತ್ರಿಯಾದ ಸೂರ್ಯಮಿತ್ರನು ತನ್ನ ನಾದಿನಿಯ ಗಂಡ, ಆದ್ದರಿಂದ ಅವರ ಸೊದರಮಾವ, ತುಂಬ ದೊಡ್ದ ಪಂಡಿತ, ಅವನಲ್ಲಿ ಅವರು ವಿದ್ಯೆ ಕಲಿಯುವ ಏರ್ಪಾಡು ಮಾಡುವೆನೆಂದು ಆಶ್ವಾಸನೆಯಿತ್ತಳು. ಆಂತೆಯೇ ಸೂರ್ಯಮಿತ್ರನಿಗೆ ಒಂದು ಓಲೆಯನ್ನು ಬರೆಯಿಸಿ ಅವರ ಕೈಗಿತ್ತು ಸೂಕ್ತ ಹಿತವಚನಗಳೊಡನೆ ಅವರನ್ನು ಮಗಧಕ್ಕೆ ಕಳಿಸಿಕೊಟ್ಟಳು.

ಅಗ್ನಿಭೂತಿ – ವಾಯುಭೂತಿಯರು ಉತ್ಸಾಹದಿಂದ ಪ್ರಯಾಣ ಬೆಳಸಿ ಕೆಲವು ದಿನಗಳ ಬಳಿಕ ಮಗಧದ ರಾಜಧಾನಿ ರಾಜಗೃಹವನ್ನು ತಲುಪಿದರು; ಸೂರ್ಯಮಿತ್ರನನ್ನು ಕಂಡು ತಾಯಿ ಕೊಟ್ಟಿದ್ದ ಓಲೆಯನ್ನು ಅವನ ಕೈಗಿತ್ತರು. ಅದನ್ನು ಮನಸ್ಸಿನಲ್ಲಿಯೇ ಓದಿಕೊಂಡ ಆತನು, ವಿದ್ಯೆಗಾಗಿ ಬಂದ ಅವರನ್ನು ಸೋದರಳಿಯರೆಂದು ಒಪ್ಪಿಕೊಂಡರೆ ಅವರು ಸದರ ವಹಿಸಿ ಕಲಿಯಲಾರದೇ ಹೋಗಬಹುದೆಂದು ಹೆದರಿ, ತನಗೆ ಕಾಶ್ಯಪಿ ಯಾರು ಎಂಬುದೇ ತಿಳಿಯದು ಎಂದು ನಟಿಸಿ, ಆದರೂ ವಿದ್ಯೆಯ ಹಂಬಲದಿಂದ ಬಂದಿರುವುದರಿಂದ, ತಮ್ಮ ಆಹಾರದ ಏರ್ಪಾಟು ತಾವೇ ಮಾಡಿಕೊಂಡರೆ. ಅವರಿಗೆ ತಾನು ವಿದ್ಯೆ ಹೇಳಿಕೊಡುವುದಾಗಿ ಆಶ್ವಾಸನೆ ಕೊಟ್ಟು ತನ್ನ ಮನೆಯಲ್ಲಿಯೇ ಇರಿಸಿಕೊಂಡ. ಹೇಗಾದರೂ ವಿದ್ಯಾವಂತರಾದರೆ ಸಾಕೆಂದು ಒಪ್ಪಿದ ಅವರು ಭಿಕ್ಷೆ ಎತ್ತಿ ಹೊಟ್ಟೆ ಪಾಡು ನಿಭಾಯಿಸುವುದೆಂದು ನಿರ್ಣಯಿಸಿದರು. ಆದರೆ ಬೇಡಿ ತಂದ ಆನ್ನಕ್ಕೆ ಎಣ್ಣೆ -ಉಪ್ಪುಗಳನ್ನು ನೀಡಬಾರದೆಂದು ಸೂರ್ಯಮಿತ್ರ ಅಡಿಗೆಯರಿಗೆ ಕಟ್ಟಪ್ಪಣೆ ಮಾಡಿದ.

ಸರಿ, ಅಣ್ಣ ತಮ್ಮಂದಿರ ವಿದ್ಯೆ ಆರಂಭಗೊಂಡಿತು. ಹುಡುಗರೂ ಬುದ್ಧಿವಂತರೇ, ಆದರೆ ಈವರೆಗೆ ಉಂಡಾಡಿಗಳಾಗಿದ್ದರು. ಈಗ ಶ್ರದ್ಧೆಯಿಂದ ಹಾಗೂ ಕಷ್ಟ ಪಟ್ಟು ಕಲಿಯಲು ತೊಡಗಿದ್ದರಿಂದ ಬೇಗ ಓದು ಕಲಿತರು; ಸೂರ್ಯಮಿತ್ರ ತುಂಬ ಕಕ್ಕುಲತೆಯನ್ನು ಮನಸ್ಸಿನಲ್ಲಿ ಹೊಂದಿದ್ದು ಅವರಿಗೆ ವಿದ್ಯೆಯನ್ನು ಧಾರೆ ಎರೆದ. ಕಾಲಕಾಲಕ್ಕೆ ಅವರಿಬ್ಬರೂ ವೇದವೇದಾಂತ, ತರ್ಕವ್ಯಾಕರಣ ಮುಂತಾದ ಆ ಕಾಲದ ಸಕಲಶಾಸ್ತ್ರಗಳಲ್ಲೂ ಪಾರಂಗತರಾದರು. ಆದರೆ ವಿಚಿತ್ರ : ಒಂದೇ ತಂದೆತಾಯಿಗಳ ಮಕ್ಕಳಾಗಿದ್ದರೂ, ಒಂದೇ ವಾತಾವರಣದಲ್ಲಿಯೇ ಇಬ್ಬರೂ ವಿದ್ಯೆ ಕಲಿತಿದ್ದರೂ ಅವರಿಬ್ಬರ ಹುಟ್ಟುಗುಣಗಳ ವ್ಯತ್ಯಾಸದಿಂದಾಗಿ ಕಾಲಕ್ರಮೇಣ ಇಬ್ಬರೂ ಸ್ವಭಾವದಲ್ಲಿ ಭಿನ್ನರಾದರು; ಅಗ್ನಿಭೂತಿ ಸಾತ್ವಿಕನಾದರೆ, ವಾಯುಭೂತಿ ಗರ್ವಿಷ್ಠರಾದ. ಕಲಿಸಬಹುದಾದುದೆಲ್ಲವನ್ನೂ ಹೇಳಿಕೊಟ್ಟ ಮೇಲೆ ಸೂರ್ಯಮಿತ್ರ, ತಾನು ಅವರ ಸೋದರಮಾವನೇ ಎಂದು ಒಪ್ಪಿಕೊಂಡು, ಅದನ್ನು ನಿರಾಕರಿಸಿದ್ದ ತನ್ನ ಉದ್ದೇಶವನ್ನು ವಿವರಿಸಿ ಅವರನ್ನು ಸತ್ಕರಿಸಿದ; ಉಡಲು ತೊಡಲು ವಸ್ತ್ರಾಭರಣಗಳನ್ನಿತ್ತು ಔತಣ ಮಾಡಿಸಿ ಬೀಳ್ಕೊಟ್ಟ. ಅವರು ಊರಿಗೆ ವಾಪಸು ಹೊರಟರು. ಅಗ್ನಿಭೂತಿಗೆ ಸೂರ್ಯಮಿತ್ರನ ಬಗ್ಗೆ ಕೃತಜ್ಞತೆ ಬಲಗೊಂಡಿತು; ಆದರೆ ವಾಯುಭೂತಿಗೆ ತಮಗೆ ಯಾವ ಸೌಲಭ್ಯವನ್ನು ಕೊಡದ ಅವನ ಬಗ್ಗೆ ಮನಸ್ಸು ಕಹಿಯಾಯಿತು. ಅವನನ್ನು ಪಾಪಕರ್ಮಿ ಎಂದು ಜರೆದ; ಗುರುನಿಂದೆ ಮಾಡಿದ.

ಕೌಶಂಬಿಪುರಕ್ಕೆ ಅವರಿಬ್ಬರೂ ಮರಳಿದರು; ಮನೆಗೆ ಬಂದು ತಾಯಿಗೆ ನಮಸ್ಕರಿಸಿದರು. ತನ್ನ ಮಕ್ಕಳು ಈಗ ಸರಿದಾರಿಗೆ ಬಂದರಲ್ಲ ಎಂದು ಅವಳು ಸಂತಸಗೊಂಡಳು, ಸಕಲ ವಿದ್ಯಾಪಾರಂಗತರಾದ ಅವರ ಬಗ್ಗೆ ಅಭಿಮಾನ ತಾಳಿದಳು. ಮಾರನೆಯ ದಿನ ಅವರಿಬ್ಬರೂ ರಾಜನ ಬಳಿ ಬಂದು ತಮ್ಮ ಸಾಧನೆಗಳನ್ನು ತಿಳಿಸಿದರು. ಅವನಿಗೂ ಸಂತೋಷವಾಯಿತು. ಪಂಡಿತರಾದ ಇಬ್ಬರೂ ಈಗ ಎಲ್ಲ ಗೌರವಗಳಿಗೆ ಅರ್ಹರೆಂಬುದನ್ನು ಮನಗಂಡ ರಾಜನು ಅವರಿಗೆ ಹಿಂದಿನ ಪದವಿಗಳನ್ನಿತ್ತು ಸನ್ಮಾನಿಸಿದ. ಹೀಗೆ ಅವರ ಬದುಕು ಒಂದು ನಿಶ್ಚಿತ ಘಟ್ಟವನ್ನು ಮುಟ್ಟಿತು.

ಈ ಕಡೆ ರಾಜಗೃಹದಲ್ಲಿ ಒಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆಯಿತು; ಸುಬಲ ಮಹಾರಾಜನು ಒಮ್ಮೆ ಸ್ನಾನಕ್ಕೆ ಹೋಗುವಾಗ ತನ್ನ ಬೆರಳಲ್ಲಿದ್ದ ರತ್ನಖಚಿತ ಉಂಗುರವೊಂದನ್ನು ತೆಗದು ಬಳಿಯಿದ್ದ ಸೂರ್ಯಮಿತ್ರನ ಕೈಗಿತ್ತ. ಅವನು ಅದನ್ನು ತನ್ನ ಬೆರಳಿಗೆ ಸಿಕ್ಕಿಸಿಕೊಂಡ. ಮಾರನೆಯ ಬೆಳಿಗ್ಗೆ ಸೂರ್ಯಮಿತ್ರನು ತೋಟದ ತಾವರೆಯ ಕೊಳದಲ್ಲಿ ಮಿಂದು ಅರ್ಘ್ಯವೀಯುವಾಗ ಅವನ ಬೆರಳಲ್ಲಿದ್ದ ಉಂಗುರ ಅವನಿಗರಿವಿಲ್ಲದಂತೆ ಜಾರಿತು. ಮುಂದೆ ಯಾವಾಗಲೋ ಒಮ್ಮೆ ಆಕಸ್ಮಾತ್ತಾಗಿ ಬೆರಳು ನೋಡಿಕೊಂಡಾಗ ಅವನಿಗೆ ಉಂಗುರದ ನೆನಪು ಬಂತು, ಗಾಬರಿಯಾಯಿತು; ಕಳೆದು ಹೋಯಿತು ಎಂದರೆ ರಾಜನಿಗೆ ಅನುಮಾನವೂ ಬರಬಹುದು ಎಂದು ಖೇದವಾಯಿತು. ಸುತ್ತುಮುತ್ತ ಹುಡುಕಿದರೂ ಪ್ರಯೋಜನವಾಗದೆ, ಅದನ್ನು ಹುಡಕಲೆಂದು ಹೊರಗೆ ಹೊರಟ. ಸ್ವಲ್ಪ ದೂರ ಹೋದ ಮೇಲೆ ಸುಧರ್ಮಾಚಾರ್ಯರೆಂಬ ಒಬ್ಬ ಮುನಿಗಳು ಕಾಣಿಸಿದರು; ಇವನನ್ನು ಕಂಡ ತಕ್ಷಣವೇ ಇವರ ಚಿಂತೆಯ ಕಾರಣವಾವುದೆಂಬುದನ್ನು ತಿಳಿಸಿದುದಲ್ಲದೆ, ಸೂರ್ಯಮಿತ್ರ ಧರಿಸಿದ್ದ ಉಂಗುರ ಮೀಯುವಾಗ ಕಳಚಿಹೋಗಿ ತಾವರೆಯಲ್ಲಿ ಸಿಕ್ಕಿಕೊಂಡಿದೆಯೆಂದೂ ಮಾರನೆಯ ಬೆಳಿಗ್ಗೆ ಸೂರ್ಯೋದಯವಾದಾಗ ತಾವರೆ ಅರಳಿ ಉಂಗುರ ಸಿಕ್ಕುವುದೆಂದೂ ತಮ್ಮ ಅವಧಿಜ್ಞಾನದ ಬಲದಿಂದ ಹೇಳಿದರು.

ಸೂರ್ಯಮಿತ್ರ ರಾತ್ರಿಯೆಲ್ಲ ಕಾದು ಮರುದಿನ ಬೆಳಿಗ್ಗೆ ಕೊಳದ ಬಳಿ ಹೋಗಿ ನೋಡಿದರೆ, ಮುನಿಗಳು ಹೇಳಿದಂತೆಯೇ ಉಂಗುರ ಸಿಕ್ಕಿತು! ಅವನ ಗಮನ ಈಗ ಅವರ ಜ್ಞಾನದ ಕಡೆ ತಿರುಗಿತು; ತನಗೂ ಅದನ್ನು ಹೇಳಿಕೊಡಲು ಗುರುಗಳನ್ನು ಕೇಳಿಕೊಂಡ. ಆ ವಿದ್ಯೆ ದಿಗಂಬರ ಮಲಧಾರಿಗೆ ಮಾತ್ರ ಸಾಧ್ಯವೆಂಬುದನ್ನು ಗುರುಗಳು ಹೇಳಿದಾಗ, ಅದನ್ನು ಕೈವಶಮಾಡಿಕೊಳ್ಳಬೇಕೆಂಬ ಸಂಕಲ್ಪದಿಂದ ತಾನೂ ಹಾಗೆಯೇ ಮಾರ್ಪಟ್ಟ, ದಿನ ಕಳೆದಂತೆ ಆಚಾರ್ಯರು ಹೇಳಿದ ಧರ್ಮ ಗ್ರಂಥಗಳನ್ನೆಲ್ಲ ಓದುತ್ತ, ಅವನಿಗೆ ಭವಿಷ್ಯ ಜ್ಞಾನದ ಮೇಲಣ ಮೋಹ ಕಡಿಮೆಯಾಗಿ ಸೃಷ್ಟಿ ರಹಸ್ಯವು ಬೆರಗುಂಟುಮಾಡಿ, ಸಂಸಾರದ ಅನಿತ್ಯತೆ ಅನುಭವಕ್ಕೆ ಬಂದು, ಜೈನತತ್ವದಲ್ಲಿ ನಂಬಿಕೆಯುಂಟಾಗಿ ತಪಸ್ಸು ಮಾಡಿ ಅವಧಿಜ್ಞಾನವನ್ನು ಸಾಧಿಸಿದರೂ ಕೈವಲ್ಯಕ್ಕೆ ಮನ ಹಾತೊರೆಯಿತು. ಅನೇಕ ವ್ರತಗಳನ್ನು ತಾಳಿ ಕೃಶವಾದ; ಕೊನೆಗೆ ಏಕವಿಹಾರಿಯಾಗಿ ಸಂಚಾರಕ್ಕೆಂದು ಹೊರಟ.

ಕೊನೆಗೊಮ್ಮೆ ಸೂರ್ಯಮಿತ್ರ ಭಟ್ಟಾರಕ ಕೌಶಂಬಿ ನಗರಕ್ಕೆ ಬಂದ. ಅಗ್ನಿಭೂತಿಯು ಗುರುವನ್ನು ಗುರುತಿಸಿ ಮನೆಗೆ ಕರೆತಂದು ಭಕ್ತಿಯಿಂದ ಸತ್ಕಾರಗೈದ. ಗುರುವನ್ನು ಬೀಳ್ಕೊಡುವಾಗ ತಮ್ಮನಾದ ವಾಯುಭೂತಿಯನ್ನೂ ಕಂಡು ಹರಸಬೇಕೆಂದು ಬೇಡಿಕೊಂಡ. ಅದರಂತೆ ಅವನ ಮನೆಗೆ ಅವನನ್ನು ಕರೆತಂದಾಗ ತಮ್ಮ ಕಂಡರೂ ಕಾಣದಂತೆ ಅವಜ್ಞೆಮಾಡಿ ಉದಾಸೀನನಾಗಿದ್ದ ಅಗ್ನಿಭೂತಿ ಸಂಕಟದಿಂದ ತಮ್ಮನಿಗೆ ಬುದ್ಧಿಮಾತು ಹೇಳಿದ. ಸೋದರಮಾವನ ಮೇಲಿನ ಹಿಂದಿನ ಸಿಟ್ಟೆಲ್ಲ ಘನೀಭವಿಸಿ ಅಗ್ನಿಭೂತಿಯು ಸೂರ್ಯಮಿತ್ರನನ್ನೂ, ಅವನ ಕುಲವನ್ನೂ ಹೀನಾಮಾನವಾಗಿ ಬೈದ. ಆದರೆ ಸೂರ್ಯಮಿತ್ರ ಕ್ಷಮಾಮೂರ್ತಿಯಾಗಿ ಸಮಾಧಾನಚಿತ್ತದಿಂದಲೇ ಅಲ್ಲಿಂದ ಹೊರಟ. ಗುರುಗಳಿಗೆ ತನ್ನಿಂದಲೇ ಅವಮಾನವಾಯಿತೆಂಬ ಪಾಪಪ್ರಜ್ಞೆಯಿಂದ ಬೆಂದುಹೋದ ಅಗ್ನಿಭೂತಿಯು, ಅವನಲ್ಲಿಯೇ ದೀಕ್ಷೆ ಪಡೆದು ಗುರುವಿನೊಡನೆಯೇ ವಿಹಾರಕ್ಕೆ ಹೊರಟ.

ನಡೆಯುತ್ತ ಬಂದ ಅವರು ಅಂಗದೇಶದ ಚಂಪಾನಗರವನ್ನು ತಲುಪಿದರು. ಅಲ್ಲಿನ ಉದ್ಯಾನವನದಲ್ಲಿದ್ದ ನಾಗಮಂಟಪದಲ್ಲಿ ಉಳಿದುಕೊಂಡರು. ಮರುದಿನ ಗುರು ಅಗ್ನಿಭೂತಿಯನ್ನು ಭಿಕ್ಷೆಗೆ ಕಳಿಸಿದ. ದಾರಿಯಲ್ಲಿ ಅವನು ಒಂದು ನೇರಿಳೆ ಮರದ ಕೆಳಗೆ ತಡಕಾಡಿ ಹಣ್ಣು ಆಯುತ್ತಿದ್ದ ಒಬ್ಬ ಹುಟ್ಟುಗುರುಡಿ ಹೊಲೆಯ ಹುಡುಗಿಯನ್ನು ಕಂಡ, ಅವಳ ಮೈಯೆಲ್ಲ ಗಾಯಗಳು ರಕ್ತ ಕೀವುಗಳಿಂದ ಹೊಲಸು ನಾರುತ್ತಿತ್ತು. ಅವಳನ್ನು ಕಂಡಾಗ ಅಗ್ನಿಭೂತಿಗೆ ಮರುಕವುಂಟಯಿತು, ತನ್ನ ಕುಂಚದಿಂದ ನೇರಿಳೆ ಹಣ್ಣುಗಳನ್ನು ಗುಡಿಸಿ ಅವಳೆಡೆಗೆ ನೂಕಿ ವಿಹ್ವಲಮನದಿಂದಲೇ ಬೀಡುದಾಣಕ್ಕೆ ವಾಪಸಾದ.

ಅಗ್ನಿಭೂತಿಯು ಭಿಕ್ಷವಿಲ್ಲದೆ ಬಂದುದನ್ನು ಕಂಡು ಸೂರ್ಯಮಿತ್ರನು ವಿಷಯ ತಿಳಿದು ತನ್ನ ಅವಧಿಜ್ಞಾನದಿಂದ ಆ ಹುಟ್ಟುಗುರುಡಿಯ ವಿಷಯವನ್ನೆಲ್ಲ ತಿಳಿದು ಅಗ್ನಿಭೂತಿಗೆ ವಿವರಿಸದ; ಮುನಿಗೆ ಅವಮಾನ ಮಾಡಿದ ವಾಯುಭೂತಿಯ ಜೀವವೇ ಈಗ ಹೊಲತಿಯಾಗಿರುವುದು. ವಾಯುಭೂತಿ ಮುನಿಯಾಗಿದ್ದ ತನಗೆ ಅವಮಾನ ಮಾಡಿದುದಷ್ಟೇ ಅಲ್ಲದೆ, ಅಗ್ನಿಭೂತಿ ದೀಕ್ಷೆ ಪಡೆದ ಮೇಲೆ ಅವನ ಹೆಂಡತಿ ಸೋಮದತ್ತೆಯ ಅಸ್ತಿಯನ್ನು ಕಬಳಿಸಿ ಒದ್ದು ಮನೆಯಿಂದ ಹೊರಗೆ ದಬ್ಬಿದ. ಆಗ ಸೋಮದತ್ತೆಯು ಕೋಪದಿಂದ ಒದ್ದ ಅವನ ಕಾಲುಗಳನ್ನು ಜನ್ಮಾಂತರದಲ್ಲಿಯಾದರೂ ಕಿತ್ತು ತಿನ್ನುವುದಾಗಿ ಶಪಥಮಾಡಿದಳು. ಆ ಕಾರಣದಿಂದ ವಾಯುಭೂತಿ ಕುಷ್ಠ ರೋಗದಿಂದ ಬಳಲಿ ಸತ್ತು, ಕೌಶಂಬಿಯ ದೊಂಬನೊಬ್ಬನ ಮನೆಯ ಕತ್ತೆಯಾಗಿ ಹುಟ್ಟಿ ಸತ್ತು, ಮರುಜನ್ಮದಲ್ಲಿ ಹಂದಿಯಾಗಿ, ಆಮೇಲೆ ಹೆಣ್ಣು ನಾಯಿಯಾಗಿ, ಈಗ ಇಲ್ಲಿ ಹೀಗೆ ಉಟ್ಟಿದ್ದಾನೆ; ಸೋಮದತ್ತೆಯೂ ಜನ್ಮಾಂತರದಲ್ಲಿ ಸುತ್ತುತ್ತಿದ್ದಾಳೆ. ಹೀಗೆಂದು ತಿಳಿಸಿ “ಆ ಕುರಿಡಿಗೆ ಈ ಜನ್ಮದಲ್ಲಿ ಇವತ್ತು ಮಾತ್ರ ಆಯುಸ್ಸಿದೆ. ನೀನು ಉಪದೇಶಮಾಡಿ ವ್ರತಗಳನ್ನಿತ್ತರೆ ಅವಳು ಸದ್ಗತಿಯೈದವಳು” ಎಂದ. ಅಗ್ನಿಭೂತಿ ಅಂತೆಯೇ ಅವಳಿಗೆ ಅಣುವ್ರತಗಳನ್ನು ಉಪದೇಶಗೈದು. ಅವಳು ಆ ದಿನವೇ ಹಾವು ಕಚ್ಚಿ ಸತ್ತು, ಆ ಊರಿನ ರಾಜಪುರೋಹಿತನಾದ ನಾಗಶರ್ಮನ ಮಗಳು ನಾಗಶ್ರೀಯಾಗಿ ಜನ್ಮ ತಳೆದಳು.

ಅಲ್ಲಿಂದ ಮುಂದೆ ಸಾಗಿದ ಸೂರ್ಯಮಿತ್ರ – ಅಗ್ನಿಭೂತಿಯರು ಅನೇಕ ವರ್ಷಗಳ ಬಳಿಕ ಮತ್ತೆ ಚಂಪಾಪುರಕ್ಕೆ ಬಂದರು. ಅಷ್ಟು ಹೊತಿಗೆ ನಾಗಶ್ರೀ ಯುವತಿಯಾಗಿದ್ದಳು. ಅವಳು ನಾಗ ಪೂಜೆಗೆಂದು ನಾಗ ಮಂಟಪಕ್ಕೆ ಬಂದು ಇವರಿಬ್ಬರನ್ನೂ ನೋಡಿ ಜಾತಿಸ್ಮರಣೆಗೊಂಡಳು. ಅವಳ ವಿಷಯವನ್ನು ಸೂರ್ಯಮಿತ್ರ ಆಗ್ನಿಭೂತಿಗೆ ವಿವರಿದುದಲ್ಲದೆ, ಅವಳಿಗೆ ತತ್ವೋಪದದೇಶ ಮಾಡಿದ. ಆ ವಿಷಯವನ್ನು ತಿಳಿದು ಕೋಪಗೊಂಡ ನಾಗಶರ್ಮನು ವ್ರತಗಳನ್ನು ಕೊಟ್ಟ ಮುನಿಯ ಬಳಿಯೇ ಅವುಗಳನ್ನು ಎಸೆಯಲು ಮಗಳನ್ನು ಕರೆತಂದ. ದಾರಿಯಲ್ಲಿ ಬರುವಾಗ ಒಬ್ಬ ಕೊಲೆಪಾತಕಿಯನ್ನು ವಧೆಗಾಗಿ ಕೊಂಡೆಯ್ಯುತ್ತಿದ್ದುದು, ಸುಳ್ಳನ್ನು ಹೇಳಿ ಶಿಕ್ಷೆಗೊಳಗಾದ ಕಳ್ಳ, ಹಣ ಕದ್ದವನು ಕ್ರೂರ ಶಿಕ್ಷೆಗೆ ಒಳಗಾದದ್ದು, ಹಾದರಕ್ಕಾಗಿ ನಾಗಸೂರನ ಜಾರೆಯ ತಲೆಯನ್ನು ಕತ್ತರಿಸಿ ಜಾರೆಯ ಕಿವಿಮೂಗು ತರಿದು ಮದ್ದಾನೆಯ ಕೊರಳಿಗೆ ಕಟ್ಟಿ ಬೀದಿಯಲ್ಲಿ ಕೊಂಡೊಯ್ಯುವುದು – ಇವನ್ನೆಲ್ಲ ಕಂಡು ತಂದೆಗೆ ವಿವರಿಸಿದ ಮೇಲೆ ವಾಪಸು ಮಾಡಬೇಕೆಂದು ಬಯಸಿದ್ದ ನಾಗಶ್ರೀಯ ಪಂಚಾಣುವ್ರತಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ತಂದೆ ಅವಳಿಗೆ ಅನುಮತಿಯಿತ್ತ. ಆದರೂ ನಾಗಶರ್ಮನು ಬಂದು ಸೂರ್ಯಮಿತ್ರನನ್ನು ಅಕ್ಷೇಪಿಸಿದಾಗ ಅವಳನ್ನು ತನ್ನ ಮಗಳೆಂದು ಹೇಳಿ ಅವಳನ್ನು ಸೂರ್ಯಮಿತ್ರ ತನ್ನೊಡನೆಯೇ ಉಳಿಸಿಕೊಂಡ.

ನಾಗಶರ್ಮ ದೊರೆಯ ಬಳಿ ಬಂದು ನಾಗಶ್ರೀಯನ್ನು ತನ್ನ ಮಗಳೆಂದು ಹೇಳುತ್ತಿರುವ ಮುನಿಯ ವಿರುದ್ಧ ದೂರು ಕೊಟ್ಟ. ರಾಜನು ಪರಿವಾರಸಮೇತ ಅಲ್ಲಿಗೆ ಬಂದು ವಿಚಾರಣೆಯಾರಂಬಿಸಿದ. ತಾನು ಅವಳಿಗೆ ಶಾಸ್ತ್ರಾಗಮಗಳನ್ನು ಹೇಳಿಕೊಟ್ಟಿರುವುದಾಗಿ ತಿಳಿಸಿದ ಸೂರ್ಯಮಿತ್ರ ಅವಳ ಮೇಲೆ ಕೈಯಿರಿಸಿದಾಗ, ಎಲ್ಲರಿಗೂ ಅಚ್ಚರಿಯಾಗುವಂತೆ, ನಾಗಶ್ರೀ ವಾಯುಭೂತಿಯಾಗಿದ್ದಾಗಿನ ಜನ್ಮದಲ್ಲಿ ಸೂರ್ಯಮಿತ್ರನಿಂದ ಕಲಿತ ವಿದ್ಯೆಯನ್ನೆಲ್ಲ ಒಪ್ಪಿಸಿದಳು. ಇದರಿಂದಾದ ಆಶ್ಚರ್ಯದಿಂದಾಗಿ ರಾಜನಾದಿಯಾಗಿ ಅನೇಕರು ದೀಕ್ಷೆ ಪಡೆದರು. ಕೆಲವು ದಿನಗಳಲ್ಲಿಯೇ ಸೂರ್ಯಮಿತ್ರ ಮತ್ತು ಅಗ್ನಿಬೂತಿಗಳು ಮುಕ್ತಿ ಹೊಂದುತ್ತಾರೆ. ನಾಗಶ್ರೀ ತಪಸ್ಸು ಮಾಡಿ ಅಚ್ಯುತಕಲ್ಪದಲ್ಲಿ ಪದ್ಮಪ್ರಭನೆಂಬ ಹೆಸರಿನ ದೇವನಾಗಿ ಹುಟ್ಟುತ್ತಾಳೆ.

ಇತ್ತ, ಆವಂತಿ ದೇಶದ ಉಜ್ಜೇನಿಯಲ್ಲಿ ವೃಷಭಾಂಕನು ಆಳುತ್ತಿದ್ದ; ಅವನ ಮಹಾರಾಣಿ ಲಕ್ಷಣಾದೇವಿ. ಅವನ ಪ್ರಧಾನ ಶ್ರೇಷ್ಠಿ ಇಂದ್ರದತ್ತ, ಭಾರಿ ಶ್ರೀಮಂತ. ಅವನ ಹೆಂಡತಿ ಮನೋರಮೆ. ಆ ಇಬ್ಬರ ಮಗ ಸೂರದತ್ತ; ಅವನ ಹೆಂಡತಿ ಯಶೋಭದ್ರೆ. ಆ ಶ್ರೇಷ್ಠಿ ದಂಪತಿಗಳಿಗೆ ಮಕ್ಕಳಿರಲಿಲ್ಲ. ಒಮ್ಮೆ ಅಭಿನಂದನ ಮುಣೀಂದ್ರನು ಅಲ್ಲಿಗೆ ಬಂದ. ಅವರಿಗೆ ಒಬ್ಬ ಮಗನು ಹುಟ್ಟುವುದಾಗಿಯೂ, ಮಗುವಿನ ಮುಖ ಕಂಡ ತಕ್ಷಣ ಸೂರದತ್ತ ತಪಸ್ಸಿಗೆ ಹೋಗುತ್ತಾನೆಂದೂ, ಮಗುವೂ ಜಿನಮುನಿಯ ದರ್ಶನ ಮಾತ್ರದಿಂದಲೇ ವಿರಾಗಿಯಾಗುವನೆಂದೂ ಮುನಿ ಭವಿಷ್ಯ ನುಡಿದ. ಕೆಲವು ಕಾಲದ ಮೇಲೆ ಯಶೋಭದ್ರೆ ಗಂಡು ಮಗುವನ್ನು ಹೆತ್ತಳು; ಸೂರದತ್ತನಿಗೆ ತಕ್ಷಣವೇ ವೈರಾಗ್ಯ ಹುಟ್ಟಿ ದೀಕ್ಷೆ ಪಡೆದ. ಯಶೋಭದ್ರೆ ಮಗನಿಗೆ ಸುಕುಮಾರನೆಂಬ ಹೆಸರಿಟ್ಟು, ಅವನೆಲ್ಲಿ ಮುನಿಯು ಭವಿಷ್ಯ ನುಡಿದಂತೆ ವಿರಾಗಿಯಾಗುತ್ತಾನೋ ಎಂದು ಹೆದರಿ, ಅವನ ಕಣ್ಣಿಗೆ ಯಾವ ಮುನಿಯೂ ಕಾಣಿಸದಂತೆ ಅವನಿಗಾಗಿಯೇ ಒಂದು ಅರಮನೆಯನ್ನು ಕಟ್ಟಿಸಿ, ಅದರಲ್ಲಿ ಎಲ್ಲ ಅನುಕೂಲಗಳನ್ನೂ ಕಲಿಸಿಕೊಟ್ಟು, ಮಗನನ್ನು ಒಂಟಿಯಾಗಿರಿಸಿದಳು. ಮುಂದೆ ಅವನಿಗೆ ಮೂವತ್ತೆರಡು ಕನ್ಯಾಮಣಿಗಳನ್ನು ತಂದು ಮದುವೆ ಮಾಡಿಸಿದಳು. ಅವನ ವೈಭವವನ್ನು ಕಂಡು ಆಗ ಆವಂತಿಯ ದೊರೆಯಾಗಿದ್ದ ವೃಷಭಾಂಕನೂ ಬೆರಗುವಡುವಂತಾಯಿತು.

ಒಮ್ಮೆ ಸುಕುಮಾರನ ಸೋದರಮಾವನೇ ಆಗಿದ್ದ ಯಶೋಭದ್ರ ಮುನಿಯು ಚಾತುರ್ಮಾಸದ ಆಚರಣೆಗಾಗಿ ಉಜ್ಜೇನಿಗೆ ಬಂದು ಸುಕುಮಾರನ ಆರಮನೆಯ ಬಳಿಯಿದ್ದ ಉಪವನದ ಬಸದಿಯೊಂದರಲ್ಲಿ ಬೀಡುಬಿಟ್ಟ. ಆ ಮುನಿಯು ಅಲ್ಲಿರದಂತೆ ಮಾಡಲು ಯಶೋಭದ್ರೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಅಲ್ಲಿರುವವರೆಗೂ ಮೌನವಾಗಿರಬೇಕೆಂದು ಕೇಳಿಕೊಂಡು ಅವನನ್ನು ಒಪ್ಪಿಸಿದಳು. ಸ್ಪಲ್ಪ ನೆಮ್ಮದಿಯಿಂದ ಅವಳು ಉಸಿರಾಡುವಂತಾಯಿತು.

ಮುನಿಯ ಚಾತುರ್ಮಾಸ ಕಾರ್ತಿಕ ಹುಣ್ಣೆಮೆಯಂದು ಕೊನೆಗೊಂಡಿತು. ಅಂದು ಮಧ್ಯರಾತ್ರಿಯ ನಂತರ ಯಶೋಭದ್ರ ಮುನಿಯು ಮೌನ ಮುರಿದು ತ್ರಿಲೋಕ ಪ್ರಜ್ಞಪ್ತಿಯನ್ನು ಜೋರಾಗಿ ಹೇಳತೊಡಗಿದ. ಅದು ತನ್ನ ಆರಮನೆಯ ಉಪ್ಪರಿಗೆಯ ಮೇಲೆ ಮಲಗಿದ್ದ ಸುಕುಮಾರನನ್ನು ಎಚ್ಚರಿಸಿತು. ಆ ಧ್ವನಿಯು ಅವನಲ್ಲಿ ಜಾತಿಸ್ಮರಣೆಯನ್ನು ಉಕ್ಕಿಸಿತು; ಜೊತೆ ಜೋತೆಗೇ ಅವನಲ್ಲಿನ ವೈರಾಗ್ಯ ಕಟ್ಟೆಯೊಡೆಯಿತು. ಕಾವಲುಭಟರ ಕಣ್ತಪ್ಪಿಸಿ ಹೊರಬರಲು ಸುಕುಮಾರನಿಗೆ ಸಾಧ್ಯವಿರಲಿಲ್ಲ. ಹಾಗಾಗಿ ಅವನು ತನ್ನ ದಿವ್ಯ ವಸಗಳನ್ನೇ ಒಂದರ ತುದಿಗಿನ್ನೊಂದರಂತೆ ಸೇರಿಸಿ ಮೇಲೆ ಬಿಗಿದು ಇಳಿಯಬಿಟ್ಟು ಅದರ ಸಹಾಯದಿಂದ ಕೆಳಗಿಳಿದು, ಕೊಳೆತ ಹುಲ್ಲು ಕಡ್ದಿಯನ್ನು ಬಿಸಾಡಿದಂತೆ ತನ್ನ ಭೋಗವನ್ನೆಲ್ಲ ತೊರೆದು, ಮುನಿಗಳ ಬಳಿ ಬಂದು ಅವರ ಚರಣೋಪಾಂತರದಲ್ಲಿ ದೀಕ್ಷೆ ಪಡೆದ. ಹೀಗೆ ಮುನಿಯಾದ ಸುಕುಮಾರನು ಗುರುಗಳ ಅಜ್ಞೆಯಂತೆ ಪ್ರಾಯೋಪಗಮನದಿಂದ ಆತ್ಮಾನು ಸಂದಾನದಲ್ಲಿ ತೊಡಗಲು ನಿಶ್ಚೈಸಿದ. ಅಷ್ಟರಲ್ಲಿ ಬೆಳಗಾಯಿತು; ಗುರುವು ದಕ್ಷಿಣ ದಿಕ್ಕಿನ ಚೈತ್ಯಾಲಯಕ್ಕೆ ತೆರಳಿದರೆ, ಸುಕುಮಾರನು ಉತ್ತರ ದಿಕ್ಕಿಗೆ ಪಯಣ ಬೆಳೆಸಿದ.

ಇತ್ತ, ಬೆಳಿಗ್ಗೆ ಎದ್ದಾಗ ತನ್ನ ಅಣ್ಣ ಜೊತೆಯಲ್ಲಿದುದನ್ನು ಅರಿತ ಮನೋಹರಿ ಎಂಬ ಸುಕುಮಾರನ ಒಬ್ಬ ವಲ್ಲಭೆಯು ಅವನಿಗಾಗಿ ತಳಮಳದಿಂದ ಎಲ್ಲೆಡೆ ಹುಡುಕಾಡಿದಳು. ಯಶೋಭದ್ರೆಗೂ ಈ ವಿಷಯ ತಿಳಿಯುತು. ಎಲ್ಲ ಕಡೆ ಶೋಧ ನಡೆಸಿದಾಗ ಕೊನೆಗೆ, ಮೇಲಿನಿಂದ ಇಳಿಯಬಿಟ್ಟಿದ್ದ ದಿವ್ಯವಸಗಳ ಮಾಲೆ ಕಾಣಿಸಿತು. ವಿಷಯ ಎಲ್ಲರಿಗೂ ಸ್ಪಷ್ಟವಾಯಿತು. ಸುಕುಮಾರನಿಗಾಗಿ ಊರರೆಲ್ಲ ಹುಡುಕಿಸಿದರು. ಗಿಳಿ ಪಂಜರದಿಂದ ತಪ್ಪಿಸಿಕೊಂಡು ಹಾರಿ ಹೋಗಿತ್ತು. ತಾಯಿ ಮಗನ ಸುಳಿವು ಸಿಕ್ಕದೆ ಸೊರಗಿ ಹೋದಳು.

ಬರಿಗಾಲಲ್ಲಿ ನಡೆಯುತ್ತ ಹೊರಟ ಸುಕುಮಾರನ ಕಾಲುಗಳು ಗಾಯಗಳಿಂದ ತುಂಬಿಹೋಗಲು, ರಕ್ತ ಸೋರಿಸಿಕೊಂಡೇ ಸುಕೋಮಲನಾದ ಆತ ಮುನ್ನಡೆದ. ಕೊನೆಗೆ ಅವನು ತಪಲಪಿದ್ದು ಮಹಾಕಾಳ ಎಂಬ ಮಸಣವನ್ನು, ಭೇದ ವಿಜ್ಞಾನಿಯಾಗಿ ಏಕಾಗ್ರಚಿತ್ತದಿಂದ ಅವನು ತಪಸ್ಸಿನಲ್ಲಿ ತೊಡಗಿದ. ಅಷ್ಟು ಹೊತ್ತಿಗೆ, ಸುಕುಮಾರನು ವಾಯುಭೂತಿಯಾಗಿದ್ದಾಗಿನ ಅತ್ತಿಗೆ ಸೋಮದತ್ತೆ ಹುಟ್ಟು ಸಾವುಗಳ ಚಕ್ರದಲ್ಲಿ ತಿರುಗುತ್ತ ಈ ಜನ್ಮದಲ್ಲಿ ಹೆಣ್ಣು ನರಿಯಾಗಿದ್ದಳು. ತನ್ನೆರಡು ಮರಿಗಳೊಡನೆ ಆ ನರಿ ಮಸಣದತ್ತ ನಡೆತಂದು, ನಿಶ್ಚಲನಾಗಿ ತಪಸ್ಸು ಮಾಡುತ್ತಿದ್ದ ಸುಕುಮಾರನನ್ನು ಶವವೆಂದು ಭಾವಿಸಿ ಒಂದು ಕಾಲನ್ನು ತಾನು, ಇನ್ನೊಂದನ್ನು ಮರಿಗಳು ತಿನ್ನಲು ತೊಡಗಿದವು. ಆ ಹೊತ್ತಿಗೆ “ಶರೀರ ಬೇರೆ, ಜೀವ ಬೇರೆ” ಏಂಬ ಭಾವ ತಳೆದಿದ್ದ ಸುಕುಮಾರನು ತನಾಗುತ್ತಿದ್ದ ನೋವಿನ ಕಡೆ ಕಿಂಚಿತ್ತೂ ಗಮನ ಹರಿಸಲಿಲ್ಲ. ಮುಂದೆರಡು ದಿನಗಳಲ್ಲಿ ನರಿ ಮತ್ತದರ ಮರಿಗಳು ಅವನ ದೇಹವನ್ನೆಲ್ಲ ಪೂರ್ತಿಯಾಗಿ ತಿಂದು ಹಾಕಿದವು. ಸುಕುಮಾರನ ಜೀವವು ಶುಕ್ಲಧ್ಯಾನದಲ್ಲಿರಲು, ಅವನ ಪ್ರಾಣಪಕ್ಷಿಯು ಹಾರಿಹೋಯುತು. ಹೀಗೆ ದೇಹವನ್ನು ತೊರೆದ ಅವನು ಸರ್ವಾರ್ಥಸಿದ್ಧಿ ಎಂಬ ವಿಮಾನದಲ್ಲಿ ಅಹಮಿಂದ್ರನಾಗಿ ಹುಟ್ಟಿದ.

ಮಗನನ್ನು ಹುಡುಕುತ್ತ ಓಡಾಡುತ್ತಿದ್ದ ಯಶೋಭದ್ರೆಗೆ ಮೂರನೆಯ ದಿನದ ಸಂಜೆ ದೇವದುಂದುಭಿಯೊಡನೆ ದೇವತೆಗಳ ಹೊಗಳಿಕೆಯ ಧ್ವನಿ ಕೇಳಿಸಿ, ಸುಕುಮಾರನು ದೇಹತ್ಯಾಗ ಮಾಡಿರುವನೆಂದು ಅರಿತಳು. ಸೊಸೆಯಂದಿರಿಗೆ ಅಲಂಕಾರಗೊಳ್ಳಲು ತಿಳಿಸಿ, ಅವರೊಂದಿಗೆ ಮಹಾಕಾಳ ಶ್ಮಶಾನಕ್ಕೆ ಬಂದಳು. ಅಲ್ಲಿ ಸುಕುಮಾರನ ದೇಹ ಪುಷ್ಪವೃಷ್ಟಿಯಿಂದ ಮುಚ್ಚಿಹೋಗಿತ್ತು. ಎಲ್ಲರೂ ಜೋರಾಗಿ ಗೋಳಾಡಿದರು. ಕೊನೆಗೆ ಗರ್ಭವತಿಯಾರಾಗಿದ್ದ ಎಂಟು ಮಂದಿಯನ್ನು ಹೊರತುಪಡಿಸಿ ಉಳಿದ ಇಪ್ಪತ್ತನಾಲ್ಕು ಮಂದಿ ಸುಕುಮಾರನ ಹೆಂಡತಿಯರು ಯಶೋಭದ್ರೆ ಜೊತೆಯಲ್ಲಿ ದಯಾಭದ್ರರೆಂಬ ಗುರುಗಳ ಸನ್ನಿಧಿಯಲ್ಲಿ ದೀಕ್ಷೆ ಪಡೆದರು; ಕುಂತಿಯರಾಗಿ ಸದ್ಗತಿ ಹೊಂದಿದರು. ಸುಕುಮಾರನು ದೇಹತ್ಯಾಗ ಮಾಡಿದ ನಂತರ ಅವನನ್ನು ದೇವತೆಗಳು ಪೂಜಿಸಿದ ಸುಗಂಧದ್ರವ್ಯಗಳು ಕರಗಿ ಉಜ್ಜೇನಿಯ ದಕ್ಕ್ಷಿಣಭಾಗದಲ್ಲಿ “ಗಂಧವತಿ” ಎಂಬ ತೊರೆಯಾಗಿ ಈಗಲೂ ಹರಿಯುತ್ತಿದೆ!