ಶ್ರೀಧರ್ಮಾಮೃತವರ್ಷಮ
ನೀ ಧಾತ್ರೀತಳದ ಭವ್ಯಸಸ್ಯಕಮವ್ಯಾ
ಬಾಧಂ ಕಱೆದಂ ಕೇವಲ
ಬೋಧನಿಧಾನಂ ಸರಸ್ವತೀಮುಖಮುಕುಂ || ೦೧ ||

ವ || ಇಂತು ಸಕಲವಿನೇಯಜನಸಮಾರ್ಚಿತೋರ್ಜಿತಾಗಣ್ಯ ಪುಣ್ಯ ಸಂಚಾರ ಪ್ರೇರಣೆಯಿಂ ಧರ್ಮಕ್ಷೇತ್ರಂಗಳೊಳ್‌ ಸುಕೃತಜನಾಶಯ ಕುಶೇಶಯಂಗಳಂ ದಿವ್ಯವಚನ ದಿನಲರ್ಚುತ್ತುಮುದಗ್ರಮಂದಿರಶಿಖರಿರದೊಳ್‌ ಪ್ರತಿಮಾಯೋಗಂ ನಿಂದು ಸೂಕ್ಷ್ಮ ಕಾಯಯೋಗಂ ಸೂಕ್ಷ್ಮಕ್ರಿಯಾಪ್ರತಿಪಾತಿಯೆಂಬ ಚರಮಶುಕ್ಲಧ್ಯಾನದಿಂ ಯಥಾ ವಸ್ಥಿತವಿಶುಧಧ್ಯಾನಪರಿಣತಿಯಿಂ ದಂಡಕವಾಟಪ್ರಕರಲೋಕಪೂರಣ ಕ್ರಿಯೆಗಳಂ ಸಮಯಪ್ರತಿಸಮಯಂಗಳಿಂ ಮಾಡಿ ಸರ್ವಬಂಧಾಸ್ರವನಿರೋಧದಿನಯೋಗಿ ಸ್ಥಾನಮಂ ಪೊರ್ದಿ ಸಮುಚ್ಛಿನ್ನಯಾನಿವೃತ್ತಿಧ್ಯಾನಪರಿಣತೆಯಿನಘಾತಿ ಚತುಷ್ಕಶುಷ್ಕೇಂಧನ ಪಾವಕನಾಗಲೊಡಂ

ರಿಪುನೃಪಕುಲಸಂಹರನ
ಪ್ಪಪುರುಷನಂ ವಿಜಯಲಕ್ಷಿ ಕೈಕೊಳ್ವ ವೊಲಂ
ದಪಗತದುರಿತಾರಾತಿ
ಪ್ರಪಂಚನಂ ಮೋಕ್ಷಲಕ್ಷ್ಮಿತಾಂ ಕೈಕೊಂಡಳ್‌ || ೦೨ ||

ಆಗಳ್‌ ಸೌಧರ್ಮಕಲ್ಪೇಶ್ವರನನುಪಮನಿರ್ವಾಣಕಲ್ಯಾಣಕಾರ್ಯೋ
ದ್ಯೋಗಕ್ಕಾನಂದದಿಂದಂ ದಿವಿಜಪರಿವೃತಂ ಬಂದು ಸದ್ಭಕ್ತಿಯಿಂದಂ
ರಾಗಂ ಕೈಗಣ್ಮಿಪೊಣ್ಮುತ್ತಿರೆ ಸುರಸುಮನೋದೀಪಧೂಪಂಗಳಿಂದಂ
ಬೇಗಂ ಕೈಗಯ್ಯೊಳೋಲ್ದರ್ಚಿಸಿ ಬೞಿಕೆ ನಿಜಾವಾಸದತ್ತಣ್ಗೆವೋದಂ || ೦೩ ||

ವ || ಆ ಪ್ರಸ್ತಾವದೊಳ್‌

ಆನಮ್ರಾಮರನಗ್ನಿ ಭೂತಿಮುನಿರಾಜೇಂದ್ರ ತದುರ್ವೀಧರ
ಸ್ಥಾನಪ್ರಸ್ಥಿತನಪ್ರಮತ್ತಗುಣಸಂಸ್ಥಾನಸ್ಥಿತಂ ನಿರ್ಮಲ
ಧ್ಯಾನಂ ಘಾತಿಗಳಂ ಕೞಲ್ಚಿ ನಯದಿಂದಂ ಪೊರ್ದಿದಂ ಕೇವಲ
ಜ್ಞಾನಾಧಿಷ್ಠಿತನಾಗಿ ಮುಕ್ತಿವನಿತಾಪೀನಸ್ತನಸ್ಥಾನಮಂ || ೦೪ ||

ವ || ಇತ್ತಲಾ ನಾಗಶ್ರೀಯುಂ ತನ್ನಿರೂಪಿತ ಪರಮತಪಃ ಶ್ರೀಯಂ ತಾಳ್ದು

ವರಬಾಹ್ಯಾಭ್ಯಂತರಮೆಂ
ಬೆರಡುಂ ತೆಱನಪ್ಪ ತಪಮನೞ್ಕಱೊಳಮಳ್ವೆ
ತ್ತರವೋಲೊಡನೆ ನಡಪಿದಳ್‌
ಧರಾತಳಂ ಕೂರ್ತು ಕೀರ್ತಿಸುತ್ತಿರ್ಪಿನೆಗಂ || ೦೫ ||

ಶುಭಲಕ್ಷಣೆ ರತ್ನತ್ರಯ
ವಿಭೂಷಣಾಲಂಕೃತಾಂಗಿಯಾಗಿ ನಭೂತೋ
ನಭವಿಷ್ಯತಿಯೆನಿಪ ತಪಃ
ಪ್ರಭಾವದಿಂ ನೆಗೞ್ದಳಂತು ನೆಗೞಲ್ವೇಡಾ || ೦೬ ||

ತನುಲತೆಯಂಪುತ್ತಡರ್ದ
ತ್ತೆನೆ ಮಲೆವಿಡಿದಡರೆಗೊಂಡು ತೀವಿರ್ದುದಱೆಂ
ವಿನಯಾನ್ವಿತೆ ತಪ್ಪದೆ ಮಣ
ಕಿನ ಲೆಪ್ಪದ ಪೆಣ್ಣ ಚೋಹಮೆಂಬಂತಿರ್ದಳ್‌ || ೦೭ ||

ತಳೆದನಶನಾದಿ ತಪದಿಂ
ಕಳೇವರಂ ಬಡಬಡಾಗಿ ಗಿಡಿಗಿಡಿಜಂತ್ರಂ
ಮಿಳಿಮಿಳಿಗಣ್ಗಳೆನಲ್‌ ನೋಂ
ತಳಂತು ನೋನದೆ ಸುಖಕ್ಕೆ ಬಯಸಿದೊಡುಂಡೇ || ೦೮ ||

ಸಮಿತಿಬ್ರಾತಮನಪ್ಪುಕೆಯ್ದು ದೊರೆವೆತ್ತಾವಶ್ಯಕಾನೀಕದೊಳ್‌
ಸಮಸಂದಿಂದ್ರಿಯದರ್ಪಮಂ ಕಿಡಿಸಿ ತೀವ್ರಕ್ಷುತ್ಪಿಪಾಸಪ್ರಪಂ
ಚಮನೊಟ್ಟೈಸಿ ಮಹಾವ್ರತಪ್ರಕರದೊಳ್‌ ತಳ್ತೊಪ್ಪುವತ್ಯುದ್ಘ ಸಂ
ಯಮ ಸದ್ಭಾವ ತಪಃಪ್ರಭಾವ ಮಹಿಮಾವಿರ್ಭಾವಮಂ ತಾಳ್ದಿದಳ್‌ || ೦೯ ||

ರಾಗದ್ವೇಷಾದಿದೋಷಾಂತರಮನುಪಮರತ್ನತ್ರಯ ಶ್ರೀನಿಧಾನಂ
ಯೋಗೋದ್ಯೋಗಪ್ರಯೋಗಾಲಯಮಘಹರಣೋಪಾಯಮತ್ಯಂತಮುರ್ವೀ
ಭಾಗಪ್ರಸ್ತುತ್ಯಮೆಂದಲ್ಲದೆ ಬಹುವಚನಾಲಾಪದೊಂದಂದದಿಂದಾ
ನಾಗಶ್ರೀನಾಮಧೇಯಾರ್ಜಿಕೆಯ ತಪಮನೇವಣ್ಣಿಪಂ ಬಣ್ಣಿಪಾತಂ || ೧೦ ||

ವ || ಇಂತುಗ್ರೋಗ್ರತಪಶ್ಚರಣನಿರತೆಯಾಗಿ ಮೂಲೋತ್ತರಗುಣಂಗಳೊಳು ತ್ತರೋತ್ತರಂ ನೆಗೞುತ್ತಂ ಜಿನಗುಣಸಂಪತ್ತಿ ಮೊದಲಾದ ನೋಂಪಿಗಳಂ ನೋನುತ್ತುಂ ನಿಜಾಯುರವಧಿ ಪದಿನಾಲ್ಕುವರಿಸಮುಮೇೞುತಿಂಗಳುಮಯ್ದು ದಿವಸಮುಂಟೆನಲ್‌ ಆಷಾಢಬಹುಳಪಾಡಿವದೊಳಾಚಾಮ್ಲವರ್ಧನಮೆಂಬ ನೋಂಪಿಯಿಂ ನೋನಲುದ್ಯ ಕ್ತೆಯಾದಳೆಂತೆನೆ

ಮನವೊಲ್ದಿರ್ಪುಪವಾಸವೊಂದು ದೊರೆವೆತ್ತಾಚಾಮ್ಲದೊಳ್‌ ಪಾರಣಾ
ದಿನಮೊಂದಂತುಪವಾಸಮೊಂದಶನದಿಂದೊಂದಗ್ಗಳಂ ಪೆರ್ಚೆ ನೆ
ಟ್ಟನೆ ಪತ್ತೊಂಬತುನೂಱತೊಂಬತುದಿನಂಗಳ್ಪೋದೊಡಾಚಾಮ್ಲವ
ರ್ಧನಮೊಂದಕ್ಕುಮವಿಪ್ಪತಯ್ದು ನೆಱೆದಂದಕ್ಕುಂ ತದುದ್ಯಾಪನಂ || ೧೧ ||

ನೆಗೞುತ್ತಿರ್ದುಪವಾಸವಾಸರಮನೆಲ್ಲಂ ನೋಡೆ ಬಾಣಾದ್ರಿವಾ
ರ್ಧಿಗಳಾಗಿರ್ಕುಮವರ್ಕೆ ಪತ್ತುಮಡಿಯಕ್ಕುಂ ಪಾರಣಾವಾಸರಾ
ಳಿಗಳಿಂತಿರ್ತೆಱನಪ್ಪ ಪುಣ್ಯದಿನಮಂ ಸಮ್ಮಿಶ್ರಮಂ ಮಾಡೆ ಸಂ
ಖ್ಯೆಗಳಿಂ ಸಾರ್ಧಚತುರ್ದಶಾಬ್ದಯುತ ಪಂಚಾಹಃಪ್ರಭಂ ಭಾವಿಸಲ್‌ || ೧೨ ||

ಭುವನಜನಸ್ತುತ್ಯಂ ದಿವಿ
ಜವಂದನೀಯಂ ಮುನೀಂದ್ರಸೇವ್ಯಂ ಭವ್ಯ
ಸ್ತವನೀಯಮೆನಿಸಿದಾಚಾ
ಮ್ಲವರ್ಧನಂ ಪುಣ್ಯವರ್ಧನಂ ಕೇವಲಮೇ || ೧೩ ||

ವಿನುತಾನಂತಸುಖಾಭಿವರ್ಧನಮನವ್ಯಾಬಾಧಸೌಖ್ಯಾಭಿವ
ರ್ಧನಮಂ ವಿಶ್ವಯಶಃಪ್ರವರ್ಧನಮನುದ್ಯದ್ಭಾಗ್ಯಸೌಭಾಗ್ಯವ
ರ್ಧನಮಂ ರೂಪವಿಲಾಸವರ್ಧನಮನಾರ್ಯಪ್ರಸ್ತುತಾಚಾಮ್ಲವ
ರ್ಧನಮಂ ನೋಂತಳಚಿಂತ್ಯಮಾಗೆ ಪೆಱರಿಂತಾರ್ ನೋಂತರೆಂಬನ್ನೆಗಂ || ೧೪ ||

ವ || ಅಂತು ಪದಿನಾಲ್ಕುವರಿಸಮಾಱು ತಿಂಗಳುಮಯ್ದು ದಿವಸಕ್ಕೆ ಪರಿಸಮಾಪ್ತಿಗೆ ಸಲ್ವಾಚಮ್ಲವರ್ಧನಮೆಂಬ ತಪವನಾಚರಿಸಿ ತನಗೆ ಪರಮಾಯುಷ್ಯಮಂದಿಂಗೊಂದು ತಿಂಗಳಪ್ಪುದಂ ಮುನ್ನಱೆವಳಪ್ಪುದಱೆಂ ಸಲ್ಲೇಖನೆಯಂ ಪೂಣ್ದು ಚತುರ್ವಿಧಾಹಾರ ಶರೀರವ್ಯಾಪಾರ ನಿವೃತ್ತಿಯಿಂ ಸನ್ಯಸನವಿಧಿಯಿಂ

ಪೃಥ್ವಿ || ಅರಲ್ದ ಮುಖಪದ್ಮಮುಂ ನಿಬಿಡಬದ್ಧಪರ್ಯಂಕದೊಳ್‌
ಮರಲ್ದು ಕರಪಲ್ಲವದ್ವಿತಯಮುಂ ಬೆಡಂಗಪ್ಪಿನಂ ನಿರಂ
ತರವಿಶೋಧಿ ಕೂಡಿರೆ ಚತುರ್ವಿಧಾರಾಧನಾ
ಪುರಸ್ಸರತೆಯಿಂ ಸಮಾಧಿವಿಧಿಗೇಂ ಮನಂದಂದೊಳೋ || ೧೫ ||

ಅರೆಮುಗಿದಿರ್ದು ಜಾನಿಸುವ ಕಣ್ಮಲರಾಪ್ತಪದಾರ್ಥತತ್ವಮಂ
ಸ್ಮರಿಯಿಪ ಚಿತ್ತಮೊಳ್ಪುಗಿಡದೋದುವ ನಾಗೆ ಮುನ್ನಮಿರ್ದ ಬಿ
ತ್ತರದಿನದೆತ್ತಲುಂ ತಳರದಾರಸನಮಿಂದ್ರ ನರೇಂದ್ರವಂದ್ಯನಂ
ಪರಮಜಿನೇಂದ್ರನಂ ಬಗೆವ ಭಾವಮಚಾಲ್ಯಮಶಲ್ಯಭಾವೆಯಾ || ೧೬ ||

ಪದುಳಿಗೆಗುಂದರ್ದಿ ಪಳಿತಂಕದ ಚೆಲ್ವು ಸಡಿಲ್ದುದಿಲ್ಲ ಕ
ರ್ಮದ ಬಿಗಿಪೊಯ್ಯನೊಯ್ಯನೆ ಸಡಿಲ್ದುದು ನಿಶ್ಚಳ ಯೋಗಭಾವಮುಂ
ಬೆದಱೆದುದಿಲ್ಲ ಶಲ್ಯಮದಗಾರವದಂಡಕಷಾಯ ಸಂಕುಲಂ
ಬೆದಱೆದುದಿಂತು ಕೂಡಿದ ಸಮಾದಿಯೊಳಲ್ಲದೆ ಸಯ್ದು ಸಾರ್ಗುಮೇ || ೧೭ ||

ವ || ಅಂತೇಕಮಾಸಪರ್ಯವಸಾನಂಬರಮೇಕಸ್ಥಿತಿಯಿಂ ಸಮತಾಸಂಭಾವ ನೆಯಿಂ ಭುಕ್ತಪ್ರತ್ಯಾಖ್ಯಾನವಿಧಿಯಿಂ ರತ್ನತ್ರಯಮನಾರಾದಿಸಿ ಚರಮಸಮಯದೊಳಾತ್ಮೀಯ ಶರೀರಭಾರಪರಿಚ್ಯುತೆಯಾಗಿ ಸ್ತ್ರೀತ್ವಮಂ ಪತ್ತುವಿಟ್ಟು ಪರಿನಾಱನೆಯಚ್ಯುತಕಲ್ಪದೊಳ್‌ ಇಂದ್ರನೀಲ ಮಣಿಕುಟ್ಟಿಮತಳ ವಿರಾಜಮಾನದೊಳುತ್ತುಂಗ ಮಣಿಮ ಯಸ್ತಂಭಸಂಭೃತದೊಳತಿಸುರ ಚಿರಪ್ರವಾಳಜಾಳಾಂತರ ವಿರಾಜಮಾನತಳದೊಳನೂ ನಮರಕತ ರತ್ನಭೀತ್ತಿವಿಭ್ರಾಜದೊಳಾಲಂಬಮಾನ ಮುಕ್ತಾದಾಮ ಲಂಬೂಷ ಭೂಷಿತದೊಳ ನುಪಮಪವಮಾನವಶಲುಳಿ ಕೇತುಮಾಳಾಸಮುಲ್ಲಾಸಿತದೊಳತ್ಯಂತ ಸುರಭಿಗಂಧ ಬಂದುರನ ಮೇರುಮಂದಾರ ಪಾರಿಜಾತ ಪ್ರಸೂನಪ್ರಸರಪರಿ ರಂಜಿತಪ್ರಾಂಗಣದೊಳಭಿ ನವಾನೂನಕಾಳಾಗರು ಧೂಪಧೂಮೋದ್ದಾಮಾಕೃತ್ರಿಮ ಸ್ವಭಾವ ರಮಣೀಯಪದ್ಮಗುಲ್ಮ ವಿಮಾನದುಪಪಾತಭವನದೊಳಪ್ರತಿ ಹಂತ ಪಂಚರತ್ನ ಪ್ರಭಾವಿಭ್ರಭಾಜಿಯಪ್ಪ ದಿವ್ಯತಲ್ಪತಳದ ಪೊರೆಯೊಳ್‌ ರಾಗಸಮಯದೊಳ್‌ ಪೊರೆದು

ಮಣಿಮಯಚಿತ್ರ ಭಿತ್ತಿಗಳ ದೀಪ್ತಿಗಳೊಳ್‌ ನಿಜದೇಹದೀಪ್ತಿಗಳ್‌
ಸೆಣಸಿ ಪಳಂಚಿ ಸಂಚಳಿಸೆ ಕಣ್ಗೆಸೆಯುತ್ತಿರೆ ದಿವ್ಯ ವಸ್ತ್ರಭೂ
ಷಣಮಣಿಮಾಲೆಗಳ್ನೆಱೆದು ತನ್ನೊಡವುಟ್ಟಿರೆ ಬೇಗವೇಗಮಾ
ಕ್ಷಣದೊಳೆ ಜವ್ವನಂ ನೆಱೆಯೆ ನೆಟ್ಟನೆ ತೊಟ್ಟನೆ ಬಂದು ಪುಟ್ಟಿದಂ || ೧೮ ||

ತೆಱೆಯದೆ ಮುಚ್ಚಿದ ಪಡಿಗಳ್‌
ತೆಱೆದುವು ನೆಱೆ ಮೋಕ್ಷಗೃಹದ ಸೌಖ್ಯದ ಪಡಿಗಳ್‌
ತೆಱೆದವೆನೆ ದಿವದ ಪಡಿಗಳ್‌
ತೆಱೆದುವದೇನರಿದೆ ಜೈನಪದಸೇವನೆಯಿಂ || ೧೯ ||

ಸುರಕುಸುಮಾಸಾರದ ಬೆ
ಳ್ಸರಿ ಸುರಿದುದು ಸುರಸಮಸ್ತವಂದಿರವಂ ಬೋ
ರ್ಗರೆದುದು ಸುರದುಂದುಭಿಗಳ್‌
ಮೊರೆದುವು ಸುರಭವನದೊಳಗೆ ಸುರನುದಯಿಪುದುಂ || ೨೦ ||

ಮಿಸುಗುವ ರತ್ನ ತೊರಣಗಣಂಗಳನೂನವಿಮಾನದೊಳ್ತಗು
ಳ್ದೆಸೆದವು ಜೀಯನಂದಜಯಮಂಗಳವರ್ಧನನಾದಮಾದಮಂ
ದೆಸೆದುದು ಸುತ್ತಲುಂ ಗುಡಿಯ ದಾಂಗುಡಿಗಳ್‌ ಮಿಳಿರ್ದಾಡುವಂತೆ ಕ
ಣ್ಗೆಸೆದವು ತತ್ಸುರೋತ್ತಮನ ಪುಣ್ಯಮನೊಯ್ಯನೆ ಸೂಚಿಪಂತೆವೋಲ್‌ || ೨೧ ||

ಕೂಡಿದುದಂದು ಬಂದು ಪರಿವಾರನಿಳಿಂಪನಿಕಾಯಮೞ್ತೆಯಿಂ
ದಾಡಿದುದಂದು ಬಂದು ವಿವಿಧಾಮರ ಸಂಕುಲಮೋಜೆಗೊಳ್ವಿನಂ
ಪಾಡಿದುದಂದು ಬಂದು ಸುರವೃಂದಮೊಡಂಬಡೆ ಮಂದಮಂದದಿಂ
ತೀಡಿದುದಂದು ಬಂದು ಸತತೋತ್ಸವಕಾರಣದಿಂ ಸಮೀಕರಣಂ || ೨೨ ||

ವ || ಇಂತಾ ದಿವಿಜಲೋಕದ ವಿವಿಧವಾದ್ಯಲಯಂಗಳೊಳೆಱಗಿ ತುಱುಗಿ ಬಂದಾಡುವ ದೇವಾಂಗನೆಯರುಮಂ ಪರಮ ಜಿನರಾಜ ರಾಜಿತಾತಿಸ್ತವಂಗಳಂ ಪ್ರಸ್ತುತಂಗೆಯ್ದು ಬರ್ಪ್ಪವರುಮನಮೃತಧಾರಾ ಸಾರಮೃದು ಮಧುರ ಲಲಿತನಾದದೊಡಂ ಬಟ್ಟು ಸುರಜನಂಗಳನುಱೆ ಸೆಱೆವಿಡಿದು ಪಾಡುವ ಗಂಧರ್ವಗೀರ್ವಾಣರುಮಂ ಅನೇಕ ಭಂಗಿಸಂಗತಭ್ಯಂಗಾರಕನಕಕಳಶಮಣಿದರ್ಪಣ ಚಾರುಚಾಮರಾತಪತ್ರ ಪ್ರಭೃತಿ ಮಂಗಳೋಪಕರಣಂಗಳಂ ಮುಂದಿಟ್ಟು ಸೇಸಿಕ್ಕಲೆಂದು ನಿಂದ ಬೃಂದಾರಕ ಸುಂದರೀ ಬೃಂದಮುಮನತಿಪ್ರಮೋದದಿಂ ನೆರೆದೋಲಗಿಸಲೆಂದು ಬಂದ ಪರಿವಾರದೇವಿಯರುಮಂ ಕಾಮರಾಗರಸ ಸಾಮ್ರಾಜ್ಯ ಸ್ವಭೂತೆಯರಾಗಿ ಬಂದಿರ್ದಚ್ಚರಸಿಯರರುಮಂ ಭೋಂಕನೆ ಕಂಡು

ಆನೆತ್ತೀ ಲೋಕಮೆತ್ತೀ ಪಟುಪಟಹಜಯಾರಾಮಮೆತ್ತೀ ವಿಮಾನಂ
ತಾನೆತ್ತೀ ನೂತ್ನ ರತ್ನಾಭರಣನಿವಹಮೇತ್ತೀ ಲಸನ್ಮಂದಗೀತಾ
ನೂನಪ್ರಧ್ವಾನಮೇತ್ತೀ ಯುವತಿನಚಯಮೆತ್ತೆಂಬಿನಂ ಬಂದು ಪುಟ್ಟ
ತ್ತಾ ನಾಕೇಂದ್ರಂಗೆ ನಿವ್ಯಾಕುಲಮಮಳಭವಪ್ರತ್ಯಯಜ್ಞಾನಮಾಗಳ್‌ || ೨೩ ||

ವ || ಅಂತು ಪುಟ್ಟಿದ ಭವಪ್ರತ್ಯಯ ಜ್ಞಾನದಿನತೀತಭವವೃತ್ತಾಂತಮೆಲ್ಲಮಂ ವಿಸ್ತರಮಱೆದು

ಇದು ದಿವ್ಯಾಮರಲೋಕಮೆನ್ನ ನಿಳಯಂ ತಾನೀ ವಿಮಾನಂ ಸಮಂ
ತಿದು ಬೃಂದಾರಕ ಬೃಂದಮಂಗಜಪತಾಕಾನೀಕದಂತೊಪ್ಪಿ ತೋ
ರ್ಪುದು ದೇವೀನಿಕರುಂಬಮಿಂತಿದು ಸುರಶ್ರೀಸುಂದರಂ ತಪ್ಪದ
ಪ್ಪುದಿದೆಲ್ಲಂ ಪೆಱತೇಂ ಮದೀಯ ಕೃತಪುಣ್ಯಪ್ರಾಪ್ತಮವ್ಯಾಕುಲಂ || ೨೪ ||

ವ || ಎಂದು ತನ್ನೊಳ ಬಗೆವನ್ನೆಗಂ ವಿವಿಧ ಮಣಿಮಯಪಟಳಿಕಾನೇಕ ಪರಿಪೂರ್ಣ್ನ ವಿಚಿತ್ರ ವಸ್ತ್ರಾಭರಣಾನುಲೇಪನಮಾಲ್ಯಾದಿ ಮಾಂಗಲ್ಯದ್ರವ್ಯಂಗಳುಮಂ ಮಹತ್ತರದೇವಿಯರ್‌ ಕೊಂಡುಬಂದು ಮುಂದಿಟ್ಟು ಪೊಡೆವಟ್ಟು

ದಿವಿಜಪ್ರಸ್ತುಮಪ್ಪ ಕಲ್ಪಮಿದೆ ದಲ್ತಾನಚ್ಯುತಂ ಪದ್ಮಗು
ಲ್ಮವಿಮಾನಂ ನೆಗೞ್ದೇವಿಮಾನಮರೀಸಂದೋಹಮೀ ವ್ಯೋಮಮಿಂ
ತಿವರೆಲ್ಲಂ ಪರಿವಾರದೇವರೊಳಪೊಕ್ಕೀ ತೋರ್ಪವರ್‌ ದೇವ ಬ
ರ್ಪವರೀ ರೂಪವಿಲಾಸವಿಭ್ರಮಸಮೇತರ್‌ ನಿನ್ನ ಮಾದೇವಿಯರ್ || ೨೫ ||

ಈ ನೆಗೞ್ದ ಪದ್ಮಗುಲ್ಮವಿ
ಮಾನಕ್ಕಧಿನಾಥನಯ್‌ ಸುರೇಶ್ವರಸಮಸಾಮಾ
ನಿಕನಯ್‌ ಪೆಸರಿಂದಂ ನೀ
ನನುಪಮತೇಜನಪ್ಪ ಪದ್ಮಪ್ರಭನಯ್‌ || ೨೬ ||

ಇದೆ ಸಾರಂ ಸ್ವರ್ಗಸೌಖ್ಯಕ್ಕಿದೆ ದಿವಿಜಸುಖಕ್ಕಾಗರಂ ಭಾವಿಸಲ್ಕಿಂ
ತಿದೆ ದಿವ್ಯಶ್ರೀವಿಲಾಸಾಲಯವಿದೆ ಸುರಭೋಗೋಪಭೋಗಾಸ್ಪದಂ ಮ
ತ್ತಿದಱೆಂ ಮೇಗಿಲ್ಲ ಕಲ್ಪಂ ಬಗೆವೊಡಿದು ಭವದ್ಭಾಗ್ಯದಿಂ ಸಾರ್ಚಿಬಂದಿ
ರ್ದುದು ಕೈಕೊಂಡಿಂತಿದಂ ಪಾಲಿಸುವುದು ಪೆಱತೇನೞ್ತೆಯಿಂ ಪಣ್ಯಮೂರ್ತೀ || ೨೭ ||

ವ || ಎಂದು ಬಿನ್ನಪಂಗೆಯ್ವುದುಮಾ ದೇವಂ ದೇವಲೋಕಪ್ರಾಪ್ತಿಯೊಳ ನಂತಸಂತೋಷಾಮೃತಾಬ್ಧಿವಿಳಾಸ ಸಮುಚ್ಚಳಿತೋದಾರ ಪೂರ ಸವನ ಮಾನಸನಾಗಿ

ಜಿನರ ಪದಸೇವೆಯಿಂದಂ
ಮುನೀಂದ್ರರುಪದೇಶದಿಂದಮಿಂತೀ ವಿಭವಂ
ಜನಿಯಿಸಿದುದೀಗಳಲ್ಲದೊ
ಡನುಪಮಸುರವಿಭವಮೆನಗೆ ವಿಷಯವೊ ಪೊಲನೋ || ೨೮ ||

ವ || ಎಂದಾ ದೇವಂ ದೇವನಿಕಾಯಂ ಬೆರಸು

ಅಮರಾವಾಸದೊಳುಳ್ಳ ದಿವ್ಯಮಣಿಸಂಘಾತಂಗಳಂ ದಿವ್ಯವ
ಸ್ತ್ರಮನೋರಂತಿರೆ ಕೊಂಡು ಪೋಗಿ ಜಿನಚೈತ್ಯವ್ರಾತಮಂ ಸುಪ್ರಭೂ
ತಮನತ್ಯಂತವಿನೂತಮಂ ತ್ರಿಭುವನಪ್ರಖ್ಯಾತಮಂ ಲೋಕಪೂಜ್ಯ
ಮನಾನಂದದಿನಾಗಳರ್ಚಿಸಿದನಾ ಪದ್ಮಪ್ರಭಂ ಸುಪ್ರಭಂ || ೨೯ ||

ಅಮರವ್ರಾತಸಮೇತನಂತೆ ಬೞೆಯಂ ಶ್ರೀ ಸೂರ್ಯಮಿತ್ರಾಗ್ನಿ ಭೂ
ತಿಮುನೀಂದ್ರೋಪಕೃತಂಗಳಂ ನೆನೆದು ತನ್ನಿರ್ವಾಣಭೂಮಿಪ್ರದೇ
ಶಮನಾನಮ್ರಸುರಾಸುರೋರಗಪವಿತ್ರೋದ್ದೇಶಮಂ ಭಕ್ತಿಯಿಂ
ದಮೊಱಲ್ದರ್ಚಿಸಿದಂ ಮಹಾತ್ಮನಮಳಂ ದ್ರವ್ಯಾರ್ಚನಾನೀಕದಿಂ || ೩೦ ||

ಅಂತು ಮಿನೀಶ್ವರೋಪಕೃತಮಂ ಮನದೊಳ್‌ ನೆನೆದಗ್ರಮಂದಿರೋ
ಪಾಂತುಮನೆಯ್ದೆವಂದು ಪರಿನಿರ್ವೃತಿಭೂಮಿಯನಾ ಸುರೋತ್ತಮಂ
ಸಂತಸದಿಂದೆ ಭಕ್ತಿವೆರಸಾಗಳೆ ಪೂಜಿಸಿ ಲೇಸುಗೆಯ್ದನಿ
ನ್ನಂತುಟೆ ತನ್ಮುನೀಂದ್ರಕೃತಮಂ ಮಱೆದಂದು ಕೃತಘ್ನನಾಗನೇ || ೩೧ ||

ವ || ಅಂತಪರಿಮಿತಭಕ್ತಿಯಿನನೇಕಾರ್ಚನೆಗಳಿನರ್ಚಿಸಿ ದೇವಲೋಕಕ್ಕೆ ವಂದು ಚತುಸ್ಸಹಸ್ರಸಾಮಾನಿಕಸಮೇತನುಂ ತತ್ಪ್ರಮಾಣಾಂಗರಕ್ಷತ್ರಿದಶಾನೀಕನುಂ ತ್ರಯಸ್ತ್ರಿಂಶತ್ಪರಿಮಿತದಿವಿಜಗಣಪರಿವೃತನುಂ ಚತುಷ್ಟಯಾಭಿಷ್ಟುತಪ್ರಧಾನಲೋ ಕಪಾಳಾಭಿರಾಮನುಂ ನಾನಾಪ್ರಕಾರಪಾರಿಷದಪ್ರಕೀರ್ಣ್ನಕಾಭಿಯೋಗ್ಯ ಕಿಲ್ಬಿಷಿಕಾನಿ ಕವ್ಯಾ ಕೀರ್ಣ್ನನುಮಂತರ್ಮಧ್ಯಬಾಹ್ಯತ್ರಿಃಪ್ರಕಾರಪರಿಷತ್ಪ್ರಕಾಶಕರನಾಗಿ ಪರಮೈಶ್ವರ್ಯಸಂಪನ್ನ ನಾದನದಲ್ಲದೆಯಂ

ಪ್ರಿಯದಿವಿಜಾಂಗನೆಯರ್ ನಿಃ
ಕ್ರಿಯಸಂಭವೆಯಪ್ಪವರ್ಗೆ ಎಣ್ಬರ್ಮಾದೇ
ವಿಯರೆಣ್ಬರ್ನಚ್ಚಿನ ದೇ
ವಿಯರಾ ಪದ್ಮಪ್ರಭಂಗೆ ಮೂವತ್ತಿರ್ವರ್ || ೩೨ ||

ಅಮರನ ದೇಹೋಚ್ಪ್ರಿತಿ ಮೂ
ಱು ಮೊೞಂ ಪರಮಾಯುವಿರ್ಪ್ಪತ್ತೆರಡು ಸಮುದ್ರೋ
ಪಮಮನಿತೆ ಸಹಸ್ರಾಬ್ದ
ಕ್ಕಮೃತಾಹಾರಮನೆ ನೆನೆದು ತಣಿವಂ ಮನದೊಳ್‌ || ೩೩ ||

ಸುರಭಿಪರಿಮಳಸುಗಂಧೋ
ತ್ಕರಮಂ ಪನ್ನೊಂದು ತಿಂಗಳಿಂಗೊರ್ಮೆ ಮನೋ
ಹರಮಾಗಿರೆ ನಸು ಸುಯ್ವಂ
ನಿರುಪಮಮಹಿಮಾಪ್ರಭಾವನಂತಾ ದೇವಂ || ೩೪ ||

ವ || ಮತ್ತಮಣಿಮಾದ್ಯಷ್ಟಗುಣಸ್ವಭಾವಸಹಿತನುಂ ಶೋಕಾತಂಕಸಂಕ್ಷೇಶ ಭಯಜರಾಲಸ್ಯಾಕ್ಷೇಪಸ್ಪಂದನಿದ್ರಾದಿದೋಷವಿರಹಿತನುಂ ವ್ಯಪೇತತನೂರುಹಶ್ಮಶ್ರು ಕೇಶರೋಮನಖನುಂ ಮನಃ ಪ್ರವೀಚಾರಸಾರೋದಾರಸುಖನುಂ ಸಹಜಸುರಭಿಪರಿ ಮಳಾಮೋದಗಂಧಬಂಧುರತಾಸಮುತ್ಪನ್ನನುಂ ನಿರವಶೇಷನಿರಸ್ತಧಾತುಮಳಕಳಂಕ -ಕಳೇವರನುಂ ಸುರಾಂಗನಾ ಪಾಂಗನೀಳನೀರೇರುಹವಿಕಸನಶಾಶಾಂಕನುಮಾಗಿ

ದಿವಿಜಸ್ತ್ರೀಜಘನಾಭಿರಾಮರಶನಂ ದೇವಾಂಗನಾಪಾಂಗಕೈ
ರವಚಂದ್ರಂ ಸುರಕಾಮಿನೀಸ್ತನತಟಾಳಂಕಾರಹಾರಂ ನಿಳಿಂ
ಪವಧೂವಕ್ತ್ರಸರೋಜಮಿತ್ರನೆನೆ ಚಿತ್ತೋದ್ಯತ್ಪ್ರವೀಚಾರಸಾ
ರವಿನೋದಂಗಳಿನಂದದೇಂ ನಲಿದನೋ ಕಲ್ಪಾಮರಂ ಕಲ್ಪದೊಳ್‌ || ೩೫ ||

ಚಾರುಸುರಾಂಗನಾರತಿಸುಖಮೃತಸೇಚನೆಗೆಂದು ಕಾಯಮಂ
ಪೋರಿಸಿ ನೋಟದೊಳ್ತೊಡರ್ದು ಶಬ್ಧಮನಾಲಿಸಿ ಬೇವ ಬೇವಸಂ
ಪೋ ರುಚಿಯಲ್ಲಮೆಂದದನಧಹ್ಕರಿಪಂದದಿನೇಂ ಮನಃ ಪ್ರವೀ
ಚಾರಸುಖಾಂಬುನಿಧಿಯೊಳ್‌ ನಲಿದಾಡಿದನಾ ಸುರೋತ್ತಮಂ || ೩೬ ||

ಹರಿವೆಸಗೆಯ್ವರಚ್ಚರಸೆಯಬ್ರಗೆದಾಗಳೆ ಕೂರ್ತು ಬರ್ಪರ
ಚ್ಚರಸೆಯರಿಚ್ಛೆಯಂ ಸಲಿಸಿ ಮೆಚ್ಚಱೆದೋಲಗಿಸುತ್ತುಮಿರ್ಪರ
ಚ್ಚರಸೆಯರಿಂಬುಕೆಯ್ದೊಲಿಸಿ ಚಿತ್ತದೊಳಾಗ್ಗಲಿಸುತ್ತುಮಿರ್ಪರ
ಚ್ಚರಸೆಯರೆಂದೊಡೇವೊಗೞ್ದುದೊ ದಿವಿಜೇಂದ್ರನ ದಿವ್ಯಲೀಲೆಯಂ || ೩೭ ||

ತ್ರೈಲೋಕ್ಯನಾಥನೋಲಗ
ಸಾಲೆಯೊಳಮರೆಂಡ್ರನೊಡನೆ ರಾಗೋದಯದಿಂ
ತೊಳೂ ತೊಡೆ ಸೋಂಕಿ ಕುಳ್ಳಿ
ರ್ದೋಲಗಿಸುತ್ತಿರ್ಪನೞ್ತೆಯಿಂ ಜಿನಪತಿಯಂ || ೩೮ ||

ಓರೊರ್ಮೆ ರತ್ನ ಮುದ್ರಿಕೆ
ಯಾರಯೆ ಕೇಯೂರದೊಳ್‌ ಪಳಂಚಲೆಯೆ ಮಹೋ
ದಾರತೆಯಿನಚ್ಯುತೇಂದ್ರನೊ
ಳೋರಾಸನಮಿರ್ದನಮನರಸ್ಥಾಯಿಕೆಯೊಳ್‌ || ೩೯ ||

ಕನಕಾದ್ರೀಂದ್ರನಿಕುಂಜರಂಜಿತವನಕ್ಕೋರೋರ್ಮೆ ಗೋತ್ರಾಚಲಾ
ಭಿನುತಾನೂನಮಹಾಸರೋರುಹವನಕ್ಕೋರೋರ್ಮೆ ನೀಹಾರತಾ
ರನಗೋಪತ್ಯಕ ಕಲ್ಪಭೂರುಹವನಕ್ಕೋರೋರ್ಮೆ ಲೀಲಾವಿಲೋ
ಕನಕದಿಂ ಮಾಣದೆ ಪೋಗಿ ಪೊೞ್ತುಗಳೆವಂ ನಿಚ್ಚಂ ನಿಳಿಂಪೋತ್ತಮಂ || ೪೦ ||

ಹಿಮವತ್ಕುತ್ತೀಳದೊಳ್‌ ಮಂದರಮಹಿಧರದೊಳ್‌ ಶಾಲ್ಮಲೀಚೈತ್ಯಜಂಬೂ
ದ್ರುಮದೊಳ್‌ ವಕ್ಷಾರದೊಳ್‌ ಕುಂಡಳಗಿರಿವರದೊಳ್‌ ಮಾನುಷಾದ್ರೀಂದ್ರದೊಳ್‌ ತಾ
ರಮಹೀಧೋಪಾಂತ್ಯದೊಳ್ಸಂತತಮಮರನಿಕಾಯಾನ್ವಿತಂ ವಿಶ್ರುತಾಕೃ
ತ್ರಿಮಚೈತ್ಯಾವಾಸಪೂಜೋತ್ಸವದಿನಗಲನಲ್ಲಿಂದಮೆಂದುಂ ಸುರೇಂದ್ರಂ || ೪೧ ||

ಸಲೆ ದೇವಾಗಮಮೆತ್ತಲತ್ತಲೆ ಸುಧರ್ಮಕ್ಷೇತ್ರದೊಳ್ಪೆತ್ತಲ
ತ್ತಲೆ ಯೋಗೀಶ್ವರರೆತ್ತಲತ್ತಲೆ ಪದಾರ್ಥಾಳಂಬದಿಂದೆತ್ತಲ
ತ್ತಲೆ ತೀರ್ಥಾವಳಿಯೆತ್ತಲತ್ತಲೆ ಜಿನಶ್ರೀಗೇಹಮಂತೆತ್ತಲ
ತ್ತಲೆ ಜೈನೋತ್ಸವದಿಂದೆ ಪೋದುದೆ ವಿನೋದಂ ತತ್ಸುರಂಗೆತ್ತಲುಂ || ೪೨ ||

ಮುದದಿಂ ನಾನಾವಿನೋದಂಗಳಿನೊದವಿದ ಸಂಪ್ರೀತಿಯಿಂ ಮೂಡಿಮುೞ್ಕಾ
ಡಿದನೆತ್ತಂ ನೀಡುಮೋಲಾಡಿದನವಗಹನಂ ಮಾಡಿದಂ ರಾಗದಿಂದೀಂ
ಟಿದನೋರಂತೀಸಿದಂ ದೊಮ್ಮಳಿಸಿ ತುಳುಕುನೀರಾಡಿದಂ ದೋಣಿಯಿಂದೇ
ಱೆದನೆಂಬಂತಾ ಸುರೇಂದ್ರಂ ದಿವಿಜಸುಖಸುಧಾಂಬೋಧಿಯೊಳ್‌ ಪದ್ಮತೇಜಂ || ೪೩ ||

ಅನುಪಮ ದಿವ್ಯ ಸೇವ್ಯ ವಿಭವಂ ದೊರೆವೆತ್ತ ವಿನೋದವೃತ್ತಿಯಿಂ
ಜನಿಯಿಸೆ ಚೆಲ್ವುವೆತ್ತೆಸೆವ ಗಾಡಿ ಮನೋಹರಮಾಗಿ ಸಂತತಂ
ಮನಸಿಜರಾಗಮಂ ಸಲಿಸೆ ಕುಂದದ ನಿಪ್ಪೊಸತಪ್ಪ ಜವ್ವನಂ
ತನಗೆ ವಿಲಾಸಮಂ ಪಡೆಯೆ ಭೋಗಿಸಿದಂ ಸುರಲೋಕ ಭೋಗಮಂ || ೪೪ ||

ವ || ಅನ್ನೆಗಮಿತ್ತಲೀ ಭರತಕ್ಷೇತ್ರದವಂತೀವಿಷಯದ ಮಧ್ಯಪ್ರದೇಶಮ ಮಧ್ಯಪ್ರದೇಶಮ ನಳಂಕರಿಸಿ

ಮಾನವಲೋಕದೊಳ್‌ ಪುರಿದರ್ಕೆಣೆಯಾವುದೆನಿಪ್ಪ ಕೀರ್ತಿಯಂ
ತಾನೊಳಕೊಂಡು ನೋೞ್ಪರ ಮನಂಗಳನಿೞ್ಕುಳಿಗೊಂಡು ಚೆಲ್ವನು
ದ್ದಾನಿಯನಾಂತು ಕಣ್ಗೆ ಕರಮೊಪ್ಪುಗುಮೂರ್ಜಿತರಾಜಧಾನಿಯು
ಜ್ಜೇನಿ ಧರಾಂಗನಾವದನಮಂಗಳದರ್ಪಣಮಿಂತಿದೆಂಬಿನಂ || ೪೫ ||

ಆ ಪುರದ ಪೊಱವೊೞ(ಲನೀ)
ಕ್ಷಿಪ ವಸಂತಾಗಮನಕ್ಕೆ ತಾನಾಗಮ
ಮೇಂ ಪರಿಭಾವಿಸೆ ಕಾಮಂ
ಕಾಪೆನೆ ಕರಮೊಪ್ಪಿ ತೋರ್ಪುದುದ್ಯಾನವನಂ || ೪೬ ||

ತುಱುಗಿ ತಳಿರ್ತಶೋಕೆ ಪೊಸಗೊಂಚಲೊಳಂಚಿರಮಲ್ಲದೆಯ್ದೆ ಕಿ
ಕ್ಕಿಱೆಗಿಱೆದಿರ್ದ ಮಾವು ಫಳಭಾರದಿನುರ್ವಿಗಗುರ್ವು ಪರ್ವೆ ತ
ಳ್ತೆಱಗಿದ ಬಾೞೆ ಪಣ್ಗೊನೆಗಳಿಂ ಗೊನೆಗೊಂಡ ಕವುಂಗು ಕಾಯ್ಗಳಿಂ
ತುಱುಗಿದ ತೆಂಗು ಶೋಭಿಪುದನಂಗನ ಮಂಗಳಗೇಹಮೆಂಬಿನಂ || ೪೭ ||

ಅಸುಕೆಯ ಕೆಂಪು ಪಾದರಿಯ ಕಂಪು ಪಯೋಜಲಸತ್ಸರೋವರ
ಪ್ರಸರದ ತಣ್ಪು ಸಂಪಗೆಯ ನುಣ್ಪು ಲತಾಗೃಹದೊಳ್ಪು ಮಲ್ಲಿಕಾ
ಕುಸುಮದ ಬೆಳ್ಪು ಮಾವಿನ ಪಸುರ್ಪು ಮದಾಳಿಯ ಕರ್ಪು ಕೂಡೆ ಕ
ಣ್ಗೆಸೆವೆಲೆವಳ್ಳಿಯಾಗರದಗುರ್ವು ತಮಾಳದ ಸುರ್ವು ಸುತ್ತಲುಂ || ೪೮ ||

ಮೊರೆವ ಮದಾಳಿ ಸಂಭ್ರಮದೆ ಕೂಗುವ ಕೋಗಿಲೆಯಲ್ಲಿ ಬಿಚ್ಚತಂ
ಬಳಸುವ ಜಕ್ಕವಕ್ಕಿ ನಯದಿಂ ನಲಿದಾಡುವ ರಾಜಹಂಸೆ ಸು
ಸ್ವರದಿನನಾರತಂ ಬೆದಱದೋದುವ ಕೀರನಿಕಾಯಮಾವನಾಂ
ತರದೊಳಗೊರ್ಮೆಯುಂ ಮಱೆದು ಮಾಣವು ಮನ್ಮಥನಾಜ್ಞೆಯೆಂಬಿನಂ || ೪೯ ||

ಪೃಥ್ವಿ || ಆಮೇಯ ಕನಕಾಬ್ಜಪಿಂಜರಪರಾಗಮಂ ಗಾತ್ರದೊಳ್‌
ತೆವೞ್ದೆಕೊಳದಿಂ ಕೊಳಕ್ಕೆಱಗುತಿರ್ಪ್ಪ ವಿಭ್ರಾಜಿತ
ಭ್ರಮದ್ಭ್ರಮರಸಂಕುಳಂ ಬನದೊಳೞ್ತೆಯಿಂದಾಡುತಿ
ರ್ಪ ಮನ್ಮಥನ ಪೊನ್ನ ಪಟ್ಟುಗಳ ಪೋಲ್ವೆಯಂ ಪುಟ್ಟಿಕುಂ || ೫೦ ||