ಎಳೆಯೊಳ್‌ ಶೀತಳಮಪ್ಪ ತೆಂಗಿನೆಳೆನೀರೊಳ್ಚಂದ್ರಕಾಂತೋಪಳಂ
ಗಳಿನೆತ್ತಂಬಿರಿವಿಟ್ಟು ಬರ್ಪ್ಪ ಜಲದಿಂ ಪುಂಡ್ರೇಕ್ಷು ಪಾನೀಯದೊಳ್‌
ಬೆಳೆದೋರಂತೊಱಗಿರ್ದು ತೋರ್ಪ ವಿಲಸತ್ಕರ್ಪೂರಶಾಳೀವನಾ
ವಳಿಯಿಂದಂ ಕರಮೊಪ್ಪಿ ತೋರ್ಪುದು ಬನಂ ಲಕ್ಷ್ಮೀಕರಾಲಂಬನಂ || ೬೧ ||

ವ || ಇಂತು ಮದನರಾಜಂಗೆ ಮಂಗಳಭೂಮಿಯುಂ ವಸಂತರಾಜಂಗೆ ಜನ್ಮ ಭೂಮಿಯುಮೆಂಬ ಪೊಗೞ್ತೆಗಂ ನೆಗೞ್ತೆಗಂ ನಿಲಯಮುಂ ನಿವಾಸಮುಮಾದ ಮಣಿಮಾಡಮುಮಂ ನಂದನವನಮುಮಂ ಮಾಡಿಸಿ ಶೀತಾತಪಾದಿ ಬಾಢಾವ್ಯಪೇತಮಪ್ಪಂತು ನಿಜಾರ್ಭಕನಂ ಗರ್ಭಗೃಹದೊಳಿರಿಸುವಂತೆ ಮಣಿಮಯ ಗರ್ಭದೊಳಗಗಲದಂತು ನಿಶ್ಚಿಂತಮಿರಿಸಿ ಯತಿರೂಪಕಮೆಂಬ ಪೆಸರುಂ ಚಿತ್ರರೂಪು ಮೊದಲಾಗಿಯುಂ ಕಾಣಲೀಯದಂತು ಕಾಪಂ ಕರಮೆ ಸುವಿಧಾನಂ ಮಾಡಿ ರಕ್ಷಿಸುತ್ತಿರ್ಪುದಮನ್ನೆಗಮಾ ಕುಮಾರನುಮಧರೀಕೃತ ಸುಕುಮಾರನುಮೆನಿಸಿ ಬಳೆದು ಷೋಡಶವರ್ಷದ ದೇಸೀಯನಾನಲೊಡಂ

ಕಳಿಕೆಗಳಿಂ ಪೂದುಱುಗಲಿ
ನಳಂಕೆವೆತ್ತಿರೆ ಬಸಂತದೊಳ್‌ ಶೋಭಿಸುವೊಂ
ದೆಳಮಾವಿನ ತೆಱದಿನದೇಂ
ವಿಲಾಸ ಯೌವನ ವಿಭೂತಿಯಂ ತಾಳ್ದಿದನೋ || ೬೨ ||

ಸ್ಪುರಿತಮರೀಚಿಯಿಂ ಪುದಿದು ಪಜ್ಜಳಿಪಿಂದುವಿನಂತೆ ಕೇಸರೋ
ತ್ಕರದೊಳನಾರತಂ ನೆರೆದ ಕೇಸರಿಯಂತೆ ಸದಾನಲಕ್ಷ್ಮಿಯೊಲ್‌
ನೆರೆದ ಮನೋಜರಾಜಗಜದಂತೆ ವಿಲಾಸವತೀಕಟಾಕ್ಷ ಸುಂ
ದರ ನವಯೌವನಂ ನೆಱೆಯೆ ಕಣ್ಗೆಸೆದಂ ಸುಕುಮಾರವಲ್ಲಭಂ || ೬೩ ||

ಉದಿತಾರ್ಕದ್ಯೋತಿಮಾಳಾರುಣರುಚಿರತನುಚ್ಛಾಯನತ್ಯಂತಕಾಂತ್ಯಾ
ಸ್ಪದವಕ್ತ್ರಂ ನೀಳನೀರೇರುಹದಳನಯನಂ ವಿದ್ರುಮಾರಕ್ತದಂತ
ಚ್ಛದನುತ್ತುಂಗೋಚಿತೋರಸ್ಥಳನನುಪಮ ಬಾಹುದ್ವಯಂ ಕಂಬುಕಂಠಂ
ಕದಳೀಸ್ತಂಭೋರುಯುಗ್ಮಂ ಲಲಿತಮನಸಿಜಾಕಾರನಾದಂ ಕುಮಾರಂ || ೬೪ ||

ವ || ಮತ್ತಮಾ ಕುಮಾರಂ ಸಮಚತರ ಸಂಸ್ಥಾನವಜ್ರವೃಷಭನಾರಾಚಸಂಹನನನುಂ ಹಳಕುಳಿಶಕಳಶಚಮರಜಛತ್ರಶಂಖಾಂಕುಶಾಂಕಿತಕರತಳವಿಳಸಿತನುಂ ಸುರೂಪ ಸುರಭಿನಂದ್ಯಾವರ್ತಶ್ರೀವತ್ಸ ಸ್ವಸ್ತಿಕಪ್ರತಿಪ್ರಶಸ್ತಲಕ್ಷಣ ಲಕ್ಷಿತಾಕ್ಷೂಣೇಕ್ಷಣೈಕಸು ಭಗಮೂರ್ತಿಪ್ರಭಾವ ಪರಮೈಶ್ವರ್ಯಸಂಪನ್ನನುಂ ದುಂದುಭಿಗಭೀರಮೃದುಮಧುರ ನಿನದೋಪಶೋಭಿತನುಮಾಗಿ ಮತ್ತಗಜಗಮನೆಯರ ಚಿತ್ತಕ್ಕೆ ವಶ್ಯಯಂತ್ರಮೆನಿಸಿದ ಸೌಭಾಗ್ಯಮುಮಂ ವಿದಗ್ಧವಾರನಾರಿಯರ ಹೃದಯಕ್ಕೆ ಸಿದ್ಧೌಷಧಿತಿಲಕಮೆನಿಸಿದ ಪುಣ್ಯಮುಮಂ ಮುಗ್ಧವಿಲಾಸಿನಿಯರ ಬಗೆಗಾಲೇಪನಪತ್ರಮೆನಿಸಿದ ಲಾವಣ್ಯಮುಮಂ ಪುಣ್ಯಮುಮನಪ್ಪುಕೆಯ್ದುದನಾ ಪುಣ್ಯದಿನದೊಳಾ ಯಶೋಭದ್ರಾಂಭಿಕೆ ತತ್ಪುತ್ರನ ಯೌನೋದಯಮಂ ನೋಡಿ ರೂಪವಿದ್ಯಾಧರನುಂ ರೂಪಕಂದರ್ಪನುಂ ಅಭಿನವಮದನನುಂ ಆಪೂರ್ವಪುರಂದರನುಂ ಸೇವ್ಯಭವ್ಯಚಿಂತಾಮಣಿಯುಂ ಭವ್ಯವರಪುಂಡರೀಕನುಮೆಂಬ ಪೆಸರ್ಗಳನಭಿಧಾನಂಗಳ್ಮಾಡಿ ವಿವಾಹಪ್ರಾಪ್ತನಾದುದನಱಿದು ತದ್ಗೃಹಮಹತ್ತರವಯೋವೃದ್ಧ ಬುದ್ಧಿವೃದ್ಧ ಪ್ರಮುಖ ಪ್ರಧಾನವರ್ಗದೊಳಾಳೋಚಿಸಿ ನಿಜಾಪತ್ಯಂಗೆ ವೈವಾಹಿಕಕ್ಕೆ ಸಮಾನಾಭಿಜಾತ್ಯಮುಮನ್ವಯಾದಿಪತ್ಯಮುಮುಳ್ಳೆಡೆಗಳೊಳ್‌

ಚತುರಿಕೆ ಚಿತ್ರೆ ಚಿತ್ರಲತೆ ಪದ್ಮಿನಿ ಪದ್ಮೆ ಸುಶೀಲೆ ಶೀಲೆ ರೇ
ವತಿ ಮಣಿಮಾಲೆ ಚಂದ್ರಿಕೆ ಶಶಿಪ್ರಭೆ ಲಕ್ಷ್ಮಿ ಸುರೂಪೆ ಲಕ್ಷ್ಮಣಾ
ವತಿ ಜಿನದತ್ತೆ ರೋಹಿಣಿ ಸುಲೋಚನೆ ಸುನಂದೆ ಸುಭದ್ರೆ ಭಾ
ರತಿ ರತಿ ರಂಬೆ ರತ್ನವತಿ ಗೋಮಿನಿ ಸುಂದರಿ ಹೇಮಮಾಲೆಯುಂ || ೬೫ ||

ಸನ್ನುತೆ ವಿಜಯೆ ಜಯಾವತಿ
ರನ್ನೆ ಮನೋಹರಿ ಸುದಾಮೆಯೆಂಬಿವರಂ ಶೀ
ಲೋನ್ನತೆ ಮೂವತ್ತಿರ್ವ
ರ್ಕನ್ನೆಯರಂ ರೂಪವಿಭವಸಂಪನ್ನೆಯರಂ || ೬೬ ||

ವ || ಶ್ರೀ ಹ್ರೀಧೃತಿಕೀರ್ತಿಯೆಂಬ ಶ್ರೀದೇವತೆಯರೊಳೋರನ್ನೆಯರಂ ಭವಿಷ್ಯನ್ಮಂಗಳಪ್ರತ್ಯಾಸನ್ನೆಯರಂ ಶುಭಮುಹೂರ್ತದೊಳ್ನೋಡಿ ಮುದ್ರಿಕಾಪ್ರದಾನಂ ಮಾಡಿ ಮಹಾಪ್ರಸಿದ್ಧಜಿನಾಲಯಂಗಳೊಳಷ್ಟಾಹ್ನಿಕಮಹಾಮಹಿಮೆಯಂ ಮಾಡಿ ರಾಜಧಾನಿಯೊಳಷ್ಟಶೋಭೆಯಂ ಮಾಡಿ

ದಿವಿಜವಿನಿರ್ಮಿತಮೆನೆ ಧನ
ದವಿನಿರ್ಮಿತಮನೆ ವಸಂತನಿರ್ಮಿತಮೆನೆ ಭೂ
ಭುವನಕ್ಕತಿ ಕೌತುಕಮಂ
ವಿವಾಹಮಂಡಪಮನೞ್ತಿಯಿಂ ನಿರ್ಮಿಸಿದಳ್‌ || ೬೭ ||

ರಗಳೆ ||

ಚಂಚನ್ಮಣಿಗಣಪರಿಖಚಿತಭೂಮಿ
ಸಂದಿರ್ದಧರೀಕೃತ ಭೊಗಭೂಮಿ
ಮರಕತಭಿತ್ತಿಗಳಿಂ ಭಿತ್ತಿವೆತ್ತು
ವಜ್ರದ ಕಂಭಂಗಳ ಕಾಂತಿ ಮಿಂಚಿ
ಪರಭಾಗಂ ಬಡೆದವಱೊಳ್ಪಳಂಚಿ
ವೈಡೂರ್ಯದ ಗಡಗೆಗಳೆಸೆಯೆ ಬೇಱೆ
ಶಶಿಕಾಂತದ ಜಂತೆಗಳೊಪ್ಪಿ ತೋಱೆ
ನೀಲದ ಬೋದಿಗೆಗಳಮರ್ಕ್ಕೆವಡೆಯೆ
ಪವಳದ ಲೋವೆಗಳ್ಕಡುಚೆಲ್ವುವಡೆಯೆ
ಪೊಂಗಳಸಂಗಳ್ತಳತಳನೆ ತೊಲಗೆ
ಕಪ್ಪುರದ ಸೊಡರ್ಗಳೋರಂತೆ ಬೆಳಗೆ
ಪೊಂದಳಿರ್ಗಳ ತೋರಣದೊಳಗೆ ಪೊಱಗೆ
ಕೆಂದಳಿರ್ಗಳ ಮಾಲೆಗಳೆಱಗಿ ತುಱುಗೆ
ಜಾಗದ ನೆಲವಡಲಗೆಗಳ ವಿಲಾಸ
. . . . . . . . . . . . . . . . . . . .
ಕಾಲಾಗರು ಧೂಪೋದ್ಗಾರಿ ಧೂಪ
. . . . . . . . . . . . . . . . . . . .
ಕಪಿಲಚ್ಛಾಯಾವ್ಯೋಮಾಭಿರಾಮ
. . . . . . . . . . . . . . . . . . . .
ವಿದಶಾಚತುರ್ನಿಹಿತ ಶಾತಕುಂಭ
ಮಯ ಜಿನಗಂಧೊದಕಪೂರ್ಣ್ನಕುಂಭ
ಮುಜ್ವಲ ಬಹುಮಣಿ ಘಂಟಾವಿತಾನ
ಮಲ್ಲಲ್ಲಿಶೋಭಿಸುವ ಮಣಿಕುಂಭಸಂತಾನ
ಮಾವೃತಸಿತಸೂತ್ರತ್ರಿತಯಮಾಗಿ
ವೇದೀವಿಲಾಸಮತ್ಯಂತಮಾಗಿ
ಕಟ್ಟಿದ ಪೂಮಾಲೆಗಳೆಸೆಯೆ ಮುಂದೆ

ನಾನಾವಿಧ ಫಲನಿಚಯಂಗಳಿಂದೆ
ವೈಚಿತ್ರ್ಯರುಚಿರದೇವಾಂಗವಟ್ಟೆ
ಕಿಕ್ಕಿಱೆಗಿಱೆದವಱೊಳ್‌ ಕೂಡೆ ಕಟ್ಟೆ
ಕೆದಱಿದ ಕರ್ಪೂರವಳಿಕು ಮೇಗೆ
ಕತ್ತುರಿಯ ಕಂಪುಮದನೂನಮಾಗೆ
ಚಂದನರಸದಿಂದಂ ಪೂಸಿದಲ್ಲಿ
ಸಾಂದಿನ ರಸದಿಂ ಸಾರವಿಸಿದಲ್ಲಿ
ಬಿಡುಮುತ್ತುಗಳಿಂದಿಕ್ಕಿದ ರಂಗವಲ್ಲಿ
ಆದಂ ಕರಮೊಪ್ಪಿರೆ ರಂಗವಲ್ಲಿ
ಚೆಂಬೊನ್ನ ಪಟ್ಟಮಣೆ ದುಗುಲದಿಂದ
ಮಳವಟ್ಟಿರೆ ಪಾಸಿರೆ ಚೆಲುವಿನಿಂದ
ಮುಪಶೋಭಿತ ವಿಸ್ತೃತ ಸರ್ವಧಾನ್ಯ
ಮಧ್ಯಪ್ರದೇಶ ಸಂಸ್ಥಾಪ್ಯಮಾನ
ಮೆನೆ ಸಿರಿಗನ್ನಡಿ ಮೊಸರೆಣ್ಕೆ ವೆರಸಿ
ದೆಳದಳಿರ್ಗಳಸಂಗಳ ಲೀಲೆವೆರಸಿ
ದಂಪತಿಯಂ ಪೋ ಬರವೇೞೆಂಬ
ತೆಱದಿಂ ಸೊಗಯಿಸಿದುದು ಕಣ್ಗಳುಂಬ
ಮೋರಂತೆಡೆಯಾಡುವ ಯುವತಿ ಜನದ
ಮಂಜೀರಕ ಗುಂಜನ್ಮಂಜು ನಿನದ
ಮೆಸೆದಿರೆ ಮಂಗಳವಱೆ ಕೂಡೆ ಮೊೞಗೆ
ಜಯಜಯ ವರ್ಧಸ್ವ ನಿನಾದದೊಳಗೆ
ಕಳರವದಿಂ ವಂದಿ ವ್ರಾತಮುಲಿಯೆ
ಪರಿವಾರ ನಾರಿಯರ್‌ ಪಿರಿದು ನಲಿಯೆ
ಭಾವಿಸುವಂದದು ಪುಣ್ಯವತಾರ
ಮಾರಯ್ವಂದದು ಸಂಸಾರ ಸಾರ
ಮದು ಕಾಮನ ಸಾಮ್ರಾಜ್ಯಸದನ
ಮದು ಮದನ ಸಾರ ಸರ್ವಸ್ವಭವನ
ಮದು ನಾಗರಾಜ ನಿಲಯೋಪಮಾನ
ಮದು ದಿವಿಜಪತಿ ವಿಮಾನೋಪಮಾನ
ಮೀಲೋಕದೊಳದಱಂತಪ್ಪುವಿಲ್ಲ
ಬಣ್ಣಿಸಲದನಾವನುಮಱಿದನಿಲ್ಲ    || ೮೯ ||

ವ || ಅಂತು ಕಾಮರಾಜರಾಜ್ಯಕ್ಕೆ ಕಲ್ಯಾಣಗೇಹಮುಂ ವಸಂತರಾಜ್ಯೋತ್ಸವಕ್ಕೆ ಜನ್ಮಗೇಹಮುಂ ಗಾಯಕನಿಕಾಯಕ್ಕೆ ಗಂಧರ್ವಗೇಹಮುಂ ವಂದಿವೃಂದಕ್ಕೆ ಚಿಂತಾಮಣಿ ಗೇಹಮುಮೆಂಬಂತಿರ್ದ ವಿವಾಹಗೇಹಮಂ ಯಶೋಭದ್ರೆ ಕಂಡು ಮನಂಗೊಂಡು ಮಂಡಲಿಕ ಮಹಾಸಾಮಂತ ಮಂತ್ರಿಪ್ರಧಾನ ಶ್ರೇಷ್ಠಿ ಸಚಿವಾಂತಃಪುರಾಂಗನಾಜನಕ್ಕೆ ಲೆಕ್ಕಮಿಲ್ಲದೆ ಪಂಚರತ್ನಮಯಭಾಜನಂಗಳೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಪಚ್ಚೆಸಾರದ ಕಾಶ್ಮೀರದ ಯಕ್ಷಕರ್ದಮಪಿಂಡದ ಕತ್ತುರಿಯ ಕೊಳತದ ಕರ್ಪುರವಳಿಕಿನ ಬಾಯಿನಂಗಳನೆ ಬೀಱಿ

ಬೊಂಗದ ನಾರಂಗದ ದೇ
ವಾಂಗದ ಪಲತೆಱದ ಸಕಲ ವಟ್ಟೆಗಳಂ ಗೇ
ಹಾಂಗಣದೊಳ್ ಮೆಟ್ಟುವ ತಾ
ಣಂಗಳೊಳೋರಂತೆ ಪಾಸಿ ತದನಂತರದೊಳ್    || ೯೦ ||

ಬಿಡುಮುತ್ತಿನ ಪೇಱುಗಳಂ
ತಡೆಯದೆ ಕರ್ಪುರದ ಪಿರಿಯ ಮಳವೆಗಳಂ ತಂ
ದಿಡು ಮಾಣಿಕ ಭಂಡಾರದ
ಪುಡಿಕೆಗಳಂ ಮಂಗಳಕ್ಕೆ ತಕ್ಕುಡುಕೆಗಳಂ           || ೯೧ ||

ವ || ಎಂದು ಕಾಲೋಹಣದ ಸಾಹಿಯಾಣದ ಚೀನದ ಮಹಾಚೀನದ ಪೞಿಯ ಚಿತ್ರಾವೞಿಯ ಪಟ್ಟಾವೞಿಯ ಪಟ್ಟಸೂತ್ರದ ಚಿತ್ರಸೂತ್ರದ ನೇತ್ರವಟ್ಟಣಿಗೆಯ ಪುಟ್ಟಿಗೆಗಳನೊಟ್ಟಿ ಬೆಟ್ಟಾಗಿ ಪುಂಜಿಸಿ

ಆಡುವ ಬೇಡುವ ಪಾಡುವ
ನೋಡುವ ಜನಕೆಲ್ಲಮೀವ ಸೂಸುವ ಕುಡುವೀ
ಡಾಡುವ ವಸ್ತುಗಳಿಂದೆಡ
ಱೋಡುವಿನಂ ಪಿರಿದನಿತ್ತು ಬಿಯಮಂ ಮೆಱೆದಳ್        || ೯೨ ||

ಇದಿರೊಳ್ ಜಂಗಮದಿವ್ಯಕಲ್ಪಲತೆ ಸತ್ಪುಣ್ಯಾರ್ಥದಿಂ ಬಂದುನಿಂದುದೊ
ಮೇಣ್ ದಿವ್ಯ ಮಹಾನಿಧಾನಮಿದಿರೊಳ್ ಕೋಳ್ಪೋದುದೋ ಪೇೞಿಮೆಂ
ಬುದನೆಂಬನ್ನೆಗಮರ್ಥಿಗರ್ಥಚಯಮಂ ಬೇೞ್ಪ……………………….
ಕ್ಕದೆ ಕೊಟ್ಟಳ್ಗಡಮೆಂದೊಡಾ ಸತಿಯನಿನ್ನೇವಣ್ಣಿಪೊಂ ಬಣ್ಣಿಪೊಂ          || ೯೩ ||

ಒಲಿದಂತಿರೆ ಕೊಟ್ಟಳ್ ಕ
ಲ್ಪಲತಿಕೆ ತನ್ನಿಚ್ಛೆಯಿಂದ ಕುಡದುದಱಿಂದೀ
ಲಲನಾಸದ್ರೂಪದ ಕ
ಲ್ಪಲತೆಗಮಾ ಕಲ್ಪಲತೆಗಮೇನಂತರಮೋ       || ೯೪ ||

ವ || ಆ ಪ್ರಸ್ತಾವದೊಳ್ ವಿವಿಧರತ್ನಗರ್ಭ ನಾನಾವಿಧೌಷಧಿಸಂದರ್ಭ ಹಾಟಕ ಘಟಪರಿಪೂರ್ಣ ಪರಮಜಿನಗಂಧೋದಕಂಗಳಿಂ ಮಿಂದು

ಮುದದಿಂ ನನೆಗಣೆಯಂ ಪಿಡಿ
ಯದೆ ಕರ್ಬಿನ ಬಿಲ್ಲನೊಲ್ಲದವಯವದಿಂದಂ
ಮದನನೆ ಬರ್ಪಂತಭಿನವ
ಮದನನಳಂಕಾರಭವನಮಂ ಪುಗುತಂದಂ         || ೯೫ ||

ವ || ಅಂತಳಂಕಾರಮಂದಿರಕ್ಕೆ ವಂದು ಚತುರವಿಬುಧಜನಸಂವಿಧಾನದೊಳ್ ನೆಱೆಯೆ ಕಯ್ಗೆಯ್ದು

ಕನಕಮಣಿಕಟಕಲಲಿತಂ
ಜಿನಗಂಧೋದಕಪವಿತ್ರಗಾತ್ರಂ ಯದುಗೋ
ತ್ರನಿಕಾಯನಾಯಕಂ ವಿಬು
ಧನುತಂ ಮಂದರಮಹೀಧರಕ್ಕೆಣೆಯಾದಂ       || ೯೬ ||

ತರತರದಿನೆಸೆವ ಕರೆಗಳ್
ವೆರಸಿದ ಪೊಸದುಗುಲದುಡೆಯಿನಮರ್ದೊಪ್ಪುವ ಪೊಂ
ಜುರಿಗೆಯುಮುಜ್ವಲ ನಾನಾ
ಭರಣಂಗಳುಮೇಂ ವಿಲಾಸಮಂ ಮಾಡಿದುವೋ || ೯೭ ||

ಪೊಸಮುತ್ತಿನ ಸುತ್ತಿನ ಭ
ರ್ಮಸೂತ್ರಮುಂ ನುಣ್ಪುವೆತ್ತ ಮಳಯಜದಣ್ಪುಂ
ಪೊಸಮದುವೆಯ ಪೊಸಪಸದನ
ಮೆಸೆದೊಪ್ಪಿರೆ ಜನಮನೇಂ ಮನಂಗೊಳಿಸಿದುದೋ        || ೯೮ ||

ಅಮರಿಸಿ ಮಿಂಚಂ ಮುಕ್ಕುಳಿ
ಸಿ ಮಾನಸರಮೆಗೆ ಸೂಸಿದಪನಿವನೆಂಬಂ
ತಮರ್ದಿರೆ ಮಿಂಚುವ ಸುಲಿಪ
ಲ್ಲ ಮಿಂಚು ಸಂಚಳಿಸೆ ವಿಮಲ ಮಣಿಭಿತ್ತಿಗಳೊಳ್         || ೯೯ ||

ವ || ಅನ್ನೆಗ[೦] ಮೂವರ್ತ್ತಿರ್ವರ್ಕ್ಕನ್ನೆಯರುಮನೇಕ ಮಂಗಳಪ್ರಸಾಧನ ಪ್ರವೀಣೆಯರಪ್ಪತಿವಿದಗ್ಧವಾರವನಿತಾಜನಪರೀತೆಯರಾಗಿ

ಕುಸುಮಾಸ್ತ್ರನ ನನೆಗಣೆಗಳ್
ಮಸೆದು ತೆಱಂಬೊಳೆದು ಪೊಳೆಯುತಿರ್ಪಂದದಿನೇ
ನೆಸೆದಿರ್ದರೊ ಕನ್ಯಕೆಯ
ಪ್ರಸಾಧನಂ ತಮಗೆ ಕಾಮಸಾಧನಮಾಗಲ್       || ೧೦೦ ||

ವ || ಅಂತು ನೆಱೆಯೆ ಕಯ್ಗೆಯ್ದ ವಧೂವರರಂ ಮೌಹೂರ್ತಿಕ ನಿರೂಪಿತ ಶುಭಮುಹೂರ್ತದೊಳ್ ಮಂದ್ರ ಮಧುರ ಮನೋಹರ ಮಂಗಳಪಟಹ ಗೀತಾಶೀರ್ವಾದಕೋಳಾಹಳರವಂಗಳೆಸೆಯೆ ಮುಂದಿಟ್ಟು ತಂದು ಪರಿಣಯನಮಂಟಪದ ಮಧ್ಯ ಪ್ರದೇಶಮನಳಂಕರಿಸಿದ ಪಂಚರತ್ನಮಯ ವೇದಿಕೆಯ ನಡುವಣ ಪೀಠದ ಮೇಲೆ ಪಾಸಿದ ದಳಿಂಬದ ಪಸೆಯೊಳಿರಿಸಿ ಕಯ್‌ನೀರೆಱೆದು ಪಾಣಿಗ್ರಹಣಂಗೆಯ್ಸಿದಾಗಳ್

ಕಡುಚೆಲ್ವುವಡೆದು ಬಳಸಿಯು
ಮೆಡೆಯುಡುಗದೆ ಕಾಂತೆಯರ್ ನಯಂಬಿಡದಿರೆ ದಾಂ
ಗುಡಿವಡೆವ ಕಲ್ಪಲತೆಗಳ
ನಡುವಣ ಕಲ್ಪಾವನೀಜಮಿರ್ಪಂತಿರ್ದಂ           || ೧೦೧ ||

ವ || ಆಗಳಾ ಯಶೋಭದ್ರೆ ಮುನ್ನೆ ತನ್ನ ಮಾಡಿಸಿದ ಮೂವತ್ತೆರಡು ಬಳ್ಳಿ ಮಾಡಂಗಳೊಳ್ ಮೂವತ್ತಿರ್ವರ್‌ಸೊಸೆವಿರುಮಂ ಮಹಾವಿಭೂತಿಯನಿರಿಸುವುದುಂ ಪ್ರತಿದಿನಮಾ ಶೃಂಗಾರವಾರಿಧಿತರತ್ತರಂಗೆಯರಾ ಲಾವಣ್ಯಾರ್ಣವನ ಮನೋರಂಗದೊಳ್ ನಾಟಕಂ ನಲಿದು ನರ್ತಿಸಿಯುಮಾ ನಕಕುಳಿಶವಿರಾಜಿತಪಾದಪಲ್ಲವೆಯರಾ ನಖಾಂಶುಮಾಳಸ್ತಬಕಪರಿಚುಂಬಿತ ಪಾದಪಲ್ಲವಂಗಳೊಳ್ ಪದೆಪಂ ಮಾಡಿ ಮೇಳಿಸಿಯುಮಾ ವಿಲಾಸಜಂಘಾಯುಗಳೆಯರಾ ವಿನೂತಜಂಘಾಯುಗಳನಿ ಗಳದಿನುಲ್ಲಂಘಿಸದಂತು ಮಾಡಿಯುಮಾ ಕರಭೋರುಸ್ತಂಭೆಯರಾ ರಂಭಾಸ್ತಂಭಾ ಯಮಾನೋರುಸ್ತಂಭವಂ ತಂದು ವೃತ್ತೋರುಸ್ತಂಭಂಗಳಿನೇಳಿಸಿಯುಮಾ ಮನೋಜರಾಜ ಕ್ರೀಡಾಚಳೋನ್ನತಕಟಿತಟೆಯರಾ ಘನಜಘನನಂ ತಮ್ಮ ಸಹಜಘನಜಾಳಕ್ಕೊಳ ಗುಮಾಡಿಯುಮಾ ಮದನರಾಗರಸಕೂಪೋಪಮಾನ ನಿಮ್ನನಾಭಿಕೂಪೆಯರಾ ದಕ್ಷಿಣಾವರ್ತ ಗಂಭೀರ ನಾಭಿಕೂಪನಂ ತಮ್ಮ ಗಂಭೀರನಾಭಿಕೂಪದೊಳ್ ಬಲವರಿಸಿಯುಮಾಮುಷ್ಟಿ ಸಮಾನ[ನ]ಮಧ್ಯೆಯರಾ ಸಿಂಹಮಧ್ಯನಂ ತಮ್ಮ ಸೂಕ್ಷ್ಮಕ್ಷಾಮಮಧ್ಯದೊಳ್ ಸೋಂಕಿಯುಂ ಮದನಮದಕುಂಭಿಕುಂಭೋಪಶೋಭ- ಕುಚುಕುಂಭೆಯರಾ ಸಕಲ ಲಕ್ಷ್ಮೀನಿವಾಸ ವಿಶಾಲವಕ್ಷಃಸ್ಥಲನಂ ತಮ್ಮನಿಬಿಡನಿಬದ್ಧಪೀವರಸ್ತನಂಗಳಿಂ ಕೂಂಕಿಯುಮಾ ನಿಕಾಮಕಾಮಪಾಶೋಪಹಾಸಿ ಕೋಮಳಬಾಹುಯುಗಳೆಯರಾ ದಿಕ್ಕರಿಕ ರಾನುಕಾರಿಕರಯುಗಳನಂ ತಮ್ಮಬಾಹುಪಾಶಂಗಳೊಳ್ ತೊಡರ್ಚಿಯುಮಾ ಕಂಬುಕಮನೀಯಕಂಧರೆಯರಾ ಮದಾಂಧ ಸಿಂಧುರಸ್ಕಂಧಬಂಧುರಕಂಧರನಂ ತಮ್ಮ ಗಳರೇಖೆಗಳೊಳಾಗಿಸಿಯುಮಾ ವಿದ್ರುಮಾಧರೆಯರಾ ಸುರಭಿಸುಪಕ್ವಬಿಂಬಾಧರನಂ ತಮ್ಮ ಬಿಂಬಾಧರಾಮೃತರಸದಿಂ ತಣಿಪಿಯುಮಾ ಮುಕ್ತಾಫಳಪ್ರವಿರಾಜಿತ ದಶನೆಯರಾ ಸ್ಫುರತ್ಸುಧಾಂಶುಮಯೂಖದಶನನಂ ತಮ್ಮ ದಶನಮರೀಚಿಗಳಿಂ ಮರುಳ್ಚಿಯುಮಾ ಮೃಣಾಳನಾಳಕೋಮಳಾನುಕಾರಿಮಣಿಕುಂಡಲಮಂಡಿತಕರ್ಣೆಯರಾ ನೂತ್ನರತ್ನಮಯ ಚಂಪಕಕರ್ಣಪೂರಾಳಂಕೃತಕರ್ಣನಂ ತಮ್ಮ ಶ್ರೋತ್ರಯುಗಳಂಗಳಿಂ ಸೂತ್ರಿಸಿದಂತೊಳಗುಮಾಡಿಯುಮಾ ಮೃಗಮದರಾಜಿವಿರಾಜಿತ ಕಪೋಳತಳೆಯರಾ ಕಂದರ್ಪ ದರ್ಪಣಕಪೋಳತಳನಂ ತಮ್ಮ ಲಲಿತಕಪೋಲಂಗಳಿಂ ಮನಂಗೊಳಿಸಿಯುಮಾ ಚಂದಕಕುಟ್ಮಳನಾಸಾವಂಶೆಯರಾ ಪರಿಮಳಶ್ವಾಸ ನಾಸಾಪುಟನಂ ತಮ್ಮನಾಸಾವಂಶ ಸೌರಭಕೆ ವಶಗತನಂ ಮಾಡಿಯುಮಾ ಪುಂಡರೀಕದಳಧವಳವಿಲೋಳಲೋಚನೆಯರಾ ನೀಳನೀರೇರುಹದಳವಿಲೋಚನನಂ ತಮ್ಮ ನಿಡಿಯ ಬಿಳಿಯ ತುಱುಗೆಮೆಗಣ್ಗಳಿಂ ಕಣ್ಬೇಟಂಗೊಳಿಸಿಯು[ಮಾ] ಮನೋಜ ಚೈತ್ರಪತಾಕಾಪ್ರತಿಮಭ್ರೂವಿಭ್ರಮೆಯರಾ ಸ್ಮರಶರಸನಭ್ರೂವಿಭ್ರಮನಂ ತಮ್ಮ ಭ್ರೂವಲ್ಲಿಗಳೊಳ್ ತಡಮಿಕ್ಕಿಯುಮಾ ಪರಾರ್ಧ್ಯಾರ್ಧೇಂದುಲಲಾಟೆಯರಾ ಪೂರ್ಣ ಲಲಾಟನಂ ತಮ್ಮ ಲಲಾಟತಟರಂಜನೆಯಿಂ ವಿಟತತ್ವಾಭಿಮುಖಂಮಾಡಿ ರಂಜಿಸಿಯುಮಾ ನೀಳಾಳಕಿಯರಾ ಚಟುಳಕುಟಿಳಕುಂತಳನಂ ತಮ್ಮ ಸುತ್ತುಂಗುರುಳೊಳೆ ಸುತ್ತಿ ಜತ್ತಿಸಿಯುಮಾ ನವಮಾಳಿಕಾಕುಸುಮಸು ಕುಮಾರಕೋಮಳೆಯರಾ ಸುಕುಮಾರಸ್ವಾಮಿಯನೊಲಿಸಿಯುಂ ವಿವಿಧವಿನೋದಂಗಳಂ ಸಲಿಸಿಯುಂ ಕೂರ್ಮೆಯುಮಂ ಪೆರ್ಮೆಯುಮಂ ಪಡೆದರಿಂತು

ಪ್ರಿಯಸತಿಯರೊಳಲ್ಲದೆ ಕೂ
ಡಿಯಱಿಯನತ್ಯಂತರುಚಿರಮಣಿಕುಟ್ಟಿಮ ಭೂ
ಮಿಯನಲ್ಲದೆ ನೆಲನಂ ಮೆ
ಟ್ಟಿಯಱೆಯನೇಂ ಗರ್ಭಸುಖಿಯೊ ತತ್ಸುಕುಮಾರಂ       || ೧೦೨ ||

ಜನನಿಯೊಳಂ ಪರಿಚಾರಕ
ಜನದೊಳಮಾತ್ಮೀಯ ಯುವತಿ ಜನದೊಳಮೆಂದುಂ
ಮನಮೊಸೆದು ನುಡಿವನಲ್ಲದೆ
ಮನುಜರೊಲಿಂತೆಂಬರಾರೊಳಂ ನುಡಿದಱಿಯಂ            || ೧೦೩ ||

ವಿಲಸಿತದುಕೂಲ ವಸ್ತ್ರಂ
ಗಳನಲ್ಲದೆ ಪೆಱವು ಸೀರೆಗಳನುಟ್ಟಱಿಯಂ
ತೊಳಗುವ ರತ್ನಾಭರಣಂ
ಗಳನಲ್ಲದೆ ಪೆಱವು ತುಡುಗೆಯಂ ತೊಟ್ಟಱಿಯಂ         || ೧೦೪ ||

ಕಲ್ಪೇಂದ್ರನ ನಾಗೇಂದ್ರನ
ತಳ್ಪದೊಳೆರಡೆರಡೆವರ್ಪ ಸಂಕಲ್ಪಮೆನಲ್
ನಿಪ್ಪೊಸತೆನೆ ಸೊಗಯಿಪ ಮೃದು
ತಳ್ಪದೊಳಾತಂ ವಿಲಾಸದಿಂ ಪವಡಿಸುವಂ        || ೧೦೫ ||

ಬೆಳಗುವ ಮಣಿಮಯ ಲಲಿತೋ
ಜ್ವಲದೀಪಾವಳಿಯ ಬೆಳಗನಲ್ಲದೆ ಮನೆಯೊಳ್
ಬೆಳಗುವ ತೊಳಗುವ ಸೊಡರ್ಗಳ
ಬೆಳಗಂ ಕನಸಿನೊಳಮಾಗಿಯುಂ ಕಂಡಱಿಯಂ   || ೧೦೬ ||

ಮಾಸರಮೊಕ್ಕ ಕತ್ತುರಿಯ ಪಂಕಮನಲ್ಲದೆ ಪಂಕಮಂ ಕರಂ
ಬೀಸುವ ಚಾರುಚಾಮರದ ಗಾಳಿಯನಲ್ಲದೆ ಗಾಳಿಯಂ ಮನೋ
ಭಾಸುರಮಪ್ಪ ಕಪ್ಪುರದ ಧೂಳಿಯನಲ್ಲದೆ ಧೂಳಿಯಂ ನಿಜಾ
ವಾಸದೊಳೆಂತುಟೆಂದಱಿಯನಿಂತುಟು ಪುಣ್ಯಮಗಣ್ಯಮಾತನಾ     || ೧೦೭ ||

ನೆಟ್ಟನೆ ಪುಷ್ಪವಾಸನೆಯ ಕಪ್ಪುರಶಾಲಿಯ ತಂಡುಲಂಗಳಂ
ನಿಟ್ಟೆಸರಿಟ್ಟು ಬಾಗಿ ಮೃದುವಾದ ಮನೋಹರವಾದ ಕಂಪಿನೊಳ್
ಸುಟ್ಟರೆ ನಿಟ್ಟುದೋಯೆನಿಸಿದನ್ನಮನಲ್ಲದೆ ಮತ್ತಿನನ್ನಮಂ
ಮುಟ್ಟುವನಲ್ಲನೀ ಜಗದೊಳೇಂ ಸುಖಿಯೋ ಸುಕುಮಾರವಲ್ಲಭಂ          || ೧೦೮ ||

ಅಕ್ಕರ || ಮಾಗಿ ಬೇಸಗೆ ಮೞೆಗಾಲಂ ಪಗಲಿರುಳೆಂಬಿವನೊರ್ಮೆಯುಂ ಕಂಡಱಿಯಂ
ರೋಗಭಯಚಿಂತಾಸಂತಾಪಮೆಂಬಿವನಿಂತೆಂದು ತಾನೆಂದುಮಱಿವನಲ್ಲಂ
ಭೋಗಭೂಮಿಯ ಮನುಜರ ಮಾರ್ಗದಿ ಭೋಗೋಪಭೋಗಮಂ ಭೋಗಿಸುತಂ
ರಾಗರಸದೊಳೆ ತಳ್ಳಂಕುಗುಟ್ಟುತುಂ ಲಾವಣ್ಯರಸದೊಳೋಲಾಡುತಿರ್ದಂ   || ೧೦೯ ||

ಆತನೆ ಪುಣ್ಯಮೂರ್ತಿ ಪರಿವರ್ತಿತನಿರ್ಮಳಕೀರ್ತಿ ಚಾರುಭೋ
ಗಾತಿಶಯಪ್ರಭಾವಮಹಿಮಾಸ್ಪದನನ್ವಿತಸೌಖ್ಯನೆಂದೊಡಿ
ನ್ನಾತನ ಪೆಂಪನಾತನ ವಿಭೂತಿಯನಾತನಭೋಗಮಂ ತಗು
ಳ್ದಾತನ ದಿವ್ಯಸೇವ್ಯಸುಖಮಂ ನೆಱೆ ಬಣ್ಣಿಪನೆಂತು ಬಣ್ಣಿಪಂ     || ೧೧೦ ||

ಅಖಿಳವನಜ್ಯೋತಿರ್ಭವ
ನಖೇಚರದ್ಯುಚರಭೂಚರರ್ಕಳೊಳಾರುಂ
ನಿಖಿಳವಿಭೂತಿಗೆ ನಿರುಪಮ
ಸುಖಕ್ಕೆ ಸುಕುಮಾರನಂತು ನೋಂತರುಮೊಳರೇ            || ೧೧೧ ||

ಅನಿಮಿಷನಿಳಯದಿನಗಲದ
ವಿನೂತಸುಖನಿಲಯರೆನಿಸಿದಹಮಿಂದ್ರರನೇ
ನನುಕರಿಸುತ್ತೆ ಕುಮಾರಕ
ನನುಪಮ ದಿವಿಜೇಂದ್ರಲೀಲೆಯಂ ತಾಳ್ದಿದನೋ            || ೧೧೨ ||

ಪ್ರಕಟೀಕೃತಸುಕೃತಸುಖಾ
ಧಿಕನಾಮಯ ದಂಶಮಸಕಶೀತೋಷ್ಣಕದಂ
ಬಕಬಾಧಾರಹಿತನೆನಿಸಿ
ಸುಕುಮಾರಂ ಸುರಕುಮಾರರಂ ಮಸುಳಿಸಿದಂ   || ೧೧೩ ||

ವಿದಿತಾನೂನವಿಲಾಸವೈಭವಪದಂ ಬೇಱೊಂದು ಸದ್ರೂಪಮೆ
ನ್ನದೆ ಮತ್ತಂ ಲಲಿತೋರುಜಾರುವಿಭವಂ ಬೇಱೊಂದು ಸೌಂದರ್ಯಮೆ
ನ್ನದೆ ನಾನಾವಿಲಸನ್ಮನೋಹರಸುಖಂ ಬೇಱೊಂದು ಲಾವಣ್ಯಮೆ
ನ್ನದೆ ಬೇಱೊಂದು ಪಲಾಲಮಂ ಗೞಪಿ ಚಾತುರ್ಯಕ್ಕೆ ಮುಯ್ಯಾಂಪುದೇ    || ೧೧೪ ||

ವ || ಇಂತಾ ಸುಕುಮಾರಂ ದೇವೇಂದ್ರಲೀಲೆಯಿಂ ಭೋಗೋಪಭೋಗಂಗಳಂ ಸೇವಿಸುತ್ತುಂ ಸುಖಸಂಕಥಾವಿನೋದಂಗಳಿನಿಪ್ಪುದುಮನ್ನೆಗವೊಂದು ದೆವಸಮಾ ಪುರಕ್ಕೊರ್ವಂ ಝಂಝಾವೇಗನಮೂಲ್ಯಮಪ್ಪ ರತ್ನಗಂಬಳಿಯಂ ಕೊಂಡುಬಂದು ವೃಷಭಾಂಕನಂ ಕಂಡು ಪೊಡೆವಟ್ಟು ದೇವರ್ಗೊಂದಪೂರ್ವವಸ್ತುವಂ ತಂದೆನವಧಾರಿಸಿಮೆಂದು

ನವಲಾಕ್ಷಾಮುದ್ರೆಯನೊಡೆ
ದವಧರಿಪುದುಮಾಗಳರ್ಕನುದಯಂಗೆಯ್ದಂ
ತೆವೊಲಾಯ್ತು ತನ್ನೃಪೇಶ್ವರ |
ಭವನದೊಳಾಶ್ಚರ್ಯಮಾದಮಪ್ಪನ್ನೆವರಂ    || ೧೧೫ ||

ವ || ಅಂತಾ ಸಭಾಂತರಾಳಗಗನದಿಗವನಿಭಾಗದೊಳ್ ತನ್ನ ಬೆಳಗೆ ಬೆಳಗಾಗಿರ್ದ ರತ್ನಕಂಬಲಮನಾ ಧರಿತ್ರೀವಲ್ಲಭಂ ಮುಹುರ್ಮುಹುರಾಲೋಕನಕುತೂಹಳ ಚಿತ್ತನಾಗಿ ವಿಸ್ಮಯಂಬಟ್ಟು

ಇದು ದೇವಲೋಕದಿಂ ಬಂ
ದುದೊ ಮೇಣ್ನಾಗೇಂದ್ರಲೋಕದಿಂ ಬಂದುದೊ ಪೇ
ೞಿದು ವಿಸ್ಮಯಮೆನುತುಂ ತೂ
ಗಿದೂಗಿ ಮಸ್ತಕಮನಾ ನೃಪೇಂದ್ರಂ ನುಡಿದಂ    || ೧೧೬ ||

ವ || ಎಮ್ಮಂದಿಗರೀ ಮಹಾವಸ್ತುವಂ ನೋಡಿಯುಮೇಂ ಕೊಳಲ್ನೆಱೆಯರ್ ಪೆಱರೀವಸ್ತುವಂ ಕಂಡೊಡೇಂ ಮನಮಂ ತೆಗೆದುಕೊಳ್ವರಲ್ಲದೆ ಧನಮಂ ತೆಗೆದುಕುಡಲಾರ್ಪರಾರುಮಿಲ್ಲೆಂದು ತಂಬುಲಮಂ ಕೊಟ್ಟು ಝಂಝಾವೇಗನಂ ವಿಸರ್ಜಿಸುವುದುಮಾತನುಮರಮನೆಯಂ ಪೊಱಮಟ್ಟು ಬಂದು

ಧರೆಯೊಳಗಿಂತೀ ನಗರದ
ಪರದರೆ ಸಂಪನ್ನರೆಂದು ದುಂದುಮೆಗೇಳ್ದೆಂ
ಪರದರೊಳೀ ನಗರದ ಪರ
ದರ ಸೈಪಿನ ಪಿರಿಯ ಸಿರಿಯ ಪವಣಂ ನೋೞ್ಪೆಂ           || ೧೧೭ ||

ವ || ಎಂದು ಪಿರಿಯಂಗಡಿಯ ಸಿರಿಯಂ ನೋಡಿ ನಾಡೆಯುಂ ಮೆಚ್ಚುತ್ತುಂ ಬಂದು ಪೇೞಿಮೀ ಪೊೞಲೊಳ್ ಮಹಾವಸ್ತುವರ್ಗಂಗಳಂ ಬಿಲಲ್ ನೆಱೆವನ್ನರಪ್ಪ ಮಹೋದಾರಗುಣಸಮರ್ಥರುಮಪ್ಪ ಪರದರಾರೆಂದು ಬೆಸಗೊಳ್ವುದುಮಿರ್ದರಿರ್ದಲ್ಲಿಯೆ ಸುಕುಮಾರಸ್ವಾಮಿಯಿಂ ಪಿರಿಯರಾರೆಂದು ಗುಣಸ್ತುತಿಗೊಳ್ವುದುಮಾ ಕುಮಾರನ ಲಕ್ಷ್ಮೀಮಂದಿರಕ್ಕೆ ವಂದು ವಂಕದಾರದೊಳ್ ನಿಂದು ನಿಮ್ಮಾಳ್ದಂಗೆ ಪೂರ್ವವಸ್ತುವಂ ಕೊಂಡುಬಂದೆನೆಂದು ಕಾಪಿನವರ್ಗೆ ಪೇೞ್ಪುದುಮವರ್ ಪರಿದು ಯಶೋಭದ್ರೆಗಾತನ ಬಂದ ವೃತ್ತಾಂತಮಂ ಬಿನ್ನವಿಸೆ ಬರವೇೞೆಂಬುದುಂ ದ್ವಾರಪಾಲಕಗೃಹೀತಕರನಾಗಿ ಭುವನಜನಾಂಬಿಕೆಯೆನಿಸಿದ ಯಶೋಭದ್ರಾಂಬಿಕೆಯಂ ಕಂಡು ರತ್ನಕಂಬಲಮಂ ನಿಮಿರ್ಚಿ ತೋರ್ಪುದುಮಪೂರ್ವವಸ್ತುವಪ್ಪುದನಱಿದು ವಸ್ತುಪುರುಷರಿಂ ಬೆಲೆಯಿಡಿಸಿ

ಪೊಗೞೆ ಜನಂ ಝಂಝೂವೇ
ಗಗೆ ತಾನಂತೊಂದು ಕೋಟದೀನಾರಮನಾ
ಮೃಗನಯನೆ ಕೊಟ್ಟುಕೊಂಡಳ್
ನೆಗೞ್ತೆವೆತ್ತಿರ್ದ ರತ್ನಮಯಕಂಬಳಮಂ           || ೧೧೮ ||

ವ || ಇಂತೊಂದು ಕೋಟಿಪೊನ್ನನೊಂದು ಕವಡಿಕೆಯಂ ಕುಡುವಂತೇ ನುಮಪೋಹಮಿಲ್ಲದೆ ಕೊಟ್ಟು ಬೞಿಯಂ ರತ್ನಕಂಬಳಿಯಂ ಮಣಿಮಾಡದ ನೆಲೆಯೊಳಿರ್ದಾತ್ಮೀಯಾತ್ಮಜಂಗೆ ಕೆಲದೊಳಿರ್ದ ಪರಿಚಾರಕಿಯರ ಕಯ್ಯಲಟ್ಟಿದಾಗಳಾಕೆಯಮದಂ ಸುಕುಮಾರಸ್ವಾಮಿಯ ಕಯ್ಯಲ್ ಕುಡುವುದುಂ

ಇದು ನವದಿವ್ಯರತ್ನಮಯಮಾಗಿಯುಮೇನೆನಗಾಗದಾನಿದಂ
ಪೊದೆದೊಡೆ ಘರ್ಮಮಕ್ಕುಮದುಕಾರಣದಿಂದಿದನಿಂದೆ ತಮ್ಮಮೆ
ಚ್ಚಿದ ಸೊಸೆಯಾವಳಾಕೆಗೆ ಮನೋಮುದದಿಂ ಕುಡುಗೆಂದು ಕೊಟ್ಟೊಡಾ
ಸುದತಿಯುಮಾ ತಳೋದರಿದೆ ಮೆಲ್ಲನೆ ಪೇೞ್ವುದುಮಾಗಳಾಕೆಯುಂ         || ೧೧೯ ||

ಒಲಿದಿದನೊರ್ವಳ್ಗಿತ್ತಂ
ದೊಲವರಮಾಗಿರ್ಕುಮೆಂದು ಸೊಸೆವಿರ್ಗೆಲ್ಲಂ
ಸಲೆ ಚಮ್ಮವಾವುಗೆಯನಾ
ಲಲನೆ ಮಹೋತ್ಸಾಹದಿಂದೆ ಮಾಡಿಸಿ ಕೊಟ್ಟಳ್          || ೧೨೦ ||

ವ || ಅನ್ನೆಗಮಿತ್ತಲಾ ವೃಷಭಾಂಕಂ ನಿಜಾಸ್ಥಾಯಿಕೆಯೊಳಿರ್ದ ವಸ್ತುಪುರುಷರುಂ ವಸ್ತುವಿಚಾರಗೋಷ್ಠಿಯಿಂ ಮಾತುಮಾತಾಗೆ ಝಂಝಾವೇಗನಿಂದು ತಂದಿರ್ದ ದಿವ್ಯವಸ್ತುವನೀ ಲೋಕದೊಳ್ ಕೊಳ್ಳಲ್ ನೆಱೆವರಾರೆಂಬುದುಮವರೆಂದರ್ ನಮ್ಮ ಪರದ ಸುಕುಮಾರನಂಬಿಕೆಯಪ್ಪ ಯಶೋಭದ್ರಾಂಬಿಕೆಯೀಗಳೊಂದು ಕೋಟಿಪೊನ್ನಂ ಕೊಟ್ಟು ಕೊಂಡುದುಮಲ್ಲದೆಯದನರಿಯಿಸಿ

ಎಸೆದಿರೆ ತನ್ನೆಸೆವಂತೀ
ವಸುಧೆಗೆ ಪಡಿಚಂದಮಾಗೆ ಸೊಸೆವಿರ್ಗೆಲ್ಲಂ
ಸುಸಮಾನಚಿತ್ತದಿಂದಿಂ
ದು ಸಮ್ಮವಾವುಗೆಯನಲ್ತೆ ಮಾಡಿಸಿಕೊಟ್ಟಳ್  || ೧೨೧ ||

ವ || ಎಂಬುದುಮಾಗಳರಸನತ್ಯಾಶ್ಚರ್ಯಂಬಟ್ಟು

ಆಂ ಬಿಲಲಾಱದ ವಸ್ತುಗ
ಳಂ ಬಿಲಲಾರ್ಪನ್ನರೆನ್ನ ಪೊೞಲೊಳ್ ಮಹಿಮಾ
ಡಂಬರದಿನಿರ್ಪೊಡಿನ್ನೆ
ನ್ನಿಂ ಬಿಟ್ಟು ಕೃತಾರ್ಥರಾರೊ ಈ ಮಹಿತಳದೊಳ್         || ೧೨೨ ||

ವ || ಅದಲ್ಲದೆಯುಮಾ ಸುಕುಮಾರನ ವಿಭೂತಿಯಂ ಖ್ಯಾತಿಯಂ ಕೇಳ್ದಱಿವೆನಲ್ಲದೆ ಕಂಡಱಿಯೆನಿಂತಪ್ಪ ಗರ್ಭಸುಖಿಯಂ ನೋಡಲ್ಪಡೆದೆಪ್ಪೊಡೆ ಕಣ್ಬಡೆದ ಫಲಮಂ ಪೆತ್ತೆನೆಂದು ಸಮಸ್ತಪರಿಜನಸಮೇತನಾಗಿ ತನ್ನಿವಾಸಕ್ಕೆ ಬರ್ಪುದುಂ ಯಶೋಭದ್ರೆ ಬೇಗಮಿದಿರ್ವಂದು ಪೊಡೆವಟ್ಟು ದೇವರಿತ್ತ ಬಿಜಯಂಗೆಯಿಮೆಂದು ಮಣಿಮಾಡದ ಮುಂದಣ ಪಚ್ಚೆಯ ಮೊಗಸಾಲೆಯ ಲೋವೆಯೊಳ್ ಪಂಚರತ್ನದಿಂದಿಕ್ಕಿದ ರಂಗವಲ್ಲಿಯ ನಡುವಣ ಮಣಿಮಯಸಿಂಹಾಸನದ ಮೇಲೆ ವಿಸ್ತರಿಸಿದ ದೇವಾಂಗವಿಸ್ತರಿಗೆವೋಲ್ ಮಹಾವಿಸ್ತರದಿನಿರಿಸಿ ಸಾಮಂತಮಹಾಸಾಮಂತಮಂತ್ರಿಮಹತ್ತರ ಪ್ರಭೃತಿಜನಂಗಳವರವರ ಪಡೆದ ಮನ್ನಣೆಗಳನೆಡೆಯಱಿದಿರಿಸಿದಾಗಳರಸನೆಮ್ಮ ತಮ್ಮನೆಲ್ಲಿದನಾತನಂ ನೋಡಲೆಂದು ಬಂದೆನೆಂಬುದುಂ

ಮುದದಿಂ ತತ್ಪರಿಚಾರರ
ವದನಮನಾ ಕಾಂತೆ ನೋಡೆ ಬೇಗಂ ಮಣಿಮಾ
ಡದ ನೆಲೆಯೊಳಿರ್ದ ಸುಕುಮಾ
ರದೇವನಂ ತನ್ನಿಮರಸನಂ ಕಾಣಿಸುವಂ           || ೧೨೩ ||

ವ || ಎಂಬುದುಮಾ ಪರಿಚಾರಕರ್ಪರಿತಂದು ಪೇೞ್ವುದುಂ ಮಾಡದಿೞಿದುದಯ ಶಿಖರಿಜಶಿಖರಾನೂನೋದಯಮಾನ ಭಾನೂದಯಮಾನನಂ ನಿಸರ್ಗಮಣಿ ಗಣಾಭರಣ ಕಿರಣಮಾಲಾಭರಿತದಿಂಗಂಗನಾಮುಖನುಮತಿಚಲಲ್ಲುಲಿತವಿದ್ಯುತ್ಪ್ರಭಾಪ್ರಸರಪ್ರಕೀರ್ಣ ಚಂಚಚ್ಚಾರುಚಾಮರವಿಲಾಸನುಮುದಾರಕಾಶ್ಮೀರಸಾರಾಪಹಾಸಿ ಕರ್ಪೂರ ಪಾಳಿಸಮ್ಮಿಶ್ರಿತತಾಂಬೂಲರಾಗಪರಿಚುಂಬಿತ ಬಿಂಬಾಧರರಾಗ ವದನನುಮಭಿನವಯೌವನಾ ವಷ್ಟಂಭವಿಜೃಂಭಿತತ್ರಿಭುವನಾಂತರಾಳನುಂ ಮೃಗಮದಪತ್ರವಿಲಿಖಿತ ವಿಚಿತ್ರ ಭುಜಯುಗಳನುಂ ಕತಿಪಯಪರಿಚಾರಕಜನಪರಿವೃತನುಮಧರೀಕೃತನಾಗ ಕುಮಾರ ವಿಭವನುಂ ದೂರೀಕೃತಸು[ರ]ಕುಮಾರಸೌಂದರ್ಯನುಮೆನಿಸಿ

ಮೃಗಮದದ ಯಕ್ಷಕರ್ದಮ
ದಗರುವ ಕಪ್ಪುರದ ಕಂಪು ಸುಟ್ಟುರೆವಿಡುತುಂ
ಮಗಮಗಿಸೆ ಕುಮಾರಂ ದಿ
ವ್ಯಗಂಧಮಯನಾಗಿ ಲೀಲೆಯಿಂ ಬರ್ಪಾಗಳ್    || ೧೨೪ ||

ದಿನನಾಥಂ ವ್ಯೋಮದಿಂದಂ ಧರೆಗಿೞಿದಿರದೀ ಬಂದನೀಬಂದನೀಬಂ
ದನೆ ದೇವೇಂದ್ರಂ ವಿಲಾಸಂಬೆರಸು ನಯದಿನೀ ಬಂದನೀ ಬಂದನೀ ಬಂ
ದನೆ ಸಂತಂ ಕಂತುರಾಜಂ ಜಗಮನಲೆಯಲೀ ಬಂದನೀ ಬಂದನೀ ಬಂ
ದನೆ ತಾನೆಂಬಂತು ಬಂದಂ ಪರಮಜಿನಮತಾಂಭೋಜಿನೀರಾಜಹಂಸಂ          || ೧೨೫ ||

ಇದು ಸಮಸ್ತವಿನೇಯಜನವಿನುತ ಶ್ರೀವರ್ಧಮಾನಮುನೀಂದ್ರವಂದ್ಯ
ಪರಮಜಿನೇಂದ್ರಶ್ರೀಪಾದಪದ್ಮವರಪ್ರಸಾದೋತ್ಪನ್ನಪ್ರಸನ್ನ
ಸಹಜಕವೀಶ್ವರ ಶ್ರೀಶಾಂತಿನಾಥಪ್ರಣೀತಮಪ್ಪ
ಸುಕುಮಾರಸ್ವಾಮಿಚರಿತಪುರಾಣದೊಳ್
ವೃಷಭಾಂಕಂ ಸುಕುಮಾರಸ್ವಾಮಿ
ದರ್ಶನಂ ದಶಮಾಶ್ವಾಸಂ