‘ಸುಕುಮಾರಚರಿತಂ’ ಕಾವ್ಯದ ಹಸ್ತ ಪತ್ರಿಗಳು ಅಪರೂಪವಾಗಿವೆ. ಕವಿಚರಿತಕಾರರು ತಮ್ಮ ಕೃತಿಯ ಮೊದಲ ಸಂಪುಟದಲ್ಲಿ ಈ ಕಾವ್ಯದ ಹಸ್ತ ಪ್ರತಿಯ ಬಗ್ಗೆ ಬರೆಯುತ್ತ “ಪ್ರತಿಯ ಆದ್ಯಂತಗಳಲ್ಲಿ ಓಲೆಗಳು ಹೋಗಿರುವುದಲ್ಲದೆ, ಮಧ್ಯದಲ್ಲಿಯೂ ಹಲವು ಕಡೆ ಓಲೆಗಳು ಶಿಥಿಲವಾಗಿಯೂ ಲುಪ್ತವಾಗಿಯೂ ಇರುವುದರಿಂದ ಗ್ರಂಥದ ಆನುಪೂರ್ವಿಯನ್ನು ತಿಳಿಸಲು ಸಾಧ್ಯವಿಲ್ಲವಾಗಿದೆ” ಎಂದಿದ್ದಾರೆ. ಕಾವ್ಯವನ್ನು ಮೊದಲ ಬಾರಿಗೆ ಪೊ. ಡಿ. ಎಲ್‌. ನರಸಿಂಹಾಚಾರ್ ಹಾಗೂ ಪ್ರೊ. ತ. ಸು. ಶಾಮರಾಯರು ಸಂಪಾದಿಸಿ ೧೯೫೪ರಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಮೂಲಕ ಪ್ರಕಟಿಸಿದರು. ಆಗಲೂ ಸಂಪಾದಕರು ನೋಡಲು ಸಾಧ್ಯವಾಗಿ ಪಠ್ಯನಿರ್ಧಾರಕ್ಕೆ ಬಳಸಿಕೊಂಡದ್ದು ಎರಡು ಪ್ರತಿಗಳನ್ನಷ್ಟೆ. ಎರಡರಲ್ಲಿ ಒಂದು ಓಲೆಯ ಪ್ರತಿಯಾದರೆ, ಇನ್ನೊಂದು ಕೈಬರಹದ ಕಾಗದದ ಪ್ರತಿ. ಇವುಗಳಲ್ಲಿಯೂ ಗ್ರಂಥಪಾಠಗಳು ತುಂಬ ಇವೆಯೆಂದೂ, ಹನ್ನೆರಡನೆಯ ಆಶ್ವಾಸದ ಕೊಪ್ಪೆಯ ಭಾಗ ಲುಪ್ತವಾಗಿದೆಯೆಂದೂ ಸಂಪಾದಕರೂ ತಿಳಿಸಿದ್ದಾರೆ. ಆನಂತರವೂ ಇದರ ಬೇರ ಪ್ರತಿಗಳು ದೊರಕಿಲ್ಲ. ಹೀಗಾಗಿ ಪ್ರಸ್ತುತ ಸಂಪುಟದ ಈ ಕಾವ್ಯವನ್ನು ಕರ್ನಾಟಕ ಸಂಘ ಪ್ರಕಟಿಸಿದ ಪ್ರತಿಯ ಆಧಾರದ ಮೇಲೆಯೇ ಸಿದ್ಧಪಡಿಸಲಾಗಿದೆ; ಆದರೆ ಕೆಲವೆಡೆ ಭಿನ್ನಪಾಠಗಳನ್ನು ಸ್ವೀಕರಿಸಲಾಗಿದೆ.

ಇನ್ನು, ‘ಕಬ್ಬಿಗರ ಕಾವಂ’ ಪಠ್ಯದ ಕುರಿತು. ಪ್ರೊ. ದೇ. ಜವರೇಗೌಡರು ಸಂಪಾದಿಸಿ ಮೈಸೂರಿನ ಶಾರದಾ ಮಂದಿರದವರು ಪ್ರಕಟಿಸಿರುವುದು ತುಂಬ ಸಮರ್ಪಕವಾಗಿರುವ ಸ್ವರೂಪದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಗದ್ಯಾನುವಾದ ಜೊತೆಗೆ ಈ ಕೃತಿಯನ್ನು ಪ್ರಕಟಿಸಿದೆ. ಇವೆರಡನ್ನೂ ಬಳಸಿಕೊಂಡು ಸಿದ್ಧಗೊಳಿಸಿರುವ ರೂಪವನ್ನು ಈ ಸಂಪುಟದಲ್ಲಿ ಸೇರಿಸಿದೆ. ಇಲ್ಲಿಯೂ ಕೆಲವೆಡೆ ಭಿನ್ನ ಲಭ್ಯಪಾಠಗಳನ್ನು ಸ್ವೀಕರಿಸಲಾಗಿದೆ. ಈ ಪೂರ್ವಸೂರಿಗಳಿಗೆ ನನ್ನ ಕೃತಜ್ಞತಾ ಪೂರ್ವಕ ನಮಸ್ಕಾರಗಳು.

ಗೊಮ್ಮಟೇಶ್ವರನ ಮಹಾಮಜ್ಜನದ ಸಂದರ್ಭಕ್ಕೆಂದು ಕನ್ನಡ ವಿಶ್ವವಿದ್ಯಾಲಯ, ಹಂಪಿ ಆಯೋಜಿಸಿರುವ ಸಮಗ್ರ ಜೈನ ಸಾಹಿತ್ಯ ಮಾಲೆಯ ಭಾಗವಾಗಿ ಈ ಸಂಪುಟ ಆ ಸಂಸ್ಥೆಯಿಂದ ಪ್ರಕಟಗೊಳ್ಳುತ್ತಿರುವುದು ಸಂತೋಷದ ವಿಷಯ. ಈ ಸಂಪುಟವನ್ನು ಸಿದ್ಧಗೊಳಿಸಲು ಹೇಳಿ ಅದನ್ನು ಅಚ್ಚುಕಟ್ಟಾಗಿ ಪ್ರಕಟಿಸುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಉನ್ನತ ಸಲಹಾ ಸಮಿತಿಯ ವಿದ್ವಾಂಸರೆಲ್ಲರಿಗೂ ನನ್ನ ಪ್ರಾಂಜಲ ನಮಸ್ಕಾರಗಳು ಸಲ್ಲುತ್ತವೆ. ಉನ್ನತ ಸಲಹಾ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಹಿರಿಯ ಕವಿಗಳಾದ ಪ್ರೊ. ಜಿ. ಎಸ್‌. ಶಿವರುದ್ರಪ್ಪ ಅವರ ಪ್ರೋತ್ಸಾಹವನ್ನು ನಾನು ನೆನೆಯುತ್ತೇನೆ.

ಈ ಸಂಪುಟವು ಬೇಗ ನನ್ನಿಂದ ಸಂಪಾದನೆಗೊಳ್ಳುವಲ್ಲಿ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಇವರ ಪಾತ್ರವೂ ಇದೆ. ಅವರು ನನ್ನೊಡನೆ ಸಹಕರಿಸಿದ್ದಾರೆ; ನನ್ನಲ್ಲಿ ಉತ್ಸಾಹ ತುಂಬಿದ್ದಾರೆ. ಕನ್ನಡಿಗರ ಅಭಿಮಾನಕ್ಕೆ ಅರ್ಹವಾದ ಕನ್ನಡ ವಿಶ್ವವಿದ್ಯಾಲಯವು ಈ ಗ್ರಂಥವನ್ನು ಪ್ರಕಟಿಸುತ್ತಿದೆ. ಇದೊಂದು ಸಾಹಿತ್ಯ ಯಜ್ಞ. ಇಲ್ಲಿ ಹೆಸರಿಸಲಾಗದ ಎಲ್ಲ ಪೂರ್ವಸೂರಿಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಪಿವಿ. ನಾರಾಯಣ
ಬೆಂಗಳೂರು
೨೫-೦೧-೨೦೦೬