ಪಿರಿಯ ಪರಿವುಗಳ ಸುತ್ತಿದ
ಪರಿಕಾಲ್ಗಳ ತುಱುಗಿದಣ್ಣಗಳ ತೀವಿದ ಪೊ
ಕ್ಕರಣೆಗಳ ನೆಱೆದ ಕೆಱೆಗಳ
ಸರೋವರಂಗಳ ಬೆಡಂಗಗುಂದಲೆ ಪುರದೊಳ್‌ || ೫೧ ||

ಪ್ರಬಳಫಲಭಾರದಿಂ ಕೂ
ಡಿ ಬಳ್ಕಿ ತೆನೆ ನೆಲನನಲೆಯ ಪವನನ ಹತಿಯಿಂ
ದೆ ಬೆಡಂಗುವೆತ್ತು ನೆಱೆ ಬೀ
ಗಿ ಬೆಳೆದುವು ಮಗಮಗಿಪ ಗಂಧಶಾಲಿವನಂಗಳ್‌ || ೫೨ ||

ಕಳಮೆವನಕ್ಕಾಗಿ ತೆಱಂ
ಬೊಳೆವ ಬಕಂ ಸುೞೆವ ಸೋಗೆ ಜಡಿವರಗಿಳಿಗಳ್‌
ವಿಳಸಿತ ರವದಿಂ ಪಾಂಥ ಪ್ರ
ಬಲಮನೋರಥವಿಘಾತಮಂ ಮಾಡುತ್ತುಂ || ೫೩ ||

ವನಜಾತಾಸ್ಯೆ ರಥಾಂಗಯುಗ್ಮಕುಚೆ ನೀರೇಜಾಕ್ಷಿ ಸದ್‌ಹಂಸಗಾ
ಮಿನಿ ರಾಜತ್ಕಳಕಂಠನಿಸ್ವನೆ ಕಳಾಪಿ ಪ್ರಾಂಶುಧಮ್ಮಿಲ್ಲೆಯಂ
ಬ ನಿಜಾಕಾರವನುಂಟುಮಾಡಿ ಮುದದಿಂ ಕೆಯ್‌ಗಾವ ಪಾಮರಿಯಾ
ವನವಂ ನೋೞ್ಪಜನಕ್ಕೆ ಮಿಕ್ಕವನಲಕ್ಷ್ಮೀಭ್ರಾಂತಿಯಂ ಮಾಡುವಳ್‌ || ೫೪ ||

ಮನಸಿಜನಾಯುಧ ನಿಲಯಂ
ಮನಸಿಜನ ಸಮಗ್ರರಾಜ್ಯಲಕ್ಷ್ಮೀಸದನಂ
ಮನಸಿಜನ ಜಯನ ಸಾಲೆಯ
ಮೆನೆ ಸೊಗಯಿಸುವುವು ಮನೋಹರೇಕ್ಷುವನಂಗಳ್‌ || ೫೫ ||

ತರತರದಿಂ ತೆರಳೆ ರಸಂ
ನಿರಂತರೋಧ್ಯತ್ಪ್ರಸನ್ನಮತಿಯಿಂದಂ ಗಾ
ಣರತಂಡದಂಡದಿಂದಂ
ಮೊರೆವುವು ಗಾಣಂಗಳಿಕ್ಷುವಾಟಾಂತರದೊಲ್‌ || ೫೬ ||

ನಗರಂ ವಿಶ್ವಾವನೀಚಕ್ರದೊಳನುಪಮಗಾಂಭೀರ್ಯದಿಂ ನೂತ್ನರತ್ನಾ
ಳಿಗಳಿಂದಂ ಪೆರ್ಮೆಯಿಂ ನೋಡುವೊಡೆನಗೆ . . . . . .ಗದಂ ತಾ(೦)ಮಿಗಿಲ್‌ ತಾಂ
ಮಿಗಿಲೆಂಬಾಕ್ಷೇಪದಿಂ ಮೂವಳಸು ವಳಸಿ ಸುತ್ತಿರ್ದುದಂಬೋಧಿಯೆಂಬಂ
ತೆ ಗಭೀರಾರಾವದಿಂ ಪಲ್‌ ಮೊರೆವವೊಲೆಸೆಗುಂ ಸುತ್ತಿ ಪಾನೀಯಖೇಯಂ || ೫೭ ||

ಸಾರಮೆನಲ್‌ ತರಂ ತರದಿನೊಪ್ಪುದ ಪೊಂಗಳಸಂಗಳಿಂದಳಂ
ಕಾರ ಸಹಸ್ರಕೂಟನಿಕುರುಂಬದಿನಪ್ರತಿಮಂಗಳಪ್ಪ ರೂ
ವಾರದಿನಾರುಮಂ ಬಗೆಗೊಳಲ್‌ ಪರಿಶೋಭಿಪ ಮಂಟಪಂಗಳಿಂ
ನೇರಿದವಾದ ಗರ್ಭಗೃಹದಿಂ ಜಿನರಾಜಗೃಹಂಗಳೊಪ್ಪುಗುಂ || ೫೮ ||

ಜಿನಪೂಜಾತಿಶಯಕ್ರಿಯಾಘಟಿತ ಘಂಟಾರಾವದಿಂ ನರ್ತಕೀ
ಜನವೈಚಿತ್ರ್ಯಲಯಕ್ಕೆ ಲಕ್ಕ ತೆಱದಿಂದಂ ಪೊಯ್ವ ನಾನಾನಕ
ಧ್ವನಿಯಿಂ ಮಂಗಳವಂದಿಮಾಗಧಜಯಪ್ರಧ್ವಾನದಿಂ ಶಂಖನಿ
ಸ್ವನದಿಂದತ್ತಲುಮಿತ್ತಲುಂ ಸೊಗಯಿಕುಂ ತಾನೆತ್ತಲುಂ ಸುತ್ತಲುಂ || ೫೯ ||

ಪವಣಱೆಯಲ್‌ ಬಾರದು ಲ
ಕ್ಕೆ ವಳಿಯಿಕೆಯ ಕೋಟೆವಳಯಿಗೆಯ ಪರದರ ಲೆ
ಕ್ಕವನೆಂದೊಡುೞೆದ ಪರದರ
ಪವಣಂ ಮೇರೆಯುಮನಱೆವರಾರಾ ಪುರದೊಳ್‌ || ೬೦ ||

ಸಾರವಣೆ ಮಳಯಜಂ ಕ
ರ್ಪೂರರಜಂ ರಂಗವಲ್ಲಿ ಸಲೆಪೊಂದಳಿರ್ಗಳ್‌
ತೋರಣಮೆನೆ ಕರಮೆಸೆವುವು
ವಾರಾಂಗನೆಯರ ನಿವಾಸದೊಳಗುಂ ಪೊಱಗುಂ || ೬೧ ||

ಸುತ್ತುಂಗುರುಳಂತರದೊ
ತ್ತುತ್ತುಂ ದೆಸೆದೆಸೆಯೊಳಲೆವ ಕಣ್ಮಲರ್ಗಳಿನು
ನ್ಮತ್ತಗಜಗಮನೆಯರ್ ಬಂ
ದೊತ್ತೆಗೆ ನಿಲ್ವರ್ ಶಾಲದೊಂದಂಗಣದೊಳ್‌ || ೬೨ ||

ಸರಳಾಪಂಗಳಿಂ ಜತ್ತಿ ಸುವ ಬಗೆಗೆಲಲ್ಕೆಂದು ಕೂರ್ತಿಚ್ಚೆ ಬೆಚ್ಚಂ
ತಿರೆ ಮಚ್ಚಂ ಮೆಚ್ಚಿದಂದದೊಳೆ ಸಲಿಪ ನಾನಾವಿನೋದಂಗಳಂ ಚಿ
ತ್ರರತಕ್ರೀಡಾವಿನೋದಂಗಳೊಳೆ ಮೆಱೆವ ಕೂಟಂಗಳಿಂ ಕೂಡಿ ಲಾವ
ಣ್ಯರಸಂ ತಳ್ಳಂಕುಗುಟ್ಟುತ್ತಿರೆ ಕರಮೆಸೆಗುಂ ವಾರನಾರೀಕದಂಬಂ || ೬೩ ||

ಮಳಿಗೆಯ ಮಾಳಿಗೆಯು ಮನಂ
ಗೊಳಿಸುವ ನಾನಾಪ್ರಕಾರದಂಗಡಿಯುಂ ಬೆಡಂ
ಗೊಳಕೊಂಡ ಸೂಳೆಗೇರಿಯ
ವಿಳಾಸದಿಂದೆಂತು ನೋೞ್ಪಡಂ ರಮಣೀಯಂ || ೬೪ ||

ವರರತ್ನ ಕನಕಮಯ ವಿ
ಸ್ಪುರಿತಪ್ರೋತ್ತುಂಗತೋರಣಪ್ರಾಕರಂ
ನರನಾಥಭವನಮನುಪಮ
ಪುರಾಂಗನಾವವದನತಿಳಕಮೆಂಬಂತಿಕ್ಕುಂ || ೬೫ ||

ಸೊಗಯಿಪ ಭೋಗಾವತಿಗಂ
ಮಿಗಿಲಮರಾವತಿಗಮಿದುವೆ ಮೇಲೆನಿಸುವುದೀ
ಜಗದೊಳ್‌ ನಿರಂತರಂ ಭೋ
ಗಿಗಳಿಂದಂ ವಿಬುಧರಿಂದಮುಜ್ಜೇನಿಪುರಂ || ೬೬ ||

ನಿರುಪಮಮತರ್ಕ್ಕಮದ್ಭುತ
ಕರಮತಿಶಯಮೆಂದು ಮಾಣದೊಲ್ಲದೆ ಪೋಗೆನೆ
ನರನಾವಂ ಬಣ್ಣಿಪನಾ
ಪುರಮಂ ಬಣ್ಣಿಸುವೊಡುರಗಪತಿಯುಂ ನೆಱೆಯಂ || ೬೭ ||

ಆದನಾಳ್ವನಧಿಕರಿಪುನೃಪ
ಮದವನ್ಮಾತಂಗಕುಂಭದಳಮಥನಂ ದು
ರ್ಮದವಿಜಯ ನಿಶಿತನಿಸ್ತ್ರೀಂ
ಶದಕ್ಷಗಜವೈರಿವಿಶ್ರುತಂ ವೃಷಭಾಂಕಂ || ೬೮ ||

ಸದಮಳಚರಿತದಿನುದ್ದೂ
ತದೋಷದಿಂದತ್ಯುದಾತ್ರನಿತ್ಯೋದಯಸಂ
ಪದದಿನೆಳೆಗಿರ್ವರೆನಲೆಂ
ಬುದನೆನಿಸಿ ನೆಗೞ್ತೆವೆತ್ತನಾ ಧರಣೀಶಂ || ೬೯ ||

ಸಕಳಾಳಾಪಂ ಕುವಳಯ
ವಿಕಸನಕರನಖಿಳಸತ್ವಸೌಮ್ಯಂ ಭಾಸ್ವ
ತ್ಪ್ರಕಟಯಶನಿಳಿಸಿದಂ ವಿಶ
ದಕಾಂತಿಯಿಂದಂ ಶಶಾಂಕನಂ ವೃಷಭಾಂಕಂ || ೭೦ ||

ಲಾಟ ಕಳಿಂಗ ವಂಗ ಕರಹಾಟ ತುರುಷ್ಕ ವರಾಳ ಚೋಳ ಕ
ರ್ನಾಟ ಸುರಾಷ್ಟ್ರ ವತ್ಸ ಭರುವತ್ಸ ಸುಕೋಶಲಮಾದಿಯಾದ ದೇ
ಶಾಟವಿಕಾಧಿಪರ್ಮಲೆದು ನಿಲ್ಲದೆ ಕಪ್ಪಮನಿತ್ತು ನಿರ್ಮಿತಾ
ಘಾಟಧರಿತ್ರಿಯೊಳ್‌ ನೆಲಸುವರ್‌ ವೃಷಭಾಂಕನಿದೇಂ ಪ್ರತಾಪಿಯೋ || ೭೧ ||

ಮಲೆವ ಮಲೆಪರ್ಕಳಕ್ಕೆಮ
ಬಲಿದ ಬಲಾನ್ವಿತ ಮಹೀಪರಕ್ಕೆಮ ಚಲಮಂ
ತೊಲಗಿಸಿ ವೃಷಭಾಂಕಂ ಕಾ
ಲೊಳಾಂತುದಂ ತಲೆಯೊಳಾಂತು ಬೆಸಕೆಯ್ಯದರಾರ್‌ || ೭೨ ||

ಪೆಸರಂ ಕೇಳ್ದಿಳ್ಕಿ ಬೆಳ್ಳತ್ತುದು ಪರಧರಣೀಮಂಡಲಂ ಗಂಡುಗೆಟ್ಟಾ
ಳ್ವೆಸನಂ ಪೂಣ್ದತ್ತು ಶೌರ್ಯೋನ್ನತಿಗಗಿದಸುಹೃನ್ಮಂಡಳಂ ಮೆಲ್ಪನಾವ
ರ್ಜಿಸಿದೊಂದಾಜ್ಞಾವಿಶೇಷಕ್ಕೆಳಸಿದುದು ಸುಹೃನ್ಮಂಡಳಂ ಸಂತಮಿಂತಾ
ದೆಸಕಂ ಕಯ್ಗಣ್ಮೆ ತ್ಸದ್ಭೂಪತಿಗಖಿಳಧರಾಚಕ್ರಮಾಯ್ತೇಕಚಕ್ರಂ || ೭೩ ||

ಆ ಙವೃಷಭಾಂಕವಲಭನ ವಲ್ಲಬೆ ಸಲ್ಲಲ್ಲಿತಪ್ರವಾಳದಂ
ತಾವರಣಾನುರಂಜಿತೆ ಚಕೋರಚಳೇಕ್ಷಣರಾಮೆ ಪಂಕಜ
ಶ್ರೀವದನೋಪಶೋಭಿತೆ ಲತಾಲಲಿತಾಂಗವಿಲಾಸೆ ಲಕ್ಷ್ಮಣಾ
ದೇವಿ ಮನೋಜರಾಜವನನದೇವಿಯೆನಿಪ್ಪಿನಮೊಪ್ಪಿ ತೋೞುವಳ್‌ || ೭೪ ||

ತನಿಗಂಪಂ ಚಂಪಕಂ ವಿಸ್ಫುರಿತವದನಮಂ ಪಂಕಜಂ ತುಂಗವೃತ್ತ
ಸ್ತನಮಂ ಚಕ್ರಾಹ್ವಯುಗ್ಮಂ ತರಳನಯನಮಂ ಪದ್ಮಪತ್ರಂ ಸಮುದ್ಯ
ತ್ತನುವಂ ಭಾಸ್ವಲ್ಲತಾವಲ್ಲರಿ ತದನುಗತಾಕಾರಮಪ್ಪಂತಿರಾರಾ
ಧನೆಗೆಯ್ವಾ ಪೋಲ್ವೆಯಂ ತಾಳ್ದಿದುವೆನಿಸಿದ ಸಂಪತ್ತಿಯಂ ಕಾಂತೆ ಪೆತ್ತಳ್‍ || ೭೫ ||

ವ || ಮತ್ತಮಾ ನರೇಂದ್ರನಪರಿಮಿತಪರಿಜನನುಮನುಪಮತುರಂಗಸಂಘಾತ ಸಮೇತನುಂ ಅಕ್ಷೂಣಲಕ್ಷಣೋಪೇತಭದ್ರಗಜರಾವಿರಾಜಿತನುಂ ಅನೂನಲಕ್ಷ್ಮೀವಿಲಾಸನುಂ ಅರಾತಿಮಂಡಲಪ್ರಾಂತಪ್ರಳಯಾನಳನುಮಚಿಂತ್ಯ ಸಾಹಸ್ಸನುಮರ್ಥಿಸಂ ಘಾತಚಾತಕಪ್ರೀತಿಕರಣಾಗ್ರಿಮಬಳಾಹಕನುಮಸದೃಶವಿಶೇಷಭಾಸುರಜಿನೇಂದ್ರಶಾಸ- ನೋದ್ಭಾಸಿಯುಮೆನಿಸಿ ಮಹಾಮಕುಟಬದ್ಧಪದವಿಪ್ರತಿಬದ್ಧ ಸಕಲಸಾಮ್ರಾಜ್ಯವಿಭೂತಿ – ಯನಳಂಕರಿಸಿ

ದ್ವಿಷದುರ್ವೀಪಾಲಸೈನ್ಯಾಂಬುಧಿವಿದಹನಕರೌರ್ವಾನಲೋಗ್ರಪ್ರತಾಪಂ
ಧಿಷಣಪ್ರಾರಬ್ಧಸಂಗೀತಕನನುಪಮ ಸಂಪ್ರಾಪ್ತ ಸಾಮ್ರಾಜ್ಯರಾಜ್ಯಾ
ಭಿಷವಂ ಸಂಸೇವಿರಾಜನ್ಯಕಮುಕುಟಮಣಿಪ್ರಜ್ವಲವ್ಯೋಮಚಕ್ರಂ
ವೃಷಭಾಂಕಂ ಶಾಂತನುಜ್ಜೇನಿಯೊಳರಸುಗೆಯುತ್ತಿರ್ದನುತ್ಸಾಹದಿಂದಂ || ೭೬ ||

ವ || ಆ ವಿಶ್ವವಿಶ್ವಂಭರಾಧೀಶ್ವರಂಗೆ ಪರಮವಿಶ್ವಾಸಿ ಪ್ರಧಾನಶ್ರೇಷ್ಠಪದ ವಿಭೂತಿಯಂ ತೆಳೆದು

ಎರಡಿಭನೇಱೆ ಕಾರ್ತ
ಸ್ವರದೆರಡುಂ ಕೆಲದೊಳಿರೆ ನಿಷಾದಿಗಲೋರೊ
ರ್ವರ ರೂಪುಗಾಣದಿರ್ಪ
ರ್ಧರಾಸಿಗಧಿನಾಥಣೆನಿಸಿ ದಿವ್ಯಾನ್ವಯದೊಳ್‌ || ೭೭ ||

ವ || ಮಹಾಪ್ರಸಿದ್ಧ ವೈಶ್ವಾನ್ವಯೋದಾತ್ತನಪ್ಪಿಂದ್ರದತ್ತನೆಂಬ ಪ್ರಧಾನ ಶ್ರೇಷ್ಠಿಗ ಮಾತನ ಮನೋರಮೆ ಶೀಲವತಿಯೆನಿಸಿದ ಗುಣವತಿಗಂ

ವಿಗಳಿತಕಳಂಕ ಜಿನಪದ
ಯುಗಸರಸಿಜಮಧುಕರಂ ವಿನೇಯ ನಿಧಾನಂ
ಸುಗುಣಾಂಳಂಕೃತಗಾತ್ರಂ
ನೆಗೞ್ತೆವೆತ್ತಿರ್ದ ಸೂರದತ್ತಂ ಪುತ್ರಂ || ೭೮ ||

ವಿಬುಧಜನಾಧಾರಂ ವಂ
ದಿಬೃಂದಕಲ್ಪದ್ರುಮಂ ಮಹೋದಾರಗುಣ
ಸ್ತಬಕನೆನಿಸಿರ್ದು ಧನದೊಳ್‌
ಕುಬೇರನೆನೆ ನೆಗೞ್ದನಾ ವಣಿಕ್ಕುಲತಿಲಕಂ || ೭೯ ||

ಪರಮದಯಾಮೂರ್ತಿ ಮನೋ
ಹರಮೂರ್ತಿ ಸುಧರ್ಮಮೂರ್ತಿಯೆಂದಿವು ತನ್ನೊಳ್‌
ನೆರೆದೇಕಮೂರ್ತಿಯಾದಂ
ತಿರೆಸೆದನಾ ಪುತ್ರಮೂರ್ತಿ ಧಾತ್ರೀತಳದೊಳ್‌ || ೮೦ ||

ಕ್ಷಯಮದಗುಣನಾಗಿಯುಮ
ಕ್ಷಯದಾನಾನೂನವಿಭವನಿಭ್ಯಾನ್ವಯನಾ
ಗಿಯುಮತ್ಯುದಾತ್ತವಂಶ
ಪ್ರಿಯನಂತಾ ಸೂರದತ್ತನಸದೃಶಚಿತ್ತಂ || ೮೧ ||

ಕ್ಷಿತಿತಳದಂತೆ ರಸಾಶ್ರಯ
ನತರ್ಕ್ಯಸುಕವೀಂದ್ರಬೃಂದದಂತೆ ವಿಶೇಷಾ
ನ್ವಿತನಂಬರದಂತೆ ಸದಾ
ವ್ರತನಂಬುಧಿಯಂತೆ ಪರಮಗಂಭೀರಗುಣಂ || ೮೨ ||

ವಿಧೃತಕಳಾಕಳಾಪನಿಧಿಯಾಗಿ ಶಶಾಂಕನವೋಲ್‌ ಕಳಂಕಮಿ
ಲ್ಲದೆ ಸತತಂ ಬುಧಾವಸಥನಾಗಿ ದಿನಾಧಿಪನಂತೆ ತೀವ್ರನ
ಲ್ಲದೆ ಬಹುರತ್ನ ರಾಶಿಪರಿಶೋಭಿತಸಂಪದನಾಗಿ ವಾರ್ಧಿಯಂ
ದದತೆ ಕಲುಷಾಶಯಪ್ರಕೃತಿಯಲ್ಲದೆ ಸಂದನಿಳಾತಳಾಗ್ರದೊಳ್‌ || ೮೩ ||

ಎನಿತೊಳವು ಸಾರವಸ್ತುಗ
ಳೆನಿತೊಳವುನ್ಮದಗಜಂಗಳೆನಿತೊಳವು ತುರುಂ
ಗನಿಕಾಯಮೆಂದು ಪವಣಿಸು
ವನಮಾವನಾ ವೈಶಯಕುಲನ ಧನಸಂಕುಲಮಂ || ೮೪ ||

ಅನಿವಿರಿದವಂತಿ ಮಾಳವ
ಮನಾಳ್ವ ವೃಷಭಾಂಕನೃಪನ ಬಾೞ್ಕೆಯ ಸಿರಿಯಾ
ತನ ದಿವಿಸದ ಭೋಗದನಿತಿ
ಲ್ಲೆನೆ ಪರದನ ಪರಿಯ ಸಿರಯನಱೆಯೆಂ ಪೊಗೞಲ್‌ || ೮೫ ||

ವ || ಮತ್ತಮಾ ಪುರದೊಳ್‌ ತಳದೀಯ ಕುಳಶೀಳ ಲಕ್ಷ್ಮೀಸಮಾನ ಸಂಪನ್ನನಪ್ಪ ರಾಜಪ್ರಧಾನಶ್ರೇಷ್ಠಿ ಸುಭದ್ರಂಗಂ ಸರ್ವಯುಶೆಗಂ ಪುಟ್ಟಿದ ಯಶೋಭದ್ರ ಕುಮಾರನಿಂ ನೇರ್ಗಿಱೆಯಳ್‌

ತನಗೆ ಕುಲಲಲನೆ ರೂಪವ
ತಿ ನೆಗೞ್ದ ಲಾವಣ್ಯವತಿ ವಿಲಾಸವತಿ ಯಶೋ
ವನಿತೆಗೆ ಸವತಿದಲೆಂಬುದ
ನೆನಿಸಿ ಯಶೋಭದ್ರೆ ಮನಮನುಱೆ ಸೆಱೆವಿಡಿದಳ್‌ || ೮೬ ||

ವಿನುತಕಪೋಳಂ ದರ್ಪಣ
ಮೆನೆ ಮೊಲೆಗಳ್‌ ಕನಕಕಳಶಮೆನೆ ಪೊಳೆವಲರ್ಗ
ಣ್ಣನುಪಮ ಚಮರಜಮೆನೆ ಮದ
ನನ ಮಂಗಳರಾಜ್ಯಲಕ್ಷ್ಮಿಯೆನೆ ಸೊಗಯಿಸುವಳ್‌ || ೮೭ ||

ಲಳಿತೆಯ ಮುಖೇಂದುಬಿಂಬದ
ಬೆಳಗಿನೊಳಿರದಗಿದು ಪೆಱತೆಗೆದು ತಮೋ
ಬಳಮಿರ್ದುದೆಂಬಿನಂ ಕ
ಣ್ಗೊಳಿಸುಗುಮಾಕೆಯ ವಿನೀಳಕಬರೀಭಾರಂ || ೮೮ ||

ಅಗಲದೆ ರೇಖಾತ್ರಯದಿಂ
ದಗಲದ ಪೊಗರ್ವಟ್ಟಬಂಧುರಚ್ಛವಿಯಿಂ ಕಂ
ಬುಗಳಂ ನಗುವಂತಿರೆ ಕಂ
ಬುಗಳಂ ಕರಮೆಸೆಗುಮಾ ವಣಿಕ್ಪತಿಸತಿಯಾ || ೮೯ ||

ಮೊಗಮಂ ತಾವರೆಗತ್ತು ಕಣ್ಮಲರ್ಗಳಂ ನೀಲೋತ್ಪಲಂಗೆತ್ತು ಸೆ
ಳ್ಳುಗುರಂ ಕೇದಗೆಗೆತ್ತು ಹಸ್ತತಳಮಂ ಸತ್ಪಲ್ಲವಂಗೆತ್ತು ತ
ನ್ಮೃಗಶಾಬಾಕ್ಷಿಯನಿಂತು ಮನ್ಮಥವನಶ್ರೀಗೆತ್ತು ಭೃಂಗಂಗಳೋ
ಲಗಿಸುತ್ತಿರ್ದಪುವೆಂಬಿನಂ ಸೊಗಯಿಕುಂ ನೀಳಾಳಕಂ ಕಾಂತೆಯಾ || ೯೦ ||

ಶತಪತ್ರಬ್ರಾತದುರ್ಕೊಡೆದುದು ಜಯಮಾಯ್ತಂಗಜನ್ಮಂಗೆ ನೇತ್ರಾ
ಸಿತನೀರೇಜಾತಮಾನಂದದೊಳಲರ್ದಪುವೀ ಬಾಳಿಕಾ ವಕ್ತ್ರ ಚಂದ್ರ
ದ್ಯುತಿಯಿಂದಂತಾಗಿ ಮತ್ತಂ ಪಗಲುಮೆಸೆವುದಿನ್ನೇವೆನೆಂದೆಂದು ಶೀತ
ದ್ಯುತಿ ನಿಚ್ಚಂ ಕಂದುತುಂ ಕುಂದುತುಮುದಯಿಪನೆಂಬುಕ್ತಿಗಾ ಕಾಂತೆ ಪೊಲ್ತಳ್‌ || ೯೧ ||

ಪ್ರಿಯೆಯ ಮುಖಚಂದ್ರಬಿಂಬಂ
ದಯಿತಾವಿಲೋಚನವಿನೀಳನೀರೇಜಮನಲ
ರ್ಚಿಯುಮೇನೊ ತತ್ಪ್ರಿಯಾನನ
ಪಯೋಜನಮಂ ಕುಟ್ಮಳೀಕೃತಂ ಮಾಡಿದುದೇ || ೯೨ ||

ಕಾಮಾಬ್ದಿವೇಳೆ ಕಾಮಿನಿ
ಕಾಮಲತಾಲಲಿತಕುಸುಮಮಂಜರಿಪೆಱದೇಂ
ಕಾಮಗಜರಾಜಮದಲೇ
ಖಾಮಂಡಲಲಕ್ಷ್ಮಿಯೆನಿಸಿ ಕಾಮಿನಿ ನೆಗೞ್ದಳ್‌ || ೯೩ ||

ಅಳಕಾನೀಕಮನಿಂದ್ರನೀಳಮುಗುರಂ ವಜ್ರಂ ಲಸದ್ದಂತಮಂ
ವಿಲಸನ್ಮೌಕ್ತಿಕ ಮೋಷ್ಠಮಂ ಪವಳಮಂಗಚ್ಛಾಯೆಯಂ ಪಚ್ಚೆ ನಿ
ಶ್ಚಳಮಾರಾಧಿಸಿ ಪೋಲ್ತುವೆಂದಿರದೆ ಪೇೞ್‌ ನೀಳಾದಿ ಪಾಷಾಣ ಸಂ
ಕುಲದೊಳ್‌ ದುರ್ವಿದರಂತು ಪೋಲಿಸುವೆನೇ ರೂಪಂ ಯಶೋಭದ್ರೆಯಾ || ೯೪ ||

ಇದು ಪುರಷರತ್ನಮನುಪಮ
ಮಿದು ವನಿತಾನೂತ್ನ ರತ್ನಮಿಂತೀ ಎರಡುಂ
ಸದೃಶಾರ್ಥಮಾದುವೆಂಬಿನ
ಮುದಿತೋದಿತಮಾದುದವರೊಳನುರಾಗಗುಣಂ || ೯೫ ||

ಜನಿತಾನುರಾಗ ನಾನಾ
ವಿನೋದಕೇಳೀ ವಿಲಾಸಲೀಲೋತ್ಸವದಿಂ
ಮನಸಿಜ ಸುಖಾಮೃತಾಸ್ವಾ
ದನದೊಳ್‌ ಮನಮೊಸೆದು ಕೂಡಿ ತಣ್ಣನೆ ತಣಿದರ್‌ || ೯೬ ||

ವ || ಅಂತನ್ಯೋನ್ಯಪ್ರಣಯ ಸಂಜಾತಸಂಪತ್ಪರಂಪರಾ ಪರಿಗಣಮಾಗಿ ನಿಳಿಂಪದಂಪತಿಯನೆ ಪೋಲ್ವ ತದ್ದಂಪತಿಗಳ್ಗ ಪಾರಸಂಸಾರಸುಖಾನುಭವವಿಭವಂಗಳಿಂ ಕೆಲವು ಕಾಲಂ ಸಲ್ವುದುಮೊದುದಿವಸಂ

ನೆಱೆಯೆ ಬಸಮೞಿದು ಚಿಂತಿಸಿ
ಮಱುಗಿ ಯಶೋಭದ್ರೆ ಮಕ್ಕಳಿಲ್ಲದ ನೋವಿಂ
ಪಱೆದು ಬಿಸುಟ್ಟೆಳಲತೆವೋಲ್‌
ರಱಂಗಿ ಕಡುಗಂದಿಕುಂದಿ ತೆರಮರದಿರ್ದಳ್‌ || ೯೭ ||

ಸಲೆ ವಂಧ್ಯಾಲಯದಂತಿರೆ
ಪಲಕಾಲಂ ಪುಷ್ಪವತಿಯೆನಾದಪೆನೆಂದುಂ
ಫಲವತಿಯಾದಪೆನಿಲ್ಲೆಂ
ದು ಲತಾಲಲಿತಾಂಗಿ ಬಾಡಿ ಪಾಡೞೆದೆಂಗುಂ || ೯೮ ||

ಕಿಱುನಗೆ ಲೋಳೆವಾಯ್‌ ತೊದಳದೊಂದಿದ ನಾಲಗೆ ಚಿನ್ನ ಪೂಗಳೊಳ್‌
ತುಱುಗಿದ ಚೆನ್ನ ಕೆಂಜೆಡೆ ತಳರ್ನಡೆ ಮುದ್ದು ಮೊಗಂ ಪೊರಳ್ವ ಮುಂ
ಜೆಱಗು ಕಿವುೞ್ಚೆಪೀರ್ವ ಮೊಲೆ ದಟ್ಟಡಿಯೊಳ್ಪರಿದೋಡುವಂಗಣಂ
ನೆಱೆ ತನಗೊಪ್ಪುವರ್ಭಕನನೊರ್ವನನಾಂ ಪಡೆವಂದಮಾವುದೋ || ೯೯ ||

ಆಡುವ ನಲಿದಾಡುವ ನಡೆ
ನೋಡುವ ಕೊರಲಪ್ಪಿಕೊಳ್ವ ಭಕ್ಷ್ಯಾದಿಗಳಂ
ಬೇಡುವ ಮಕ್ಕಳ ಬಾಳ
ಕ್ರೀಡೆಗಳಂ ನೋಡುತೀರ್ಪುದೊಂದಿರವಲ್ತೇ || ೧೦೦ ||

ಎನಿತೊಳವು ಬಾಲಕೇಳಿಗ
ಳನಿತಱೊಳಂ ಮುದ್ದುವಡೆದು ಮನೆಯಂಗಣದೊಳ್‌
ಮನಮೊಸೆದಾಡುವ ಮಕ್ಕಳ
ವಿನೋದಮಂ ಕಾಣ್ಬ ದಿವಸಮೆಂದಾದಪುದೋ || ೧೦೧ ||

ಶುಕಪಿಕಸಾರಿಕಾದಿ ವಿಹಗಂಗಳನಾಂ ಸೆಱೆಗೆಯ್ದೆನೋ ಶಿಶು
ಪ್ರಕರಮನೇನಗಲ್ಚಿದೆನೊ ಧರ್ಮಮನೇಂ ಪೞೆಕೆಯ್ದೆನೋ ಗುಣಾ
ಧಿಕರನವಜ್ಞೆಗೆಯ್ದೆನೊ ಜಿನೇಶ್ವರಪೂಜೆಗೆ ವಿಘ್ನಮಾದೆನೋ
ಸುಕೃತಿಗೆ ನೋನೆನೋ ತನಯರಿಲ್ಲದದಾಪುದೊ ಕರ್ಮಬಂಧನಂ || ೧೦೨ ||

ತನುಜಾತೊದಯಮಪ್ಪ ಪುಣ್ಯದಿನಮಂ ಮೆಯ್ವೆರ್ಚಿ ಕಾಣಲ್ಕೆ ನೋ
ನೆನೊ ಗೇಹಾಂಗಣದೊಳ್‌ ತಳರ್ನಡೆವುದಂ ಕಣ್ಣಾರೆ ನೋಡಲ್ಕೆ ನೋ
ನೆನೊ ಸಯ್ಪಿಂ ತೊದಳೊಳ್ಪೂದಳ್ದ ನುಡಿಯಂ ಪಾರೈಸಿ ಕೇಳಲ್ಕೆ ನೋ
ನೆನೊ ವಂಧ್ಯಾಸತಿಯಾಗಿ (ಯೆಯ್ದೆ) ಪಿರಿದುಂ ದುಃಖಕ್ಕಿದೇಂ ನೋಂತೆನೋ || ೧೦೩ ||

ಸಮಸಂದ ತನ್ನ ಸಂತತಿ
ಗೆ ಮಕ್ಕಳುಳ್ಳವಳೆ ಬೞ್ದು ಬಾೞ್ವಳ ಕ್ಷಿ ತಿಯೊಳ್‌
ಸಮಸಂದೆಸೆಗಮೆ ಸಂತತಿ
ಗೆ ಮಕ್ಕಳಿಲ್ಲದಳ ಬರ್ದುದೇಂ ಬಾೞದುದೇಂ || ೧೦೪ ||

ವ || ಎಂದು ಪರಿದುಮಾಕುಲವ್ಯಾಕುಲೆಯಾಗಿ ಚಿಂತಿಸುತ್ತಿರ್ಪುದುಮಾ ಪ್ರಸ್ತಾವದೊಳ್‌

ಆ ನಗರದೊಳೊರ್ಮೊದಲೊ
ಳನೂನಂ ಮಾಂಗಲ್ಯನಿನದಮೊಡನೆಸೆವಿನಮಾ
ಮಾನಿನಿಯ ಕಿವಿಗೆ ತೀಡಿದು
ದಾನಂದಗಭೀರಭೂರಿಭೇರೀ ನಿನದಂ || ೧೦೫ ||

ವ || ಆಗಳದೇನೆಂದು ಬೆಸಗೊಳ್ವುದುಂ ಕೆಲದೊಳಿರ್ದ ಪರಿಚಾರಕಿ ಪೇೞ್ಗು ಮಿಂದು ನಮ್ಮ ಪುರದ ಪೊಱಪೊೞಲ ನಂದನವನದೊಳಭಿನಂದನಮುನೀಂದ್ರರೆಂಬ ದಿವ್ಯಜ್ಞಾನಿಗಳ್‌ ಬಂದಿರ್ದೊಡೆ ವೃಷಭಾಂಕನಾನಂದಭೇರಿಯಂ ಪೊಯ್ಸಿ ನಾನಾ ವಿಧಾರ್ಚನೆವೆರಸು

ಜನಪನುಮರಸಿಯರುಂ
ಪರಿಜನಮುಂ ಪುರಜನಮುಮಾ ಮುನೀಶ್ವರರಂ ಕಾ
ಣ್ಬ ನಿಮಿತ್ತದಿಂದೆ ಪೋದಪ
ರೆನೆ ಸಂತೊಸದಂತನೆಯ್ದಿ ರಾಗದಿನಾಗಳ್‌ || ೧೦೬ ||

ದಂದುಗಮನುೞೆದು ಪರಮಾ
ನಂದದಿನಭ್ಯರ್ಚನಾ ಪುರಸ್ಸರಮಂದೆಯ್‌
ತಂದಳ್‌ ಲತಾಂಗಿಯಂದಭಿ
ನಂದನಮುನಿನಾಥನಿರ್ವ ನಂದನವನಮಂ || ೧೦೭ ||

ವ || ಆಗಳಾ ಸ್ಮರಶರಾಸನೋಪಮಾನವಿಭ್ರಮಭ್ರೂಲತಿಕೆ ಲಲಿತ ಪುನ್ನಾಗಲ ತಿಕೆಗಳುಮನಪೂರ್ವ ಮಲಯಜವಿಲಸಿತಲಲಾಟಪಟ್ಟೆ ಲಲಿತತಿಲಕಾನೋಕಹಕುಸು ಮಂಗಳಂ ನಾಗಚಂಪಕಕುಟ್ಮಲಾನುಕಾರಿ ನಾಸಾಪುಟ ವಿಕಸಿತಮುಕುಲಶೋಭಿತಚಂ ಪಕಂಗಳಂ ಅಭಿನವ ಮನಸಹಕಾರಸ್ತಬಕನಿಬಿಡಪೀನಪೀವರಸ್ತನಯುಗಳವಿರಾಜಿತೆ ಪಲ್ಲವಿತ ಕುಸುಮಿತ ಮುಕುಲಿತ ಫಲಿತ ಮಂಜರೀರಂಜಿತಚೂತಭೂಜಾತಂಗಳಂ ಸಮುಲ್ಲಸಿತವಲ್ಲರೀಶಾಖಾಸದೃಶಬಾಹುಲತಿಕೆ ಸಲ್ಲಲಿತಲತಾಭವನಂಗಳಂ ಅಭಿನೂತ ಕೇತಕೀಕಿ ಸಲಯಾಪಹಸಿತ ಕರತಲಪಲ್ಲವೆ ರಕ್ತಕಂಕೆಲ್ಲೀ ಮಹೀರುಹಂಗಳುಮಂ ಶಾತಕುಂಭರಂಭಾಸ್ತಂಭ ಭಾಸುರ ವಿಲಾಸವೃತ್ತೋರುವಿರಾಜಿತೆ ಕನಕಕದಲೀವನಂಗಳಂ ನಮಮಾಲಿಕಾಕುಸುಮಸುಕುಮಾರ ಕೋಮಲೆ ವಿಚಿತ್ರನವಮಾಲಿಕಾವಲತೆಗಳುಮ ನತಿರುಚಿರಮಲ್ಲಿಕಾ ಪ್ರಸವಸುರಭಿಪರಿಮಲಾಲಿಂಗಿತಸುಗಂಧಿ ಬಂಧುರೋತ್ಫುಲ್ಲಮಲ್ಲಿ ಕಾವಲ್ಲರಿಗಳುಮನಲ್ಲಲ್ಲಿಗೆ ನಿಂದು ಮೆಲ್ಲ ಮೆಲ್ಲನೆ ನೋಡುತ್ತಂ

ಯುವತೀ ರೂಪಮನಂಗಜಂಗಮಲತಾ ಶ್ರೀರೂಪಮೆಂಬಂತು ಕಂ
ತುವನೋದಾರ್ಥ ವಿಚಿತ್ರ ಚಿತ್ರಿತಪತಾಕಾಭಾಸಮೆಂಬಂತು ಸಂ
ದ ವಸಂತಾಮಲಕ್ಷ್ಮಿ ತಾನೆ ಪೆಱದೇನೆಂಬಂತು ಬಂದಳ್‌ ಮನೋ
ಭವಮತ್ತದ್ವಿರದಂ ವನಕ್ಕೆ ಪುಗತರ್ಪಂತಾ ವನೋದ್ದೇಶದೊಲ್‌ || ೧೦೮ ||

ವ || ಅಂತು ಬಂದು ಪರಮತಪಸ್ತನೋದಯಾಚಳಾಯಮಾನರನುಭಯ ನಯಸಮಾನರಂ ವಿಜಿತಾಶೇಷಾಪರೀಷಹಾರಾತಿಬಳರಂ ವಿನಷ್ಟಾಷ್ಟಮಳರಂ ಉಪಗತಾನಂ ತಾರ್ಥವ್ಯಂಜನಪರ್ಯಾಯಕೋಪಯುಕ್ತಜೀವಾದಿಪದಾರ್ಥ – ಸಾರ್ಥಸದ್ಭಾವರಂವಿಶುದ್ದ ಸ್ವಭಾವರನಕೃತ್ರಿಮಾಶೇಷದಜಿನಭವನಸವನನಿರತರಂ ಸರ್ವಸಂಗವಿರತರಂ ಪರಮಾವಧಿ ಬೋಧರಂ ಸರ್ವಸಂಗನಿರವಶೇಷನಿರಸ್ತಮಾನಮಳ – ರಾಳಪ್ರವರ್ತಿತ ಕೀರ್ತಿಗಳನುಪಶಮೈಕಮೂರ್ತಿಗಳನತಿ ವಿಶಾಲ ಶಾಲವೃಕ್ಷಮೂಲ – ಸ್ಥಿತನಿಸರ್ಗನಿರ್ಜಂತುಕ ನಿರಾಕುಳ ಶಿಲಾತಳ ದೊಳಧ್ಯಾತ್ಮವಿದ್ಯಾಧ್ಯಯನ ಸಂವರ್ಧಿತಸ್ನಮತಿ – ಗಳಾಗಿರ್ದಭಿನಂದ ನಮುನಿಪತಿಗಳಂ ಕಂಡು ಮಹೀತಳಾಲಿಂಗಿತಾಂಗಿಯಾಗಿ ಭಕ್ತಿಭರದಿನೆಱಗಿ ಪೊಡೆವಟ್ಟು ಧರ್ಮಶ್ರವಣಾನಂತರಂ ಸಮಸ್ತ ವಿನೇಯಜನಂಗಳೆಲ್ಲಂ ವಂದಿಸಿ ಪೋದಿಂ ಬೞೆಕ್ಕೆ ಸುಪ್ರಸ್ತಾವದೊಳ್‌ ವಿನಯವಿನಮಿತೋತ್ತಮಾಂಗೆಯಭಿಮುಖಿ – ಯಾಗಿಯಭಿ ನಂದನಮುನಿಪತಿಯಭಿಮುಖದೊಳ್‌ ನಿಟಿಳತಟಘಟೆತಕರಪುಟಿಯಾಗಿ

ಎನಗೀಜನ್ಮಮಿದಿಂತೆ ಬಂಜೆತನದಿಂದಂ ಪೋಕುಮೋ ಪುತ್ರಸಂ
ಜನನಂ ಮೇಣ್ದೊರೆಕೊಳ್ಗುಮೋ ಮುನಿಪತೀ ಪುತ್ರಾಂತರಾಯಂ ಪುರಾ
ತನದುರ್ಷ್ಕಮವಿಪಾಕಮೋ ಬೆಸಸಿಮೀಗಳ್ಗೆಯ್ದ ದುಷ್ಟಾಪದು
ರ್ವಿನಿಮಾ ದುರ್ಧರದುಃಖಮೆನ್ನನಲೆವಂತುಂ ಮುನ್ನಮೇಗೆಯ್ದೆನೋ || ೧೦೯ ||

ವ || ಎಂಬುದಮಾ ಮುನೀಶ್ವರಂ ನಿಜಾವಧಿಬೋಧಮಂ ಪ್ರಯೋಗಿಸಿ ನೋಡಿ ನಿಮಗೆ ವಂಧ್ಯಾಸಂಬಂಧಮಪ್ಪ ದುಂದುಗಮೊಂದುಮಿಲ್ಲ ನಿಮಗಿಂದಿಗಯ್ದು ತಿಂಗಳಂದಿಗೆ ದಿವದಿನವತರಿಸಿ

ಅನತಿಶಯಗರ್ಭಸುಖಿ ಸುಜ
ನನಿಧಾನಂ ಬಾಳದಿನಕರಪ್ರತಿಮಾನಂ
ಜಿನಧರ್ಮನಿರತನೋರ್ವಂ
ತನೂಭವಂ ನಿನಗೆ ಪುಟ್ತುಗುಂ ಪುಟ್ಟಲೊಡಂ || ೧೧೦ ||

ಪುತ್ರಮುಖಾಬ್ಜಾಲೋಕನ
ಮಾತ್ರದೊಳಂ ಪಿತೃ ತಪಕ್ಕೆ ಪೋಕುಂ ಚಿತ್ರಂ
ಪುತಂ ಮುಮುಕ್ಷುದರ್ಸಾನ
ಮಾತ್ರದೆ ಜಿನದೀಕ್ಷೆಯಂ ದಿಟಂ ಕೈಕೊಳ್ಗುಂ || ೧೧೧ ||

ವ || ಎಂದು ಬೆಸಸುವುದುಂ
ಯತಿಪತಿಮುಖಾರವಿಂದೋ
ದ್ಗತ ಋತವಚನಂ ಸ್ವಕೀಯ ಹೃದ್ಗೋಚರಮಾ
ಗೆ ತನೂದರಿರಾ ಬೇಗದೂ
ಳತಿಹರ್ಷವಿಷಾದಮಾದಮೇನೊದವಿದುವೋ || ೧೦೨ ||

ಇಂತಾ ಕಾಂತೆಯ ಮನದೊಳ್‌
ಸಂತಸಮುಂ ನೋವುಮೊಡಗೊಂಡಿರೆ ಕ
ರ್ಮಾಂತಕರಂ ಬೀೞ್ಕೊಂಡ
ಲ್ಲಿಂ ತಳರ್ದು ನಿಜಾಲಯಲಕ್ಕೆ ಬಂದತಿಮುದದಿಂ || ೧೦೩ ||

ವ || ನಾನಾವಿನೋದಂಗಳಿಂ ಕತಿಪಯದಿನಂಗಳ್‌‍ ಪೋಗೆ ಪಂಚಮಾಸಾಸಾನದ ಪುಣ್ಯದಿನದೊಳ್‌ ಪುಣ್ಯವತಿವಸಮ್ತಸಯದ ಸಹಕಾರಲತೆಯಂತೆ ಪುಷ್ಪವತಿಯಾಗಿ ತೀರ್ಥೋದಕಂಗಳಿಂ ಪತ್ವಿತ್ರೀಕೃತಗಾತ್ರೆಯಾಗಿ

ಮಿಸುಗುವ ತೋರಮಲ್ಲಿಗೆಯ ಜೋಲ್ತ ಬೞಲ್ಮುಡಿ ತೊಟ್ಟ ಮೌಕ್ತಿಕ
ಪ್ರಸರವಿಭೂಷಣಾಳಿ ಪರಿಚಂದನದಣ್ಪು ಪೊದಳ್ದ ಕಾಂತಿಯಂ
ಪಸರಿಸೆ ಮಿಂಚುವೆತ್ತ ಸುಲಿಪಲ್ಗಳವಟ್ಟದುಗೂಲಮೊಪ್ಪೆ ಬೆ
ಳ್ವಸದನಮಂತದೇನೆಸೆದುದೋ ಪರಿಪೂರ್ಣ್ನ ಸುಧಾಂಶುವಕ್ತ್ರೆಯಾ || ೧೦೪ ||

ವ || ಆತನ ಕೀರ್ತಿಲಕ್ಷ್ಮಿಯೆ ಮೂರ್ತಿಮತಿಯಾದಂತಾತ್ಮೀಯ ಪ್ರಾಣೇಶ್ವರನ ಮನಕ್ಕೆವರೆ ಸೂಳ್ಗೆವಂದು ಸುಪ್ತೆಯಾಗೆ ಯಾಮಿನೀವಿರಾಮಯಾಮದೊಳ್‌

ಉದಯಂಗೆಯ್ವರ್ಕನಂ ಪಜ್ಜಳಿಸಿ ಪೊಳೆವ ಶೀತಾಂಶುವಂ ಶುಭ್ರಶುಂಭ
ನ್ಮದವನ್ಮಾತಂಗಮಂ ಘೂರ್ಣ್ನಿಸುವ ಜಲಧಿಯಂ ಸಾರಕಾಸರಮಂ ಭಾ
ಸದ ರತ್ನವ್ರಾತಮಂ ನಿರ್ಮಳಧವಳವೃಷಾಧೀಶನಂ ಸನ್ಮನೋರಾ |
ಗದಿನತ್ಯಾಶ್ಚರ್ಯ ಶೌರ್ಯಾನ್ವಿತಮೃಗಪತಿಯಂ ಸ್ವಪ್ನದೊಳ್ಕಾಂತೆ ಕಂಡಳ್‌ || ೧೧೫ ||

ವ || ಆ ನಿಶಾವಸಾನಸಮಯದೊಳನೇಕ ವಿಧವಾದ್ಯಮಾನತೂರ್ಯಶಂಖಕಾ ಹಳಾಪ್ರಘೋಷದೊಳಂ ನಿತ್ಯನಿಯೋಗದಿಂ ಬಂದು ಪ್ರಬೋಧಿಸುವ ಮಾಗಧಜನ ಸಮುಚ್ಚರಿತಮಾಂಗಲ್ಯ ಗೀತಧ್ವನಿಗಳೊಳಮೊಯ್ಯನೆಯ್ಯನೆ ಮನಮಂ ಪಳಂಚಲೆವ ಸೀಯನಪ್ಪಗೇಯ ನಿನಾದಾಕರ್ಣನದೊಳುದಯಗಿರಿ ಶಿಖರೆಸೇಖರನಾದ ತಿಗ್ಮರು ಚಿಮರೀಚಿನಿಕುರುಂಬ ಚುಂಬಿತಾಂಭೋಜವನಲಕ್ಷ್ಮಿಯೊಡನೆ ಲಬ್ಧಪ್ರಬೋಧೆಯಾಗೆ ಜಿನಪೂಜಾಪ್ರಧಾನಪ್ರಭಾತ ಸಮಯ ನಿತ್ಯನಿಯಮಂಗಳಂ ನಿರ್ವರ್ತಿಸಿ ಪರಿ …. ಮಂಗಳ ಪ್ರಸಾಧನಾಲಂಕೃತೆಯುಂ ಪರಿವಾರನಾರೀಜನಪರಿವೃತೆಯುಮಾಗಿ ನಿಜಮ ನೋವಲ್ಲಭ ….

ಮದನಮದರದನಿಯಂತಿರೆ
ಮದಮಧುಕರಮಧುರ ಮಂಜುರಂಜಿತ ಗುಂಜ
ನ್ಮೃಗು ….. ಯೆ ಎಂಬುದು
ಮದನನ ತಿರುವಿಂ ಬರ್ದುಂಕಿದರಲಂಬಿನವೋಲ್‌ || ೧೦೬ ||

ವ || ಅಂತು ಬಂದು ನಿಜಜೀವಿತೇಶನರ್ಧಾಸನಮನಳಂಕರಿಸಿ ಕುಳ್ಳಿರ್ದು ತನ್ನ ಕಂಡ ಕನಸುಗಳನನುಕ್ರಮಂದಪ್ಪದೆ ಸೂಚಿಸುವುದುಂ

ತಪಿಯಿಂ ನಿರ್ಧೂತದೋಷಂ ವಿಶದಶಶಿಯಿನತ್ಯಂತಕಾಂತಂ ಸದಾನ
ದ್ವಿಪದಿಂ ಭದ್ರಾನ್ವಯಂ ವಾರ್ದಿಯಿನನುಪಮನಂಭೋಜಿನೀಷಂಡದಿಂದ
ಗ್ಲಪಿತಾತ್ಮಂ ರತ್ನದಿಂ ನಿರ್ಮಳಗುಣನಿಳಯಂ ಶಕ್ವರಾಧೀಶನಿಂ ಸೌ
ಖ್ಯಪದಂ ಪಂಚಾಸ್ಯನಿಂದಂ ಪರಮಜಿನಮತಾಂಭೋಜಿನೀ ರಾಜಹಂಸಂ || ೧೦೭ ||

ಇದು ಸಮಸ್ತ ವಿನೇಯಜನವಿನುತ ಶ್ರೀವರ್ಧಮಾನಮುನೀಂದ್ರ
ವಂದ್ಯ ಪರಮಜಿನೇಂದ್ರ ಶ್ರೀಪಾದಪದ್ಮವರಪ್ರಸಾದೋ
ತ್ಪನ್ನ ಸಹಜಕವಿ ಶ್ರೀಶಾಂತಿನಾಥ ಪ್ರಣೀತಮಪ್ಪ
ಶ್ರೀಸುಕುಮಾರಗರ್ಭಾವತರಣವರ್ಣನಂ
ನವಮಾಶ್ವಾಸಂ ||