ಶ್ರೀ ನಾರೀರಮಣಂ ವಾಕ್‌
ಶ್ರೀನಾರೀರಮಣನೂರ್ಜಿತೋಜ್ವಲಕೀರ್ತಿ
ಶ್ರೀನಾರೀರಮಣಂ ಭ
ವ್ಯಾನಂದಕರಂ ಸರಸ್ವತೀ ಮುಖಮುಕುರಂ || ೦೧ ||

ಅನವರತ ಪರಮಸುಖಸಾ
ಧನಚರಿತಂ ಜಿನಕುಮಾರಸದೃಶಂ ಭವ್ಯಂ
ನಿನಗೆ ಮಗಂ ಪುಟ್ಟುಗುಮೆನೆ
ತನೂದರೀವದನವನಜಮಲರ್ದತ್ತಾಗಳ್‌ || ೦೨ ||

ಲಲಿತೆ ಪತಿ ವಚನಮಲಯ್ವಾ
ನಿಳವಶದಿಂ ವಿಪುಳಪುಳಕಂಸಂಚಯದಿಂ ತೆಂ
ಬೆಲರಲೆಪದಿಂ ವಸಂತದೊ
ಳಲರ್ದೊಪ್ಪಿದದೊಂದಶೋಕಲತೆಗೆಣೆಯಾದಳ್‌ || ೦೩ ||

ವನಜದಳಾಯತಾಕ್ಷಿ ಮನದೊಲ್‌ ಗುಡಿಗಟ್ಟಿ ಪೊದಳ್ದ ಸಂತೊಸಂ
ತನಗೆ ವಿಲಾಸಮಂ ಪಡೆಯೆ ಮಂಡಳಮಂಡನನಪ್ಪ ಪುಣ್ಯ ಭಾ
ಜನನನಪೂರ್ವಮನ್ಮಥನ ನಿಭ್ಯಕುಲಾಂಬರತಿಗ್ಮರೋಚಿಯಂ
ತನಯನನಂದೆ ಪೆತ್ತವೊಲದೇನನುರಾಗಮನಪ್ಪುಕೆಯ್ದಳೊ || ೦೪ ||

ವ || ಅನ್ನೆಗಮಿತ್ತಲಾ ಪೂರ್ವೋಕ್ತ ಪದ್ಮಗುಲ್ಮವಿಮಾನಾಧೀಶ್ವರನಪ್ಪ ಪದ್ಮ ಪ್ರಭಾಮರನಮರಲೋಕ ಸುಖಸುಧಾರಸಾನುಭವದಿಂ ತಣ್ಣನೆ ತಣಿದಾತ್ಮೀಯ ಪಣ್ಯೋಪಾರ್ಜಿತ ದಿವ್ಯಭೋಗಮನನಿಪ್ಪತ್ತೆರಡು ಸಾಗರೋಪಮ ಪ್ರಮಿತನಿಜಾ ಯುರವಸಾನಕಾಲಮಱುದಿಂಗಳುಂಟೆನೆ

ಮಿಸುಗುವ ಬಣ್ಣವಾಸಿಗದೆಸೞ್‌ ನಸುವಾಡೆ ವಿಭೂಷಣಾಂಶುಗಳ್‌
ಮಸುಳೆ ಪೊದಳ್ದ ದೇಹರುಚಿ ಕಂದಿ ಕಱಂಗೆ ಮನಕ್ಕೆ ವಿಸ್ಮಯಂ
ಪಸರಿಸೆ ಪೊಣ್ಮುವಾಗುಳಿಗಳಾಗಳುಮಾಗೆ ನಿತಾಂತಮಿಂತು ಸೂ
ಚಿಸಿದವಗುರ್ವು ಪರ್ವುವಿನಮಾ ದಿವಿಜಂಗೆ ವಿರಾಮಕಾಲಮಂ || ೦೫ ||

ಅಂತು ತಮಗೆ ತಾಮೆ ಪುಟ್ಟುವದ್ಭುತ ಸೂಚನೆಗಳಂ ಕಂಡಚ್ಯುತಂ ನಿಜಚ್ಯುತಿಯನಱೆದು

ಅಂದಿಂಗಱುದಿಂಗಳ್ವರ
ಮೆಂದುಂ ಪೆಱಪೆಱವು ಚಿಂತೆಯೊಳ್‌ ತೊಡರದೆ ಚಿ
ಲ್ವೊಂದಿರೆ ಜಿನ ಪದಸೇವೆಯ
ದಂದುಗದೊಳ್‌ ತೊಡರ್ದನೇಂ ಮಹಾತ್ಮನೊ ದಿವಿಜಂ || ೦೬ ||

ಇಂತು ನಿರಂತರಂ ದಿವಿಜಲೋಕದ ಚೈತ್ಯಗೃಹಂಗಳೆಲ್ಲಮಂ
ಸಂತೊಸದಿಂದೆ ವಂದಿಸುತಮರ್ಚಿಸುತಂ ತನಗೆಯ್ದವಂದ ಕಾ
ಲಾಂತತದೊಳಾಗಳಚ್ಯುತಸುರಂ ಚ್ಯುತನಾದನದಂತೆ ಸರ್ವಕ
ರ್ಮಾಂತಕನಲ್ಲದಂತಕನನಾವನುಮೇಂ ಗೆಲಲೆಂತುಮಾರ್ಕುಮೇ || ೦೭ ||

ಅತಿಶಯತರ ದಿವ್ಯಸುಖಾ
ಮೃತದಿಂ ತಣಿದಚ್ಯುತಾಂಕನಿಂದಚ್ಯುತದೊಳ್‌
ಚ್ಯುತನಾದನೆಂದೊಡೀ ಸಂ
ಸೃತಿಯನದೇನೆಂದು ನಚ್ಚುವರ್‌ ಜಡಮತಿಗಳ್‌ || ೦೮ ||

ವ || ಅಂತು ನೋಡೆ ನೋಡೆ ಗಾಳಿತೀಡಿದ ದೀಪರೂಪದಂದದಿಂ ಶಾರದ ನೀರದಾಕಾರಹಂದದಿಂದದೃಶ್ಯಾಕರನಾಗಿ

ಯುವತೀ ಗರ್ಭದೊಳಚ್ಯುತ
ದಿವಿಜಂ ದಿವದಿಂದೆ ಬಂದು . . . . . . . . . .
. . . . . .. . . . . . . . . . . . . . . . . . . . . .
. . . . . .. . . . . . ಸಂಕ್ರಮಿಸುವ ವೋಲ್‌ || ೦೯ ||

ವ || ಇಂತಾ ಯಶೋಭದ್ರಾಂಬಿಕೆಯ ಗರ್ಭಸರೋರುಹಾಕರಾಚ್ಛಾಂಬುವಿನೊಳ್‌
ಸಂಪೂರ್ಣೇಂದುಬಿಂಬದಂತೆ ಸಂಕ್ರಮಿಸುವುದುಮಾ ಗರ್ಭಸ್ಥಿತಾರ್ಭಕನ ಮುಖಚಂದ್ರವಿನಿರ್ಗತಾಚ್ಛ ಚಂದ್ರಿಕಾಪ್ರಸರಮೆ ಪರ್ವಿ ಬಳೆದಂತಾ ಮಹಾನುಭಾವೆಯ ಗರ್ಭ ಮನುದಿನಪ್ರವರ್ಧಮಾನಮಾಗಿ ಬಳೆಯೆವಳೆಯೆ

ಉದರದೊಳಿರ್ದ ತನೂಜನ
ಪೊದಳ್ದ ಮಹಿಮಾವಿಲಾಸಮಂ ಸೂಚಿಸುವಂ
ದದಿನುಚಿತಕ್ರಮದಿನದೇಂ
ಪೊದಳ್ದು ತೋಱೆದುದೋ ಸುಕ್ಷ್ಮ ಮಧ್ಯೆಯ ಮಧ್ಯಂ || ೧೦ ||

ಘನಕುಚಭಾರಾಲಸಗಾ
ಮಿನಿ ಗರ್ಭಂ ಬಳೆಯೆವಳೆಯೆ ನಸುಜೋಲ್ದು ಬೞ
ಲ್ದಿನಿಸಿನಿಸನಲದಿದಂದೆ
ಮನೋಜಗಜಗಮನೆ ಮೆಲ್ಲಮೆಲ್ಲನೆ ನಡೆಗುಂ || ೧೧ ||

ವಿಲಸನ್ಮೃದುಗತಿಯಿಂ ಪದ
ದಲಕ್ತಕಚ್ಛವಿ ಪೊದಳ್ದು ರಂಜಿಸುತಿರೆ ನಿ
ರ್ಮಳಮಣಿಕುಟ್ಟಿಮದೊಳ್‌ ಕೋ
ಮಳಾಂಗಿ ಕಳಹಂಸಲೀಲೆಯಿಂದಡಿಯಿಡುವಳ್‌ || ೧೨ ||

ತಿಂಗಳ ಬಳವಿಯಿನುಚ್ಚತ
ರಂಗಾಮಬುಧಿ ಬಳೆವ ತೆಱದಿನುದಿನದಿಂದಂ
ತಿಂಗಳ ಬಳವಿಯಿನಂತಾ
ಶೃಂಗಾರಾಂಬುಧಿಗೆ ಗರ್ಭವೇಂ ಬಳೆದತ್ತೋ || ೧೩ ||

ಸುದತಿಯ ತೆಳ್ವಸಿೞ್‌ ನೆಱೆ ಪೊದಳ್ದುದು ವಕ್ತ್ರಸರೋರುಹಂ ಬೆಳ
ರ್ತುದು ಕುಚಚೂಚುಕಂ ಕೞೆಯೆ ಕರ್ಗಿದವೊಯ್ಕನೆ ಬಾಸೆ ದೇಸೆವೆ
ತ್ತುದು ವಳಿರೇಖೆಗಳ್‌ ಮಸುಳ್ದು ತೋಱೆದುವಾಕೆಯ ಗರ್ಭದರ್ಭಕಾ
ಭ್ಯುದಯಮಹಾವಿಲಾಸಮಹಿಮಾಸ್ಪದಮಂ ನೆಱೆ ತೋಱುವಂದದಿಂ || ೧೪ ||

ಯುವತಿಯ ಮುಖಾಬ್ಜಮಂ ಮುಸು
ಱುವ ಕುಂತಳಮಧುಕರಂಗಳಂ ಕರತಳ ಪ
ಲ್ಲವದಿಂದೋಸರಿಸುವ ಪು
ಣ್ಯವನಿತೆ ಸಹಕಾರಲತೆಯನೇ ಮಱಸಿದಳೋ || ೧೫ ||

ಸುದತಿಗೆ ಪಱತೊರ್ವಳ್‌ ಹೇ
ಮದಾಮ ಕಮನೀಯಚಂಚಲಚ್ಛಾಮರಮಂ
ಮುದದಿಂದಮಿಕ್ಕಿದಳ್‌ ಪೆರ್ಚಿ
ಸಿದೊಸಗೆಗವಯವದೆ ಮುಡಿಗೆಯಿಕ್ಕುವ ತೆಱದಿಂ || ೧೬ ||

ಸತತೋತ್ಸವದಿಂ ಜಂಗಮ
ಲತೆಯೆಂಬಿನವಮೊಡನೆ ಮೆಲ್ಲಮೆಲ್ಲನೆ ನಡೆದಾ
ಶತಪತ್ತನೇತ್ರೆಗೊರ್ವಳ್‌
ಲತಾಂಗಿ ತಳಮಾರೆ ನೀಡುಗುಂ ತಂಬುಲಮಂ || ೧೭ ||

ಬಹುವಿಧದಿಂದಂ ನಿಱೆವಿಡಿ
ದಹಿಕಂಬುಕಸದೃಶಮಂ ದುಕೂಲಮನೊರ್ವಳ್‌
ಮಹಿಳೆಗುಡಲೆಂದು ನೀಡುವ
ಸಹಚರಿ ವಸನಾಂಗಭೂರುಹಕ್ಕೆಣೆಯಾದಳ್‌ || ೧೮ ||

ಮಣಿಮಯವಿಚಿತ್ರ ಭೂಷಣ
ಗಣಂಗಳಂ ಬಗೆದ ಪೊೞ್ತಱೊಳ್‌ ಕಾಂತೆಗೆ ತತ್‌
ಕ್ಷಣದಿಂ ನೀಡುವವಳ್‌ ಭೂ
ಷಣಾಂಗಕಲ್ಪಾವನೀಜಮಂ ಮಸುಳಿಸಿದಳ್‌ || ೧೯ ||

ಅಕುಟಿಳಸರಸ್ವತೀಮುಖ
ಮುಕುರನನಾಲೋಕಿಪನ್ನೆಗಂ ನೀಂ ನೋಡೀ
ಮುಕುರಮನೆನುತುಂ ಮಣಿಮಯ
ಮುಕುರಮನೋರ್ವಳ್‌ ವಿಲಾಸದಿಂ ಪಿಡಿದಿರ್ದಳ್‌ || ೨೦ ||

ವನಿತೆಗೆ ವಶ್ಯಮಿದೆಂದಂ
ಜನಮಂ ಕಾಂಚನಶಲಾಕೆಯಿಂ ನೀಡಲದೇ
ನನುಕರಿಸಿರ್ದುದೊ ಮನ್ಮಥ
ನ ನನೆಯ ಮೊನೆಯಂಬಿದೆಂಬ ಮಾತಮರ್ವಿನೆಗಂ || ೨೧ ||

ಪೊಚ್ಚಪೊಸದೇಸೆ ಮಾರ್ಗದೊ
ಳಚ್ಚಿಱೆದಚ್ಚರಿಯನುಂಟುಮಾೞ್ಪೆನಮಾರುಂ
ಮೆಚ್ಚಿ ಪೊಗೞ್ವೆನೆಗಮೊರ್ವಳ್‌
ನಚ್ಚಣಿ ನರ್ತಿಸಿದಳಿಚ್ಚೆಯಱೆದಚ್ಚರೆವೋಲ್‌ || ೨೨ ||

ರಸದ ತೊಱೆ ಪರಿದುದಮರ್ದಿನ
ಪೊಸಸೋನೆಯೆ ಸುರಿದುದೆಂಬಿನಂ ಪೆಱಱೊರ್ವಳ್‌
ಮಿಸುಪೆಸೆಯೆ ಪಾಡಿದಳ್‌ ಪುದಿ |
ದ ಸೀಯನಪ್ಪೊಂದು ಗೇಯರಸಮೊಸರ್ವಿನೆಗಂ || ೨೩ ||

ಕಬರೀಭಾರಾಲಸೆ ತೊಳ
ಪ ಬೆಳಂತಿಗೆಯೆನಿಸಿದಚ್ಚವೆಳ್‌ದಿಂಗಳೊಳಿ
ರ್ದಬಲೆಯ ಸನ್ನಿಧಿಯೊಳ್ಕೊರ
ಲ ಬೆರಲ ರಸಮೆಸೆಯೆ ಬೀಣೆಯಂ ಬಾಜಿಸಿದಳ್‌ || ೨೪ ||

ಮುಕುರಮನೞ್ತೆಯಿಂ ಪಿಡಿವ ಚಾಮರವಿಕ್ಕುವ ವಸ್ತ್ರಭೂಷಣ
ಪ್ರಕರಮನೀವಳಂಕರಿಸುವಾಡುವ ಪಾಡುವ ಕಾಂತೆಯರ್‌ ಜಿನಾಂ
ಬಿಕೆಗೆ ಸಪರ್ಯೆಗೆಯ್ವ ಸುರಕಾಂತೆಯರೊಂದು ವಿಲಾಸದೇೞ್ಗೆಯಂ
ಪ್ರಕಟಿಸೆ ತದ್ಗುಣಾಂಬಿಕೆ ಜನಾಂಬಿಕೆಯೆಂಬಿನಮೊಪ್ಪಿ ತೋಱೆದಳ್‌ || ೨೫ ||

ವ || ಇಂತು ನಾನಾವಿಧವಿನೋದಂಗಳಿನಂತರ್ವತ್ನಿಗೆ ನವಮಾಸಂಗಳಂತ ರ್ಮುಹೂರ್ತಂಗಳಾಗಿ ಪೋಗೆ ಪರಿಪೂರ್ಣಪ್ರಸವಸಮಯದೊಳ್‌

ದಿನನಾಥಂ ಮೇಷದೊಳ್‌ ಶಿತರುಚಿ ವೃಷಭದೊಳ್‌ ಭಾರ್ಗವಂ ಮೀನದೊಳ್ಭೌ
ಮನದಗ್ರಗ್ರಾಹದೊಳ್ಸಾರಸಸಖತನಯಂ ದಂಡದೊಳ್‌ ರೋಹಿಣೀನಂ
ದನನನಂತಾ ದ್ವಂದ್ವದೊಳ್ವಿಶ್ರುತುಮೆನೆ ಧಿಷಣಂ ಕರ್ಕಿಯೊಳ್ಸಂತಮಿಂತಿ
ರ್ಪಿನಮತ್ಯುತ್ಸಾಹದಿಂದಿಂ ಗುರುವಿನದಯದೊಳ್‌ ಪುತ್ರನಂ ಪೆತ್ತಗಳಾಗಳ್‌ || ೨೬ ||

ವ || ಆ ಪ್ರಸ್ತಾವದೊಳ್‌

ಪಸರಿಸೆ ಸುತ್ತಲುಂ ಗುಡಿಯ ದಾಂಗುಡಿ ಮುತ್ತಿನ ರಂಗವಲ್ಲಿ ನಾ
ಲ್ದೆಸೆಯೊಲಮರ್ಕ್ಕೆವೆತ್ತ ಪಟಹಧ್ವನಿ ಪೊಣ್ಮುವ ಶಂಖನಿಸ್ವನಂ
ಮಿಸುಗುವ ರತ್ನ ಮಾಲೆಗಳ ವಂದನಮಾಲೆ ಮನಕ್ಕೆವಂದದೇ
ನೆಸೆದುದೊ ಬೀದಿವೀದಿಗಳೊಳರ್ಭಕಸಂಜನಿತೋತ್ಸವಾನಕಂ || ೨೭ ||

ವ || ಅನ್ನೆಗಂ ಸೂರದತ್ತನಾತ್ಮೀಯಾತ್ಮಜನ ಜನ್ಮೋತ್ಸವಾಕರ್ಣನದೊಳತ್ಯಂತ ಹರ್ಷೋತ್ಕರ್ಷಾಂತರಂಗನಾಗಿ ರಾಗಿಸಿ

ಆ ಸ್ವರರೂಪಾರ್ಭಕನ ನು
ತಸ್ಮೇರಾನನಮನೞ್ತಿಯಿಂ ನೋಡಲೊಡಂ
ವಿಸ್ಮಯಮೊದವುವಿನಂ ಜಾ
ತಿಸ್ಮರನಾದಂ ಕ್ಷಯೋಪಶಮವಶದಿಂದಂ || ೨೮ ||

ವ || ಆ ಪ್ರಸ್ತಾವದೊಳ್‌

ಪುತ್ರಂಬಡೆದೆನೆ ಪರಮ ಪ
ವಿತ್ರೀಕೃತ ಭವಸುಖಾಮೃತಕ್ಕಾನೀಗಳ್‌
ಪಾತ್ರಂಬಡೆದೆಂ ನಿಕಿಲ ಧ
ರಿತ್ರಿಯೊಳೆರಡುಂ ಭವಕ್ಕಮೊಳ್ಪಂ ಪಡೆದೆಂ || ೨೯ ||

ಪರಮಜಿನೇಂದ್ರ ಧರ್ಮಪರಿಪಾಲನಶೀಲ ಸಮರ್ಥನನ್ವಯೋ
ದ್ಧರಣಸಮರ್ಥನಪ್ಪ ಮಗನಂ ಪಡೆವನ್ನೆಗಮಿನ್ನೆಗಂ ಗುಣೋ
ತ್ಕರನೆನಿಸಿರ್ದೆನೆನ್ನ ಬಗೆಕೂಡಿದುದಿನ್ನಿರೆನೆಂದು ಘೋರ ಸಂ
ಸರಣಪಯೋಧಿಯಂ ಪೊಱಮಡಲ್ಬಗೆದಂ ವಣಿಗನ್ವಯೋತ್ತಮಂ || ೩೦ ||

ಪೃಧ್ವಿ || ದುರಿಂದ್ರಿಯಸುಖಕ್ಕೆ ಕೊಕ್ಕರಿಕೆ ಪುಟ್ಟೆ ನಿರ್ವೇಗದಿಂ
ನಿರಿಂದ್ರಿಯಸುಖಕ್ಕೆ ನಾಡೆ ಮನವಿಟ್ಟು ಸರ್ವಸ್ವಮಂ
ಜರತ್ತೃಣಸಮಾನಮಾಗೆ ಬಗೆದಾ ಮಹಾತ್ಮಂ ಸುಷೇ
ಣರೆಂಬ ಮುನಿಮುಖ್ಯರಲ್ಲಿ ಜಿನದೀಕ್ಷೆಯಂ ತಾಳ್ದಿದಂ || ೩೧ ||

ವ || ಅಗಳಾ ಸುಭದ್ರೆ ವಿಸ್ಮಯಾಕುಲಿತಮಾನಸೆಯಾಗಿ

ಇನಿಯನಗಲ್ದು ಪೋದ ಪೆಱಗಿರ್ಪುದು ಸೂೞೆನಗಲ್ತು ಪೋಪೊಡಂ
ತನಯವಿಮೋಹಮೆಂಬ ನಿಗಳಂ ತೊಡರ್ದಿರ್ದಪುದೇವೆನೆಂದು ಕಾ
ಮಿನಿ ನಿಜಜೀವಿತೇಶ್ವರನಗಲ್ಕೆಯೊಳಂ ತನುಜನ್ಮಮೋಹ ಬಂ
ಧನದೊಳೆ ಸಿಲ್ಕಿ ನಿಂದಳೆನೆ ಪುತ್ರವಿಮೋಹಮನಾರೋ ಮೀಱುವರ್‌ || ೩೨ ||

ವ || ತದನಂತರ ಸಮಯದೊಳ್‌

ಅಮೃತಾಂಭೋನಿಧಿ ಮೇರೆದಪ್ಪಿದುದೋ ಮೇಣಾಕಾಶಗಂಗಾ ಪ್ರವಾ
ಹಮೆ ಬೆಳ್ಳಂಗೆಡೆದತ್ತೊ ಮೇಣೆನಿಸಿ ದುಗ್ಧಸ್ನಿಗ್ಧಧಾರಾ ಪ್ರವಾ
ಹಮರ್ಗುರ್ವಾಗಿರೆ ಸುತ್ತಲುಂ ಪರಿವಿನಂ ಚೆಲ್ವಾಗೆ ಜೈನಾಭಿಷೇ
ಕಮನಾನಂದದೆ ಮಾಡಿದೊಂದಳವನಾನೇವೇೞ್ವೆನಾ ಕಾಂತೆಯಾ || ೩೩ ||

ಜಿನಗಂಧೋದಕದಿಂ ಬಾ
ಳನನಾಗಳ್ಮಿಸಿಸಿ ಬಾಳವಂದಂಗಳನೊ
ಯ್ಯನೆ ತುಡಿಸಿದಾಗಳಾ ಶಿಶು
ಜಿನಶಿಶುವೆಂಬಿನೆಗಮೇಂ ಮನಂಗೊಳಿಸಿದನೋ || ೩೪ ||

ಅಂಗಂಗಳೊಳಗಣೇೞನೆ
ಯಂಗದೊಳುದಯಿಸಿದುಪಾಸಕಕ್ರಿಯೆಯಿಂದು
ತ್ತುಂಗಕುಚಯುಗ್ಮೆ ನಿಜತನು
ಜಂಗಾಗಳ್‌ ಜಾತಕರ್ಮಮಂ ನಿರ್ಮಿಸಿದಳ್‌ || ೩೫ ||

ಪ್ರಕಟೀಕೃತ ನಿರ್ಮಲ ವಿನು
ತ ಕೀರ್ತಿಯಂ ಪುಣ್ಯಮೂರ್ತಿಯಂ ಬಾಲಕನಂ
ಸುಕುಮರನೆಂದು ಪೆಸರಿ
ಟ್ಟು ಕಾಂತೆ ತನಯಂಗೆ ನಾಮಕರಣಂಗೆಯ್ದಳ್‌ || ೩೬ ||

ವ || ಅಂತು ಜಾತಕರ್ಮ ನಾಮಕರಣಂಗಳಂ ಮಾಡಿ ಕೊಂಡಾಡಿ ನಡಪುತ್ತಿರೆ

ದರಹಸಿತ ಮುಖಾಬ್ಜದೊಳ್‌
ಪರಕಲಿಸಿರ್ದಂಜನಂ ಮನೋರಂಜನಮಾ
ಗಿರೆ ಮುದ್ದುಭಾವದಿಂದೇಂ
ಕರಮೆಸೆದನೊ ಬಾಲಭಾವದೊಳ್‌ ಸುಕುಮಾರಂ || ೩೭ ||

ಕಂಜದಳೋಪಶೋಭಿತ ವಿಲೋಚನದೊಳ್‌ ನಿಟಿಲಾಗ್ರದೊಳ್‌ ಪೊದ
ಳ್ದಂಜನರೇಖೆ ಕಣ್ಗೆಸೆಯೆ ಕಂಕಣಮೊಪ್ಪಮನೀಯೆ ಕೈಗಳೊಳ್‌‍
ಕೆಂಜೆಡೆಯೊಳ್ತುಗುಳ್ದ ಪಲವಂದದ ಚಂದದ ಚಿನ್ನಪೊಗಳೆ
ತ್ತಂ ಜಗತೀತಲೈಕತಿಲಂಕಂಗೆಸೆದಿರ್ದುವು ಬಾಲಕಾಲದೊಳ್‍ || ೩೮ ||

ತೊಳಪ ಹರಿನ್ಮಣಿಕುಟ್ಟಿಮ
ತಳದೊಳ್‌ ತಳಮಾರೆ ತಳಮನೂಱೆ ಬೆಡಂಗಂ
ಕಳೆದು ತಳರ್ನಡೆನೆಡೆವೆಡೆ
ಯೊಳದೇಂ ಜನನಿಗೆ ವಿನೋದಮಂ ಮಾಡಿದನೋ || ೩೯ ||

ದರಹಾಸಾಮೃತಮುಣ್ಮಿ ಪೊಣ್ಮೆ ಬಹುಮುಗ್ಧಾಳಾಪ ವಾಕ್ಯಂಗಳಾ
ವರಿಸುತ್ತುಂ ಪೊಸದೇಸೆವೆತ್ತೆಸೆಯೆ ಬಾಲಕ್ರೀಡೆ ನೋಡಲ್ಮನೋ
ಹರಮಾಗುತ್ತಿರೆ ವೈಶ್ಯವಂಶತಿಲಕಂ ನಿತ್ಯೋತ್ಸವಾನಂದದಿಂ
ಕರಮೊಪ್ಪಿರ್ದನನೂನಪಿಂಗಲ ಜಟಾಲಂಬಾಲಕಂ ಬಾಲಕಂ || ೪೦ ||

ರುಚಿರವಚೋಮೃತದಿಂ ವಿಶ
ದ ಚಾರು ಸಿತ ಕೀರ್ತಿಮೂರ್ತಿಯಿಂ ಸಹಜ ಕಲಾ
ಪ್ರಚುರತೆಯಿನೇೞ್ಗೆ ವಾಡಿವ
ದ ಚಂದ್ರನಂತುತ್ತರೋತ್ತರಂ ಶಿಶು ಬಳೆದಂ || ೪೧ ||

ವ || ಅಂತಾ ಬಾಲಕಂ ಪ್ರತಿದಿನ ಪ್ರವರ್ಧಮಾನಮುತ್ತರೋತ್ತರ ಪ್ರವೃದ್ಧಿಯಿಂ ಬಳೆವುದುಂ ಯಶೋಭದ್ರಾಂಬಿಕೆ

ನೆಱೆ ಮುನ್ನಂ ಸಮಣೋ ಅಮೋಘವಯಣೋ ಯೆಂಬುಕ್ತಿಯಿಂ ವ್ಯಕ್ತಮಾ
ಗಱೆದಿರ್ದೆಂ ಮಱೆದಿರ್ದೆನಿಲ್ಲೆನನಿತಂ ಕಂಡಿರ್ದುಮುಂಡಿರ್ದುಮ
ಳ್ಕುಱದಾಂ ಮೆಯ್‌ಮಱೆದಿರ್ದೆನಪ್ಪೊಡಿವನುಂ ತಮ್ಮಯ್ಯನಂ ಪೋಲ್ತು ಬ
ಲ್ಸೆಱೆಯಿಂ ಪಿಂಗಿದುದೊಂದು ಗಂಧಗಜದಂತಾದಾಗಳೇಗೆಯ್ವೆನೋ || ೪೨ ||

ಅದಱೆಂದೀತನನಾವುಪಾಯದೊಳಮಾರುಂ ಕಾಣದಂತಾಗಿ ಯ
ತ್ನದಿನಿರ್ಪಂತಿರೆ ಮಾೞ್ಪೆನೆಂದು ಪರಿದೊಂದೌತ್ಸುಕ್ಯದಿಂದಾಗಳಾ
ವಿದಲತ್‌ ಪಂಕಜನೇತ್ರೆ ಮಾಡಿಸಿದಳುದ್ಯತ್ಕೇತನಾನೀಕ ಭಾ
ಸ್ವದ ರತ್ನೋಜ್ವಲ ಚಿತ್ರಭಿತ್ತಿಪರಿಶೋಭಾನೀಡಮಂ ಮಾಡಮಂ || ೪೩ ||

ಅದಱೊಂದೊಂದೆಡೆ ಚಂದ್ರಕಾಂತ ಮಣಿಭಿತ್ತಿಭ್ರಾಜಿತಾಶಾವಿಭಾ
ಗದಿನೊಂದೊಂದೆಡೆ ಸೂರ್ಯಕಾಂತ ಬಹುಕೂಟಾಟೋಪಶೋಭಾಭಿರಾ
ಮದಿನೊಂದೊಂದೆಡೆ ಪದ್ಮರಾಗವಿಲಸತ್ಪ್ರಾಸಾದ ಮಾಲಾಂಶು ಜಾ
ಳದಿನೊಂದೊಂದೆಡೆಯಲ್ಲದೆಲ್ಲೆಡೆಯೊಳಂ ಕಣ್ಗೊಪ್ಪುಗುಂ ಮಂಡಪಂ || ೪೪ ||

ಪವಳದ ಕಂಬಂ ಪಳಕಿನೆ
ಸೆವ ತೊಲೆ ವಜ್ರದ ಮತ್ತವಾರಣಂ ಮುತ್ತಿನ ಮಂ
ಡವಿಗೆ ಕಿಸುಗಲ್ಲ ಬೋದಿಗೆ
ನವಮರಕತ ರತ್ನ ತೋರಣಂ ಪ್ರಾಕಾರಂ || ೪೫ ||

ಅನುಪಮಮಣಿಕನಕಮಯಂ
ವಿನಿಹಿತಸೌಮನಸಭದ್ರಶಾಲಜ್ಯೋತಿ
ರ್ವಿನುತಂ ಕರುಮಾಡಂ ಮೇ
ರುನಗಮಿದೊಂದೆಂಬ ಪೋಲ್ವೆಯಂ ಪುಟ್ಟಿಸುಗುಂ || ೪೬ ||

ವಿಲಸದ್ರತ್ನವಿಚಿತ್ರ ಭಿತ್ತಿಗಳಿನೆತ್ತಂ ಭಿತ್ತಿವೆತ್ತೂರ್ಜಿತೋ
ಜ್ವಲಶೋಭಾತಿಶಯಾದ್ಯಮನ್ವಿತಗವಾಕ್ಷೋದಗ್ರ ಭಾಗಂಗಳಿಂ
ನೆಲೆಯಿಂದಂ ನೆಲೆಗಳ್‌ ವಿರಾಜಿಸೆ ನವಗ್ರೈವೇಯಕಂಗಳ್‌ ಮಹೀ
ತಳದೊಳ್‌ ಸಂಧಿಸಿ ಬಂದು ನಿಂದ ತೆಱದಿಂದಂ ಕಣ್ಗೆಂವಂದೊಪ್ಪುಗುಂ || ೪೭ ||

ರಜತಮಣಿ ಕನಕನೀಳಾಂ
ಶುಜಾಳ ವಿಲುಳಿತ ವಿರಾಜಿತ ಪ್ರೋತ್ತುಂಗ
ಧ್ವಜಮಾಳಾ ಪರಿವೃತದಿಂ
ವಿಜಿತಾಮರನೀಡಮೆನಿಸುಗುಂ ಕರುಮಾಡಂ || ೪೮ ||

ದಿವಿಜೇಂದ್ರಭವನಮೆಂಬೀ
ನಿವಾಸದಿಂದತ್ತ ಮತ್ತೆ ಮೇಲಿರ್ದಪುದೆಂ
ದವಗಯಿಪವೊಲಲ್ಲಿಯ ವಾ
ತ ವಿಧೂತ ವಿನೂತ ಕೇತುಗಳ್‌ ದಳ್ಳಿಸುಗುಂ || ೪೯ ||

ಉದಯಗಿರಿ ಶಿಖರಧೃತ ಬಾ
ಳ ದಿವಾಕರಬಿಂಬದೊಳ್ಪಳಂಚಲೆವವೊಲ
ಭ್ಯುದಯಕರಮೆನಿಪ ಕರುಮಾ
ಡದ ಶಿಖರದೊಳೊಪ್ಪಿ ತೋಱುಗುಂ ಪೊಂಗಳಸಂ || ೫೦ || 

ವ || ಮತ್ತ ಮತಿ ಲಲಿತಮತಿ ವಳಭಿಚ್ಛಂದಂಗಳಿಂ ಛಂಧೋವಿದ್ಯೆಯುಮಂ ಸರ್ವತೋ ಭದ್ರಾಹ್ವಯವಿಶೇಷದಿಂ ನೋಂಪಿಯಂ ವಿಶೇಷಮಂ ನಂದ್ಯಾವರ್ತ ರಮಣೀಯತೆಯಿಂ ನಂದನವನಾಂತರಾಳಮಂ ಸ್ವಸ್ತಿಕ ವಿಸ್ತಾರದಿಂ ವಿವಾಹಮುಮನನು ಕರಿಸಿ ಶೋಭಿಸುವುದಂತುಮಲ್ಲದೆಯುಂ

ಗಣಿದದೊಳೇಂ ಕರಮಾಡಂ
ಪೊಣರ್ಚುವೊಡೆ ನೆಗೞ್ದದಿವಿಜರಾಜವಿಮಾನ
ಕ್ಕೆಣೆ ಪೋಲ್ವೆ ಸಮಂ ಸದೃಶಂ
ತೊಣೆ ತೋಡನುಸಾರಿ ಸಾಟಿ ಪಾಸಟಿಯೆನಿಕುಂ || ೫೧ ||

ಒಗೆದಭ್ರಾಟ್ಟಾಲಕಾಲಂಕರಣ ರಚನೆಯಿಂ ಸುತ್ತಲುಂ ಸುತ್ತುಗೊಂಡುಂ
ಬಗೆಗೊಂಡುಂ ದೇವೆಸೆತ್ತಾಳ್ವೆರಿಯ ತುಱುಗಲಿಂ ಚೆಲ್ವುವೆತ್ತಿರ್ದ ನಾಲ್ಕುಂ
ಮಿಗಿಲಾಗುತ್ತಿರ್ದ ಗೋಪಾಲ ಮುಖವಿಲಸನದಿಂ ತಾನೆ ಮೇಲಾದ ಪೆಂಪಿಂ
ಮುಗಿಲಂ ಮುಟ್ಟಿರ್ದುದೆಂಬಂತಿರೆ ರಕಮೆಸೆಗುಂ ವಿಶ್ರುತೋತ್ತುಂಗ ವಪ್ರಂ || ೫೨ ||

ಶುಕ ಕಾರಂಡ ಚಕೋರ ಸಾರಸ ಮಯೂರಾಕಾರದಿಂ ವ್ಯಾಘ್ರ ಸಿಂ
ಹ ಕುರಂಗಾಂಬುಜ ಚಕ್ರ ಮತ್ಸ್ಯ ಮಕರೇಭಾಕಾರದಿಂ ಚೆಲ್ವುವೆ
ತ್ತು ಕರಂ ಶೋಭೆಯನಾಂತು ಮೇಘಪಥದೊಳ್‌ ತಳ್ತಿರ್ಕುಮುದ್ಯಧ್ವಜ
ಪ್ರಕರಂ ಸ್ಥೂಲ ವಿಶಾಲ ಸಾಲರಚಿತೋಗ್ರಾಟ್ಟಾಲಕಾನೀಕದೊಳ್‌ || ೫೩ ||

ಅಂಗಜ ಚಕ್ರವರ್ತಿಯ ಗೃಹಾಂಗಣದಂತೆ ಮನೋಜರಾಜಗೇ
ಹಾಂಗಣದಂತೆ ಪೆಂಪಿನ ನೆಗೞ್ತೆಯ ಮನ್ಮಥನಾಥವಾಸಗೇ
ಹಾಂಗಣದಂತೆ ರೂಪಿನ ವಿಲಾಸದ ಚೆಲ್ವಿನ ವೈಶ್ರಯರಾಜಗೇ
ಹಾಂಗಣಮೊಪ್ಪುಗುಂ ಕರಿಮದೋತ್ಕಟ ಕರ್ದಮ ದುರ್ದಿನಾಂಗಣಂ || ೫೪ ||

ವ || ಮತ್ತಮಾ ಮಾಡದ ಬಳಸಿಯುಂ ಮೂವತ್ತೆರಡು ಬಳ್ಳಿಮಾಡಂಗಳು ಮಣಿಮಯ ವಿತಾನಂಗಳಂ ಮಾಡಿಸಿ ಬಱೆಕೆ

ಎಸೆವ ನಿಜಾಲಯಾಪರ ವಿಭಾಗದೊಳುನ್ನತ ಭೂಮಿಭಾಗದೊಳ್‌
ವಸುಧೆಗೆ ನಿತ್ಯಮಂಡಿತ ಜಿನಾಲಯಮಂ ಪಡಿಚಂದಮಾಗೆ ಕ
ಣ್ಗೆಸೆದಿರೆ ನೂತ್ನರತ್ನಮಯಮಾಗಿರೆ ಮಾಡಿಸಿ ನಂದನಂಗೆ ಮಾ
ಡಿಸಿದಳದೊಂದು ನಂದನಮನಿಂದ್ರನ ನಂದನದಂದಮೆಂಬಿನಂ || ೫೫ ||

 || ಆದ್ಯಂತ ಪ್ರಾಸದ ಗಳೆ ||

ಆ ನಿರುಮಪಮಗೃಹಬಹಿರುದ್ಯಾನಂ
ತಾನೆಸೆದೊಪ್ಪುಗುಮಪ್ರತಿಮಾನಂ
ನಾಗಲತಾ ವಿಸ್ತೀರ್ಣಮದಪ್ಪುದು
ಪೂಗದ್ರುಮ ಸಂಕೀರ್ಣಮೆನಿಪ್ಪುದು
ಮಾತುಳಂಗ ಸಂಘಾತಮದೆತ್ತಲು
ಮಾತತ ಪರಿಖಾವಲಯಂ ಸುತ್ತಲು
ಮನುಪಮಬದರಾಶೋಕ ಮಹೀಜಂ
ವಿನಮಿತ ಚೂತ ಕುಜಾತ ಸಮಾಜಂ
ಶಾಳ ತಾಳ ಹಿಂತಾಳ ಶಿರೀಷಂ
ಸ್ಥೂಲಕ್ವಾಳಕರೀರಾಶೇಷಂ
ಕದಳೀ ಸಪ್ತಚ್ಛದ ಪುನ್ನಾಗಂ
ವಿದಳಿತ ಚಂಪಕ ಲವಲೀ ನಾಗಂ
ವಕುಳ ಪಾಟಳಾಶ್ವತ್ಥಬ್ರಾತಂ
ಲಿಕುಚ ನಾಳಿಕೇರದ್ರುಮಜಾತಂ
ಆದಿಯಾಗೆ ಪಲವುಂ ಪೆಱವಂದದ
ಪಾದಪಂಗಳಿಂದೊಪ್ಪುವ ಚಂದದ
ಬನದೊಳೆತ್ತಲುಂ ಸುಳಿವರಗಿಳಿಗಳೆ
ಜಿನುಗಿ ರಾಗದಿಂದಂ ಮೊರೆವಳಿಗಳೆ
ಪೋ ಪುಗಿಲ್ಪುಗಿಲ್ಪುಗಿಲೆನುತೆ ಕರಂ
ಕಾಪುಗೊಂಡು ಜಡಿವುದು ಪಿಕನಿಕರಂ
ನೀರಜಾಕರಂ ಸುತ್ತಿಱೆದಲ್ಲಿಯೆ
ಕಯರವಾಸಿತಾಂಭೋರುಹವಲ್ಲಿಯೆ
ನಲಿವ ಸಾರಿಕಾಹಂಸಧ್ವಾನದಿ
ನಲೆವ ಬಕಶುಕ ಚಕೋರಧ್ವಾನದಿ
ಆಲ್ಲಿಗಲ್ಲಿಗೆಡೆಯಾಡುವ ಕೊಂಚೆಯಿ
ನೆಲ್ಲಾ ದೆಎಯೊಳ್‌ ಕುರ್ವಿದ ಬೆಂಚೆಯಿ
ನಂಗಜನ್ಮನರಮನೆಯೆಂಬಂತಿರೆ
ಭಂಗಿವೆತ್ತು ನೆಱೆ ಸೊಗಯಿಪುದಂತಿರೆ
ಮನಸಿಜಾತ ಗಂಧದ್ವಿಪದಿಕ್ಕೆಗೆ
ವಿನಯ ಭೂಮಿಯಾಗಿರ್ಪುದು ತೋರ್ಕೆಗೆ
ಸನ್ಮನೋಜಮಾಧವ ಸಮಯಕ್ಕಿದೆ
ಜನ್ಮಭೂಮಿ ತಾನೆನಿಸಲು ತಕ್ಕುದೆ
ನೆರೆದು ಮಧುಕರಾವಳಿ ಝಂಝಮ್ಮನೆ
ಒರೆದು ಮದಮನೀೞ್ಕೊಳುತುಂ ಕಮ್ಮನೆ
ಪುದಿದ ತಣ್ಪನಾಲಿಂಗಿಸಿ ತಣ್ಣನೆ
ಪದೆದು ಮಂದಗತಿಯಿಂದಂ ಪಣ್ಣನೆ
ಬಳಸಿ ಮಲ್ಲಿಕಾ ಸತಿಯಂ ಚುಂಬಿಸಿ
ನಳಿನಕಾಂತೆಯೊಳ್‌ ಬಿಡದೆ ವಿಳಂಬಿಸಿ
ಚೂತವಲ್ಲರೀವಧುವಂ ಸೋಂಕುತು
ಮೋತು ಜಾತಿಕಾಮಿನಿಯಂ ಕೂಂಕುತು
ಮಿಂಬುವೆತ್ತ ಪುಗಿಲಿಂದಂ ಮಾರುತ
ನೆಂಬ ಕಾಮುಕಂ ಸುಳಿಗುಮನಾರತ
ಮಿಂತು ನಾಡೆಯಂ ತತ್ಕೇಳವನಂ
ಎಂತು ನೋಡೆಯಂ ಕರಮತಿಪಾವನಂ || ೫೬ ||

ಪೊಸತಲರ್ದಸುಕೆಯ ಮಾವಿನ
ಕೊಸಗಿನಲಂಪಿಂದಲಂಪು ಪಿಂಗದೆ ಮತ್ತಂ
ಕಸಮಸಗಿ ಮಿಸುಗಿ ಭೃಂಗ
ಪ್ರಸರಂ ಪಸರಿಸುವುವೆಸೆವ ವಿಸರುಹವನದೊಳ್‌ || ೫೭ ||

ವ || ಮತ್ತಮದಱೊಳತಿ ಮಸೃಣಕುಸುಮಪ್ರವಾಲದ ಪೊಳೆವ ಗೊಂಚಲಂ ಸಂಚಳಿಸಿ ಪೊಳೆವ ಮಿಂಚಿನ ಗೊಂಚಲೆಂದುಮಲ್ಲಿಗಲ್ಲಿಗಲ್ಲೊಕ್ಕ ಬಂದುರ ಬಂಧೂಕ ಕುಟ್ಮಳಂಗಳನತಿ ಮನೋಹರಾರುಣಚ್ಛಾಯ ಕಾಯಂಗಳಪ್ಪಿಂದ್ರಗೋಪಪ್ರಕರಮೆಂದುಂ ಕರ್ಪೂರಭೂರಹಂಗಳಿಂ ಧರಾತಳಕ್ಕೆ ಪೂವಲಿಗೆದಱೆದಂತೆ ಕೆದಱಿದ ಕರ್ಪೂರವಳಿ ಕುಗಳಂ ಮುಂಚಿ ಬಂದ ಜಳದಾಗಮ ಪ್ರಸೂಚಕಂಗಳಪ್ಪಾಲಿವರಲ್ಗವರಲ್ಗಳೆಂದುಂ ಸರೋಜನವನದಿಂ ಶಾಳಿವನಕ್ಕೆ ಪರಿವ ಪರಿಕಾಲ್ಗಳಂ ನೆರೆದು ಮುರಿದು ಕಿಱುಗೊಂಕು ಕೊಂಕಿ ಪೊನಲ್ವೊನಲನಟ್ಟಿ ಪರಿವ ಬಳ್ಳಿವೊನಲ್ಗಳೆಂದುಂ ಜಂಬುಜಂಬೀರ ಸಹಕಾರ ನಾರಂಗ ನಾಳಿಕೇರಾದ್ಯನೇಕಾನೋಕಹ ಫಲಪಕ್ವದ್ರವೀಭೂತರಸಾಸಾರದಿಂ

ನೂರ್ಮಡಿಯಾಗೆ ಸೋರ್ವ ಸೋನೆಯಂ ಸರಿಯೆಂದು ಮದಾಳಿಮಾಳೆಯಂ
ಕಾರ್ಮುಗಿಲೆಂದು ನೀರವಿಹಗಂಗಳನಾದಮನಭ್ರನಾದಮೆಂ
ದೊರ್ಮೆಯುಮಾ ವನಾಂತರದೊಳಚ್ಚರಿಯಾಗೆ ಮಯೂರಕೋಟಿಗಳ್‌
ಕಾರ್ಮುಕಮೆಂದು ನರ್ತಿಸುವುವೆಂಬಭಿಶಂಕೆಯನುಂಟುಮಾಡುಗುಂ || ೫೮ ||

ಉಪವನದೊಳ್‌ ಬಿರಯಿಗೆ ಮೊರೆ
ವ ಪಾಂಗಿನೊಳ್‌ ಮೊರೆಯುತಿರ್ಪ ಮಱಿದುಂಬಿ ವಿರಾ
ಜಿಪ ಮಾವಿನ ಕೆಂದಳಿರೊಳ
ಗೆ ಪರಭೃತಂ ಮಗುೞ್ವಪರಭೃತಂ ಕರಮೆಸೆಗುಂ || ೫೯ ||

ಗಳಗಳಿಕೆಯಿನೆಳದಳಿರ್ಗಳಿ
ನೆಳಮಿಡಿಯಿಂ ನೆಱೆಯೆ ತಱುಗಿದೆಳಮಾವುಗಳೊಳ್‌
ಗಿಳಿಕೋಗಿಲೆಮಗುೞ್ವರಗಿಳಿ
ಗಳ ರವದಿಂದೆಂತು ನೋಱ್ಪೊಡಂ ರಮಣೀಯಂ || ೬೦ ||